Nagesh Kumar CS

Horror Fantasy Thriller

2  

Nagesh Kumar CS

Horror Fantasy Thriller

ಆಕಾಶದಾಗೆ ಯಾರೋ ಮಾಯಗಾರರು...?( ಪ್ರತಿಲಿಪಿ 1ನೇ ಬಹುಮಾನ ಪಡೆದ ಕತೆ)

ಆಕಾಶದಾಗೆ ಯಾರೋ ಮಾಯಗಾರರು...?( ಪ್ರತಿಲಿಪಿ 1ನೇ ಬಹುಮಾನ ಪಡೆದ ಕತೆ)

19 mins
1.2K



1


"ಡಾಕ್ಟರ್, ನಿಜ ಹೇಳಿದರೆ ನಮ್ಮನ್ನು ಹುಚ್ಚರೆನ್ನುತ್ತೀರಿ, ಹೇಳದಿದ್ದರೆ ನಾವು ಸುಳ್ಳರಾಗುತ್ತೇವೆ..." ಎಂದರು ಗಗನ್ ಪೈ.


ನಾನು ಅವರಿಬ್ಬರನ್ನೂ ಮುಗುಳ್ನಗುತ್ತಾ ದಿಟ್ಟಿಸಿ ನೋಡಿದೆ. ಇಬ್ಬರ ಮುಖದಲ್ಲೂ ಮನೆಮಾಡಿದ್ದ ಆತಂಕ, ಆದರೆ ಏನನ್ನೋ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂಬ ತವಕ ಎರಡೂ ಸಮವಾಗಿ ಸೆಣೆಸಾಡುತ್ತಿದ್ದವು.


"ನೋಡಿ, ನೀವು ಹೇಳಲೆಂದೇ ಬಂದಿರುವುದು, ನಾನು ಕೇಳಲೆಂದೇ ಸಿದ್ಧನಾಗಿ ಕುಳಿತಿರುವುದು... ನಿಮಗೆ ಕೊಂಚವೂ ಸಂಕೋಚವಾಗದಂತೆ ನಾನು ಸಮ್ಮೋಹನ ತಂತ್ರ ಬಳಸುತ್ತೇನೆ... ಎಲ್ಲಾ ಸ್ಪಷ್ಟವಾಗುವುದು, ಸರಿಯೆ?" ಎಂದೆ ಶಾಂತ ಸ್ವರದಲ್ಲಿ. ಈ ಶಾಂತ ಸ್ವರದ ಆಶ್ವಾಸನೆ ಕೊಡುವುದು ನನಗೆ ಹೊಸದೇನೂ ಅಲ್ಲ...ಆದರೆ ಅವರಿಗೆ ಮೊತ್ತ ಮೊದಲ ಬಾರಿಗೆ ಕೇಳಿಸಿತ್ತು...


ಡಾ.ಸತ್ಯಪಾಲ್ ಹೆಗೆಡೆ, ಪಿ ಎಚ್.ಡಿ ಎಂಬ ನನ್ನ ಹೆಸರಿನ ಬೋರ್ಡ್ ನನ್ನ ಮೇಜಿನ ಮೇಲಿದ್ದುದು ಹೆಚ್ಚು ಆಶಾಭಾವನೆ ಮೂಡಿಸಿತೇನೋ! ಗಗನ್ ಮತ್ತು ಭಾನುಮತಿ ಪೈ ಎಂಬ ಮಂಗಳೂರಿನ ಮಧ್ಯಮವರ್ಗದ ಕೃತ್ರಿಮವರಿಯದಂತೆ ಕಾಣುವ ದಂಪತಿ ನನ್ನೆದುರು ಮೂಕರಂತೆ ತಲೆಯಾಡಿಸಿದರು...


ಕ್ಯಾಲಿಫೋರ್ನಿಯಾದಲ್ಲಿ ನಾನು ಅನ್ಯಗ್ರಹ ಜೀವಿಗಳು ಮಾಡುತ್ತಿರುವ ಮಾನವ ಅಪಹರಣಗಳ ಬಗ್ಗೆ ಸೆಟಿ- SETI- (ಸರ್ಚ್ ಫಾರ್ ಎಕ್ಸ್ಟ್ರಾ ಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್) ಎಂಬ ಅತಿ ಗುಪ್ತ ಮತ್ತು ವೈಜ್ಞಾನಿಕ ರಹಸ್ಯ ಪತ್ತೆ ಮಾಡುವ ಸಂಸ್ಥೆಯಲ್ಲಿ ಮನೋವೈದ್ಯನಾಗಿ ಎರಡು ವರ್ಷಗಳಿಂದ ಸೇವೆಯಲ್ಲಿದ್ದೆ. ಯು ಸಿ ಎಲ್ ಎ ವಿಶ್ವವಿದ್ಯಾಲಯದಲ್ಲಿ ಸೈಕಿಯಾಟರಿಯಲ್ಲಿ ಡಾಕ್ಟರೇಟ್ ಮಾಡಿದ ನನಗೆ ಮೊದಲಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ಮಾನವಾತೀತ ಶಕ್ತಿಗಳ ಬಗ್ಗೆ ಇದ್ದ ಶಕ್ತಿಗಳ ಕುತೂಹಲ ತಣಿಸುವಂತೆ ಸೆಟಿಯವರಿಂದಲೇ ಕರೆ ಬಂದಿತ್ತು. ವಿಶ್ವವಿದ್ಯಾಲಯದ ಚಿನ್ನದ ಪದಕ ಗೆದ್ದವರನ್ನು ಆಹ್ವಾನಿಸುವುದು ಅವರ ಪರಿಪಾಠವೂ ಆಗಿತ್ತು. ನಾನು ಈಗ ಅಲ್ಲಿನ ಮುಖ್ಯ ಮನೋವೈದ್ಯಾಧಿಕಾರಿ.


ಕಳೆದ ಎರಡು ವಾರಗಳ ಕೆಳಗೆ ಮಂಗಳೂರಿನಲ್ಲಿ ಭಾರತವೇ ಬೆರಗಾಗುವಂತಾ ಸುದ್ದಿಸ್ಪೋಟವಾಗಿತ್


ಸಾಧಾರಣವಾಗಿ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚು ವಾರ್ತೆಗಳು ಹೊರಬೀಳದ ನನ್ನ ತಾಯ್ನಾಡಿನಲ್ಲಿ 35-ರ ವಯಸ್ಸಿನ ಸಮೀಪದ ಪೈ ದಂಪತಿಗಳು ಎಲ್ಲರ ಮುಂದೆ ”ಅನ್ಯಗ್ರಹವಾಸಿಗಳಿಂದ ಪದೇ ಪದೇ ತಮ್ಮ ಅಪಹರಣವಾಗುತ್ತಿದೆ, ಜೈವಿಕ ಪ್ರಯೋಗವಾಗುತ್ತಿದೆ’ ಎಂದು ಹೇಳಿಕೆ ಕೊಟ್ಟರು. ಅದರೊಂದಿಗೇ ಅಲ್ಲಿ ನಡೆಯಿತೆನ್ನಲಾದ.ನಂಬಲಸಾಧ್ಯವಾದ ವಿಚಿತ್ರ ಘಟನೆಗಳ ಸರಮಾಲೆಯನ್ನೂ ಅವರು ಪ್ರಾಮಾಣಿಕವೆನ್ನುವಂತೆ ವರದಿಗಾರರ ಮುಂದೆ ಹೇಳಿದ್ದರು. ಆದರೆ ಸುದ್ದಿಹಸಿವಿನ ಟಿ ಆರ್ ಪಿ ಮೂಲೋದ್ದೇಶದ ಮಾಧ್ಯಮಗಳು ಅವನ್ನು ಅತಿರಂಜಿತವಾಗಿ ಬಿಂಬಿಸಿ ಅವರಿಬ್ಬರೂ ಒಮ್ಮೆಲೇ ಒಲ್ಲದ ಸೆಲೆಬ್ರಿಟಿಗಳಾಗಿ ಬಿಂಬಿತವಾಗಿದ್ದರು. ಭಾರತದ ಬಾಹ್ಯಾಕಾಶ ಇಲಾಖೆ ಮತ್ತು ಹಲವು ವಿಚಾರವೇದಿಕೆಗಳ ಅಗ್ರಹದ ಮೇಲೆ ನನ್ನ ಸಂಸ್ಥೆ ಭಾರತೀಯನೇ ಆದ ನನ್ನನ್ನು ಅವರ ಪೂರ್ಣ ತನಿಖೆ ಮತ್ತು ಸತ್ಯಶೋಧನೆಗಾಗಿ ಕಳಿಸಿಕೊಟ್ಟಿತ್ತು. ನಾನು ಅಮೆರಿಕಾದಲ್ಲಿ ಹಲವಾರು ನಾಗರೀಕರ ನಿಜಜೀವನದ ಇಂತಾ ಸತ್ಯ ಘಟನೆಗಳನ್ನು ಪರೀಕ್ಷಿಸಿದ್ದ ಅನುಭವವೂ ಇದಕ್ಕೆ ಪೂರಕವಾಗಿತ್ತು.


"ನೋಡಿ ಡಾಕ್ಟರ್ ಹೆಗಡೆ, ಈಗ ಕಳೆದ ಎರಡು ವರ್ಷಗಳಿಂದ ನಮ್ಮಿಬ್ಬರಿಗೂ ಒಂದೇ ತರಹ ಯಾರೋ ಕದ್ದೊಯ್ದು ಪ್ರಯೋಗ ಮಾಡಿದಂತೆ ಅರಿವಾಗುತ್ತಲೇ ಇದೆ...ನಾವೇನೂ ಇದನ್ನೆಲ್ಲಾ ದುಡ್ಡಿನಾಸೆಗೆ ಮಾಡುತ್ತಿಲ್ಲ" ಮೊದಲ ಬಾರಿಗೆ ಮನಸ್ಸಿನಿದ್ದುದನೆಲ್ಲಾ ಕಕ್ಕುವಂತೆ ಏಕ್ ದಂ ಮಾತಾಡಿದ್ದರು ಆತಂಕದ ದನಿಯಲ್ಲಿ ಭಾನುಮತಿ.


"ಪ್ರಚಾರಕ್ಕಾಗಿಯೋ, ಪ್ರಸಿದ್ಧರಾಗಲೋ ನಮಗಗತ್ಯವೂ ಇರಲಿಲ್ಲ" ಎಂದು ಪತ್ನಿಯ ವಾದವನ್ನು ಸಮರ್ಥಿಸಿದರು ಗಗನ್.


ಅವರಿಗದರ ಅವಶ್ಯಕತೆಯೂ ಇರಲಿಲ್ಲ ಎಂದೂ ನನಗೂ ಗೊತ್ತಿತ್ತು. ಮಂಗಳೂರಿನ ಪ್ರತಿಷ್ಟಿತ ಫೈನ್ಯಾನ್ಸ್ ಕಂಪನಿಯ ಪಾಲುದಾರರಾಗಿ ಸಮಾಜದಲ್ಲಿ ಅವರಿಗಾಗಲೆ ಹೆಸರಿತ್ತು. ಪತ್ನಿ ಅದೇ ಊರಿನ ರೋಟರಿ ಕ್ಲಬ್ ನಲ್ಲಿ ಮಹಿಳೆಯರ ಮುಖ್ಯಸ್ಥೆಯಾಗಿ ಆಗಾಗ ಸುದ್ದಿಯಲ್ಲಿ ಇರುತ್ತಲೇ ಇದ್ದರು.


"ನೂರಾರು ಜನರನ್ನು ಆ ವಿಚಿತ್ರ ಜೀವಿಗಳು ತಮ್ಮ ಸ್ಪೇಸ್ ಶಿಪ್ಪಿಗೆ ಕದ್ದೊಯ್ದು ದೇಹದ ಮೇಲೆಲ್ಲಾ ಪ್ರಯೋಗಗಳನ್ನು ಮಾಡಿದ್ದಾರೆ, ನಾವು ಹೇಳುವುದರಲ್ಲಿ ಮೊದಲಿರಬಹುದು ಅಷ್ಟೇ!" ಎಂದು ಅವಸರದ ದನಿಯಲ್ಲಿ ವಾದಿಸಿದರು ಗಗನ್.


ಇಬ್ಬರೂ ಸಾಕಷ್ಟು ಒತ್ತಡದಲ್ಲಿದ್ದುದರಿಂದ ಧೀರ್ಘ ಮತ್ತು ಸ್ಪಷ್ಟ ಹೇಳಿಕೆ ಬರಲಾರದೆಂದೆನಿಸಿ ನಾನು ಅವರನ್ನು ಸಮ್ಮೋಹನ ಸ್ಥಿತಿಗೆ ತರುವುದೇ ವಾಸಿ ಎಂದು ಭಾವಿಸಿ ಸಿದ್ಧನಾದೆ.


ನಾನು ಒಬ್ಬೊಬ್ಬರನ್ನಾಗಿ ಆರಾಮದಾಯಕ ಪರೀಕ್ಷಕ ಆಸನದಲ್ಲಿ ಮಲಗಿಸಿ ನನ್ನ ಪೆಂಡ್ಯುಲಮ್ ಅವರ ಕಂಗಳ ಮುಂದೆ ಎಡಕ್ಕೂ ಬಲಕ್ಕೂ ಆಡಿಸುತ್ತಾ ನನ್ನ ಕಂಗಳನ್ನೇ ನೋಡುವಂತೆ ಸೂಚನ ಕೊಡುತ್ತಾ ನನ್ನ ನಿಯಂತ್ರಣಕ್ಕೆ ಒಳಗಾಗಿಸಲು ಬೇಕಾದ ಪ್ತಯತ್ನವನ್ನೆಲ್ಲಾ ಮಾಡುತ್ತಲೇ ಹೋದೆ.


ಗಗನ್ ಏನೋ ಸುಲಭವಾಗಿ ಸಮ್ಮೋಹನ ಸ್ಥಿತಿಗೆ ತಲುಪಿದರೆಂದು ಭಾಸವಾಯಿತು (ಅದರ ವಿಧಾನವನ್ನು ಇಲ್ಲಿ ಬರೆಯುವುದು ನನ್ನ ವೃತ್ತಿಧರ್ಮವಲ್ಲ)... ಆದರೆ ನಾನು ಮೊದಲ ಹೆಜ್ಜೆ ಹಾಕಿದ್ದೆ, ಅವರು ಸುಪ್ತಾವಸ್ಥೆಯಲ್ಲಿ ನನ್ನ ಕೈಲಿದ್ದರು ಎಂದುಕೊಳ್ಳಿ,


ಆದರೆ ಶ್ರೀಮತಿ ಭಾನುಮತಿ, ಶೀ ಈಸ್ ಅ ಟಫ್ ಕುಕೀ!...ಅಂದರೆ ತೊಂದರೆ ಕೊಡಬಲ್ಲ ಗಿರಾಕಿ. ಆಕೆಯನ್ನು ಪ್ರತ್ಯೇಕ ಪರೀಕ್ಷೆಗೆ ಒಳಪಡಿಸೋಣ ಎಂದು ಹೊರಗಿನ ನಿರೀಕ್ಷಣಾ ಕೊಠಡಿಯಲ್ಲಿರಲು ಸೂಚಿಸಿದೆ.


ನನ್ನ ಪ್ರಶ್ನಾವಳಿ ನಿಧಾನವಾಗಿ ಆರಂಭಿಸಿದೆ


"ನನ್ನ ಪ್ರಶ್ನೆಗಳಿಗೆ ಹಾಗೆ ಸಮಯದಲ್ಲಿ ಹಿಂದೆ ಸರಿಯುತ್ತಾ ಹೇಳಿ... ನಿಮಗೆ ಅನ್ಯಗ್ರಹ ಜೀವಿಗಳು ಅಥವಾ ದೆವ್ವ , ಭೂತ, ಮಾಟ, ಮಂತ್ರ ಇಂತದರಲ್ಲಿ ನಂಬಿಕೆಯಿತ್ತೆ?" ಮಲಗಿದ್ದ ಗಗನ್‍ರಿಗೆ ಕೇಳಿದೆ.


"ಇಲ್ಲ, ಎಂದೂ ಇರಲಿಲ್ಲ, ಈ ಮುಂಚೆ!" ತೊದಲುತ್ತಾ ಉತ್ತರಿಸಿದರು. ವಶೀಕರಣದಲ್ಲಿರುವವರು ಅಂತಹಾ ದನಿಯಲ್ಲಿ ಮಾತಾಡುವುದು ಸಹಜ.


"ಯಾವ ಮುಂಚೆ?"


"2017ರ ಏಪ್ರಿಲ್ ಗೂ ಮುಂಚೆ"


"ನಿಮಗೆ ಮಾನಸಿಕ ಅಸ್ಥಿರತೆ ಅಥವಾ ಖಿನ್ನತೆಗೆ ಚಿಕಿತ್ಸೆ ಏನಾದರೂ ಆಗಿತ್ತೆ?"


"ಇಲ್ಲ..."


"ಕೆಟ್ಟ ವಿಚಿತ್ರ ಕನಸುಗಳನ್ನು ಕಂಡು ನಡುರಾತ್ರಿಯಲ್ಲಿ ಚೀರುತ್ತಾ ಎದ್ದಿದ್ದು?"


"ಛೆ ಛೆ...ಚಿಕ್ಕ ವಯಸ್ಸಿನಲ್ಲಿ ಡ್ರಾಕುಲಾ ಚಿತ್ರ ನೋಡಿದ್ದಾಗ ಒಂದೇ ರಾತ್ರಿ ಅಂತೆ...25 ವರ್ಷಗಳ ಹಿಂದೆ..."


"ಅದಿರಲಿ, 2017 ಏಪ್ರಿಲ್ ನಲ್ಲಿ ಏನಾಯಿತು?...ನಿಧಾನವಾಗಿ ಯೋಚಿಸುತ್ತಾ, ಯಾವ ಚಿಕ್ಕ ವಿವರವನ್ನೂ ಬಿಡದೇ ಆ ಪೂರ್ತಿ ಸೀನ್ ನನಗೆ ವರ್ಣಿಸಬೇಕು...ಪ್ರಯತ್ನಿಸಿ!" ನೋಟ್ ಬುಕ್ ಒಂದರಲ್ಲಿ ಗುರುತು ಹಾಕಿಕೊಳ್ಳಲು ಸಿದ್ಧನಾದೆ.


ಈ ಪ್ರಶ್ನೆಯನ್ನು ಎರಡು ಮೂರು ಬಾರಿ ತಾಳ್ಮೆಯಿಂದ ರಿಪೀಟ್ ಮಾಡಿದ ಮೇಲೆ ಅವರು ಸಂಕೋಚ ಬಿಟ್ಟು ಹೇಳಲಾರಂಭಿಸಿದರು


"ಅಂದು ಯಾವುದೋ ಸಾಧಾರಣ ಬೇಸಗೆಯ ರಾತ್ರಿ ಅನ್ನಿ..ಸೆಕೆ ವಿಪರೀತ ಇದ್ದುದರಿಂದ ಕಿಟಕಿ ತೆಗೆದು ಚಿಕ್ಕ ನೈಟ್ ಲ್ಯಾಂಪ್ ಮತ್ತು ಫ್ಯಾನ್ ಜೋರಾಗಿ ಹಾಕಿಕೊಂಡು ನಾವಿಬ್ಬರೂ ಬೆಡ್‌ರೂಮಿನಲ್ಲಿ ಮಲಗಿದ್ದೆವು. ಸುಮಾರು 11 ರಿಂದ 12 ಇರಬಹುದು...ನನಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ನೈಟ್ ಲೈಟ್ ಮತ್ತು ಫ್ಯಾನ್ ಆಫ್ ಆಗಿದ್ದವು.. ಪವರ್ ಕಟ್ ಎಂದುಕೊಳ್ಳುತ್ತಿರುವಂತೆಯೇ ಹೊರಗೆ ಬೀದಿ ದೀಪ, ಎದುರುಮನೆ ಪೋರ್ಟಿಕೋ ಲೈಟ್ ಆನ್ ಆಗಿಯೇ ಇದ್ದುದನ್ನು ಗಮನಿಸಿ ಅಚ್ಚರಿಯಾಯಿತು. ನನ್ನ ಕಿಟಕಿಯಿಂದ ಒಳಗೆ ಬಂತು ಒಂದು ಚಿಕ್ಕ ಹುಡುಗನಂತಾ ನೆರಳು..ಅಲ್ಲ ವ್ಯಕ್ತಿ..ಅಲ್ಲಾ ಬೊಂಬೆ!" ಅವರು ಉದ್ವಿಗ್ನರಾದರು, ಸ್ವಲ್ಪ ಸಮಯ ಕೊಟ್ಟು ಮತ್ತೆ ಪ್ರೋತ್ಸಾಹಿಸಿದೆ.


"ಕಿಟಕಿಯಿಂದ ಬಂತು ಅಂದರೇನು...ಕಿಟಕಿ ಕಂಬಿ ಮುರಿದು ಒಳಗೆ ನುಗ್ಗಿದನೆ?"


"ಅಲ್ಲಾ, ಅಲ್ಲಾ.." ಜೋರಾಗಿ ದನಿಯೇರಿ ವಾದಿಸಿದರು ಗಗನ್, ಸದ್ಯ ಅವರಿಗೆ ಎಚ್ಚರವಾಗದಿರಲಿ ಎಂದು ಪ್ರಾರ್ಥಿಸಿದೆ. "ಕಿಟಕಿಯ ಮೂಲಕ ನೆರಳಿನಂತೆ ಯಾವುದೇ ತೊಂದರೆಯಿಲ್ಲದೆ ಆ ಬೊಂಬೆಯಂತಾ ಹುಡುಗ ಒಳಬಂದು ನನ್ನನ್ನು ದೊಡ್ಡ ದೊಡ್ಡ ಕಂಗಳಿಂದ ನೋಡತೊಡಗಿದ.."


"ನಿಮಗೆ ತಿಳಿದವನೆ ಆ ಹುಡುಗ?" ನಾನು ಜಗಮೊಂಡ, ಹಾಗೆಲ್ಲ ಬಿಟ್ಟುಕೊಡುವವನಲ್ಲ.


"ಛೆ ಛೇ...ಅರ್ಥ ಮಾಡಿಕೊಳ್ಳಿ ಡಾಕ್ಟರ್..ಅವನು ಮನುಷ್ಯನಲ್ಲ...ನೋಡಲು ನಾಲ್ಕು ಅಡಿ ಎತ್ತರ. ಕುಳ್ಳ ಎನ್ನಿ. ಬೂದಿ ಬಣ್ಣದ ಚರ್ಮ. ಮೈ ತಲೆ ಎಲ್ಲಿಯೂ.ಕೂದಲೇ ಇಲ್ಲ... ಮೊಟ್ಟೆಯಾಕಾರದ ದೊಡ್ಡ ತಲೆ, ಆದರೆ ಚಿಕ್ಕ ಕತ್ತಿನ ಕೆಳಗಿನ ದೇಹ..ಅದೆಂತದೋ ಮಬ್ಬು ಬೆಳಕು ಬರುವ ಸೂಟ್ ಹಾಕಿದ್ದ. ಅವನು ನನ್ನತ್ತ ಕೈ ಚಾಚಿದ ಅದರಲ್ಲಿ ನಾಲ್ಕೇ ಉದ್ದನೇ ಬೆರಳಿತ್ತು, ಉಗುರಿಲ್ಲ...ಸಿಗರೇಟಿನ ತರಹ!, ನಮ್ಮ ಮನುಷ್ಯನಂತೆ ಎಲ್ಲಿಯೂ ಕಾಣಲಿಲ್ಲ ಅವನು..."


"ಆಗ ಪಕ್ಕದಲ್ಲಿ ನಿಮ್ಮ ಪತ್ನಿ ಎದ್ದಿರಲಿಲ್ಲವೆ?"


"ಇಲ್ಲ, ಅವಳು ಆಫ್ ಆಗಿದ್ದಳು..."


"ಹಾಗಂದರೇನು?" ಕಣ್ಣು ಕಿರಿದು ಮಾಡಿ ಕೇಳಿದೆ.


"ಅವಳು ಯಾವಾಗಲೂ ನಿದ್ದೆ ಮಾಡುವಾಗ ಗೊರಕೆ ಹೊಡೆಯುತ್ತಾಳೆ, ವಿಸಲ್ ನಂತೆ...ಈಗ ಶಬ್ದವಿಲ್ಲದೇ ಮಲಗಿದ್ದಾಳೆ..ಆಫ್ ಆದಂತೆ!"


"ನೀವು ಮಾತಾಡಿದಿರಾ?ಎದ್ದಿರಾ?"


"ಇಲ್ಲ, ಇಲ್ಲ... ನಾನು ಏಳಲು ಶತಪ್ರಯತ್ನ ಮಾಡಿದರೂ ಏಳಲಾಗುತ್ತಿಲ್ಲ, ಕೈ ಕಾಲು ಕಟ್ಟಿಲ್ಲ, ಆದರೆ ಏಳಲಾಗುತ್ತಿಲ್ಲ...ಆಗ ನಾನು ಗಾಬರಿಯಾಗಿ ಏನೂ ಎತ್ತ ಅನ್ನುವ ಮುನ್ನ ಆ ಜೀವಿ ಮಾತಾಡಿದ" ಸುಮ್ಮನೆ ಕೂರಿ. ನಾನು ನಿಮ್ಮನ್ನು ಯಾವ ತೊಂದರೆಯಿಲ್ಲದೇ ಕರೆದುಕೊಂಡು ಹೋಗುತ್ತೇನೆ...ಶಾಂತರಾಗಿ" ಎಂದು ಅವನ ಕೈ ತೋರಿದ..ಅವನ ಅಗಲವಾದ ಕಪ್ಪು ಕಂಗಳು ನಿರ್ಜೀವವಾದಂತೆ, ಭಾವನೆಗಳೇ ಇಲ್ಲದಂತೆ...ಪಿಳಿಪಿಳಿ ನನ್ನನ್ನು ಗಮನವಿಟ್ಟು ನೋಡುತ್ತಲಿವೆ...ಅವನ ಮಾತು ಸ್ಪಷ್ಟವಾಗಿ ಕೇಳುತ್ತಿದೆ..."


"ಅವನು ಯಾವ ಭಾಷೆಯಲ್ಲಿ ಮಾತಾಡಿದ, ಇಂಗ್ಲೀಷ್, ಕನ್ನಡ, ಕೊಂಕಣಿ?" ನನ್ನ ಅಡ್ಡಪ್ರಶ್ನೆ


"ಇಲ್ಲ ಇಲ್ಲ... ಮನದ ಭಾಷೆಯಲ್ಲಿ...ಅವನು ಬಾಯಿ ಬಿಡಲೇ ಇಲ್ಲ.. ಆದರೆ ಅವನು ಹೇಳಿದ್ದು ನನ್ನ ಮನಸ್ಸಿಗೆ ಅರ್ಥವಾಯಿತು !"


ಅನ್ಯಗ್ರಹ ಜೀವಿಗಳು ಮಾತ್ರವೇ ಹೀಗೆ ಟೆಲಿಪತಿ ಮಾಡಿ ಸಂವಹಿಸುತ್ತಾರೆ ಎಂದು ನಾನರಿತಿದ್ದೆ...


"ಆಮೇಲೆ..."


"...ಅವನ ಮಾತಿನಲ್ಲೇನೋ ಅಲೌಕಿಕ ಶಕ್ತಿಯಿರಬೇಕು. ಕೇಳಿ ನನ್ನ ಮನಸ್ಸು ಒತ್ತಡವಿಲ್ಲದೇ ಶಾಂತವಾಯಿತು.. ಅವನು ನನ್ನ ಕೈ ಹಿಡಿದಿಳೆದ..ಅಬ್ಬಾ, ಅವನ ಸ್ಪರ್ಷ! ..ಹತ್ತಿ, ಪ್ಲಾಸ್ಟಿಕ್, ರಬ್ಬರ್, ಸ್ಟೀಲ್ ಯಾವುದೂ ಅಲ್ಲ, ಅಥವಾ ಎಲ್ಲಾ ಸೇರಿದಂತಿವ ಕೈ ಎಂದು ಭಾಸವಾಯಿತು, ನನ್ನ ಮೈ ಗುಗ್ಗುರು ಕಟ್ಟಿತು...ಮರು ಕ್ಷಣವೇ ನನ್ನನ್ನು ಅವನು ಹಾರಿಸಿಕೊಂಡು ಹೊರಗೆ ಹೋದ..."


" ಹೇಗೆ?"


" ಹೇಗೋ ನನಗ್ಗೊತ್ತಿಲ್ಲ, ಅವನು ಕೈ ಹಿಡಿದೆಳದ, ನಾನು ಕಿಟಕಿಯ ಹೊರಗೆ ಬಂದಿದ್ದೆ, ಅವನ ಜತೆ ಹೋಗುತಿದ್ದೆ...ಹಾರಿಸಿಕೊಂಡು ಹೋದ!" ಮತ್ತೆ ಅದೇ ಪುನರಾವರ್ತನೆ.


"ನೀವೇನು ಸಿನೆಮಾ ನಾಯಕಿಯೆ, ಹಾರಿಸಿಕೊಂಡು ಹೋಗಲು?...ಸರಿ, ಯಾವುದರಲ್ಲಿ...ಕಾರಿನಲ್ಲೋ, ಬೈಕಿನಲ್ಲೋ?" ನಾನು ಕೆಲವು ಪೆದ್ದು ಪ್ರಶ್ನೆಗಳನ್ನು ಬೇಕಂತಲೇ ಇಟ್ಟುಕೊಂಡಿದ್ದೇನೆ.


ಅವರು ಹುಬ್ಬುಗಂಟಿಕ್ಕಿ ಸ್ವಲ್ಪ ಚಿಂತಿತರಾದರು, ನನಗೆ ಏನೂ ಗೊತ್ತಿಲ್ಲವಲ್ಲ ಎಂಬಂತೆ. ಅದೇ ನನಗೆ ಲಾಭದಾಯಕ.


"ಅಲ್ಲಾ ಡಾಕ್ಟರ್... ನಾವು ಹಾರುತ್ತಲೇ ಹೋದೆವು. ಮೇಲ ಮೇಲಕ್ಕೆ...ನಮ್ಮನೆ ರಸ್ತೆಯಲ್ಲೇ...ಅಕ್ಕ ಪಕ್ಕದ ಮನೆಗಳ ನಡುವಿನಿಂದ ಆಗಸದತ್ತ ಅವನು ಕೈ ಹಿಡಿದು ಎಳೆಯುತ್ತಿದ್ದ ...ಮೇಲಕ್ಕೆ..ಆದರೆ ಹೆಚ್ಚು ಶಕ್ತಿ ಬೇಕಾಗುತ್ತಿಲ್ಲ ಈಗ"


"ಹೇಗೆ ಗಗನ್? ನಿಮಗೇನು ರೆಕ್ಕೆಗಳು ಬೆಳೆದಿದ್ದವೆ ಹಾರಲು?" ಇದೂ ಜಾಣ ಪ್ರಶ್ನೆಯೇನಲ್ಲ, ಆದರೆ ಗಗನ್ ಮತ್ತೆ ಸ್ವಲ್ಪ ಡಿಸ್ಟರ್ಬ್ ಆದರು.


"ಅರೇ ರಾಮಾ..ನೀವೇಕೆ ಇಷ್ಟು ಪೆದ್ದು? ನನ್ನನ್ನು ನಂಬುವುದಿಲ್ಲ ಅಲ್ಲವೇ, ಇನ್ನೂ ಹೇಳುತ್ತೇನೆ ತಾಳಿ!"ಎಂದು ನನ್ನನ್ನು ನಂಬಿಸುವುದೇ ಸವಾಲೆಂಬಂತೆ ನುಡಿದರು ಗಗನ್.


"ಕರೆಕ್ಟ್, ನಾನು ದಡ್ಡ ಎಂದೇ ತಿಳಿದು ನಿಧಾನವಾಗಿ ನೆನೆಪಿಸಿಕೊಂಡು ಹೇಳಿ" ಎಂದು ಶಾಂತಸ್ವರದಲ್ಲಿ ಪ್ರೋತ್ಸಾಹಿಸಿದೆ.


"...ನಾನು ಹೊರಬಂದಂತೆ ಒಮ್ಮೆ ಹಿಂತಿರುಗಿ ನೋಡಿದೆ...ಮತ್ತೆ ರೂಮಿನಲ್ಲಿ ನೈಟ್ ಲ್ಯಾಂಪ್ , ಫ್ಯಾನ್ ಎಲ್ಲಾ ಉರಿಯಹತ್ತಿದೆ.. ಇವನೇನೂ ನನಗೆ ಕಾಣುವಂತೇ ಮಾಡಿಯೇ ಇರಲಿಲ್ಲ...ಆದರೂ?"


"ಮತ್ತೆ ನಿಮ್ಮ ಶ್ರೀಮತಿ?"


"ಅವಳು ಅಲ್ಲೇ ಇರಬೇಕು... ನನ್ನ ಜತೆಯಲ್ಲಂತೂ ಇಲ್ಲ!"


"..."


" ಹಾಗೇ ನಾವು ಮೇಲಕ್ಕೆ ತೇಲುತ್ತಾ ವೇಗವಾಗಿ ಹಾರುತ್ತಿದ್ದೇವೆ...ತುಂಬಾ ವೇಗ ಅಲ್ಲ.. ಕೆಳಗೆ ರಸ್ತೆಯಲ್ಲಿ ಸ್ವಲ್ಪ ಟ್ರಾಫಿಕ್ ಇದೆ..ಅವರ್ಯಾರಿಗೂ ನಾವು ಕಾಣುತ್ತಿಲ್ಲ, ಐ ಆಮ್ ಶೂರ್!"


"ಅವನೇನಂದ?"


"ನಾನು ಕೇಳಿದರೆ ’ ನಿನ್ನ ಜತೆ ಸ್ವಲ್ಪ ಕೆಲಸವಿದೆ..ಸ್ವಲ್ಪ ಸಮಯದಲ್ಲಿ ವಾಪಸ್ ಬಿಡುತ್ತೇವೆ.. ಮೇಲೆ ನೋಡು, ನಾವು ಅಲ್ಲಿಗೆ ಹೋಗುತ್ತಿದ್ದೇವೆ’ ಎಂದ ಲೋಕಲ್ ಗೈಡಿನಂತೆ"


"ನೀವು ಯಾವ ಭಾಷೆಯಲ್ಲಿ ಕೇಳಿದಿರಿ?"


"ನಾನು ಮಾತಾಡುವ ಮೊದಲೆ ನನ್ನ ಆಲೋಚನೆಗಳನ್ನು ಹಿಡಿದು ಸರಕ್ಕನೆ ಉತ್ತರ ನೀಡಬಲ್ಲವನಾಗಿದ್ದ, ಅದೇ ನೇರವಾಗಿ ಮನಸ್ಸಿಗೆ!"


"ಅವನು ಎಲ್ಲಿ ತೋರಿಸಿದ?"


"ದೂರಗಗನದಲ್ಲಿ ಬಹಳ ಮೇಲೆ ಬೆಳಕಿನ ಚೆಂಡಿನಂತಹಾ ವಸ್ತು ತೇಲುತ್ತಿದೆ..ಅಲ್ಲ, ನಿಂತಿದೆ...ಸಾರಿ, ಮಿನುಗುತ್ತಿದೆ...ಓಹ್, ಎಲ್ಲವೂ!" ಎಂದು ವಿವರಿಸಲಾಗದೇ ಬೇಸರಿಸಿಕೊಂಡರು ಗಗನ್


"ಏನು ಕಂಡಿತು ಹೇಳಿ?"


ಈಗ ಹಳದಿ ಬಣ್ಣದ ಬೆಳಕಿನ ದೀಪಗಳು ಎರದೂ ಬದಿಯಲ್ಲಿ ಅಲ್ಲಿಗೆ ದಾರಿ ತೋರುತ್ತಿವೆ. ನಾವು ಆ ವಾಹನದ ಹೃದ್ಯಭಾಗಕ್ಕೆ ಕೆಳಗಿನಿಂದ ಹೋಗುತ್ತಿದ್ದೇವೆ... ಅದರ ಆಕಾರ, ಆ ಬೆಳಕು ಕಂಡು ನನಗೆ ಅರಿವಾಯಿತು..ಇದೊಂದು ಸ್ಪೇಸ್ ಶಿಪ್...ಇವರು ಇಲ್ಲಿಯವರಲ್ಲ!...ನಾನು ಭಯಪಟ್ಟು ಕೈ ಬಿಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿ ಕಿರುಚತೊಡಗಿದೆ.. "ಬಿಡಯ್ಯಾ ನನ್ನ, ಏಯ್ ಭೂತಾ, ಕಪೀ!" ಎಂದೆಲ್ಲಾ ಬೈದೆ. ಅವನು ನನ್ನತ್ತ ಕರುಣೆಯೆಂಬಂತೆ ನೋಡಿದ.: ’ಹೆಚ್ಚು ತೊಂದರೆ ಕೊಡಬೇಡ, ನಾನು ಬಲಪ್ರಯೋಗ ಮಾಡಿ ಕರೆದೊಯ್ದರೆ ನಿನಗೇ ತುಂಬಾ ಸುಸ್ತಾಗುವುದು. ಅದು ನಮಗೆ ಉಪಯೋಗವಿರಲ್ಲ’ ಎಂದು ತಿಳಿಹೇಳಿದ. ಅವನು ನನ್ನತ್ತ ಕಂಗಳರಳಿಸಿ ನೋಡಿದರೆ ಸಾಕು, ನನ್ನ ಮನಸ್ಸು ತಟಸ್ಥವಾಗಿ ಶಾಂತವಾಗುತ್ತಿತ್ತು. ಈಗ ಹಲವು ಬಾರಿ ಹೋಗಿ ಬಂದ ಮೇಲೆ ತಿಳಿಯುತ್ತಿದೆ, ಅವರು ತುಂಬಾ ಮುಂದುವರೆದ ಬುದ್ದಿಶಕ್ತಿಯುಳ್ಳವರು. ನಮ್ಮ ಮೈಂಡ್ ಕಂಟ್ರೋಲ್ ( ಮನೋ ನಿಯಂತ್ರಣ) ಮಾಡುತ್ತಾರೆ...ಅಲ್ಲದೇ, ಅವನ ಕೈಯಿಂದ ನನ್ನ ಕೈಗೆ ವಿದ್ಯುತ್ ತರಹ ಯಾವುದೋ ಶಕ್ತಿಯ ಸಂಪರ್ಕವಿದೆ.ಅದೇ ನಾವು ಹಾರುತ್ತಿರುವುದಕ್ಕೆ ಇಂಧನ ಎಂದರಿವಾಗುತ್ತಿದೆ...ನನಗೆ ತೀರಾ ಆತಂಕವಾಗುತ್ತಿದೆ..ಆದರೆ ಆ ಗಗನ ನೌಕೆ ಎನ್ನಬಹುದಾದರ ಹೊಟ್ಟೆ ತಾನೇ ತೆರೆಯಿತು. ನಾವು ಪುರ್ರನೆ ಒಳಗೆ ಹಾರಿಹೋದೆವು, ಅದು ಮುಚ್ಚಿಕೊಡಿತು. "


ನಾನು ನೋಟ್ ಮಾಡಿಕೊಳ್ಳುತ್ತಿದ್ದೇನೆ.




"...ನಾವು ಆ ವಾಹನದ ನೆಲ ಮುಟ್ಟಿದ್ದೇವೆ..ಆದರೆ ಈಗ ಅವನು ನನ್ನ ಕೈ ಹಿಡಿದಿಲ್ಲ...ಸುತ್ತಲೂ ಅರಿಶಿನ ಬಣ್ಣದ ಬೆಳಕು ನಮ್ಮನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಹೋಗಲು ಪ್ರೇರೇಪಿಸುತ್ತಿದೆ...ನಾನು ಅವನ ಜತೆ ಸುಮ್ಮನೆ ಹೋಗುತ್ತಿದ್ದೇನೆ..."


ಇದೆಲ್ಲಾ ಗಗನ್ ವರ್ತಮಾನದಲ್ಲಿ ಮರುಕಳಿಸಿದ ನೆನಪಿನಲ್ಲಿ ಹೇಳುತ್ತಿದ್ದಾರೆ.


" ಅಲ್ಲಿ ದೊಡ್ದ ದೀಪಗಳ ಡೋಮ್ ತರಹದ ವಿಶಾಲವಾದ ಹಾಲ್ ಇದೆ ..ಸುತ್ತಲೂ ಎತ್ತೆತ್ತಲೋ ಯಾಂತ್ರಿಕವಾದ ಬೆಳಕು ಚೆಲ್ಲುವ ಪರದೆಗಳಿವೆ. ಅದರ ಮೇಲೇನೋ ಚಿತ್ತಾರ ಮೂಡಿ ಮರೆಯಾಗುತ್ತಿದೆ ಅದರ ಮೇಲೆ ಕೈಆಡಿಸಿ ಅತ್ತಿತ್ತ ತಳ್ಳುತ್ತಿದ್ದಾರೆ ...ಕೆಲವರು!. ಅಲ್ಲಿ ಈಗ ಅವನ ತರಹ ಬೇರೆಯವರೂ ಇದ್ದಾರೆ. ಮೈ ಗಾಡ್..." ಗಗನ್ ಸಾವರಿಸಿಕೊಂಡು ಹೇಳಿದರು


" ಅವರೆಲ್ಲಾ ಒಂದೇ ತರಹ ಇದ್ದಾರೆ, ವ್ಯತ್ಯಾಸವೇ ಇಲ್ಲ, ಬೊಂಬೆಗಳ ತರಹ...!"


"ಎಷ್ಟು ಜನ ..ಏನು ಮಾಡುತ್ತಿದ್ದಾರೆ?"


"ಸುಮಾರು 50 ಇರಬಹುದು...ಏನೇನೋ ಕೆಲಸ ಮಾಡುತ್ತಾ ಕೈಯಲ್ಲಿ ಏನೇನೋ ಹಿಡಿದು ಸರಕ್ಕನೆ ಚಲಿಸುತ್ತಾರೆ, ಅಲ್ಲೇ ಮತ್ತೊಂದು ಸ್ಥಳ ತಲಪುತ್ತಾರೆ, ಕೆಲವೊಮ್ಮೆ ತೇಲುತ್ತಾರೆ, ಅಥವಾ ಹಾರುತ್ತಾರೆ.. ಅಂದರೆ ತಂತಮ್ಮ ಕೆಲಸ ಮಾಡುತ್ತಿದ್ದಾರೆ...ಯಾವುದು ಈ ಬೊಂಬೆಗಳ ಫ್ಯಾಕ್ಟರಿ ?"


"ನೀವೇ ಹೇಳಬೇಕು, ಗಗನ್...ಒಳಗೆ ಹವಾ ಹೇಗಿದೆ? ಕಿಟಕಿ ಬಾಗಿಲು ಇಲ್ಲವೆ?"


"ಬಾಗಿಲು ಹೊರಕ್ಕೆ ಇಲ್ಲ, ಗಾಜಿನಂತಾ ಕಿಟಕಿಗಳಿವೆ...ಹೊರಗೆ ಕತ್ತಲು ಮತ್ತು ತಾರೆಗಳು ಕಾಣುತ್ತವೆ...ಸೆಕೆಯೂ ಇಲ್ಲ, ಚಳಿಯೂ ಇಲ್ಲ...ನನಗೆ ಏನೂ ಗೊತ್ತಾಗುತ್ತಿಲ್ಲ. ಅಲ್ಲಿ ಏಸಿ ತರಹ ಏನೂ ಇಲ್ಲ"


...ಅಲ್ಲಿಂದ ನನ್ನನ್ನು ಇನ್ನೊಂದು ಕೋಣೆಗೆ ಕರೆದೊಯ್ದರು ಅಲ್ಲಿಗೆ ಬಾಗಿಲಿನ ಫ್ರೇಂ ಇದೆ. ಆದರೆ ಒಳಗೆ ಹೋಗಲು ಸಾಧ್ಯವಿಲ್ಲ, ಒಂದು ಅದೃಶ್ಯ ಬಾಗಿಲಿದೆ. ಅವರು ಹತ್ತಿರ ಹೋದರೆ ನಾನೂ ಹೋಗಬಹುದು ಇಲ್ಲದಿದ್ದರೆ ಇಲ್ಲ!"


"ಅಲ್ಲಿ ಏನಿದೆ?"


"ಅಯ್ಯೋ ಆಪರೇಷನ್ ಥಿಯೇಟರ್ ತರಹ ಇದೆ" ಗಗನ್ ಆ ನೆನಪಿನಿಂದ ಮತ್ತೆ ಆತಂಕಗೊಂಡರು. " ಅಲ್ಲಿ ಆಗಲೇ ಮೊದಲನೆ ಬಾರಿ ನೋಡಿದ್ದು ಆ ಎತ್ತರದ ಜೀವಿಯನ್ನು!"


"ಯಾರವನು?" ನನ್ನ ಕಿವಿ ನಿಮಿರಿತು.


"ಅವನು ಎಲ್ಲರಿಗೂ ‘ಅಲ್ಲಿಗೆ ಹೋಗು, ಅದು ಮಾಡು, ಇದು ಮಾಡು’ ಎಂದೆಲ್ಲಾ ಸೂಚಿಸುತ್ತಿದ್ದಾನೆ. ಈ ಕುಳ್ಳರೆಲ್ಲಾ ವಿಧೇಯರಂತೆ ಅವನ ಮಾತು ಕೇಳುತ್ತಿದ್ದಾರೆ. ಅಲ್ಲಿ ಒಬ್ಬ ನರ್ಸ್ ತರಹ ಎತ್ತರದ ಹೆಣ್ಣೂ ಇದ್ದಾಳೆ..ಅಯ್ಯೋ ಅವನು ಸರ್ಜನ್ ಇರಬೇಕು!..."ಗಗನ್ ಏನೋ ಮಲಗಿದಲ್ಲೇ ಅಸ್ಪಷ್ಟವಾಗಿ ಮಿಸುಕಾಡುತ್ತಾ ಗೊಣಗಿದರು..


ನಾನು ಹತ್ತಿರ ಬಗ್ಗಿ ಕೇಳಿದೆ." ಯಾರವರು? ಹೇಗಿದ್ದಾರೆ?


"... ಸುಮಾರು ಆರು ಅಡಿ ಎತ್ತರ...ಅವನ ತಲೆ ಮಿಕ್ಕವರಷ್ಟು ದೊಡ್ದದಾಗಿಲ್ಲ, ಗುಂಡಗಿದೆ..ಸ್ವಲ್ಪ ಮೂಗು ಕಿವಿ ಬಾಯಿ ಕಾಣುವಂತಿದೆ..ಆದರೆ ಕಂಗಳು ದೊಡ್ಡದಾಗಿವೆ...ಇವರಿಗೆಲ್ಲ ರೆಪ್ಪೆಯೇ ಇಲ್ಲ. ಅವನಿಗೆ ಚಿಕ್ಕ ರೆಪ್ಪೆಯಿದೆ..ಎಲ್ಲಾ ಹಳದಿ ಬಣ್ಣ...ಮೈ ಬಣ್ಣ, ತಲೆಗೂದಲು ಇವರಿಬ್ಬರದು!.. ಮತ್ತೆ ಅವನ ಪಕ್ಕ ಆ ಹೆಣ್ಣೂ!..ಅವಳು ನೋಡಲು ಮಾತ್ರ ಹೆಣ್ಣಂತಿದ್ದಾಳೆ..ತುಂಬಿದ ಮೈಕಟ್ಟು, ಎದೆ ಮತ್ತು ನಿತಂಬ ನಮ್ಮ ಹೆಂಗಸರಂತೆಯೇ..." ಗಗನ್ ಗೇ ತನ್ನ ವರ್ಣನೆಯಿಂದ ನಗು ಬಂದಂತಿದೆ..".ಆದರೆ ಇವರಿಬ್ಬರೂ ಸಹಾ ಮನುಷ್ಯರಲ್ಲ... ಬೇರೇ ಯಾವುದೋ ಜಾತಿಯ ಜೀವಿಗಳು"


"ಯಾಕೆ ಹಳದಿ ಹಳದಿ ಎನ್ನುವಿರಿ?" ನನಗಾದ ಸೋಜಿಗ.

"ಹೌದು... ಪೀತವರ್ಣದ ಪಿಶಾಚಿ ಎಂದು ಕನ್ನಡದಲ್ಲಿ ಹಳೇ ಕಾದಂಬರಿ ಓದಿದ್ದೆ... ಹಾಗೇ ಇದ್ದಾರೆ ಇವರು!" ಜಿಂದೆ ನಂಜುಂಡಸ್ವಾಮಿಯ ಪತ್ತೇದಾರಿ ಕತೆಗಳನ್ನೂ ಬೇರೆ ಓದಿದ್ದಾರೆ ಗಗನ್, ನಾನು ಮುಗುಳ್ನಕ್ಕೆ.


"ಅವರು ನನ್ನನ್ನು ಆ ಥಿಯೇಟರಿನ ಮಧ್ಯೆ ದೊಡ್ಡ ಫ಼್ಲಡ್ ಲೈಟ್ ಇದ್ದ ಟೇಬಲ್ಲಿಗೆ ಸೆಳೆದೊಯ್ದರು.. ನಾನು ಬಹಳ ತಡೆಯುತ್ತಿದ್ದೇನೆ, ಸೆಣೆಸುತ್ತಿದ್ದೇನೆ...ಭಯ ಮತ್ತು ಕೋಪದಿಂದ ಹೋಗಲು ಒಪ್ಪುತ್ತಿಲ್ಲ... ಅವರು ನನಗೆ ಏನೋ ಮಾಡಲಿದ್ದಾರೆ ಎಂದು ಗೊತ್ತಾಗುತ್ತಿದೆ"


"ಭಯ ಪಡಬೇಡಿ. ಹೇಳಿ ಏನು ನಡೆಯಿತು... ನಡೆಯುತ್ತಿದೆ?" ಎಂದೆ ನಾನು.


ಇಬ್ಬರು ಕುಳ್ಳರು ನನ್ನನ್ನು ಟೇಬಲಿನತ್ತ ಎಳೆಯುತ್ತಿದ್ದಾರೆ. ನನ್ನ ಪ್ರತಿಭಟನೆ ಕಂಡು ಆ ಸರ್ಜನ್ ...ಎತ್ತರದವ ...ಅವನನ್ನು ಲಂಬೂ ಎಂದು ಕರೆಯಲೆ?"


"ಆಗಲಿ ಹೇಳಿ...ನಿಮ್ಮನ್ನು ಕರೆದುಕೊಂಡು ಬಂದವ ಗಿಡ್ಡ ಅನ್ನಿ"


ಒಂದು ನಿಮಿಷ ನೀರವ ಮೌನ. ನಾನು ಗಗನ್ ರನ್ನು ಅವಸರಿಸಲಿಲ್ಲ.


"...ಲಂಬೂ ನನ್ನ ಬಳಿಗೆ ಬಂದ. ಅವನ ಕಂಗಳಲ್ಲಿ ಯಾವುದೋ ಅತೀಂದ್ರಿಯ ಕಾಂತಿಯಿದೆ. ಅದನ್ನೇ ನೋಡುವಂತೆ ನನ್ನನ್ನು ಬಲವಂತ ಮಾಡುತ್ತಿದ್ದಾನೆ ದೃಷ್ಟಿಯ ಮೂಲಕವೆ..." ಗಗನ್ ಉಗುಳು ನುಂಗಿದರು.


"ಅವರು ನನ್ನ ಬಟ್ಟೆಗಳನ್ನು ಬಿಚ್ಚಿ ನಗ್ನಗೊಳಿಸಿದ್ದಾರೆ. ನನ್ನ ಬಟ್ಟೆಗಳನ್ನು ಗಾಳಿಯಲ್ಲಿ ಎದುರುಗೋಡೆಯತ್ತ ತೇಲಿಸಿ ಎಸೆದು ಅವು ಅಲ್ಲೇ ತಗುಲಿ ಹಾಕಿಕೊಂಡಿದೆ... ಮಾಯಾಜಾಲದಂತಿದೆ. ನಾನು ಅಶಕ್ತನಾಗಿ ಪ್ರತಿಭಟನೆ ಮಾಡುತ್ತಲೇ ಇದ್ದೇನೆ... ನಾನು ಈಗ ಟೇಬಲ್ ಮೇಲೆ ಮಲಗಿದ್ದೇನೆ.. ಮೇಲೆ ಹೊಳೆಯುವ ಲೈಟ್ ಇದೆ...ಲಂಬೂ ನನ್ನ ಬಳಿಗೆ ಬಂದು ಬಗ್ಗಿದ. ಅವನು ಗಾಳಿಯಲ್ಲೆ ಕೈಯಾಡಿಸಿದ. ಅದು ಯಾವ ಮಾಯವೋ , ಎಲ್ಲಿಂದಲೋ ಯಾವುದೋ ಔಷಧಿಯ ಶವರ್ ಶುರುವಾಯಿತು. ಬಹಳ ತಣ್ಣಗೆ ಮೈಯನ್ನು ತೋಯಿಸಿತು. ನಾನು ನಡುಗಿದೆ...ಹೀಗೆ ಮುಂದಿನ ಪ್ರತಿಸಲವೂ ನನ್ನನ್ನು ಶುಚಿ ಮಾಡಿದ್ದಾರೆ, ಸ್ಯಾನಿಟೈಸ್ ಮಾಡಿರಬೇಕು...ನಾನು ಮತ್ತೆ ಏಳಲು ಯತ್ನಿಸಿದೆ. ಲಂಬೂ ನನ್ನ ಹಣೆಯ ಮೇಲೆ ತನ್ನ ಹಸ್ತವನ್ನಿಟ್ಟ. ಅವನಿಗೆ ಐದು ಬೆರಳುಗಳಿವೆ , ನಮ್ಮ ತರಹ...ಆ ಹಸ್ತದಲ್ಲಿ ಯಾವುದೋ ಅಗೋಚರ ಶಕ್ತಿಯಿದೆ ಅನಿಸುತ್ತಿದೆ, ಅದು ನನ್ನಲ್ಲಿ ಪ್ರವಹಿಸಿ ನಾನು ಮತ್ತೆ ಗೊಂದಲಗಳಿಲ್ಲದೇ ಶಾಂತನಾದೆ. ಅವನು ಏನೋ ಬಟನ್ ಪ್ರೆಸ್ ಮಾಡಿದನೇನೋ , ನನ್ನ ಮೈ ಸುತ್ತಲೂ ಸೆಮಿ-ಪಾರದರ್ಶಕ ಗೌನು ಒಂದು ತನ್ನಂತೆ ತಾನೇ ಸುತ್ತಿಕೊಂಡಿತು. ಒಂದು ವಿಚಿತ್ರವೆಂದರೆ ಅವನು ಅದರ ಮೂಲಕ ತನ್ನ ಕೈ ತೂರಿಸಬಲ್ಲ. ಹಾಗೆ ನನ್ನ ಕೈ ಬೆರಳು ಹಿಡಿದ. ಅವನ ಉಗುರಿನಿಂದ ಯಾವುದೋ ಸೂಜಿ ಹೊರಬಂದು ನನ್ನನ್ನು ಚುಚ್ಚಿದಂತಾಗಿ ಸ್ವಲ್ಪ ನರಳಿದೆ... ನನ್ನ ರಕ್ತ ಎಲ್ಲಿ ಶೇಖರವಾಯಿತು ನನಗೆ ಗೊತ್ತಾಗುತ್ತಿಲ್ಲ! ಅವನು ಏನೂ ಆಗುವುದಿಲ್ಲ, ಸುಮ್ಮನಿರು ಎಂದು ಧೈರ್ಯ ಹೇಳಿದ"


ಮತ್ತೆ ಟೆಲಿಪತಿಯಲ್ಲಿ ಮಾತಾಡಿರಬಹುದು?


"ಮುಂದೆ ಅವನು ನನ್ನ ಕೈ ಉಗುರು ಮತ್ತು ತಲೆಗೂದಲಿನ ಸ್ಯಾಂಪಲ್ ತೆಗೆದುಕೊಂಡ. ಅವನಿಗೆ ಹಳದಿ ಬೆಳಕಿನ ಕಿರಣದಂತಾ ಕೂದಲಿದೆ..ಅದು ವಿದೇಶಿಯರ ಬ್ಲಾಂಡ್ ಸಹಾ ಅಲ್ಲ ನನ್ನ ಕಣ್ಣ ಮುಂದೆಯೇ ಅದು ಮಾತ್ರ ಕಾಣಿಸುತ್ತಿದೆ. ಅವನು ನನ್ನ ದೈಹಿಕ ಸ್ಯಾಂಪಲ್ಸ್ ಹೇಗೆ ಕತ್ತರಿಸಿ ಕಲೆಕ್ಟ್ ಮಾಡುತ್ತಿದ್ದಾನೆ ತಿಳಿಯುತ್ತಿಲ್ಲ, ಅವನ ಕೈಗಳು ತುಂಬಾ ವೇಗವಾಗಿ ಓಡುತ್ತವೆ. ರೋಬೋ ಯಂತ್ರಕ್ಕಿಂತಾ ವೇಗವಾಗಿ!" ಗಗನ್ ನಿಲ್ಲಿಸಿದರು, ಸುಸ್ತಾಗಿರಬೇಕು. ಇಂತಾ ಭಯಾನಕ ಘಟನೆಯನ್ನು ಮರುನೆನಪು ಮಾಡಿಕೊಳ್ಳುವಾಗ.


"ಆಮೇಲೆ?


" ಆಮೇಲೆ ನನ್ನ ಬಾಯಿ ತೆರೆಸಿ ನನ್ನ ಜೊಲ್ಲಿನ ಸ್ಯಾಂಪಲ್ ತೆಗೆದುಕೊಂಡ, ಅದಕ್ಕೆ ತಕ್ಕ ಪಿಪೆಟ್ ಮಾದರಿಯ ಸಾಧನದಲ್ಲಿ."


ರಕ್ತ, ಉಗುರು, ಕೂದಲು ಮತ್ತು ಜೊಲ್ಲು... ಜೈವಿಕ ಸ್ಯಾಂಪಲ್ಲುಗಳನ್ನು ಹೀಗೆ ತೆಗೆಯುವುದು ಕ್ಲೋನಿಂಗ್, ಹೈಬ್ರಿಡ್ ತಳಿಗಾಗಿ ಮಾತ್ರ. ನನಗೆ ಕುತೂಹಲ ಕೆರಳಿದೆ


"ಮುಂದೇನು?"


"ನಿನ್ನ ಮೂಗಿನಲ್ಲಿ ಒಂದು ಚಿಪ್ ಅಡಗಿಸಿಡುತ್ತೇವೆ. ಅದು ನಮಗೆ ನಮ್ಮ ಗ್ರಹದಿಂದ ನಿನ್ನ ಇರುವಿಕೆಯ ಸೂಚಿ ಮಾತ್ರ, ಸ್ವಲ್ಪ ನೋವಾಗುತ್ತದೆ , ನಾನು ಕಡಿಮೆ ಮಾಡುತ್ತೇನೆ" ಎಂದು ತಿಳಿಸಿದ ಸರ್ಜನ್ ಲಂಬೂ.


ನಾನು ನಿಜಕ್ಕೂ ಗಾಬರಿಯಾದೆ..."


"ಮೊದಲ ಬಾರಿಗೆ ನನ್ನ ಮಿದುಳಿನಲಿದ್ದ ಜೇಡರಬಲೆ ಸರಿದು ಪ್ರಶ್ನೆಯೊಂದು ಮೂಡಿತು."ಹಾಗಾದರೆ ನೀವ್ಯಾರು? ಏಕೆ ಹೀಗೆಲ್ಲಾ..." ನಾನು ಪ್ರಶ್ನೆ ಮುಗಿಸಲೇ ಇಲ್ಲ, ಉತ್ತರ ಕೇಳಿಬಂತು..."


"..."ನಾವು ಜ಼ೀಟಾ ರೆಟಿಕ್ಯುಲಿ ಎಂಬ ಎರಡು ಸೂರ್ಯಗಳಿರುವ ಬಹಳ ದೂರದ ಸೌರಮಂಡಲದವರು. ನೀನು ಸುಮ್ಮನೆ ಸಹಕರಿಸಿದರೆ ಆಮೇಲೆ ಎಲ್ಲಾ ಹೇಳುತ್ತೇನೆ" ಎಂದ ಅವನು ಸಾಂತ್ವನ ಮಾಡುವ ತೆರದಲ್ಲಿ. ನನ್ನ ಹಣೆಯ ಮೇಲೆ ತನ್ನ ಕೈಯನ್ನಿಟ್ಟ...ಮತ್ತೆ ನನ್ನ ಮನಸ್ಸು ಖಾಲಿಯಾಗಿ ಸ್ತಬ್ಧನಾದೆ...ಅವನಿಗೆ ಆಕೆ ಸಹಾ ಸರಸರನೆ ಮಾತಿಲ್ಲದೇ ಸಹಾಯ ಮಾಡುತ್ತಿದ್ದಳು.


"...ಅವನು ಫ಼ೋರ್ಸೆಪ್ಸ್ ತರಹ ಹಿಡಿದು ನನ್ನ ಮೂಗಿನ ಹೊಳ್ಳೆ ಅರಳಿಸಿ ನನ್ನ ಹಣೆಯವರೆಗೂ ತೂರಿಸಿ ಏನೋ ಹುದುಗಿಸಿಟ್ಟ. ನಾನು ಚಟಪಟನೆ ಹಿಂಸೆಯಿಂದ ಒದ್ದಾಡಿದೆ...."


ಗಗನರ ಮೆಡಿಕಲ್ ಪರೀಕ್ಷೆ ದಾಖಲೆಗಳಲ್ಲಿ ಮೂಗಿನ ಮಧ್ಯಭಾಗದಲ್ಲಿ ಹಳೇ ಗಾಯವಾಗಿ ಮಾಗುತ್ತಿರುವುದಂತೂ ಇತ್ತು.


"ಅದೆಲ್ಲಿ ಹೋಯಿತು ಈಗ?"


"...ಅದನ್ನು ಮೊನ್ನೆ ಮೂರನೆ ಸಲ ತೆಗೆದುಬಿಟ್ಟರು...ನಾನು ಯಾಕೆ ಎಂದು ಕೇಳಿದೆ ಸಹಾ.. ಅವನು ಶಾಂತವಾಗಿ ನಿನ್ನ ಪರೀಕ್ಷೆಯೆಲ್ಲಾ ಮುಗಿಯಿತು, ನೀನೆಲ್ಲಿ ಹೋಗುತ್ತೀಯೆ, ಎಲ್ಲಿರುತೀಯೆ ಎಂಬುದು ನಮಗೆ ಇನ್ನು ಬೇಕಾಗಿಲ್ಲ ಎಂದನು..."


"ಪ್ರತಿಸಲವೂ ಆತನೇ ಇರುತ್ತಿದ್ದನೆ?"


"ಹೌದು ಇದುವರೆಗೆ ನನ್ನನ್ನು ಒಬ್ಬನನ್ನೇ ಎರಡು ಸಲ, ಅವಳನ್ನು ಮೂರು ಸಲ, ನಮ್ಮಿಬ್ಬರನ್ನು ಒಟ್ಟಿಗೆ ಒಂದು ಸಲ ಕರೆದೊಯ್ದಿದ್ದಾರೆ!"


"ಅವನೇನು ನಿಮ್ಮ ಕನ್ಸಲ್ಟಿಂಗ್ ಸರ್ಜನ್ನೆ?" ಎಂದು ನಗಾಡಿದೆ. ಪೆಚ್ಚಾಗಿ ನಕ್ಕರು ಗಗನ್,


"ಹಾಗೆ ಅಂದುಕೊಳ್ಳಿ...ಟ್ರ್ಯಾಕಿಂಗ್ ಚಿಪ್ ಇತ್ತಲ್ಲ?"


ಇರಬೇಕು, ಅವನೇ ಇವರ ಕೇಸ್ ವರ್ಕರ್ ತರಹ. ಅದು ಅವನಿಗೆ ಯಾವುದೋ ನಿರ್ದಿಷ್ಟ ಸಿಗ್ನಲ್ ಕೊಡುತ್ತಿದ್ದಿರಬೇಕು. ತುಂಬಾ ವ್ಯವಸ್ಥಿತ ಹಾಗಾದರೆ!


"ಸರಿ ವಾಪಸ್ ಬನ್ನಿ , ಮೊದಲನೆಯ ಸಲ ಏನಾಯಿತು?" ವಿಚಾರಣೆ ಮುಂದುವರೆಸಿ ಮುಗಿಸುವುದು ಅಗತ್ಯ.


"ಮುಂದಿನದನ್ನು ಹೇಳಲು ನನಗೆ ತುಂಬಾ ಮುಜುಗುರವಾಗುತ್ತದೆ.." ಎಂದು ಬಲವಾಗಿ ತಲೆಯಾಡಿಸಿದರು ಗಗನ್. ಎಚ್ಚರವಾಗದಿರಲಪ್ಪ ಸದ್ಯ! ಎಂದು ಗಾಬರಿಯಾಯಿತು.


"ಪರವಾಗಿಲ್ಲ ಹೇಳಿ..ಎಚ್ಚರವಾಗಿ ಮನೆಗೆ ಹೋದಮೇಲೆ ಯಾಕೆ ಹೇಳಲಿಲ್ಲ ಎಂಬ ಗಿಲ್ಟ್ ಕಾಡೀತು ನಿಮ್ಮನ್ನು..." ಮುನ್ನೆಚ್ಚರಿಕೆ, ಧೈರ್ಯ ಎಲ್ಲಾ ತುಂಬಬೇಕು ನನ್ನ ಕೇಸುಗಳಲ್ಲಿ.


"..ಅವರು ನನ್ನ ಸೊಂಟದ ಕೆಳಗೆ ಸ್ಯಾಂಪಲ್ ತೆಗೆದುಕೊಂಡರು..."ಎಂದು ತೊದಲಿದರು ಗಗನ್. ಹೇಳಲು ಸಂಕೋಚ ಪಡುತ್ತಿದ್ದಾರೆ ಎನಿಸಿತು


"ಸರಿಯಾಗಿ ಹೇಳಿ"


"ನನ್ನ ಮನಸ್ಸಿನಲ್ಲಿ ಲೈಂಗಿಕ ಆಸೆಯನ್ನು ಅವನು ಬಿತ್ತಿದ. ನಾನು ಉದ್ರಿಕ್ತನಾದೆ. ಆದರೆ ಆಗಲೇ ನಾನು ಮಯಕ ಬಂದು ಜ್ಞಾನ ತಪ್ಪಿಬಿಟ್ಟೆ..."


"ಮತ್ತೆ ಹೇಗೆ ಖಾತರಿಯಾಗಿ ಹೇಳುತ್ತೀರಿ?"


"ಅವನು ಟೆಸ್ಟ್ ಟ್ಯೂಬಿನಂತಾ ಶೀಶೆಯಲ್ಲಿ ಅದನ್ನು ಕಲೆಕ್ಟ್ ಮಾಡಿದ್ದನ್ನು ಎಚ್ಚರವಾದಾಗ ನಾನು ನೋಡಿಬಿಟ್ಟೆ..."


ಗಗನ್ ಈಗ ಸ್ವಲ್ಪ ಉದ್ವಿಗ್ನರಾದಂತೆ ತೋರಿತು.


"ನೀವು ನನ್ನನ್ನು ನಂಬುವುದಿಲ್ಲ ಅಲ್ಲವೆ?...ಪುರುಷನಾಗಿ ಆದರೂ ನಿಮಗೆ ಅರಿವಾಗಿಯೇ ಆಗುತ್ತದೇ ಅಲ್ಲವೆ ಆ ಸ್ಥಿತಿಯಲ್ಲಿ?"


"ಅರ್ಥವಾಯಿತು. ಮುಂದೆ ಹೇಳಿ, ನಂಬಿದ್ದೇನೆ..." ಸುಮ್ಮನೆ ಅವರೊಂದಿಗೆ ವಾದಿಸಿ ಈ ರೆಗ್ರೆಷನ್ ಥೆರಪಿ ಸೆಷನ್ ಅರ್ಧಕ್ಕೆ ಮುಗಿಯುವುದು ನನಗೆ ಬೇಕಿರಲಿಲ್ಲ.


ವೀರ್ಯದ ನಮೂನೆ? ...ಮಿಶ್ರ ತಳಿ, ಕೃತಕ ಸಂತಾನೋತ್ಪತ್ತಿ!. ನನ್ನ ಮನಸ್ಸಿನಲ್ಲಿ ನಂಬಿಕೆ ಬಲವಾಗುತ್ತಿದೆ.


"ಆಮೇಲೆ ನನ್ನ ಟೆಸ್ಟ್ ಮುಗಿಸಿ ಬಟ್ಟೆ ಹಾಕಿದರು. ಮತ್ತೆ ನಾನು ಲಂಬೂನತ್ತ ತಿರುಗಿ "ಏನು ನಡೆಯುತ್ತಿದೆ ಇಲ್ಲಿ...ಯಾಕೆ ನೀವು ಹೀಗೆ?" ಎಂದೆ ಮನಸಿನಲ್ಲೇ.


"ಅವನು ನನ್ನನ್ನು ಆ ಕುಳ್ಳರ ಜತೆಯಲ್ಲೇ ಒಂದು ದೊಡ್ಡ ಸ್ಥಳಕ್ಕೆ ಕರೆದೊಯ್ದ. ಅಲ್ಲಿ ಬಾಗಿಲು ಗೋಡೆ, ಪರದೆ ಎಲ್ಲಾ ನಾವು ಹೋಗುತ್ತಿದ್ದಂತೆಯೇ ಕ್ರಿಯೇಟ್ ಆಯಿತು..ಆಗಲೆ ಸೃಷ್ಟಿಯಾಯಿತು...!"


ವರ್ಚುಯಲ್ ರಿಯಾಲಿಟಿ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್? ಏನಿರಬಹುದು?


ಅವನು ದೊಡ್ಡ ಪರದೆಯ ಮೇಲೆ ಕೈಯಾಡಿಸುತ್ತಲೇ ಅಲ್ಲಿ ಬಾಹ್ಯಾಕಾಶ ಲೈವ್ ನಕ್ಷೆ ಮಾಡಿಬಂತು.


"ನೀವು ಇಲ್ಲಿದ್ದೀರಿ..."ಎಂದು ಅವನು ನಮ್ಮೆಲ್ಲರಿಗೂ ತಿಳಿದಿರುವ ನಮ್ಮ ಸೌರವ್ಯೂಹದ ಚಿತ್ರವನ್ನು ತೋರಿದ. ನಾನು ತಲೆಯಾಡಿಸಿದೆ.


"ನಾವು ನಿಮ್ಮ ಸೌರವ್ಯೂಹದ ದಕ್ಷಿಣದಲ್ಲಿ 40 ಜ್ಯೋತಿ ವರ್ಷಗಳ ದೂರದಲ್ಲಿ ದ್ವಿ-ಸೂರ್ಯರಿರುವ ಗ್ರಹಮಂಡಲ ಕಾಣುತ್ತದೆಯಲ್ಲಾ..ಅದನ್ನು ನೀವು ಜ಼ೀಟಾ ರೇಟಿಕ್ಯುಲಿ ಎನ್ನುತೀರಿ.."ಎಂದು ತನ್ನ ಬೆರಳಿನಿಂದ ಒತ್ತಿ ಜ಼ೂಂ ಮಾಡಿ ತೋರಿಸಿದನು. ಅಲ್ಲಿನ ಗ್ರಹ ಮತ್ತು ಉಪಗ್ರಹಗಳ ಚಿತ್ರ ಸ್ಪಷ್ಟವಾಗಿತ್ತು.”


ಅಮೇರಿಕಾದಲ್ಲೂ ಈ ಜೀಟಾ ರೆಟಿಕ್ಯುಲಿ ಗ್ರಹದ ಗ್ರೇ ಜೀವಿಗಳೆ ಹೊತ್ತೊಯ್ಯುತ್ತಿದ್ದುದು. ಅದು ನಿಜವಾಗಿಯೂ ಇರುವ ಗ್ರಹಮಂಡಲ!


"...ನಾವು ಇಲ್ಲಿನವರು. ಹಲವು ಬಿಲಿಯನ್ ವರ್ಷಗಳ ಕೆಳಗೇ ಹುಟ್ಟಿದ್ದೆವು. ನಮಗೂ ಹಲವು ಯುಗಗಳು ಕಳೆದವು, ಭೀಕರ ಯುದ್ದಗಳು ಜರುಗಿದೆವು, ಅನ್ಯಗ್ರಹಗಳಿಂದ ವೈರಿಗಳು ಬಂದರು. ಕ್ರಮೇಣ ಪರಿಸರ ಬದಲಾಗಿ ಹೊಸ ವ್ಯವಸ್ಥೆ ಹವಾಮಾನವೂ ಹುಟ್ಟಿಕೊಂಡಿತು... ನಮಗೆಲ್ಲಾ ಹಲವು ಬಾರಿ ಸತ್ತು ನಾಶವಾಗಿ ಮತ್ತೆ ಬದಲಾದ ಯುಗ ಮತ್ತು ಸಂಧರ್ಭಗಳಲ್ಲಿ ಪುನರ್ಜನ್ಮವಾಯಿತು..ದೇಹ, ಆರೋಗ್ಯ, ಜೀವನಶೈಲಿ ಎಲ್ಲಾ ಯುಗದಿಂದ ಯುಗಕ್ಕೆ ಪರಿವರ್ತನೆಯಾದವು... "

"ಅಂದರೆ ನಮಗಿಂತಾ ಹಳಬರು..." ಎಂದು ಉದ್ಗರಿಸಿದೆ. ಅವನು ಒಂದು ತರಹ ನಕ್ಕ ಎಂದೇ ಹೇಳಬೇಕು , ಅವನ ಬಾಯಿ ಸೊಟ್ಟವಾಯಿತು ಅಷ್ಟೇ!


"ನಿಮ್ಮ ಕಾಲಗಣನೆಯ ಲೆಕ್ಕದಲ್ಲಿ ಇರಬಹುದು , ನಮ್ಮ ಕಾಲಗಣನೆಯೇ ಬೇರೆ, ಅದು ನಿಮಗರ್ಥವಾಗದ್ದು...ಮೂರು ಆಯಾಮದಲ್ಲಿಲ್ಲ, ಹಗಲು ರಾತ್ರಿಗಳಲ್ಲಿಲ್ಲ...ನಾಲ್ಕನೆ ಮತ್ತು ಐದನೇ ಡೈಮೆನ್ಶನ್‌ನಲ್ಲಿದೆ,,, ಈ ಗಗನನೌಕೆ ಈ ನಮ್ಮ ಕುಳ್ಳರ ಗುಲಾಮ ಸಂತತಿ ಇವೆಲ್ಲಾ..." ಎಂದು ಮಾತಾಡದೇ ನಿಂತಿದ್ದ ಕುಳ್ಳರನ್ನು ತೋರಿಸಿದ ಲಂಬೂ..


"ನೀವು ಯಾರು, ಇವರು ಯಾರು?"


"ಇಲ್ಲಿರುವವರಲ್ಲಿ ನಾವೇ ಪ್ಲಯ್ಡಿಯನ್ ಜಾತಿಯ ಮೂಲ ಗ್ರಹವಾಸಿಗಳು, ನಾನು ಮತ್ತು ಇವಳು (ನರ್ಸ್) . ಇವರು ನಮ್ಮ ಜೈವಿಕ ತಂತ್ರಜ್ಞಾನದಿಂದ ಕ್ಲೋನ್ ಮಾಡಿದ ಗುಲಾಮ ಸಂತತಿ, ನಮ್ಮ ಸೇವೆಗೆ ನಾವೇ ಸೃಷ್ಟಿಸಿದ್ದು. ನಾವು ಈ ನೂರು ವರ್ಷಗಳಲ್ಲಿ ಪ್ರಾಕೃತಿಕ ವಿನಾಶದಿಂದ ಜನಸಂಖ್ಯೆಯಲ್ಲಿ ಭಾರಿ ಇಳಿಮುಖವಾದೆವು. ನಮಗೆ ಈಗ ಹೆಚ್ಚಿನವರಿಗೆ ಸಂತಾನೋತ್ಪತ್ತಿ ಶಕ್ತಿಯಿಲ್ಲ... ಹಾಗಾಗಿ..."


"ಮತ್ತೆ ಈ ಗ್ರೇ ಬಣ್ಣದ ಗುಲಾಮರು, ಅವರಿಗೆ?"ಎಂದೆ.


ಲಂಬೂ ದುಃಖಿತನಾದಂತೆ ಕಂಡ.


"ದುರದೃಷ್ಟವಶಾತ್ ಅವರಿಗೂ ಆ ಶಕ್ತಿ ಕೊಡಲು ನಮಗಾಗಲಿಲ್ಲ. ಅವರಿಂದು ಅರೆಬೆಂದ ಪ್ರಯೋಗದ ನಮೂನೆಗಳು, ಅಂದರೆ ನಾವು ಪ್ರಕೃತಿಯನ್ನು, ಜಗನಿಯಮವನ್ನೂ ವಂಚಿಸಲು ಆಗಲಿಲ್ಲ.. ಇವರೂ ನಪುಂಸಕರು, ಅವರಿಗೆ ಸಂವೇದನೆ, ಭಾವನೆಗಳನ್ನು ಕೊಡಲೂ ನಮಗಾಗಲಿಲ್ಲ, ನಾವೂ ಬರುಬರುತ್ತಾ ಅವನ್ನೆಲ್ಲಾ ಕಳೆದುಕೊಳ್ಳುತ್ತಿದ್ದೇವೆ... ಅವರು ಯಂತ್ರದ ಬೊಂಬೆಯಂತೆ, ನಮ್ಮ ಯಾಂತ್ರಿಕ ಸೂಚನೆಗಳನ್ನು ಮಾಡಿ ತೋರಿಸಬಲ್ಲರು ಅಷ್ಟೇ. ನಿಮ್ಮ ಭೂಮಿಯವರ ಕಣ್ಣಿಗೆ ಅವರೂ ಪವಾಡ ಪುರುಷರೇ!...ಅಂದರೆ ನಮ್ಮಲ್ಲಿದ್ದ ಎಲ್ಲಾ ಅತಿಮಾನವನ ಶಕ್ತಿಗಳೂ ಅವರಲ್ಲಿದೆ..."


"ಸಂತಾನವೊಂದನ್ನು ಬಿಟ್ಟು?...ಅಂದರೆ ನೀವು ಕ್ರಮೇಣ ಅಳಿದು ಹೋಗುತ್ತಿದ್ದೀರಿ! ಅಯ್ಯೋ, ಅದಕ್ಕೇ...!"ಎಂದು ನನಗೆ ಮಿಂಚಿನಂತೆ ಏನೋ ಹೊಳೆದು ಹೌಹಾರಿದೆ.


ಅವನಿಗೆ ನಾನು ತುಂಬಾ ಅರ್ಥ ಮಾಡಿಕೊಂಡು ಅನರ್ಥ ಮಾಡಿಬಿಟ್ಟೆ ಎನಿಸಿತೇನೋ..


ಅವನು ಕೈ ಮೇಲೆತ್ತಿದ."ಇನ್ನು ನಿನಗೆ ಏನೂ ವಿವರಸಬೇಕಿಲ್ಲ. ವಿವರಿಸುವುದು ಒಳಿತೂ ಅಲ್ಲ, ಭವಿಷ್ಯಕ್ಕೆ.."


ನಾನೂ ವಾದಿಸಿದೆ. "ಯಾರ ಭವಿಷ್ಯಕ್ಕೆ...ಎಂತಾ ಭವಿಷ್ಯ ನಿಮಗೆ ಗೊತ್ತು?"


"ನಿಮ್ಮ ಭೂಮಿಯಂತಾ ಪುಣ್ಯಭೂಮಿ ಇನ್ನೊಂದಿಲ್ಲ ...ಹವೆ, ನೈಸರ್ಗಿಕ ಸಂಪನ್ಮೂಲ, ನೀರು ಬೆಳಕು, ಆಹಾರ ಎಲ್ಲಾ ಇದೆ. ಹೊರಗಿನ ವೈರಿಗಳ ದಾಳಿಯೂ ಆಗಲಿಲ್ಲ ಆದರೆ ನೀವೇ ನಿಮಗೆ ಶತ್ರುಗಳಾದಿರಿ. ಸ್ವಾರ್ಥ ದ್ವೇಷದಿಂದ ಯುದ್ಧ ಮಾಡಿಕೊಳ್ಳುತ್ತಿರುವಿರಿ...ಭವಿಷ್ಯನ್ನು ಅಂಧಕಾರಕ್ಕೆ ತಳ್ಳುತ್ತಿದ್ದೀರಿ, ನಿಮ್ಮ ಭವಿಷ್ಯ ಭಯಾನಕವಾದ ವಿನಾಶ ತಂದು ಅಳಿದು ಹೋಗುವಿರಿ ಮೊದಲು ನೀವು...ನಮಗಿಂತಾ ಮೊದಲು!"


ಅವನು ನನ್ನನ್ನು ಹೆದರಿಸಲು ಇದೆಲ್ಲಾ ಬುರುಡೆ ಪುರಾಣ ಹೇಳುತ್ತಿದ್ದಾನೆಂದು ಆಗ ಭಾವಿಸಿದೆ. "ನನ್ನನ್ನು ತಕ್ಷಣ ಮನೆಗೆ ಬಿಡು. ಇನ್ನೊಮ್ಮೆ ಬಂದರೆ ಪೋಲೀಸ್ ಕಂಪ್ಲೇಂಟ್ ಕೊಡುವೆ" ಎಂದು ಮನಸ್ಸಿಗೆ ಬಂದದ್ದನ್ನು ಹೇಳಿ ಬೆದರಿಸಲು ನಾನೂ ನೋಡಿದೆ.


ನನ್ನ ಮಾತು ಕೇಳಿ ಅವನಿಗೆ ನಗಬೇಕೋ, ಸುಮ್ಮನಿರಬೇಕೋ ಎಂದು ಗೊಂದಲವಾಯಿತು.


"ಮುಂದಿನ ಸಲ ನಿನ್ನ ಪತ್ನಿಯನ್ನು ಕರೆತರುವೆವು. ನೀವು ಭವಿಷ್ಯದ ನಮ್ಮೆರಡೂ ಜೀವಕುಲದ ಉದ್ಧಾರಕ್ಕೆ ಸಹಕರಿಸಲೇಬೇಕು" ಎಂದು ಕೊನೆಯದಾಗಿ ಹೇಳಿ,"ಇವರನ್ನು ಮನೆಗೆ ಬಿಡಿ" ಎಂದು ನನ್ನನ್ನು ಕರೆತಂದಿದ್ದ ಗಿಡ್ಡನಿಗೆ ಸೂಚಿಸಿದನು.


"ಈ ಬಾರಿ ವಾಪಸ್ ಬಂದಿದ್ದು ನನಗೆ ನೆನಪಿಲ್ಲ. ಇಂಟರ್ ಡೈಮೆನ್ಷನಲ್ ಟ್ರಾವೆಲ್ ( ಬೇರೇ ಆಯಾಮದಲ್ಲಿ) ಮಾಡಿಸಿರಬೇಕು. ನೇರವಾಗಿ ಮನೆಗೆ ತಲುಪಿದಂತಿತ್ತು..."


"ನಾನು ಮನೆಯಲ್ಲಿ ಹಾಸಿಗೆಯಲ್ಲಿ ಎದ್ದಾಗ ಬೆಳಿಗ್ಗೆ 5.30 ಆಗಿತ್ತು. ನನ್ನ ಲೆಕ್ಕದಲ್ಲಿ ನಾನು ಕೇವಲ ಮಧ್ಯರಾತ್ರಿಯಿಂದ ಹೆಚ್ಚೆಂದರೆ ಒಂದು-ಎರಡು ಗಂಟೆ ಕಳೆದಿರಬಹುದಷ್ಟೇ... ಹೇಗೆ ಟೈಮ್ ಲಾಸ್ ಆಯಿತೆಂದು ನನಗರಿವಾಗಲಿಲ್ಲ. ಪತ್ನಿ ಇನ್ನೂ ನಿದ್ರಿಸುತ್ತಿದ್ದಳು. ಅವಳನ್ನು ಎಬ್ಬಿಸಿ ಹೇಳಿದಾಗ ಅವಳು ನಂಬಲೇ ಇಲ್ಲ. ನನಗೆ ಕೆಟ್ಟ ಕನಸು ಬಿದ್ದಿರಬೇಕು ಎಂದು ಭಾವಿಸಿದಳು. ಆದರೆ ನನ್ನ ಮೂಗಿನೊಳಗೆ ಗಾಯವಾಗಿದ್ದನ್ನು ತೋರಿಸಿದೆ. ಅವಳು ಸ್ತಂಭೀಭೂತಳಾದಳು’ರಾತ್ರಿ ಎದ್ದು ಎಲ್ಲಿಗೆ ಹೋಗಿದ್ದಿರಿ?’ ಎಂದಳು..."


2


ಗಗನ್ ನಿಲ್ಲಿಸಿದಂತೆ ತೋರಿತು. ಬಹಳ ಆಯಾಸವಾಗಿರಬೇಕು.


"ಸರಿ" ನಾನೆಂದೆ, "ಮುಂದಿನದನ್ನು ಅವರ ಬಾಯಲ್ಲೆ ಕೇಳುತ್ತೇನೆ...ನಿಮಗೀಗ ಎಚ್ಚರ ಮಾಡಿಸುತ್ತೇನೆ" ಎನ್ನುತ್ತಾ ನಾನು ಅವರನ್ನು ನಿಧಾನವಾಗಿ ಜಾಗೃತಾವಸ್ಥೆಗೆ ಮರಳಿಸಿದೆ.


ಗಗನ್ ಎದ್ದು, "ನಾನೆಲ್ಲಾ ಸರಿಯಾಗಿ ಹೇಳಿದೆನೆ?" ಎಂದರು.


" ಹಾ ಸ್ಪಷ್ಟವಾಗಿ ಹೇಳಿದಿರಿ. ನಾನಿನ್ನೂ ಯೋಚಿಸುವುದಿದೆ. ಈಗ ನಿಮ್ಮನ್ನು ಹೊರಗಿನ ರೂಮಿನಲ್ಲಿ ಕಾಯಲು ಹೇಳುತ್ತಿದ್ದೇನೆ. ಅಲ್ಲಿಗೇ ಊಟ ತಿಂಡಿ ತರಿಸಿಕೊಳ್ಳಬಹುದು. ಟಿವಿ ಸೌಕರ್ಯ ಇದೆ. ನೀವು ಮಲಗಲು ಬೆಡ್ ಸಹಾ ಇದೆ" ಎಂದು ಉಪಚಾರದ ಮಾತಾಡಿದೆ.


"ಹಾಗಾದರೆ ಬಾನುಮತಿಯನ್ನು ಇಲ್ಲಿಗೆ ಬರಹೇಳಲೆ?" ಎನ್ನುತ್ತಾ ಎದ್ದರು


"ಪ್ಲೀಸ್, ಹಾಗೇ ಮಾಡಿ".


ಗಗನ್ ಹೇಳಿದ್ದು ಕೇಳಿ ನನ್ನ ಹಳೇ ಅಧ್ಯಯನಗಳ ನೆನಪು ಬಂದು ಯೂರೋಪಿಯನ್ ಮತ್ತು ಅಮೆರಿಕನ್ ಅಪಹೃತರ ವರದಿಗಳಿಗೆ ಸಾಮ್ಯತೆಯಿದ್ದುದನ್ನು ಗಮನಿಸಿದೆ. ಅಲ್ಲೆಲ್ಲಾ ಮಹಿಳೆಯರ ಅಪಹರಣ ಹೆಚ್ಚೆಚ್ಚು ಕುತೂಹಲಕಾರಿ ಮತ್ತು ವಿಸ್ಮಯಕಾರಿಯಾಗಿದ್ದುದರಿಂದ ಇಲ್ಲಿಯೂ ಶ್ರೀಮತಿ ಭಾನುಮತಿ ಪೈರವರ ಹೇಳಿಕೆ ಪಡೆಯಲು ಕಾತರನಾಗಿದ್ದೆ.


3


ಭಾನುಮತಿ 32 ಆಸುಪಾಸಿನ ಮಹಿಳೆ, ನೋಡಲು ಆರೋಗ್ಯವಂತೆಯಂತೆ ಕಾಣುತ್ತಾರೆ. ಆಕೆಯ ಬಾಡಿ ಲಾಂಗ್ವೇಜ್ ನೋಡಿದರೆ ದಿಟ್ಟೆ, ಪ್ರಾಮಾಣಿಕರು ಎಂದು ಕಾಣುತ್ತದೆ. ಆದರೆ ನನ್ನನ್ನು ನೋಡಿದಾಗ ಕಣ್ಣಲ್ಲಿ ಏಕೋ ಸ್ವಲ್ಪ ಗೊಂದಲ, ಅಪನಂಬಿಕೆಯ ಛಾಯೆ ಕಾಣುತ್ತಿದೆ. ನಾನು ಮನೋವೈದ್ಯನಾಗಿ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕಾದ್ದು ಕರ್ತವ್ಯ. ಆಕೆ ನನ್ನ ಪರೀಕ್ಷಕ ಆಸನದಲ್ಲಿ ಒರಗಿದರು.


"ಸಹಕರಿಸುವಿರಾ, ಮಿಸೆಸ್ ಪೈ?"


"ಭಾನು ಎಂದು ಕರೆದರೆ ಸಾಕು, ಪರಿಚಯಯವಯಿತಲ್ಲ..." ಎಂದು ನಸುನಕ್ಕರು. ರೋಟರಿ ಕ್ಲಬ್ಬಿನಲ್ಲಿ ಸಾಮಾಜಿಕ ಕಾರ್ಯಕರ್ತೆ, ಹಾಗಾಗಿ ಸಂಕೋಚ ಸ್ವಭಾವದವರಲ್ಲ.


ಹೀಗೇ ಎರಡು ನಿಮಿಷ ಲೋಕಾಭಿರಾಮವಾಗಿ ಮಾತನಾಡಿಸಿ ಆಕೆಯನ್ನು ಸಮ್ಮೋಹನ ತಂತ್ರದಡಿ ರೆಗ್ರೆಶನ್ ( ಮರುಕಳಿಕೆ ಚಿಕಿತ್ಸೆ) ಥೆರಪಿಗೆ ಒಳಪಡಿಸಲು ಆರಂಭಿಸಿದೆ.


"ಮನಸ್ಸು ಶಾಂತವಾಗಿದೆಯೆ?...ನಾನು ಹೇಳುವುದು ಕೇಳಿಸುತ್ತಿದೆಯೆ?


"ನಿಮಗಿಂತಾ ಬೇಗ ಆ ಬಾಹ್ಯಾಕಾಶದ ಸರ್ಜನ್ಸ್ ಕ್ಷಣ ಮಾತ್ರದಲ್ಲಿ ನನ್ನನ್ನು ಹಿಪ್ನೋಟೈಸ್ ಮಾಡುತ್ತಿದ್ದರು" ಎಂದು ಚಟಾಕಿ ಹಾರಿಸಿದರು ಆ ಸ್ಥಿತಿಯಲ್ಲೂ.


"ಹಾಗಾದರೆ, ನಾನು ಅವರ ಬಳಿ ಟ್ರೈನಿಂಗ್ ತೆಗೆದುಕೊಳ್ಳಬೇಕಾದೀತು!" ನಾನು ಮರುನುಡಿದೆ.


ನಾನು ಐದು ನಿಮಿಷ ಯತ್ನದ ನಂತರ ಆಕೆ ಸಾಕಷ್ಟು ಸುಪ್ತಾವಸ್ಥೆಗೆ ಇಳಿದರು ಎನಿಸಿದಾಗ ಪ್ರಶ್ನಾವಳಿ ಶುರು ಮಾಡಿದೆ.


"ಮೊದಲ ಬಾರಿಗೆ ನಿಮ್ಮ ಪತಿ ಈ ಬಾಹ್ಯಾಕಾಶ ಅಪಹರಣದ ಬಗ್ಗೆ ಹೇಳಿದಾಗ ಏನನ್ನಿಸಿತು"


ಆಕೆ ಒಂದು ಕ್ಷಣ ಸುಮ್ಮನಿದ್ದು," ತುಂಬಾ ಆಶ್ಚರ್ಯವಾಯಿತು. ನಾನು ಹಾಗೆಲ್ಲಾ ಇಂತದನ್ನು ನಂಬುವವಳಲ್ಲ.. ಸೈನ್ಸ್ ಸ್ಟೂಡೆಂಟ್" ಎಂದರು. ಅಂದರೆ ಪತಿ ಗಗನ್ ವಿಜ್ಞಾನದ ವಿದ್ಯಾರ್ಥಿಯಲ್ಲ ಎಂದು ನಾನರಿತೆ.


"..ಆದರೆ ಅವರು ಮೂಗಿನೊಳಗಿನ ಚಿಪ್ ಹಾಕಿದ ಗಾಯ ತೋರಿಸಿದಾಗ ಮಾತ್ರ ಗೊಂದಲ, ಭಯ ಎರಡೂ ಆಯಿತು. ನಾನಾಗಿಯೇ ಸೂಪರ್ ನ್ಯಾಚುರಲ್, ಭೂತ ಬಂಗಲೆ, ಮಾಟ ಮಂತ್ರದ ಬಗ್ಗೆ ನೆಟ್ ನಲ್ಲಿ ಓದಿದೆ. ಕ್ಲಬ್ಬಿನಲ್ಲಿ ಸೂಕ್ಷ್ಮವಾಗಿ ಎಲ್ಲ ಗೆಳೆಯರಿಂದ ಗುಪ್ತವಾಗಿ ಅಭಿಪ್ರಾಯ ಸಂಗ್ರಹಿಸಿದೆ. ಪತಿಯನ್ನು ಎಳೆದು ತರಲಿಲ್ಲ.."


"ಆ ಚಿಪ್ ಅನ್ನು ಅವರು ತಮ್ಮ ವೈದ್ಯರಿಗೆ ತೋರಿಸಿದರೆ?" ಇಲ್ಲ ಎಂದು ಗೊತ್ತಿದ್ದರೂ ಕೇಳಿದೆ.


"ನಾನೆಷ್ಟು ಹೇಳಿದರೂ ಗಗನ್ ಒಪ್ಪಲಿಲ್ಲ. ಹಾಗೆಲ್ಲಾ ಮಾಡಿ ಅದನ್ನು ಕಿತ್ತು ಹಾಕಿದರೆ ಆ ಏಲಿಯನ್ಸ್ ಇನ್ನೇನಾದರೂ ತಾಪತ್ರಯ ಮಾಡಿಯಾರು ಎಂದು... ಈ ಅಪಹರಣಕಾರರು ಪೋಲಿಸರಿಗೆ ಹೇಳಿದರೆ ಪರಿಣಾಮ ನೆಟ್ಟಗಾಗಲ್ಲ ಎಂದು ಬೆದರಿಸುವುದಿಲ್ಲವೆ?..ಅದೇ ರೀತಿ ಗಗನ್ ಹಿಂಜರಿದರು ಅಲ್ಲದೇ ಅದರಿಂದ ಅವರಿಗೆ ಯಾವುದೇ ದೈಹಿಕ ತೊಂದರೆ ಇರಲಿಲ್ಲ.. ಹಾಗಾಗಿ..."


"ಆಮೇಲೆ..."


"ನಾವು ನಮಗೆ ಸಂಕೋಚವಾದರೂ ಒಂದು ಕೆಲಸ ಮಾಡಬೇಕಾಯಿತು. "


"ಏನದು?"


"ನಮ್ಮ ಬೆಡ್ ರೂಮಿನಲ್ಲಿ ಮಲಗುವಾಗ ವಿಡಿಯೋ ವ್ಯವಸ್ಥೆ ಅಂದರೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದೆವು..."


ನಾನು ಸುಮ್ಮನಿದ್ದೆ. ಇದು ಬಹಳವೇ ಸೂಕ್ಷ್ಮ ಮತ್ತು ಅರ್ಥಗರ್ಭಿತವಾದ್ದು.


"ಅಂದರೆ ತಪ್ಪು ತಿಳಿಯಬೇಡಿ" ಎಂದು ಮಲಗಿದ್ದಲ್ಲಿಯೇ ಆಕೆ ನಾಚಿಕೆಯಲ್ಲಿ ಪಿಸುನುಡಿದರು..." ಪ್ರತಿರಾತ್ರಿ ಕೊನೆಯಲ್ಲಿ ನಾವು ನಿದ್ದೆ ಮಾಡುವ ಮುನ್ನ ಅದನ್ನು ಆನ್ ಮಾಡಿ ಮಲಗುತ್ತಿದ್ದೆವು. ಅದು ಸರಿಯಾಗಿ ನಮ್ಮಿಬ್ಬರ ಮೇಲೆ ಫೋಕಸ್ ಆಗಿತ್ತು...ನಾವು ಮುಂದಿನ ದಿನ ಚೆಕ್ ಮಾಡುತ್ತಿದ್ದೆವು ರೆಕಾರ್ಡ್ ಆಗಿದೆಯೆ ಎಂದು.."


ಅತ್ಯಂತ ಸೂಕ್ತ ಹಾಗೂ ದಿಟ್ಟ ಹೆಜ್ಜೆ!


"ಸರಿ. ಮೊದಲ ಬಾರಿ ನಿಮ್ಮ ಅಪಹರಣವಾಗಿದ್ದು ಯಾವಾಗ?..ಆಲ್ಲಿಗೆ ಹೋಗಿ ನೆನಪಿಸಿಕೊಂಡು ಹೇಳಿ"


"ಇದಾಗಿ ಒಂದು ವಾರದಲ್ಲಿ ಅನಿಸತ್ತೆ... ರಾತ್ರಿ ಇದ್ದಕ್ಕಿದಂತೆ ಫ್ಯಾನ್, ನೈಟ್ ಲ್ಯಾಂಪ್ ಹೋಯಿತು, ನಾವು ಯು ಪಿ ಎಸ್ ಹಾಕಿಸಿದ್ದೆವು. ನಾನು ಸೆಕೆಯಿಂದಲೋ, ಯಾರೋ ಹತ್ತಿರಬಂದಂತೆಯೋ ಭಾಸವಾಗಿ ಕಣ್ತೆರೆದೆ. ತಕ್ಷಣ ನನ್ನ ಕಂಗಳು ಸಿಸಿಟಿವಿ ಕ್ಯಾಮೆರಾ ಬೆಡ್ ಪಕ್ಕದಲ್ಲಿದುದರ ಬಳಿ ಹೋಯಿತು. ಅದರ ಇಂಡಿಕೇಟರ್ ಲೈಟ್ ಸಹಾ ಆಫ್ ಆಗಿತ್ತು. ನಾವು ಆನ್ ಮಾಡಿಯೇ ಮಲಗಿದ್ದೆವು...ಆದರೂ!...ಆಗಲೇ ನಾನು ಮೊದಲ ಬಾರಿಗೆ ಆ ಕುಳ್ಳ ಭ


ಯಾನಕ ವ್ಯಕ್ತಿಯನ್ನು ನೋಡಿದ್ದು..."


"...ಅವನು ಕಿಟಕಿಗೆ ಎದುರಾಗಿ ಒಳಗೇ ಬಂದಿದ್ದಾನೆ. ಕಿಟಕಿ ತೆರೆದಿದ್ದು ಕಬ್ಬಿಣದ ಬಾರ್ಸ್, ಸೊಳ್ಳೆ ಮೆಶ್ ಎಲ್ಲಾ ಹಾಗೇ ಇದೆ...ಆದರೂ ಅವನು ಆ ಮೂಲಕವೇ ಬಂದಿದ್ದಾನೆ ...ಅದನ್ನು ಹಾಳು ಮಾಡದೇ!"


" ನಾನು ಏಳಲು ಕೂಗಲು ಯತ್ನಿಸಿದೆ. ಆದರೆ ನಾನು ಜಡವಾಗಿದ್ದೆ. ರೆಪ್ಪೆಯಿಲ್ಲದ ಪಿಳಿಪಿಳಿ ತೆರೆದ ದೊಡ್ಡಕಂಗಳಿನ ಆ ಕುಳ್ಳ ‘ನನಗೆ ಸುಮ್ಮನಿರು, ಹೊರಗೆ ಕರೆದೊಯ್ಯುವೆ’ ಎಂದು ಮನದಲ್ಲಿ ಹೇಳಿದ..."




ಇನ್ನು ನಾನು ಮತ್ತೆ ಪೂರ್ತಿ ವರದಿ ಹೇಳುವ ಅಗತ್ಯವಿಲ್ಲ. ಥೇಟ್ ಗಗನ್‌ಗೆ ನಡೆದಂತೆಯೇ ಆ ಜೀವಿ ಅಸಹಾಯಕ ಸ್ಥಿತಿಯಲ್ಲಿ ಭಾನು ಅವರನ್ನೂ ಅಪಹರಣ ಮಾಡಿ ಕತ್ತಲಿನ ಆಗಸಕ್ಕೆ ಎಳೆದುಕೊಂಡು ಹೋಯಿತು. ಆಕೆಯ ಸರ್ವಪ್ರಯತ್ನಗಳೂ ಬಿಡಿಸಿಕೊಳ್ಳುವಲ್ಲಿ ನಿಷ್ಪಲವಾದವಂತೆ. ಯಾಕೆಂದರೆ ಮನಸ್ಸು ಮಾತ್ರ ಓಡುತ್ತಿತ್ತು. ದೇಹ ಪೂರ್ತಿ ಅವನ/ ಅದರ ಸುಪರ್ದಿಯಲ್ಲಿತ್ತು ಎನ್ನುತ್ತಾರೆ. ಈ ಬಾರಿ ಗಗನ್ ಎಚ್ಚರವಿಲ್ಲದೇ ತಟಸ್ಥವಾಗಿ ಮಲಗಿದ್ದರು ಒಬ್ಬರೇ.




ನನಗಂತೂ ಇದು ಇಂಟರ್-ಡೈಮೆನ್ಷನಲ್ ಟ್ರಾವೆಲ್ ಎಂದು ಖಚಿತವಾಯಿತು. ಇದು ನಮ್ಮ ವಿಜ್ಞಾನ ಇದೀಗ ಎಚ್ಚರಗೊಳ್ಳುತ್ತಿರುವ ಹೊಸ ವಿಚಾರ. 3ಡಿ ಅರಿವಿನಾಚೆಯ ಲೋಕ! ನಾಲ್ಕನೇ ಅಥವಾ ಐದನೇ ಆಯಾಮದಲ್ಲಿ ದೇಹವನ್ನು ಸ್ಥಿತ್ಯಂತರ ಮಾಡುವಿಕೆ ಈ ಮುಂದುವರೆದ ಜೀವಿಗಳಿಗೆ ಸುಲಭಸಾಧ್ಯವೆ, ಹಾಗಾದರೆ?..ಅದೂ ಮಿಲಿಯನ್ ಗಟ್ಟಲೆ ಮ್ಯುಟೇಷನ್ (ರೂಪಾಂತರ) ನಂತರ ವಂಶಧಾತುವಿನಲ್ಲೇ ಬದಲಾವಣೆಯಾದಾಗ ಮಾತ್ರ ಈ ಬಗೆಯ ಹೊಸ ಶಕ್ತಿಯ ಜೀವಿಗಳು ಉದಯಿಸಬಲ್ಲರಂತೆ. ಇವರು 6- ಫೇಸ್ ಎಲೆಕ್ಟ್ರಿಸಿಟಿ (ವಿದ್ಯುಚ್ಚಕ್ತಿ) ಬಳಸಬಲ್ಲರು; ಅಗೋಚರವಾದ ಇಂತಾ ಮೀಡಿಯಮ್ಮಿನಲ್ಲಿ ಪಯಣ ಮಾಡುವವರಿರಬಹುದು...ಹಾಗಿದ್ದರೆ ನಮ್ಮ ಮನೆಯ ವಿದ್ಯುಚಕ್ತಿಯನ್ನು/ ಯು.ಪಿ.ಎಸ್ ಅನ್ನು ಮಕ್ಕಳಾಟದಂತೆ ಆರಿಸಿ ನಿಷ್ಕ್ರಿಯರಾಗಿಸಬಲ್ಲರು. ಆ ಆಯಾಮದಲ್ಲಿ ನಮ್ಮ ಯಾವ ಇಂದಿನ ತಂತ್ರಜ್ಞಾನವೂ ಕೆಲಸಮಾಡಲಾರದಂತೆ. ನಾನು ಒಂದು ಕಡೆ ಓದಿದ ಹಾಗೆ ರೇಡಾರ್ ಮತ್ತು ಉಪಗ್ರಹ ಚಿತ್ರಗಳು ಸಹಾ ಇವನ್ನು ಸೆರೆ ಹಿಡಿಯಲಾರದೆನ್ನುತ್ತಾರೆ. ಈಗಿನ ವಿಜ್ಞಾನಿಗಳಿಗೂ 100% ಸತ್ಯ-ಅಸತ್ಯದ ವ್ಯತ್ಯಾಸ ಗೊತ್ತಾಗದ ಅಸ್ಪಷ್ಟ ವಿಷಯ ಇದು.


ಮತ್ತೆ ನಾನು ಭಾನು ಬಳಿಗೆ ಹಿಂತಿರುಗಿದೆ. ಅವರು ವಿವರಿಸುತ್ತಿದ್ದರು...




"ನನ್ನನ್ನು ಇಬ್ಬರು ಹೆಣ್ಣುಗಳು ಎತ್ತರದವರು, ಈ ಕುಳ್ಳರಲ್ಲ. ಅವರು ನನ್ನ ಜತೆ ಬಂದರು...ಇವರೇ ಬೇರೆ ತರಹದವರು!" ಇದು ಗಗನ್ ಹೇಳಿದ್ದುಕ್ಕೆ ತಾಳೆಯಾಗುವಂತಿತ್ತು.... "ಹೆಣ್ಣುಗಳೇ! ಇನ್ನೇನನ್ನಬೇಕು ಅವನ್ನು?... ದೇಹ ಮತ್ತು ವರ್ತನೆಯಲ್ಲಿ ಮಹಿಳೆಯರಂತೆ, ಆದರೆ ಅವರು ಮನುಷ್ಯರಲ್ಲ. ಎಷ್ಟೋ ವ್ಯತ್ಯಾಸಗಳು ಹತ್ತಿರ ಹೋದಾಗ ಕಾಣುತ್ತವೆ..ಚರ್ಮ, ತಲೆ, ಅದರ ವಿನ್ಯಾಸ, ಕಣ್ಣು ತೆರೆದು ಮುಚ್ಚಿಕೊಳ್ಳುವುದು. ಬಾಯಿ ತೆರೆದರೆ ಹಲ್ಲು ಒಂದೇ ಅಗಲವಾಗಿ ಮೇಲೆ ಕೆಳಗೆ ಹಲಗೆಯಂತಿದೆ. ನಾಲಗೆಯ ಆಕಾರ... ಇವರನ್ನು ಹ್ಯುಮನಾಯ್ಡ್ ಎನ್ನಬಹುದು...ಗಗನನೌಕೆಯ ಒಳಗೆ ಬರೇ ಹಳದಿ ಅಥವಾ ನೀಲಿ ಬಣ್ಣ...ಆದರೆ ನನ್ನನ್ನು ಸ್ತ್ರೀಯರ ಕೊಠಡಿಗೆ ಕರೆದೊಯ್ದರು. ಅಂದರೆ..ಗೋಡೆ, ಬಾಗಿಲುಗಳು ಬೇಕಾದ ಗಳಿಗೆಯಲ್ಲಿ ಬೇಕಾದ ಸ್ಥಳದಲ್ಲಿ ಹುಟ್ಟಿಸಿ ಮತ್ತೆ ಮರೆ ಮಾಡುತ್ತಿರುತ್ತಾರೆ. ಒಳ್ಳೇ ಮಾಯಾಜಾಲದ ತರಹ!"


ಆಕೆ ಶಾಂತರಾದರೂ, ಸ್ವಲ್ಪ ಭಯ ಮತ್ತು ಸಂಕೋಚ ಎರಡನ್ನು ನಾನು ಫೀಲ್ ಮಾಡಿಕೊಂಡೆ.


ಮೊದಲು ಆಕೆಯ ಕೇಶ, ಉಗುರು, ಚರ್ಮದ ಸ್ಯಾಂಪಲ್ ತೆಗೆದುಕೊಂಡರಂತೆ


ನಂತರ ಬಹಳ ಆತಂಕಕಾರಿ ಭಾಗ... ಆಕೆಗೆ ಲೈಂಗಿಕ ಪರೀಕ್ಷೆಗೆ ಒಳಪಡಿಸಿದರಂತೆ. ಅದನ್ನು ಹೇಳುವಾಗ ಭಾನು ನೊಂದು ಬಿಕ್ಕಿದರು.


ಆಕೆ ಸುಪ್ತಾವಸ್ಥೆಯಲ್ಲಿಲ್ಲದಿದ್ದರೆ ಅದನ್ನೆಲ್ಲಾ ನನಗೆ ನೇರವಾಗಿ ಹೇಳುತ್ತಿದ್ದರೋ ಇಲ್ಲವೋ..


ಆಕೆ ಹೇಳುವ ಪ್ರಕಾರ ಆಕೆಯ ಅಂಡಾಶಯದಿಂದ ಸ್ಯಾಂಪಲ್ ತೆಗೆದು ಕೃತಕ ಪ್ರನಾಳ ಶಿಶುವನ್ನು ಹುಟ್ಟಿಹಾಕಿದರಂತೆ!...


ಇದನ್ನೆಲ್ಲಾ ಒಬ್ಬ ಎತ್ತರದವಳು ಎನ್ನಲಾದ ಹೆಣ್ಣು ಸರ್ಜನ್, ಪ್ರಸೂತಿ ತಜ್ಞೆ ಮಾಡಿದಳಂತೆ.


"ನನಗೆ ಇನ್ನೂ ಓವರಿಯಿಂದ ಸಿರಿಂಜಿನಲ್ಲಿ ಸ್ಯಾಂಪಲ್ ತೆಗೆದುಕೊಂಡಿದ್ದರ ಗುರುತು ಕಿಬ್ಬೊಟ್ಟೆಯ ಭಾಗದಲ್ಲಿದೆ. ಅದನ್ನು ಇಲ್ಲಿ ನಮ್ಮ ಡಾಕ್ಟರ್ ಇದು ಬಹಳ ಚಿಕ್ಕ ಮೈಕ್ರೋ ಇನ್ಸಿಶನ್ ಎಂದರು. ಅದನ್ನು ಮಾಡುವಂತಹಾ ಸಾಧನ ನಮ್ಮ ಬಳಿಯಿಲ್ಲಿಲ್ಲವಂತೆ... ನಾನು ಆಗ ಚುಳ್ಳೆಂದು ನೋವು ಆಗೇ ಆಯಿತು. ಆ ಟೇಬಲ್ಲಿನಲ್ಲಿ ಮೇಲೆ ನಾನು ಬಂಧಿಯಾಗಿದ್ದೆ. ಯಾವುದೋ ಶಕ್ತಿ ನನ್ನನು ಹಿಡಿದಿಟ್ಟಿತ್ತು. ಪ್ರತಿಭಟಿಸಿ ತುಂಬಾ ಕೂಗಿದೆ, ಆದರೆ ಏನೂ ಪ್ರಯೋಜನವಾಗಲಿಲ್ಲ. ನನ್ನ ಅಬ್ಬರ ಹೆಚ್ಚಾದರೆ ಆ ಲೇಡಿ ಸರ್ಜನ್ ನನ್ನ ಹಣೆಯ ಮೇಲೆ ಕೈಯಿಟ್ಟಾಗ ನನಗೆ ಯಾವೊದೋ ಶಕ್ತಿಯ ತರಂಗ ಪ್ರವಹಿಸಿದಂತಾಗಿ ಶಾಂತಳಾಗುತ್ತಿದ್ದೆ. ನಾನೂ ಮೊದಲು ರೀಕೀ ಚಿಕಿತ್ಸೆ ಪಡೆದಿದ್ದೇನೆ..ಅದೇ ತರಹದ ದೇಹ ಮತ್ತು ಮನವನ್ನು ಪ್ರಶಾಂತಗೊಳಿಸುವ ಪ್ರಕ್ರಿಯೆ ಇದು..."


ಆಕೆಯೇ ನಿರರ್ಗಳವಾಗಿ ಹೇಳುತ್ತಿದ್ದರಿಂದ ನಾನು ಮಧ್ಯೆ ಮಾತಾಡಲಿಲ್ಲ.


"ಆಗ ನನ್ನ ಬಳಿ ಎಲ್ಲಾ ಪರೀಕ್ಷೆ ಮುಗಿಸಿ ಹತ್ತಿರ ಬಂದಾಗ ಆ ಲೇಡಿ ಸರ್ಜನ್ ಮೇಲೆ ನಾನು ಬಹಳ ಮುನಿಸಿಕೊಂಡು ನಿಂದಿಸಿದೆ. ಅವಳಿಗೆ ನನ್ನ ಭಾವನೆಗಳನ್ನು ಕಂಡು ಅಚ್ಚರಿಯಾಯಿತು ನಿಜ, ಕರುಣೆ ಬಂದಿರಬಹುದು, ಗೊತ್ತಿಲ್ಲ..ಆದರೆ ಆಕೆಗೆ ಅರ್ಥವಂತೂ ಆಗಲಿಲ್ಲ. ಯಾಕೆಂದರೆ ಅವರು ಭಾವನಾಜೀವಿಗಳಲ್ಲ...ಮುಂದುವರಿದ ಪಶುಗಳು!"


"ನಾನು ಮೊದಲೇ ಸ್ವಲ್ಪ ಒರಟಿ. "ನಿಮ್ಮ ಈ ದರಿದ್ರ ವೈಜ್ಞಾನಿಕ ಪರೀಕ್ಷೆಗೆ ಯಾಕೆ ನಮ್ಮನ್ನು ಗುರಿ ಮಾಡಿದೀರಾ?...ನಿಮ್ಮ ಜನರಿಗೇ ಮಾಡಿಕೊಳ್ಳಿ" ಎಂದೆ.


ಆಕೆ ಅದಕ್ಕೆ ಧೀರ್ಘವಾಗಿ ಉತ್ತರ ಕೊಟ್ಟಳು. ನನ್ನ ಯೋಚನೆ ಜಾಡು ಹಿಡಿದು ಹೇಳಿಬಿಡುವಳು: "ನಮಗೆ ಸಾಧ್ಯವಿದ್ದರೆ ನಾವು ಇಲ್ಲಿಗೆ ನಿಮ್ಮನ್ನೇಕೆ ಕರೆತರುತ್ತಿದ್ದೆವು?. ನಮ್ಮಲ್ಲಿ ಸಂತಾನ ಅಳಿದು ಹೋಗುತ್ತಿದೆ. ಮೂಲವಾಸಿಗಳು ಸಂತಾನಹೀನತೆಯಿಂದ ಬಳಲುತ್ತಿದ್ದೇವೆ. ಈ ಗ್ರೇ ಗುಲಾಮ ಸಂತತಿಯ ಜತೆ ನಮ್ಮ ಸಹಜೀವನ, ಇವಕ್ಕೂ ಲಿಂಗವಿಲ್ಲ... ಆದರೆ ಭೂಮಿಯಲ್ಲಿ...ನಿಮ್ಮಲ್ಲಿ ಈ ಗುಣ ಇನ್ನು ಶಕ್ತಿಯುತವಾಗಿದೆ. ನಿಮ್ಮದು ಸಮೃದ್ಧ ಲೋಕ, ನಿಮ್ಮ ಜನರ ಡಿ ಎನ್ ಎ ನಾವು ನಮಗೆ ಬೆರೆಸಿ ಇಲ್ಲಿ "ಹೈಬ್ರಿಡ್" ಜೀವಿಗಳನ್ನು ತಯಾರಿಸುತ್ತಿದ್ದೇವೆ. ಮುಂದೆ ಇಲ್ಲಿನ ಗುಣಗಳೂ, ಅಲ್ಲಿನ ಗುಣಗಳು ಸೇರಿ ಹೊಸ ಸೂಪರ್ ಹ್ಯುಮನ್ ಜಾತಿ ಹುಟ್ಟಿಕೊಳ್ಳುತ್ತದೆ. ಅವರಿಗೆ ಎರಡೂ ಕಡೆ ಬದುಕುವ ಶಕ್ತಿಯಿರುತ್ತದೆ. ನಿಮ್ಮ ಜನರು ಮುಂದೊಮ್ಮೆ ಪ್ರಳಯವಾಗಿ ವಿನಾಶವಾದಾಗ ನಮ್ಮ ಈ ಹೊಸ ಪೀಳಿಗೆ ಇಡೀ ಜಗತ್ತಿಗೇ ಹಬ್ಬುವುದು, ಅವರೇ ಬಾಳುತ್ತಾರೆ..ಅದಕ್ಕಾಗಿ ಈಗಿನಿಂದಲೇ ಮುಂದಿನ ಪೀಳಿಗೆ ಎಂದು ಇವರಂತಾ ಬಲಿಷ್ಟರನ್ನು ಹುಟ್ಟು ಹಾಕುತ್ತಿದ್ದೇವೆ... ದೈಹಿಕವಾಗಿ ನಮ್ಮಂತೆ, ಭಾವನಾತ್ಮಕ ಮತ್ತು ಸಂತಾನ ಶಕ್ತಿಯಲ್ಲಿ ನಿಮ್ಮಂತೆ..."


ನಾನು "ವಾಟ್, ನಿಮಗೆ ತಲೆ ಕೆಟ್ಟಿದೆಯೆ?... ನಮಗೂ ನಿಮಗೂ ಕಸಿ ಮಾಡಿ ಯಾವುದೋ ತರಹದ ರಾಕ್ಷಸರಿಗೆ ಜನ್ಮ ನೀಡುತ್ತೀರಾ?"..ಎಂದು ಅಬ್ಬರಿಸಿದೆ.


"ಆಗ ಆಕೆ ನಾನೂ ನಂಬಲೂ ಸಾಧ್ಯವಿಲ್ಲದ ದೃಶ್ಯ ತೋರಿಸಿಬಿಟ್ಟಳು... ಅವರ ಹೆರಿಗೆ ಮನೆ ಮತ್ತು ಪ್ರನಾಳ ಶಿಶುವಿನ ಲ್ಯಾಬ್!


ಅಲ್ಲಿ ಗಾಜಿನ ದೊಡ್ಡ ದೊಡ್ಡ ಶೀಶೆಗಳಿವೆ. ಅದರಿಂದ ಎಲ್ಲೆಲ್ಲಿಗೋ ಬಣ್ಣ ಬಣ್ಣದ ಪೈಪುಗಳು ಮಧ್ಯೆಯ ಚಕ್ರದಂತಾ ಹಬ್ ಒಂದಕ್ಕೆ ಒಳಹೋಗುತ್ತಿವೆ. ಅದರಲ್ಲಿ ಕೆಲವು ದ್ರವಗಳು ಅತ್ತಿಂದಿತ್ತ ಹರಿಯುತ್ತಿವೆ.. ಪ್ರಾಯಶಃ ಅವೆಲ್ಲಾ ಜೀವರಸ, ಆಕ್ಸಿಜೆನ್ ಇತ್ಯಾದಿ ವೈದ್ಯಕೀಯ ಸಂಬಂಧಿತ ಇರಬೇಕು. ಗಾಜಿನ ಶೀಶೆಯಲ್ಲಿವೆ ಬೆಳೆಯುತ್ತಿರುವ ಹಲವಾರು ಭ್ರೂಣಗಳು.. ಅವು ಅಲ್ಲೇ ನಿಂತಲ್ಲೆ ತೇಲುತ್ತಿವೆ..ಅಯ್ಯೋ ಭಯಂಕರ ದೃಶ್ಯ !!! ನನಗೆ ಹೆದರಿಕೆ, ಅಸಹ್ಯ ಎಲ್ಲವೂ ಆಗಿ ನಾನು ಚೀರಿದೆ ಆದರೆ ಕೈ ಕಾಲು ಓಡುತ್ತಿಲ್ಲ, ಆಪಾಟಿ ಮಕ್ಕಳ ಭ್ರೂಣಗಳು...ಸುಮಾರು ನೂರು ಭ್ರೂಣಗಳು ಬೆಳೆಯುತ್ತಿವೆ.. ಆ ಭ್ರೂಣಗಳೂ ಎದ್ದಿವೆ, ಕಣ್ಣು ಬಿಟ್ಟಿವೆ...ಎಲ್ಲವೂ ನನ್ನ ಕಡೆಗೆ ತಿರುಗಿ!.. ನನಗೆ ಎದೆ ಝಲ್ಲೆಂದಿತು...,ಓಹ್ ಹ್ ಹ್ ಹ್!!" ಎಂದು ಈಗ ಸುಪ್ತಾವಸ್ಥೆಯಲ್ಲಿದ್ದ ಭಾನು ಎದ್ದುಬಿಡುವಂತಾದರು. ಹಾಗೆ ಅವರು ಸಡನ್ನಾಗಿ ಜಾಗೃತವಾದರೆ ದುಷ್ಪರಿಣಾಮಗಳು ಹೆಚ್ಚು. "ಸ್ವಲ್ಪ ಮಾತು ನಿಲ್ಲಿಸಿ ರೆಸ್ಟ್ ಮಾಡಿ ಹಾಗೇ" ಎಂದು ಸೂಚಿಸಿದೆ"


ಮತ್ತೆ ಐದು ನಿಮಿಷದ ರೆಸ್ಟ್ ಕೊಟ್ಟು ಅವರಿಗೆ "ಹೇಳಿ, ಏನಾಯಿತೆಂದು?" ಎಂದೆ. ಅರ್ಧಕ್ಕೆ ನಿಲ್ಲಿಸಬಾರದು ಎಂಬ ನಿಯಮವಿದೆ.


"...ಪಕ್ಕದ ಕೋಣೆಗೆ ಹೋದೆವು..ಅಲ್ಲಿ... ಆ ಲೇಡಿ ಸರ್ಜನ್ ಮತ್ತು ಆಕೆಯ ಪಕ್ಕದವಳ ಕೈಯಲ್ಲಿ ಒಂದು ದೊಡ್ಡ ಬುಟ್ಟಿ ಇದೆ.." ನಿಮ್ಮ ತರಹ ಮಿಶ್ರ ತಳಿಯಿಂದ ಹುಟ್ಟಿದ ಮಗು ಇದು. ಅದಕ್ಕೆ ತಾಯಿಹಾಲು ಸಹಾ ಸಿಗಲಿಲ್ಲ. ಅದರ ತಾಯಿ ಭೊಮಿಯಲ್ಲಿ ಸತ್ತು ಹೋದಳು. ನಾವು ಕರೆತರಲಾಗಲಿಲ್ಲ. ಈಗ ನೀವು ಮಗುವಿಗೆ ಸ್ಪರ್ಷ ಮಾಡಿ ಅಪ್ಪಿಕೊಳ್ಳಿ ಮುದ್ದಿಸಿ. ಅದಕ್ಕೆ ಒಂದು ತರಹದ ಸಂತಸ ಸಿಕ್ಕು ಹಿಗ್ಗುತ್ತದೆ., ಆರೋಗ್ಯವಂತನಾಗುತ್ತೆ...ಪ್ಲೀಸ್" ಎಂದು ಆ ಮಗುವನ್ನು ನನ್ನತ್ತ ಆಕೆ ನೀಡಿದರು.




ಅಬ್ಬಾ, ನೋಡಲು ಅವರ ತರಹವೂ ಇಲ್ಲ, ನಮ್ಮ ಮಕ್ಕಳ ತರಹವೂ ಇಲ್ಲ.. ಯಾವುದೋ ಆದಿಮಾನವನ ಹೋಲುವ ಪ್ರಾಣಿಯಂತಿದೆ...ನನಗೆ ಅದನ್ನು ನೋಡಲು ಆಗಲಿಲ್ಲ. ಮುದ್ದಿಸಲೂ ಮನಸ್ಸಾಗಲಿಲ್ಲ...ನಮ್ಮ ಬೆಕ್ಕು ನಾಯಿ ತರಹ ಇದ್ದರೂ ನಾನು ಎತ್ತಿಕೊಳ್ಳುತ್ತಿದ್ದೆನೇನೋ. ಆದರೆ ಈ ಕುರೂಪಿ ಮಗು?... ರಾತ್ರಿ ನೆನೆಸಿಕೊಂಡರೆ ಚೀರುವಂತಹಾ ಪಿಶಾಚಿಯಂತೆ ಕಂಡಿತು.


ಇಂತಾ ಜೀವಿ ಹುಟ್ಟಿ ದೊಡ್ಡದಾದರೆ ಹೇಗಿರಬಹುದು ಎಂದೆನಿಸಿ ಮೈ ಜುಮ್ಮೆಂದಿತು.


ಹಾಗೂ ಆ ಮಗುವನ್ನು ನನ್ನ ಕೈಗೆ ತುರುಕಿದರು. ಅದರ ಚರ್ಮ ಮುಟ್ಟಲು ಪೇಪರಿನಂತಿದೆ, ಒಣಗಿದೆ. ತಲೆಯಲ್ಲಿ ಕೂದಲಿಲ್ಲ. ಮೈ ತಣ್ಣಗೆ ಕೊರೆಯುತ್ತಿದೆ..ನಾನು ಬೇಡ ಎಂದು ಕಿರುಚಿ ಅಲ್ಲಿಯೇ ಮೂರ್ಛೆ ಹೋದೆ ಎನಿಸುತ್ತಿದೆ. ಹೇಗೋ ಗೊತ್ತಿಲ್ಲ...


ನಾನು ಎದ್ದಾಗ ಅವರೆಲ್ಲಾ ಕಳವಳದಿಂದ ನನ್ನ ಟೇಬಲ್ ಸುತ್ತಲೂ ಇದ್ದರು. ಮತ್ತೆ ಆಪರೇಶನ್ ಥಿಯೇಟರಿಗೆ ಕೊಂಡು ತಂದಿದ್ದರು. ಹತ್ತಿರ ಆ ಭ್ರೂಣ, ಮಕ್ಕಳು ಯಾವುದೂ ಇಲ್ಲ! ಅಬ್ಬಾ ಎಂದು ನಿಟ್ಟುಸಿರಿಟ್ಟೆ.


"ಯಾಕಿಂತಾ ರಾಕ್ಷಸ ಕುಲವನ್ನು ಹುಟ್ಟು ಹಾಕುತ್ತೀರಾ?..."ಎಂದೆ. ಅವರಿಗೆ ಅರ್ಥವೂ ಆಗಲಿಲ್ಲ, ಉತ್ತರವೂ ಇಲ್ಲ.


"ಪ್ರಕೃತಿಗೆ ಮತ್ತೆ ಮತ್ತೆ ವಿರೋಧ ಮಾಡುತ್ತಾ ಹೋಗುತ್ತಿದ್ದೀರಿ... ನಮ್ಮ ಭೂಮಿಯನ್ನು ಈ ಪೀಳಿಗೆಗೆ ಕೊಟ್ಟು ಬಿಡಬೇಕೆಂದು ನೀವೇ ಹೇಗೆ ನಿರ್ಧರಿಸಿದಿರಿ, ಹೇಳಿ"


"ನಮ್ಮ ಅನುಮತಿಯಿಲ್ಲದೇ ನಮ್ಮನ್ನು ಕದ್ದು ತಂದು ಹೀಗೆಲ್ಲಾ ಸಂತಾನೋತ್ಪತ್ತಿ ಕ್ರಿಯೆಗೆ ಸಜ್ಜು ಮಾಡಲು ನೀವು ಯಾರು?...ನಮ್ಮ ಭೂಮಿಯಲ್ಲಿ ಸರಕಾರವಿದೆ, ನಮಗೆ ಕಾನೂನಿದೆ.."ಎಂದು ನಾನೇ ನಂಬದ ಹಲವು ವಿಷಯಗಳನ್ನು ಬಡಬಡಿಸಿದೆ.


"ನೋಡು, ಇದು ಈ ವಿಶ್ವದ ಹಲವು ಗ್ರಹಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರ, ನಮ್ಮಂತಾ ಮುಂದುವರೆದ ಜನಾಂಗ ಈ ನಿರ್ಧಾರ ತೆಗೆದುಕೊಳ್ಳದೇ ಇನ್ನೇನು, 3-ಡಿ ಪ್ರಪಂಚದಲ್ಲಿ ಅಳಿದಳಿದು ಹುಟ್ಟುತ್ತಾ, ಬರುಬರುತ್ತಾ ಹಾಳಾಗಿ ಹೋಗುತ್ತಿರುವ ನಿಮ್ಮವರ ಕೈಯಲ್ಲಿ ಸಾಧ್ಯವೇನು?" ಎಂದಳು ಲೇಡಿ ಸರ್ಜನ್.


"ನೀವೇನು ಇಡೀ ಜಗತ್ತನ್ನು ಭೋಗ್ಯಕ್ಕೆ ತೆಗೆದುಕೊಂಡಿದ್ದೀರಾ?" ಎಂದು ಕುಪಿತಳಾಗಿ ಕೂಗಿದೆ "ನಮ್ಮನ್ನು ಕೇಳದೇ ಕದ್ದು ತರುವುದು ತಪ್ಪಲ್ಲವೇನು?" ಎಂದು ಜಬರಿಸಿದೆ.


"ಅವಳು ಕೊನೆಯಲ್ಲಿ ಹೇಳಿದ್ದು ಇನ್ನೂ ನೆನಪಿದೆ. ಆ ಗಗನನೌಕೆಯ ಬಾಗಿಲ ಬಳಿ ಬಂದು, " ವಿ ಕ್ಯಾನ್, ಸೋ ವಿ ವಿಲ್" ಎಂದು ಅವಳು ಸೊಟ್ಟಗೆ ನಕ್ಕಂತಾಯಿತು...."


ಇಷ್ಟು ಹೇಳಿದ ಭಾನುಮತಿಯವರಿಗೆ ಮತ್ತೆ ಐದು ನಿಮಿಷ ರೆಸ್ಟ್ ಕೊಟ್ಟೆ, ನನ್ನ ತಲೆಯೂ ಧಿಮ್ಮೆನ್ನುತ್ತಿತ್ತು...ನಾನು ಅವಶ್ಯಕ ನೋಟ್ಸ್ ಎಲ್ಲಾ ಮಾಡಿಕೊಂಡೆ.


ಭಾನುಮತಿಗೆ ಮತ್ತೆ ಪ್ರಜ್ಞೆ ಮರಳುವ ಮುನ್ನ ಹೀಗೆ ಅಪೀಲ್ ಮಾಡಿಕೊಂಡರು,


"ನೋಡಿದಿರಾ ಡಾಕ್ಟರ್, ಅವರ ದಾರ್ಷ್ಟ್ಯ? ಕೈಲಾಗತ್ತೆ, ಮಾಡೇ ಮಾಡುತ್ತೇವೆ ಅಂತೆ. ಅವರ ಹತ್ತಿರ ನಮಗಿಂತಾ ಮಿಲಿಯನ್ಸ್ ವರ್ಷಗಟ್ಟಲೆ ಮುಂದುವರೆದ ಟೆಕ್ನಾಲಜಿಯಿದೆ. ಆದರೆ ಅವರ ಬಳಿ ಆರೋಗ್ಯಕರ ಗ್ರಹವಿಲ್ಲ, ಭವಿಷ್ಯದ ಪೀಳಿಗೆಯನ್ನು ತಾವೇ ಹುಟ್ಟಿಸುವ ಶಕ್ತಿಯಿಲ್ಲ... ನಮ್ಮ ಮಾನವ ಸಂತತಿಯನ್ನು ದುರುಪಯೋಗ ಮಾಡಿ ಹೆಚ್ಚೆಚ್ಚು ಪ್ರಬಲ ಸೂಪರ್-ಹ್ಯೂಮನ್ ಜನರನ್ನು ಹೀಗೆ ಕಸಿ ಮಾಡಿ ಕೃತಕವಾಗಿ ಹುಟ್ಟಿಸುತ್ತಾರಂತೆ. ಇನ್ನು ಮುಂದೊಂದು ದಿನ ಭೂಮಿಯನ್ನೇ ಆ ಪೀಳಿಗೆಯ ಜನ ಟೇಕ್ ಓವರ್ ಮಾಡಿ ನಮ್ಮನ್ನು ಇಲ್ಲವಾಗಿಸುತ್ತಾರೆ. ಅವರ ಅತಿಮಾನವ ಶಕ್ತಿಯ ಮುಂದೆ ನಾವು ಬಾಳಲಾಗದು..."


ಇಂತಾ ಮಿಶ್ರ ತಳಿಯ, ಡಬ್ಬಲ್ ಡಿ ಎನ್ ಎ ಇರುವ ಜೀವಿಗಳಿಗೆ ಕೈಮೆರಾ ಜೀವಿಗಳು ಎನ್ನುತ್ತಾರೆ, ಜೈವಿಕ ತಂತ್ರಜ್ಞಾನದಲ್ಲಿ. ಹಿಂದೆ ಮಾನವನೂ ಇಂತಾ ವಿಷಮ ಪ್ರಯೋಗಗಳನ್ನು ಮಾಡಿದ್ದಾನೆ, ಆದರೆ ಅವೆಲ್ಲ ಪ್ರಯೋಗ ಶಾಲೆ ಮಟ್ಟದಲ್ಲಿ ವಿಫಲವಾಗಿ ಬಲವಂತವಾಗಿ ನಿಲ್ಲಿಸಬೇಕಾಗಿ ಬಂದಿದೆ. ಇದನ್ನು ’ಇವರು’ ಮತ್ತೆ ಆರಂಭಿಸಿದ್ದಾರೆಯೆ, ಈ ಬಾರಿ ಯಶಸ್ವಿಯಾದರೆ ಪರಿಣಾಮಗಳು ಊಹಿಸಲೂ ಆಗದಷ್ಟು ಭಯಂಕರ!


ಆಕೆಯ ಮಾತುಗಳ ನನ್ನ ಕಿವಿಯಲ್ಲಿ ಗುಂಯ್ಗುಡಲಾರಂಭಿಸಿದವು.


4


ಇನ್ನೆರಡು ಸಲ ಅವರಿಬರನ್ನೂ ನಾನು ಸ್ಪಷ್ಟೀಕರಣ ಸೆಷನ್ಸಿಗಾಗಿ ಕರೆಯಬೇಕಾಯಿತು. ಒಮ್ಮೆಲೇ ಎಲ್ಲವನ್ನೂ ನೆನೆಸಿಕೊಳ್ಳಲು ಸಾಧ್ಯವೂ ಇಲ್ಲ. ಅವರು ಹೇಳಿದ್ದು:


...ಇಬ್ಬರಿಗೂ ಮೊದಲ ಬಾರಿ ಅಪಹರಣ ಮಾಡಿಬಂದ ಮೇಲೆ ಪರಸ್ಪರ ಅನುಭವಗಳ ನಂಬಿಕೆ ಹುಟ್ಟಲಾರಂಭಿಸಿತಂತೆ. ಎರಡು ಮೂರು ಸಲ ಹೀಗಾದ ಮೇಲೆ ಅವರು ಅನ್ಯರ ಬಳಿ ಪ್ರಸ್ತಾಪಿಸಿದರಂತೆ. ಆದರೆ ಪಾರ್ಟಿಗಳಲ್ಲಿ ಗೆಳೆಯರಲ್ಲಿ ಸಂಕ್ಷಿಪ್ತವಾಗಿ ಹೇಳಿಕೊಂಡರೂ ಯಾರೂ ನಂಬದೇ, ಉಲ್ಟಾ ಇವರನ್ನೇ ಅಪಹಾಸ್ಯ ಮಾಡುತ್ತಿದರಂತೆ.


‘ಇವರಿಬ್ಬರ ಜತೆ ಕುಳಿತರೆ ಸಾಕು, ಎಂತದೋ ಹುಚ್ಚು ಪುರಾಣ ತೆಗೆಯುತ್ತಾರೆ. ನೀವು ತುಂಬಾ ಸೈನ್ಸ್ , ಹಾರರ್ ಫಿಲಂಸ್ ನೋಡಿ, ಕುಡಿದು ಮಲಗುತ್ತೀರಾ?”’ ಎಂದು ಜೋಕ್ ಮಾಡಿಬಿಡುವರಂತೆ.


“ಇದನ್ನೆಲ್ಲಾ ನಾವು ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ, ಡಾಕ್ಟರ್!. ಗೆಳೆಯರೇ ನಂಬದಿದ್ದ ಮೇಲೆ ಸರಕಾರ, ಪೋಲೀಸರು ನಂಬುವರೆ, ನಮ್ಮನ್ನೇ ವಿಚಾರಣೆ ಮಾಡಿ ತೊಂದರೆ ಕೊಟ್ಟಾರು ಎಂದು ಬೆದರಿದೆವು.” ಎಂದರು ದಂಪತಿ. ಇದು ನಂಬುವಂತಾದ್ದೆ!


ನಾನು ಕೆಲವು ಪ್ರಶ್ನೆ ಹಾಕಿದೆ.


"ಅದೇಕೆ ನಿಮ್ಮ ಪತಿಯನ್ನು ಗಂಡು ಸರ್ಜನ್, ನಿಮ್ಮನ್ನು ಹೆಣ್ಣು ಸರ್ಜನ್ ನೋಡಿದರೆಂದು ಗೊತ್ತೆ?"


ಭಾನುಮತಿ ಉತ್ತರಿಸಿದರು, "ಹಾ! ಅದು ಒಮ್ಮೆ ಗಂಡು ಸರ್ಜನ್ ಒಬ್ಬ ಹೆಣ್ಣಿನ ಅಂಡಾಶಯ ಸ್ಯಾಂಪಲ್ ಎಲ್ಲಾ ತಾನೇ ಕಲೆಕ್ಟ್ ಮಾಡಿದ್ದು ಆಕೆಯ ಮನಸ್ಸಿಗೆ ಆಘಾತವಾಗಿದೆ. ಆಕೆಯಲ್ಲಿ ಆತ್ಮಹತ್ಯಾ ಭಾವನೆಗಳನ್ನು ತರಿಸಿ ಆಕೆ ನಿಜಕ್ಕೂ ನಿದ್ರೆ ಗುಳಿಗೆ ಸೇವಿಸಿ ತೀರಿಕೊಂಡಳಂತೆ. ಹಾಗಾದುದನ್ನು ಇವರು ಅಬ್ಸರ್ವ್ ಮಾಡಿದ್ದಾರೆ. ‘ಆಮೇಲೆ ಈ ರೀತಿ ಆರಂಭಿಸಿದೆವು...ನಮ್ಮಲ್ಲಿ ಈ ತರಹ ಭಾವನೆಗಳಿಗೆ ಅವಕಾಶವಿಲ್ಲ, ನಮಗಿದರ ಅರಿವಿರಲಿಲ್ಲ. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ, ಇಂತಾ ಭಾವನಾತ್ಮಕ ಸ್ಪಂದನೆ ಗುಣಗಳುಳ್ಳ ನಿಮ್ಮ ಡಿ ಎನ್ ಎ ಸಿಗುವುದರಿಂದ ಹೊಸ ಪೀಳಿಗೆಗಲ್ಲಿ ಎಲ್ಲವನ್ನೂ ಅಡಕ ಮಾಡಿ ನಿವಾರಿಸುತ್ತೇವೆ’.."ಎಂದರು"


"ಈ ಭಾವನೆಗಳ ಅಭಾವದಿಂದಲೇ ಅವರಿಗೆ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವ ಅಭ್ಯಾಸ, ಶಕ್ತಿ ಹೊರಟು ಹೋಗಿದೆ, ತಾಯ್ತನ ಮರೆತಿದ್ದಾರೆ...ನನ್ನಂತೆ ಹಲವು ತಾಯಂದಿರನ್ನು ಕದ್ದೊಯ್ದು ಮಗು ನೋಡಿಕೊಳ್ಳಿ, ಸ್ಪರ್ಷಿಸಿ, ಮುದ್ದಿಸಿ ಎನ್ನುತ್ತಾರೆ... ಅದು ಮಾನವನಾಗಿ ನಮ್ಮಲ್ಲಿ ಮಾತ್ರ ಕಂಡುಬರುವುದು" ಎಂದು ಭಾನುಮತಿ ದನಿಗೂಡಿಸಿದರು


ಇಷ್ಟಲ್ಲದೇ ‘ಮಾನವ ಜನ್ಮ ದೊಡ್ದದು, ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿದ್ದರೆ? ಎಂದು ನನಗೆ ನೆನಪಿಗೆ ಬಂದಿದ್ದು ಸುಳ್ಳಲ್ಲ.


ಇನ್ನೊಂದು ವಿಷಯ ಗಗನ್ ಹೇಳಿದ್ದೆಂದರೆ- "ಅವರು ನಮ್ಮ ನಾನಾ ದೇಶದ ಜನಾಂಗದವರ ಸ್ಯಾಂಪಲ್ ಮತ್ತು ಹೈಬ್ರಿಡ್ ಕಾರ್ಯ ತಮ್ಮ ಸಂತತಿಗೆ ಮಾಡಲಾರಂಭಿಸಿದ್ದಾರಂತೆ. ಅಂದರೆ ಯುರೋಪಿಯನ್, ಅಂಗ್ಲೋ ಸಾಕ್ಸನ್, ಚೀನೀ, ಆಫ್ರಿಕನ್, ಭಾರತೀಯ, ಅರಬ್ ಹೀಗೆ... ಒಮ್ಮೆ ಹೊಸ ಜನಾಂಗ ಶುರುವಾಯಿತೆಂದರೆ ಅದರಲ್ಲೂ ವೈವಿಧ್ಯತೆ ಇದ್ದರೆ ತಾನೆ ಆಯಾ ದೇಶದ ಹವೆ ಮತ್ತು ಸಂಧರ್ಭಗಳಿಗೆ ಹೊಂದಿಕೊಂಡು ಬಾಳುವುದು?"




ಇವೆಲ್ಲಾ ಎಂತಾ ಭಯಾನಕ ಮತ್ತು ಆತಂಕಕಾರಿ ಭವಿಷ್ಯದ ಸೂಚನೆಯ ಕತೆಯೋ ಎನಿಸಿದರೂ ಅವನ್ನೆಲ್ಲ ದಾಖಲೆ ಮಾಡಲೇಬೇಕಾದ್ದು ನನ್ನ ಕರ್ತವ್ಯವಾಗಿತ್ತು.


5


"ಡಾ. ಸತ್ಯಪಾಲ್ ಹೆಗ್ಡೆ?" ಎಂದು ಮುಂದಿನ ವಾರ ಕೇಂದ್ರದ ಗೃಹ ಸಚಿವಾಲಯದಿಂದ ಕರೆಬಂದಿತು. ನಾನು ಉತ್ತರಿಸಿದೆ.


"ಏನಾಯಿತು ಡಾಕ್ಟರ್?... ಆ ಪೈ ದಂಪತಿಗಳ ಕೇಸು ಪೂರ್ತಿ ವಿಚಾರಿಸಿದಿರಾ?" ಎಂದರು ಸಚಿವರು. ಅವರಿಗೆ ನಡೆದುದನ್ನು ವಿವರಿಸಿ ಮುಂದೆ ಅವರ ಕಚೇರಿಗೆ ರಿಪೋರ್ಟ್ ಕಳಿಸಿಕೊಡುವೆನೆಂದೆ.


"ಡೂ ಯು ಬಿಲೀವ್ ಇಟ್?" ಎಂದರು ಕುತೂಹಲದಿಂದ.


"ಇಟ್ ಬಗ್ಗೆ ಗೊತ್ತಿಲ್ಲ... ಬಟ್ ಐ ಬಿಲೀವ್ ಮೈ ಪೇಷೆಂಟ್ಸ್...ಅವರು ಅಂತಾ ದೊಡ್ಡ ಸುಳ್ಳು ಹೇಳಲು ಯಾವುದೇ ಕಾರಣವೂ ಕಾಣಿಸುತ್ತಿಲ್ಲ" ಎಂದೆ. ಅದು ವಸ್ತುನಿಷ್ಟವಾದ ವಿಚಾರ.


ಇದಾಗಿ ಒಂದು ವಾರಕ್ಕೆ ’ಈ ತರಹದ ಕೇಸುಗಳನ್ನು ಅಮೆರಿಕನ್ ಸರಕಾರದ ಗಮನಕ್ಕೆ ತನ್ನಿ ಗಂಭೀರವಾಗಿ ವಿಜ್ಞಾನಿಗಳ ಜತೆ ಸೇರಿ ಯೋಜನೆ ಮಾಡಿ.., ಹೆಚ್ಚೆಚ್ಚು ಬಲವಾದ ಸಾಕ್ಷ್ಯಗಳು ಬೆಳಕಿಗೆ ಬರುತ್ತಿವೆ. ಎಲ್ಲವನ್ನೂ ತಿಪ್ಪೆ ಸಾರಿಸಿ ತಿರಸ್ಕರಿಸಲಾಗದು” ಎಂಬರ್ಥದಲ್ಲಿ ಬೃಹತ್ ವರದಿ ಬರೆದು ನನ್ನ ಕೇಂದ್ರ ಕಚೇರಿಗೂ, ಭಾರತದ ಗೃಹ ಸಚಿವಾಲಯಕ್ಕೂ ಕಳಿಸಿಕೊಟ್ಟೆ.


ಆ ರಾತ್ರಿ ನಾನು ನನ್ನ ಹೋಟೆಲ್ ರೂಮಿನಲ್ಲಿ ಮಲಗಿದ್ದೆ. ಮಧ್ಯರಾತ್ರಿ 1 ರ ಹೂತ್ತಿಗೆ ನನ್ನ ನೈಟ್ ಲ್ಯಾಂಪ್ ಆರಿತು. ಫ್ಯಾನ್ ನಿಂತುಹೋಯಿತು.


ನನ್ನ ಎದುರಿನ ಕಿಟಕಿಯ ಮೂಲಕ ಯಾರೋ ಒಳಬಂದಂತಾಯಿತು!


(ಮುಗಿಯಿತು)


Rate this content
Log in

Similar kannada story from Horror