nagesh kumar cs

Action Classics Thriller

4.0  

nagesh kumar cs

Action Classics Thriller

ಮೈನಾಕ: ಕಲ್ಲಾದೆ ಏಕೆಂದು ಬಲ್ಲೆ!

ಮೈನಾಕ: ಕಲ್ಲಾದೆ ಏಕೆಂದು ಬಲ್ಲೆ!

33 mins
312


 

ಮೈನಾಕ: ಕಲ್ಲಾದೆ ಏಕೆಂದು ಬಲ್ಲೆ!

(c) ನಾಗೇಶ್ ಕುಮಾರ್ ಸಿಎಸ್

 

(ಇದೊಂದು ಕಾಲ್ಪನಿಕ ಫ್ಯಾಂಟೆಸಿ ಕತೆ)

 

ಪಾತ್ರ ಪರಿಚಯ (ಓದುಗರಿಗೆ ಸ್ಪಷ್ಟವಾಗಲಿ ಎಂದು):

 

ಲಾ ರೋಮಾ ಮಾಫ಼ಿಯಾ ಹಡಗು

ಡಿವಿಟೋ- ಕ್ಯಾಪ್ಟನ್

ಸೊಪ್ರಾನೊ- ರೇಡಿಯೋ ಆಪರೇಟರ್

ಪಾಲೆರ್ಮೋ- ಇಟಲಿಯ ಮುಖ್ಯ ಡಾನ್

ಬಲೆನೋ- ಅವನ ಸಹಾಯಕ

ಭಾರತೀಯ ನೌಕಾಪಡೆ- ಗುಪ್ತಚರ, ಕೊಚ್ಚಿ

ಡಾ. ಪ್ರಮೋದ್ ದೇಸಾಯಿ- ಅದರ ಮುಖ್ಯಸ್ಥ

ಅವಿನಾಶ್ ನಾಯಕ್- ನಾಯಕ ಮತ್ತು ಸಮರ್ಥ ಆಫೀಸರ್

ವೀಣಾ ಪಾಟೀಲ್- ಅವನ ಫಿಯಾನ್ಸಿ, ನೇವಿಯಲ್ಲಿ ಓಶನೊಗ್ರಾಫರ್, ಪುರಾಣ ತಜ್ಞೆ

ಜಿತೇಂದ್ರ, ಅನುಪಮ್ - ಅವಿನಾಶ್ ಟೀಮಿನ ಸದಸ್ಯರು

ಇಕ್ಬಾಲ್- ಮುಖ್ಯ ಪೈಲೆಟ್, ಐ ಎನ್ ಎಸ್ ಪ್ರದ್ಯುಮ್ನ -ಸಬ್ಮೆರೀನ್ ನೌಕೆ

ಪೀಟರ್- ಬಾಂಬ್ ಸ್ಕ್ವಾಡ್ ಪ್ರತಿನಿಧಿ

ಲಾ ಬ್ರೂಟಸ್ ಮಾಫಿಯಾ ಹಡಗು

 ರಾಬರ್ಟೋ ಮತು ತಂಡ- ನಿಧಿ ತೆಗೆಯಲು ಬಂದ ತಜ್ಞರು

 ಮತ್ತು ಕೆಲವು ಚಿಕ್ಕ ಪಾತ್ರಗಳು, ವಿನೀತ್ , ಕಾರ್ಲೋ, ಕಿಶೋರ್ ಇತ್ಯಾದಿ.

 

1

 

ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಒಂದೆಡೆ...

 

ಇಟಲಿಯ ಫ಼ೆರಾರೋ ಶಿಪ್ಪಿಂಗ್ ಕಂಪನಿಯ ಒಡೆತನದ "ಲಾ ರೋಮಾ" ಹೆಸರಿನ ಆಯಿಲ್ ರಿಗ್ಗಿಂಗ್ ಹಡಗು ಎಂದಿನಂತೆ ಸಾಗರ ತಳದಲ್ಲಿ ಆಯಿಲ್ ಶೋಧನೆಯ ಕಾರ್ಯ ಮಾಡಲು ಲಂಗರು ಹಾಕಿ ನಿಂತಿದೆ.

ಅದರ ಕ್ಯಾಪ್ಟನ್ ಡಿವಿಟೋ ಅಂದು ಬೆಳಿಗ್ಗೆ ಹಾಸಿಗೆಯಿಂದ ಎದ್ದ ಕೂದಲೇ ಅವನಿಗೆ ಸೀ ಸಿಕ್ನೆಸ್ಸ್ (ಕಡಲು ವಾಕರಿಕೆ) ಕಾಡಿ ತಲೆ ಸುತ್ತಿಬಂತು.

ಹೇಳಿಕೊಳ್ಳುವಂತಿಲ್ಲ, ಬಿಡುವಂತಿಲ್ಲ...

ಹಡಗಿನ ಕ್ಯಾಪ್ಟನ್ನಿಗೇ ಸಮುದ್ರದ ಅನಾರೋಗ್ಯ ಎಂದರೆ ಸಿಬ್ಬಂದಿಯ ಮುಂದೆ ಮಾನವೇ ಹೋದೀತು. ಸರಕ್ಕನೆ ಎದ್ದು ಬಾಯಿ ತೊಳೆದು ಅನಲ್ಜೆಸಿಕ್ ಲಿಕ್ವಿಡ್ ಔಷಧಿ ಗುಟುಕರಿಸಿ ಫ್ರೆಶ್ ಆಗಿ ಹೊರಬಿದ್ದ.

ಎಂದಿನಂತೆ ಹೊರಗೆ ಅದೇ ದೃಶ್ಯ... ಎಲ್ಲೆಲ್ಲೂ ಹರಡಿದ ನೀಲಿಕಡಲು, ಅದಕ್ಕೆ ಸ್ಪರ್ಧೆ ನೀಡುವಂತಾ ನೀಲಾಕಾಶ ದಿಗಂತ. ಒಂದು ತಿಂಗಳಿಂದ ಇದೇ ಆಗಿಹೋಯಿತು, ಥೋ! ಎಂದು ಗೊಣಗಿಕೊಂಡ. ಸುಮಾರು 50 ಮೈಲಿಯಾದರೂ ನಾವು ಕ್ರಮಿಸರಬಹುದು ಆದರೆ ಈ ವಿಶಾಲವಾದ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಅದು ಗಣನೆಗೆ ಬರುವ ಲೆಕ್ಕವಲ್ಲ, ದೃಶ್ಯವೂ ಬದಲಾಗುವುದಿಲ್ಲ.. 

ತನಗೆ ಆಯಿಲ್ ರಿಗ್ಗಿಂಗಿನಲ್ಲಿ "ನೀರು ಇದ್ದು, ನೆರಳಿರದ" ಈ ಜಾಗಕ್ಕೆ ’ಶಿಕ್ಷೆ ’ ಎಂದು ತಾನೇ ತನ್ನ ಬಾಸ್ ಡ್ಯಾನಿ ಪಾಲೆರ್ಮೋ ಇಲ್ಲಿಗೆ ಕಳಿಸಿದ್ದು! 

ಇಟಲಿಯ ಮಾಫಿಯ ಕುಟುಂಬದ ಒಡೆತನದ ಸಂಸ್ಥೆ ಇವೆಲ್ಲ.

ಛೇ, ತಾನು ಎರಡು ತಿಂಗಳ ಹಿಂದೆ, ಕೆಲವು ಕಡಲುಗಳ್ಳರಿಂದ ತನ್ನ ಹಡಗಲ್ಲಿ ಸಾಗಿಸುತ್ತಿದ್ದ ಡ್ರಗ್ಸ್ ಮಾಲನ್ನು ದಕ್ಷಿಣ ಆಫ್ರಿಕಾ ಕರಾವಳಿಯಲ್ಲಿ ಬಚಾಯಿಸಲಾಗದೇ ಹೋದಾಗ, ಒಂದು ಮಿಲಿಯನ್ ಯೂರೋ ಹಣ ನಷ್ಟವಾಯಿತೆಂದು ಮಾಫಿಯಾ ಮುಖ್ಯಸ್ತರೆಲ್ಲರೂ ತನ್ನ ಮೇಲೆ ಹೌಹಾರಿ, ಪಾಲೆರ್ಮೋಗೆ ದೂರು ಕೊಟ್ಟಿದ್ದರಲ್ಲವೆ?... ತನಗೆ ‘ಲಾಸ್ಟ್ ವಾರ್ನಿಂಗ್’ ಎಂದೆಲ್ಲಾ ಆತ ದಬಾಯಿಸಿ ಇಲ್ಲಿಗೆ, ತೈಲ ಶೋಧಕ ಹಡಗಿಗೆ ಕಳಿಸಿದ್ದಾನೆ...ಅದೂ ಆರು ತಿಂಗಳ ಕಾಲ!. 

ಇಲ್ಲೋ ಡರ್ರ್ರ್ರ್ ಎಂದು ಸದಾ ಮಂದವಾಗಿ ಕೊರೆಯುವ ಡ್ರಿಲ್ಲಿಂಗ್ ಸದ್ದು...ಅದಕ್ಕೆ ಗಡಗಡ ಅದುರುತ್ತಿರುವ ಹಡಗಿನ ನೆಲ ...ಇದರಿಂದಲೇ ನೌಕಾಯಾನದ ಅನುಭವಿಯಾದ ತನಗೂ ತಲೆ ಸುತ್ತುತ್ತಿದೆ ಎಂದು ಭಾವಿಸಿದ ಡಿವಿಟೋ.

"ಸರ್, ದಯವಿಟ್ಟು ಒಳಗೆ ಬನ್ನಿ..ನೀವು ನೋಡಬೇಕಾದ್ದು ಇದೆ!" ಎಂದು ಆಗಲೇ ಕ್ಯಾಬಿನಿನಿಂದ ತಲೆ ಹೊರಹಾಕಿದ ಕನ್ಸೋಲ್ ಆಪರೇಟರ್ ಆಗಿ ಎಲ್ಲಾ ರೀಡಿಂಗ್ಸ್ ನೋಡಿಕೊಳ್ಳುತ್ತಿದ್ದ ಸೊಪ್ರಾನೊ ಕೂಗಿ ಹೇಳಿದ.

"ನಿನಗೆ ಯಾರಾದರೂ ಮತ್ಸ್ಯಕನ್ಯೆ ಸಿಕ್ಕಿದ್ದರೆ ನನಗೆ ಹೇಳು...ಇಲ್ಲದಿದ್ದರೆ ಸುಮ್ನೆ..." ಎಂದು ಬೇಸರದಿಂದ ಗೊಣಗುತ್ತಾ ಒಳಹೋದ ಡಿವಿಟೋ. ಅವರ ಮುಂದೆ ಕಂಫ್ಯುಟರೈಸ್ಡ್ ಕಂಟ್ರೋಲ್ ಪ್ಯಾನೆಲ್ಲಿನ ಮಾನಿಟರ್ ಮತ್ತಿತರ ಎಲೆಕ್ಟ್ರಾನಿಕ್ ರೀಡರ್ಸ್ ಕಾಣುತ್ತಿವೆ.

" ಸರ್, ಇಲ್ಲಿ..."ಎಂದು ಒಂದು ಸಾಗರತಳದ ಆಳವಾದ ಜಾಗವನ್ನು ಮಾನಿಟರಿನಲ್ಲಿ ಮಾರ್ಕ್ ಮಾಡಿದ ಸೊಪ್ರಾನೋ."ನಮಗೆ ಕಲ್ಲಿನ ವೈಬ್ರೇಶನ್ ಸಿಗುತ್ತಿಲ್ಲ...ಸುಮಾರು 1.75 -1.8 ಮೆಗಾ ಹರ್ಜ಼್ ತರಂಗಾಂತರದ ಮೆಟಲ್ ಸಿಕ್ಕಿದಂತೆ ತರಂಗ ಬರುತ್ತಿದೆ"...ಉತ್ಸಾಹದಿಂದ ಹೇಳಿದ.

" ಯಾವುದಾದರೂ ಕೋಕಾಕೋಲಾ ಮೆಟಲ್ ಕ್ಯಾನ್ ಇರಬಹುದೆ?" ಎಂದು ವ್ಯಂಗ್ಯವಾಗಿ ನಕ್ಕ ಡಿವಿಟೋ. 

"ಖಂಡಿತಾ ಅಲ್ಲ ಸರ್" ಶಾಂತ ದ್ವನಿಯಲ್ಲೇ ವಿವರಿಸಿದ ಸೊಪ್ರಾನೋ.. ಏನೂ ಅರಿಯದ ಕ್ಯಾಪನ್ ಸಿಕ್ಕರೇನು ಮಾಡಲಾದೀತು ಎಂದುಕೊಂಡ.

"ಅದರ ಫ಼್ರೀಕ್ವೆನ್ಸಿ ಚಿನ್ನವನ್ನು ಹೋಲುತ್ತದೆ, ಸರ್!"

"ಹೋಲುತ್ತದೆ?" ಡಿವೀಟೋ ಆತಂಕದಿಂದ ಅವನತ್ತ ತಿರುಗಿದ.. "ಏನು ಹೇಳುತ್ತಿದ್ದೀಯೋ, ಹುಡುಗಾ? ಇಲ್ಲಿ ಯಾವುದೇ ಮೆಟಲ್ ಇಲ್ಲ ಎಂದು ನಮ್ಮ ಹಳೇ ಸರ್ವೆ ರೆಕಾರ್ಡ್ಸ್ ಹೇಳಿತ್ತಲ್ಲ"

"ಚಿನ್ನ ಸರ್" ಮತ್ತದೇ ಮೊಂಡು ಉತ್ತರ ಹುಡುಗನದು ಕೇಳಿ, "ಬೆಟರ್ ಬೀ ಶೂರ್... ನಿಜವೇ?" ಎಂದು ಗದರಿಸಿದ ಕ್ಯಾಪ್ಟನ್.

"100% ಸರ್, ಅಲ್ಲಿ ಚಿನ್ನದ ಡೆಪಾಸಿಟ್ ಅಗಲವಾಗಿ ಹರಡಿದೆ ಸರ್!"

ಅವನತ್ತ ಕಣ್ಣು ಕೆಕ್ಕರಿಸಿ ನೋಡಿದ ಕ್ಯಾಪ್ಟನ್. 

"ನೀನು ಇಲ್ಲೆ ಇರು, ನಾನು ಹೆಡ್ ಆಫೀಸ್ ಜತೆ ಮಾತಾಡಿ ಬರುತ್ತೇನೆ. ಯಾರಿಗೂ ಉಸುರಬೇಡ!"

 

2

ರೋಮ್, ಇಟಲಿಯ ಒಂದು ಮನೆಯಲ್ಲಿ...

ಡ್ಯಾನಿ ಪಾಲೆರ್ಮೋ 55 ವರ್ಷ ವಯಸ್ಸಿನ ದಪ್ಪ ಹೊಟ್ಟೆ, ಬಕ್ಕತಲೆಯ ಡಾನ್ ತನ್ನ ಎದುರಿಗೆ ಕುಳಿತಿದ್ದ ಸೈಂಟಿಫಿಕ್ ಅಡ್ವಸರ್ ಕಡೆ ತಿರುಗಿ ಕೇಳಿದ

" ಸೋ...ಈ ಬಾರಿ ನಮ್ಮ ಪೆದ್ದ ಕ್ಯಾಪ್ಟನ್ ಡಿವಿಟೋ ನಿಜ ಹೇಳುತ್ತಿದ್ದಾನೆ ಎಂದನಿಸುತ್ತದೆಯೆ ನಿನಗೆ?" ಎಂದು ತನ್ನ ಮುಂದಿದ್ದ ಪೇಪರ್ಸ್ ಮೇಲೆ ಸಿಗಾರ್ ಬೂದಿಯನ್ನು ಉದುರಿಸಿದ ಜಂಬದಿಂದ.

ಬಲೇನೋ ಎಂಬ ಹೆಸರಿನ ಎದುರಿಗಿದ್ದ ಅಧಿಕಾರಿ ಬಾಸ್ ವರ್ತನೆ ತಿಳಿದಿದ್ದವನು ಬೇಸರವೇನೂ ಪಡಲಿಲ್ಲ.

"ನಮ್ಮ ಕಡೆ ಇರುವ ಭಾರತೀಯ ಸಂಶೋಧಕರನ್ನು ಸಹಾ ರಹಸ್ಯವಾಗಿ ಈ ಬಗ್ಗೆ ಪ್ರಶ್ನಿಸಿ ಖಚಿತಪಡಿಸಿಕೊಂಡಿದ್ದೇನೆ. ಅನುಮಾನವೇ ಇಲ್ಲ.. ಅವರ ಕತೆಯಲ್ಲಿ ಇರುವಂತೆ ಅಲ್ಲಿ ಚಿನ್ನ ಇರಬಹುದು ... ಎಲ್ಲಾ ನಿಮ್ಮ ಮುಂದಿದೆ..."

"ಹೌದೇ?" ಈಗ ಚಿನ್ನ ಎಂದ ಕೂಡಲೇ ಅವನ ದುರಾಸೆಯ ಕಂಗಳು ಮಿನುಗಿದವು. ಆ ಪೇಪರನ್ನು ಬೂದಿ ಒದರಿ ಎತ್ತಿಕೊಂಡು ನಿಧಾನವಾಗಿ ಓದಿ ಕೆಳಗಿಟ್ಟ. 

ಗಡಸು ದನಿಯಲ್ಲಿ ಅಪ್ಪಣೆಯಿತ್ತ,

"ಹಾಗಾದರೆ ಒಂದು ಕೆಲಸ ಮಾಡಿ. ಆ ಎರಡು ಕೋಡ್ ವರ್ಡ್ಸ್ ನಮ್ಮ ಕ್ಯಾಪ್ಟನ್ನಿಗೆ ನೀವು ಮೆಸೇಜ್ ರವಾನೆ ಮಾಡಿ... ನಾವು ಅಲ್ಲಿಗೆ ಬೇರೆಯೇ ಸಮುದ್ರ ತಜ್ಞರು ಮತ್ತು ಶೋಧಕರ ತಂಡ ಕಳಿಸೋಣ, ಚಿನ್ನದ ಶೋಧನೆ ಅವರು ಮಾಡಲಿ.. ಅದುವರೆಗೂ ಡಿವಿಟೋನ ಹಡಗು ‘ಲಾ ರೋಮಾ’ ಅಲ್ಲೇ ಲಂಗರು ಹಾಕಿಕೊಂಡು ಕಾದಿರಲಿ... ನಮ್ಮ ಹೊಸಬರಿಗೆ ದಾರಿ ತೋರಿಸಿ ವಾಪಸ್ ಬರಲಿ...!"

"ಯಾವ ಎರಡು ಕೋಡ್ ವರ್ಡ್ಸ್ ಕಳಿಸಲಿ, ಬಾಸ್?" ಎಂದ ಅವನ ಅಧಿಕಾರಿ..

"ಅದೇ ನಿಮ್ಮ ಭಾರತೀಯ ಸ್ನೇಹಿತರು ಹೇಳಿದ್ದು...ರಾಮಾಯಣ ಮತ್ತು... ಮೈನಾಕ!"

"ಡಿವಿಟೋಗಂತೂ ಕಾಲ್ ಮಾಡಿ ಎಲ್ಲಾ ಹೇಳಿಬಿಡಲೆ?" ಎನ್ನುತ್ತಾ ಎದ್ದ ಅಧಿಕಾರಿ ಬಲೆನೋ .

 ಡಾನ್ ಪಾಲೆರ್ಮೋ ಯೋಚಿಸಿದ, "ಈಗಿನ ಪರಿಸ್ಥಿಯಲ್ಲಿ ಹೇಳಲೇಬೇಕಲ್ಲ.. ಅವನು ನಂತರ ತರಲೆ ಮಾಡಿದರೆ ಸರಿಯಾಗಿ ಡೀಲ್ ಮಾಡುವಾ...ಈಗಂತೂ ಈ ವಿಷಯ ತಿಳಿದ ಯಾರೂ ಬದುಕಿರಬಾರದು ಎಂದು ಡಿವಿಟೋಗೆ ಹೇಳಿ...ಅವನು ಅದನ್ನಾದರೂ ನೋಡಿಕೊಳ್ಳಬಲ್ಲ!"

3

‘ಲಾ ರೋಮಾ’ ದ ಯುವ ಕನ್ಸೋಲ್ಸ್ ಆಪರೇಟರ್ ಸೊಪ್ರಾನೋ ಜಾಣನೂ ಹೌದು...ಇಟಲಿಯ ಈ ನೌಕೆ ಮಾಫಿಯಾದವರದು ಎಂದು ತಿಳಿದೂ ಕೆಲಸಕ್ಕೆ ವಿಧಿಯಿಲ್ಲದೇ ಸೇರಿದ್ದ.

ತಾನು ಚಿನ್ನದ ವಿಷಯ ಹೇಳಿದ ಕೂಡಲೇ ಹೇಗೆ ಕ್ಯಾಪ್ಟನ್ ಕಣ್ಣು ದುರಾಸೆಯಿಂದ ಅರಳಿತಲ್ಲ, ಇನ್ನು ಹೆಡ್ ಆಫೀಸಿಗೂ ತಿಳಿದರೆ ಚಿನ್ನ ತೆಗೆಯಲು ಬಂದೇ ಬರುವರು, ಇದನ್ನು ನಾನು ಕನಿಷ್ಟಪಕ್ಷ ಯಾರಿಗಾದರೂ ಹೇಳಿಬಿಟ್ಟರೆ ತಾನು ಸುರಕ್ಷಿತ, ಏನಾದರೂ ತನಗೆ ಮಾಡಿಬಿಟ್ಟರೆ? ಎಂಬ ಯೋಚನೆ ಸುಳಿದೊಡನೆ ಹೊಸ ಇನ್ ಕಮಿಂಗ್ ಮೆಸೇಜ್ ಆದ ಕೋಡ್ ವರ್ಡ್ ರಾಮಾಯಣ ಮತ್ತೇನದು ಮೈನಾಕಾ? ಆ ಮೆಸೇಜನ್ನು ಪೋಲೀಸ್ ಫ್ರೀಕ್ವೆನ್ಸಿಯಲ್ಲಿ ಮತ್ತೆ ತಾನೇ ಹರಿಯಬಿಟ್ಟ. ಅದನ್ನು ಮುಗಿಸುತ್ತಿದ್ದಂತೆ ಹಿಂದಿನ ಬಾಗಿಲಿನಿಂದ ಬಂದಿದ್ದ ಕ್ಯಾಪ್ಟನ್ ಡಿವಿಟೋ ಹರ್ಷದಿಂದ ಕೂಗಿದ,

"ಸೊಪ್ರಾನೋ, ಮೈ ಬಾಯ್!"

"ಏನು ಸರ್" ಎಂದು ಸರಕ್ಕನೆ ತಲೆ ತಿರುಗಿಸಿದ ಯುವಕ. ಆದರೇ ಕ್ಯಾಪ್ಟನ್ ಡಿವಿಟೋ ಮಹಾಕಟುಕ, ಅನುಭವಿ.

ಅರೆ ಕ್ಷಣದಲ್ಲಿ ಮಿಂಚಿನಂತೆ ಬಂದ ಅವನ ಒಂದು ಕೈ ತಲೆಯನ್ನು ಬಿಗಿಯಾಗಿ ಹಿಡಿದರೆ, ಇನ್ನೊಂದು ಹರಿತವಾದ ಚಾಕು ಗಂಟಲಿನ ಬಳಿ ಸುಯ್ಯೆಂದು ಅಡ್ಡ ಸುಳಿದು ಸೀಳಿ ತನ್ನ ಕೆಲಸ ಮುಗಿಸಿತ್ತು.

"ಐ ಯಾಮ್ ಸೋ ಸಾರಿ, ಮೈ ಬಾಯ್" ಎಂದು ಒಂದು ನಿಮಿಷದ ನಂತರ ಅವನ ಹೆಣವನ್ನು ಗೋಣಿಚೀಲದಲ್ಲಿ ತುಂಬಿಸತೊಡಗಿದ. 

ಚೆಲ್ಲಿದ ರಕ್ತವನ್ನು ಆಮೇಲೆ ಬಂದು ಕ್ಲೀನ್ ಮಾಡಿದರಾಯಿತು. ಸದ್ಯ ಯಾರೂ ಡೆಕ್ ಬಳಿ ಇಲ್ಲ. ಇವನ ಹೆಣ ಇನ್ನು ಮೀನು ಮೊಸಳೆಗಳ ಆಹಾರವಾಗಲಿದೆ ಎಂದು ತನ್ನ ಕಾರ್ಯಕ್ಕೆ ತಾನೇ ಮೆಚ್ಚುತ್ತಾ ಚೀಲ ಎತ್ತಿಕೊಂಡು ಹೊರನಡೆದ.

ಆದರೆ, ಆ ರೇಡಿಯೋ ಆಪರೇಟರ್ ಮಾನಿಟರಿನಲ್ಲಿ ಏನು ‘ಮೆಸೇಜ್ ಸೆಂಟ್’ ಎಂದು ಬಂದಿತೋ ಅವನು ಗಮನಿಸಲೇ ಇಲ್ಲ.

ಆದರೆ ಆ ಮೇಸೇಜನ್ನು ಪೋಲಿಸ್ ಫ್ರೀಕ್ವೆನ್ಸಿಯಲ್ಲಿ ಕ್ಯಾಚ್ ಮಾಡಿದ್ದ ಇಂಟರ್‌ಪೋಲ್ ವಿಚಾರಿಸಹತ್ತಿದರು.

4

 ಅದಾದ ಎರಡು ದಿನಗಳ ನಂತರ...

 

ಕೇರಳದ ಕೊಚ್ಚಿಯ ಪೋರ್ಟ್ ಟ್ರಸ್ಟ್ ಕಾಂಪ್ಲೆಕ್ಸಿನ ನೆಲೆಮಾಳಿಗೆಯಲ್ಲಿರುವ ಒಂದು ರಹಸ್ಯ ಸರಕಾರಿ ಬೇಸ್ ಬಗ್ಗೆ ಯಾರಿಗೂ ಹೊರಗಿನವರಿಗೆ ಗೊತ್ತಿಲ್ಲ. ಹೊರಗಿನವರು ಹಾಗಿರಲಿ, ಅದರ ದ್ವಾರಗಳೂ ಮಿಕ್ಕ ಪೋರ್ಟ್ ಟ್ರಸ್ಟ್ ನೌಕರರಿಗೆ ತೆರೆಯುವುದಿಲ್ಲ, ಆ ಸಂಸ್ಥೆಗಾಗಿ ಪ್ರತ್ಯೇಕ ದ್ವಾರವೂ ಇದೆ.

ಅದಕ್ಕೆ ಇಂಡಿಯನ್ ಅಂಡರ್ ವಾಟರ್ ರಿಸರ್ಚ್ ಇನ್ಸ್ಟಿಟ್ಯೂಟ್ ಎಂಬ ಅನುಮಾನ ಬಾರದ ಸಾಧಾರಣ ಹೆಸರನ್ನೂ ಕೊಡಲಾಗಿತ್ತು. ಆದರೆ ಅಲ್ಲಿ ಸೇವೆ ಸಲ್ಲಿಸುವವರಲ್ಲಿ ಕೆಲವರಿಗೆ ಮಾತ್ರವೇ ಅದು ಭಾರತೀಯ ನೇವಿಯ ಗುಪ್ತಚರ ವಿಭಾಗಗಳಲ್ಲಿ ಒಂದು ಎಂದು ತಿಳಿದಿದೆ. ಹಾಗೆ ತಿಳಿದವರಲ್ಲಿ ಒಬ್ಬನಾದ ಕ್ಯಾಪ್ಟನ್ ಅವಿನಾಶ್ ನಾಯಕ್ ಆ ಬೆಳಿಗ್ಗೆ ಪ್ರತ್ಯೇಕ ನೆಲಮಾಳಿಗೆ ಲಿಫ್ಟ್ ಮೂಲಕ ಪ್ರವೇಶಿಸಿದ.

ಅವನನ್ನು ನೋಡಿ ಅಲ್ಲಿದ್ದ ಸಹೋದ್ಯೋಗಿಗಳೆಲ್ಲಾ ಮುಗುಳ್ನಗೆ ಸೂಸುತ್ತಾ "ಗುಡ್ ಮಾರ್ನಿಂಗ್, ಕ್ಯಾಪ್ಟನ್" ಎಂದು ವಿಶ್ ಮಾಡಿದರು. 32 ವರ್ಷ ವಯಸ್ಸಿನ ಆರಡಿ ಎತ್ತರದ ಕ್ರ್ಯೂ ಕಟ್ ಕ್ರಾಪ್ ಮಾಡಿಸಿದ್ದ ಈ ಕನ್ನಡಿಗ ಅಧಿಕಾರಿ ಯಾರಿಗೆ ತಾನೇ ಗೊತ್ತಿರಲಿಲ್ಲ? ಇತ್ತೀಚೆಗಷ್ಟೇ ಅರಬ್ಬಿ ಸಾಗರದಲ್ಲಿ ಒಂದು ಸಾಹಸಮಯ ಮಿಷನ್ ಮುಗಿಸಿಕೊಂಡು ಯಶಸ್ವಿಯಾಗಿ ಬಂದಿದ್ದ . ಸಹಜವಾಗಿಯೇ ಅತ್ಯಂತ ಸಾಹಸಿ ಮತ್ತು ಅಸಾಧಾರಣ ನಾಯಕತ್ವ ಹೊಂದಿದ್ದ ಅವನು ನೇವಿಯ ಸಮರ್ಥ ಅಧಿಕಾರಿಗಳ ಟಾಪ್ ಲಿಸ್ಟಿನಲ್ಲಿದ್ದ.

 

ಅವಿನಾಶ್ ಒಳಗೆ ಬಂದವನೇ ಬಂದು ಉಫ಼್! ಎಂದು ತನ್ನ ಸೀಟಿನಲ್ಲಿ ಕುಸಿದು ಕುಳಿತು ಅಂದಿನ ಕಾರ್ಯಕ್ರಮಗಳ ಕ್ಯಾಲೆಂಡರ್ ತನ್ನ ಲ್ಯಾಪ್ಟಾಪಿನಲ್ಲಿ ಗಮನಿಸಲಾರಂಭಿಸಿದ. "ಲಂಚ್ ವಿತ್ ವೀಣಾ @ 1.30 ಪಿ ಎಂ" ಎಂದ್ದಿದ್ದನ್ನು ನೋಡಿ ಅವನ ಮೊಗದಲ್ಲಿ ಹರ್ಷದ ಮಂದಹಾಸ ಮೂಡಿತು

 

ವೀಣಾ ಪಾಟೀಲ್ ಎಂಬ ಹೆಸರಿನ ಆ ಯುವತಿ ನೇವಿಯ ಸೀನಿಯರ್ ಓಶನೋಗ್ರಾಫರ್ ಆಗಿ ಇವರ ಸಂಸ್ಥೆಗೆ ದೆಹಲಿಯಿಂದ ಡೆಪ್ಯುಟೇಶನ್ ನಲ್ಲಿ ಬಂದು ಒಂದು ವರ್ಷ ಆಗುತ್ತಲಿತ್ತು. 26 ವರ್ಷದ ವೀಣಾ ನೇವಿಯ ಯುವ ಮಹಿಳಾ ಸಾಧಕರಲ್ಲಿ ಒಬ್ಬಳು ಎನ್ನುವುದರಲ್ಲಿ ಸಂಶಯವಿರಲಿಲ್ಲ.

5’-8’’ ಎತ್ತರವಿದ್ದ ಧಾರವಾಡದ ಚುರುಕು ಕಂಗಳ ವೀಣಾ ಉತ್ತಮ ಯೋಗಾ ಪಟು ಮತ್ತು ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಸಹಾ. ಅವಳ ತಂಟೆಗೆ ಅಕಸ್ಮಾತ್ ಬಂದ ಯಾರೇ ಕಳ್ಳ ಅಥವಾ ಪೋಲಿಗಳಿಗೆ ಗ್ರಹಚಾರ ಕೆಟ್ಟಿರಬೇಕು ಅಷ್ಟೇ... ಹಾಗೆ ಬುದ್ದಿ ಕಲಿಸಬಲ್ಲವಳಾಗಿದ್ದಳು... ಸ್ವತಃ ಸಾಗರ ವಿಜ್ಞಾನಿಯಾಗಿ ಉದ್ಯೋಗ ಮಾಡುತ್ತಿದ್ದಾಗ್ಯೂ ಭಾರತೀಯ ಸಂಸ್ಕೃತಿಯ ಅಧ್ಯಯನ ಮಾಡಿ ಇಂಡಿಯನ್ ಕಲ್ಚರಲ್ ಹೆರಿಟೇಜ್ ಸೆಂಟರಿನಲ್ಲಿ ಇತ್ತೀಚೆಗಷ್ಟೇ ಒಂದು ರಿಸರ್ಚ್ ಪೇಪರ್ ಸಬ್ಮಿಟ್ ಮಾಡಿ ಗೋಲ್ಡ್ ಮೆಡಲ್ ಪಡೆದ ಹೆಮ್ಮೆ ಅವಳದಾಗಿತ್ತು. ನೇವಿಯಲ್ಲಿ ಸಮುದ್ರ ತಟದ ಪರಿಶೋಧಕಳಾದರೂ ಭಾರತೀಯ ಇತಿಹಾಸ, ಪುರಾಣ ಅವಳ ಫೇವರಿಟ್ ಹಾಬಿಯಂತೆ. ಈ ಹಾಬಿ ತನಗೂ ಬಹಳ ಆಸಕ್ತಿ ತಂದಿದ್ದರಿಂದ ತಾನೇ ತಾವಿಬ್ಬರೂ ಮಾನಸಿಕವಾಗಿ ಹತ್ತಿರ ಬಂದು ಪರಸ್ಪರ ಪ್ರೇಮಾಂಕುರವಾಗಿ ಜೀವನಸಾಥಿಗಳಾಗಲು ನಿಶ್ಚಯಿಸಿದ್ದು ಎಂದು ನೆನೆಪಿಸಿಕೊಂಡ ಅವಿನಾಶ್.

ಆದರೆ ಆ ದಾರಿ ಸುಗಮವೇನಾಗಿರಲಿಲ್ಲ.

ಮೊದಲ ಬಾರಿಗೆ ತನ್ನ ಊರಾದ ಮಂಗಳೂರಿಗೆ ಹೋದಾಗ, ಮನೆಯಲ್ಲಿ ವೀಣಾ ಪಾಟೀಲ್ ಹೆಸರು ಪ್ರಸ್ತಾಪಿಸಿದಾಗ, ಅಲ್ಲೇ ಪೇಪರ್ ಒದುತ್ತಿದ್ದ ಅಪ್ಪ "ವೀಣಾ ಪಾಟೀಲ್ ಅಂದೆಯಾ?... ಛೆಛೇ, ತುಂಬಾ ಓಲ್ಡ್ ಫ್ಯಾಶನ್ಡ್ ಹೆಸರು ಕಣೋ, ಅಡಗೂಲಜ್ಜಿ ತರಹಾ...ಈಗೆಲ್ಲಾ ಯಾವ್ಯಾವ ತರಹ ಹೆಸರಿಟ್ಟುಕೊಳ್ಳುತ್ತಾರೆ... ಸೋನಮ್, ಕಂಗನಾ, ಅನನ್ಯಾ, ಇಶಾ..."ಎಂದು ಜೋಕ್ ಮಾಡುತ್ತಾ ತಲೆಯಾಡಿಸಿದ್ದರು.

ಅಡಿಗೆ ಮನೆಯಿಂದ ಸೌಟು ಕೈಯಲ್ಲಿ ಹಿಡಿದು ಓಡೋಡಿ ಬಂದ ಅಮ್ಮ ಕಣ್ಣರಳಿಸುತ್ತಾ, "ಅಯ್ಯೋ, ಸುಮ್ನಿರಿ, ಹುಚ್ಚೆ ನಿಮಗೆ?... ಪಾಟೀಲ್ ಅಂದರೆ ಲಿಂಗಾಯತರೇನೋ..." ಎಂದು ಆತಂಕದಿಂದ ಪ್ರಶ್ನಿಸಿದ್ದಳು.

ತಾನು ಹೌದೆನ್ನುವ ಮುನ್ನವೇ ಅಪ್ಪ ಈ ವಿಷಯದಲ್ಲಿ ಸ್ವಲ್ಪ ಮಾಡರ್ನು! "ಅದರಲ್ಲೇನೇ ಇದೆ? ದೊಡ್ಡೋರು ಅನೇಕತೆಯಲ್ಲಿ ಏಕತೆ ಎನ್ನುವುದಿಲ್ಲವೆ, ಹಾಗೆ" ಅಂದಿದ್ದರು ಸ್ವಲ್ಪ ಸಂಪ್ರದಾಯಸ್ಥ ಪತ್ನಿಯ ಬಾಯಿ ಮುಚ್ಚಿಸಲು.

" ಏನು ಕತೆಯೋ" ಎಂದು ವಾದಿಸದೇ ಸುಮ್ಮನಾಗಿದ್ದಳು ಅಮ್ಮ. ಮಗ ಮದುವೆ ಮಾಡಿಕೊಳ್ಳುತಾನೆಂಬ ಸಂತಸ ಮನದಲ್ಲಿಲ್ಲದೇ ಹೋದೀತೆ?

ಆದರೆ ಅದೆಲ್ಲಾ ವೀಣಾ ತಮ್ಮ ಮನೆಗೆ ಒಂದು ಸಲ ಭೇಟಿ ಕೊಡುವ ಮುನ್ನ ಮಾತ್ರ!

ಮೊದಲ ಸಲ ಮನೆಗೆ ಬಂದಿದ್ದ ವೀಣಾ ತನ್ನ ಚೆಲುವು ಮತ್ತು ವರ್ತನೆಯಿಂದ ಅಪ್ಪ ಅಮ್ಮ ಬೆರಗಾಗುವಂತೆ ಮಾಡಿದ್ದರೆ ತನ್ನ ರಾಮಾಯಣ, ಮಹಾಭಾರತದ ಅಧ್ಯಯನದ ಜ್ಞಾನ ಹೇಳಿ ಅವರ ಮನಸ್ಸನ್ನೇ ಪೂರ್ತಿ ಆವರಿಸಿದ್ದಳು.

"ಎಲ್ಲಿಂದ ಕರ್ಕೊಂಡ್ ಬಂದ್ಯೋ ಇವಳನ್ನಾ?...ಮಹಾಲಕ್ಷ್ಮಿ ತರಹಾ ಇದ್ದಾಳೆ, ಎಲ್ಲಾ ದೃಷ್ಟಿಯಲ್ಲೂ..." ಎಂದು ಕೊನೆಗೆ ಕಣ್ತುಂಬಿ ಹೇಳಿದ್ದಳು ಅಮ್ಮ.

"ಇವಳಾ?...ಸಮುದ್ರದ ಮಧ್ಯೆ ಇದ್ದಳಮ್ಮಾ, ಈ ಮತ್ಸ್ಯಕನ್ಯೆ...ಅಲ್ಲಿಂದ ಹೊತ್ತುಕೊಂಡು ಬಂದೆ ಅಂತೀನಿ" ಎಂದು ಸಾಗರವಿಜ್ಞಾನಿ ಪ್ರೇಮಿಯ ಬಗ್ಗೆ ಹೆಮ್ಮೆಯಿಂದ ಜೋಕ್ ಮಾಡಿದ್ದ ಅವಿನಾಶ್.

ತಾಯಿಲ್ಲದ ವೀಣಾಳ ತಂದೆ ಶಿವಶಂಕರ್ ಪಾಟೀಲ್ ಮತ್ತು ತನ್ನ ಅಪ್ಪ ಅಮ್ಮ ಸೇರಿ ತಮ್ಮಿಬ್ಬರಿಗೆ ಎಂಗೇಜ್‌ಮೆಂಟ್ ಅಂತಲೂ ಮಂಗಳೂರಿನಲ್ಲೇ ಆಗಲೇ ಮಾಡಿ ಇಂದಿಗೆ ಅರ್ಧ ವರ್ಷವೇ ಕಳೆದಿತ್ತು ಎಂದು ಅವಿನಾಶ್ ನೆನೆಸಿಕೊಂಡ.

ಆರು ತಿಂಗಳು.. ಹ್ಮ್ಮ್!!... 

ಮದುವೆಯ ಮಹೂರ್ತ ಕೂಡಿಬರುವುದು ಹಾಗಿರಲಿ... ಪರಸ್ಪರ ಮೀಟ್ ಮಾಡುವುದು ಕೂಡಾ ವೀಕೆಂಡ್ ಮೂವೀ ಅಂತಲೋ, ಅಥವಾ ವಾರಕ್ಕೊಂದು ಲಂಚ್ ಎಂದೋ ಆಗಿಬಿಟ್ಟಿತ್ತು. ಇಬ್ಬರಿಗೂ ಕೈ ಬಿಡುವಾಗದಷ್ಟು ಭಾರತೀಯ ನೇವಿಯ ಮಿಷನ್ನುಗಳು ಒಂದಾದ ಮೇಲೊಂದು...ಹಲವು ಬಾರಿ ಬೇರೆ ಬೇರೆ ಮಿಷನ್ನು, ಬೇರೇ ಬೇರೆ ಊರುಗಳಲ್ಲಿ ಬಿಡಾರ ಸಹಾ.

 

ಇದ್ದಕ್ಕಿದ್ದಂತೆ ಅವನ ಡೆಸ್ಕ್ ಫೋನ್ ರಿಂಗಣಿಸಿ ಅವನ ನೆನಪಿನ ಸುರುಳಿ ಮುದುರಿ ದಡಕ್ಕನೆ ಈ ಲೋಕಕ್ಕೆ ಎಳೆದು ತಂದಿತು.

"ಅವಿನಾಶ್, ಕಮಿನ್ ಪ್ಲೀಸ್..." ಅವನ ಬಾಸ್ ಡಾ. ಪ್ರಮೋದ್ ದೇಸಾಯರ ಭಾರವಾದ ದ್ವನಿ ಮೊಳಗಿತ್ತು!

"ಬಂದೆ ಸರ್" ಎನ್ನುತ್ತಾ ಎದುರಿಗಿದ್ದ ಅವರ ಕ್ಯಾಬಿನ್ನಿನತ್ತ ಸಾಗಿದ್ದ.

"ಗುಡ್ ಮಾರ್ನಿಂಗ್ ಕ್ಯಾಪ್ಟನ್" ಎನ್ನುತ್ತಾ ತಮ್ಮ ಲ್ಯಾಪ್‌ಟಾಪನ್ನು ದೂರ ತಳ್ಳಿ ತಮ್ಮ ಬಿಳಿ ಮೀಸೆ ಗಡ್ಡದ ಮುಖದಲ್ಲೊಂದು ನಿಷ್ಕಲ್ಮಶ ಸ್ಮೈಲ್ ಮೂಡಿಸಿದರು ಬಾಸ್.

ಯಾವಾಗಲೂ ಅಷ್ಟೇ, 60 ವರ್ಷ ವಯಸ್ಸಿನ, 30 ವರ್ಷದಿಂದ ಹಲವು ವಿಭಾಗಗಳಲ್ಲಿ ಕೀರ್ತಿ ಸಾಧಿಸಿದ್ದ ಇಂಟೆಲಿಜೆನ್ಸ್ ಎಕ್ಸ್ಪರ್ಟ್ ಆಗಿದ್ದ ದೇಸಾಯರಿಗೆ ತನ್ನ ಯುವ ಅಸಿಸ್ಟೆಂಟ್ ಅವಿನಾಶ್ ಎಂದರೆ ಒಂದು ರೀತಿ ವಿಶೇಷ ಪ್ರೀತಿ, ನಂಬಿಕೆ.

ತಾವು ಓದುತ್ತಿದ್ದ ಕೆಲವು ಪೇಪರ್ಸ್ ಅವನತ್ತ ತಳ್ಳಿದರು. 

"ಏನಿದು ಸರ್?... ಇಂಟರ್ ಪೋಲ್ ( ಅಂತರರಾಷ್ಟ್ರೀಯ ಪೋಲಿಸ್ ಸಂಸ್ಥೆ) ನೋಟೀಸ್, ನಮ್ಮ ರಾ (RAW) ಗುಪ್ತಚರ ಸಂಸ್ಥೆಯಿಂದ ನಮಗೆ ಫ಼ಾರ್ವರ್ಡ್ ಆಗಿದೆ" ಎಂದ ಅವಿನಾಶ್‌ಗೆ ಅವರ ಬಾಯಲ್ಲಿ ಬ್ರೀಫ್ ಮಾಡಿಸಿಕೊಂಡರೇ ಸಮಾಧಾನ.

 ಈ ಸಂಸ್ಥೆಗೆ ಐದು ವರ್ಷದ ಹಿಂದಿನಿಂದ ನೇವಿಯಿಂದ ನಿವೃತ್ತಿ ಪಡೆದರೂ ಮತ್ತೆ ಸ್ಪೆಷಲ್ ಡ್ಯೂಟಿ ಎಂದು ಆಕ್ಟಿವ್ ಆಗಿ ಸೇವೆ ಸಲ್ಲಿಸುತ್ತಿದ್ದ ಡಾ. ಪ್ರಮೋದ್ ದೇಸಾಯರಿಗೆ ಗೃಹ ಸಚಿವಾಲಯ, ಭಾರತೀಯ ನೇವಿ ಹೆಡ್ ಕ್ವಾರ್ಟರ್ಸ್ಸ್ ಮತ್ತು ಇಂಟರ್ ಪೋಲ್ ಅಲರ್ಟ್ ಗಳು ಆಗಾಗ ನಾನಾ ವಿಷಯದ ಬಗ್ಗೆ ಇ-ಮೈಲಿನಲ್ಲಿ ಬರುತ್ತಿದ್ದುದು ಸರ್ವೇಸಾಮಾನ್ಯವಾಗಿತ್ತು. 

’ಆಲ್ ಇನ್ ಎ ಡೇಸ್ ವರ್ಕ್’ ಎಂದು ಎಲ್ಲವನ್ನೂ ದಿನವೂ ಗಮನಿಸಿ ಚಾಲನೆ ನೀಡುತ್ತಿದ್ದ ಅವರು ಇಂದೇಕೋ ತಮ್ಮ ಬಿಳಿ ಗಡ್ಡ ನೀವಿಕೊಂಡು ಗಂಭೀರವಾಗಿ ನುಡಿದರು. "ಇದನ್ನು ಓದಿ ನೋಡು. ನನಗೇನೂ ಅರ್ಥವಾಗಲಿಲ್ಲ, ಯಾಕೋ!"

ಅವಿನಾಶ್ ತಡಮಾಡದೇ ಅದನ್ನು ಕೈಗೆತ್ತಿಕೊಂಡು ಜೋರಾಗಿ ಓದಿದ .

"ಇದರ ಪ್ರಕಾರ:- ಇಟಲಿಯ ಮಾಫಿಯಾದವರ ಫೋನ್ ಲೈನ್ ಟ್ಯಾಪ್ ಮಾಡಿದ್ದ ಇಂಟರ್‌ಪೋಲ್ ಸಿಬ್ಬಂದಿಗೆ ಮಾಫಿಯಾದವರು ಇನ್ನೇನು ದಕ್ಷಿಣ ಹಿಂದೂ ಸಾಗರದಲ್ಲಿ ಯಾವುದೋ ದೊಡ್ಡ ಆಪರೇಷನ್ ಮಾಡಲಿದ್ದಾರೆಂದು ಗೊತ್ತಾಗಿದೆ. ಅವರಿಗೆ ಅದರ ಕೋಡ್ ವರ್ಡ್ ಅರ್ಥವಾಗಿಲ್ಲ... ಬಹಳ ಆಶ್ಚರ್ಯ... ಆ ಕೋಡ್ ವರ್ಡ್-"ರಾಮಾಯಣ" ಎಂದು ಒಂದು ಪದ ಇತ್ತಂತೆ. ಅದೂ ಯಾವುದೋ ಇಟಲಿಯ ಹಡಗಿಗೆ ಹೋಗಿದೆ ಎಂದು..ಹ್ಮ್ಮ್... ವಿವರಗಳು ಕೊಟ್ಟಿದ್ದಾರೆ..." ಇಷ್ಟು ಓದಿ ಪುನರುಚ್ಚರಿಸಿದ ಅವಿನಾಶ್. ಡಾ ದೇಸಾಯಿ ಉತ್ತರಿಸಲಿಲ್ಲ.

"ಎರಡನೇ ಕೋಡ್ವರ್ಡ್-- ಮೈನಾಕ ಅಂತಿದೆ ಸರ್" ಓದಿದ ಅವಿನಾಶ್.

"ಹೌದು!" ತಲೆಯಾಡಿಸಿ ಸೀಟಿನಲ್ಲಿ ಮುಂದೆ ಜರುಗಿದರು ಡಾ, ದೇಸಾಯಿ. "ರಾಮಾಯಣ ಅನ್ನುವ ಮೊದಲ ಪದವಿದ್ದರಿಂದ ಅವರು ಭಾರತೀಯ ಗುಪ್ತಚರ ಸಂಸ್ಥೆ, ದೆಹಲಿಗೆ ಕಳಿಸಿದ್ದಾರೆ. ಹಡಗಿಗೆ ಮೆಸೇಜ್ ಇತ್ತಲ್ಲ ಎಂದು "ರಾ"-ದವರು ಮತ್ತೇನೂ ವಿಚಾರಿಸದೇ ನಮಗೆ ಇ-ಮೈಲ್ ಫಾರ್ವರ್ಡ್ ಮಾಡಿದ್ದಾರೆ.. ಈಗ ಮುಂದಿನದು ನಾವು ನೋಡಿಕೊಳ್ಳಬೇಕು..." ಸ್ವಲ್ಪ ನಿರಾಸೆಯ ಎಳೆಯಿತ್ತು ಅವರ ದ್ವನಿಯಲ್ಲಿ.

ಅವಿನಾಶ್ ತಲೆಯೆತ್ತಿದ. ಡಾ|| ದೇಸಾಯರೇ ಮಾತಾಡಲಿ ಎಂದು ಸುಮನಿದ್ದ. ಅವರು ‘ನಾವು’ ಅಂದರೆ ತಾನು ಎಂಬುದು ಅವಿನಾಶ್‍‌ಗೆ ತಿಳಿಯದ ವಿಷಯವೇನಲ್ಲ.

"ಅವಿನಾಶ್, ಸುಳಿವುಗಳು ಹೀಗಿವೆ... ದಕ್ಷಿಣ ಹಿಂದೂ ಸಾಗರ... ರಾಮಾಯಣ, ಮೈನಾಕ...ಹಡಗು...ಮಾಫಿಯಾ...ಇದೆಲ್ಲಾ ಯಾರ ಬಳಿ ಹೇಳಿದರೆ ಉತ್ತರ ಸಿಗುವುದು, ಗೊತ್ತಲ್ಲ?" ಎಂದು ಅವನನ್ನು ಪ್ರಶ್ನಾರ್ಥಕವಾಗಿ ನೋಡಿದರು ಡಾ. ದೇಸಾಯಿ.

"ವೀಣಾ ಪಾಟೀಲ್..."ಎಂದು ಒಮ್ಮೆಲೇ ಅರ್ಥವಾದವನಂತೆ ಅವಳ ಹೆಸರು ಉಚ್ಚರಿಸಿದ ಅವಿನಾಶ್.

"ಕರೆಕ್ಟ್... ನಿನ್ನ ಫಿಯಾನ್ಸಿ!... ಸ್ವಲ್ಪ ಅವಳಿಗೆ ಈ ಪ್ರಶ್ನೆ ಕೇಳು, ಮೊದಲು ಸ್ವಲ್ಪ ಜಾಣತನದಿಂದ ಏನಾದರೂ ಕ್ಲೂ ಕೊಟ್ಟು..."

ಅವಿನಾಶ್ ಪೆಚ್ಚುನಗೆ ನಕ್ಕ. "ನನಗೆ ಅವಳ ಜತೆ ಇವತ್ತು ಲಂಚ್ ಡೇಟ್ ಇರುವಾಗಲೇ ಇದೆಲ್ಲಾ ಯಾಕೆ ಬರಬೇಕಿತ್ತು ಸರ್?... ಅವಳು ಇದಕ್ಕಾಗೇ ಕರೆದೆ ಎಂದು ತಪ್ಪು ತಿಳಿಯುತ್ತಾಳೆ"

ಡಾ. ದೇಸಾಯಿ "ವೆಲ್, ಅದು ನಿನ್ನ ಸಮಸ್ಯೆ, ನನ್ನದಲ್ಲ" ಎಂದು ಮುಸಿಮುಸಿ ನಕ್ಕರು.

ಅವಿನಾಶ್ ಕೂಡಾ ಕಷ್ಟಪಟ್ಟು ನಕ್ಕು ಆ ಪತ್ರಗಳನ್ನು ತೆಗೆದುಕೊಂಡು ಸೀಟಿಗೆ ನಡೆದ.

ಮತ್ತೆ ಕೂರುವ ಮುನ್ನವೇ ಅವನ ತಾಯಿಯ ಕಾಲ್ ಬಂದಿತು.

"ಅವೀ, ಇವತ್ತು ಶನಿವಾರ. ಆಂಜನೇಯನ ಗುಡಿಯಲ್ಲಿ ಬೆಣ್ಣೆ ಅಲಂಕಾರ ಮಾಡಿಸಿದ್ದೇನೆ...ನಿನ್ನ, ವೀಣಾ ಹೆಸರು ಸೇರಿಸಿ...ನೀನೂ ಹನುಮಾನ್ ಚಾಲೀಸ ಹೇಳೀಕೋ!..ಆ...ಮೇ...ಲೆ...!"

ಆದರೆ ಅವಿನಾಶ್ ಮಿಕ್ಕ ಮಾತು ಕೇಳಿಸಿಕೊಳ್ಳಲೇ ಇಲ್ಲ. 

ಅವನ ತಲೆಗೆ ಮಿಂಚು ಹೊಡೆದಂತೆ ಐಡಿಯಾ ಬಂದಿತ್ತು. 

ಆಂಜನೇಯ+ರಾಮಾಯಣ+ಸಮುದ್ರ! 

ಅಮ್ಮಾ, ಥ್ಯಾಂಕ್ ಯೂ!

4

‘ರಾಜಧಾನಿ ಥಾಲಿ’ ಎಂಬ ರೆಸ್ಟೋರೆಂಟ್ ಹೊಸದಾಗಿ ತೆರೆದಿತ್ತು , ಮೊದಲೆ ಸೀ ಸೈಡ್ ಮೂಲೆಯ ಟೇಬಲ್ ಬುಕ್ ಮಾಡಿಸಿದ್ದರಿಂದ ರಿಸರ್ವ್ ಆಗಿತ್ತು.

ಮಿಕ್ಕ ಕೆಲಸಗಳನ್ನೆಲ್ಲಾ ಬೇಗ ಬೇಗ ಮುಗಿಸಿ ಅವಿನಾಶ್ ಅಲ್ಲಿಗೆ ಬಂದಾಗ ರೆಸ್ಟೊರೆಂಟಿನ ಫ್ಲೋರ್ ಮ್ಯಾನೇಜರ್ ಮೆನನ್ ಹಲ್ಲು ಬೀರಿ ನಕ್ಕ "ವೆಲ್ಕಮ್ , ಕ್ಯಾಪ್ಟನ್" 

"ಅರೆ, ಅದನ್ನು ಬೇರೆ ಜೋರಾಗಿ ಹೇಳುತ್ತೀಯಲ್ಲ.. ಎಲ್ಲರಿಗೂ ಗೊತ್ತಾಗಿಬಿಟ್ಟೀತು. ನಮ್ಮನ್ನೇ ನೋಡುತ್ತಾರೆ" ಎಂದು ಆಕ್ಷೇಪಿಸಿದ ಅವಿನಾಶ್.

"ಆದರೆ ನೀವು ಯೂನಿಫಾರಂ ಹಾಕಿದ್ದೀರಲ್ಲ, ಸರ್!" ಎಂದ ಪೆಚ್ಚಾದ ಮೆನನ್.

ಅಯ್ಯೋ ಹೌದು, ಅವಸರದಲ್ಲಿ ಹಾಗೇ ಬಂದುಬಿಟ್ಟಿದ್ದೇನೆ, ದಿರುಸು ಬದಲಿಸದೆ! ಛೆ! ಎಂದುಕೊಂಡ ಅವಿನಾಶ್.

ಆದರೆ, ಅಲ್ಲಿಗೆ ಆಗತಾನೆ ಒಳಬಂದ ವೀಣಾ ಪಾಟೀಲ್ ತನ್ನ ಸಮವಸ್ತ್ರ ಬದಲಿಸಿ ತನ್ನ ಡ್ರೆಸ್ ಧರಿಸಿದ್ದಳು. ಸರಸರನೆ ನಗುತ್ತಾ ಬಂದವಳ ಕಂಗಳಲ್ಲಿ ಎಂದಿನಂತೆ ಅದೇ ಚುರುಕಾದ ನೋಟ. ಎಷ್ಟೇ ಕೆಲಸ ಮಾಡಿದ್ದರೂ ಅವಳ ಮಾಸದ ಮುಗುಳ್ನಗೆ.. ಮಾಟವಾದ ಮೈಕಟ್ಟು, ಟ್ರಿಮ್ ಆಗಿ ಕಾಣಿಸುವ ಅವಳ ಒಂದು ಕೆನ್ನೆಯಲ್ಲಿ ಗುಳಿ ಬೀಳುವಂತಾ ಮುಗುಳ್ನಗೆ. ಸಂತಸದಿಂದ ಅವಳನ್ನು ಚಿಕ್ಕದಾಗಿ ಅಪ್ಪಿಕೊಂಡು, "ಹಾಯ್" ಎಂದ ಕಿವಿಯಲ್ಲಿ ಗುನುಗಿದ.

ವೀಣಾ ನಾಚಿ ಬಿಡಿಸಿಕೊಳ್ಳುತ್ತಾ " ಬಿಡಿ, ಬಿಡಿ, ನೇವಿ ಆಫೀಸರ್ ಇದೇನು ಮಾಡುತ್ತಿದ್ದಾರೆ ಎಂದು ಎಲ್ಲರೂ ನೋಡಹತ್ತಿದ್ದಾರೆ!" ಎನ್ನುತ್ತಾ ಎದುರಿಗೆ ಕುಳಿತವಳನ್ನು ಒಮ್ಮೆ ದಿಟ್ಟಿಸಿದ ಅವಿನಾಶ್.

ಬಿಳಿ ಮತ್ತು ಹಸಿರು ವರ್ಣಮಿಶ್ರಿತ ಸಲ್ವಾರ್... ಅವಳ ಹಿಂದೆ ಗಾಜಿನಲ್ಲಿ ಕೊಚ್ಚಿ ಸಮುದ್ರ ಬಿಸಿಲಿನಲ್ಲಿ ಚಾಚಿಕೊಂಡ ದೃಶ್ಯ!

"ನಿನ್ನ ಡ್ರೆಸ್ ಚೆನ್ನಾಗಿದೆ..." ಎಂದ ಇನ್ನೇನೂ ಹೇಳಲು ತೋಚದೇ ಬಾಯಿ ಕಟ್ಟಿದವನಂತೆ.

" ಸುಳ್ಳು!" ವೀಣಾ ನಕ್ಕಳು. "ಅವೀ, ಹೋದ ಸಲ ಬಂದಾಗ ಇದೇ ಡ್ರೆಸ್ಸನ್ನು ಹಾಕಿಕೊಂಡಿದ್ದಾಗ ಚೆನ್ನಾಗಿಲ್ಲ ಎಂದಿದ್ದಿ!" ಅವನನ್ನು ಮಾತಿನಲ್ಲೇ ಕಟ್ಟಿಹಾಕಿದ್ದಳು.

ಅವನು ಸುಮ್ಮನಾದ.

ವೀಣಾ ಅವನ ಮನವನ್ನು ಪುಸ್ತಕದಂತೆ ಓದಬಲ್ಲಳು. ಅವಳು ಮುಂದೆ ಜರುಗಿ, 

" ಓಕೆ, ಹೇಳಿಬಿಡು.. ಏನೋ ಮನಸ್ಸಿನಲ್ಲಿಟ್ಟುಕೊಂಡು ಒದ್ದಾಡುತ್ತಿದ್ದೆಯಲ್ಲಾ?"ಎಂದೇಬಿಟ್ಟಳು.

ನೋಡಿದಿರಾ!

ಅವಿನಾಶ್ ಸಿಕ್ಕಿಬಿದ್ದವನಂತೆ ನಕ್ಕನು.

"ಅಲ್ಲಾ, ನಾನು ಹೀಗೇ ಮಾಡಬೇಕೆಂದು ಪ್ಲ್ಯಾನ್ ಮಾಡಿರಲಿಲ್ಲ... ಅದೇನಾಯ್ತಪ್ಪಾ ಅಂದರೆ ಬೆಳಿಗ್ಗೆ ಡಾ. ದೇಸಾಯಿ ಅವರೇ ಕರೆದು ಒಂದು ವಿಷಯ ಹೇಳಿದರು. ವೀಣಾ ಜತೆ ಆದರೆ ಚರ್ಚೆ ಮಾಡು ...ಅಂತಾ..ಸೋ..." ಎಂದು ಎಳೆದ.

ವೀಣಾ ತಕ್ಷಣ ಸಮರ್ಥ ನೇವಿ ಆಫೀಸರ್ ಆದಳು."ಹೌದು, ಹಾಗೇ ಆಗಿರತ್ತೆ...ಅದೇನು ಹೇಳು, ಅವೀ..."

ಅವಿನಾಶ್ ಅವಳಿಗೆ ಸರಿಯಾದ ಸುಳಿವನ್ನೇ ಕೊಡಲು ಯೋಚಿಸಿಕೊಂಡು ಬಂದಿದ್ದ. "ವೀಣಾ, ಒಮ್ಮೆ ನೀನು ನನಗೆ ರಾಮಾಯಣದಲ್ಲಿ ಆಂಜನೇಯ ಸಮುದ್ರ ಹಾರಿ ಲಂಕೆಗೆ ಹೋಗುವುದನ್ನು ಹೇಳಿದ್ದೆಯಲ್ಲಾ.. ಆ ಕತೆ ಮತ್ತೆ ಹೇಳುತ್ತೀಯಾ ?"

 ಅಷ್ಟರಲ್ಲಿ ಸರ್ವರ್ಸ್ ಅವರ ಥಾಲಿ ಊಟ ಸರ್ವ್ ಮಾಡಿದರು...ಒಂದೊಂದು ದೊಡ್ಡ ತಟ್ಟೆಯಲ್ಲಿ ಸುಮಾರು 20 ವಿವಿಧ ಖಾದ್ಯಗಳು...ಅಬ್ಬಾ ಹೇಗೆ ಮುಗಿಸುವುದು ಅನ್ನುವಷ್ಟು!

ಊಟ ಶುರು ಮಾಡುತ್ತಾ ವೀಣಾ ಹೇಳುತ್ತಾ ಹೋದಳು.

"ಅದಕ್ಕೆ ರಾಮಾಯಣದಲ್ಲಿ ಸುಂದರಕಾಂಡ ಎಂದು ಹೆಸರು, ಅದು ಬಹಳ ಪವಿತ್ರವಾದದ್ದು ಎಂಬ ನಂಬಿಕೆಯಿದೆ...ಹನುಮಂತ ಅಂದರೆ ಅಂಜನೀ ಪುತ್ರ ಆಂಜನೇಯ.. ಅವನ ತಂದೆ ವಾಯುದೇವರು. ಅವನು ರಾಮಾಜ್ಞೆಯಂತೆ ಸೀತಾ ಮಾತೆಯನ್ನು ಹುಡುಕಲು ರಾವಣನಿದ್ದ ಲಂಕೆಗೆ ಭಾರತದ ಮಹೇಂದ್ರ ಪರ್ವತದ ಮೇಲೇರಿ ಆಗಸದೆತ್ತರಕ್ಕೆ ತನ್ನ ದೇಹವನ್ನು ಹಿಗ್ಗಿಸಿದ. ಅವನ ಬೆಳವಣಿಗೆಗೆ ಸುತಲಿದ್ದ ವನಸಂಪತ್ತು ಚೆಲ್ಲಾಪಿಲ್ಲಿಯಾಗಿ, ಪ್ರಾಣಿ ಪಕ್ಷಿಗಳು ಭಯಗೊಂಡು ದಿಕ್ಕಾಪಾಲಾಗಿ ಚದುರಿದವು.. ಅಲ್ಲಿದ್ದ ಋಷಿ ಮುನಿಗಳು ತಪೋ ಶಕ್ತಿಯಿಂದ ಆಕಾಶಮಾರ್ಗಕ್ಕೆ ಹಾರಿ ಹೋಗಿ ನಿಂತು ಅವನ ದೈತ್ಯಾಕಾರ ದೇಹವನ್ನು ನೋಡಿ ಅಚ್ಚರಿ ಪಟ್ಟರಂತೆ... ಅವನ ಕಾರ್ಯಕ್ಕೆ ಜಯವಾಗಲಿ ಎಂದು ಹರಸಿದರಂತೆ.."

"ವಾಹ್, ವಾಹ್.. ಎಷ್ಟು ಚೆನ್ನಾದ ಕನ್ನಡದಲ್ಲಿ ಹರಿಕತೆ ದಾಸರಂತೆ ಹೇಳುತ್ತೀಯಲ್ಲೆ!" ಅವಿನಾಶ್ ಊಟದಿಂದ ತಲೆಯೆತ್ತಿ ಹುಬ್ಬೇರಿಸಿದ.

"...ಈಗ ನೋಡು ಅವೀ, ವಾಲ್ಮೀಕಿ ಪ್ರಕಾರ ಆಗ ಲಂಕಾನಗರಿ ನಮ್ಮ ನೆಲದಿಂದ 100 ಯೋಜನ ದೂರವಿತ್ತಂತೆ. ಮಧ್ಯೆ ಈಗ ನಾವು ಹಿಂದೂ ಮಹಾಸಾಗರ ಎಂದು ಕರೆಯುವ ಕಡಲು... ಒಂದು ಯೋಜನ ಅಂದರೆ ಸುಮಾರು 10 ಮೈಲಿ ಆಗುತ್ತದೆ ಅಂದಾಜಿನಲ್ಲಿ... ಅಂದರೆ 16 ಕಿಮೀ ಆಗುತ್ತದೆ ಇವತ್ತಿನ ಲೆಕ್ಕದಲ್ಲಿ..."

" ಒಟ್ಟು.. ಹಾಗಾದರೆ 100*16 = 1600 ಕಿಮೀ ಆಗುತ್ತದೆ ಅಂತಿಟ್ಟುಕೊಳ್ಳೋಣ" ಲೆಕ್ಕ ಹಾಕಿದ ಅವಿನಾಶ್.

ವೀಣಾ ಹೇಳುತ್ತಾ ಹೋದಳು,

" ಹೌದು, ಆದರೆ ಈಗ ನಕ್ಷೆಯಲ್ಲಿ ನೋಡಿದರೆ ಭಾರತದಿಂದ ಶ್ರೀಲಂಕಾ ತೀರದ ತಲೈ ಮನ್ನಾರ್ ಕೇವಲ 50 ಕಿಮೀ ದೂರದಲ್ಲಿ ಸಿಕ್ಕೇಬಿಡುತ್ತದೆ. 1600 ಕಿಮೀ ಎಲ್ಲಿ?.. ಹಾಗಾಗಿ ನಾನಾ ಥಿಯರಿಗಳು ಹುಟ್ಟಿಕೊಂಡಿದೆ. ವಾಲ್ಮೀಕಿಯೇ ಲಂಕೆಯ ದೂರದ ಲೆಕ್ಕ ತಪ್ಪು ಹೇಳಿದ್ದಾರೆ ಅಂದರು ಕೆಲವರು.. "

"...ಆದರೆ ನಾನು ನಂಬುವ ಒಂದು ಸಿದ್ಧಾಂತದಲ್ಲಿ ಹೀಗೆ ಹೇಳಿದೆ...ರಾಮಾಯಣ ಕಾಲದಲ್ಲಿ ಅಂದರೆ ತ್ರೇತಾಯುಗದಲ್ಲಿ ಇದು ನಿಜವಾದ ಲಂಕೆ ಆಗಿರಲೇ ಇಲ್ಲ. ಇದರ ಹೆಸರು ಬರೀ ಸಿಂಹಳ ದ್ವೀಪ ಎಂದಿತ್ತು.. ಆಗ ಲಂಕಾನಗರಿ ಬಹಳ ದೂರದಲ್ಲಿತ್ತು. ಆ ಯುಗ ಉರುಳಿ, ಯುಗ ಮರಳಿದಾಗ ಸಾಗರದ ಮಟ್ಟ ಏರಿ ದೊಡ್ಡ ಲಂಕೆಯು ಭಾಗಶಃ ಮುಳುಗಿ ಅದರ ಒಂದು ಭಾಗ ಮಾತ್ರ ಕಾಂಟಿನೆಂಟಲ್ ಡ್ರಿಫ್ಟ್ (ಭೂಖಂಡ ಸರಿತ) ಆಗಿ ಈ ದ್ವೀಪ ಈಗ ಇಲ್ಲಿ ಬಂದು ನಿಂತಿದೆ ಎಂದು ಹೇಳುವವರಿದ್ದಾರೆ.... (ಉದಾಹರಣೆಗೆ ಇನ್ನೂ ಪ್ರಾಯಶಃ ಆಗಿನ ಲಂಕೆಯ ಬಳಿಯಿದ್ದ ಈಗಿನ ಇಂಡೊನೇಷ್ಯಾದ ಬಾಲಿ ಜನರು ರಾಮಾಯಣ ಆಡುತ್ತಾರೆ, ತಮ್ಮ ಹೆಸರುಗಳು ಇಂದ್ರ, ಲಕ್ಸ್ಮನ ( ಲಕ್ಷ್ಮಣ), ರಾಮದಾನಿ, ಸೂರ್ಯ, ಮೈನಾಕ, ದೇವಿ, ಸೀಂತಾ ಎಂದೆಲ್ಲಾ ಇಟ್ಟುಕೊಳ್ಳುತ್ತಾರೆ ಎಂದು ಹೇಳುತ್ತಾರೆ)... ಹಾಗಾಗಿ ಹಿಂದಿನದೆಲ್ಲಾ ನಿಜವೋ ಸುಳ್ಳೊ, ಬರೆದವರ ಭ್ರಮೆಯೋ, ಉತ್ಪ್ರೇಕ್ಷೆಯೋ? ಈಗ ಹೇಳುವವರ್ಯಾರು ಖಚಿತವಾಗಿ?..." ಒಂದು ಅಲ್ಪವಿರಾಮ ಕೊಟ್ಟಳು ವೀಣಾ.

( ನಕ್ಷೆಯಲ್ಲಿ ನೋಡಬಹುದು)

"ಹೂಂ ಹೇಳೂ..ಆಂಜನೇಯ ಸಮುದ್ರ ಹಾರಬೇಕು..."ಅವಸರಪಡಿಸಿದ ಅವಿನಾಶ್.

"ರೈಟ್...ಆಂಜನೇಯ ಮಹೇಂದ್ರ ಪರ್ವತ ಎಂಬ ಭಾರತ ತೀರ ದಾಟಿ ನೆಗೆದವನು ವಾಯು ಮಾರ್ಗದಲ್ಲಿ ವಿಮಾನದಂತೆ ಸಂಚರಿಸುತ್ತಾ ಹೊರಟನಂತೆ ... ಕಲ್ಪಿಸಿಕೋ ಅದನ್ನು ಅವೀ..ಇವೆಲ್ಲಾ ಕಲ್ಪನೆಯ ಮೇಲೇ ನಿಂತಿದೆ..."

"ಅಬ್ಬಾ... ಆಂಜನೇಯನಿಗೆ ಈಗಿನ ಏರೋನಾಟಿಕ್ಸ್ ಗಿಂತಾ ಹೆಚ್ಚಿನ ಜ್ಞಾನವಿತ್ತು!" ಅವಿನಾಶನ ಉಪಮೆ ಕೇಳಿ ಗೊಳ್ಳನೆ ನಕ್ಕಳು ವೀಣಾ. ಭೋಜನ ಇಬ್ಬರದೂ ಅರ್ಧ ಮುಗಿದಿತ್ತು.

"ಅದಕ್ಕಿಂತಾ ಹೆಚ್ಚು.. ಅವನಿಗೆ ವಾಯುಪುತ್ರನಾಗಿ ವಿಶೇಷ ಶಕ್ತಿಯಿತ್ತಂತೆ.. ಅವನು ಸತತ ರಾಮನಾಮ ನುಡಿಯುತ್ತಾ ಗಾಳಿಗಿಂತಾ ವೇಗವಾಗಿ ಹಾರುತ್ತಿದ್ದದ್ದರಿಂದ ಆಕಾಶ ಮಾರ್ಗದಲ್ಲಿಯೂ ವ್ಯತ್ಯಯವೇ ಆಯಿತಂತೆ.. ಪಕ್ಷಿಗಳು ಕಂಗೆಟ್ಟು ಪಕ್ಕಕ್ಕೆ ಬೆದರಿ ಸರಿದವು .. ಅಷ್ಟ (8) ದಿಗ್ದೇವತೆಗಳೇ ಚಕಿತರಾದರಂತೆ... ಸದಾ ಭೂಮ್ಯಾಕಾಶದಲ್ಲೇ ಸಂಚರಿಸುವ ವಿದ್ಯಾಧರರು, ಯಕ್ಷ, ಗಂಧರ್ವ, ಕಿನ್ನರಾದಿಯಾಗಿ ಭಯಬಿದ್ದು ದಾರಿ ಕೊಟ್ಟರಂತೆ..."


ಅವಿನಾಶ್ ಕೈಯೆತ್ತಿದ, "ಈ ಗಂಧರ್ವ, ಯಕ್ಷ, ಕಿನ್ನರರು ಎಂದರೆ ಯಾರಿರಬಹುದು , ಮೇಡಮ್?"

 ವೀಣಾ ಕತ್ತು ಕೊಂಕಿಸಿ ನೋಡಿದಳು, "ಅವರೆಲ್ಲಾ ಭೂಮಿಯಿಂದ ದೂರದಲ್ಲಿದ್ದ ಬೇರೆ ಬೇರೆ ಲೋಕ ವಾಸಿಗಳು ಅಕಸ್ಮಾತ್ತಾಗಿ ಆಕಾಶಮಾರ್ಗದಲ್ಲಿ ಭೂಮಿಗೆ ಪ್ರವೇಶಿಸಿದವರು ಎಂದು ಸ್ಪಷ್ಟವಾಗಿ ನೂರು ಕಡೆ ಹೇಳಿದ್ದಾರೆ ಆಗಿನವರು...ಅಂದರೆ ಈಗ ಏನೆನ್ನಬಹುದು ಅವರನ್ನು, ಅವೀ?" ಮರು ಪ್ರಶ್ನೆ ಹಾಕಿದ್ದಳು ಪ್ರವಚನಕಾರ್ತಿ.

"ಏಲಿಯನ್ಸ್...ಅಂದರೆ ನಾವೀಗ ಕರೆಯುವ ಅನ್ಯಗ್ರಹ ಜೀವಿಗಳು..." ಅವಿನಾಶ್ ಬೆರಗಾಗಿ ನುಡಿದ.

"ಅಲ್ಲವೇ?...ಅದಕ್ಕೇ ಈ ಗಂಧರ್ವ, ಯಕ್ಷ, ಕಿನ್ನರರು, ಅಪ್ಸರೆಯರು ಸ್ವಯಂ ಹಾರುತ್ತಿದ್ದರು, ರೂಪ ಬದಲಿಸುತ್ತಿದ್ದರು, ಅವರಿಗೆ ವಿಮಾನಗಳಿತ್ತು...ಶಾಪಮುಕ್ತರಾದರೆ ಮಾಯವಾಗಿ ಎಲ್ಲಿಗೋ ತಮ್ಮ ಗ್ರಹಗಳಿಗೆ, ಲೋಕಗಳಿಗೆ ಹೋಗಿಬಿಡುವರು ...ಏಲಿಯನ್ಸ್ ಬಗ್ಗೆ ಇದೇ ರೀತಿಯ ಕತೆಗಳಿವೆ ಅಲ್ಲವೆ, ಅವೀ?"

 

"ಸರಿ, ಆದರೆ ನನಗೆ ಆ ಕತೆ ಬೇಡ... ಆಂಜನೇಯ ಮುಂದೆ ಏನು ಮಾಡಿದ ಎಂದು ಹೇಳು..."ಅವಿನಾಶ್ ಬಲವಂತ ಮಾಡಿದ.

ಅವನಿಗೆ ಹಾಗೆ ಕೇಳಲು ಏನೋ ಸಕಾರಣವಿದೆ, ಇರಲಿ ನೋಡೋಣ ಎಂದುಕೊಂಡು ವೀಣಾ ಮುಂದುವರೆಸಿದಳು,

"ನೂರು ಯೋಜನ ದಾರಿ ಹಾರುವುದು ಆಂಜನೇಯನಿಗೂ ಸಾಮಾನ್ಯವಲ್ಲ, ಅವನಿಗೆ ಆಹಾರ ಮತ್ತು ವಿರಾಮ ಕೊಟ್ಟು ಕಳಿಸೋಣ, ಅವನು ರಾಮದೂತ, ಹಾಗಾಗಿ ಇಕ್ಶ್ವಾಕು ವಂಶಸ್ತರ ದಾಸ, ಹಾಗೂ ನಮ್ಮ ಅತಿಥಿಯೇ ಆದ ಎಂದೆಲ್ಲಾ ಸಮುದ್ರವನ್ನು ಆಳುವ ಸಾಗರರಾಜ ಆಗ ಯೋಚಿಸಿದನಂತೆ... ಅವನು ತನ್ನಲ್ಲಿ ಅಡಗಿ ಕುಳಿತಿದ್ದ ಒಂದು ಪರ್ವತಕ್ಕೆ ಹೀಗೆ ಹೇಳಿದನಂತೆ..."

"ಸ್ವಲ್ಪ ತಾಳು, ತಾಳು...!" ಅವಿನಾಶ್ ತಡೆದ. "ಇದ್ಯಾವ ಪರ್ವತ ಆ ಸಾಗರದಲ್ಲಿ ಮುಳುಗಿ ಕುಳಿತಿತ್ತು ? ಅದನ್ನು ಹೇಳಲಿಲ್ಲ?"

"ಓಹೋ, ಅದನ್ನು ಹೇಳಬೇಕೋ?...ಯಾಕೆ? ಇರಲಿ, ಇರಲಿ!...ಆದರೆ ನೀನು ನನಗೆ ನಿನ್ನ ಪ್ಲೇಟಿನ ಪೇಡಾ ಕೊಡಬೇಕು, ಆಗ ಆ ಕತೆ ಹೇಳುತ್ತೇನೆ..."ವೀಣಾ ಶರತ್ತು ಹಾಕಿದಳು.

"ತಗೋ.."

" ಅವೀ, ನಿನಗೆ ಪಾರ್ವತಿಯ ತಂದೆ ಪರ್ವತರಾಜ ಗೊತ್ತಲ್ಲ?" ಎಂದು ಅವಳು ಪೀಠಿಕೆ ಹಾಕಿದರೆ ಅವನು

" ಓಹೋ ಚೆನ್ನಾಗಿ ಗೊತ್ತು!...ಮೊನ್ನೆಮೊನ್ನೆಯವರೆಗೂ ನಮ್ಮ ಪಕ್ಕದಮನೆಯಲ್ಲಿ ಬಾಡಿಗೆಗೆ ಇದ್ದರು..."ಎಂದು ಜೋಕ್ ಕಟ್ ಮಾಡಿದ.

"ಶಿವನ ಹೆಣ್ಣು ಕೊಟ್ಟ ಮಾವ ಪರ್ವತರಾಜ!" ತಾಳ್ಮೆಯಿಂದ ಹೇಳಿದಳು ವೀಣಾ. "ಪಾರ್ವತಿಗೆ ನೂರು ಸಹೋದರರು. ಅವರೆಲ್ಲರೂ ಪರ್ವತಗಳೇ.. ಅವರಲ್ಲಿ ದೊಡ್ಡ ಅಣ್ಣ ಮೈನಾಕ ಎಂಬ ಹೆಸರಿನವನು...ಅವನಿಗೆ ಮಾತ್ರ ಬಂಗಾರದ ಶಿಖರಗಳಿದ್ದವಂತೆ..."

"ಮೈನಾಕ?" ಈಗ ಅವಿನಾಶನ ಕಿವಿ ನಿಮುರಿತು. ಆ ಇಟಲಿ ಪತ್ರದಲ್ಲಿದ್ದ ಎರಡನೇ ಕೋಡ್ವರ್ಡ್...

"ಮೊದಲು ಕೃತಯುಗದಲ್ಲಿ ಎಲ್ಲಾ ಪರ್ವತಗಳಿಗೂ ರೆಕ್ಕೆಗಳಿದ್ದವಂತೆ... ಅವೆಲ್ಲವೂ ತಾವೇ ಹಾರುತ್ತಿದ್ದವಂತೆ, ಆಗಸದಲ್ಲಿ ದೈತ್ಯಾಕಾರದ ಪಕ್ಷಿಗಳಂತೆ...ಎಲ್ಲೆಂದರಲ್ಲಿ ಕುಳಿತು ಬಿಡುತ್ತಿದ್ದವಂತೆ...."

"ವಾಟ್!?" ಅವಿನಾಶ್ ಕೈಯಿಂದ ಗಾಬರಿಯಲ್ಲಿ ಅನ್ನದ ತುತ್ತು ಜಾರಿತ್ತು. ಎಂತೆಂತಾ ಪೌರಾಣಿಕ ಕತೆಗಳನ್ನು ಅಮ್ಮ ಹೇಳಿದ್ದರು..ಹಾರುವ ಬೆಟ್ಟಗಳು, ಹಕ್ಕಿಗಳಂತೆ? ಇದು ಮಾತ್ರ ಹೊಸದು!

"ಹೌದು... ಅವು ಹೀಗೆ ಜಂಬದಿಂದ ಹಾರುತ್ತಾ ಬಂದು ಎಲ್ಲೆಂದರಲ್ಲಿ ಜನರ ಮೇಲೆ, ಹಳ್ಳಿಗಳ ಮೇಲೆ ಬಂದು ಇಳಿದುಬಿಟ್ಟಾಗ ಕೆಳಗಿದ್ದವರೆಲ್ಲಾ ಅಪ್ಪಚ್ಚಿಯಾಗಿ ಸತ್ತುಹೋಗುತ್ತಿದ್ದರಂತೆ.. ಹೀಗಾಗಿ ಅವಕ್ಕೆ ಬಹಳ ಸೊಕ್ಕು ಬಂದಿತ್ತಂತೆ... ಬ್ರಾಹ್ಮಣರು ನೀಡುವ ಹವಿಸ್ಸು ಯಜ್ಞರೂಪದಲ್ಲಿ ದೇವತೆಗಳಿಗೆ ತಲುಪಲೂ ಆಗದಷ್ಟು ಆಶ್ರಮಗಳು ನಾಶಗಳಾದವು... ಆಗ ದೇವತೆಗಳು ತಮ್ಮ ರಾಜ ಇಂದ್ರನ ಮೊರೆಹೋದರಂತೆ...ಇಂದ್ರನಿಗೆ ಬೆಟ್ಟಗಳ ದುರ್ವರ್ತನೆ ಸ್ವಲ್ಪವೂ ಸರಿಬೀಳಲಿಲ್ಲ... ಅವನು ವಜ್ರಾಯುಧದ ಸಮೇತ ಭೂಮಿಗೆ ಬಂದವನೇ ಬೆಟ್ಟಗಳ ಎಲ್ಲ ರೆಕ್ಕೆಗಳನ್ನು ಮಿಂಚಿನ ಆಯುಧದಿಂದ ಕತ್ತರಿಸಿಬಿಟ್ಟನಂತೆ.. ಆಗ ರೆಕ್ಕೆ ಕಳೆದುಕೊಂಡ ಬೆಟ್ಟಗಳು ನೆಲದಮೇಲೇ ಉಳಿದುಬಿಟ್ಟವಂತೆ, ಮತ್ತೆಂದೂ ಹಾರಲೇ ಇಲ್ಲ...ಈಗ ನಮಗೆ ಕಾಣುವ ಬೆಟ್ಟಗಳೆಲ್ಲಾ ಅಲ್ಲಲ್ಲೆ ಇವೆ, ನಕ್ಷೆಯಲ್ಲಿ ಎನ್ನಬಹುದು....ಆದರೆ ಒಂದು ಪರ್ವತ ಮಾತ್ರ ತಪ್ಪಿಸಿಕೊಂಡಿತಂತೆ..."

ಅವಿನಾಶ್ ಈಗ ಕತೆಯಲ್ಲಿ ತಲ್ಲೀನನಾಗಿ ಊಟ ನಿಲ್ಲಿಸಿದ್ದ, ಆದರೆ ವೀಣಾ ಮಾತ್ರ ಊಟ ಮಾಡುತ್ತಲೇ ಮುಂದುವರೆಸಿದ್ದಳು,

"ಅವನೇ ದೊಡ್ಡಣ್ಣ ಮೈನಾಕ...ಅವನನ್ನು ವಾಯುದೇವನು ಹಾರಿಸಿಕೊಂಡು ಹೋಗಿ ದಕ್ಷಿಣದ ಸಾಗರದ ನಡುವಿನಲ್ಲಿ ಮುಳುಗಿಸಿದ್ದರಿಂದ ಅವನು ಅವಿತುಕೊಂಡು ಈ ದೇವೇಂದ್ರನ ಹೊಡೆತದಿಂದ ಪಾರಾಗಿಬಿಟ್ಟ...ಮತ್ತೆ ಇಂದ್ರ ತನ್ನನ್ನು ಕೊಲ್ಲುವ ಭಯದಿಂದ ಸಾಗರದಿಂದ ಹೊರಗೇ ಇಣುಕಿರಲಿಲ್ಲ..."

"ಮತ್ತೆ ಇತ್ತ ಆಂಜನೇಯ?" ಮತ್ತೆ ಮುಖ್ಯಕತೆಯನ್ನು ನೆನೆಪಿಸಿದ ಅವಿನಾಶ್.

"ಸರಿ, ಸಾಗರರಾಜ ಈ ಮೈನಾಕನನ್ನು ಕುರಿತು ಹೇಳುತ್ತಾನೆ, ‘ಅರೆ, ಓ ಪರ್ವತರಾಜನ ಪುತ್ರನೇ, ಬಂಗಾರ ಶಿಖರದ ಮೈನಾಕನೇ,

ಕೇಳು... ನಿನಗೆ ರಾಮಕಾರ್ಯದಲ್ಲಿ ಸಹಕರಿಸುವ ಭಾಗ್ಯ ಕೂಡಿಬಂದಿದೆ. ಈಗ ಹನುಮಾನ್ ನಮ್ಮ ಸಾಗರವನ್ನು ಆಕಾಶಮಾರ್ಗದಲ್ಲಿ ಕ್ರಮಿಸುತ್ತಾ ಲಂಕಾನಗರಿಯತ್ತ ಹೊರಟಿದ್ದಾನೆ... ನಿನ್ನ ಬಳಿ ಚಿನ್ನದ ಶಿಖರಗಳು ಮಂಟಪಗಳು ಇವೆ..ರುಚಿರುಚಿಯಾದ ಫಲ ಬಿಡುವ ಹಣ್ಣುಗಳ ಮರಗಳಿವೆ... ನಮ್ಮ ಆಂಜನೇಯನಿಗೆ ಫಲಾಹಾರ ಕೊಟ್ಟು ಸ್ವಲ್ಪ ಕಾಲ ವಿಶ್ರಾಂತಿ ಕೊಡಲೆಂದು ನೀನು ಇವತ್ತು ಸಾಗರದಿಂದ ಹೊರಗೆ ಬಾ, ಅವನಿಗೆ ಎದುರಾಗಿ ಹಾರಿ ನಿಲ್ಲು... ಅವನು ನಿನ್ನ ಮೇಲೆ ಕುಳಿತು ತಿಂದುಂಡು ಆಯಾಸ ಪರಿಹಾರ ಮಾಡಿಕೊಳ್ಳಲಿ’ ಎಂದು ಸಾಗರ ವಿನಂತಿಸಿಕೊಳ್ಳಲು ತನಗೆ ಇದುವರೆಗೂ ವಸತಿ ಕೊಟ್ಟಿದ್ದ ಸಾಗರನ ಮಾತು ಮೀರದೇ ಆ ಮೈನಾಕ ಪರ್ವತ ಸಮ್ಮತಿಸಿ ‘ಜಯ ಜಯ ರಘುರಾಮ’ ಎನ್ನುತ್ತಾ ಸಮುದ್ರದ ಹೊರಗೆ ಬಂದನಂತೆ...

"ಸೂಪರ್ ಕಣೇ... ಯಾವ ಪ್ರವಚನಕಾರರ ಬಳಿ ಟ್ರೈನಿಂಗ್ ತಗೊಂಡಿದ್ದೆ?...ಎಂತಾ ವರ್ಣನೆ ನಿನ್ನದು!"

"ಹಾಗೆಲ್ಲಾ ಸೂಪರ್ ಅನ್ನಬಾರದಂತೆ.. ಫೇಸ್ಬುಕ್ಕಿನಲ್ಲಿ ಕೆಲವರು ಕೋಪಿಸಿಕೊಳ್ಳುತ್ತಿದ್ದಾರೆ ಅದನ್ನು ಕನ್ನಡದಲ್ಲಿ ಬಳಸಿದರೆ" ಎಂದಳು ವೀಣಾ.

"ಸರಿ, ಸರಿ...ಅದ್ಭುತ...ಆಮೇಲೆ?"

"ಆಗ...ಬಂಗಾರದ ಶಿಖರಧಾರಿ ಮೈನಾಕ ಪರ್ವತನು ಬಿಸಿಲಿನಲ್ಲಿ ನಿಗಿ ನಿಗಿ ಎಂದು ಎರಡನೇ ಸೂರ್ಯನಂತೆ ಕಣ್ಣು ಕೋರೈಸುವಂತೆ ಬೆಳಗುತ್ತಾ ರೆಕ್ಕೆಗಳ ಸಮೇತ ಹಾರಿ ಬರಲು ಆ ಚಿನ್ನದ ಶಿಖರಗಳು, ಫಲಧಾರಿ ಮರಗಳೂ ಆಂಜನೇಯನ ದಾರಿಗೆ ಅಡ್ಡವಾಗಿ ಗಾಳಿಯಲ್ಲಿ ದಿಡೀರನೆ ಬಂದಾಗ, ‘ತನ್ನ ಮಾರ್ಗದಲ್ಲಿ ಅಡಚಣೆಯೇ?’ ಎಂದು ಅವನು ಕುಪಿತನಾಗಿ ಅವನು ತನ್ನ ಎದೆಯಿಂದ ಆ ಬೆಟ್ಟವನ್ನು ಒಮ್ಮೆ ಜಾಡಿಸಿದನಂತೆ...ಆ ಮೈನಾಕ ಪರ್ವತೇ ಅಲುಗಾಡಿಹೋಯ್ತಂತೆ ಆ ಪ್ರಹಾರಕ್ಕೆ.. ಇಮ್ಯಾಜಿನ್ ದಟ್, ಕ್ಯಾಪ್ಟನ್!" ಎನ್ನುತ್ತಾ ಅವನ ತಿಂದಿಲ್ಲದ ಫ್ರೂಟ್ ಸಲಾಡನ್ನೂ ತನ್ನತ್ತ ಎಳೆದುಕೊಂಡಳು ವೀಣಾ.

"ಮಹಾ ಶಕ್ತಿವಾನ್ ಆಂಜನೇಯ!"

"ಆಮೇಲೆ ಆ ಮೈನಾಕ ಪರ್ವತರಾಯನು ಆಂಜನೇಯನ ಮುಂದೆ ತನ್ನ ಹಳೇ ಕತೆಯನ್ನು ಸ್ಮರಿಸಿಕೊಂಡನಂತೆ... ಅವನ ತಂದೆ ವಾಯು ತನ್ನನ್ನು ಹಿಂದೆ ಹಾರಿಸಿಕೊಂಡು ಬಂದು ಸಾಗರದಲ್ಲಿ ಬಚ್ಚಿಟ್ಟಿದ್ದ ಉಪಕಾರವನ್ನು ಹೇಳಿಕೊಂಡನಂತೆ. ಅವನ ಮಾತುಗಳನ್ನು ಕೇಳಿ ಶಾಂತನಾದ ಆಂಜನೇಯನು ‘ನಾನು ಸೀತೆಯನ್ನು ಹುಡುಕುವ ಮುನ್ನ ಎಲ್ಲಿಯೂ ಇಳಿಯುವುದಿಲ್ಲ, ತಿನ್ನುವುದೂ ಇಲ್ಲ, ಶಪಥ ತೊಟ್ಟಿದ್ದೇನೆ...ನಿನಗೆ ಧನ್ಯವಾದಗಳು’ ಎನ್ನುತ್ತಾ ಆ ಬೆಟ್ಟವನ್ನು ಕೈಯಿಂದ ಮುಟ್ಟಿ ನಮಸ್ಕರಿಸಿ ನಿಲ್ಲದೇ ಹಾರುತ್ತಲೇ ಮುಂದೆ ಲಂಕೆಯತ್ತ ಮತ್ತೆ ಬಿರುಗಾಳಿಯಂತೆ ಹೊರಟುಹೋದನಂತೆ...

"ನಾನ್ ಸ್ಟಾಪ್ ಫ್ಲೈಟ್!" ಅವಿನಾಶ್ ಕಣ್ಣರಳಿಸಿದ. 

"ಮನೋಜವಂ, ಮಾರುತ ತುಲ್ಯ ವೇಗಮ್! ಎನ್ನುವುದು ಸುಮ್ಮನೆಯೆ?" ವೀಣಾ ಸೇರಿಸಿದಳು.

"ಮತ್ತೆ ಆ ಬಂಗಾರದ ಪರ್ವತ ಏನು ಮಾಡಿತು? ಬೇಗ ಹೇಳು?" ಎನ್ನುತ್ತಾ ಅವಿನಾಶ್ ಈಗ ತನ್ನ ಐಸ್ಕ್ರೀಮನ್ನು ಮಾತ್ರ ಅವಳಿಗೆ ಬಿಡದೇ ತಿಂದುಬಿಟ್ಟ!

"ಅವೀ, ಹೀಗೆ ಕಾಲಾನುಕಾಲದಲ್ಲಿ, ಯುಗಗಳು ಉರುಳಿದಾಗ ಈ ರೀತಿ ಮಾತಾಡುವ, ಹಾರುವ ದೈವೀಕ ರೂಪ ಮತ್ತು ಶಕ್ತಿಯನ್ನು ಕಳೆದುಕೊಂಡು ಬೆಟ್ಟಗಳು ಕಲಿಯುಗಕ್ಕೆ ತಕ್ಕಂತೆ ಬರೇ ನಿರ್ಜೀವ ಕಲ್ಲಾದವಂತೆ. ಹಾಗೆ ಮೈನಾಕ ಕೂಡಾ ಮತ್ತೆ ಸಾಗರಮಧ್ಯೆ ಅಲ್ಲಿಯೇ ಮುಳುಗಿಹೋಗಿಬಿಟ್ಟ. ಮತ್ತೆ ಹೊರಗೆ ಕಾಣಿಸಲೇ ಇಲ್ಲ..."

ಅವಿನಾಶ್ ಕೈಬೆರಳಿನಿಂದ ಅಚ್ಚರಿಯಿಂದ ಚಿಟಿಕೆ ಹಾಕಿ ಎದ್ದುಬಿಟ್ಟ. 

ವೀಣಾ ಊಟ ಮುಗಿಸಿ ಕೈತೊಳೆದಿದ್ದಳು ಅದರೊಂದಿಗೆ.

"ಯೆಸ್!! ದಟ್ಸ್ ಇಟ್! ಅದೇ ಸರಿಯಾದ ಉತ್ತರ, ವೀಣಾ..." ಎಂದು ಉತ್ಸಾಹದಿಂದ ಉದ್ಗರಿಸಿದ ಅವಿನಾಶ್ "ಕಮಾನ್, ನಾವಿಬ್ಬರೂ ಮತ್ತೆ ಆಫೀಸಿಗೆ ಹೋಗಲೇ ಬೇಕು" ಎಂದು ಅವಸರ ಅವಸರವಾಗಿ ಬಿಲ್ ದುಡ್ಡು ಟೇಬಲ್ ಮೇಲಿಟ್ಟು ದುಡುದುಡು ಎಂದು ಹೊರಟಿದ್ದ. 

ವೀಣಾ ಅವನ ಹಿಂದೆ ಓಡೋಡಿ ಬಂದವಳು, "ಇದೇನು?..ನನಗೆ ಮಾತ್ರ ಏನೂ ವಿಷಯ ಹೇಳಲೇ ಇಲ್ಲ... ಯಾಕೆ ಓಡುತ್ತಿದೀಯಲ್ಲಾ?" 

 ತನ್ನ ಮಾರುತೀ ಡಿಜ಼ೈರ್ ಕಾರಿನ ರಿಮೋಟ್ ಕೀಯಿಂದ ‘ಬೀಪ್-ಬೀಪ್’ಎಂದು ಬಾಗಿಲು ತೆರೆಸಿದ ಅವಿನಾಶ್, "ನೀನಿಲ್ಲಿಗೆ ಟ್ಯಾಕ್ಸಿಯಲ್ಲಿ ಬಂದೆಯಲ್ಲಾ?...ಈಗ ನನ್ನ ಜತೆಗೆ ಕಾರಲ್ಲಿ ಆಫೀಸಿಗೆ ಬಾ...ನಿನಗೆ ಎಲ್ಲಾ ಉತ್ತರ ಸಿಕ್ಕರೆ ಅಲ್ಲೇ ಸಿಗಬೇಕು..." ಎನ್ನಲು ಇಬ್ಬರೂ ಬೇಗನೆ ಕಾರ್ ಏರಿದ್ದರು.

5

 

ಎರಡು ನಿಮಿಷದಲ್ಲಿ ಚಿನ್ನದ ದೊಡ್ಡ ಡೆಪಾಸಿಟ್ ದಕ್ಷಿಣ ಸಾಗರದಲ್ಲಿ ಇಟಲಿಯವರಿಗೆ ಸಿಕ್ಕಿರುವ ಸುದ್ದಿಯನ್ನು ಅವಳಿಗೆ ಹೇಳುತ್ತಾ ಡ್ರೈವ್ ಮಾಡಿದ ಅವಿನಾಶ್.

ವೀಣಾ ಸಹಾ ನಿಬ್ಬೆರಗಾಗಿ ಕೇಳಿಸಿಕೊಂಡು ಯೋಚಿಸುತ್ತಾ ಕುಳಿತಳು.

ಅವಿನಾಶ್ ಯೋಚಿಸುತ್ತಿದ್ದಾನೆ-

‘ಬೆಟ್ಟಗಳು ದೇವತೆಗಳಂತಿದ್ದವು ಕಲ್ಲಾದವಂತೆ’ ಎಂದಳು ವೀಣಾ’.... ’ ಹಾಗಾಗಿಯೇ ನಮ್ಮವರು ಬೆಟ್ಟಗಳನ್ನೂ ಪೂಜಿಸಿ ಅದರ ಮೇಲೆಯೇ ದೇವಸ್ಥಾನಗಳನ್ನು ಕಟ್ಟಿದ್ದರೇನೋ’

ಒಂದು ಬೆಟ್ಟವನ್ನು ಮಾತ್ರ ಬಿಟ್ಟು...

ಸಾಗರದಡಿಯಲ್ಲಿ ಮುಳುಗಿಹೋದ ಚಿನ್ನದ ಬೆಟ್ಟ ಮೈನಾಕ!...ಪುರಾಣ ಸತ್ಯವಾಗಬಯಸುವ ಅಪೂರ್ವ ಸಂಧಿಕಾಲವೆ ಇದು? ಗೊತ್ತಿಲ್ಲ... ಪರೀಕ್ಷಿಸಬಹುದು! 

"ವೀಣಾ, ನಿನ್ನ ಆಫೀಸಿನಲ್ಲಿ ದಕ್ಷಿಣ ಹಿಂದೂ ಮಹಾಸಾಗರದ ಸ್ಕೇಲ್ ಮಾಡಿದ ಮ್ಯಾಪ್ ಇದೆಯೆ, ಒಶನೋಗ್ರಫಿಯದು?" ಪ್ರಶ್ನಿಸಿದ್ದ ಆಫೀಸಿನ ಕಾರ್ ಪಾರ್ಕಿಂಗ್ ಹತ್ತಿರವಾದಾಗ.

"ಅಫ್ ಕೋರ್ಸ್!" ಇದೇನು, ನನ್ನ ಬಳಿ ಅದು ಇರಲೇಬೇಕಾದ ಮಾಹಿತಿ ಎಂಬಂತೆ ಧೈರ್ಯವಾಗಿ ಉತ್ತರಿಸಿದಳು ಸಾಗರತಜ್ಞೆ!

"ನೀನು ಇಳಿದ ತಕ್ಷಣ ಅದನ್ನು ನನ್ನ ಕಾನ್ಫರೆನ್ಸ್ ರೂಮಿಗೆ ತಾ!" ಅವಿನಾಶ್ ಈಗ ಸಮರ್ಥ ಅಧಿಕಾರವಾಣಿಯಲ್ಲಿ ನುಡಿದಿದ್ದ "ನಿನ್ನ ಟೀಂ ಮತ್ತು ನನ್ನ ಟೀಮಿನ ಅರ್ಜೆಂಟ್ ಮೀಟಿಂಗ್ ನಾವು ಸೇರಿದ ತಕ್ಷಣ..."

ಹದಿನೈದು ನಿಮಿಷದ ನಂತರ ಅವನ ಕಾನ್ಫರೆನ್ಸ್ ಕೊಟಡಿಯಲ್ಲಿ ಎಲ್ಲರೂ ಸೇರಿದ್ದರು. ಎರಡೂ ಟೀಮಿನ ನಾಲ್ಕು ನಾಲ್ಕು ಅಧಿಕಾರಿಗಳು.

ದೊಡ್ಡ ಮೇಜಿನ ಮೇಲೆ ಹಿಂದೂ ಮಹಾಸಾಗರದ ನಕ್ಷೆ ಹರಡಿದ್ದಾಳೆ ವೀಣಾ. ಅದರ ಸಾಫ್ಟ್ ಕಾಪಿಯನ್ನು ಎಲ್ಲರಿಗೂ ಕಾಣುವಂತೆ ಮೈನ್ ಸರ್ವರಿನಿಂದ ಸೆಳೆದು ಗೋಡೆಯ ತೆರೆಯಮೇಲೆ ಪ್ರೊಜೆಕ್ಟ್ ಮಾಡಿಯೂ ಇದ್ದಾಳೆ ಜಾಣೆ.

ಭಾರತದ ಡೆಕ್ಕನ್ ಪ್ರಸ್ಥಭೂಮಿಯಿಂದ ಹಿಡಿದು ದಕ್ಷಿಣ ಧ್ರುವದವರೆಗೂ ಉತ್ತರ-ದಕ್ಷಿಣ ದಿಕ್ಕಿನಲ್ಲಿಯೂ, ಭಾರತದಿಂದ ಫಿಲಿಪ್ಪೀನ್ಸ್‌ವರೆಗೂ ಪೂರ್ವ-ಪಶ್ಚಿಮದಲ್ಲಿಯೂ ಹರಡಿದ್ದ ಭೂಪಟ ಅದು...

ವೀಣಾ ಆಗಲೇ ಮಿಕ್ಕವರೆಲ್ಲರಿಗೂ ಮೈನಾಕನ ಕತೆಯನ್ನು ಒಮ್ಮೆ ಹೇಳಿದ್ದಳು.

"ಇದು ಆಂಜನೇಯ ನೂರು ಯೋಜನ ಅಂದರೆ 1600 ಕಿಮೀ ಹಾರಿದ ದಾರಿ... ಇಲ್ಲಿ" ವೀಣಾ ನಕ್ಷೆ ತೋರಿಸಿ ಹೇಳುತ್ತಿದ್ದಳು. ಮಿಕ್ಕವರು ಗಮನಿಸಿದಂತೆ ಅದು ಸರಿಯಾಗಿ ನೋಡಿದರೆ ಅವನು ದಕ್ಷಿಣಕ್ಕೆ ನೇರವಾಗಿ ಸಾಗುತ್ತಿದ್ದನು ಎನ್ನಬಹುದು., ಈಗಿನ ಶ್ರೀಲಂಕಾದ ಪಕ್ಕದಲ್ಲಿ ಇನ್ನೂ ದಕ್ಷಿಣಕ್ಕೆ ಸಾಗಿರಲೇ ಬೇಕು.

( ಚಿತ್ರ)

"ಈಗಿನ ಒಲಿಂಪಿಕ್ಸ್‌ನಲ್ಲಿ ಆಂಜನೇಯ ಇದ್ದಿದ್ದರೆ ಸ್ಟೇಡಿಯಮ್ ದಾಟಿ ಹೊರಕ್ಕೆ ಲಾಂಗ್ ಜಂಪ್ ಮಾಡಿರುತ್ತಿದ್ದ..."ಎಂದು ಅವಳ ಅಸಿಸ್ಟೆಂಟ್ ವಿನೀತ್ ರೈ ನಗಾಡಿದ.

"ಜೋಕ್ ಆಮೇಲೆ... " ಎಂದು ವೀಣಾ ಒಮ್ಮೆ ಮೊನಚು ನೋಟ ಬೀರಿದಳು ಅವನತ್ತ. "ಇಲ್ಲಿ ಯಾವುದು ಸಂಬಂಧಿಸಿದೆಯೋ ಅದು ಮಾತ್ರ ಮಾತಾಡಿ... ಹೀಗೆ ಆಂಜನೇಯ 1600 ಕಿಮೀ ದೂರಕ್ಕೆ ಗಗನಮಾರ್ಗದಲ್ಲಿ ಹಾರುತ್ತಿರುವಾಗ ಸಾಗರರಾಜನ ವಿನಂತಿ ಕೇಳಿ ಅವನಿಗೆ ಆಶ್ರಯ ಮತ್ತು ವಿರಾಮ ನೀಡಲು ಮೈನಾಕ ಪರ್ವತ ಅರ್ಧದಾರಿಯಲ್ಲಿ ಎದುರಾಗಿ ನಿಲ್ಲುತ್ತಾನೆ..."

"ಅಂದರೆ 800 ಕಿಮೀ ಭಾರತದ ತೀರದಿಂದ... ಅಂದರೆ ಇಲ್ಲಿ ಎಲ್ಲೋ ಬರತ್ತೆ " ಅವಳ ಇನ್ನೊಬ್ಬ ಅಸಿಸ್ಟೆಂಟ್ ಮರಿಯಾ ಗೊನ್ಸಾಲ್ವೆಸ್ ಎಂಬ ಯುವತಿ ನಕ್ಷೆಯಲ್ಲಿ ಒಂದು ವೃತ್ತದಂತೆ ಮಾರ್ಕ್ ಮಾಡಿದಳು ಎಲ್ಲರಿಗೂ ಕಾಣುವಂತೆ.

ಅದು ಮಾಲ್ಡೀವ್ಸ್ ದ್ವೀಪ ಸಮೂಹದ ಪಕ್ಕದಲ್ಲಿ ನಿರ್ಜನ ಸಾಗರದಲ್ಲಿ ಬೀಳುತ್ತದೆ ಆ ಸ್ಪಾಟ್

"...ಅಲ್ಲಿಗೆ ಇಂಟರ್ ಪೋಲ್ ಹೇಳಿಕೆ ಪ್ರಕಾರ ರಾಮಾಯಣ, ಮೈನಾಕ ಎಂಬ ಎರಡು ಕೋಡ್ ವರ್ಡ್ಸ್ ಇದ್ದ ರೇಡಿಯೋ ಸಿಗ್ನಲ್ ಹೋಗಿದೆ.. ಬೇರೆ ಮಾಹಿತಿ ದೊರೆತಿಲ್ಲ... ಈಗ ಯಾರು ಎಂಬ ಪ್ರಶ್ನೆ?" ವೀಣಾ ಟೀಮಿನತ್ತ ನೋಡಿದಳು.

"ಅದು ನಿರ್ಜನ ಸಾಗರದ ಪ್ರದೇಶ... ಅಲ್ಲಿ ಈಗ ಯಾರು ಹಡಗು ಪ್ರಯಾಣ ಮಾಡುತ್ತಿದ್ದಾರೆ ಎಂದು ನಾವು ನೇವಿಯ ಅಂತರರಾಷ್ಟ್ರೀಯ ಮಾಹಿತಿ ಮೂಲಗಳಿಂದ ಬೇಕಾದರೆ ಕಂಡುಹಿಡಿಯಬಹುದು.."ಎಂದ ಜಿತೇಂದ್ರ ಜಾಗಿರ್ದಾರ್, ಅವಿನಾಶನ ನೇವಿ ಸಹೋದ್ಯೋಗಿ.

"ಅಲ್ಲಿ ಈಗ ಆಯಿಲ್ ಎಕ್ಸ್ಪ್ಲೊರೇಷನ್ ಅಂದರೆ ತೈಲಮೂಲ ಶೋಧನೆಗಾಗಿ ಕೆಲವು ಕಾಂಟ್ರ್ಯಾಕ್ಟ್ ಪಡೆದ ಕಂಪನಿಗಳು ಕಾರ್ಯಗತವಾಗಿವೆ ಎಂದು ಕೇಳಿದ್ದೆ.. ನಾನು ಕಂಡುಹಿಡಿಯಬಹುದು !" ಎಂದ ಇನ್ನೊಬ್ಬ ಟೀಮ್-ಮೇಟ್ ಅನುಪಮ್ ಖನ್ನಾ.

"ಹಾಗಾದರೆ ಮಾಡು!" ಅವಿನಾಶ್ ಹೇಳಿದ . "ಕಂಡುಹಿಡಿದ ತಕ್ಷಣ ಇಲ್ಲಿಗೆ ವಾಪಸ್ ಬಾ..." 

ಅನುಪಮ್ ತಕ್ಷಣವೇ ಅಲ್ಲಿಂದ ಓಡಿದ.

"ನಿಮಗನಿಸುವಂತೆ ಮೈನಾಕ ಪರ್ವತ ಅಲ್ಲಿದೆ, ಪುರಾಣದ ಪ್ರಕಾರ ಎಂದುಕೊಳ್ಳೋಣ, ವೀಣಾ ಮೇಡಮ್... ಆದರೆ ಚಿನ್ನದ ಶಿಖರ ಎಲ್ಲಾ ಇತ್ತು ಎಂಬುದು ವಾಲ್ಮೀಕಿ ಕವಿಗಳ ಉಪಮೆಯಿರಬಹುದು, ಅಷ್ಟು ಸುಂದರವಾಗಿ ಹೊಳೆಯುತಿತ್ತು ಎನ್ನುವುದಕ್ಕೆ...ಅದು ನಿಜಕ್ಕೂ ಚಿನ್ನವೇ ಇರಲಾರದು ಅಲ್ಲವೆ?" ಎಂದು ಅನುಮಾನಿಸುವವನಂತೆ ಕೇಳಿದ, ಓಶನೋಗ್ರಾಫರ್ ಟ್ರೈನೀ ಆಗಿದ್ದ ವಿನೀತ್ ರೈ.

"ಅದು ಚಿನ್ನ ಎಂದು ಅವರು ಹೇಳಿದ್ದಕ್ಕೆ ವಾಲ್ಮೀಕಿ ರಾಮಾಯಣವೇ ದಾಖಲೆಯಾಗಿದೆ, ವಿನೀತ್...ಹಾಗೆ ಇರಲಿಲ್ಲ ಎಂಬುದಕ್ಕೆ ನಿನ್ನ ಬಳಿ ಏನಾದ್ರೂ ಪ್ರೂಫ್ ಇದೆಯೇನಪ್ಪ?" ಎಂದಳು ತಣ್ಣನೆಯ ಸ್ವರದಲ್ಲಿ ವೀಣಾ.

" ಹೆಹೆಹ್ಹೆ" ಎಂದು ಪೆಚ್ಚಾಗಿ ತಲೆಯಾಡಿಸಿದ ವಿನೀತ್.

"ಬೇಥಿಮೆಟ್ರಿಕ್ ಮ್ಯಾಪಿನಲ್ಲಿ ಅಂಡರ್ ವಾಟರ್ ಟೆರೈನ್ ಹೇಗಿದೆ, ಸಮುದ್ರದ ತಟ ಏನಿದೆ ಎಂದು ನೋಡಿ ಮೇಡಮ್" ಎಂದು ಇನ್ನೊಬ್ಬ ಸಹಾಯಕ ರಾಹುಲ್ ಪಿಳ್ಳೆ ಸಲಹೆ ಕೊಟ್ಟ.

"ಹೌದು, ಅನುಮಾನವೇ ಬೇಡ" ಎನ್ನುತಾ ವೀಣಾ ಸರ್ವರಿನಲ್ಲಿ ಹುಡುಕಿ ಬೇಥಿಮೆಟ್ರಿಕ್ ನಕ್ಷೆಯನ್ನು ತೆರೆಯ ಮೇಲೆ ಪ್ರದರ್ಶಿಸಿದಳು.

ಎಲ್ಲರೂ ಉಫ್ ಎಂದು ಧೀರ್ಘ ಉಸಿರುಬಿಟ್ಟರು ಅದನ್ನು ನೋಡಿ ಅಚ್ಚರಿಯಿಂದ ...ಅಲ್ಲಿ ಸಮುದ್ರ ನೆಲ ಇದ್ದಕ್ಕಿದ್ದಂತೆ ಬೆಟ್ಟದ ವರ್ತುಲದಂತೆ ಮೇಲಕ್ಕೆ ಉಬ್ಬಿದ್ದು ಕಾಣುತಿತ್ತು. ಅಲ್ಲಿ ನೆಲ ಬಹಳ ಆಳವಾಗಿದ್ದರಿಂದ ಮ್ಯಾಪಿನಲ್ಲಿ ಸ್ಪಷ್ಟ ರೀಡಿಂಗ್ ಸಿಕ್ಕಲಿಲ್ಲ...

(ಚಿತ್ರ)

"ಅದೊಂದು ಬೆಟ್ಟದಂತಿದೆ..." ವೀಣಾ ಉದ್ಗರಿಸಿದಳು.

"ಹಾಗೇ ಕಾಣುತ್ತದೆ, ವೀಣಾ" ಅವಿನಾಶ್ ಎಲ್ಲರ ಪರವಾಗಿ ಉತ್ತರವಿತ್ತ. "ಇನ್ನೂ ಸ್ಪಷ್ಟವಾಗಿ ರೀಡಿಂಗ್ ಬೇಕೆಂದರೆ ನಾವು ಇಸ್ರೋ ಇಂದ ಸ್ಯಾಟೆಲೈಟ್ ಮ್ಯಾಪ್ ಮಾಹಿತಿ ಕೇಳಿ ಪಡೆಯಬಹುದು.."

ವೀಣಾ ಸಮ್ಮತಿಸಿ ತಲೆಯಾಡಿಸುತ್ತಿರುವಂತೆಯೇ ಹೊರಗೆ ಹೋಗಿದ್ದ ಅನುಪಮ್ ಮತ್ತೆ ಅವಸರದಿಂದ ಒಳಬಂದು ನುಡಿದ,

"ಸರ್, ಅಲ್ಲಿ ಇಟಾಲಿಯನ್ ರಿಗ್ಗಿಂಗ್ ಸಂಸ್ಥೆಗೆ ಸೇರಿದ ‘ಲಾ ರೋಮಾ’ ಎಂಬ ಹಡಗು ತೈಲ ಶೋಧನಕ್ಕಾಗಿ ಸಾಗರ ನೆಲವನ್ನು ಪರೀಕ್ಷಿಸುತ್ತಿದೆ. ಅವರಿಗೆ ಅಂತರರಾಷ್ಟ್ರೀಯ ಮಾರಿಟೈಮ್ ಆರ್ಗನೈಜ಼ೇಷನ್ ಕಾಂಟ್ರ್ಯಾಕ್ಟ್ ಇದೆ. ಅದು ಇಟಲಿಯ ಮಾಫಿಯಾ ಕುಟುಂಬಕ್ಕೆ ಸೇರಿತ್ತೆಂದು ಇಂಟರ್ ಪೋಲ್ ಒಂದು ಕಣ್ಣಿಟ್ಟರಂತೆ,

ಅವರು ಕಳಿಸಿದ ಸಿಗ್ನಲ್ಲುಗಳನ್ನು ಟ್ಯಾಪ್ ಮಾಡುತ್ತಿದ್ದ ಇಂಟರ್ಪೋಲ್ ಅಂತರ್ಜಾಲ ವಿಭಾಗದವರು ಹೇಳುವ ಪ್ರಕಾರ- ಆ ಹಡಗಿನವರು ತೈಲದ ಬದಲು ಯಾವುದೋ ಲೋಹವನ್ನು ಪತ್ತೆಹಚ್ಚಿ ಇಟಲಿಗೆ ಹೇಳಿದ್ದಾರೆ, ನಂತರ ಆ ಎರಡು ಕೋಡ್ ವರ್ಡ್ಸ್ ಜತೆ ಉತ್ತರವೂ ಬಂದಿದೆ. ಆನಂತರ ಆ ಹಡಗು ಮತ್ತೆ ಯಾವ ಸಂದೇಶವನ್ನೂ ಕಳಿಸದೇ ಅಲ್ಲೇ ಇದೆ..."

"ಹ್ಮ್ಮ್!" ಅವಿನಾಶ್ ಕಾತರದ ಮುಖ ಮಾಡಿದ. "ಅದು ಯಾವ ಮೆಟಲ್ ಸಿಕ್ಕಿತೆಂದು ತಿಳಿಯಿತೆ, ಚೆಕ್ ಮಾಡಬಹುದೆ, ಅನುಪಮ್?"

ಅನುಪಮ್ ಥಮ್ಸ್ ಅಪ್ ಮಾಡಿದ, "ಯೆಸ್, ಅದನ್ನು ಮಾಡಿಬಿಟ್ಟೆ ಸರ್.. ಅದರ ವೈಬ್ರೇಶನ್ ತರಂಗಾಂತರ NMR 1.75 MHz ಮತ್ತು ಕೆಮಿಕಲ್ ನೇಮ್ "ಎಯು" ಅಂದರೆ ಆರಮ್ ಎಂದು ಬರುತ್ತದೆ ...ಅಂದರೆ ಚಿನ್ನ, ಸರಳವಾಗಿ ಹೇಳಲು..."

ಎಲ್ಲರೂ ಅರೆ ಕ್ಷಣ ಸ್ತಂಭೀಭೂತರಾದವರಂತೆ ಕುಳಿತರು.

"ಯೂ ನೋ ವಾಟ್? ( ಏನನಿಸತ್ತೆ ಗೊತ್ತೆ?)" ಅವಿನಾಶ್ ಎದ್ದು ಎಲ್ಲರನ್ನೂ ಸಂಭೋಧಿಸಿದ. "ವಾಲ್ಮೀಕಿ ಮಹರ್ಷಿ ಸುಳ್ಳೂ ಬರೆಯಲಿಲ್ಲ, ಉತ್ಪ್ರೇಕ್ಷೆಯನ್ನೂ ಮಾಡಲಿಲ್ಲ...ತಪ್ಪು ಲೆಕ್ಕವನ್ನೂ ಹಾಕಲಿಲ್ಲ... ಇದ್ದದ್ದು ಇದ್ದ ಹಾಗೆ ಸತ್ಯವನ್ನೇ ರಾಮಾಯಣದ ಸುಂದರಕಾಂಡದಲ್ಲಿ ವರ್ಣಿಸಿದ್ದಾರೆ ಅಂತನಿಸುತ್ತಿದೆ...ಅಂದರೆ...ಮೈನಾಕ ಪರ್ವತ ಮತ್ತು ಚಿನ್ನದ ಶಿಖರಗಳು ಇನ್ನೂ ಅಲ್ಲಿಯೇ ಮುಳುಗಿ ಕುಳಿತಿದೆ!"

"1600 ಕಿಮೀ (ಸ್ವಲ್ಪ ಸೌತ್-ವೆಸ್ಟ್) ದಲ್ಲಿದ್ದ ಆಗಿನ ಲಂಕೆಗೆ ಹೋಗುವಾಗ ಆಂಜನೇಯನಿಗೆ 800 ಕಿಮೀ ನಲ್ಲಿ ಅಂದರೆ ಅರ್ಧದಾರಿಯಲ್ಲಿ ಸಿಕ್ಕ ಮೈನಾಕ ಎಂದುದು ಸರಿ ಹೋಗುತ್ತೆ ಸರ್!" ಪೂರ್ತಿ ನಕ್ಷೆಯಲ್ಲಿ ಮೊದಲು ಗುರುತು ಹಾಕಿದ್ದ ಹಾದಿಯನ್ನು ತೋರಿಸಿ ಖಚಿತಪಡಿಸಿದಳು ಮರಿಯಾ.

(ಚಿತ್ರ)

"ಅಂದರೆ ...ಈ ವಿಚಾರ ನಾವು ಕೇಂದ್ರ ಸರಕಾರಕ್ಕೆ ತಿಳಿಸದೇ ಇರುವಂತಿಲ್ಲ, ಕಾನ್ಫಿಡೆನ್ಷಿಯಲ್ ಆಗುತ್ತದೆ...!" ವೀಣಾ ನಿಶ್ಚಯಿಸಿದವಳಂತೆ ಹೇಳಿದಳು.

"ಮೊದಲು ನಮ್ಮ ಬಾಸಿಗೆ ಹೇಳಿ, ಅವರ ಮೂಲಕ ಮೇಲಕ್ಕೆ ಹೋಗಲಿ...ಬಾ, ವೀಣಾ ನನ್ನ ಜತೆ!" ಎಂದು ಅವಳನ್ನು ಡಾ. ದೇಸಾಯರ ಬಳಿ ಕರೆದೊಯ್ದ.

 

6

ಡಾ. ದೇಸಾಯರ ಆಫೀಸು, ಕೊಚ್ಚಿ

 

"ಇದೊಂದು ರಹಸ್ಯ ಆಪರೇಷನ್ ಎಂದು ಕವರ್ ಮಾಡಬೇಕಾಗತ್ತೆ ಅನ್ನುತ್ತಿದ್ದಾರೆ, ಅವಿನಾಶ್.. ಈ ಬಾರಿ ವೀಣಾ ನಿನ್ನ ಜತೆ ಟೀಮಿನಲ್ಲಿರಲಿ"

ಡಾ. ಪ್ರಮೋದ್ ದೇಸಾಯಿ ತಮ್ಮ ಹಾಟ್ ಲೈನ್ ಫೋನ್ ಕೆಳಗಿಡುತ್ತಾ ಹೇಳಿದರು.

ಅವರು ಇದುವರೆಗೂ ಸತತವಾಗಿ ನೇವಿ ಹೆಡ್ಕ್ವಾಟರ್ಸ್ ನಂತರ ಕೇಂದ್ರ ಗೃಹ ಸಚಿವ ಮತ್ತು ವಿದೇಶಾಂಗ ಸಚಿವಾಲಯದ ವರಿಷ್ಟರ ಜತೆ ಮಾತುಕತೆಯಲ್ಲಿದ್ದರು. ಅವಿನಾಶ್ ಮತ್ತು ವೀಣಾ ಅವರ ಕ್ಯಾಬಿನ್ನಿಗೆ ಬಂದು ತಮ್ಮ ವರದಿ ಹೇಳಿ ಎರಡು ಗಂಟೆಗಳೇ ಕಳೆದಿದ್ದವು.

ಅವಿನಾಶ್ ಅವಾಕ್ಕಾದವನಂತೆ ಅವರನ್ನು ನೋಡಿದ. "ವೀಣಾ ಯಾಕೆ ಸರ್, ಅವಳು ಆ್ಯಕ್ಟೀವ್ ಡ್ಯೂಟಿಗೆ ಬೇಡ.. ಇಲ್ಲೇ ಇರಲಿ"

ಡಾ. ದೇಸಾಯಿ ಅವನತ್ತ ನೋಡಿ ಮುಗುಳ್ನಕ್ಕರು, "ವೆಲ್... ವೀಣಾ ಪಾಟೀಲ್ ಈಸ್ ಎ ಬ್ರೈಟ್ ಗರ್ಲ್..ಅವಳೂ ಜತೆಯಲ್ಲಿರಲಿ ಎಂದು ಕೇಂದ್ರ ಗೃಹ ಸಚಿವ ಶಿವಶಂಕರ್ ಪ್ರಸಾದ್ ಸ್ವತಃ ಹೇಳಿದರು. ಇನ್ನು ಫಾರಿನ್ ಮಿನಿಸ್ಟರ್ ನೀರಜಾ ರಾಜಾರಾಮನ್ ಅಂತೂ ವೀಣಾಗೆ ಬ್ಯಾಗ್ರೌಂಡ್ ಚೆನ್ನಾಗಿ ಗೊತ್ತಿದೆ. ಒಬ್ಬ ಫೀಮೇಲ್ ಫೇಸ್ ಟೀಮಿನಲ್ಲಿದ್ದರೆ ಚೆನ್ನ ಅಂದರು..."

ಆಗ ವೀಣಾ ಅವಿನಾಶ್ ಕಡೆಗೆ ತಿರುಗಿ "ಯಾಕೆ ಹಿತ್ತಲ ಗಿಡ ಮದ್ದಲ್ಲ ಅಂತಲಾ? ... ಬರೇ ಹರಿಕತೆ ಅಲ್ಲ, ನಂಗೆ ನೇವಿ ಮಿಷನ್ ಕೆಲಸ ಮಾಡಕ್ಕೂ ಬರತ್ತೆ , ಕ್ಯಾಪ್ಟನ್!" ಎನ್ನುವುದೆ!

ಡಾ. ದೇಸಾಯಿ ಬೇಕಂತಲೇ ಈ ವಾಗ್ವಾದವನ್ನು ಅವರವರೇ ಪರಿಹರಿಸಿಕೊಳ್ಳಲಿ ಎಂದು ನಗುತ್ತಾ ಸುಮ್ಮನಿದ್ದರು.

"ಹಾಗಲ್ಲ ಸರ್... ದುಷ್ಟರ ಜತೆ ಅಪಾಯದ ಕೆಲಸ, ರಿಸ್ಕ್ ಯಾಕೆ ಅಂತಾ..." ಎಂದು ಫಿಯಾನ್ಸಿಯ ಬಗ್ಗೆ ಚಿಂತಿತನಾದವನಂತೆ ಹೇಳಿದ ಅವಿನಾಶ್.

"ಓಹೋ, ನಿಮಗೆ ಪ್ರಾಣಾಪಾಯ ಆದರೆ ನಾನು ಜೀವಕ್ಕೆ ಜೀವ ಕೊಟ್ಟು ಕಾಪಾಡುತ್ತೇನಪ್ಪಾ!" ಎಂದಳು ಹಳೇ ಸಿನೆಮಾ ನಾಯಕಿಯರ ಡೈಲಾಗಿನಂತೆ ನಾಟಕೀಯ ದಾಟಿಯಲ್ಲಿ.

ಮೂವರೂ ಜೋರಾಗಿ ನಕ್ಕರು ಅವಳ ಹಾಸ್ಯಕ್ಕೆ.

"ಆದರೆ, ಅವಿನಾಶ್, ನೀನೇ ಲೀಡರ್...ನೀನು ಹೇಳಿದ ಹಾಗೆ ಎಲ್ಲರೂ ಕೇಳಬೇಕು, ಆಯಿತೆ?" ಎಂದು ವೀಣಾ ಕಡೆ ತಿರುಗಿದರು. ಅವಳು ಬಹಳ ಜೋರಾಗಿ ಓ ಎಂದು ತಲೆಯಾಡಿಸಿದಳು.

"ಅವಿನಾಶ್, ವಿವರಗಳನ್ನು ಕೇಳು..." ಡಾ. ದೇಸಾಯಿ ಮುಂದುವರೆಸಿದರು." ಆ ಸ್ಥಳದಲ್ಲಿ ನಮಗೆ ಸಹಾಯ ಮಾಡಲು ಬ್ರಿಟಿಷ್ ನೇವಿ ಸಿದ್ಧವಿರುತ್ತದೆ, ನಿನಗೆ ಎಲ್ಲಾ ಇನ್ಫ಼್ರಾ ಸ್ಟ್ರಕ್ಚರ್ ಮತ್ತು ಕಮ್ಮುನಿಕೇಶನ್ ಸಹಾಯಕ್ಕೆ... ಅಲ್ಲದೇ ಸ್ವಲ್ಪ ದೂರವೇ ಆದರೂ ಆಸ್ಟ್ರೇಲಿಯನ್ ನೇವಿ ಸಹಾ ಧುಮುಕಲು ಸಿದ್ಧರಾಗಿದ್ದಾರೆ. ಇದೆಲ್ಲಾ ಕೇಂದ್ರ ಸರಕಾರ ಆಯಾ ರಾಷ್ಟ್ರಗಳ ಜತೆ ಹೊಂದಿರುವ ಈಗಿನ ಪರಸ್ಪರ ಬಾಂಧವ್ಯದ ಫಲ... ಸರಿ, ನೀನು ನಿನ್ನ ಟೀಂ ಆರಿಸಿಕೋ... 

 ಅವಿನಾಶ್ ತಟಕ್ಕನೆ ಜವಾಬ್ದಾರಿಯುತ ಅಧಿಕಾರಿಯಾದ. "ಸರ್, ಮೊದಲು ನನಗೆ ಕೊಡುವ ಫೈಲಿನಲ್ಲಿ ರಾ ಮತ್ತು ಇಂಟರ್ ಪೋಲ್ ಅಧಿಕಾರಿಗಳ ನಂಬರ್ಸ್ ಮತ್ತು ಇ ಮೈಲ್ಸ್ ಕೊಡಿ. ನಮ್ಮ ರೇಡಿಯೋ ಫ್ರೀಕ್ವೆನ್ಸಿ ಆಪರೇಶನ್‌ಗೋಸ್ಕುರ ಔಟ್ ಗೋಯಿಂಗ್ ಮತ್ತು ಇನ್ ಕಮಿಂಗ್ ಎನ್ಕ್ರಿಪ್ಟೆಡ್ ಆಗಿರಬೇಕು. ನೆಕ್ಸ್ಟ್, ಆರ್ಮರಿಗೆ ವರದಿ ಕೊಟ್ಟು ಅಂಡರ್ ವಾಟರ್ ಮೆಶೀನ್ ಗನ್ಸ್, ಲೇಸರ್, ಮತ್ತಿತರ ಫೈರ್ ಆರ್ಮ್ಸ್ (ಶಸ್ತ್ರಗಳು) ನಾಲ್ಕು ಜನಕ್ಕಾಗುವಷ್ಟು ಮತ್ತು ಆರ್ಮ್ಡ್ ಸಬ್ ಮೇರೀನ್ ವೆಸ್ಸೆಲ್ "ಐ ಎನ್ ಎಸ್ ಪ್ರದ್ಯುಮ್ನ" ಎಲ್ಲಾ ಸಿದ್ಧ ಮಾಡಿಸಿ ಸರ್, ಅದು 24 ಗಂಟೆಯೊಳಗೆ ಪೂರ್ತಿ ಇಂಧನ ತುಂಬಿಸಿಕೊಂಡು ನಮ್ಮ ನೇವಲ್ ಬೇಸಿನಿಂದ ರೆಡಿಯಿರಬೇಕು!... ಇನ್ನೊಂದು ಮುಖ್ಯ ವಿಷಯ... ಇಟಾಲಿಯನ್ ಮಾಫಿಯಾಗೆ ರಾಮಾಯಣದ ಬಗ್ಗೆ ಈ ಕ್ಲೂ ಕೊಟ್ಟು ಹೇಳಿದವರ್ಯಾರು, ಅವರನ್ನು ಪತ್ತೆ ಹಚ್ಚಿ ನಮ್ಮ ಗೂಢಚಾರಿ ಏಜೆಂಟ್ಸ್ ತಕ್ಷಣ ಅಲ್ಲೇ ಮುಗಿಸಬೇಕು, ಇನ್ನೂ ಹೆಚ್ಚು ಮಾಹಿತಿ ಹೋಗಿ ಪಾಲೆರ್ಮೋ ಕಡೆಯವರು ಅಲರ್ಟ್ ಆಗುವ ಮುನ್ನ..."

 

ಡಾ. ದೇಸಾಯಿ ತಮ್ಮ ಸಮರ್ಥ ಅಧಿಕಾರಿಯತ್ತ ಅಚ್ಚರಿಯ ನೋಟ ಬೀರಿದರು, "ಏನು, ಎಲ್ಲಾ ಮನೆಯಿಂದ ಉರು ಹೊಡೆದುಕೊಂಡು ಬಂದಿರುತ್ತೀಯೋ ಹೇಗೆ?"

 

"ಏನೋ ನಮ್ಮ ಬಾಸ್ ಕಲಿಸಿಕೊಟ್ಟ ವಿದ್ಯೆ, ಸರ್" ಎಂದು ಅವಿನಾಶ್ ನಗುತ್ತಾ ಅವರ ಕಡೆಗೇ ತಿರುಗಿಸಿದ. "ಆಮೇಲೆ ನಾನು ನಿಮಗೆ ಐದು ನಿಮಿಷದಲ್ಲಿ ಪೂರ್ತಿ ಟೀಮಿನ ಲಿಸ್ಟ್ ಕೊಡುತ್ತೇನೆ.. ಎಲ್ಲರ ಲೀವ್ ಕ್ಯಾನ್ಸೆಲ್ ಮಾಡಿಸಿ, ಆಲ್ ಆರ್ ಆನ್ ಡ್ಯೂಟೀ ...24*7...ಈ ಮಿಷನ್ ಮುಗಿಯುವವರೆಗೂ ಯಾರೂ ಮನೆಗೆ ಹೋಗುವಂತಿಲ್ಲ, ನಮ್ಮ ಜತೆಯಲ್ಲೇ ಇರಬೇಕು...!"

"ಕೊನೆ ಪಾಯಿಂಟ್ ನನಗೆ ತುಂಬಾ ಇಷ್ಟವಾಯಿತು!" ಎಂದು ವೀಣಾ ಅವನತ್ತ ತುಂಟ ನೋಟ ಬೀರಿದಳು.

ಮುಂದೆ ಅವನು ಆರು ಜನರ ಆಯ್ದ ನುರಿತ ನೇವಿ ಮತ್ತು ಓಶನೋಗ್ರಾಫರ್ಸ್ ಟೀಮ್, ಮತ್ತು ಒಬ್ಬ ವೈದ್ಯರ ಸದಸ್ಯರ ಹೆಸರನ್ನು ಘೋಷಿಸಿ ಅವರನ್ನು ಡಾ. ದೇಸಾಯಿ ಮುಂದೆ ಹಾಜರು ಪಡಿಸಿದನು, ಅವರಿಗೆಲ್ಲಾ ಬ್ರೀಫ್ ಮಾಡಿದನು.

"ಯಾವ ಟೀಮ್, ಯಾವ್ಯಾವ ರೋಲ್ಸ್ ಮಾಡಬೇಕು, ಯಾರ ಆರ್ಡರ್ಸ್ ಫಾಲೋ ಮಾಡುವರು ಎಂದೆಲ್ಲಾ ನಾವು ಸಂಜೆ 7 ಕ್ಕೆ ಮೀಟಿಂಗ್ ಮಾಡಿ ನಿರ್ಧರಿಸಬೇಕು.

ಆರ್ಮ್ಸ್ ಟ್ರೈನಿಂಗ್ ಇರುವವರು ನಿಮ್ಮಲ್ಲಿ, ಒಂದು ಟಫ್ ಗನ್ ಬ್ಯಾಟಲ್ ಗೆ ಸಿದ್ಧರಾಗಬೇಕು, ನಮ್ಮ ಎದುರಾಳಿ ಅನುಭವೀ ಮಾಫಿಯಾ ಗನ್ ಮನ್ಸ್ ಜತೆ ಕಾದಾಡಬೇಕು. ವಿ ನೀಡ್ ಟು ವಿನ್ ಎಟ್ ಎನಿ ಕಾಸ್ಟ್!" ಅವಿನಾಶ್ ಫ಼ುಲ್ ಫ಼್ಲೋನಲ್ಲಿ ಹೇಳುತ್ತಾ ಹೋಗುತ್ತಿದ್ದಾನೆ...

"ವೀಣಾ, ನೀನು ಸೇರಿರುವುದರಿಂದ ನಮ್ಮ ವೆಸ್ಸೆಲ್ ನೌಕೆಯ ರನ್ನಿಂಗ್, ಸಿಸ್ಟಮ್ಸ್ ಮತ್ತು ಕಂಟ್ರೋಲ್ ಕೆಲಸವಹಿಸಿಕೋ... ಶಿ ಕಂಟ್ರೋಲ್ಸ್ ಎವೆರಿಥಿಂಗ್ ಆನ್ ದ ಶಿಪ್...ಆ ತರಹ ನೀನು ನಮ್ಮನ್ನು ನಿರ್ದೇಶಿಸಿ, ನಿರ್ವಹಿಸಬೇಕು...ಆಗುತ್ತಲ್ಲ?" ವೀಣಾ ಜತೆ ಎಲ್ಲರೂ ತಲೆಯಾಡಿಸಿದರು. ಅವಳಿಗಿಂತಾ ಸಮರ್ಥರು ಅವಳಿಗೆ ಹೊಳೆಯಲೂ ಸಾಧ್ಯವಿರಲಿಲ್ಲ

"ನನ್ನ ಮಾತು ನೀವು ಕೇಳುವುದಾದರೆ ಸಕ್ಸಸ್ ನಮ್ಮದು ಅಂತೀನಿ ನಾನು" ಎಂದಳು ವಿಶ್ವಾಸದಿಂದ

"ನಾನು ಮೈನ್ ಹಿಟ್- ಮ್ಯಾನ್ ಗ್ರೂಪಿನ ನಾಯಕ...ನನ್ನ ಜತೆ ನಾಲ್ಕು ಜನ ಸ್ಕ್ಯುಬಾ ಸೂಟ್ ಧಾರಿಗಳು( ಈಜುಡುಪು) ಅಂಡರ್ ವಾಟರ್ ಅಟ್ಯಾಕ್ ಮತ್ತು ಬಂಧನ ಮಾಡುವ ಕಾರ್ಯಕ್ಕೆ ರೆಡಿ ಆಗಿ" ಅವಿನಾಶ್ ಗಂಟಲು ಸರಿಪಡಿಸಿಕೊಂಡನು. "24 ಗಂಟೆಯ ಒಳಗೆ ಯಾವುದೇ ಟ್ರೈನಿಂಗ್ ಆದರೂ ಮಾಡಿಕೊಳ್ಳಿ!" ಅವಿನಾಶನ ಅವಸರದ ಆರ್ಡರ್ಸ್ ಅರ್ಥ ಮಾಡಿಕೊಳ್ಳದವರಾರೂ ಅಲ್ಲಿರಲಿಲ್ಲ.

"ಈ ಆಪರೇಷನ್ನಿಗೆ ಹೆಸರೊಂದನ್ನು ಇಡಬೇಕು!" ಎಂದು ತಮ್ಮ ಲ್ಯಾಪ್ಟಾಪನ್ನು ತಮ್ಮತ್ತ ತಿರುಗಿಸಿಕೊಂಡರು ಡಾ. ದೇಸಾಯಿ. "ಏನೆಂದು?"

ಅವಿನಾಶ್‍‌ಗೂ ಮುಂಚೆ ವೀಣಾ ಕಣ್ಮುಚ್ಚಿ ಉತ್ತರಿಸಿದಳು, "ಆಪರೇಷನ್ ಸುವರ್ಣಗಿರಿ!" ಅವಳ ಕಣ್ಮುಂದೆ ಮೈನಾಕ ಪರ್ವತವೇ ಕುಣಿಯಹತ್ತಿತ್ತು.

ಅಲ್ಲಿಗೆ ಮೀಟಿಂಗ್ ಮುಗಿಯುತ್ತಾ ಬಂದಿತ್ತು...

"ಹಾಗಾದರೆ ಹೊರಡಿ, ನಿಮ್ಮ ನಿಮ್ಮ ತಯಾರಿ ಮಾಡಿಕೊಳ್ಳಿ" ಎಂದು ಅವಿನಾಶ್ ಡಾ ದೇಸಾಯಿಗೆ ನಮಸ್ಕರಿಸಿ ಟೀ ಎದ್ದುನಿಂತನು.

ಹೊರಗೆ ಹೋಗುವಾಗ ಹಿಂಬಾಲಿಸಿ ಬಂದ ವೀಣಾ, "ಅದಕ್ಕೇ ದಿ ‘ಬಿಗ್ಗೆಸ್ಟ್ ಬಾಸ್’ ಎಂದು ಎಲ್ಲರೂ ನಿಮ್ಮನ್ನು ಕರೆಯುವುದು ಬೆನ್ನ ಹಿಂದೆ...ಡಾ, ದೇಸಾಯಿಗಿಂತಾ ಟಫ್ ಅಂತೆ..." ಎಂದಳು ಮೆಚ್ಚುಗೆಯ ನೋಟ ಬೀರುತ್ತಾ.

ಅವಿನಾಶ್ ಆಶ್ಚರ್ಯವಾದವನಂತೆ ನಟಿಸುತ್ತಾ, "ಹೋ, ಹಾಗಂದುಕೊಳ್ಳುತ್ತಾರೆಯೋ?" ಎಂದು ನಕ್ಕು ಕೇಳಿದನು, "ಅದು ಸರಿ ವೀಣಾ, ನಿನ್ನ ಬಗ್ಗೆ ಈ ಇಬ್ಬರು ಸೆಂಟ್ರಲ್ ಮಿನಿಸ್ಟರ್ಸ್ರ್ಸ್ ರೆಕೆಮೆಂಡ್ ಮಾಡುವುದೆಂದರೇನು, ಅರ್ಥವಾಗಲಿಲ್ಲಪ್ಪ..." 

ವೀಣಾ, ಹಾ-ಹಾ! ಎಂದು ನಕ್ಕು, "ಶ್ರೀ ಶಿವಶಂಕರ್ ಪ್ರಸಾದ್ ನನ್ನ ಸಂಸ್ಕೃತಿ ಮತ್ತು ಪುರಾಣ ಥೀಸಿಸ್ ಗೆ ಜೂರಿ (ತೀರ್ಪುಗಾರರು) ಆಗಿ ಬಂದು ಬಹಳ ಪ್ರಶ್ನೆಗಳನ್ನು ಕೇಳಿದ್ದರು... ಚೆನ್ನಾಗಿ ಮಾರ್ಕ್ಸ್ ಕೊಟ್ಟರು. ಇನ್ನು ನೀರಜಾ ರಾಜಾರಾಮನ್ ಅವರೇ ನನ್ನ ಕಾನ್ವೋಕೇಶನ್ನಿನಲ್ಲಿ ಗೋಲ್ಡ್ ಮೆಡಲ್ ಕೊಟ್ಟು ಹೊಗಳಿದ್ದರು.. ಸೋ...!" ಎನ್ನುತ್ತ ಹೇಗಿದೆ? ಎನ್ನುವಂತೆ ಹುಬ್ಬೇರಿಸಿದಳು.

"ಹ್ಮ್ಮ್...ಆದರೆ ಸಮುದ್ರ ಮಧ್ಯದಲ್ಲಿ, ನೀರಿನಡಿಯಲ್ಲಿ ಯಾರೂ ನಿನ್ನ ಸಹಾಯ ಮಾಡಲಾರರು, ಇನ್ನೊಮ್ಮೆ ಯೋಚಿಸಿಕೋ..." ಎಂದನು ಅವಿನಾಶ್.

"ನೀನಿರುತ್ತೀಯಲ್ಲ, ಸಾಕು!" ಎನ್ನುತ್ತಾ ಅವನು ಉತ್ತರ ಕೊಡುವ ಮೊದಲೇ ವೀಣಾ ತನ್ನ ಕ್ಯಾಬಿನ್ನೊಳಗೆ ಮಾಯವಾದಳು.

 

 7

ಇತ್ತ, ನಡುಸಾಗರದಲ್ಲಿ...

 

ಆಸ್ಟ್ರೇಲಿಯಾ ತೀರದಿಂದ ಪೂರ್ವಕ್ಕೆ, ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಯಾಣ ಮಾಡುತ್ತಿದ್ದ ಇಟಾಲಿಯನ್ ನೌಕೆ "ಲಾ ಬ್ರೂಟಸ್" ಎಂಬ ಮಾಫಿಯಾ ಕಂಪನಿಯೊಂದಕ್ಕೆ ಸೇರಿದ್ದ ನೌಕೆಯ ಕ್ಯಾಪ್ಟನ್ ರಾಬರ್ಟೋ ತನ್ನ ಎದುರಿಗೆ ಕಾತರದಿಂದ ಕಾಯುತ್ತಿದ್ದ ಆರು ಜನ ನಾವಿಕ ಯೋಧರಿಗೆ ಹೇಳಿದ, "ನೋಡಿ, ಈಗಿಂದೀಗಲೇ ನಮ್ಮ ಹಡಗನ್ನು ಅಲ್ಲಿಗೆ ಡೈವರ್ಟ್ ಮಾಡುತ್ತಿದ್ದೇನೆ... ಇಟಲಿಯಿಂದ ಬಾಸ್ ಹೇಳಿಯಾಗಿದೆ.. ಅಲ್ಲಿ ನಾವು ಅಂಡರ್ ವಾಟರಿನಲ್ಲಿ ಹೋಗಿ ಚಿನ್ನ ಇದ್ದ ಕಡೆ ಕಣ್ಣಾರೆ ನೋಡಿ ಬೋರ್ ಮಾಡಿ, ಎಷ್ಟಿದೆ ಎಂದು ಅದರ ಅಂಕಿ-ಅಂಶಗಳನ್ನು ತಿಳಿಸಿದಾಗ, ಅವರು ಪರಿಶೀಲಿಸಿ ಅಪ್ಪಣೆ ಕೊಡುತ್ತಾರಂತೆ..."

ಅವನ ಸಹಾಯಕ ಕಾರ್ಲೋ, "ಎಷ್ಟು ಹೆಚ್ಚು ಗಣಿಗಾರಿಕೆ ಮಾಡಲು ಸಾಧ್ಯವೋ ಅಷ್ಟು ತೆಗೆಯಲು ಮಾತ್ರ ತಾನೇ ನಮಗೆ ಸಾಧ್ಯ?" ಎಂದ ಸ್ವಲ್ಪ ವ್ಯಂಗ್ಯವಾಗಿ. 

 ‘ನಾವು ನಾವೇ ಚಿನ್ನವನ್ನೆಲ್ಲಾ ಬಾಚಿ ಹಂಚಿಕೊಂಡರೆ ಎಷ್ಟು ಚೆನ್ನ’ ಎಂದು ಅಲ್ಪಮತಿಯಾದ ಅವನಿಗೆ ಅನಿಸತೊಡಗಿತ್ತು.

"ಕಾರ್ಲೋ, ತಾಳಿದವ ಬಾಳಿಯಾನು..ಸ್ವಲ್ಪ ತಾಳು!" ಎಂದ ಅವನ ಕ್ಯಾಪ್ಟನ್ ಆತನ ದುರಾಸೆಯನ್ನು ಅರಿತವನಂತೆ. "ಇನ್ನು ಹನ್ನೆರಡು ಗಂಟೆಗಳಲ್ಲಿ ನಾವು ಆ ಸ್ಪಾಟಿಗೆ ತಲುಪಬಹುದು. ಫುಲ್ ಸ್ಪೀಡ್ ಅಹೆಡ್... ನೋ ಸ್ಟಾಪ್, "ಲಾ ರೋಮಾ" ಹಡಗಿನ ಪಕ್ಕ ಲಂಗರು ಹಾಕುವವರೆಗೂ!" ಎಂದು ವೇಗವಾಗಿ ಚಲಿಸಲು ಆಜ್ಞೆಯಿತ್ತ

ಎಲ್ಲಾ ನಾವಿಕರೂ ತ್ವರಿತವಾಗಿ ಅಲ್ಲಿಂದ ತಮ್ಮ ಸ್ಥಾನಗಳಿಗೆ ತೆರಳಿದರು. ಧೀರ್ಘ ಸಾಗರಯಾನದಲ್ಲಿ ಬೇಸತ್ತಿದ್ದ ಅವರಲ್ಲಿ ಯಾವುದೋ ಹೊಸ ಉತ್ಸಾಹ ಚಿಮ್ಮಿತ್ತು.

8

 ಕೊಚ್ಚಿ ನೇವಲ್ ಹಾರ್ಬರ್, ಭಾರತ...

 

"ಆಲ್ ವೆಪನ್ಸ್ ಲೋಡೆಡ್?" (ಶಸ್ತ್ರಗಳು ತೆಗೆದುಕೊಂಡಿರಾ?) ಕೇಳಿದ ಅವಿನಾಶ್

"ಏಯ್, ಏಯ್, ಕ್ಯಾಪ್ಟನ್" (Aye, Aye ಎನ್ನುವುದು ನೌಕಾಪಡೆಯಲ್ಲಿ "ಹೌದು" ಎನ್ನಲು ಬಳಸುತ್ತಾರೆ) ಎಂದು ಉತ್ತರಿಸಿದನು ಜಿತೇಂದ್ರ ಪಕ್ಕದ ಕ್ಯಾಬಿನ್ನಿಂದ

"ಕ್ರ್ಯೂ ಆನ್ ಬೋರ್ಡ್?" (ಎಲ್ಲರೂ ಹತ್ತಿ ಆಯಿತೆ?) 

"ಏಯ್, ಏಯ್, ಕ್ಯಾಪ್ಟನ್" ಎಂದಳು ವೀಣಾ ಪಕ್ಕದಲ್ಲೇ ಕುಳಿತಿದ್ದವಳು.

"...."

ಎಲ್ಲಾ ಚೆಕ್ಸ್ ಮಾಡಿ ಮುಗಿಸಿ, "ಲೆಟ್ಸ್ ಗೋ"! ( ಹೊರಡೋಣ) ಎಂದನು ಅವಿನಾಶ್. ಚಿಕ್ಕ ಅದುರುವಿಕೆಯ ಅನುಭವದಿಂದ ‘ಪ್ರದ್ಯುಮ್ನ’ ಪ್ರಯಾಣ ಆರಂಭಿಸಿತು

"ಹಡಗಿನ ಚಾಲಕರು ಬಿಟ್ಟು ಮಿಕ್ಕವರೆಲ್ಲಾ 2-3 ಗಂಟೆ ಕಾಲ ವಿರಾಮ ಮಾಡಲು ನಿಂನಿಮ್ಮ ಬಂಕರು (ಹಾಸಿಗೆ) ಗಳಿಗೆ ಹೊರಡಬಹುದು!" ಎನ್ನುತ್ತ ತನ್ನ ತಲೆಯಿಂದ ಹೆಡ್ ಫೋನನ್ನು ತಾತ್ಕಾಲಿಕವಾಗಿ ತೆಗೆದನು ಅವಿನಾಶ್. 

ಅವನ ಟೀಮಿನವರಿಗೆ ಅದರ ಅವಶ್ಯಕತೆಯೂ ಇತ್ತು. ಸಕಲ ಸಿದ್ಧತೆಗಳನ್ನೂ ಎಡೆಬಿಡದೇ ಮಾಡಿ ಮುಗಿಸಿ ಕೊಚ್ಚಿಯ ಭಾರತೀಯ ನೌಕಾನೆಲೆಯಿಂದ 20 ಗಂಟೆಗಳ ತಯಾರಿ ನಂತರ ಆಗತಾನೇ ಹೊರಟಿದ್ದರು. ಅದು ಅವಿನಾಶ್ ಹೇಳಿದ್ದ 24 ಗಂಟೆ ಗಡುವಿಗಿಂತಾ ಮುಂಚೆಯೇ ಮುಗಿಸಿದ್ದು ಆ ಸಿಬ್ಬಂದಿ ಟೀಮಿನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. 

ಐ ಎನ್ ಎಸ್ ಪ್ರದ್ಯುಮ್ನ ಎಂಬ ಆ ಸಬ್ ಮೆರೀನ್ ವೆಸೆಲ್ - ಇಂಡಿಯನ್ ನೇವಿಯ ಶ್ರೇಷ್ಟಾತಿಶ್ರೇಷ್ಟ ನೌಕೆಗಳಲ್ಲಿ ಒಂದಾಗಿತ್ತು. ಅದು ಆಗಲೇ ಹಿಂದೆ ಎರಡು ಬಾರಿ ಅವಿನಾಶ್ ನೇತೃತ್ವದಲ್ಲಿ ಎರಡು ಮಿಷನ್ ಯಶಸ್ವಿಯಾಗಿ ಮುಗಿಸಿತ್ತು. ಹಾಗಾಗಿ ಇಡೀ ಟೀಮಿಗೆ ಅದರ ಮೇಲೆ ವಿಶ್ವಾಸ ಹೆಚ್ಚಿತ್ತು.

"ಮತ್ತೆ ನೀನು, ಮಲಗುವುದಿಲ್ಲವೇ?" ಎಂದಳು ಕಳಕಳಿಯಿಂದ ವೀಣಾ.

"ಇಲ್ಲ, ನನಗೆ ನಿದ್ದೆ ಹತ್ತುವುದೂ ಇಲ್ಲ" 

"ಹಾಗಾದರೆ..." ವೀಣಾ ಎದ್ದಳು,"ನಾನು ಈಗಲೇ ಮಲಗಲು ಹೋಗುವುದಿಲ್ಲ...ನನ್ನ ಸೀಟಿನಲ್ಲಿ ನಕ್ಷೆಗಳ ಸ್ಟಡಿ ಮತ್ತು ಆನ್ ಲೈನ್ ಬರುತ್ತಿರುವ ಸಾಗರತಟದ ಚಿತ್ರಪರೀಕ್ಷೆ ಮಾಡುತ್ತಿರುತ್ತೇನೆ.. ಬೇಕಾದರೆ ಕಾಲ್ ಮಾಡು!"

"ಆಗಬಹುದು!" ಅವಿನಾಶ್ ಮುಗುಳ್ನಕ್ಕು ತನ್ನ ಗಮನವನ್ನು ಬದಲಿಸಿ, ಇದೀಗ ನೀರಡಿಗಿಳಿಯುತ್ತಿದ್ದ ತನ್ನ ಜಲಾಂತರ್ಗಾಮಿ ನೌಕೆಯ ಕಿಟಕಿಗಳಿಂದ ಮಂದವಾಗುತ್ತಿದ್ದ ಬೆಳಕಿನಲ್ಲಿ ಮಿನುಗುವ ನೀರನ್ನು ನೋಡುತ್ತಿದನು. ಗೋಲ್ಡ್ ಫಿಶ್ ಮೀನಿನ ಹಿಂಡೊಂದು ಫಳಕ್ಕನೆ ಅವರ ನೌಕೆಯ ಮುಂದೆ ಈಜುತ್ತಾ ಹಾದುಹೋಯಿತು. ಇನ್ನು ಕೆಲವು ನಿಮಿಷಗಳಲ್ಲಿ ಆಳಕ್ಕೆ ಇಳಿದಂತೆಲ್ಲಾ ಸಬ್ ಮೆರೀನಿನ ಶಕ್ತಿಯುತ ಹೆಡ್ ಲೈಟ್ಸ್ ಪ್ರಭೆಯಲ್ಲೇ ನೋಡಬೇಕಾಗುತ್ತದೆ ಎಂದು ಅವನು ಅರಿತಿದ್ದ.

ಅವಿನಾಶ್ ಗೆ ಅರ್ಧಗಂಟೆಅಯ ನಂತರ ಟ್ರ್ಯಾನ್ಸ್ಮಿಟರ್ ನಲ್ಲಿ ಬಂದಿದ್ದ ಸಂದೇಶ ತಂದಿತ್ತನು ಆಪರೇಟರ್ ಜಗದೀಶನ್ ಎಂಬಾತ.

ಅದರಲ್ಲಿ- "ಇಟಲಿಯ ಮಾಫಿಯಾ ನಂಟಿರುವ ಲಾ ಬ್ರೂಟಸ್ ಎಂಬ ಆರ್ಮ್ಡ್ ನೌಕೆ ಇದೀಗ ಲಾ ರೋಮಾ ಎಂಬ ಚಿನ್ನದ ಸುಳಿವು ಕಂಡುಹಿಡಿದ ನೌಕೆಯತ್ತ ತನ್ನ ದಿಕ್ಕು ತಿರುಗಿಸಿ ವೇಗವಾಗಿ ಸಾಗುತ್ತಿದೆ. ಆಸ್ಟ್ರೇಲಿಯಾ ನೇವಿ ಅದನ್ನು ಖಚಿತ ಪಡಿಸಿದ್ದಾರೆ. ನೀವು ಫುಲ್ ಸ್ಪೀಡಿನಲ್ಲಿ ಸಾಗಿದರೆ ಅವರು ಸ್ಪಾಟ್ ತಲುಪಿದ ನಂತರ ಆರು ಗಂಟೆಯೊಳಗೆ ನೀವೂ ಅಲ್ಲಿಗೆ ತಲುಪಬಹುದು.. ಗುಡ್ ಲಕ್- ಡಿಡಿ" (ಡಿ.ಡಿ- ಡಾ. ದೇಸಾಯಿ ತಮಗೆ ತಾವೇ ಇಟ್ಟುಕೊಂಡ ಸಿಗ್ನೇಚರ್... ).

ಕೆಳಗೆ ಆಸ್ಟ್ರೇಲಿಯಾದವರು ಅಂದಾಜು ಮಾಡಿದ್ದ ಶತ್ರುನೌಕೆಯಲ್ಲಿದ್ದ ಶಸ್ತ್ರ ಸಂಗ್ರಹದ ಲೆಕ್ಕವಿತ್ತು. ಗನ್ಸ್ ಮತ್ತು ಬುಲೆಟ್ಸ್, ಲೇಸರ್ಸ್, ಅಂಡರ್ ವಾಟರ್ ಫ್ಲೇರ್ಸ್ ಮತ್ತು ಡೈನಮೈಟಿನಂತಾ ಸ್ಪೋಟಕಗಳು!

ಅವಿನಾಸ್, ಮುಖ ಬಿಗಿಯಿತು...ಇದರ ಪ್ರಕಾರ ಅದೃಷ್ಟವಿದ್ದರೆ ತಮ್ಮ ಬಳಿಯಿದ್ದ ಶಸ್ತ್ರಗಳು ಅವರ ಜತೆ ಮುಖಾಮುಖಿಯಲ್ಲಿ ಕೇವಲ ಸರಿಸಾಟಿಯಾಗಬಹುದು, ಹೆಚ್ಚಂತೂ ಅಲ್ಲ...ಅಂದರೆ ಜಸ್ಟ್ ಎನಫ್!

ಆದರೆ ಅವಿನಾಶ್ ಗೆ ಚಿಂತೆಗೀಡುಮಾಡಿದ್ದು ಎರಡು ವಿಷಯಗಳು:-

1. ಮೈನಾಕ ಪರ್ವತದ ಚಿನ್ನದ ನಿಕ್ಷೇಪದ ಅಳಿದುಳಿದ ಭಾಗಗಳಷ್ಟೇ ಅವರಿಗೆ ಸುಳಿವು ಸಿಕ್ಕಿರಲು ಸಾಧ್ಯ.. 

2. ಕೇವಲ ಚಿನ್ನದ ಪದರ/ ಲೇಪನ ಹೊಂದಿದ ಅ ಹಳೆಯ ಬೆಟ್ಟದ ಮುಳುಗಿದ್ದ ಕಲ್ಲು ಬಂಡೆಗಳಿಗೆ ಸ್ಪೋಟಕವೇಕೆ?.. ಮೈನಿಂಗ್ ಆಯುಧಗಳಿಂದ ತೆಗೆಯಬಹುದಲ್ಲ..ಈ ಸ್ಪೋಟಕ ಡೈನಮೈಟುಗಳೇಕೆ?

ವೀಣಾ ಸುಂದರಕಾಂಡದ ಕತೆಯಲ್ಲಿ ಹೇಳಿದ್ದೇನು ಮತ್ತೆ...ಚಿನ್ನದ ಪದರವಿದ್ದ ಪರ್ವತ ಮೈನಾಕ ಎಂದಲ್ಲವೆ?

ಹ್ಮ್!!.. ಅವಳನ್ನು ಕೇಳಲೇ ಬೇಕು ಈಗ ಒಮ್ಮೆ...

"ವೀಣಾ, ಕೆನ್ ಯು ಕಮಿನ್, ಪ್ಲೀಸ್?"

"ಯೆಸ್, ಶೂರ್, ಮೈ ಡಿಯರ್ ಕ್ಯಾಪ್ಟನ್ "ಎಂದು ಮಧುರವಾಗಿ ನುಡಿದು ಒಳಬಂದಳು ಪುರಾಣ ಮತ್ತು ಸಾಗರ ತಜ್ಞೆ!

"ವೀಣಾ, ಮೈನಾಕ ಪರ್ವತದಲ್ಲಿ ಎಷ್ಟು ದಪ್ಪ ಪದರ ಚಿನ್ನ ಹಾಕಿದ್ದರು?, ಆದರೆ ಅದನ್ನು ಕಲ್ಲಿನ ಮೇಲಿಂದ ಎಬ್ಬಬಹುದು ಅಲ್ಲವೆ?" ಎಂದ ಅವಿನಾಶ್ ಅವಳತ್ತ ತಿರುಗುತ್ತಾ.

ವೀಣಾ ಕತ್ತು ಕೊಂಕಿಸಿ ಅವನತ್ತ ನೋಡಿದಳು. ಅವಳು ಆ ರೀತಿ ನೋಡಿದಳೆಂದರೆ ತಾನೇನೋ ತಪ್ಪು ಹೇಳಿ ಸಿಕ್ಕಿ ಹಾಕಿಕೊಂಡೆ ಎಂದು ಅವಿನಾಶ್ ಹೆದರಿ ಅವನೆದೆ ಡವಗುಟ್ಟಿತು.....

"ಪದರಾ ನಾ?" ಎಂದಳು ಅವಳು ಗಂಭೀರವಾಗಿ . "ಕಲ್ಲಿಂದ ಎಬ್ಬ ಬಹುದಾ? ನಾನು ಹೇಳಿದ್ದು ನೀನು ಏನು ಅರ್ಥ ಮಾಡಿಕೊಂಡೆ, ಅವಿನಾಶ್?"

"ಮತ್ತೆ, ಶತ್ರುಗಳು ಸ್ಪೋಟಕ ಬಾಂಬ್ ಕೊಂಡೊಯುತ್ತಿದ್ದಾರೆ , ಯಾಕೆ?"

"ಯಾಕೆಂದರೆ ಅವರು ಬಹಳ ಸ್ಮಾರ್ಟ್ ಆಗಿ ಯೋಚಿಸಿದ್ದಾರೆ..." ಮಂಜಿನಂತಾ ತಣ್ಣನೆಯ ದನಿಯಲ್ಲಿ ಉತ್ತರಿಸಿದಳು ವೀಣಾ. "ಮೈನಾಕದಲ್ಲಿರುವುದು ಚಿನ್ನದ ಪದರವಲ್ಲ, ಅವಿನಾಶ್ ಸಾಹೇಬರೆ...ಅದು ಅಷ್ಟಕ್ಕಷ್ಟೂ ಸಾಲಿಡ್ ಬಂಗಾರ..."

"ಈಸ್ ಇಟ್?" ಎಂದು ಮುಖ ಕೆಂಪಾಗಿ ತೊದಲಿದ್ದ ಅವಿನಾಶ್. ತನ್ನ ಬ್ಲಂಡರ್!

"ಬಂಗಾರದ ಶಿಖರಗಳು ಮಾತ್ರ, ಐ ಮೀನ್...ಪೂರ್ತಿ ಸಾಲಿಡ್ ಗೋಲ್ಡ್...ಅದರ ಗಾತ್ರ, ಎಷ್ಟು ತೂಕ, ಈಗ ಎಷ್ಟು ಕ್ಯಾರೆಟ್, ಎಷ್ಟು ದಶ ಕೋಟಿ ಬೆಲೆಯದ್ದು ಬೆಲೆ ಯಾರಿಗೂ ಹೇಳಲಾಗದು!" ವೀಣಾ ಅದರ ಬೆಲೆ ಮಾತ್ರ ತನಗೆ ತಿಳಿಯದು ಎಂಬಂತೆ ನಿಟ್ಟುಸಿರಿಟ್ಟಳು.

ಎರಡು ಕ್ಷಣ ಅಲ್ಲಿ ಚಾಕುವಿನಿಂದ ಕೊಯ್ಯಬಹುದಾದಂತ ಘನ ಮೌನ ಆವರಿಸಿತ್ತು! 

ಬಂಗಾರದ ಶಿಖರಗಳು, ಮಿಕ್ಕ ಕಡೆ ಕೆಳಗೆಲ್ಲ ಫಲ ಬಿಡುವ ಮರಗಳು ಹಾಗೇ ಆಂಜನೇಯ ನೋಡಿದ್ದು ಅಂದಿದ್ದಳು...ತಾನೇ ತಪ್ಪು ಅರ್ಥ ಮಾಡಿಕೊಂಡೆ!

"ಮತ್ತೆ ನೀನು ನಿನ್ನೆ ನನಗೆ ಸರಿಯಾಗಿ ಹೇಳಲೇ ಇಲ್ಲ, ಈ ಪಾಯಿಂಟ್!" ಅವಿನಾಶ್ ಹತಾಶನಂತೆ ಅವಳನ್ನು ದೂರಿದ.

"ಉಫ್! ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಅನಿಸತ್ತೆ... ನಾನು ಮೈನಾಕ ಎಂಬ ಚಿನ್ನದ ಬೆಟ್ಟವೇ ಸಮುದ್ರದಿಂದ ಆಂಜನೇಯನ ಮುಂದೆ ಹಾರಿ ಬಂದಿತು ಎಂದಿದ್ದೆ... ನೀನು ದಡಬಡನೆ ಊಟದ ಬಿಲ್ ಕೊಟ್ಟು ಓಡಿಬಿಟ್ಟೆ ಅಲ್ಲಿಂದ ನನ್ನನ್ನೂ ಎಳೆದುಕೊಂಡು...ನಿನಗರ್ಥವಾಗಿಯೇ ಹಾಗೆ ನೀನು ಉದ್ರಿಕ್ತನಾದೆ ಎಂದು ನಾನು ತಿಳಿದುಕೊಂಡೆ..." ಎಂದಳು ಅವಳು ಶಾಂತದನಿಯಿಂದ.

"ಹಾ?" ಎಂದ ಅವಿನಾಶನ ಗಂಭೀರ ಮುಖ ನೋಡಿ ಅವಳೂ ಆತಂಕದಿಂದ ಮರುಪ್ರಶ್ನೆ ಹಾಕಿದಳು,"ಏನಾಯಿತೀಗ, ಅಲ್ಲಿಗೆ ಅವರಾಗಲೀ, ನಾವಾಗಲಿ ತಲುಪಿಲ್ಲವಲ್ಲ?"

"ನನ್ನ ತಪ್ಪು ವೀಣಾ.. ಜಿತೇಂದ್ರನು ಹೆಚ್ಚುವರಿ ಹೆವಿ ಶಸ್ತ್ರಗಳನ್ನು ಇಟ್ಟುಕೊಳ್ಳುವಾಗ ನಾನು ಹೇಳಿ ಕಡಿಮೆ ಮಾಡಿಸಿದೆ ... ಭಾರ ಅನಾವಶ್ಯಕವಾಗಿ ಬೇಡ, ಸ್ಪೀಡ್ ಕಡಿಮೆಯಾದೀತು ಎಂದು...ಅಲ್ಲದೇ ಅಂಡರ್ ವಾಟರ್ ಪೂರ್ಣ ಪ್ರಮಾಣದ ಯುದ್ಧ ನಮ್ಮ ದೇಶಕ್ಕೂ ಇಟಲಿಯ ಮಾಫಿಯಾ ಆರ್ಮಿ ಜತೆಗೂ ಅಲ್ಲಿ ಮಾಡುವಂತಿಲ್ಲ ಎಂದುಕೊಂಡೆ..ಅಂತರರಾಷ್ಟ್ರೀಯ ಜಲಮಿತಿಯಲ್ಲಿದೆ, ಬೇರೆ... ಬೇರೆ ರಾಷ್ಟ್ರದವರೂ ಒಪ್ಪಲಾರರು ಎಂದು..." ಎನ್ನುವಷ್ಟರಲ್ಲಿ ವೀಣಾ ಅವಸರಿಸಿದಳು,

"ಅವರ ಬಳಿ ಬಾಂಬ್ ಇದ್ದರೆ ನಾವು ತಡೆಯಲು ಹೋದಾಗ ಅವರು ಬಳಸಿಬಿಟ್ಟರೆ ಹೇಗೆ, ನಮಗೆ ಪ್ರಾಣಾಪಾಯವೆಂದೆ ನೀನು ಹೇಳುತ್ತಿರುವುದು?"

"ನೋ...ನೀನು ತಪ್ಪಾಗಿ ಅರ್ಥ ಮಾಡಿಕೊಂಡೇ ಈಗ" ಎಂದ ಅವಿನಾಶ್. "ಅವರು ನಮ್ಮ ಮೇಲಲ್ಲವಲ್ಲ ಬಾಂಬ್ಸ್ ಉಪಯೋಗಿಸುವುದು?" 

"ಮೈನಾಕ ಬೆಟ್ಟವನ್ನೇ ಉಡಾಯಿಸಲು..."ಎಂದರು ಇಬ್ಬರೂ ಒಕ್ಕೊರಳಿನಲ್ಲಿ ಒಟ್ಟಿಗೆ ಅರ್ಥ ಮಾಡಿಕೊಳ್ಳುತ್ತಾ!

9

 

ಅವಿನಾಶ್ ಡಾ. ದೇಸಾಯರಿಗೆ ಶಾಂತವಾಗಿ ಈ ಬಗ್ಗೆ ಉತ್ತರ ಕಳಿಸಿದನು. "ಆದದ್ದು ಆಗಲಿ ಸರ್. ವೀರ ಹಾಗೂ ಸಮರ್ಥ ನಾವಿಕರು, ನೇವಿ ತಜ್ಞರು ಜತೆಗಿದ್ದೇವೆ.. ಹೊರಟಿದ್ದಾಯಿತು. ಅವರ ಕೈ ಮೇಲಾಗುತ್ತೋ, ನಮ್ಮದೋ ನೋಡೇಬಿಡೋಣ" ಎಂದಿದ್ದ ಆ ಸಂದೇಶದಲ್ಲಿ.

ಡಾ. ದೇಸಾಯರ ಅಂತಿಮ ನಿರ್ಣಯವೆಂಬಂತೆ ಈ ಸಂದೇಶ ಕೆಲನಿಮಿಷಗಳಲ್ಲೇ ಬಂದಿತು- "ಅವಿನಾಶ್, ವೀಣಾ, ನಮ್ಮ ಸರಕಾರಕ್ಕೆ ಆ ಚಿನ್ನ ಬೇಕಿಲ್ಲ, ಅದು ಎಂದೂ ನಮ್ಮದು ಆಗಿರಲೇ ಇಲ್ಲ, ಈಗ ವಾಪಸ್ ಪಡೆಯಲು!...ಅಲ್ಲದೇ ಈ ಸ್ಥಳ ಭಾರತದ ಜಲಮಿತಿಯ ಹೊರಗಿದೆ. ಹಾಗಾಗಿ ನಮ್ಮ ಹಕ್ಕಿಲ್ಲ... ಆದರೆ ಬ್ರಿಟನ್, ಆಸ್ಟ್ರೇಲಿಯಾ, ಇಟಲಿ ಸೇರಿದಂತೆ ಎಲ್ಲ ಮಿತ್ರ ರಾಷ್ಟ್ರಗಳು ( ವಿಶ್ವಸಂಸ್ಥೆಗೂ ಕೂಡಾ ರಹಸ್ಯ ಸಂದೇಶ ಹೋಗಿದೆ) ಭಾವಿಸುವುದೆಂದರೆ- ಏನೇ ಆಗಲಿ, ಇಟಲಿಯ ಈ ಮಾಫಿಯಾ ಕೈಗೆ ಇಷ್ಟು ದೊಡ್ಡ ಬಂಗಾರದ ನಿಧಿ ಸಿಗಬಾರದು.. ಅವರು ಆಮೇಲೆ ಆ ಸಂಪತ್ತಿನ ಬಲದ ಮೇಲೆ ನಿಯಂತ್ರಿಸಲು ಸಾಧ್ಯವಿಲ್ಲದಷ್ಟು ಅಪರಾಧಗಳನ್ನು ಮಾಡಿಯಾರು...ಅವರು ಹಿಂಸಾಚಾರಕ್ಕೆ ತಿರುಗಿದರೆ, ಅವರನ್ನು ಮುಗಿಸಿಬಿಡಲು ನಿಮಗೆ ಅಧಿಕಾರವಿದೆ..ಶೂಟ್ ಟು ಕಿಲ್!...ಎಲ್ಲರೂ ಸುರಕ್ಷಿತವಾಗಿ ಹಿಂತಿರುಗಿ ಬನ್ನಿ, ಬೆಸ್ಟ್ ಆಫ್ ಲಕ್- ಡಿಡಿ"

ಅವಿನಾಶ್ ಗೆ ಅರ್ಧ ಸಮಾಧಾನವಾಯಿತು, ಸದ್ಯ, ಹೋರಾಟವಾದಲ್ಲಿ ಸರಕಾರಿ ಅಪ್ಪಣೆಗಳು ನಮ್ಮನ್ನು ನಿರ್ಬಂಧಿಸುವುದಿಲ್ಲವಲ್ಲ ಎಂದು.

ಅವಿನಾಶ್ ಅದನ್ನು ಪಿ.ಎ. ದ್ವನಿವರ್ಧಕದಲ್ಲಿ ತನ್ನ ಎಲ್ಲ ಸಿಬ್ಬಂದಿಗಳಿಗೂ ಘೋಷಿಸಿದ.

ವೀಣಾ "ನಾನು ಅರ್ಧ ಗಂಟೆ ಬ್ರೇಕ್ ತೆಗೆದುಕೊಂಡು ಬರುತ್ತೇನೆ...ಆಗ ನನ್ನ ಮೇಲೆ ನಂಬಿಕೆಯಿದ್ದರೆ ಈ ನೌಕೆಯನ್ನು ನನ್ನ ಮೇಲೆ ಬಿಟ್ಟು ನೀನೂ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಬಹುದು"

ಎಂದು ಅವನ ಭುಜ ತಟ್ಟಿ ಎದ್ದಳು. ಅವಿನಾಶ್ ಅಪ್ರಯತ್ನವಾಗಿ ಅವಳನ್ನು ತೋಳಲ್ಲಿ ಬಳಸಿದ.

"ನಾಟ್ ನೌ, ನಾಟ್ ಹಿಯರ್, ಕ್ಯಾಪ್ಟನ್" ಎಂದು ನಗುತ್ತಾ ಬಿಡಿಸಿಕೊಂಡು ಹೊರಟಳು ವೀಣಾ.

 ಇಬ್ಬರೂ ಹಿಂದಿನ ದಿನದಿಂದ ಹಾಸಿಗೆಯನ್ನೇ ನೋಡಿಲ್ಲ, ಅಷ್ಟು ವ್ಯಸ್ಥರಾಗಿದ್ದರು. ಸ್ವಲ್ಪ ರೆಸ್ಟ್ ತೆಗೆದುಕೊಂಡರೆ ಮುಂದಿನ ಹೋರಾಟವೇನಿದೆಯೋ ಅದಕ್ಕೆ ಹುರುಪು ಇರುತ್ತದೆ ಎಂಬುದು ಅವಿನಾಶ್‍‌ಗೂ ಗೊತ್ತು.

ಈಗ ಅವರು ಸಾಗುತ್ತಿರುವ ಆಳದಲ್ಲಿ ಹೊರಗೆ ಮಂದವಾದ ನೈಟ್ ಲ್ಯಾಂಪಿನಂತಾ ಬೆಳಕಿದೆ ಆದರೂ ಅಲ್ಲಿನ ಲೋಕಲ್ ಟೈಮ್ ಮಧ್ಯಾಹ್ನ 12 ಗಂಟೆ ಸಮಯ ಆಷ್ಟೇ.. ಸುತ್ತಲೂ ಪ್ರಶಾಂತ ಸಾಗರ ಮತ್ತು ಹಿಂಡು ಹಿಂಡು ವಿವಿಧ ಬಗೆಯ ಮೀನುಗಳು, ನೀರುಕುದುರೆ ಮತ್ತು ಆಕ್ಟೋಪಸ್ಸುಗಳು ಇವರ ನೌಕೆಯತ್ತ ಅಚ್ಚರಿಯ ಕಣ್ಣು ಬೀರಿ ಸರಿದು ಮರೆಗಾಗುತ್ತಿವೆ.

"ಕ್ಯಾಪ್ಟನ್, ನಾವೀಗ ಅಂತರ ರಾಷ್ಟ್ರೀಯ ಜಲಮಿತಿಯಲ್ಲಿದ್ದೆವೆ, ಅದರ ಮಾರಿಟೈಮ್ ಕಾನೂನಿಗೆ ಒಳಪಡುತ್ತೇವೆ ಇನ್ನು ಮೇಲೆ", ಎಂದು ಮುಖ್ಯ ಚಾಲಕ (ಪೈಲೆಟ್) ತಿಳಿಸಿದ. ಇಬ್ಬರು ಚಾಲಕರಿಗೆ ಇಬ್ಬರು ಬ್ಯಾಕ್ ಅಪ್, ಮಧ್ಯೆ ರೆಸ್ಟ್ ತೆಗೆದುಕೊಳ್ಳಲಿ ಎಂದು ಕರೆದುಕೊಂಡು ಬಂದಿದ್ದಾನೆ ಅವಿನಾಶ್.

"ಲಾಗ್ ಆಫ್, ಕಿಶೋರ್...ಆಮೇಲೆ ಬಾ!" ಎಂದ ಅವನನ್ನು ಹೆಸರಿನಿಂದ ಗುರುತಿಸುತ್ತಾ ಅವನನ್ನು ವಿರಾಮಕ್ಕೆ ಕಳಿಸಿದ.

"ಇಕ್ಬಾಲ್ ಪೈಲೆಟಿಂಗ್, ಸರ್" ಎಂದ ಅವನ ಬದಲಿ ಬಂದ ಪೈಲೆಟ್.

"ಇಕ್ಬಾಲ್, ನಮ್ಮ ಸ್ಪಾಟಿಗೆ ಫುಲ್ ಸ್ಪೀಡ್ ಮಾಡು...ಎಷ್ಟು ಹೊತ್ತಿಗೆ ತಲುಪಬಹುದು?" ಎಂದ ಅವಿನಾಶ್. 

"ಫುಲ್ ಸ್ಪೀಡಲ್ಲೇ ಇದೆ ಸರ್" ಎಂದು ಚಿಕ್ಕದಾಗಿ ನಕ್ಕ ಇಕ್ಬಾಲ್. "ಮೂರು ಗಂಟೆ ಲೋಕಲ್ ಟೈಂಗೆ ನಮ್ಮ ರಾನ್ದೆವೂ (rendezvous = ಸಂಧಿಸ್ಥಳ)"

"ಓಕೆ" ಎನ್ನುತ್ತಾ ಹಾಗೆ ಸೀಟ್ ಹಿಂದಕ್ಕೆ ಮಾಡಿ ಉರಿಯುತ್ತಿರುವ ಕಂಗಳಿಗೆ ರೆಸ್ಟ್ ಕೊಡಲು ಮುಚ್ಚಿದ.

 20 ನಿಮಿಷದ ನಂತರ,

"ಅವಿನಾಶ್...ನಿನ್ನ ಬಂಕರಿಗೆ ಹೋಗಿ ಮಲಗಿಕೋ, ನಾನು ಬಂದಿದ್ದೇನೆ" ಎಂದು ಮೆಲ್ಲಗೆ ಪಕ್ಕದಲ್ಲಿ ವೀಣಾ ಕರೆದಾಗಲೇ ಅವನಿಗೆ ಜೋಂಪಿನಿಂದ ಎಚ್ಚರವಾಗಿದ್ದು.

"ಹೆಹೆ, ಇಲ್ಲ ಇಲ್ಲ...ಮುಖ ತೊಳೆದು, ಬಟ್ಟೆ ಬದಲಿಸಿ ಫ್ರೆಶ್ ಆಗಿ ಬರುವೆ" ಎಂದು ಎದ್ದ .

"ಎರಡು ಕಪ್ ಕಾಫಿಗೆ ಗ್ಯಾಲಿಗೆ ಹೇಳುತ್ತೇನೆ" (ಗ್ಯಾಲಿ= ಪ್ಯಾಂಟ್ರಿ, ಚಿಕ್ಕ ಕಾಫಿಮನೆ)

"ಓಕೆ"

10

 

ಲಾ ರೋಮಾ ಬಳಿ... 

ಲೋಕಲ್ ಟೈಮ್ ಮಧ್ಯಾಹ್ನ 1 ಗಂಟೆ

 

ಲಾ ಬ್ರೂಟಸ್ ಎಂಬ ಶಸ್ತ್ರಸನ್ನದ್ಧ ಮಾಫಿಯಾ ಹಡಗು ಸಮೀಪಿಸಿದ್ದನ್ನು ಮೊದಲು ದಿಗಂತದಲ್ಲಿ ಗುರುತಿಸಿದವನೇ ಲಾರೋಮಾದ ಕ್ಯಾಪ್ಟನ್ ಡಿವಿಟೋ.

"ಕಮಿನ್, ಲಾ ಬ್ರೂಟಸ್, ಐ ಸೀ ಯು" ಎಂದ ಆಪರೇಟರನ್ನು ಕೊಂದ ನಂತರ ತಾನೆ ರೇಡಿಯೋ ಟ್ರಾನ್ಸ್ಮಿಟರ್ ಉಪಯೋಗಿಸುತ್ತಿದ್ದವ.

 "ಓಕೆ... ರಾಬರ್ಟೋ ಹಿಯರ್... ನಮಗೆ ಚಿನ್ನ ಸಿಕ್ಕಿದ ಕೋಆರ್ಡಿನೇಟ್ಸ್ ಕೊಟ್ಟು ನೀನು ಹೊರಡಬಹುದು" ಎಂದ ಒರಟು ಸ್ವಭಾವದ ಲಾ ಬ್ರೂಟಸ್ ಕ್ಯಾಪ್ಟನ್.

ಡಿವಿಟೋಗೆ ಈ ಮಾತು ಕೇಳಿ ಪಿಚ್ಚೆನಿಸಿತು. ಏನು ಮಾಡುತ್ತಾರೋ ಮಾಡಿಕೊಳ್ಳಲಿ, ನಾನು ಜತೆಗಿದ್ದರೆ ಇವರಪ್ಪನ ಆಸ್ತಿ ಹೋಗುತ್ತಿತ್ತೆ? ಎಂದು ಸಿಟ್ಟಾದ..ಆದರೆ ಮಾಫಿಯಾ ಆರ್ಡರ್ಸ್ ವಿರೋಧಿಸಿ ಕೆಟ್ಟವನಾಗಬಯಸದೇ ಸುಮ್ಮನಾದ.

ಹದಿನೈದು ನಿಮಿಷಗಳಲ್ಲಿ ಲಾ ಬ್ರೂಟಸ್ ಮತ್ತು ಅದರ ಹತ್ತು ಜನರಿದ್ದ ನೌಕೆ ಅಲ್ಲಿ ಲಂಗರು ಹಾಕಿ ನಿಂತಿತು..ಎಲ್ಲಾ ವಿವರಗಳನ್ನು ರಾಬರ್ಟೋಗೆ ಕೊಟ್ಟ ನಂತರ ಆತ ಇವನಿಗೆ

 "ಆಯಿತು, ವಿ ವಿಲ್ ಟೇಕ್ ಕೇರ್.. ನೀನು ಇಟಲಿಗೆ ಹೊರಡು, ಎಲ್ಲಿಯೂ ನಿಲ್ಲಬೇಡ, ಬಾಸ್ ಆರ್ಡರ್ಸ್" ಎಂದ. 

ನಿರಾಸೆಯಿಂದ ತನ್ನ ಹಡಗನ್ನು ಹೊರಡಿಸಿದ ಡಿವಿಟೋ.

ಹಾಗೇ ಅವನ ಮನದಲ್ಲಿ ದುರಾಸೆಯೊಂದು ಮೊಳಕೆಯೊಡೆಯಿತು. ‘ತಾನು ಬಹಳ ದೂರವೇನೂ ಹೋಗಬೇಕಿಲ್ಲ, ಸ್ವಲ್ಪ ಇವರಿಗೆ ಕಾಣದಷ್ಟು ದೂರದಲ್ಲಿ ಸಿಗ್ನಲ್ಸ್ ಆಫ್ ಮಾಡಿಕೊಂಡು ಹೊಂಚು ಹಾಕಿ ಕಾಯುತ್ತೇನೆ. ತನ್ನ ಬಳಿಯೂ ಇನ್ನು ನಾಲ್ಕು ಜನ ನಾವಿಕರಿದ್ದಾರೆ. ಇವರೇ ಚಿನ್ನ ತೆಗೆದುಕೊಂಡು ಹೋಗುವಾಗ ಎದುರಿಗೆ ಸಿಕ್ಕರೆ ತನಗೂ ಕೊಟ್ಟೇ ಕೊಡುತ್ತಾರೆ. ಇಲ್ಲದಿದ್ದರೆ ಹೊಡೆದಾಡುವೆ’- ಹೀಗೆಂದು ಆ ಒರಟ ರಾಬರ್ಟೋ ಬಗ್ಗೆ ಪ್ರತೀಕಾರ ಮನೋಭಾವ ಮೂಡಿದ ಡಿವಿಟೋ ಕುಹಕನಗೆ ನಕ್ಕ. 

ಅವನಿಗಾಗಲಿ ರಾಬರ್ಟೋಗಾಗಲಿ ಶಸ್ತಸನ್ನದ್ಧನಾಗಿ ತಮ್ಮತ್ತ ಬರುತ್ತಿರುವ ಭಾರತೀಯ ಸಬ್‌ಮೆರೀನ್ ಪ್ರದ್ಯುಮದ ಬಗ್ಗೆ, ಅವಿನಾಶನ ಯೋಧರ ತಂಡದ ಬಗ್ಗೆಯಾಗಲಿ ತಿಳಿದೇ ಇರಲಿಲ್ಲ.

ಆದರೆ ಭವಿಷ್ಯವನ್ನು ಕಂಡವರಾರು?

ರಾಬರ್ಟೋ ಕಡೆ ಪಳಗಿದ ನಾಲ್ವರು ಅಂತರ್ಜಲ ಪರಿಣಿತರೂ, ಸಾಹಸಿಗಳೂ ಇದ್ದರು. ಅವರು ತಮಗೆ ಬೇಕಿದ್ದ ಪರೀಕ್ಷಕ ಸಲಕರಣೆ, ಯಂತ್ರಗಳನ್ನು ತೆಗೆದುಕೊಂಡು ನೀರಿಗಿಳಿದರು

ಅವರು ಅರ್ಧಗಂಟೆಯ ಸ್ಥಳ ಪರೀಕ್ಷೆ ಮಾಡಿ ಪರಿಶೀಲಿಸಿ ರಾಬರ್ಟೋಗೆ ವರದಿ ಮಾಡಿದಾದ ಅವನು ದಂಗಾಗಿ ಹೋದ,

"ಏನು? ಬೆಟ್ಟದಷ್ಟು ವಿಶಾಲ ಡೆಪಾಸಿಟ್?...ನಿಮಗೇನು ಹುಚ್ಚೆ?..ಅದೂ ಕಲ್ಲಿನಂತೆ ಸಾಲಿಡ್ ಗೋಲ್ಡ್ ಅನ್ನುತ್ತಿದ್ದೀರಲ್ಲ?"

"ಹೌದು, ಸರ್... ದೊಡ್ಡ ಬಂಡೆಗಳಂತೆ... ನಮಗೂ ನಂಬಲಾಗಿಲ್ಲ..ಅದರ ವಿಸ್ತೀರ್ಣವೇ ಅರ್ಧ ಕಿಮೀ ಗಿಂತಾ ದೊಡ್ಡದಿದೆ... ನೋಡಿ ಇಲ್ಲಿ ನಿಮಗಾಗಿ ಅಂಡರ ವಾಟರ್ ಇಮೇಜಸ್ ತಂದಿದ್ದೇವೆ..." ಎನ್ನುತ್ತಾ ತಮ್ಮ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳನ್ನು ತೋರಿಸಿದರು ಅವರಲ್ಲೊಬ್ಬ.

"ಇದನ್ನು ನಾವು ಕಂಟ್ರೋಲ್ಡ್ ಬ್ಲಾಸ್ಟ್ ಮಾಡಬಹುದು... ಇದಕ್ಕೆ ಬೇಕಾದ ವಿಶೇಷ ಬಗೆಯ ಸ್ಪೋಟಕ ಡೈನಮೈಟ್ ನಮ್ಮ ಬಳಿ ಇದೆ" ರಾಬರ್ಟೋ ಯೋಚಿಸಿ ಅಭಿಪ್ರಾಯವಿತ್ತ.

"ಯೆಸ್, ಶೂರ್... ನಮ್ಮ ಶಿಪ್ ಇಲ್ಲಿಂದ ಸುಮಾರು 1 ಕಿಮೀ ದೂರ ನಿಂತರೂ ಸಾಕು... ನಾವು ಅದನ್ನು ಒಯ್ಯಲು ಚಿಕ್ಕ ಚಿಕ್ಕ ಪೀಸುಗಳನ್ನಾಗಿ ಮಾಡಲು ಕನಿಷ್ಟ ಒಂದು ವಾರವೇ ಬೇಕಾದೀತು.. ನಮ್ಮ ಹಡಗಿನ ಮೊದಲ ಟ್ರಿಪ್ಪಿನಲ್ಲಿ ಸಾಧ್ಯವಾದಷ್ಟು ಒಯ್ಯುವಾ.. ಹೇಗೂ ನಮ್ಮ ಸ್ಮಗಲಿಂಗ್ ರೂಟ್ಸ್ ಇದೆಯಲ್ಲಾ ..ಅದರಲ್ಲಿ ತೆಗೆದುಕೊಂಡು ಹೋದರಾಯಿತು" ಎಂದ ಅವರಲ್ಲಿ ಇನ್ನೊಬ್ಬ.

ಆಮೇಲೆ ಯಾವಾಗ ಬೇಕಾದರೂ ವಾಪಸ್ ಬರಬಹುದು... ಇದು ನಿರ್ಜನ ಸಾಗರ... ಯಾರೂ ವಾಚ್ ಮಾಡಿರುವುದಿಲ್ಲ" ಎಂದ ಕೊನೆಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾ ರಾಬರ್ಟೋ

11

 

ಐ ಎನ್ ಎಸ್ ಪ್ರದ್ಯುಮ್ನ ವೇಗವಾಗಿ ಮೈನಾಕವಿದೆಯೆನ್ನಲಾದ ಸ್ಥಳಕ್ಕೆ ಕೋಆರ್ಡಿನೇಟ್ಸ್ ಹಾಕಿಕೊಂಡು ಶೀಘ್ರವೇ ತಲುಪಿತು, ಅದರಲ್ಲಿ ಓಶನೋಗ್ರಾಫರ್ ವೀಣಾ ನೇತೃತ್ವದ ಇಬ್ಬರ ಟೀಮು ಪ್ರಮುಖ ಪಾತ್ರ ವಹಿಸಿತ್ತು.

ಆದರೆ ಅವರು ಅಲ್ಲಿಗೆ ಬರುವಲ್ಲಿ 3 ಗಂಟೆಗಳೇ ಸವೆದಿದ್ದರಿಂದ ರಾಬರ್ಟೋ ಟೀಮಿನ ಬಾಂಬ್ ಎಕ್ಸ್ಪರ್ಟ್ಸ್ ಕಾರ್ಯಗತವಾಗಿ ಎರಡು ಡೈನಮೈಟುಗಳನ್ನು ಕಟ್ಟಿ ಮೂರನೆಯದರ ತಯಾರಿಯಲ್ಲಿದ್ದರು.

ತಮ್ಮ ಜಲಾಂತರ್ಗಾಮಿ ನೌಕೆಯಿಂದಲೇ ಈಗ ಮೊದಲ ಬಾರಿಗೆ ಸುವರ್ಣ ಗಿರಿ ಮೈನಾಕ ಸ್ಪಷ್ಟವಾಗಿ ಕಂಡಿಬಿಟ್ಟಿತ್ತು! ಕಲಿಯುಗದಲ್ಲೇ ಮೊದಲ ಬಾರಿಗೆ ಭಾರತೀಯರು ವೀಕ್ಷಿಸಿದ ಅಪೂರ್ವ ಗಳಿಗೆ!

"ವಾಹ್, ವಾಹ್...!"

"ಓಹ್ ಮೈ ಗಾಡ್!"

"ಇದು ನಿಜವೇ?" ಮುಂತಾದ ಉದ್ಗಾರಗಳು ಕಿಟಕಿಗಳ ಮೂಲಕ ಮೈನಾಕದ ನೀರಿನಡಿಯಲ್ಲಿಯೂ ನಿಗಿನಿಗಿ ಹೊಳೆಯುವ ಬೃಹದಾಕಾರ ಕಂಡು ಎಲ್ಲಾ ನಾವಿಕರ ಬಾಯಲ್ಲಿ ಹೊರಡಿತ್ತು.

"ಈ ಬೆಟ್ಟ ಸೊಟ್ಟಕ್ಕೆ ಮಲಗಿದೆ, ವೀಣಾ.. ಅಂದರೆ ಕಲಿಯುಗಕ್ಕೆ ಮುನ್ನ ಪುರಾಣದ ಪ್ರಕಾರವೇ ತೆಗೆದುಕೊಂಡರೂ ಅದು ಕುಸಿದಿರಬೇಕು, ಅದಕ್ಕೇ ಪೂರ್ವಕ್ಕೆ ಶಿಖರಗಳನ್ನು ಚಾಚಿ ಮಲಗಿದೆ... ನಾಲ್ಕು ಶಿಖರಗಳು ಹಾಗೆ ಕಾಣುತ್ತಿವೆ..."ಎಂದು ಅಚ್ಚರಿಯಿಂದ ವಿಮರ್ಶೆ ಮಾಡುತ್ತಿದ್ದ ಅವಿನಾಶನನ್ನು ತಡೆದಳು ವೀಣಾ.

" ಜಸ್ಟ್, ವೈಟ್!... ನಾನು ಸೀಸ್ಮಾಲಜಿ ನಕ್ಷೆ ನೋಡಿ ಬರುತ್ತೇನೆ... ನಾವೊಂದು ವಿಷಯ ಚೆಕ್ ಮಾಡಿಲ್ಲದಂತಿದೆ "ಎಂದು ಸರಕ್ಕನೆ ತನ್ನ ಕ್ಯಾಬಿನ್ನಿಗೆ ಓಡಿದಳು ವೀಣಾ.

"ಸೀಸ್ಮಾಲಜಿ ಮ್ಯಾಪ್?... ಅಂದರೆ ಈ ಸ್ಥಳದ ಭೂಕಂಪ ನಕ್ಷೆ ಅಲ್ಲವೆ ಸರ್?" ಅನುಪಮ್ ಖನ್ನ ಗಾಬರಿಯಿಂದ ಕೇಳಿದ.

ಆದರೆ ವೀಣಾ ಓಡೋಡಿ ಬಂದಾಗಲೇ ಅವರಿಗೆ ಉತ್ತರ ದೊರಕಿದ್ದು.

"ಯೆಸ್ಸ್... ಈ ಸ್ಥಳದಲ್ಲಿ ಭೂಕಂಪದ ಫ಼ಾಲ್ಟ್ ಲೈನಿನ ( ಒಡಕು ಗೆರೆ) ಕೇಂದ್ರವಿದೆ, ಕ್ಯಾಪ್ಟನ್" ಗಂಭೀರವಾಗಿ ಫ಼ಾರ್ಮಲ್ಲಾಗಿ ಎಲ್ಲರ ಮುಂದೆ ನುಡಿದಳು ವೀಣಾ. "ಇದರ ಹಿಸ್ಟರಿ ನೋಡಿದರೆ ಹಿಂದೊಮ್ಮೆ ಸಹಸ್ರಾರು ವರ್ಷಗಳ ಹಿಂದೆ ಇಲ್ಲಿ ಭೂಕಂಪವಾಗಿ ಈ ಪರ್ವತ ಕುಸಿದಿದೆ...ಆಗ ಸೊಟ್ಟ ಸೊಟ್ಟಕ್ಕೂ ನೀರಿನಡಿ ಮುಳುಗಿರಬಹುದು... ಅಂದರೆ ಪೌರಾಣಿಕವಾಗಿಯೂ ಕಲಿಯುಗ ಆರಂಭಕ್ಕೆ ಮುನ್ನ ನಡೆದಿರುವ ಸಂಗತಿ...ಹಾಗಾಗಿ ಇದು ಖಚಿತ...’’ಎನ್ನುತ್ತಿರುವಾಗ, 

 "ಸರ್...ಇಲ್ಲಿ ಶಿಖರಗಳ ಸುತ್ತಲೂ ಇವರು ಡೈನಮೈಟ್ ಇಟ್ಟು ಬ್ಲಾಸ್ಟ್ ಮಾಡುವ ಸನ್ನಾಹವೆ ನಡೆದಂತಿದೆ ಸರ್.. ನಾವು ಅರ್ಜೆಂಟಾಗಿ ತಡೆಯಬೇಕು" ಎಂದು ಮೇಲಿನ ಕಂಟ್ರೋಲ್ ರೂಮಿನ ಮಾನೀಟರ್ ಕ್ಯಾಮೆರಾದಿಂದ ನೋಡಿದ ಹೊರಗಿನ ಚಿತ್ರವನ್ನು ಗಾಬರಿಯಿಂದ ಓಡುತ್ತಾ ಬಂದು ಹೇಳಿದ ಜಿತೇಂದ್ರ.

"ಇಂತಾ ಕಡೆ ಬ್ಲಾಸ್ಟ್ ಏನಾದರೂ ಆದರೆ..." ವೀಣಾ ಭಯದಿಂದ ಕಣ್ಣು ಮುಚ್ಚಿದಳು ಮುಂದಿನ ಚಿತ್ರ ಊಹಿಸಲಾಗದೇ.

"ಆ ಸ್ಪೋಟದಿಂದ ಒಂದು ಸುನಾಮಿ ಶುರುವಾಗಿ ದೂರ ದೂರಕ್ಕೆ ಅಪ್ಪಳಿಸುತ್ತದೆ..." ಅವಿನಾಶ್ ಮೆಲ್ಲಗೆ ಆ ವಾಕ್ಯ ಸಂಪೂರ್ಣಗೊಳಿಸಿದ.

ಅಂತಹಾ ಅನಾಹುತ ನಡೆದರೆ ಈಗ ಜಾಗತಿಕವಾಗಿ ಅರ್ಧ ಭೂಮಿಯನ್ನೇ ರಕ್ಕಸ ಅಲೆಗಳು ಅಲ್ಲಾಡಿಸಿಬಿಡಬಹುದು. ಕೆಲವು ದೇಶದ ತೀರಗಳಿಗೆ ನಾಶದ ಮುನ್ಸೂಚನೆ ಅದು.. 

 "ಒಮ್ಮೆಯಾದರೂ ನಾನು ಅವರಿಗೆ ಕಾನೂನಿನ ಪ್ರಕಾರ ವಾರ್ನಿಂಗ್ ಕೊಡಲೇಬೇಕು" ಎನ್ನುತ್ತಾ ರೇಡಿಯೋ ಟ್ರಾನ್ಸ್ಮಿಟರ್ ಬಳಿ ಓಡಿದ ಅವಿನಾಶ್.

"ಐ ಎನ್ ಎಸ್ ಪ್ರದ್ಯುಮ್ನ ಹಿಯರ್... ವಾರ್ನಿಂಗ್ ಇಷ್ಷೂಡ್!"ಎಂದು ಇಂಗ್ಲೀಶಿನಲ್ಲಿ ಆರಂಭಿಸಿದ ಅವಿನಾಶ್ ಎದುರಿಗೆ ಅನತಿ ದೂರದಲ್ಲಿದ್ದ ರಾಬರ್ಟೋನ ಇಟಲಿಯ ಹಡಗು ಲಾ ಬ್ರೂಟಸ್ ಅನ್ನು ಸಂಪರ್ಕ ಮಾಡಿ..

"ಹೂ ದ ಹೆಲ್...ರಾಬರ್ಟೋ ಹಿಯರ್!"ಎಂದ ರಾಬರ್ಟೋ ಆ ಕಡೆಯಿಂದ ಅಸಹನೆಯಿಂದ. ಕೊನೆಗಳಿಗೆಯಲ್ಲಿ ಬಂದ ಈ ಪೀಡೆ ಯಾರು ಎಂಬಂತೆ.

"ಲಾ ಬ್ರೂಟಸ್, ಇಲ್ಲಿ ಕೇಳು... ಮೊದಲಿಗೆ ನೀವು ಮಾಡುತ್ತಿರುವುದು ಚಿನ್ನದ ಚೋರತನ ಅಪರಾಧ...ಇದನ್ನು ನೀವು ಸರಕಾರಕ್ಕೆ ವರದಿ ಮಾಡಿ ಒಪ್ಪಿಸಬೇಕಾಗಿತ್ತು..ಅದಿಲ್ಲದೇ ಕದಿಯುತ್ತಿದ್ದೀರಿ

ಎರಡನೆಯದು ಅದಕ್ಕಿಂತಾ ಭಯಂಕರವಾದ ಕ್ರೈಮ್... ಇಲ್ಲಿ ಸೀಸ್ಮಿಕ್ ಫಾಲ್ಟ್ ಮೊದಲಿಂದಲೂ ಇದೆ.. ಇಲ್ಲಿ ಬ್ಲಾಸ್ಟ್ ಮಾಡಿದರೆ ಭೂಕಂಪವಾಗುತ್ತೆ, ಆಗ ಸಾಗರದಲ್ಲಿ ಹುಟ್ಟಿದ ಸುನಾಮಿ ದೇಶ ವಿದೇಶಗಳಿಗೆ ಹರಡಿ ಊಹಿಸಲಾಗದ ನಷ್ಟವಾಗುವುದು.. ಇನ್ನು ನಮ್ಮ ನಿಮ್ಮ ಜೀವ ಹೋಗುವುದಂತೂ ಖಚಿತ... ಅಂಡರ್‌ಸ್ಟ್ಯಾಂಡ್?" ಅವಿನಾಶ್ ಜೋರು ದ್ವನಿಯಲ್ಲಿ ಎಚ್ಚರಿಕೆ ನೀಡಿದ.

 "ಐ ಅಂಡರ್ ಸ್ಟಾಂಡ್" ಎಂದ ರಾಬರ್ಟೋ ಅತ್ತಕಡೆಯಿಂದ ವಿಕಟವಾಗಿ ನಕ್ಕ. "ನೀವು ನಮ್ಮನ್ನು ಭಯ ಬೀಳಿಸಿ, ಓಡಿಸಿಬಿಟ್ಟು ಚಿನ್ನ ಕದ್ದೊಯ್ಯಲು ನಿಮ್ಮ ಸರ್ಕಾರ ಕಳಿಸಿರುವ ಮೋಸಗಾರರು ಎಂದು ಅರ್ಥವಾಯಿತು... ನಾವು ಇದಕ್ಕೆಲ್ಲಾ ಬಗ್ಗುವವರಲ್ಲ... ಗೆಟ್ ದ ಹೆಲ್ ಔಟ್.. ಇಲ್ಲದಿದ್ದರೆ ಮೊದಲು ನಿಮ್ಮನ್ನು ಶೂಟ್ ಮಾಡಿ ಕೊಂದು ನಾವು ಚಿನ್ನ ತೆಗೆದೊಯ್ಯುತ್ತೇವೆ..."

"ಬೇಡ, ರಾಬರ್ಟೋ! ನೀನು ಮೂರ್ಖನೇನೋ ಹೌದು, ಆದರೆ ಪಾಪಿಯಾಗಬೇಡ... ನಮ್ಮ ಫೋರ್ಸ್ ಎಂತದೆಂದು ಪರೀಕ್ಷಿಸಬೇಡ, ತಿಳಿಗೇಡಿ!.. ನಿಲ್ಲಿಸಿ ನಿಮ್ಮವರನ್ನು ಈಗಲೇ ವಾಪಸ್ ಕರೆಸು.. ಡೈನಮೈಟ್ ತೆಗೆಸಿಬಿಡು.. ಇಲ್ಲವಾದರೆ ನಾನು ನನ್ನ ಟೀಮ್ ನೀರಿಗಿಳಿಯುತ್ತೇವೆ...ನಾವು ಸತ್ತರೂ ಬಿಡದಂತಾ ಜನ" ಅವಿನಾಶ್ ಕುಪಿತನಾಗಿ ಕಿರುಚಿದ್ದ

 "ಹಿಯರ್ ಇಟ್ ಕಮ್ಸ್, ಯುವರ್ ಡೆತ್..(ಇದೋ ಬಂತು ನೋಡು, ನಿಮ್ಮ ಸಾವು)!" ಎಂದು ಫೈರಿಂಗ್ ಆರ್ಡರ್ಸ್ ನೀಡಿದ್ದ ತನ್ನವರಿಗೆ ಅತ್ತ ರಾಬರ್ಟೋ.

ಚಟ ಚಟನೆಂಬ ಸದ್ದಿನಿಂದ ಐ ಎನ್ ಎಸ್ ಪ್ರದ್ಯುಮ್ನದ ಹೊರಕವಚವನ್ನು ಹಲವು ಅಂಡರ್ ವಾಟರ್ ಬುಲೆಟ್ಸ್ ಚಚ್ಚಿದವು.. ಆದರೆ ಈಗಲ್ಲೇ ಅದಕ್ಕೆ ಯಾವುದೇ ನಷ್ಟವಿರಲಿಲ್ಲ... 

ಆದರೀಗ ಇವರು ಸುಮ್ಮನಿರಲೂ ಆಗಲಿಲ್ಲ

"ಕಮಾನ್, ನಮ್ಮವರೂ ಶೂಟ್ ಮಾಡೋಣ...ನೀರಿಂದ ಗಾಳಿಗೆ ಹಾರುವ ಮಿಸೈಲ್ ತರಹದನ್ನು ಬಳಿಸಿ... ನಾನೀಗಲೇ ಹೊರಡಬೇಕು..ಕಮಾನ್ !" ಎಂದ ತಂಡದವರಿಗೆ

ಆ ಕ್ಷಣವೇ ಹೊರದ್ವಾರದತ್ತ ಓಡಿದ್ದ...ಗುಂಡುಗಳು, ಪ್ರತಿದಾಳಿಯ ಸದ್ದಿನ ಮತು ನೌಕೆಯ ಕಂಪನದ ಮಧ್ಯೆ ಅವನ ಹಿಂದೆ ಓಡುತ್ತಾ ಬಂದು ಕೂಗಿದಳು ವೀಣಾ.. 

"ಎಲ್ಲಿಗೆ ಹೊರಟೆ? ಪ್ರತಿಸಲ ಹೀಗೆ ಹೇಳದೇ ಓಡಿಬಿಡುತ್ತೀಯಾ?"

"ಇನ್ನೆಲ್ಲಿ?" ಸ್ಕ್ಯುಬಾ ಈಜುಡುಪು, ಆಕ್ಸಿಜೆನ್ ಸಿಲಿಂಡರ್ ಧರಿಸಿ, ಕೈಯಲ್ಲಿ ರಷ್ಯಾದಿಂದ ತರಿಸಿದ್ದ ಎ ಪಿ ಎಸ್ ಅಂಡರ್-ವಾಟರ್ ಗನ್ ತೆಗೆದುಕೊಂಡ ಅವಿನಾಶ್ "ಮೈನಾಕದ ಬಳಿ ಹೋಗ್ತೀನಿ, ವೀಣಾ... ಅವರನ್ನು ಕೊಂದು ಡೈನಮೈಟ್ ತೆಗೆದುಹಾಕಿ ಬರುತ್ತೇನೆ..." 

ಜಿತೇಂದ್ರ, ಅನುಪಮ್ ಮತ್ತು ಬಾಂಬ್ ಸ್ಕ್ವಾಡ್ ಪ್ರತಿನಿಧಿ ಪೀಟರ್ ಸಹಾ ಮಾತಿಲ್ಲದೆ ಅದೇ ರೀತಿಯಲ್ಲಿ ಶಸ್ತ್ರಸನ್ನದ್ಧರಾಗಿ ಸರಸರನೆ ಸಿದ್ಧರಾದರು. ಅವರಿಗೆಲ್ಲಾ ಮೊದಲೆ ಈ ಡ್ರಿಲ್ ಮಾಡಿಸಿದ್ದ

ವೀಣಾ ಜತೆ ಪರಿಣಿತ ಪೈಲೆಟ್ ಇಕ್ಬಾಲ್ ಸಹಾ ಅಲ್ಲಿಗೆ ಓಡೋಡಿ ಬಂದ.. 

"ಟೇಕ್ ಕೇರ್... ನಾನು ಕಾಯುತ್ತಿರುತ್ತೇನೆ, ಮನೆಯಲ್ಲಿ ಅಪ್ಪ ಅಮ್ಮ..." ಎಂದಳು ಬಿಕ್ಕಿದರೂ ಕಾಣದಂತೆ, ಕಣ್ಣಾಲಿಗಳಲ್ಲಿ ನೀರು ಬಂದರೂ ಮುಚ್ಚಿಟ್ಟುಕೊಂಡಳು ಧೈರ್ಯಸ್ಥೆ, ಅನುಭವಸ್ಥೆ!

"ನಾನಿಲ್ಲದಾಗ, ಎಲ್ಲರೂ ವೀಣಾಳನ್ನು ಈ ನೌಕೆಯ ಕ್ಯಾಪ್ಟನ್ ಎಂದು ತಿಳಿದುಕೊಳ್ಳಿ. ಇಕ್ಬಾಲ್, ನೀನು ವೀಣಾ ಜತೆ ಕಂಟ್ರೋಲ್ ಕ್ಯಾಬಿನಿನ್ನಲಿರು, ಹೆಲ್ಪ್ ಮಾಡು..." ಎಂದು ಅಲ್ಲಿ ನೆರದಿದ್ದ ಆತಂಕದಿಂದ ನೋಡುತ್ತಿದ್ದ ಮಿಕ್ಕ ಸಹೋದ್ಯೋಗಿಗಳನ್ನು ಉದ್ದೇಶಿಸಿ. "ನನ್ನ ಪ್ರಕಾರ...ನೀವು ನೌಕೆಯಲ್ಲಿ ಎಲ್ಲಾ ದೂರ ದೂರಕ್ಕೆ ಹೊರಟುಬಿಡಿ.. ನಮ್ಮನ್ನು ಕಾಯಬೇಡಿ.. ಬಟ್, ವೀಣಾ ನೀನು ಫೈನಲ್ ಡಿಸಿಶನ್ ತಗೋ!" ಎಂದ ಅವಿನಾಶ್. ಅವರು ನಾಲ್ವರು ಆಗಲೇ ನೀರಿಗೆ ತೆರೆದುಕೊಳ್ಳುವ ಹ್ಯಾಚ್ ಚೇಂಬರ್ ಬಳಿ ಓಡಿದ್ದರು.

ಮೇಲೆ ಮಿಸೈಲಿನ ಮೇಲೆ ಮಿಸೈಲನ್ನು ಎರಡೂ ಕಡೆಯವರು ಬಳಸುತ್ತಿದ್ದರಿಂದ ಹ್ಯಾಚ್ ಬಾಗಿಲನ್ನು ಅವರು ಹೊರಟ ಕ್ಷಣವೇ ದಢಕ್ಕನೆ ಮುಚ್ಚಿದರು. 

ನಾಲ್ವರು ಭಾರತೀಯರೂ ಅನುಭವದಿಂದ ತಕ್ಷಣ ಸಮುದ್ರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ತಮ್ಮೆದುಗಿರಿದ್ದ ಚಿನ್ನದ ಪರ್ವತ ಮತ್ತು ಶತ್ರುಗಳತ್ತ ವೇಗವಾಗಿ ಈಜುತ್ತಾ ಸಾಗಿದರು.

"ಅಲ್ಲಿದ್ದಾರೆ, ಇಬ್ಬರು ಡೈನಮೈಟ್ ಸುತ್ತುತ್ತಾ ಇದ್ದಾರೆ. ಅವರನ್ನು ಮೊದಲು ಹಿಡಿಯೋಣ" ಎಂದು ತನ್ನ ಕ್ಯಾಸಿಯೋ ಸ್ಪೀಕರ್ ಡಿವೈಸಿನಲ್ಲಿ ಮಿಕ್ಕ ಮೂವರಿಗೂ ಕೇಳುವಂತೆ ಹೇಳಿದ ಅವಿನಾಶ್.

"ಲೆಟ್ಸ್ ಗೋ!" ಎಂದವರೇ ಜಿತೇಂದ್ರ ಮತ್ತು ಪೀಟರ್ ಆ ಇಬ್ಬರ ಬಳಿ ಈಜಿ ಹೋದರೆ, ಅವಿನಾಶ್ ಮತ್ತು ಅನುಪಮ್ ಮಿಕ್ಕವರ್ಯಾರು ಎಂದು ಅರಸುತ್ತಾ ಪರ್ವತದ ಹಿಂಬಾಗದಲ್ಲಿ ಹುಡುಕುತ್ತಾ ಹೋದರು.

ಅವಿನಾಶ್ ಮತ್ತು ಅನುಪಮ್ ಇನ್ನಿಬ್ಬರನ್ನು ಕಂಡರು. ಅವರು ಹಿಂದೆ ಎರಡು ಡೈನಮೈಟ್ ಸ್ಪೋಟಕವನ್ನು ಕಲ್ಲಿಗೆ ಬಿಗಿಯುತ್ತಾ ಅದರ ಕೌಂಟರ್ ಆನ್ ಮಾಡುತ್ತಿದ್ದರು

ಅವಿನಾಶ್ ತನ್ನ ಗನ್ ಹಿಡಿದು ಒಬ್ಬನಿಗೆ ಕೈಯೆತ್ತು ಎಂದು ಸಂಜ್ಞೆ ಮಾಡಿದ ಆದರೆ ಪಟ್ಟು ಬಿಡದ ಇಟಲಿಯ ಮಾಫಿಯಾ ಧೂರ್ತರು ಇವರ ಮೇಲೆ ಚಿಮ್ಮಿ ಮುಗಿಬಿದ್ದರು.

ಅವಿನಾಶ್ ವಿಧಿಯಿಲ್ಲದೇ ಅವನನ್ನು ಶೂಟ್ ಮಾಡಿ ಡೈನಮೈಟ್ ಕಟ್ಟಿದ್ದರ ಬಳಿಗೆ ಸರಿದ. 

ಅದೇ ನಿಮಿಷದಲ್ಲಿ ಜಿತೇಂದ್ರನ ಮೇಲೆ ಕೆಳಗೆ ಈಜಿದ್ದ ಎರಡನೆಯವ ಬಿಚ್ಚಿದ ಚಾಕುವಿನಿಂದ ಪ್ರಹಾರ ಮಾಡಿದ. 

ಸ್ವಯಂ ಸ್ಪೂರ್ತಿಯಿಂದ ಪಕ್ಕಕ್ಕೆ ಸರಿದ ಜಿತೇಂದ್ರನ ಪಕ್ಕೆಗೆ ಅದು ಕೊನೆಗೂ ಚಿಕ್ಕದಾಗಿ ತಿವಿದು ರಕ್ತ ಸ್ರಾವವಾಯಿತು. ಗೆರಿಲ್ಲ ಮತ್ತು ಕಮಾಂಡೋ ಟ್ರೈನಿಂಗ್ ಮಾಡಿದ್ದ ಜಿತೇಂದ್ರ ತನ್ನ ಎ ಪಿ ಎಸ್ ನಿನಿಂದ ಶೂಟ್ ಮಾಡಿಯೇ ಬಿಟ್ಟ. ಅವಿನಾಶ್ ಮತ್ತು ಜಿತೇಂದ್ರರ ಮೇಲೆ ಎರಗಿದ್ದ ಆ ಇಬ್ಬರು ಸತ್ತು ಬೆಟ್ಟದ ಬುಡಕ್ಕೆ ಬೀಳುತ್ತಾ ಹೋದರು. ಆದರೆ ಅವಿನಾಶ್ ಮತ್ತು ಜಿತೇಂದ್ರರಿಗೆ ಅದನ್ನು ನೋಡುತ್ತಾ ಕಾಯಲು ಆಸ್ಪದವಿರಲಿಲ್ಲ.

--- ಇತ್ತ ಐ ಎನ್ ಎಸ್ ಪ್ರದ್ಯುಮ್ನದಲ್ಲಿ...

 

ವೀಣಾ ಆತಂಕದಿಂದ ಒಣಗಿದ ಬಾಯಿಂದ ಇಕ್ಬಾಲ್ ನತ್ತ ತಿರುಗಿದಳು, "ಈಗ ನಾವು ನಮ್ಮ ಮಿಕ್ಕವರನ್ನು ರಕ್ಷಿಸಲು ದೂರ ಹೋಗಲೇಬೇಕಲ್ಲವೆ, ಪೈಲೆಟ್?’.

 ಸಮಯ ಕ್ಷಣಕ್ಷಣಕ್ಕೂ ಜಾರುತ್ತಿದ್ದರೂ ಅವನಿಗೂ ಅವಿನಾಶ್ ಮತ್ತು ಮಿಕ್ಕವರು ವಾಪಸ್ ಬರಲಿ ಎಂಬ ಚಿಕ್ಕ ಆಸೆಯು ಅವನಿಗೂ ಇತ್ತೋ ಏನೋ?

"ಇರಲಿ ಮೇಡಂ, ಇನ್ನು ಐದು ನಿಮಿಷ ಕಾಯೋಣ.. ಅವರದು ಅಲ್ಲಿ ಕಂಟ್ರೋಲ್ ಮಾಡಿದ್ದ ಸ್ಪೋಟವಾದರೆ, ನಮ್ಮದು ಡಬಲ್ ಉಕ್ಕಿನ ಕವಚವಿರುವ ಬಾಡಿ ಮತ್ತು ಹಲ್... ನಾವು ಉಳಿಯಲು ಇನ್ನು ಸ್ವಲ್ಪ ಆಸ್ಪದವಿದೆ. ಸ್ಪೋಟವಾದರೆ ಈ ನೌಕೆ ಅಲೆಗಳಿಗೆ ಸಿಕ್ಕು ದೂರ ಚಿಮ್ಮಿ ಹೋಗಬಹುದು ಆದರೆ ನಿಮ್ಮ ನಾವಿಕತ್ವದಲ್ಲಿ ನಾವು ಮತ್ತೆ ದಾರಿ ಕಂಡುಕೊಳ್ಳಬಹುದು...ಅಷ್ಟರಲ್ಲಿ ಅವಿನಾಶ್ ಟೀಮ್ ಬರಲಿ!" ಎಂದ ಧೀರ ಪೈಲೆಟ್ ಇಕ್ಬಾಲ್, ಸಾವಿಗೆ ಸಮಯದ ಸವಾಲು ಹಾಕುತ್ತಾ. ಅವನು ತೋರಿದ್ದ ಸಮಯಪ್ರಜ್ಞೆಗೆ ತುಸು ಸ್ವಾರ್ಥದಿಂದಲೇ ‘ಭಲೇ ಇಕ್ಬಾಲ್’ ಎಂದು ಪಿಸುಗುಟ್ಟಿದಳು ವೀಣಾ. 

ಅವರ ದೃಷ್ಟಿ ಮಾತ್ರ ಎದುರಿನ ಕಿಟಕಿಯ ಹೊರಗೆ ನಡೆಯುತ್ತಿರಬಹುದಾದ ವಿದ್ಯಮಾನಗಳನ್ನು ಕಾಣಲು ಬಯಸುತಿತ್ತು.. ಆದರೆ ಅವರು ಅದೆಲ್ಲಾ ಗೋಚರಿಸುವಷ್ಟು ಸನಿಹವಿರಲಿಲ್ಲ.

----

ಇತ್ತ ಮೈನಾಕ ಬೆಟ್ಟದ ಬಳಿ...

ಅನುಪಮ್ ಚಾಕುವಿನಿಂದ ಕೈಗೆ ಚುಚ್ಚಿದ ಎದುರಿಗಿದ್ದ ಧೂರ್ತನಿಗೆ ಅನಿವಾರ್ಯವಾಗಿ ದಿಡೀರನೆ ಶೂಟ್ ಮಾಡಲೇಬೇಕಾಯಿತು. ಅವನು ಕೈಗಳನ್ನು ಚೆಲ್ಲುತ್ತಾ ಆಳಕ್ಕೆ ಬೀಳುತ್ತಾ ಹೋದ. ಆಗ ಅನುಪಮ್ ಮುಂದೆ ಧಾವಿಸಿ ತನ್ನ ಎದುರಿಗೆ ಚಿನ್ನದ ಗೋಡೆಗೆ ಕಟ್ಟಿದ್ದ ಡೈನಮೈಟಿನ ಸರಿಯಾದ ವಯರನ್ನು ಕ್ಷಣಮಾತ್ರದಲ್ಲಿ ಕಟ್ ಮಾಡಿ ನಿಷ್ಕ್ರಿಯಗಿಳಿಸಿದ. ಒಟ್ಟು ನಾಲ್ಕರಲ್ಲಿ ಮೂರು ಈಗ ನಿಷ್ಕ್ರಿಯವಾಗಿತ್ತು

ಆದರೆ,

ಪೀಟರ್ ಒಬ್ಬನಿಗೆ ಶೂಟ್ ಮಾಡಿ ಅವನು ಸತ್ತನೆ ಎಂದು ಖಚಿತ ಪಡಿಸಿಕೊಳ್ಳುವ ಮುನ್ನವೇ ತಾನು ನಿಷ್ಕ್ರಿಯಗೊಳಿಸಬೇಕಾಗಿದ್ದ ನಾಲ್ಕನೆ ಡೈನಮೈಟ್ ಬಳಿ ಈಜಿದ್ದ. ಅದೇ ಅವನಿಗೆ ಮುಳುವಾಯಿತು!! ಆ ನಾ್ಲ್ಕ್ಕನೇ ಧೂರ್ತ ಗಾಯಗೊಂಡಿದ್ದರೂ ಫ಼ೈನಲ್ ಅಸಾಲ್ಟ್ ಮಾಡಿಯೇಬಿಟ್ಟಿದ್ದ.. ಚಿಮ್ಮಿದವನು ಪೀಟರ್ ಬೆನ್ನಿನ ಮಧ್ಯೆ ತನ್ನ ಚಾಕು ಇರಿದೇ ಬಿಟ್ಟ.. ಹಾಗಾಗಿ ಪೀಟರ್ ಆ ಕೊನೆಯ ಡೈನಮೈಟನ್ನು ಸರಿಯಾಗಿ ಆಫ್ ಮಾಡುವ ಮುನ್ನವೆ ಅದು ಕೈ ಜಾರಿ ನೀರಲ್ಲಿ ಕೆಳಕ್ಕೆ ಮುಳುಗಿತ್ತು .. ಅತ್ತ ಮಾಫಿಯಾ ಕೊಲೆಗಾರ ತಾನು ಸತ್ತು ಕೆಳಕ್ಕೆ ಬೀಳುತ್ತಾ ಹೋದ. ಅನುಪಮ್ ಅವನತ್ತ ನೋಡಿ ಗಾಬರಿಯಿಂದ ಪೀಟರ್ ನೆರವಿಗೆ ಹೋಗಬೇಕೆನ್ನುವಷ್ಟರಲ್ಲಿ ... ಪೀಟರ್ ಪ್ರಾಣಾಪಾಯಕ್ಕೂ ಹೆದರದೆ ಕೈ ಜಾರಿದ್ದ ಡೈನಮೈಟನ್ನು ಹೇಗಾದರೂ ಹಿಡಿದು ಆಫ್ ಮಾಡಿ ಸ್ಪೋಟ ತಪ್ಪಿಸಲೇಬೇಕೆಂದು ಅದರ ಹಿಂದೆ ಹುಡುಕುತ್ತಾ ನೀರಲ್ಲಿ ಕುಸಿದ..

ಅವಿನಾಶ್ ಮತ್ತು ಜಿತೇಂದ್ರ ಸಹಾ ನಿರಪಾಯರಾಗಿದ್ದವರು ಅಲ್ಲಿಗೆ ಈಜುತ್ತಾ ಧಾವಿಸುವ ಮುನ್ನವೇ ಪೀಟರ್ ಆಳಕ್ಕೆ ಬಿದ್ದುಹೋಗಿ ಕಣ್ಮರೆಯಾಗಿದ್ದ. ಆ ಕ್ಷಣವೇ ಆ ಕೊನೆಯ ಡೈನಮೈಟ್ ಕಾಣದ ಆಳದಲ್ಲೆಲ್ಲೋ ಸ್ಪೋಟಿಸಿಯೇಬಿಟ್ಟಿತ್ತು.. 

ಅದರೊಂದಿಗೆ ಪೀಟರನ ರಕ್ತತರ್ಪಣ ನಡೆದೇ ಹೋಗಿತ್ತು!

ಒಮ್ಮೆಲೆ ಆ ನೀರಿನಡಿಯ ಸ್ಪೋಟದಿಂದ ರವ್ವನೆ ಹೊರಟ ಅದುರು ತರಂಗಗಳು ಜಲಶಕ್ತಿ ಪಡೆದು ಮಿಕ್ಕ ಮೂವರನ್ನು ದೂರಕ್ಕೆ ಎಸೆದು ಬಿಸಾಡಿತ್ತು.

---

ಇತ್ತ ಮೇಲೆ ಇಟಲಿಯ ಹಡಗು ‘ಲಾ ಬ್ರೂಟಸ್ ’ ನಲ್ಲಿ ತರಂಗಾಂತರ ಮತ್ತು ಸಾಗರತಟವನ್ನು ಗಮನಿಸುತ್ತಿದ್ದ ರಾಬರ್ಟೋ ತಕ್ಷಣ ರಕ್ಕಸ ಅಲೆಗಳು ಶಾಂತ ಸಗರದ ಮೇಲ್ಮೈಯನ್ನು ತೂರಿ ಅಲ್ಲೋಲ ಕಲ್ಲೋಲ ಮಾಡುತ್ತಾ ತಮ್ಮೆಡೆಗೆ ಬಂದಿದ್ದು ಕಂಡು ದಿಗ್ಭ್ರಾತನಾದನು...ಆದರೆ ಕಾಲ ಮಿಂಚಿತ್ತು. ಸಾವನ್ನು ಆಹ್ವಾನಿಸಿದವರನ್ನೇ ಮೃತ್ಯುದೇವತೆ ಮೊದಲು ಆಹುತಿ ತೆಗೆದುಕೊಂಡಿದ್ದಳು. ಮೂರು ಸೆಕೆಂಡುಗಳಲ್ಲಿ ‘ಲಾ ಬ್ರೂಟಸ್ ’ ಎಂಬ ಹಡಗೊಂದಿತ್ತು ಎಂಬುದನ್ನೇ ಹುಟ್ಟಡಿಗಿಸುವಂತಹ ಭಯಂಕರ ಅಲೆಗಳ ನಡುವೆ ಒಡೆದು ಅದು ಇಬ್ಬಾಗವಾಗಿ ಅದರ ಬಿರುಸಿಗೆ ಚಿಂದಿಯಾಗಿ ಹೋಗಿದ್ದರು ರಾಬರ್ಟೋ ಮತ್ತು ಅವರ ಸಂಗಡಿಗರು...

-------

ಅಲ್ಲಿಂದ ಸ್ವಲ್ಪ ದೂರದಲ್ಲಿ ಹೊಂಚುಹಾಕಿ ಕಾಯುತ್ತಿದ್ದ ‘ಲಾ ರೋಮಾ’ ಹಡಗಿನ ಕ್ಯಾಪ್ಟನ್ ಡಿವಿಟೋ ಕತೆ ಸಹಾ ಇದಕ್ಕಿಂತಾ ಬೇರೆಯಾಗಿರಲಿಲ್ಲ.. ತನ್ನ ಮತ್ತು ಹಡಗಿನಲ್ಲಿ ಉಳಿದವರ ಪ್ರಾಣವನ್ನೂ ಅತ್ಯಾಸೆಗೆ ನಿರರ್ಥಕವಾಗಿ ಬಲಿಕೊಟ್ಟಿದ್ದ. ಆ ದೊಡ್ಡ ಅಲೆಗಳು ಆ ಹಡಗನ್ನೂ ನುಂಗಿದ್ದವು.

---- 

ಅವಿನಾಶ್ , ಅನುಪಮ್ ,ಮತ್ತು ಜಿತೇಂದ್ರರಿಗೆ ತಮ್ಮ ಅಂತ್ಯ ಬಂದಿತೆಂದು ಆ ರಕ್ಕಸ ಸುನಾಮಿ ಅಲೆಗಳೇ ಸ್ವಯಂ ಘೋಷಿಸಿದ್ದವು.. 

ಆದರೆ ಅದೃಷ್ಟವಶಾತ್, ಅದು ಚಿಕ್ಕ ಕಂಟ್ರೋಲ್ಡ್ ಬ್ಲಾಸ್ಟ್ ಆಗಿದ್ದರಿಂದ ಮಿನಿ ಸುನಾಮಿ ಮಾತ್ರವೇ ಲೋಕಲ್ ಆಗಿ ಆರ್ಭಟಿಸಿತ್ತು...

ಆದರೂ...

ಅವರು ಮೂವರೂ ಅದರ ರಭಸಕ್ಕೆ ಸಿಲುಕಿ ನೀರಲ್ಲೆ ಅರ್ಧ ಫರ್ಲಾಂಗು ಮೈನಾಕದಿಂದ ದೂರಕ್ಕೆ ಎಸೆಯಲ್ಪಟ್ಟರು. ಇನ್ನೂ ಅದೃಷ್ಟವಶಾತ್, ಜಿತೇಂದ್ರ ಮತ್ತು ಅನುಪಮ್ ಇಬ್ಬರೂ ಸಬ್ಮೇರೀನಿನ ಬಾಗಿಲಿಗೆ ಹೋಗಿ ಅಪ್ಪಳಿಸಿದರೆ, ಅವಿನಾಶ್ ಮಾತ್ರ ಅದರ ಡಬಲ್ ಉಕ್ಕಿನ ಉಕ್ಕಿನ ಹಲ್ ಗೆ ತನ್ನ ತಲೆ ಜೋರಾಗಿ ಬಡಿಸಿಕೊಂಡಿದ್ದ... 

ಕ್ಷಣ ಮಾತ್ರದಲ್ಲಿ ಹಲ್ ಪಕ್ಕದಲ್ಲಿದ್ದ ಟ್ರ್ಯಾಫ್ ಡೋರ್ ತೆರೆದಿದ್ದಳು, ಅಸಾಧ್ಯ ಸಮಯಪ್ರಜ್ಞೆ ಮೀರಿ ತನ್ನವನನ್ನು ಉಳಿಸಿಕೊಂಡಳು, ವೀಣಾ.! ಅವನನ್ನು ಸರಕ್ಕನೆ ನೌಕೆಯ ಒಳಕ್ಕೆ ಸೆಳೆದುಕೊಂಡಳು. ತಲೆಯ ತೀವ್ರ ಗಾಯದಿಂದ ಅವಿನಾಶನ ರಕ್ತ ಸೋರುತಿತ್ತು..

 

ಸಬ್ಮೆರೀನಿನ ಬಾಗಿಲ ಬಳಿ ಬಿದ್ದ ಅನುಪಮ್ ಮತ್ತು ಜಿತೇಂದ್ರ ಇನ್ನು ಹೆಚ್ಚಿನ ಗಂಡಾಂತರವಾಗದೇ ಮಿಕ್ಕ ಸಿಬ್ಬಂದಿಯಿಂದ ಸುರಕ್ಷಿತವಾಗಿ ಒಳಗೇ ಸೆಳೆಯಲ್ಪಟ್ಟರು...

--- 

ಆದರೆ ಮೈನಾಕ?

ಅಲ್ಲಿ ವೀಣಾ ಊಹಿಸಿದ್ದಂತೆ ಸ್ಪೋಟಕ್ಕೆ ಪ್ರತಿಯಾಗಿ ಸಾಗರದಡಿಯೇ ಬಿರುಕು ಬಿಟ್ಟು ದೊಡ್ದದಾಗಿ ಬಾಯ್ದೆರೆಯಿತು. 

ಅದರ ತೆರವಿನಲ್ಲಿ ಮೈನಾಕ ಪರ್ವತದ ಚಿನ್ನದ ಶಿಖರಗಳು ನಿಧಾನವಾಗಿ ಸರಿಯುತ್ತಾ ಭೂಮಿಯಡಿ ಮರೆಯಾಗಹತ್ತಿದವು. ಕೆಲವೇ ನಿಮಿಷಗಳಲ್ಲಿ ಆ ದೈತ್ಯಾಕಾರದ ಪೌರಾಣಿಕ ಬೆಟ್ಟ ತನ್ನ ಕೊನೆಯ ನಿಲ್ದಾಣವೆಂಬಂತೆ ಭೂತಾಯಿಯ ಗರ್ಭಕ್ಕೆ ತಲುಪಿಬಿಟ್ಟಿತು..

ಪೂರ್ತಿ ಮುಳುಗಿಹೋದ ನಂತರ ಆ ಭೂಮಿಯ ಬಾಯಿ ನಿಧಾನವಾಗಿ ಮುಚ್ಚಿಕೊಳ್ಳುತ್ತಾ ಹೋಯಿತು..ಇದೆಲ್ಲಾ ಸಹಜ ನೈಸರ್ಗಿಕ ಕ್ರಿಯೆಯೋ , ಕಲಿಯುಗದ ಲೋಭಿ ಜನರಿಗೆ ವಿಧಿ ಮಾಡಿದ ಅಣಕವೋ, ಹೇಳುವವರ್ಯಾರು?

ಪವಾಡ ಸದೃಶವಾಗಿ ಕಣ್ಮರೆಯಾದ ಮೈನಾಕ ಪರ್ವತ ಅಡಗಿದ್ದ ಆ ಸಾಗರದಡಿಯ ಮೇಲೆ, ಬೆದರಿ ತಾತ್ಕಾಲಿಕವಾಗಿ ಚೆಲ್ಲಾಪಿಲ್ಲಿಯಾಗಿದ್ದ ಮೀನು ಮತ್ತು ಜಲಚರಗಳು.

ಹಿಂತಿರುಗಿ ಮತ್ತೊಮ್ಮೆ ಈಜಲಾರಂಭಿಸಿದ್ದವು. ಎಲ್ಲಾ ಮುಗಿದೇಹೋಗಿತ್ತು ಆ ಸ್ಥಳದಲ್ಲಿ.

ಕೊನೆಗೆ ಮೈನಾಕವನ್ನು ಮುಟ್ಟಿ ಬದುಕಿದ ಮೂವರೇ ಮಾನವರು- ಅವಿನಾಶ್, ಜಿತೇಂದ್ರ ಮತ್ತು ಅನುಪಮ್ ಆಗಿದ್ದರು!

-----

 ಇತ್ತ ಐ ಎನ್ ಎಸ್ ಪ್ರದ್ಯುಮ್ನದಲ್ಲಿ...

 

ಅಲ್ಲುಂಟಾದ ದೈತ್ಯ ಅಲೆಗಳ ಪ್ರಭಾವಕ್ಕೆ ಸಿಲುಕಿ ದಿಕ್ಕು ತಪ್ಪಿ ಕೊಚ್ಚಿಹೋದ ಐ ಎನ್ ಎಸ್ ಪ್ರದ್ಯುಮ್ನವನ್ನು ಬಹಳವೇ ಸಮಯಸ್ಪೂರ್ತಿ, ದಾರ್ಷ್ಟ್ಯ ಮತು ಚಾಣಾಕ್ಷತನದಿಂದ ವೀಣಾ ಮತ್ತು ಇಕ್ಬಾಲ್ ನಿಯಂತ್ರಣ ಪಡೆಯಲು ಹರಸಾಹಸ ಪಡುತ್ತಿದ್ದರು.

ಯಾಕೆಂದರೆ, ಇನ್ನೂ ತಲೆಗೆ ಪೆಟ್ಟುಬಿದ್ದಿದ್ದ ಅವಿನಾಶ್ ಗೆ ಜ್ಞಾನ ಬಂದಿರಲಿಲ್ಲ. ತಲೆಯ ರಕ್ತಸ್ರಾವ ಮತ್ತು ಊತಕ್ಕೆ ಶಿಪ್ಪಿನಲ್ಲಿದ್ದ ವೈದ್ಯರು ತಮಗೆ ಸಾಧ್ಯವಿದ್ದ ಚಿಕಿತ್ಸೆಯೆಲ್ಲಾ ಮಾಡಿ ಅವನ ಜೀವ ಉಳಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅವನಿಗೂ, ಕೈ ಕಾಲು ಮೂಳೆ ಮುರಿತ ಮತ್ತು ಚಾಕು ಇರಿತದ ಗಾಯಗಳಾಗಿದ್ದ ಮಿಕ್ಕ ಇಬ್ಬರು-ಜಿತೇಂದ್ರ ಮತ್ತು ಅನುಪಮ್ ರಿಗೂ ಭಾರತ ತಲುಪಿ ಆಸ್ಪತ್ರೆ ಸೇರಿದ ನಂತರವೇ ಸಾಧ್ಯವಾಗುವುದಿತ್ತು.

"50 ಕಿಮೀ ದೂರಕ್ಕೆ ನಾವು ಎಸೆಯಲ್ಪಟ್ಟಿದ್ದೇವೆ, ಇಕ್ಬಾಲ್... ನೀನು ಇಂತಿಂತಾ ಕೋಆರ್ಡಿನೇಟ್ಸ್ ಹಾಕಿ ಜೋಪಾನವಾಗಿ ಆದರೆ ಫುಲ್ ಸ್ಪೀಡಿನಲ್ಲಿ ನಡೆಸು.. ಇನ್ನು ಹದಿನೈದು ನಿಮಿಷದ ನಂತರ ನಾವು ಶಾಂತವಾದ ನೀರಿಗೆ ಪ್ರವೇಶಿಸುವೆವು, ನಿಧಾನವಾಗಿ ಇದರ ಪ್ರಭಾವ ಕ್ಷೀಣಿಸಲಿದೆ" ಎಂದಳು ತನ್ನ ಲೆಕ್ಕಾಚಾರ ಮುಗಿಸಿ, ಬರೆದ ಪೇಪರ್ ಕೈಗಿತ್ತು ನುಡಿದಳು ವೀಣಾ.

ಈಗ ಇಕ್ಬಾಲ್ ಮತ್ತು ಇನ್ನೊಬ್ಬ ಪೈಲೆಟ್ ಸೇರಿ ಜಾಗರೂಕತೆಯಿಂದ ದಿಕ್ಕಿನ ಲೆಕ್ಕ ಮಾಡಿ ಚುಕ್ಕಾಣಿ ಹಿಡಿದು ನಡೆಸುತ್ತಿದ್ದರು.. ಎಂತಹದೇ ಯಂತ್ರಗಳಿದ್ದರೂ ಕೊನೆಯಲ್ಲಿ ಮನುಷ್ಯನ ಕಾರ್ಯಕ್ಷಮತೆ ಮತ್ತು ಪರಿಣತಿಯಷ್ಟೇ ಸಹಾಯಕ್ಕೆ ಬರುವುದು ಎಂದು ಎಲ್ಲರಿಗೂ ಈ ಅಪಾಯಕರ ಸಾಗರದ ಜಲದಡಿ ಸ್ಪಷ್ಟವಾಗಿ ವಿದಿತವಾಗಿತ್ತು.

"ಯಾವುದೇ ಅನ್ಯದೇಶಗಳಿಗೆಗೆ ಅಪಾಯವಿಲ್ಲವೆ, ಅವರಿಗೆ ನಾವು ಅಲರ್ಟ್ ಮಾಡಬೇಕಲ್ಲವೇ ಮೇಡಮ್?" ಸಮರ್ಥ ಪೈಲೆಟ್ ಇಕ್ಬಾಲನ ಸಮಯೋಚಿತ ಪ್ರಶ್ನೆ.

 

"ಮಾಲ್ಡೀವ್ಸ್ ದ್ವೀಪ ಸಮೂಹ ಮತ್ತು ಇಲ್ಲಿ ಚಲಿಸುತ್ತಿರುವ ಇತರ ನೌಕೆಗಳಿಗೆ ಅಗಲೆ ಅಂತರರಾಷ್ಟ್ರೀಯ ಮಾರಿಟೈಮ್ ನವರಿಗೆ ಎಚ್ಚರಿಕೆ ಗಂಟೆಯೇ ಹೋಗಿದೆ.. ಮಾಲ್ಡೀವ್ಸ್ ಗೆ ಅಲ್ಪ ಸ್ವಲ್ಪ ಘಾಸಿಯಾಗಬಹುದು. ಅದು ಅವರ ಅನಾಹುತ ತಯಾರಿಯ ಮೇಲೆ ಅವಲಂಬಿತ... ಇನ್ನು ಶ್ರೀಲಂಕಾ ಮತ್ತು ಭಾರತದ ಕರಾವಳಿ ಪ್ರದೇಶಗಳಿಗೆ ಯಾವುದೇ ಅಪಾಯವಿಲ್ಲ...ರಫ್ ಸೀ ಬಿಟ್ಟು, ಮೀನುಗಾರರಿಗೆ ಎಚ್ಚರ ಕೊಟ್ಟಿದೆ, ಸಾಧಾರಣ ಸೈಕ್ಲೋನ್ ವಾರ್ನಿಂಗ್!"

"ಅಬ್ಬಾ, ನಿಮ್ಮ ರಾಮಾಯಣ ಕತೆಯಂತೆಯೇ, ಲೆಕ್ಕಾಚಾರದಂತೆಯೇ ಎಲ್ಲಾ ಜರುಗಿತಲ್ಲಾ ಮೇಡಮ್, ನಿಮಗೆ ನಮ್ಮೆಲ್ಲರ ಧನ್ಯವಾದಗಳು" ಎಂದ ನಿಶ್ಚಿಂತೆಯಿಂದ ನಗುತ್ತಾ ಇಕ್ಬಾಲ್.

" ಕೊನೆಗೂ ಅದು ಲಂಕೆಯೋ, ಶ್ರೀಲಂಕೆಯೋ, ಒಟ್ಟಿನಲ್ಲಿ ರಾವಣನ ನಂತರ ವಿಭೀಷಣ ಆಳಿದ ದೇಶ ಅಂದುಕೊಂಡರೂ ಆಯಿತು...ಅದು ಮಾತ್ರ ಸುರಕ್ಷಿತವಾಯಿತು...ಶ್ರೀ ರಾಮರಕ್ಷ!" ಎಂದಳು ತಾನೂ ಆತಂಕಮುಕ್ತಳಾಗುತ್ತಾ ವೀಣಾ.

----

ಮಂಗಳೂರಿನ ನೇವಲ್ ಬೇಸಿನಲ್ಲಿ ಎಲ್ಲಾ ಆಸ್ಪತ್ರೆ ಸೌಲಭ್ಯವಿರಬಹುದು ಎಂದು ಐ ಎನ್ ಎಸ್ ಪ್ರದ್ಯುಮ್ನ ಅಲ್ಲಿಗೇ ಡಾ. ದೇಸಾಯರ ಸಲಹೆಯಂತೆ ಬಂದು ಲಂಗರು ಹಾಕಿತು.

ಆಸ್ಪತ್ರೆಗೆ ಎಲ್ಲರ ಕುಟುಂಬದವರೂ ಆತಂಕದಿಂದ ಬಂದು ನೋಡಿಕೊಂಡು ನೆಮ್ಮದಿಯಿಂದ ಹೋದರು. ಅವಿನಾಶನ ತಾಯಿಯಂತೂ "ನನ್ನ ಮಗನನ್ನು ಆಂಜನೆಯನೇ ಕಾಪಾಡಿದ, ನೀನು ಮದುವೆಯಾದರೆ ಅವನನ್ನು ಉಳಿಸಿದ ನಿನಗೆ ಮಾಂಗಲ್ಯಭಾಗ್ಯ ಗಟ್ಟಿ ಕಣಮ್ಮ" ಎಂದರು ಮನಸಾರೆ ಹರಸುತ್ತಾ. ಅಲ್ಲಿದ್ದ ನೇವಲ್ ಆಸ್ಪತ್ರೆಯ ಮುಖ್ಯ ವೈದ್ಯರು ಮಾತ್ರ ‘ನಮಗೆ ಕರ್ತವ್ಯವೇ ದೇವರಮ್ಮಾ, ಬೇರೆ ದೇವರನ್ನು ನಾವು ಕಾಣೆವು’ ಎಂದರು ಆಕೆ ಅವರನ್ನು ವಂದಿಸಿದಾಗ. ‘ಇದೆಲ್ಲಾ ಅವರವರ ವೈಯಕ್ತಿಕ ನಂಬಿಕೆಗಳ ಮೇಲೆ ನಿಂತಿದ್ದು’ ಎಂದರು ಡಾ.ದೇಸಾಯಿ ಅಲ್ಲಿಗೆ ಬಂದಿದ್ದವರು.

 

---

ಅವಿನಾಶನಿಗೆ ಎಚ್ಚರವಾಗಿದ್ದೇ ಎರಡು ದಿನಗಳ ನಂತರ. ಅಕ್ಕ ಪಕ್ಕದಲ್ಲಿ ವೀಣಾ ಮತ್ತು ಡಾ. ದೇಸಾಯಿ ನಿಂತಿದ್ದಾಗ ಅವನು ಎಚ್ಚರವಾದಾಗ.

 ಅವಿನಾಶ್ ಪೆಚ್ಚಾಗಿ ನಕ್ಕು ಬ್ಯಾಂಡೇಜ್ ಕಟ್ಟಿದ್ದ ತಲೆಯನ್ನು ಒತ್ತಿ ಹಿಡಿದುಕೊಂಡು ಹೇಳಿದ.

"ಕೊನೆಗೂ ನಮ್ಮ ದೇಶಕ್ಕೆ ಯಾವ ಚಿನ್ನವನ್ನೂ ತರಲಿಲ್ಲ ಸರ್..."

ಡಾ. ದೇಸಾಯಿ ಆಶ್ವಾಸನೆ ಕೊಡುವಂತೆ ನಕ್ಕರು. "ಬೇರೆ ಯಾರಿಗೋ ಸಿಗದಂತೆ ಮಾಡಿದೆವಲ್ಲಾ ಅವಿನಾಶ್.. ನಮ್ಮ ಗುರಿ ಮತ್ತು ಮಿಷನ್ ಸುವರ್ಣಗಿರಿ ಅದು ತಾನೇ ಆಗಿತ್ತು... ಅದನ್ನು ನಮ್ಮದಾಗಿಸಿಕೊಳ್ಳಲು ನಮಗೇನೂ ಹಕ್ಕು ಇರಲಿಲ್ಲ... "ಸಿಕ್ಕವರಿಗೆ ಸೀರುಂಡೆ" ಎನ್ನುವ ಕಾಲವಲ್ಲ ಈಗಿನ ಪ್ರಪಂಚದಲ್ಲಿ... ಸೋ, ಚಿಂತಿಸಬೇಡ. ಅವಿನಾಶ್... ನಮ್ಮ ಮಿಷನ್ ಸಕಸ್ ಫುಲ್.. "

"ಮಾರಲ್ ವಿಕ್ಟರಿ ಕೊನೆಗೆ, ಸರ್.."ಎಂದಳು ವೀಣಾ.

ಡಾ. ದೇಸಾಯಿ ಸಹಾ ಗಂಭೀರವಾಗಿ ಯೊಚಿಸುತ್ತಾ ಹೇಳಿದರು,

"ಹೌದು...ಮಾರಲ್ (ನೈತಿಕವಾಗಿ) ಆಗಿ ನೋಡಿದರೂ, ನೀವು ಹೇಳುವಂತೆ ಈ ಕಲಿಯುಗದವರಿಗೆ ಮೊದಲೇ ಮುಳುಗಿದ್ದ ಆಸ್ತಿ, ಸಂಪತ್ತಿನ ಮೇಲೆ ಯಾವ ಖಾಸಗಿ ಹಕ್ಕು ಇಲ್ಲ ಅಲ್ಲವೆ?.. ನಮಗೆ ಸಿಕ್ಕಿದ್ದರೆ ಅಥವಾ ಯಾವುದೇ ದೇಶಕ್ಕೆ ಸಿಕ್ಕಿದ್ದರೆ, ಇನ್ನಷ್ಟು ದುರಾಸೆಯಿಂದ ಏನೇನು ಆಗಿ ಯಾವ್ಯಾವ ಅನಾಹುತ ಜರುಗುತಿತ್ತೋ? ಯಾವ್ಯಾವ ದೇಶಗಳ ನಡುವೆ ಅದರ ಶೇರಿಗಾಗಿ, ಅದಕ್ಕೆ ಪೈಪೋಟಿಯಾಗಿ ಫೈಟ್? ...ಅಂತರರಾಷ್ಟ್ರೀಯ ಜಲಮಿತಿಯಲ್ಲಿತ್ತು ಅದು ಬೇರೆ...ನಮ್ಮ ದೇಶದ ವ್ಯಾಪ್ತಿಯ ಹೊರಗೆ... ಉಫ್... ಎಂತಾ ಕ್ಲಿಷ್ಟ ರಾಜಕೀಯ ಸಂಕಟವಾಗುತ್ತಿತ್ತು ಸರಕಾರಗಳಿಗೆ?...ಸದ್ಯ ಭೂಮಿಯಾಳಕ್ಕೆ ಹೋಗಿ ಕಲ್ಲಲ್ಲಿ ಕಲ್ಲಾಗಿ ಹೋಯಿತಲ್ಲ, ನಮಗೆಲ್ಲಾ ಒಂದೇ ನಿಶ್ಚಿಂತೆ!"

"ಸರ್, ಮತ್ತೆ ಇಟಲಿಯ ಪಾಲೆರ್ಮೋ...?"

ಈ ಬಾರಿ ನಿರಾಶವದನರಾದರು ಡಾ. ದೇಸಾಯಿ?

"ಅವನಿಗೆ ಸುಳಿವು ಸಿಕ್ಕ ಕೂಡಲೇ ತನ್ನ ದೇಶದಿಂದ ಕಣ್ಮರೆಯಾಗಿದ್ದಾನೆ. ಎಲ್ಲಿಯೋ ದಕ್ಷಿಣ ಅಮೇರಿಕ ಬಳಿ ಯಾವುದೋ ದ್ವೀಪದಲ್ಲಿ ತಲೆಮರೆಸಿಕೊಂಡಿದ್ದಾನಂತೆ.. ಇಟಲಿಯಲ್ಲಿ ಅವನಿಗೆ ಗೂಢಚಾರರು ವಿಪರೀತ ಇದ್ದರು... ಹುಡುಕುತ್ತಿದ್ದೇವೆ, ಸಮಯ ಕೊಡಿ ಎಂದಿದ್ದಾರೆ, ಅಲ್ಲಿನ ಸರಕಾರ. ...ಇದೆಲ್ಲಾ ನಾನು ಹೇಳಬೇಕೆ ನಿನಗೆ, ಒಳತಂತ್ರಗಳು?"

ಡಾ.ದೇಸಾಯಿ ಅಲ್ಲಿಂದ ಹೋದ ನಂತರ ವೀಣಾ ಮಾತ್ರ ಪಕ್ಕದಲ್ಲಿ ಕೈಹಿಡಿದು ಕುಳಿತಿದ್ದಳು.

 

ಎದುರಿಗಿದ್ದ ಕ್ಯಾಲೆಂಡರ್ ನೋಡಿ ದಿನಾಂಕ ಗಮನಿಸಿ ಏನೋ ನೆನಪಾಯಿತೆನಿಸಿತು ಅವನಿಗೆ.

"ಸ್ವಲ್ಪ ಎಫ್ಎಂ ರೇಡಿಯೋ ಹಾಕ್ತೀಯಾ, ವೀಣಾ?...ಇವತ್ತು ಡಾ. ರಾಜ್‌ಕುಮಾರ್ ಜನ್ಮದಿನ..." ಎನ್ನುವಷ್ಟರಲ್ಲಿ ವೀಣಾ ಕನ್ನಡ ಸ್ಟೇಷನ್ ಆರಿಸಿ ಮೊಬೈಲ್ ಕೈಗಿತ್ತಳು.

 ಅದರಿಂದ ಪಿ ಬಿ ಶ್ರೀನಿವಾಸ್ ಕಂಠದಲ್ಲಿ ಹಳೆ ರಾಜ್‌‍ಕುಮಾರ್ ಚಿತ್ರಗೀತೆ ಉಲಿಯಿತು, "ಕಲ್ಲಾದೆ ಏಕೆಂದು ಬಲ್ಲೆ...ಆ ಗುಟ್ಟನ್ನು ಹೇಳಲೇನು ಇಲ್ಲೇ?"

"ಬೇಡ, ಅಣ್ಣಾವ್ರೆ, ಆ ಗುಟ್ಟೂ ನನಗೆ ಅರ್ಥವಾಗಿಹೋಯಿತು!" ಎನ್ನುತ್ತಾ ನಕ್ಕು ನಿದ್ರಿಸಲು ಕಣ್ಮುಚ್ಚಿ ಹಾಗೇ ದಿಂಬಿಗೆ ಒರಗಿದ ಅವಿನಾಶ್.

 

( ಮುಗಿಯಿತು)

-----

 

(ಡಿಸ್ಕ್ಲೈಮರ್: 

1. ಈ ಕತೆಯನ್ನು ವಾಲ್ಮೀಕಿ ರಾಮಾಯಣದ ಒಂದು ಘಟನೆಯ ವರ್ಣನೆಯ ಆಧಾರದ ಮೇಲೆ ಕಾಲ್ಪನಿಕವಾಗಿ ಹೆಣೆಯಲಾಗಿದ್ದು, ’ಕೇವಲ ಮನರಂಜನಾ ಕತೆ’ಯೆಂದೇ ಭಾವಿಸಬೇಕೆಂದೂ, ಅದರಂತೆಯೇ ನೀವು ರೇಟಿಂಗ್, ಪ್ರತಿಕ್ರಿಯೆ ನೀಡುವಾಗ ಗಮನಿಸಿ ಎಂದು ಕೋರಿದ್ದೇನೆ 

2. ಇದೆಲ್ಲಾ ಸತ್ಯವೆಂದು ನಂಬಿಸುವುದು ನನ್ನ ಉದ್ದೇಶವಲ್ಲ ಮತ್ತು ಇವಕ್ಕೆ ಹೆಚ್ಚಿನ ಮಾಹಿತಿ /ಸಾಕ್ಷಿ ಇತ್ಯಾದಿ ಒದಗಿಸಲು ಸಾಧ್ಯವಿಲ್ಲ.

3. ಯಾವುದೇ ಧರ್ಮ ಅಥವಾ ಜಾತಿಯನ್ನು ಉದ್ದೇಶಪೂರ್ವಕವಾಗಿ ವರ್ಣಿಸಲು/ ತೆಗೆಳಲು ಬಳಸಿರುವುದಿಲ್ಲ. 

4. ಇದು ನನ್ನ ಸ್ವಂತ ರಚನೆಯಾಗಿರುತ್ತದೆ ಮತ್ತು ಯಾವ ಧಾರಾವಾಹಿಗೂ ಸೇರಿಲ್ಲದೇ ಪ್ರತ್ಯೇಕ ಕತೆಯಾಗಿದೆ - ಲೇಖಕ)

 

 



Rate this content
Log in

Similar kannada story from Action