Nagesh Kumar CS

Action Crime Thriller

4.1  

Nagesh Kumar CS

Action Crime Thriller

ನಾನವಳಲ್ಲ- ಪತ್ತೇದಾರಿ ಕೋರ್ಟ್ ರೂಂ ಕಥೆ

ನಾನವಳಲ್ಲ- ಪತ್ತೇದಾರಿ ಕೋರ್ಟ್ ರೂಂ ಕಥೆ

58 mins
328


 

ಭಾಗ -1

ನಾನವಳಲ್ಲ!

( ಪ್ರಬಲ್ ಕೋರ್ಟ್ ರೂಮ್ ತನಿಖೆ ಕೇಸು 1)

© ನಾಗೇಶ್ ಕುಮಾರ್ ಸಿಎಸ್

 ಪಾತ್ರಧಾರಿಗಳು:

ಪ್ರಬಲ್ ಮಾನ್ವೀಕರ್ ಕ್ರಿಮಿನಲ್ ಲಾಯರ್

ದಕ್ಷಾ ಶೆಣೈ ಸೆಕ್ರೆಟರಿ

ಪ್ರದೀಪ್ ಧಾವನ್ ಪತ್ತೇದಾರ

ಕೀರ್ತಿ ಶರ್ಮ/ ಶ್ರುತಿ ವರ್ಮಾ ಕಕ್ಷಿದಾರಳು

ಸರಕಾರಿ ವಕೀಲ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಹರನ್

ಐ ಓ ಪೋಲೀಸ್ ಇನ್ಸ್ಪೆಕ್ಟರ್ ರವಿಕುಮಾರ್

ಕರುಣ್ ರಾವ್ / ತಂದೆ ಕಿರಣಶಂಕರ ರಾವ್ ಎಂ ಪಿ


(ಸೂಚನೆ/ ಡಿಸ್ಕ್ಲೇಮರ್: ಅರ್ಲ್ ಸ್ಟಾನ್ಲಿ ಗಾರ್ಡನರ್ ಆಂಗ್ಲ ಲೇಖಕರ- ಫುಟ್ ಲೂಸ್ ಡಾಲ್- ಮೂಲ ಕತೆ ಮಾತ್ರ ಆಧರಿತ. ಆದರೆ ಪೂರ್ಣ ಅನುವಾದವಲ್ಲ. ಕತೆಯ ಓಘದಲ್ಲಿ ಹಲವು ಬದಲಾವಣೆಗಳನ್ನು ಮಾಡಿ ಕನ್ನಡಕ್ಕೆ ಅಳವಡಿಸಿಕೊಳ್ಳಲಾಗಿದೆ

 

1

ಇಸವಿ 1994

~~~~~~~~~~~~

ಬೆಂಗಳೂರು ಹೈದರಾಬಾದ್ ಹೆದ್ದಾರಿ:

ಕೀರ್ತಿ ಶರ್ಮಾಗೆ ಬುದ್ದಿ ಓಡುತ್ತಿಲ್ಲ ಆದರೆ ಅವಳ ಕಾರ್ ವೇಗವಾಗಿ ಓಡುತ್ತಿದೆ.

ಅವಳ ಭವಿಷ್ಯ ಜೀವನದ ಕನಸಿನ ಮಹಲ್ ನಿನ್ನೆ ರಾತ್ರಿ ತಾನೇ ಒಮ್ಮೆಲೇ ಕುಸಿದುಬಿದ್ದು ಅವಳು ಕಂಗಾಲಾಗಿದ್ದಳು.

ಇದ್ದ ಕಡೆ ಇರಲಾರದೇ ಎಲ್ಲಿಗೆ ಹೋಗುತ್ತೇನೆಂಬ ಗೊತ್ತು ಗುರಿಯಿಲ್ಲದೇ ಕಾರಿನಲ್ಲಿ ಹೆದ್ದಾರಿಗೆ ಡ್ರೈವ್ ಮಾಡಿಕೊಂಡು ಬಂದುಬಿಟ್ಟಿದ್ದಳು.

ಯಾವುದೇ ಹೆಣ್ಣಿಗೆ ದೊಡ್ಡ ಆಘಾತವಾಗುವಂತಾ ಘಟನೆಯೊಂದು ನಿನ್ನೆ ರಾತ್ರಿ ಜರುಗಿಹೋಗಿತ್ತು.

"ಕೀರ್ತಿ, ನನ್ನನ್ನು ಮರೆತು ಬಿಡು.. ನನ್ನ ಬಳಿ ಹಣವಿದೆ, ದೂರದೂರಿನಲ್ಲಿ ಲಕ್ಷಾಧಿಪತಿಯೊಬ್ಬರ ಮಗಳು ನನ್ನನ್ನು ಪ್ರೀತಿಸುತ್ತಿದ್ದಾಳೆ... ನಾನು ಅವಳ ಬಳಿ ಹೋಗುತ್ತಿದ್ದೇನೆ , ಬೈ..." ಎಂದಿದ್ದ ಶಕ್ತಿರಾಜ್ ತನ್ನ ಹಾಸ್ಟೆಲಿನ ಲ್ಯಾಂಡ್ ಲೈನಿಗೆ ಕಾಲ್ ಮಾಡಿ.

ಅವರಿಬ್ಬರೂ ಒಂದು ವರ್ಷದಿಂದ ಪ್ರೀತಿಸಿ ಮದುವೆಯಾಗೋಣವೆಂದು ಲೆಕ್ಕ ಹಾಕಿದ್ದರು. ಅವನು ಅವಳ ನೆರೆ ಮನೆಯವ. ಮದುವೆಯ ಡೇಟ್ ಏನಾದರೂ ಹೇಳಿಯಾನೋ ಎಂದು ತರಾತುರಿಯಿಂದ ಕಾಲ್ ತೆಗೆದುಕೊಡಿದ್ದಳು...ಆದರೆ!

ಅವಳು ಅವನ ಸಿಡಿಲು ಬಡಿದಂತೆ ಹೇಳಿದ ಸುದ್ದಿಗೆ ಕಕ್ಕಾಬಿಕ್ಕಿಯಾಗಿ, "ದುಡ್ಡು?..ಎಲ್ಲಿಂದ ಬಂತು ನಿನ್ನ ಹತ್ತಿರ?.. ಇನ್ನೊಬ್ಬ ಹುಡುಗಿ? ಇಂತಾ ಕೆಟ್ಟ ಜೋಕ್ಸ್ ಮಾಡಬೇಡ ನನ್ನ ಹತ್ತಿರ". ಅತ್ತ ಅಟ್ಟಹಾಸದಿಂದ ಗಹಗಹಿಸಿ ನಕ್ಕಿದ್ದ

"ನೀನು ಹುಚ್ಚಿ, ನಾನಲ್ಲ. ನಾನಿದ್ದ ಕಂಪನಿಯಲ್ಲಿ ಹಣದ ಲೆಕ್ಕ ಸಿಗುತ್ತಿಲ್ಲ ಹುಡುಕು ಎಂದು ನನ್ನನ್ನೇ ಆಡಿಟರ್ ಮಾಡಿದ್ದರಲ್ಲವೇ. ಅಕೌಂಟ್ಸ್ ಆಡಿಟ್ ಮಾಡುತ್ತಿದ್ದೆನಲ್ಲವೆ.?. ಅವರೇ ಹುಚ್ಚರು"

"ವಾಟ್?" ಮತ್ತೆ ಕಿವಿಗಳನ್ನು ನಂಬಲಾರದಂತೆ ಪಿಸುಗುಟ್ಟಿದ್ದಳು.

"ಅದು ನನ್ನ ಬಳಿಯೇ ಇತ್ತು...ನನ್ನ ರಹಸ್ಯ ಅಕೌಂಟುಗಳಲ್ಲಿ ಹಣ ಸುರಕ್ಷಿತವಾಗಿರಿಸಲು ಸುಲಭವಾಯಿತು.. ಬೈ, ಕೀರ್ತಿ... ಯಾರಾದರೂ ಮಿಡಲ್ ಕ್ಲಾಸ್ ಹುಡುಗನನ್ನು ಹುಡುಕಿ ಮದುವೆಯಾಗು ನಿನ್ನ ಯೋಗ್ಯತೆಗೆ ತಕ್ಕಂತೆ, ಡೋಂಟ್ ವೈಟ್ ಫಾರ್ ಮಿ..."

"ಯೂ ಚೀಟ್, ಫ್ರಾಡ್...!" ಎಂದು ಅಬ್ಬರಿಸಿದ್ದಳು, ಆದರೆ ಆ ಕಡೆಯಿಂದ ಬರೇ ಖಾಲಿ ಟೋನ್ ಮಾತ್ರ ಕೇಳಿಸುತಿತ್ತು.

ಶಕ್ತಿ...ತನ್ನ ಶಕ್ತಿ, ಹೀಗೆ ಓಡಿಹೋಗಿದ್ದ. ತಂದೆ ತೀರಿದ ಮೇಲೆ ಅನಾಥೆಯಾಗಿ ಬೆಳೆದಿದ್ದ ಕೀರ್ತಿಯ ಭವಿಷ್ಯ ಜೀವನ ಮಾರ್ಗ ಇದ್ದಕ್ಕಿದ್ದಂತೆ ಗಾಡಾಂಧಕಾರದಲ್ಲಿ ಮುಳುಗಿದಂತಾಗಿತ್ತು.

ತನ್ನ ಕೆಲಸಕ್ಕೆ ರಾಜೀನಾಮೆ ಪೋಸ್ಟ್ ಮಾಡಿದಳು. ಹೊಸ ಕೆಲಸದಲ್ಲಿ ಆರು ತಿಂಗಳ ಗಡುವು ಸಹಾ ಮುಗಿದಿರಲಿಲ್ಲ. ಈ ಕೆಲಸ ಈ ಊರು ಸಾಕಾಗಿತ್ತು. ಅವರೂ ಹೆಚ್ಚು ತಲೆ ಕೆಡಿಸಿಕೊಳ್ಳಲಾರಳು, ತನ್ನಂತಾ ಒಬ್ಬ ಸಾಧಾರಣ ಬಿ ಕಾಂ ಮಾಡಿದ ಹೊಸಬಳು ಬಿಟ್ಟು ಹೋದರೆ!

ತಾನು ಸಂಪಾದಿಸಿದ, ಅಳಿದುಳಿದ್ದ ದುಡ್ಡಿನಲ್ಲಿ ಕೊಂಡಿದ್ದ ಸೆಕೆಂಡ್ ಹ್ಯಾಂಡ್ ಜ಼ೆನ್ ಕಾರು ಮಾತ್ರ ಅವಳ ಬಳಿಯಿತ್ತು.

ತನ್ನ ಸೂಟ್ಕೇಸಿನಲ್ಲಿ ಇದ್ದ ಬಟ್ಟೆ ಬರೆ ತುಂಬಿಕೊಂಡು ಲೇಡೀಸ್ ಹಾಸ್ಟೆಲಿಗೆ ತೆರುವುದು ತೆತ್ತು ಹೊರಬಿದ್ದಳು ಸಂಜೆ ಆರಕ್ಕೆ. ಅವಳ ತಲೆಯಲ್ಲಿ ಅನಿಶ್ಚಿತತೆಯ ಬಿರುಗಾಳಿಯೇ ಎದ್ದಿತ್ತು. ಸುಮ್ಮನೆ ಡ್ರೈವ್ ಮಾಡಿಕೊಂಡು ಬೆಂಗಳೂರಿನತ್ತ ಹೋಗುವಾ. ಮುಂದೇನಾಗುತ್ತೋ ಯಾರಿಗೆ ಗೊತ್ತು.. ಭವಿಷ್ಯದ ಬಗ್ಗೆ ಸುಮ್ಮನೆ ಪ್ಲ್ಯಾನ್ ಮಾಡುವುದು ಮೂರ್ಖತನವೇ ಅನಿಸಿತು ಅವಳಿದ್ದ ಮನಃಸ್ಥಿತಿಗೆ.


ಕಾರನ್ನು ವೇಗವಾಗಿ ನಡೆಸುತ್ತಿದ್ದವಳು ಚಿಕ್ಕಬಳ್ಳಾಪುರದ ಬಳಿ ಮುಸ್ಸಂಜೆ ಕತ್ತಲಲ್ಲಿ ದಾರಿದೀಪವಿಲ್ಲದ ಕಾರಣ, ಸ್ವಲ್ಪ ದಾರಿ ತಪ್ಪಿ ನಂದಿ ಬೆಟ್ಟದ ರಸ್ತೆ ಹಿಡಿದುಬಿಟ್ಟು ತನಗೆ ಅನ್ಯಮನಸ್ಕತೆಗೆ ತಾನೇ ಶಪಿಸಿಕೊಂಡು ಮತ್ತೆ ಕೆಳಕ್ಕೆ ಇಳಿದು ಬರುವಾಗ, ಪೆಟ್ರೋಲ್ ಗೇಜ್ ಕಡಿಮೆ ಇಂಧನವಿರುವುದನ್ನು ಸೂಚಿಸುತ್ತಿದ್ದುದು ಗಮನಿಸಿದಳು. ಅಲ್ಲೇ ರಸ್ತೆ ಬದಿಯ ಒಂದು ಪೆಟ್ರೋಲ್ ಬಂಕ್ ಬಳಿ ಕಾರ್ ನಿಲ್ಲಿಸಿದಳು. ಬಂಕಿನ ಹುಡುಗ ಪೆಟ್ರೋಲ್ ತುಂಬಿಸುವಾಗ ಅದೇ ಪೆಟ್ರೋಲ್ ಬಂಕಿನಲ್ಲಿದ್ದ ಒಬ್ಬ ಮೆಕ್ಯಾನಿಕ್ ಅಲ್ಲೇ ಪಕ್ಕದಲ್ಲಿ ನಿಂತಿದ್ದ ಒಂದು ಫಿಯೆಟ್ ಕಾರಿನ ಬಾನೆಟ್ ತೆಗೆದು ಏನೋ ಪರೀಕ್ಷಿಸುತ್ತಿದ್ದುದನ್ನು ಕಂಡಳು. ಅವನ ಪಕ್ಕದಲ್ಲಿ ಒಬ್ಬ ಯುವತಿ ನಿಂತಿದ್ದಾಳೆ, ಬಹುಶಃ: ಆ ಕಾರ್ ಚಾಲಕಿಯಿರಬೇಕು, ಅದನ್ನೇ ಗಮನಿಸುತ್ತಿದ್ದಾಳೆ. ನೋಡಲು ಸುಮಾರು ತನ್ನ ಮೈಕಟ್ಟಿನವಳೇ, 25 ವರ್ಷ ವಯಸ್ಸಿನವಳೇ ಇರಬಹುದು. ಸ್ವಲ್ಪ ಬಾಬ್ ಕಟ್ ಮಾಡಿದಂತಾ ತಲೆಗೂದಲು, ಟ್ರಿಮ್ ಆಗಿ ವೆಸ್ಟರ್ನ್ ಡ್ರೆಸ್ ಹಾಕಿದ್ದಾಳೆ. ಅದೊಂದು ಬಿಟ್ಟರೆ ತನಗೂ ಅವಳಿಗೂ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ ಮೊದಲ ನೋಟಕ್ಕೆ ಎನಿಸಿತು. ಕಾಕತಾಳೀಯವಾಗಿ ಅವಳೂ ಕೀರ್ತಿಯತ್ತ ನೋಡಿದಳು. ಸಪ್ಪಗೆ ನಕ್ಕ ಕೀರ್ತಿ ಬಳಿಗೆ ಧಾವಿಸಿ ಬಂದಳು, ಸ್ವಲ್ಪ ಕಠಿಣ ಮುಖದವಳೋ ಅಥವಾ ಆ ದೃಷ್ಟಿ ಹಾಗಿದೆಯೋ ಆ ಯುವತಿಯದು ಎನಿಸಿತು. "ಹಲೋ... ನೋಡಿ, ನನ್ನ ಕಾರ್ ಕೆಟ್ಟು ಕೂತಿದೆ, ಈ ಹೈ ವೇ ನಲ್ಲಿ...ನೀವೆಲ್ಲಿ ಹೊರಟಿದ್ದೀರಿ?" ಎಂದು ಒಮ್ಮೆಲೇ ಕಿಟಕಿಯ ಬಳಿ ಬಗ್ಗಿ ಕೇಳಿದ್ದಳು ಆಕೆ.

ದಿಡೀರನೇ ಬಂದ ಅಪರಿಚಿತಳ ಪ್ರಶ್ನೆಗೆ ತಬ್ಬಿಬ್ಬಾಗಿ "ನಾನು ಏನಿಲ್ಲ, ಹೀಗೆ ಸುಮ್ಮನೆ ..ಸಿಟಿ ಕಡೆಗೆ" ಎಂದು ಬೆಂಗಳೂರಿನತ್ತ ಸಾಗಿದ್ದ ಕತ್ತಲು ಹಬ್ಬುತ್ತಿದ್ದ ಹೆದ್ದಾರಿಯ ದಿಕ್ಕನ್ನು ಕೈಯಿಂದ ತೋರಿಸಿದ್ದಳು.

"ನನಗೆ ಲಿಫ್ಟ್ ಕೊಡಿ...ಯಲಹಂಕದವರೆಗೂ ಸಾಕು, ಸಿಟಿ ಬೇಡ...ನಮ್ಮಣ್ಣನ ಮನೆಗೆ ಅರ್ಜೆಂಟಾಗಿ ಹೊರಟಿದ್ದೆ...ಪ್ಲೀಸ್!"

ಆಕೆ ಸಡನ್ನಾಗಿ ತಿರುಗಿ ತನ್ನ ಕಾರ್ ಬಳಿ ಹೋದವಳು ಒಂದು ವಿ.ಐ.ಪಿ ಸೂಟ್‌ಕೇಸ್ ಹಿಡಿದುಕೊಂಡು ಬಂದೇಬಿಟ್ಟಳು ಮತ್ತೆ ಕೀರ್ತಿಯ ಕಾರ್ ಬಳಿ. ಅದರ ಮೇಲೆ ಇಂಗ್ಲೀಷಿನಲ್ಲಿ SV ಎಂದು ಬರೆದಿದೆ.

"ಆಹ್...ನಿಮ್ಮ ಹೆಸರೇನು? ಮತ್ತೆ ನಿಮ್ಮ ಕಾರ್?" ಎಂದು ಕೀರ್ತಿ ಸ್ವತಃ ಸಂಕೋಚ ಪಡುತ್ತಾ ಕೇಳಿದಾಗ ಆಕೆ ಉಫ್ಹ್ ಇದೆಲ್ಲಾ ಪುರಾಣ ಬೇಕಾ ಎಂಬಂತೆ ನಿಡುಸುಯ್ದಳು.

"ನಾನು ಶ್ರುತಿ ವರ್ಮಾ ಅಂತಾ...ಈ ಕಾರ್ ಇಲ್ಲೇ ಇರಲಿ.. ಇವತ್ತು ಭಾನುವಾರ, ಸ್ಫೇರ್ಸ್ ಸಿಗಲ್ಲವಂತೆ, ಸಿಟಿಯಿಂದ ತರಬೇಕಂತೆ ಇವನು. ನಾಳೆ ನಾಡಿದ್ದು ರೆಡಿಯಾಗುತ್ತಂತೆ. ನಾನು ಮತ್ತೆ ಬರಬೇಕಾಗುತ್ತೆ" ಎಂದು ಆ ಮೆಕ್ಯಾನಿಕ್ಕಿನತ್ತ ಗಾಳಿಯಲ್ಲಿ ಕೈ ತಿವಿದಳು, ಅದೆಲ್ಲಾ ಅವನ ತಪ್ಪೆಂಬಂತೆ..

ಇವತ್ತು ಭಾನುವಾರ, ಅದೂ ನೆನಪಿಲ್ಲ ತನಗೆ. ಕೀರ್ತಿ ಡ್ರೈವರ್ ಪಕ್ಕದ ಬಾಗಿಲು ತೆರೆದಳು, ಇಲ್ಲದಿದ್ದರೂ ಆ ಯುವತಿ ತಾನೇ ಒಳಗೆ ನುಗ್ಗಿಬಿಡುವಷ್ಟು ಗಡಿಬಿಡಿಯಲ್ಲಿದ್ದಂತೆ ತೋರಿತು.

"ನನ್ನ ಹೆಸರು ಕೀರ್ತಿ ಅಂತಾ...ನಾನು ಬೆಂಗಳೂರಿಗೆ ಶಿಫ್ಟ್ ಆಗಿ ಅಲ್ಲಿ ಕೆಲಸ ಮಾಡುವಾ ಎಂದು ಹೊರಟೆ"

"ಪೆಟ್ರೋಲ್ ಹಾಕಿ ಆಯ್ತು..." ಎಂದು ಹೇಳಿದ ಬಂಕಿನವ ಕಿಟಕಿ ಬಳಿ ಬಗ್ಗಿ ಇವಳ ಹೆಸರಲ್ಲಿ ಬಿಲ್ ಕೊಟ್ಟು, ಇವರತ್ತ ಹಲ್ಲು ಕಿಸಿದ. 5 ರೂ ಹೆಚ್ಚಾಗಿ ಕೊಟ್ಟು ಏರ್ ಚೆಕ್ ಮಾಡಿಸಿಕೊಂಡು ಮತ್ತೆ ಬೆಟ್ಟ ಇಳಿಯುವ ಸಿಟಿ ದಾರಿ ಹಿಡಿದಳು ಕೀರ್ತಿ.

ಸ್ವಲ್ಪ ಹೂತಿನ ನಂತರ ಪಕ್ಕ ಕುಳಿತಿದ್ದ ಶ್ರುತಿ ಎಂಬ ಯುವತಿ ಕೀರ್ತಿಗೆ "ನೀವು ಸುಸ್ತಾದವರಂತೆ ಕಾಣುತ್ತೀರಿ. ಅಳುತ್ತಿದ್ದಂತಿದೆ?" ಕೇಳಿದಳು.

"ಸುಸ್ತೆ? ಜೀವನವೇ ಸಾಕಾಗಿ ಹೋಗಿದೆ ನನಗೆ...ನನ್ನ ಮದುವೆ ಅವಕಾಶ ತಪ್ಪಿ ಹೋಯಿತು...."ಕೀರ್ತಿಯ ಬೇಸತ್ತ ದನಿ ಹೊರಬಿದ್ದಿತ್ತು.

"ಪ್ರಿಯತಮ ಮೋಸ ಮಾಡಿದನೆ?" ಎಂದು ಲಘುವಾಗಿ ಕೇಳಿದಳು ಶ್ರುತಿ. ಅದು ಸರ್ವೇಸಾಮಾನ್ಯ ಎನ್ನುವಂತೆ.

ಕೀರ್ತಿ ಮೌನವಾಗಿ ತಲೆಯಾಡಿಸಿದಳು.

"ಏನೇ ಆಗಲಿ, ಒಬ್ಬ ಯುವಕನಿಗೆ ಮಾರುಹೋಗುವುದು ತಪ್ಪು... ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಈ ಸಲ ನಾನು ಯಾರಿಗೂ ಬಗ್ಗುವುದಿಲ್ಲ...ನೇರ ಬೆಂಗಳೂರಿಗೆ ಹೋಗಿ...ಹೊಸ ಜನ್ಮ ಪಡೆಯುತ್ತೇನೆ ಇವತ್ತು. ಅಲ್ಲಿ ಯಾರೂ ತಿಳಿದಿಲ್ಲ ನನಗೆ!” ಎಂದಳಾಕೆ.

ಕೀರ್ತಿ ಅಚ್ಚರಿಯಿಂದ ನೋಡಿದಳು. "ಮತ್ತೆ ಯಲಹಂಕದಲ್ಲಿ ಅಣ್ಣನ ಮನೆಗೆ ಹೋಗುತ್ತೇನೆ ಎಂದೆಯಲ್ಲಾ ಕಾರು ಹತ್ತುವಾಗ?"

ಆ ಯುವತಿ ಗಹಗಹಿಸಿ ನಕ್ಕಳು. "ನೀನು ಏನು ಹೇಳಿದರೂ ನಂಬುವೆಯಾ? ಎಂದು ನಿನ್ನ ಮುಖ ಚೆಕ್ ಮಾಡಲು ಹಾಗೆ ಹೇಳಿದೆ... ನನಗೆ ಅಣ್ಣನೂ ಇಲ್ಲ, ಯಾರೂ ಇಲ್ಲ ಯಲಹಂಕದಲ್ಲಿ"

"ಓಹ್!" ಕೀರ್ತಿಗೆ ಸ್ವಲ್ಪ ಶಾಕ್ ಆಯಿತು. ಏನು ಈ ಹೆಣ್ಣು ಹೇಳುತ್ತಿರುವುದು ಮತ್ತೆ?

ಅವಳು ಅದನ್ನು ಪೂರ್ತಿ ಅರಗಿಸಿಕೊಳ್ಳುವಷ್ಟರಲ್ಲಿ ಆ ಯುವತಿ ತನ್ನ ವ್ಯಾನಿಟಿ ಬ್ಯಾಗಿನಿಂದ ಒಂದು ಕಪ್ಪನೆಯ ವಸ್ತುವನ್ನು ತೆಗೆದು ಕೀರ್ತಿಯ ಪಕ್ಕೆಗೆ ತಿವಿದಳು. "ನಿಲ್ಲಿಸು ಕಾರ್ ಇಲ್ಲೇ.. ನೌ!" ಸರಕ್ಕನೆ ತಿರುಗಿ ಅತ್ತ ನೋಡಿದ ಕೀರ್ತಿಗೆ ದೊಡ್ಡ ಆಘಾತವೇ ಕಾದಿತ್ತು.

ಅದೊಂದು ಕಪ್ಪನೆಯ ಕೋಲ್ಟ್ 0.38 ರಿವಾಲ್ವರ್..!"

"ಏನೂ...ಯಾಕೆ?" ಗಾಬರಿಯಿಂದ ಹೌ ಹಾರಿ ಕೀರಲು ದನಿಯಲ್ಲಿ ಕೂಗಿದ್ದಳು ಕೀರ್ತಿ.

ಅವಳ ಪಕ್ಕೆಗೆ ರಿವಾಲ್ವರ್ ಸ್ವಲ್ಪ ಜೋರಾಗಿಯೇ ಚುಚ್ಚಿದ್ದರಿಂದ ಕೀರ್ತಿ ಬೆಚ್ಚಿದಳು. ಆಗ ದುರದೃಷ್ಟವಶಾತ್ ಎರಡು ಘಟನೆಗಳಾದವು ಕಾರಿನಲ್ಲಿ.

ಮೊದಲು- ಚಾಲಕಿ ಬೆಚ್ಚಿದ್ದರಿಂದ ಕಾರು ಆಯ ತಪ್ಪಿ ಸ್ಟಿಯರಿಂಗಿನಿಂದ ಅವಳ ಕೈ ಜಾರಿತು.

ಇನ್ನೊಂದು- ಕಾರು ಸರಕ್ಕನೆ ಹೆದ್ದಾರಿ ಬಿಟ್ಟು ಎಡಕ್ಕೆ ಹಳ್ಳದತ್ತ ಸರಿದಂತೆ ಶ್ರುತಿ ಎಂಬ ಆ ಯುವತಿ ಇವಳ ಮೇಲೆ ವಾಲಿ ಬಿದ್ದಳು. ಆಕೆಯೂ ಚೀರುತ್ತಾ ಸ್ಟಿಯರಿಂಗ್ ಸರಿ ಮಾಡಲು ರಿವಾಲ್ವರ್ ಕೈಯಿಂದ ಹಿಡಿಯಲೆತ್ನಿಸಲು ಕಾರು ಆ ಜಗ್ಗಾಟದಲ್ಲಿ ಪೂರ್ತಿ ಬ್ಯಾಲೆನ್ಸ್ ಕಳೆದುಕೊಂಡು ಮುಸ್ಸಂಜೆಯ ಕತ್ತಲಲ್ಲಿ ನಿಜಕ್ಕೂ ಹಳ್ಳ ಹಿಡಿಯಿತು!

ಯದ್ವಾತದ್ವಾ ಓಡುತ್ತಿದ್ದ ಕಾರಿನಲ್ಲಿ ಗಾಬರಿಯಿಂದ ಚೀರಾಡುತ್ತಾ ಇಬ್ಬರೂ ಸ್ಟಿಯರಿಂಗ್ ಹಿಡಿದು ಕಾರಿನ ನಿಯಂತ್ರಣಕ್ಕೆ ಜಗ್ಗಾಡತೊಡಗಿದರು,. ಆ ಗೊಂದಲದಲ್ಲಿ ಶ್ರುತಿ ಹಿಡಿದಿದ್ದ ರಿವಾಲ್ವರ್ ಯಾವಾಗಲೋ ಕಾರಿನ ನೆಲಕ್ಕೆ ಬಿದ್ದುಹೋಗಿತ್ತು. ಪಕ್ಕದ ಬಾಗಿಲನ್ನು ಅರ್ಧ ತೆರೆಯಲು ಹೋದ ಶ್ರುತಿ ರಸ್ತೆಬದಿಯ ಕಲ್ಲು ಬಂಡೆಗೆ ತಲೆ ಚಚ್ಚಿಸಿಕೊಂಡು ರಕ್ತ ಸೋರುವ ತಲೆಹಿಡಿದು ಅಮ್ಮಾ ಎಂದು ಅರಚಿ ಹಾಗೇ ಸೊಟ್ಟಕ್ಕೆ ಬಿದ್ದಳು. ಆದರೆ ಕೀರ್ತಿ ಆ ಕಾರನ್ನು ಯಾವುದೇ ಕಂಟ್ರೋಲಿಗೆ ತರಲು ಅಶಕ್ತಳಾಗಿದ್ದಳು. ಕಾರು ಜೋರಾಗಿ ಮಗ್ಗಲು ಹೊರಳಿಸುತ್ತಾ ರಸ್ತೆ ಬದಿಯ ಕಂದಕದಲ್ಲಿ ಕ್ರೀಚ್ ಎಂಬ ಸದ್ದಿನೊಂದಿಗೆ ದೊಡ್ಡ ಬಂಡೆಕಲ್ಲಿಗೆ ಅಪ್ಪಳಿಸಿ ನಿಂತಿತು

ತಲೆಗೆ ಬಿದ್ದ ಮೂಕಪೆಟ್ಟಿಗೆ ಬೋರೆ ಎದ್ದಿತ್ತು ಕೀರ್ತಿಗೆ. ತಲೆ ಗಿರ್ರೆಂದು ಸುತ್ತಿ ಶಾಕಿನಲ್ಲಿದ್ದಳು ಅವಳು. ಕಣ್ಣುಕತ್ತಲೆ ಬಂದಿತ್ತು.

ಕಷ್ಟಪಟ್ಟು ಕಾರಿನ ಇಗ್ನಿಶನ್ ಕೀ ಆಫ್ ಮಾಡಿ, ಹೆಡ್ ಲೈಟ್ಸ್ ಸಹಾ ಆರಿಸಿ ಕತ್ತಲ್ಲಲಿ ಸ್ವಲ್ಪ ಹೊತ್ತು ತನ್ನ ಸ್ಥಿತಿಯೇನು ಎಂದು ಪರೀಕ್ಷಿಸತೊಡಗಿದಳು.

ಉಲ್ಟಾ ಆಗಿದ್ದ ಕಾರಿನ ಕಿಟಕಿಯನ್ನು ಕಷ್ಟಪಟ್ಟು ಜಜ್ಜಿದಳು, ಗಾಜು ಒಡೆಯಿತು. ಬಾಗಿಲ ಹಿಡಿ ಹಿಡಿದು ಡೋರ್ ತೆರೆದಳು. ಕವಿಯುತ್ತಿದ್ದ ಮುಸ್ಸಂಜೆ ಕತ್ತಲಲ್ಲಿ ಬಂಡೆಗಳ ಮಧ್ಯೆ ಇಳಿದು, ಆಗಲೇ ಒಮ್ಮೆ ಕಾರಿನಲ್ಲಿದ್ದ ಆ ಯುವತಿ ಶ್ರುತಿಯನ್ನು ಕೂಗಿದಳು

“ಶ್ರುತಿ ಎಲ್ಲಿದೀಯಾ?” ಯಾವುದೇ ಉತ್ತರವಿಲ್ಲ , ಕಾರಿನ ಅವಳಿದ್ದ ಭಾಗದಿಂದ!

ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಬೆಂಕಿ ಪೊಟ್ಟಣವಿತ್ತು, ಒಮ್ಮೆ ಕಡ್ಡಿ ಹಚ್ಚಿ ಇಣುಕಿ ನೋಡಿದಳು ಕೀರ್ತಿ,. ತಕ್ಷಣ ಅವಳಿಗೆ ತಲೆ ಸುತ್ತು ಜಾಸ್ತಿಯಾಗಿ ಭಯ ಮತ್ತು ಅಸಹ್ಯಕ್ಕೆ ವಾಂತಿ ಗಂಟಲಲ್ಲೇ ಏರಿದಂತಾಯಿತು.

ಹಾಗೆ ನೋಡಿದರೆ ಆ ಲಿಫ್ಟ್ ಕೇಳಿ ಬಂದಿದ್ದ ಶ್ರುತಿಯ ತಲೆ ಹೊರಕ್ಕೆ ಬಾಗಿಲು ತೆರೆದು ಬಗ್ಗಿದ್ದಾಗ ಬಂಡೆಗೆ ಲಾಟಿಸಿ ಅವಳು ತಲೆ ಅಪ್ಪಚ್ಚಿಯಾಗಿ ತೀವ್ರ ಗಾಯಗಳಿಂದ ಮಿಸುಗಾಡದೇ ಬಿದ್ದಿದ್ದಳು. ಅವಳು ಮರಣ ಹೊಂದಿದ್ದಾಳೆ ಎಂದು ಅವಳ ಪರಿಸ್ಥಿತಿಯೇ ಅನುಮಾನ ಬರದಂತೆ ಘೋಷಿಸಿತ್ತು. ಬೆಂಕಿ ಕಡ್ಡಿಯನ್ನು ದೂರಕ್ಕೆಸೆದು ತನ್ನ ಮುರಿದುಬಿದ್ದಿದ್ದ ಕಾರಿಗೆ ಬೆನ್ನು ಆನಿಸಿ ನಿಂತು ದೊಡ್ಡ ನಿಟ್ಟುಸಿರಿಟ್ಟಳು ಕೀರ್ತಿ. ಅವಳ ತಲೆಯಲ್ಲಿ ಆಯಾಸ, ಶಾಕ್ ಮತ್ತು ಚಿಂತೆಯ ಬಿರುಗಾಳಿಯೇ ಎದ್ದಿದೆ. ತಕ್ಷಣ ಏನೂ ಹೊಳೆಯುತ್ತಿಲ್ಲ

ಮೇಲೆ ಹೆದ್ದಾರಿಯಲ್ಲೊಂದು ಕಾರ್ ಓಡಿದ ಸದ್ದು ಕೇಳಿ ಅರಿವಿಲ್ಲದೇ ಒಮ್ಮೆ ಹೆಲ್ಪ್! ಎಂದು ಕೂಗಿಬಿಟ್ಟಳು. ಆವರಿಸುತ್ತಿದ್ದ ಕತ್ತಲಲ್ಲಿ ಕಾರ್ ವೇಗವಾಗಿ ಸಾಗಿ ಹೋಯಿತು, ನಿಲ್ಲಲಿಲ್ಲ.

ನಿರ್ವಾಹವಿಲ್ಲದೇ ಆತ್ಮವಿಶ್ವಾಸವನ್ನು ಮರಳಿ ಪಡೆದು ಈಗೇನು ಮಾಡಲಿ ಎಂದು ಯೋಚಿಸಿದಳು. ತನಗೆ ಅಲ್ಲಲ್ಲಿ ಮೂಕಪೆಟ್ಟು ಮಾತ್ರ ಬಿದ್ದಿದೆ. ಎಲ್ಲಿಯೂ ದೊಡ್ಡ ಗಾಯವಾಗಿಲ್ಲ. ಎದೆಗುಂಡಿಗೆ ಡವಡವ ಎನ್ನುತ್ತಿದ್ದರೂ ಬುದ್ದಿ ಸ್ವಲ್ಪ ತಿಳಿಯಾಗುತ್ತಿದೆ.

ಮೊದಲಿಗೆ ತಾನು ಹೆದ್ದಾರಿಗೆ ಹತ್ತಿ ಹೋಗಿ ಯಾರಾದರೂ ಕಾರ್, ಲಾರಿಯ ಬಳಿ ಲಿಫ್ಟ್ ಕೇಳಿ ಊರು ತಲುಪಬಹುದು. ಆದರೆ ಅಲ್ಲಿ ಪೋಲೀಸರಿಗಂತೂ ಎಲ್ಲಾ ವರದಿ ಮಾಡಲೇಬೇಕಾದೀತು. ಅದೂ ಏನೆಂದು, ಈ ಯುವತಿ ಯಾರೋ ಏನೋ?...ಸತ್ತು ಬೇರೆ ಹೋಗಿದ್ದಾಳೆ! ನಾನೇ ಕೊಂದೆ ಎಂದಾಗಿಬಿಟ್ಟರೆ?

ಅಬ್ಬಾ!

ಆ ಯುವತಿಯ ಶವವನ್ನು ಕತ್ತಲಲ್ಲಿ ಒಮ್ಮೆ ನೋಡಿದಾಗ ಒಂದು ಯೋಚನೆ ದಿಗ್ಗೆಂದು ಅವಳ ಬುದ್ದಿಗೆ ಹೊಳೆಯಿತು..

ನನ್ನದೇನಿದೆ ಭವಿಷ್ಯ, ನಾನು ಇವಳೇ ಆಗಿ ಬಿಟ್ಟರೆ?... ಅಂದರೆ ಸತ್ತವಳು ನಾನೇ ಆಗಿಬಿಟ್ಟರೆ, ದಾಖಲೆಯಲ್ಲಿ?

ಯಾಕಾಗಬಾರದು ಎನಿಸಿತು ಆ ಅಬಲೆಯ ಮನಸ್ಸಿನಲ್ಲಿ...ಮನಸ್ಸು ಯಾವಾಗಲೂ ಭವಿಷ್ಯಕ್ಕೆ ಸೂಕ್ತವಾದ ಐಡಿಯಾಗಳನ್ನೆ ಕೊಡುತ್ತದೆ ಎಂದೇನೂ ನಿಯಮವಿಲ್ಲವಲ್ಲ? ... ಆ ಕ್ಷಣಕ್ಕೆ ಅವಳಿಗೆ ಏನು ಅನಿಸಿತೋ ಅದೇ ಸರಿ ಎಂದು ಮನ ಒಪ್ಪಿತು.

ಮನಸ್ಸು ಒಂದು ವಿಚಿತ್ರ ಸಾಧನ. ಒಮ್ಮೊಮ್ಮೆ ಏನೂ ಯೋಚಿಸದೇ ಮಂಕಾಗಿಬಿಡುತ್ತದೆ. ಆದರೆ ಅನಿವಾರ್ಯವಾದಾಗ ಸರಸರನೆ ನಾಗಾಲೋಟದಲ್ಲಿ ಕೆಲಸ ಮಾಡುತ್ತದೆ. ಕೀರ್ತಿಗೂ ಹಾಗೇ ಆಯಿತು.

ಒಮ್ಮೆ ಯಾವಾಗ ತಾನು ಆ ಸತ್ತ ಯುವತಿ ಶ್ರುತಿಯಾಗಿಬಿಡಬೇಕು ಎಂದು ಮನ ನಿರ್ಧರಿಸಿತೋ, ಮಿಕ್ಕ ಮುಂದಿನ ಏರ್ಪಾಡುಗಳು ಅವಳಿಗೇ ಹೊಳೆಯುತ್ತಾ ಹೋದವು.

ನಾನು ಆ ಶ್ರುತಿಯ ವ್ಯಾನಿಟಿ ಬ್ಯಾಗ್ ಕಸಿದುಕೊಳ್ಳಬಲ್ಲೆ. ಅದರಲ್ಲಿ ಆಕೆಯ ಏನಾದರೂ ಐ.ಡಿ. ಇದ್ದೀತು. ತನ್ನ ಮುಖಕ್ಕೂ ಅವಳದಕ್ಕೂ ವಿಧಿವಶಾತ್ ಹೋಲಿಕೆಯಿದೆ, ಸ್ವಲ್ಪ ಕೂದಲು ಕಟ್ ಮಾಡಿ ಬ್ಲೀಚ್ ಮಾಡಿ ಹುಬ್ಬು ತೀಡಿ, ಲಿಪ್ ಸ್ಟಿಕ್ ಬದಲಿಸಿದರೆ ಆ ಐಡಿ ಕಾರ್ಡಿನದು ಹಳೇ ಫೋಟೋ ಎಂದು ಯಾರಿಗಾದರೂ ನಂಬಿಸಬಹುದು. ಹೇಗೂ ತನಗೆ ಕೊಲ್ಲಲೂ ಹೇಸದ ಆ ಯುವತಿಯ ಮುಖ ಕೂಡ ಜಜ್ಜಿಹೋಗಿ ಅವಳ ಮುಖವನ್ನು ಗುರುತು ಹಿಡಿಯಲೂ ಯಾರಿಗೂ ಆಗುವುದಿಲ್ಲ.

ಮುಂದೆ ಕೈಬೆರಳು ಅಚ್ಚು ತೆಗೆದುಕೊಳ್ಳುತ್ತಾರೇನೋ? ಅದನ್ನು ಹೆಣದಿಂದ ತೆಗೆದುಕೊಳ್ಳುತ್ತಾರೆಯೇ, ತಾನೊಬ್ಬಳೇ ಕಾರಿನಲ್ಲಿದ್ದುದರಿಂದ ತನ್ನದೇ ಹೆಣ ಅಂದಾಗಿಬಿಟ್ಟರೆ ಅದೆಲ್ಲಾ ತೆಗೆದುಕೊಳ್ಳಲು ಪೋಲಿಸರಿಗೇನು ಬೇಕಿರತ್ತೆ?

ಒಮ್ಮೆ ಹೀಗಾದರೆ... ಅದನ್ನು ಅವರು ಕೀರ್ತಿ ಎಂಬ ಯುವತಿಯ ಶವ ಎಂದು ತಿಳಿದುಕೊಂಡರೆ ಸಾಕು, ತಾನು ಸುಮ್ಮನಿದ್ದುಬಿಡುವೆ. ತಾನು ಶ್ರುತಿಯ ಐಡಿ ತೆಗೆದುಕೊಂಡಿದ್ದರಿಂದ ಅವಳೇ ನಾನು ಎಂದು ಸಾಧಿಸಬಹುದು. ಹಾಗಿಲ್ಲದೇ ಹೋದರೆ, ತಾನು ಪೋಲಿಸರಿಗೆ ನಾನು ಅಫಘಾತವಾಗಿ ಜ್ಞಾಪಕಶಕ್ತಿ ನಾಶವಾಗಿ ತಾನ್ಯಾರು ಎಲ್ಲಿ ಎಂದು ಗೊತ್ತಿಲ್ಲದೇ ಹೆದ್ದಾರಿಯಲ್ಲಿ ಓಡಾಡುತ್ತಿದ್ದೆ ಎಂದು ಕತೆ ಕಟ್ಟಿ ಹೇಳಿ ನಂಬಿಸಬಹುದು. ಅದನ್ನು ರೆಟ್ರೊಗ್ರೇಡ್ ಅಮ್ನಿಸಿಯಾ ಎನ್ನುವುದಿಲ್ಲವೆ ಹಾಗೆ.

ಓಹ್, ಅದೆಲ್ಲಾ ಹಾಗಾಗಲಾರದು.. ಏನೂ ತೊಂದರೆಯಿಲ್ಲ, ಮುಂದುವರಿ! ಎಂದು ಅವಳ ಮನಸ್ಸು ಹಸಿರು ನಿಶಾನೆ ತೋರಿಸಿತು.

ಕತ್ತಲಿನಲ್ಲಿ ಶ್ರುತಿಯ ಶವದ ಬಗ್ಗೆ ಕಣ್ಣು ಹಾಯಿಸದೇ ಅವಳ ವ್ಯಾನಿಟಿ ಬ್ಯಾಗ್ ಮತ್ತು ಅವಳ ಚಿಕ್ಕ ಸೂಟ್ಕೇಸನ್ನು ಕೈತೆಗೆದುಕೊಂಡಳು. ತನ್ನ ಪರ್ಸ್ ಮತ್ತು ಸೂಟ್ಕೇಸನ್ನು ಅಲ್ಲೇ ಬಿಟ್ಟಳು. ಅದರಲ್ಲಿದ್ದ ದುಡ್ಡನ್ನು ಮಾತ್ರ ಹೊಸ ಪರ್ಸಿಗಿಳಿಸಿಕೊಂಡಳು, ಯಾರಿಗೆ ಗೊತ್ತಾಗುವುದು ಯಾರ ಪರ್ಸಿನಲ್ಲಿ ಎಷ್ಟು ದುಡ್ಡಿತ್ತು, ಇಲ್ಲ ಎಂದು? ತನಗಂತೂ ಎಲ್ಲಾ ದುಡ್ಡು ಈಗ ಹತ್ತಿರವಿದ್ದರೆ ಉತ್ತಮ ಎನಿಸಿತು.

ಈಗ ಬುದ್ದಿ ಮತ್ತು ಮನಸ್ಸು ನಿಯಂತ್ರಣಕ್ಕೆ ಬಂದು ನೋವು, ಸಂಕಟ ಎಲ್ಲಾ ಕಡಿಮೆಯಾದ್ದರಿಂದ ಕೀರ್ತಿ ಈ ಬದಲಾವಣೆ ಮಾಡಿಯೇ ಬಿಟ್ಟಳು.

ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಪೊಟ್ಟಣ ಮತ್ತು ತನ್ನ ಪರ್ಸನ್ನು ಡ್ರೈವರ್ ಸೀಟಿಗೆ ಎಸೆದಳು. ಗೀರಿದ ಕಡ್ಡಿಯ ಬೆಂಕಿ ಕೈಸುಡಲು ಅರಿವಾಗಿ ಅಮ್ಮಾ! ಎಂದು ಉದ್ಗರಿಸಿ ಅದನ್ನು ಕಾರಿನ ಟ್ಯಾಂಕಿನತ್ತ ಎಸೆದಳು. ಭಗ್ ಎಂದು ಒಮ್ಮೆ ಜ್ವಾಲೆಗಳು ಹೊರಬರಲು ಬೆದರಿ ಬೆಚ್ಚಿ ಹಿಂದಕ್ಕೆ ಎಡವಿ ಬಿದ್ದೇ ಬಿಟ್ಟಳು ಕೀರ್ತಿ. ತಡಬಡಾಯಿಸಿಕೊಂಡು ಎದ್ದು ಮತ್ತೆ ಧಗ ಧಗ ಉರಿಯುತ್ತಿದ್ದ ಕಾರ್ ಮತ್ತು ಅದರಲ್ಲಿ ವಿಕಾರವಾಗಿ ಬಿದ್ದಿದ್ದ ಶ್ರುತಿಯ ಹೆಣದತ್ತ ನೋಡಲಾಗದೇ ನಡುಗಿ ಬೆನ್ನು ತಿರುಗಿಸಿ ದಿಬ್ಬದ ಕೆಳಗೆ ಓಡಿದಳು. ಹಿಂದಿನ ದಿನದ ಮಳೆಯಿಂದ ಸ್ವಲ್ಪ ಕೊಚ್ಚೆಯಿದ್ದುದರಿಂದ ಎರಡು ಕಡೆ ಮುಗ್ಗುರಿಸಿ ಬಿದ್ದು ಎದ್ದಳು. ಅಯ್ಯೋ. ಕೆಳಗೆ ಯಾವ ರಸ್ತೆಯೂ ಇಲ್ಲ, ಮತ್ತೆ ಹೆದ್ದಾರಿಗೆ ಈ ದಿಬ್ಬ ಹತ್ತಿ ಹೋಗಲೇಬೇಕು ಎಂದು ಅರಿವಾಗಿ ನಿಂತಳು. ಬೆಂಗಳೂರಿಗೆ ಹೇಗೆ ತಲುಪಿದರೂ ಸಾಕು ಎಂದು ಮತ್ತೆ ದೂರದಲ್ಲೆಲ್ಲೋ ದಿಬ್ಬ ಏರಿ ಹೆದ್ದಾರಿ ತಲುಪಿ ಸಿಟಿಗೆ ಹೋಗುತ್ತಿದ್ದ ಬಸ್ ಹಿಡಿದಳು.

( ಮುಂದುವರೆಯುವುದು)

ಭಾಗ -2

2

ಬೆಂಗಳೂರಿನ ಮಲ್ಲೇಶ್ವರಂ ಗಲ್ಲಿಯೊಂದರಲ್ಲಿ ಚಿಕ್ಕ ಪೇಯಿಂಗ್ ಗೆಸ್ಟ್ ರೂಮ್ ಆರಿಸಿಕೊಂಡಳು ಕೀರ್ತಿ. ಎಲ್ಲರಿಗೂ ತಾನು ಶ್ರುತಿ ವರ್ಮಾ ಎಂದೇ ಹೇಳಿಕೊಳ್ಳುತ್ತಿದ್ದಳು. ಶ್ರುತಿಯ ಡಿ ಎಲ್ ನಲ್ಲಿದ್ದ ಮಾಸಿದ ಕಪ್ಪು ಬಿಳುಪು ಚಿತ್ರವನ್ನು ನೋಡಿ ಇದು ಸುಲಭ ಎಂದುಕೊಂಡವಳು ಹತ್ತಿರದ ಪಾರ್ಲರಿನಲ್ಲಿ ಎಲ್ಲಾ ಅದಕ್ಕೆ ತಕ್ಕಂತೆ ಬದಲಿಸಿಕೊಂಡಳು.. ‘ನಾಟ್ ಬ್ಯಾಡ್, ಕೀರ್ತಿ, ಐ ಮೀನ್ ಶ್ರುತಿ’ ಎಂದು ತನಗೇ ತಾನೇ ಕನ್ನಡಿ ನೋಡಿ ಬೆನ್ನು ತಟ್ಟಿಕೊಂಡಳು. ಶ್ರುತಿಯ ಕಣ್ಣುಗಳಿಗೆ ತನ್ನದು ಹೊಂದಿಕೆಯಾಗದೇನೂ ಎನಿಸಿ ಸದಾ ತಂಪು ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದಳು. ಅಬ್ಬಾ ನಾನು ತುಂಬಾ ಎಚ್ಚರ ವಹಿಸುತ್ತಿದ್ದೇನೆ ಎಂದು ಹೆಮ್ಮೆ ಪಟ್ಟುಕೊಳ್ಳುವಳು.

ತನಗಿದ್ದ ಸೆಕ್ರೆಟರಿ, ಕಾಮರ್ಸ್ ಫೀಲ್ಡಿನ ಅನುಭವದಿಂದ ಹತ್ತಿರದಲ್ಲೇ ಚಿಕ್ಕ ಪುಟ್ಟ ಆಫೀಸುಗಳಲ್ಲಿ ಕೆಲಸ ಹುಡುಕಲು ಆರಂಭಿಸಿದಳು. ಇವಳನ್ನು ಟೆಸ್ಟ್ ಮಾಡಿದವರು ತೆಗೆದುಕೊಳ್ಳುವುದಾಗಿ ಹೇಳಿದಾಗ ತನ್ನ ಕೂಡಿಟ್ಟಿದ್ದ ದುಡ್ಡೆಲ್ಲಾ ಖರ್ಚಾಗುವ ಮುನ್ನ ನೌಕರಿ ಸಿಕ್ಕಿಬಿಟ್ಟರೆ ಸಾಕು ಎಂದುಕೊಳ್ಳುವಳು. ಅವಶ್ಯಕತೆಗೆ ಬೇಕಾದ ಬಟ್ಟೆ ಬರೆ ಮಾತ್ರ ಕೊಂಡುಕೊಂಡಳು. ಒಂದು ವೆಸ್ಟರ್ನ್ ಡ್ರೆಸ್ ಮಾತ್ರ ಶ್ರುತಿಯದ್ದು ಹಾಕಿ ನೋಡಿ, ಪರವಾಗಿಲ್ಲ, ಸರಿಯಾಗಿ ಫಿಟ್ ಆಗುತ್ತಲ್ಲ ಎಂದು ಸಂತಸಪಟ್ಟಳು

ಅವಳ ಪರ್ಸ್ ಮತ್ತು ಸೂಟ್‌ಕೇಸಿನಲ್ಲಿ ಇತ್ತೀಚೆಗೆ ಕಂಡ ಕೆಲವು ಪತ್ರಗಳು ಸ್ವಲ್ಪ ಚಿಂತೆಗೀಡು ಮಾಡಿದ್ದವು, ಅವುಗಳಲ್ಲಿ ಏನು ವಿಷಯ ಇದೆಯೋ.. ತಾನು ಶ್ರುತಿ ವರ್ಮಾ ಆದ್ದರಿಂದ ಒಮ್ಮೆ ತೆರೆದು ನೋಡುವುದು ಉಚಿತ ಎನಿಸಿದರೂ ಅದೇಕೋ ಆ ಸತ್ತ ಯುವತಿಯದು ಪರ್ಸನಲ್ ಇದ್ದೀತು, ಬೇಡ ಎಂದು ಸಂಕೋಚ ಪಟ್ಟುಕೊಂಡು ಸುಮ್ಮನಾಗುವಳು. ತಾನು ತನ್ನ ಓಡಿಹೋದ ಪ್ರಿಯತಮ ಶಕ್ತಿರಾಜನ ಬಗ್ಗೆ ಮತ್ತೆ ಯೋಚಿಸದಿರಲು ಪ್ರಯತ್ನಿಸುವಳು. ರಾತ್ರಿ ಆ ನೆನಪು ಮತ್ತು ತನ್ನ ಕಪಟವೇಷದ ಆತಂಕ ಕಾಡಿದಾಗ ಒಮ್ಮೊಮ್ಮೆ ನಿದ್ದೆ ಮಾತ್ರೆ ತೆಗೆದುಕೊಳ್ಳುವಳು.

ದಿನ ಪತ್ರಿಕೆಗಳಲ್ಲಿ ಅಫಘಾತದ ವರದಿಯಂತೂ ಅವಳನಿಸಿಕೆಯಂತೆಯೇ ಇದ್ದವು. ಆದರೆ ಅವಳಿಗೆ ಆತಂಕ ಹುಟ್ಟಿಸಿದ ಸುದ್ದಿಯೂ ಅದರಲ್ಲೇ ಕಾಣಿಸಿಕೊಂಡಿತ್ತು.

ಮೊದಮೊದಲು ಬಂದ ಲೋಕಲ್ ಪತ್ರಿಕೆಗಳ ವರದಿಯಲ್ಲಿ ನಂದಿಬೆಟ್ಟದ ಸಮೀಪ ಕಾರ್ ಉರುಳಿ ಅದರ ಒಡತಿ ಕೀರ್ತಿ ಶರ್ಮಾ ಎಂಬ ಯುವತಿಯ ಸುಟ್ಟ ಹೆಣ ಸಿಕ್ಕಿದೆಯೆಂದು ಪೋಲೀಸ್ ಅಭಿಪ್ರಾಯಪಟ್ಟರು. ಆದರೆ ತನಿಖೆ ಮುಂದುವರೆದಂತೆ ಎಲ್ಲೋ ಏನೋ ಫೌಲ್ ಪ್ಲೇ , ವಂಚನೆ ಮೋಸ ಅಡಗಿದೆ ಎಂಬುದಕ್ಕೆ ಸಾಕ್ಷಿಯಾಗುವಂತೆ ಎರಡು ವರದಿಗಳು ಬಂದವು. ಕೀರ್ತಿ ಶರ್ಮಾ (ಎಂದು ಬಿಲ್ ತೆಗೆದುಕೊಂಡ) ಇದ್ದ ಕಾರಿಗೆ ಇನ್ನೊಬ್ಬ ಯುವತಿ ಹತ್ತಿದ್ದಾಗಿಯೂ, ಅವರಿಬ್ಬರೂ ಅಲ್ಲಿಂದ ಹೊರಟಾಗ ಅದರಲ್ಲಿದ್ದರೆಂದು ಪೆಟ್ರೋಲ್ ಬಂಕಿನಲ್ಲಿ ಇಂಧನ ತುಂಬಿಸಿದ ಹುಡುಗ ಪೋಲೀಸರಿಗೆ ಹೇಳಿದ್ದ, ಅಲ್ಲದೇ ಎರಡನೆಯದಾಗಿ. ಸುಟ್ಟ ಕಾರು ಮತ್ತು ಹೆಣದ ಕಡೆಯಿಂದ ದಿಬ್ಬದ ಕೆಳಕ್ಕೆ ಕಾಲುಗುರುತುಗಳು ಹೆಜ್ಜೆಗಳು ಕೊಚ್ಚೆಯಲ್ಲಿ ಮೂಡಿದ್ದವು. ಹಾಗಾಗಿ ಆ ಕಾರಿಂದ ಯಾರೋ ಓಡಿಹೋಗಿರಬಹುದು ಎಂದ ಇನ್ಸ್ಪೆಕ್ಟರ್ ಆಫ್ ಪೋಲೀಸ್ ರವಿಕುಮಾರ್, ಆ ವ್ಯಕ್ತಿ ಹೆಣ್ಣು ಎಂದು ಹೈ ಹೀಲ್ಡ್ ಶೂಸ್ ಗುರುತಿನಿಂದ ಅನುಮಾನ ಬಂದಿದೆ... ಆಕೆ ಮೊದಲೇ ಕಾರಿನಲ್ಲಿದ್ದರೋ , ಅನಂತರ ಅಫಘಾತವನ್ನು ಬಂದು ನೋಡಿ ಓಡಿಹೋದಳೋ ಈಗಲೇ ಹೇಳಲು ಬರುವುದಿಲ್ಲ ಎಂದು ಆತ ತಿಳಿಸಿದ್ದರು.

ಮೂರನೆಯ ವಿಷಯವಾಗಿ ಕಾರಿನ ಬಳಿ ಒಂದು ಕೋಲ್ಟ್ 0.38 ರಿವಾಲ್ವರ್ ಹಾಳಾಗಿದ್ದರೂ ಸಿಕ್ಕಿದೆಯೆಂದೂ, ಅದರಿಂದ ಪೋಲಿಸರಿಗೆ ಈ ಇಬ್ಬರು ಯುವತಿಯರ ಬಗ್ಗೆ ಅನುಮಾನವಿದ್ದು ಮುಂದಿನ ತನಿಖೆ ನಡೆಸಲಾಗುವುದು ಆದರೆ ಯಾವುದೇ ಸುಳಿವು ಇನ್ನೂ ಸಿಕ್ಕಿಲ್ಲ ಎಂದು ಪೋಲಿಸ್ ಹೇಳಿಕೆ ಪ್ರಕಟವಾಯಿತು. ಸುಟ್ಟ ಹೆಣದ ಶವ ಪರೀಕ್ಷೆಯ ವರದಿ ಬರಲಿದೆ ಎಂದು ಓದಿ ಕೀರ್ತಿ ಬಹಳ ಗಾಬರಿಯಾದಳು. ತಾನು ಮಾಡುತ್ತಿರುವ ಕಪಟವೇಷ ಗೊತ್ತಾಗಿಬಿಟ್ಟರೆ? ಆದರೆ ಹೇಗೆ? ನಾನಲ್ಲ ಎಂದು ಅವರಿಗೇ ಹೇಗೆ ಗೊತ್ತು...ಎಂದು ತಾನೇ ಸಮಾಧಾನ ಪಟ್ಟುಕೊಂಡಳು.

ಆ ಎರಡನೇ ಯುವತಿ ಬಳಸುತ್ತಿದ್ದಳು ಎನ್ನಲಾದ ಪೆಟ್ರೋಲ್ ಬಂಕಿನಲ್ಲಿ ಕೆಟ್ಟು ನಿಂತಿದ್ದ ಕಾರನ್ನು ಪೋಲೀಸ್ ವಶ ಪಡಿಸಿಕೊಂಡಾಗ ಅದರಲ್ಲಿ ಯಾವುದೇ ಗುರುತು ಪತ್ರಗಳು ಸಿಕ್ಕಿಲ್ಲ ಎಂದು ಹೇಳಿದ್ದರು.

ಮಾರನೆಯ ದಿನ ಒಂದು ಚಿಕ್ಕ ಕ್ರೈಮ್ ಪತ್ರಿಕೆಯಲ್ಲಿ ಈ ಕತೆ ಮುಂದುವರೆದಿತ್ತು. ಶವದ ಮರಣೋತ್ತರ ಪರೀಕ್ಷೆಯಿಂದ ಎರಡು ವಿಷಯಗಳು ಹೊರಬಂದಿದ್ದವು. ಕೀರ್ತಿ ಶರ್ಮಾ ಎಂದು ಕರೆಯಲಾದ ಹೆಣ್ಣಿನ ಮರಣ ಬೆಂಕಿ ಹತ್ತಿಕೊಳ್ಳುವುದಕ್ಕೆ ಮುನ್ನವೇ ಆಗಿತ್ತೆಂದೂ ( ತಲೆ ಜಜ್ಜಿಹೋಗಿ), ಮತ್ತು ಆಕೆ ಎರಡು ತಿಂಗಳ ಗರ್ಭಿಣಿಯಾಗಿದ್ದಳೆಂದೂ ತಿಳಿದು ಬಂದಿತ್ತು.

ಇದನ್ನು ಓದುತ್ತಿದ್ದ ಕೀರ್ತಿಯ ಜಂಘಾಬಲವೇ ಉಡುಗಿ ಹೋಯಿತು. 

ಅಯ್ಯೋ, ದೇವರೇ! ಹಾಗಾದರೆ ಆ ಯುವತಿ ಗರ್ಭಿಣಿಯಾಗಿದ್ದಳು, ವಿವಾಹೇತರವೋ ಏನೋ?. ಈಗಂತೂ ಹೇಗೂ ಕೀರ್ತಿ ಶರ್ಮಾ ಗರ್ಬಿಣಿಯಾಗಿದ್ದಳು ಎಂದೇ ದಾಖಲೆ ಬಂದುಬಿಡುತ್ತದೆ. ತಿಳಿಯದೇ ನಾನು ನನ್ನ ಹೆಸರನ್ನು ಒಬ್ಬ ಅಪರಿಚಿತ ಗರ್ಭಿಣಿ ಹೆಣಕ್ಕೆ ಇಟ್ಟಂತಾಯಿತು. ಎಲ್ಲಾ ನನ್ನ ಕರ್ಮ! ಏನೇ ಆಗಲಿ, ತಾನು ಈಗ ಶ್ರುತಿ ವರ್ಮಾ ಎಂದು ಹೇಳಿಕೊಳ್ಳುವುದೇ ಉಚಿತ ಎಂದು ನಿಶ್ಚಯಿಸಿದಳು.

ಆದರೆ ಒಂದು ವಿಷಯ ಅರ್ಥವಾಗಲೇ ಇಲ್ಲ...

ಆ ಯುವತಿ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಳೇಕೆ? ಅವಳೂ ಅಪರಾಧಿಯೆ? ಅವಳು ಯಾರು ಹಾಗಾದರೆ?

ಈಗ ಅದನ್ನು ತಿಳಿಯಲು ಅವಳ ಖಾಸಗಿ ಪತ್ರಗಳನ್ನು ಓದಲೇ ಬೇಕಾಗಿದೆ ಎನಿಸಿ ಆ ಕಡತದ ರಬ್ಬರ್ ಬ್ಯಾಂಡ್ ಬಿಚ್ಚಿದ್ದಳು.

ಅದರಲ್ಲಿ ಬಣ್ಣಬಣ್ಣದ ಕಲರ್ ಕಾಗದದಲ್ಲಿ ಪ್ರೇಮಪತ್ರಗಳು, “ಶ್ರುತಿ ಡಾರ್ಲಿಂಗ್, ಡಿಯರೆಸ್ಟ್” ಎಂದೆಲ್ಲಾ ಕರೆದಿದ್ದ ಪ್ರೇಮಾಸಕ್ತ ಯುವಕನೊಬ್ಬನ ಪತ್ರಗಳು. ತನ್ನ ಭಾವನೆಗಳ ಜತೆ “ನಾವಿಬ್ಬರೂ ಪ್ರೇಮಿಸಿದ್ದರೂ ನನ್ನ ಅಪ್ಪ ನಿನ್ನನ್ನು ಮದುವೆ ಮಾಡಿಕೊಳ್ಳಬೇಡ ಎಂದು ಜಗಳವಾಡುತ್ತಾರೆ” ಎಂದೆಲ್ಲಾ ಒಂದೆರಡು ಪತ್ರಗಳಲ್ಲಿ ಸ್ಪಷ್ಟಮಾಡಿಯೂ ಇದ್ದ. ತನ್ನ ಅಪ್ಪನ ವಿರೋಧದ ಬಗ್ಗೆ ವಿವರವಾಗೇ ಬರೆದಿದ್ದ.

ಕೊನೆಯಲ್ಲಿ “” ಎಂದು ಮಾತ್ರ ಸಹಿ ಹಾಕಿದ್ದಾನೆ. ಅವರಿಬ್ಬರ ಕೋಡ್ ಇರಬಹುದು. ಯಾರೋ ಏನೋ? ಆ ಯುವತಿಯೂ ಆತನಿಂದ ವಂಚಿತೆಯಾಗಿ ಈ ರೀತಿ ವರ್ತಿಸಿ ಅಪರಾಧಿ ಆದಳೋ ಏನೋ! ಒಂದೂ ಗೊತ್ತಾಗುತ್ತಿಲ್ಲ. ತಾನು ಶಕ್ತಿರಾಜನಿಂದ ಮೋಸ ಹೋಗಿದ್ದಕ್ಕಿಂತಲೂ ಈ ಯುವತಿ ಈ ಪ್ರಕರಣದಲ್ಲಿ ಇನ್ನೂ ಸ್ವಲ್ಪ ಮುಂದುವರೆದಿದ್ದಳು ಹಾಗಾದರೆ.

ಇರಲಿ, ಅದನ್ನು ಈಗ ಚಿಂತಿಸಿ ಫಲವಿಲ್ಲ.. ಈಗ ತಾನೇ ಶ್ರುತಿ ವರ್ಮಾ ಆಗಿಹೋಗಿದ್ದೇನೆ, ಮುಂದೆ ಹಾಗೆಯೇ ಡೀಲ್ ಮಾಡಬೇಕು! ಎಂದು ನಿಶ್ಚಯಿಸಿದಳು.

ಸತ್ತ ಯುವತಿಯ ಡಿ ಎಲ್ ನಲ್ಲಿದ್ದ ಸಹಿಯನ್ನು ನೋಡಿ ಅದರಂತೆಯೇ ಪ್ರಾಕ್ಟೀಸ್ ಮಾಡಿದ್ದಳು ಶ್ರುತಿ ವರ್ಮಾ ಎಂಬ ಹಸ್ತಾಕ್ಷರವನ್ನು

ಮುಂದಿನ ಕೆಲ ದಿನದ ದಿನಪತ್ರಿಕೆಗಳಲ್ಲೂ ಆ ತಪ್ಪಿಸಿಕೊಂಡಿರಬಹುದಾದ ಯುವತಿಯನ್ನು ಪೋಲಿಸ್ ಹುಡುಕುತ್ತಿದ್ದಾರೆ ಎಂದೇ ವರದಿಯಾಗುತಿತ್ತು. ಪತ್ರಕರ್ತರು ಬಣ್ಣ ಕಟ್ಟಿದ ಪ್ರಕಾರ ಆ ಯುವತಿಯೇ ಕೀರ್ತಿ ಶರ್ಮಾಳ ಸಾವಿಗೆ ಕಾರಣವೇನೋ ಎಂಬಂತಿತ್ತು. ತಾನೇ ತನ್ನ ಕೊಲೆಯನ್ನು ಮಾಡಿದಂತ ಅಪವಾದ ಬಂದಿದ್ದು ಎಂತಹ ವಿಧಿವಿಲಾಸ ಎಂದು ಒಳಗೊಳಗೇ ಕೀರ್ತಿ ಭಯಪಡುವಳು, ನಂತರ ಸಮಾಧಾನ ಮಾಡಿಕೊಳ್ಳುವಳು.

ಅವಳು ಸಮಾಧಾನ ಮಾಡಿಕೊಳ್ಳಲು ಸಹಾಯವಾಗುವಂತೆ ಅವಳಿಗೆ ನಾಲ್ಕೇ ದಿನಗಳಲ್ಲಿ ಪಿ.ಜಿ.ಯ ಯುವತಿಯೊಬ್ಬಳು ಕೊಟ್ಟ ಟಿಪ್ ನಂತೆ ಮಲ್ಲೇಶ್ವರದ ಶೃಂಗಾರ್ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ ಕನ್ಸಾಲಿಡೇಟೇಡ್ ಮೈನಿಂಗ್ ಲಿ, ಎಂಬ ಸಂಸ್ಥೆಯಲ್ಲಿ ಸಾಕಷ್ಟು ಸಂಬಳ ಬರುವ ಅಕೌಂಟೆಂಟ್ ನೌಕರಿಯೂ ಸಿಕ್ಕಿತು.

ಆಲ್ಲದೇ ತನಗೇನಾದರೂ ಕಾನೂನಾತ್ಮಕ ತೊಂದರೆಯಾದರೆ ಅದೇ ಕಟ್ಟಡದಲ್ಲಿ ದೇಶದ ಹೆಸರಾಂತ ವಕೀಲ ಪ್ರಬಲ್ ಮಾನ್ವೀಕರ್ ಕಚೇರಿಯಿದ್ದುದೂ ಧೈರ್ಯ ತುಂಬಿತ್ತು. ಅವರು ಹಲವಾರು ಕ್ಲಿಷ್ಟ ಕೇಸುಗಳನ್ನು ಬಗೆಹರಿಸಿ ಗೆಲ್ಲಿಸಿದ್ದ ವಕೀಲರು ಎಂದು ಪತ್ರಿಕೆಗಳಲ್ಲಿ ಓದಿದ್ದಳು. ಒಮ್ಮೊಮ್ಮೆ ಆತನ ಆಪ್ತ ಕಾರ್ಯದರ್ಶಿ ದಕ್ಷಾ ಶೆಣೈ ಆಫೀಸಿಗೆ ಹೋಗಿ ಬರುತ್ತಿದ್ದುದನ್ನೂ ಕಾರಿಡಾರಿನಲ್ಲಿ ಗಮನಿಸಿದ್ದಳು.

 


ಅವಳು ಬೆಂಗಳೂರಿನಲ್ಲಿ ನೆಲೆಸಿ ಒಂದು ವಾರದೊಳಗೆ ಒಂದು ಶನಿವಾರ ಬೆಳಿಗ್ಗೆ ಅವಳ ರೂಮಿಗೆ ಯಾರೋ ಅಪರಿಚಿತ ವ್ಯಕ್ತಿ ಹುಡುಕಿಕೊಂಡು ಬಂದಿದ್ದಾರೆಂದು ಪಿ.ಜಿ.ಯ ಮಾಲೀಕಳಾದ ಲಲಿತಮ್ಮ ಕರೆದು ಹೇಳಿದರು.

“ನಿಮ್ಮ ಹೆಸರು ಶ್ರುತಿ ವರ್ಮಾ ತಾನೆ?” ಕೇಳಿದವ ಬಾಗಿಲಿನಲ್ಲಿ ನಿಂತ ಆರಡಿ ಎತ್ತರದ ಗಡಸು ಮುಖಭಾವದ ವ್ಯಕ್ತಿ. ನೀಲಿ ಸೂಟಿನವನ ಮುಖದಲ್ಲಿ ಚಿಕ್ಕ ಹರಿತವಾದ ಆಯುಧದ ಹಳೇ ಗಾಯದ ಗುರುತಿದೆ. ಕಂಗಳು ಮದ್ಯದ ಅಮಲಿನಂತೆ ಕೆಂಪೇರಿದೆ, ಆದರೆ ಚುರುಕಾಗಿ ಇವಳನ್ನೇ ಗಮನಿಸುತ್ತಿವೆ.

ಈಗಾಗಲೇ ಶ್ರುತಿ ಎಂದು ಎಲ್ಲರೂ ಕರೆಯಲು ಶುರು ಮಾಡಿದ್ದರಿಂದ, “ಹೌದು ನಾನೇ ಶ್ರುತಿ" ಎಂದಳು ದೃಢವಾಗಿ. (ಇನ್ನು ಮುಂದೆ ಈಕೆಯನ್ನು ನಾವು ಕೀರ್ತಿ ಎಂದೇ ಕರೆಯೋಣ. ನಿಜವಾದ ’ಶ್ರುತಿ’ ಆ ಸತ್ತ ಯುವತಿಯ ಹೆಸರು ಎಂದು ತಿಳಿಯೋಣ- ಲೇಖಕ)

“ನಾನು ವೀರೇಂದ್ರ ಕಟ್ಟೀಮನಿ ಅಂತಾ... ನಿಮ್ಮ ಬಳಿ ಪರ್ಸನಲ್ ಮಾತಾಡುವುದಿತ್ತು”

ಎದುರಿಗೆ ಬಂದು ಇದ್ದ ಒಂದು ಚೇರಿನಲ್ಲಿ ಕುಳಿತೇಬಿಟ್ಟ ವೀರೇಂದ್ರ.

“ಯಾರು ನೀವು?”

“ನಿಮಗೆ ನಾನು ಗೊತ್ತಿರಲ್ಲ, ನಾನೇ ನಿಮ್ಮನ್ನು ಕಂಡುಹಿಡಿದೆ” ಅವನು ಕಾಲು ಚಾಚಿಕೊಂಡು ಕೋಟ್ ಬಿಚ್ಚಿಟ್ಟ. “ನಾನೊಬ್ಬ ಇನ್ಶೂರೆನ್ಸ್ ಪತ್ತೇದಾರ. ನಿಮ್ಮ ಬಳಿ ಒಂದು ಅಫಘಾತದ ಬಗ್ಗೆ ಮಾಹಿತಿ ಕೇಳುವುದಿತ್ತು!”

“ಅಫಘಾತವೆ?”

”ಹೌದು, ಶ್ರುತಿ ವರ್ಮಾ ಅವರೇ...ಸುಮಾರು ಒಂದು ವಾರದ ಕೆಳಗೆ ಭಾನುವಾರ ನಂದಿಬೆಟ್ಟದ ಬಳಿ ಒಂದು ಕಾರ್ ಉರುಳಿಬಿದ್ದು ಅಫಘಾತವಾಗಿದೆ. ಅದಕ್ಕೆ ಬೆಂಕಿ ಹತ್ತಿಕೊಂಡು ಅದರ ಒಡತಿ ಸಹಾ ಸತ್ತಿದ್ದಾಳೆ. ಆಕೆಯ ಹೆಸರು ಕೀರ್ತಿ ಶರ್ಮಾ!”

ಕೀರ್ತಿ ತಬ್ಬಿಬ್ಬಾದವಳಂತೆ ಮುಖ ಮಾಡಿದಳು. ಇಂತಹಾ ದಿನವೊಂದು ಬಂದೀತೆಂದು ಅವಳು ನಿರೀಕ್ಷಿಸಿ ಯೋಜಿಸಿದ್ದೂ ಉಂಟು.

“ನನಗೆ ನಿಮ್ಮ ಮಾತು ಅರ್ಥವಾಗುತ್ತಿಲ್ಲ. ನನಗೇನು ಸಂಬಂಧ?”

ವೀರೆಂದ್ರ ತಾರಸಿಯತ್ತ ನೋಡುತ್ತಾ ಹೇಳುತ್ತಾ ಹೋದ, “ಈ ಯುವತಿ ಕೀರ್ತಿ ಶರ್ಮಾ ತನ್ನ ಊರಲ್ಲಿ ತನ್ನ ಬಾಯ್ ಫ್ರೆಂಡ್ ಶಕ್ತಿರಾಜ್ ಜತೆ ಸೇರಿ ದೊಡ್ಡ ಹಣವನ್ನು ಮಾಯಮಾಡಿ ಓಡಿ ಹೋಗುತ್ತಿದ್ದಳು ಎಂದು ನನ್ನ ತನಿಖೆ ತಿಳಿಸುತ್ತದೆ. ಅವಳಿಗೂ ಮೋಸ ಮಾಡಿದ ಆತ ಕಾಣೆಯಾದ ಮೇಲೆ ಕೀರ್ತಿ ಶರ್ಮಾ ಆ ಊರನ್ನೇ ಬಿಟ್ಟು ತನ್ನ ಕಾರಲ್ಲಿ ಹೊರಟಿದ್ದಾಳೆ. ಅಫಘಾತವಾಗಿ ಮೃತಳಾದ ಆಕೆ ಗರ್ಭಿಣಿಯೂ ಆಗಿದ್ದಳು ಎನ್ನುತ್ತಾರೆ ಪೋಲೀಸ್”

ಕೀರ್ತಿ ತಡವರಿಸಿದಳು “ನನಗೇಕೆ ಇದನ್ನೆಲ್ಲಾ ಹೇಳುತ್ತಿದ್ದೀರಿ?”

“ಓಹ್, ಪಾಪಾ. ನಿಮಗೇನೂ ಗೊತ್ತಿಲ್ಲ ಅಲ್ಲವೆ?” ಅವನ ದನಿಯಲ್ಲಿ ಅಣಕ ತುಳುಕುತ್ತಿತ್ತು. “ನಾನು ಆ ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ನೋಡಿ ಏನು ಸಿಕ್ಕಿತು...ಕೆಲವೊಮ್ಮೆ ಪೋಲೀಸರು ಗಡಿಬಿಡಿ ಮಾಡಿ ಸರಿಯಾಗಿ ಹುಡುಕುವುದಿಲ್ಲ...” ಎನ್ನುತ್ತಾ ಜೇಬಿನಿಂದ ಒಂದು ನೆಕ್ ಚೈನ್ ತೆಗೆದ. ಅದರ ಪೆಂಡೆಂಟಿನಲ್ಲಿ ಎಸ್ ವಿ ಎಂಬ ಅಕ್ಷರಗಳು ಮೂಡಿಸಿದ್ದರು. “ದಟ್ಸ್ ರೈಟ್.. ಇದು ನಿಮ್ಮ ಚೈನ್ ಮತ್ತು ಎಸ್ ವಿ ಅಂದರೆ ಶ್ರುತಿ ವರ್ಮಾ ಅಲ್ಲವೆ?” ಎಂದಾತ ಅದನ್ನು ಆಕೆಯತ್ತ ನೀಡಿದ.

ಅವಳು ಒಲ್ಲೆನೆಂಬಂತೆ ದೂರ ತಳ್ಳಿದಳು. ಸತ್ತ ಯುವತಿಯ ಕತ್ತಲ್ಲಿದ್ದಿದುದೋ ಏನೋ, ಆಕೆ ಸಾಯುವಾಗ ಹೊರಕ್ಕೆ ಚಿಮ್ಮಿರಬೇಕು. ಇವನಿಗೆ ಸಿಕ್ಕಿದೆ! ಎಂದು ಅರಿತುಕೊಂಡಳು ಕೀರ್ತಿ.

“ನೋಡಿ ಮಿಸ್ಟರ್ ವೀರೇಂದ್ರ, ಇದೆಲ್ಲಾ...”

ಅವನು ತಡೆಯದೇ ಮಾತನಾಡಿದ, “ಅಲ್ಲಿಂದ ಇದೆಲ್ಲಾ ಬಹಳ ಸುಲಭವಾಯಿತು, ಪತ್ತೇದಾರನಾದ ನನಗೆ. ನಾನು ಆ ಪೆಟ್ರೋಲ್ ಬಂಕಿನಲ್ಲಿ ವಿಚಾರಿಸಿದೆ. ಅಲ್ಲಿ ನಿಮ್ಮನ್ನು ಬಹುಶಃ ಕೀರ್ತಿ ಶರ್ಮಾ ಪಿಕ್ ಅಪ್ ಮಾಡಿರಬೇಕು, ನೀವು ಲಿಫ್ಟ್ ಕೇಳಿರಬೇಕು...”

“ಇದೆಲ್ಲಾ ಯಾಕೆ?” ಎಂದಳು ಕೀರ್ತಿ ಅವನ ಮಾತಿನ ಒಳಾರ್ಥ ಗ್ರಹಿಸಲಾಗದೇ.

ಅವನು ಕುಹಕ ನಗೆ ಬೀರಿದ ಗೆದ್ದವನಂತೆ,

“ನನಗನಿಸುತ್ತದೆ.. ಪಿಕ್ ಅಪ್ ಮಾಡಿದ ಮೇಲೆ ನೀವೇ ಡ್ರೈವ್ ಮಾಡುತ್ತಿದ್ದಿರಿ ಆಕೆಯ ಕಾರನ್ನು.. ಡ್ರೈವರ್ ಸೀಟಿನಲ್ಲಿ ಆಕೆಯಿರಲಿಲ್ಲ. ನಿಮ್ಮ ಪಕ್ಕ ಇದ್ದಳು, ಅಲ್ಲವೆ?”

ತಕ್ಷಣ ಏನೂ ಹೇಳಲು ಗೊತ್ತಾಗದೇ, “ಹೌದು ಆಕೆ ಸುಸ್ತಾಗಿದೆ..ಸ್ವಲ್ಪ ನೀನು ಡ್ರೈವ್ ಮಾಡು ಎಂದಳು" ಎಂದು ತೊದಲಿದಳು ಕೀರ್ತಿ. ಸುಳ್ಳಿಗೆ ಸುಳ್ಳು ಪೋಣಿಸುತ್ತಾ ಹೋಗಲೇ ಬೇಕಾಗಿತ್ತು ಅವಳ ಸ್ಥಿತಿ.

ವಿಜಯದ ನಗೆ ಬೀರಿ ಹಲ್ಲುಕಿರಿದ ವೀರೇಂದ್ರ, “ಸರಿ ಮತ್ತೆ... ನನಗೆ ನಿಮ್ಮಿಂದ ನನ್ನ ಕಂಪನಿಗೆ ಒಂದು ಸ್ಟೇಟ್‍ಮೆಂಟ್ ಬೇಕಿದೆ...”

ಅವಳು ಉತ್ತರಿಸಲೇ ಇಲ್ಲ.. ಮುಖವೇ ಪ್ರಶ್ನಾರ್ಥಕ ಚಿನ್ಹೆಯಂತಿತ್ತು.

“ನೋಡಿ, ಶ್ರುತಿ...ಅಪಘಾತವಾದ ಸ್ಥಳದಿಂದ ಗಾಯವಾದ ಪ್ರಯಾಣಿಕರನ್ನು ಅಲ್ಲಿಯೇ ಬಿಟ್ಟು ಹೀಗೆ ಓಡಿ ಬಂದಿರುವುದನ್ನು ಕಾನೂನು ಕರುಣೆಯಿಂದ ನೋಡುವುದಿಲ್ಲ.. ನೀವು ಆ ರೀತಿ ಓಡಿಬಂದೆ ಎಂದು ಹೇಳಿಕೆ ಬರೆದುಕೊಡುವುದು ಒಳ್ಳೆಯದು" ಎಂದು ಉಚಿತ ಸಲಹೆ ಹಂಚುವವನಂತೆ.

“ಓಹ್, ಯೋಚಿಸುವೆ..." ಎಂದಳು ಕೀರ್ತಿ ಧೈರ್ಯ ತಂದುಕೊಳ್ಳುತ್ತಾ. ಇವನ ಇನ್ಶೂರೆನ್ಸ್ ಕಂಪನಿಗೆ ತಾನೇಕೆ ಬರೆದುಕೊಡಬೇಕು. ಇಲ್ಲದಿದ್ದರೆ ಏನು ಮಾಡುತ್ತಾನೆ?...

ಅವನು ಹೇಳುತ್ತಾ ಹೋದ. “ಅದಲ್ಲದೇ ನಾನು ನಿಮ್ಮನ್ನು ಹುಡುಕಲು ಮೊದಲ ಕಾರಣವೆಂದರೆ , ನಾನು ನಿಮ್ಮ ಊರಿನಲ್ಲಿ ನಿಮ್ಮ ಬಗ್ಗೆ ವಿಚಾರಿಸಿದೆ, ನೀವು ನಿಮ್ಮ ಬಳಿ ಕೆಲವು ಖಾಸಗಿ ಪತ್ರಗಳನ್ನಿಟ್ಟುಕೊಂಡಿದ್ದೀರಿ ಎನಿಸುತ್ತಿದೆ. ಅದನ್ನು ಪಡೆಯಲು ಒಬ್ಬ ದೊಡ್ಡ ಮನುಷ್ಯರು ಚೆನ್ನಾಗಿ ದುಡ್ಡು ಖರ್ಚು ಮಾಡಲೂ ರೆಡಿಯಿದ್ದಾರೆ...”

“ಇದ್ಯಾವುದೂ ನನಗರ್ಥವಾಗುತ್ತಿಲ್ಲ...” ಎಂದಳು ಕೀರ್ತಿ ಮೊಂಡಳಂತೆ.

ಮತ್ತೆ ವೀರೇಂದ್ರ ಇದೆಲ್ಲಾ ನಿರೀಕ್ಷಿಸಿದವನಂತೆ ವ್ಯಂಗ್ಯನಗೆ ಬೀರಿದ. “ನಿಮಗೆ ಕರುಣ್ ರಾವ್ ಎಂದರೆ ಎಲ್ಲಾ ನೆನಪಿಗೆ ಬರುತ್ತೇನೋ?”.

“ಇಲ್ಲ”

“ಆದರೆ ನನಗೆ ಗೊತ್ತು, ನಿಮಗೆ ಅವರು ಚೆನ್ನಾಗಿಯೇ ಗೊತ್ತು ಎಂದು.. ಆದ್ದರಿಂದ ಹೀಗೆ ಆಟವಾಡುವುದನ್ನು ನಿಲ್ಲಿಸೋಣ.. ನನಗೆ ಸಮಯ ವ್ಯರ್ಥವಾಗುತ್ತಿದೆ" ಅವನು ಕಠಿಣನಾದ ಎನಿಸಿತು…

“ನಾನು ಇದಕ್ಕೆಲ್ಲಾ ಒಪ್ಪಲೆಬೇಕು ಎಂದರೆ ಸರಿಯಲ್ಲ... ನಾನು..” ಎಂದಳು ಹುಚ್ಚು ಧೈರ್ಯ ತಂದುಕೊಂಡು. ತಾನು ಈತನ ಮುಂದೆ ಸೋಲೊಪ್ಪಿಕೊಳ್ಲಬಾರದು ಎಂಬ ಸ್ವಾಭಿಮಾನ ಮತ್ತು ಭಯ ಅವಳನ್ನು ತಡೆಯುತ್ತಿದೆ.

“ನೋಡಿ, ಕೊನೆಯ ಬಾರಿಗೆ ಹೇಳುತ್ತಿದ್ದೇನೆ...”ಎಂದು ಬುಸುಗುಡುತ್ತಾ ಎದ್ದ ವೀರೇಂದ್ರ. "ನನ್ನ ತಾಳ್ಮೆ ಪರೀಕ್ಷಿಸಬೇಡಿ.. ನನಗೆ ನೀವು ಒಂದು ಸ್ಟೇಟ್‌ಮೆಂಟ್ ಮತ್ತು ನಿಮ್ಮ ಬಳಿಯಿರುವ ಆ ಪತ್ರಗಳನ್ನು ಕೊಡಲೇಬೇಕು. ಇವತ್ತು ರಾತ್ರಿ 7.00ಕ್ಕೆ ಮತ್ತೆ ಬರುತ್ತೇನೆ ಇಲ್ಲಿಗೆ.. ನೀವು ಈ ನಾಟಕ ಬಿಟ್ಟು ಅವನ್ನು ಕೊಟ್ಟಿರೋ ಸಮ ಇಲ್ಲವೇ ನಾನೇ ನಿಮ್ಮ ಬಗ್ಗೆ ಪೋಲೀಸಿಗೆ ದೂರು ಕೊಡುತ್ತೇನೆ" ಎಂದು ಎದ್ದವನೇ ದುಡುದುಡನೇ ಹೊರಟುಹೋದ.

ಅವನು ಹೋದ ನಂತರ ಒಮ್ಮೆ ತಲೆ ಚಚ್ಚಿಕೊಂಡು ಅಳು ಬಂದು ಬಿಕ್ಕಿದಳು ಕೀರ್ತಿ. ಎಂತಾ ಫಜೀತಿಗೆ ಸಿಕ್ಕಿಹಾಕಿಕೊಂಡೆನಪ್ಪಾ...?

ಹಾಗಾದರೆ ಈ ಮೃತಳಾದ ಯುವತಿ ಶ್ರುತಿಯ ಲವರ್ "" ಅಂದರೆ ಕರುಣ್ ರಾವ್ ಇರಬೇಕು... ಅವನ ಹೆಸರು ಎಲ್ಲಿ ಕೇಳಿದ್ದೆ? ಯಾವುದೋ ದೊಡ್ಡ ಎಂ.ಪಿ ಯ ಮಗ.. ಹೌದು, ಕಿರಣ್‌ಶಂಕರ್ ರಾವ್ ಎಂಬ ಸಂಸತ್ ಸದಸ್ಯ ಮತ್ತು ದೊಡ್ಡ ಉದ್ಯಮಿಯ ಮಗ ಎಂದು ಟಿವಿಯಲ್ಲಿ, ಪೇಪರಿನಲ್ಲಿ ಓದಿದ್ದೆ.

ಅಂತಹವನಿಗೆ ಈ ಶ್ರುತಿಯಂತಾ ಗರ್ಲ್ ಫ್ರೆಂಡ್?... ಯಾವ ಹುತ್ತದಲ್ಲಿ ಯಾವ ಹಾವೋ?

ಅದತ್ತ ಇರಲಿ...

ಈಗಲೇ ಪ್ರಬಲ್ ಮಾನ್ವೀಕರ್ ಎಂಬ ಆ ವಕೀಲರನ್ನು ಈಗಲೇ ನಾನು ಸಂಪರ್ಕಿಸಿದರೆ ಒಳ್ಳೆಯದೇನೋ ಎಂದುಕೊಂಡವಳು ಆತ ಕಚೇರಿಯಲ್ಲಿದ್ದಾನೋ ಇಲ್ಲವೋ ಎಂದು ವಿಚಾರಿಸದೇ ಅವರ ಕಚೇರಿಯತ್ತ ಹೊರಟುಬಿಟ್ಟಳು.

4

ದಕ್ಷಾ ಶೆಣೈ ಪ್ರಬಲ್ ಮಾನ್ವೀಕರರ ಚೇಂಬರಿಗೆ ಎಂದಿನಂತೆ ಬಾಗಿಲು ತಟ್ಟಿ ತೆರೆದು ಒಳಬಂದು ಘೋಷಿಸಿದಳು."ಚೀಫ್, ಒಬ್ಬ ಯುವತಿ ನಿಮ್ಮನ್ನು ನೋಡಲು ಕಾಯುತ್ತಿದ್ದಾಳೆ. ನಾನು ಹೇಳಿದೆ ನೀವಿವತ್ತು ಬಹಳ ಬಿಝಿ ಎಂದು.. ಆದರೂ ಕಾಯುತ್ತೇನೆ ಎಂದು ಅಲ್ಲೇ ಕುಳಿತಿದ್ದಾಳೆ"

ಪ್ರಬಲ್ ಮಾನ್ವೀಕರ್ ತಲೆಯೆತ್ತಲಿಲ್ಲ ಓದುತ್ತಿದ್ದ ಫೈಲಿಂದ. ಪ್ರಬಲ್‍ಗೆ ಈ ರೀತಿಯ ಕಕ್ಷಿದಾದರು ಬಂದು ಕೂರುವುದು , ಸೆಕ್ರೆಟರಿ ಬಂದು ಹೇಳುವುದೂ ಹೊಸದೇನಲ್ಲ. ಅದೂ ತಾನು ಬಹಳ ಬಿಝಿಯಿದ್ದ ದಿನ ಯಾರಾದರೂ ಬಂದೇ ಬರುತ್ತಾರೆ. ತನ್ನ ಅದೃಷ್ಟ!

"ಮತ್ತೆ ಏನಂತೆ ಪ್ರಾಬ್ಲಮ್?" ಪ್ರಬಲ್ ಗೆ ದಕ್ಷಾ ಅದೆಲ್ಲಾ ಕೇಳಿರುತ್ತಾಳೆ ಎಂದು ಗೊತ್ತು.

ಆದರೆ ದಕ್ಷಾ ಭುಜ ಕುಣಿಸಿದಳು, "ದೊಡ್ಡ ಕತೆಯಂತೆ, ಮತ್ತೆ ಇಲ್ಲೇ ಪಕ್ಕದ ಕಂಪನಿ ಕನ್ಸಾಲಿಡೇಟೆಡ್ ನಲ್ಲಿ ಹೊಸದಾಗಿ ಸೇರಿದ್ದೇನೆ.. ಹೇಳಲು ಸಮಯ ಬೇಕು ಎಂದು ಕೇಳಿದಳು"

"ಹೆಸರು?"

"ಶ್ರುತಿ ವರ್ಮಾ"

ಫೈಲಿಂದ ತಲೆಯೆತ್ತಿ ಸೆಕ್ರೆಟರಿಯತ್ತ ನೋಡಿದ ಪ್ರಬಲ್, 29 ವರ್ಷ ವಯಸ್ಸಿನ 5"8" ಎತ್ತರದ ದುಂಡು ಮುಖದ ಅಂದಗಾತಿ ದಕ್ಷಾ ಶೆಣೈ. ನೀಟಾಗಿ ಡ್ರೆಸ್ ಮಾಡಿಕೊಳ್ಳುತ್ತಾಳೆ. ಮಾಡರ್ನ್ ದಿರುಸಾದರೂ ಮೈ ಮಾಟ ಪ್ರದರ್ಶನವಿಲ್ಲದ ರೀತಿ. ಬಾಬ್ ಕಟ್ ಮಾಡಿದ್ದ ತಲೆಗೂದಲು ಹೊರಗಿನ ಬಿಸಿಲಿನಲ್ಲಿ ಮಿಂಚಿತು. 8 ವರ್ಷದಿಂದ ಅವನ ಆಪ್ತ ಕಾರ್ಯದರ್ಶಿ, ಎಂತೆಂತಾ ಕೇಸುಗಳಲ್ಲಿಯೂ, ಎಂತೆಂತಾ ಸಮಯದಲ್ಲಿಯೂ ನಂಬಿಕಾರ್ಹ ವ್ಯಕ್ತಿಯಾಗಿ ಜತೆಯಿದ್ದವಳು. ಇಬ್ಬರಿಗೂ ಸಮಯದ ಗಡುವೇ ಇಲ್ಲ ಆಫೀಸ್ ಕೆಲಸ ಎಂದರೆ.

"ಆಕೆಯನ್ನು ಕಳಿಸು ಒಳಗೆ, ನೋಡುವೆ" ಎಂದ ಪ್ರಬಲ್.

"ಓಕೆ, ಚೀಫ್"

ಒಳಬಂದ ಕೀರ್ತಿ ಮೊದಲ ಸಲ ಪ್ರಬಲನತ್ತ ನೋಡಿದಳು.

ಪಾಲಿಶ್ ಹಚ್ಚಿದ ಮಹಾಗೊನಿ ಮೇಜಿನ ಹಿಂದೆ ಎದ್ದು ನಿಂತ ಕರಿ ಮಿಶ್ರಿತ ಗ್ರೇ ಸೂಟಿನ ವ್ಯಕ್ತಿ ಆರಡಿಯಾದರೂ ಇದ್ದಾನು. 32 ವರ್ಷದವನಿರಬಹುದು, ಗುಂಗುರು ತಲೆಗೂದಲನ್ನು ಹಿಂದಕ್ಕೆ ಬಾಚಿದ್ದಾನೆ. ಕಪ್ಪು ಕಂಗಳಲ್ಲಿ ಚಾಣಾಕ್ಷತೆ ಮತ್ತು ಜ್ಞಾನದ ಹೊಳಪಿದೆ .ಮಂದಹಾಸವೂ ಇದೆ. ಸ್ಪುರದ್ರೂಪಿಯೇ ಅನ್ನಲಡ್ದಿಯಿಲ್ಲ.

"ಗುಡ್ ಮಾರ್ನಿಂಗ್, ಪ್ಲೀಸ್ ಬನ್ನಿ ಮಿಸ್ ಶ್ರುತಿ, " ಎಂದ ಅವನ ಅವನ ದನಿಯಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ. ಕೆಲವೊಮ್ಮೆ ಕೆಲ ಡಾಕ್ಟರುಗಳನ್ನು ಕಂಡೊಡನೆ ಸಕಾರಾತ್ಮಕ ಭಾವನೆ ಬರುವುದು, ಹಾಗೇ ಇದೆ ಅವಳಿಗಾದ ಪರಿಚಯ ಸಹಾ.

(ತಾನು ಸತ್ಯವಾಗಿ ಕೀರ್ತಿ ಶರ್ಮಾ ಎಂಬುದನ್ನು ಮುಚ್ಚಿಟ್ಟು ತನ್ನ ಹೆಸರೇ ಈ ಶ್ರುತಿ ವರ್ಮಾ ಎಂದು ವಕೀಲರಿಗೆ ಹೇಳಲು ನಿರ್ಧರಿಸಿ ಬಂದಿದ್ದಳು). ನಾನು ನಿಜ ಹೇಳುವುದರಿಂದ ಆಗುವ ಪ್ರಯೋಜನವಾದರೂ ಏನು? ತನ್ನ ಕೇಸ್ ತೆಗೆದುಕೊಳ್ಳಲು ಇವರು ನಿರಾಕರಿಸಿದರೆ? ಎಂದು ಯೋಚಿಸಿದ್ದಳು. ಇದು ಆಕೆಯ ದೊಡ್ಡ ಬ್ಲಂಡರ್ ಏನೋ, ಅದನ್ನು ಸಮಯ ಮಾತ್ರ ನಿರ್ಧರಿಸುವುದಿತ್ತು.

"ಗುಡ್ ಮಾರ್ನಿಂಗ್ ಸರ್" ಎಂದು ಮುಗುಳ್ನಕ್ಕು ಅವನು ತೋರಿಸಿದ ಎದುರಿನ ಚೇರಲ್ಲಿ ಕುಳಿತಳು.

ಮುಂದಿನ ಅರ್ಧಗಂಟೆ ಕಾಲ:- ತಾನು ಶ್ರುತಿ ವರ್ಮಾ ಎಂದೂ, ಕೀರ್ತಿ ಶರ್ಮಾ ಎಂಬ ಯುವತಿಯ ಕಾರಿನಲ್ಲಿ ಲಿಫ್ಟ್ ತೆಗೆದುಕೊಂಡು ಹೋಗುತ್ತಿದ್ದೆವು, ಆಗ ದಾರಿಯಲ್ಲಿ ಅಪಘಾತವಾಗಿ ತಾನು ಬದುಕುಳಿದು ಆಕೆ ಸತ್ತಳೆಂದೂ, ತಾನು ಒಬ್ಬಳೇ ಈ ಊರಿಗೆ ಬಂದು ನೆಲೆಸಿದೆನೆಂದೂ ವಿವರಿಸಿದಳು. ಆದರೆ. ಇವತ್ತು ಒಬ್ಬ ಪತ್ತೆದಾರ ವೀರೇಂದ್ರ ಕಟ್ಟೀಮನಿ ಎಂಬವನು ಬಂದು ತನ್ನನ್ನೂ ಬೆದರಿಸಿದನೆಂದೂ, ತನ್ನ ಬಳಿಯಿದ್ದ ಕೆಲವು ಪತ್ರಗಳನ್ನೂ ಡಿಮ್ಯಾಂಡ್ ಮಾಡಿ ಬ್ಲ್ಯಾಕ್ ಮೈಲ್ ಮಾಡುತ್ತಿದ್ದಾನೆಂದೂ ಹೇಳಿದಳು.

"ಈಗ ಸ್ವಲ್ಪ ಸ್ಪಷ್ಟವಾಗಿ ಹೇಳಿ..." ಅದುವರೆಗೂ ಮಧ್ಯೆ ಮಾತಾಡದೇ ತಾಳ್ಮೆಯಿಂದ ಕೇಳುತ್ತಿದ್ದ ಪ್ರಬಲ್ ನೋಟ್ಸ್ ಮಾಡಿಕೊಳ್ಳುವುದನ್ನು ನಿಲ್ಲಿಸಿ ತಲೆಯೆತ್ತಿ ಕೇಳಿದನು. "ಆ ಕಾರು ಬ್ಯಾಲೆನ್ಸ್ ತಪ್ಪಿ ಪಕ್ಕಕ್ಕೆ ಹೊರಳಿ ಕಂದಕಕ್ಕೆ ಬಿತ್ತು. ನೀವು ಬಾಗಿಲಿಂದ ಹೊರಕ್ಕೆ ಬಿದ್ದಿರಿ,. ಕಾರಿಗೆ ಬೆಂಕಿ ಹತ್ತಿಕೊಂಡಿತು.. ಆಮೇಲೆ?"

"ನನಗೆ ಪ್ರಜ್ಞೆ ಹೋಯಿತು.. ನಾನು ಬದುಕುಳಿದಿದ್ದೇ ಹೆಚ್ಚು" ಇಷ್ಟಂತೂ ಅವಳ ಪಾಲಿಗೆ ಸತ್ಯವಾಗಿತ್ತು.

"ಆಮೇಲೆ?"

"ಅವಳು ಸತ್ತುಹೋಗಿದ್ದಳು...ನಾನು ನನ್ನ ಪರ್ಸ್ ಮತ್ತು ಬ್ಯಾಗ್ ತೆಗೆದುಕೊಂಡು ಅಲ್ಲಿಂದ ಹೆದ್ದಾರಿಗೆ ಬಂದು ಲಿಫ್ಟ್ ಪಡೆದು ಈ ಊರಿಗೆ ತಲುಪಿದೆ"

ಪ್ರಬಲ್ ನಿಟ್ಟುಸಿರಿಟ್ಟನು "ಅಫಘಾತವಾದಾಗ ಯಾರು ಕಾರು ಡ್ರೈವ್ ಮಾಡುತ್ತಿದ್ದಿರಿ?" ಅವನ ಚುರುಕಾದ ಪ್ರಶ್ನೆ ಅವಳನ್ನು ಜಾಗ್ರತಗೊಳಿಸಿತು.

"ನಾನೇ" ಪ್ರಬಲ್ ಸುಮ್ಮನೇ ನೋಡುತ್ತಿದ್ದುದರಿಂದ ಮುಂದುವರೆಸಿದಳು."ಅಂದರೆ ಕೀರ್ತಿ ಶರ್ಮಾ ‘ನನಗೆ ಸುಸ್ತಾಗಿದೆ, ಡ್ರೈವ್ ಮಾಡುತ್ತೀಯಾ?’ ಎಂದಾಗ ನಾನು ಒಪ್ಪಿದೆ"

ಅದನ್ನು ಬರೆದುಕೊಂಡ ಪ್ರಬಲ್.

ಅಷ್ಟರಲ್ಲಿ ದಕ್ಷಾ ಒಳಬಂದಳು ಒಂದು ದಿನಪತ್ರಿಕೆ ವರದಿಯೊಂದಿಗೆ. "ಚೀಫ್, ಇಲ್ಲಿ ನೋಡಿ. ಇವರ ಕೇಸಿಗೆ ಸಂಬಂಧ ಪಟ್ಟ ಪೋಲಿಸ್ ವರದಿ."

ಅದನ್ನು ತೆಗೆದುಕೊಂಡು ಪ್ರಬಲ್ ಜೋರಾಗಿ ಓದತೊಡಗಿದನು,

"ಕೀರ್ತಿ ಶರ್ಮಾ ಮತ್ತು ಆಕೆ ಮದುವೆಯಾಗಬೇಕಿದ್ದ ಶಕ್ತಿರಾಜ್ ಇಬ್ಬರೂ ಕಾಣೆಯಾಗಿದ್ದಾರೆ. ಹಣ ದುರ್ವ್ಯವಹಾರದ ವಂಚನೆ ಕೇಸು ಈ ಇಬ್ಬರಿಗೂ ಅನ್ವಯವಾಗಬಹುದು, ಆದರೆ ಇನ್ನೂ ಸ್ಪಷ್ಟವಿಲ್ಲ. ಅಫಘಾತ ನೆಡೆದಾಗ ಆಕೆ ಗರ್ಭಿಣಿಯಾಗಿದ್ದಳು...ಇತ್ಯಾದಿ ಇತ್ಯಾದಿ..."

ಕೊನೆಯ ಸಾಲು ಕೇಳಿ ಕೀರ್ತಿ ಮನದಲ್ಲೇ ಹುಳಿ ಹಿಂಡಿದಂತಾಯಿತು. ಮತ್ತೆ ಮತ್ತೆ ತನಗೆ ಆ ಯುವತಿಯ ಕಳಂಕ... ನುಂಗುವಂತಿಲ್ಲ, ಉಗುಳುವಂತೆಯೂ ಇಲ್ಲ ಈ ರಹಸ್ಯ...ಈಗ ಇಲ್ಲಿಯೂ ಸಹಾ!

ಓದಿ ಮುಗಿಸಿ ಪ್ರಬಲ್ ತಲೆಯೆತ್ತಿದ,

"ಕೀರ್ತಿ ಶರ್ಮಾ ನೋಡಲು ಹೇಗಿದ್ದಳು?" ಪ್ರಬಲ್ ಮತ್ತೆ ಅವಳನ್ನು ಚಕಿತಗೊಳಿಸಿದ್ದ. ಅಬ್ಬಾ!

 "ಸುಮಾರು ನನ್ನಷ್ಟು ಎತ್ತರ, ಸ್ವಲ್ಪ ಕೂದಲು ಬ್ರೌನ್ ಬಣ್ಣ ಇದ್ದೀತೇನೋ, ಕನ್ನಡಕ ಹಾಕುತ್ತಿರಲಿಲ್ಲ...ನನಗೆ ಸರಿಯಾಗಿ ಹೇಳಲು ತೋಚುತ್ತಿಲ್ಲ, ಸರ್.. ನಾನು ಗಮನ ಹರಿಸಲಿಲ್ಲ ಆಕೆಯ ಮುಖದತ್ತ.."ಎಂದು ತಡೆತಡೆದು ಹೇಳಿದಳು ಕೀರ್ತಿ.

"ಅಪಘಾತವನ್ನು ಯಾರಿಗೂ ರಿಪೋರ್ಟ್ ಮಾಡದೇ ನೀವು ಓಡಿಬಂದ ಕಾರಣ ನಿಮ್ಮನ್ನು ಆಕೆಯ ಸಾವಿಗೆ ಜವಾಬ್ದಾರಳನ್ನಾಗಿಸುತ್ತಾರೆ ಎಂದೇ?" ಎಂದ ಪ್ರಬಲ್ ಪೆನ್ನು ನೋಟ್ ಪ್ಯಾಡಿನ ಮೇಲೆ ಓಡುತ್ತಿದೆ.

"ಸ್ವಲ್ಪ ಹೌದು" ನಾಲಗೆಯಿಂದ ತುಟಿ ಸವರಿಕೊಂಡಳು "ಅಲ್ಲದೇ ನನ್ನ ಹೆಸರು ಪೋಲಿಸ್ ಮತ್ತು ಪೇಪರಿನಲ್ಲಿ ಬರಬಾರದು ಎಂದು ಮುಖ್ಯ ಕಾರಣ. ನೋಡಿ, ನಾನು ಊರು ಬಿಟ್ಟು ಬಂದಿದ್ದು ನನ್ನ ಪರ್ಸನಲ್ ಕಾರಣಗಳಿಂದ.. ಆದರೆ ನಾನೇನೂ ಅಪರಾಧಿಯಲ್ಲ"

"ಹಾಗಾದರೆ ನಾನೇನು ಮಾಡಲಿ ಹೇಳಿ?" ಪ್ರಬಲ್ ಹುಬ್ಬೇರಿಸಿದನು.

"ಮಿಸ್ಟರ್ ಮಾನ್ವೀಕರ್, ಮತ್ತೆ ಆ ವೀರೇಂದ್ರ..."

"ಪ್ರಬಲ್ ಅನ್ನಿ ಸಾಕು"

"ಓಕೇ, ಪ್ರಬಲ್ ಅವರೇ...ಇವತ್ತು ವೀರೇಂದ್ರ ಕಟ್ಟೀಮನಿ ನನ್ನನ್ನು ಸಂಜೆ 7ಕ್ಕೆ ಭೇಟಿಯಾಗಿ ಸ್ಟೇಟ್‌ಮೆಂಟ್ ಮತ್ತು ನನ್ನ ಬಳಿ ಇಲ್ಲದ ಕಾಗದ ಪತ್ರಗಳನ್ನು ಕೊಡು ಎಂದು ಬಲವಂತ ಮಾಡಿ ಕೇಳುತ್ತಿದ್ದಾನೆ. ನನಗೆ ಭಯವಾಗುತ್ತಿದೆ. ನನ್ನನ್ನು ರಕ್ಷಿಸಿ" ಅವಳ ಭಯವಿಹ್ವಲ ಮುಖ ನೋಡಿ ಪ್ರಬಲ್ ನಿಶ್ಚಯಿಸಿದನು

"ಡನ್, ನಿಮ್ಮ ಕೇಸು ತೆಗೆದುಕೊಳ್ಳುತ್ತೇನೆ ಅದುವರೆಗೂ" ಎಂದನು ಲೀಲಾಜಾಲವಾಗಿ ಪ್ರಬಲ್. "ನೀವೇನೂ ಯೋಚಿಸಬೇಡಿ. ಈಗ ನನ್ನನ್ನು ನಿಮ್ಮ ಲಾಯರ್ ಎಂದು ತೆಗೆದುಕೊಂಡಿದ್ದೀರಿ. ಅವರ ಬಳಿಯೇ ಮಾತಾಡು ಎಂದು ಅವನಿಗೆ ತಿರುಗಿಸಿ ಹೇಳಿ ಸುಮ್ಮನಾಗಿಬಿಡಿ"

"ಆದರೆ ಒಂದು ತೊಂದರೆಯಿದೆ... ನಿಮ್ಮ ಫೀಸ್ ಕೊಡಲು ನನಗಾಗುತ್ತೋ ಇಲ್ಲವೋ?" ಎಂದಳು ಅವನ ವಿಶಾಲ ಆಫೀಸನ್ನು ದಿಟ್ಟಿಸುತ್ತಾ.

ಪ್ರಬಲ್ ಮುಗುಳನಕ್ಕನು " ನಿಮ್ಮ ಪರ್ಸಿನಲ್ಲಿ ಚಿಲ್ಲರೆ ನಾಣ್ಯಗಳು ಎಷ್ಟಿವೆ? ಎಣಿಸಿ"

ಅವಳು ಪರ್ಸ್ ತೆರೆದು ಎಣಿಸಿ ತಲೆಯೆತ್ತಿದಳು "ಸರ್, ಮೂರು ರೂಪಾಯಿ ಚಿಲ್ಲರೆ ಕಾಯಿನ್ಸ್ ಇದೆ..ಅದೂ..." ಸಂಕೋಚದಿಂದ ದನಿ ಕುಗ್ಗಿತು. "ನನ್ನ ಬಳಿ ಮನೆಯಲ್ಲಿ ಇನ್ನೂ ಸ್ವಲ್ಪ ದುಡ್ದಿದೆ, ಹಾ, ಕೆಲಸಕ್ಕೂ ಸೇರಿದ್ದೇನೆ, ಸಂಬಳವಿನ್ನೂ ಬಂದಿಲ್ಲ..."

ಪ್ರಬಲ್ ಕೈಚಾಚಿದ ಅವಳ ಮೂರು ರೂ ನಾಣ್ಯಗಳತ್ತ. "ಪರವಾಗಿಲ್ಲ ಮೊದಲಿಗೆ ಇಷ್ಟೇ ಸಾಕು. ನಾನು ನಿಮ್ಮ ಲಾಯರ್ ಆದೆ ಎಂದುಕೊಳ್ಳಿ"

"ಅಯ್ಯೋ,,, ಥ್ಯಾಂಕ್ಸ್ ಪ್ರಬಲ್ ಸರ್... ನನಗೆ ಹಣ ಬಂದಾಗ..." ಎಂದಳು ನಾಚಿ ಅಷ್ಟನ್ನೇ ಕೊಡುತ್ತಾ.

"...ಕೊಡುವಿರಂತೆ... ಕೇಳಿ ತೆಗೆದುಕೊಳ್ಳುತ್ತೇನೆ" ಎಂದು ಅವಳ ಕೈಕುಲುಕಿ ಎದ್ದುನಿಂತ ಪ್ರಬಲ್. "ಇನ್ನು ಆ ವೀರೇಂದ್ರನ ಯೋಚನೆ ನನಗೆ ಬಿಡಿ..ನಾನು ಹ್ಯಾಂಡಲ್ ಮಾಡುತ್ತೇನೆ ಅವನನ್ನು...ನಿಮ್ಮ ಹೆಸರು ವಿಳಾಸ ಎಲ್ಲಾ ಫಾರ್ಮಿನಲ್ಲಿ ಭರ್ತಿ ಮಾಡಿ ಹೊರಡಿ, ನಮ್ಮ ದಾಖಲೆಗಾಗಿ.."

"ಆಗಲೇ ಮಾಡಿದ್ದೇನೆ ಸರ್"

"ಮುಖ್ಯವಾದುದಿದ್ದರೆ ಮಾತ್ರ ನಿಮಗೆ ರಿಫೋರ್ಟ್ ಮಾಡುತ್ತೇನೆ.. ಹೋಗಿ ಬನ್ನಿ" ಎಂದು ಅವಳನ್ನು ಬೀಳ್ಕೊಟ್ಟ ಪ್ರಬಲ್.

ಅವಳು ನಿರ್ಗಮಿಸುತ್ತಿದ್ದಂತೆಯೇ ಸೆಕ್ರೆಟರಿ ದಕ್ಷಾ ಪ್ರತ್ಯಕ್ಷಳಾದಳು

"ಈ ಚಿಲ್ಲರೆ ಕಾಯಿನ್ಸ್ ನಮ್ಮ ಕ್ಯಾಶ್ ಬಾಕ್ಸ್‌ಗೆ ಹಾಕಿಕೋ" ಎಂದು ನಾಣ್ಯಗಳನ್ನು ಕೊಟ್ಟ ಪ್ರಬಲ್.

ಅವಳು ಅವನ ಮುಖವನ್ನೇ ಗಮನಿಸುತ್ತಾ " ಈ ಕೇಸನ್ನು ತೆಗೆದುಕೊಂಡ ಉದ್ದೇಶ? ಅವಳಿಗೆ ಪೋಲಿಸಿಗೆ ರಿಪೋರ್ಟ್ ಮಾಡು ಎಂದು ಹೇಳಲಿಲ್ಲವೇಕೆ?"

ಪ್ರಬಲ್ ಅವಳು ಕೇಳೇ ಕೇಳುವಳೆಂದು ತಿಳಿದಿದ್ದವನಂತೆ ನಕ್ಕನು, "ನೋಡು..ದಕ್ಷಾ, ನೀನು ನಿನ್ನ ಕಾರಿನಲ್ಲಿ ಒಬ್ಬರಿಗೆ ಲಿಫ್ಟ್ ಕೊಟ್ಟೆ ಎಂದುಕೋ. ಅವರು ಹತ್ತಿದ ಹತ್ತೇ ನಿಮಿಷದಲ್ಲಿ ಅವರ ಕೈಗೇ ವೀಲ್ ಕೊಟ್ಟುಬಿಡುವೆಯಾ ,. ಡ್ರೈವ್ ಮಾಡು ಎಂದು?"

ದಕ್ಷಾ ತಲೆಯಾಡಿಸಿದಳು." ಖಂಡಿತಾ ಇಲ್ಲ"

ಪ್ರಬಲ್ ಅವಳತ್ತ ಅರ್ಥವಾಯಿತೆ ಎಂಬ ನೋಟ ಬೀರಿದ, "ಮತ್ತೆ ಕೀರ್ತಿ ಶರ್ಮಾ ಇವಳಿಗೆ ಡ್ರೈವ್ ಮಾಡಲು ಬಿಟ್ಟುಬಿಡುತ್ತಾಳಾ? ಹಾಗಂದರೆ ನಮ್ಮ ಶ್ರುತಿ ವರ್ಮಾ ನಮಗೆ ನಿಜ ಹೇಳಿಲ್ಲ ಎಂದಾಯಿತು. ಯಾಕೆ ನನಗೆ ಈ ಬಗ್ಗೆ ಸುಳ್ಳು ಹೇಳಿದಳು ಗೊತ್ತಿಲ್ಲ. ಅವಳೇನೋ ದೊಡ್ಡ ಅಪಾಯದಲ್ಲಿ ಸಿಲುಕಿದ್ದಾಳೆ ಎಂದು ಅವಳ ಹಾವ-ಭಾವ ನೋಡಿದಾಗ ನನಗನಿಸಿತು. ಈಗಲೇ ನಾನು ಏನೂ ಹಿನ್ನೆಲೆ ತಿಳಿಯದೇ ಪೋಲಿಸ್ ಬಳಿ ಹೋಗು ಎಂದರೆ ಇನ್ನೂ ಹೆಚ್ಚಿನ ಅಪಾಯಕ್ಕೇ ಸಿಕ್ಕುಬೀಳುವಳು"

"ಮತ್ತೆ ಸುಳ್ಳು ಹೇಳಿದ್ದಳಲ್ಲಾ?" ಅದಕ್ಕೆ ಏನೂ ಪರಿಹಾರ ಎಂಬಂತೆ ಕೇಳಿದಳು.

"ಅದಕ್ಕೆ ಈ ಮೂರು ರೂ. ಫೀಸ್ ಎಂದು ಸುಮ್ಮನೆ ತೆಗೆದುಕೊಂಡಿದ್ದು. ಈಗ ನಾನು ಅದನ್ನು ಪತ್ತೆ ಮಾಡದೇ ಬಿಡಲಾರೆ!" ಎಂದು ಮುಗಿಸಿ ಪ್ರಬಲ್ ಮತ್ತೆ ತನ್ನ ನೋಟ್ಸ್ ಓದಲು ಪ್ರಾರಂಭಿಸಲು ದಕ್ಷಾ "ಹ್ಮ್ಮ್!"ಎಂದು ನಿಡುಸುಯ್ದು ಹೊರಗೆ ಹೋದಳು.


ಭಾಗ 3

5

ಇತ್ತ ಹೊರಗಡೆ ಟೆಲಿಫೋನ್ ಬೂತಿನಲ್ಲಿ ವೀರೇಂದ್ರ ಕಟ್ಟೀಮನಿ ಸಂಸತ್ ಸದಸ್ಯ ಕಿರಣ್ ಶಂಕರ್ ರಾವ್ ಎಂಬವರಿಗೆ ಕಾಲ್ ಮಾಡುತ್ತಿದ್ದ, " ಸರ್, ಆಕೆ ಮಲ್ಲೇಶ್ವರಂನಲ್ಲಿದ್ದಾಳೆ . ವೈಯಾಲಿಕಾವಲ್ 2 ನೆ ಕ್ರಾಸ್ ಗಲ್ಲಿಯಲ್ಲಿ. ಲಲಿತಾ ಎಂಬವರ ಪಿಜಿ ಯಲ್ಲಿ. ನಾನು ಕೇಳಿದ್ದೇನೆ ಅವಳ ಬಳಿಯಿರುವ ನಿಮ್ಮ ಮಗನ ಆತಂಕಕಾರಿ ಪತ್ರಗಳನ್ನು ಕೊಡು ಎಂದು.. ಇವತ್ತು 7 ಗಂಟೆಗೆ ಹೋಗಿ ಕೇಳುತ್ತೇನೆ.. ನೀವು ಚಿಂತಿಸಬೇಡಿ"

"ಓಹ್ ಹಾಗೇನು? ಓಕೆ.. ವೈಯಾಲಿಕಾವಲ್ 2 ನೆ ಕ್ರಾಸ್...ಹೂಂ" ಆತ ಸಹಾ ನೋಟ್ಸ್ ಮಾಡಿಕೊಂಡಂತೆ ಕೇಳಿಸಿತು."ಇವತ್ತು ಸಂಜೆ ಒಳಗೇ ಬೆಂಗಳೂರಿಗೆ ಬರುತ್ತೇನೆ.. ಏನೇ ಆಗಲಿ ನನ್ನ ಹೆಸರು ಹೊರಬರಬಾರದು ಮಾಧ್ಯಮಗಳಿಗೆ , ನನ್ನ ಮಗನ ಪತ್ರಗಳು ನನಗೆ ಬೇಕು... ಅಷ್ಟು ಮಾಡು, ಸಾಕು"

ಅಬ್ಬಾ, ಎಲೆಕ್ಷನ್ ಬಂದಿದೆ ಹತ್ತಿರ...ಹಾಗಾಗಿ ಇವರಿಗೆ ಮಗ ಬರೆದ ತಮ್ಮ ಬಗ್ಗೆಯ ದೂರುಗಳೆಲ್ಲಾ ಮುಚ್ಚಿ ಹೋಗಬೇಕು, ವಿರೋಧ ಪಕ್ಷದ ಅಭ್ಯರ್ಥಿಗೆ ಸಿಕ್ಕರೆ ದೊಡ್ಡ ವಿವಾದವಾಗುವುದು, ಚುನಾವಣೆಯಲ್ಲಿ ಸೋಲಬಹುದು. ಹಾಗಾಗಿ ಈತನಿಂದ ತಾನು ಇನ್ನು ಹೆಚ್ಚಿನ ದುಡ್ಡು ಪೀಕಿಸಬಹುದು ಕೊನೆಯಲ್ಲಿ ಎಂದು ವೀರೇಂದ್ರ ಹುಳಿನಗೆ ನಕ್ಕನು.

ಸಂಜೆ 7 ರ ಸಮಯದಲ್ಲಿ ವೈಯಾಲಿಕಾವಲ್ಲಿನ ಲಲಿತ ಪಿ.ಜಿ ನಲ್ಲಿ ತನ್ನ ಕೋಣೆಯಲ್ಲಿ ಕುಳಿತಿದ್ದ ಕೀರ್ತಿಗೆ ಇದ್ದಕ್ಕಿದ್ದಂತೆ ಹೊರ ವೆರಾಂಡಕ್ಕೆ ಯಾರೋ ಬಂದು ಬಾಗಿಲು ತೆರೆದಂತಾಯಿತು. ಯಾರೋ ವೆರಾಂಡದ ದೀಪ ಆರಿಸಿದರು. ಅವನು ಬರುವ ಸಮಯ, ದೀಪ ಯಾಕೆ ಆರಿಸಿದ ಎನ್ನುತ್ತಾ ದಡಕ್ಕನೆ ಎದ್ದು ಹೊರಟವಳು ರಕ್ಷಣೆಗಾಗಿರಲಿ ಯಾರಾದರೂ ಕಳ್ಳ ಬಂದಿದ್ದರೆ ಎಂದು ಕೈಯಲ್ಲಿ ಐಸ್ ಪಿಕ್ ( ಐಸ್ ಒಡೆಯುವ ಚೂಪಾದ ಚಾಕು) ತೆಗೆದುಕೊಂಡು ಕಾಲಿಟ್ಟಳು.

"ಲಲಿತಮ್ಮಾ, ನೀವಾ?" ಎಂದಳು. ಸದ್ದಿಲ್ಲ.

"ವೀರೇಂದ್ರ?" ಎಂದು ಮೆಲ್ಲಗೆ ಕರೆದಳು. ನಿಶ್ಯಬ್ದವೇ ಸ್ವಾಗತಿಸಿತು. ಹಾಲಿನ ಸೋಫಾ ದಾಟಿ ಮುಂಬಾಗಿಲ ಬಳಿ ಬರಬೇಕು, ದಿಗ್ಗನೆ ಯಾರೋ ಕತ್ತಲಿನಲ್ಲಿ ಎದ್ದು ಎದುರಿಗೆ ನುಗ್ಗಿದರು. ಆಕೆ ಅವನನ್ನು ಹಿಡಿದಳು. ತಕ್ಷಣ ಆತ ಅವನನ್ನು ನೂಕಿದನು. ಕಿಟ್ಟನೆ ಕಿರುಚುತ್ತಾ ತನ್ನ ಕೈಯಲ್ಲಿದ್ದ ಐಸ್ ಪಿಕ್ ಚಾಕುವನ್ನು ಬೀಸಿದಳು ಕೀರ್ತಿ. ಅದು ಚಕ್ಕನೆ ಎಲ್ಲಿಗೋ ಬಡಿಯಿತು!

"ಹಾ!" ಎಂದು ನೋವಿಂದ ಚೀರಿದ ಕತ್ತಲಿನಲ್ಲಿದ್ದ ಆಗಂತುಕ ವ್ಯಕ್ತಿ! ದಡದಡನೆ ಹೊರಕ್ಕೆ ಓಡಿಹೋದ..

ಅವಳು ಎದೆ ನಡುಗುತ್ತಾ ಎದ್ದು ದೀಪ ಹಾಕಿದಳು. ಯಾರೂ ಇಲ್ಲ, ಓಡಿಹೋದ ನಂತರ ಬಾಗಿಲು ತೆರೆದಿದೆ. ಆದರೆ ಅವಳ ಐಸ್ ಪಿಕ್ ಚಾಕು ಅಲ್ಲಿ ಬಿದ್ದಿಲ್ಲ.. ಹಾಗೇ ಅವನು ಚುಚ್ಚಿಕೊಂಡಂತೆಯೆ ಓಡಿಹೋದನೆ , ತಿಳಿದಿಲ್ಲ.!

6

ಸುಮಾರು ರಾತ್ರಿ 7.30 ರ ಸಮಯದಲ್ಲಿ ಪ್ರಬಲ್ ಮಾನ್ವೀಕರ್ ಇನ್ನೂ ಕಛೇರಿಯಲ್ಲೇ ಯಾವುದೋ ಕೇಸ್ ಫೈಲ್ ಓದುತ್ತಿರುವಾಗ, ಅವನ ಡೆಸ್ಕ್ ಫೋನಿನಲ್ಲಿ ಕರೆ ಬಂದಿತು.

ಅದು ವೀರೇಂದ್ರ ಕಟ್ಟೀಮನಿಯದಾಗಿತ್ತು:

"ನಿಮ್ಮ ಕ್ಲಯೆಂಟ್ ಅಂದರೆ ಕಕ್ಷಿದಾರಳಾದ ಶ್ರುತಿ ವರ್ಮಾ ನನಗೆ ಅಟ್ಯಾಕ್ ಮಾಡಿದ್ದಾರೆ. ಐಸ್ ಪಿಕ್ ಚಾಕುವಿನಿಂದ ಅವರ ಮನೆಯಲ್ಲಿ ಚುಚ್ಚಿ ಓಡಿಸಿದ್ದಾರೆ. ಜೀವಾಪಾಯವಾಗುವಂತಾ ಗಾಯ... ನೀವು ಇದರ ಪರಿಹಾರ ಹೇಳಿ ಈಗ"

ಪ್ರಬಲ್ ಕಂಗಳು ಕಿರಿದಾದವು "ನೀವೆಲ್ಲಿದ್ದೀರಾ ಈಗ?"

"ಮನೆಯಲ್ಲಿ.." ಎಂದು ತನ್ನ ಅಡ್ರೆಸ್ ಹೇಳಿದ ವೀರೇಂದ್ರ.

"ನೀವಲ್ಲೇ ಇರಿ,. ನಾನೇ ಆದಷ್ಟು ಬೇಗ ಬರುತ್ತೇನೆ"

ಅವನು ಫೋನಿಟ್ಟು ಹೊರಡುತ್ತಿರಲು ದಕ್ಷಾ ಅಲ್ಲಿಗೆ ಬಂದಳು," ಈಗೆ ಎಲ್ಲಿಗೆ ಹೊರಟಿರಿ ನೀವು?"

ಕೋಟ್ ಧರಿಸಿ ಬ್ರೀಫ್ ಕೇಸ್ ಹಿಡಿದುಕೊಂಡು ನುಡಿದನು, "ನಮ್ಮ ಕಕ್ಷಿದಾರ ಶ್ರುತಿಗೆ ಡ್ರೈವಿಂಗ್ ಮಾತ್ರವಲ್ಲ, ಚಾಕು ಬೀಸಲು ಸಹಾ ಬರುತ್ತದೆ ಎಂದು ವೀರೇಂದ್ರ ಹೇಳಿದ... ಅವನ ಮನೆಗೂ ಹೋಗಬೇಕು "

" ಓಹ್, ನಾನೂ ಬರಲೆ?"

"ಬೇಡ, ಮನೆಗೆ ಹೋಗು, ನಾನು ಕಾಲ್ ಮಾಡಿ ಹೇಳುತ್ತೇನೆ... ನಾನು ಮೊದಲು ಶ್ರುತಿಯನ್ನು ಅವಳ ಪಿಜಿಯಲ್ಲಿ ಭೇಟಿ ಮಾಡಿ ಹೋಗುತ್ತೇನೆ. ಆಗ ಸ್ಪಷ್ಟವಾಗುತ್ತದೆ ಏನು ನಡೆಯಿತೆಂದು."

 ಮಲ್ಲೇಶ್ವರದ ಏರಿಯಾದಲ್ಲೇ ಇದ್ದ ಕೀರ್ತಿಯ ಪಿಜಿ ಹುಡುಕಲು ಹತ್ತು ನಿಮಿಷ ಸಾಕಾಯಿತು ಪ್ರಬಲ್ ಆಫೀಸಿನಿಂದ ಹೊರಟ ನಂತರ.

"ಸರ್, ಕತ್ತಲಿತ್ತು. ಅವನು ಮೇಲೆ ಬಿದ್ದ. ನಾನು ಗಾಬರಿಯಿಂದ ಆತ್ಮ ರಕ್ಷಣೆಗೆ ಚುಚ್ಚಿಬಿಟ್ಟೆ" ಎಂದಳು ಅವನನ್ನು ಹಾಲಿನಲ್ಲಿ ಕೂರಿಸಿ ಕೀರ್ತಿ ವಿವರಿಸುತ್ತಾ.

"ಮುಂಬಾಗಿಲು ಕಾಲಿಂಗ್ ಬೆಲ್ ಮಾಡಲಿಲ್ಲವೆ?"

"ಅದು ಕೆಟ್ಟು ಒಂದು ವಾರವಾಯಿತು ಸರ್, ಯಾರೂ ಸಿಕ್ಕುತ್ತಿಲ್ಲ ರಿಪೇರಿಗೆ" ಎಂದರು ಪಕ್ಕದಲ್ಲೇ ಅವಳ ಬೆಂಬಲಕ್ಕೆ ನಿಂತಿದ್ದ ಪಿಜಿ ಮಾಲೀಕಳಾದ ಲಲಿತಮ್ಮ.

"ಅದು ವೀರೇಂದ್ರನೇ ಎಂದು ನಿಮಗೆ ಖಾತ್ರಿಯಾಗಿದೆಯೆ?"

ಕೀರ್ತಿ ತಲೆಯಾಡಿಸಿ ಕಣ್ಣು ಅಗಲಿಸಿದಳು, "ಇಲ್ಲ , ಇಲ್ಲ.. ನನಗೆ ಯಾರು ಎಂದು ಕಾಣಲಿಲ್ಲ.. ಆದರೆ ಆ ಸಮಯದಲ್ಲಿ ಅವನೇ ಇರಬೇಕು..."

ಪ್ರಬಲ್ ಹೊರಟು ನಿಂತವನು ಮತ್ತೆ ತಿರುಗಿ ಕೇಳಿದ."ಆ ಕರುಣ್ ರಾವ್ ನಿಮಗೆ ಬರೆದ ಪತ್ರಗಳು ಎಲ್ಲಿ, ವೀರೇಂದ್ರ ಕೇಳುತ್ತಿದ್ದ, ನಿಮ್ಮ ಬಳಿಯಿರುವುದನ್ನು ಕೊಡಬೇಕೆಂದು"

"ನನ್ನ ಬಳಿ ಯಾವ ಪತ್ರಗಳೂ ಇಲ್ಲ" ಎಂದು ಕಣ್ಣಗಲಿಸಿದಳು.

"ಖಂಡಿತಾ ಇಲ್ಲವೇ, ಕೀರ್ತಿ ಶರ್ಮಾ?"

"ಇಲ್ಲ ಸರ್!" ಎಂದವಳಿಗೆ ತಕ್ಷಣ ಅರ್ಥವಾಯಿತು ಅವನು ತನ್ನನ್ನು ಕೀರ್ತಿ ಶರ್ಮಾ ಎಂದು ಕರೆದು ಟ್ರ್ಯಾಪ್ ಮಾಡಿದ್ದನೆಂದು!!

"ಅಯ್ಯೋ’!" ಎಂದು ಕುಸಿದು ಕುಳಿತಳು....ಈ ರೀತಿ ಸಿಕ್ಕಿಹಾಕಿಕೊಂಡು ಅವಮಾನವಾಗಿ ತಲೆ ಎತ್ತದಂತಾಯಿತು !

"ಹ್ಮ್!" ಎಂದ ಪ್ರಬಲ್ ಇದನ್ನು ನಿರೀಕ್ಷಿಸಿದವನಂತೆ ಮೆದುವಾದ ದನಿಯಲ್ಲೆ ಅವಳ ಪಕ್ಕ ಕುಳಿತು ಕೇಳಿದನು "ಇನ್ನಾದರೂ ನೀವು ನನಗೆ ಪೂರ್ತಿ ಸತ್ಯ ಹೇಳುವ ಸಮಯ ಬಂದಿದೆಯಲ್ಲವೆ, ಕೀರ್ತಿ?...ವೈದ್ಯರ ಬಳಿ ಮತ್ತು ವಕೀಲರ ಬಳಿ ಯಾವತ್ತೂ ಸುಳ್ಳು ಹೇಳಿದರೆ ನಿಮಗೇ ಅಪಾಯ...ಯಾಕೆ ಹೀಗೆ ಹೇಳಿದ್ದಿರಿ?"

ಕೀರ್ತಿ ಈಗ ತಾನು ಕೀರ್ತಿಯಿಂದ ಶ್ರುತಿಯಾಗಲು ಪ್ರಯತ್ನಿಸಿದ್ದ ಬಗ್ಗೆ ಉದ್ದುದ್ದ ವಿವರಣೆಗಳನ್ನು ಕೊಡಲೇಬೇಕಾಯಿತು ಚತುರ ವಕೀಲ ಪ್ರಬಲ್‌ಗೆ.

ಅವಳು ಕಡೆಯಲ್ಲಿ ನೀಡಿದ ಕರುಣ್ ರಾವ್ ಪ್ರೇಮಪತ್ರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಪ್ರಬಲ್. ಅದನ್ನು ಅವಶ್ಯವಿದ್ದರೆ ಮಾತ್ರ ಆನಂತರ ಬಹಿರಂಗಪಡಿಸುವುದಾಗಿ ಹೇಳಿದನು.

7

ಅರ್ಧ ಗಂಟೆಯ ನಂತರ ವೀರೇಂದ್ರ ಕೊಟ್ಟಿದ್ದ ಶೇಷಾದ್ರಿಪುರಮ್ಮಿನ ಎರಡನೆ ಮಹಡಿ ಅಡ್ರೆಸ್ ಹಿಡಿದು ತನ್ನ ಕಾರಲ್ಲಿ ತಲುಪಿದ್ದನು ಪ್ರಬಲ್.

"ಬನ್ನಿ..." ಎನ್ನುತ್ತಾ ನೀಲಿಹೂವಿನ ನೈಟಿ ಧರಿಸಿದ್ದ ಒಬ್ಬ ಸಿಡುಕು ಮುಖದ ಮಧ್ಯವಯಸ್ಕೆ ಬಾಗಿಲು ತೆರೆದು ಕರೆದಳು. ಬಹುಶಃ ಆತನ ಹೆಂಡತಿಯಿರಬೇಕು.

ಒಳಗೆ ಹಾಲಿನಲ್ಲಿ ಎರಡು ಬೆತ್ತದ ಕುರ್ಚಿಗಳಿವೆ ಮಧ್ಯ ಟೀಪಾಯ್ ಮೇಲೆ ಗಾಯಕ್ಕೆ ಹಚ್ಚುವ ಔಷದಿಗಳು, ಬ್ಯಾಂಡೇಜ್ ಇತ್ಯಾದಿ. ಜತೆಗೆ ಅರ್ಧ ಕುಡಿದ ಬ್ರಾಂಡಿ ಬಾಟಲು. ಕೈಯನ್ನು ಮುದುರಿ ಕುಳಿತಿದ್ದಾನೆ ವೀರೇಂದ್ರ. ಹೈರಾಣನಾದಂತೆ ಮುಖಚಹರೆಯಿದೆ.

"ಬನ್ನಿ ಕುಳಿತಿಕೊಳ್ಳಿ, ಮಿ. ಪ್ರಬಲ್" ಎಂದು ಕ್ಷೀಣ ದನಿಯಲ್ಲಿ ಹೇಳುತ್ತಾ ಅವನು ಅರ್ಧ ಎದ್ದಾಗ ಸ್ವಲ್ಪ ಬ್ಯಾಂಡೇಜ್ ಹಾಕಿದ ತೋಳು ಮತ್ತು ಪಕ್ಕೆ ಶರ್ಟಿನಡಿ ಕಂಡುಬಂದಿತು.

"ಹೌ ಆರ್ ಯೂ ಫೀಲಿಂಗ್?" ಎನ್ನುತ್ತಾ ಅವನ ಕೈ ಕುಲುಕದೇ ಎದುರಿಗೆ ಕುಳಿತ ಪ್ರಬಲ್.

"ಬದುಕುತ್ತೇನೆ ಅನಿಸತ್ತೆ, ಅದೃಷ್ಟವಿದ್ದರೆ...ಹಾಗೆ ಚುಚ್ಚಿದ್ದಾಳೆ ನಿಮ್ಮ...ನಿಮ್ಮ ಶ್ರುತಿ" ಮುಖ ಸಿಂಡರಿಸಿದ ವೀರೇಂದ್ರ. ಪಕ್ಕದಲ್ಲೇ ನಿಂತಿದ್ದ ಆವನ ಹೆಂಡತಿಯತ್ತ ಇದ್ದಕ್ಕಿದ್ದಂತೆ ಗರಂ ಆದ.

"ದುರ್ಗಾ, ನಿನ್ನ ಮುಸುಡಿ ನೋಡಕ್ಕಾ ಇವರು ಬಂದಿರೋದು?.. ಒಳ ಹೋಗು, ನಾನು ಕರೆಯುವರೆಗೂ ಹೊರಗೆ ನಿನ್ನ ಮುಖ ತೋರಿಸಬೇಡ!"

"ನಿಮ್ಮ ಗಾಯದ ಮುಖಕ್ಕಿಂತಾ ಚೆನ್ನಾಗಿಯೇ ಇದೆ!" ಎಂದು ದುಮಗುಡುವ ಮುಖ ಹೊತ್ತು ಅವನ ಹೆಂಡತಿ ಒಳಹೋಗಿ ಬಾಗಿಲನ್ನು ಡಬಾರನೆ ಹಾಕಿಕೊಂಡಳು.

"ಅಬ್ಬಾ...ಕಾಳೀ ತರಹ...ಅದಕ್ಕೆ ಅವರಪ್ಪ ದುರ್ಗಾ ಎಂದು ಹೆಸರಿಟ್ಟಿದ್ದಾರೆ" ಎಂದು ವೀರೇಂದ್ರ ಅವಳ ಚಿಂತೆ ಬಿಟ್ಟು ಪ್ರಬಲನತ್ತ ದೃಷ್ಟಿ ಹರಿಸಿದ,

ಈ ಗಂಡ ಹೆಂಡಿರ ಸಂಬಂಧ ಯಾಕೋ ಅಷ್ಟು ಸರಿಯಾಗಿಲ್ಲ ಎಂದುಕೊಂಡ ವಕೀಲ.

."ಎಲ್ಲಿ ಆ ಲೆಟರ್ಸ್?"..,

"ನನ್ನ ಬಳಿಯಂತೂ ಇಲ್ಲ!!" ಎಂದ ಪ್ರಬಲ್ ಕಳ್ಳನಿಗೆ ಸುಳ್ಳು ಹೇಳುವುದು ತಪ್ಪಲ್ಲ ಎಂದು ಅವನ ನೀತಿ. ಜತೆಗೆ ಅವು ಅವನಿಗೆ ನೇರವಾಗಿ ಸಂಬಂಧಿಸುದುದ್ದೂ ಅಲ್ಲ. "ಮೊದಲು ಈ ಅಫಘಾತ ಹೇಗಾಯಿತು, ಈ ಗಾಯ?" ಕೇಳಿದ.

ವೀರೇಂದ್ರ ಮುಖ ಮತ್ತೆ ಸೊಟ್ಟಮಾಡಿದ. "ಐಸ್ ಪಿಕ್ ಚಾಕುವಿನಿಂದ ಯಾರಾದರೂ ಚುಚ್ಚಿದರೆ ಅದನ್ನು ‘ಅಪಘಾತ’ ಅನ್ನುತ್ತಾರೆಯೆ ವಕೀಲರೆ, ನಿಮ್ಮ ಲೈನಿನಲ್ಲಿ?"

ವಿಚಲಿತನಾಗದೇ ಪ್ರಬಲ್ "ನಿಮಗೆ ಅದು ಐಸ್ ಪಿಕ್ ಎಂದು ಹೇಗೆ ಖಚಿತವಾಗಿ ಗೊತ್ತು?" ಎಂದನು.

"ಅಲ್ಲಿ ನೋಡಿ ಬೇಕಿದ್ದರೆ..." ಎಂದು ಪಕ್ಕದ ಟಿವಿ ಸ್ಟಾಂಡ್ ತೋರಿಸುತ್ತಾ ಜೋರಾಗಿ ಕೆಮ್ಮಿದ.

ಅಲ್ಲಿ ಒಂದು ಬಿಳಿ ಕಾಗದದ ಮೇಲೆ ಒಂದು ಐಸ್ ಪಿಕ್ ಚಾಕು ಸಹಾ ಇತ್ತು. "ಅದನ್ನು ಅಲ್ಲೇ ಬಿಡಿ. ವಕೀಲರೇ" ಎಂದವ ಏದುಸಿರು ಬಿಟ್ಟ

"ಇದೆಲ್ಲಾ ಹೇಗಾಯಿತು ಎಂದು ಹೇಳು" ಎಂದು ಪ್ರಬಲ್ ಆರಂಭಿಸಿದ ಎದುರಿಗೆ ಕೂರುತ್ತಾ.

"ನಾನು 7.00 ಗಂಟೆ ಹೊತ್ತಿಗೆ ಶ್ರುತಿ ವರ್ಮಾ ಪಿ.ಜಿ ರೂಮಿಗೆ ಹೋದೆ. ಅವಳಿಗೆ ನಾನು ಬರುತ್ತೇನೆಂದು ಗೊತ್ತಿತ್ತಲ್ಲಾ...?

"ಆ...ಹಾ?"

"ಚೆನ್ನಾಗಿ ಗೊತ್ತಿತ್ತು. ನಾನು ಒಳಗೆ ಬರಲೆ? ಎಂದೆ ಬಾಗಿಲಿಂದ. ಬಾಗಿಲು ತೆರೆದು ‘ಬನ್ನಿ’ ಎಂದಳು ಅಷ್ಟೇ...ಕತ್ತಲಿತ್ತು.. ಹೋದ ಕೂಡಲೇ ತನ್ನ ಕೈಯಲ್ಲಿದ್ದ ಐಸ್ ಪಿಕ್ಕಿನಿಂದ ಮಿಂಚಿನಂತೆ ಪ್ರಹಾರ ಮಾಡಿದಳು... ಇಲ್ಲಿ, ನನ್ನ ಪಕ್ಕೆಗೆ" ಎಂದು ಕೈಯಿಂದ ತೋರಿಸಿದ ಬ್ಯಾಂಡೇಜನ್ನು. "...ನನಗಾದ ಗಾಬರಿಯಲ್ಲಿ ಐಸ್ ಪಿಕ್ ಸಿಕ್ಕಿಕೊಂಡಿದಂತೆಯೇ ಅಲ್ಲಿಂದ ದೌಡಾಯಿಸಿಕೊಂಡು ಬಂದುಬಿಟ್ಟೆ..."

ಪ್ರಬಲ್ ನಿಟ್ಟುಸಿರಿಟ್ಟ "ನೀವು ಹೇಳುವುದು ಸರಿಯಿದ್ದರೆ ಮೊದಲು ಪೋಲೀಸಿಗೆ ದೂರು ಕೊಡುವುದು ಒಳ್ಳೆಯದು, ಲೆಟರ್ಸ್ ಸಿಕ್ಕಲಿ ಬಿಡಲಿ!"

"ಅರೆರೆ!" ಎಂದ ವೀರೇಂದ್ರ. "ನನ್ನ ವಕೀಲರೋ ನೀವು? ಆದರೆ ಪೋಲೀಸರ ಬಳಿಗೆ ಹೋದರೆ ನನಗೆ 25,000/- ರೂ ನಷ್ಟವಾಗುತ್ತದೆ, ಸ್ವಾಮಿ!"

"ಅದು ಹೇಗೆ?"

ಅವನನ್ನು ದುರುಗುಟ್ಟಿ ನೋಡುತ್ತಾ ಕೆಮ್ಮಿದ ವೀರೇಂದ್ರ "ನಿಮಗೆ ಆಕೆ ಆ ಪತ್ರಗಳ ಬಗ್ಗೆ ಏನು ಹೇಳಿದಳು?"

"ಅವು ಅವಳ ಬಳಿ ಇಲ್ಲ" ಭುಜ ಕುಣಿಸಿದ ಪ್ರಬಲ್. ಅರ್ಧ ಸುಳ್ಳು ಅರ್ಧ ಸತ್ಯ ಹೇಳುವುದರಲ್ಲೂ ನಿಸ್ಸೀಮ.

"ಸರಿ...ನಾನು ನೀವು ನ್ಯಾಯವಾದಿ ಎಂದುಕೊಂಡು ಹೇಳುತ್ತಿದ್ದೇನೆ... ನಿಮಗೆ ಕಿರಣ್ ಶಂಕರ್ ರಾವ್ ಗೊತ್ತಲ್ಲ?"

"ಓಹ್!" ಹುಬ್ಬೇರಿಸಿದ ಪ್ರಬಲ್ "ಅದೇ ಎಂ.ಪಿ ಮತ್ತು ಉದ್ಯಮಿ?"

"...ಅವರ ಮಗ ಕರುಣ್ ರಾವ್ ಅಂತಿದ್ದಾನೆ...ಈ ನಿಮ್ಮ ಹುಡುಗಿ..." ಎಂದ ವೀರೇಂದ್ರ ಪ್ರಬಲನನ್ನೇ ಆರೋಪಿಸುವಂತೆ. "ಶ್ರುತಿ ವರ್ಮಾ ಮತ್ತು ಆ ಕರುಣ್ ಪ್ರೇಮಿಸಿದ್ದರಂತೆ.. ಆದರೆ ಅಪ್ಪ ಕಿರಣ್ ಶಂಕರ್ ಅದನ್ನು ವಿರೋಧಿಸಿದ್ದರಂತೆ.. ಈ ಶ್ರುತಿ ಅವನ ಮೇಲೆ ಕೇಸ್ ಹಾಕಿ ತನ್ನ ಮಗುವಿಗೆ ತಂದೆಯಾಗುತ್ತಾನೆಂದು ಪೆಟರ್ನಿಟಿ ದಾವೆ ಹಾಕಲು ಕೋರ್ಟಿಗೆ ಹೋಗುವವಳಿದ್ದಳು ಎಂದು ಜನ ಮಾತಾಡಿಕೊಳ್ಳುತ್ತಾರೆ. ಎನಿ ವೇ, ಅವರಿಬ್ಬರೂ ಸೇರಲಡ್ಡಿಯಾಗಿ ಈ ಶ್ರುತಿ ಅಲ್ಲಿಂದ ಓಡಿಬಂದಿದ್ದಾಳೆ.. ಬರುವಾಗ ತನ್ನ ಜೊತೆ ಆ ಯುವಕ ಕರುಣ್ ಬರೆದಿದ್ದ ಖಾಸಗಿ ಪತ್ರಗಳನ್ನು ತಂದಿದ್ದಾಳಂತೆ..."

 "ಅವನು ಅವೆಲ್ಲಾ ವಾಪಸ್ ಬೇಕು ಎಂದಿದ್ದಾನೆ" ಊಹಿಸಿ ಹೇಳಿದ ಪ್ರಬಲ್.

ಅವನು ತಲೆ ಕುಣಿಸಿದ "ಆ ಯುವಕನ ಬಗ್ಗೆ ಗೊತ್ತಿಲ್ಲ. ಅವರಪ್ಪ ಎಂ.ಪಿ.ಸಾಹೇಬರಂತೂ ಕೇಳುತ್ತಿದ್ದಾರೆ.. ಕೇಳುವುದೇನು ಬಂತು, ಏನು ಕೊಡಲೂ ಸಹಾ ತಯಾರಾಗಿದ್ದಾರೆ... ನನಗೆ...ಸದ್ಯಕ್ಕೆ 25000 ರೂ/-,. ಆ ಪತ್ರಗಳು ಸಿಕ್ಕರೆ ಸಾಕು!"

‘ಖಂಡಿತಾ ನಿನಗೆ ಸಿಗುವುದಿಲ್ಲ, ಭಂಡ’ ಎಂದುಕೊಂಡ ಪ್ರಬಲ್ ಮನದಲ್ಲೇ, ತನ್ನ ಬ್ರೀಫ್‌ಕೇಸಿನಲ್ಲಿ ಭದ್ರವಾಗಿಟ್ಟಿದ್ದ ಆ ಪತ್ರಗಳ ಕಟ್ಟನ್ನು ನೆನೆಸಿಕೊಂಡು.

"ಅದಿರಲಿ!.. ಮೊದಲು ನೀನು ಡಾಕ್ಟರನ್ನು ನೋಡುವುದು ಒಳ್ಳೆಯದಲ್ಲವೆ?" ಎಂದ ಪ್ರಬಲ್ ಮತ್ತೆ ಅವನು ಕೆಮ್ಮಲು ಶುರು ಮಾಡಿದ್ದು ನೋಡಿ ತಡೆಯಲಾಗದೇ,

"ಬೇಡ ಬೇಡ...ವೈದ್ಯರ ಬಳಿ ಹೋದರೆ ಪೋಲೀಸರಿಗೆಲ್ಲಾ ವರದಿ ಮಾಡುತ್ತಾರೆ. ಅದೆಲ್ಲಾ ನನಗೆ ಈಗ ಬೇಕಿಲ್ಲ" ಅದು ಈಗಿನ ತನ್ನ ಅಸಹಾಯಕತೆ ಎನ್ನುವಂತೆ ಹೇಳಿದ ವೀರೇಂದ್ರ.

"ನಾನು ನನ್ನ ವೈದ್ಯರನ್ನು ಕರೆದರೆ ಅದು ಬೇಕಾಗಲ್ಲ. ಅವರು ನನಗೆ ಮಾತ್ರ ವರದಿ ಮಾಡುತ್ತಾರೆ. ಸರಕಾರಕ್ಕೆ ಹೇಳುವುದಿಲ್ಲ" ಎಂದುತ್ತರಿಸಿದ ಪ್ರಬಲ್.

ಹುಬ್ಬೇರಿಸಿದ ವೀರೇಂದ್ರ "ಅದು ಹೇಗೆ ಸಾಧ್ಯ?"

ಭುಜ ಕುಣಿಸಿದ ಪ್ರಬಲ್," ಅವರು ನಿನ್ನ ಗಾಯವನ್ನು ನೋಡಿ ಒಂದು ಸಿವಿಲ್ ದಾವೆ ಹೂಡಲು ಏನು ಬೇಕೋ ಡ್ಯಾಮೇಜಸ್ ಅದನ್ನು ಮಾತ್ರ ನನಗೆ ಹೇಳುತ್ತಾರೆ. ನಿನಗೆ ಮತ್ತು ನನಗೆ ಮಾತ್ರ ಗೊತ್ತಿರುತ್ತದೆ ಅಷ್ಟೇ!"

"ನಾನು ಯೋಚಿಸಿ ಹೇಳುತ್ತೇನೆ ತಾಳಿ" ಎಂದ ವೀರೇಂದ್ರ .

"ನಿನಗೆ ಅರ್ಧ ಗಂಟೆ ಸಮಯ ಕೊಡುತ್ತೇನೆ. ಅಷ್ಟರವರೆಗೆ ನಾನು ಕೆಳಗಿನ ಕೆಫೆಯಲ್ಲಿ ಕಾಫಿ ಕುಡಿಯುತ್ತಾ ಇರುತ್ತೇನೆ...ನೀನು ನನ್ನನ್ನು ಅಲ್ಲಿಂದ ಕರೆದು ಹೇಳಿದರೆ, ವೈದ್ಯರನ್ನು ಕಳಿಸುತ್ತೇನೆ"

ಪ್ರಬಲ್ ಅವನಿಂದ ಬೀಳ್ಗೊಂಡು ಕೆಳಗೆ ಕೆಫೆಯಲ್ಲಿ ಒಂದು ಬ್ರೆಡ್ ಸ್ಯಾಂಡ್ವಿಚ್ ಮತ್ತು ಸ್ಟ್ರಾಂಗ್ ಕಾಫಿ ಆರ್ಡರ್ ಕೊಟ್ಟ. ಅದು ಮುಗಿಯುತ್ತಾ ಬಂದಂತೆ 20 ನಿಮಿಷ ಕಳೆದಿತ್ತು.

ಅವನು ಇನ್ನೇನು ಇನ್ನೊಮ್ಮೆ ಆರ್ಡರ್ ಕೊಡಬೇಕು ಆಗ "ನನಗೂ ಒಂದು ಕಾಫಿ ಇರಲಿ!" ಎಂದು ಒಳಗೆ ಬಂದರು ಪೋಲಿಸ್ ಹೋಮಿಸೈಡ್ ಇನ್ಸ್ಪೆಕ್ಟರ್ ರವಿಕುಮಾರ್

ಅ‍ವರಿಗೂ ಪ್ರಬಲ್‍‌ಗೂ ಗಳಸ್ಯ ಕಂಠಸ್ಯ ಎನ್ನಬಹುದು, ಹಲವಾರು ಕೇಸುಗಳಲ್ಲಿ ಇಬ್ಬರಿಗೂ ಎದುಬದುರು ತಿಕ್ಕಾಟವಾಗಿ ಕೋರ್ಟಿನಲ್ಲಿ ವಿರೋಧಿಗಳು ಆಗಿದ್ದರೂ ಹೊರಗೆ ಮಾತ್ರ ಮಿತ್ರರಂತೆ ವರ್ತಿಸುತ್ತಾರೆ

"ಪೋಲೀಸ್ ಹೋಮಿಸೈಡ್ ಇನ್ಸ್ಪೆಕ್ಟರಿಗೆ ಎಲ್ಲಿ ಏನೂ ಕೆಲಸ ರಾಯರೆ? ನನಗಂತೂ ಕೇವಲ ಸಿವಿಲ್ ಡ್ಯಾಮೇಜಸ್ ಕೇಸಿದೆ ಎಂದು ಬಂದೆ!" ಎನ್ನುತ್ತ ಒಂದು ಸ್ಯಾಂಡ್ವಿಚ್ ಮತ್ತು ಕಾಫಿಯನ್ನು ಪ್ರಬಲ್ ರವಿಕುಮಾರನತ್ತ ತಳ್ಳಿದರು.

 "ಹೌದೆ, ಆಶ್ಚರ್ಯ!... ನನಗಿಲ್ಲಿ ಒಂದು ಅಪಾರ್ಟ್ಮೆಂಟಿನಲ್ಲಿ ಒಬ್ಬರು ಸತ್ತು ಹೋಗಿದ್ದಾರೆ ಎಂದು ವರದಿ ಬಂತು. ನಮ್ಮ ಬಾಯ್ಸ್ ಮೇಲೆ ಹೋಗಿದ್ದಾರೆ ನೋಡಲು" ಆಗಲೇ ರವಿಕುಮಾರ್ ವೈಯರ್ಲೆಸ್ಸ್ ಗೊರಗುಟ್ಟಿತು." ಸರ್, ಮೇಲೆ ಬನ್ನಿ ನಂಬರ್ 210" ಎಂದಿತು ಅಲ್ಲಿಂದ ಬಂದ ದ್ವನಿ.

 "ರೈಟ್, ಹಿಯರ್ ವಿ ಗೋ" ಎನ್ನುತ್ತಾ ಕಾಫಿ ಪೂರ್ತಿ ಗಂಟಲಿಗೆ ಸುರಿದುಕೊಂಡು ಎದ್ದು ನಿಂತರು ರವಿಕುಮಾರ್. ಆರಡಿ ಎತ್ತರದ 40 ವರ್ಷ ವಯಸ್ಸಿನ ಆಜಾನುಬಾಹು ಹೋಮಿಸೈಡ್ ಡಿಟೆಕ್ಟಿವ್ ಇನ್ಸ್ಪೆಕ್ಟರ್. ತಲೆ ಅರೆಬಕ್ಕವಾಗಿದೆ. ಎರಡು ಬೆಳ್ಳಿಯ ಹಲ್ಲುಗಳು ಬಾಯಲ್ಲಿ ಮಿನುಗುತ್ತವೆ, ಅವರು ಅಪರೂಪಕ್ಕೆ ಮುಗುಳ್ನಕ್ಕಾಗ. ಯಾರಿಗೂ ತಿಳಿಯದಂತೆ ಮಫ್ತಿ ಸಿವಿಲ್ ಡ್ರೆಸ್ಸಿನಲ್ಲಿ ಕೋಟ್ ಹಾಕಿರುವಾತ ಪ್ರಬಲ್‌ನನ್ನೂ ಕರೆದುಕೊಂಡು ದುಡುದುಡು ಎರಡನೇ ಮಹಡಿಯ ಮೆಟ್ಟಿಲೇರಿದರು.

"ಈಗ 20 ನಿಮಿಷಗಳ ಕೆಳಗೆ ನೋಡಿದೆ, 210 ನವನು ಚೆನ್ನಾಗಿದ್ದ " ಪ್ರಬಲ್ ಅಪರೂಪವಾಗಿ ತನ್ನ ಆಶ್ಚರ್ಯ ಪ್ರಕಟಿಸಿದ.

"ಮರಣಕ್ಕೆ ಒಂದು ಸೆಕೆಂಡ್ ಸಾಕು ಅಲ್ಲವೆ, ವಕೀಲರೆ?" ಅವರಿಬ್ಬರೂ ಈ ವೀರೇಂದ್ರನ ಮನೆಯ ಬಾಗಿಲು ತಲುಪಿದ್ದರು.

ಒಳಗೆ ವೀರೇಂದ್ರನ ಪತ್ನಿ ದುರ್ಗಾ ಬೋರೆಂದು ಅಳುತ್ತಾ ಗೋಡೆಗೊರಗಿ ನಿಂತಿದ್ದಳು. ಆ ಚೇರಿನಲ್ಲಿ ವೀರೇಂದ್ರ ಕುಸಿದು ಕುಳಿತಂತೆ ಕಾಣುತಿತ್ತು. ತಲೆ ವಾಲಿಕೊಂಡಿತ್ತು. ಅವನ ಬ್ಯಾಡೇಜ್ ನಡುವೆ ರಕ್ತ ಸೋರಿದ್ದೂ ಕಂಡಿತು.

ತಕ್ಷಣ ಪ್ರಬಲ್ ಟೇಬಲ್ ಮೇಲಿದ್ದ ಐಸ್ ಪಿಕ್ ಚಾಕುವಿನತ್ತ ನೋಡಿದ. ಏನೋ ಮನದಲ್ಲೇ ನೋಟ್ ಮಾಡಿಕೊಂಡ.

 "ಹಿ ಇಸ್ ಡೆಡ್.." ಎಂದರು ನಾಡಿ ಹಿಡಿದ ವಯಸ್ಸಾದ ಪೋಲೀಸ್ ವೈದ್ಯರು. "ಚಾಕು ಚುಚ್ಚಿದ ಗಾಯ ಆಳವಾಗಿದೆ.. ಇದಕ್ಕೆ ಮುಂಚೆಯೇ ನಮ್ಮನ್ನು ಕರೆಸಿದ್ದರೆ ಉಳಿಯುತ್ತಿದ್ದ" ಎಂದು ಅವರು ಅಲ್ಲಿದ್ದವರೆಲ್ಲಾ ತಪ್ಪಿತಸ್ತರೋ ಎಂಬಂತೆ ನೋಡಿದರು.

"ಓಕೆ.. ಈಗ ಇದು ಹೋಮಿಸೈಡ್ ಕೇಸಾಗಿದೆ.. " ಎಂದು ಘೋಷಿಸಿದ ರವಿಕುಮಾರ್, "ನಮ್ಮವರೆಲ್ಲ ಈ ಮನೆಯನ್ನು ವಾಶಕ್ಕೆ ತೆಗೆದುಕೊಳ್ಳಿ. ಫೊರೆನ್ಸಿಕ್ಸ್ ಕರೆಸಿ. ಎಲ್ಲಾ ಸಾಕ್ಷಿ ಪುರಾವೆಗಳನ್ನೂ ಕಸ್ಟಡಿಗೆ ತೆಗೆದುಕೊಂಡು ಮಹಜರ್ ಮಾಡಿ"

ಪೋಲೀಸ್ ವೈದ್ಯರೊಂದಿಗೆ ಪ್ರಬಲ್ ಮತ್ತು ರವಿಕುಮಾರ್ ಇಬ್ಬರೂ ಹೊರಬಂದರು.

ಪ್ರಬಲ್, ನೀವು ಈತ ಸತ್ತಾಗ ಇಲ್ಲಿದ್ದುದೂ, ಇದಕ್ಕೆ ಮುನ್ನ ಈತ ನಿಮ್ಮ ಕಕ್ಷಿದಾರರನ್ನು ಭೇಟಿಯಾಗಿದ್ದೂ ನಮಗೆ ವರದಿಯಾಗಿದೆ. ಯಾವ ಸಾಕ್ಷಿಯನ್ನೂ ವಿಷಯವನ್ನು ಮುಚ್ಚಿಡಬೇಡಿ ಈ ಸಲ" ಎಂದರು ರವಿಕುಮಾರ್ ಎಚ್ಚರಿಕೆಯ ಬೆರಳಾಡಿಸುತ್ತಾ. ಪ್ರಬಲ್ ಸಾಕ್ಷಿಗಳನ್ನು ಇಟ್ಟುಕೊಂಡು, ಪತ್ತೇದಾರಿ ಮಾಡಿ ಬಹಳ ಆಟವಾಡಿ ಹಿಂದೆ ಹಲವು ಬಾರಿ ಅವರನ್ನು ಕೋರ್ಟಿನಲ್ಲಿ ಸೋಲಿಸಿದ್ದು ಅವರಿಗೆ ಮರೆಯಲಾಗಿಲ್ಲ.

"ನಾನು ಮತ್ತು ನನ್ನ ಕಕ್ಷಿದಾರರ ನಡುವಿನ ಎಲ್ಲಾ ವಿಚಾರಗಳೂ ಪ್ರಿವಿಲೇಜ್ಡ್ ಮಾಹಿತಿ ಅಂದರೆ ನಮ್ಮ ಖಾಸಗಿ ಹಕ್ಕು. ವಕೀಲನಿಗೆ ಮಾತ್ರ ಗೊತ್ತಿರುವುದು, ನಿಮಗೆ ಎಲ್ಲಾ ಹೇಳುವುದು ಅವಶ್ಯವಿಲ್ಲ.. ನೀವು ಕೇಸ್ ಮುಂದುವರೆಸಿ, ಅನಂತರ ನೋಡುವಾ" ಎಂದು ಹೇಳಿ ಸರಸರನೆ ಹೊರಟ ಪ್ರಬಲ್.

ತಕ್ಷಣ ತನ್ನ ಆಫೀಸಿಗೆ ಹೋಗಿ ತನ್ನ ಚಾವಿಯಿಂದ ಆಫೀಸನ್ನು ಓಪನ್ ಮಾಡಿದ ಪ್ರಬಲ್. ಡೆಸ್ಕ್ ಫೋನಿಂದ ಸೆಕ್ರೆಟರಿ ದಕ್ಷಾ ಮನೆಗೆ ಕಾಲ್ ಮಾಡಿದನು. ಹದಿನೈದು ನಿಮಿಷಕಾಲ ಸರಸರನೆ ಎಲ್ಲಾ ಬರೆದುಕೊಂಡ ದಕ್ಷಾ, " ಓಕೆ ಚೀಫ್, ಈಗ ನಾನು ನಮ್ಮ ಪತ್ತೇದಾರ ಸಂಸ್ಥೆ ಪ್ರದೀಪ್ ಧಾವನ್ ಗೆ ಕಾಲ್ ಮಾಡಿ ಈ ಕೀರ್ತಿ ಶರ್ಮಾ, ಕಿರಣ್ ಶಂಕರ್ ರಾವ್ ಮತ್ತು ಕರುಣ್ ರಾವ್ ಬಗ್ಗೆ ಎಲ್ಲಾ ಮಾಹಿತಿಯನ್ನು ತನ್ನ ಲೋಕಲ್ ಪತ್ತೇದಾರರಿಂದ ಈ ರಾತ್ರಿಯೇ ಕಲೆಕ್ಟ್ ಮಾಡಲು ಹೇಳುತ್ತೇನೆ" ಎಂದಳು.

"ಗುಡ್, ಹಾಗೇ ಈ ವೀರೇಂದ್ರ ಕಟ್ಟೀಮನಿ ಎಲ್ಲಿಂದ ಬಂದ, ಯಾರಿಗೆ ಕೆಲಸ ಮಾಡುತ್ತಿದ್ದ, ಯಾರನ್ನು ಮೀಟ್ ಮಾಡುತ್ತಿದ್ದ ಅದನ್ನೂ ಹೇಳು, ಇವತ್ತು ರಾತ್ರಿಯೇ ಆಗಬೇಕು"

"ಒಂದು ರಾತ್ರಿಗೆ ಪತ್ತೇದಾರ ಪ್ರದೀಪ್ ಧಾವನ್ ಗೆ ತುಂಬಾ ಕೆಲಸವಾಯಿತು" ಸ್ವಲ್ಪ ಹತಾಶಳಾಗಿ ನುಡಿದಳು ದಕ್ಷಾ.

"ಆಗಬೇಕಲ್ಲವೆ, ದಕ್ಷಾ? ಅವನ ಒಟ್ಟು ಹದಿನೈದು ಪತ್ತೇದಾದರಿದ್ದಾರೆ..ಇಲ್ಲದಿದ್ದರೆ..."

ಅವನು ಹೇಳುವ ಮುಂಚೆ ತಾನೆ ಹೇಳಿದಳು. "ನಾಳೆ ಆರೋಪಿ ಶ್ರುತಿ ವರ್ಮಾ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಕ್ರಿಮಿನಲ್ ಕೇಸ್ ಕೊಲೆ ಆಪಾದನೆ ಮೇಲೆ ದಾಖಲಾಗುತ್ತೆ"

"ಹೌದು, ನಾಳೆಯೇ ಆಗದಿದ್ದರೆ ನಾಡಿದ್ದು!...ಕೀರ್ತಿಯನ್ನು ಬಂಧಿಸಿದರೆ ನಮಗೆ ಸಮಯವಿಲ್ಲ.. ಅದಲ್ಲದೇ ನಂದಿಬೆಟ್ಟದ ಬಳಿ ಆದ ಅಪಘಾತದ ಉಳಿದ ಮಾಹಿತಿ ಸಹಾ ನನಗೆ ಬೇಕು..ವೀರೇಂದ್ರನಿಗೇ ಅವಳ ನಕ್ಲೇಸ್ ಸಿಕ್ಕ ಮೇಲೆ ಇನ್ನೇನು ಅಗೆಯಬಹುದೋ ಅಲ್ಲಿ ಅವನು ಹೊರತರಲಿ...ನಾಳೆ ಬೆಳಿಗ್ಗೆ ಪ್ರದೀಪ್‌ಗೆ ನಾನೆ ಹೇಳುತ್ತೇನೆ..."

"ನಾಳೆ ಬೆಳಿಗ್ಗೆ 6ಕ್ಕೆಲ್ಲಾ ನನಗೆ ರಿಪೋರ್ಟ್ ಬೇಕು.. ಯಾವಾಗ ಬೇಕಾದರೂ ನನ್ನನ್ನು ರಾತ್ರಿ ಡಿಸ್ಟರ್ಬ್ ಮಾಡಬಹುದು, ಅದು ಪ್ರದೀಪ್‍ಗೂ ಗೊತ್ತು".

"ಸರಿ ನೀವು ಹೊರಡಿ ಮನೆಗೆ, ಟೈಮ್ 9;15 ಆಯಿತು...ನಾನು ನೋಡಿಕೊಳ್ಳುತ್ತೇನೆ"

"ಓಕೆ"

"ಆಮೇಲೆ...ಚೀಫ್, ಹೊರಗೇ ಊಟ ಮಾಡಿಕೊಂಡು ಮನೆಗೆ ಹೋಗಿ" ಎಂದಳು ಆಪ್ತ ಕಾರ್ಯದರ್ಶಿ.

ಪ್ರಬಲ್ ಒಂಟಿಜೀವಿ, ತಾನೇ ಅಡಿಗೆ ಮಾಡಿಕೊಳ್ಳಲು ಇಷ್ಟಪಡುತ್ತಿದ್ದ. "ಶೂರ್, ಗುಡ್ ನೈಟ್" ಎಂದವನೇ ಪ್ರಬಲ್ ಅಲ್ಲಿಂದ ಮನೆಗೆ ಹೊರಟ

8

ಬೆಳಿಗ್ಗೆ 7ಕ್ಕೆಲ್ಲಾ ಪ್ರದೀಪ್ ಧಾವನ್ ಕಾಲ್ ಬಂದಿತು ಪ್ರಬಲ್ ಗೆ. ಅವನೆದ್ದು ದಿನದ ಮೊದಲ ಕಾಫಿ ಕುಡಿಯಹತ್ತಿದ್ದ.

"ಪ್ರಬಲ್, ನಾನು ನಿನ್ನ ಮನೆಗೇ ಬರುತ್ತಿದ್ದೇನೆ. ರಾತ್ರಿಯೆಲ್ಲ ಸಾಕಷ್ಟು ವಿಷಯ ತೆಗೆದಿದ್ದೇನೆ. ಫೋನಲ್ಲಿ ವಿವರಿಸಲು ಸಮಯವಿಲ್ಲ"

ಪ್ರಬಲ್ ಮುಗುಳ್ನಕ್ಕ."ನನಗೆ ಗೊತ್ತಿದೆ ಮಿತ್ರಾ ನೀನೂ ಹಾಗೇ ಮಾಡಿರುವೆ ಎಂದು... ಬಾ ಒಟ್ಟಿಗೆ ತಿಂಡಿ ತಿನ್ನುವಾ ಇಲ್ಲೇ"

"ಸರಿ, ಆದರೆ ನಾನು ಏನಾದರೂ ತಿಂಡಿ ಕಟ್ಟಿಸಿಕೊಂಡೇ ಬರುತ್ತೇನೆ"

ಐದೂ ಮುಕ್ಕಾಲು ಅಡಿ ಎತ್ತರದ ಗುಂಗುರು ಕೂದಲಿನ 35ರ ವ್ಯಕ್ತಿ ಅರ್ಧ ಗಂಟೆಯಲ್ಲೇ ಪ್ರಬಲ್ ಮನೆಯ ವೆರಾಂಡಕ್ಕೆ ಒಳಕಾಲಿಟ್ಟ. ಮಿಲಿಟರಿ ಬಿಟ್ಟರೂ ಅದೇ ಹೇರ್ ಕಟ್,, ಬಾಯಲ್ಲಿ ಆಗಾಗ ಒಂದು ವಿಲ್ಸ್ ಫಿಲ್ಟರ್ ಸಿಗರೇಟ್ ಉರಿಯುತ್ತಿರುತ್ತದೆ.

ಸಾಧಾರಣವಾಗಿ ಫುಲ್ ಸೂಟ್ ಧರಿಸುವವನು ಈಗ ಬೆಳಿಗ್ಗೆ ಇನ್ನೂ ಜೀನ್ಸ್ ಟೀಶರ್ಟಿನಲ್ಲಿದ್ದಾನೆ.. ಕಂಗಳು ರಾತ್ರಿಯೆಲ್ಲಾ ಎದ್ದು ಕೆಲಸಮಾಡಿದ್ದರ ಆಯಾಸದಿಂದ ಕೆಂಪಾಗಿವೆ.

"ಅಬ್ಬಾ, ತಗೋ, ಮಲ್ಲೇಶ್ವರಂ ಸಿ ಟಿ ಆರ್ ನಿಂದ ಇಡ್ಲಿ ವಡೆ ಕಟ್ಟಿಸಿಕೊಂಡು ಬಂದಿದ್ದೇನೆ. ತಿನ್ನೋಣ" ಎನ್ನುತ್ತಾ ಪ್ಯಾಕೆಟ್ಸ್ ತೆರೆದ ಪತ್ತೇದಾರ.

ಮಾತುಕತೆ ಹಾಗೇ ತಿಂಡಿ ನಡುವೆ ಮುಂದುವರೆಯಿತು.

"ಪ್ರಾಸಿಕ್ಯೂಷನ್ನಿನವರು ನಿನ್ನ ಕಕ್ಷಿದಾರ ಶ್ರುತಿ ವರ್ಮಾ ಮೇಲೆ ಮರ್ಡರ್ ಕೇಸ್ ದಾಖಲಿಸುತ್ತಿದ್ದಾರೆ . ಯಾವ ಸಮಯದಲ್ಲಾದರೂ ಅವಳ ಬಂಧನವಾಗಬಹುದು, ಪೋಲೀಸ್ ಎಚ್ ಕ್ಯು ನಿಂದ ತಿಳಿದು ಬಂದಿತು" ಎಂದ ಪ್ರದೀಪ್.

"ಆಮೇಲೆ?" ಪ್ರಬಲ್‌ಗೆ ಇದು ನಿರೀಕ್ಷಿತ ಸುದ್ದಿ.

"ಇನ್ನೊಂದು ವಿಷಯ. ಮಾನ್ಯ ಎಂ ಪಿ ಕಿರಣ್‌ಶಂಕರ್ ರಾವ್ ನಿನ್ನೆ ಸಂಜೆಯೇ ಬೆಂಗಳೂರಿಗೆ ಬಂದಿದ್ದಾರೆ 6 ಗಂಟೆಗೆ ಹೋಟೆಲ್ ವಿಂಡ್ಸರ್ ಮ್ಯಾನರ್ ಗೆ ಚೆಕ್ ಇನ್ ಆಗಿದ್ದಾರೆ..ಇಲ್ಲಿ ನೋಡು, ಡೆಕ್ಕನ್ ಹೆರಾಲ್ಡಿನಲ್ಲಿ ಬಂದ ಚಿತ್ರ..."

ತಿಂಡಿ ಪಕ್ಕಕ್ಕಿಟ್ಟು ಪ್ರಬಲ್ ಅವನು ಮಡಿಚಿ ತೋರಿದ ಪುಟದಲ್ಲಿ ನೋಡಿದ ‘ಒಬ್ಬಾತ ಬಲಗೈ ಎತ್ತಿ ಹೊರಗಿನ ಜನರಿಗೆ ವಿಶ್ ಮಾಡುತ್ತಿರುವ ಫೋಟೋ ವಿಂಡ್ಸರ್ ಮ್ಯಾನರ್ ಹೋಟೆಲ್ ಪ್ರವೇಶಿಸುವಾಗ ತೆಗೆದಿದ್ದು’. "ಪ್ರಸಿದ್ಧ ಉದ್ಯಮಿ, ಎಂಪಿ ಕೈ ನೋವಿಂದ ಬಳಲುತ್ತಿದ್ದವರು ಚಿಕಿತ್ಸೆಗಾಗಿ ಬಂದಿದ್ದಾರೆ" ಎಂಬ ಸುದ್ದಿ ಮುದ್ರಿತವಾಗಿತ್ತು.

"ಅವರು ಯಾರನ್ನೂ ನೋಡುತ್ತಿಲ್ಲ. ತಮ್ಮ ಚುನಾವಣೆ ಪ್ರಚಾರ ನಿಲ್ಲಿಸಿ ಚಿಕಿತ್ಸೆಗಾಗಿ ಬಂದಿದ್ದಾರಂತೆ. ಹೋಟೆಲ್ ಕಡೆ ಸುದ್ದಿ.. ಮತ್ತು ಸ್ವಿಟ್ (ರೂಮ್) ನಂಬರ್ 4 ನಲ್ಲಿದ್ದಾರಂತೆ" ಎಂದು ವಕ್ರನಗೆ ಬೀರಿದ ಪ್ರದೀಪ್. ಇಂತಹಾ ವಿಷಯಗಳಿಗೆ ಅವನಿಗೆ ಒಳ್ಳೆ ಫೀಸ್ ಕೊಡುವುದು ಪ್ರಬಲ್.

"ಮತ್ತು ಕೀರ್ತಿ ಶರ್ಮಾ ಬಗ್ಗೆ ಪತ್ತೆ ಹಚ್ಚಲು ಯಾರನ್ನು ಗೊತ್ತು ಮಾಡಿದ್ದೆ.. ಅಲ್ಲಿಂದ.." ಪ್ರಬಲ್ ಎನ್ನುವಷ್ಟರಲ್ಲಿ

"ಆ ಮಾಹಿತಿ ಬರುವಂತಿದೆ. ಇವತ್ತು 9-10 ಗಂಟೆಯೊಳಗೆ..." ಪ್ರದೀಪ್ ಉತ್ತರಿಸಿದ.

"ಅದನ್ನು ನನಗೆ ಫೋನ್ ಮಾಡಿ ತಿಳಿಸು"

"ಸರಿ ನಾನು ಹೊರಡುತ್ತೇನೆ, ಆಫೀಸಿನಲ್ಲಿರುತ್ತೇನೆ" ಪ್ರದೀಪ್ ತಿಂಡಿ ಕಾಫಿ ಮುಗಿಸಿದ." ಈ ಕೇಸನ್ನು ಯಾವ ಹೆಸರಿನಲ್ಲಿ ಬಿಲ್ ಮಾಡಲಿ? ಕೀರ್ತಿ ಶರ್ಮಾ?"

"ಹೌದು"

ಅದೃಷ್ಟವಶಾತ್ ಪ್ರದೀಪನ ಆಫೀಸು ಸಹಾ ಪ್ರಬಲ್ ಆಫೀಸ್ ಸಮೀಪವೇ ಮಲ್ಲೇಶ್ವರಂನಲ್ಲಿತ್ತು. ಅಥವಾ ಪ್ರಬಲ್ ಅದಕ್ಕೆಂದೇ ಅವನನ್ನು ಆರಿಸಿದ್ದ ಅನ್ನಬಹುದು. ರಾತ್ರಿ ಲೇಟಾಗಿ ಕೆಲಸ ಬಿದ್ದರೆ ದೂರ ದೂರ ಓಡಾಡುವುದನ್ನು ತಪ್ಪಿಸಿಕೊಳ್ಳಲು ಸುಲಭ. ದಕ್ಷಾ ಮಾತ್ರ ಸ್ವಲ್ಪ ದೂರದಲ್ಲಿ ರಾಜಾಜಿನಗರದಲ್ಲಿ ತಾಯಿಯ ಮನೆಯಲ್ಲಿದ್ದಳು.

ಪ್ರಬಲ್ ಎದ್ದು ರೆಡಿಯಾಗಿ ದಕ್ಷಾ ಆಫೀಸಿಗೆ ಹೊರಡುವ ಮುನ್ನ ಅವಳನ್ನು ಫೋನಲ್ಲಿ ಮಾತಾಡಿಸಿದನು "ದಕ್ಷಾ, ಇವತ್ತು ನೀನು ಮೊದಲು ಹೋಗಿ ಆಫೀಸ್ ತೆರೆದಿರು. ಪ್ರದೀಪ್ ಇವತ್ತು ವೀರೇಂದ್ರ , ಕೀರ್ತಿ, ಶ್ರುತಿ ಬಗ್ಗೆ ಮುಖ್ಯ ಪತ್ತೇದಾರಿ ಮಾಹಿತಿ ನೀಡುವವನಿದ್ದಾನೆ. ಅವನೊಂದಿಗೆ ಮಾತನಾಡಿ ಏನೇ ಇದ್ದರೂ ಬಗೆಹರಿಸು. ಡಿ ಎ ಆಫೀಸಿನಲ್ಲಿ ಕೀರ್ತಿಯನ್ನು ಹಿಡಿದು ಶ್ರುತಿ ವರ್ಮಾ ಬಗ್ಗೆ ಕೇಸ್ ಹಾಕಿದ್ದಾರಾ ಎಂದು ತಿಳಿದುಕೊ. ಇಲ್ಲವೇ ಕೀರ್ತಿ ಆಫೀಸಿಗೆ ಬಂದಿದ್ದರೆ ಅವಳಿಗೆ ಕಾಲ್ ಮಾಡಿ ‘ಹೀಗೆ ಪೋಲೀಸ್ ಬರಬಹುದು. ನಾನು (ಪ್ರಬಲ್) ಇಲ್ಲದೇ ಅವಳು ಯಾರಿಗೂ ಯಾವ ಹೇಳಿಕೆಯನ್ನೂ ಕೊಡಬೇಕಾಗಿಲ್ಲ. ಸುಮ್ಮನಿರಲು’ ಹೇಳು"

"‍ಓಕೆ, ನೀವೆಲ್ಲಿ ಹೊರಟಿರಿ ಈಗ?"

"ಎಂ ಪಿ ಕಿರಣ್‌ಶಂಕರ್ ರಾವ್ ಸಾಹೇಬರು ಊರಿಗೆ ಬಂದಿದ್ದಾರೆ. ಅವರನ್ನು ಮೀಟ್ ಮಾಡಿ ನಮಸ್ಕಾರ ಹೇಳಿ ಬರೋಣ ಎಂದು".

"ಅವರು ನಿಮ್ಮನ್ನು ನೋಡುತ್ತಾರೆಯೆ?" ಅವಳು ಕೇಳುವಷ್ಟರಲ್ಲಿ ಪ್ರಬಲ್ ಫೋನ್ ಕಟ್ ಮಾಡಿದ್ದ. ಅವಳಿಗೆ ಗೊತ್ತು ಪ್ರಬಲ್ ಆಸಾಮಾನ್ಯ ಚಾಣಾಕ್ಷ ಎಂದು!

9

ವಿಂಡ್ಸರ್ ಮ್ಯಾನರ್ ಪಂಚತಾರಾ ಹೋಟೆಲ್ ಮುಂದೆ ತನ್ನ ಮಾರುತಿ ಎಸ್ಟೀಂ ಕಾರನ್ನು ಪ್ರಬಲ್ ನಿಲ್ಲಿಸಿದಾಗ ಸರಿಯಾಗಿ ಬೆಳಿಗ್ಗೆ 9.30.

ರಿಸೆಪ್ಷನಿನಲ್ಲಿ ಇದ್ದಾಕೆಗೆ ಸ್ವಿಟ್ 4 ರಲ್ಲಿರುವ ಎಂ ಪಿ ಕಿರಣ್‍ಶಂಕರ್ ರಾವ್ ಅವರನ್ನು ನೋಡಲು ಬಂದಿದ್ದೇನೆ ಎಂದು ತನ್ನ ಕಾರ್ಡ್ ನೀಡಿ ನೇರವಾಗಿ ಕೇಳಿದನು.

ಆಕೆ ಅನುಮಾನದಿಂದ ಇವನತ್ತ ನೋಡಿ ಆ ರೂಮಿಗೆ ಕಾಲ್ ಮಾಡಲು, "ಬೇಡವಾ ಸರ್, ಓಕೆ ಸರ್" ಎಂದು ಉತ್ತರಿಸಿದಳು

"ಅವರು ನಿಮ್ಮನ್ನು ನೋಡುವುದಿಲ್ಲವಂತೆ!" ಎನ್ನುತ್ತಾ ರಿಸೆಪ್ಷನಿಸ್ಟ್ ಜಂಬದಿಂದ ನೋಡಿದಳು.

"ಕೊಡಿ ಇಲ್ಲಿ, ಒಂದ್ನಿಮಿಷ" ಎಂದು ಅವಳ ಕೈಯಲ್ಲಿದ್ದ ರಿಸೀವರನ್ನು ತೆಗೆದುಕೊಂಡ.

"ಮಿಸ್ಟರ್ ರಾವ್, ನಿಮ್ಮ ಮಗ ಕರುಣ್ ರಾವ್ ಮತ್ತು ಶ್ರುತಿ ಬಗ್ಗೆ ಮಾತಾಡುವುದಿತ್ತು. ಅಲ್ಲೇ ಬಂದು ಮಾತಾಡಲಾ, ಅಥವಾ ಇಲ್ಲೇ ...ಎಲ್ಲರ ಮುಂದೆ ಹೇಳಿಬಿಡಲಾ?" ಎಂದ ತನ್ನ ಕಠಿಣ ಕೋಟ್ ರೂಮ್ ಸ್ವರದಲ್ಲಿ...

ಧೀರ್ಘವಾಗಿ ಉಸಿರೆಳೆದುಕೊಂಡು ತಬ್ಬಿಬ್ಬಾದ ದನಿಯಲ್ಲಿ ಆತ "ಅರೆರೆ, ಬನ್ನಿ ಇಲ್ಲೇ ಮಾತಾಡೋಣ" ಎಂದರು.

"ಬರಲು ಹೇಳಿದರು" ಎಂದು ಅವಳಿಗೆ ಫೋನ್ ವಾಪಸ್ ಕೊಟ್ಟು ತಿರುಗಿ ನೋಡದೇ ಸ್ವಿಟ್ ನಂಬರ್ ಹುಡುಕುತ್ತಾ ಹೊರಟುಬಿಟ್ಟ.

ಬಾಗಿಲಲ್ಲೇ ಕಾಯುತ್ತಿದ್ದ ಎಂ ಪಿ ಸಾಹೇಬರು ಅವನೆದುರಿಗೆ ನಿಂತು ಒಳಗೇ ಕರೆಯದೇ, "ಏನದು ನನ್ನ ಮಗನ ವಿಚಾರ ಎತ್ತಿದಿರಲ್ಲಾ?"

ಪ್ರಬಲ್ ತಾನೇ ವಿಚಾರಣೆ ಮಾಡುವುದರಲ್ಲಿ ತಜ್ಞ. ಅವನನ್ನೇ ಪ್ರಶ್ನಿಸಿದರೆ ಕಣ್ಣು ಸಹಾ ಮಿಟುಗಿಸುವುದಿಲ್ಲ. "ಅದಕ್ಕೂ ಮುಂಚೆ ನಿಮ್ಮ ಪತ್ತೇದಾರ ವೀರೇಂದ್ರ ಕಟ್ಟಿಮನಿ ಬಗ್ಗೆ ಹೇಳೋಣವೆನಿಸಿತು" ಎಂದ ಕ್ಲುಪ್ತವಾಗಿ.

"ವಾಟ್? ಏನಾಯಿತು?"

"ಸತ್ತು ಹೋದ ಅಷ್ಟೇ!" ಎಂದ್ ಇನ್ನೂ ರಹಸ್ಯವಾಗಿ.

ಆಗ ಜಾಗ್ರತರಾದವರಂತೆ ಕಿರಣ್‌ಶಂಕರ್ ರಾವ್ " ಅಯ್ಯೋ ಒಳಗೆ ಬನ್ನಿಯಪ್ಪಾ... ಯಾರಾದರೂ ಕೇಳಿಸಿಕೊಂಡರೆ?" ಎಂದು ಪ್ರಬಲನ ಕೈಹಿಡಿದು ಒಳಗೆ ಸೆಳೆದರು.

ಎದುರಿಗಿದ್ದ ಸೋಫಾದಲ್ಲಿ ನಿರಾತಂಕದಿಂದ ಕುಳಿತ ಪ್ರಬಲ್.

ಈಗ ಆತಂಕದಿಂದ ಹತ್ತಿರ ಬಂದ ಎಂ,ಪಿ. "ಯಾರು ನೀವು ? ಏನಾಗಿದೆ ಹೇಳಿ..."

 "ನಾನು ಪ್ರಬಲ್ ಮಾನ್ವೀಕರ್ ಅಂತಾ ಲಾಯರ್... ನನ್ನ ಒಂದು ಕೇಸಿನಲ್ಲಿ ನಿನ್ನೆ ರಾತ್ರಿ ತಾನು ನಿಮ್ಮ ಪತ್ತೇದಾರ ಎಂದು ಹೇಳಿಕೊಂಡಿದ್ದ ವೀರೇಂದ್ರ ಕಟ್ಟೀಮನಿ ಎಂಬಾತ ಕೊಲೆಯಾಗಿದ್ದನ್ನು ಕಂಡೆ"

ಕಿರಣ್ ಶಂಕರ್ ರಾವ್ ಹೌಹಾರಿ ಕುಸಿದು ಕುಳಿತರು "ಕೊಲೆಯೆ?" ಅವರ ದ್ವನಿ ಒಡೆಯಿತು.

"ಅನುಮಾನವೇ ಇಲ್ಲ, ಐಸ್ ಪಿಕ್ ನಲ್ಲಿ ಚುಚ್ಚಿದ್ದರಿಂದ ಕೊಲೆಯಾಗಿ ಸತ್ತುಹೋದ...ಅದಿರಲಿ, ನೀವ್ಯಾಕೆ ಅವನ ಬಳಿ ವ್ಯವಹಾರ ಇಟ್ಟುಕೊಂಡಿದ್ದಿರಿ?"

"ನಾನು.. ನಾನು... ನನ್ನ ಮಗ ಅವನ ಪ್ರೇಮಿಗೆ ಬರೆದ ಪತ್ರಗಳನ್ನು ಪತ್ತೆ ಹಚ್ಚಿ ತಂದುಕೊಡಲಿಕ್ಕೆ ಹೇಳಿದ್ದೆ"

"ಅವನ ಪ್ರೇಮಿ ಎಂದರೆ ಶ್ರುತಿ ವರ್ಮಾ?"

"ಹೌದು, ನಿಮಗೆ ಹೇಗೆ ಗೊತ್ತು?"ಎಂ.ಪಿ. ತನಗೆ ಎಲ್ಲರೂ ಉತ್ತರಿಸಲೇಬೇಕು ಎಂಬ ವರಸೆಯಲ್ಲಿ ಕೇಳಿದ್ದರು.

"ನೀವು ಮೊದಲು ಹೇಳಿ ಯಾಕೆ?" ಪ್ರಬಲ್ ಬಡಪೆಟ್ಟಿಗೆ ಬಿಡುವವನಲ್ಲ.

"ಮೊದಲಿಗೆ ಆ ಹುಡುಗಿ ನನ್ನ ಮಗಳ ಹೆಂಡತಿಯಾಗುವಷ್ಟು ಮುಂದುವರೆದು ಗರ್ಭಿಣಿಯಾಗಿದ್ದಳೆಂದು ನನಗೆ ರಹಸ್ಯ ಸುದ್ದಿ ಬಂದಿತು, ಕೇಸ್ ಹಾಕುತ್ತೇನೆ ಎನ್ನುತ್ತಿದ್ದಳಂತೆ. ಊರಿಂದ ಹೋಗುವಂತೆ ಒತ್ತಡ ತಂದೆ, ಹೊರಟುಬಿಟ್ಟಳು...ಇಷ್ಟು ಸಾಲದು, ಎಂದು ಕರುಣ್ ಬರೆದ ಪತ್ರಗಳ ಬಗ್ಗೆ ನನಗೆ ಅವಳು ಊರುಬಿಟ್ಟ ಮೇಲೆ...ತಿಳಿದು ಬಂದಿತು... ಹಾಗಾಗಿ..."

"ಇರಲಿ, ಅವನು ತಂದುಕೊಡುವುದು ಎಂದರೆ ಕದ್ದು ತರುವುದು, ಬ್ಲ್ಯಾಕ್ ಮೈಲ್ ಮಾಡುವುದು ಎಂದೆಲ್ಲಾ ನಿಮಗೆ ತಿಳಿದಲ್ಲವೆ?" ಪ್ರಬಲನ ಮಾತಿನ ಪೆಟ್ಟಿಗೆ ಸಂಸತ್ ಸದಸ್ಯನ ಮುಖ ವಿವರ್ಣವಾಯಿತು

"ಯಾಕೆ, ಏನು?" ಎಂದು ಅವರು ಕೈ ಎತ್ತಲಾಗದವಂತೆ ನೋವಿನ ಮುಖ ಮಾಡಿ ತೊದಲಿದರು.

"ನಿಮ್ಮ ಮಗ ಮತ್ತು ಶ್ರುತಿ ವರ್ಮಾ ಇಬ್ಬರೂ ವಯಸ್ಸಿನಲ್ಲಿ ಮೇಜರ್ ತಾನೆ, ಅವರ ಖಾಸಗಿ ಪತ್ರಗಳನ್ನು ಕಸಿಯಲು ನಿಮಗೇನು ಹಕ್ಕಿದೆ, ಕಾನೂನಿನಲ್ಲಿ?" ನೇರ ಮಾತಿನ ಪ್ರಹಾರ ಕೊಡುವುದರಲ್ಲಿ ಪ್ರಬಲ್ ನಿಪುಣ!

"...ನನಗೆ ಬಹಳ ಟಫ್ ಚುನಾವಣೆಯಿದೆ.ಈ ಪತ್ರಗಳು ನನ್ನ ಎದುರಾಳಿಗೆ ಸಿಕ್ಕರೆ ನನ್ನ ಮಾನ ಮರ್ಯಾದೆ ಪಬ್ಲಿಕ್ಕಿನಲ್ಲಿ ತೆಗೆಯುತ್ತಿದ್ದರು."

"ಹಾಗಾಗಿ ವೀರೇಂದ್ರನಿಗೆ ಈ ಕೆಲಸ ಕೊಟ್ಟಿರಿ..?" ಪ್ರಬಲ್ ತೀಕ್ಷ್ಣವಾಗಿ ಕೇಳಿದ್ದ. ಎದುರಿಗಿದ್ದ ವ್ಯಕ್ತಿಗೆ ತಮ್ಮ ವರ್ತನೆಯ ಗಂಭೀರತೆ ತಿಳಿಯಲೆಂದು.

ಕಿರಣ್‌ಶಂಕರ್ ತಲೆಯಾಡಿಸುತ್ತಾ ನಿಡುಸುಯ್ದರು "ಹೌದು, ನಿನ್ನೆ ರಾತ್ರಿ ಮಾತಾಡಿಸಿದಾಗ ಚೆನ್ನಾಗಿಯೇ ಇದ್ದ, ಈಗ ನೋಡಿದರೆ ಕೊಲೆಯಾಗಿದ್ದಾನೆ ಎನ್ನುತ್ತೀರಿ"

"ಎಷ್ಟು ಫೀಸ್ ಮಾತಾಡಿದ್ದೀರಿ, ಅವನಿಗೆ?" ಪ್ರಬಲ್ ಸವಾಲು ಮುಂದುವರೆಸಿದ್ದ

ಕಿರಣ್‍‌ಶಂಕರ್ ರಾವ್ ದ್ವನಿಯಲ್ಲಿ ಒರಟುತನ ವಾಪಸ್ ಬಂದಿತು. "ಅದೆಲ್ಲಾ ನಿಮಗೇಕೆ? ನೀವು ಯಾರಿಗಾಗಿ ಕೆಲಸ ಮಾಡುತ್ತಿದ್ದಿರಿ, ಅದನ್ನು ಹೇಳಿ"

ಪ್ರಬಲ್ ನಕಾರಾತ್ಮಕವಾಗಿ ತಲೆಯಾಡಿಸಿದ, "ಅದನ್ನು ನಿಮಗೆ ಹೇಳಲು ಸಾಧ್ಯವಿಲ್ಲ".

"ಹಾಗಾದರೆ ಈ ಮಾತುಕತೆ ಮುರಿದು ಬಿದ್ದಿತು ಎಂದುಕೊಳ್ಳಿ.. ನಾನೂ ಏನೂ ಹೇಳುವುದಿಲ್ಲ" ಎಂದರು ರಾಜಕೀಯದಲ್ಲಿ ಪಳಗಿದಾತ.

"ಸರಿ ಹಾಗಾದರೆ.."ಎಂದು ಶಾಂತ ದನಿಯಲ್ಲಿ ಉತ್ತರಿಸಿ ಹೊರಟು ನಿಂತ ಪ್ರಬಲ್ ."ನನ್ನ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಹಾನಿ ನಿಮಗೇನೇ.. ನಾನೇನೂ ಮರುಚುನಾವಣೆಗೆ ನಿಂತಿಲ್ಲ!"

"ಮಿಸ್ಟರ್ ಮಾನ್ವೀಕರ್, ಸ್ವಲ್ಪ ನಿಲ್ಲಿ...ನಿಮಗೇನು ಬೇಕು ನನ್ನಿಂದ?" ಎಂದರು ಸಂಧಾನಕ್ಕೆ ಮತ್ತೆ ಸಿದ್ಧರಾದವರಂತೆ ಕಿರಣ್‍ಶಂಕರ್ ರಾವ್.

ಪ್ರಬಲ್ ಮತ್ತೆ ಒಳಬಂದು ಕಣ್ಣು ಕಿರುದಾಗಿಸಿ ನೋಡಿದ, "ನಿಮಗೆ ಈ ವೀರೇಂದ್ರ ಕಟ್ಟೀಮನಿಯ ಪರಿಚಯವಾಗಿ ವ್ಯವಹಾರ ಶುರುವಾಗಿದ್ದು ಹೇಗೆ?"

"ಅಹ್...ಅದೊಂದು ಕತೆ!... ಈ ವೀರೇಂದ್ರ ಅನ್ನುವವನೇ ಕೆಲವು ದಿನದಿಂದ ಇನ್ಶೂರೆನ್ಸ್ ಸಂಬಂಧಿತವಾಗಿ ಕಾರ್ ಅಪಘಾತವೊಂದನ್ನು ಪತ್ತೆ ಮಾಡುತ್ತಿದ್ದನಂತೆ. ಆಗ ಅದರಲ್ಲಿ ಶ್ರುತಿ ವರ್ಮಾ ಇದ್ದಳು ಎಂದು ತಿಳಿದುಬಂದಿದೆ. ಅವನೇ ಚೆಕ್ ಮಾಡಿ ಆಕೆಗೂ ನನ್ನ ಮಗ ಕರುಣ್‌ಗೂ ಪ್ರೇಮವಿತ್ತೆಂದು ಕಂಡುಕೊಂಡಿದ್ದಾನೆ.."ಎನ್ನುತ್ತಾ ಸಿಗಾರ್ ಹಚ್ಚಿಕೊಂಡರು ಎಂ.ಪಿ.

"ಆಮೇಲೆ?"

"ನನಗೆ ಕಾಲ್ ಮಾಡಿ ಈ ತರಹ ಹುಡುಗಿ ಇದ್ದಾಳೆ, ನಿಮ್ಮ ಮಗನ ಲವರ್, ಹೀಗೆಲ್ಲಾ ಬರೆದಿದ್ದಾನೆ ನಿಮ್ಮ ಮಗ ಎಂದ"

"ಹೇಗೆಲ್ಲಾ?" ಇವರಿಗೆಷ್ಟು ಗೊತ್ತು ಎಂದು ಪ್ರಬಲ್‌ಗೆ ಕುತೂಹಲ.

"ನೋಡಿ ಒಂದು ಸ್ಯಾಂಪಲ್ ತೋರಿಸುತ್ತೇನೆ.. ಈ ಪತ್ರದ ತುಣುಕು..ಎಲ್ಲಿ ಸಿಕ್ತು ಎಂದು ಕೇಳಬೇಡಿ ಅಷ್ಟೆ" ಎನ್ನುತ್ತಾ ಕಿರಣ್‌ಶಂಕರ್ ಜೇಬಿನಿಂದ ಒಂದು ಕಲರ್ ಪೇಪರ್ ಪತ್ರವನ್ನು ತೆಗೆದು ಓದುತೊಡಗಿದರು,

 " ‘ನಿನಗೆ ಗೊತ್ತು, ಪ್ರಿಯೇ, ನಾನು ನಿನ್ನನ್ನು ನೋಡಲು ಬಯಸುತ್ತಿರುತ್ತೇನೆ..ಆದರೆ ಈ ಅಪ್ಪ ಇದ್ದಾರಲ್ಲ, ಅವರು ನಮ್ಮ ಮದುವೆ ಬೇಡ ಎಂದು ದೊಡ್ಡ ಜಗಳವನ್ನೇ ಎತ್ತುತ್ತಾರೆ. ಅಷ್ಟಕ್ಕೂ ನಿನ್ನನ್ನು ಒಮ್ಮೆಯೂ ನೋಡಿಯೂ ಇಲ್ಲ. ಅವರಿಗೇಕೆ ನಮ್ಮ ಮೇಲೆ ಇಷ್ಟು ದ್ವೇಷ?.. ಈಗ ನೋಡು...ನಿನ್ನನ್ನು ಮೀಟ್ ಮಾಡದಿರಲಿ ಎಂದು ನನ್ನನ್ನು ತಮ್ಮ ಕಂಪನಿ ಕೆಲಸಕ್ಕೆಂದು ಹೇಳಿ ದೂರದ ಅರುಣಾಚಲ ಪ್ರದೇಶಕ್ಕೆ ಕಳಿಸಿದ್ದಾರೆ, ಇದನ್ನೆಲ್ಲಾ ಅವರ ಮತದಾರರಿಗೆ ತಿಳಿಸಿದರೆ ಅವರನ್ನೇ ಓಡಿಸುತ್ತಾರೆ... ಶ್ರುತೀ,.ಐ ಮಿಸ್ ಯೂ!" ಎಂದು ಪ್ರಬಲ್‌ನತ್ತ ತಿರುಗಿ, "ನೋಡಿ ಹೇಗಿದೆ ಇವನ ವರಸೆ?" ಎಂದು ಕೇಳಿದರು ಸಂಸತ್ ದುರೀಣ.

"ಇದು ನಿಜವೇ ಆಗಿದ್ದರೆ ನಿಮ್ಮ ಮತದಾರರಿಗೆ ತಿಳಿಯಬಾರದು ಅನಿಸುತ್ತದೆ. ಅಲ್ಲವೆ?" ಪ್ರಬಲ್ ಟಿಪ್ಪಣಿ ಅವರನ್ನು ಚುಚ್ಚಿತು. 

"ನೋಡಿ, ಈ ತರಹದ ಇನ್ನೂ ಎಂಟು- ಹತ್ತು ಲೆಟರ್ಸ್ ಇದೆಯಂತೆ.. ಇದನ್ನೆಲ್ಲಾ ತಂದುಕೊಡುತ್ತೇನೆಂದ ಆ ವೀರೇಂದ್ರ" ಹುಬ್ಬುಗಂಟಿಕ್ಕಿ ನುಡಿದರು, ಇದನ್ನೆಲ್ಲಾ ಹೇಳಲು ಅವರು ಬಯಸಿರಲಿಲ್ಲ ಎಂಬುದು ವಿದಿತವಾಗಿತ್ತು.

"ಎಷ್ಟು ದುಡ್ದು ಕೊಟ್ಟರೆ...?"

"ದಿನಕ್ಕೆ ಒಂದು ಸಾವಿರ ಮತ್ತು ಇತರೆ ಖರ್ಚು.. ಕೊನೆಗೆ ಲೆಟರ್ಸ್ ಕೊಟ್ಟರೆ ಒಟ್ಟಿಗೇ 25,000/-"

"ವ್ಯೂವ್...!"ಎಂದು ವಿಜ಼ಲ್ ಹೊಡೆದು ಹುಬ್ಬೇರಿಸಿದ ಪ್ರಬಲ್. "ಇದನ್ನು ಬರೀ ಫೀಸ್ ಅನ್ನುತ್ತಾರೆಯೆ?"

"ಮತ್ತೇನು?...ನನ್ನನ್ನು ಅವನು ಬ್ಲ್ಯಾಕ್ಲ್ ಮೈಲ್ ಮಾಡುತ್ತಿದ್ದ ಎನ್ನುತ್ತೀರಾ?" ಎಂದು ಸವಾಲು ಹಾಕಿದರು ಕಿರಣ್‌ಶಂಕರ್ ರಾವ್.

"ಹಾಗೇ ಅನಿಸುತ್ತಿದೆ!" ಪ್ರಬಲ್‍‌ನ ಶಾಂತ ಉತ್ತರ ಕೇಳಿ ಆತ ಮುಖ ಕೆಳಗೆ ಹಾಕಿದರು , ಉತ್ತರಿಸಲಿಲ್ಲ.

"ನಿಮ್ಮ ಮಗನನ್ನು ಎಲ್ಲಿ ಹೇಗೆ ಸಂಪರ್ಕಿಸಲಿ ಹೇಳಿ..."ಎಂದು ಪ್ರಶ್ನಿಸಿದ ಪ್ರಬಲ್.

"ಕರುಣ್‍‌ನನ್ನು ಇದರಿಂದ ಹೊರಗಿಡಿ..." ಅಪ್ಪಣೆ ಕೊಡುವವರಂತೆ ಕಿರಣ್ ಶಂಕರ್ ನುಡಿದರು. ಅದು ಪ್ರಬಲ್ ಮೇಲೆ ಪರಿಣಾಮ ಬೀರಲಿಲ್ಲ.

"ಹಾಗೆ ಮಾಡಿದರೆ ನನ್ನ ಕಕ್ಷಿದಾರರ ಪರವಾಗಿ ನಾನು ಕೆಲಸಕ್ಕಿದ್ದು ನ್ಯಾಯವಾಗುವುದಿಲ್ಲ" ಪ್ರಬಲ್ ದೃಢ ಉತ್ತರ.

"ನಿಮ್ಮ ಕ್ಲಯಂಟ್ ಹಾಗಾದರೆ ಆ ಕೆಟ್ಟ ಯುವತಿ...ಶ್ರುತಿ ವರ್ಮಾ?" ಅವರು ಬೆರಗಾಗಿ ಕೇಳಿದರು

"ಅಲ್ಲ" ಪ್ರಬಲ್ ಸೊಟ್ಟ ನಗೆ ಬೀರಿದ, "ನನ್ನ ಕ್ಲಯಂಟ್ ಹೆಸರು ಕೀರ್ತಿ ಶರ್ಮಾ!"

"ಅಯ್ಯೋ, ಅದು ಆ ಸತ್ತು ಹೋದ ಯುವತಿಯ ಹೆಸರು ಅಲ್ಲವೆ?"

"ನಿಮ್ಮ ಪ್ರಶ್ನೆಗಳಿಗೆಲ್ಲಾ ನಾನು ಉತ್ತರಿಸುವಂತಿಲ್ಲ" ಮತ್ತೆ ಮಗುಮ್ಮಾಗಿ ನುಡಿದ ಪ್ರಬಲ್.

ಆಗ ಅವರ ರೂಮಿಗೆ ಫೋನ್ ಕರೆ ಬಂದಿತು. ಅದನ್ನು ಕೇಳಿಸಿಕೊಂಡು ಕಿರಣ್ ಶಂಕರ್ "ಸರಿ, ಅವರನ್ನೂ ಮೇಲೆ ಕಳಿಸಿ" ಎಂದರು. ಪ್ರಬಲ್‌ನತ್ತ ತಿರುಗಿ "ಪೋಲಿಸ್ ಬಂದರಂತೆ...ಬರಹೇಳಿದೆ"

"ಹಾಗಾದರೆ ನಾನು ಇಲ್ಲಿಂದ ಹೊರಡುವುದೇ ಉಚಿತ" ಎಂದು ಪ್ರಬಲ್ ಮತ್ತೆ ಬಾಗಿಲತ್ತ ಹೊರಟ.

"ಸ್ವಲ್ಪ ತಾಳಿ, ನಿಮ್ಮ ಈ ಕೀರ್ತಿ ಶರ್ಮಾ ಬಳಿ ನನ್ನ ಮಗನ ಲೆಟರ್ಸ್ ಇದೆಯೆ ಹಾಗಾದರೆ?"

"ಈಗಲೇ ಹೇಳಲು ಸಾಧ್ಯವಿಲ್ಲ" ಎಂದು ಮತ್ತೆ ಮಾತಿನ ಲೂಪಿನಲ್ಲಿ ನುಣುಚಿಕೊಂಡ ಪ್ರಬಲ್.

"ನೋಡಿ ವಕೀಲ್ ಸಾಹೇಬರೆ, ನಾನು ನಿಮಗೆ ದಿನಕ್ಕೆ 3,000/- ರೂ. ಫೀ ಕೊಡಲು ರೆಡಿಯಿದ್ದೇನೆ.. ನನ್ನ ಕಡೆಯಿಂದ ಕೇಸ್ ತಗೊಳ್ಳಿ"

ಪ್ರಬಲ್ ಜೋರಾಗಿ ನಕ್ಕ."ಅದೆಲ್ಲಾ ಆಗುವುದಿಲ್ಲ. ನನ್ನ ಕಕ್ಷಿದಾರಳು ನನಗಾಗಲೇ ಹಣ ಕೊಟ್ಟು ಸೇವೆಗಿಟ್ಟುಕೊಂಡಿದ್ದಾಳೆ"

"ಎಷ್ಟು ಕೊಟ್ಟು?" ದುಡ್ಡು ಎಂದರೆ ಕೇವಲ ನಂಬರ್ ಎಂದುಕೊಳ್ಳುವಾತ ಕೇಳಿದ್ದರು.

"ಮೂರು ರೂಪಾಯಿ!" ಎನ್ನುತ್ತಾ ಅಲ್ಲಿಂದ ಮರುಮಾತಿಲ್ಲದೇ ಹೊರಬಿದ್ದ ಪ್ರಬಲ್.

ಸ್ತಂಭೀಭೂತರಾದ ಕಿರಣ್‌ಶಂಕರ್ ರಾಯರಿಗೆ ಯಾರಾದರೂ ಮೂರು ರೂ. ಕೊಟ್ಟ ಕ್ಲಯಂಟ್ ಗೋಸ್ಕುರ 3,000/- ಫೀಸ್ ಕೊಡುವವರನ್ನು ನಿರಾಕರಿಸುತ್ತಾರೆಯೆ, ಎಂದು ಅಚ್ಚರಿಯಾಯಿತು. ಈತ ತುಂಬಾ ಧರ್ಮಿಷ್ಟನೋ ಅಥವಾ ಹುಚ್ಚನೋ ಇರಬೇಕು, ಯಾವುದೆಂದು ಅವರ ಬುದ್ದಿಗೆ ಹೊಳೆಯಲಿಲ್ಲ.

(ಮುಂದುವರೆಯುವುದು)

 ಭಾಗ -4

10

ಪ್ರಬಲ್ ಮಾನ್ವೀಕರ್ ಕಚೇರಿಗೆ 10 ಗಂಟೆ ಹೊತ್ತಿಗೆ ಪ್ರದೀಪ್ ಧಾವನ್ ಧಾವಿಸಿ ಬಂದನು. " ಗುಡ್ ಮಾರ್ನಿಂಗ್, ದಕ್ಷಾ" ಎನ್ನುತ್ತಾ ಒಳಬಂದನು."ಎಲ್ಲಿ ಪ್ರಬಲ್?"

"ಇನ್ನೇನು ಬರುತ್ತಿದ್ದಾರೆ" ಗಡಿಯಾರ ನೋಡಿಕೊಂಡಳು ದಕ್ಷಾ.

"ನಾನು ಅಪಘಾತದ ಸ್ಥಳದ ಪತ್ತೆಗಾಗಿ ಹೊರಟೆ. ಇನ್ನೇನು ನನಗೆ ವೀರೇಂದ್ರ ಕಟ್ಟೀಮನಿ ಬಗ್ಗೆ ಮಾಹಿತಿಯೆಲ್ಲಾ ನಮ್ಮವರು ಹೊರಹಾಕುತ್ತಾರೆ" ಎಂದನು ಸಹಾಯಕ ಪತ್ತೇದಾರರಿಂದ ಬರಬೇಕಿದ್ದ ವರದಿಗಳನ್ನು ನಿರೀಕ್ಷಿಸುತ್ತಾ.

"ಮತ್ತೆ ಪೋಲೀಸಿಗೆ ತಿಳಿದಿರುವುದು..." ಎಂದು ದಕ್ಷಾ ಕೇಳುತ್ತಿದ್ದಂತೆ,

ಅದೇ ಗಳಿಗೆಗೆ ಪ್ರಬಲ್ ಮಾತಾಡುತ್ತಾಲೇ ಒಳ ಪ್ರವೇಶಿಸಿದ. "ಪೋಲೀಸಿಗೆ ಬಹಳ ವಿಷಯಗಳು ಆಗಲೇ ತಿಳಿದುಹೋಗಿವೆ ದಕ್ಷಾ... ನಮ್ಮ ಕಕ್ಷಿದಾರಳನ್ನು ಈಗ ತಾನೇ ಬಂಧಿಸಿದ್ದಾರೆ, ವೀರೇಂದ್ರನ ಫ಼ಸ್ಟ್ ಡಿಗ್ರೀ ಮರ್ಡರ್ ಆಪಾದನೆ ಮೇಲೆ!"

"ಓಹ್.."ಎಂದು ಸುದ್ದಿಯನ್ನು ಅರಗಿಸಿಕೊಂಡಳು ದಕ್ಷಾ.

"ನಮಗೆ ಮಾತ್ರ ಗೊತ್ತು, ಅವಳು ಅವಳಲ್ಲ ಎಂದು.."ಪ್ರದೀಪ್ ಟಿಪ್ಪಣಿ ಮಾಡಿದ. "ಅವಳು ನಾನವಳಲ್ಲ ಎನ್ನಲು ಸಾಧ್ಯವೆ?"

"ಅನ್ನಬೇಕಿಲ್ಲ!" ಪ್ರಬಲ್ ಅವರತ್ತ ಮಾರ್ಮಿಕವಾಗಿ ನೋಡುತ್ತಾ ಕುಳಿತ. "ಪ್ರಾಸಿಕ್ಯೂಷನ್ನಿನವರು ಕೇಸ್ ಹಾಕಿರುವುದು ‘ಕೀರ್ತಿ ಶರ್ಮಾ ಅಲಿಯಾಸ್ ಶ್ರುತಿ ವರ್ಮಾ ವರ್ಸಸ್ ಕರ್ನಾಟಕ ರಾಜ್ಯ’ ಎಂದು!.. ಪೋಲೀಸರಿಗೆ ದೊಡ್ಡ ಅನುಮಾನವಿದೆ. ಕೋರ್ಟಿನಲ್ಲಿ ಬಾಯಿ ಬಿಡಿಸುವಾ ಎಂದಿದ್ದಾರೆ."

"ಅದು ಹೇಗೆ,ಚೀಫ್?"

"ನನ್ನ ಪ್ರಕಾರ ಪೆಟ್ರೋಲ್ ಬಂಕಿನಲ್ಲಿ ಇವಳು ತನ್ನ ಹೆಸರಿನ ಬಿಲ್ ತೆಗೆದುಕೊಂಡಿರಬಹುದು...ಎನಿವೇ, ಕೀರ್ತಿ ಶರ್ಮಾ ಮೇಲೆ ಕೇಸಾಗಿದೆ.."

"ಸರಿ ನಾನು ಹೊರಟೆ, ಅಪಘಾತದ ಸ್ಥಳದ ಬಗ್ಗೆ, ವೀರೇಂದ್ರನ ಬಗ್ಗೆ ತಿಳಿದು ಬಂದರೆ ಫೋನ್ ಮಾಡುತ್ತೇನೆ" ಎಂದು ಹೊರಡಲನುವಾದ ಪತ್ತೇದಾರ ಪ್ರದೀಪ್.

"ಮಧ್ಯಾಹ್ನ ಹೈಕೋರ್ಟಿನಲ್ಲಿ ಇದರ ಪ್ರಿಲಿಮನರಿ ಹಿಯರಿಂಗ್ ಇದೆ.. ನಾನು ದಕ್ಷಾ ಅಲ್ಲಿರುತ್ತೇವೆ". ಪ್ರದೀಪ್ ತಲೆಯಾಡಿಸಿ ಹೊರಟ.

 ಪ್ರಬಲ್ ಇತ್ತ ತಿರುಗಿ, "ದಕ್ಷಾ, ಮಧ್ಯಾಹ್ನ 2ಕ್ಕೆ ಕೋರ್ಟಿನಲ್ಲಿರಬೇಕು... ಮಿಕ್ಕ ಕೇಸುಗಳನ್ನೆಲ್ಲಾ ನಮ್ಮ ಅಸಿಸ್ಟೆಂಟ್ಸ್ ಗಳಿಗೆ ಹಂಚಿಬಿಡು...ನಾವಿಬ್ಬರೂ ಇದರ ಮೇಲೆ ಗಮನ ಹರಿಸೋಣ"

 "ಅಬ್ಬಾ, ಮೂರು ರೂಪಾಯಿ ಕೇಸಿಗೆ ಯಾಪಾಟಿ ಕೆಲಸ!" ಎಂದು ಉದ್ಗರಿಸಿ ತನ್ನ ಕೆಲಸದಲ್ಲಿ ಮಗ್ನಳಾದಳು ದಕ್ಷಾ.

11

ಮಧ್ಯಾಹ್ನ 2 ಕ್ಕೆ ಹೈಕೋರ್ಟ್ ಸಭಾಂಗಣದಲ್ಲಿ ಸಂಬಂಧಪಟ್ಟವರೆಲ್ಲಾ ಸೇರಿದ್ದಾರೆ. ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿ ಅವರೂ, ಪತ್ರಿಕಾ ವರದಿಗಾರರೂ ನೆರೆದಿದ್ದಾರೆ.

"ಕೇಸ್ ಆಫ್ ಕೀರ್ತಿ ಶರ್ಮಾ ಅಲಿಯಾಸ್ ಶ್ರುತಿ ವರ್ಮಾ ವರ್ಸರ್ಸ್ ಸ್ಟೇಟ್ ಆಪ್ ಕರ್ನಾಟಕ ಈಗ ಸೆಷನ್ನಿನಲ್ಲಿದೆ. ಜಡ್ಜ್ ಆಲ್ಬರ್ಟ್ ಡಿಸೋಜಾ ಸಾಹೇಬರು ಬರುತ್ತಿದ್ದಾರೆ." ಎಂದು ಕೋರ್ಟ್ ಬೇಲಿಫ್ ಘೋಷಿಸಿದ.

ಜಡ್ಜ್ ತಮ್ಮ ಸೀಟ್ ಅಲಂಕರಿಸಲು ಎಲ್ಲರೂ ಅವರಿಗೆ ವಂದಿಸಿ ಕುಳಿತರು.

ರಾತ್ರಿಯಿಡೀ ನಿದ್ರೆಯಿಲ್ಲದೇ ಈಗ ಪೋಲೀಸ್ ಕಸ್ಟಡಿಯಲ್ಲೂ ಇದ್ದ ಆಪಾದಿತೆ ಕೀರ್ತಿ ಶರ್ಮಾ ನೊಂದು ಸೋತವಳಂತೆ ಕಾಣುತ್ತಿದ್ದಳು.. ಕಟ್ಟೆ ಹತ್ತಿ ಕೂರುವ ಮುನ್ನ ಪ್ರಬಲ್‌ನತ್ತ ತಿರುಗಿದ್ದಳು

"ಸರ್, ನಾನವರಿಗೆ ಏನೂ ಹೇಳಿಲ್ಲ...ಅಯ್ಯೋ, ನಾನು ಅವನನ್ನು ಕೊಲೆ ಮಾಡಿಬಿಟ್ಟೆನಾ... ಇಲ್ಲ ಅಲ್ಲವೆ ಸರ್?"

"ನೀನು ಏನೂ ಹೇಳದಿದ್ದುದೂ ಒಳ್ಳೆಯದಾಯಿತು.. ಬಹಳ ಸೂಕ್ಷ್ಮವಾಗಿದೆ ಕೇಸು. ನಿಧಾನವಾಗಿ ಎಳೆಗಳನ್ನು ಬಿಡಿಸುತ್ತಾ ಹೋಗುತ್ತೇನೆ. ತಾಳ್ಮೆಯಿಂದ ಕಾದಿರು" ಎಂದು ಹೇಳಿ ಸಾಂತ್ವನಗೊಳಿಸಿ ಕಳಿಸಿದ್ದ ಪ್ರಬಲ್.

 "ಪ್ರಬಲ್ ಇದ್ದೆಡೆ ಟ್ರಬಲ್ ಇಲ್ಲ ಅನ್ನುತ್ತಾರೆ ನಮ್ಮ ಕಕ್ಷಿದಾರರು" ಎಂದು ಧೈರ್ಯ ತುಂಬಿ ಬೆನ್ನು ತಟ್ಟಿದ್ದಳು ದಕ್ಷಾ.

ಪಬ್ಲಿಕ್ ಪ್ರಾಸಿಕ್ಯೂಟರ್ (ಸರಕಾರಿ ವಕೀಲ) 55 ವರ್ಷ ವಯಸ್ಸಿನ ಹರಿಹರನ್ ಎದ್ದು ನಿಂತರು. ವಿಭೂತಿ ಹಚ್ಚಿಕೊಂಡು ಕಪ್ಪು ಕೋಟ್ ಧರಿಸಿ ಸ್ವಲ್ಪ ಬೊಜ್ಜು ಹೊಟ್ಟೆಯಿದ್ದಾತ ಪ್ರಬಲ್‍ಗೆ ಹಳೇ ಪ್ರತಿಸ್ಪರ್ಧಿ ಕೋರ್ಟ್ ರೂಮಿನಲ್ಲಿ. ಅವರೊಬ್ಬ ಲೀಗಲ್ ಲುಮಿನರಿ ಅಂದರೆ ಕಾನೂನು ತಜ್ಞ ಎಂದೇ ಹೇಳಲಾಗುತ್ತದೆ. ಅವರು ಸುಲಭವಾಗಿ ಸೋಲಿಸಲಾಗದ ಪ್ರಾಸಿಕ್ಯೂಟರ್ ಎಂದು ಪ್ರಬಲ್‍ಗೂ ಚೆನ್ನಾಗಿ ಗೊತ್ತು.

"ಯುವರ್ ಆನರ್, ಈಗ ಘೋಷಿಸಿದ ಕೇಸಿನ ಪ್ರಿಲಿಮಿನರಿ ಹಿಯರಿಂಗ್ ಇದು." ಎಂದು ಮುಂದೆ ಬಂದರು ಹರಿಹರನ್. "ಕೋರ್ಟ್ ಸಮ್ಮುಖದಲ್ಲಿರುವ ಕೀರ್ತಿ ಶರ್ಮಾ ಅಲಿಯಾಸ್ ಶ್ರುತಿ ವರ್ಮಾ ಎಂಬ ಎರಡು ಹೆಸರುಗಳನ್ನು ಬಳಸುತ್ತಿರುವ ಈ ಆರೋಪಿ ಒಬ್ಬ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಾ ಪತ್ತೇದಾರ ವೀರೇಂದ್ರ ಕಟ್ಟೀಮನಿಯವರ ಕೊಲೆಯನ್ನು ಮಾಡಿದ್ದಾಳೆ ಎಂದು ನಾವು ವಾದಿಸುತ್ತೇವೆ. ಇದಕ್ಕೆ ಸಂಬಂಧ ಪಟ್ಟ ಮೊದಲ ಹೇಳಿಕೆಗಳನ್ನು ನಿಮಗೆ ನಾನು ಕೊಡುತ್ತಿದ್ದೇನೆ."

"ವೆರಿ ವೆಲ್!" ಎಂದರು ಬಿಳೀ ಹುಬ್ಬು ಮತ್ತು ಗಿರಿಜಾ ಮೀಸೆ ಹೊತ್ತ ಹಲವು ದಶಕಗಳ ಕ್ರಿಮಿನಲ್ ಕೇಸಸ್ ಡೀಲ್ ಮಾಡಿದ್ದ ಅನುಭವೀ ಜಡ್ಜ್ ಆಲ್ಬರ್ಟ್ ಡಿಸೋಜಾ ಸಾಹೇಬರು "ನೀವು ಹೇಳಿಕೆ ಕೊಡಬಹುದು. ಅದರ ನಂತರ ಪ್ರತಿವಾದಿ ವಕೀಲರಾದ ಪ್ರಬಲ್ ಅದಕ್ಕೆ ಪ್ರತ್ಯುತ್ತರ ನೀಡಬಹುದು ಎನ್ನುತ್ತೇನೆ"

"ಯವರ್ ಆನರ್" ಎಂದು ಆರಂಭಿಸಿದರು ಎದೆ ಸೆಟೆಸಿ ಜಡ್ಜ್ ಎದುರು ದೃಢವಾದ ದನಿಯಲ್ಲಿ ಹರಿಹರನ್. ಇದೆಲ್ಲಾ ಅವರಿಗೆ ಮಕ್ಕಳಾಟದಂತೆ ಸುಲಭ. "ನಮ್ಮ ಪ್ರಕಾರ ಈ ಕೇಸಿನಲ್ಲಿ 26 ವರ್ಷ ವಯಸ್ಸಿನ ಈ ಕೀರ್ತಿ ಶರ್ಮಾ ತನ್ನ ಸ್ವಂತ ಊರಿನಿಂದ, ದುಡ್ದು ಕದ್ದು ಪರಾರಿಯಾದ ತನ್ನ ಪ್ರೇಮಿಯ ಅನುಪಸ್ಥಿತಿ ನೋಡಿ, ವಂಚಿತೆಯಾಗಿ ಓಡಿಬರುತ್ತಾಳೆ. ಮಿಸ್ ಕೀರ್ತಿ ತನ್ನ ದುಃಸ್ಥಿತಿಯನ್ನು ನೆನೆದು ತನ್ನ ಐಡೆಂಟಿಟಿಯನ್ನು ( ಹೆಸರು ಮತ್ತು ವ್ಯಕ್ತಿತ್ವ) ಬದಲಿಸಿಕೊಳ್ಳೋಣ, ಗುಪ್ತವಾಗಿ ಹೊಸ ಜೀವನ ಆರಂಭಿಸೋಣ ಎಂಬ ದುರುದ್ದೇಶದಿಂದ ಕಾರಿನಲ್ಲಿ ಬರುವಾಗ ಹೆದ್ದಾರಿಯಲ್ಲಿ ತನ್ನ ಸರಿಸಮಾನಳಾದ ಇನ್ನೊಬ್ಬ ಯುವತಿಯ ತಲಾಶೆಯಲ್ಲಿರುತ್ತಾಳೆ. ಅಲ್ಲಿ ಒಂದು ಕಡೆ ಶ್ರುತಿ ವರ್ಮಾ ಎಂಬ ನಿಸ್ಸಹಾಯಕ ಯುವತಿ ನಂದಿ ಬೆಟ್ಟದ ರಸ್ತೆಯಲ್ಲಿ ಕಾರ್ ಕೆಟ್ಟು ಸಿಕ್ಕಿಹಾಕಿಕೊಂಡಿರುವುದರಿಂದ ಅದರ ದುರುಪಯೋಗ ಪಡೆದು ಅವಳಿಗೆ ಊರಿನವರೆಗೂ ಲಿಫ್ಟ್ ಕೊಡುವುದಾಗಿ ಆಹ್ವಾನಿಸುತ್ತಾಳೆ. ಆಕೆಯನ್ನು ಕೊಂದು ಅವಳನ್ನು ಕಾರಿನ ಅಪಘಾತದಲ್ಲಿ ಸತ್ತವಳೆಂದು ಬಿಂಬಿಸಿ ಆಕೆಯ ಹೆಸರು ಮತ್ತು ನಿಶಾನೆಗಳನ್ನು ಕದ್ದು, ತನ್ನದನ್ನು ಅಲ್ಲಿಯೇ ಬಿಟ್ಟು ಕಾನೂನಿನ ಕಣ್ಣಿಗೆ ತಾನೇ, ಅಂದರೆ ಕೀರ್ತಿ ಶರ್ಮಾಳೇ ಸತ್ತು ಹೋಗಿದ್ದಾಳೆಂದು ನಿರೂಪಿಸಲು ಸಂಚು ಮಾಡುತ್ತಾಳೆ. ಹಾಗೆಯೇ ಮಾಡಿದ್ದಾಳೆ ಎಂದು ನಾವು ಆರಂಭಿಸುತ್ತೇವೆ!"

 "ಸ್ವಲ್ಪ ತಡೆಯಿರಿ, ಮಿ|| ಹರಿಹರನ್.. ನನಗೆ ವಿವರಿಸಿ!" ಎಂದು ಮಧ್ಯೆ ನುಡಿದರು ಜಡ್ಜ್ ಡಿಸೋಜಾ, "ಇಲ್ಲಿ ನೀವು ಕೇಸನ್ನು ಆರಂಭಿಸಿದ್ದು ವೀರೇಂದ್ರ ಕಟ್ಟೀಮನಿಯವರ ಕೊಲೆಯೆಂದು ..ಇದೀಗ ಇನ್ನೊಬ್ಬ ಯುವತಿ ಶ್ರುತಿ ವರ್ಮಾ ಕೊಲೆಯನ್ನು ಈಕೆ ಮಾಡಿರಬಹುದು ಎನ್ನುತ್ತೀರಿ ಅಂದರೆ ನಿಮ್ಮ ಪ್ರಕಾರ ಈಕೆಯ ಮೇಲೆ ಶ್ರುತಿ ವರ್ಮಾ ಎಂಬವಳನ್ನು ಕೊಂದ ಆರೋಪ ಹಾಕುತ್ತಿಲ್ಲವೆ?"

"ಇಲ್ಲ, ಯುವರ್ ಆನರ್" ಎಂದರು ಪ್ರಾಸಿಕ್ಯೂಟರ್ ತಲೆಯಾಡಿಸುತ್ತಾ. "ಇದೀಗ ಈಕೆ ಮಾಡಿದ ಸಾಕ್ಷ್ಯಾಧಾರ ಉಳ್ಳ ವೀರೇಂದ್ರ ಕಟ್ಟೀಮನಿಯ ಕೊಲೆಯನ್ನು ಮಾತ್ರ ಈ ಕೇಸಿನಲ್ಲಿ ಆರಂಭಿಸುತ್ತಿದ್ದೇವೆ. ಶ್ರುತಿ ವರ್ಮಾಳನ್ನು ಕೊಂದ ಬಗ್ಗೆ ಪೂರ್ತಿ ತನಿಖೆ ಮುಗಿದಮೇಲೆ ಪ್ರತ್ಯೇಕ ಕೇಸು ಹಾಕಿದರಾಯಿತು ಎಂದುಕೊಂಡಿದ್ದೇವೆ..ಈಗ ನಮ್ಮ ತರಹವೇ ಕೇಸ್ ನಡೆಸಬೇಕೆಂದು ಕೋರ್ಟಿನ ಅನುಮತಿ ಬೇಡುತ್ತಿದ್ದೇವೆ"

"ಯಾಕೆ ಹಾಗೆ?" ಎಂದರು ತೃಪ್ತರಾಗದ ಜಡ್ಜ್ ಡಿಸೋಜಾ. ಪ್ರಬಲ್ ಮಾತ್ರ ಶಾಂತವಾಗಿ ದಿಟ್ಟಿಸುತ್ತಾ ಸುಮ್ಮನಿದ್ದನು.

"ಇಲ್ಲಿ ನಡೆದಿರುವ ಅಪರಾಧಕ್ಕೆ ಮುಖ್ಯ ಹಿನ್ನೆಲೆಯಾಗಿ ಶ್ರುತಿ ವರ್ಮಾ ಸತ್ತಿದ್ದು ಮಾತ್ರ ನಿಲ್ಲುವುದಿಲ್ಲ ಎಂದು ನಮ್ಮ ಲೀಗಲ್ ತಂಡ ಭಾವಿಸುತ್ತದೆ. ಆ ಕಾರ್ ಅಪಘಾತವನ್ನು ವೀರೇಂದ್ರ ಕಟ್ಟೀಮನಿ ಎಂಬ ವಿಮಾ ಪತ್ತೇದಾರ ತನಿಖೆ ಮಾಡುತ್ತಿದ್ದ. ಅವನು ತಾನು ಮುಚ್ಚಿಡಬಯಸಿದ ಇಂಪರ್ಸನೇಷನ್ ಸತ್ಯವನ್ನು ಬಯಲಿಗೆಳೆಯಬಲ್ಲ ಎಂಬುದೇ ಕೀರ್ತಿ ಶರ್ಮಾಗೆ ಬಹಳ ಅಪಾಯಕಾರಿಯಾಗಿ ಕಾಣುತ್ತದೆ. ಅದಕ್ಕಾಗಿ ಈಕೆಗೆ ಆತನನ್ನು ಕೊಲ್ಲಲು ಸಕಾರಣವಿದೆ ಎಂದು ನಾವು ನಂಬಿದ್ದೇವೆ ಮತ್ತು.."

"ಮತ್ತು?" ಜಡ್ಜ್ ಕೇಳಿದರು.

"ಈಕೆ ಆಕೆಯ ಪರ್ಸಿನಲ್ಲಿದ್ದ ಹಣ, ಕಾಗದ ಪತ್ರಗಳು ಮುಂತಾದವನ್ನು ಅಪಹರಿಸಿ ಬೆಂಗಳೂರು ಸೇರಿರುತ್ತಾಳೆ ಎಂದೂ ಹೇಳಬಯಸುತ್ತೇವೆ. ಇವೆಲ್ಲವನ್ನೂ ವೀರೇಂದ್ರ ಪತ್ತೆ ಹಚ್ಚಿದ್ದು ಆರೋಪಿಗೆ ಕೊಲೆ ಮಾಡಲು ಸಬಲ ಕಾರಣ ಒದಗಿಸುತ್ತವೆ ಎಂದು ನಾವು ತೋರಿಸಬಯಸುತ್ತೇವೆ" ಎಂದರು ಹರಿಹರನ್.

ಜಡ್ಜ್ "ಪ್ರಬಲ್, ನೀವೇನೂ ಹೇಳಬಯಸುವುದಿಲ್ಲವೇ?" ಎಂದು ಅವನತ್ತ ತಿರುಗಿ ಕೇಳಿದರು.

ಪ್ರಬಲ್ ಈ ಬಗ್ಗೆ ತನಗೆ ನಿರಾಸಕ್ತಿಯಿದ್ದಂತೆ, "ತಾವು ಕೇಳಿದ್ದಕ್ಕೆ ಹೇಳುತ್ತಿದ್ದೇನೆ, ಸ್ವಾಮಿ... ಪ್ರಾಸಿಕ್ಯೂಶನ್ ನನ್ನ ಕಕ್ಷಿದಾರಳ ಶ್ರುತಿ ವರ್ಮಾ ಕೊಲೆ ವಿಷಯ ದೂರದ ಮಾತು, ವೀರೇಂದ್ರ ಕಟ್ಟೀಮನಿಯ ಕೊಲೆಯನ್ನು ಮಾಡಿದ್ದು ಸಹಾ ಪ್ರೂವ್ ಮಾಡಲಾರರು ಎಂದುಕೊಂಡಿದ್ದೇನೆ. ಆದರೂ ಅವರು ಮುಂದುವರೆಯಲಿ, ಈಗ ನನ್ನ ವಾದವೇನಿಲ್ಲ..." ಎಂದಾಗ ಎಲ್ಲರೂ ಅವನತ್ತ ಅಚ್ಚರಿಯಿಂದ ನೋಡಿದರು. ಹರಿಹರನ್ ಸಹಾ ‘ಈ ಮನುಷ್ಯ ತನ್ನ ಬತ್ತಳಿಕೆಯಲ್ಲಿ ಯಾವ ಅಸ್ತ್ರ ಇಟ್ಟುಕೊಂಡಿದ್ದಾನೋ?’ ಎಂದು ಅನುಮಾನ ಪಟ್ಟರು. ಅದು ಅವರ ಅನುಭವದಲ್ಲಿ ಮೊದಲ ಸಲವೂ ಅಲ್ಲ.

"ಅದೇನಿದ್ದರೂ ಈಗಲೇ ಹೇಳಿಬಿಡಲಿ, ಯುವರ್ ಆನರ್...ಮಿ|| ಪ್ರಬಲ್ ಕೊನೆ ಕೊನೆಗೆ ನಾಟಕೀಯವಾಗಿ ಬೊಂಬೆಯಾಟವಾಡಿಸಿ, ಹೊಸ ಹೊಸ ವಿಷಯಗಳನ್ನು ಹೊರ ತರುವುದು ನಮಗಿಷ್ಟವಿಲ್ಲ" ಎಂದರು ದುರುಗುಟ್ಟುತ್ತಾ ಹರಿಹರನ್.

"ಪ್ರಾಸಿಕ್ಯೂಶನ್ ತಮ್ಮ ಕೇಸ್ ಕೆಡಿಸಿ ಹೊಸ ಹೊಸ ವಿಷಯಗಳು ತಾವೇ ಬರುವಂತಾದ ಪಕ್ಷದಲ್ಲಿ ತಡೆಯಲು ನಾನ್ಯಾರು, ಯುವರ್ ಆನರ್?" ಪ್ರಬಲ್ ಮುಗ್ಧ ದ್ವನಿಯಲ್ಲಿ ಎಂಬಂತೆ ಉತ್ತರಿಸಿದ.

ಸಭಿಕರಲ್ಲಿ ಗಲಗಲನೆ ನಗೆ ಉಕ್ಕಿತು.

ಜಡ್ಜ್ ಟೇಬಲ್ ಮೇಲೆ ಮರದ ಸುತ್ತಿಗೆ ( ಗೇವೆಲ್) ಬಡಿದು "ಆರ್ಡರ್, ಆರ್ಡರ್!... ನೀವಿಬ್ಬರೂ ಹೀಗೆ ವೈಯಕ್ತಿಕ ಟೀಕೆ ಮಾಡುವಂತಿಲ್ಲ.. ಹರಿಹರನ್, ನೀವು ನಿಮ್ಮ ಪ್ರಸ್ತಾಪ ಮುಂದುವರೆಸಿ" ಎಂದು ಅಪ್ಪಣೆ ಕೊಟ್ಟರು.

"ನನ್ನ ಸಾಕ್ಷಿಗಳನ್ನು ಕರೆಯುತ್ತೇನೆ, ಯುವರ್ ಆನರ್" ಎಂದ ಹರಿಹರನ್ ಮೊದಲು ಬಂದಿದ್ದು- ಕೊಲೆಯಾದ ವೀರೇಂದ್ರ ಕಟ್ಟೀಮನಿಯ ಸಾವನ್ನು ದಾಖಲಿಸಿದ ವೈದ್ಯರು. ಈ ಸಾವು ಒಂದು ಹರಿತವಾದ ಐಸ್ ಪಿಕ್ ನಂತಾ ವಸ್ತು ಆ ನಾಲ್ಕು ಗಂಟೆಗಳ ಒಳಗೆ ಸಾವು ಉಂಟು ಮಾಡಿದೆಯೆಂದೂ ತಾವು ಆ ಗಾಯವನ್ನು ಪೋಲಿಸರ ಮುಂದೆ ಪರೀಕ್ಷಿಸಿದ್ದಾಗಿಯೂ ಹೇಳಿಕೆ ಕೊಟ್ಟರು.

"ಕ್ರಾಸ್ ಎಕ್ಸಾಮಿನ್ ಮಾಡಿ ಬೇಕಾದರೆ"ಎಂದರು ಹರಿಹರನ್ ಪ್ರಬಲ್‌‍ಗೆ.

"ಸ್ವಲ್ಪ ಸಮಯ ಮಾತ್ರ ತೆಗೆದುಕೊಳ್ಳುತ್ತೇನೆ ಯುವರ್ ಆನರ್" ಎಂದು ಎದ್ದ ಪ್ರಬಲ್.

"ಡಾಕ್ಟರ್, ನಾನೇ ಖುದ್ದಾಗಿ ನೀವು ಬಂದಾಗ ಆ ಸ್ಥಳದಲ್ಲಿದುದರಿಂದ ಕೇಳುತ್ತೇನೆ... ನೀವು ನೋಡಿದಾಗ ಗಾಯ ಹೇಗಿತ್ತು?

"ವೀರೇಂದ್ರ ಅವರ ಬ್ಯಾಂಡೇಜ್ ಮೇಲೆ ಅದರ ಚುಚ್ಚಿದ ಗುರುತಿತ್ತು..ಆಳವಾಗಿ ಇಳಿದು ಅವರ ಶ್ವಾಸಕೋಸವನ್ನು ಹಾಳು ಮಾಡಿತ್ತು ಎನ್ನುತ್ತೇನೆ" ಎಂದರು ವೈದ್ಯರು.

"ಅದರಲ್ಲಿ ನನಗೂ ಅನುಮಾನವೇ ಇಲ್ಲ ಡಾಕ್ಟರ್, ಆದರೆ ಗಾಯವಾದ ಮೇಲೆ ಬ್ಯಾಂಡೇಜ್ ಹಾಕಿದರೋ, ಅಥವಾ ಉಲ್ಟಾ ಬ್ಯಾಂಡೇಜ್ ಮೇಲೆ...?"

"ಅದೆಲ್ಲಾ ಹೇಳಲು ನನಗೆ ಸಾಧ್ಯವಿಲ್ಲ.. ನಾವು ಲ್ಯಾಬಿನಲ್ಲಿ ಶವ ಪರೀಕ್ಷೆ ಮಾಡುವಾಗಲೂ ಬ್ಯಾಂಡೇಜ್ ಬಿಚ್ಚಿಬಿಟ್ಟಿದ್ದೆವು..." ವೈದ್ಯರು ವಾದಿಸಿದರು.

"ಈ ನಾಲ್ಕು ಘಂಟೆಯ ಅವಧಿಯಲ್ಲಿ ಎನ್ನುತ್ತೀರಲ್ಲ, ಡಾಕ್ಟರ್.... ಆ ಅವಧಿಯಲ್ಲಿ ಎಲ್ಲಿ ಬೇಕಾದರೂ ಈ ಮಾರಾಣಾಂತಿಕ ಗಾಯ ಆಗಿರಬಹುದು ಅಲ್ಲವೆ?."

"ಹೌದು... ಆ ಅವಧಿಯಲ್ಲಿ ಗಾಯ ಆಗಿರಬಹುದು ಎನ್ನಬಹುದು, ಆದರೆ ಎಲ್ಲಿ (ಲೊಕೇಶನ್) ಆಯಿತು ಎಂದು ನಮಗೆ ಗೊತ್ತಾಗುವುದಿಲ್ಲ... ಅವನು ಗಾಯವಾದ ನಂತರವೂ ಅಲ್ಲಿಯೇ ಮಾತಾಡುತ್ತಾ ಕುಳಿತಿದ್ದನೆಂದು ನಿಮಗೇ ಗೊತ್ತಲ್ಲಾ?" ಎಂದರು ಪೋಲೀಸ್ ಡಾಕ್ಟರ್ ಅಚ್ಚರಿಯಿಂದ.

"ಥ್ಯಾಂಕ್ ಯೂ ಡಾಕ್ಟರ್, ಅಷ್ಟೇ ನನ್ನ ಪ್ರಶ್ನೆಗಳು!" ಪ್ರಬಲ್ ಅವರಿಗೆ ಉತ್ತರ ಕೊಡದೇ ಅಲ್ಲಿಗೇ ವಾದ ಮುಗಿಸಿದ.

ಇದಾದ ನಂತರ ಪ್ರಾಸಿಕ್ಯೂಟರ್ ಕೀರ್ತಿ ಶರ್ಮಾ ಹಿನ್ನೆಲೆ ಪ್ರತಿಪಾದಿಸಲು ಆಕೆಯ ಸ್ವಂತ ಊರಿನ ಕಂಪನಿಯ ಬಾಸ್, ಅಕೌಂಟೆಂಟರನ್ನು ಸಾಕ್ಷಿಕಟ್ಟೆಗೆ ಕರೆದರು. ಅವರು ಕೋರ್ಟು ಮುಂದೆ ಆಕೆಯ ನೌಕರಿ, ಸಂಬಳ ಎಲ್ಲಾ ವರದಿ ಮಾಡಿದರು. ಮುಖ್ಯವಾಗಿ ಆಕೆಯನ್ನು ಕೋರ್ಟಿನಲ್ಲಿ ಗುರುತಿಸಿ ಸ್ವಲ್ಪ ‘ಲುಕ್ಸ್’ ಬದಲಾಯಿಸಿಕೊಂಡಿದ್ದರೂ ಅವಳೇ ಕೀರ್ತಿ ಎಂದು ಖಾತ್ರಿಗೊಳಿಸಿದರು.

ಇದರಲ್ಲೆಲ್ಲಾ ಪ್ರಬಲ್‌ಗೆ ಹೆಚ್ಚು ಆಸಕ್ತಿಯಿಲ್ಲದಿದ್ದ ಕಾರಣ ಅವೆಲ್ಲಾ ಸತ್ಯವೆಂದು ಅವನಿಗೆ ಗೊತ್ತಿತ್ತು. "ಕ್ರಾಸ್ ಎಕ್ಸಾಮಿನ್ ಮಾಡಿ" ಎಂದು ಹರಿಹರನ್ ಅವನನ್ನು ಕರೆದರೂ ಅವರ ಪಾಟೀ ಸವಾಲು ಮಾಡದೇ ಬಿಟ್ಟುಕೊಟ್ಟ.

ದಕ್ಷಾಳನ್ನು ಪಕ್ಕಕ್ಕೆ ಕರೆದು, ‘"ಹೊರಗೆ ಹೋಗಿ ಪ್ರದೀಪ್ ಆಫೀಸಿಗೆ ಫೋನ್ ಮಾಡು. ಅವನಿಗೆ ಹೊಸದಾಗಿ ಬೆಳಕು ಚೆಲ್ಲುವಂತಾ ವಿಷಯಗಳೇನಾದರೂ ತಿಳಿದು ಬಂದಿದೆಯೇ ಎಂದು ತಿಳಿದುಕೋ" ಎಂದನು.

ಅವಳು ಲಗುಬಗೆಯಿಂದ ಪಬ್ಲಿಕ್ ಟೆಲಿಫೋನ್ ಹುಡುಕಿಕೊಂಡು ಹೊರಟಳು. (1994 ರಲ್ಲಿ ಮೊಬೈಲ್ ಇರಲಿಲ್ಲ- ಲೇಖಕ).

ಆಕೆ ಅತ್ತ ಹೊರಡುತ್ತಿದ್ದಂತೆ ಇಲ್ಲಿ ಪ್ರಾಸಿಕ್ಯೂಷಿನ್ನಿನವರು ಕೇಸಿನ ಐ ಓ (ಇನ್ವೆಸ್ಟಿಗೇಟಿಂಗ್ ಆಫೀಸರ್) ಅಂದರೆ ತನಿಖಾಧಿಕಾರಿ ರವಿಕುಮಾರ್ ಅವರನ್ನು ಕಟ್ಟೆಗೆ ಇಳಿಸಿದರು. ಅವರು ದೇವರ ಮೇಲೆ ಪ್ರಮಾಣ ಮಾಡಿದ ಮೇಲೆ ಹರಿಹರನ್ ಹತ್ತಿರ ಬಂದರು,

"ನಿಮ್ಮ ಪೊಸಿಶನ್ ಮತ್ತು ಪಾತ್ರ ಇಲ್ಲಿ ಎಲ್ಲರಿಗೆ ತಿಳಿದಿದೆ ಎಂದರಿತು ಅದರ ಬಗ್ಗೆ ಮತ್ತೆ ಕೇಳುವುದಿಲ್ಲ..ಓಕೆ ನಾ?"ಎಂದು ಪ್ರಬಲ್‍‌ನನ್ನು ಕೇಳಿದರು.

"ಖಂಡಿತಾ" ಎಂದು ತಲೆಯಾಡಿಸಿದನು ಪ್ರಬಲ್. ರವಿಕುಮಾರರನ್ನು ಅವನು ಕನಸಿನಲ್ಲೂ ಗುರುತು ಹಿಡಿಯಬಲ್ಲ.

"ರವಿಕುಮಾರ್ , ನಾನೀಗ ಎವಿಡೆನ್ಸ್ ರೆಕಾರ್ಡಿಗೆ ಇಟ್ಟಿರುವ ರಿವಾಲ್ವರ್ ಒಂದನ್ನು ತೋರಿಸುತ್ತೇನೆ.."ಎಂದು ಹರಿಹರನ್ ಒಂದು ಕಪ್ಪು ರಿವಾಲ್ವರನ್ನು ಅವರಿಗೆ ಕೊಟ್ಟರು "ಇದರ ಬಗ್ಗೆ ಕೋರ್ಟಿಗೆ ಹೇಳಿ"

ರವಿಕುಮಾರ್ ಅದನ್ನು ಕೈಗೆ ತೆಗೆದುಕೊಂಡು ಉತ್ತರಿಸಿದರು, "ಇದನ್ನು ಗುರುತು ಹಿಡಿಯಬಲ್ಲೆ. ಇದನ್ನು ನಮ್ಮ ಪೋಲೀಸ್ ಪತ್ತೇದಾರರು ಕೀರ್ತಿ ಶರ್ಮಾ ಕಾರ್ ಅಪಘಾತವಾದ ಸ್ಥಳದ ಬಳಿ ಒಂದು ಪೂದೆಯಲ್ಲಿ ಕಂಡುಹಿಡಿದರು. ಇದನ್ನು ಕೋಲ್ಟ್ 0.38 ಎನ್ನುತ್ತೇವೆ. ನಾವು ವಿಚಾರಿಸಲಾಗಿ ಈ ರಿವಾಲ್ವರನ್ನು ಬೆಂಗಳೂರು ಹತ್ತಿರ ಸ್ಟೇಟ್ ಜೈಲಿನಿಂದ ಹದಿನೈದು ದಿನದ ಹಿಂದೆ ಅದರ ಜೈಲರ್ ವೀರಾರೆಡ್ಡಿ ಕಳೆದುಕೊಂಡಿದ್ದರು ಎಂದು ತಿಳಿದುಬಂದಿತು. ಈ ಕೇಸಿನಲ್ಲಿ ಯಾವುದೇ ಗನ್ ಪ್ರಯೋಗವಾಗಿದ್ದು ನನಗೆ ತಿಳಿದಿಲ್ಲ. ಹಾಗಾಗಿ ಈ ಗನ್ ಕದ್ದ ಕಳ್ಳ ಯಾರೋ ಕಾಕತಾಳೀಯವಾಗಿ ಅಲ್ಲಿ ಬೀಳಿಸಿರಬಹುದು. ಏನೇ ಆದರೂ, ಇದಕ್ಕೂ ಈ ಕೇಸಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಬಗೆಯುತ್ತೇನೆ.. ಇದು ಎವಿಡೆನ್ಸ್ ನಲ್ಲಿ ಮುಖ್ಯವಲ್ಲ.."

ಜಡ್ಜ್ "ಪ್ರಬಲ್, ನಿಮ್ಮ ಆಕ್ಷೇಪಣೆ?" ಎಂದರು.

"ಏನಿಲ್ಲ ಯುವರ್ ಆನರ್... ಆಮೇಲೆ ಕೇಳುವೆ"

ಹರಿಹರನ್ ತಮ್ಮ ಪ್ರಶ್ನಾವಳಿ ಮುಂದುವರೆಸಿದರು, "ಈಗ ನಾನು ನಿಮಗೆ ಎವಿಡೆನ್ಸ್ (ಸಾಕ್ಷ್ಯಾಧಾರ) ಎಂದು ಒಂದು ಐಸ್ ಪಿಕ್ ಕೊಡುತ್ತೇನೆ.. ಇದರ ಬಗ್ಗೆ ವಿಸ್ತಾರವಾಗಿ ಹೇಳುವಿರಾ?"

ರವಿಕುಮಾರ್ ಅವರಿತ್ತ ಐಸ್ ಪಿಕ್ ಚಾಕುವನ್ನು ಕೈಗೆತ್ತಿಕೊಂಡರು. "ಇದರ ಮೇಲೆ ನಾನು ಮಾಡಿದ ಮಾರ್ಕ್ ಇದೆ..ಇದನ್ನು ನಾನೇ ಈ ಕೇಸಿನಲ್ಲಿ ಕೊಟ್ಟಿದ್ದೇನೆ ಸ್ವಾಮಿ!"

"ಹೇಳುತ್ತಾ ಹೋಗಿ"

"ಇದನ್ನು ನಾನು ಕೊಲೆ ನಡೆದ ವೀರೇಂದ್ರ ಕಟ್ಟೀಮನಿಯ ಮನೆಯಲ್ಲಿ ನಮ್ಮ ಇಬ್ಬರು ಆಫೀಸರ್ಸ್ ಸಮ್ಮುಖದಲ್ಲಿ ಎವಿಡೆನ್ಸ್ ಎಂದು ವಶಕ್ಕೆ ತೆಗೆದುಕೊಂಡಿದ್ದೇನೆ.. ವೀರೇಂದ್ರನಿಗೆ ಸಾಯುವಂತಾ ಗಾಯ ಇದರಿಂದಲೇ ಆಗಿದೆ ಎಂದು ನಾನು ನಂಬಿದ್ದೇನೆ"

"ನಿಮ್ಮ ಸವಾಲುಗಳಿಗೆ..."ಎಂದು ಪ್ರಬಲ್‍ಗೆ ಹೇಳಿ ಕುಳಿತರು ಹರಿಹರನ್.

ಪ್ರಬಲ್ ಎದ್ದು, "ರವಿಕುಮಾರ್, ಈ ಮುಂಚೆ ಈ ಗನ್ ಈ ಕೇಸಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದಿರಲ್ಲ ಏಕೆ ?" ಎಂದು ಆ 0.38 ರಿವಾಲ್ವರನ್ನು ತೋರಿಸಿದನು.

ಕಷ್ಟ ಪಟ್ಟು ತಾಳ್ಮೆಯಿಂದ ಉತ್ತರಿಸಿದರು ರವಿಕುಮಾರ್, "ನೀವೇ ನೋಡಿದಂತೆ, ಈ ಕೇಸಿನಲ್ಲಿ ಒಂದು ಕೊಲೆ ಚುಚ್ಚಿದ ಗಾಯದಿಂದ ಆಗಿದೆ.. ಅಲ್ಲಿ ಇದು ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕೂ ಮುಂಚೆ ಶ್ರುತಿ ವರ್ಮಾ ಅಥವಾ ಕೀರ್ತಿ ಶರ್ಮಾ ಇಬ್ಬರ ಬಳಿಯೂ ಅವರ ಅಪಘಾತದ ಸಮಯವಾಗಲೇ, ಅದರ ಮುಂಚೆಯಾಗಲಿ ಯಾವುದೇ ಗನ್ ಇಟ್ಟುಕೊಂಡಿದ್ದ ರೆಕಾರ್ಡ್ ಇಲ್ಲ.. ಜತೆಗೆ ಇದು ಜೈಲರ್ ವೀರಾರೆಡ್ಡಿಯವರ ಡ್ಯೂಟಿ ರಿವಾಲ್ವರ್ ಕಳೆದು ಹೋಗಿತ್ತೆಂದು ಅವರು ಹೇಳಿಕೆ ಕೊಟ್ಟಿರುವುದರಿಂದ ಈ ಆಪಾದಿತಳಿಗೂ ಈ ರಿವಾಲ್ವರಿಗೂ ಯಾವುದೇ ನೇರ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ, ಸ್ವಾಮಿ"

"ಓಹ್, ಹಾಗನ್ನಿ!" ತಲೆಯಾಡಿಸಿದ ಪ್ರಬಲ್ ತನಗೆ ಎಲ್ಲಾ ನಿಧಾನವಾಗಿ ಅರ್ಥವಾಗುವಂತೆ ನುಡಿದ "ಕೀರ್ತಿ ಅಥವಾ ಶ್ರುತಿ ಬಳಿಯಂತೂ ಈ ಗನ್ ಇರಲಿಲ್ಲ ಹಾಗಾದರೆ!"

ಎಲ್ಲಾ ಸಂಭಾಷಣೆಗಳೂ ಕೋರ್ಟಿನಲ್ಲಿ ರೆಕಾರ್ಡಿಗೆ ಹೋಗುತ್ತಿವೆ.

"ಇರಲಿಲ್ಲ ಸ್ವಾಮಿ" ಎಂದು ನಿಟ್ಟುಸಿರಿಟ್ಟರು ರವಿಕುಮಾರ್.

"ದಟ್ಸ್ ಆಲ್, ಇನ್ಸ್ಪೆಕ್ಟರ್. ಮುಗಿಯಿತು" ಪ್ರಬಲ್ ತನ್ನ ಸೀಟಿಗೆ ಮರಳಿದ. ಗಡಿಯಾರ 5ಕ್ಕೆ ಸಮೀಪಿಸಿತ್ತು

"ನಾಳೆ ಮುಂದುವರೆಸೋಣ ಹಾಗಾದರೆ.. ಮತ್ತೆ ಎಲ್ಲರೂ ಮಧ್ಯಾಹ್ನ 2.00ಕ್ಕೆ ಬನ್ನಿ" ಎಂದು ಅಡ್ಜರ್ನ್ ಮಾಡಿ ಎದ್ದರು ಜಡ್ಜ್ ಡಿಸೋಜಾ.

12

ಈ ಮಧ್ಯೆ ದಕ್ಷಾ ಫೋನಿನಲ್ಲಿ ಪತ್ತೇದಾರ ಪ್ರದೀಪನನ್ನು ಸಂಪರ್ಕಿಸಿದ್ದಳು.

"ದಕ್ಷಾ, ನಾನು ಇವತ್ತು ನಂದಿಬೆಟ್ಟದ ಬಳಿಯೆಲ್ಲಾ ಲೋಕಲ್ ಜನರನ್ನೂ ಅಕ್ಕಪಕ್ಕದವರನ್ನೂ ವಿಚಾರಿಸಿದೆ" ಪ್ರದೀಪ್ ವರದಿ ಮಾಡುತ್ತಾ ಹೋದ. "ಕಾರ್ ಅಪಘಾತವಾದ ಹಿಂದೆ ಅಂದರೆ ಎರಡು ದಿನ ಮುಂಚೆ ಎಂದಿಟ್ಟುಕೋ, ಒಬ್ಬ 26 ವರ್ಷದ ಯುವತಿ ನಂದಿಬೆಟ್ಟದ ಬುಡದ ರಸ್ತೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಸಿಕ್ಕಿದ್ದಾಳೆ. ಅವಳಿಗೆ ತಲೆಯ ಹಿಂಭಾಗದಲ್ಲಿ ಜಜ್ಜಿದ ಗಾಯವಾಗಿದೆ. ಲೋಕಲ್ ಜನರೂ ಪೋಲೀಸರೂ ಸೇರಿ ಎಬ್ಬಿಸಿ ಅವಳ ಆರೈಕೆ ಮಾಡಿದ್ದಾರೆ"

"ಅವಳ ಹೆಸರು?" ದಕ್ಷಾ ಟೆಲಿಫೋನ್ ಬೂತಿನಲ್ಲೇ ಒಂದು ಕೈಯಲ್ಲೇ ಶಾರ್ಟ್ ಹ್ಯಾಂಡ್ ಬರೆಯಬಲ್ಲ ಸಮರ್ಥೆ, ನೋಟ್ಸ್ ಮಾಡಿಕೊಳ್ಳುತ್ತಿದ್ದಾಳೆ.

"ಅದೇ ಇನ್ನೂ ಗೊತ್ತಾಗಿಲ್ಲ...ಅವಳಿಗೆ ಏನೂ ನೆನಪಿರಲಿಲ್ಲವಂತೆ, ಅವಳ ಬಳಿ ಯಾವ ಐಡೆಂಟಿಟಿಯೂ ಇರಲಿಲ್ಲ, ಯಾರೂ ಇಂತಹವಳ ಮಿಸ್ಸಿಂಗ್ ಕೇಸ್ ಕೂಡಾ ಈ ಬಗ್ಗೆ ದಾಖಲು ಮಾಡಿರಲಿಲ್ಲ...ಆಕೆಯನ್ನು ಸರಕಾರವೇ ಹತ್ತಿರದ ಅಪ್ರೂವ್ಡ್ ಸೈಕಾಲಜಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಿಟ್ಟಿದ್ದಾರೆ. ನಾನಿನ್ನೂ ನೋಡಿಲ್ಲ ಅವಳನ್ನು.."

"ಈ ಕೇಸಿಗೂ ಅವಳಿಗೂ ಏನು ಸಂಬಂಧ, ಪ್ರದೀಪ್?"

"ಗೊತ್ತಿಲ್ಲ, ಏನೂ ಇಲ್ಲದೆಯೂ ಇರಬಹುದು... ನಂದಿಬೆಟ್ಟದ ಬಳಿ ನಾನು ಇವತ್ತು ಹೋಗಿದ್ದರಿಂದ ನನ್ನ ತನಿಖೆಯಲ್ಲಿ ಸಿಕ್ಕಳು...ಅಷ್ಟೇ ಇರಬಹುದು..."

"ನೀನು ಅವಳ ಬಗ್ಗೆ ಮಾಹಿತಿ ಕಲೆ ಹಾಕು. ಪ್ರಬಲ್ ಕೇಳಿಯೇ ಕೇಳುತ್ತಾರೆ ಕೋರ್ಟಿಂದ ಬಂದ ಮೇಲೆ..."

"ಅದು ನನಗೆ ಗೊತ್ತಿಲ್ಲವೆ, ದಕ್ಷಾ?.. ಹಾ, ಆಮೇಲೆ ಇನ್ನೊಂದು ವಿಷಯ...ಈ ಕಿರಣ್‌ಶಂಕರ್ ರಾವ್ ಮಗ, ಕರುಣ್ ರಾವ್ ಎಲ್ಲಿದ್ದಾನೆಂದು ಪತ್ತೆಹಚ್ಚಿದೆ...ಅವನ ತಂದೆಯ ‘ಕೆ ಎಸ್ ರಾವ್ ಆಯಿಲ್ ರಿಫೈನರಿ’, ಇಟಾನಗರ ಅಂತಾ ಅರುಣಾಚಲ ಪ್ರದೇಶದ ರಾಜಧಾನಿಯ ಬಳಿಯಿದೆ. ಅಲ್ಲಿಯ ಗೆಸ್ಟ್ ಹೌಸಿನಲ್ಲಿ ಇಳಿದುಕೊಡಿದ್ದಾನೆ, ನನಗೆ ಕೆಲವು ಪಾರ್ಟ್ನರ್ಸ್ ಗೊತ್ತಿದ್ದಾರೆ ಅಲ್ಲಿ.. ಅವನನ್ನು ಈ ಕೇಸಿಗಾಗಿ ಸಂಪರ್ಕಿಸಿಲ್ಲ ನಾನು... ಮಾಡಲೆ? ಏನು ಹೇಳಲಿ?"

ದಕ್ಷಾ ನಿಂತಲ್ಲೇ ಸರಕ್ಕನೆ ನಿರ್ಧರಿಸಿದಳು "ಹಾ, ನಾನು ಮತ್ತು ಚೀಫ್ ಇದರ ಬಗ್ಗೆ ಚರ್ಚಿಸಿದ್ದೇವೆ...ಗೋ ಅಹೆಡ್!.. ಅವನನ್ನು ಬೆಂಗಳೂರಿಗೆ ತಕ್ಷಣ ಬಾ ಎಂದು ಕರೆಸಿಕೋ, ಶ್ರುತಿ ವಿಷಯಕ್ಕಾಗಿ ಬಾ ಎಂದು ಮಾತ್ರ ಹೇಳು, ಬಂದೇ ಬರುತ್ತಾನೆ...ಆದರೆ ನೀನೇ ಅವನನ್ನು ನಿನ್ನ ಲೆಕ್ಕದಲ್ಲಿ ಹೋಟೆಲಿನಲ್ಲೋ , ಗುಪ್ತವಾದ ಮನೆಯಲ್ಲೋ ಇರಿಸಿಕೋ.. ಅವನ ತಂದೆಗೆ ಮಾತ್ರ ಅವನು ಬಂದಿದ್ದಾನೆ ಎಂಬ ಸುಳಿವು ಹತ್ತಬಾರದು. ಮಗನೂ ಅಪ್ಪನನ್ನು ಕಾಂಟ್ಯಾಕ್ಟ್ ಮಾಡಬಾರದು... ಅವನ ವಿಚಾರದಲ್ಲಿ ಬಂದ ಮೇಲೆ ಏನು ಮಾಡಬೇಕೆಂದು ಆಮೇಲೆ ಹೇಳುತ್ತೇವೆ... ಓಕೆ?"

"ಡನ್...ಈಗಲೇ ಶುರು ಮಾಡುತ್ತೇನೆ . ಮುಂದಿನ ಫ್ಲೈಟಿನಲ್ಲಿ ಕರೆಸಿಕೊಂಡು ನಮ್ಮ ಬಳಿ ಇಟ್ಟುಕೊಳ್ಳುತ್ತೇವೆ.. ಇದಕ್ಕೆಲ್ಲಾ ನಿಮಗೆ ಚೆನ್ನಾಗಿ ಫೀಸ್ ಬರುತ್ತದೆ ತಾನೇ?’ ಎಂದು ನಕ್ಕ ಪ್ರದೀಪ್.

"ನಿನ್ನ ಫೀಸ್ ನಿನಗೆ ಬಂದೇ ಬರುತ್ತದೆ, ನಮ್ಮ ಫೀಸ್ ಬಗ್ಗೆ ಚೀಫ್ ಚಿಂತಿಸುವುದೇ ಇಲ್ಲ...ಅದಿರಲಿ ಪ್ರದೀಪ್, ಇನ್ನೊಂದು ಚಿಕ್ಕ ವಿಷಯ. ಈ ವೀರೇಂದ್ರ ಕಟ್ಟೀಮನಿ ಮತ್ತು ಅವನ ಹೆಂಡತಿ ದುರ್ಗಾ ಬಗ್ಗೆ ಪೂರ್ತಿ ಹಿನ್ನೆಲೆ ಮಾಹಿತಿ ಬೇಕಿತ್ತು...ಯಾರು, ಏನು, ಎತ್ತ ಎಲ್ಲಿದ್ದರು ಮುಂಚೆ ಇದೆಲ್ಲ..." ದಕ್ಷಾ ನೋಟ್ಸ್ ಮುಚ್ಚಿ ಬ್ಯಾಗಿಗೆ ಸೇರಿಸಿದಳು.

 "ಆಯಿತು, ಇದಕ್ಕೆ ನಮ್ಮವರನ್ನು ನಿಯೋಜಿಸುತ್ತೇನೆ. ಓಕೆ ಬೈ!" ಎಂದು ಮಾತು ಮುಗಿಸಿದ್ದ ಪತ್ತೇದಾರ ಪ್ರದೀಪ್.

ಪ್ರದೀಪ್ ಬಳಿ ಅರುಣಾಚಲ ಪ್ರದೇಶದಲ್ಲಿದ್ದ ಕರುಣ್ ರಾವ್ ಮಾತನಾಡಿದ ಕೂಡಲೇ ಆತ ‘ಹೆಚ್ಚಿನ ಮಾಹಿತಿ ಕೊಡದಿದ್ದರೆ ನಾನು ಬರುವುದಿಲ್ಲ, ನಿಮ್ಮ ವಕೀಲರಾದ ಪ್ರಬಲ್ ಮಾನ್ವೀಕರ್ ಜತೆ ಫೋನ್ ಮಾಡಿಸಿ ಕೊಡಿ’ ಎಂದು ಕೋರಿಕೊಂಡ. ತಕ್ಷಣ ಪ್ರಬಲ್‌ಗೆ ಈ ವಿಷಯ ಹೇಳಿದಾಗ, ಅವನೇ ಕರುಣ್‌ಗೆ ಎಸ್ ಟಿ ಡಿ ಕಾಲ್ ಮಾಡಿದ,

"ನೋಡಿ ಮಿ||ಕರುಣ್ ರಾವ್...ನಾನು ಬೆಂಗಳೂರಿನ ವಕೀಲ ಪ್ರಬಲ್. ಇಲ್ಲಿ ನೀವು ಮದುವೆಯಾಗಬೇಕಿದ್ದ ಶ್ರುತಿ ವರ್ಮಾಗೆ ಸಂಬಂಧಿಸಿದ ಒಂದು ಮರ್ಡರ್ ಕೇಸ್ ಕೋರ್ಟಿನಲ್ಲಿ ನಡೆಯುತ್ತಿದೆ. ಅದಕ್ಕೆ ನಿಮ್ಮ ಸಹಕಾರ ಬೇಕು.. ನೀವು ಬೆಂಗಳೂರಿಗೆ ಹೊರಟು ಬನ್ನಿ"

"ಸಂಬಂಧಿಸಿದ ಎಂದರೇನು? ಯಾರ ಮರ್ಡರ್ ಆಗಿದೆ?..ಶ್ರುತಿ ಎಲ್ಲಿದ್ದಾಳೆ?"ಕರುಣ್ ದನಿಯಲ್ಲಿ ಆತಂಕವಿತ್ತು

"ಎಲ್ಲವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಶ್ರುತಿಗೆ ಏನಾಯಿತು ಎಂದೇ ಈಗ ಕೇಸ್ ನಡೆಯುತ್ತಿದೆ...ನೀವು ಬಂದರೆ ನಮಗೆ ಎಲ್ಲಾ ಸ್ಪಷ್ಟವಾಗುತ್ತದೆ"

ಕರುಣ್ ರಾವ್ ದ್ವನಿ ಸ್ವಲ್ಪ ಅಚ್ಚರಿ ಮಿಶ್ರಿತ ದುಃಖದಲ್ಲಿ ಮಿಂದಿತ್ತು "ಓಹ್, ಗಾಡ್...ಹಲವು ದಿನಗಳಿಂದ ನನಗೆ ಶ್ರುತಿ ಉತ್ತರ ಕೊಟ್ಟಿಲ್ಲ, ಕಾಲ್ ಸಹಾ ಮಾಡಿಲ್ಲ...ಯಾಕೆ ಅಂತಾ ಅರ್ಥವಾಗುತ್ತಿಲ್ಲ"

"ನನಗೆ ಅರ್ಥವಾಗುತ್ತಿದೆ, ಕರುಣ್...ನಿಮ್ಮ ತಂದೆಯೇ ಅವಳನ್ನು ಊರಿಂದ ಓಡಿಹೋಗುವ ಹಾಗೆ ಮಾಡಿದ್ದಾರೆ, ನಿಮ್ಮನ್ನು ಅಲ್ಲಿಗೆ ಕಳಿಸಿ!"

"ಹೌದೆ, ಅಲ್ಲಿಯವರೆಗೂ ಬಂದರೆ ಅವರು?"

"ಅದಲ್ಲದೇ ನೀವು ಅವರ ಬಗ್ಗೆ ಶ್ರುತಿಗೆ ಪ್ರೇಮಪತ್ರಗಳಲ್ಲಿ ಅವರ ಬಗ್ಗೆ ವಿವಾದಾಸ್ಪದವಾಗಿ ಬರೆದಿದ್ದೂ ಅವರಿಗೆ ಅವಳು ಊರುಬಿಟ್ಟ ಮೇಲೆ ಗೊತ್ತಾಗಿದೆ, ಚುನಾವಣೆ ಸಮಯ ಅಲ್ಲವೆ?..ಆ ಪತ್ರಗಳಿಗಾಗಿ ಅವರು ಒಬ್ಬ ವಿಮಾ ಪತ್ತೇದಾರನನ್ನೂ ನೇಮಿಸಿದ್ದರು ಗೊತ್ತೆ?"

"ಇಲ್ಲ...ನನಗೇನೂ ಗೊತ್ತಿಲ್ಲ!" ಕರುಣ್ ಕೀಚಲು ದನಿಯಲ್ಲಿ ಉತ್ತರಿಸಿದ್ದ.

"ಅವಳು ತನ್ನ ಹುಟ್ಟಲಿರುವ ಮಗುವಿನ ತಂದೆ ಕರುಣ್ ಎಂದು ನಿಮ್ಮ ಮೇಲೆ ಕೋರ್ಟ್ ಕೇಸ್ ಹಾಕುವುದರಲ್ಲಿದ್ದಳಂತೆ...ನಿಜ ತಾನೆ?" ಪ್ರಬಲ್ ತೀಕ್ಷ್ಣವಾಗಿ ಪ್ರಶ್ನಿಸಿದ.

ಆ ಕಡೆ ಜೋರಾಗಿ ಉಸಿರೆಳೆದುಕೊಂಡು ಅತ್ಯಾಶ್ಚರ್ಯದಿಂದ ಕಿರುಚಿದ ಕರುಣ್ "ಛೆ-ಛೆ...ಇದಕ್ಕಿಂತಾ ದೊಡ್ಡ ಸುಳ್ಳು ಮತ್ತೊಂದಿಲ್ಲ..ನಾವಿಬ್ಬರು ಆ ರೀತಿಯ ಸಂಬಂಧ ಖಂಡಿತಾ ಇಟ್ಟುಕೊಂಡಿರಲಿಲ್ಲ...ಏನು ಸಾರ್ ನೀವು ಹೇಳುತ್ತಿರುವುದು?"

ಪ್ರಬಲ್ ಕೂಡಾ ಆಯಾಸವಾದವನಂತೆ ನಿಡುಸುಯ್ದ, "ಕರುಣ್!.. ಇನ್ನೇನೂ ಮಾತಾಡುವುದು ಬೇಡ...ನೀವು ಮೊದಲ ಫ್ಲೈಟಿಗೆ ಇಲ್ಲಿಗೆ ಹೊರಟು ಬನ್ನಿ"

"ಯೂ ಬೆಟ್!...ನಮ್ಮಿಬ್ಬರ ಬಗ್ಗೆ ಇಷ್ಟೆಲ್ಲಾ ನಡೆಯುತ್ತಿದೆ ಎಂದ ಮೇಲೆ ಬಂದೇ ಬರುತ್ತೇನೆ" ಎಂದ ದೃಢ ಸಂಕಲ್ಪ ತೊಟ್ಟವನಂತೆ ಕರುಣ್ ರಾವ್. ಅಲ್ಲಿಗೆ ಫೋನ್ ಸಂಭಾಷಣೆ ಮುಗಿದಿತ್ತು

"ಪ್ರದೀಪ್, ಅವನು ಬಂದಮೆಲೆ ನೀವಿಬ್ಬರೂ ಹೀಗೆ ಮಾಡಿ..."ಎಂದು ಸರಸರನೆ ತನ್ನ ಯೋಜನೆಯನ್ನು ತನ್ನ ಪತ್ತೇದಾರನಿಗೆ ವಿವರಿಸುತ್ತಾ ಹೋದ ಪ್ರಬಲ್.

13

ಮುಂದಿನ ದಿನ ಕೋರ್ಟಿನಲ್ಲಿ ಮತ್ತೆ ವಿಚಾರಣೆ ಆರಂಭವಾಯಿತು. ಎಂದಿನಂತೆ ಕೀರ್ತಿ ಶರ್ಮಾಳ ಮ್ಲಾನ ಮುಖವನ್ನು ಕಂಡು ಅವಳಿಗೆ ಧೈರ್ಯ ತುಂಬಿ ಮುಗುಳ್ನಕ್ಕು ಆರೋಪಿ ಕಟ್ಟೆಗೆ ಕಳಿಸಿಕೊಟ್ಟ ಪ್ರಬಲ್.

ಪ್ರಾಸಿಕ್ಯೂಟರ್ ಹರಿಹರನ್ ಉತ್ಸಾಹದಿಂದ "ಇವತ್ತು ನಾನು ಕೆಲವು ಮುಖ್ಯ ಸಾಕ್ಷಿಗಳನ್ನು ಕರೆಯುತ್ತೇನೆ, ಯುವರ್ ಆನರ್. ಇದರಿಂದ ಆಪಾದಿತೆಯ ಅಪರಾಧ ಸಾಬೀತಿ ಮಾಡಿಬಿಡುತ್ತೇವೆ" ಎಂದರು, ಪೂರ್ತಿಯಾಗಿ ಇವತ್ತಿನ ಕೇಸಿಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡವರಂತೆ.

"ಆರಂಭಿಸಿ" ಎಂದು ಅಪ್ಪಣೆ ಕೊಟ್ಟರು ಜಡ್ಜ್ ಡಿಸೋಜಾ.

ಪ್ರಾಸಿಕ್ಯೂಟರ್, ಜಡ್ಜ್ ಮತ್ತು ನೆರೆದಿದ್ದ ಪತ್ರಕರ್ತರೆಲ್ಲರ ಮುಖವನ್ನು ನೋಡಿದಾಗ ಅವರೆಲ್ಲಾ ಮನದಲ್ಲಿ ಪೂರ್ಣ ಪ್ರಮಾಣವಾಗಿ ಕೀರ್ತಿಯನ್ನು ಅಪರಾಧಿಯೇ ಇರಬೇಕು ಎಂದು ಭಾವಿಸಿದ್ದಾರೆಂದು ತಾನು ಬೇಗ ಹರಸಾಹಸ ಮಾಡಿ ಅವಳ ರಕ್ಷಣೆ ಮಾಡಬೇಕಾದೀತು ಎಂದು ಯೋಚಿಸಿದ.

ಮೊದಲನೆಯದಾಗಿ, ಕೊಲೆಯಾದ ವೀರೇಂದ್ರನ ಪತ್ನಿ ದುರ್ಗಾಳನ್ನು ಕರೆದರು. ಅವಳು ಪತಿ ವಿಯೋಗದಲ್ಲಿ ದುಃಖದ್ದಲ್ಲಿದ್ದವಳು ಕೊಸ ಕೊಸ ಅಳುತ್ತಾ ಅಂದು ನಡೆದಿದ್ದನ್ನು ಹೇಳಿದಳು "ಅವರಿಗೆ ಮೊದಲೇ ಗಾಯವಾಗಿತ್ತು, ಅವರ ಸಹಾಯಕ ರಮಣ್ ಅಂತಿದಾರೆ, ಅವರೂ ನನ್ನ ಕ್ಲಾಸ್ ಮೇಟ್, ನಮ್ಮೂರಿನವರು. ಅವರೇ ಬ್ಯಾಂಡೇಜ್ ಹಾಕಿ ಗಾಯವಾಗಿದ್ದ ನನ್ನ ಗಂಡನನ್ನು ಮನೆಗೆ ಸೇರಿಸಿದರು. ಅವರ ಪಕ್ಕೆಗೆ ಸಿಕ್ಕಿದ್ದ ಐಸ್ ಪಿಕ್ ಚಾಕುವನ್ನು ಟೇಬಲ್ ಮೇಲಿಟ್ಟರು. ನಮ್ಮವರಿಗೆ ಸ್ವಲ್ಪ ಶಾರ್ಟ್ ಟೆಂಪರ್ ಅಷ್ಟೇ, ನನ್ನನ್ನು ಬೈಯುತ್ತಿದ್ದರು ಚಿಕ್ಕ ಚಿಕ್ಕ ವಿಷಯಕ್ಕೆಲ್ಲಾ... ಈ ಪ್ರಬಲ್ ಅನ್ನುವವರು ಆಗ ಬಂದು ಅವರ ಜತೆ ಹಾಗೂ ಮಾತಾಡುತ್ತಲೇ ಇದ್ದರು..."ಎಂದು ಪ್ರಬಲ್ ಸಹಾ ಆರೋಪಿಯೇನೋ ಎಂಬಂತೆ ದುರ್ಗಾ ಕೈಬೊಟ್ಟು ಮಾಡಿ ಅತ್ತ ತೋರಿಸಿದಳು.

"ಆಮೇಲೆ ಪ್ರಬಲ್ ಕೆಳಗಿಳಿದು ಹೋದರು ಅನಿಸುತ್ತದೆ. ಕೆಳಗೆ ಕೆಫೆಗೆ ಇರಬೇಕು.. ಆಗ ನನ್ನ ಗಂಡ ಉಸ್ ಉಸ್ ಎಂದು ಜೋರು ಜೋರಾಗಿ ಉಸಿರೆಳೆದುಕೊಂಡರು.." ನಾನು ಹತ್ತಿರ ಬಂದು ಏನಾಗುತ್ತಿದೆ ಎಂದೆ. ಅವರು ಕಷ್ಟಪಟ್ಟು ಹೇಳಿದರು..."

"ಒಂದು ನಿಮಿಷ ಯುವರ್ ಆನರ್" ಎಂದು ಆಕೆಯನ್ನು ತಡೆದರು ಹರಿಹರನ್, "ಇದನ್ನು ಪ್ರಬಲ್ ಹಿಯರ್-ಸೇ ಅಥವಾ ಗಾಳಿಮಾತು ಎಂದು ಆಕ್ಷೇಪ ಮಾಡುವುದಿಲ್ಲ ಎಂದುಕೊಂಡಿದ್ದೇನೆ... ಆತ ಸಾಯುವಾಗ ಹೇಳಿದ್ದು..ಡೈಯಿಂಗ್ ಡಿಕ್ಲರೇಷನ್ ( ಮರಣಕಾಲೀನ ಹೇಳಿಕೆ) ಎನ್ನುತ್ತೇವೆ"

"ನೋ ಅಬ್ಜೆಕ್ಷನ್" ಎಂದ ನೆಲವನ್ನೇ ನೋಡುತ್ತಾ ಪ್ರಬಲ್.

"ನನ್ನ ಪತಿ ಹೇಳಿದರು... ‘ಇದೆಲ್ಲಾ ನನ್ನ ತಪ್ಪು ಕಣೇ... ಈ ಕೀರ್ತಿ ಶರ್ಮಾ ಇದ್ದ ಪಿ ಜಿಗೆ ಯಾವುದೇ ಆಯುಧ ಇಲ್ಲದೇ ಹೊರಟುಹೋದೆ. ಕತ್ತಲಿತ್ತು.. ನನ್ನನ್ನು ಚುಚ್ಚಿಬಿಟ್ಟಳು. ಆ ಹುಡುಗಿ’.."ಎಂದು ಬಿಕ್ಕುತ್ತಾ ಆಪಾದಿತೆ ಕೀರ್ತಿ ಶರ್ಮಾಳನ್ನು ಕೈತೋರಿಸಿದಳು ದುರ್ಗಾ. ಆಕೆ ಮುಖ ಕಪ್ಪಿಟ್ಟು ತಲೆ ತಗ್ಗಿಸಿದ್ದಳು. ಪ್ರಬಲ್ ಸದ್ಯಕ್ಕೆ ಏನೂ ಹೇಳುವಂತಿರಲಿಲ್ಲ. "ಅನಂತರ ಮಾತಾಡದೇ ಆ ಟೇಬಲ್ ಮೇಲಿದ್ದ ಐಸ್ ಪಿಕ್ ಚಾಕುವನ್ನು ನನಗೆ ತೋರಿಸಿ ಕಣ್ಮುಚ್ಚಿಬಿಟ್ಟರು ...ಶಾಶ್ವತವಾಗಿ!" ಎಂದು ಮುಗಿಸಿದಳು ದುರ್ಗಾ ತನ್ನ ಮಾತುಗಳನ್ನು.

ಪ್ರಬಲ್ ಎದ್ದು "ನಾನು ಈಗಲೇ ಈಕೆಯನ್ನು ವಿಚಾರಿಸುವುದಿಲ್ಲ, ಆನಂತರ ಈಕೆಯನ್ನು ಕರೆಯುವ ಹಕ್ಕು ನನಗೆ ಕೊಡಿ" ಎಂದನು ಕೋರ್ಟಿಗೆ.

"ಹಾಗೇ ಆಗಲಿ" ಎಂದರು ಜಡ್ಜ್.

ಆಕೆ ಬಿಕ್ಕುತ್ತಾ ಕಣ್ಣೊರೆಸಿಕೊಂಡು ಎದ್ದುಹೋದಳು

ಆಪಾದಿತೆ ಕೀರ್ತಿ ಶರ್ಮಾ ವೀರೇಂದ್ರನನ್ನು ಐಸ್ ಪಿಕ್ ನಲ್ಲಿ ಚುಚ್ಚಿದ ನಂತರ ಆತನನ್ನು ಮೊದಲು ನೋಡಿದವನು ವೀರೇಂದ್ರನ ಪಾರ್ಟ್ನರ್ ರಮಣ್ ಅಂತೆ. ಅವನನ್ನು ಸಾಕ್ಷಿಗೆ ಕರೆದಾಗ ಪ್ರಬಲ್ ಸಹಾ ಬೇಸರ ಮತ್ತು ಅಚ್ಚರಿಪಟ್ಟು, ‘ ಅರೆರೇ!, ನಾವು ಹೇಗೆ ಈ ವ್ಯಕ್ತಿಯ ಹಿನ್ನೆಲೆ ಪತ್ತೆ ಮಾಡಲಿಲ್ಲ, ಯಾರಿವನು? ಈ ಬಾರಿ ನನಗೇ ಹರಿಹರನ್ ಒಂದು ಪಟ್ಟು ಹಾಕಿದರಲ್ಲಾ?’ ಎಂದುಕೊಂಡ. ಇರಲಿ ಇವತ್ತು ಪ್ರದೀಪ್ ಹೆಚ್ಚಿನ ಸುದ್ದಿ ಮುಟ್ಟಿಸಿಯಾನು.

ರಮಣ್ ಎಂಬವನು ಈಗ ಹರಿಹರನ್ ಗೆ ಉತ್ತರ ಕೊಡುತ್ತಾ ಹೋದ:

"ನಾನು ಮತ್ತು ವೀರೇಂದ್ರನ ಹೆಂಡತಿ ದುರ್ಗಾ ಕ್ಲಾಸ್‌ಮೇಟ್ಸ್; ಹಾಗೇ ಅವಳ ಪತಿ ವೀರೇಂದ್ರನ ಪರಿಚಯ ಮಾಡಿಕೊಟ್ಟಳು. ನಾನು ಅವನ ಜತೆ ಕೆಲಸಕ್ಕೆ ಸೇರಿದೆ...ನಾನು ವೀರೇಂದ್ರ ಇಬ್ಬರೂ ಈ ಕೇಸಿನಲ್ಲಿ ಒಟ್ಟಿಗೇ ದುಡಿಯುತ್ತಿದ್ದೆವು. ವೀರೇಂದ್ರ ಅಂದು ರಾತ್ರಿ 7ಕ್ಕೆ ಕೀರ್ತಿ ಶರ್ಮಾಳನ್ನು ಕಾಣಲು ಅವಳ ಪಿ.ಜಿ.ಗೆ ಹೋದಾಗ ನಾನು ಹೊರಗೇ ಕಾಯುತ್ತಿದ್ದೆ. ಹೆಚ್ಚು ಕಾಯಬೇಕಾಗಲಿಲ್ಲ.. ಸ್ವಲ್ಪ ಹೊತ್ತಿಗೆಲ್ಲಾ ತನ್ನ ಪಕ್ಕೆಯನ್ನು ಕೈಯಲ್ಲಿ ಒತ್ತಿಕೊಂಡು ವೀರೇಂದ್ರ ಕೆಳಕ್ಕೆ ಓಡಿಬಂದರು. ಅವರಿಗೆ ಚುಚ್ಚಿದ ಗಾಯವಾಗಿತ್ತು, ಐಸ್ ಪಿಕ್ ಸಿಕ್ಕಿಹಾಕಿಕೊಂಡಿತ್ತು. ನಾನು ನೋಡಿದೆ"

"ಕ್ರಾಸ್ ಎಕ್ಸಾಮಿನ್ ಮಾಡಿ" ಎಂದರು ವಿಜಯ ಗರ್ವದಿಂದ ಹರಿಹರನ್. ಇದು ಪ್ರತ್ಯಕ್ಷ ಸಾಕ್ಷಿ ಎಂಬಂತೆ. ಪ್ರಬಲ್ ಯೋಚಿಸುತ್ತಾ ಹತ್ತಿರ ಬಂದ.

"ರಮಣ್ ಅವರೇ, ನೀವು ವೀರೇಂದ್ರ ಅವರ ಜತೆ ಅಸಿಸ್ಟೆಂಟ್ ಆಗಿ ಎಷ್ಟು ದಿನವಾಗಿತ್ತು?"

"ಒಂದು ತಿಂಗಳ ಮೇಲೆ ಸ್ವಾಮಿ"

"ಅದಕ್ಕೆ ಮುಂಚೆ?"

"ನಾನು ನಮ್ಮ ಊರಾದ ತಿಪಟೂರಿನಲ್ಲಿ ನರ್ಸಿಂಗ್ ಹೋಮಿನಲ್ಲಿ ಕೆಲಸ ಮಾಡಿಕೊಂಡಿದ್ದೆ. ಅದು ಹೆಚ್ಚಿನ ಪ್ರಯೋಜನವಾಗದೇ ದುರ್ಗಾ ಕರೆದಳು ಅಂತಾ ಅವಳ ಗಂಡನ ಜತೆ ಬಂದು ಸೇರಿಕೊಂಡೆ..."

"ಈ ಘಟನೆಯಾದ ದಿನ ಅಲ್ಲಿ ನೀವಿಬ್ಬರಲ್ಲದೇ ಇನ್ಯಾರು ಹೋಗಿದ್ದಿರಿ , ಈ ಕೀರ್ತಿ ಶರ್ಮಾಳನ್ನು ಭೇಟಿಯಾಗಲು?"

"ನಾವಿಬ್ಬರೇ ಸರ್"

"ವೀರೇಂದ್ರನಿಗೆ ದೊಡ್ಡ ಗಾಯವಾಗಿದ್ದು ನೋಡಿ ನೀವೇನು ಮಾಡಿದಿರಿ?"

"ನಾನು ಅವನನ್ನು ಯಾರಾದರೂ ಡಾಕ್ಟರ್ ಬಳಿ ಕರೆದುಕೊಂಡು ಹೋಗಲು ಎಷ್ಟು ಹೇಳಿದರೂ ಬೇಡವೆಂದುಬಿಟ್ಟ. ಅರ್ಜೆಂಟಾಗಿ ನಿಮ್ಮನ್ನು ನೋಡಬೇಕು, ಮನೆಗೇ ಹೋಗೋಣ ಎಂದ"

"ಓಹೋ, ನನ್ನನ್ನು ನೋಡಲು ಎಂದನೋ?..ಆಮೇಲೆ?"

"ನನಗೆ ನರ್ಸಿಂಗ್ ಹೋಮ್ ಅನುಭವವಿದ್ದುದರಿಂದ ಅವನಿಗೆ ನಾನೇ ಸ್ವಲ್ಪ ಡೆಟಾಲ್ ಹಚ್ಚಿ ಬ್ಯಾಂಡೇಜ್ ಕಟ್ಟಿ ಮನೆಗೆ ಕರೆದು ತಂದುಬಿಟ್ಟೆ"

"ನೇರವಾಗಿ ಮನೆಗೆ ಬಂದಿರಾ? ಸತ್ಯ ಹೇಳಿ!" ಪ್ರಬಲ್ ಕಣ್ಣು ಮೊನಚಾದವು. ಈ ಸಾಕ್ಷಿ ಬರೇ ಸುಳ್ಳು ಪೊಳ್ಳು ಹೇಳುತ್ತಿದ್ದನೆಂದು ಅವನಿಗೆ ಖಚಿತವಾಗಿತ್ತು. ತನ್ನ ಮುಂದಿನ ವಾದಕ್ಕಾಗಿ ಇವನನ್ನೇ ಬಳಸಿಕೊಳ್ಳೋಣ ಎಂದುಕೊಂಡ..

"ಇಲ್ಲ ಸರ್..." ಅವನು ತಡವರಿಸಿದ. "ಅಲ್ಲೇ ರಸ್ತೆಯಲ್ಲಿ ನಾವು ಒಬ್ಬರನ್ನು ಮೀಟ್ ಮಾಡಿದೆವು"

"... ಯಾರದು?"

ಸಾಕ್ಷಿ ತನಗೆ ದೇವರೇ ಗತಿ ಎಂಬಂತೆ ಮೇಲೆ ನೋಡಿ, ಆಮೇಲೆ ಹರಿಹರನ್ ರತ್ತ ನೋಡಿದ.

"ಮಿಸ್ಟರ್ ರಮಣ್, ಉತ್ತರ ಹೇಳಿ!" ಚುರುಕು ಮುಟ್ಟಿಸಿದ ಪ್ರಬಲ್.

"ಸರ್..ಅದು ನಾವು... ಇವರು... ಯಾರಪ್ಪಾ.. ಎಂ.ಪಿ. ಶ್ರೀ ಕಿರಣ್‍ಶಂಕರ್ ರಾವ್ ಅವರನ್ನು ಅಲ್ಲೇ ರಸ್ತೆಯಲ್ಲಿ ಮಾತಾಡಿಸಿದೆವು..."

ಎಲ್ಲರೂ ಅಚ್ಚರಿಯಿಂದ ನಿಟ್ಟುಸಿರಿಟ್ಟರು.

"ಯಾವ ವಿಷಯ?"

"ಅದನ್ನು ನಾನು ಹೇಳುವಂತಿಲ್ಲ, ನನಗೆ ವೀರೇಂದ್ರ ಆಣೆ ಪ್ರಮಾಣ ಮಾಡಿಸಿಕೊಂಡಿದ್ದ ..."

ಪ್ರಬಲ್ ಸಾಕಾಯಿತೆನ್ನುವಂತೆ ಅಬ್ಬರಿಸಿದ, "ಮಿ|| ರಮಣ್, ನಿಮ್ಮ ಆಣೆಗಳಿಗೆ ಕೋರ್ಟಿನಲ್ಲಿ ನಾಲ್ಕಾಣೆ ಬೆಲೆಯನ್ನೂ ಕೊಡುವುದಿಲ್ಲ, ಹೇಳಲೇಬೇಕು!"

"..."

"ಅಬ್ಜೆಕ್ಷನ್, ಯುವರ್ ಆನರ್. ಪ್ರಬಲ್ ಸಾಕ್ಷಿಯ ಬಾಯಿ ಬಡಿಯುತ್ತಿದ್ದಾರೆ" ಧುಮುಗುಡುವ ಮುಖದಲ್ಲಿ ಎದ್ದುನಿಂತು ಹೇಳಿದರು ಹರಿಹರನ್.

"ಮಿ|| ಪ್ರಬಲ್, ನೀವು ಹಾಗೆ ಹೇಳುವಂತಿಲ್ಲ.. ಅಬ್ಜೆಕ್ಷನ್ ಸಸ್ಟೇಂಡ್" ಜಡ್ಜ್ ನುಡಿದರು.

"ಬೇಡ ಬಿಡಿ, ಯುವರ್ ಆನರ್, ಇವರನ್ನು ಕೊನೆಯಲ್ಲಿ ವಿಚಾರಣೆ ಮಾಡುತ್ತೇನೆ" .

ರಮಣ್ ಕೆಳಗಿಳಿದು ಹೋದ.

ಪ್ರಬಲ್ ಸಹಾ ಈಗ ಪಟ್ಟುಹಿಡಿದ. "ಹಾಗಾದರೆ ಶ್ರೀ ಕಿರಣ್‍ಶಂಕರ್ ರಾವ್ ಅವರು ಕೋರ್ಟಿನಲ್ಲಿದ್ದಾರೆ. ಅವರ ವಿಚಾರಣೆ ಮಾಡಿ, ನನಗೆ ಬಿಡಿ.. "

ಹರಿಹರನ್ ಅಸಹಾಯಕರಂತೆ ಕೈ ಚೆಲ್ಲಿದರು. "ಯುವರ್ ಆನರ್, ಈ ಚಿಕ್ಕ ಕೇಸಿಗಾಗಿ ಸಮಾಜದ ಪ್ರತಿಷ್ಟಿತ ಉದ್ಯಮಿ ಮತ್ತು ಮಾನ್ಯ ಸಂಸತ್ ಸದಸ್ಯರನ್ನು ಎಳೆಯುವುದು ಬೇಡ ಎಂದುಕೊಂಡಿದ್ದೆ... ಈಗ ಮನಸ್ಸಿಲ್ಲದೇ ಕರೆಯಲೇಬೇಕಾಗಿದೆ"

"ಕರೆಯಬಹುದು, ತಪ್ಪೇನಿಲ್ಲ" ಜಡ್ಜ್ ತೀರ್ಪಿತ್ತರು." ಆದರೆ ಆಗಲೇ ಇವತ್ತಿನ ಸಮಯವಾಗುತ್ತಿದೆ. ನೀವು ನಾಳೆಗೆ ಇದನ್ನು ಇಟ್ಟುಕೊಳ್ಳಲು ಸಾಧ್ಯವೆ?"

"ಆಗಬಹುದು, ಯುವರ್ ಆನರ್.. ಶ್ರೀ ಕಿರಣ್‌ಶಂಕರ್ ರಾವ್, ನೀವು ನಾಳೆ ಸಹಾ ಕೋರ್ಟಿನಲ್ಲಿರಿ. ಕರೆಯುತ್ತೇವೆ..." ಹರಿಹರನ್ ಸೂಚಿಸಿದರು. ಅವರೂ ಅದಕ್ಕೆ ಒಪ್ಪಿದರು.

ಪ್ರಬಲ್‍ಗೂ ಈ ಸಮಯ ವರದಾನವಾಗಿ ಸಿಕ್ಕಿತ್ತು. ಅವನು ಅಲ್ಲಿಂದ ಆಫೀಸಿನತ್ತ ಸರಸರನೆ ಹೊರಟನು.

ಅವನಿಗೆ ತಕ್ಷಣವೇ ಪತ್ತೇದಾರ ಪ್ರದೀಪ್ ಜತೆ ಮಾತಾಡುವುದಿತ್ತು, ಮುಖ್ಯ ಬೆಳವಣಿಗೆಯ ಮಾಹಿತಿ ಪಡೆಯುವುದಿತ್ತು.

14

ಅವತ್ತಿನ ದಿನ ಪ್ರದೀಪ್ ಪಾಲಿಗಂತೂ ಬೆಳಿಗ್ಗೆ 7.00ಕ್ಕೇ ಪ್ರಾರಂಭವಾಗಿತ್ತು. ಏರ್‌ಪೋರ್ಟಿನಲ್ಲಿ ಕೊಲ್ಕತ್ತಾ ಮೂಲಕ ಇಟಾನಗರದಿಂದ ಬರುತ್ತಿದ್ದ ಕರುಣ್ ರಾವ್ ಅನ್ನು ರಿಸೀವ್ ಮಾಡಲು ತಲುಪಿದ್ದ. ವಿಮಾನ ಇಂದು ಗಂಟೆ ತಡವಾಗಿಯೇ ಬಂದು ತಲುಪಿತ್ತು.

"ಏನು ಸಾರ್ ವಿಷಯ? ಶ್ರುತಿ ಎಲ್ಲಿ ಸಾರ್, ಗೊತ್ತಾಯಿತೆ?" ಎಂದ 28 ವರ್ಷ ವಯಸ್ಸಿನ ಆರಡಿಗಿಂತ ಸ್ವಲ್ಪ ಗಿಡ್ಡವಿದ್ದ ಗುಂಗುರು ಕೂದಲಿನ ಯುವಕ. ಜೀನ್ಸ್, ಟೀ ಶರ್ಟಿನಲ್ಲಿದ್ದವ ರಾತ್ರಿಯೆಲ್ಲ ಸರಿಯಾಗಿ ನಿದ್ರಿಸಿಲ್ಲ ಚಿಂತೆಯಲ್ಲಿ ಎಂದು ಪ್ರದೀಪನಿಗೆ ತೋರಿತು.

"ಅದೇ ಒಂದು ಪಜ಼ಲ್ ಆಗಿದೆ, ಕರುಣ್. ನಾನು ನೀವು ಪತ್ತೆ ಹಚ್ಚೋಣ ಬನ್ನಿ. ನಿಮ್ಮ ಬಳಿ ಆಕೆಯ ಹೊಸ ಫೋಟೋ ಏನಾದರೂ ಇವೆಯೆ?" ಎನ್ನಲು ಶೂರ್ ! ಎನ್ನುತ್ತಾ ತನ್ನ ಪರ್ಸಿನಲ್ಲಿದ್ದ ಒಂದೆರಡು ಭಾವ ಚಿತ್ರಗಳನ್ನಿತ್ತ. "ನೀವ್ಯಾರೂ ಆಕೆಯನ್ನು ನೋಡೇ ಇಲ್ಲವೆ ಸರ್?"ಎಂದು ಮತ್ತೆ ಕೇಳಿದ ಕರುಣ್. ಅವಳ ಚಿತ್ರ ಕೂಡಾ ತಮ್ಮ್ಮ ಬಳಿಯಿಲ್ಲ, ಅಪಘಾತದಲ್ಲಿ ಸತ್ತ ಯುವತಿಯ ಮುಖ ಸಹಾ ಹಾಳಾಗಿಹೋಗಿತ್ತು. ಯಾವ ರೆಕಾರ್ಡೂ ಆ ಸ್ಪಾಟಿನಲ್ಲಿ ಸಿಕ್ಕಿರಲಿಲ್ಲ ಎಂದು ಇದುವರೆಗೂ

"ಬನ್ನಿ ಕಾಫಿ ಕುಡಿದು, ನಿಮಗೆ ಲಗೇಜ್ ಇಡಲು, ನನ್ನ ಗೆಸ್ಟ್ ಹೌಸಿಗೆ ಕರೆದೊಯ್ಯುತ್ತೇನೆ, ಅನಂತರ ನಾವೇ ಹೊರಡೋಣ" ಎಂದ ಜಾಣ ಪತ್ತೇದಾರ ಪ್ರದೀಪ್. ‘ಇವನಿಗೇನಾದರೋ ಶ್ರುತಿ ವರ್ಮಾ ಸತ್ತೇ ಹೋಗಿದ್ದಾಳೆ ಎಂದು ಕೇಸ್ ನಡೆಯುತ್ತಿದೆ ಎಂದು ಅಪಘಾತದ ಬಗ್ಗೆ ಹೇಳಿಬಿಟ್ಟರೆ ದೊಡ್ಡ ಶಾಕ್ ಆದೀತು’. ಸ್ವಲ್ಪ ನನ್ನ ಬಳಿಯೇ ಇರಲಿ, ಮಾಹಿತಿ ಎಂದು ಪ್ರದೀಪ್ ಸುಮ್ಮನಾಗಿದ್ದ.

ಅವನು ಬೆಳಿಗ್ಗೆ ಆರು ಗಂಟೆಗೆಲ್ಲಾ ಪೋಲೀಸ್ ಹೆಡ್ ಕ್ವಾರ್ಟರ್ಸಿನಿಂದ ನಂದಿಬೆಟ್ಟದ ಬಳಿ ಮರೆವು ಬಂದು ಅರೆ ಹುಚ್ಚಿಯಂತಿದ್ದ ಯುವತಿಯ ಬಗ್ಗೆ ಇನ್ನಷ್ಟು ಮಾಹಿತಿ ಕಲೆಕ್ಟ್ ಮಾಡಿದ್ದಾಗ, ಅವಳನ್ನು ಡಾ|| ಅಬ್ದುಲ್ಲಾ ಅವರ ಸೈಕಾಲಿಜಿ ಕ್ಲಿನಿಕ್ಕಿನಲ್ಲಿಟ್ಟಿದ್ದಾರೆಂದು ಪೋಲೀಸ್ ಮೂಲದಿಂದ ತಿಳಿದುಬಂದಿತ್ತು. ಆ ಕ್ಲಿನಿಕ್ ಹೈದರಾಬಾದ್ ಹೆದ್ದಾರಿಯಲ್ಲಿ ಬೆಂಗಳೂರಿನ ಹೊರಗೆ, ಚಿಕ್ಕಬಳ್ಳಾಪುರ ದಾಟಿದೆಡೆ ಇತ್ತು.

ಸದಾಶಿವನಗರದಲ್ಲಿ ಬೇರೆ ಊರಿಂದ ಬಂದ ಸಾಕ್ಷಿಗಳು ತಂಗಲು ತಾನು ಇಟ್ಟುಕೊಂಡಿದ್ದ ಚಿಕ್ಕ ಗೆಸ್ಟ್ ಹೌಸಿನಲ್ಲಿ ಕರುಣ್‌ಗೆ ಹದಿನೈದು ನಿಮಿಷ ಫ್ರೆಶ್ ಆಗಲು ಸಮಯ ಕೊಟ್ಟು ಅಲ್ಲಿನ ಕುಕ್ ತಯಾರಿಸಿದ್ದ ಬ್ರೆಡ್ ಸ್ಯಾಂಡ್ವಿಚ್ ತಿಂದು ಇಬ್ಬರೂ ಪ್ರದೀಪನ ಮಾರುತಿ ಜ಼ೆನ್ ಕಾರಿನಲ್ಲಿ ಹೊರಟಿದ್ದರು. ಆಗ ಸುಮಾರು ಹತ್ತು ಗಂಟೆ.

ಪ್ರದೀಪನ ತಲೆಯಲ್ಲಿಯೂ ಪ್ರಬಲ್ ನಿನ್ನೆ ಸಂಜೆ ಹೇಳಿದ ಈ ಯುವತಿಯರ ಬಗ್ಗೆಯ ಗೊಂದಲದಿಂದ ಉಂಟಾದ ಹೊಸ ತಿರುವು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಪ್ರಬಲ್ ಬಹಳ ಚತುರ, ಮುಂದಾಲೋಚನೆಯುಳ್ಳ ಉತ್ತಮ ಕ್ರಿಮಿನಲ್ ಲಾಯರ್. ತಾನು ಶ್ರುತಿ ವರ್ಮಾ ಬಗ್ಗೆ ಪಕ್ಕಾ ಸುದ್ದಿ ಹೇಳಿದರೆ ಕೋರ್ಟಿನಲ್ಲಿ ಅವನು ಕಗ್ಗಂಟಾಗಿರುವ ಈ ಕೇಸ್ ಬಿಡಿಸಬಲ್ಲ ಎಂದು ಪ್ರದೀಪನಿಗೆ ಚೆನ್ನಾಗಿ ಗೊತ್ತಿತ್ತು. ಆರು ವರ್ಷಗಳಿಂದ ಎಲ್ಲಾ ಅವನ ಕೇಸುಗಳಲ್ಲಿಯೂ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.

ಡಾ. ಅಬ್ದುಲ್ಲಾ ಕ್ಲಿನಿಕಿನಲ್ಲಿ ಅವರ ರಿಸೆಪ್ಷನ್ ಜತೆ ಮೊದಲೇ ಮಾತಾಡಿದ್ದರಿಂದ ಸೀದಾ ಒಳಗೆ ಬಿಟ್ಟರು. ಐದೂವರೆ ಅಡಿಯ 60ರ ಸಮೀಪದ ಬಿಳಿ ಗಡ್ಡದ ಡಾ. ಅಬ್ದುಲ್ಲಾ ಬಿಳಿ ಕೋಟ್ ಧರಿಸಿ ತಮ್ಮ ಸೀಟಿನಲ್ಲಿದ್ದರು. "ಬನ್ನಿ , ನೀವು ಪ್ರದೀಪ್?" ಎಂದು ಎದ್ದು ಕೈಕುಲುಕಿದರು.

"ಹೌದು. ಇವರು ಕರುಣ್ ರಾವ್ ಅಂತಾ" ಎಂದು ಪರಿಚಯ ಮಾಡಿಕೊಟ್ಟ. "ಡಾಕ್ಟರೆ, ನಿಮ್ಮಿಂದ ಒಂದು ಉಪಕಾರವಾಗಬೇಕಿತ್ತಲ್ಲಾ?" ಸೌಜನ್ಯದಿಂದ ಕೇಳಿದ ಪ್ರದೀಪ್.

"ಹೇಳಿ, ನನಗೆ ಗೊತ್ತಿದ್ದರೆ ಸಹಾಯ ಮಾಡುವೆ" ಎಂದರು ಡಾಕ್ಟರ್ ತಾವು ಯಾವಾಗಲೂ ಸಹಾಯವನ್ನೇ ಮಾಡುತ್ತಿರುವವರಂತೆ.

"ಈ ಫೋಟೋ ನೋಡಿ ಡಾಕ್ಟರೆ!" ಎಂದು ಕರುಣ್ ಕೊಟ್ಟ ಚಿತ್ರ ನೀಡಿದ ಪ್ರದೀಪ್."ಈಕೆ ಏನಾದರೂ ನಿಮ್ಮ ಬಳಿ ಪೆಷೇಂಟ್ ಆಗಿ ಸೇರಿಕೊಂಡಿದ್ದಾಳೆಯೆ? ನನಗೆ ತಿಳಿದಂತೆ ಇವಳಿಗೆ ಮರೆವಿನ ತೊಂದರೆಯಿದೆ".

ಡಾಕ್ಟರ್ ಒಂದು ನಿಮಿಷ ಕೂಡಾ ತೆಗೆದುಕೊಳ್ಳಲಿಲ್ಲ "ಹೌದು...ಇದು ಸ್ವಲ್ಪ ಹಳೇ ಚಿತ್ರವಿರಬೇಕು...ಇದೇ ಮುಖ ಚಹರೆಯ ಯುವತಿಯೊಬ್ಬಳನ್ನು ಇಲ್ಲಿ ಅಮ್ನೀಸಿಯಾ ಚಿಕಿತ್ಸೆಗೆ ಪೋಲೀಸರು ಸೇರಿಸಿದ್ದಾರೆ...ನೋಡುವಿರಾ?"

"ಖಂಡಿತಾ ಡಾಕ್ಟರ್.. ಅವಳೇ ಆಗಿದ್ದರೆ ನಾನು ಅವಳ ಫಿಯಾನ್ಸಿ, ಮದುವೆಯಾಗುವವನಿದ್ದೆ. ಈ ಫೋಟೋ ಸುಮಾರು ಒಂದು ವರ್ಷ ಹಳೆಯದೇ ಇರಬೇಕು..." ಎಂದು ಕುತೂಹಲ ತಡೆಯಲಾಗದೇ ಎದ್ದುನಿಂತ ಕರುಣ್ ರಾವ್.

"ಸ್ವಲ್ಪ ತಡೆಯಪ್ಪ, ಯಂಗ್ ಮ್ಯಾನ್..."ಎಂದರು ಅವನ ಅವಸರ ಕಂಡ ಅನುಭವೀ ಡಾ|| ಅಬ್ದುಲ್ಲಾ. "ನೀನು ಆತುರ ಪಡಬಾರದು, ನಾನು ಆಕೆಯನ್ನು ಇಲ್ಲಿ ಕರೆಸಿದಾಗ.. ನೀನು ಶಾಂತವಾಗಿರಬೇಕು. ಅವಳು ಇಲ್ಲಿಗೆ ಬರಲಿ...ನೀನು ಸುಮ್ಮನೆ ನೋಡುತ್ತಿರು. ಅವಳಿಗೇ ನೆನಪು ಮರುಕಳಿಸಿ ನಿನ್ನನ್ನು ಗುರುತು ಹಿಡಿದರೆ ನಿನ್ನ ಜೀವನದ ಮಹಾ ಅದೃಷ್ಟ...ಇಲ್ಲವೇ ಸ್ವಲ್ಪ ದಿನ ಇಲ್ಲೇ ಚಿಕಿತ್ಸೆ ನಡೆಯುತ್ತದೆ , ಅವಳೇ ಎಂದು ಖಚಿತವಾದರೆ ಟ್ರೀಟ್‌ಮೆಂಟ್ ಬೇರೆ!"

ಆಕೆಯನ್ನು ನರ್ಸ್ ಒಬ್ಬಳು ವೀಲ್ ಚೇರಿನಲ್ಲಿ ಕರೆತರುವವರೆಗೂ ಅಲ್ಲಿ ಕುತೂಹಲ ದಟ್ಟವಾಗಿ ಎಲ್ಲರ ಮನದಲ್ಲೂ ಹಬ್ಬಿತ್ತು.

ತಲೆಗೆ ದಪ್ಪ ಬ್ಯಾಂಡೇಜ್ ಕಟ್ಟಿಕೊಂಡ ಸಪ್ಪೆ ಮುಖದ ಯುವತಿಯೊಬ್ಬಳು ಏನು ಎತ್ತ ಎಂದು ತಿಳಿಯದೇ ಅದರಲ್ಲಿ ಕುಳಿತಿದ್ದಳು. ಒಂದು ನಿಮಿಷ ಅವಳು ಎಲ್ಲರನ್ನು ಮಿಕಮಿಕನೆ ನೋಡಿ, ಕೊನೆಗೆ ಅವಳ ದೃಷ್ಟಿ ಕರುಣ್ ಮೇಲೆ ಕೇಂದ್ರೀಕೃತವಾಯಿತು.

"ನೀವು ಕ..ಕರ್...ಕರುಣ್!" ಎಂದಳು ತೊದಲುತ್ತಾ.

ಅಷ್ಟು ಹೇಳಲು ಅವಳಿಗೆ ತೊಂದರೆಯಾದಂತೆ ಮುಖ ಕಿವಿಚಿದಳು. ಮನಸ್ಸಿಗೆ ಆಗುವ ಹೊಸ ಭಾವನೆಗಳ ಆಘಾತ ಎಂದು ಮಿಕ್ಕವರಿಗೆ ಯಾರೂ ಹೇಳಬೇಕಿರಲಿಲ್ಲ.

ಅವಳ ಬಳಿ ಓಡಿಹೋದ ಯುವಕ ಕರುಣ್, ಅವಳ ಮುಂದೆ ಮಡಿಯೂರಿ ಕುಳಿತು ಅವಳ ಕೈಗಳನ್ನು ತನ್ನ ಕೈಯಲ್ಲಿಟ್ಟುಕೊಂಡ. "ಶ್ರುತೀ, ಶ್ರೂತೀ...ನಾನು ಬಂದುಬಿಟ್ಟೆ ಡಿಯರ್...ಎಲ್ಲಿ ಹೋಗಿದ್ದೆಯೆ ಇಷ್ಟು ದಿನ?" ಎಂದು ಕಣ್ಣೀರುಕ್ಕಿ ಅವಳನ್ನು ತಬ್ಬಿಕೊಂಡ. "ನಾನು...ನಾನು...ಇವರು ಇಲ್ಲಿ..." ಎಂದು ಬಿಕ್ಕಿದಳು ಮತ್ತೆ ಮತ್ತೆ ‘ಕರುಣ್ ಕರುಣ್’ ಎಂದು ಪಿಸುಗುಟ್ಟುತ್ತಾ.

"ದ್ಯಾಟ್ಸ್ ಇಟ್...ಥ್ಯಾಂಕ್ಸ್ ಡಾಕ್ಟರ್" ಎಂದು ಹರ್ಷದಿಂದ ಚಿಟಿಕೆ ಹೊಡೆದು ಡಾಕ್ಟರ ಕೈಕುಲುಕಿದ ಪ್ರದೀಪ್. "ಸೋ...ಇವಳೇ ಶ್ರುತಿ ವರ್ಮಾ ಎಂದಾಯಿತು.. ಇದನ್ನು ಕೋರ್ಟಿನಲ್ಲಿ ಹೇಳಲು ನಿಮ್ಮನ್ನು ಕರೆಸಬೇಕಾಗಬಹುದು...ಓಕೆ?"

ಡಾಕ್ಟರ್ ಒಪ್ಪಿ, ಸದ್ಯ, ಈ ಕೇಸೊಂದು ಸಂತೋಷಕರವಾಗಿ ಮುಗಿಯಿತಲ್ಲ ಎಂದು ಯುವಜೋಡಿಯನ್ನು ಅಭಿನಂದಿಸಿದರು.

"ಇವಳನ್ನು ಸ್ವಲ್ಪ ದಿನ ಇಲ್ಲೇ ಇಡಬೇಕಾದೀತು. ಓಕೆ ನಾ?... ಪೋಲೀಸರ ಬಳಿ ನೀವು ಇದರ ಸ್ಟೇಟ್ ಮೆಂಟ್ ಕೊಟ್ಟು ಸಹಿ ಮಾಡಬೇಕು" ಎಂದು ಡಾ|| ಅಬ್ದುಲ್ಲಾ ಪ್ರದೀಪನ ಜತೆ ಮಾತಾಡುತ್ತಾ ಹೊರಬಂದರು.

"ಅದೆಲ್ಲಾ ಮಾಡುತ್ತೇನೆ ಡಾಕ್ಟರ್.. ಇನ್ನೊಂದು ವಿಷಯ ... ಈಕೆ...ಶ್ರುತಿವರ್ಮಾ ಏನಾದರೂ ಗರ್ಭಿಣಿಯಾಗಿದ್ದಾಳೆಯೆ?" ಎಂದ ಕುತೂಹಲದಿಂದ ಪ್ರದೀಪ್.

ಅವನತ್ತ ಆಶ್ಚರ್ಯದಿಂದ ನೋಡಿದರು ಡಾಕ್ಟರ್ "ಖಂಡಿತಾ ಇಲ್ಲ.. ನಿಮಗೇಕೆ ಈ ಅನುಮಾನ ಬಂತು?"

"ಏನಿಲ್ಲ, ಕೋರ್ಟಲ್ಲಿ ಕೇಸು ನಡೆಯುತ್ತಿದೆ ಡಾಕ್ಟರೆ..." ಎಂದು ಸಂಕ್ಷಿಪ್ತವಾಗಿ ಹೇಳಿದ ಪ್ರದೀಪ್.

ಕರುಣ್ ರಾವ್ ಜತೆ ವಾಪಸ್ ಬೆಂಗಳೂರಿಗೆ ಬಂದ ತನ್ನ ಆಫೀಸಿನಿಂದ ಪ್ರದೀಪ್, ಪ್ರಬಲ್ ಆಫೀಸಿಗೆ ಫೋನ್ ಮಾಡಿದ.

ದಕ್ಷಾ ಸಹಾ ಈ ಸುದ್ದಿ ಕೇಳಿ ಭಲೇ, ಬೇಷ್ ಎಂದು ಕೈತಟ್ಟಿದಳು " ಇನ್ನೇನು ಕೋರ್ಟ್ ಮುಗಿಸಿಕೊಂಡು ಪ್ರಬಲ್ ಬರುತ್ತಾರೆ. ಹೇಳುವೆಯಂತೆ, ಇಲ್ಲೇ ಬಂದುಬಿಡು...ಅದಕ್ಕೂ ಮುನ್ನ ಪೋಲೀಸಿಗೆ ಸ್ಟೇಟ್ ಮೆಂಟ್ ಕೊಟ್ಟು ಪತ್ರಿಕೆಗಳಿಗೆ ಈ ಸುದ್ದಿ ಕೊಡು ಪ್ರದೀಪ್. ಸತ್ಯ ತಾನೇ, ತಪ್ಪೇನಿಲ್ಲ...ಕೇಸು ನಮ್ಮ ಕಡೆಗೆ ತಿರುಗಲು ಸಹಾಯವಾದೀತು!"

"ಅದನ್ನೇ ಮಾಡುತ್ತಿದ್ದೇನೆ "ಎಂದ ಪ್ರದೀಪ್.

ಸ್ವಲ್ಪ ಸಮಯದ ನಂತರ ಪ್ರಬಲ್ ಬರುವ ಮುನ್ನ ಕರುಣ್ ಜತೆ ಪ್ರದೀಪ್ ಅಲ್ಲಿಯೇ ಹಾಜರಿದ್ದ. ಸ್ವಲ್ಪ ಪರಿಚಯದ,ಮ್ ಮಾತುಕತೆ ನಂತರ ಪ್ರಬಲ್ ಪ್ರದೀಪನಿಗೆ ಹೇಳಿದ,

"ವಂಡರ್‌ಫುಲ್ ನ್ಯೂಸ್, ಮಿತ್ರ...ಅಂತೂ ಅರ್ಧ ಕೇಸು ಮಾತ್ರ ಸಾಲ್ವ್ ಆದಂತಾಯಿತು...ಈ ಸುದ್ದಿ ಅಂದರೆ ಶ್ರುತಿ ವರ್ಮಾ ತರಹದ ಒಬ್ಬ ಯುವತಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವುದು ಪೋಲೀಸರಿಗೇ ಗೊತ್ತಿತ್ತು. ಆದರೆ ಪ್ರಾಸಿಕ್ಯೂಶನ್ನಿಗೆ ಇದರ ಕನೆಕ್ಷನ್ ಮಾತ್ರ ಸಿಕ್ಕಿರಲಿಲ್ಲ, ಇನ್ನು ನಾಳೆ ಬೆಳಿಗ್ಗೆಯ ಪತ್ರಿಕೆಗಳಲ್ಲಿ ಶ್ರುತಿ ವರ್ಮಾ ಸತ್ತಿಲ್ಲ, ಪೋಲೀಸರೇ ಟ್ರೀಟ್ಮೆಂಟ್ ಕೊಡಿಸುತ್ತಿದ್ದರು ಎಂದು ಪ್ರಕಟವಾಗುತ್ತದೆ. ಅದನ್ನು ಯೋಚಿಸಿ ಇವತ್ತು ರಾತ್ರಿ ಹರಿಹರನ್ ನಿದ್ದೆ ಮಾಡುವುದಿಲ್ಲ ... ಆದರೆ ನಮಗೆ ಇನ್ನೂ ಅರ್ಧ ಕೇಸ್ ಬಗೆಹರಿಸುವುದು ಮಿಕ್ಕಿದೆ"

ಪ್ರದೀಪ್ ಸೀಟಿನಲ್ಲಿ ನೇರವಾಗಿ ಎದ್ದು ಕುಳಿತ " ಇನ್ನೂ ಅರ್ಧ ಕೇಸಾ? ಹೇಗೆ?"

"ಈ ಕೇಸ್ ನಡೆಯುತ್ತಿರುವುದು ಎರಡು ಕಾರಣಕ್ಕೆ...ಯಾಕೆ ಹೇಳು..." ಪ್ರಬಲ್ ಸವಾಲೆಸೆದ.. ಹೀಗೆ ಗೆಸ್ ಗೇಮ್ ಆಡುತ್ತಾರೆ, ಬ್ರೈನ್ ಸ್ಟಾರ್ಮಿಂಗ್ ಎಂದು ಅವರಿಬ್ಬರೂ.

"ಓಹ್, ಒಂದು - ಕೀರ್ತಿ ಶರ್ಮಾ ಶ್ರುತಿ ವರ್ಮಾಳನ್ನು ಕಾರಲ್ಲಿ ಕೂರಿಸಿಕೊಂಡು ಹೋಗುವಾಗ ಅವಳು ಅಪಘಾತದಲ್ಲಿ ಸತ್ತು ಹೋಗಿದ್ದು.. ಅವಳು ಶ್ರುತಿಯೇ ಅಲ್ಲದಿದ್ದರೆ ಮತ್ಯಾರು?....ಅದು ಒಂದು ಪಾಯಿಂಟ್!" ಎಂದ ಯೋಚಿಸುತ್ತಾ ಪ್ರದೀಪ್."

"ಕರೆಕ್ಟ್...ಮುಂದೆ ಹೇಳು"

"ಕೀರ್ತಿ ಶರ್ಮಾ ಮೇಲೆ ವೀರೇಂದ್ರ ಕಟ್ಟಿಮನಿಯ ಕೊಲೆಯ ಆಪಾದನೆಯೇ ಮುಖ್ಯ ಕೇಸು. ಅವಳು ಅವನನ್ನು ಕೊಂದಿಲ್ಲ ಎಂದು ನೀನು ಹೇಳಬೇಕಾದರೆ ಮತ್ಯಾರು ಅವನಿಗೆ ಚುಚ್ಚಿದ್ದು ಎಂದು ಪತ್ತೆ ಹಚ್ಚಬೇಕು, ಅಲ್ಲವೆ?" ಪ್ರದೀಪ್ ಊಹಿಸಿ ಕೇಳಿದ.

"ಹೌದು, ಪ್ರದೀಪ್...ಇದರ ಕೆಲವು ಸುಳಿವುಗಳು ನನಗೆ ಗೊತ್ತು.. ಅದನ್ನು ಕೋರ್ಟಿನಲ್ಲೇ ಎಲ್ಲರಿಗೂ ಹೇಳುತ್ತೇನೆ... ವೀರೇಂದ್ರನ ಪತ್ನಿ ದುರ್ಗಾ ಬಗ್ಗೆ ಕೇಳಿದ್ದೆನಲ್ಲಾ.. ಏನಾಯಿತು?’

ಪ್ರದೀಪ್ ಓಹ್ ಎಂದು ತಲೆಯಾಡಿಸಿದ. "ಯೆಸ್, ಸರಿಹೋಯಿತು ನೀನು ಕೇಳಿದ್ದು, ಮರೆತೇ ಬಿಟ್ಟಿದ್ದೆ... ನಮ್ಮವರು ಪತ್ತೆ ಹಚ್ಚಿದ್ದಾರೆ. ಈ ದುರ್ಗಾ ತಿಪಟೂರಿನವಳು... ಮದುವೆಗೆ ಮುಂಚೆ ಅಲ್ಲಿ ನರ್ಸ್ ಆಗಿದ್ದಳು.. ಅಲ್ಲಿಯೇ ಅವಳಿಗೆ ರಮಣ್ ಎಂಬಾತ ಪರಿಚಯವಾಗಿದ್ದು...ಅದೇ ನರ್ಸಿಂಗ್ ಹೋಮಿನಲ್ಲಿ"

"ಅದು ನಾನೇ ಗೆಸ್ ಮಾಡಿದ್ದೆ ಕೋರ್ಟಿನಲ್ಲಿ. ಈಗ ಆಧಾರ ಸಿಕ್ಕಿದ್ದು ಒಳ್ಳೆಯದಾಯಿತು..ನೆಕ್ಸ್ಟ್...ಇವತ್ತು ರಮಣ್ ಹೇಳುತ್ತಿದ್ದ. ಅವನು ಮತ್ತು ವೀರೇಂದ್ರ ಪಿ.ಜಿ.ಯ ಹೊರಗೆ ಎಂ.ಪಿ ಕಿರಣ್‌ಶಂಕರ್ ರಾವನ್ನು ಮೀಟ್ ಮಾಡಿದರಂತೆ, ಅದು ನಿಜವೇ ಎಂದು ತಿಳಿಯಬೇಕು"

"ಓಕೆ..."

ಪ್ರಬಲ್ ಹೇಳುತ್ತಿದ್ದ,

"ಇವತ್ತು ರಾತ್ರಿ ನಾನು ದಕ್ಷಾ ಇಲ್ಲಿ ಲೇಟ್ ಕುಳಿತು ಯೋಚಿಸುವುದಿದೆ...ನೀನು ನನಗೆ ಈ ಎರಡು ಪ್ರಶ್ನೆಗಳ ಉತ್ತರ ಹುಡುಕಿಕೊಡು, ಪ್ರದೀಪ್...ಆ ಅಪಘಾತದಲ್ಲಿ ಸತ್ತ ಯುವತಿ...ಅವಳ ಬಳಿ ಒಂದು ರಿವಾಲ್ವರ್ ಇತ್ತು. ಅದನ್ನು ಅವಳು ತೋರಿಸಿದಾಗಲೇ ಕೀರ್ತಿ ಗಾಬರಿಯಿಂದ ಅಪಘಾತ ಮಾಡಿದ್ದೇನೆ ಎನ್ನುತ್ತಾಳೆ.. ಆ ಯುವತಿ ಯಾರು ಎಲ್ಲಿಂದ ಬಂದಳು, ಪ್ರದೀಪ್?. ಜೈಲರ್ ವೀರಾರೆಡ್ಡಿಯ ಗನ್ ಅವಳ ಬಳಿ ಹೇಗಿತ್ತು? ಇದು ಮೊದಲ ಪಾಯಿಂಟ್... ಕಿರಣ್‌ಶಂಕರ್ ರಾವ್ ಆ ರಾತ್ರಿ ಎಲ್ಲಿದ್ದರು? ಏನು ಮಾಡಿದರು? ಅದೇ ಎರಡನೇ ಪಾಯಿಂಟ್"

"ನಾನು ಹುಡುಕುತ್ತೇನೆ" ಎಂದು ಕರುಣ್ ಜತೆ ಹೊರಟ ಪ್ರದೀಪ್.

"ಕರುಣ್, ನೀವು ನಿಮ್ಮ ತಂದೆಯನ್ನು ಮೀಟ್ ಮಾಡಲು, ಕಾಲ್ ಮಾಡಲು ಹೋಗಬೇಡಿ . ಅವರಿಗೆ ತಿಳಿಯಬಾರದು" ಪ್ರಬಲ್ ಎಚ್ಚರಿಸಲು ಮರೆಯಲಿಲ್ಲ.

"ಖಂಡಿತಾ ಹೋಗುವುದಿಲ್ಲ, ನೀವೇ ಹೇಳುವವರೆಗೆ ಇವರ ಗೆಸ್ಟ್ ಹೌಸ್‌ನಲ್ಲಿರುತ್ತೇನೆ" ಕರುಣ್ ಒಪ್ಪಿಕೊಂಡ.

"ನನಗೆ ಸಹಾ ರಾತ್ರಿಯೆಲ್ಲ ಕೆಲಸವಿದೆ, ಪ್ರಬಲ್, ನೀನು ಕೋರ್ಟಿಗೆ ಹೊರಡುವ ಮುನ್ನ ವರದಿ ಕೊಡುತ್ತೇನೆ...ಆದರೆ ನೀನು ನಮ್ಮ ಕ್ಲಯಂಟ್ ಕೀರ್ತಿ ತರಹದವರು ಹೇಳಿದ್ದೆಲ್ಲಾ ನಿಜ ಎಂದು ನಂಬುತ್ತೀಯಾ?" ಪ್ರದೀಪ್ ಪ್ರಶ್ನೆ.

ಪ್ರಬಲ್ ಹೊರಟು ನಿಂತ ತನ್ನ ಮಿತ್ರನ ಬೆನ್ನು ತಟ್ಟಿ ನುಡಿದ, "ಸುಳ್ಳು ಹೇಳಿದರೆ ನನ್ನ ಬಳಿ ಸಿಕ್ಕಿಹಾಕಿಕೊಳ್ಳುತ್ತಾರೆ...ಆದರೆ ನನ್ನ ಎಲ್ಲಾ ಕಕ್ಷಿದಾರರೂ ನಿರಪರಾಧಿಗಳು ಎಂದೇ ಕೇಸು ಶುರು ಮಾಡುತ್ತೇನೆ!"

( ಮುಂದುವರೆಯುವುದು)

ಭಾಗ 5

15

ಕೋರ್ಟಿನಲ್ಲಿ ಕೇಸು ಆರಂಭವಾದ ಹೊತ್ತಿನಲ್ಲಿ ಜನರಿಂದ ತುಂಬಿ ಗಲಗಲನೆ ಸದ್ದು ಏರಿತ್ತು. ಪ್ರದೀಪ್ ಪತ್ರಿಕಾ ಹೇಳಿಕೆ ಕೊಟ್ಟಂತೆ ಅಂದಿನ ದಿನಪತ್ರಿಕೆಗಳಲ್ಲಿ ಶ್ರುತಿ ವರ್ಮಾ ಬದುಕಿದ್ದಾಳೆ ಎಂಬುದೇ ಕೇಸಿನ ಬಿಗ್ ಟ್ವಿಸ್ಟ್ ಎಂದು ಎಲ್ಲಾ ವಿವರಗಳು ಬಂದಿದ್ದು ಜನರಲ್ಲಿ ಇಮ್ಮಡಿ ಕುತೂಹಲ ಮೂಡಿಸಿತ್ತು. ಇನ್ನೂ ಉತ್ತರ ಸಿಗದ ಹಲವಾರು ಪ್ರಶ್ನೆಗಳೆದ್ದಿವೆ. ಈ ಕೇಸ್ "ಫಾರ್ ಫ಼್ರಮ್ ಓವರ್ (ಇನ್ನೂ ಮುಗಿಯಲು ಬಹಳ ಸಮಯವಿದೆ)" ಎಂದು ಅದರಲ್ಲಿ ವರ್ಣಿಸಿದ್ದರು.

ಪತ್ತೇದಾರ ಪ್ರದೀಪನ ಜತೆ ದೊಡ್ಡ ಸಮಾಲೋಚನೆ ಮಾಡಿ, ಅನಂತರ ದಕ್ಷಾ ಕೊಟ್ಟ ಎಲ್ಲಾ ದಾಖಲೆಗಳ ಜತೆ ಪ್ರಬಲ್ ಪ್ರಸನ್ನವದನನಾಗಿ ಕೋರ್ಟ್ ಹಾಲ್ ಪ್ರವೇಶಿಸಲು ಎಲ್ಲರೂ ಎವೆಯಿಕ್ಕದೇ ಅವನತ್ತ ನೋಡಹತ್ತಿದ್ದರು. ಕೀರ್ತಿ ಶರ್ಮಾ ಅಂತೂ ಬೆದರಿದ ಹರಿಣಿಯಂತೆ ಚಿಕ್ಕದಾಗಿ ಮುದುರಿ ಕುಳಿತುಕೊಂಡಿದ್ದಳು.

ಜಡ್ಜ್ ಆಗಮಿಸಿದ ಕೂಡಲೇ ಮೊದಲು ತಾವೇ ಎದ್ದು ವಾದ ಆರಂಭಿಸಿದರು ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಹರನ್, "ನಾನು ಕೋರ್ಟಿಗೆ ಸ್ವಲ್ಪ ವಿವರಣೆ ಕೊಡುವುದಿದೆ.. ಇವತ್ತು ಸುದ್ದಿಯಲ್ಲಿ..." ಎನ್ನುತ್ತಿದ್ದಂತೆ ಜಡ್ಜ್ ಡಿಸೋಜಾ ಮಾತಿಗೆ ಕತ್ತರಿ ಹಾಕಿದರು,

"ನಾನೂ ಇವತ್ತಿನ ದಿನಪತ್ರಿಕೆಗಳನ್ನು ಓದಿದೆ, ಪ್ರಾಸಿಕ್ಯೂಟರ್...ಗೊತ್ತಿದೆ"

"ಇರಬಹುದು, ಯುವರ್ ಆನರ್.. ಆದರೆ ಇಲ್ಲಿ ಕೇಸು ನಡೆಯುತ್ತಿರುವುದು ಕೀರ್ತಿ ಶರ್ಮಾ ವರ್ಸಸ್ ಕರ್ನಾಟಕ ಸ್ಟೇಟ್ ಎಂದು ವೀರೇಂದ್ರ ಕಟ್ಟೀಮನಿಯ ಕೊಲೆ ಸಂಬಂಧ...ಈ ಶ್ರುತಿ ವರ್ಮಾ ಬದುಕಿದ್ದರೂ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ..."

"ಹೌದೆ?" ಜಡ್ಜ್ ಡಿಸೋಜಾ ತಮ್ಮ ಸೀಟಿನಲ್ಲಿ ಮುಂದಕ್ಕೆ ಜರುಗಿ ಕಣ್ಣಿ ಚಿಕ್ಕದಾಗಿಸಿ ಹರಿಹರನ್‌ರತ್ತ ದುರುಗುಟ್ಟಿದರು."ನನಗಂತೂ ಈ ಕೀರ್ತಿ ಶರ್ಮಾ ಮಾಡಿದ ಕಾರ್ ಅಪಘಾತದಲ್ಲಿ ಸಿಕ್ಕ ಸುಟ್ಟುಹೋದ ಯುವತಿಯ ಹೆಣ ಯಾರದು, ಅವಳು ಹೇಗೆ ಶ್ರುತಿ ವರ್ಮಾ ಎಂದು ಹೇಳಿಕೊಂಡಿದ್ದಳು ಎಂಬುದನೆಲ್ಲಾ ತಿಳಿಯಬೇಕೆನಿಸಿದೆ..."

ಹರಿಹರನ್ ಉತ್ತರಿಸುವ ಮುನ್ನ ಪ್ರಬಲ್ ಎದ್ದು ನಿಂತ. "ಅದನ್ನು ನಾನು ವಿವರಿಸಬಲ್ಲೆ, ಯುವರ್ ಆನರ್ ಅನುಮತಿ ಕೊಟ್ಟರೆ..."ಅವನೀಗ ಈ ಕೇಸಿನ ಚದುರಂಗದಾಟದಲ್ಲಿ ದೊಡ್ಡ ಗರ ಆಡುವವನಿದ್ದ.

"ಹೇಳಿ" ಜಡ್ಜ್ ನುಡಿಯಲು ಎಲ್ಲರೂ ಅವನತ್ತ ತಿರುಗಿದರು.

"ಯುವರ್ ಆನರ್... ಸತ್ತ ಯುವತಿಯ ಹೆಸರು ಶ್ರುತಿ ವರ್ಮಾ ಅಲ್ಲ, ಸುಲ್ತಾನಾ ಬೇಗಂ ಎಂದು..." ಪ್ರಬಲ್ ಆರಂಭಿಸಿದಂತೆಯೆ ನಿಂತಲ್ಲೇ ಹರಿಹರನ್ ಕೂಗಿದರು,. "ನಾನು ಹೇಳಿರಲಿಲ್ಲವೆ, ಈ ಪ್ರಬಲ್ ಅವರು ಕೊನೆಯಲ್ಲಿ ಜಾದುಗಾರನಂತೆ ಏನೋ ಆಟ ತೋರಿಸುತ್ತಾರೆ..."

"ಸ್ವಲ್ಪ ಸುಮ್ಮನಿರಿ, ನಾನು ಅವರಿಗೆ ಅನುಮತಿ ಕೊಟ್ಟಿದ್ದೇನೆ...ಹೇಳಿ ಪ್ರಬಲ್.."ಜಡ್ಜ್ ಅಸಹನೆಯಿಂದ ಅವರನ್ನು ಮೊಟಕುಗೊಳಿಸಿದರು.

ಪ್ರಬಲ್ ದಾಖಲೆ ಪತ್ರಗಳನ್ನು ತೋರಿಸುತ್ತಾ ನುಡಿದ, " ಈ ಸುಲ್ತಾನಾ ಬೇಗಮ್ ಎಂಬ 26 ವರ್ಷ ವಯಸ್ಸಿನಾಕೆ ವಿವಾಹಿತಳು, ಇವಳ ಪತಿ ಖಾದಿರ್ ಗಲ್ಫ್ ದೇಶಕ್ಕೆ ಹೋಗಿದ್ದಾರೆ. ಈಕೆ ಪ್ರೊಫೆಶನಲ್ ಕಾರು ಕಳ್ಳಿ ಮತ್ತು ಶಾಪ್ ಲಿಫ್ಟಿಂಗ್ ಅಪರಾಧಗಳ ಹಿನ್ನೆಲೆಯಿದ್ದಾಕೆ. ಇವಳು ಜೈಲಿನಲ್ಲಿದ್ದಳು, ಯುವರ್ ಆನರ್...ಇವಳು ಗರ್ಭಿಣಿಯೂ ಆಗಿದ್ದಳು...ಇವಳನ್ನು ಈ ಸಲ ಸ್ಟೇಟ್ ಜೈಲಿಂದ ಬಿಡುಗಡೆ ಮಾಡುವ ದಿನ ಈ ಅಪಘಾತಕ್ಕೆ ಹಿಂದೆ ಮೂರು ದಿನಗಳ ಹಿಂದೆ ಬಿತ್ತು...ಅವತ್ತಿನ ದಿನ ಜೈಲರ್ ವೀರಾರೆಡ್ಡಿಯವರ ಗಮನ ತಪ್ಪಿಸಿ ಅವರ ರಿವಾಲ್ವರ್ ಕದ್ದುಕೊಂಡು ಹೊರಬಂದಿದ್ದಾಳೆ... ಹೊಸ ಕಾರುಗಳ್ಳತನ ಮಾಡಲು ಸುಲಭವಾಗುವಂತೆ..."

"ಇವಳು ಶ್ರುತಿ ವರ್ಮಾ ಕಾರನ್ನು ಕದ್ದಳೆ?" ಜಡ್ಜ್ ಖುದ್ದಾಗಿ ಕೇಳಿದರು.

"ಹೌದು, ಯುವರ್ ಆನರ್...ಅಷ್ಟೇ ಅಲ್ಲ, ತನ್ನಂತೆಯೇ ಇರುವ ಯುವತಿಯರನ್ನು ಹೆದ್ದಾರಿಯಲ್ಲಿ ಲಿಫ್ಟ್ ಕೇಳುವ ಅಭ್ಯಾಸವಿಟ್ಟುಕೊಂಡಿದ್ದಾಳೆ. ಶ್ರುತಿ ವರ್ಮಾ ಅಂದು ಕಾರಲ್ಲಿ ಬರುತ್ತಿರುವಾಗ ಅವಳನ್ನು ಲಿಫ್ಟ್ ಕೇಳಲಾಗಿ ಶ್ರುತಿ ಕಾರನ್ನು ನಿಲ್ಲಿಸಿ ಲಿಫ್ಟ್ ಕೊಡಲು ಹತ್ತಿಸಿಕೊಂಡಿದ್ದಾಳೆ...ಅದೇ ಶ್ರುತಿ ವರ್ಮಾ ಮಾಡಿದ ತಪ್ಪು..."

"ಅಂದರೆ?"

"ಈ ಸುಲ್ತಾನಾ ಸಮಯ ನೋಡಿ ಶ್ರುತಿವರ್ಮಾಗೆ ಗನ್ ತೋರಿಸಿ ಆಕೆಯ ತಲೆಗೆ ಹೊಡೆದು ಕಾರಿನ ಹೊರಕ್ಕೆ ದೂಡಿದ್ದಾಳೆ, ಯುವರ್ ಆನರ್. ಹಾಗೇ ಶ್ರುತಿವರ್ಮಾಳನ್ನು ಅಲ್ಲೇ ಬಿಟ್ಟು ಅವಳ ಸಾಮಾನು, ಪರ್ಸ್ ಸಮೇತ ಕಾರನ್ನೂ ಕದ್ದುಕೊಂಡು ಹೋಗಿದ್ದಾಳೆ ಎಂದು ನಾವು ಅಂದಾಜು ಮಾಡಬಹುದು.. ಅವಳ ಕತ್ತಿನಲ್ಲಿದ್ದ ಚೈನ್ ಸಹಾ ಶ್ರುತಿಯದೇ. ಇತ್ತ ಸ್ಮೃತಿಹೀನಳಾದ ಗಾಯಗೊಂಡ ಅಸಲಿ ಶ್ರುತಿ ವರ್ಮಾ ಅನಂತರ ಅಕ್ಕಪಕ್ಕದ ಜನರಿಗೆ ಸಿಕ್ಕಿದ್ದಾಳೆ, ಪೋಲೀಸರೇ ಅವಳನ್ನು ಚಿಕಿತ್ಸೆಗೆ ಕಳಿಸಿದ್ದಾರೆ, ಅವಳ ಬಳಿ ಯಾವುದೇ ಐಡೆಂಟಿಟಿ ಇರದ ಕಾರಣ, ಅವಳು ಯಾರೆಂದು ತಿಳಿಯದೇ. ಅವಳನ್ನೇ ನಾವು ನಿನ್ನೆ ಪತ್ತೆ ಮಾಡಿದ್ದೇವೆ..."

"ಆಮೇಲೆ..." ಜಡ್ಜ್ ಎದ್ದು ನಿಲ್ಲಲಿಲ್ಲ, ಅಷ್ಟು ಕಾತರದಿಂದ ಕೇಳಿಸಿಕೊಳ್ಳುತ್ತಿದ್ದಾರೆ.

"...ಇಲ್ಲಿ ಆ ಶ್ರುತಿ ವರ್ಮಾಳ ಕಾರ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಹೆದ್ದಾರಿಯಲ್ಲಿ ಕೆಟ್ಟುಹೋಗಿ ಪೆಟ್ರೋಲ್ ಬಂಕಿಗೆ ತಂದು ನಿಲ್ಲಿಸಿದ್ದಾಳೆ ಸುಲ್ತಾನಾ...ಆಗ ಸುಲ್ತಾನಾಗೆ ಪೆಟ್ರೋಲ್ ಬಂಕಿನಲ್ಲಿ ಊರಿಂದ ಸ್ವತಃ ಓಡಿಬರುತ್ತಿದ್ದ ಕೀರ್ತಿ ಶರ್ಮಾ ತನ್ನ ಕಾರಲ್ಲಿ ಕಾಣಿಸಿದ್ದಾಳೆ, ಯುವರ್ ಆನರ್... ಇವಳ ಕಾರನ್ನು ಕದಿಯುವಾ, ಕೆಟ್ಟು ಹೋಗಿದ್ದ ಶ್ರುತಿಯ ಕಾರನ್ನು ಅಲ್ಲಿಯೇ ಬಿಟ್ಟು ಹೋದರಾಯಿತು ಎಂಬ ಯೋಚನೆ ಬಂದಿದೆ ದುಷ್ಟೆಗೆ.. ಕೀರ್ತಿ ಶರ್ಮಾ ಸಹಾ ಶ್ರುತಿ ವರ್ಮಾ ಮಾಡಿದ ತಪ್ಪನ್ನೇ ಮಾಡಿ ಅವಳಿಗೆ ಲಿಫ್ಟ್ ಕೊಡಲು ಕೂರಿಸಿಕೊಂಡಿದ್ದಾಳೆ, ಯುವರ್ ಆನರ್.. ತನ್ನ ಹೆಸರು ಶ್ರುತಿ ವರ್ಮಾ ಎಂದೇ ಕೀರ್ತಿಗೆ ಸುಳ್ಳು ಹೇಳಿದ್ದಾಳೆ ಸುಲ್ತಾನಾ. ಕಾರಿನಲ್ಲಿ ಹೋಗುವಾಗ ಈ ಬಾರಿ ಸುಲ್ತಾನಾ ಕೀರ್ತಿಗೆ ಗನ್ ತೋರಿಸಿದಾಗ ಮಾತ್ರ ಆಗಬಾರದ್ದು ಆಗಿಹೋಗಿದೆ. ಸುಲ್ತಾನಾಳ ಅದೃಷ್ಟ ಖಾಲಿಯಾಗಿತ್ತೇನೋ, ಕೀರ್ತಿ ಭಯಪಟ್ಟು ಕಾರ್ ಕೈ ತಪ್ಪಿ ಅಪಘಾತ ಮಾಡಿದ್ದಾಳೆ. ಆದರೆ ಈ ಅಪಘಾತದಲ್ಲಿ ಪಕ್ಕದ ಬಂಡೆಕಲ್ಲಿಗೆ ತಲೆ ಬಡಿದು ಸುಲ್ತಾನಾ ಬೇಗಮ್ ತಾನೇ ಸತ್ತುಹೋಗಿದ್ದಾಳೆ, ಇಲ್ಲಿ ಕೊಲೆಯಾಗಲೇ ಇಲ್ಲ ಎಂದು ತಾವು ಗಮನಿಸಬೇಕು...ಕೀರ್ತಿಗೆ ಎಚ್ಚರ ಬಂದಾಗ ಶ್ರುತಿ ಎಂದಿದ್ದ ಈ ಯುವತಿಯ ಮಾತನ್ನು ನಂಬಿ ಅವಳ ಕದ್ದಿದ್ದ ಶ್ರುತಿಯ ಪರ್ಸ್ ಮತ್ತು ನಿಶಾನೆಗಳನ್ನು ತಾನು ತೆಗೆದುಕೊಂಡು, ತನ್ನ ಹೆಸರು ಶ್ರುತಿ ವರ್ಮಾ ಬದಲಿಸಿಕೊಂಡು ಜೀವನ ತಿದ್ದಿಕೊಂಡು ಹೊಸದಾಗಿ ಶುರು ಮಾಡೋಣ ಎಂದು ಅಲ್ಲಿಂದ ಓಡಿಬಂದು ಬೆಂಗಳೂರು ತಲುಪಿದ್ದಾಳೆ, ಯುವರ್ ಆನರ್!...ಇದೇ ನಡೆದಿರುವುದು..."

"ಓಹ್, ಐ ಸೀ ಮತ್ತು ಆ 0.38 ಗನ್ ಹಾಗಾದರೆ ಜೈಲರ್ ವೀರಾರೆಡ್ಡಿಯವರದೇ!" ಎಂದರು ಜಡ್ಜ್ ಸಾಹೇಬರು.

"ಹೌದು...ಆದರೆ ಪೋಲಿಸ್ ಇನ್ಸ್ಪೆಕ್ಟರ್ ರವಿಕುಮಾರ್ ಕೋರ್ಟಿಗೆ ನಾನು ಕೇಳಿದಾಗಲೂ ಈ ಕೇಸಿಗೂ ಇದಕ್ಕೂ ಸಂಬಂಧವಿರಲಿಲ್ಲ ಎಂದುಬಿಟ್ಟರು, ಯುವರ್ ಆನರ್...ಇತ್ತು ಅಲ್ಲವೆ, ಪಾಪಾ ರವಿಕುಮಾ‌ರ್‌ಗೆ ಇದೆಲ್ಲಾ ಆಗ ಗೊತ್ತಿರಲಿಲ್ಲ" ಪ್ರಬಲ್ ಎನ್ನಲು ಕೋರ್ಟಿನಲ್ಲೇ ಇದ್ದ ಐ ಓ ರವಿಕುಮಾರ್ ಲಜ್ಜೆಯಿಂದ ತಮ್ಮ ಹಣೆ ಬಡಿದುಕೊಂಡರು.

ಪ್ರಬಲ್ ವಿವರಿಸುತ್ತಾ ಹೋದ,

"ಅಂದರೆ ಸುಲ್ತಾನಾ ಬೇಗಂ ಎಂಬ ಒಬ್ಬ ಅಪರಾಧಿ ಜೈಲಿಂದ ಬಂದು ತನ್ನ ಕಳ್ಳತನದ ಜೀವನವನ್ನು ಮುಂದುವರೆಸಿ ಮೊದಲು ಶ್ರುತಿ ವರ್ಮಾಳನ್ನು ಗಾಯಗೊಳಿಸಿ ರಸ್ತೆಯಲ್ಲೇ ಬಿಟ್ಟು, ಆನಂತರ ಕೀರ್ತಿ ಶರ್ಮಾಗೂ ಕಾರಲ್ಲಿ ಬೆದರಿಸಿ, ಕೊನೆಗೆ ತಾನೂ ಸತ್ತು ಹೋಗಿದ್ದಾಳೆ. ಬದುಕಿ ಉಳಿದ ಕೀರ್ತಿ ಶರ್ಮಾ ಮಾತ್ರ ಇದ್ಯಾವುದರ ಅರಿವಿಲ್ಲದೇ ತಾನೇ ಶ್ರುತಿ ವರ್ಮಾ ಎಂದು ಜೀವನ ನಡೆಸಲು ಶುರು ಮಾಡಿದ್ದಾಳೆ...ಆಗ ಶ್ರುತಿಯ ಹಳೇ ಜೀವನದ ಕರ್ಮಗಳೆಲ್ಲಾ ಇವಳ ತಲೆಗೆ ತಾವಾಗಿಯೇ ಕಟ್ಟಿಕೊಂಡವು, ಯುವರ್ ಆನರ್!"

"ಹಾಗಾಗಿ ಸತ್ತ ಶ್ರುತಿ ವರ್ಮಾ ಗರ್ಭಿಣಿಯಾಗಿದ್ದಳು ಎಂಬ ಕಳಂಕವನ್ನು ಬೇರೆ ಸುಲ್ತಾನಾ ಹೆಣ ಕಂಡು ಪೋಲೀಸ್ ಇಲ್ಲಿ ಆಕೆಗೆ ಕೊಟ್ಟಿದ್ದಾರೆ, ಯುವರ್ ಆನರ್..ಅದೂ ಸಹಾ ಈಗ ಸುಳ್ಳು ಎಂದಾಗಿದೆ... ಬದುಕಿರುವ ಶ್ರುತಿ ವರ್ಮಾರನ್ನು ಟ್ರೀಟ್ ಮಾಡುತ್ತಿದ್ದ ಡಾಕ್ಟರ್ ಅಬ್ದುಲ್ಲಾ ಸಹಾ ಅದನ್ನು ದೃಢಪಡಿಸಿದ್ದಾರೆ... ಇದೆಲ್ಲದರ ನಡುವೆ ನಾಪತ್ತೆಯಾಗಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದ ಶ್ರುತಿಯ ಜೀವನದ ವಿವಾದಗಳೆಲ್ಲಾ ಆ ಹೆಸರು ಹೊತ್ತ ನನ್ನ ಕಕ್ಷಿದಾರಳಾದ ಕೀರ್ತಿ ಶರ್ಮಾ ತಲೆಗೆ ಸುತ್ತಿಕೊಂಡಿತು ಯುವರ್ ಆನರ್, ಅಂದರೆ ಆ ಕರುಣ್ ರಾವ್ ಜತೆ ಪ್ರೇಮ, ಮತ್ತು ಅವರ ಅಪ್ಪ ಕಿರಣ್‌ಶಂಕರ್ ರಾವ್ ಕಳಿಸಿದ ಕೊರಮ ಪತ್ತೇದಾರ ವೀರೇಂದ್ರ ಕಟ್ಟಿಮನಿ, ಇವೆಲ್ಲಾ..." ಎಂದು ವಿವರಿಸಿದ ಪ್ರಬಲ್.

ಹರಿಹರನ್ ತಡೆಯದೇ ಈಗ ಮಧ್ಯೆ ಮಾತಾಡಿಯೇ ಬಿಟ್ಟರು, "ಇರಲಿ...ನಿಮ್ಮ ಈ ಶ್ರುತಿ ವರ್ಮಾ ಬದುಕುಳಿದ ಕತೆ, ಈ ಸುಲ್ತಾನಾ ಬೇಗಮ್ ಕಾರು ಕಳ್ಳತನ ಮಾಡುತ್ತಾ ಸತ್ತ ಕತೆ... ಇದೆಲ್ಲಾ ಕೇಳಲು ರೋಮಾಂಚಕಾರಿಯಾಗಿದೆ, ಪ್ರಬಲ್ ಸಾಹೇಬರೇ. ಆದರೆ ಈ ಕೀರ್ತಿ ಶರ್ಮಾ ವೀರೇಂದ್ರ ಕಟ್ಟೀಮನಿಯನ್ನು ಕೊಂದರು ಎಂದು ತಾನೇ ನಾವು ಕೇಸ್ ಹಾಕಿರುವುದು? ಅದೆಲ್ಲಿ ಬದಲಾಗುತ್ತದೆ ಹೇಳಿ?..."

"ನೀವು ನಿನ್ನೆ ಎಂ ಪಿ ಕಿರಣ್‌ಶಂಕರ್ ರಾವ್ ಅವರ ವಿಚಾರಣೆ ಮಾಡುವ ಸಮಯದಲ್ಲಿ ಕೋರ್ಟ್ ಅಡ್ಜರ್ನ್ ಆಯಿತು, ಅದನ್ನು ಇವತ್ತು ಆರಂಭಿಸಿ ನಾನು ನನ್ನ ಪಾಯಿಂಟ್ಸ್ ಹೇಳುತ್ತೇನೆ ಪಾಟೀಸವಾಲಲ್ಲಿ" ಎಂದು ಕಣಕ್ಕೆ ಇಳಿದೇ ಬಿಟ್ಟ ಅಂಜಿಕೆ ಇಲ್ಲದ ಪ್ರತಿವಾದಿ ವಕೀಲ ಪ್ರಬಲ್.

"ಆಲ್ರೈಟ್!" ಒಪ್ಪಿದರು ಪ್ರಾಸಿಕ್ಯೂಟರ್.

"ಶ್ರೀ ಕಿರಣ್‌ಶಂಕರ್ ರಾವ್ ದಯವಿಟ್ಟು ಸಾಕ್ಷಿಕಟ್ಟೆಗೆ ಬನ್ನಿ" ಎಂದು ಕರೆದರು ಬೇಲಿಫ್.

ಕಿರಣ್‍ಶಂಕರ್ ರಾವ್ ಭಾವರಹಿತ ಮುಖಹೊತ್ತು ನಡೆದುಬಂದರು.

"ಬಲಗೈ ಎತ್ತಿ ಪ್ರಮಾಣ ಮಾಡಿ, ಸತ್ಯವನ್ನೇ ಹೇಳುತ್ತೇನೆಂದು..." ಕೋರ್ಟ್ ಅಧಿಕಾರಿ ಹೇಳಿದರು.

"ಯವರ್ ಆನರ್!" ಹರಿಹರನ್ ಮಧ್ಯಪ್ರವೇಶ ಮಾಡಿದರು. "ಇವರಿಗೆ ಬಲತೋಳಿನಲ್ಲಿ ದೊಡ್ಡ ಕುರು ಎದ್ದು ಆ ಕೈ ಎತ್ತಲಾಗುವುದಿಲ್ಲ... ಎಡಗೈ ಎತ್ತಿ ಪ್ರಮಾಣ ಮಾಡುತ್ತಾರೆ. ಆಗಬಹುದಾ?"

ಜಡ್ಜ್ ಸಾಹೇಬರು ಆಗಬಹುದು ಎಂದು ಒಪ್ಪಿಗೆ ಕೊಟ್ಟರು. ಪ್ರಬಲ್ ಸುಮ್ಮನೆ ಗಮನಿಸುತ್ತಿದ್ದ. ಕಿರಣ್‌ಶಂಕರ್ ರಾವ್ ಕಟ್ಟೆಯಲ್ಲಿ ಕುಳಿತರು.

"ಸರ್, ನಿಮ್ಮನು ಕರೆಸುವ ಉದ್ದೇಶವಿರಲಿಲ್ಲ.. ಆದರೂ ಡಿಫೆನ್ಸ್ ವಕೀಲ ಪ್ರಬಲ್ ಕೋರಿಕೆಯಂತೆ ಪ್ರಶ್ನೆ ಕೇಳುತ್ತೇನೆ.. ಕೇಸಿಗೆ ಸಂಬಂಧಿಸಿದ್ದರೆ ಮಾತ್ರ ಉತ್ತರಿಸಿ"

"ಸರಿ ಸರ್" ಎಂದರಾತ ಪ್ರಬಲನತ್ತಲೇ ನೋಡುತ್ತಾ.

"ನೀವು ಚುನಾವಣೆ ಪ್ರಚಾರದಲ್ಲಿದ್ದವರು ಅದನ್ನು ನಿಲ್ಲಿಸಿ ಇಲ್ಲಿಗೇಕೆ ಬಂದಿರಿ...?" ಹರಿಹರನ್ ಪ್ರಶ್ನೆ.

"ಎರಡು ಕೆಲಸವಿತ್ತು ಬೆಂಗಳೂರಿನಲ್ಲಿ...ಒಂದು- ನನ್ನ ಬಲಗೈ ನೋವಿದ್ದು ಅದಕ್ಕೆ ಚಿಕಿತ್ಸೆ ಮತ್ತು ವಿರಾಮ ಪಡೆಯೋಣವೆಂದು..." ಕಿರಣ್‌ಶಂಕರ್ ಅಫಿಶಿಯಲ್ ಟೋನಿನಲ್ಲಿ ಉತ್ತರಿಸಿದರು,

"ಇನ್ನೊಂದು?."

"ಎರಡನೆಯದು ಪರ್ಸನಲ್ ಕಾರಣ. ನನ್ನ ಮಗ ಕೆಲವು ಪತ್ರಗಳನ್ನು ಈ ಶ್ರುತಿ ವರ್ಮಾ ಎನ್ನುವ ಯುವತಿಗೆ ಕೊಟ್ಟಿದ್ದಾನೆಂದು ತಿಳಿದು ಅದು ನನಗೆ ಸಂಧಿಗ್ಧಕ್ಕೆ ಸಿಕ್ಕಿಸುವುದರಿಂದ ಅವನ್ನು ಇವಳಿಂದ ವಾಪಸ್ ಪಡೆಯೋಣ ಎಂದು ಬಂದೆ. ಆಗ ನನಗೆ ಈಕೆಯ ಹೆಸರು ಕೀರ್ತಿ ಶರ್ಮಾ ಎಂದು ಗೊತ್ತಿರಲಿಲ್ಲ"

"ಈ ವಿಷಯ ನಿಮಗೆ ಯಾರು ತಿಳಿಸಿದರು, ಯಾವಾಗ?"

"ನನಗೆ ವೀರೇಂದ್ರ ಕಟ್ಟೀಮನಿ ಎಂಬಾತ ಇವಳ ಕಾರ್ ಅಪಘಾತದ ಬಗ್ಗೆ ತನಿಖೆ ಮಾಡುವಾಗ ತಿಳಿದುಬಂತು ಎಂದು ಕಾಲ್ ಮಾಡಿದ ಕೆಲವು ದಿನದ ಹಿಂದೆ.."

"ಆಗ ನೀವೇನು ಮಾಡಿದಿರಿ?"

"ನಾನು ಅವನಿಗೆ ಫೀಸ್ ಕೊಟ್ಟು ಆ ಪತ್ರಗಳನ್ನು ತಂದುಕೊಡಲು ಹೇಳಿದೆ. ಆಮೇಲೆ ಆಕೆ ಈ ಊರಲ್ಲಿ ಸಿಕ್ಕಿದಳೆಂದು ಖಚಿತವಾಗಿ ಅವನೇ ಹೇಳಿದಾಗ ಇದೇ ಸಂಧರ್ಭದಲ್ಲಿ ಆ ಪತ್ರಗಳನ್ನು ಪಡೆಯೋಣ ಎಂದು ಬೆಂಗಳೂರಿಗೆ ಬಂದೆ, ವಿಂಡ್ಸರ್ ಮ್ಯಾನರ್ ಹೋಟೆಲಿನಲ್ಲಿ ಇಳಿದುಕೊಂಡೆ"

"ಆಮೇಲೆ?"

"ಈ ಪ್ರಬಲ್ ಮಾನ್ವೀಕರ್ ಎಂಬ ವಕೀಲರು ಒತ್ತಾಯ ಮಾಡಿ ನನ್ನನ್ನು ಹೋಟೆಲ್ ರೂಮಲ್ಲಿ ನೋಡಲು ಬಂದರು. ತಮ್ಮ ಕಕ್ಷಿದಾರ ಶ್ರುತಿ ವರ್ಮಾ ಅಂದರೆ ಈಗಿನ ಕೀರ್ತಿ ಶರ್ಮಾ ಬಗ್ಗೆ ಬಾಯಿ ಬಿಡದೇ ನಾನು ಬಂದ ಕಾರಣ ಕೇಳಿ, ವೀರೇಂದ್ರ ಸತ್ತುಹೋದ ಬಗ್ಗೆ ಅವರೇ ತಿಳಿಸಿದರು, ಆತ ಬ್ಲ್ಯಾಕ್ ಮೈಲ್ ಮಾಡುತ್ತಿದ್ದಾನಾ ನಿಮ್ಮನ್ನು ಎಂದರು, ಕರುಣ್ ಬರೆದ ಪ್ರೇಮಪತ್ರಗಳ ಬಗ್ಗೆ ಕೇಳಿದರು, ಅವನನ್ನು ಹೇಗೆ ಕಾಂಟ್ಯಾಕ್ಟ್ ಮಾಡಲಿ ಎಂದೆಲ್ಲ ತುಂಬಾ ಪ್ರಶ್ನೆಗಳನ್ನು ಕೇಳಿ ಹೋದರು..."

"ಅಂದರೆ ಈ ಪ್ರಬಲ್ ತಮ್ಮ ಕಕ್ಷಿದಾರಳಿಗೆ ನಿಮ್ಮಿಂದ ಆಗಬಹುದಾದ ತೊಂದರೆಯನ್ನು ತಪ್ಪಿಸಲು ಕಷ್ಟಪಟ್ಟರು ಅನ್ನಿ!" ಹರಿಹರನ್ ಇದೇ ಉತ್ತಮ ಚಾನ್ಸ್ ಎಂದು ಪ್ರಬಲ್ ಮೇಲೆ ಸ್ವಲ್ಪ ಆರೋಪ ಬರುವಂತೆ ನುಡಿದರು.

"ಹೌದು, ಅವರು ನನ್ನ ಕಡೆಯಿಂದ ಈ ಕೇಸ್ ತೆಗೆದುಕೊಳ್ಳಲು ಕೂಡಾ ನಿರಾಕರಿಸಿದರು" ಅದೇ ಪ್ರಬಲನ ದೋಷ ಎನ್ನುವಂತೆ ಕಿರಣ್‌ಶಂಕರ್ ರಾವ್ ತಮ್ಮ ಉತ್ತರ ಮುಗಿಸಿದರು.

"ಈಗ ನೀವು ಪಾಟೀ ಸವಾಲು ಮಾಡಿ" ಎಂದು ಹರಿಹರನ್ ಮತ್ತೆ ವಿಜಯನಗೆ ಬೀರಿ ಕುಳಿತರು.

ಪ್ರಬಲ್ ಎದ್ದು ತನಗೇನೂ ಗೊತ್ತಿಲ್ಲದವನಂತೆ ಮೆಲ್ಲಗೆ ನಡೆದು ಬಂದನು ಬೆಕ್ಕಿನಂತೆ.

"ಎಂಪಿ ಸಾಹೇಬರೇ, ನೀವು ಈಗ ಎಡಗೈ ಎತ್ತಿ ಪ್ರಮಾಣ ಮಾಡಿದ್ದು ಏಕೆ?’

ಕಿರಣ್‍ಶಂಕರ್ ಹುಬ್ಬೇರಿಸಿದರು," ಹೇಳಿದರಲ್ಲ, ನನಗೆ ಬಲಗಡೆ ತೋಳಿನಲ್ಲಿ ಕುರುಗಳು ಎದ್ದು ಬಹಳ ನೋವಿದೆ ಅದಕ್ಕೇ!"

ತನ್ನ ಕಿವಿ ಎಳೆದುಕೊಂಡನು ಪ್ರಬಲ್ "ಹೌದೆ, ಪಾಪ, ಯಾವತ್ತಿನಿಂದಲೋ?"

"ಸುಮಾರು ಒಂದು ತಿಂಗಳಿಂದ ಹಾಗೇ ಇದೆ. ನಾನು ತಡೆದುಕೊಂಡಿದ್ದೆ" ಕಿರಣ್‍‌ಶಂಕರ್ ವಾದಿಸಿದರು.

ಇದ್ದಕ್ಕಿದ್ದಂತೇ ಪ್ರಬಲ್ ವರ್ತನೆ ಸೌಮ್ಯದಿಂದ ಒರಟಾಯಿತು, "ಹಾಗಾದರೆ ಮೊನ್ನೆ ಹೋಟೆಲ್ ವಿಂಡ್ಸರ್ ಮ್ಯಾನರ್ ಮುಂದೆ ತೆಗೆದ ಆ ಚಿತ್ರದಲ್ಲಿ ಹೇಗೆ ಬಲಗೈ ಎತ್ತಿ ಅಲ್ಲಿ ನಿಂತ ನಿಮ್ಮ ಬೆಂಬಲಿಗರಿಗೆಲ್ಲಾ ವೇವ್ ಮಾಡುತ್ತಿದ್ದೀರಿ?.. ನೋಡಿ ಈ ಚಿತ್ರದಲ್ಲಿ ಬಲಗೈ...ಆಗ ಹೇಗೆ ಸಾಧ್ಯವಾಯಿತು?" ಎಂದು ತನ್ನ ಕೈಯಲ್ಲಿದ್ದ ದಿನಪತ್ರಿಕೆಯ ವರದಿ ಚಿತ್ರವನ್ನು ಅವರ ಮುಖದ ಮುಂದೆ ಅಲ್ಲಾಡಿಸಿದನು. ಕೋರ್ಟಲ್ಲಿ ಸ್ವಲ್ಪ ಗದ್ದಲವೆದ್ದಿತು ಪ್ರಬಲ್ ಹೊರಹಾಕಿದ ಸುದ್ದಿಯಿಂದ.

ಕಿರಣ್‌ಶಂಕರ್‌ಗೆ ಭೂಮಿಯೇ ಬಾಯಿ ಬಿಡಬಾರದೇ ಎನಿಸಿತು. ತಬ್ಬಿಬ್ಬಾಗಿ ಏನೂ ಹೇಳಲು ತೋಚಲಿಲ್ಲ.

ಪ್ರಬಲ್ ಮುಂದುವರೆಸಿದ ಸ್ವಲ್ಪ ಏರಿದ ದನಿಯಲ್ಲಿ "ಆದರೆ ನಿಮಗೆ ಈಗ ಬಲಗೈ ಎತ್ತಲು ಆಗುವುದಿಲ್ಲ ಎನ್ನುವುದು ನಿಜ.." ಎಂದು ಮಾರ್ಮಿಕವಾಗಿ ನಿಲ್ಲಿಸಿದ. ಮತ್ತೆ ಜನರು ತಬ್ಬಿಬ್ಬಾದರು.

"ಅದಕ್ಕೆ ಕಾರಣ ಕುರು ಎದ್ದಿರುವುದಲ್ಲ, ಸ್ವಾಮಿ!...ನಿಮಗೆ ಆ ರಾತ್ರಿ ನನ್ನ ಕಕ್ಷಿದಾರ ಕೀರ್ತಿ ಶರ್ಮಾ ಐಸ್ ಪಿಕ್ಕಿನಿಂದ ಚುಚ್ಚಿದಳು ! ಅಲ್ಲಿ ನಿಮಗೆ ಗಾಯವಾಗಿದೆ ಎಂಬುದನ್ನು ಮುಚ್ಚಿಟ್ಟು ಈ ಸುಳ್ಳು ಹೇಳಿದಿರಿ, ಸಿಕ್ಕಿ ಹಾಕಿಕೊಂಡಿರಿ!"

ಈಗ ಕೋರ್ಟಿನಲ್ಲಿ ಅಕ್ಷರಶಃ ಕೋಲಾಹಲವಾಯಿತು...ಸಾರ್ವಜನಿಕರು ಮತ್ತು ಪತ್ರಕರ್ತರು ಉದ್ವಿಗ್ನರಾಗಿ ಪರಸ್ಪರ ಮಾತಾಡಿಕೊಳ್ಳಲು ಶುರು ಮಾಡಿದರು.

"ಆರ್ಡರ್, ಆರ್ಡರ್ ...ಶಾಂತರಾಗಿ. ಇಲ್ಲದಿದ್ದರೆ ಕೋರ್ಟ್ ಕೆಲಸ ನಿಲ್ಲಿಸಿಬಿಡುವೆ!" ಎಂದು ಮರದ ಗೇವೆಲ್ ಬಡಿದು ಕುಪಿತ ದನಿಯಲ್ಲಿ ಅಪ್ಪಣೆ ಕೊಟ್ಟರು ಜಡ್ಜ್ ಡಿಸೋಜಾ.

"ಇದು ಸುಳ್ಳು!.. ಮಿಸ್ಟರ್ ಪ್ರಬಲ್ ಏನೋ ಹೊಸ ನಾಟಕ ಶುರು ಮಾಡಿದ್ದಾರೆ. ವೃಥಾ ಎಲ್ಲರನ್ನೂ ಕನ್‌ಫ್ಯೂಸ್ ಮಾಡುತ್ತಿದ್ದಾರೆ!" ಹರಿಹರನ್ ಎದ್ದು ಆರ್ಭಟಿಸಿದರು.

"ನೀವು ಸ್ವಲ್ಪ ಸುಮ್ಮನಿರಿ ಮಿ|| ಹರಿಹರನ್" ಜಡ್ಜ್ ಅವರ ಮೇಲೆಯೂ ಅಸಮಾಧಾನಗೊಂಡರು. "ಮಿಸ್ಟರ್ ಪ್ರಬಲ್, ಏನಿದರ ಅರ್ಥ?...ಇಲ್ಲಸಲ್ಲದ ಆರೋಪವನ್ನು ಒಬ್ಬ ಗೌರವಾನ್ವಿತ ಎಂ ಪಿ ಯವರ ಮೇಲೆ ಮಾಡುತ್ತಿದ್ದೀರಿ.. ಇದಕ್ಕೇನಿದೆ ಸಾಕ್ಷಿ?"

 ಪ್ರಬಲ್ ತಾಳ್ಮೆ ತಂದುಕೊಂಡು ವಿವರಿಸಲು ಸಿದ್ಧನಾದ:

"ಸ್ವಾಮೀ, ಹೇಳಲು ಬಿಟ್ಟರೆ ಪೂರ್ತಿ ಹೇಳುವೆ...ಆಮೇಲೆ ನಿಮ್ಮ ರೂಲಿಂಗ್ ಕೊಡಿ" ಎಂದು ಅವರಿಗೆ ಸೌಮ್ಯವಾಗಿ ಹೇಳಿ ಮತ್ತೆ ಕಿರಣ್‌ಶಂಕರರತ್ತ ತಿರುಗಿ ಸ್ವರವನ್ನು ದೃಢವಾಗಿ ಏರಿಸಿದನು, "ಇವರಿಗೆ ಚಿಕಿತ್ಸೆ ಪಡೆಯುವಂತಾ ಯಾವ ಬಲಗೈ ನೋವೂ ಇರಲಿಲ್ಲ ಯುವರ್ ಆನರ್! ಇಲ್ಲಿಗೆ ಬಂದಿದ್ದೇ ಮಗನು ಬರೆದ ಪತ್ರಗಳನ್ನು ಪಡೆದು ತಮ್ಮ ಚುನಾವಣೆಗೆ ಬಂದ ಈ ವಿವಾದದಿಂದ ತಪ್ಪಿಸಿಕೊಳ್ಳಲು...ಇಲ್ಲಿ ವೀರೇಂದ್ರನನ್ನು ಭೇಟಿ ಮಾಡಿದ ಮೇಲೆ ಏನೇನೋ ಅಗಿಬಿಟ್ಟಿತು..ವೀರೇಂದ್ರನ ಕೊಲೆಯಾದ ಮೇಲೆ ನಾನು ಅವರನ್ನು ನೋಡಲು ಹೋಟೆಲ್ಲಿಗೆ ಹೋದೆ...ಆಗಲೇ ಅವರು ಚುಚ್ಚು ಗಾಯದ ನೋವಿಂದ ಬಳಲುತ್ತಿದ್ದರು, ಅವರು ಹೇಳಲಿಲ್ಲ, ತೋರಿಸಲಿಲ್ಲ ಆದರೆ ನಾನು ಗಮನಿಸಿಬಿಟ್ಟಿದ್ದೆ...ಅದನ್ನೆಲ್ಲಾ ಅವರೇ ಕನ್ಫೆಸ್ (ತಪ್ಪೊಪ್ಪಿಗೆ) ಮಾಡಿಕೊಂಡರೆ ಸಮ, ಯುವರ್ ಆನರ್. ಇಲ್ಲವೇ ನಾನೇ ಹೇಳಿಬಿಡುವೆ...ಮೊದಲು ನಮ್ಮ ಕೋರ್ಟಿನ ಡಾಕ್ಟರ್ ಬಂದು ಚೆಕ್ ಮಾಡಲಿ, ಅವರ ಬಲ ತೋಳಿನ ಮೇಲೆ ಐಸ್ ಪಿಕ್ ಚುಚ್ಚಿದ ಗಾಯಕ್ಕೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ, ಹೌದೋ ಅಲ್ಲವೋ ಎಲ್ಲರಿಗೂ ಹೇಳಿಬಿಡಲಿ...ಸರಿಯೇ, ಕಿರಣ್‌ಶಂಕರ್ ರಾಯರೆ?" ಎಂದು ಅವರಿಗೆ ಸವಾಲೆಸೆದನು.

ಅದುವರೆಗೂ ಅಲ್ಲಿನ ಚರ್ಚೆಯನ್ನು ಆಲಿಸುತ್ತಿದ್ದ ಕಿರಣ್‌ಶಂಕರ್ ರಾವ್, ತಲೆ ತಗ್ಗಿಸಿ ಕ್ಷೀಣ ಸ್ವರದಲ್ಲಿ ನುಡಿದರು. "ವೈದ್ಯರನ್ನು ಕರೆಸಿ ಚೆಕ್ ಮಾಡಿಸುವುದೇನೂ ಬೇಡ,ಮಿ|| ಪ್ರಬಲ್. ನೀವು ಹೇಳಿದ್ದೆಲ್ಲಾ ನಿಜವೇ ಆಗಿದೆ...ನಾನು ಚುನಾವಣೆ ಸಮಯದಲ್ಲಿ ಏನಾಗಬಾರದೆಂದು ಇಷ್ಟೆಲ್ಲಾ ತಂತ್ರ ಮಾಡಿದೆನೋ, ಕೊನೆಗೆ ಎಲ್ಲಾ ಫೇಲ್ ಆಗಿ ಕೋರ್ಟಿನಲ್ಲಿ ನನ್ನ ಮಾನ ಹೋಗುತ್ತಿದೆ. ಸರಿ...ನಡೆದುದ್ದೆಲ್ಲಾ ಹೇಳಿಬಿಡುತ್ತೇನೆ, ಯುವರ್ ಆನರ್!. ಆ ರಾತ್ರಿ ಶ್ರುತಿ ವರ್ಮಾ ಎನ್ನುತ್ತಿದ್ದ ಈ ಯುವತಿಯ ಪಿ.ಜಿ. ಕೋಣೆಗೆ ಹೋಗಿದ್ದು ನಾನೇ"

"ಇದೆಲ್ಲಾ ಕನ್ಫೆಶನ್ ಎಂದು ದಾಖಲು ಮಾಡಿಕೊಳ್ಳಿ" ಎಂದು ಅಧಿಕಾರಿಗೆ ಅಪ್ಪಣೆಯಿತ್ತು ಸೀಟಿನಲ್ಲಿ ಜರುಗಿ ಮುಂದೆ ಕುಳಿತರು ಜಡ್ಜ್ ಡಿಸೋಜಾ, "ಶುರು ಮಾಡಿ"

ಈ ಮಾತು ಕೇಳಿ ಮತ್ತೆ ತಮ್ಮ ಕೇಸು ಬುಡಮೇಲಾಗುತ್ತಿರುವುದು ಗಮನಿಸಿ ಹರಿಹರನ್ ಹತಾಶರಾಗಿ ಆಕಾಶ ನೋಡಹತ್ತಿದರು.

"ಅಂದು ರಾತ್ರಿ ವೀರೇಂದ್ರ ಕೊಟ್ಟಿದ್ದ ಆಗ ಶ್ರುತಿ ವರ್ಮಾ ಹೆಸರಿನಲ್ಲಿದ್ದ ಈ ಯುವತಿಯ ಅಡ್ರೆಸ್ಸಿಗೆ ನಾನೇ ಹೊರಟೆ..." ತಮ್ಮ ತಪ್ಪೊಪ್ಪಿಗೆ ಆರಂಭಿಸಿದರು ಕಿರಣ್‌ಶಂಕರ್ ರಾವ್.

"ಯಾಕೆ?" ಪ್ರಬಲ್ ಬಿಡದೇ ಕೇಳಿದ.

"ವೀರೇಂದ್ರ ಕಟ್ಟೀಮನಿ ಬಹಳ ಅಪಾಯಕಾರಿ ಮನುಷ್ಯ ಎಂದು ನನಗನಿಸಿತು, ಅವನ ಜತೆ ಮಾತಾಡಿದಾಗ. ನಾನು ಎಂ ಪಿ ಎಂದರಿತವನೇ ಬ್ಲ್ಯಾಕ್ ಮೈಲ್ ಮಾಡಲು ಬಹಳ ಹಣ ಕೇಳಿದ, ಪತ್ರಗಳನ್ನು ಆ ಯುವತಿಗೆ ಬೆದರಿಸಿ ತರುತ್ತೇನೆ ಎಂದ. ಆದರೆ ಅವನ ಡಿಮ್ಯಾಂಡುಗಳು ಮುಗಿಯುವುದೇ ಇಲ್ಲ. ಅವನು ಆ ಪತ್ರಗಳ ಕಾಪಿ ಇಟ್ಟುಕೊಂಡು ನಾನು ಗೆದ್ದಬಂದ ಮೇಲೆ ಬೆದರಿಸಿ ಪದೇ ಪದೇ ದುಡ್ದು ಪೀಕಿಸುತ್ತಲೇ ಇರಬಲ್ಲ ಎನಿಸಿತು. ನಾನು ಇಂತಾ ದುರಾಸೆಯ ಜನರನ್ನು ಬಲ್ಲೆ. ಹಾಗಾಗಿ ಆ ಪತ್ರಗಳನ್ನು ನಾನೇ ತೆಗೆದುಕೊಂಡು ಬಂದು ಅವನಿಗೆ ಸ್ವಲ್ಪ ದುಡ್ಡು ಕೊಟ್ಟು ಕಳಿಸಿಬಿಡೋಣ, ತೊಂದರೆಯಿಲ್ಲ ಎಂದುಕೊಂಡೆ. ಆ ರಾತ್ರಿ ಧೈರ್ಯ ಮಾಡಿ ಹೋಟೆಲಿನ ಹಿಂಬಾಗಿಲಿನಿಂದ ಹೊರಬಿದ್ದು 7 ಗಂಟೆಗೆ ಸ್ವಲ್ಪ ಮುಂಚೆಯೇ ಶ್ರುತಿ ಯ ಪಿ.ಜಿ. ರೂಮ್ ಬಳಿ ಕಾರ್ ನಿಲ್ಲಿಸಿ ಒಳಹೋದೆ. ಕಾಲಿಂಗ್ ಬೆಲ್ ಮಾಡಿದೆ. ಅದು ಕೆಲಸ ಮಾಡಲಿಲ್ಲ. ಹಾಗೆ ಬಾಗಿಲು ತೆಗೆದು ಹಾಲಿಗೆ ಹೋದೆ. ಅಲ್ಲಿ ಯಾರೂ ಇಲ್ಲ ಅನಿಸಿತು..."

"ಜಸ್ಟ್ ಎ ಮಿನಿಟ್..." ಪ್ರಬಲ್ ಕೈಯೆತ್ತಿದ. "ಕೀರ್ತಿ ಶರ್ಮಾ ಆಗ "ಯಾರು, ಲಲಿತಾ? ಎಂದೆಲ್ಲಾ ಕರೆದು ಹೊರಗೆ ಬಂದಳಲ್ಲಾ...?"

"ಹೌದು" ಕಿರಣ್‌ಶಂಕರ್ ತಲೆಯಾಡಿಸಿದರು. "ನನಗೆ ಅವಳು ಯಾರು ಎಂದು ಗೊತ್ತಿರಲಿಲ್ಲ. ನಿಜ ಹೇಳಬೇಕೆಂದರೆ ನಾನು ಶ್ರುತಿ ವರ್ಮಾ ಎಂಬವಳ ಚಿತ್ರ ಸಹಾ ನೋಡಿರಲಿಲ್ಲ. ನನ್ನ ಮಗನಿಗೂ ನನಗೂ ಆ ವಿಷಯದಲ್ಲಿ ಜಗಳವಾಗಿದ್ದರಿಂದ ಅವನು ನನಗೆ ಅವಳ ಚಿತ್ರ ಸಹಾ ಕೊಟ್ಟಿರಲಿಲ್ಲ. ಅಲ್ಲಿ ಅವಳಿದ್ದಾಳೆ ಎಂದು ವೀರೇಂದ್ರ ಹೇಳಿದ್ದನಲ್ಲ , ಸುಮ್ಮನೆ ಹೋಗಿಬಿಟ್ಟಿದ್ದೆ, ಅವನಿಂದ ತಪ್ಪಿಸಿಕೊಳ್ಳುವುದಕ್ಕೆ!"

"ಬಹಳ ರಿಸ್ಕ್ ತೆಗೆದುಕೊಂಡಿರಿ... ಮುಂದೆ ಹೇಳಿ" ಪ್ರಬಲ್ ಸೂಚಿಸಿದ.

"ಆ ಯುವತಿಗೆ ಸ್ವಲ್ಪ ಬೆದರಿಸಿ ‘ನಾನು ದೊಡ್ಡ ಎಂ ಪಿ, ಆ ಪತ್ರಗಳನ್ನು ಕೊಟ್ಟಿಬಿಡಮ್ಮಾ ಎಂದು ಕೇಳೋಣ’ ಎಂದುಕೊಂಡು ಬಂದವನು ಅವಳ ದ್ವನಿ ಕೇಳಿ ಲೈಟ್ಸ್ ಆರಿಸಿದೆ. ಯಾಕೆಂದರೆ ನೋಡಿ, ಮಿ|| ಪ್ರಬಲ್, ನಾನೇನೂ ದೊಡ್ಡ ಸಮರ್ಥ ಕ್ರಿಮಿನಲ್ ಅಲ್ಲ...ಭಯವಾದ ಮುದುಕ ಎಂದುಕೊಳ್ಳಿ. ಇದೆಲ್ಲಾ ಆ ಗಳಿಗೆ ಏಕ್‌ದಮ್ ನಡೆದುಹೋದವು....ಕತ್ತಲಲ್ಲಿ ಅವಳು ನನ್ನ ಬಳಿ ಬಂದು ಡಿಕ್ಕಿ ಹೊಡೆಯುವಂತಾದಾಗ ನೂಕಿದೆ..ಅವಳ ಕೈಯಲ್ಲಿ ಐಸ್ ಪಿಕ್ ಚಾಕು ಇದ್ದಿರಬೇಕು. ಬೀಸಿ ಹೊಡೆದುಬಿಟ್ಟಳು.. ನಾನು ಅದನ್ನು ಬಲ ತೋಳಿಗೆ ಚುಚ್ಚಿಕೊಂಡ ತಕ್ಷಣ ಗಾಬರಿ ಮತ್ತು ನೋವಿನಲ್ಲಿ ಓಡಿಬಂದೆ ಹೊರಗೆ... ಆಗ ಇನ್ನೂ ದೊಡ್ಡ ಕಷ್ಟಕ್ಕೆ ಸಿಕ್ಕಿಹಾಕಿಕೊಂಡು ಬಿಟ್ಟೆ..."

"ಏನದು?" ಈ ಬಾರಿ ಜಡ್ಜ್ ಪ್ರಶ್ನಿಸಿದರು.

"ಅಲ್ಲಿಗೆ ಶ್ರುತಿ ವರ್ಮಾಳನ್ನು ನೋಡಲು ವೀರೇಂದ್ರ ಮತ್ತು ಅವನ ಅಸಿಸ್ಟೆಂಟ್ ರಮಣ್ ಆಗ ತಾನೇ ಬಂದಿಳಿದಿದ್ದವರು ಎದುರಿಗೇ ಸಿಕ್ಕಿಬಿಟ್ಟರು. ವೀರೇಂದ್ರ ನನ್ನನ್ನು ನೋಡಿ ‘ಏನು ಸಾರ್ ನೀವಿಲ್ಲಿ , ಏನು ಮಾಡಿಬಿಟ್ಟಿರಿ?’ ಎಂದನು.. ಕೊನೆಗೂ ಆ ವೀರೆಂದ್ರನ ಹಿಡಿತಕ್ಕೆ ಇನ್ನೂ ಬಲವಾಗಿ ಸಿಲುಕಿಬಿಟ್ಟೆ ಆಗ!.. ಅವನು ಆ ಅವಕಾಶದ ಲಾಭ ಪಡೆದು ‘ತಾಳಿ, ನಾನು ತರಿಸಿಕೊಡುತ್ತೇನೆ, ನಿಮ್ಮ ಪತ್ರಗಳನ್ನು...ಆದರೆ ಈ ಸಲ 25,000/- ಎಕ್ಸ್ಟ್ರಾ ಆಗುತ್ತೆ, ನಾನೇ ಅಲ್ಲಿಗೆ ಹೋದಂತೆ, ಗಾಯಗೊಂದು ಓಡಿಬಂದವನಂತೆ ನಟಿಸುತ್ತೇನೆ. ಆಗ ನಿಮ್ಮ ಹೆಸರೂ ಉಳಿಯತ್ತೆ.. ಗಾಯವಾಗಿದೆ ಕೇಸು ಹಾಕುತ್ತಾನೆ ಎಂದರೆ ಶ್ರುತಿ ವರ್ಮಾ ಕಡೆ ಲಾಯರ್, ಪ್ರಬಲ್ ಸಹಾ ಮಾತಾಡಿದರೆ ತನ್ನ ಜತೆ ರಾಜಿ ಮಾಡಿಕೊಳ್ಳುತ್ತಾರೆ’ ಎಂದ. ಆಗ ಅವನು ಹೇಳಿದ್ದಕ್ಕೆಲ್ಲಾ ಒಪ್ಪದಿರಲು ಸಾಧ್ಯವೇ ಆಗಲಿಲ್ಲ. ಆಗ ಆ ರಮಣ್ ಎಂಬ ಅವನ ಸಹಾಯಕ ನನಗೆ ಪಕ್ಕದ ಅಂಗಡಿಯಿಂದ ಡೆಟಾಲ್ , ಬ್ಯಾಂಡೇಜ್ ತಂದು ಕಟ್ಟಿದ.. ಅದೇ ,ಮಾದರಿ ಸುಳ್ಳು ನಟನೆ ಮಾಡಲು ಸಾಫ಼್ಯವಾಗಲೆಂದು ಗಾಯವಾಗದಿದ್ದರೂ ವೀರೇಂದ್ರನ ತೋಳು ಪಕ್ಕೆಗೂ ರಮಣ್ ಇನ್ನೊಂದು ಸೆಟ್ ಬ್ಯಾಂಡೇಜ್ ಕಟ್ಟಿದ.. ‘ಇನ್ನು ನೀವು ಹೋಟೇಲ್ ರೂಮಿಗೆ ಹೋಗಿ ರೆಸ್ಟ್ ತಗೊಳ್ಳಿ. ಇಲ್ಲಿಗೆ ಬಂದಿದ್ದು ಯಾರಿಗೂ ಹೇಳಬೇಡಿ. ನಾನು ಬಂದು ನಿಮ್ಮ ಹೋಟೆಲಿನಲ್ಲಿ ನಿಮ್ಮ ಮಗ ಬರೆದ ಪತ್ರಗಳನ್ನು ವಾಪಸ್ ಕೊಡುತ್ತೇನೆ... ನೀವು ದುಡ್ಡು ಕೊಡುತ್ತಾ ಹೋಗಿ’ ಎಂದ.. ಆಗಲೇ ₹20,000 ಕೊಟ್ಟಿದ್ದೆ ಅದುವರೆಗೆ... ನನಗೆ ಭಯ ಕೋಪ ಎಲ್ಲ ಒಟ್ಟೊಟ್ಟಿಗೇ ಆಯಿತು. ಇವನು ಒಮ್ಮೆ ದುಡ್ಡು ಕೇಳಿ ನಿಲ್ಲಿಸುವವನಲ್ಲ, ಕೇಳುತ್ತಲೇ ಇರುತ್ತಾನೆ ಬ್ಲ್ಯಾಕ್ ಮೈಲ್ ಖದೀಮ..ಇವನು ಶನಿಯಂತೆ ನನ್ನನ್ನು ಹಿಡಿದುಬಿಡುತ್ತಾನಲ್ಲ ಎಂದುಕೊಂಡೆ!"

"ಆಮೇಲೆ?"

"ಶ್ರೀ ಪ್ರಬಲ್ ತಾವೇ ನನ್ನ ಹೋಟೆಲ್ ರೂಮಿಗೆ ಬಂದು ಐಸ್ ಪಿಕ್ ಚುಚ್ಚಿದರಿಂದ ವೀರೇಂದ್ರ ಸತ್ತು ಹೋದ, ಎಂದಾಗ ನನಗೆ ಗಾಬರಿಯಾಯಿತು. ಅಲ್ಲ, ಚುಚ್ಚಿದ್ದು ನನಗೆ ನಾನು ಬದುಕೇ ಇದ್ದೇನೆ, ಅವನು ಸುಮ್ಮನೆ ಗಾಯಾವಾದವನಂತೆ ಬ್ಯಾಂಡೇಜ್ ತಾನೇ ಕಟ್ಟಿಸಿಕೊಂಡು ನಟಿಸುತ್ತಿದ್ದ , ಅವನು ಹೇಗೆ ಸಾಯಲು ಸಾದ್ಯ.. ಯಾರು ಕೊಂದರಪ್ಪಾ? ಎಂದು ಗೊತ್ತಾಗಲಿಲ್ಲ... ಪ್ರಬಲ್ ಆಗ ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಟ್ಟೆ... ಆದರೆ ಬಗೆಹರಿಯದ ತೊಂದರೆ ಅಂದರೆ ಇನ್ನು ನನ್ನ ಮಗ ಬರೆದಿದ್ದ ಲೆಟರ್ಸ್ ಕತೆಯೇನು ಎಂದುಕೊಂಡು ಚಿಂತಿಸುತ್ತಿದ್ದೇನೆ... ಇದಕ್ಕಿಂತಾ ಹೆಚ್ಚಿಗೆ ನನಗೇನೂ ಗೊತ್ತಿಲ್ಲ, ಸ್ವಾಮಿ...ಈ ತಪ್ಪಿಗೆ ನ್ಯಾಯಾಲಯ ಯಾವ ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ.. ಚುನಾವಣೆಯಿಂದ ಹಿಂದೆ ಸರಿಯಬೇಕಾದರೆ ಅದೂ ಮಾಡುತ್ತೇನೆ" ಎಂದು ಮಾತು ಮುಗಿಸಿದರು ಕಿರಣ್‌ಶಂಕರ್ ರಾವ್.

"ಆಯಿತು, ನೀವು ಇಲ್ಲೇ ಇರಿ, ಹೇಳುತ್ತೇವೆ..." ಎಂದನು ಪ್ರಬಲ್.

ಕೆಲ ಕ್ಷಣ ಕೋರ್ಟ್ ರೂಮಿನಲ್ಲಿ ಎಲ್ಲರೂ ಸ್ತಂಭೀಭೂತರಾದವರಂತೆ ಕುಳಿತಿದ್ದರು. ಜಡ್ಜ್ ಡಿಸೋಜಾ ಹರಿಹರನ್‌ರತ್ತ ತಿರುಗಿ ಗುಡುಗಿದರು,

"ಪ್ರಾಸಿಕ್ಯೂಟರ್!.. ಏನು ಸುಮ್ಮನಾಗಿಬಿಟ್ಟಿರಲ್ಲಾ?... ಹಾಗಾದರೆ ವೀರೇಂದ್ರ ಕಟ್ಟೀಮನಿಯನ್ನು ಕೊಂದಿದ್ದು ಯಾರ್ರೀ?.. ಆಪಾದಿತೆ ನನಗೆ ಐಸ್ ಪಿಕ್ ಚುಚ್ಚಿದಳು ನಾನು ಬದುಕೇ ಇದ್ದೇನೆ ಎಂದು ಈ ಎಂ ಪಿ ಸಾಹೇಬರು ಒಪ್ಪಿಕೊಂಡಿದ್ದಾರೆ...ಅವಳು ಕೊಲ್ಲಲಿಲ್ಲ ಅಂದರೆ ಮತ್ಯಾರು?"

ಹರಿಹರನ್ ಸಣ್ಣನೆ ದನಿಯಲ್ಲಿ ನುಡಿದರು. "ಈಗ ನನಗೆ ಗೊತ್ತಿಲ್ಲ, ಯುವರ್ ಆನರ್. ಹಾಗಾಗಿ ನಾವು ಕೀರ್ತಿ ಶರ್ಮಾ ಮೇಲೆ ಹಾಕಿದ ವೀರೇಂದ್ರ ಕಟ್ಟೀಮನಿಯ ಕೊಲೆ ಆಪಾದನೆಯ ಕೇಸು ವಾಪಸ್ ತೆಗೆದುಕೊಳ್ಳುತ್ತೇವೆ... ವಿತ್‌ಡ್ರಾ ಮಾಡುತ್ತೇವೆ ಅಷ್ಟೆ, ಸ್ವಾಮಿ!"

"ಅವರಿಗೆ ಗೊತ್ತಿಲ್ಲ, ಬಿಡಿ ಯುವರ್ ಆನರ್... ನಾನೇ ಹೇಳಿಬಿಡುತ್ತೇನೆ...ಕೊಲೆ ಹೇಗಾಯಿತೆಂದು..." ಪ್ರಬಲ್ ಅಪರೂಪಕ್ಕೆ ಜಡ್ಜ್ ಬಳಿ ಪೇಚಾಡುತ್ತಿದ್ದ ಹರಿಹರನ್ ರಕ್ಷಣೆಗೆ ಬಂದವನಂತೆ ನುಡಿದ.

( ಮುಂದುವರೆಯುವುದು)


ಭಾಗ 6


"ನನ್ನ ಹೇಳಿಕೆ ರೆಕಾರ್ಡ್ ಮಾಡಿಕೊಳ್ಳಿ" ಎಂದು ಪ್ರಬಲ್ ಸೂಚಿಸಿದ ಕೋರ್ಟ್ ಅಧಿಕಾರಿಗೆ. "ನಾನು ಅವತ್ತು ಕೊಲೆ ನಡೆದ ಸ್ಥಳದಲ್ಲಿದ್ದೆ, ಪೋಲಿಸ್ ಇನ್ಸ್ಪೆಕ್ಟರ್ ರವಿಕುಮಾರ್ ಸಹಾ ಇದ್ದರು.. ಇವರ್ಯಾರಿಗೂ ಗೊತ್ತಾಗದ ಒಂದು ವಿಷಯ ನಾನು ಗಮನಿಸಿದೆ, ಯುವರ್ ಆನರ್... ನನ್ನ ಅನುಮಾನ ಈಗ ತಾನೇ ಪರಿಹಾರವಾಗಿದೆ...ನಾನು ನಟನೆ ಮಾಡುತ್ತಿದ್ದ ವೀರೇಂದ್ರನ ಮನೆಯಲ್ಲಿ ಅವನ ಜತೆ ಮಾತಾಡುತ್ತಿದ್ದೆನಾ!.. ಅಲ್ಲಿ ಅವರ ಫ಼್ಯಾಮಿಲಿ ವ್ಯಾಜ್ಯ ಕಾಣಿಸಿತು, ಯುವರ್ ಆನರ್.. ವೀರೇಂದ್ರ ಮತ್ತು ಪತ್ನಿ ದುರ್ಗಾ ನಡುವೆ ಉತ್ತಮ ಸಂಬಂಧ ಇದ್ದಂತೆ ಕಾಣಲಿಲ್ಲ. ಅನಾವಶ್ಯಕವಾಗಿ ಅವನು ನನ್ನೆದುರಿಗೇ ಆಕೆಯನ್ನು ನಿಂದಿಸಿದ. ಆಕೆ ಒಡೆಯಲಿರುವ ಜ್ವಾಲಾಮುಖಿಯಂತೆ ನನಗೆ ಕಂಡಳು... ನಾನು ಒಂದೇ ಸಮನೇ ಕೆಮ್ಮುತ್ತಿದ್ದ ವೀರೇಂದ್ರನಿಗೆ ನನ್ನ ಕಡೆಯ ವೈದ್ಯರನ್ನು ಕರೆಸಲಾ? ಎಂದೆ. ಅವನು ನಾಟಕ ಮಾಡುತ್ತಿದ್ದಾನೆಂದು ಭಾವಿಸಿದೆ.. ಅವನಿಗೆ ಸಮಯ ಬೇಕಿತ್ತು, ನಾನು ಕೆಳಗಿರುವ ಕೆಫೆಯಲ್ಲಿ ಕಾಯುತ್ತೇನೆ ಎಂದು ಹೊರಟು ನಿಂತೆ...ಎಷ್ಟು ಹೊತ್ತು ಇವನ ನಾಟಕ ನಡೆಯುತ್ತದೆ, ನೋಡುವಾ ಎಂದು... ನಾನು ಹೊರಡುವ ಮುನ್ನ ಅವನು ಕಿರಣ್ ಶಂಕರಿಗೆ ಚುಚ್ಚಿದ್ದ ಐಸ್ ಪಿಕ್ ಚಾಕುವನ್ನು ಒರೆಸಿ ಇಟ್ಟಿದ್ದ, ರಕ್ತ ಕಾಣದಂತೆ. ಬಹುಶಃ ಕರ್ಚೀಫ್ ಬಳಸಿರಬೇಕು.. ಕೀರ್ತಿಯ ಬೆರಳಚ್ಚು ಮಾಸದಂತೆ..ಆ ಐಸ್ ಪಿಕ್ ಹಿಡಿ ನಮ್ಮ ಕಡೆಗೆ ತಿರುಗಿತ್ತು...ನಾನು ಕೆಳಗಿರುವ ಸಮಯದಲ್ಲಿ ಅವನ ಕೊಲೆಯಾಗಿದೆ.. ನಾನು ಮತ್ತು ಪೋಲೀಸ್ ಐ ಓ ರವಿಕುಮಾರ್ ಧಾವಿಸಿ ಬಂದೆವು.. ದುರ್ಗಾ ಅಳುತ್ತಿದ್ದಳು. ಆದರೆ ಐಸ್ ಪಿಕ್ ಚಾಕುವನ್ನು ಗಮನಿಸಿದರೆ ಈಗ ಅದರ ಹ್ಯಾಂಡಲ್ ಗೋಡೆ ಕಡೆಗೆ ಇತ್ತು. ತಕ್ಷಣ ನನಗೆ ದುರ್ಗಾ ಮೇಲೆ ಅನುಮಾನ ಬಂದಿದ್ದು ನಿಜ, ಆದರೆ ಆಗಲೇ ಸಾಕ್ಷಿಯಿಲ್ಲದೇ ಹೇಳಲಾಗಲಿಲ್ಲ...ಯಾಕೆಂದರೆ ಅದನ್ನು ಬಳಸಿದವಳು ಆಕೆ ಟ್ರೈನ್ಡ್ ನರ್ಸ್ ಆಗಿದ್ದಳು, ಗ್ಲೋವ್ಸ್ ಧರಿಸಿಯೇ ಮಾಡಿರುತ್ತಾಳೆ. ಬೆರಳಚ್ಚು ಆಗಲೂ ಕೀರ್ತಿ ಶರ್ಮಾದೇ ಇರುವಂತೆ..."

ಆಗ ಅಲ್ಲಿ ಸಾಕ್ಷಿಗಳ ಮಧ್ಯೆ ಕುಳಿತಿದ್ದ ದುರ್ಗಾ ಎದ್ದು ಹೊರಕ್ಕೆ ಓಡಲಾರಂಭಿಸಿದಳು. ಆದರೆ ಅವಳ ಶ್ರಮ ವ್ಯರ್ಥವಾಯಿತು. ಬಾಗಿಲ ಬಳಿ ಸುರಕ್ಷಾ ಪೋಲೀಸ್ ದಳದವರು ಹಿಡಿದುಬಿಟ್ಟರು.

ಅವಳು ನಿಂತಲ್ಲೇ ಕೂಗಲಾರಂಭಿಸಿದಳು "ಅವನಿಗೆ ಸರಿಯಾಗಿ ಮಾಡಿದೆ...ನನಗೆ ದಿನಾಲೂ ಅವಮಾನ, ಹಿಂಸೆ ಮಾಡುತ್ತಿದ್ದ...ಅವನು ಮಾಡಿದ ನಾಟಕವನ್ನು ನಿಜ ಮಾಡಿಸೋಣ ಎಂದುಕೊಂಡೆ..."

ಜಡ್ಜ್ ಕುಪಿತರಾಗಿ ನುಡಿದರು "ನೋಡೀಮ್ಮಾ, ಅಲ್ಲಿಂದ ಕೂಗಬಾರದು. ನಿಮ್ಮನ್ನು ಕರೆದು ವಿಚಾರಣೆ ಮಾಡುತ್ತೇವೆ, ಅದುವರೆಗೂ ಶಾಂತವಾಗಿರಿ."

"ಹಾಗಾದರೆ?" ಎಂದರು ಹರಿಹರನ್ ಪ್ರಬಲ್ ನತ್ತ ತಿರುಗಿ,

ಪ್ರಬಲ್ ಸಮ್ಮತಿಸಿ ತಲೆಯಾಡಿಸಿದ.

"ಆಕೆಯ ಮೇಲೆ ಕೇಸು ಹಾಕಿ ಸಾರ್, ಧಾರಾಳವಾಗಿ. ಈಗ ಇದು ಒಂದು ದಾಂಪತ್ಯ ವ್ಯಾಜ್ಯ ದ್ವೇಷದ ಕೊಲೆ." ಪ್ರದೀಪ್ ತನಗೆ ನೀಡಿದ್ದ ವರದಿಯನ್ನು ಪರಿಶೀಲಿಸುತ್ತಾ ಹೇಳಿದ ಪ್ರಬಲ್. "ಈ ಶ್ರೀಮತಿ ದುರ್ಗಾ ಟ್ರೈನ್ಡ್ ನರ್ಸ್ ಆಗಿ ತಿಪಟೂರಿನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿ ಮದುವೆಗೆ ಮುನ್ನ ಅವರಿಗೆ ಈ ರಮಣ್ ಪರಿಚಯವಾಗಿದ್ದರು. ಆದರೆ ಹೆಚ್ಚು ಸಂಪಾದನೆಯುಳ್ಳ ವೀರೇಂದ್ರನನ್ನು ಮದುವೆಯಾಗುವುದೇ ಸೂಕ್ತವೆನಿಸಿತು ಈಕೆಗೆ. ಆದರೆ ದಾಂಪತ್ಯ ಜೀವನ ಆ ಕ್ರೂರ ಪತಿಯೊಂದಿಗೆ ಉದ್ದಕ್ಕೂ ಮುಳ್ಳಿನ ಹಾದಿಯಾಗಿದೆ...ರಮಣ್ ಮತ್ತೆ ಅವರ ಜೀವನದಲ್ಲಿ ವಾಪಸ್ ಬಂದಿದ್ದಾನೆ. ಕಿರಣ್‌ಶಂಕರ್ ರಾವ್ ಅದುವರೆಗೆ ವೀರೇಂದ್ರನಿಗೆ ಕೊಟ್ಟಿದ್ದ ಸುಮಾರು 20,000/- ರೂ ಸಾಕೆನಿಸಿದೆ ಅವರಿಗೆ, ತಾವು ಹೊಸ ಜೀವನ ಆರಂಭಿಸಲು. ತಾನೇ ವೀರೇಂದ್ರನಿಗೆ ನಕಲಿ ಬ್ಯಾಂಡೇಜ್ ಕಟ್ಟಿ ದುರ್ಗಾಗೆ ರಹಸ್ಯವಾಗಿ ಅವನನ್ನು ಮುಗಿಸಿಬಿಡು ಎಂದು ರಮಣ್ ಐಡಿಯಾ ಕೊಟ್ಟಿದ್ದಾನೆ..."

"ಅಂದರೆ ನಕಲಿ ಬ್ಯಾಂಡೇಜ್ ಧರಿಸಿದ ವೀರೇಂದ್ರನಿಗೆ ಅಸಲಿ ಗಾಯ ಮಾಡಿದಳೆ ದುರ್ಗಾ?" ಹರಿಹರನ್ ಅಚ್ಚರಿಯ ಪ್ರಶ್ನೆ.

"ಹೌದು, ಮೊದಲು ಆ ರಮಣ್ ಈ ಊರು ಬಿಡುವ ಮುನ್ನ ಅರೆಸ್ಟ್ ವಾರೆಂಟ್ ಹಾಕಿ ಅವನನ್ನು ಹಿಡಿಯಿರಿ..." ಎಂದು ಆಗ ಪ್ರಬಲ್ ಸಮಯೋಚಿತವಾಗಿ ಸೂಚಿಸಲು, ಅದಕ್ಕಾಗಿ ಇನ್ಸ್ಪೆಕ್ಟರ್ ರವಿಕುಮಾರ್ ಎದ್ದು ಹೊರಗೋಡಿದರು.

ಈಗ ದುರ್ಗಾ ನತಮಸ್ತಕಳಾಗಿ ನೆಲ ನೋಡುತ್ತಿದ್ದಳು, ಪೋಲಿಸರ ಮಧ್ಯೆ.

ಪ್ರಬಲ್ ವಿವರಿಸುತ್ತಾ ಹೋದ,

"ಹೌದು, ಅವತ್ತು ಕೊಲ್ಲಬೇಕೆಂದು ತೀರ್ಮಾನಿಸಿದ್ದಾಳೆ ದುರ್ಗಾ...ವೀರೇಂದ್ರ ಸ್ವತಃ ಬ್ಯಾಂಡೇಜ್ ಹಾಕಿಕೊಂಡು ನನಗೂ ಹೇಳಿ, ಕೊಲೆಯ ಆಯುಧವನ್ನೂ ಪಕ್ಕದಲ್ಲಿ ಇಟ್ಟುಕೊಂಡು ನಾಟಕವಾಡಿದ್ದಾನೆ. ಎಂತಹಾ ಸುಸೂತ್ರವಾದ ಅವಕಾಶ ಅಲ್ಲವೆ ಅವಳಿಗೆ, ಯುವರ್ ಆನರ್?... ನಾನು ಕೆಳಗೆ ಹೋದ ಮೇಲೆ ಅವಳು ಗ್ಲೋವ್ಸ್ ಧರಿಸಿ ಗಂಡನಿಗೆ ಬ್ಯಾಂಡೇಜ್ ಮೇಲೆ ಆಳವಾಗಿ ಐಸ್‌ಪಿಕ್ ನಿಂದ ಸರಕ್ಕನೆ ಚುಚ್ಚಿ ಕೊಂದಿದ್ದಾಳೆ. ಆಮೇಲೆ ಆ ರಕ್ತದ ಕಲೆಯನ್ನೂ ಅಳಿಸಿದ್ದಾಳೆ. ಆದರೆ ಗ್ಲೋವ್ಸ್ ಧರಿಸಿದ್ದರಿಂದ ಕೀರ್ತಿ ಶರ್ಮಾ ಮಾಡಿದ್ದ ಬೆರಳು ಗುರುತುಗಳು ಹಾಗೇ ಉಳಿಯುವಂತೆ ಬಿಟ್ಟಿದ್ದಾಳೆ... ಅವಳ ಪ್ರಕಾರ ಇದು ತನ್ನ ಮೇಲೆ ಅನುಮಾನ ಬರದ ಕ್ಲೀನ್ ಪ್ಲಾನ್ ಆಗಿತ್ತು. ಒಂದೇ ಒಂದು ತಪ್ಪು ಮಾಡಿಬಿಟ್ಟಳು ದುರ್ಗಾ...ವಾಪಸ್ ಇಡುವಾಗ ಟೇಬಲ್ ಮೇಲೆ ಐಸ್ ಪಿಕ್ ಹಿಡಿ ಉಲ್ಟಾ ದಿಕ್ಕಿಗೆ ಇಟ್ಟುಬಿಟ್ಟಳು. ನನ್ನ ಕಣ್ಣಿಗೆ ಬೀಳದೇ ಹೋಗಲಿಲ್ಲ.. ನಾನು ಕೆಳಗೆ ಕೆಫೆಗೆ ಹೋಗಿ ಬರುವುದರಲ್ಲಿ ಆದ ಈ ಬದಲಾವಣೆಗೆ ಬೇರ‍್ಯಾವ ಅರ್ಥವೂ ಇರಲಿಲ್ಲ, ಯುವರ್ ಆನರ್...! ಆದರೆ ಅಷ್ಟಕ್ಕೇ ನಾನು ಏನೂ ಮಾಡುವಂತಿರಲಿಲ್ಲ ಸ್ವಾಮಿ...ಆಗಲೇ ಕೀರ್ತಿ ಶರ್ಮಾ ಮೇಲೆ ಆಪಾದನೆ ಬಂದುಬಿಟ್ಟಿತ್ತಲ್ಲಾ?"

"ಮಹಾ ಖತರ್‌ನಾಕ್ ಕಣ್ಣುಗಳಪ್ಪಾ ನಿಮ್ಮದು!" ಕೊನೆಗೊಮ್ಮೆ ಪ್ರಬಲ್‌ಗೆ ಮೆಚ್ಚುಗೆಯ ಮಾತಾಡಿದರು ಹರಿಹರನ್..."ಪೋಲಿಸರಿಗೂ ಇದು ಗೊತ್ತಾಗುತ್ತಿರಲಿಲ್ಲ"

"ಪೋಲೀಸರಿಗೆ ಈ ಸಲ ಬಹಳ ವಿಷಯಗಳು ಗೊತ್ತಾಗಲೇ ಇಲ್ಲ ಸ್ವಾಮಿ..." ಪ್ರಬಲ್ ನಯವಾಗಿಯೇ ಹೇಳಿದ. "ಕೀರ್ತಿ ಯಾರು, ಶ್ರುತಿ ಯಾರು, ಶ್ರುತಿ ಸತ್ತಳೋ, ಬದುಕಿದಳೋ, ಈ ಸುಲ್ತಾನಾ ಬೇಗಂ, ಈ ರಿವಾಲ್ವರ್...ಎಂ ಪಿ ಸಾಹೇಬರ ಓಡಾಟ...ಕೊನೆಗೆ ವೀರೇಂದ್ರನ ಕೊಲೆ! ಯಾವುದೂ..."

ಜಡ್ಜ್ ತಮ್ಮ ಕನ್ನಡಕ ಸರಿಪಡಿಸುತ್ತಾ ನೋಟ್ಸ್ ಓದಿಕೊಂಡರು "ಆದರೆ ಇಷ್ಟಕ್ಕೆಲ್ಲಾ ಕಾರಣವಾದ ಆ ಪ್ರೇಮಪತ್ರಗಳು ಎಲ್ಲಿ?.. ಯಾವುದರಲ್ಲಿ ಕಿರಣ್‌ಶಂಕರ್ ರಾವ್ ಬಗ್ಗೆ ವಿವಾದ ಇದ್ದು, ಈ ಅಪರಾಧಕ್ಕೆ ಕಾರಣವಾಗಿದ್ದು?"

ಪ್ರಬಲ್ ನಕ್ಕ, "ಅವು ಸುಮಾರು 8 ಪತ್ರಗಳು...ಎಲ್ಲಾ ನನ್ನ ಆಫೀಸಿನಲ್ಲಿ ಭದ್ರವಾಗಿದೆ, ಯುವರ್ ಆನರ್!... ನಾನೇ ನನ್ನ ಕಕ್ಷಿದಾರಳ ಬಳಿ ಪಡೆದು ಅಂದೇ ವಶಕ್ಕೆ ತೆಗೆದುಕೊಂಡಿದ್ದೆ... ಇಲ್ಲಿ ಇನ್ನೊಂದು ವಿಷಯ...ಕರುಣ್ ರಾವ್ ಮತ್ತು ಶ್ರುತಿಯ ಪಾಲಿಗೆ ಸೇರಿದ ಖಾಸಗಿ ಪತ್ರಗಳು ಇವು. ಬೇರೆ ಯಾರಿಗೂ ಕೊಡುವುದಿಲ್ಲ, ಯುವರ್ ಆನರ್... ಶ್ರುತಿ ಟ್ರೀಟ್ಮೆಂಟ್ ಮುಗಿಸಿದ ನಂತರ ಅವರಿಬ್ಬರಿಗೇ ಕೊಡುತ್ತೇನೆ" ಮತ್ತು ಕಿರಣ್‌ಶಂಕರ್ ರಾವ್ ಕಡೆಗೆ ತಿರುಗಿ,

"...ಮತ್ತು ನೀವು ಈ ಬಗ್ಗೆ ನಿಮ್ಮ ಮಗನ ಜತೆಯೇ ಚರ್ಚಿಸಿ. ಈ ಬಗ್ಗೆ ಬೇರಾವುದೂ ಅವಾಂತರ ಮಾಡಬೇಡಿ" ಎಂದನು. ಅವರು ಸುಮ್ಮನೇ ತಲೆಯಾಡಿಸಿದರು, ಹೇಗೋ ಮುಗಿದರೆ ಸಾಕು, ಇಲ್ಲಿಂದ ಹೊರಟರೆ ಸಾಕಾಗಿತ್ತು ಅವರಿಗೆ.

ಜಡ್ಜ್ ಪ್ರಬಲ್ ಮತ್ತು ಹರಿಹರನರತ್ತ ನೋಡಿ ನುಡಿದರು. "ಇದು ಸರಿಯಾದ ವಿವರಣೆ ಎನಿಸಿದೆ ನನಗೆ. ಪ್ರಾಸಿಕ್ಯೂಷನ್ ಈ ಬಾರಿ ಪ್ರತಿವಾದಿ ವಕೀಲ ಪ್ರಬಲ್ ಅವರಿಗೆ ಕೇಸು ಸಾಲ್ವ್ ಮಾಡಿಕೊಟ್ಟಿದ್ದಕ್ಕೆ ವಂದಿಸಬೇಕಾಗಿದೆ...ಸರಿ ಹಾಗಾದರೆ!...ಪ್ರಾಸಿಕ್ಯೂಷನ್ ಈ ಕೇಸು ವಿತ್‍ಡ್ರಾ ಮಾಡುವುದಾದರೆ ನಾನು ಆಪಾದಿತೆ ಕೀರ್ತಿ ಶರ್ಮಾಳನ್ನು ‘ಬಾ ಇಜ್ಜತ್’ (ಮರ್ಯಾದೆಯಿಂದ) ಬಿಡುಗಡೆ ಮಾಡುತ್ತಿದ್ದೇನೆ. ಪ್ರಾಸಿಕ್ಯೂಟರ್, ಇನ್ನು ನೀವು ನಿಜವಾದ ಕೊಲೆಗಾರರಾದ ದುರ್ಗಾ ಮತ್ತು ರಮಣ್ ಮೇಲೆ ಹೊಸ ಕೇಸು ದಾಖಲಿಸಿ."

"ಆಗಲಿ, ಯುವರ್ ಆನರ್".

ಅಲ್ಲಿಗೆ ಕೋರ್ಟು ಕಲಾಪ ಸಮಾಪ್ತಿಯಾಗಿತ್ತು.

ಪ್ರಾಸಿಕ್ಯೂಟರ್ ಹರಿಹರನ್ ಎದ್ದು ಪ್ರಬಲ್ ಹತ್ತಿರ ಬಂದು "ಕಂಗ್ರಾಚುಲೇಷನ್ಸ್, ಪ್ರಬಲ್..."ಎಂದು ಕೈಕುಲುಕಿ, "ಮುಂದಿನ ಸಲ ಇಷ್ಟು ಲಕ್ಕೀ ಆಗಿರಲಾರೆ...!" ಎಂದು ಮಾರ್ಮಿಕವಾಗಿ ನಕ್ಕರು.

"ಆಗ ನೋಡುವಾ...ಸ್ವಲ್ಪ ತಾಳಿ, ಒಂದು ಮಾತಿದೆ..." ಎಂದು ಪ್ರಬಲ್ ಅವರ ಜತೆ ಚರ್ಚಿಸಲಾರಂಭಿಸಿದ.

17

ಮರುದಿನ ಬೆಳಿಗ್ಗೆ 10ಕ್ಕೆ ಪ್ರಬಲ್ ಸಂಬಂಧಪಟ್ಟವರೆಲ್ಲರನ್ನು ತನ್ನ ಆಫೀಸಿಗೆ ಮೀಟಿಂಗಿಗಾಗಿ ಕರೆದಿದ್ದನು.

ಶ್ರುತಿ ಒಬ್ಬಳ ಮಾನಸಿಕ ಚಿಕಿತ್ಸೆ ಇನ್ನೂ ಜಾರಿಯಲ್ಲಿದುದರಿಂದ, ಕ್ಲಿನಿಕ್ಕಿನಿಂದ ಡಾ. ಅಬ್ದುಲ್ಲಾ ಮಾತ್ರ ಬಂದಿದ್ದರು. ಅಪ್ಪ ಕಿರಣ್‌ಶಂಕರ್ ರಾವ್ ಮತ್ತು ಕರುಣ್ ರಾವ್ ಇಬ್ಬರೂ ಕಣ್ಣೀರು ಸುರಿಸಿ ತಬ್ಬಿಕೊಂಡಿದ್ದರು. ದಕ್ಷಾ ಈ ಮಾತುಕತೆಯನ್ನು ನೋಟ್ ಮಾಡಿಕೊಂಡು ದಾಖಲೆ ಇಡುವವಳಿದ್ದಳು.

"ಪ್ರಬಲ್, ನಾನು ಇವರಿಬ್ಬರ ಮದುವೆ ಮಾಡಿಕೊಡುತ್ತೇನೆ. ಅವಳ ಚಿಕಿತ್ಸೆ ಮುಗಿದ ಮೇಲೆ..." ಎಂದರು ಎಂ.ಪಿ. ತಮ್ಮ ಮಗನ ಬೆನ್ನು ತಟ್ಟುತ್ತಾ.

ಡಾ. ಅಬ್ದುಲ್ಲಾ "ಅದಕ್ಕೆ ಇನ್ನೂ ಒಂದು ತಿಂಗಳಾಗಬಹುದು. ನಾನು ಹೇಳಿದಾಗ ಮಾತ್ರ ಬಂದು ನೋಡುತ್ತಿರಿ ಸಾಕು" ಎಂದು ಅಭಿಪ್ರಾಯಪಟ್ಟರು.

"ಹಾಗಾದರೆ ಅಪ್ಪನನ್ನು ಕ್ಷಮಿಸಿ ಆ ಪತ್ರಗಳನ್ನು ಭದ್ರವಾಗಿಟ್ಟುಕೊಳ್ಳುವೆಯಲ್ಲಾ?. ಪತ್ರಿಕೆಗಳಿಗೆ ಕೊಡುವುದಿಲ್ಲ ತಾನೆ, ಕರುಣ್?" ಪ್ರಬಲ್ ಮುಗುಳ್ನಗುತ್ತಾ ಕೇಳಿದ.

"ಇಲ್ಲ, ಇಲ್ಲ... ಅಲ್ಲದೇ ನಾನೇ ಅವರ ಚುನಾವಣೆಗೂ ಸಹಾಯ ಮಾಡುತ್ತೇನೆ" ಎಂದ ಕರುಣ್ ರಾಜಿ ಮಾಡಿಕೊಳ್ಳುತ್ತಾ.

ಇದುವರೆಗೂ ಸುಮ್ಮನಿದ್ದ ತನ್ನ ಕಕ್ಷಿದಾರಳ ಕಡೆಗೆ ಗಮನ ಹರಿಸಿದನು ಪ್ರಬಲ್.

"ಕೀರ್ತಿ, ಇನ್ನು ಮೇಲೆ ಈ ಸುಳ್ಳು, ಕಪಟ ಮಾಡಲು ಪ್ರಯತ್ನಿಸಬೇಡ.. ನಂನಮ್ಮ ಜೀವನ ಏನಿರುತ್ತದೋ, ಅದನ್ನೇ ನ್ಯಾಯವಾಗಿ ಸಾಗಿಸಿದರಾಯಿತು, ಬೇರೆಯವರ ಜೀವನದ ನಕಲು ನಮಗೆ ಬೇಡ..." ಎಂದಾಗ

 "ಹೌದು ಸರ್, ನಾನು ದೊಡ್ಡ ಪಾಠ ಕಲಿತಿದ್ದೇನೆ..." ಎಂದಳು ಅವಳು ಸಂಕೋಚದಿಂದ.

"ಆಮೇಲೆ...ಕತ್ತಲಲ್ಲಿ ಯಾರಿಗೂ ಹೊಡೆಯಲು ಹೋಗಬೇಡ!" ಎಂದು ಹಾಸ್ಯ ಮಾಡಿ ವಾತಾವರಣ ತಿಳಿಗೊಳಿಸಿದ ಪತ್ತೇದಾರ ಪ್ರದೀಪ್. ಎಲ್ಲರೂ ನಕ್ಕರು.

"ನಿನ್ನ ಹಳೇ ಪ್ರೇಮಿ ಶಕ್ತಿರಾಜ್ ಬಗ್ಗೆ ನಾನೂ ಪೋಲಿಸರಿಗೆ ಒಂದು ಪ್ರತ್ಯೇಕ ದೂರು ಬರೆದುಕೊಟ್ಟಿದ್ದೇನೆ. ದುಡ್ಡಿನೊಂದಿಗೆ ಪರಾರಿಯಾದ ಅವನಿಗಾಗಿ ಹುಡುಕುತ್ತಿದ್ದಾರೆ ಅಂತರ ರಾಜ್ಯ ಪೋಲಿಸರು. ಅವನು ಅಕಸ್ಮಾತ್ ಸಿಕ್ಕಿಬಿಟ್ಟರೆ?" ಎಂದು ಹುಬ್ಬೇರಿಸಿದ ಪ್ರಬಲ್.

ಕೀರ್ತಿ ತನಗೆ ಅದರಲ್ಲಿ ಆಸಕ್ತಿಯಿಲ್ಲವೆಂಬಂತೆ ಮುಖ ಮಾಡಿದಳು. "ಅವನು ಏನು ಬೇಕಾದರೂ ಮಾಡಿಕೊಳ್ಳಲಿ, ಸರ್. ನನ್ನ ಜೀವನದಲ್ಲಿ ಮತ್ತೆ ಅವನಿಗೆ ಸ್ಥಾನವಿಲ್ಲ"

"ದಟ್ಸ್ ಎ ಗುಡ್ ಗರ್ಲ್" ಎಂದಳು ದಕ್ಷಾ ಮುಗುಳ್ನಗುತ್ತಾ.

"ನನಗೆ ಮರಣದಂಡನೆಯೇನೋ ತಪ್ಪಿಸಿಬಿಟ್ಟಿರಿ. ಆದರೆ ನಾನು ಶ್ರುತಿ ವರ್ಮಾ ಎಂದು ಇಂಪರ್ಸನೇಷನ್ ಮಾಡಿದ್ದಕ್ಕೆ ಈಗ ಶಿಕ್ಷೆ ಕೊಡ್ತಾರಾ ಸರ್?" ಎಂದಳು ಕೀರ್ತಿ ಅನುಮಾನ ಪರಿಹಾರ ಮಾಡಿಕೊಳ್ಳುತ್ತಾ.

ಪ್ರಬಲ್ ತುಟಿಯುಬ್ಬಿಸಿದ,

"ಹಾಗೆ ಮಾಡುತ್ತಿದ್ದರೇನೋ?...ಆದರೆ ಈ ಕೇಸಿನಲ್ಲಿ ಹರಿಹರನ್ ನನಗೆ ಋಣಿಯಾಗಿದ್ದಾರೆ, ನಿಜವಾದ ಕೊಲೆಗಾರನನ್ನು ಹುಡುಕಿಕೊಟ್ಟು ಅವರ ಗೌರವ ಕಾಪಾಡಿದೆ. ನಾನೇ ಅವರಿಗೆ, ‘ಪಾಪಾ, ನೊಂದ ಹುಡುಗಿ ಸಾರ್, ಏನೋ ಗೊತ್ತಿಲ್ಲದೇ ತಪ್ಪು ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಳು. ಆದರೆ ಯಾವುದೇ ದೊಡ್ಡ ಅಪರಾಧವಂತೂ ಮಾಡಲಿಲ್ಲವಲ್ಲ, ಬಿಟ್ಟುಬಿಡಿ’ ಎಂದೆ ನಿನ್ನೆ ಸಂಜೆ. ‘ಸರಿ ಹಾಗೇ ಆಗಲಿ, ಮತ್ತೆ ಕೇಸ್ ಹಾಕುವುದು ಬೇಡ’ ಎಂದು ಒಪ್ಪಿದ್ದಾರೆ ಹರಿಹರನ್..."

"ಯೇ!! ಪ್ರಬಲ್ ಇದ್ದೆಡೆ ಟ್ರಬಲ್ ಇಲ್ಲ" ಎಂದು ಖುಶಿಯಿಂದ ಕೈತಟ್ಟಿದಳು ಕೀರ್ತಿ, ಬೆಟ್ಟದಂತೆ ಬಂದಿದ್ದು ಮಂಜಿನಂತೆ ಕರಗಿ ಹೋಯಿತೆಂದು.

ಪ್ರಬಲ್ ಮತ್ತೆ ಮುಂದುವರೆಸಿದ, "ಕರುಣ್, ನೀವೂ ಅಷ್ಟೆ, ಪತ್ರದಲ್ಲಿ ಬರೆಯುವಾಗ ನಿಮ್ಮ ಬಗ್ಗೆ ಮಾತ್ರ ಬರೆದುಕೊಳ್ಳಿ. ಹೀಗೆಲ್ಲಾ ವಿವಾದಾಸ್ಪದವಾಗಿ ರೈಟಿಂಗಿನಲ್ಲಿ ಏನೇನೋ ಬರೆದು ಯಾರಿಗೂ ಕೊಡಬಾರದು. ಈಗ ನೋಡಿ, ವೀರೇಂದ್ರನಂತಹವರಿರುತ್ತಾರೆ"

"ಆಯಿತು ಸರ್, ಎಚ್ಚರದಿಂದಿರುತ್ತೇನೆ. ನಿಮ್ಮ ಅಡ್ವೈಸ್ ಮರೆಯುವುದಿಲ್ಲ" ಎಂದ ಕರುಣ್.

"ರಾಯರೇ, ನೀವು ಮಾತ್ರ ಯಾವ ಬ್ಲ್ಯಾಕ್ ಮೈಲರ್ ಜತೆಯೂ ವ್ಯವಹಾರ ಮಾಡಬೇಡಿ. ಸೀದಾ ನನ್ನ ಬಳಿ ಬನ್ನಿ ನೆಕ್ಸ್ಟ್ ಟೈಮ್, ನಾನೂ ಪ್ರದೀಪ್ ನೋಡಿಕೊಳ್ಳುತ್ತೇವೆ... ಹಾಗೆ ರಿಸ್ಕ್ ತೆಗೆದುಕೊಂಡು ಯುವತಿಯರ ರೂಮಿಗೆ ಹೋಗಬೇಡಿ. ನೋಡಿದವರು ಏನೆಂದುಕೊಂಡಾರು?" ಪ್ರಬಲ್ ಎಚ್ಚರಿಕೆ ಮಾತು ಎಂ ಪಿ ಕಿರಣ್‍ಶಂಕರ್ ರಾವ್ ಮನಕ್ಕೆ ನಾಟಿತ್ತು. ಶಾಂತವಾಗಿ ತಲೆಯಾಡಿಸಿದರು.

ಪ್ರದೀಪ್ ಭುಜ ಕುಣಿಸಿದ. "ಈಸಲ ನಾನು ಯಾಕೋ ಅಷ್ಟು ಸಮರ್ಥವಾಗಿ ಕೆಲಸ ಮಾಡಿಲ್ಲ...ವೀರೇಂದ್ರ, ದುರ್ಗಾ, ರಮಣ್ ಇದೆಲ್ಲದರಲ್ಲೂ ನಾನು ಹಿಂದೆಬಿದ್ದೆ. ಕರುಣ್ ಕರೆದುಕೊಂಡು ಶ್ರುತಿ ವರ್ಮಾಳನ್ನು ಹುಡುಕಲು ಸಹಾ, ಪ್ರಬಲ್, ನೀನೇ ಐಡಿಯಾ ಕೊಟ್ಟೆ. ಸುಲ್ತಾನಾ ವಿಷಯ ಸಹಾ ಬಹಳ ತಡವಾಗಿ ಕಂಡುಹಿಡಿದೆ..."ಎಂದ ತನ್ನ ಕಾರ್ಯವೈಖರಿ ಬಗ್ಗೆ ಬಹಳ ಅಭಿಮಾನವಿದ್ದ ಪತ್ತೇದಾರ, ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾ.

"ಪ್ರದೀಪ್, ಅದೆಲ್ಲಾ ಬಿಡು, ಕೊನೆಗೂ ನೀನೇ ಎಲ್ಲಾ ಹಿನ್ನೆಲೆ ಕೆಲಸ ಮಾಡಿ ಮುಗಿಸಿದೆಯಲ್ಲಾ?. ನಿನ್ನ ಫೀಸ್ ಏನೂ ಕಟ್ ಮಾಡುವುದಿಲ್ಲ" ಎಂದು ನಕ್ಕ ಪ್ರಬಲ್ ಅವನ ಬೆನ್ನು ತಟ್ಟುತ್ತಾ.

ದಕ್ಷಾ ತಲೆಯೆತ್ತಿದಳು, "ಎಂತಾ ಫೀಸು, ಚೀಫ್?. ಈ ಫೈಲಿಗೇ ‘ಮೂರು ರೂಪಾಯಿ ಕೇಸು’ ಎಂದು ಹೆಸರಿಟ್ಟಿದ್ದೇನೆ..."

"ಅದು ಅವತ್ತಿನ ಕಾಕತಾಳೀಯ ನ್ಯಾಯ ನೋಡಿ...ಇವಳ ಪರ್ಸಿನಲ್ಲಿದುದ್ದೂ ಅವತ್ತು ಮೂರೇ ರೂಪಾಯಿ.! ಆಗಲೇ ನನಗೆ ಈ ಮೂರು ಎಂಬ ನಂಬರ್ ಅಂದರೆ ಇಲ್ಲಿ ಇಬ್ಬರಲ್ಲ, ಮೂರು ಯುವತಿಯರಿದ್ದರೆ ಎಂದು ಅನುಮಾನ ಗಟ್ ಫೀಲಿಂಗ್ ತರಹ ಬಂದಿತು... ಯಾಕೆಂದರೆ ಒಬ್ಬ ಕಾರ್ ಮಾಲೀಕಳಾದ ಶ್ರುತಿ ವರ್ಮಾ ಎಂಬ ಯಾವುದೇ ಕ್ರಿಮಿನಲ್ ಕೇಸ್ ಇಲ್ಲದವಳು ಇನ್ನೊಂದು ಕಾರಿನ ಒಡತಿ ಕೀರ್ತಿಗೆ ಇದ್ದಕ್ಕಿದಂತೇ ಗನ್ ತೋರಿಸಿದಳು ಎಂದರೆ ಕ್ಯಾರೆಕ್ಟರ್ ಸ್ಕೆಚ್ ಸರಿ ಬೀಳಲಿಲ್ಲ. ಯಾರೋ ಮೂರನೆಯವಳು, ಎಂದು ಇಟ್ಟುಕೊಂಡೆ ಮನಸ್ಸಿನಲ್ಲಿ.. ಆದರೆ ಈಗ..." ಎನ್ನುತ್ತಾ ಕೀರ್ತಿ ಶರ್ಮಾಳತ್ತ ತಿರುಗಿ "ಕೀರ್ತಿ, ಶ್ರುತಿ ಮತ್ತು ಸುಲ್ತಾನಾ ಮೂರೂ ಜನಕ್ಕೆ ಸೇರಿ, ಇವಳೇ ಒಟ್ಟು ಮೂರು ಸಾವಿರ ಆದರೂ ಕೊಡಬಹುದು ಎಂದು ನಂಬಿದ್ದೇನೆ" ಎಂದು ಮಾರ್ಮಿಕವಾಗಿ ಅವಳತ್ತ ನೋಡಿ ಹಾಸ್ಯ ಮಾಡಿ ನಕ್ಕ ಪ್ರಬಲ್.

ಕೀರ್ತಿ ನಾಚಿ ಕೆಂಪಾಗಿ, "ಅಯ್ಯಯ್ಯೋ, ಸಾರಿ... ನನ್ನ ಸಂಬಳ ಬಂದ ತಕ್ಷಣ ಫುಲ್ ಫೀಸ್ ಕೊಡುತ್ತೇನೆ ಸರ್... ಹೇಗೂ ಇದೇ ಬಿಲ್ಡಿಂಗಿನಲ್ಲಿ ತಾನೇ ಕೆಲಸ ಮಾಡುತ್ತಿರುತ್ತೇನೆ!" ಎಂದಳು.

ಎಲ್ಲರೂ ಮನಸಾರೆ ನಕ್ಕರು.

(ಮುಗಿಯಿತು).



Rate this content
Log in

Similar kannada story from Action