ಪುಸ್ತಕಗಳ ವ್ಯಥೆ
ಪುಸ್ತಕಗಳ ವ್ಯಥೆ
ಉದ್ದುದ್ದ ಪುಸ್ತಕದ ಬೀರುಗಳಲಿ
ತುಂಬಿ ತುಳುಕುತಿಹ ದಪ್ಪ ದಪ್ಪ
ಅದ್ಭುತ ಮಹಾನ್ ಗ್ರಂಥಗಳು
ಸಾಹಿತ್ಯ ಸಂಸ್ಕೃತಿ ಸಂಗೀತ
ಇತಿಹಾಸ ಪುರಾಣಗಳನು
ತನ್ನೊಳಗೆ ಹುದುಗಿಸಿಕೊಂಡು
ಜ್ಞಾನ ಭಂಡಾರವನ್ನು ಹಂಚಲು
ತವಕದಿಂದ ಕಾಯುತ್ತಾ ಇರುವ
ಸಾಲು ಸಾಲು ಗ್ರಂಥಗಳು
ಅಲ್ಲೇ ಇರುವ ಟೇಬಲ್ ಮೇಲೆ
ಪುಸ್ತಕ ಕೊಂಡೊಯ್ಯುವ ವಾಚಕರ
ಒಂದೇ ಒಂದು ಎಂಟ್ರಿ ಇಲ್ಲದೆ
ಅನಾಥವಾಗಿ ಬಿದ್ದಿರುವ
ಖಾಲಿ ಖಾಲಿ ರಿಜಿಸ್ಟರ್ ಗಳು
ಜೋಡಿಸಿಟ್ಟ ಪುಸ್ತಕಗಳ ಮೇಲೆಲ್ಲಾ
ಹರಿದಾಡುತಲಿರುವ ಬಿಳಿಯ ವಾಟೆಹುಳುಗಳು
ಅಲ್ಲೊಬ್ಬ ಗ್ರಂಥಪಾಲಕ ಕೆಲಸವಿಲ್ಲದೆ
ತೂಕಡಿಸುತ್ತಾ ಕುಳಿತು ಗಡಿಯಾರದ
ಮುಳ್ಳು ತಿರುಗುವುದನ್ನೇ ನೋಡುತ್ತಾ
ನೋಡುತ್ತಾ ತನ್ನ ಕೆಲಸದ ಸಮಯ
ಮುಗಿಯುವುದನ್ನೇ ಕಾಯುತ್ತಿದ್ದಾನೆ
ವಾಚಕರೇ ಇಲ್ಲದ ಗ್ರಂಥಾಲಯದಲ್ಲಿ
ತಿರುಗುತ್ತಿರುವ ಫ್ಯಾನ್ ದೇ ಸದ್ದು
ವಿಜ್ಞಾನ ಕಲೆ ಇತಿಹಾಸಗಳನ್ನು ತನ್ನೊಳಗೆ
ಅಡಗಿಸಿಟ್ಟುಕೊಂಡಿರುವ ನೂರಾರು
ಕಥೆಗಳನ್ನು ಹೇಳುವ ತವಕದಲ್ಲಿ ಸಾಲು ಸಾಲಾಗಿ
ನಿಂತಿರುವ ದಪ್ಪ ದಪ್ಪ ರಟ್ಟಿನ ಪುಸ್ತಕಗಳು
ತಮ್ಮನ್ನು ಸ್ಪರ್ಶಿಸಿ ತಮ್ಮೊಳಗಿರುವ ಕಥೆಗಳನ್ನು
ಓದುವ ವಾಚಕರಿಲ್ಲದೇ ಇದ್ದಲ್ಲೇ ಇದ್ದು
ಗೆದ್ದಲು ವಾಟೆ ಹುಳುಗಳಿಗೆ
ಬಲಿಪಶುವಾಗುತಿರುವ ಜ್ಞಾನ ಭಂಡಾರಗಳು
ಹತಾಶೆಯಿಂದ ಕೂಗಿ ಕರೆಯುತ್ತಾ
ಕಣ್ಣೀರಿಡುತ್ತಾ ಕರಗಿ ಹೋಗುತ್ತಿವೆ
"ಅರೆ, ಇಂದಿನವರಿಗೆ ಏನಾಗಿದೆ?
ನಮ್ಮಿರುವಿಕೆ ಮರೆತೇ ಹೋಗಿದೆಯಾ?
ಗ್ರಂಥಾಲಯಗಳು ಮರೆತು ಹೋದವೆ?
ಪುಸ್ತಕಗಳು ಬೇಡವಾದವೇ?
ಅದ್ಭುತ ಗ್ರಂಥಗಳಿಗಾಗಿ ತಮ್ಮ ಇಡೀ
ಜೀವನವನ್ನು ಮುಡುಪಾಗಿಟ್ಟ
ಕವಿಗಳು, ಕಥೆಗಾರರು, ವಿಜ್ಞಾನಿಗಳು
ಬೇಡವಾಗಿ ಹೋದರೆ?
ಅಯ್ಯೋ ಏನಿದೇನಿದೆಂತ ಕಾಲ?
ತಂತ್ರಜ್ಞಾನದಲಿ ನಾವು ಬೇಡವಾದವೇ?
ಓದುಗರಿಲ್ಲದ ದುರ್ಭಿಕ್ಷ ಕಾಲ?"
