Nagesh Kumar CS

Comedy Action Thriller

3.9  

Nagesh Kumar CS

Comedy Action Thriller

ರೈಲು ಬಿಟ್ಟೆವು..!.

ರೈಲು ಬಿಟ್ಟೆವು..!.

5 mins
324



1


ಇಸವಿ 1990, ಜನವರಿ 6


ಬೃಂದಾವನ ಎಕ್ಸ್ಪ್ರೆಸ್ ರೈಲು ಭರದಿಂದ ಬಂಗಾರಪೇಟೆ ದಾಟಿ ಬೆಂಗಳೂರಿನತ್ತ ಸಾಗುತ್ತಿರುವ ಹದಿನೈದು ನಿಮಿಷಗಳ ನಂತರವೇ ಕೈಕೋಳ ಧರಿಸಿದ್ದ ಆರೋಪಿ ಶಂಕರ್ ಶೆಟ್ಟಿಗೆ ಎದೆನೋವು ಕಾಣಿಸಿಕೊಂಡಿದ್ದು..ತೆರೆದ ಕಿಟಕಿಯಿಂದ ಬರ್ರನೆ ಗಾಳಿ ಅವನ ಕಪ್ಪು ಕೂದಲು ಹಾರುವಂತೆ ಬೀಸುತ್ತಿದ್ದರೂ ಉಸಿರಾಡಲು ಕಷ್ಟವಾದವನಂತೆ ಕೋಳವನ್ನು ಆತಂಕದಿಂದ ಅಲುಗಾಡಿಸುತ್ತಾ ಅದರ ಇನ್ನೊಂದು ಭಾಗಕ್ಕೆ  ಕೈ ಕೊಟ್ಟು ಬಂದಿತನಾಗಿದ್ದ ಕಣ್ಣುಮುಚ್ಚಿ ನಿದ್ರಿಸುತ್ತಿದ್ದ ಪೋಲೀಸ್ ಡಿಟೆಕ್ಟಿವ್ ವಿಜಯೇಂದ್ರನಿಗೆ ಎಚ್ಚರಿಸಿದ  "ನನಗೇನೋ ಆಗ್ತಾ ಇದೆ.. ಎದೆನೋವು, ಉಸಿರು ಸಿಕ್ಕಿಹಾಕೋತಾ ಇದ್ದಂಗಿದೆ ...ಅಯ್ಯೋ,ಸಾರ್!" ವಿಜಯೇಂದ್ರ ತಡಬಡಾಯಿಸಿಕೊಂಡು ಎಚ್ಚರಗೊಂಡು ಜಗ್ಗಿದ ಕೈಕೋಳ ಎಳೆದುಕೊಂಡು ಬಂಧಿತನತ್ತ ಕೆಕ್ಕರಿಸಿ ನೋಡಿದ. " ಏನಾಯ್ತೋ ನಿಂಗೆ, ಮುಟ್ಟಾಳಾ?" ಮುಖ ವಿವರ್ಣವಾಗಿದೆ, ಅರ್ಧ ಮುಚ್ಚಿದ ಕಂಗಳು! ಉಸಿರುಗಟ್ಟಿದವನಂತೆ ಶಂಕರ್ ಶೆಟ್ಟಿ ಬಡಬಡಿಸಿದ. "ಗೊತ್ತಿಲ್ಲ..ನಾ ಸ.. ಸತ್ತೋಗ್ತೀನಿ.. ಡಾ...ಡಾಕ್ಟರನ್ನ ಕರೀರೀ ..ಅಯ್ಯೋ ಅಪ್ಪಾ!"


ಮೊದಲೇ ಇವರಿಬ್ಬರೂ ಕೈಕೋಳ ಧರಿಸಿ ಬೋಗಿಯಲ್ಲಿ ಹತ್ತಿ ಕುಳಿತಿದ್ದನ್ನು ಮಿಕ್ಕ ಪ್ರಯಾಣಿಕರೆಲ್ಲಾ ಗಮನಿಸಿ ಗುಸುಗುಸು ಮಾಡುತ್ತಾ ಸಂಶಯದ ನೋಟಗಳನ್ನು ಬೀರುತ್ತಲೇ ಇದ್ದರು. ಕಳ್ಳ ಪೋಲೀಸ್ ಅಂದರೆ ಮುಗಿಯದ ಕುತೂಹಲ ಸಾರ್ವಜನಿಕರಿಗೆ...ಜೊತೆಗೆ ಇವನದ್ದು ಬೇರೆ ಹೊಸ ಸಮಸ್ಯೆ! ಎಂದು ಮುಖ ಬಿಗಿದುಕೊಂಡೂ " ಸ್ವಲ್ಪ ತಡ್ಕೋಳಯ್ಯ... ಇಲ್ಯಾರಾದರೂ ಡಾಕ್ಟರ್ ಇದಾರಾ ನೋಡ್ತೀನಿ!"ಎಂದು ಅಲ್ಲೇ ಬಾಗಿಲ ಬಳಿ ನಿಂತಿದ್ದ ಕರಿಕೋಟ ಧಾರಿ ಟಿಟೀಇ ಗೆ ಕೂಗಿಹೇಳಿದ 


" ರೀ, ಸ್ವಾಮೀ, ಇಲ್ಯಾರಾದರೂ ವೈದ್ಯರಿದಾರಾ ನೋಡ್ರೀ..ಎಮರ್ಜೆನ್ಸಿ ಕೇಸು ತರಹಾ ಇದೆ!" ಶಂಕರ್ ಶೆಟ್ಟಿ ಅದೃಷ್ಟವೋ ಏನೋ, ಐದೇ ನಿಮಿಷದಲ್ಲಿ ಅರೆ ಬಕ್ಕ ತಲೆಯ ಸಫಾರಿ ಸೂಟ್ ಹಾಕಿದ್ದ ಮಧ್ಯವಯಸ್ಕರೊಬ್ಬರು ಗಂಭೀರ ಮುಖ ಹೊತ್ತು ಬಂದು, "ನಾನೇ ಡಾಕ್ಟರ್...ರಾಜಾರಾವ್ ಅಂತಾ... ಸ್ವಲ್ಪ ಇವರ ಕೈಕೋಳ ತೆಗೆಯಿರಿ" ಎಂದು ವಿಜಯೇಂದ್ರನಿಗೆ ಸೂಚಿಸಿದರು. ವಿಜಯೇಂದ್ರ ದೃಢವಾಗಿ ತಲೆ ಅಡ್ಡ ಆಡಿಸಿದ, "ಅದೇಗಾಗುತ್ತೆ... ನಾವು ಅರೆಸ್ಟ್ ಮಾಡಿಕೊಂಡು ಬಂದ ಕೇಸು...ತೆಗೆಯಕ್ಕೆಲ್ಲಾ ಆಗಲ್ಲ..." ಡಾಕ್ಟರ್ ಸೋಲು ಮುಖ ಹಾಕಿಕೊಂಡು ಕಿಟಕಿಗೆ ಒರಗಿ ಕಣ್ಣುಮುಚ್ಚಿದ್ದ ಶಂಕರ್ ಶೆಟ್ಟಿಯತ್ತ ನೋಡಿ ಗುಡುಗಿದರು, "ರೀ, ಇನ್ಸಪೆಕ್ಟರೇ...ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರಬಹುದೂ ಅನಿಸತ್ತೆ.." ಅವನ ಕೈಯಲ್ಲಿ ನಾಡಿ ಹಿಡಿದು,"ಅದಕ್ಕಿಂತಾ ನಿಮ್ಮ ಅರೆಸ್ಟ್ ಏನ್ರೀ?" ವಿಜಯೇಂದ್ರ ನಿರ್ವಾಹವಿಲ್ಲದೇ ಬಂಧಿತನ ಕೈಕೋಳ ಬಿಚ್ಚಿ ತನ್ನ ಜಡ ಕೈಯನ್ನೂ ಒದರಿಕೊಂಡ, ರಕ್ತ ಸಂಚಾರವಾಗಲೆಂದು.


ಎರಡು ನಿಮಿಷ ಬೋಘಿಯಲ್ಲಿದ್ದವರೆಲ್ಲ ಸ್ತಬ್ಧರಾಗಿ ಡಾಕ್ಟರ್ ಪರೀಕೆಯನ್ನೇ ಗಮನಿಸುತ್ತಿದ್ದರು, ಎದೆ ಬೆನ್ನು ನಾಲಿಗೆ ಎಲ್ಲಾ ಚೆಕ್ ಮಾಡಿ ಡಾ. ರಾಜಾರಾವ್ ಸಪ್ಪಗೆ ತೀರ್ಪಿತ್ತರು, " ಇಲ್ಲ,ಇದು ಸುಮ್ನೆ ಸರಿಹೋಗೋ ಸಲ್ಲ...ಸೀರಿಯಸ್ಸಾಗಿದೆ.. ನಾವು ತಕ್ಷಣ ಇವನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡದಿದ್ದರೆ ಪ್ರಾಣಕ್ಕೇ ಅಪಾಯ" ಮುಖ ಭುಜದಮೇಲೆ ವಾಲಿದ ಆರೋಪಿಯನ್ನು ನೋಡುತ್ತಾ ವಿಜಯೇಂದ್ರ ಕನಲಿದ.":ಥತ್ ತೇರಿ.. ಇಲ್ಲೆಲ್ರೀ ಆಸ್ಪತ್ರೆ ಸಿಗತ್ತೆ,ಓಡೋ ಟ್ರೈನಲ್ಲಿ?ನೀವೋಬ್ರು.."ಎಂದವನ ಮುಂದಿನ ಮಾತು ಕತ್ತರಿಸುತ್ತ ಕಪ್ಪು ಕೋಟಿನ ಟಿಟೀಇ ಬಾಣ ಬಿಟ್ಟ. "ಓಹ್,ಅದಕ್ಕೇನು?.ನಾವು ಬೇಕಾದರೆ ಮಾಲೂರಿನಲ್ಲಿ ಹಾಲ್ಟ್ ಮಾಡಿ ಇಳಿಸಬಹುದು..ಎಮರ್ಜೆನ್ಸಿಗೆ!" ವಿಜಯೇಂದ್ರ ಮುಖ ಕೆಂಪಗೆ ಮಾಡಿಕೊಂಡು ಜಬರಿಸಿದ, "ಯಾವ 'ಯಮ'ರ್ಜೆನ್ಸೀ ರೀ?...ಯಾಕೆ ಮಾಡ್ಬೇಕು?..ಮಹಾ ಖದೀಮ ಇವನು, ಬಂಗಾರಪೇಟೆಯ ಸೇಟ್ ಘನ್ಯಶ್ಯಾಮದಾಸ್ ಕೊಲೆಯಾದ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ...ಅಂತಾವನ್ನ ನಾನು ಬಿಟ್ಬಿಡ್ಬೇಕಾ?" ವೈದ್ಯರು ಎದ್ದು ನಿಂತು ಬೆರಳು ತೋರಿಸಿದರು, "ಬಿಡದಿದ್ದರೆ ನೀವೇ ಜವಾಬ್ದಾರಿ ಅವನು ಗೊಟಕ್ ಅಂದರೆ...ಓಕೆನಾ?" ವೈದ್ಯನ ಮೊನಚು ದೃಷ್ಟಿ ಎದುರಿಸಲಾಗದೇ ವಿಜಯೇಂದ್ರ ಒಪ್ಪಿಗೆ ಕೊಟ್ಟ..." ಬಟ್,ಮಾಲೂರಿಂದ ಬಂಗಾರಪೇಟೆ ಕಡೆಗೆ ವಾಪಸ್ ಹೋಗಿ ಸರಕಾರಿ ಆಸ್ಪತ್ರೆಲೇ ಸೇರಿಸಬೇಕು...ನಾನೇ ಅವನ ಸೆಕ್ಯುರಿಟೀಗೆ ಅರೇಂಜ್ ಮಾಡ್ತೇನೆ, ಡಿ ಎಸ್ ಪಿ ಸಾಹೇಬರ ಹತ್ರ ಮಾತಾಡಿ..." ಎನ್ನುತ್ತಲೇ ಇದ್ದ.


ಈಗೀಗ ಅರ್ಧ ವಾಲಿ ಸ್ತಬ್ಧನಾಗಿದ್ದ ಶಂಕರ್ ಶೆಟ್ಟಿಯನ್ನು ತೋರಿಸುತ್ತಾ ಡಾ.ರಾಜಾರಾಯರು, "ಐ ಸೇ ,ಡೋಂಟ್ ವೇಸ್ಟ್ ಟೈಮ್...ನಾನೂ ಅಲ್ಲಿನ ಗವರ್ನ್ಮೆಂಟ್ ಡಾಕ್ಟರೇ... ನನಗೆ ಎಲ್ಲಾ ಗೊತ್ತಿದ್ದಾರೆ... ಐ ವಿಲ್ ಟೇಕ್ ಕೇರ್" ಟಿಟೀಇ ಹೊರಟರು ಗಾರ್ಡ್ ವ್ಯಾನ್ ಕಡೆಗೆ.."ನಾನು ಹಾಗಾದರೆ ಡ್ರೈವರ್ ಗೆ ಮೆಸೇಜ್ ಮಾಡಿ ಮಾಲೂರಿನಲ್ಲಿ ನಿಲ್ಲಿಸಲು ಹೇಳ್ತೇನೆ. "ವಾಚ್ ನೋಡಿಕೊಂಡು. "ಗೆಟ್ ರೆಡಿ...ಫೈವ್ ಮಿನಿಟ್ಸ್ ಇದೆ ಅಷ್ಟೇ" ಎಲ್ಲರೂ ಗಡಿಬಿಡಿ ಮಾಡಿದರು.. ಪ್ರಯಾಣಿಕರು ಗುಸು ಗುಸು ಮಾಡುತ್ತಿದ್ದವರು ಎದ್ದೇ ಬಿಟ್ಟರು ಮಿಕ್ಕ ಆ್ಯಕ್ಷನ್ ನೋಡಲು...ವಿಜಯೇಂದ್ರನಿಗೆ ಅವರನ್ನು ನಿಯಂತ್ರಿಸಲು ಸಾಕು ಸಾಕಾಗಿ ಹೋಯಿತು. ಮಾಲೂರಿಗೆ ಬಂದಾಗ ರೈಲು ಸಡನ್ ಬ್ರೇಕ್ ಹಾಕಿ ನಿಲ್ಲಿಸಬೇಕಾಯಿತು..ಅಷ್ಟು ಸಮೀಪ ತಲುಪಿಬಿಟ್ಟಿದ್ದರು.


ವೈದ್ಯರು ಮತು ಟಿಟಿಇ ಏದುಸಿರು ಬಿಡುತ್ತಾ ಅರ್ಧ ಕಣ್ಣು ತೆರೆದ ಶಂಕರ್ ಶೆಟ್ಟೀಯನ್ನು ಪ್ಲಾಟ್‌ಫಾರಮ್ಮಿಗೆ ಇಳಿಸಿದರು.ವಿಜಯೇಂದ್ರ ಅವರತ್ತ ಅಸಹನೆಯಿಂದಲೇ ನೋಡಿದ.'ಆಂಬುಲೆನ್ಸಿಗೆ ಟೈಮಿಲ್ಲ ಅನಿಸತ್ತೆ... ಟ್ಯಾಕ್ಸಿ ತಗೊಳ್ಳಿ ಒಂದು ಹೊರಗೆ.. ನಾನು ಇಲ್ಲಿನ ಪೋಲಿಸಿಗೆ ಮೆಸೇಜ್ ಮಾಡಿ ಜೀಪ್ ಕರೆಸಿ ಬಂಗಾರ ಪೇಟೆ ಆಸ್ಪತ್ರೆಗೇ ನೇರ ಬರುತ್ತೇನೆ...ಅವನು ಜೋಪಾನ ಡಾಕ್ಟರೆ...!"ಎನ್ನುತ್ತ ವಿರುದ್ಧ ದಿಕ್ಕಿಗೆ ಬಿರಬಿರನೆ ನಡೆದ. ನಿಧಾನವಾಗಿ ರೋಗಿ ಆರೋಪಿಯನ್ನು ಹೊರಕ್ಕೆ ನೆಡೆಸುತ್ತಾ ಡಾ. ರಾಜಾರಾವ್ ನುಡಿದರು. "ಯೆಸ್,ಅಲ್ಲೊಂದು ಕರಿ ಅಂಬಾಸಿಡರ್ ಟ್ಯಾಕ್ಸಿ ನಿಂತಿದೆ ಸದ್ಯಾ... ಲಕ್ಕಿ ಇವನು!... ಈ ಊರಲ್ಲಿ ಎಲ್ಲಿ ಟ್ಯಾಕ್ಸಿ ರೆಡಿಯಿರತ್ತೆ?"


2


ಡಿಟೆಕ್ಟಿವ್ ವಿಜಯೇಂದ್ರ ಅತ್ತ ಕಣ್ಮರೆಯಾಗುತ್ತಿದ್ದಂತೇ ಟ್ಯಾಕ್ಸೀ ಡ್ರೈವರ್ ತನ್ನ ಪಕ್ಕದ ಬಾಗಿಲು ತೆಗೆದು ಕಿವಿಯಿಂದ ಕಿವಿಯವರೆಗೂ ತನ್ನ ಹಳದಿ ಹಲ್ಲುಗಳನ್ನು ತೋರಿಸುತ್ತಾ ನಕ್ಕ."ಬನ್ನಿ ಡಾಕ್ಟರೇ...ಏನು ಯಾವ ಕಡೇ ಸವಾರಿ?"

ಅದನ್ನು ಕೇಳಿ ಇದ್ದಕ್ಕಿದ್ದಂತೆ ಚೇತರಿಸಿಕೊಂಡ ಆರೋಪಿ ಶಂಕರ್ ಶೆಟ್ಟಿ ದೊಪ್ಪನೆ ಹಿಂದಿನ ಸೀಟಿಗೆ ಕುಸಿಯುತ್ತಾ ಗಹಗಹಿಸಿ ನಗಲಾರಂಭಿಸಿದ. ಡಾ. ರಾಜಾರಾವ್ ಕುಪಿತ ಮುಖ ಮಾಡಿದರು ಡ್ರೈವರನತ್ತ. "ಸುಮ್ನಿರಪ್ಪಾ ಪಾಲ್...ನಿಮ್ಮಿಬ್ಬರಿಗೂ ತಮಾಷೆಯಾಗಿದೆ..ನನಗೆ ಎಲ್ಲಿ ಆ ಪೋಲೀಸಪ್ಪ ಕಂಡುಹಿಡಿದುಬಿಡುತ್ತಾನೋ ಅಂತಾ ಜೀವಾನೇ ಬಾಯಿಗೆ ಬಂದಿತ್ತು ಇಳಿಯೋವರೆಗೂ!" ಎಂದು ಶಂಕರ್ ಪಕ್ಕ ಕುಕ್ಕರಿಸಿದರು. "ಪ್ರಾಣ ನನಗೆ ತಾನೇ ಹೋಗ್ತಿದ್ದಂತೆ ಕಾಣ್ತಿದ್ದುದು? ಡಾಕ್ಟರ್ ರಾಜಾರಾವ್ ಉರುಫ್ ಸುಬ್ರಹ್ಮಣ್ಯಂ, ನಂದು ಹೇಗಿತ್ತು ಆ ಆಕ್ಟಿಂಗು?" ಶಂಕರ್ ತಡೆದುಕೊಳ್ಳಲಾರದಷ್ಟು ನಗು ಬರುತ್ತಿದ್ದರೂ ಹುಬ್ಬೇರಿಸಿ ಪ್ರಶ್ನಿಸಿದ.. ಟ್ಯಾಕ್ಸಿ ರೊಯ್ಯನೆ ನಿರ್ದಿಷ್ಟ ದಾರಿಯಲ್ಲಿ ಓಡಿತು. ಡ್ರೈವರನಿಗೆ ಚಿರಪರಿಚಿತವಾಗಿದ್ದ ದಾರಿ ಅದು. "ನಿನ್ನ ಆಕ್ಟೀಂಗೂ ಭರ್ಜರಿಯಾಗಿತ್ತು ಕಣಯ್ಯಾ"ಎಂದು ಅಂದು ಮೊದಲಬಾರಿಗೆ ಹುಬ್ಬುಗಂಟು ಸಡಲಿಸಿ ಶಂಕರನ ಬೆನ್ನು ತಟ್ಟಿದರು ಸುಬ್ರಹ್ಮಣ್ಯಂ ಎಂದು ಈಗ ಕರೆಯಲ್ಪಟ್ಟ ವ್ಯಕ್ತಿ.

"ಪಾಲ್" ಎಂದು ಡ್ರೈವರ್ ಬೆನ್ನು ತಟ್ಟಿ ಕರೆದರು ಸುಬ್ರಹ್ಮಣ್ಯಂ ."ಇವನೇ ನಮ್ಮ ಬಾಸಿಗೆ ತುಂಬಾ ಪ್ರಿಯನಾದ ವ್ಯಕ್ತಿ...ಶಂಕರ್ ಶೆಟ್ಟಿ" ಪಾಲ್ ಮತ್ತೆ ಹಲ್ಕಿರಿದು ಟ್ಯಾಕ್ಸಿ ಒಂದು ಹಳ್ಳಿರಸ್ತೆಯಲ್ಲಿ ತಿರುಗಿಸಿದ.

"ನಾನು ನಮ್ಮ ಟೋನಿ ರಾಜ್ ಅಣ್ಣನ ಅಚ್ಚುಮೆಚ್ಚಿನ ಡ್ರೈವರ್ ಇವತ್ತು ಮಾತ್ರ ಸ್ಪೆಷಲ್ ಡ್ಯೂಟಿ ಈ ಡಬ್ಬಾ ಟ್ಯ್ಯಾಕ್ಸಿಲಿ!"

"ಇಲ್ಲದಿದ್ದರೆ..." ಶಂಕರ್ ಆರಾಮವಾಗಿ ಟ್ಯಾಕ್ಸಿ ಸೀಟಿಗೆ ಒರಗಿ ಹೇಳಿದ, "ನಮ್ಮ ಟೋನಿ ಅಣ್ಣನದು ಮರ್ಸಿಡೆಜ಼್ ಬೆಂಝ್ ಕಾರು ತಾನೆ?..ಈ ಕೋಲಾರ್ ಡಿಸ್ಟ್ರಿಕ್ಟ್ ನಲ್ಲೇ ಬೊಂಬಾಟ್ ಕಾರು!" "ಅದೇನು ಟೋನೀ ಅಣ್ಣಾ ನಿಮ್ಮನ್ನ ಬಿಡಿಸಿಕೊಳ್ಳಕ್ಕೆ ಈ ರೀತಿ ನಾಟಕ ಆಡಿದ್ದು...ಸ್ವಲ್ಪ ಈ ಡಾಕ್ಟರೋ, ನೀವೋ ರೈಲಲ್ಲಿ ಯಾಮಾರಿದ್ರೆ ಎಲ್ಲಾ ಒಳಗೆ ಹೋಗ್ತಿದ್ರಿ, ಅಲ್ಲವರಾ?" ಎಂದು ಮಾಲೂರಿನ ಬಾಲಾಂಬಿಕ ಗುಡಿಯ ಹಿಂಬಾಗದ ನಿರ್ಜನ ಜಂಗಲ್ ಪ್ರದೇಶದ ಸಣ್ಣ ದಾರಿಯಲ್ಲಿ ಟ್ಯಾಕ್ಸಿ ತಿರುಗಿಸಿದ ಡ್ರೈವರ್ ಪಾಲ್. " ಹಹ್ಹಹ್ಹಾ...ನಾವು ಯಾಮಾರೋದೇ? ಸರಿಯಾಗಿ ರೈಲು ಬಿಟ್ಟೆವು.... ಇವನು ರೋಗಿ ತರಹಾ ಉಸಿರು ಸಿಕ್ಕಿಹಾಕೊಂಡವನಂತೆ ನರಳಿದ... ನಾನು ಭಯ ಇದ್ರೂ ಪಕ್ಕಾ ಡಾಕ್ಟರ ತರಹ ಎಲ್ಲಾ ಚೆಕ್ ಮಾಡಿ ರೈಲು ನಿಲ್ಲಿಸಿ ಎಂದೆ....ಆ ಪೆದ್ದ ಡಿಟೆಕ್ಟಿವ್ ನಮ್ಮನ್ನು ನಂಬಿ ಬಿಟ್ಟು ಒಬ್ನೇ ಹೊರಟೋದ...ಬಂಗಾರಪೇಟೆ ಆಸ್ಪತ್ರೆಗೆ ಹೋಗ್ತಾನಂತೆ !" ಎನ್ನುತ್ತಾ ಸುಬ್ರಮಣ್ಯಂ ವಿಜಯದ ಕೇಕೆ ಹಾಕಿದ "ಏನಂದ್ರಿ... ರೈಲು ಬಿಟ್ಟೆವು ಅಂತಾನಾ? ...ಅದೂ ರೈಲಿನಲ್ಲೇ ನೀವು ರೈಲು ಬಿಟ್ರಿ!" ಎನ್ನುತ್ತಾ ಪಾಲ್ ತನ್ನ ಜೋಕಿಗೆ ತಾನೇ ನಗುತ್ತಾ ಕಾಡಿನ ಹಳ್ಳ ಗುಡ್ಡದ ರಸ್ತೆಯಲ್ಲಿ ತಮ್ಮ ಗುಪ್ತ ಅಡಗುತಾಣವಾದ ಹಳೇ ಗೋಡೌನ್ ಬಳಿ ಕಾರು ಜರ್ರನೆ ತಂದು ನಿಲ್ಲಿಸಿದ.


"ಇನ್ನು ನಮ್ಮನ್ನು ಯಾರೂ ಹಿಡಿಯೋರಿಲ್ಲ...ಅಲ್ವಾ ಸುಬ್ರಮಣ್ಯಂ?"ಎಂದು ಆತನ ಪಕ್ಕೆ ತಿವಿದ ಹರ್ಷಚಿತ್ತನಾಗಿದ್ದ ಶಂಕರ್ . ಎಲ್ಲರೂ ಒಳಗೆ ಹೋದಮೇಲೆ ಬಾಗಿಲು ಕಿಟಕಿ ಮುಚ್ಚಿಕೊಳ್ಳುತ್ತಾ ಬಂದ ಪಾಲ್ ಮತ್ತೆ ಕೇಳಿದ

"ನನ್ನ ಪ್ರಶ್ನೆಗೆ ಉತ್ತರ ಹೇಳಲಿಲ್ಲ ನೀವು" ಎಂದು ತುಟಿಯುಬ್ಬಿಸಿದ." ಈ ಶಂಕರ್ ಶೆಟ್ಟಿನಾ ಬಿಡಿಸಕ್ಕೆ ಯಾಕೆ ಹೇಳಿದ ಅಣ್ಣ?" 40 ವರ್ಷ ಸಮೀಪಿಸುತ್ತಿದ್ದಂತಾ ಸ್ವಲ್ಪ ಬೊಜ್ಜು ಹೊಟ್ಟೆಯ ಆರ್ಡಿನರಿಯಾಗಿದ್ದ ಇವನ ಮೇಲೇನು ಈ ಡಿಸ್ತ್ರಿಕ್ಟ್ ಗೆ ದೊಡ್ಡ ಮಾಫಿಯಾ ಬಾಸ್ ಟೋನಿ ಅಣ್ಣನ ಪ್ರೀತಿ? ಸುಬ್ರಮಣ್ಯಂ ಎಲ್ಲರಿಗೂ ಒಂದೊಂದು ಫಾಂಟಾ ಬಾಟಲ್ ತನ್ನ ಡಾಕ್ಟರ್ ಬ್ಯಾಗಿಂದ ಎಸೆಯುತ್ತಾ ಧಿಮಾಕಿನಿಂದ ಹೇಳಿದ "ಅಯ್ಯೋ, ಗುಲ್ಡೂ ಬಡ್ಡಿಮಗನೇ...ಇಷ್ಟು ದಿನ ಟೋನಿ ಅಣ್ಣನ ಜತೆ ಇದ್ರೂ ಅಷ್ಟು ಅರ್ಥಮಾಡ್ಕೊಳ್ಳಕ್ಕೇ ಆಗ್ಲಿಲ್ಲ ನಿಂಗೆ?...ನಾನೇನು ಈ ಶಂಕರನಾ ಮೊದಲು ಎಲ್ಲಾದರೂ ನೋಡಿದ್ನಾ?...ಇಲ್ಲ... ಆದರೆ ಅಣ್ಣ ಹೇಳಿದ ಮೇಲೆ ಮಾಡಲೇ ಬೇಕು!" "ನಾನೇ ಹೇಳ್ತೀನಿ... ಬಂಗಾರಪೇಟೆ ಸೇಟ್ ಘನ್ಯಶ್ಯಾಮದಾಸ್ ಕೊಲೆಯಾಗಿದ್ದು ನಿಮಗೆ ಗೊತ್ತಲ್ಲ?...ನಾನವತ್ತು ಅವನ ಬೆಡ್ರೂಂ ಒಳಗೆ ಹೋದೆ, ಟೋನಿ ಅಣ್ಣ ಹೊರಗೆ ಬರ್ತಿದ್ದ,ನನ್ನ ಕೈಗೆ ಸಡನ್ನಾಗಿ ಒಂದು ರಿವಾಲ್ವರ್ ತುರುಕಿಬಿಟ್ಟ ...ಒಳಗೆ ಆಗ ತಾನೇ ಕೊಲೆಯಾಗಿ ಸಾಯುತ್ತಿದ್ದ ಸೇಟ್ ಘನಶ್ಯಾಮ ದಾಸ್...ಅವನನ್ನು ಕೊಂದ ಗನ್ ನನ್ನ ಕೈಯಲ್ಲಿ..." ಪಾಲ್ ತಲೆಯಾಡಿಸಿದ, "ಇದೆಲ್ಲಾ ನಂಗೊತ್ತಿದೆ. ಸರಿಯಾಗಿ ಸಿಕ್ಕಿಹಾಕಿಸಿದ ಟೋನಿ ಅಣ್ಣ, ಯಾವಾಗಲೂ ಕೈಗೆ ಗ್ಲೋವ್ಸ್ ಹಾಕೋತಾನೆ.. ನೀನು ಹಾಕಿರಲಿಲ್ಲ, ಅಲ್ಲದೇ ನಿನಗೂ ಘನ್ಯಶ್ಯಾಮದಾಸ್‌ಗೂ ಕಳೆದ ಸಲ ಡೈಮಂಡ್ಸ್ ಡೀಲಿನಲ್ಲಿ ಜಗಳವಾಗಿ, ನೀನೇ ಅವನ್ನ ಕೊಂದುಬಿಡ್ತೀನಿ ಒಂದಿನಾ ಅಂದಿದ್ದೆ.. ನಿನ್ನ ಮೇಲೆ ಮರ್ಡರ್ ಆರೋಪ ಫಿಕ್ಸ್!...ಮತ್ತೆ ಈಗ ಪೋಲಿಸರಿಂದ ಬಡಿಸಿದ್ಯಾಕೆ?"

ಸುಬ್ರಮಣ್ಯಂ ಉಫ್ಹ್ ಎಂದು ಉಸಿರು ಹೊರಹಾಕಿದ. "ಅದೇ ನಿನಗೆ ಅರ್ಥವಾಗದ್ದು...ಈಗ್ ಯಾರಿಗೆ ಗೊತ್ತಿತ್ತು ಟೋನಿನೇ ಸೇಟ್ ನಾ ಆಫ್ ಮಾಡಿದ್ದು ಅಂತಾ? ಶಂಕರ್ ಗೆ...ಅರೆಸ್ಟ್ ಆಗಿದ್ದು ಯಾರು? ಶಂಕರ್!... ಆದರೆ ಅವನು ಪೋಲಿಸರ್ ಹತ್ರ ಒಂದು ಸಲಾ ಆದ್ರೂ ಬಾಯಿ ಬಿಟ್ನಾ? ಇಲ್ಲ..ಕೋರ್ಟಿಗೆ ಕರ್ಕೊಂಡು ಹೋದ್ರೂ ಹೇಳಲ್ಲ... ಅಂದರೆ ಶಂಕರ್ ತುಂಬಾ ನಂಬಿಕಸ್ತ ಆದ ಅಲ್ವಾ.. ಅಂತವನು ಸಿಕ್ಕಿಹಾಕಿಕೊಳ್ಳೋ ಬದಲು, ಹೊರಗೇ ಇದ್ರೆ?...ಶಂಕರ್ ಟೋನಿಗೆ ದೊಡ್ಡ ಸಪೋರ್ಟ್ ಅಲ್ವಾ? .ಅದೂ ಬಾಂಬೆ ಮಾಫಿಯಾ ಇಲ್ಲಿಗೆ ಬರ್ತಾ ಇದೆ..ಶಂಕರ್ ಅಲ್ಲಿ ಸೇರ್ಕೊಂಡು ತನ್ನಕಡೆ ಕೆಲಸ ಮಾಡ್ಕೊಡ್ಲಿ ಅಂತಾ ಅಣ್ಣನ ಪ್ಲಾನು...ನಿನಗೆಲ್ಲಿ ಅರ್ಥಾ ಆಗುತ್ತೆ?.. ಅದೇ ಘನಶ್ಯಾಮದಾಸ್ ನೋಡು...ಬಾಂಬೆ ಮಾಫಿಯಾ ಕಡೆ ಸೇರ್ಕೊಂಡು ಒಳಗೊಳಗೇ ಮಾಲ್ ಅಬೇಸ್ ಮಾಡಿಸ್ತಿದ್ದ...ಏನಾದ?...ಭಗವಾನ್ ಕೋ ಪ್ಯಾರಾ ಹೋಗಯಾ!"


ಆಗಲೇ ಟೋನಿಯ ಕಾಲ್ ಬಂತು.


ಪಾಲ್ ತಗೊಂಡು,"ಇಲ್ಲೇ ಇದಾನಣ್ಣ,ಶಂಕರಂಗೆ ಕೊಡ್ತೀನಿ"ಅಂತಾ ನಸುನಗುತ್ತಿದ್ದ ಶಂಕರ್ ಕೈಗೆ ಫೋನ್ ಕೊಟ್ಟ.

"ಅಣ್ಣಾ,ಹೊರಗೆ ಬಂದುಬಿಟ್ಟೆ ...ಬಾಳಾ ಒಳ್ಳೇ ಪ್ಲಾನು"ಅಂದ. ಆ ಕಡೆಯಿಂದ ಟೋನಿ ಜೋರಾಗಿ ಉಸಿರೆಳೆದುಕೊಂಡ " ಏಯ್,ಯಾರೋ ನೀನು..ಶಂಕರ್ ತರಹ ಇಲ್ಲ ನಿನ್ನ ವಾಯ್ಸು!" "ನಾನು ಶಂಕರ್ ಆಗಿದ್ರೆ ತಾನೇ ವಾಯ್ಸ್ ಅದೇ ಇರೋದು? ನಾನೂ ನಿಮ್ಮ ಜತೆ ಸೇರ್ಕೊಂಡು ರೈಲ್ ಬಿಟ್ಟೆ... ನೀವೇ ಹುಷಾರು ಅನ್ಕೊಂಡ್ರೆ ಈ ಡಿಟೆಕ್ಟಿವ್ ಸಮರ್ಥ್ ನಿಮಗಿಂತಾ ಚತುರ...ಇಡೋ ಫೋನು!..ನಿಮ್ಮನೆ ಬಾಗಿಲು ತಟ್ತಾ ಇರ್ತಾರೆ ಅಲ್ಲಿ ವಿಜಯೇಂದ್ರ ಕಳಿಸಿದ ಪೋಲೀಸ್ ಪಾರ್ಟಿ..ನೋಡೋಗು" ಇತ್ತ ಬೆರಗಾಗಿ ಎದ್ದು ನಿಂತ ಪಾಲ್ ಮತ್ತು ಸುಬ್ರಮಣ್ಯಂಗೆ ಏನಾಗ್ತಿದೆ ಅಂತಾ ಅರ್ಥವಾಗಿ ಕಂಗಾಲಾಗಿ ಡಿಟೆಕ್ಟಿವ್ ಸಮರ್ಥ್ ಹತ್ತಿರ ನುಗ್ಗಿದರು. ಹ್ಯಾಂಡ್ಸಪ್...ಹತ್ರ ಬಂದರೆ ಗುರಿ ತಪ್ಪಲ್ಲ"ಎಂದು ಶಂಕರ್ ಆಗಿ ನಟಿಸಿದ್ದ ಡಿಟೆಕ್ಟಿವ್ ಸಮರ್ಥ್ ತನ ಕೋಲ್ಟ್ 0.45 ರಿವಾಲ್ವರ್ ಜೇಬಿಂದ ಎತ್ತಿ ತೋರಿಸಿದರು,, " ಯಾರ್ರೋ ಪೆದ್ದ ಡಿಟೆಕ್ಟಿವ್ಸ್? ಶಂಕರ್ ಮುಖ ನೋಡದ ನೀವು ಹೀಗೆ ಶಂಕರ್ ನಾ ಎತ್ತಾಕೊಂಡೂ ಹೋಗೋ ಪ್ಲಾನ್ ಮಾಡಿದೀರಾ ಅಂತಾ ಸಿಐಡಿಗೆ ಸುದ್ದಿ ಬಂತು. ಅದಕ್ಕೇ ನಿನ್ನೆ ರಾತ್ರಿ ರೈಲಿನಲ್ಲೇ ನಿಜವಾದ ಶಂಕರ್ ಶೆಟ್ಟಿನಾ ಸೆಂಟ್ರಲ್ ಜೈಲಿಗೆ ಕಳಿಸಿ ಆಯ್ತು... ನಾನು ವಿಜಯೇಂದ್ರ ಚಿಕ್ಕ ಕಳ್ಳ-ಪೋಲೀಸ್ ಆಟ ಆಡಿದ್ವಿ... ರೈಲಿನಲ್ಲಿ ರೈಲು ಬಿಟ್ಟು ನಿಮ್ಮನ್ನು ನಂಬಿಸಿ ಈಗ ನಿಮ್ಮ್ಮಬಾಯಲ್ಲೇ ಟೋನಿ ಕೊಲೆ ಮಾಡಿದ ಅಂತಾ ಕನ್ಫೆಷನ್ ಇಲ್ಲಿ ರೆಕಾರ್ಡ್ ಮಾಡ್ಕೊಡಿದೀನಿ"ಎಂದು ಜೇಬು ತಟ್ಟಿಕೊಂಡರು ಸಮರ್ಥ್ "ಸಾರ್,ನಾವು ಹಂಗಲ್ಲ ಹಿಂಗಲ್ಲ, ಒಂದು ಮಾತು ಕೇಳಿ" ಅಂತಾ ಗೋಳಾಡುತಿದ್ದ ಅವರಿಬ್ಬರ ಬಳಿಗೆ ಬಾಗಿಲು ಮುರಿದು ಪೋಲಿಸರು ಬಂದಿದ್ದಾಗಿತ್ತು.

ಎಲ್ಲರೂ ಗೋಡೌನಿಂದ ಹೊರನಡೆದರು..


ಕಂಗ್ರಾಟ್ಸ್ , ಸಮರ್ಥ..ಹೆಸರಿಗೆ ತಕ್ ವ್ಯಕ್ತಿ ನೀವು ಎಂದು ಹೊರಗೆ ಪೋಲೀಸರನ್ನು ಕರೆದುಕೊಂಡೂ ಫಾಲೋಮಾಡಿ ಬಂದಿದ್ದ ವಿಜಯೇಂದ್ರ.


Rate this content
Log in

Similar kannada story from Comedy