ವೃದ್ಧಾಶ್ರಮ(ಸತ್ಯ ಘಟನೆ ಆಧಾರ)
ವೃದ್ಧಾಶ್ರಮ(ಸತ್ಯ ಘಟನೆ ಆಧಾರ)
(ಸತ್ಯ ಘಟನೆ ಆಧಾರ)
ಬೆಂಗಳೂರು ನಗರದ ಹೊರ ವಲಯದಲ್ಲಿ ಒಂದು ದೊಡ್ಡ ವೃದ್ಧಾಶ್ರಮ. ಇಲ್ಲಿಗೆ ವಾರಾಂತ್ಯದಲ್ಲಿ ಈ ಸಂಸ್ಥೆಗೆ ನೆರವು ನೀಡಿರುವ ಹಲವಾರು ಜನ ಬಂದು ನೋಡಿಕೊಂಡು ಹೋಗುವುದು ಸಾಮಾನ್ಯ ಸಂಗತಿ. ಆದರೆ ಒಮ್ಮೆ ಒಂದು ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳು ಹೀಗೆ ಇಲ್ಲಿಗೆ ಬೇಟಿ ಕೊಟ್ಟಿದ್ದರು.
ಹಾಗೆ ಬಂದಿದ್ದ ಶಾಲಾಮಕ್ಕಳಿಗೆ ಅಲ್ಲಿನ ಪ್ರತಿಯೊಬ್ಬರ ಪಕ್ಕದಲ್ಲಿ ಕೂತು ಮಮತೆಯಿಂದ ಮಾತನಾಡಿಸಿ ಸುಖ ದುಃಖ ಹಂಚಿಕೊಳ್ಳುವ ಅವಕಾಶ ಒದಗಿಸಿತ್ತು. ಒಂದು ಹುಡುಗಿ ಹೀಗೇವಿಚಾರಿಸುತ್ತಿದ್ದ ಸಮಯದಲ್ಲಿ ಆ ವೃದ್ದ ಹೆಂಗಸು ತನಗೆ ಒಬ್ಬ ಮಗ ಇದ್ದಾನೆಂದು ಅವನು ಸರ್ಕಾರದ ದೊಡ್ಡ ಹುದ್ದೆಯಲ್ಲಿ ಇದ್ದಾನೆಂದು ತಿಳಿಸಿ ಅವನಿಗೆ ಒಬ್ಬ ಮಗಳು ಇರುವ ಬಗ್ಗೆಯೂ ಹೇಳಿಕೊಂಡರು. ನಿಮ್ಮ ಮೊಮ್ಮಗಳನ್ನ ನೋಡಿದ್ದೀರಾ ಎಂದು ಹುಡುಗಿ ಕೇಳಲು ಮಗನನ್ನೇ ನೋಡಿ ಎಷ್ಟೋ ವರ್ಷಗಳಾಯಿತು ಇನ್ನು ಮೊಮ್ಮಗಳನ್ನ ಹೇಗೆ ನೋಡಲಿ ನಿನ್ನ ವಯಸ್ಸಿರಬಹುದು ಅಂದರು. ಆತ್ಮೀಯವಾಗಿ ಮಾತನಾಡುವಾಗ ಆ ಹುಡುಗಿಗೆ ಒಂದು ಆಶ್ಚರ್ಯದ ಸಂಗತಿ ತಿಳಿಯಿತು . ಅದೇನೆಂದರೆ ಇಷ್ಟು ಸಮಯ ಮಾತನಾಡುತ್ತಿದ್ದ ಆ ವೃದ್ದ ಹೆಂಗಸು ತನ್ನ ಸ್ವಂತ ಅಜ್ಜಿ ಎಂದು. ತನಗೊಬ್ಬ ಅಜ್ಜಿ ಇದ್ದಾಳೆಂದು ಅದುವರೆಗೂ ಹೇಳಿರದ ತಂದೆ ತಾಯಿ
ಯ ಬಗ್ಗೆ ಜಿಗುಪ್ಸೆ ಆಯಿತು. ಆದರೂ ಕಣ್ಣೀರು ಒರೆಸಿಕೊಂಡು ಆಗಾಗ ಅಜ್ಜಿಯನ್ನು ನೋಡಲು ಬರುವುದಾಗಿ ಹೇಳಿ ಈ ವಿಷಯ ಯಾರಿಗೂ ಹೇಳದೆ ಮನೆಗೆ ಹೊರಟಳು.
ಅಂದಿನಿಂದ ಮಗಳ ನಡವಳಿಕೆಯಲ್ಲಿ ಬದಲಾವಣೆ ಕಂಡು ತಾಯಿ ವಿಚಾರಿಸಲು ಅಲ್ಲಿಯವರೆಗೂ ಹಿಡಿದಿಟ್ಟ ದುಃಖದ ಕಟ್ಟೆ ಒಡೆದು ಎಲ್ಲ ವಿಷಯ ಹೇಳಿಬಿಟ್ಟಳು . ತಂದೆ ತಾಯಿ ಏನೇ ಕಾರಣ ಕೊಟ್ಟರೂ ಒಪ್ಪದ ಮಗಳನ್ನ ಸಮಾಧಾನಮಾಡಲಾಗದೆ ಸೋತರು .ಮೊಮ್ಮಗಳು ಮಾತ್ರ ಆಗಾಗ ಅಜ್ಜಿಯನ್ನು ನೋಡಲು ಹೋಗುತ್ತಿದ್ದಳು. ಒಂದು ದಿನ ಅಜ್ಜಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ವಿಷಯ ತಿಳಿದು ಅಲ್ಲಿಗೆ ಓಡಿದಳು. ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ದುಃಖವನ್ನ ತಾನೇ ನುಂಗಿ ಈ ವಿಷಯ ಬಹಳ ದಿನಗಳವರೆಗೂ ತನ್ನ ತಂದೆ ತಾಯಿಗೆ ತಿಳಿಸಲೇ ಇಲ್ಲ. ಒಮ್ಮೆ ಬೇರೆ ಯಾವುದೋ ವಿಷಯಕ್ಕೆ ಅಸಮಾಧಾನದ ಮಾತನಾಡುವ ಸಮಯದಲ್ಲಿ ತಂದೆಗೆ ಅಜ್ಜಿಯ ವಿಷಯ ಗಟ್ಟಿಧ್ವನಿಯಲ್ಲಿ ತಿಳಿಸಿದಳು. ತಂದೆಗೆ ದಿಗ್ಭ್ರಮೆ ಆಯಿತು. ಆದರೆ ಕಾಲ ಮೀರಿತ್ತು. ಮಗಳು ಹಾಸ್ಟಲ್ ನಲ್ಲಿ ಇದ್ದು ಓದು ಮುಂದುವರೆಸುತ್ತೇನೆ ಇಲ್ಲಿರಲು ನನಗೆ ಮನಸ್ಸಿಲ್ಲ ಎಂದು ಹೇಳಿದಾಗ ಉತ್ತರವಿಲ್ಲದೆ ತಂದೆ ಮರುಮಾತಾಡದೇ ಕಂಬದಂತೆ ನಿಂತಿದ್ದರು. ತಾಯಿ ಸುಮ್ಮನೆ ಎಲ್ಲ ನೋಡಿ ತಪ್ಪಿನ ಅರಿವಾದರೂ ಏನೂ ಹೇಳದಾದಳು.