Nagesh Kumar CS

Action Crime

4.0  

Nagesh Kumar CS

Action Crime

ಸರಿದ ಪರದೆ- ಪತ್ತೇದಾರಿ ಕಥೆ

ಸರಿದ ಪರದೆ- ಪತ್ತೇದಾರಿ ಕಥೆ

14 mins
449


1


ಪ್ರತೀಕ್ ಕಾರಂತ್ ಚಲನಚಿತ್ರವನ್ನು ನೋಡುತ್ತಿದ್ದರೂ ಅವನ ಮನದಲ್ಲಿ ಎರಡು ಗಂಟೆಯ ಹಿಂದೆ ತನ್ನ ಪತ್ರಿಕಾ ಕಚೇರಿಯಲ್ಲಿ ನಡೆದ ಬಿಸಿ ವಾಗ್ವಾದದ ಚಿತ್ರವೇ ಸುಳಿಯುತಿತ್ತು. ಅವನನ್ನು ಸಸ್ಪೆಂಡ್ ಮಾಡಲು ಆರ್ಡರ್ ಮಾಡುತ್ತೇನೆ ಎಂದು "ಕರ್ನಾಟಕ ಸ್ಟಾಂಡರ್ಡ್" ಪತ್ರಿಕೆಯ ಚೀಫ್ ಎಡಿಟರ್ ವಿಶ್ವನಾಥ್ ಗೌಡ ಕೂಗಾಡಿದ್ದ. ತಾನು ಸುಳ್ಳು ಪೊಳ್ಳು ಸೆನ್ಸೇಷನಲ್ ನ್ಯೂಸ್ ಬರೆಯುತ್ತೇನಂತೆ. ‘ಲೇಝಿ ಲಬ್ಬರ್’ ಅಂತೆ.


ಅದಕ್ಕೇ ಮನಸ್ಸಿಗೆ ಬೇಸರವಾಗಿ ಆಫೀಸಿಂದ ಹೊರಬಿದ್ದು ಬಾರಿನಲ್ಲಿ ಎರಡು ಬಿಯರ್ ಕುಡಿದು ಈ ಹಳೇ ಇಂಗ್ಲೀಷ್ ಚಿತ್ರವನ್ನು ವೀಕ್ಷಿಸಲು ಮಧ್ಯಾಹ್ನದ ಶೋಗೆ ಎಂ ಜಿ ರೋಡಿನ ಬ್ಲೂಡೈಮಂಡ್ ಚಿತ್ರಮಂದಿರಕ್ಕೆ ಬಂದಿದ್ದು.

ಐದು ನಿಮಿಷದ ಕೆಳಗಷ್ಟೇ ಖಾಲಿ ಹೊಡೆಯುತ್ತಿದ್ದ ಆ ಚಿತ್ರಮಂದಿರದಲ್ಲಿ ಮೊದಲು ಕುಳಿತಿದ್ದಕ್ಕಿಂತಾ ಮೂರು ಸಾಲು ಹಿಂದಕ್ಕೇ ಹೋಗಿ ಸೀಟ್ ಆರಿಸಿಕೊಂಡು ಕಾಲು ಚಾಚಿಕೊಂಡು ತನ್ನ ತಲೆಯ ಹಿಂಭಾಗದ ದೊಡ್ಡ ನಾಣ್ಯದ ಅಗಲದ ಕೂದಲು ಉದುರಿದ ಬಾಲ್ಡ್ ಸ್ಪಾಟನ್ನು ಸವರಿಕೊಳ್ಳುತ್ತಾ ಕುಳಿತಿದ್ದ.


ಅಂದು ಒಂದೊಂದು ಸಾಲಿಗೆ ಒಬ್ಬರು ಇಬ್ಬರು, ಅಬ್ಬಬ್ಬಾ ಎಂದರೆ ನಾಲ್ಕು ವೀಕ್ಷಕರಿದ್ದರಬಹುದು ಅಷ್ಟೇ.

ತೆರೆಯ ಮೇಲಿನ ಚಿತ್ರದಲ್ಲಿ ವಿಲನ್ ಇದ್ದಕಿದ್ದಂತೆ ಮೇಜಿನ ಕೆಳಗಿಂದ ಗನ್ ತೆಗೆದುಕೊಂಡು ಎದುರಿದ್ದವನಿಗೆ ಶೂಟ್ ಮಾಡಿದ. ಮುನ್ನೆಚ್ಚರಿಕೆಯಿಲ್ಲದೇ ಹಿನ್ನೆಲೆ ಸಂಗೀತದೊಂದಿಗೆ ಬಂದ ಈ ದೃಶ್ಯಕ್ಕೆ ಎಲ್ಲರೂ ಚಕಿತರಾಗಿಬಿಟ್ಟರು. ಒಬ್ಬ ಹುಡುಗಿ ಹಿಂದಿನ ಸಾಲಿನಲೆಲ್ಲೋ ‘ಓ ಮೈ ಗಾಡ್’ ಎಂದು ಕಿರುಚಿ ಮತ್ತೆ ತಾನೇ ತನ್ನ ಪೆಚ್ಚುತನಕ್ಕೆ ನಕ್ಕು ತೆಪ್ಪಗಾದಳು. ಆದರೆ ಪರದೆ ಮೇಲಿದ್ದ ನಟ ಆ ಗುಂಡೇಟು ತಪ್ಪಿಸಿಕೊಂಡು ನಾಟಕೀಯವಾಗಿ ಪಕ್ಕಕ್ಕೆ ಜಿಗಿದು ಬಿದ್ದ. ವಿಚಿತ್ರವೆಂದರೆ ಪ್ರತೀಕನಿಗೆ ಅದು ನಿಜವೇನೋ ಎಂಬಂತೆ ಅದರ ಬೆಂಕಿ ಮತ್ತು ಸದ್ದು ಭಾಸವಾಗಿತ್ತು.

ಅದಕ್ಕಿಂತಾ ನಾಟಕೀಯವಾಗಿ ಪ್ರತಿಕ್ರಿಯಿಸಿದವನು -ಪ್ರತೀಕನ ಮುಂದಿನ ಸಾಲೊಂದರಲ್ಲಿ ಕುಳಿತಿದ್ದ ವೀಕ್ಷಕನೊಬ್ಬ ತಾನೂ ಸೀಟಿನಲ್ಲೇ ಎಗರಿ ಕೆಳಕ್ಕೆ ಕುಸಿದು ಕುಳಿತ.. ಅನುಭವೀ ಕ್ರೈಮ್ ರಿಪೋರ್ಟರ್ 40 ವರ್ಷ ವಯಸ್ಸಿನ ಪ್ರತೀಕನ ಕಂಗಳು ಆ ವೀಕ್ಷಕ ಕುಳಿತಿದ್ದ ಸೀಟನ್ನೇ ಯಾಕೋ ಒಮ್ಮೆ ಗಮನಿಸಿದವು. ಬಹಳವೇ ಕಾಕತಾಳೀಯವಾಗಿ ಆ ತೆರೆಯ ಮೇಲಿನ ಗುಂಡು ಗುರಿ ತಪ್ಪಿ ಚಿತ್ರಮಂದಿರದೊಳಕ್ಕೇ ನುಗ್ಗಿ ಹೊಡೆದಂತೆ ಭಾಸವಾಯಿತು!.


ಅವನಿಗೇಕೋ ಪುನಃ ಚಿತ್ರದ ಮೇಲೆ ಆಸಕ್ತಿ ಬರಲಿಲ್ಲ. ಮತ್ತೆ ಮತ್ತೆ ಆ ವೀಕ್ಷಕನಿದ್ದ ಕಡೆ ದೃಷ್ಟಿ ಹರಿಯಿತು. ಅವನು ಕುಸಿದು ಕುಳಿತಿದ್ದಂತೆ ಥಿಯೇಟರಿನ ಮಿಣುಕು ಬೆಳಕಲ್ಲಿ ಮಸುಕಾಗಿ ಕಾಣುತಿತ್ತು. ಪ್ರತೀಕ್ ಸರಕ್ಕನೇ ಎದ್ದ. ಯಾರಿಗೂ ಗಾಬರಿಯುಂಟು ಮಾಡದಂತೆ ಆ ವೀಕ್ಷಕ ಕುಳಿತಿದ್ದ ಸೀಟಿನ ಬಳಿಗೆ ಸಾಗಿದ.


ಅಂದಾಜಿನಲ್ಲಿ ಕಾಲುಹಾಕುತ್ತಾ ಅವನ ಬಳಿಗೆ ತಲುಪಿದಾಗ ಪ್ರತೀಕ್ ಕಂಡಿದ್ದೇನು? ಎರಡು ಸೀಟುಗಳ ನಡುವ ಸಿಕ್ಕಿ ಹಾಕಿಕೊಂಡಂತೆ ನಿಶ್ಚಲವಾಗಿ ಕುಸಿದಿದ್ದ ಅವನ ದೇಹವನ್ನು!


ತಲೆ ಕೆಳಗೆ ವಾಲಿತ್ತು, ಅವನು ಧರಿಸಿದ್ದ ಜ್ಯಾಕೆಟ್ ಸುಕ್ಕುಸುಕ್ಕಾಗಿ ಅಲ್ಲೇ ಹರಡಿಕೊಂಡಿತ್ತು. ಪರದೆಯ ಮೇಲೆ ಬರುತ್ತಿರುವ ಸಿನೆಮಾದ ಚಲಿಸುವ ಬೆಳಕಿನಲ್ಲಿ ಅವನಿಗೆ ಆತನ ತಲೆಯ ಹಿಂಭಾಗದಲ್ಲಿ ಕತ್ತಿನ ಬಳಿ ರಕ್ತ ಸೋರುತ್ತಿರುವುದೂ ಕಂಡಿತು.

ಉಸ್ಸ್ ಎಂದು ಉಸಿರೆಳೆದುಕೊಂಡ ಪ್ರತೀಕ್ ಅತ್ಯಾಶ್ಚರ್ಯ ಮಿಶ್ರಿತ ಗಾಬರಿಯಿಂದ!


ನಗರದ ಉತ್ತಮ ಅಪರಾಧ ವರದಿಗಾರನಾದ ಪ್ರತೀಕನಿಗೆ ಸಾವು, ಅದರಲ್ಲೂ ಹಿಂಸಾತ್ಮಕ ಹತ್ಯೆ ಹೊಸದೇನಾಗಿರಲಿಲ್ಲ. ಆದರೆ ಇವತ್ತು ಬೆಳಿಗ್ಗೆಯೇ ಆಫೀಸಿನಲ್ಲಿ ತನ್ನ ಬಾಸಿನಿಂದ ಅಪ್ರಿಯ ಮಾತು ಕೇಳಿದ್ದರಿಂದಲೋ ಅಥವಾ ಸಿನೆಮಾ ಮಂದಿರದಂತಾ ಸ್ಥಳದಲ್ಲಿ, ಯಾವುದೇ ಮುನ್ಸೂಚನೆಯಿಲ್ಲದೇ ಒಂದು ಹೆಣವನ್ನು ಕಂಡಿದ್ದರಿಂದಲೋ ತಲೆ ಅರೆಕ್ಷಣ ಮಬ್ಬಾಗಿ ಏನೂ ಮಾಡಲು ತೋಚದೇ ಸ್ಥಬ್ಧನಾದ. ಕೊಲೆಯಾದವನ ಮುಖ ಅಸ್ಪಷ್ಟವಾಗಿ ಕಂಡರೂ ಎಲ್ಲೋ ಮೊದಲೇ ಗಮನಿಸಿದ್ದಂತೆ, ಆದರೆ ನೆನಪಿಗೆ ಬರಲಿಲ್ಲ.

 ಅದೆಲ್ಲಾ ಅರೆಕ್ಷಣ ಮಾತ್ರ!. ಮತ್ತೆ ತಡಬಡಾಯಿಸಿಕೊಂಡು ಜಾಗರೂಕನಾದವನಿಗೆ ಏನು ಮಾಡಬೇಕೆಂದು ತಕ್ಷಣ ಯೋಚನೆಗಳು ಮುತ್ತಿಗೆ ಹಾಕಿದವು.

ಮೆಲ್ಲಗೆ ಓಡುತ್ತಾ ಯಾರಿಗೂ ಸಂಶಯ ಬರದಂತೆ ಬಾಗಿಲ ಬಳಿಯಿದ್ದ ನೌಕರನಿಗೆ "ರಾಜಾರಾಮ್ ಎಲ್ಲಿ? ನಿಮ್ಮ ಮ್ಯಾನೇಜರ್?" ಎಂದ. ಅವನಿಗೆ ಪರಿಚಯವಿಲ್ಲದ ಸಿನೆಮಾ ಥಿಯೇಟರಿನವರೇ ಇಲ್ಲ!

ಅವನೂ ಪ್ರತೀಕನ ಗಾಬರಿಗೆ ಸ್ಪಂದಿಸಿ, "ಇಲ್ಲೇ ಇರಬೇಕು..." ಎಂದು ಬಾಕ್ಸ್ ಆಫೀಸಿನ ಪಕ್ಕದ ಕೋಣೆ ತೋರುತ್ತಿದ್ದಂತೆ ಪ್ರತೀಕ್ ಒಂದೇ ಉಸಿರಿಗೆ ಓಡಿದ್ದ.

ಆಗ ತಾನೆ ಅಲ್ಲಿಂದ ಹೊರಬರುತ್ತಿದ್ದ ಮ್ಯಾನೇಜರ್ ರಾಜಾರಾಮನಿಗೆ, "ನೋಡಯ್ಯಾ ಮೊದಲು ಬಾಗಿಲು ಭದ್ರ ಮಾಡು ಥಿಯೇಟರಿನದ್ದು. ಒಳಗೆ ಕೊಲೆಯಾಗಿ ಹೋಗಿದೆ" ಎಂದು ಜೋರು ದ್ವನಿಯಲ್ಲಿ ನುಡಿದ.

“ವಾಟ್! ”ಎಂದು ಮುಖದಿಂದ ರಕ್ತ ಇಳಿದುಹೋದವನಂತೆ ಕಣ್ಣರಳಿಸಿದ ರಾಜಾರಾಂ.

"ಯೆಸ್, ಒಳಗೆ ಒಬ್ಬ ವೀಕ್ಷಕನ ಹತ್ಯೆ, “ಇ” ಸಾಲಿನಲ್ಲಿ, ಸರಿಯಾಗಿ ವಿಲನ್ ಶೂಟ್ ಮಾಡಿದಾಗಲೇ ಆಯ್ತು.. ನಾನೇ ಹೆಣ ನೋಡಿದೆ" ಎಂದು ಜಬರಿಸಿ ಹೇಳಿದ ಪ್ರತೀಕ್ ಆ ಗಂಭೀರ ಸಂಧರ್ಭಕ್ಕೆ ತಕ್ಕಂತೆ.

ನಿಂತಲ್ಲೇ ಮುಖ ವಿವರ್ಣವಾಗಿ ಬಾಯಿ ಅದುರಿತು ಮ್ಯಾನೇಜರಿಗೆ "ನೀನೇ ನೋ,,ನೋಡಿದೆಯಾ? ಎ..ಎಲ್ಲಿ?" ಉತ್ತರಕ್ಕೆ ಕಾಯದೇ, ರಾಜಾರಾಂ ಬಾಗಿಲು ಕಾಯುವವನಿಗೆ ಕೂಗಿದ.

"ಕೊನೆಯ ಐದು ನಿಮಿಷದಲ್ಲಿ ಯಾರಾದರೂ ಹೊರಗೆ ಹೋಗಿದ್ದು ಕಂಡೆಯಾ"?

ಡೋರ್ ಮನ್ ಕಣ್ಣರಳಿಸಿ, "ಇಲ್ಲ...ಯಾರೂ ಇಲ್ಲ... ಇವರೇ ಈಗ ಬಂದಿದ್ದು" ಎನ್ನುತ್ತಾ ಪ್ರತೀಕನನ್ನೇ ತೋರಿಸಿದ.

ರಾಜಾರಾಮನ ಭುಜ ಹಿಡಿದು ಅಲ್ಲಾಡಿಸಿದ ಪ್ರತೀಕ್. "ಅದೆಲ್ಲಾ ಆಮೇಲೆ ಆಗಲಿ... ಮೊದಲು ಇಲ್ಲಿನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಸು... ಯಾರೂ ಇನ್ನು ಹೊರಗೆ ಹೋಗುವಂತಿಲ್ಲ... ಪೋಲಿಸಿಗೆ ಫೋನ್ ಮಾಡಿಸು... ಶೂಟ್ ಮಾಡಿ ಮರ್ಡರ್ ಆಗಿದೆ ಎಂದು ತಕ್ಷಣ ಎಂ ಜಿ ರಸ್ತೆ ಪೋಲೀಸ್ ಠಾಣೆಗೆ ಹೇಳು...ಕ್ವಿಕ್!"

ಪ್ರತೀಕನ ಅವಸರ ಅವನ ಮನಕ್ಕೆ ತಟ್ಟಿತು.."ಈಗ ಒಳಗಡೆ ಕ್ಲೈಮ್ಯಾಕ್ಸ್ ದೃಶ್ಯವೇ ನಡೆಯುತ್ತಿದೆ.. ಬಾಗಿಲು ತೆಗೆಯುವುದಿಲ್ಲ, ಪೋಲಿಸಿಗೂ ಹೇಳುತ್ತೇನೆ..ಚಿತ್ರವನ್ನು ಇದ್ದಕ್ಕಿದಂತೆ ನಿಲ್ಲಿಸಿದರೆ ಇನ್ನೂ ಹೆಚ್ಚು ಗೊಂದಲವಾಗುವುದು ಅಲ್ಲವೆ?’ ಎಂದು ನಾಲಗೆಯಿಂದ ತುಟಿ ಸವರಿಕೊಂಡ.

"ಹೌದು..." ಪ್ರತೀಕನ ಕಂಗಳು ಕಿರಿದಾದವು ಯೋಚನೆಯಿಂದ. "ಗುಡ್ ಥಿಂಕಿಂಗ್...ಎಲ್ಲಾ ಕ್ಲೋಸ್ ಮಾಡಿ, ಫಿಲಂ ಮುಗಿಯಲಿ..ಆಮೇಲೆ ಲೈಟ್ ಹಾಕಿ ಪೋಲೀಸರು ನುಗ್ಗಲಿ..." ಎನ್ನುತ್ತಿದ್ದಂತೆ ಮ್ಯಾನೇಜರ್ ರಾಜಾರಾಂ ತನ್ನ ಫೋನಿನತ್ತ ಓಡಿದ.

"ಅಯ್ಯೋ ಇದೆಂತಾ ದುರ್ಘಟನೆ, ನನ್ನ ಥಿಯೇಟರಿನಲ್ಲಿ...ಅಲ್ಲವೇ ಪ್ರತೀಕ್?" ಎನ್ನುತ್ತಿದ್ದವನನ್ನು ಹಿಂಬಾಲಿಸಿದ ಪ್ರತೀಕ್."

"ಹೌದು, ಮರ್ಡರ್ ಯಾರೋ ನೋಡಿ ಸರಿಯಾದ ಸಮಯಕ್ಕೆ ಮಾಡಿದ್ದಾರೆ!" ಎನ್ನುತ್ತಾ ಪ್ರತೀಕ್ ತನ್ನ ತಲೆಯ ಹಿಂಭಾಗದ ಬಕ್ಕ ಸ್ಥಳವನ್ನು ಮತ್ತೆ ಸವರಿಕೊಂಡ. ಅದೊಂದು ಅವನ ಚಟ.

2

 

ಅತ್ತ ರಾಜಾರಾಮ್ ಪೋಲಿಸರಿಗೆ ಉದ್ವಿಗ್ನ ದನಿಯಲ್ಲಿ ಮಾತಾಡಹತ್ತಿದ್ದ ಫೋನಿನಲ್ಲಿ.

ಅಲ್ಲಿದ್ದ ಇನ್ನೊಂದು ಲ್ಯಾಂಡ್ ಲೈನ್ ಫೋನನ್ನು ಕೈಗೆತ್ತಿಕೊಂಡ ಪ್ರತೀಕ್. ತನ್ನ ಕಚೇರಿಗೆ ಕಾಲ್ ಮಾಡಲೆಂದು.

ಅವನಿಗೆ ಅವತ್ತು ಬೆಳಿಗ್ಗೆ "ನಿನ್ನನ್ನು ಸಸ್ಪೆಂಡ್ ಮಾಡುತ್ತೇನೆ, ನೀನು ನಮಗೆ ಬೇಡ" ಎಂದಿದ್ದ ಬಾಸ್ ವಿಶ್ವನಾಥ ಗೌಡರ ಕರ್ಕಶ ದನಿ ಮತ್ತೆ ಕಿವಿಯಲ್ಲಿ ಮೊಳಗಿತು.

"ಹ್ಮ್!! ಹೌದಾ, ಹಾಗಾಗದೆಯೂ ಇರಬಹುದು" ಎಂದು ಅವನ ಮಾತು ನೆನೆಸಿಕೊಂಡು ವ್ಯಂಗ್ಯವಾಗಿ ತಾನೇ ನಸುನಗುತ್ತಾ ಡಯಲ್ ಮಾಡಿದ.

"ಚೀಫ್ ಎಡಿಟರ್ ವಿಶ್ವನಾಥ್ ಹಿಯರ್..."

"ನಾನೇ ನಿಮ್ಮ ಬಲಿಪಶು ಪ್ರತೀಕ್... ಕೇಳಿಸಿಕೊಳ್ಳಿ, ನಿಮಗೊಂದು ಬಿಸಿ ಸುದ್ದಿ...ಬ್ಲೂ ಡೈಮಂಡ್ ಚಿತ್ರಮಂದಿರದಲ್ಲಿ ಕೊಲೆಯಾಗಿದೆ...ನಾನೇ ಅದಕ್ಕೆ ಸಾಕ್ಷಿ!" ಪ್ರತೀಕನ ಮುಖದಲ್ಲಿ ಚಿಕ್ಕ ಗೆಲುವಿನ ನಗೆ ತೇಲಿತು.

"ಹಾ!" ಸ್ವಲ್ಪ ನಿಧಾನಕ್ಕೆ ನಕ್ಕರು ವಿಶ್ವನಾಥ್. "ಇಂತಾ ಕತೆಯನ್ನು ಯಾವುದಾದರೂ ಥರ್ಡ್ ರೇಟ್ ಪೇಪರಿಗೆ ಹೇಳು, ನನ್ನ ಕರ್ನಾಟಕ ಸ್ಟಾಂಡರ್ಡಿಗಲ್ಲ..."

"ಹೇಳಬಹುದು, ಆಮೇಲೆ ನೀವು ಕೈಕೈ ಹಿಸುಕಿಕೊಂಡೀರಿ ಎಂಬ ಕನಿಕರದಿಂದ..."

"ವೈಟ್, ವೈಟ್.. ಏನಂತದ್ದು?... ಮರ್ಡರ್ ಇನ್ ದ ಥಿಯೇಟರ್?" ವಿಶ್ವನಾಥರ ದನಿ ಸ್ವಲ್ಪ ಮೆದುವಾಯಿತು. ಪತ್ರಕರ್ತ ಎಂದೂ ನ್ಯೂಸ್ ತಿಳಿದುಕೊಳ್ಳದೇ ಬಿಡ!

ಸಂಕ್ಷಿಪ್ತವಾಗಿ ನಡೆದದ್ದು, ಇದುವರೆಗೂ ತಿಳಿದದ್ದು ಹೇಳಿದ ಪ್ರತೀಕ್.

"ನೋಡಿ, ನಿಮಗೇ ತಿಳಿದಂತೆ ನಾನು ಸಿಟಿ ಕೋರ್ಟಿನಲ್ಲಿ ಈಗ ವಿಚಾರಣೆ ನಡೆಯುತ್ತಿರುವ ಒಂದು ಕೋಲೆ ಕೇಸಿನಲ್ಲಿ ಮುಖ್ಯ ಸಾಕ್ಷಿ. ಮಧ್ಯದಲ್ಲಿ ಇವತ್ತು ಸುಮ್ಮನೆ ಒಂದು ಥಿಯೇಟರಿನಲ್ಲಿ ಚಿತ್ರ ನೋಡಲು ಹೋದೆ...ಸಿನೆಮಾದಲ್ಲಿ ವಿಲನ್ ಶೂಟ್ ಮಾಡಿದ ಸಮಯಕ್ಕೆ ನಿಜಕ್ಕೂ ಇಲ್ಲಿ ಗುಂಡು ಹಾರಿ ನನ್ನ ಮುಂದಿನ ಸಾಲೊಂದರಲ್ಲಿ ಕುಳಿತಿದ್ದವನಿಗೆ ತಗುಲಿ ಸತ್ತು ಬಿದ್ದ... ಹೇಗಿದೆ ಇಲ್ಲಿಯವರೆಗೂ?..."

"ನೋಡು ಪ್ರತೀಕ್!..ಆ ಕೋರ್ಟ್ ಕೇಸನ್ನು ನೀನು ಹಾಳು ಮಾಡುತ್ತಿದ್ದೀಯ, ಅದರ ವಿಷಯ ಬೇಡ, ಯಾಕೆಂದರೆ..." ವಿಶ್ವನಾಥ್ ಎನ್ನುತ್ತಿದ್ದಂತೆ ಅಡ್ಡಮಾತಾಡಿದ ಪ್ರತೀಕ್. ಸರಸರನೆ ಆ ಹಳೇ ಕೇಸಿನ ಸಾರಾಂಶ ನೆನಪಿಸಿದ:

"ಚೀಫ್, ನಾನು ಅಂದು ಜಾನ್ ಡಿಕಾಸ್ಟಾ ಅವರನ್ನು ಒಬ್ಬ ಗನ್‌ಮನ್ ಕೊಲೆ ಮಾಡಿದಾಗ ಇಪ್ಪತ್ತೇ ಅಡಿ ದೂರದಲ್ಲಿದ್ದೆ. ಆರು ತಿಂಗಳ ಹಿಂದೆ ಅದೇ ಗ್ರೀನ್ ಲೈನ್ ಬಾರಿನಲ್ಲಿ, ನೆನಪಿದೆಯಲ್ಲವೆ?... ಈ ಜಾನ್ ಡಿಕಾಸ್ಟಾ ಶೇರ್ ಮಾರ್ಕೆಟ್ಟಿನಲ್ಲಿ ಭಾರೀ ಕುಳ ಆಗಿದ್ದರಿಂದ ನಾನು ಪ್ರತ್ಯಕ್ಷ ಕೊಲೆಗಾರನನ್ನು ನೋಡಿದ್ದರಿಂದ ನಿಮಗೆ ತಕ್ಷಣವೇ ಟಿಪ್ ಕೊಟ್ಟೆ...ಅದೇ ಕಾರಣಕ್ಕೆ ನನಗೆ ನಿಮ್ಮ ಸಾಧಾರಣ ಪೇಪರಿನಲ್ಲಿ ಕ್ರೈಮ್ ರಿಪೋರ್ಟರ್ ಕೆಲಸ ಕಾಯಂ ಮಾಡಿದಿರಿ... ಕರೆಕ್ಟ್?"

ಆಗ ವ್ಯಂಗ್ಯ ಬೆರೆತ ದನಿಯಲ್ಲಿ ವಿಶ್ವನಾಥ್ ಮಾತು ಕತ್ತರಿಸಿದರು." ಹೌಹೌದು...ಇವತ್ತು ಆ ಕೇಸಿನ ವಿಚಾರಣೆಯಿತ್ತು. ನೀನು ಕೋರ್ಟಿಗೆ ಹೋಗಲಿ ಎಂದು ನಾನು ನಿನ್ನೆ ಮಧ್ಯಾಹ್ನ ಮತ್ತು ಇವತ್ತು ಎರಡು ಹಾಫ್ ಡೇ ಪರ್ಮಿಶನ್ ಕೊಟ್ಟೆ..ಆದರೆ ನೀನು ಮಾಡಿದ್ದೇನು? ನೀನೇ ಆ ಗ್ರೀನ್ ಲೈನ್ ಬಾರಿಗೆ ಹೋಗಿ ಕುಡಿದು ಸಿನೆಮಾಗೆ ಹೋದೆ.."

"ಓಹ್, ಅದು..ಆ ಕೇಸಿನ ದೃಶ್ಯಾವಳಿಯನ್ನು ಮನಸ್ಸಿನಲ್ಲಿ ಪುನರ್-ನಿರ್ಮಾಣ ಮಾಡಿಕೊಂಡರೆ ನ್ಯಾಯಾಲಯದಲ್ಲಿ ಸತ್ಯವನ್ನು ವಿವರವಾಗಿ ಹೇಳಬಹುದಲ್ಲ ಎಂದು ಅಬ್ಬಬ್ಬಾ ಅಂದರೆ ಎರಡು ಬಿಯರ್ ಕುಡಿದು ಯೋಚಿಸುತ್ತಿದ್ದೆ ಆ ಕೇಸಿನ ಬಗ್ಗೆ...ಅಂದರೆ ಆ ಕೊಲೆಗಾರ ಬಲರಾಂ ಬಂದು ಅಲ್ಲಿ ಹೇಗೆ ಜಾನ್ ಡಿಕಾಸ್ಟಾನನ್ನು ಶೂಟ್ ಮಾಡಿ ಕೊಂದ ಎಂದು...ಈಗ ಕೇಳಿಸಿಕೊಳ್ಳಿ ಚೀಫ್, ಅವತ್ತು ನಾನು ಬಲರಾಮನಿಗೆ ಹತ್ತಿರವಿದ್ದುದಕ್ಕಿಂತಾ ಇವತ್ತು ಥಿಯೇಟರಿನಲ್ಲಿ ಈತನಿಗೆ ಹತ್ತಿರವಿದ್ದೆ...ನೋಡಿದೆ ಅಂತೀನಿ!"

"ಹ್ಮ್ಮ್!" ಎಂದು ಬುಸುಗುಟ್ಟಿದರು ಇನ್ನೂ ಅರೆ ವಿಶ್ವಾಸದ ದನಿಯಲ್ಲಿ ವಿಶ್ವನಾಥ್.

"ನೋಡಿ ಚೀಫ್, ಈಗ ನನ್ನ ಜತೆ ನೀವಿದ್ದರೆ ಸೆನ್ಸೆಷನಲ್ ಕತೆಯ ಪೂರ್ತಿ ವರದಿ ಎಲ್ಲರಿಗಿಂತಾ ಮೊದಲು ನಿಮ್ಮ ಪೇಪರಿಗೇ ಸಿಗುತ್ತದೆ... ಅದು ಬಿಟ್ಟು ನೀವು ನಾನು ಬಿಯರ್ ಕುಡಿದಿದ್ದರ ಬಗ್ಗೆ ತಗಾದೆ ತೆಗೆಯುತ್ತಿರುವುದು ಎಷ್ಟು ಸರಿ?" ಪ್ರತೀಕ್ ವಾದದಲ್ಲಿ ಸುಲಭವಾಗಿ ಸೋಲ್ಪೊಪ್ಪದವ, ಮನವೊಲಿಸುವಲ್ಲಿ ಪರಿಣಿತ.

"ಓಕೆ..ಈ ಥಿಯೇಟರ್ ಕೊಲೆಯನ್ನು ಸರಿಯಾಗಿ ಸಾಲ್ವ್ ಮಾಡಿ ನಮಗೆ ವರದಿ ಹಾಕು.. ಆಗ ನಿನ್ನ ಮೇಲೆ ಆಕ್ಷನ್ ಬೇಡ ಎಂದು ನಾನೇ ಮ್ಯಾನೇಜುಮೆಂಟಿಗೆ ಹೇಳುತ್ತೇನೆ, ಬೆಟ್ ಕಟ್ಟು!..."ಎಂದರು ತಮಗಿದರಲ್ಲಿಯೂ ಹೆಚ್ಚು ವಿಶ್ವಾಸವಿಲ್ಲ ಎಂಬ ಅಪನಂಬಿಕೆಯ ಇಂಗಿತದಲ್ಲಿ.

“ ಬೇಡ ಬಿಡಿ, ನೀವಿದರಲ್ಲಿ ಸೋಲುತ್ತೀರಿ!”

ತನ್ನ ಟೀಮಿನ ಅಸಿಸ್ಟೆಂಟಿಗೆ ಚಿಕ್ಕ ನ್ಯೂಸ್ ಬ್ರೇಕ್ ವರದಿ ಕೊಟ್ಟು ಕಾಲ್ ಮುಗಿಸಿ ಕೋಣೆಯಿಂದ ಹೊರ ಬಂದ ಪ್ರತೀಕನ ಕಣ್ಣಿಗೆ ರಾಜಾರಾಮನ ಕರೆಗೆ ಸ್ಪಂದಿಸಿದ್ದ ಪೋಲಿಸ್ ಇನ್ಸ್ಪೆಕ್ಟರ್ ( ಹೋಮಿಸೈಡ್) ಇಬ್ರಾಹಿಂ ತಂಡ ಒಳಬಂದು ಕೆಲಸ ಆರಂಭಿಸಿದಂತೆ ಕಂಡಿತು.

ಚಲನಚಿತ್ರ ಮುಗಿದು ಲೈಟ್ಸ್ ಅಪ್ ಮಾಡಿ ಬಂದಿದ್ದ ಸುಮಾರು 50 ನೋಡುಗರನ್ನು ಅಲ್ಲೇ ಲಾಬಿಯಲ್ಲಿ ಎಲ್ಲೂ ಕದಲದಂತೆ ಕಲೆ ಹಾಕಿದ್ದರು.ಪ್ರತೀಕನತ್ತ ಇಬ್ರಾಹಿಂ ಇಶಾರೆ ಮಾಡಲು ಅವರೆಲ್ಲಾ ಚಿತ್ರಮದಿರದಲ್ಲಿ ಆ ಹೆಣದತ್ತ ನಡೆದರು

ಪೋಲಿಸರು ಆತನ ಶವವನ್ನು ಸರಿಯಾಗಿ ಮುಖ ಮೇಲೆ ಮಾಡಿ ಕುಳ್ಳಿರಿಸಿದರು. ಗುಂಡೇಟಿನಿಂದ ಅವನ ಶರ್ಟ್ ಕಾಲರ್, ಕೋಟಿನ ಬೆನ್ನು ರಕ್ತಸಿಕ್ತವಾಗಿತ್ತು.

ಆತನ ಬಗ್ಗೆ ಯಾವುದೋ ಮಸುಕಾದ ನೆನಪು ಮತ್ತೆ ಪ್ರತೀಕನ ಮನದಲ್ಲಿ ಹಾದುಹೋಯಿತು.

"ನೀವು ನಡೆದದ್ದನ್ನು ನೋಡಿದಿರಾ?"

"ಹೂಂ..."ಎಂದು ಪ್ರತೀಕ್ ನಡೆದಿದ್ದನೆಲ್ಲಾ ಹೇಳಿದ.

"ನೀವಿಬ್ಬರೂ ಪರದೆಯ ಕಡೆಗೇ ನೋಡುತ್ತಿದ್ದಿರಿ ಅಲ್ಲವೆ?"

"ಹೌದು"

"ಅಂದರೆ..." ಇನ್ಸ್ಪೆಕ್ಟರ್ ಇಬ್ರಾಹಿಂ ನುಡಿದರು. "ಗುಂಡು ಅವರ ತಲೆಯ ಹಿಂಭಾಗಕ್ಕೆ ಹೊಡೆದಿರುವುದರಿಂದ ಇಲ್ಲಿಂದಲೇ ಹಿಂದಿನಿಂದ ಯಾರೋ ಹೊಡೆದಿರಬೇಕು... ಹಾಗಾದರೆ ಗನ್ ಗುಂಡು ಹಾರಿಸಿದಾಗ ಇಲ್ಲಿ ಯಾರಿಗಾದರೂ ಕೇಳಿಸಿರಬೇಕಲ್ಲ?"

"ಮೊದಲನೆಯದು ಚಿತ್ರದಲ್ಲಿ ಶೂಟ್ ಮಾಡುವ ದೃಶ್ಯ ಮತ್ತು ಸೌಂಡ್ ಬಂದಾಗಲೇ ಇದೂ ಆಯಿತು. ಎರಡನೆಯದು, ಸೈಲೆನ್ಸರ್ ಹಾಕಿಕೊಂಡು ಹೊಡೆದಿದ್ದರೆ ಆಗ ಈ ಸದ್ದಿನ ಮಧ್ಯೆ ನಮಗೆ ಯಾರಿಗೂ ಕೇಳಿಸಿರೊಲ್ಲ!" ಪ್ರತೀಕ್ ತನಗೆ ತಿಳಿದ ಲಾಜಿಕ್ ಮುಂದಿಟ್ಟಿದ್ದ.

"ಅಲ್ಲದೇ ಇಲ್ಲಿರುವ 50 ಜನದಲ್ಲಿ ಯಾರು ಬೇಕಾದರೂ ಮಾಡಿರಬಹುದು" ಎಂದರು ಇಬ್ರಾಹಿಂ."ಯಾರೂ ಹೊರಗೋಗಿರದಿದ್ದರೆ!" ಎಂದು ವೀಕ್ಷಕರತ್ತ ನೋಡಿದರು.

3

 

 "ಇಲ್ಲಿರುವ ಅರ್ಧಕ್ಕರ್ಧ ಜನ ತರುಣರು, ವಿದ್ಯಾರ್ಥಿಗಳು... ಅವರನ್ನು ಹೋಗಲು ಬಿಡಬಹುದು ಅನಿಸತ್ತೆ! ದಫೇದಾರ್, ಒಮ್ಮೆ ಚೆಕ್ ಮಾಡಿ ಕಳಿಸಿ" ಎಂದು ಇಬ್ರಾಹಿಂ ಮ್ಯಾನೇಜರ್ ರಾಜಾರಾಮನತ್ತ ತಿರುಗಿದರು."ನೀವೇನಾದರೂ ನೋಡಿದಿರಾ?"

ಗಾಬರಿಯಾಗೇ ಕಾಣುತ್ತಿದ್ದ ರಾಜಾರಾಂ ಕೋಲೆ ಬಸವನಂತೆ ಅಡ್ಡ ತಲೆಯಾಡಿಸಿದ. "ಇಲ್ಲ, ಆಗ ತಾನೇ ಇವತ್ತು ಪ್ರೊಜೆಕ್ಟರ್ ಆಪರೇಟರ್ ಬರದಿದ್ದ ಕಾರಣ ನಾನೇ ಎಲ್ಲಾ ಚೆಕ್ ಮಾಡಿ ಆನ್ ಮಾಡಿ ನನ್ನ ಕ್ಯಾಬಿನ್ನಿಗೆ ವಾಪಸ್ ಹೋಗಿದ್ದೆ, ತೆರೆಯ ಮೇಲೆ ಗುಂಡು ಹೊಡೆಯುವ ಸೀನ್ ಬಂದಾಗ.. ನಾನು..."

“ಆಮೇಲೆ ಮಾತಾಡೋಣ!” ಇಬ್ರಾಹಿಂಗೆ ಅವನ ಗುರಿಯಿಲ್ಲದ ವಿವರಣೆ ಕೇಳಲು ಸಮಯವಿರಲಿಲ್ಲ.

ಶೀಘ್ರವೇ ಅವರವರ ಕರ್ತವ್ಯಗಳನ್ನು ಮಾಡಲು ಪೋಲೀಸ್ ಛಾಯಾಗ್ರಾಹಕರೂ, ಬೆರಳಚ್ಚು ಫೊರೆನ್ಸಿಕ್ ತಂಡದವರು, ಮತ್ತು ಡಾಕ್ಟರ್ ಎಲ್ಲಾ ಅಲ್ಲಿ ನೆರೆದರು,.

ಶವದ ಬಳಿ ಪಡೆದ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳ ಪ್ರಕಾರ ಅವನ ಹೆಸರು ಆನಂದ್ ಕುಮಾರ್ ಎಂದೂ, ವಯಸ್ಸು 35, ಮತ್ತು ಅವನು ಹತ್ತಿರದ ಕುಟುಂಬವಿಲ್ಲದೇ ಒಂಟಿಯಾಗಿದ್ದನೆಂದೂ ತಿಳಿದು ಬಂದಿತು.

ಅವನ ಬಳಿಯಿದ್ದ ಹೊಟೆಲ್ ಬಿಲ್ ಪ್ರಕಾರ ಅವನು ನಗರ್ತಪೇಟೆಯ ಅಷ್ಟೇನೂ ಜನಪ್ರಿಯವಲ್ಲದ ಪ್ರಭಾತ್ ಲಾಡ್ಜ್ ಎಂಬ ಕಡೆ ಸಿಂಗಲ್ ರೂಮಿನಲ್ಲಿದ್ದನೆಂದೂ, ಮತ್ತೂ ವಿಚಾರಿಸಿದಾಗ ಅವನೊಬ್ಬ ಆಗಾಗ ಚಿಕ್ಕ ಪುಟ್ಟ ಕೆಲಸ ಮಾಡುವ, ಮುಕ್ಕಾಲುವಾಸಿ ನಿರುದ್ಯೋಗಿಯಾಗಿದ್ದವ ಎಂದು ತಿಳಿದು ಬಂದಿತು.

"ಇಂತವನನ್ನು ಯಾರಾದರೂ ಯಾಕೆ ಶೂಟ್ ಮಾಡಿ ಇಲ್ಲಿ ಕೊಲ್ಲುತ್ತಾರೆ?" ಎಂದರು ಇಬ್ರಾಹಿಮ್ ಪ್ರತೀಕನತ್ತ ತಿರುಗಿ.

"ಅವನನ್ನು ಕೊಲ್ಲಲು ಆ ಚಿತ್ರದ ಸೀನನ್ನೇ ಕೊಲೆಗಾರ ಬಳಸಿದ್ದಾನೆ...ವಿಲನ್ ಶೂಟ್ ಮಾಡುವ ಸೀನ್"

"ಸೋ?" ಹುಬ್ಬೇರಿಸಿದರು ಇನ್ಸ್ಪೆಕ್ಟರ್.

"ಅಂದರೆ ಅವನು ಇಲ್ಲಿ ಇದ್ದ ಮತ್ತು ಚಿತ್ರವನ್ನು ಮೊದಲೇ ಒಮ್ಮೆಯಾದರೂ ನೋಡಿದ್ದ, ಆ ಸೀನ್ ಯಾವಾಗ ಬರುವುದೆಂದು ಕರಾರುವಾಕ್ಕಾಗಿ ಗೊತ್ತಿತ್ತು..."

ಇಬ್ರಾಹಿಂ ಬೆರಳುಗಳಿಂದ ಚಿಟಿಕೆ ಹೊಡೆದರು "ಹೌದು, ಅದು ನಿಜ.. ಈ ಚಿತ್ರ ಎಷ್ಟು ದಿನದಿಂದ ಪ್ರದರ್ಶಿತವಾಗುತ್ತಿದೆ, ರಾಜಾರಾಂ ?"

"ಮೂರು..ಇವತ್ತು ನಾಲ್ಕನೇ ದಿನ!" ರಾಜಾರಾಮ್ ಉತ್ತರಿಸಿದ ಯೋಚಿಸುತ್ತಾ "ನಮ್ಮ ಟಿಕೆಟ್ ಇಶ್ಶೂ ಮಾಡುವ ಮಣಿಗೆ ಕೇಳೋಣ...ಅವನಿಗೆ ಮುಖಗಳು ಚೆನ್ನಾಗಿ ನೆನಪಿರತ್ತೆ, ಯಾರಾದರೂ ಮತ್ತೆ ಮತ್ತೆ ಬಂದವರಿದ್ದಾರಾ ಇವತ್ತು ಎಂದು.. ಮಿನಿ ಥಿಯೇಟರ್ ಇದು, ಹೆಚ್ಚು ಜನ ಹಿಡಿಸಲ್ಲ"

ಆದರೆ ಮಣಿ ತನಗೆ ಅಂತಹ ಯಾರೂ ನೆನಪಿರಲಿಲ್ಲ ಎಂದಾಗ ಸಮಸ್ಯೆ ಯಥಾಸ್ಥಿತಿಗೇ ಮರಳಿ ಬಂದಂತಾಯಿತು.

ಮಿಕ್ಕ ವೀಕ್ಷಕರನ್ನೂ ಪೋಲೀಸರು ಒಬ್ಬೊಬ್ಬರನ್ನಾಗಿ ವಿಚಾರಿಸಲಾಗಿ, ಎಲ್ಲರಿಗೂ ‘ಇದೆಂತಾ ಫಜೀತಿಯಲ್ಲಿ ಸಿಕ್ಕಿಹಾಕಿಕೊಂಡೆವು, ಮನೆಗೆ ಹೋದರೆ ಸಾಕು, ಯಾರಿಗೆ ಬೇಕಿತ್ತು ಇದೆಲ್ಲ?’ ಎಂಬಂತೆ ನಿರಾಸಕ್ತಿಯಿಂದ ಉತ್ತರಿಸಿದರಷ್ಟೇ! ಯಾರಿಗೂ ಈ ಹಠಾತ್ ಅಪರಾಧದ ಬಗ್ಗೆ ಏನೂ ಗೊತ್ತಿರಲಿಲ್ಲ ಎಂಬುದೇ ಸ್ಪಷ್ಟವಾಗುತ್ತಾ ಹೋಯಿತು.

ಆಗ ಒಬ್ಬ ವ್ಯಕ್ತಿ ಅಲ್ಲಿಗೇ ನಡೆದು ಬಂದು ನಿಂತನು. ಮುಖದಲ್ಲಿ ಕುರುಚಲು ಗಡ್ಡ, ಸಣ್ಣನೆಯ ಬೊಂಬಿಗೆ ದೊಗಲೆ ಬಟ್ಟೆ ತೊಡಿಸಿದಂತಿದ್ದಾನೆ. ಅವನು ಹೆಣದ ಮುಖವನ್ನು ಕಂಡು ಓಹ್ ಎಂದು ಬಾಯ್ತೆರೆದ.

ತಕ್ಷಣ ಇನ್ಸ್ಪೆಕ್ಟರ್ ಇಬ್ರಾಹಿಂ ಅವನ ವಿಚಾರಣೆಗೆ ತೊಡಗಿದರು. ಅವನು ತನ್ನ ಹೆಸರು ವಿನೋದ್ ಎಂದು ಹೇಳಿದ.

"ಇವನು ಆನಂದ!" ಎಂದು ಗುರುತು ಹಿಡಿದ. "ನನಗೆ ಗೊತ್ತಿದ್ದ. ಆದರೆ ನಾಲ್ಕು ವರ್ಷದ ಹಿಂದೆ. ಮೈಸೂರಿನಲ್ಲಿ ಒಟ್ಟಿಗೆ ಇರುತ್ತಿದ್ದೆವು, ಎಲೆಕ್ಟ್ರಿಶಿಯನ್ ಕೆಲಸ ಮಾಡಿಕೊಂಡು..."

"ಅದಕ್ಕೇ ಹುಡುಕಿಕೊಂಡು ಬಂದು ಕೊಂದುಬಿಟ್ಟೆಯಲ್ಲವೇ, ಬೊಗಳು!" ಎಂದರು ಮಾಮೂಲು ಪೋಲೀಸ್ ಭಾಷೆಯಲ್ಲಿ ಇಬ್ರಾಹಿಂ.

ವಿನೋದ್ ಎಂಬಾತ ಪಕಪಕನೆ ನಕ್ಕ, ಹಳದಿ ಹಲ್ಲು ತೋರಿಸುತ್ತಾ." ಛೆ-ಛೇ...ನನಗೆ ಇವನು ಈ ಊರಿನಲ್ಲಿರುವುದೇ ಗೊತ್ತಿರಲಿಲ್ಲ...ಇವನ ಜತೆ ನನಗೆ ಕನೆಕ್ಷನ್ನೇ ಇರಲಿಲ್ಲ!" ಟಿಪಿಕಲ್ ಎಲೆಕ್ಟ್ರಿಶಿಯನ್ ಮಾತು!

ಅವನಿಂದ ಇನ್ನೇನೂ ಬಾಯಿ ಬಿಡಿಸಲಾಗಲಿಲ್ಲ, ಅವನು ಪ್ರತಿಭಟಿಸಿದರೂ ಕೇಳದೇ ಪೋಲೀಸಿನವರು ಅವನನ್ನು ಸ್ಟೇಷನ್ನಿಗೆ ಎಳೆದೊಯ್ದರು.

ಅಲ್ಲಿಂದ ಹೊರಬಿದ್ದ ಪ್ರತೀಕ್ ಮತ್ತೆ ಕರ್ನಾಟಕ ಸ್ಟಾಂಡರ್ಡ್ ಕಚೇರಿಗೆ ಕಾಲ್ ಮಾಡಿದ.

"ಇಲ್ಲಿಗೆ ಬಂದು ನಿನ್ನ ರಿಪೋರ್ಟ್ ನೀನೇ ಬರೆದುಬಿಡು!" ಎಂದರು ವಿಶ್ವನಾಥ್.

"ಇಲ್ಲ ಚೀಫ್, ನನಗೆ ಕೋರ್ಟ್ ಕೇಸಿದೆ ಮಧ್ಯಾಹ್ನ ಲೇಟ್ ಸೆಶನ್...ಅದೇ ಜಾನ್ ಡಿಕಾಸ್ಟಾ ಕೇಸಿನಲ್ಲಿ ಬಲರಾಂ ವಿರುದ್ಧ ಸಾಕ್ಷಿ ಹೇಳಲು..." ಎಂದು ಆರಂಭಿಸಿದವನ ಮಾತು ಕಟ್ ಮಾಡಿದರು ಅವನ ಬಾಸ್.

"ಆ ಕೇಸ್ ಮುಂದಕ್ಕೆ ಹಾಕಿದ್ದಾರೆ ಎಂದು ಇದೀಗ ವರದಿ ಬಂತು...ಮುಂದಿನ ವಾರಕ್ಕೆ!"

ವಿಧಿಯಿಲ್ಲದೇ ಅವನು ಆಫೀಸಿಗೆ ತೆರಳಿ ವರದಿ ರೆಡಿ ಮಾಡಿ ಸಂಪಾದಕರ ಮುಂದಿಟ್ಟ.

"ಏನಂತೀಯಾ?" ವಿಶ್ವನಾಥ್ ಪ್ರಶ್ನಿಸಿದರು ವರದಿ ಓದುವ ಮುನ್ನವೇ.

"ಅವನೇ, ವಿನೋದ್ ಇರಬೇಕು" ಅರೆ ವಿಶ್ವಾಸದಿಂದ ಉತ್ತರಿಸಿದ ಪ್ರತೀಕ್. "ಆದರೆ ಯಾಕೆ ಕೊಂದ ಎಂದು ಗೊತ್ತಾಗುತ್ತಿಲ್ಲ. ಅವನು ಮೊದಲೇ ಈ ಚಿತ್ರವನ್ನು ನೋಡಿರಬಹುದು , ಬೇರೆ ಊರಿನಲ್ಲೋ. ಅಥವಾ ಇಲ್ಲೇ ಬೇರೆ ಥಿಯೇಟರಿನಲ್ಲೋ...ರೆಡಿಯಾಗಿದ್ದ ಆ ಸೀನ್ ಬಂದಾಗ ಶೂಟ್ ಮಾಡಲು... ಗನ್ ಅಡಗಿಸಿಟ್ಟಿರಬಹುದು, ಪೋಲೀಸ್ ವಿಚಾರಿಸುತ್ತಾರೆ ಬಿಡಿ !"

"ಆ ಮಬ್ಬುಗತ್ತಲಲ್ಲಿ ಶೂಟ್ ಮಾಡಲು ಕೊಲೆಗಾರನ ಕಣ್ಣು ಬಹಳ ಚುರುಕಿರಬೇಕು, ಅಥವಾ ಪ್ರೊಫೆಶನಲ್?"ಎಂದರು ಚೀಫ್ ಎಡಿಟರ್.

"ಅದೊಂದೇ ಅಲ್ಲ ಚೀಫ್, ಆ ಮೃತ ವ್ಯಕ್ತಿ ಆನಂದ್ ಕುಮಾರ್ ಬಗ್ಗೆ ಏನೋ ಅನುಮಾನ ನನಗೆ ಮನದಲ್ಲೇ ಸುಳಿಯುತ್ತಿದೆ. ಏನೆಂದು ಹೊಳೆಯುತ್ತಿಲ್ಲ. ಆದರೆ ಇರಿ, ಇವತ್ತು ರಾತ್ರಿ ಅವನಿದ್ದ ಹೋಟೆಲ್ ರೂಮಿಗೆ ನುಗ್ಗಿ ನೋಡುತ್ತೇನೆ, ಅದೇನೂ ಕಷ್ಟವಾಗಲಾರದು. ಅಲ್ಲಿ ಏನಾದರೂ ಸುಳಿವು ಸಿಗಬಹುದು ನನಗೆ!"

ಅರೆಕ್ಷಣ ತಡೆದು, "ಅಂದಹಾಗೆ, ಆ ಕೊಲೆಗಾರ ಬಲರಾಮ್, ಆ ಕೇಸಿನಲ್ಲಿ... ಅವನೇನನ್ನುತ್ತಾನಂತೆ, ಜೈಲಿನಲ್ಲಿ, ಇನ್ನೂ ನಾನು ನಿರಪರಾಧಿ ಎನ್ನುತ್ತಾನಾ?" ಪ್ರತೀಕನ ಕುತೂಹಲದ ಪ್ರಶ್ನೆ.

ವಿಶ್ವನಾಥ್ ಹ್ಂ ಎಂದು ಗುಟುರು ಹಾಕಿದ್ದಕ್ಕೆ ಟೇಬಲ್ಲಿನ ಮೇಲಿದ್ದ ಪೇಪರ್ಸ್ ಚದುರಿತು."ಅಲ್ಲದೇ ಏನು?.. ಹೋಗೋರು ಬರೋರಿಗೆಲ್ಲಾ ಕೂಗಿ ನಾನು ಕೊಲೆ ಮಾಡಿಲ್ಲ ಅನ್ನುತ್ತಾನಂತೆ..

"ಆಹ್" ಎಂದ ಪ್ರತೀಕ್ ಬೇಸರದಿಂದ. "ಅದು ಬಲರಾಮನೇ. ಅವನ ಶಾರ್ಟ್ ಹೇರ್ ಕಟ್, ಕೆನ್ನೆಯ ಮೇಲೆ ಹಳೇ ಚಾಕು ಗಾಯದ ಗುರುತು... ನಾನು ತಪ್ಪಾಗಿರಲು ಸಾಧ್ಯವಿಲ್ಲ. ಅಲ್ಲದೇ ಅವನೇ ನನಗೂ ಜಾನ್ ಡಿಕಾಸ್ಟಾಗೂ ಯಾವುದೋ ಡೀಲಿನಲ್ಲಿ ತಕರಾರಿತ್ತು ಎನ್ನುತ್ತಿದ್ದ ಪ್ರಾಸಿಕ್ಯೂಶನ್ನಿಗೆ. ನಾನು ಅದೇ ಸಾಕ್ಷಿ ಹೇಳುತ್ತೇನೆ... ಹಾಗೆಲ್ಲ ನಿರಪರಾಧಿಯನ್ನು ಸಿಕ್ಕಿ ಹಾಕಿಸುವವನಲ್ಲ ನಾನು!"

4

ಪ್ರಭಾತ್ ಲಾಡ್ಜ್ ಎಂಬುದು ನಗರ್ತಪೇಟೆ ಗಲ್ಲಿಯೊಂದರಲ್ಲಿ ಮೂರನೆ ದರ್ಜೆಯ ಕೊಳಕು ಸ್ಥಳವಾಗಿತ್ತು.

ಆದರೆ ಅದರ ಬಕ್ಕ ತಲೆಯ ಮ್ಯಾನೇಜರ್ ಅದೇನೋ ಲಕ್ಷುರಿ ಪಂಚತಾರಾ ಹೋಟೆಲ್ ಎಂಬಂತೆ ವರ್ತಿಸಿದ, ಪ್ರತೀಕ್ ಆನಂದನ ರೂಮು ತೋರಿಸು ಎಂದಾಗ ."

ಆಗಲೇ ಪೋಲಿಸ್ ದಿನವೆಲ್ಲಾ ಬಂದು ಎಲ್ಲಾ ಕೆದರಿ, ಚದುರಿಸಿ ಈಗ ತಾನೆ ಹೋದರು.." ಅವನು ಕೀಚಲು ದನಿಯಲ್ಲಿ ಪ್ರತಿಭಟಿಸಿದ."ಈಗ ನೀನು ಬಂದೆ. ನನಗೇನು ಗ್ಯಾರೆಂಟಿ, ನೀನು ಏನಾದರೂ ಇಲ್ಲಿಂದ ಕಸಿದುಕೊಂಡು ಹೋಗುವುದಿಲ್ಲವೆಂದು?"

"ನಿನ್ನ ತಲೆ ಕೂದಲಿನ ಮೇಲಾಣೆ.. ಏನಾದರೂ ಇಲ್ಲಿಂದ ಕದ್ದುಕೊಂಡು ಹೋದರೆ ನಮ್ಮ ತಾಯಿಗೆ ಫೋನ್ ಮಾಡು" ಎಂದ ಪ್ರತೀಕ್ ಕೀಟಲೆಯ ದನಿಯಲ್ಲಿ.

ಇವನ ಹಾಸ್ಯ ಅರ್ಥವಾದ ಮೇಲೆ ಆ ಬೋಳುತಲೆಯ ಮ್ಯಾನೇಜರ್ ಕುಪಿತನಾಗಿ "ಏನಯ್ಯಾ, ಹೀಗೆಲ್ಲ ಹೇಳುತ್ತೀ? ನಾನು ನಾನು..." ಎನ್ನಲು,

ಪ್ರತೀಕ್ ಗಡುಸು ದನಿಯಲ್ಲಿ ತನ್ನ ಪ್ರೆಸ್ ಕಾರ್ಡನ್ನು ಮರೆಯಲ್ಲಿ ಕಾಣದಂತೆ ಹಿಡಿದುಕೊಂಡು ತೋರಿಸುತ್ತಾ “ನೋಡು, ನಾನು ಸಿಟಿ ಕಾರ್ಪೊರೇಷನ್ ಕಡೆಯವನು. ಈ ಕೊಳಕು ಹೋಟೆಲ್ ಬಗ್ಗೆ ನಾನೇನಾದರೂ ದೂರು ಕೊಟ್ಟರೆ.." ಎಂದು ಅರ್ಧಕ್ಕೆ ಮಾರ್ಮಿಕವಾಗಿ ನಿಲ್ಲಿಸಿದ.

ಉಗುಳು ನುಂಗಿಕೊಂಡು ತೆಪ್ಪಗಾದ ಮ್ಯಾನೇಜರ್ ರೂಮಿನ ಕೀ ಕೊಟ್ಟು "ಅಯ್ಯೋ, ನಮಗೂ ನಿಮಗೂ ಯಾಕೆ ಸ್ವಾಮಿ, ಜಗಳ? ತಗೊಳ್ಳಿ... ಮೇಲಿನ ಫ್ಲೋರಿನಲ್ಲಿ ರೂಮ್ ನಂಬರ್ ಇದೆ, ನೋಡಿಕೊಳ್ಳಿ" ಎಂದ.

ಆ ರೂಮ್ ಸಹಾ ಲಾಡ್ಜಿನಷ್ಟೆ ಅಧ್ವಾನವಾಗಿತ್ತು, ಮಾಸಿದ ಬಣ್ಣ, ಪ್ಲಾಸ್ಟರ್ ಕಾಣುವ ಸೀಲಿಂಗ್!. ಅವನ ಬಟ್ಟೆ ಬರೆ ಸಾಮಾನು ಸರಂಜಾಮು ಎಲ್ಲವನ್ನೂ ಪೋಲೀಸರೇ ವಶಪಡಿಸಿಕೊಂಡು ಹೋದಂತೆ ಕಾಣುತಿತ್ತು. ರೂಮಿನಲ್ಲಿ ಮುರುಕಲು ಮಂಚ, ಹಳ್ಳ ಬಿದ್ದ ಕೊಳಕು ಹಾಸಿಗೆ, ಟವೆಲ್ ಮತ್ತು ಕಾಲಿಗೆ ಬ್ಯಾಂಡೇಜ್ ತರಹ ಕಟ್ಟಿ ನಿಲ್ಲಿಸಲಾದ ಒಂದು ಕುರ್ಚಿ ಬಿಟ್ಟರೆ ಅಲ್ಲಿ ಏನೂ ಇರಲಿಲ್ಲ. ತಡಕಾಡಿದರೂ ಪ್ರತೀಕನಿಗೆ ಕೊಲೆ ಮಾಡಲ್ಪಟ್ಟ ವ್ಯಕ್ತಿಯ ಯಾವ ಸುಳಿವೂ ಮುಖ್ಯವಾಗಿ ಸಿಗಲಿಲ್ಲ.

“ಅರೆ, ಈ ಬಡಪಾಯಿಯ ಬಳಿ ಯಾವ ಮುಖ್ಯ ಮಾಹಿತಿಯೂ ಇರಲಿಲ್ಲ. ಸುಮ್ಮನೇ ಸತ್ತನೇಕೆ? ನನಗೊಂದು ರೆಡ್ ಹೆರಿಂಗ್ (ತಪ್ಪು ಸುಳಿವು) ಆಯಿತು...” ಎಂದುಕೊಂಡ ಸ್ವಲ್ಪ ನಿರಾಸೆಯಿಂದ.

ಬಾಗಿಲು ಎಳೆದುಕೊಂಡು ಹೊರಗೆ ಕಾರಿಡಾರಿಗೆ ಕಾಲಿಟ್ಟ. ಅದೇ ಗಳಿಗೆ ಸುಯ್ಯನೆ ಕಿವಿ ಪಕ್ಕದಲ್ಲಿ ಏನೋ ಹಾರಿಹೋಯಿತು. ಅದೇ ಕ್ಷಣದಲ್ಲಿ ಆ ಕಾರಿಡಾರ್ ಮೂಲೆಯಿಂದ ಕತ್ತಲಲ್ಲಿ ಹ್ಯಾಟ್ ಧರಿಸಿದ್ದ ಸೂಟುಧಾರಿಯೊಬ್ಬನ ಕೈಯಲ್ಲಿದ್ದ ಗನ್ ಗುಡುಗಿ ಕಿಡಿ ಕಾರಿತ್ತು. ತೂರಿಬಂದ ಬುಲೆಟ್ ಜಸ್ಟ್ ಮಿಸ್ ಆಗಿತ್ತು!

 ತನ್ನ ಜೀವಾಪಾಯ ಬಂದಾಗ ಯಾವುದೇ ಪ್ರಾಣಿ ಅದೇ ಕ್ಷಣ ಪ್ರತಿಕ್ರಿಯಿಸುವಂತೆ ಪ್ರತೀಕ್ ಸಹಾ ತಟ್ಟನೇ ಬಲ ಪಕ್ಕಕ್ಕೆ ಜಿಗಿದು ನೆಲಕ್ಕೆ ಬಿದ್ದ. ಇನ್ಸ್ಟಿಂಕ್ಟ್ ಎನ್ನುತ್ತಾರೆ ಇದಕ್ಕೆ.

ಆದರೆ ಅವನೆದ್ದು ಕುಳಿತುಕೊಳ್ಳುವಷ್ಟರಲ್ಲಿ ಆ ಗನ್ ಧಾರಿ ಸರ್ರನೆ ತಿರುಗಿ ಮೆಟ್ಟಿಲುಗಳನ್ನು ಹಾರುತ್ತಾ ಕೆಳಗೆ ಮಾಯವಾದ. ಸಾವರಿಸಿಕೊಂಡ ಪ್ರತೀಕ್ ಒಂದೇ ಉಸುರಿಗೆ ಅವನ ಬೆನ್ನತ್ತಿ ದೌಡಾಯಿಸಿದ. ನೆಲ ಮಹಡಿಗೆ ಬರುವಷ್ಟರಲ್ಲೇ ಅದು ಹಿತ್ತಲ ಬಾಗಿಲಿನ ಸರ್ವೀಸ್ ಪ್ರವೇಶ ಎಂದರಿವಾಯಿತು. ಬಾಗಿಲು ಹಾರುಹೊಡೆದು ಹೋಗಿದ್ದ ಹಂತಕನ ಹಿಂದೆ ಓಡಿದರೆ ಅವನು ದೂರದಲ್ಲಿ ನಗರ್ತಪೇಟೆಯ ಅಸಂಖ್ಯ ಗಲ್ಲಿಗಳೊಂದರಲ್ಲಿ ನಿಲ್ಲಿಸಿದ್ದ ಒಂದು ಮೋಟಾರ್ ಸೈಕಲ್ ಹತ್ತಿ ಜೋರಾಗಿ ಸದ್ದು ಮಾಡಿಸುತ್ತಾ ಕ್ಷಣಮಾತ್ರದಲ್ಲಿ ಮಾಯವಾದ.

ಅವನ ಅಸ್ಪಷ್ಟ ಚಹರೆಯಷ್ಟೇ ಅನುಭವೀ ಪತ್ರಕರ್ತ ಪ್ರತೀಕನ ಮನದಲ್ಲಿ ಉಳಿಯಿತು.

ಉಸಿರೆಳೆದುಕೊಂಡು ರಿಸೆಪ್ಷನ್ ಬಳಿ ಬಂದು ಫೋನಲ್ಲಿ ಇನ್ಸ್ಪೆಕ್ಟರ್ ಇಬ್ರಾಹಿಂ ಇದ್ದಾರಾ ಎಂದು ವಿಚಾರಿಸಿ ಅವರ ಕಚೇರಿಗೆ ಹೊರಟು ಬಿದ್ದ ಪ್ರತೀಕ್.

 ಮನೆಗೆ ಹೊರಡುವ ತರಾತುರಿಯಲ್ಲಿದ್ದ ಇಬ್ರಾಹಿಂ “ಇನ್ನು ಮನೆಗೆ ಹೋಗದಿದ್ದರೆ ನನ್ನನ್ನು ಕೊಂದುಬಿಡ್ತಾಳಯ್ಯ ನನ್ನ ಬೇಗಮ್.. ಅದೇನು ಹೇಳು” ಎಂದು ನಿಂತಲ್ಲೇ ಕೇಳಿದರು.

“ಕೊಂದೇ ಬಿಡ್ತಾ ಇದ್ದ ಸರ್,. ನನ್ನದೂ ಅದೇ ಕಥೆ ಆಯಿತು” ಎಂದು ಪ್ರಭಾತ್ ಲಾಡ್ಜಿನಲ್ಲಿ ನಡೆದಿದ್ದನೆಲ್ಲಾ ವಿವರಿಸಿದ ಪ್ರತೀಕ್.

ಕೊಲೆ ಯತ್ನ ಕೇಳಿ ಗಾಬರಿಯಾದ ಇಬ್ರಾಹಿಂ ಲೇಟಾದರಾಗಲಿ ಎಂದು ಮತ್ತೆ ಸೀಟಿನಲ್ಲಿ ಕುಳಿತರು.

“ಏನು ನಡೆಯುತ್ತಿದೆ ಇವತ್ತು ಪ್ರತೀಕ್.? ಒಂದು ಕೊಲೆ, ಎರಡನೆಯದು ಆಲ್ಮೋಸ್ಟ್ ಕೊಲೆ ನನ್ನ ಸರ್ವೀಸಿನಲ್ಲೇ ಮೊದಲು”

ಪ್ರತೀಕ್ ಸೊಟ್ಟ ನಗೆ ಬೀರಿದ, “ನನ್ನ ಜೀವನದಲ್ಲೂ ಮೊದಲು, ಇನ್ಸ್ಪೆಕ್ಟರ್..ಅದೂ ಎರಡೂ ನಾನಿದ್ದ ಸ್ಥಳದಲ್ಲೇ ನಡೆದಿವೆ!”

ಅವನ ಮಾತಿನ ಗೂಡಾರ್ಥ ಅರಿತವರಂತೆ, ಇಬ್ರಾಹಿಂ “ಅಂದರೆ ನೀನು ಹೇಳುತ್ತಿರುವುದು?” ಎಂದು ಹುಬ್ಬೇರಿಸಿದರು.

“ಎರಡಕ್ಕೂ ಸಂಬಂಧವಿದೆ, ಇನ್ಸ್ಪೆಕ್ಟರ್.. ಹಾಗಾದರೆ ಆ ಕೊಲೆಗಾರ ಆ ರೂಮಲ್ಲಿ ಏನೋ ಹುಡುಕಿಕೊಂಡು ಬಂದಿರಬೇಕು ಅಥವಾ ನನ್ನನ್ನೇ ಹಿಂಬಾಲಿಸಿ?...” ಎಂದು ಅವರ ಮೇಜಿನ ಮೇಲಿದ್ದ ಪೇಪರ್ ವೈಟನ್ನು ಗುಂಡಗೆ ತಿರುಗಿಸುತ್ತಾ ಹೇಳಿದ ಪ್ರತೀಕ್. “ಮೊದಲ ಕೊಲೆಯನ್ನೂ ನನಗಾಗಿಯೇ ಮಾಡಿ ಗುಂಡು ತಪ್ಪಿ ಆನಂದನಿಗೆ ಬಿದ್ದಿರಬಹುದು... ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ನಾನು ಇನ್ವಾಲ್ವ್ ಆಗಿರುವ ಬಲರಾಂ -ಡಿಕಾಸ್ಟಾ ಕೇಸಿಗೇ ಎರಡೂ ನೇರ ಕೊಂಡಿ ಇರಬೇಕು... ನಾನು ಆ ಬಗ್ಗೆ ಕೋರ್ಟಿನಲ್ಲಿ ಸಾಕ್ಷಿ ನುಡಿಯುವುದನ್ನು ತಪ್ಪಿಸಲೆಂದೇ ಇರಬಹುದು... ಬಲರಾಂ ಡಿಕಾಸ್ಟನನ್ನು ಕೊಂದ ಬಗ್ಗೆ ನನ್ನ ಬಾಸ್ ವಿಶ್ವನಾಥ ತರಹ ನೀವೂ ಸಂದೇಹ ಪಡಲ್ಲ ತಾನೆ?”

“ಹಹ್... ಅದು ಹೇಗೆ, ಮಿತ್ರಾ? ಆರೋಪಿ ಬಲರಾಂ ಇನ್ನೂ ಜೈಲಿನಲ್ಲೇ ಇದಾನೆ.. ಎಲ್ಲಿಯೂ ಹೋಗಿಲ್ಲ... ಮೊದಲು ಬೆಳಿಗ್ಗೆ ಆ ಥಿಯೇಟರಿನಲ್ಲಿ ಅನಂತರ ರಾತ್ರಿ ಯಾವುದೋ ನಗರ್ತಪೇಟೆ ಲಾಡ್ಜಿನಲ್ಲಿ ಅವನು ಕಾಣಿಸಿಕೊಂಡು ಗುಂಡು ಹಾರಿಸಿರಲು ಸಾಧ್ಯವಿಲ್ಲ... ಅದು ಸರಿ, ನಿನಗೆ ಶೂಟ್ ಮಾಡಿದವ ಕಾಣಿಸಿದನೆ? ಹೇಗಿತ್ತು ಚಹರೆ?” ಇಬ್ರಾಹಿಂ ಪ್ರಶ್ನಿಸಿದರು.

‘ಅವನು ಹ್ಯಾಟು ಹಾಕಿದ್ದ, ಅವನ ಮೋಟಾರ್ ಸೈಕಲ್ ಅದೆಂತಾ ವಿಶಿಷ್ಟ ಸದ್ದು ಮಾಡಿತ್ತು’ ಎಂದೆಲ್ಲಾ ಮನದಲ್ಲೇ ಮೆಲುಕು ಹಾಕಿದ ಪ್ರತೀಕ್ ಬಲಗೈ ಚಿಟಿಕೆ ಹೊಡೆದ,

“ನನಗೆ ಒಂದು ಐಡಿಯಾ ಇದೆ ಸರ್... ನಾನು ನಾಳೆ ಬೆಳಿ-ಬೆಳಿಗ್ಗೆ ಮತ್ತೊಂದು ಕಡೆ ಪತ್ತೆ ಮಾಡುತ್ತೇನೆ.. ನೀವು ಪರ್ಮಿಷನ್ ಕೊಡಬೇಕು” ಎಂದು ಹೇಳುತ್ತಲೇ ಎದ್ದು ನಿಂತ ಪ್ರತೀಕ್

“ಎಲ್ಲಿ?” ಇನ್ಸ್ಪೆಕ್ಟರ್ ಸಹಾ ಎದ್ದರು

“ಬ್ಲೂ ಡೈಮಂಡ್ ಚಿತ್ರಮಂದಿರದಲ್ಲೇ... ಮಾರ್ನಿಂಗ್ ಶೋ ಗೆ ಸ್ಟಾಫ್ ಎಲ್ಲಾ ಬರುವ ಮುಂಚೆ!”

5

ಬೆಳಿಗ್ಗೆ ಆರು ಗಂಟೆ ನಸುಕಿನಲ್ಲೇ ತನ್ನ ಬಜಾಜ್ ಸ್ಕೂಟರಿನಲ್ಲಿ ಬ್ಲೂ ಡೈಮಂಡ್ ತಲುಪಿದ್ದ ರಿಪೋರ್ಟರ್ ಪ್ರತೀಕ್. ಪಾರ್ಕಿಂಗಿನಲ್ಲಿ ಸೆಕ್ಯೂರಿಟಿ ಗಾರ್ಡಿಗೆ ವಿಶ್ ಮಾಡಿ ಒಳನುಗ್ಗಿದ. ಪೋಲಿಸ್ ಮೊದಲೇ ಹೇಳಿದಂತೆ ಇವನಿಗೆ ಆ ಸ್ಪಾಟಿನ ಪ್ರವೇಶಕ್ಕೆ ಎಲ್ಲಾ ಏರ್ಪಾಟು ಮಾಡಿದ್ದರು.

ಸರಸರನೆ ಸಿನೆಮಾ ಹಾಲಿನ ಒಳಗೆ ನಡೆದು ತಾನು ಚಿತ್ರ ನೋಡುವಾಗ ಕುಳಿತಿದ್ದ ಸ್ಥಳ, ಆನಂದ ಕೊಲೆಯಾಗಿದ್ದ ಸೀಟ್, ಸುತ್ತ ಮುತ್ತಲಿನ ವ್ಯವಸ್ಥೆ ಎಲ್ಲವನ್ನು ಮತ್ತೊಮ್ಮೆ ಹೊಸ ಕಂಗಳಲ್ಲಿ ನೋಡಿದ. ಮನದಲ್ಲಿ ಯಾವುದೋ ನಂಬಿಕೆ ಗಟ್ಟಿಯಾಗುತ್ತಾ ಹೋಯಿತು.

ಅಲ್ಲಿಂದ ನೇರವಾಗಿ ಮ್ಯಾನೇಜರ್ ರಾಜಾರಾಮ್ ಕಚೇರಿಗೆ ಹೋಗಿ ಬಾಗಿಲ ಕೀಹೋಲಲ್ಲಿ ಡ್ಯೂಫ್ಲಿಕೇಟ್ ಚಾವಿ ಹಾಕಿ ತಿರುಗಿಸಿದ. ಥ್ಯಾಂಕ್ಸ್ , ಇಬ್ರಾಹಿಂ ಸರ್! ಎಂದುಕೊಂಡು ನಗರದ ಮಂದವಾದ ಮುಂಜಾನೆಯ ಬೆಳಕು ಕಿಟಕಿಯ ಮೂಲಕ ಹರಿದುಬಂದಿದ್ದರಲ್ಲೇ ಹುಡುಕಾಟ ಆರಂಭಿಸಿದ. ರಾಜಾರಾಮನ ಟೇಬಲ್ಲಿನಲ್ಲಿದ್ದ ಒಂದು ಫೈಲಿನಲ್ಲಿ ಮೇಲೆಯೇ ಬಲರಾಂ ಡಿಕಾಸ್ಟಾ ಕೇಸಿನ ಪೇಪರ್ ಕಟಿಂಗ್ ಇದ್ದುದು ನೋಡಿ ಚಿಕ್ಕ ವಿಜಯ ಸಾಧಿಸಿದ ಮುಗುಳ್ನಗೆ ಬೀರಿದ.

ಅದನ್ನು ತಿರುವಿ ಹಾಕುತ್ತಿದ್ದವನಿಗೆ ತಾನು ಎರಡು ಸಲ ಕೋರ್ಟಿಗೆ ಈಮುಂಚೆ ಹಾಜರಾಗಿದ್ದು ನೆನಪಿಗೆ ಬಂದು ಇನ್ನೂ ಒಂದು ಸಂದೇಹ ಪರಿಹಾರವಾಯಿತು. ಹೌದು ಆ ವಿಚಾರಣೆ ನಡೆದಾಗಲೆಲ್ಲಾ ರಾಜಾರಾಂ ಅಲ್ಲಲ್ಲಿ ಸುಳಿದಾಡುತಿದ್ದ, ಕೋರ್ಟ್ ವಿದ್ಯಮಾನಗಳನ್ನು ನೋಡಿ ಹೋಗುತಿದ್ದ...ಯಾಕೆ?

ಅಲ್ಲಿಂದಲೇ ಇನ್ಸ್ಪೆಕ್ಟರ್ ಇಬ್ರಾಹಿಂಗೆ ಕಾಲ್ ಮಾಡಿ ರಾಜಾರಾಂ ಕುಟುಂಬದವರ ಬಗ್ಗೆ ಮಾಹಿತಿ ಪಡೆಯಲಿಚ್ಚಿಸಿದ. ಹತ್ತೇ ನಿಮಿಷದಲ್ಲಿ ಅವನಿಗೆ ಬೇಕಾದ ಉತ್ತರ ಸಿಕ್ಕಿತ್ತು.

ಇನ್ನೇನಿದೆ ಎಂದು ಅತ್ತಿತ್ತ ತಡಕಾಡುತ್ತಿದ್ದವನ ಕಿವಿಗೆ ಕೆಳಗಿನ ಪಾರ್ಕಿಂಗಿನಲ್ಲಿ ಬುಲೆಟ್ ಮೋಟಾರ್ ಸೈಕಲ್ ಬಂದು ನಿಂತ ಸದ್ದು ಕೇಳಿಸಿತು.

ಯೆಸ್, ನಿನ್ನೆ ರಾತ್ರಿ ಓಡಿಹೋದ ವ್ಯಕ್ತಿಯದೂ ಇದೇ ಬುಲೆಟ್ ಮೋಟಾರ್ ಸೈಕಲ್ ಅದರದೇ ಆ ವಿಶಿಷ್ಟ ಸದ್ದು ಬೇರೆ ಮಾಡೆಲ್ ಮೋಟಾರ್ ಸೈಕಲ್ ಹೀಗೆ ಸದ್ದು ಮಾಡುವುದಿಲ್ಲ!... ಅಂದರೆ..?

ಇನ್ನೇನು ರಾಜಾರಾಮ್ ಆ ಕಚೇರಿಗೆ ಕೆಲವೇ ಕ್ಷಣಗಳಲ್ಲಿ ಬರುತ್ತಾನೆಂದು ಅರಿತ ಪ್ರತೀಕನಿಗೆ ಅದೇ ಕ್ಷಣ ಗೋಡೆಯ ಹ್ಯಾಂಗರ್ ಮೇಲಿದ್ದ ಹ್ಯಾಟ್ ಕಣ್ಣಿಗೆ ಬಿತ್ತು.

ಅನುಮಾನವೇ ಇಲ್ಲ..ನಿನ್ನೆ ರಾತ್ರಿಯವನದು!.

ರಾಜಾರಾಂ ದಡಕ್ಕನೇ ಬಾಗಿಲನ್ನು ತಳ್ಳಿಕೊಂಡು ಒಳಗೆ ಬಂದೇಬಿಟ್ಟ. ಅವನ ಕೈಯಲ್ಲಿ ಕಪ್ಪನೆಯ ರಿವಾಲ್ವರ್ ಸಿದ್ಧವಾಗಿದೆ! 

ಅಲ್ಲಿ ಪ್ರತೀಕನನ್ನು ನೋಡಿ ಆಶ್ಚರ್ಯವಾಗದವನಂತೆ ವಿಜಯನಗೆ ಬೀರಿದ ಇದನ್ನು ತಾನು ನಿರೀಕ್ಷಿಸಿದ್ದವನಂತೆ.

“ಹಲೋ...ತನಿಖಾ ಪತ್ರಕರ್ತರೇ, ಕ್ರೈಮ್ ರಿಪೋರ್ಟರ್ ಸಾಹೇಬರೇ!!” ಎಂದು ವ್ಯಂಗ್ಯವಾಗಿ ಗಹಗಹಿಸಿದ.. “ತಮ್ಮ ಕರ್ತವ್ಯ ಮಾಡುತ್ತಲೇ ಸಾಯಬೇಕಿತ್ತೇ, ವೀರಮರಣ ಕೊಡುತ್ತೇನೆ ನಿಮಗೆ. ಹುತಾತ್ಮರಾಗುವಿರಿ...” ಅವನತ್ತ ತಿರುಗಿದ್ದ ರಿವಾಲ್ವರ್ ಮೇಲೆ ಕೆಳಗೆ ಅಲುಗಾಡಿತು. ಪ್ರತೀಕ್ ತೆರೆದ ಕಂಗಳಿಂದ ಅದನ್ನೇ ದಿಟ್ಟಿಸುತ್ತಿದ್ದ, ಆ ಗುಂಡು ಎದೆಯಿಂದ ಕಿಬ್ಬೊಟ್ಟೆಯವರೆಗೆ ಎಲ್ಲಿ ಬಿದ್ದರೂ ಸಾಯಬಹುದು!.

ಅವನನ್ನು ಮಾತಿಗೆಳೆಯಬೇಕು...

“ನಿನ್ನೆಯೇಕೆ ಹೇಡಿಯಂತೆ ಹಿಂದಿನಿಂದ ಗುರಿಯಿಟ್ಟೆ? ವೀರಮರಣವಾಗುತ್ತಿರಲಿಲ್ಲಾ ಆಗ , ಕಗ್ಗೊಲೆ ಅಗುತಿತ್ತು..ಈಗಲೂ ಸಹಾ!”

“ನಿನ್ನ ಅದೃಷ್ಟ ಚೆನ್ನಾಗಿತ್ತು. ನಿನ್ನೆ ಮಧ್ಯಾಹ್ನದ್ದು ಉತ್ತಮ ಪ್ಲಾನ್, ಚಿತ್ರದಲ್ಲಿ ಶೂಟ್ ಔಟ್ ಆಗುವ ದೃಶ್ಯ ಬಂದಾಗಲೇ ಕಾದಿದ್ದು ನಾನೇ ಪ್ರೊಜೆಕ್ಟರ್ ರೂಮಿಂದ ಸರಿಯಾಗಿ ಗುರಿಯಿಟ್ಟು ಫೈರ್ ಮಾಡಿದ್ದೆ. ಅದು ಹೇಗೆ ತಪ್ಪಿಸಿಕೊಂಡೆ ನೀನೇ ಹೇಳಬೇಕು..ನಿನ್ನೆ ರಾತ್ರಿ ಕೂಡಾ ಲಾಡ್ಜಿಗೆ ನಿನ್ನನ್ನೂ ಫಾಲೋ ಮಾಡಿಕೊಂಡು ಬಂದೆ. ಮತ್ತೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ ಆದರೆ ನಿನಗೆ ಸಿಗದಂತೆ ಓಡಿಹೋದೆ, ಇಲ್ಲಿಗೆ ಬಂದೇ ಬರುತ್ತೀಯಾ ಅಂತಾ ಅನುಮಾನವಿತ್ತು, ಆದರೂ ನನಗಿಂತಾ ನೀನೇ ಬೇಗ ಬಂದೆ.....ಆದರೆ ಇವಾಗ ನಿನ್ನ ಲಕ್ ಮುಗೀತು!..” ಎಂದವನ ಕೈ ಬೆರಳು ಬಿಗಿಯಾಗಿ ಫೈರ್ ಮಾಡುವುದನ್ನೇ ಗಮನಿಸುತ್ತಿದ್ದ ಪ್ರತೀಕ್ ಪಕ್ಕಕ್ಕೆ ಜಿಗಿದು ಬಿದ್ದ, ನೆಲಕ್ಕೆ ಅಪ್ಪಳಿಸಿದರೂ ಪ್ರಾಣವಾದರೂ ಉಳಿದೀತು ಎಂಬ ಜೀವದಾಸೆಯಲ್ಲಿ.

“ಮುಟ್ಟಿದ್ದಕ್ಕೆ ಮೂರು ಸಲ ಆಯ್ತು, ರಾಜಾರಾಮ್...ದಟ್ಸ್ ಇಟ್!” ಎನ್ನುತ್ತಾ ಅದೇ ಕ್ಷಣ ಒಳನುಗ್ಗಿದ ಪೋಲೀಸ್ ಇನ್ಸ್ಪೆಕ್ಟರ್ ಇಬ್ರಾಹಿಂ ಅವನ ಕೈಲಿದ್ದ ರಿವಾಲ್ವರಿಗೆ ಕರಾಟೆ ಚಾಪ್ ಹೊಡೆದು ಕೆಳಗೆ ಬೀಳಿಸಿದರು. ಹಾಗೂ ರಾಜಾರಾಮನ ಗುಂಡು ಹಾರಿ ಗುರಿ ತಪ್ಪಿ ತಾರಸಿಯಲ್ಲಿ ಸಿಕ್ಕಿಹಾಕಿಕೊಂಡಿತು.

“ಇನ್ಸ್ಪೆಕ್ಟರಿಗೆ ಬರಹೇಳಿದ್ದೆ ಇವತ್ತು ಫೋನ್ ಮಾಡಿದಾಗ...ಯಾವಾಗ ಬಲರಾಂ ನಿನ್ನ ತಮ್ಮ ಎಂದು ಗೊತ್ತಾಯಿತೋ ಆಗ.... ರಾಜಾರಾಂ, ಬಲರಾಂ ಅಣ್ಣ ತಮ್ಮ1... ಆದರೆ ನೀನು ಅವನ ತರಹ ಎಕ್ಸ್ಪರ್ಟ್ ಶೂಟರ್ ಅಲ್ಲ... ಅವನು ಸುಪಾರಿ ಕಿಲ್ಲರ್, ಒಂದೇ ಶಾಟಿಗೆ ಜಾನ್ ಡಿಕಾಸ್ಟಾನನ್ನು ಕೊಂದ ಆದರೆ, ನೀನು ಮೂರು ಸಲ ಚಾನ್ಸ್ ಸಿಕ್ಕರೂ ನನ್ನನ್ನೂ ಕೊಲ್ಲಲಾಗದ ಅಮೆಚೂರ್!” ಎಂದು ನಿಧಾನಕ್ಕೆ ಎದ್ದು ಕುಳಿತು ಹಂಗಿಸಿದ ಪ್ರತೀಕ್.

ಅವಮಾನದಿಂದ ಕುಪಿತನಾಗಿ ಸಿಡಿದ ರಾಜಾರಾಂ:

“ಹೌದು, ಅವನೇ ಕಿಲ್ಲರ್! ನಾನಲ್ಲ..ಅವನನ್ನು ಬಿಡಿಸಲು ನಿನ್ನ ಬಾಯಿ ಮುಚ್ಚಿಸಬೇಕೆಂದು ಹೇಳಿದ..ಐದು ಲಕ್ಷ, ಅವನಿಗೆ ಬಂದ ಬ್ಲಡ್ ಮನಿಯ ಅರ್ಧಪಾಲು ನನಗೆ ಕೊಡುವುದಾಗಿ ಹೇಳಿದ್ದ...ಅದಕ್ಕೇ ನಾನು....”ಎನ್ನುತ್ತಿದ್ದವನು ತನ್ನ ಮಾತಿನ ಭರದಲ್ಲಿ ಏನೇನೋ ಹೇಳಿಬಿಟ್ಟೆ ಎಂಬದನ್ನು ತಕ್ಷಣ ಅರಿತವನಂತೆ ಸುಮ್ಮನಾಗಿ ತನ್ನ ಬಲಗೈಗೆ ಕೋಳ ತೊಡಿಸಿದ್ದ ಇಬ್ರಾಹಿಂರತ್ತ ತಿರುಗಿದ.

“ಅಂದರೆ..ನೀವು?” ಎಂದು ತೊದಲಿದನು.

“ಹೌದಯ್ಯಾ ಈ ರೂಮಲ್ಲಿ ನಿನ್ನೆ ರಾತ್ರಿ ಬಂದು ಒಂದು ಸೀಕ್ರೆಟ್ ಬಗ್ ಮೈಕ್ರೋಫೋನ್ ಹಾಕಿ ಹೋದೆವು..ಈಗ ನೀನು ಹೇಳಿದ್ದೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೇವೆ..ಇಷ್ಟು ಸಾಕು ಅಣ್ಣ ತಮ್ಮ ಇಬ್ಬರೂ ಜೈಲು ಪಾಲಾಗಲು, ಇದಕ್ಕೆ ಬದಲು ಕೋರ್ಟಿನಲ್ಲಿ ಅದೇನು ಹೇಳುತ್ತೀಯೋ ನೋಡೋಣ!” ಎಂದು ತಮ್ಮ ಜಾಣತನವನ್ನು ಹೆಮ್ಮೆಯಿಂದ ಹೇಳಿಕೊಂಡರು ಇನ್ಸ್ಪೆಕ್ಟರ್ ಇಬ್ರಾಹಿಂ. ಕಸಿವಿಸಿಯಿಂದ

ಹಣೆ ಹಣೆ ಚಚ್ಚಿಕೊಂಡ ರಾಜಾರಾಂ ಕೈಕೋಳ ಹಾಕದ ಎಡಗೈಯಿಂದ.

“ನೀನು ಕೋರ್ಟಿನಲ್ಲಿ ವಿಚಾರಣೆಯಾಗುವಾಗಲೆಲ್ಲಾ ಬಂದು ಕುಳಿತಿರುತಿದ್ದೆ.” ಪ್ರತೀಕ್ ನೆನೆಪಿಸಿಕೊಂಡು ಹೇಳಿದ. “...ಸದ್ದಿಲ್ಲದೇ ಕಾಣಿಸದಂತೆ ಎದ್ದು ಹೋಗುತಿದ್ದೆ ಎಂಬುದನ್ನು ನಾನು ಆಗ ಗಮನಿಸಿದ್ದೆ. ಆದರೆ ನಿಮ್ಮಿಬ್ಬರು ಅಣ್ಣ ತಮ್ಮಂದಿರ ಲಿಂಕ್ ತಿಳಿದಿರಲಿಲ್ಲ. ನಿನ್ನೆ ಸಿನೆಮಾದಲ್ಲಿ ಶೂಟ್ ಮಾಡುವ ದೃಶ್ಯದಲ್ಲೂ ಸರಿಯಾಗಿ ನೀನು ಹಿಂದಿಂದ ನನ್ನ ತಲೆಗೇ ಗುರಿಯಿಟ್ಟಿದ್ದೆ..ಆದರೆ ಅದು ನಾನಾಗಿರಲಿಲ್ಲ!.” ಮಾರ್ಮಿಕವಾಗಿ ನಕ್ಕ ಪ್ರತೀಕ್

“ಅಂದರೆ ಹೇಗೆ, ವಿವರಿಸು!” ಎಂದು ಗದರುವ ದನಿಯಲ್ಲಿ ಕೇಳಿದರು ಇನ್ಸ್ಪೆಕ್ಟರ್ ಇಬ್ರಾಹಿಂ.

“ನಾನು ಆ ಆನಂದನ ಬಗ್ಗೆ ಏನೋ ಪಾಯಿಂಟ್ ಮರೆತಿದ್ದೇನೆ.. ಒಳಗಿದೆ, ಹೊರಗೆ ಬರ್ತಾ ಇಲ್ಲಾ ಅಂತಿದ್ದೆನಲ್ಲ ಇನ್ಸ್ಪೆಕ್ಟರ್?” ಎಂದ ಪ್ರತೀಕ್ ಜಾಣನಗೆ ಬೀರುತ್ತಾ, “ ಅದೇ ಇದು” ಎಂದು ತಾನೇ ಬೆನ್ನು ಮಾಡಿ ಅವರಿಗೆಲ್ಲಾ ತೋರಿಸಿದ, “ನನ್ನ ತಲೆಯ ಹಿಂದಿನ ಬಾಲ್ಡ್ ಸ್ಪಾಟ್ ಅಂದರೆ ದೊಡ್ಡ ನಾಣ್ಯದ ಅಗಲದ ಬಕ್ಕ ಸ್ಥಳ ಇದೆಯಲ್ಲ ...ಇದು”

ಈಗ ಸೋತವನಂತೆ ಮುಖ ಮಾಡಿ ತಲೆ ತಗ್ಗಿಸಿದ ರಾಜಾರಾಂ. ಆದರೆ ಇನ್ಸ್ಪೆಕ್ಟರಿಗೆ ಸ್ಪಷ್ಟವಾಗಲಿಲ್ಲ

“ಏನದಕ್ಕೆ?”

“ ಓಹ್ ಇನ್ಸ್ಪೆಕ್ಟರ್!” ನೀವೇಕೆ ನನ್ನಷ್ಟು ಜಾಣರಲ್ಲ ಅನ್ನುವ ದನಿಯಲ್ಲಿ ಉತ್ತರಿಸಿದ ಪ್ರತೀಕ್,

ಈ ರಾಜಾರಾಮ್ ನಾನು ಇಲ್ಲಿಗೆ ಬರುತ್ತಿದುದನ್ನು ಮೊದಲೇ ಹಲವು ಬಾರಿ ನೋಡಿ ನನ್ನ ತಲೆಯ ಹಿಂದೆ ಹೊಳೆಯುವ ಕೂದಲಿಲ್ಲದ ಸ್ಪಾಟ್ ಇದೆ ಎಂದು ನೋಟ್ ಮಾಡಿಕೊಂಡಿದ್ದ...ಅವನಿಗೆ ಹಿಂದಿನಿಂದ ಗುರಿಯಿಟ್ಟು ಶೂಟ್ ಮಾಡಲು ಸುಲಭವಾಗಿ ಗುರುತು ಹಿಡಿಯಲು... ಪ್ರೊಜೆಕ್ಟರ್ ರೂಮಿಂದ ತೆರೆಯ ಮೇಲೆ ಬೀಳುವ ಬೆಳಕಿನಲ್ಲಿ ಅದು ಸುಲಭವಾಗಿ ಕಾಣುವಂತಿತ್ತು...ಆದರೆ ಅದೇ ತರಹದ ಸ್ಪಾಟ್ ಆನಂದನ ತಲೆಯಲ್ಲೂ ಇತ್ತು, ಅಂದು...”

 “ದುರದೃಷ್ಟವಶಾತ್?” ಎಂದರು ಇಬ್ರಾಹಿಂ

“ದುರದೃಷ್ಟ ಅದಲ್ಲ...” ಮುಂದುವರೆಸಿದ ಪ್ರತೀಕ್. “ನಾನು ಅವನು ಮೊದಲು ಒಬ್ಬರ ಹಿಂದೆ ಒಬ್ಬರು ಒಂದೇ ನೇರವಾಗಿ ಕುಳಿತಿದ್ದೆವುಡಿ 15, ಇ 15 ಸೀಟು ಸಂಖ್ಯೆ... ಆದರೆ ನಾನು ಸ್ವಲ್ಪ ಹೊತ್ತಿನ ನಂತರ ನಾನು ಆ ಶೂಟ್ ಔಟ್ ಸೀನ್ ಬರುವ ಮುನ್ನ ‘ಹಿಂದೆ ಬಹಳ ಸೀಟ್ಸ್ ಖಾಲಿ ಇದೆಯಲ್ಲ’ ಎಂದು ಎದ್ದು ಬಂದು ’’ ಸಾಲಿನಲ್ಲಿ ಕುಳಿತೆ,. ಅಲ್ಲಿ ಆ ಬೆಳಕು ನನ್ನ ತಲೆಯ ಮೇಲೆ ಪಾಸ್ ಆಗುವಂತಿರಲಿಲ್ಲ ಅಂದರೆ ನನ್ನ ತಲೆ ಕತ್ತಲಲ್ಲಿ ಮರೆಯಾಗಿತ್ತು...ನಾನು ಬಚಾವ್ ಆದೆ!!”


 “ಛೆ, ನಾನು ಅದನ್ನು ಗಮನಿಸಲಿಲ್ಲ. ಹುಷಾರಿಲ್ಲದ ನನ್ನ ಪ್ರೊಜೆಕ್ಟರ್ ಆಪರೇಟರಿಗೆ ನಿನ್ನೆ ಲೀವ್ ಸಹಾ ಕೊಟ್ಟು ಕಳಿಸಿ ನಾನೇ ಅಲ್ಲಿದ್ದೆ..ಅದೇ ಸಾಲಿನಲ್ಲಿ ನೇರವಾಗಿ ಕುಳಿತಿದ್ದವನ ತಲೆಯ ಬಾಲ್ಡ್ ಸ್ಪಾಟ್ ನೋಡಿ ನೀನೇ ಎಂದು ಮನಸ್ಸಿಗೆ ಖಚಿತವಾಯಿತು, ಆ ಗುಂಡು ಹಾರಿಸುವ ಸೀನ್ ಪರದೆಯ ಮೇಲೆ ಬಂದಾಗ ಸಿಂಕ್ರೋನೈಸ್ ಮಾಡಿ ಆ ತಲೆಗೆ ಶೂಟ್ ಮಾಡಿಬಿಟ್ಟೆ” ಎಂದು ಮ್ಲಾನವದನನಾಗಿ ಗೊಣಗಿದ ರಾಜಾರಾಮ್.

“ಪರ್ಫೆಕ್ಟ್ ಮರ್ಡರ್ ಪ್ಲಾನ್! ಆದರೆ ಅದು ಸ್ವಲ್ಪ ಮಿಸ್ ಆಗಿ ಕತ್ತಿಗೆ ಬಿದ್ದು ಸತ್ತುಹೋದ..ಅಪರಿಚಿತ ಆನಂದ್!” ಹೆಣವನ್ನು ನೋಡಿದ್ದ ಇನ್ಸ್ಪೆಕ್ಟರ್ ನುಡಿದರು.

“ಅಂದರೆ ಆ ಎಲೆಕ್ಟ್ರಿಶಿಯನ್ ಆನಂದ ಆಕಸ್ಮಿಕವಾಗಿ ಕೊಲೆಯಾಗಿ ಹೋದ. ನಾನೇ ಎದ್ದು ಹೊರಗೋಡಿ ಬಂದು ಕೊಲೆಯಾಗಿದೆ ಎಂದು ರಿಪೋರ್ಟ್ ಮಾಡಿದಾಗ ಇವನ ಮುಖ ಹೇಗಾಯಿತು ಗೊತ್ತೆ ಇನ್ಸ್ಪೆಕ್ಟರ್?” ಪ್ರತೀಕ್ ಆಗಿನ ಘಟನೆ ನೆನೆಸಿಕೊಂಡ. “ಸತ್ತುಹೋಗಿರಬೇಕಾದವನೇ ಎದ್ದು ಬಂದು ಬೇರೆಯವನ ಕೊಲೆಯಾಗಿದೆ ಎಂದಾಗ...ಇವನಿಗೆ ಶಾಕ್ ಆಗುವ ಬದಲು ಆಶ್ಚರ್ಯ ಮತ್ತು ಸೋಲು ಕಾಡಿ ಮುಖ ವಿವರ್ಣವಾಯಿತು.. ಬಿಳಿಚಿಕೊಂಡು ತೊದಲುತ್ತಾ ನಿಮಗೆ ಫೋನ್ ಮಾಡಲು ಓಡಿದ.. ಅದೆಲ್ಲಾ ಯಾಕೆ ಎಂದು ನನಗೆ ಈಗ ಸ್ಪಷ್ಟವಾಗಿ ಅರ್ಥವಾಗುತ್ತಿದೆ...”

ಯಾರೂ ಉತ್ತರಿಸಲಿಲ್ಲ.

ಪ್ರತೀಕ್ ಇನ್ಸ್ಪೆಕ್ಟರ್ ಬಳಿ ಬಂದು ಹಸ್ತಲಾಘವ ಮಾಡಿದ “ ಥ್ಯಾಂಕ್ಸ್ ನನ್ನ ಜೀವ ಉಳಿಸಿದ್ದಕ್ಕೆ... ಅಂದಹಾಗೆ ಇವನ ರಿವಾಲ್ವರ್ ಸೀಝ್ ಮಾಡುತ್ತೀರಲ್ಲ.. ಆನಂದನಿಗೆ ಬಿದ್ದ ಬುಲೆಟ್ ಮತ್ತು ಆ ಲಾಡ್ಜಿನಲ್ಲಿ ಎಲ್ಲಾದರೂ ಸಿಗಬಹುದಾದ ಇನ್ನೊಂದು ಬುಲೆಟ್ ಮತ್ತು ಇವತ್ತಿನದು.. ಮೂರನ್ನೂ ಹೋಲಿಸಿ ನೋಡಿ... ”

“ಫೋರೆನ್ಸಿಕ್ ವರದಿ ಸಹಾ ಅದನ್ನು ಖಚಿತ ಮಾಡುತ್ತದೆ...ಮತ್ತು ಆ ಆನಂದನ ಗೆಳೆಯ ವಿನೋದ್ ಒಬ್ಬ ಬಡಪಾಯಿ, ಅವನನ್ನು ಕಸ್ಟಡಿಯಿಂದ ರಿಲೀಸ್ ಮಾಡುತ್ತೇವೆ” ಇನ್ಸ್ಪೆಕ್ಟರ್ ಎಲ್ಲಾ ನಿಶ್ಚಯವಾದಂತೆ ತಲೆಯಾಡಿಸಿದರು

“ನಾನು ಕನ್ಫೆಸ್ ಮಾಡಿಕೊಳ್ಳುತ್ತೇನೆ. ತಪ್ಪೊಪ್ಪಿಕೊಂಡರೆ ಶಿಕ್ಷೆ ಕಡಿಮೆಯಾಗುತ್ತಾ ಇನ್ಸ್ಪೆಕ್ಟರ್?” ಕೇಳಿದ ಪೆಚ್ಚು ದನಿಯಲ್ಲಿ ರಾಜಾರಾಂ.

“ಮಾಡಿಕೋ..ಸರಕಾರಿ ಸಾಕ್ಷಿಯಾಗಿ ಹೇಳಿಕೆ ಕೊಟ್ಟರೆ ಕೋರ್ಟಿನಲ್ಲಿ ಜಡ್ಜ್ ಸಾಹೇಬರು ನಿನಗೆ ಶಿಕ್ಷೆ ಕಡಿಮೆ ಮಾಡಲೂಬಹುದು... ನಾವೂ ಟ್ರೈ ಮಾಡ್ತೀವಿ. ಆದರೆ ನಿನ್ನ ಸೋದರ ಬಲರಾಮನಿಗೆ ಮಾತ್ರ ಡಿಕಾಸ್ಟಾ ಕೊಲೆಗೆ ಮರಣದಂಡನೆ ಕಾಯಂ ಆಗುತ್ತದೆ...”

ಸಪ್ಪಗೆ ತಲೆಯಾಡಿಸುತಿದ್ದ ಅವನನ್ನು ಕರೆದುಕೊಂಡು ಇಬ್ಬರು ಪೋಲಿಸರು ಹೊರಗೆ ನಡೆದರು.

ಮತ್ತೆ ಆ ಸ್ಪಾಟಿನ ಮಹಜರ್ ಮಾಡಲು ತಮ್ಮ ಟೀಮಿಗೆ ಆದೇಶ ಕೊಟ್ಟರು ಇಬ್ರಾಹಿಂ.

ಸನಿಹ ಬಂದು ಅವರು ಪ್ರತೀಕನ ಬೆನ್ನು ತಟ್ಟಿದರು, “ಇದು ನಿನ್ನ ಉತ್ತಮ ಕೇಸುಗಳಲ್ಲಿ ಸೇರುತ್ತದೆ. ನಿನಗೆ ಇನ್ನು ಆ ಪತ್ರಿಕೆಯಲ್ಲಿ ಕೆಲಸ ಸಹಾ ಪಕ್ಕಾ ಆಗುತ್ತದೆ ಬಿಡು!...”


“ನಾನು ಅಲ್ಲೇ ಇರಬಯಸಿದರೆ...!”ಎಂದು ತುಟಿಯುಬ್ಬಿಸಿದ ಪ್ರತೀಕ್ “ಇನ್ಸ್ಪೆಕ್ಟರ್, ಈ ಕೇಸಿನ ರಿಪೋರ್ಟಿಗೆ ‘ಸರಿದ ಪರದೆ’ ಎಂದು ಶೀರ್ಷಿಕೆಯಿಡುತ್ತೇನೆ, ಏನಂತೀರಾ?”


Rate this content
Log in

Similar kannada story from Action