Nagesh Kumar CS

Action Crime Thriller

3.7  

Nagesh Kumar CS

Action Crime Thriller

ಕಾಣದ ಸಾಕ್ಷಿ

ಕಾಣದ ಸಾಕ್ಷಿ

9 mins
364


1


‘ಪಾರದರ್ಶಕ’ ಪತ್ರಿಕೆಯ ಸಂಪಾದಕ 35 ವರ್ಷದ ರಘುವೀರ್ ಶೆಣೈ ತನ್ನ ದಿಟ್ಟತನಕ್ಕೆ ನಗರದಲ್ಲೇ ಹೆಸರುವಾಸಿಯಾದವನು. ಆ ಸಾಪ್ತಾಹಿಕ ಪ್ರಕಟನೆ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಅವನು ರಾಜಕೀಯ ಭ್ರಷ್ಟರನ್ನು ಬಯಲಿಗೆಳೆಯುವಲ್ಲಿ ಯಾವ ಆಮಿಷಕ್ಕೂ ಮಣಿಯದೇ ಎಂತದೇ ಸವಾಲನ್ನೂ ಬೇಕಾದರೂ ಎದುರಿಸಿ ಸತ್ಯವನ್ನೂ ಬಿಚ್ಚಿಡಬಲ್ಲನೆಂಬ ನಂಬಿಕೆ ಓದುಗವರ್ಗದಲ್ಲಿ ಮೂಡಿಸಿಯೂ ಬಿಟ್ಟಿದ್ದ.

ಅವನು ದಿನವೆಲ್ಲಾ ಪತ್ರಿಕೆಗಾಗಿ ದುಡಿದು ರಾತ್ರಿ 11ಕ್ಕೆ ನಗರದ ಹೊರವಲಯದಲ್ಲಿರುವ ತನ್ನ ಕಚೇರಿಯಿಂದ ಮನೆಗೆ ಹೊರಡುವುದು ದೈನಂದಿನ ವಾಡಿಕೆಯಾಗಿಬಿಟ್ಟಿತ್ತು.

ಆದರೆ ಇಂದು ದುರದೃಷ್ಟವಶಾತ್ ಈ ವಿಷಯ ಅವನಿಗಾಗಿ ಹೊಂಚು ಹಾಕಿಕೊಂಡು ಬಾಗಿಲ ಹೊರಗೆ ದೀಪದ ಕಂಬದ ಮರೆಯಲ್ಲೇ ನಿಂತು ಅರ್ಧ ಮುಖಕ್ಕೆ ಮಫ್ಲರ್ ಬಿಗಿದು ಸಿಗರೇಟ್ ಎಳೆಯುತ್ತಿದ್ದ ‘ಬುಲೆಟ್’ ಭೈರನಿಗೂ ತಿಳಿದುಹೋಗಿತ್ತು.

ಭೈರನಿಗೆ ಮೊನ್ನೆ ತಾನೇ ಮಾಫಿಯಾ ಮಂಜಣ್ಣ ಎಂಬ ಈ ನಗರದ ಭೂಗತಲೋಕದ ಡಾನ್ ಕರೆ ಮಾಡಿದ್ದ. ಉರಿಂದೂರಿಗೆ ಹೋಗಿ ಅಸೈನ್ಮೆಂಟ್ ಮಾಡಿ ಮುಗಿಸಿ ಬರುವ ಸುಪಾರಿ ಕಿಲ್ಲರ್ ಆದ ಭೈರನಿಗೆ ಹೀಗೇ ಮಂಜಣ್ಣನೂ ಹಳೆ ಪರಿಚಯವೆನ್ನಿ.

“ನೋಡು ಭೈರಾ!...ಈ ಊರಿನಲ್ಲಾಗಲೀ ರಾಜ್ಯದಲ್ಲಾಗಲಿ ಪೋಲಿಸರ ಬಳಿ ನಿನ್ನ ಮುಖ ಪರಿಚಯ, ದಾಖಲೆಗಳ್ಯಾವುದೂ ಇಲ್ಲ ಸದ್ಯಕ್ಕೆ... ಅದಕ್ಕೇ ನಿನ್ನನ್ನೇ ಕರೆದಿದ್ದೇನೆ. ಆ ರಘುವೀರ್ ನನ್ನ ಗೆಳೆಯರಾದ ಈ ಊರಿನ ಮೇಯರ್ ನಿರಂಜನ್ ಅವರಿಗೆ ಸಂಬಂಧಿಸಿದಂತೆ ಎಂದೋ ಮುಚ್ಚಿಹೋಗಿದ್ದ ಭೂಹಗರಣದ ಕೇಸುಗಳನ್ನೂ ಎತ್ತಿ ಎತ್ತಿ ತನ್ನ ದರಿದ್ರ ಪತ್ರಿಕೆಯಲ್ಲಿ ಒಂದೇ ಸಮನೆ ಬರೆಯುತ್ತಿದ್ದಾನೆ. ಅವರು ಇದರಲ್ಲಿ ಅರ್ಧ-ಸತ್ಯವಿದ್ದರೂ ಸಮಾಜದಲ್ಲಾಗಲೀ, ಸರಕಾರದವರೊಂದಿಗಾಗಲಿ ತಲೆ ಎತ್ತಿಕೊಂಡು ನಡೆಯುವಂತಿಲ್ಲ...ನೀನು ಇನ್ನೊಂದು ಸಂಚಿಕೆ ಬರುವುದರ ಒಳಗೆ ನಾಲ್ಕು ದಿನದಲ್ಲಿ ಆ ಸಂಪಾದಕನನ್ನು ಮುಗಿಸಿ ಕಾಲ್ಕಿತ್ತಬೇಕು...ಆಗುತ್ತಾ?”

ಭೈರ ತನ್ನ ಕೆನ್ನೆ ಮೇಲಿದ್ದ ಹಳೇ ಗಾಯದ ಕಲೆ ಸವರುತ್ತಾ ಸೊಟ್ಟಗೆ ನಕ್ಕಿದ್ದ, “ನನ್ನನ್ನು ಸಿಂಗಲ್ ಬುಲೆಟ್ ಭೈರಾ ಅನ್ನೋದ್ಯಾಕೆ? ಇದುವರ್ಗೂ ಯಾವ ಕೇಸಾದ್ರೂ ಬೇಡಾ ಅಂದಿದೀನಾ?...ಇಲ್ಲಾ, ಎರಡು ಬುಲೆಟ್ಸ್ ವೇಸ್ಟ್ ಮಾಡಿದ್ದೀನಾ, ಹೇಳು ಮಂಜಣ್ಣ!”

ತನ್ನ ಸೈಲೆನ್ಸರ್ ಅಳವಡಿಸಿದ ಗನ್ ಮತ್ತು ಎಂದೂ ತಪ್ಪದ ನಿಶಾನೆಯ ಬಗ್ಗೆ ಅಷ್ಟು ಹೆಮ್ಮೆಯಿದ್ದವನು ಕೊನೆಗೆ ಮಾಮೂಲಿ ದರಕ್ಕೇ ಈ ಸುಲಭದ ಕೇಸು ಒಪ್ಪಿಕೊಂಡಿದ್ದ. ಏಕೆಂದರೆ ಈ ಬಾರಿ ಅಲ್ಲಿಂದ ಕೆಲಸ ಮುಗಿಸಿದ ಮೇಲೆ ತಪ್ಪಿಸಿಕೊಂಡು ಓಡಿಹೋಗಲು ಪರಾರಿ ವಾಹನವನ್ನೂ ಮಂಜಣ್ಣನೇ ಒದಗಿಸಿಕೊಡು ವೆನೆಂದಿದ್ದರಿಂದ. ಎರಡೇ ದಿನದಲ್ಲಿ ತನ್ನ ಬಲಿಪಶುವಿನ ದಿನಚರಿಯನ್ನು ಅಭ್ಯಸಿಸಿ ಎಲ್ಲಾ ಖಚಿತಪಡಿಸಿಕೊಂಡಿದ್ದ ಸುಪಾರಿ ಕಿಲ್ಲರ್ ಭೈರ.

ಎಂದಿನಂತೆ ಅಂದೂ ರಘುವೀರ್ ಶೆಣೈ ತನ್ನ ಕಚೇರಿ ಬಾಗಿಲು ತೆರೆದು ಹೊರಬಂದು ಬೂಟ್ಸ್ ಲೇಸ್ ಕಟ್ಟಿಕೊಳ್ಳಲು ಬಗ್ಗಿದನು. ಅದೇ ಅವನ ಜೀವನದ ಕೊನೆಯ ಕೆಲಸವಾಯಿತು. ಕಂಬದ ಮರೆಯಿಂದ ಮಿಂಚಿನಂತೆ ಹೊರಬಂದ ಬುಲೆಟ್ ಭೈರ ಪಾಯಿಂಟ್ ಬ್ಲ್ಯಾಂಕ್ ವ್ಯಾಪ್ತಿಯಲ್ಲಿ ತನ್ನ ಗನ್ ಫೈರ್ ಮಾಡಿಯೇ ಬಿಟ್ಟ. ಮೊದಲನೇ ಬುಲೆಟ್ ರಘುವೀರನ ಹಣೆಯನ್ನು ನೇರವಾಗಿ ಹೊಕ್ಕಿ ಅವನು ಕಣ್ಣಗಲ ಮಾಡಿದಂತೆಯೇ ದಬಾಲನೇ ನೆಲಕ್ಕೆ ಬಿದ್ದುಬಿಟ್ಟ.

“ಯೆಸ್ಸ್!” ಎಂದು ಗೆಲುವಿನಿಂದ ವಿಲಕ್ಷಣ ನಗೆ ಬೀರಿ ಚಿಟಿಕೆ ಹೊಡೆದ ಭೈರ ಅದ್ಯಾಕೋ ತನ್ನ ಎಚ್ಚರಿಕೆಗಾಗಿ ಒಮ್ಮೆ ಸುತ್ತಲೂ ದಿಟ್ಟಿಸಿನೋಡಿದ. ಆಗ ಸರಿಯಾಗಿ ಮುಖಕ್ಕೆ ಸುತ್ತಿದ್ದ ಅವನ ಮಫ್ಲರ್ ಬಿಚ್ಚಿ ಕೆಳಕ್ಕೆ ಬೀಳಬೇಕೆ!

ಅವನ ಎದೆ ಧಸಕ್ ಎಂದಿತು ಎರಡು ಕಾರಣಕ್ಕೆ.

ಮೊದಲಿಗೆ ಮಫ್ಲರ್ ಏನೋ ಬಿತ್ತು...ಆದರೆ!...ಅಲ್ಲಿ ಆಸುಪಾಸಿನಲ್ಲಿ ಇದ್ದುದೊಂದೇ ಎದುರಿನ ಕಟ್ಟಡ. ಆ ಎದುರಿನ ಅಪಾರ್ಟ್ಮೆಂಟಿನ ಮಹಡಿಯಲ್ಲಿ ಮಾತ್ರ ಒಂದು ಕಿಟಕಿ ಒಳಗಿನ ಬೆಳಕಿನಲ್ಲಿ ಕಾಣುತ್ತಿದೆ. ಅಲ್ಲೊಬ್ಬ ವ್ಯಕ್ತಿ ನಿಂತು ತನ್ನತ್ತಲೇ ನೋಡುತ್ತಿದ್ದಾನೆ!. ಮಫ್ಲರನ್ನು ಮತ್ತೆ ಸರಕ್ಕನೆ ಮುಖಕ್ಕೆ ಬಿಗಿದುಕೊಂಡ ಭೈರ ಕಣ್ಣು ಕಿರಿದಾಗಿಸಿ ಅವನತ್ತ ಮತ್ತೆ ನೋಡಿದ. ಹೌದು , ಅನುಮಾನವೇ ಇಲ್ಲ. ಸುಮಾರು 60ರ ವಯಸ್ಸಿನ ಮುದುಕ, ಬೆಳಕಿನಲ್ಲಿ ಬಿಳಿಗೂದಲು ಬೆಳ್ಳಿಯಂತೆ ಹೊಳೆಯುತ್ತಿದೆ. ನೀಲಿ ಶರ್ಟ್ ಧರಿಸಿದ್ದಾನೆ. ಅವನ ಕಂಗಳು! ಅಬ್ಬಾ...ಗೋಲಿಯಂತೆ ಇಲ್ಲಿಗೂ ಹೊಳೆಯುವಂತೆ ಕಾಣುತ್ತಿದೆ. ದುರುಗುಟ್ಟಿ ತನ್ನತ್ತಲೇ ನೋಡುತ್ತಿದ್ದಾನೆ. ಅರೆಕ್ಷಣದ ಹಿಂದೆ ತಾನು ಬೀದಿದೀಪದ ಬೆಳಕಿನಲ್ಲಿ ಶೂಟ್ ಮಾಡಿದ್ದನ್ನೂ ನೋಡಿಯೇ ಇರುತ್ತಾನೆ. ಅಲ್ಲದೇ....ತನ್ನ ಮಫ್ಲರ್ ಕಳಚಿ ಬಿದ್ದಾಗ ತನ್ನ ಮುಖ ಸ್ಪಷ್ಟವಾಗಿ ಅವನಿಗೆ ಕಾಣಿಸೇ ಇರುತ್ತದೆ...ಭೈರನಿಗೆ ರಾತ್ರಿಯ ಚಳಿಯಲ್ಲೂ ಬೆವರೊಡೆಯಿತು. ಆಗಲೇ ರಸ್ತೆ ತಿರುವಿನಲ್ಲಿ ಮಂಜಣ್ಣ ಹೇಳಿಕಳಿಸಿದ್ದ ಕಪ್ಪನೆ ಟೊಯೋಟಾ ಇನ್ನೋವಾ ಕಾರ್ ಬರಹತ್ತಿತ್ತು. ಭೈರನ ಮನಸ್ಸಿನಲ್ಲಿ ಆ ಸಾಕ್ಷಿ ಮುದುಕನನ್ನು ಈ ಕ್ಷಣವೇ ಕೊಂದು ಮುಗಿಸಿಬಿಡಬೇಕೆಂಬ ಬಯಕೆ ಬೆಂಕಿಯಂತೆ ಮನದಲ್ಲಿ ಹುಟ್ಟಿತು. ಇನ್ನೂ ಅಲ್ಲೇ ರಘುವೀರನ ಹೆಣ ಬಿದ್ದು ತಣ್ಣಗಾಗುತ್ತಿದೆ, ಎಲ್ಲಾ ಹಾಗೇ ಬಿಟ್ಟು ತಪ್ಪಿಸಿಕೊಂಡು ಪರಾರಿಯಾಗಬೇಕಾದ ಅನಿವಾರ್ಯ ಬೇರೆ ಒತ್ತಡ ಹಾಕಿದೆ. ಇನ್ನೋವಾ ರಸ್ತೆಯ ಬದಿಯಲ್ಲಿ ಕರ್ ಎಂದು ಬ್ರೇಕ್ ಹಾಕಿ ನಿಂತು ಬಾಗಿಲು ತೆರೆಯಿತು. ಒಳಗಿಂದ ಡ್ರೈವರ್ ಇವನತ್ತ ಕಿರುಚಿದ, “ಹತ್ತಯ್ಯಾ, ಏನು ನೋಡಹತ್ತಿದೀಯಾ? ಇನ್ನೊಂದು ಕ್ಷಣ ಇಲ್ಲಿದ್ದರೂ ಯಾರಾದರೂ ನೋಡಿಯಾರು...ಕಮಾನ್!” ಎಂದ. ಡ್ರೈವರಿಗೆ ಭೈರ ಸಮಯಪ್ರಜ್ಞೆಯಿಂದ ತಾನೂ ಅರಚಿಯೇ ಉತ್ತರಿಸಿದ:

“ಅಲ್ಲಿ!..ಎದುರಿಗಿನ ಬಿಲ್ಡಿಂಗಿನಲ್ಲಿ ನೋಡು. ಕಿಟಕಿಯ ಬಳಿ ನಿಂತು ಒಬ್ಬ ನನ್ನ ಮುಖ ನೋಡಿಯೇ ಬಿಟ್ಟ. ಅವನನ್ನೂ ಕೊಂದು ಬರುತ್ತೇನೆ ತಾಳು!”

ಆದರೆ ಡ್ರೈವರ್ ಬೊಬ್ಬಿಟ್ಟ, “ಅಯ್ಯೋ, ಒಂದು ಕ್ಷಣವೂ ತಡೆಯುವಂತಿಲ್ಲ...ಅವನನ್ನು ಬಿಟ್‍ಹಾಕು...ಇಲ್ಲವೇ ನಾವಿಬ್ಬರೂ ಸಿಕಿಹಾಕಿಕೊಳ್ಳುವುದು ಗ್ಯಾರೆಂಟೀ...ಹೂಂ! ಮಂಜಣ್ಣ ಹೇಳಿ ಕಳ್ಸಿದಾನೆ!”

ಆ ಕ್ಷಣ ಮನಸ್ಸಿಗೇ ಬೇರೇನೂ ತೋಚದೆ ಅವಸರದಲ್ಲಿ ಭೈರ ಕಾರ್ ಹತ್ತಿಯೇಬಿಟ್ಟ. ಅದು ಕಿರ್ರೆಂದು ಗೇರ್ ವೇಗವಾಗಿ ಬದಲಿಸುತ್ತಾ ಅಲ್ಲಿಂದ ಮಾಯವಾಯಿತು


2


ಇನ್ನೋವಾ ಊರಿನ ಇನ್ನೊಂದು ಹೊರವಲಯದ ಗೋಡೌನಿನ ರೋಲಿಂಗ್ ಶಟರಿನೊಳಕ್ಕೆ ಸಾಗಿ ಜರ್ರೆಂದು ಬಂದು ನಿಂತಿತು.

ಕಾರಿಂದ ಗಡಿಬಿಡಿಯಲ್ಲಿ ಆತಂಕದ ಮುಖ ಹೊತ್ತು ಇಳಿದ ಬುಲೆಟ್ ಭೈರನಿಗೆ ಎದುರಿಗೆ ಸಿಕ್ಕ ಮಾಫಿಯಾ ಮಂಜಣ್ಣ ಕಳವಳದಿಂದ ನೋಡಿ ಕೇಳಿದ,

“ ಯಾಕೋ ಏನಾಯ್ತು?”

ದುಡ್ಡು ಕೊಟ್ಟ ದಣಿ ಮಂಜಣ್ಣನಿಗೆ ಭೈರ ಜೀವನದಲ್ಲಿ ಮೊದಲ ಬಾರಿಗೆ ಸೋತ ದನಿಯಲ್ಲಿ ಕೊಲೆಯ ನಂತರ ಮುದುಕನೊಬ್ಬ ಕಿಟಕಿಯಿಂದ ತನ್ನನ್ನು ನೋಡಿಬಿಟ್ಟಿದ್ದನ್ನು ಹೇಗೋ ವರದಿ ಒಪ್ಪಿಸಿ ಕಸಿವಿಸಿಯಾಗಿ ನಿಂತ.

“ಏನೂ?...ಒಬ್ಬ ಸಾಕ್ಷಿ ನಿನ್ನ ಮುಖ ಬೆಳಕಿನಲ್ಲಿ ನೋಡಿಬಿಟ್ಟನೆ? ಇನ್ನು ನಿನ್ನ ಗೋಪ್ಯತೆ ಮುಗಿಯಿತು. ಅವನು ಖಂಡಿತಾ ಪೋಲಿಸರಿಗೆ ನಿನ್ನ ಚಹರೆ ಹೇಳಿಬಿಡುವನು. ನಾವು ಇವತ್ತು ಮುಗಿಸಿದ್ದು ಇಲ್ಲಿನ ಪ್ರಸಿದ್ಧ ವ್ಯಕ್ತಿ. ರಾಜಕೀಯದವರು ಸುಮ್ಮನಿರ್ತಾರಾ?...ಅಂತರ-ರಾಜ್ಯದ ಪೋಲಿಸರು ನಿನ್ನ ಹಂಟ್ ಮಾಡುತ್ತಾರಲ್ಲೋ!!” ಎಂದು ಚಿಂತೆಯಿಂದ ಅಬ್ಬರಿಸಿದ ಮಂಜಣ್ಣ. ನಿಜಕ್ಕೂ ತಾನೂ ಮೇಯರ್ ನಿರಂಜನ್ ಇವನ ಮೂಲಕ ಸಿಕ್ಕಿಹಾಕಕೊಳ್ಳದಿದ್ದರೆ ಸಾಕೆಂದು ಅವನ ಮನಸ್ಸು ಪ್ರಾರ್ಥಿಸುತಿತ್ತು.

“ಹಾಗಾದ್ರೇ ಏನು ಮಾಡು ಅಂತೀಯಣ್ಣಾ?” ಎಂದು ಪೆಚ್ಚಾಗಿ ಉಸುರಿದ ಭೈರ.

ಮಂಜಣ್ಣನಿಗೆ ನಿರ್ಧಾರ ಹೇಳಲು ಎರಡೇ ನಿಮಿಷ ಬೇಕಾಯಿತು.

“ನಿಂಗೆ ತಪ್ಪಿಸಿಕೊಳ್ಳಕ್ಕೂ ಟೈಮ್ ಆಗತ್ತೆ. ಎರಡು ದಿನಾ ಎಲ್ಲಾ ತಣ್ಣಗಾಗ್ಲಿ. ಆಗ ಬೇರೆ ದೂರದ ರಾಜ್ಯಕ್ಕೆ ಹೋಗಿ ಮುಖ ಮರೆಸಿಕೊಂಡು ಕೂತ್ಕೋ...ಅದೇ ನಿನ್ ಹಣೇಬರಾ, ಯಾರೂ ಹಿಡೀಬಾರ್ದು ಅಂದರೆ!”


3


ಬೆಳಿಗ್ಗೆ 7ಕ್ಕೆಲ್ಲಾ ಪೋಲೀಸ್ ಕಮೀಶನರ್ ಶಂಕರರಾವ್ ತಮ್ಮ ಆಪ್ತ ಡಿಟೆಕ್ಟಿವ್ ಚ್ ಜತೆ ಕ್ಯಾಬಿನ್ನಿನಲ್ಲಿ ಮುಖ್ಯವಾದ ಕೇಸನ್ನು ವಿವರಿಸುತ್ತಿದ್ದಾರೆ.

ಸಮರ್ಥರ ತೇಜಸ್ಸಿನ ಮುಖ ಕಂಡು ಮತ್ತು ಆತನ ಹಳೆಯ ಯಶಸ್ವಿ ರೆಕಾರ್ಡನ್ನು ನೆನೆದು ಅವರ ಹಣೆಯ ಮೇಲಿದ್ದ ಸುಕ್ಕುಗಳು ಸಡಿಲಗೊಂಡು ನಿರಾಳವಾಗಿ ಉಸಿರೆಳೆದರು,

“ಸೋ, ದಟ್ಸ್ ಇಟ್!...ಸಮರ್ಥ್, ಈಗ ಕೊಲೆಯಾಗಿರುವುದು ಪ್ರತಿಭಾನ್ವಿತ ಮತ್ತು ಪ್ರಭಾವಶಾಲಿ ಜರ್ನಲಿಸ್ಟ್ ರಘುವೀರ್ ಶೆಣೈ...ಮೇಯರ್ ನಿರಂಜನ್ ಅವನ ಮೇಲೆ ಮಾನನಷ್ಟ ಹಾಕಬೇಕೆಂದೂ ಪ್ರಯತ್ನಿಸುತ್ತಿದ್ದರು. ರಘುವೀರನಿಗೆ ಪೋಲಿಸ್ ರಕ್ಷಣೆ ಕೊಡಬಾರದು ಅಂತಾ ನಮ್ಮ ಮೇಲೆ ಒತ್ತಡ ತಂದಿದ್ರು ಅಂತೀನಿ...ಇನ್ನು ಅಪೋಸಿಶನ್ನಿಗೆ ಗೊತ್ತಾದ್ರೆ!...”

ಸಮರ್ಥ್ ಅದನ್ನೆಲ್ಲಾ ಕೇಳಿಸಿಕೊಂಡು ಶಾಂತವಾಗಿ ಮುಗುಳ್ನಕ್ಕರು, “ಅದೆಲ್ಲ ನಿಮ್ಮ ಮಟ್ಟದಲ್ಲಿ ರಾಜಕೀಯ ಒತ್ತಡ ಸಹಜ ಬಿಡಿ ಸರ್!. ನನ್ನ ಮಟ್ಟಿಗೆ ಹೇಳುವುದಾದರೆ ಈ ಕೊಲೆಗಾರನನ್ನು ಬೇಗ ಹುಡುಕಿ ಬಂಧಿಸಬೇಕು, ಅಷ್ಟೇ ತಾನೇ?”

ಶಂಕರರಾವ್ ಟೇಬಲ್ ಕುಟ್ಟಿದರು. “ಅಫ್ ಕೋರ್ಸ್...ಅದೇ ಬೇಕಾಗಿದ್ದು...”

“ನಾನೀಗಲೇ ಸ್ಪಾಟಿಗೆ ಹೊರಟೆ ” ಎಂದು ಮಾತು ಬೆಳೆಸದೇ ಎದ್ದರು ಸಮರ್ಥ್.

ನಲವತ್ತರ ಸಮೀಪದ ಡಿಟೆಕ್ಟಿವ್ ಸಮರ್ಥ ನಗರದ ಪೋಲೀಸ್ ಡಿಪಾರ್ಟಮೆಂಟಿನಲ್ಲೇ ಸಹೋದ್ಯೋಗಿಗಳ ಬಾಯಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ಆದರೆ ತಮ್ಮನ್ನು ಕೇಳಿದರೆ ತಾವು ಜಸ್ಟ್ ‘ಸೋಲೊಪ್ಪದ’ ಸರದಾರ ಎಂದು ಬಣ್ಣಿಸಿಕೊಳ್ಳುತ್ತಿದ್ದರು.

ಆದರೆ ಮೊದಲು ಅವರು ಭೇಟಿಯಿತ್ತಿದ್ದು ಆ ಕೇಸನ್ನು ರಾತ್ರಿ ಹ್ಯಾಂಡಲ್ ಮಾಡಿದ್ದ ಹೋಮಿಸೈಡ್ ಇನ್ಸ್ಪೆಕ್ಟರರ ಬಳಿ. ಅವರು ಮಾಡಿದ್ದ ಸ್ಥಳದ ಇನ್ಸ್ಪೆಕ್ಷನ್ ರಿಪೋರ್ಟ್, ಮಹಜರ್ ಇತ್ಯಾದಿಯನ್ನು ಒಮ್ಮೆ ಕೂಲಂಕಷವಾಗಿ ಓದಿದರು. ಶವಾಗಾರಕ್ಕೆ ಹೋಗಿ ರಘುವೀರರ ಶವವನ್ನು ದಿಟ್ಟಿಸಿನೋಡಿದರು. ಹಣೆಯ ಮಧ್ಯೆ ಸಿಂಗಲ್ ಶಾಟ್!...ಆಗಲೇ ಅವರಿಗೆ ಬಲ್ಲ ಭೂಗತ ಮೂಲಗಳಿಂದ ಬುಲೆಟ್ ಭೈರ ರಾಜ್ಯದಲ್ಲಿ ಇತೀಚೆಗೆ ಆ್ಯಕ್ಟಿವ್ ಆಗಿದ್ದಾನೆಂದು ತಿಳಿದುಬಂದಿತ್ತು.

ಆದರೆ ಅವನನ್ನು ನೋಡಿದವರ್ಯಾರಾದರೂ ಇದ್ದರೆ ತಾನೇ?


4


‘ಪಾರದರ್ಶಕ’ ಪತ್ರಿಕಾ ಕಚೇರಿಯ ಬಳಿ ಸಹಜವಾಗಿಯೇ ಪೋಲಿಸ್ ತಡೆಲೈನುಗಳು ಅದಕ್ಕೆ ತಕ್ಕ ಸಿಬ್ಬಂದಿ ಎಲ್ಲಾ ವ್ಯವಸ್ಥೆಯಾಗಿದೆ. ಡಿಟೆಕ್ಟಿವ್ ಸಮರ್ಥ್ ಅಲ್ಲಿಗೆ ಬಂದಾಗ ಬೆಳಿಗ್ಗೆ 11 ಇರಬಹುದು. ಸುತ್ತಲೂ ಒಮ್ಮೆ ಸುತ್ತಿ ನೋಡಿದರು. ಮೂಲೆಯಲ್ಲಿದ್ದ ಮಲೆಯಾಳಿ ಟೀ ಶಾಪಿನಲ್ಲಿ ಚಹಾ ಸೇವಿಸುತ್ತಾ ಮಾಲೀಕನನ್ನು ಕೇಳಿದರು,

“ನೀನು ರಾತ್ರಿ ಎಷ್ಟು ಹೊತ್ತಿಗೆ ಅಂಗಡಿ ಮುಚ್ಚುತ್ತೀ?”

ಚಹಾ ಬೆರೆಸುತ್ತಿದ್ದವನು ಬೋರ್ ಆದವನಂತೆ ಇವರತ್ತ ನೋಡಿದನು. ಎಷ್ಟು ಬಾರಿ ಒಬ್ಬೊಬ್ಬರಿಗೂ ತಾನು ಹೇಳುವುದು?

“10 ಗಂಟೆಗೆ ಸಾಧಾರಣವಾಗಿ...ರಾತ್ರಿ 10:30 ಆದರೂ ಆಗುತ್ತೆ”

“ನಿನ್ನೆ ರಾತ್ರಿ 11ರ ವರೆಗೆ ಇರಲಿಲ್ಲ?”

“ಇಲ್ಲ ಸ್ವಾಮಿ...”

“ಕೊಲೆಯಾದ ಸಮಯದಲ್ಲಿ ನೀನು ಇಲ್ಲಿರಲಿಲ್ಲ?”

ಮತ್ತೆ ಅವನು ತಲೆಯೆತ್ತಿ ದುರುಗುಟ್ಟಿದನು,

“ಯಾರ ಕೊಲೆ ಸ್ವಾಮಿ?” ಎಂದ ಮುಗ್ಧನಂತೆ.

ಸಮರ್ಥ್ ಎರಡು ಕ್ಷಣ ತೀಕ್ಷ್ಣವಾಗಿ ಅವನನ್ನು ದಿಟ್ಟಿಸಿದರು.

“ಇಲ್ಲಿ ಯಾರಾದರೂ ಬರುತ್ತಿದ್ದರೆ ಇತ್ತೀಚೆಗೆ ಹೊಸಬರು?”

ಇದೊಂದೇ ಹೊಸಪ್ರಶ್ನೆ ಅವನಿಗೆ!

“ಒಬ್ಬ ಮಫ್ಲರ್ ಧರಿಸಿದ ವ್ಯಕ್ತಿ ಎರಡು ದಿನದಿಂದ ಹೊಸದಾಗಿ ಕಾಣಿಸಿಕೊಂಡ ಸ್ವಾಮಿ...ಆದರೆ ಅವನ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ...ಆರು ಅಡಿ ಎತ್ತರ, ಸಾಧಾರಣ ಮೈಕಟ್ಟು...”

ಈ ವರ್ಣನೆ ಪ್ರಯೋಜನವಿಲ್ಲ, ಅಂತವರು ಸಾವಿರವಿದ್ದಾರು!

ಆಗ ಅದೃಷ್ಟವಶಾತ್ ತಲೆಯೆತ್ತಿ ಎದುರಿನ ಕಟ್ಟಡವನ್ನು ನೋಡಿದರು ಸಮರ್ಥ್. ಆಗ ಅಲ್ಲಿ ಮಹಡಿಯ ತೆರೆದ ಕಿಟಕಿಯ ಹಿಂದೆ ವೃದ್ಧನೊಬ್ಬನು ನಿಂತು ಇತ್ತಲೇ ನೋಡುತ್ತಿದ್ದಾನೆ. ಅದೇನು ಅಷ್ಟು ತದೇಕಚಿತ್ತದಿಂದ ರಸ್ತೆಯನ್ನು ನೋಡುತ್ತಿದ್ದಾನೆ?...ಸಮರ್ಥರಿಗೂ ಮೈ ಝುಮ್ಮೆಂದಿತು ಇದನ್ನು ಕಂಡು.

ಚಹಾದವನು ಅವರತ್ತ ನೋಡಿ, “ಆ ಮುದುಕನು ಎಲ್ಲೂ ಬರುವುದಿಲ್ಲ...ಬರೇ ರಸ್ತೆ ನೋಡುವುದೇ ಅವನ ಇಡೀ ದಿನದ ಕೆಲಸ...ಅಲ್ಲಿಗೇ ವಾಚಮನ್ನಿಗೆ ಹೇಳಿ ನನ್ನಿಂದ ದಿನಾ ಎರಡು ಬಾರಿ ಚಹಾ ಕೇಳಿ ತರಿಸಿಕೊಳ್ಳುತ್ತಾನೆ. ಚಹಾ ಕಪ್ ಮನೆಬಾಗಿಲ ಹೊರಗಿಟ್ಟರೆ ಖಾಲಿ ಮಾಡಿ ಅಲ್ಲೇ ಇಟ್ಟಿರುತ್ತಾನೆ!” ಎಂದಾಗ ಸಮರ್ಥ ತಲೆದೂಗಿದರು.

ಆಸಕ್ತಿಕರ ಮುದುಕ!. ಹೋಮ್-ಬಾಡಿ ಎನ್ನುತ್ತಾರಲ್ಲವೆ ಅಂತವರನ್ನು?..ಅಲ್ಲಿಂದಲೇ ಎಲ್ಲಾ ನೋಡುತ್ತಿರುತ್ತಾನಾ?

ಅವನೇನಾದರೂ ರಾತ್ರಿ ಇಲ್ಲಿ ಕೊಲೆಯಾದಾಗ?..ಎಂದು ಅರ್ಧ ಐಡಿಯಾ ತಲೆಗೆ ಬರುತ್ತಿದ್ದಂತೆಯೇ ದಬದಬನೇ ಓಡುತ್ತಾ ಆ ಕಟ್ಟಡದ ಮೆಟ್ಟಿಲ ಬಳಿ ತಲುಪಿದ್ದರು ಮನದಲ್ಲೇ ಥ್ರಿಲ್ ಆಗಿದ್ದ ಸಮರ್ಥ್!


5


ಡಿಟೆಕ್ಟಿವ್ ಸಮರ್ಥ್ ಮೊದಲು ಆ ಕಟ್ಟಡದಲ್ಲಿ ವಯಸ್ಸಾದ ಖಾಕಿ ಸಮವಸ್ತ್ರ ಹಾಕಿದ್ದ ವಾಚಮನ್ನನ್ನು ಹುಡುಕಿ ವಿಚಾರಿಸಿದರು.

“ಇಲ್ಲಿ ಸಿ.ಸಿ.ಟಿ.ವಿ ಯಾಕಿಲ್ಲ...?”

ವಾಚ್ಮನ್ ಸಮರ್ಥರಿಗೇ ದೂರು ಕೊಡಲು ಮುಂದಾದ, “ಸಾರ್, ಅದು ಕೆಟ್ಟು ಒಂದು ತಿಂಗಳಾಗಿದೆ. ರಿಪೇರಿ ಆಗಬೇಕು ಅಂತಾ ಎಷ್ಟು ಹೇಳಿದರೂ ಇಲ್ಲಿನ ಅಸೋಸಿಯೇಷನ್ ಕಿವಿಗೇ ಹಾಕಿಕೊಳ್ಳುವುದಿಲ್ಲ...ಯಾರಿಗೂ ಜವಾಬ್ದಾರಿನೇ ಇಲ್ಲ ಇಲ್ಲಿ ಅಂತೀನಿ...!”

ಸಮರ್ಥ್ ಗಮನಿಸಿದ್ದಂತೆ ದುರ್ದೈವದಿಂದಲೋ ಹುಂಬತನದಿಂದಲೋ ‘ಪಾರದರ್ಶಕ’ ಪತ್ರಿಕಾ ಕಚೇರಿಯಲ್ಲೂ ಸಿ.ಸಿ.ಟಿ.ವಿ ವ್ಯವಸ್ಥೆ ಇನ್ನೂ ಮಾಡಿರಲಿಲ್ಲ. ಹ್ಮಂ! ಎಂದು ನಿರಾಸೆಯಿಂದ ನಿಟ್ಟುಸಿರಿಟ್ಟರು.

“ಇಲ್ಲಿ ಮಹಡಿ ಮನೇಲಿ ಒಬ್ಬ ವಯಸ್ಸದವರಿದ್ದಾರಲ್ಲವೇ?,ಅವರಿಗೆ ಗೊತ್ತಿರಬಹುದಾ ಅಂತಾ...” ಎಂದು ರಾಗವೆಳೆದರು ಸಮರ್ಥ್.

“ಆ ಟಾಪ್ ಫ್ಲೋರ್ ಮುದುಕನಾ?. ಅವ್ನು ಕರುಣಾಕರ್ ಅಂತಾ, 60 ವರ್ಷಾ ಆಗಿರಬೇಕು. ಒಂಟಿ ಪ್ರಾಣಿ!....ಅವನಿಂದ ನಿಮಗೆ ಪ್ರಯೋಜನವಿಲ್ಲ...ಉ ಹೂಂ!” ಎಂದ ಅಷ್ಟೇ ವಯಸ್ಸಾಗಿದ್ದ ವಾಚ್ ಮನ್.

“ವಯಸ್ಸಾದವರೆಲ್ಲಾ ಅಪ್ರಯೋಜಕರು ಅಂತಾ ನಿನ್ನ ಅಭಿಪ್ರಾಯವೆ? ನೀನೂ ಆ ಗುಂಪಿಗೆ ಸೇರುತ್ತೀಯಲ್ಲವೆ?” ಎಂದು ಕುಟುಕಿದರು.

ವಾಚ್‌ಮನ್ ತಬ್ಬಿಬ್ಬಾದ. ಮುಜುಗುರದಿಂದ, “ಹಾಗಲ್ಲಾ ಸಾರ್. ನಾನು...” ಎನ್ನಲು ಶುರುಮಾಡಿದಾಗ, ಸಮರ್ಥರ ತಾಳ್ಮೆಯೂ ಕಡಿಮೆಯಾಗುತ್ತಿತ್ತು.

“ಸಾಕು ನಿನ್ನ ಎಕ್ಸ್ಪರ್ಟ್ ಕಾಮೆಂಟ್ಸ್!...ಮೊದಲು ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗು..ಕಮಾನ್!”

ಸಮರ್ಥ್ ಅವರು ಕರುಣಾಕರ್ ಎಂಬ ಆ ಸಾಕ್ಷಿಯ ಮನೆಗೆ ಹೋಗಿ ಒಂದು ಗಂಟೆ ಅಲ್ಲಿದ್ದು ವಾಪಸ್ ಬಂದರು. ಮರಳಿದಾಗ ಅವರ ಕಂಗಳಲ್ಲಿ ಯಾವುದೋ ಆಶಾಕಿರಣ ಹೊಳೆಯುತಿತ್ತು. ಆದರೆ ಅವರ ಮಿದುಳು ಬಿರುಸಾಗಿ ಮುಂದಿನ ಯೋಜನೆ ಮಾಡುತ್ತಿತ್ತು.

ಸಮರ್ಥ್ ತಮ್ಮ ಕಚೇರಿಯ ಬಳಿಗೆ ಬಂದಾಗ ಅಲ್ಲಿ ಪತ್ರಕರ್ತರೂ, ಟಿ.ವಿ ಮಾಧ್ಯಮದವರು ಆಗಲೇ ಬೀಡುಬಿಟ್ಟಿದ್ದರು. ತಮ್ಮವರಲ್ಲೇ ಒಬ್ಬನಾದ ಹತ್ಯೆಯಾದ ಪತ್ರಕರ್ತ ರಘುವೀರನನ್ನು ಮತಭೇಧ, ವೃತ್ತಿ ಮತ್ಸರ ಮರೆತು ಗುಣಗಾನ ಮಾಡುತ್ತಾ ಪೋಲೀಸರನ್ನೂ ಸರಕಾರವನ್ನೂ ಆ ಬಗ್ಗೆ ಹಳಿಯುತ್ತಿದ್ದರು.

ಎಲ್ಲರೂ ಸಮರ್ಥ್ ಕಾಣಿಸಿದ ಕೂಡಲೇ ಅವರನ್ನು ಸುತ್ತುವರೆದು ಮುಖಕ್ಕೆ ಮೈಕುಗಳನ್ನು ತುರುಕಿ ಒಬ್ಬರ ಮೇಲೊಬ್ಬರು ಬೀಳುತ್ತಾ ಪ್ರಶ್ನೆಗಳ ಸುರಿಮಳೆ ಹಾಕಿದರು.

ಸಮರ್ಥ್ ಗಂಭೀರವಾಗಿ ಅವರನ್ನು ನಿಭಾಯಿಸುತ್ತಾ ಹೇಳಿದರು,

“ನಮಗೆ ಕೊಲೆಗಾರನ ಚಹರೆ ಬಗ್ಗೆ ಯಾವ ಗುರುತರ ಸುಳಿವೂ ಇನ್ನೂ ಸಿಕ್ಕಿಲ್ಲ. ಯಾವುದೋ ಕಾಣದ ಕೈ ಕೆಲಸ ಮಾಡಿದೆ! ಇನ್ನೂ ಸಮಯ ಬೇಕು!” ಎಂದು ಸಪ್ಪೆ ಮುಖದಿಂದ ನುಡಿದು ತುಟಿಯುಬ್ಬಿಸಿ ಒಳಹೋದರು.

ಸುದ್ದಿಗಾರರೆಲ್ಲರೂ ತಂತಮ್ಮ ವರದಿ ಮೊದಲು ಫೈಲ್ ಮಾಡಲು ಅಲ್ಲಿಂದ ದೌಡಾಯಿಸಿದರು. ಬ್ರೇಕಿಂಗ್ ನ್ಯೂಸ್ ಜ಼ಮಾನ ಅಲ್ಲವೆ ಇದು?

ಇದನ್ನು ತಮ್ಮ ಕ್ಯಾಬಿನ್ ಕಿಟಕಿಯಿಂದ ನೋಡಿದ ಕಮೀಶನರ್ ಶಂಕರರಾಯರು ತಮ್ಮ ಪ್ರಿಯ ಪತ್ತೇದಾರನ ಪೆಚ್ಚುತನಕ್ಕೆ ಕೈ ಕೈ ಹಿಸುಗಿಕೊಂಡರು.

“ಮೊದಲೇ ಪತ್ರಕರ್ತರೆಲ್ಲಾ ಈ ಘಟನೆಯಿಂದ ಉದ್ವೇಗದಿಂದಿದ್ದಾರೆ. ಹೀಗೆ ಇವರು ನಿರಾಶಾದಾಯಕವಾಗಿ ಉತ್ತರ ಕೊಟ್ಟರೆ ಮಾಧ್ಯಮದಲ್ಲಿ ನಮ್ಮನ್ನು ಜೀವಂತ ತಿಂದುಬಿಡುತ್ತಾರೆ, ಅಷ್ಟೇ!” ಎಂದು ಗಾಬರಿಪಡುತ್ತಾ ಸಮರ್ಥರನ್ನು ಹುಡುಕುತ್ತಾ ಓಡಿದರು.


6


ಸಮರ್ಥರ ಈ ಮಾಧ್ಯಮದ ಜತೆಯ ಸಂವಾದವನ್ನು ಟಿ.ವಿ.ಯಲ್ಲಿ ನೋಡುತ್ತಿದ್ದ ಮಾಫಿಯಾ ಮಂಜಣ್ಣ ಗಲಿಬಿಲಿಯಾದವನಂತೆ ಸ್ವಲ್ಪ ಅನುಮಾನ, ಸ್ವಲ್ಪ ಸಮಾಧಾನ ಬೆರೆತ ದನಿಯಲ್ಲಿ ಪಕ್ಕ ಕುಳಿತವನ ಪಕ್ಕೆ ತಿವಿದು,

“ಏನೋ, ಇದುವರೆಗೂ ಯಾರಿಗೂ ನಿನ್ನ ವಾಸನೆ ಹತ್ತಿಲ್ಲ, ಭೈರ? ನೀ ತುಂಬಾ ಲಕ್ಕೀ, ನಾವು ಸಹಾ!..ಆದರೆ ಯಾಕೋ ಎಲ್ಲಾ ಹೀಗೇ ಇರಲ್ಲ ಅನ್ನಿಸ್ತಿದೆ...ಪರಿಸ್ಥಿತಿ ಹೀಗಿರುವಾಗಲೇ ನಾನು ನಾಳೆ ನಿನಗೆ ಕಲ್ಕತ್ತಾ ರೈಲಿನ ಟಿಕೆಟ್ ಕೊಡಿಸುತ್ತೇನೆ...ನೀನು ಮೆತ್ತಗೆ ಇಲ್ಲಿಂದ ಗೊತ್ತಾಗದಂತೆ ಕಳಚಿಕೊಂಡುಬಿಡು. ಇಲ್ಲದಿದ್ದರೆ ನಿನ್ನನ್ನು ಇಲ್ಲಿಯವರು ಒಂದಲ್ಲಾ ಒಂದಿನಾ ಹಿಡಿದೇ ಹಿಡಿಯುವರು...”ಎಂದು ಭವಿಷ್ಯ ನುಡಿದ.

ಮಂಜಣ್ಣನಿಗೆ ಭೈರ ಇಲ್ಲಿರುವುದೂ ಒಂದು ಅಪಾಯ, ಭೈರ ಮತ್ತೆ ಈ ಕಡೆ ತಲೆಯೇ ಹಾಕದಿದ್ದರೂ ತುಂಬಾ ಒಳ್ಳೆಯದು ಎನಿಸತೊಡಗಿತ್ತು. ಯಾಕೆ ತಾನು ಪೋಲೀಸರು ಸಂದೇಹ ಪಡುವ ಈ ಅಪರಾಧಿಯನ್ನು ರಿಸ್ಕ್ ತೆಗೆದುಕೊಂಡು ಕಾಪಾಡಬೇಕೆಂದು?...ಅಂತವನನ್ನು ಮಾರ್ಕೆಡ್ ಮ್ಯಾನ್ ಅನ್ನುತ್ತಾರೆ...ಬೇರೆ ಹೊಸ ಮೀನುಗಳಿಲ್ಲವೇ ಕ್ರೈಮ್ ಸಮುದ್ರದಲ್ಲಿ?


ಭೈರನೂ ಗಡಿಬಿಡಿಯಲ್ಲಿ ಎದ್ದು ನಿಂತುಬಿಟ್ಟ, “ಹಾಂ! ನಾನು ಅಸ್ಸಾಮ್ ಮಿಜೋರಾಂ ಕಡೆ ಎಲ್ಲಾದರೂ ಗುರುತೇ ಸಿಕ್ಕದ ಬಾರ್ಡರ್ ಪ್ರದೇಶಕ್ಕೆ ಓಡಿಬಿಡುತ್ತೇನೆ...ನನ್ನನ್ನು ಹಿಡಿಯಲು ಈ ರಾಜ್ಯದ ಪೋಲೀಸರೇನು, ಯಾವ ರಾಜ್ಯದವರಿಗೂ ತಾಕತ್ತಿಲ್ಲ!...ಆರು ತಿಂಗಳು ಅಷ್ಟೇ , ಮಂಜಣ್ಣ, ಇದೇ ಗುಪ್ತ ಮುಖ ಹೊತ್ತು ಮತ್ತೆ ಬಂದು ಈ ಪೋಲಿಸನನ್ನೇ ಮಟಾಶ್ ಮಾಡಲಿಲ್ಲ ಅಂದರೆ ಕೇಳು... ಹಾ!” ಕಾಲು ನೆಲಕ್ಕೆ ಅಪ್ಪಳಿಸುತ್ತಾ ಹಠ ಹಿಡಿದ ಮಗುವಿನಂತೆ ಅಬ್ಬರಿಸಿದನು ಭೈರ. ಮಂಜಣ್ಣ ಅವನಿಗೆ ‘ಹೋಗು ಹೊರಡು’ ಎನ್ನುವಂತೆ ಸನ್ನೆ ಮಾಡಿದ.


ಕೂಡಲೇ ಆ ಗೋಡೌನಿನ ತನ್ನ ರೂಮಿಗೆ ಹೋಗಿ ಸಾಮಾನೆಲ್ಲವನ್ನು ಪ್ಯಾಕ್ ಮಾಡಿಕೊಳ್ಳಲು ಶುರು ಮಾಡಿದ. ಅವನಿಗೆ ತಕ್ಷಣ ಒಂದು ಐಡಿಯಾ ಹೊಳೆಯಿತು. ತನ್ನ ಕೈಮ್ ಲೋಕದ ಗುರು ‘ಶಾಟ್ ಶಬೀರ್’ ಹೇಳಿರಲಿಲ್ಲವೆ?... ‘ನಮ್ಮ ಬಗ್ಗೆ ಅನುಮಾನ ಬಂದವರನ್ನು, ನಮ್ಮನ್ನು ಗುರುತು ಹಿಡಿಯಬಲ್ಲವರನ್ನು ಎಂದೂ ಹಾಗೇ ಬಿಡಬಾರದು’ ಅಂತಾ.... ಹೌದು, ತಾನೇನು ಮಾಡುತ್ತಿದ್ದೇನೆ?... ಎಂದಾದರೂ ಆ ಸಾಕ್ಷಿ ಹೇಳಿದ ಚಹರೆ ಗುರುತಿನಿಂದ ಪೋಲೀಸ್ ಚಿತ್ರ ಕಲಾವಿದರು ತನ್ನ ಮುಖದ ಸ್ಕೆಚ್ ಹಾಕಿಬಿಡುತ್ತಾರೆ. ಅದಕ್ಕೆ ತಾನು ಹಾಕಬಹುದಾದ ಗಡ್ಡ, ಟೋಫನ್ ಎಲ್ಲಾ ಬೆರೆಸಿ ಕಂಪ್ಯೂಟರಿನಲ್ಲಿ ಹಲವು ನಮೂನೆಗಳನ್ನು ತಯಾರಿಸಿಬಿಡುತ್ತಾರೆ. ಎಲ್ಲಾ ರಾಜ್ಯದ ಪೋಲೀಸರಿಗೂ ಅವನ್ನು ರವಾನಿಸಿಬಿಡುತ್ತಾರೆ. ಆಗ?... ತಾನು ಎಲ್ಲಿ ಹೋದರೂ ಸಿಕ್ಕಿಹಾಕಿಕೊಳ್ಳುತ್ತೇನೆ. ಇಲ್ಲ, ಹಾಗಾಗಬಾರದು ಎಂಬ ಚಿಂತೆಯಿಂದ ಅವನ ಮೈಯಲ್ಲಿ ಭಯದಿಂದ ತಣ್ಣನೆ ಬೆವರೊಡೆಯಿತು....ತನ್ನ ಅಪರಾಧ ಜೀವನವೇ ಅಲ್ಲಿಗೆ ಅಂತ್ಯವಾಗಿ ನನ್ನನ್ನು ಬಂಧಿಸಿ, ಖಂಡಿತಾ ಗಲ್ಲಿಗೇರಿಸಿಬಿಡುತ್ತಾರೆ ಎಂಬ ಯೋಚನೆ ಸುಳಿದು ಅವನ ಎದೆ ಢವಗುಟ್ಟಿತು.


ಅವನು ಮತ್ತೆ ಆತ್ಮವಿಶ್ವಾಸ ತುಂಬಿಕೊಳ್ಳುತ್ತಾ ತನ್ನ ಕ್ರೂರ ಮನಸ್ಸು ಆಜ್ಞಾಪಿಸಿದಂತೆ ಮಾಡಲು ನಿರ್ಧರಿಸಿಯೇ ಬಿಟ್ಟ.

ಆ ಸಾಕ್ಷಿ ಹೇಳಬಲ್ಲ ಮುದುಕನಿನ್ನೂ ಪೋಲೀಸಿಗೆ ಸಿಕ್ಕಿಲ್ಲ ಎಂದಾಯಿತು. ಸಿಕ್ಕಿದ್ದರೆ ತಡಮಾಡದೇ ಪೋಲೀಸರು ತನ್ನ ಚಹರೆಯನ್ನು ಟಿ.ವಿ, ಪೇಪರಿನಲ್ಲಿ ಪ್ರಕಟಿಸಿಬಿಟ್ಟಿರುತ್ತಿದ್ದರು. ಅಂದರೆ ಅವನು ಚಹರೆ ಸುಳಿವಿನ್ನೂ ಕೊಟ್ಟಿಲ್ಲ. ಈಗಲೇ ಆ ಸಾಕ್ಷಿಯನ್ನೂ ಕೊಂದುಬಿಟ್ಟು ತಾನು ಊರು ಬಿಟ್ಟರೆ ಈ ಕೇಸಿನ ಎಲ್ಲಾ ಲೂಸ್ ಎಂಡ್ಸ್ ಕಟ್ಟಿ ಮುಗಿಸಿದಂತಾಗುವುದು, ಅದೇ ತನಗೆ ಉಚಿತ ಎಂದು ಭಾವಿಸಿ ಅಂದು ರಾತ್ರಿಯೇ ಆ ಮದುಕನನ್ನು ಆಹುತಿ ತೆಗೆದುಕೊಳ್ಳಲು ಪ್ಲಾನ್ ಮಾಡಿಬಿಟ್ಟ.


7


ರಾತ್ರಿ 11.30 ದಾಟಿದೆ. ಬುಲೆಟ್ ಭೈರನು ಕರುಣಾಕರ್ ಎಂಬ ಸಾಕ್ಷಿಯಿದ್ದ ಮಹಡಿ ಅಪಾರ್ಟಮೆಂಟಿನ ಹಿಂದಿನ ಬೇಲಿ ಹಾರಿ ಗೋಡೆಯ ಬಳಿ ಸಮೀಪಿಸಿದನು. ಮೊದಲು ಭೈರ ವೆರಾಂಡದಲ್ಲಿ ನಿದ್ದೆ ಹೊಡೆಯುತ್ತಿದ್ದ ವಾಚ್ಮನ್ನನ್ನು ನೋಡಿ ಮಹಡಿ ಮನೆಯವರೆಗೂ ಹೋಗುವ ಮಳೆನೀರಿನ ಪೈಪಿನ ಬಳಿಗೇ ಬಂದು ಅದನ್ನು ಹಲವು ವರ್ಷಗಳ ಅನುಭವಕ್ಕೆ ತಕ್ಕಂತೆ ಸಲೀಸಾಗಿ ಏರತೊಡಗಿದನು.


ಮಹಡಿಯ ಟೆರೇಸಿಗೆ ಶೀಘ್ರವೇ ತಲುಪಿದ ಭೈರ ಅಲ್ಲಿಂದ ಮನೆ ಮೆಟ್ಟಿಲಿನ ರೂಮಿಗಿದ್ದ ಬಾಗಿಲನ್ನು ಕಂಡು ಅವನ ಕಠಿಣ ಮುಖದಲ್ಲಿ ಸಣ್ಣ ಮುಗುಳ್ನಗೆ ತೇಲಿತು. ಹಾಲಿನಂತೆ ಹರಡಿದ್ದ ಚಂದ್ರನ ಬೆಳದಿಂಗಳಿನಲ್ಲಿ ಅವನಿಗೆ ತನ್ನಲ್ಲಿದ್ದ ಡ್ಯೂಪ್ಲಿಕೇಟ್ ಬೀಗದಕೈ ಗೊಂಚಲಿನಿಂದ ಸರಿಯಾದ ಚಾವಿ ಆರಿಸಿಕೊಳ್ಳಲು ಮೂರು ನಿಮಿಷ ಹಿಡಿದಿರಬಹುದು ಅಷ್ಟೆ. ಬಾಗಿಲು ತಳ್ಳಿ ಮೆಟ್ಟಿಲ ಮೇಲೆ ಕಾಲಿಟ್ಟವನು ಜೇಬಿನಲ್ಲಿದ್ದ ಸೈಲೆನ್ಸರ್‌ಯುಕ್ತ ರಿವಾಲ್ವರನ್ನು ಒಮ್ಮೆ ಮುಟ್ಟಿನೋಡಿಕೊಂಡ. ಅವನ ಮುಖದಲ್ಲಿ ಇನ್ನೊಂದು ವಿಶ್ವಾಸದ ಮಂದಹಾಸ ಹಾದುಹೋಯಿತು. ಬೆಕ್ಕಿನ ಹೆಜ್ಜೆಯಿಟ್ಟು ಕಂಬಿಯಿಲ್ಲದ ಗಾಜಿನ ಕಿಟಕಿಯನ್ನು ತಳ್ಳಿ ಮನೆಯೊಳಗೇ ತೂರಿ ಧುಮುಕಿದ. ಕತ್ತಲಿನಲ್ಲಿ ಅದು ಚಿಕ್ಕ ಅಡುಗೆ ಮನೆಯಂತೆ ಕಂಡಿತು... ಸದ್ದಿಲ್ಲದೇ ಅಲ್ಲಿಂದ ಹಾಲಿಗೆ ನುಗ್ಗಿ ತನ್ನ ಕಂಗಳು ಕತ್ತಲಿನಲ್ಲಿ ಹೊಂದಿಕೊಂಡ ಕೂಡಲೇ ಎದುರಿಗಿನ ಬೆಡ್-ರೂಂ ಇರಬಹುದಾದ ಕೋಣೆಯ ಬಾಗಿಲನ್ನು ಲಘುವಾಗಿ ತಳ್ಳಿದ.

‘ಮೂರ್ಖ, ತಾನಂದುಕೊಂಡಂತೇ ಬಾಗಿಲೂ ಒಳಗಿಂದ ಹಾಕಿಕೊಂಡಿಲ್ಲ. ಒಂಟಿಜೀವವಿರಬೇಕು’. ಈ ಕೋಣೆಯ ಕಿಟಕಿಯೇ ತನ್ನ ಪ್ರಕಾರ ರಸ್ತೆಗೆ ಅಭಿಮುಖವಾಗಿದ್ದು ಅಲ್ಲೇ ಇವನು ನಿಂತು ತನ್ನನ್ನು ಅಂದು ನೋಡಿರಬೇಕಲ್ಲವೇ?

ಅದೋ ಅರೆ ತೆರೆದ ಬಾಗಿಲಿಂದ ಎದುರುಗೋಡೆಯಲ್ಲಿನ ಆ ಗಾಜಿನ ಕಿಟಕಿಯೂ ಕಾಣಿಸುತ್ತಿದೆ. ಮತ್ತು ಕೆಳಗಿನ ಬೀದಿ ದೀಪದ ಮಂದ ಬೆಳಕು ಅದರಿಂದ ಪ್ರತಿಫಲಿಸಿ ಇಲ್ಲಿಗೂ ಕಾಣುತ್ತಿದೆ. ಭೈರನ ಕೈಯಲ್ಲಿ ಧುತ್ತೆಂದು ಗನ್ ಪ್ರತ್ಯಕ್ಷವಾಯಿತು. ಮಂದ ಬೆಳಕಿನಲ್ಲಿ ಎದುರು ಮಂಚದ ಮೇಲೆ ಮಲಗಿದ್ದ ವೃದ್ಧನ ಮುಖವನ್ನೊಮ್ಮೆ ದಿಟ್ಟಿಸಿನೋಡಿದ. ಈಗ ಕಣ್ಣು ಮುಚ್ಚಿದ್ದಾನೆ ಬೆಳ್ಳಿಯಂತಾ ತಲೆಗೂದಲಿನ ಮುದುಕ!...ಇವನೇ, ಅನುಮಾನವೇ ಇಲ್ಲ!

ಢಂ!- ಒಮ್ಮೆಯೇ ರಿವಾಲ್ವರ್ ಸದ್ದು ಮಾಡಿತ್ತು.

ಆದರೆ ಬೈರನದಲ್ಲ, ಕತ್ತಲಲ್ಲಿ ತನ್ನ ಕೈಗೆ ಬಿದ್ದ ಗುಂಡೇಟಿಂದ ಹಾ! ಎಂದು ಚೀರಿ ನೆಲಕ್ಕೆ ಕುಸಿದಿದ್ದ ಸುಪಾರಿ ಕಿಲ್ಲರ್ ತನ್ನ ಗನ್ ಬೀಳಿಸಿಕೊಂಡು!

ಜಗ್ಗನೆ ರೂಮಿನಲ್ಲಿ ದೀಪ ಹೊತ್ತಿಕೊಂಡಿತು. ಬಾಗಿಲ ಹಿಂದೆ ಅವಿತಿದ್ದ ಮೂಲೆಯಿಂದ ಡಿಟೆಕ್ಟಿವ್ ಸಮರ್ಥ್ ಹೊರಬಂದು ಮಿಂಚಿನಂತೆ ಪಕ್ಕದಲ್ಲಿ ಬಿದ್ದಿದ್ದ ಗನ್ನನ್ನು ಕೈಗೆತ್ತಿಕೊಂಡು ರಕ್ತಸ್ರಾವವಾಗಿ ನೆಲದಲ್ಲಿ ಹೊರಳುತ್ತಿದ್ದ ಭೈರನತ್ತ ತಮ್ಮ ಹೊಗೆಯಾಡುತ್ತಿದ್ದ ಸರ್ವೀಸ್ ರಿವಾಲ್ವರ್ ಕೋಲ್ಟ್ 0.45 ಗುರಿ ಮಾಡಿ ಕಠಿಣ ದ್ವನಿಯಲ್ಲಿ ಎಚ್ಚರಿಸಿದರು, “ಹ್ಯಾಂಡ್ಸ್ ಅಪ್!...ಸುಟ್ಟುಬಿಡುತ್ತೇನೆ, ಭೈರ!..ನನಗೆ ಎರಡನೇ ಬುಲೆಟ್ ಹೊಡೆಯದವನೆಂಬ ದಾಖಲೆಯೇನಿಲ್ಲ!”

ಮಂಚದ ಮೇಲೆ ಅದುವರೆಗೂ ಮಲಗಿದ್ದ ಮುದುಕ ಎದ್ದು ಗಾಬರಿಯಿಂದ ಇತ್ತ ನೋಡುತ್ತಿರುವುದೂ ನೋವಿನಲ್ಲಿ ಮುಲುಗುತ್ತಿದ್ದ ಭೈರನ ಕಣ್ಣಂಚಿಗೆ ಕಾಣುತ್ತಿದೆ...

ಆಗ ಆ ಮುದುಕ ಮೊದಲ ಬಾರಿಗೆ ಮಾತಾಡಿದ, “ಇನ್ಸ್ಪೆಕ್ಟರ್, ನೀವೇ ತಾನೇ ಫೈರ್ ಮಾಡಿದ್ದು. ಅವನಿಗೆ ಬಿತ್ತೇ?”

“ಯೆಸ್, ನೀವೇನೂ ಚಿಂತಿಸಬೇಡಿ! ನಾನು ಬಂದು ಎಬ್ಬಿಸುವವರೆಗೂ ಅಲ್ಲೇ ಕುಳಿತಿರಿ” ಎಂಬುದು ಸಮರ್ಥರ ವಿಶ್ವಾಸಭರಿತ ದನಿಯಲ್ಲಿ ಸೂಚನೆ.

ಭೈರನಿಗೆ ಈಗ ಎಲ್ಲವೂ ಅರ್ಥವಾಗುತ್ತಿದೆ. ತಾನು ಎಂತಾ ಮೋಸ ಹೋದೆ!

“ಅವನು ಕುರುಡ?” ಎಂದ ಮುಲುಗುತ್ತಾ ಕ್ಷೀಣ ದನಿಯಲ್ಲಿ ಭೈರ.

ತನ್ನ ಮುಖಕ್ಕೆ ಬಿಗಿದಿದ್ದ ಮಫ್ಲರ್ ಕಳಚಿ ಕೈಗಾಯಕ್ಕೆ ಮುಲುಗುತ್ತಾ ಬಿಗಿದುಕೊಂಡ.

“ಈಗ ಇವರು ಪೂರ್ತಿ ಅಂಧರಾಗಿದ್ದಾರೆ. ಕೆಲವು ವರ್ಷಗಳಿಂದ ದೃಷ್ಟಿಹೀನತೆಯಿಂದ ಬಳಲಿ ಈಗೀಗ ಏನೂ ಕಾಣುವ ಸ್ಥಿತಿಯಲ್ಲಿಲ್ಲ...ಆದರೆ ಕರುಣಾಕರ್ ಸ್ವಾಭಿಮಾನಿ, ಒಂಟಿಯಾಗೇ ಸುತ್ತಮುತ್ತಲಿನವರಿಗೆ ಇದರ ಸೂಚನೆಯನ್ನೇ ಕೊಡದೇ ರಹಸ್ಯ ಕಾಪಾಡಿದ್ದರು!” ಎಂದು ಸಮರ್ಥ್ ಕೈಗೆ ರಕ್ತತಡೆಯಲು ಬಟ್ಟೆಕಟ್ಟಿ ಹೆಣಗುತ್ತಿದ್ದ ಭೈರನಿಗೆ ಉತ್ತರಿಸಿದರು.

“ನಾನು ಅಂದು ಇವನನ್ನು ನೋಡಿದ್ದೆ!” ಎಂದು ಅನ್ಯರ ರಕ್ತಸುರಿಸಿದವನು ತನ್ನ ರಕ್ತಸ್ರಾವಕ್ಕೆ ಇಂದು ಬೆದರಿ ತೊದಲಿದ.

“ಗೊತ್ತು, ಭೈರ...ನೀನು ರಘುವೀರನನ್ನು ಕೊಂದಾಗ ಎಂದಿನಂತೆ ನಿದ್ದೆ ಹತ್ತುವವರೆಗೂ ರಸ್ತೆ ನೋಡುವುದು ಇವರ ಹವ್ಯಾಸ, ನೋಡುತ್ತಿದ್ದರು. ಕುರುಡರಿಗೆ ಅಂಧತ್ವವನ್ನು ಒಪ್ಪಿ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ತೆರೆದ ಕಂಗಳಿಂದ ಸುಮ್ಮನೇ ನೋಡುತ್ತಿರುತ್ತಾರೆ...ಹೊರಗಡೆ ಪ್ರಪಂಚದ ಜನ್ಮದುದ್ದದ ಸಂಪರ್ಕ ಅವರನ್ನು ಕಾಡುತ್ತಿರುತ್ತದಲ್ಲ? ಆದರೆ ಅಂದು ನಿಮ್ಮ ಸಂಭಾಷಣೆಯನ್ನು ಅವರು ಇಲ್ಲಿಂದಲೇ ಕೇಳಿಸಿಕೊಂಡಿದ್ದರು. ನೀನು ಅವರನ್ನು ಕಂಡು ನಿನ್ನ ಡ್ರೈವರಿಗೆ ‘ಮೇಲೊಬ್ಬ ಮುದುಕ ನನ್ನನ್ನು ನೋಡಿದ, ಅವನನ್ನೂ ಕೊಂದು ಬರುತ್ತೇನೆ ’ ಎಂದಿದನ್ನೂ, ಆಗ ಡ್ರೈವರ್ ಅವಸರದಿಂದ ನಿನಗೆ ಅವಕಾಶ ಕೊಡದೇ ಎಳೆದುಕೊಂಡು ಹೋಗಿದ್ದನ್ನೂ ಕೇಳಿಸಿಕೊಂಡಿದ್ದರು. ನಿನ್ನೆ ನಾನು ಇವರನ್ನು ಭೇಟಿಯಾದಾಗಲೇ ತಿಳಿದುಬಂದಿದ್ದು!. ನನಗರ್ಥವಾಯಿತು, ನೀನು ನಿನ್ನ ಸಾಕ್ಷಿಯನ್ನು ಅಳಿಸಲು ಬಂದೇ ಬರುತ್ತೀಯೆಂದು...ನಾನೊಂದು ನಾಟಕ ಏರ್ಪಡಿಸಿದೆ. ನೀನು ಈ ದುಸ್ಸಾಹಸ ಮಾಡಲು ಹೋಗಿ ನನ್ನ ಜಾಲದಲ್ಲಿ ಸಿಕ್ಕಿಬಿದ್ದೆ!”


ತನ್ನ ಸರಿಯಿದ್ದ ಕೈಯನ್ನು ಭೈರ ನೆಲಕ್ಕೆ ನಿರಾಸೆ ಭರಿತ ಕೋಪದಿಂದ ಕುಟ್ಟಿ ಕಿರುಚಿದನು, “ಅಯ್ಯೋ, ಒಬ್ಬ ಕುರುಡು ಸಾಕ್ಷಿಯನ್ನು ಕೊಲ್ಲಲು ಹೋಗಿ ನಾನು ಸಿಕ್ಕಿಕೊಂಡೆನಲ್ಲಾ!” “ನೀನು ಊರು ಬಿಟ್ಟು ಹೋಗಿದ್ದರೆ ನಮಗೆಂದೂ ಸಿಗುತ್ತಲೇ ಇರಲಿಲ್ಲ, ನಿನ್ನ ಮುಖ ಚಹರೆಯೂ ನಮಗೆ ಗೊತ್ತಿರಲಿಲ್ಲ...ಆದರೆ ವಿಧಿ ನಮ್ಮ ಕಡೆಯಿತ್ತು. ಸಾಕ್ಷಿ ನಿನ್ನನ್ನು ಕಂಡನೆಂದುಕೊಂಡೆ. ಆದರೆ ಸಾಕ್ಷಿ ಕಾಣದ್ದನ್ನು ನಾನು ಕಂಡೆ. ಎಲ್ಲವನ್ನೂ ನೋಡುವ ಕಾಣದ ಸಾಕ್ಷಿ ಒಬ್ಬ ಮೇಲಿದ್ದಾನೆಂದು ಯಾರೂ ಮರೆಯಬಾರದು!” ಎಂದು ಅವರು ಮುಗಿಸುತ್ತಿರುವಂತೆಯೇ ಹೊರಗೆ ಕಾಯುತ್ತಿದ್ದ ಮಿಕ್ಕ ಪೋಲಿಸರೂ ಒಳನುಗ್ಗಿ ಭೈರನನ್ನು ಬಂಧಿಸಿ ಕರೆದೊಯ್ದರು.

ಸಮರ್ಥ್ ಕರುಣಾಕರರನ್ನು ಎಬ್ಬಿಸಿ ಕರೆದೊಯ್ದರು. “ನಾನು ಹೇಳಿದ ಕಡೆ ಹೆಬ್ಬೆಟ್ಟು ಒತ್ತಿ, ನಿಮಗಿನ್ನೇನೂ ತೊಂದರೆ ಕೊಡುವುದಿಲ್ಲ” ಎಂದವರು, ಮೊಬೈಲಿನಲ್ಲಿ ಕಾಲ್ ಮಾಡಿ ಕಮೀಶನರ್ ಶಂಕರರಾಯರ ಬಳಿ ಈ ಕೇಸ್ ಯಶಸ್ವಿಯಾಗಿ ಮುಗಿದಿರುವ ಬಗ್ಗೆ ವಿವರಿಸತೊಡಗಿದರು.


ಅವರು ‘ಮಾಫಿಯಾ ಮಂಜನೂ ಇನ್ನು ಸಿಕ್ಕಿಬೀಳುತ್ತಾನೆ, ನಿರಂಜನರೂ ಮೇಯರ್ ಸ್ಥಾನದಿಂದ ಇಳಿಯುತ್ತಾರೆ , ಆಗ ವಿರೋಧ ಪಕ್ಷ ಮೊದಲಿಗಿಂತಾ ಸಬಲವಾಗುತ್ತೆ’ ಎಂದೆಲ್ಲಾ ಹೇಳುತ್ತಲೇ ಇದ್ದರು.


ಸಮರ್ಥ್ ನಗುತ್ತಾ ಕೇಳಿಸಿಕೊಂಡು ನೆಡೆದರು.


( ಮುಗಿಯಿತು)



Rate this content
Log in

Similar kannada story from Action