nagesh kumar cs

Action Crime Thriller

4.0  

nagesh kumar cs

Action Crime Thriller

ನಡುಗಡಲಿನ ಹಡಗು

ನಡುಗಡಲಿನ ಹಡಗು

24 mins
323


1

ಒಂದು ಕೋಲ್ಟ್ 0.45 ರಿವಾಲ್ವರ್ ನಿಮ್ಮ ಕಡೆ ತಿರುಗಿದೆ ಎಂದುಕೊಳ್ಳಿ. ಅದನ್ನು ಅವನು ಚಲಾಯಿಸಿದ ಎಂದೂ ಅಂದುಕೊಳ್ಳಿ. ನಿಮ್ಮ ಅದೃಷ್ಟಕ್ಕೆ ಅದರ ಬುಲೆಟ್ ನಿಮ್ಮ ಕಾಲಿಗೋ, ಕೈಗೋ ಮಾತ್ರ ಬಡಿದರೆ ನೀವು ಅದನ್ನು ಸಹಿಸಿಕೊಂಡು ಒಬ್ಬ ಸಿನೆಮಾ ನಾಯಕನಂತೆ ಸಾವರಿಸಿಕೊಂಡು ಎದ್ದು ಮತ್ತೆ ಕಾದಾಡಲು ಪ್ರಯತ್ನಿಸಲು ಸಾಧ್ಯವಿಲ್ಲ.

ಕಾದಾಡುವುದು ದೂರದ ಮಾತು, ಅಲ್ಲೇ ತಕ್ಷಣ ಕುಸಿದುಬೀಳುವಿರಿ! ಇದನ್ನು ನಾನು ಖಚಿತವಾಗಿ ಹೇಳಬಲ್ಲೆ.

ಅದಕ್ಕಾಗಿಯೇ ನಾನು ಸ್ತಬ್ಧನಾಗಿ ಅಲ್ಲೇ ನಿಂತೆ. ಆದರೆ ಎಷ್ಟು ಹೊತ್ತು?

ನನ್ನ ಎದುರಿನ ಚೇರಿನಲ್ಲಿದ್ದವನ ಅಂತಹಾ ಗನ್ ಹಿಡಿದ ಕೈ ಕೂಡಾ ಅಚಲವಾಗಿದ್ದುದೂ ಸಹಾ ನನ್ನಲ್ಲಿ ಕಂಪನ ಹುಟ್ಟಿಸಿತ್ತು. ನಾನು ಕೊಂಚ ಅಲುಗಾಡಿದರೂ ಆತ ನನ್ನ

ಬಗ್ಗೆ ಮಿಸುಗಲಿಲ್ಲ. ಶಿಲೆಯಂತಿದ್ದ. ಅಬ್ಬಾ, ಇವನು ಎಂತಾ ಕಲ್ಲು ಹೃದಯದ ಕೊಲೆಗಾರನೋ ತನ್ನಲ್ಲಿ ಎಷ್ಟು ಆತ್ಮ ವಿಶ್ವಾಸವಿದೆಯೋ ಎಂದು ನಾನು ಮನದಲ್ಲೆ ಲೆಕ್ಕಹಾಕಿ ಸುಮ್ಮನಾದೆ.

ಆದರೆ ನಾನು ಕದ್ದು ಮುಚ್ಚಿ ಈ ನಡುರಾತ್ರಿ ಹೊತ್ತಿನಲ್ಲಿ ಈ ಹಡಗನ್ನು ಹತ್ತಿ ಬಂದಿದ್ದೆ, ನೋಡಿ. ನನ್ನ ಬಳಿ ಅವನನ್ನು ಪರೀಕ್ಷಿಸಲು ಹೆಚ್ಚು ವ್ಯವಧಾನವಿರಲಿಲ್ಲ. ನಾನು ಏನಾದರೂ ಚಲನೆ ಮಾಡಲೇಬೇಕಿತ್ತು.

“ನೋಡು, ಏನೂ ಹೆಚ್ಚು ಕಮ್ಮಿ ಮಾಡಿಬಿಡಬೇಡ. ಶೂಟ್ ಮಾಡುವ ಕೈ ಸ್ವಲ್ಪ ಸಡಿಲ ಮಾಡು. ನಾನು ನಿನ್ನ ಜತೆ ಮಾತಾಡಬಯಸುವೆ” ಎಂದೆ ಆದಷ್ಟು ನಡುಗುವ ದನಿಯನ್ನು ನಿಯಂತ್ರಿಸಿಕೊಳ್ಳುತ್ತಾ. ಆದರೆ ಅವನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಸ್ವಲ್ಪ ಕೈಯನ್ನು ಎಡಕ್ಕೆ ಬಿಡಿಸಿಕೊಂಡು ಅದೇ ಪಕ್ಕದ ನೆಲಕ್ಕೆ ಜಿಗಿದೆ. ಏನಾದರೂ ಆಗುವುದಿದ್ದರೆ ಆಗಲಿ ಎಂಬ ಭಂಡ ಧೈರ್ಯದಿಂದ. ಆದರೆ ಅವನ ಕೈಗಳು ಹಾಗೇ ಇದ್ದವು, ಮತ್ತೆ ಅವು ನನ್ನತ್ತ ತಿರುಗಲೇ ಇಲ್ಲ..

ನನ್ನ ಹೃದಯ ಬಾಯಿಗೆ ಬಂದಂತಾಗಿ ಅವನತ್ತ ನಿಧಾನವಾಗಿ ದೇಕಿಕೊಂಡು ಸರಿದೆ. ಆದರೆ ಕತ್ತಲಲ್ಲಿ ಅವನ ಮುಖ ಸ್ಪಷ್ಟವಾಗಿ ಕಾಣಲಿಲ್ಲ. ನೇವಿ ಕ್ಯಾಪ್ ಮಾತ್ರ ಹಾಕಿಕೊಂಡಿದ್ದವ ಚೇರಿನಲ್ಲಿ ಸ್ಥಿತಪ್ರಜ್ಞನಂತೆ ಕುಳಿತಿದ್ದ. ನಾನು ಹಾರಿ ಅವನ ಮುಖಕ್ಕೆ ಮುಷ್ಟಿಗಟ್ಟಿ ಹೊಡೆದೆ.

ಆಗ ಎರಡು ಘಟನೆಗಳು ಒಮ್ಮೆಲೇ ನಡೆದವು. ಅವನ ದೇಹ ಚೇರಿಂದ ಕೆಳಗೆ ಬಲಕ್ಕೆ ಹಾರಿಬಿತ್ತು ಮತ್ತು ಆವನ ಕತ್ತಿನ ಭಾಗದಲ್ಲಿದ್ದ ಹರಿತವಾದ ವಸ್ತು ಇನ್ನೊಂದು ಪಕ್ಕಕ್ಕೆ ಬಿದ್ದು ಶಾಂತವಾದ ಕ್ಯಾಬಿನ್ನಿನಲ್ಲಿ ಟಣ್ ಎಂದು ಸದ್ದು ಮಾಡಿತು.

ಅವನು ಸತ್ತುಹೋಗಿದ್ದನೆಂಬ ಅರಿವು ಮತ್ತು ಪಕ್ಕದಲ್ಲಿ ಬಿದ್ದ ರಕ್ತಸಿಕ್ತ ಚೂರಿ ಒಂದೇ ಕತೆಯನ್ನು ಹೇಳಿದ್ದವು. ನಾನು ಅವನನ್ನು ಕಾಣುವ ಮೊದಲೇ ಕೊಲೆಯಾಗಿಹೋಗಿದ್ದ!.

ಆದರೆ ಸತ್ತ ವ್ಯಕ್ತಿ ಯಾರೆಂದು ತಿಳಿಯಲು ನಾನು ಟಾರ್ಚ್ ಲೈಟ್ ಹಾಕಿ ಮುಖದ ಮೇಲೆ ಆಡಿಸಿದಾಗ ನನಗೆ ಇನ್ನೊಂದು ಆಘಾತವಾಗಿತ್ತು. ಅವನ ಹೆಸರು ನಿರ್ಮಲ್ ರಾಯ್. ಹೀಗೆ ದುರದೃಷ್ಟಕರವಾಗಿ ಸಾಯುವವರೆಗೂ ಅವನು ನಮ್ಮ ದೇಶದ ನೇವಲ್ ಸೀಕ್ರೆಟ್ ಸರ್ವೀಸಿನ ಏಜೆಂಟ್ ಆಗಿಯೇ ದುಡಿದಿದ್ದ. ಈ ಹಡಗಿನಲ್ಲಿಯೂ

ಮಾರುವೇಶದಲ್ಲಿ ದೇಶಕ್ಕಾಗಿ ಬೇಹುಗಾರಿಕೆ ಮಾಡುತ್ತಲೆ ಇದ್ದ. ಅದೂ ನನ್ನ ಆಜ್ಞೆಯ ಮೇಲೆ. ನಾನೇ ಈ ಮಿಷನ್ನಿಗಾಗಿ ಅವನನ್ನು ಆರಿಸಿ 15 ದಿನಕ್ಕೆ ಮುಂಚೆಯಷ್ಟೇ ಇಲ್ಲಿ ಕೆಲಸಕ್ಕೆ ಹಚ್ಚಿದ್ದೆ!

ನನ್ನ ಟೀಮಿನಲ್ಲಿದ್ದ ಅತಿ ಮುಖ್ಯ ಸದಸ್ಯನನ್ನು ಹೀಗೆ ನೋಡುವೆನೆಂದು ನಾನು ಎಣಿಸಿರಲಿಲ್ಲ. ನಾನು ಬೇಗ ಅವನ ಜೇಬಿನಲ್ಲಿ ತಡಕಾಡಿದೆ, ನಂತರ ಎದ್ದು ಅವನೆದುರು ಇದ್ದ ರೇಡಿಯೋ ಆಪರೇಟರ್ ಟೇಬಲ್ಲಿನಲ್ಲಿ ಹುಡುಕಿದೆ: ಆ ರೇಡಿಯೋ ಆಫ್ ಆಗಿ ಚಿಕ್ಕ ಇಂಡಿಕೇಟರ್ ದೀಪ ಮಾತ್ರ ಮಿನುಗುತ್ತಿತ್ತು ಅವನು ನನಗೆ ಅಂದು ಸಂಜೆ ದಿನಾ ಕಳಿಸುವ ರಹಸ್ಯ ಸಂದೇಶ ಅಂದು ಕಳಿಸಿಯೇ ಇರಲಿಲ್ಲ.. ಇಲ್ಲಿಯೂ ಅದರ ಸುಳಿವು ಸಿಗಲಿಲ್ಲ. ಹೀಗೆ ಐದು ಅಮೂಲ್ಯ ನಿಮಿಷಗಳು ನನಗೆ ವ್ಯರ್ಥವಾದವು.

ನಾನು ಅವತ್ತಿನ ಕೆಲಸ ಹೀಗೆ ಕೊನೆಯಾಯಿತಲ್ಲಾ ಎಂದು ಆ ಬಾಗಿಲು ತೆಗೆದು ಹಡಗಿನ ಹಿಂದಿನ ಡೆಕ್ ಇಳೀದು ಹೋಗುವವನೇ ಇದ್ದೆ ಆದರೆ ಎಣ್ಣೆ ಕಾಣದ ಒಣ ಕೀಲುಗಳ ಬಾಗಿಲು ಕಿರ್ರೆಂದು ತೆರೆದುಕೊಂಡಿತು.. ಹಳದಿ ಡೆಕ್ ಲೈಟಿನಲ್ಲಿ ಅಲ್ಲಿ ಒಬ್ಬ ಎದುರಾಗಿ ನಿಂತಿದ್ದ

ಸುಮಾರು ಆರು ಅಡಿ ಇದ್ದು ನೀಲಿ ಸೀ ಜ್ಯಾಕೆಟ್ ಹಾಕಿ ಒಂದು ಕೈಯಲ್ಲಿ ಮುಂಗುರಳನ್ನು ನೇವರಿಸಿಕೊಳ್ಳುತ್ತಿದ್ದವನ ಇನ್ನೊಂದು ಕೈಯಲ್ಲಿ ದೊಡ್ಡ ಶಾಟ್ ಗನ್ ಇತ್ತು. ಆ ಧೂರ್ತ ಗಡುಸು ದನಿಯಲ್ಲಿ ನುಡಿದ,

“ಕ್ಯಾಪ್ಟನ್ ಅರ್ಜುನ್ ದೇಶಪಾಂಡೆ.. ಅಲ್ಲೇ ನಿಲ್ಲುವುದು ನಿಮ್ಮ ಪ್ರಾಣಕ್ಕೆ ಒಳಿತು. ನೀವು ಈಜುವ ಉಡುಪು ಧರಿಸಿ ಕಡಲಿನಲ್ಲಿ ಈಜಿ ಬಂದು ನಮ್ಮ ಹಡಗಿನ ಅತಿಕ್ರಮ ಪ್ರವೇಶ ಮಾಡಿರುವುದೇನೋ ನಿಜ..ಆದರೆ ನಿರ್ಗಮನ ನಿಮ್ಮ ಕೈಯಲ್ಲಿಲ್ಲ..” ಅವನಿಗೆ ತನ್ನ ಶುದ್ಧ ವ್ಯಾಕರಣ ಬದ್ಧ ಭಾಷೆಯ ಬಗ್ಗೆ ಹೆಮ್ಮೆಯಿದ್ದಂತಿತ್ತು. ಕೆಲವು ಇಂತಾ ನಾವಿಕರು ತಮ್ಮ ಕೀಳರಿಮೆ ಕಳೆದುಕೊಳ್ಳಲು ಹೀಗೆಲ್ಲ ಸಜ್ಜನರ ಭಾಷೆ ಕಲಿತು ಪ್ರದರ್ಶನ ಮಾಡುತ್ತಿರುತ್ತಾರೆ. ಅದಕ್ಕೆ ಉತ್ತರ ನನ್ನ ಬಳಿಯಿತ್ತು

“ಸಾಕು, ಬಾಯ್ಮುಚ್ಚು. ನನ್ನ ಬಗ್ಗೆ ನಿನಗೇನೂ ಗೊತ್ತಿಲ್ಲ”

“ಅರ್ಜುನ್ ದೇಶಪಾಂಡೆ!...ನೀವು ನಿಮ್ಮ ನೇವಿಯ ಸೀಕ್ರೆಟ್ ಸರ್ವೀಸ್ ಕ್ಯಾಪ್ಟನ್ ಇರಬಹುದು. ಇಲ್ಲಿ ಸಭ್ಯತೆಯ ಎಲ್ಲೆ ಮೀರಿ ಮಾತಾಡಬೇಡಿ.. ನಾನು ಈ ಹಡಗಿನ ಕ್ಯಾಪ್ಟನ್!” “ ಅವನ ಶಾಟ್‌ಗನ್ ಅತ್ತ-ಇತ್ತ ಅಪಾಯಕರವಾಗಿ ಆಡಿತು,” ಆಪರೇಶನ್ ಸ್ಲೀಪಿಂಗ್ ಲಿಲಿ” ಎಂಬ ಹೆಸರಿನಲ್ಲಿ ನಮ್ಮಂತಾ ಬಡಪಾಯಿ ಹಡಗುಗಳನ್ನು ನೀವು ನಡುಕಡಲಲ್ಲಿ ಅಡ್ಡಗಟ್ಟಿ ಹಿಂಸಿಸುತ್ತಿದ್ದೀರಿ ಎಂದು ಗೊತ್ತು.

“ಅವನ ಕೈ ನಿರ್ಮಲನ ಹೆಣದತ್ತ ತಿರುಗಿತ್ತು, “ಮತ್ತು ನಿಮ್ಮ ಹುಡುಗ. ಪಾಪ, ಅವನು ಎದುರಿಗೆ ನಾನು ಬರುವೆನೆಂದು ತನ್ನ ಮಾರುವೇಶ ರಹಸ್ಯ ಬಯಲು ಮಾಡುವೆನೆಂದು ಅನುಮಾನಪಟ್ಟು ಗನ್ ಹಿಡಿದೇ ಕುಳಿತಿದ್ದ. ಆದರೆ ನಾನು ಕತ್ತಲಿನಲ್ಲಿ ಕರಿ ಬೆಕ್ಕಿನಂತೆ...” ಗಹಗಹಿಸಿ ನಕ್ಕ ತನ್ನ ಹೋಲಿಕೆಗೆ ತಾನೇ.

“ಹಿಂದಿನಿಂದ ಬಂದು ಚುಚ್ಚಿ ಕೊಂದೆಯಾ?. ಅಷ್ಟಕ್ಕೂ ನಿಮ್ಮ ಬಳಿ ಬಚ್ಚಿಟ್ಟುಕೊಳ್ಳುವುದೇನಿದೆ? ಸೀ ಕ್ರಾಲರ್ ಎಂಬ ಹೆಸರಿನಲ್ಲಿ ನಿಮ್ಮದು ಕೇವಲ ಮೀನುಗಾರಿಕೆಯ

ವೆಸಲ್ ಎಂದು ರಿಜಿಸ್ಟರ್ ಮಾಡಿದ್ದೀರಲ್ಲ. “ ನಾನು ಹಾಗೇ ಮಾತನಾಡುತ್ತಾ ಆ ಪಕ್ಕಕ್ಕೆ ಸರಿಯುತ್ತಾ ಒಂದು ಕಾಲಿಂದ ನಿರ್ಮಲನ ಕೋಲ್ಟ್ ಎಗರಿಸಿ ಎತ್ತಿಕೊಳ್ಳಲು ಸಂಚು ಮಾಡಿದ್ದೆ.

“ಏನಿಲ್ಲ, ನಿನ್ನೆ ಅವನು ನನ್ನ ಸಿಗರೇಟಿಗೆ ಲೈಟ್ ಕೊಡಲು ಒಪ್ಪಲಿಲ್ಲ..ಅದಕ್ಕೇ!” ಮತ್ತೆ ತನ್ನ ಜೋಕಿಗೆ ತಾನೇ ನಕ್ಕ.

ಹೀಗೆಲ್ಲಾ ವಿಪರೀತ ಹಾಸ್ಯ ಮಾಡಿ ತಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬಾರದು ನಮ್ಮ ಲೈನಿನಲ್ಲಿ. ಅದಕ್ಕೆ ಕಡಲು ಕೂಡಾ ನಗುವುದಿಲ್ಲ. ನಿಜಕ್ಕೂ ಅದು ಈಗ ದೊಡ್ಡ ಉಬ್ಬರದ ಅಲೆ ಎತ್ತಿ ನಮ್ಮ ಹಡಗಿನ ಕೆಳಗೆ ಅಬ್ಬರಿಸಿತ್ತು.

ಆಗಲೂ ಎರಡು ಘಟನೆಗಳು ಏಕಕಾಲಕ್ಕೆ ನಡೆದವು. ಅವನು ಜೋರಾಗಿ ಕುಲುಕಾಡಿದ ಹಡಗಿನಿಂದ ಆಯತಪ್ಪಿ ಶಾಟ್ ಗನ್ ಬೀಳಿಸಿಕೊಂಡು ಮುಗ್ಗುರಿಸಿ ಬೀಳುತ್ತಿದ್ದ ಮತ್ತು ನಾನು ಅದನ್ನು ನಿರೀಕ್ಷಿಸಿದವನಂತೆ ಕೆಳಕ್ಕೆ ಬಗ್ಗಿ ನಿರ್ಮಲನ ಕೋಲ್ಟ್ 0.45 ಗನ್ ಕೈಗೆತ್ತಿಕೊಂಡು ಅವನತ್ತ ಹಾರಿಸಿದ್ದೆ.

ನಿರ್ಮಲನ ಪ್ರಾಣ ಉಳಿಸುವಲ್ಲಿ ವಿಫಲವಾಗಿದ್ದರೇನು, ಅದು ನನ್ನ ಪ್ರಾಣವನ್ನು ಸಕಾಲದಲ್ಲಿ ರಕ್ಷಿಸಿತ್ತು.

ಅವನು ಹಾ ಎಂದು ಎದೆಹಿಡಿದು ಚೀರುತ್ತಾ ಬೀಳುತ್ತಿದ್ದ ಮರುಕ್ಷಣವೆ!..ಆದರೆ ಅದನ್ನು ನೋಡುತ್ತಾ ನಾನು ಕಾಯಲಿಲ್ಲ.

ಮಳೆಯಿಂದ ಒದ್ದೆಯಾಗಿದ್ದ “ಸೀ ಕ್ರಾಲರ್” ಡೆಕ್ಕಿನ ಮೇಲೆ ಅಂಚಿನತ್ತ ಜಾಗರೂಕನಾಗಿ ಓಡಿದ್ದೆ. ನನ್ನ ರಿವಾಲ್ವರ್ ಸದ್ದು ಮೇಲಿನ ಕ್ಯಾಪ್ಟನ್ ಕ್ಯಾಬಿನ್ ಮತ್ತು ಫೋ’ಕಸಲ್ ನಲ್ಲಿದ್ದ ಸಿಬ್ಬಂದಿಗೆ ಕೇಳಿ ಎಚ್ಚರಗೊಂಡು ಧಾವಿಸಿಬರುವ ಮುನ್ನ ನಾನು ಹಡಗಿಂದ ಹೊರಕ್ಕೆ ಹಾರಬೇಕಿತ್ತು. ನಾನು ಹಡಗಿನಂಚಿನ ರೈಲಿಂಗ್ಸ್ ಬಳಿ ಬರುವುದಕ್ಕೂ

ಮೇಲಿನ ಕ್ಯಾಬಿನ್ ಬಾಗಿಲು ಅವಸರದಲ್ಲಿ ತೆರೆದು ಇಬ್ಬರು ಸಿಬ್ಬಂದಿ ಜೋರಾಗಿ ಕಿರುಚುತ್ತಾ “ ಅಲ್ಲಿ ಅಲ್ಲೀ ಓಡಿದ ನೋಡಿ” ಎನ್ನುತ್ತಾ ಮೆಟಲ್ ಮೆಟ್ಟಿಲುಗಳನ್ನು ಇಳಿದು ಬರುವುದಕ್ಕೂ ಸರಿ ಹೋಯಿತು.

ಆದರೆ ನಾನು ಆಗಲೂ ನೋಡುತ್ತಾ ನಿಲ್ಲಲಿಲ್ಲ. ಒಂದೇ ಜಿಗಿತಕ್ಕೆ ರೈಲಿಂಗ್ಸ್ ದಾಟಿ ಹೊರಗಿನ ಕತ್ತಲಿನ ಕಡಲಿಗೆ ಚಿಮ್ಮಿದ್ದೆ. ಅವರು ಹಾರಿಸಿದ ಬುಲೆಟ್ಸ್ ನನ್ನನ್ನು ದಾಟಿ ಕತ್ತಲಲ್ಲಿ ನೀರು ಮುಟ್ತಿದವು. ಕೊರೆಯುವ ಉಪ್ಪು ನೀರಿನಲ್ಲಿ ದುಡುಂ ಎಂದು ಧುಮುಕಿದರೆ ದೇಹಕ್ಕೆ ಏನಾಗುವುದೆಂದು ನೀವು ಅನುಭವಿಸಿಯೇ ತೀರಬೇಕು. ಒಮ್ಮೆ ಹಾಯಾಗಿ ಮಳೆಯಲ್ಲಿ ನೆನೆಯುತ್ತಿದ್ದವನ ಮುಖವನ್ನು ಬಕೆಟ್ ನೀರಿನಲ್ಲಿ ಪೂರ್ತಿ ಮುಳುಗಿಸಿದರೆಂದು ಕಲ್ಪಿಸಿಕೊಳ್ಳಿ. ಹಾಗೆ!..ಆದರೆ ಬರೇ ಮುಖವಲ್ಲ ಈಜು ಉಡುಪು

ಮಾಸ್ಕ್ ಧರಿಸಿದ್ದ ನನ್ನ ಇಡೀ ದೇಹ ಒಮ್ಮೆಲೆ ಜಲರಾಶಿಯನ್ನು ಕತ್ತರಿಸಿಕೊಂಡು ಕೆಳಕ್ಕೆ ಹೋಗಿತ್ತು.. ನಾನು ನೇವಿಯಲ್ಲೆನೋ ಸ್ವಿಮಿಂಗಿನಲ್ಲಿ ಯಾವಾಗಲೂ ಮೊದಲ ಸ್ಥಾನ ಪಡೆದವನೇ ಆದರೆ ಯಾವ ಅನುಭವವೂ ನಡುರಾತ್ರಿಯ ಸಮುದ್ರದ ಅನುಭವಕ್ಕೆ ಸರಿಸಮನಾಗಲಾರದು. ಅದೂ ಇಬ್ಬರು ಮೂವರು ಶತ್ರುಗಳು ನಿಜವಾದ ಗನ್ನುಗಳಿಂದ ಕೊಲ್ಲಲು ಗುರಿಯಿಟ್ಟು ಗುಂಡು ಹಾರಿಸುತ್ತಿರುವಾಗ!

ಹೆಚ್ಚು ಸಮಯ ಕಳೆಯದೇ ಹೇಳುತ್ತೇನೆ. ಅಂದು ನನ್ನ ತಂದೆತಾಯಿಯ ಆಶೀರ್ವಾದದಿಂದ ಬದುಕುಳಿದೆ ಅನ್ನಿ. ನಾನು ನಮ್ಮ ನೇವಿಯ ಐ ಎನ್ ಎಸ್ ಜಲಕುಮಾರಿ ಹಡಗಿನ ಬದಿಯೇರಿ ಹಗ್ಗದ ಏಣಿ ಸಮೆತ ಏರುತ್ತಾ ಒಳಹೋಗಿ ಕ್ಯಾಬಿನಲ್ಲಿ ಏದುಸಿರು ಬಿಡುತ್ತಾ ಕುಳಿತೆ.

2

ನನ್ನನ್ನೇ ಆತಂಕದಿಂದ ನೋಡುತ್ತಿದ್ದ ಎದುರಿದ್ದ ನಮ್ಮ ಹಡಗಿನ ಕ್ಯಾಪ್ಟನ್ ಅಜಯ್ ಪಾರ್ಥಸಾರಥಿ.

“ಏನೆಂದು ಹೇಳುವಿರೋ, ಅಥವಾ ನಾನೇ ಗೆಸ್ ಮಾಡಬೇಕೋ?” ಎಂದ ನನ್ನತ್ತ ಬಿಸಿ ಕಾಫಿಯ ಕಪ್ ಸರಿಸುತ್ತಾ. ಇದೊಂದು ತರಹ ನಮ್ಮಿಬ್ಬರ ನಡುವೆ ಮೈಂಡ್ ಗೇಮ್.

“ಗೆಸ್ ಮಾಡು” ಎಂದೆ ಉಸಿರು ತಹಬಂದಿಗೆ ತರುತ್ತಾ ಕಾಫಿ ಹೀರಿದೆ.. ಆಹಾ, ನೆಸ್-ಕಾಫಿಯೇ ಅಮೃತದಂತಿತ್ತು.

“ಮತ್ತೆ ನಾವೊಬ್ಬನನ್ನು ಕಳೆದುಕೊಂಡೆವು” ಎಂದ ಅರೆ ಕಣ್ಮುಚ್ಚಿ ಅಜಯ್. “ಸೀ ಕ್ರಾಲರ್ ನವರು ನಿರ್ಮಲನನ್ನು ಕೊಂದರು ಅಥವಾ ಬಂಧಿಸಿ ಚಿತ್ರಹಿಂಸೆ

ಮಾಡುತ್ತಿದ್ದಾರೆ”

“ಮೊದಲನೆಯದು” ನಾನೆಂದೆ ನೀರವ ಸ್ವರದಲ್ಲಿ.

“ನೀವು ಹೇಗೋ ಕೂದಲೆಳೆಯಲ್ಲಿ ಮತ್ತೆ ಪ್ರಾಣ ಉಳಿಸಿಕೊಂಡು ವಾಪಸ್ ಬಂದಿರಿ”

“ಕರೆಕ್ಟ್” ನನ್ನ ಸ್ವರ ನಿರಾಸೆಯಿಂದ ಕುಗ್ಗಿ ಒಂದು ಗುಹೆಯಿಂದ ಬಂದಂತಿತ್ತು.

“ಸರ್!.” ಅಜಯ್. ಅವನ ದನಿಯಲ್ಲಿ ಕೋಪ ಹೆಚ್ಚು, ಗೌರವ ಕಡಿಮೆಯಿತ್ತು. ಅವನು ಎದ್ದುನಿಂತ. “ನಿಮ್ಮ ಪ್ಲಾನ್ ಪ್ರಕಾರ ಇಬ್ಬರು ಸತ್ತರು.. ಒಬ್ಬ ಕಾಣೆಯಾಗಿದ್ದಾನೆ.

ಇನ್ನು ನೀವು ಅಡ್ಮಿರಲ್ ಖನ್ನಾ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲೇಬೇಕು.. ರೇಡಿಯೋ ರೂಮಿಗೆ ಬರುವಿರಾ ಪ್ಲೀಸ್?” ಅಜಯನ ಜೀವದ ಗೆಳೆಯನಾಗಿದ್ದ ಆ

ನಿರ್ಮಲ್. ಅದಕ್ಕೂ ಮುನ್ನ ಕಳೆದ ತಿಂಗಳು ಸತ್ತಿದ್ದ ರಾಮನ್ ಇವನ ಊರಿನವನೇ ಆಗಿದ್ದ.. ಅವನು ಈ ವಾರ್ತೆಯಿಂದ ಕೆರಳಿ ನನ್ನನ್ನು ಹೊಡೆದೇ ಬಿಡುತ್ತಾನೆ ಎಂದಿದ್ದೆ.

ಸದ್ಯ!

ನಾನು ಮಾತಿಲ್ಲದೇ ಹೊರನಡೆದೆ. ಹೊರಗೆ ಸಮುದ್ರದ ಮೇಲೆ ಬೀಸಿದ ಗಾಳಿ ಒದ್ದೆಯಾಗಿದ್ದ ನನ್ನ ಸೂಟಿಲ್ಲಿದ್ದ ಆರಡಿ ಎತ್ತರದ, ಗುಂಗುರು ಕೊದಲಿನ ನನ್ನ ದೇಹದಲ್ಲಿ

ನಡುಕ ಹುಟ್ಟಿಸಿತು, 30 ವರ್ಷದ ಯುವಕರು ನಡುಗಬಾರದೆಂದು ರೂಲ್ ಏನಾದರೂ ಇದೆಯೆ?.

ನಮ್ಮ ದೇಶದ ಜಲಸೀಮೆಯ ಹಿಂದೂ ಮಹಾಸಾಗರದಾಚೆಯ ಮಧ್ಯಪ್ರಾಚ್ಯ- ಆಫ್ರಿಕಾದ ಕಡಲು ಮಾರ್ಗದಲ್ಲಿ ನಡುರಾತ್ರಿಯಲ್ಲಿ ನಮ್ಮ ಹಡಗು ಲಂಗರು ಹಾಕಿನಿಂತಿತ್ತು.

ಮಳೆ ಜೋರಾಗುವ ಸೂಚನೆ ಕಂಡು ಸರಸರನೆ ರೇಡಿಯೋ ರೂಮ್ ತಲುಪಿದೆ. ಅಜಯ್ ರೇಡಿಯೋ ಆನ್ ಮಾಡಿ ಸಿದ್ದಪಡಿಸಿ ಮೌನವಾಗಿ ದೂರನಿಂತ.

“ಸರ್, ಕ್ಯಾಪ್ಟನ್ ಅರ್ಜುನ್ ದೇಶಪಾಂಡೆ ಇಲ್ಲಿ.” ಎಂದೆ ರೇಡಿಯೋ ಮೈಕಿನತ್ತ ತಿರುಗಿ.

ಅತ್ತ ಮುಂಬೈನಲ್ಲಿ ನಡುರಾತ್ರಿಯಲ್ಲಿಯೂ ಎದ್ದಿದ್ದ ನನ್ನ ಬಾಸ್ ಅಡ್ಮಿರಲ್ ವಿಶ್ವನಾಥ್ ಖನ್ನಾರ ಕಂಚಿನಂತಾ ದನಿ ಕೇಳಿಬಂತು

“ಹೇಳು ಅರ್ಜುನ್. ಈಗ ಏನು ಹೊಸದು?.ಬಾಡಿ ಕೌಂಟ್ ಹೆಚ್ಚಾಯಿತೆ?”

ಸತ್ತವರ ಸಂಖ್ಯೆ? ಅದು ಹೇಗೆ ಸತ್ಯದ ವಾಸನೆ ಹಿಡಿಯಬಲ್ಲರು ಬಾಸ್ ಆದವರು!. ಆರನೇ ಇಂದ್ರಿಯವಿರುತ್ತೆಯೆ?

“ನೀವು ಹೇಳಿದಂತೆ ಮಾಡಿದ್ದಕ್ಕೆ ಈಗ ಆಪರೇಶನ್ ಸ್ಲೀಪಿಂಗ್ ಲಿಲಿ ಅರ್ಧ ದಾರಿಯಲ್ಲಿ ದಿಕ್ಕೆಟ್ಟು ನಿಲ್ಲುವಂತಾಗಿದೆ.” ನಾನೆಂದೆ

“ಅರ್ಜುನ್, ನನ್ನ ತಪ್ಪು ಅನ್ನುವೆಯಾ? ಅಫ್ ಕೋರ್ಸ್ ನಾಟ್..ನನ್ನ ಪ್ಲಾನ್ ಸರಿಯಾಗಿಯೇ ಇತ್ತು ...ಡ್ರಗ್ಸ್ ಕಳ್ಳಸಾಗಾಣಿಕೆಯ ದೊಡ್ಡ ದೊಡ್ಡ ಕನ್ಸೈನ್‌ಮೆಂಟುಗಳು

ಯಾವುದೂ ಸುಳಿವಿಲ್ಲದೇ ಎಲ್ಲಿಗೋ ಹೋಗಿ ಮಾಯುವಾಗುತ್ತಿದೆ ಎಂದು ನಮ್ಮ ಸರ್ಕಾರದ ಮೇಲೆ ನಾರ್ಕೋಟಿಕ್ಸ್ ಮತ್ತು ಇಂಟರ್-ಪೋಲ್ ಒತ್ತಡವಿದೆ, ಬಾರತದತ್ತ

ಬಂದಿಲ್ಲ ಎಂದು ಸಾಕ್ಷಿ ಒದಗಿಸಿ ಎಂದು. ಹಾಗಾಗಿ ನಾನು ಇದನ್ನು ಮಾಡಲೇಬೇಕಿದೆ” ಬಾಸ್ ಮೊಂಡು ವಾದ ನನಗೆ ಹೊಸದೇನಲ್ಲ.

“ನಾನೂ ಅದನ್ನು ಮಾಡಲೆಂದೇ ಬಂದೆ, ಅಲ್ಲವೆ ಸರ್?” ಅವರಿಗೆ ಎರಡು ತಿಂಗಳ ಹಿಂದೆ ಮೊದಲ ವರದಿ ಈ ಬಗ್ಗೆ ಇತ್ತಿದ್ದೂ ಅವರ ಪ್ರಾಮಾಣಿಕ ಸಹಾಯಕನಾದ

ನಾನೇ. “ಆದರೆ ನನ್ನ ಬಳಿ ಈಗ ಸಿಬ್ಬಂದಿಯ ಕೊರತೆಯಿದೆ. ಈ ಕಗ್ಗತ್ತಲ ಕಡಲಿನಲ್ಲಿ ಇಬ್ಬರು ಉತ್ತಮ ಆಪರೇಟರ್ಸ್ ಸಿಕ್ಕಿಬಿದ್ದು ಪ್ರಾಣ ಕಳೆದುಕೊಂಡರು, ಇನ್ನೊಬ್ಬ ಪತ್ತೆಯೇ ಇಲ್ಲ.”“ವೆಲ್, ಯೂ ಆರ್ ದ ಲೀಡರ್. ನಿನಗೆ ಗೊತ್ತು, ಮುಂದೆ ಏನು ಮಾಡಬೇಕೆಂದು, ಅಲ್ಲವೆ?” ಅವರ ಮಾರ್ಮಿಕ ಮಾತು ನನ್ನನ್ನೇ ಬೊಟ್ಟು ಮಾಡಿ ಸೂಚಿಸುತ್ತಿತ್ತು. ಆ ಮಾತು ನನಗೂ ಈ ಮೊದಲೇ ಅರಿವಾಗಿತ್ತು, ಇದೊಂತರಾ ಮೈಂಡ್ ಗೇಂ..ನಾಳೆ ನನಗೇನಾದರೂ ಜೀವಾಪಾಯ ಆದರೆ ಅವರು ಜವಾಬ್ದಾರರಲ್ಲ, ಇದೆಲ್ಲಾ ಈ ಕಸುಬಿನ ರಿಸ್ಕ್!

“ಸರ್, ಈ ಸೇಶಲ್ಸ್ ದ್ವೀಪ ಸಮೂಹಕ್ಕೆ ಸೇರಿದ ಒಂದು ಚಿಕ್ಕ ಹೆಸರಿಲ್ಲದ ದ್ವೀಪದಲ್ಲಿ ನಿವೃತ್ತ ನೇವಿ ಅಡ್ಮಿರಲ್ ಡಿಮೆಲ್ಲೋ ಅವರು ಭವ್ಯ ಬಂಗಲೆ ಕಟ್ಟಿಕೊಂಡಿದ್ದಾರೆ. ಅವರು...” ಎಂದು ನಾನು ಉತ್ಸಾಹದಿಂದ ಏನೋ ಹೇಳಲಿದ್ದೆ. ಅವರ ಮಾತು ಅಲ್ಲಿಯೇ ನನ್ನನ್ನು ತಡೆಯಿತು.

“ಅವರು ನನ್ನ ಖಾಸಾ ಮಿತ್ರರು ಎಂದು ನಿನಗೆ ಗೊತ್ತು. ಅಲ್ಲಿ ಅವರು ಚಿಪ್ಸ್ ಮತ್ತು ಚಾಕೋಲೇಟ್ ತಯಾರಿಸುವ ಕಾರ್ಖಾನೆ ಒಂದನ್ನು ಅಲ್ಲಿ ನಡೆಸುತ್ತಿದ್ದಾರೆಂದು ನೀನು ಪತ್ತೆ ಹಚ್ಚಿದ್ದೀಯೆ..ಅವರ ಮಗಳು ರೀಟಾ ವಿಶ್ವಸುಂದರಿ ಸ್ಪರ್ಧೆಯಲಿದ್ದಳು. ಆದರೆ ಅರ್ಜುನ್, ನೀನು ಇದನ್ನೆಲ್ಲಾ ಯಾಕೆ ನನಗೆ ಹೇಳುವವನಿದ್ದೆ?” ಅವರು ನಕ್ಕಿದ್ದು

ಕೇಳಲಿಲ್ಲ, ಆದರೆ ನಾನು ಅದನ್ನು ಊಹಿಸಬಲ್ಲೆನಾಗಿದ್ದೆ.

ನಾನು ರೇಡಿಯೋದತ್ತ ಸೊಟ್ಟನಗೆ ಚೆಲ್ಲಿದೆ. ಇವರು ತಮ್ಮನ್ನು ಅಚ್ಚರಿಗೊಳಿಸಲು ನಾನು ಮತ್ತೆ ಹುಟ್ಟಿ ಬರಬೇಕು ಎಂದಿದ್ದಾರೇನೋ , ಇರಲಿ, ನೋಡುವಾ ಎಂದು

ನಾನೂ ಚಲ ತೊಟ್ಟೆ.

“ಅದಕ್ಕೆ ಮೆಲ್ಲೋಸ್ ಐಲೆಂಡ್ ಎಂದು ಆ ಸಂಪತ್ತನ್ನು ಅವರು ಸೇಶೆಲ್ಸ್ ಸರಕಾರದ ಬಳಿ ನೋಂದಾಯಿಸಿದ್ದಾರೆ. ಅವರ ಬಳಿ ಹಣ, ಅಧಿಕಾರಿಗಳ ಸ್ನೇಹ ಎಲ್ಲಾ ಇದೆ. ಆದರೆ ವಿಷಯ ಅದಲ್ಲ.”

ನಾನು ಬೇಕಂತಲೇ ನಿಲ್ಲಿಸಿದೆ

“ಮುಂದೆ ಹೇಳು!” ಅಬ್ಬಾ, ಇನ್ನು ಮುಂದಿನದು ಇವರಿಗೆ ಗೊತ್ತಿಲ್ಲ, ಸದ್ಯ.

“ರೀಟಾ ಡಿಮೆಲ್ಲೋಳ ಮೀಡಿಯಾ ಸೆಕ್ರೆಟರಿ ಎಂದು ಹೇಳಿಕೊಂಡು ಆಂಗ್ಲೋ ಇಂಡಿಯನ್ನೇ ಆದ ನಿಕ್ಕಿ ಮೆಹ್ರಾ ಎಂಬಾತ ಅಲ್ಲಿಗೆ ಹಲವು ಬಾರಿ ಹೋಗುತ್ತಾನೆ, ಆಕೆಯ ಬಾಯ್ಫ್ರೆಂಡ್ ಎಂದು ಕೂಡಾ ಹೇಳಿಕೊಂಡು.” ಮತ್ತೆ ನಿಲ್ಲಿಸಿದೆ.

“ಹೋಗಲಿ ಬಿಡು!”

“ನನಗೂ ಅಭ್ಯಂತರವೇನಿರಲಿಲ್ಲ, ಸರ್!” ನಾನು ಈ ಬಾರಿ ನಕ್ಕೆ “ಆದರೆ ಅವನು ಇಲ್ಲಿಗೆ ಬಂದ ಸಮಯದಲ್ಲೇ ಅವನ ತಂದೆ ಜೆರಾಲ್ಡ್ ಮೆಹ್ರಾಗೆ ಸೇರಿದ್ದ ಹಡಗುಗಳಲ್ಲಿ ನಮ್ಮ ಇಬ್ಬರನ್ನು ಗೂಡಚರ್ಯೆ ಮಾಡಲು ನೇಮಿಸಿದ್ದೆ, ಅವರೇ ಕೊಲೆಯಾಗಿ ಹೋದವರು.. ರಾಮನ್ ಮತ್ತು ನಿರ್ಮಲ್.”

ಅತ್ತ ಒಂದು ಅರೆಕ್ಷಣ ಮೌನ. “ಐ ಸೀ!.ನೀನು ನನಗೆ ಯಾವ ಮಾಲೀಕರ ಹಡಗಿಗೆ ನಮ್ಮವರನ್ನು ಕಳಿಸುತ್ತಿದ್ದೀಯೆಂದು ಹೇಳಿರಲೇ ಇಲ್ಲವಲ್ಲ?” ಎಂದರು ಆಕ್ಷೇಪಣೆಯ ದನಿಯಲ್ಲಿ.

ಪ್ರತಿಯೊಂದು ಆಪರೇಷನ್ನಿನ ಮೊದಲು “ನೀನೇ ನಾಯಕ, ನಿನಗೆ ಎಲ್ಲ ರೀತಿಯ ಸ್ವಾತಂತ್ರ್ಯ ಉಂಟು. ನನಗೆ ಎಲ್ಲಾ ಹೇಳಬೇಕಿಲ್ಲ” ಎನ್ನುತ್ತಿದ್ದವರು ಇವರೇ.. ಅದಕ್ಕೇ ನಾನು ಉತ್ತರಿಸದೇ ಸುಮ್ಮನಿದ್ದೆ.

“ಸರಿ ಸರಿ.ಮತ್ತೇನು ಪತ್ತೆ ಹಚ್ಚಿದೆ?” ಈಗ ಆವರ ದನಿಯಲ್ಲಿ ಕಾತರವಿತ್ತು.

“ಓಹ್, ಹೆಚ್ಚೇನಿಲ್ಲ ಸರ್. ಆದರೆ ಇದೇ ನಿಕ್ಕಿ ಮೆಹ್ರಾ ಮೊದಲು ನಿಕ್ ರಾಡ್ರಿಗ್ಸ್ ಎಂಬ ಹೆಸರಿನಲ್ಲಿ ಲಂಡನ್ನಿನ ಪೋಲಿಸರಿಗೆ ಬೇಕಾದ ವ್ಯಕ್ತಿಯಾಗಿದ್ದು ಅವರ ರೆಕಾರ್ಡಿನಲ್ಲಿ ನಾಲ್ಕು ವರ್ಷದಿಂದ ಮಿಸ್ಸಿಂಗ್ ಎಂದಿದ್ದಾರೆ. ಸ್ವಲ್ಪ ಹೆಸರು, ವೇಷಭೂಷಣ, ಪಾಸ್-ಪೋರ್ಟ್, ದೇಶ ಎಲ್ಲವನ್ನೂ ಬದಲಿಸಿಬಿಟ್ಟ ಕ್ರಿಮಿನಲ್ ಇವನೇ ಎಂದು ನನ್ನ

ಅನುಮಾನ. ಇಷ್ಟು ಮಾತ್ರ ಪತ್ತೆ ಹಚ್ಚಿದ್ದೇನೆ.” ನಾಜೂಕಾಗಿ ಬಡಾಯಿ ಕೊಚ್ಚಿಕೊಳ್ಳಲು ನನಗೂ ಬರುತ್ತದೆ.

“ಸರಿ.” ಅವರಿಗೆ ಗೊತ್ತು ನಾನು ಇನ್ನೂ ಹೇಳುವುದಿದೆ ಎಂದು.

“ಜೆರಾಲ್ಡ್ ಮೆಹ್ರಾ ಒಬ್ಬರು ಬ್ರಿಟನ್ನಿನ ಹಾನರರಿ ನೈಟ್ ಅಲ್ಲವೆ ಸರ್?.,.. ಸರ್ ಜೆರಾಲ್ಡ್ ಮೆಹ್ರಾ. ಅವರು ತಮ್ಮ ಸಂಪರ್ಕದವರನ್ನು ಬಳಸಿಕೊಂಡು ಮಗನನ್ನು ಅಲ್ಲಿ ಬಿಡಿಸಿದರು. ಇವನು ತಲೆ ಮರೆಸಿಕೊಂಡು ಇಲ್ಲಿ ದ್ವೀಪದಿಂದ ದ್ವೀಪಕ್ಕೆ ಹಡಗುಗಳ ಫ್ಲೀಟ್ ಬಳಸಿಕೊಂಡು ಓಡಾಡುತ್ತಿದ್ದಾನೆ.”

“ಸರಿ. ಮುಂದೆ.”

ಹಾ.? ನಾನು ಪೂರ್ತಿ ಕೇಸನ್ನು ಆಗಲೇ ಸಾಲ್ವ್ ಮಾಡಿಬಿಟ್ಟಿದ್ದೇನೆ ಎಂದುಕೊಂಡಿದ್ದಾರೋ ಇವರು? ಅಚ್ಚರಿ ಪಟ್ಟುಕೊಂಡೆ.

“ನನ್ನನ್ನು ಆ ದ್ವೀಪಕ್ಕೆ ಚಾಕೋಲೇಟ್ ಕಂಪನಿಯೊಂದರ ಹಡಗಿನ ಏಜೆಂಟ್ ಎಂದು ಗುಪ್ತವಾಗಿ ಕಳಿಸಿಕೊಡಿ, ಸರ್!” ನನ್ನ ಕೊನೆಯ ಬಾಣ ಹೂಡಿದ್ದೆ.

“ಏನೂ!?” ಅವರು ಈ ಬಾರಿ ಹೌಹಾರಿದ್ದು ನಿಜ. “ ನಮ್ಮ ಕೇಸಿಗೂ ನೀನು ಅಲ್ಲಿ ಪರಿಚಯ ಬದಲಿಸಿಕೊಂಡು ಹೋಗುವುದಕ್ಕೂ ಎತ್ತಣಿಂದೆತ್ತ ಸಂಬಂಧ?”

“ಇದೆ ಸರ್.ಆದರೆ ಈಗಲೇ ನಾನು ಹೇಳಲಾರೆ!” ಮೊಂಡುವಾದದಲ್ಲಿ ನಾನು ಅವರ ಶಿಷ್ಯ ತಾನೆ?

“ನೀನು ಆ ಸುಂದರಿ ರೀಟಾಳ ಬೆನ್ನೆತ್ತಿ ಅಲ್ಲಿಗೆ ಸುಮ್ಮಸುಮ್ಮನೆಯೇ ಹೋಗುತ್ತಿಲ್ಲ ಅಲ್ಲವೆ?”

“ಇಲ್ಲ ಸರ್, ನಿಕ್ಕಿ ಮೆಹ್ರಾನ ಮೇಲಿನ ಅತಿಯಾದ ಪ್ರೀತಿಯಿಂದ ಮಾತ್ರ.!”

ಈ ಬಾರಿ ಅವರು ಸ್ವಲ್ಪ ಜೋರಾಗಿಯೇ ನಕ್ಕಿದ್ದು ಕೇಳಿಸಿತು.

“ಓಕೇ.ನಿನ್ನ ನಕಲಿ ಹೆಸರಿನ ಪೇಪರ್ಸ್, ವೇಷಭೂಷಣ ಎಲ್ಲವನ್ನೂ ಸ್ಪೆಶಲ್ ಹೆಲಿಕಾಪ್ಟರಿನಲ್ಲಿ ಬೇಗ ಕಳಿಸಿಕೊಡುತ್ತೇನೆ.ನಮ್ಮ ಡಿಪ್ಲೋಮೇಟಿಕ್ ಚಾನೆಲ್ಸ್

ಉಪಯೋಗಿಸಿಕೊಂಡು ಆ ಹೆಸರಿನ ಐ ಡಿ, ಇಂಟರ್ನೆಟ್ ನಲ್ಲಿ ಪರಿಚಯ, ಸರ್ಚ್, ಸೋಷಿಯಲ್ ಮೀಡಿಯಾ ಅಕೌಂಟ್ಸ್ ಎಲ್ಲಾ ಕಟ್ಟಿಕೊಡುತ್ತೇನೆ”


ನೋಡಿ, ಅದಕ್ಕೆ ತಂತಮ್ಮ ಬಾಸಿಗೂ ಕೆಲವೊಮ್ಮೆ ನಾವು ಕೆಲಸ ಕೊಡಬೇಕು ಅನ್ನುವುದು. ಎಷ್ಟು ನೀಯತ್ತಿನಿಂದ ಮಾಡುತ್ತಾರೆ!.

“ಎಲ್ಲಿ ಯಾವುದೇ ಸರಕಾರಿ ಅಥವಾ ನೇವಿ ಸಂಬಂಧಿತ ಸಂಸ್ಥೆಗಳಲ್ಲಿ ವಿಚಾರಿಸಿದರೂ ನನ್ನ ಹೆಸರು ಆನಂದ್ ದೇಸಾಯಿ ಎಂದು ಕಂಡುಬರಬೇಕು, ಸರ್.” ನಾನು

ಕೆಲವು ಬಾರಿ ಮಾತ್ರ ಅವರಿಗೆ ಈ ರೀತಿ ಆಜ್ಞಾಪಿಸಲು ಸಾಧ್ಯ, ಅದನ್ನು ಕಳೆದುಕೊಳ್ಳುವುದಿಲ್ಲ.

“ನಿನ್ನ ಹೆಸರಿನ (ಅರ್ಜುನ್ – ಆನಂದ್, ದೇಶಪಾಂಡೆ- ದೇಸಾಯಿ) ಎ ಮತ್ತು ಡಿ ಮಾತ್ರ ಕಾಮನ್ ಆಗಿರುತ್ತದೆ..ಓಕೆ” ಎಂದರು. ಅದು ಹೊಸದರಲ್ಲಿ ಅವರೇ ನಮಗೆ ಗೂಡಚರ್ಯೆಯಲ್ಲಿ ಹೇಳಿಕೊಟ್ಟ ನೀತಿ ನಿಯಮ.

“ಕರೆಕ್ಟ್ ಸರ್. ಹಾಗೇ ಇನ್ನೊಂದು ಉಪಕಾರ ಮಾಡಿಬಿಡಿ. ನಾನು ಇಂದು ಭೇಟಿ ಮಾಡಿದ್ದ ಸೀ ಕ್ರಾಲರ್ ನೌಕೆಯ ಕೆಲವರು ನನ್ನನ್ನು ಗುರುತಿಸಬಹುದು.. ಅಂತರಾಷ್ಟ್ರೀಯ ಮ್ಯಾರಿಟೈಮ್ ಅಥಾರಿಟಿಗೆ ಹೇಳಿ ಆ ನೌಕೆ ಮತ್ತೆ ಈ ಕಡೆ ಸುಳಿಯಬಾರದು,. ಮೆಲ್ಲೋ ದ್ವೀಪದತ್ತ ಬರಬಾರದು ಹಾಗೆ ಅವರ ದಿಕ್ಕು ಬದಲಿಸಲು ನಿಮ್ಮ

ಕಡೆಯಿಂದ ಆಜ್ಞೆ ಹೊರಡಿಸಿ.” ಅದು ಅವರ ಕನೆಕ್ಷನ್ಸ್ ಬಳಸಿ ಆ ಮೂಲಕ ಡಿಪ್ಲೋಮ್ಯಾಟಿಕ್ ಚಾನೆಲ್ಸ್ ಮೂಲಕ ಸಾಧ್ಯ ಎಂದು ನನಗೆ ಗೊತ್ತಿತ್ತು.

ಅವರು ಸಮ್ಮತಿಸಿ ಹೂಂ ಎಂದರು. “ನಿನ್ನ ಮುಖ ಪರಿಚಯದವರು ಯಾರೂ ಆ ದ್ವೀಪದಲ್ಲಿ ಸಿಗದಿದ್ದರೆ ಸಾಕು.ಹ್ಮ್!”

ನಾನು ಸುಮ್ಮನಿದ್ದೆ. ಅಡ್ಮಿರಲ್ ಖನ್ನಾ ಗಂಟಲು ಸರಿಪಡಿಸಿಕೊಂಡರು. ಪಾಪ, ನಡುರಾತ್ರಿಯಲ್ಲಿ ಎದ್ದಿದ್ದಾರೆ ನನಗಾಗಿ. “ಇದು ಬಹಳ ರಿಸ್ಕಿ ಜಾಬ್.ನೀನು ಏನು ಮಾಡುತ್ತಿದ್ದೆಯೆ ಎಂದು ಚೆನ್ನಾಗಿ ಗೊತ್ತು ತಾನೆ?”

ಅದೂ ಅವರು ಕೊನೆಯಲ್ಲಿ ಕೇಳುವ ಪ್ರಶ್ನೆ. ನಾನು ಸಿದ್ಧನಾಗಿದ್ದೆ.

“ಖಂಡಿತಾ ಗೊತ್ತು ಸರ್.. “ಎಂದು ಹೇಳಿ ಅವರಿಗೆ ವಿದಾಯ ಹೇಳಿದೆ. ಆದರೆ ಅದಕ್ಕಿಂತಾ ದೊಡ್ಡ ಸುಳ್ಳು ಇನ್ನೊಂದಿರಲಿಲ್ಲ.. ನನಗೆ ಆ ಹೊತ್ತಿನಲ್ಲಿ ಏನೂ ತಿಳಿದೇ ಇರಲಿಲ್ಲ. ದೊಡ್ಡದೊಂದು ಗುಮಾನಿಯಿತ್ತು ಅಷ್ಟೇ!

3

ಮುಂದಿನ ಎರಡು ದಿನಗಳು ನನಗೆ ಯುಗಗಳಾಗಿ ಕಳೆದದ್ದು ನಿಜ. ನನ್ನ ’ಆನಂದ ದೇಸಾಯಿ’ ಪರಿಚಯದ ವಿವರಗಳು ಸಿದ್ಧವಾಗಿ ನಾನಿದ್ದ ಐ ಎನ್ ಎಸ್ ಜಲಕುಮಾರಿ ನೇವಿ ಹಡಗನ್ನು ಹೆಲಿಕಾಪ್ಟರ್ ಮೂಲಕ ತಲುಪುವುದಕ್ಕೆ. ಆದರೆ ನಾನು ಸಮಯವನ್ನು ವ್ಯರ್ಥವೇನೂ ಮಾಡಲಿಲ್ಲ. ಚೆನ್ನಾಗಿ ತಿಂದು ಕುಡಿದು ನಿದ್ರೆ ಮಾಡಿದೆ..

ಯಾಕೆಂದರೆ ನಾನು ಒಮ್ಮೆ ಇಂತಾ ಮಿಷನ್ ಮೇಲೆ ಹೊರಟೆನೆಂದರೆ ಊಟ ನಿದ್ರೆ ಗಮನಿಸುವುದಿಲ್ಲ. ಇದರ ಬಗ್ಗೆ. ನಮ್ಮಮ್ಮ ಮನೆಗೆ ಹೋದಾಗಲೆಲ್ಲ ನನಗೆ ತುಂಬಾ ಬೈದು ಬುದ್ದಿವಾದ ಹೇಳುವರು.. ಅಲ್ಲ, ಅವರು ಬುದ್ದಿ ಹೇಳುವರು, ನಾನು ವಾದ ಮಾಡುವೆನು! “ನಿನ್ನನ್ನು ಅದ್ಯಾವ ಮಹರಾಯಿತಿ ಕಟ್ಟಿಕೊಂಡು ಸರಿ ಮಾಡುವಳೋ

ಗೊತ್ತಿಲ್ಲ” ಎಂದು ಕೊನೆಗೆ ಗೊಣಗುವರು. “ನೀನು ಅಪ್ಪನನ್ನು ಕಟ್ಟಿಕೊಂಡು ಸರಿ ಮಾಡಿದೆಯಾ?” ಎನ್ನುತ್ತಿದ್ದೆ. ಅಪ್ಪ ತುಂಬಾ ತಿಂಡಿಪೋತರು, ವ್ಯಾಯಾಮ ಮಾಡುವುದಿಲ್ಲ ಎಂಬುದು ಅಮ್ಮನ ಎಂದಿನ ದೂರು. ವಾಯುಸೇನೆಯಿಂದ ನಿವೃತ್ತರಾದ ಅಪ್ಪ ಒಬ್ಬರು ಫುಡ್ಡಿ, ಅವರು ಇವಳ ದೂರಿಗೆಲ್ಲ ಕಿಂಚಿತ್ತೂ ಬೆಲೆ ಕೊಡುವವರಲ್ಲ!

ಹಾಗೆ ಅವರಿಬ್ಬರಿಗೂ ಹತ್ತಿಸಿಬಿಟ್ಟು ನಾನು ಬಚಾವಾಗಿಬಿಡುತ್ತಿದ್ದೆ.

ನಾನು ಮೆಲ್ಲೋಸ್ ದ್ವೀಪದ ಹತ್ತಿರ ನಮ್ಮ ಹಡಗು ನಿಧಾನವಾಗಿ ಸಾಗುತ್ತಿರಲಿ ಎಂದು ಅಜಯ್ ಪಾರ್ಥಸಾರಥಿಗೆ ಸೂಚಿಸಿದೆ. ಅವನು ತನ್ನ ಸ್ನೇಹಿತರನ್ನು ನಾನು ಕೊಲ್ಲಿಸಿದೆನೆಂಬ ನನ್ನ ಮೇಲಿನ ಅಸಮಾಧಾನದಿಂದಲೋ, ಇಲ್ಲ ನಾನೂ ಅಲ್ಲಿಗೇ ಹೋಗಿ ಸಾಯುವೆನೆಂಬ ಊಹೆಯಿಂದಲೋ ನನ್ನ ಮಾತುಗಳಿಗೆ ಉತ್ತರಿಸುವುದು

ಬಿಟ್ಟಿದ್ದ. ಮೌನವಾಗಿ ಹೇಳಿದಂತೆ ಮಾಡುತ್ತಿದ್ದ. ಮೌನಂ ಸಮ್ಮತಿ ಲಕ್ಷಣಂ, ನನ್ನದೇನೂ ದೂರಿರಲಿಲ್ಲ ಈ ಬಗ್ಗೆ.

ನನ್ನ ಪ್ರಕಾರ- ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಕಡೆಯಿಂದ ಬರುತ್ತಿದ್ದ ಮಾದಕದ್ರವ್ಯ ವಸ್ತುಗಳ ದೊಡ್ಡ ದೊಡ್ಡ ಮಾಲುಗಳು ಎಲ್ಲಿಯೋ ಮಾರ್ಗಮಧ್ಯದಲ್ಲಿ ಕಡಲಿನಲ್ಲಿ ಕಾಣೆಯಾಗುತ್ತಿರುವುದಕ್ಕೂ, ಇತ್ತ ದ್ವೀಪಗಳ ಬಳಿಯೇ ನಿಕ್ಕಿ ಮೆಹ್ರಾ ಸುಳಿದಾಡುತ್ತಿರುವುದಕ್ಕೂ ಏನೋ ಸಂಬಂಧವಿರಲೇಬೇಕು. ಆದರೆ ಬ್ರಿಟನ್ನಿನಲ್ಲಿ ಗೌರವಾನ್ವಿತರಾದ ಅವನ ತಂದೆ ಜೆರಾಲ್ಡರ ಸುರಕ್ಷಿತ ನೆರಳಿನಲ್ಲಿ ಇದನ್ನು ಮಾಡುವ ಭಂಡ ಧೈರ್ಯವಿತ್ತೆ ಅವನಿಗೆ? ಅಲ್ಲದೇ ಈ ಅಡ್ಮಿರಲ್ ಡಿಮೆಲ್ಲೋರ ದ್ವೀಪ, ಅವರ ಸುಂದರ ಮಗಳು

ರೀಟಾ, ಮತ್ತು ಅವರ ಕಾರ್ಖಾನೆ ಉದ್ಯಮ ಎಲ್ಲವೂ ಅವನಿಗೆ ಸಾಥ್ ನೀಡುತ್ತಿದೆ ಎಂದು ನಂಬಲು ಯಾವ ಪುರಾವೆಯೂ ಇರಲಿಲ್ಲ. ಅದೇ ನಾನು ಮಾಡಬೇಕಾಗಿದ್ದ ಮುಂದಿನ ತನಿಖೆ.


ನನ್ನ ಬಳಿಯಿದ್ದ ರೀಟಾ ಡಿಮೆಲ್ಲೋಳ ಫೈಲ್ ತೆರೆದು ನೋಡಿದೆ. ಮೊದಲ ನೋಟಕ್ಕೆ ಸೆರೆಹಿಡಿಯುವಂತಾ 25ರ ಆಕರ್ಷಕ ಗೋಧಿವರ್ಣದ ಯುವತಿ. ಮುಗುಳ್ನಕ್ಕರೆ ಕೆನ್ನೆಗುಳಿ ಅಂದವಾಗಿ ಬೀಳುತ್ತಿತ್ತು. ಕಾರವಾರದವರಾದ ಡಿಮೆಲ್ಲೋ ತಮ್ಮೂರಿನ ಹಿಂದೂ ಮಹಿಳೆ ವನಿತಾರನ್ನು ಮದುವೆಯಾದ ನಂತರ ಹುಟ್ಟಿದ ಏಕೈಕ ಸುಪುತ್ರಿ.

ರೀಟಾ. ವಿಶ್ವಸುಂದರಿ ಸ್ಪರ್ಧೆಯಲ್ಲಿ ತನ್ನ ತಂದೆ ತಾಯಿಯರ ಮಾತೃಭೂಮಿ ಭಾರತದ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ನಿರರ್ಗಳವಾಗಿ ಉತ್ತರಿಸಿದ್ದಳಂತೆ. ಆದರೆ ಸ್ಪರ್ಧೆಯಲ್ಲಿ ವಿಜೇತಳಾಗಿರಲಿಲ್ಲ. ಸದ್ಯಕ್ಕೆ ಮಾಡೆಲಿಂಗ್ ಅಲ್ಲದೇ ತಂದೆಯ ಬಿಜಿನೆಸ್ಸ್ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದಳು ಎಂದು ನನ್ನ ಫೈಲ್ ಸಾಕಷ್ಟು

ವಿವರಗಳನ್ನು ನೀಡಿತು. ಹೀಗೇ ಎರಡು ದಿನ ಕಳೆಯಿತು.


4


ಒಂದು ಚಿಕ್ಕ ಮೇಕೆಗಡ್ಡ, ಚಿಕ್ಕ ಬ್ರೌನ್ ಫ್ರೇಮಿನ ಕನ್ನಡಕ ಮತ್ತು ತಲೆಗೂದಲು ಹಿಂದೆ ಬಾಚಿಕೊಂಡಿದ್ದು ನನ್ನನ್ನು ಆನಂದ್ ದೇಸಾಯಿ ಆಗಿ ಪರಿವರ್ತಿಸುವಲ್ಲಿ ಸಾಕಷ್ಟು ಸಫಲವಾಗಿತ್ತು. ನನ್ನ ಕಾಗದ ಪತ್ರ ಗುರುತಿನ ಚೀಟಿಗಳೆಲ್ಲಾ 100% ಪಕ್ಕಾ ಮಾಡಿ ಅಡ್ಮಿರಲ್ ಖನ್ನಾ ಕಳಿಸಿಕೊಟ್ಟಿದ್ದರು. ನನ್ನ ಪಾಸ್‌ಪೋರ್ಟ್, ಆಧಾರ್ ಐಡಿ ಕಾರ್ಡುಗಳಿಗೆ ಹೇಳಿ ಮಾಡಿಸಿದಂತೆ ಸಿಂಗರಿಸಿಕೊಂಡೆ. ಹೊರಡುವ ಮುನ್ನ ಅಜಯ್ ಪಾರ್ಥಸಾರಥಿ ಜತೆ ಚರ್ಚಿಸಿದೆ.

“ಅಜಯ್, ನಾನು ಬರುವುದು ತಡವಾಗಬಹುದು, ಯಾವತ್ತೆಂದು ಹೇಳಲು ಸಾಧ್ಯವಿಲ್ಲ ನೀನು ಇಲ್ಲೇ ಹತ್ತಿರದಲ್ಲಿ ಸುತ್ತುತ್ತಾ ಇರು. ನಾನು ಅವರನ್ನು ಮಾಲು ಸಮೇತ ಹಿಡಿಯಲು ಪ್ರಯತ್ನಿಸಿಸುತ್ತೇನೆ. ನಮ್ಮವರು ಕಳೆದುಕೊಂಡ ಪ್ರಾಣ ಅವರಿಗೆ ದುಬಾರಿಯಾಗಲಿದೆ. ನಿನಗೆ ನಿನ್ನ ಫೈನಲ್ ಮೂವ್ಸ್ ನಮ್ಮ ಆಪರೇಶನ್ ಸ್ಲೀಪಿಂಗ್ ಲಿಲಿ ಏನೆಂದು ಪ್ರಕಾರ ಗೊತ್ತಲ್ಲ?”

“ಗೊತ್ತು ಸರ್” ಅಜಯ್ ತಲೆಯಾಡಿಸಿದ. ಚಿಕ್ಕ ಮುಗುಳ್ನಗೆ ಚೆಲ್ಲಿದ, ತಾನು ನನ್ನಲ್ಲಿ ಪೂರ್ತಿ ವಿಶ್ವಾಸ ಕಳೆದುಕೊಂಡಿಲ್ಲ ಎಂಬಂತೆ. “ನೀವು ಹೋಗಿಬನ್ನಿ..ಆಲ್ ಕ್ಲಿಯರ್, ಗುಡ್ ಲಕ್” ಎಂದು ಕೈ ಕುಲುಕಿದ.

ಒಬ್ಬ ಬಿಜಿನೆಸ್‌ಮನ್ನಿಗೆ ತಕ್ಕಂತೆ ಕಪ್ಪು ಸೂಟ್ ಧರಿಸಿದೆ. ನನ್ನ ಕೋಲ್ಟ್ 0.45 ರಿವಾಲ್ವರ್ ಮಾತ್ರ ಶೂ ಕಾಲು ಚೀಲದಲ್ಲಿ ಅಡಗಿತ್ತು. ಅಲ್ಲಿ ಯಾರೂ ಆ ರೀತಿ ನನ್ನನ್ನು ಚೆಕ್ ಮಾಡುವ ಸಂಭವವಿರಲಿಲ್ಲ. ಸೂಟ್ಕೇಸಿನಲ್ಲಿ ನನ್ನ ಮಿಶನ್ನಿಗೆ ತಕ್ಕ ಅವಶ್ಯಕ ವಸ್ತುಗಳಿದ್ದವು

ನಾನು ಅಲ್ಲಿಗೆ ನೇವಿ ಹೆಲಿಕಾಪ್ಟರಿನಲ್ಲಿ ಹೋಗುವಂತಿರಲಿಲ್ಲ. ನನಗಾಗಿ ಕಮರ್ಷಿಯಲ್ ಫ್ಲೈಟ್ ಹೆಲಿಕಾಪ್ಟರ್ ಒಂದು ಐ ಎನ್ ಎಸ್ ಜಲಕುಮಾರಿಯ ಡೆಕ್ ಮೇಲೆ ಮುಂದಿನ ದಿನವೇ ಪ್ರತ್ಯಕ್ಷವಾಯಿತು

ನಾನು ಮೆಲ್ಲೋ ಈಟರೀಸ್ ಇಂಡಸ್ಟೀಸ್ ಹೆಸರಿನ ಡಿಮೆಲ್ಲೋ ಸಾಹೇಬರ ಕಂಪನಿಗೆ ಸ್ಯಾಟೆಲೈಟ್ ಫೋನ್‌ಕಾಲ್ ಮಾಡಿದೆ.

“ರೀಟಾ ಡಿಮೆಲ್ಲೋ ಹಿಯರ್. ನಿಮಗೆ ಯಾರು ಬೇಕಿತ್ತು?” ಎಂಬ ಮಧುರವಾದ ದನಿ ಸಮುದ್ರದ ಮೇಲೆ ಅಲೆಗಳಂತೆಯೇ ತೇಲಿ ತಲುಪಿತು.

ನಾನು ನನ್ನ ಪರಿಚಯ ಮಾಡಿಕೊಂಡೆ. ನಿಮ್ಮ ಕಂಪನಿ ಜತೆ ನನ್ನ ಮುಂಬೈಯಲ್ಲಿರುವ ಚಾಕೋಲೇಟ್ ಮತ್ತು ಚಿಪ್ಸ್ ಸರಬಾರಾಜುದಾರ ಕಂಪನಿಯ ವ್ಯವಹಾರವನ್ನು ಚರ್ಚಿಸಲು ನಿಮ್ಮಲ್ಲಿಗೆ ಬರಲು ಅನುಮತಿ ಕೊಡಿ ಎಂದೆ.

“ನಿಮ್ಮ ಡ್ಯಾಡಿ ಇಲ್ಲವೆ?”

“ಇಲ್ಲ, ಅಪ್ಪ ಹೊರಗೆ ಗಾಲ್ಫ್ ಆಡುತ್ತಿದ್ದಾರೆ. ಅವರ ಕಚೇರಿಯನ್ನು ನಾನೇ ನೋಡಿಕೊಳ್ಳುವುದು, ನನಗೆ ಹೇಳಿದಿರಲ್ಲ ಸಾಕು. ನಿಮಗೆ ಇಲ್ಲಿ ಮನೆಯಲ್ಲಿ ತಂಗಲು ವಸತಿ ವ್ಯವಸ್ಥೆ ಸಹಾ ಮಾಡುತ್ತೇವೆ.”

“ಪಾಪ, ನಿಮಗೇಕೆ ತೊಂದರೆ?”

ಅವಳು ಕಿಲಕಿಲ ನಕ್ಕಳು, “ನಿಮಗೆ ಬೀಚಿನಲ್ಲೇ ಮಲಗಿ ಅಭ್ಯಾಸವಿದೆಯೆ?”

ನಾನು ಏನೂ ತೋಚದೇ ಸುಮ್ಮನಾದೆ.“ಇಲ್ಲ, ಯಾಕೆ ಕೇಳಿದೆನೆಂದರೆ ನಮ್ಮ ಚಿಕ್ಕ ದ್ವೀಪದಲ್ಲಿ ನಮ್ಮ ಎಸ್ಟೇಟ್ ಬಂಗಲೆ ಫ್ಯಾಕ್ಟರಿ ಬಿಟ್ಟು ಯಾವ ಲಾಡ್ಜ್ ಅಥವಾ ಹೋಟೆಲನ್ನು ಇನ್ನೂ ತೆರೆದಿಲ್ಲ.”

“ಬಹಳ ಧನ್ಯವಾದಗಳು, ಸಂಜೆ 5 ರೊಳಗೆ ಅಲ್ಲಿ ತಲುಪುವೆ.” ಗಡಿಯಾರ ನೋಡಿಕೊಂಡೆ. ಇನ್ನು ಮೂರು ಗಂಟೆ ಸಮಯವಿತ್ತು.

“ನಮ್ಮದೊಂದೇ ದಿಬ್ಬದ ಮೇಲಿನ ಬಿಳಿ ಬಂಗಲೆಯಿರುವುದು, ಅಲ್ಲಿಗೆ ನಡೆದೇ ಬರಬೇಕು, ಆಗುತ್ತದೆಯೆ?” ಅವಳ ದನಿಯಲ್ಲಿ ಕೀಟಲೆಯಿತ್ತು.

“ಪ್ರಯತ್ನಿಸುತ್ತೇನೆ, ಸುಸ್ತಾದರೆ ಸ್ವಲ್ಪ ಗ್ಲುಕೋಸ್ ಕುಡಿಯುತ್ತೇನೆ.” ಎಂದು ನಿಟ್ಟುಸಿರಿಟ್ಟೆ ಅವಶ್ಯಕತೆಗಿಂತ ಹೆಚ್ಚಾಗಿಯೆ!. ನನಗೂ ನಾಟಕೀಯವಾಗಿ ಮಾತಾಡಲು ಬರಲು ಬರುತ್ತದೆ, ನೋಡಿ.

ಈ ಸಂಭಾಷಣೆಯಿಂದ ಒಂದು ಮಾತಂತೂ ಸ್ಪಷ್ಟವಾಗಿತ್ತು.. ಚುರುಕಾಗಿ ಮಾತಾಡಬಲ್ಲ ರೀಟಾ 70ರ ವಯಸ್ಸಿನ ತಂದೆಯ ಕಾರುಬಾರು ನೋಡಿಕೊಳ್ಳುತ್ತಾಳೆ. ಅಲ್ಲಿ ಇನ್ನೂ ನಿಕ್ಕಿ ಮೆಹ್ರಾ ಸದ್ಯಕ್ಕೆ ಬಂದಿಲ್ಲ ಎಂದು ಆಗಲೇ ಬಲ್ಲ ಮೂಲಗಳಿಂದ ಖಚಿತಪಡಿಸಿಕೊಂಡಿದ್ದೆ, ಇನ್ಯಾರಿರಬಹುದು ಗೊತ್ತಿಲ್ಲ.

ಹೋದಮೇಲೆ ಹುಷಾರಾಗಿ ತನಿಖೆ ಮಾಡಬೇಕು ಎಂದು ಮತ್ತೆ ಪುನರುಚ್ಚರಿಸಿಕೊಂಡೆ.

5

ನನ್ನ ಒಬ್ಬನೇ ಪೈಲೆಟ್ ಇದ್ದ ಹೆಲಿಕಾಪ್ಟರ್ ಯಾಂತ್ರಿಕವಾಗಿ ಗೊರಗುಟ್ಟುತ್ತಾ ಹಿಂದೂ ಮಹಾಸಾಗರದ ಮೆಲ್ಲೋಸ್ ದ್ವೀಪದತ್ತ ಸಾಗಿತ್ತು.

ಬೆಚ್ಚನೆಯ ಮಾರುತ ಬೀಸುತ್ತಿದ್ದ ಶಾಂತವಾದ ಅಲೆಗಳ ಮೇಲೆ ಬಿಸಿಲು ಪ್ರತಿಫಲಿಸುತ್ತಿದ್ದ ಈ ಸಾಗರದಲ್ಲಿ ನಡುರಾತ್ರಿಯಲ್ಲಿ ಮಾತ್ರ ಅದೇನು ಕರಾಳ ದಂಧೆ ನಡೆಯುತ್ತಿದೆಯೋ ಹಗಲಲ್ಲಿ ಊಹಿಸಿಕೊಳ್ಳುವುದೂ ಕಷ್ಟವಾಗಿತ್ತು ಎಂದುಕೊಂಡೆ. ಮಧ್ಯಾಹ್ನದ ಬಿರುಬಿಸಿಲಿಗೆ ಕಣ್ಣು ಕೋರೈಸಿದಂತಾಗಿ ಕೈ ಅಡ್ಡ ಇಟ್ಟು ಪೈಲೆಟ್ಟಿಗೆ ಕೇಳುವಂತೆ ಹಡ್ಫೋನಲ್ಲಿ ಕೇಳಿದೆ,

“ಇನ್ನು ಎಷ್ಟು ಹೊತ್ತಾಗಬಹುದು?”

“ಹದಿನೈದು ನಿಮಿಷ ಇ. ಟಿ. ಎ” ಎಂದ ಪೈಲೆಟ್, ದೂರ ದಿಗಂತದಲ್ಲಿ ಕಾಣುತ್ತಿದ್ದ ಹಸಿರನ್ನು ತೋರುತ್ತಾ.

6


ಮೆಲ್ಲೋಸ್ ದ್ವೀಪ ಇರತಕ್ಕ ಕಾಲ್ಪನಿಕ ನಕ್ಷೆ


ನೀರಲ್ಲಿ ಮೀನಿನಂತೆ ಈಜಬಲ್ಲ ನಾನು ದಿಬ್ಬ ಹತ್ತಿ ಡಿಮೆಲ್ಲೋ ಬಂಗಲೆಗೆ ಹೋಗಲು ಸ್ವಲ್ಪ ಶ್ರಮಪಟ್ಟಿದ್ದು ಸುಳ್ಳಲ್ಲ. ಹೆಲಿಕಾಪ್ಟರ್ ನನ್ನನ್ನು ಕೆಳಗಿನ ಬೀಚಿನಲ್ಲಿ ಇಳಿಸಿ ಹಾರಿಹೋದಾಗ ಬಿರುಬಿಸಿಲು. 35 ಡಿಗ್ರೀ ಉಷ್ಣಾಂಶ ಮತ್ತು ಸಮುದ್ರದ ಹಬೆ ತಡೆದುಕೊಂಡು ನನ್ನ ಸೂಟ್‌ಕೇಸ್ ಸಮೇತ ಏದುಸಿರು ಬಿಡುತ್ತಾ ತಲುಪಿದಾಗ

ಬಂಗೆಲೆಗಿದ್ದ ವಿದ್ಯುತ್ ಸುರಕ್ಷಣಾ ಬೇಲಿ, ನೀಟಾಗಿ ಬೆಳೆದ ಟ್ರಿಮ್ ಮಾಡಿದ ಗಾರ್ಡನ್ ವೀಕ್ಷಿಸಿದೆ. ಆಫ್ರಿಕನ್ ತೋಟಗಾರರು ಅಲ್ಲಲ್ಲಿ ಕುಳಿತು ಸಸಿ ಮತು ಹೂ ಗಿಡಗಳ ಕೆಲಸ ಮಾಡುತ್ತಿದ್ದುದು ಕಂಡಿತು.

ನೀಲಿ ಸಮವಸ್ತ್ರ ಧರಿಸಿದ ಆಫ್ರಿಕನ್ ಕರಿಯ ಗಾರ್ಡ್ ನನ್ನನ್ನು ಸಮೀಪಿಸಿದ. ಅವನು ಮಾತಾಡುವ ಮೊದಲೆ ನನಗೆ ಬಿಯರ್ ವಾಸನೆ ಗಪ್ಪೆಂದು ಬಡಿಯಿತು. ಹಣೆಯಲ್ಲಿ ಮಣಿಗಟ್ಟಿದ ಬೆವರನ್ನು ಒರೆಸಿಕೊಳ್ಳುತ್ತಾ ಗೇಟಿನ ಬಳಿ ನಿಂತವನು, “ಹೆಲೋ, ಬಾಸ್. ಯೂ ಆರ್ ಆನಂಡ್ ಡೆಸಾಯ್?” ಎಂದ.

“ಹೌದು, ನಾನಲ್ಲದಿದ್ದರೆ ನನ್ನ ಬೆವೆತ ಭೂತ ಅಂದುಕೋ”

ತನ್ನ ಬಿಳಿ ಹಲ್ಲುಗಳನ್ನು ಪ್ರದರ್ಶಿಸಿ ನಕ್ಕ.

“ಓಲ್ಡ್ ಮ್ಯಾನ್ ಡಿಮೆಲ್ಲೋ ನಿಮಗಾಗಿ ಕಾಯುತ್ತಿದ್ದಾರೆ. ಒಳಗೆ ಹೋಗಿ”

ನಾನು ನೀಟಾಗಿ ನಿರ್ವಹಿಸಿದ್ದ ಬಿಳಿ ಬಂಗಲೆಯ ದೊಡ್ಡ ಪೋರ್ಟಿಕೋ ದಾಟಿ ಒಳಹೋದೆ. ಇಲ್ಲಿಂದ್ಳು ದೂರದ ಆಳೆತ್ತರದ ಸ್ವಚ್ಚ ಗಾಜಿನ ಕನ್ನಡಿಗಳಲ್ಲಿ ಮೊರೆಯುವ ಸಾಗರದ ಅಲೆಗಳ ಆಟ ಕಾಣುತಿತ್ತು.

ಹಳೇ ಬ್ರಿಟಿಷರ ಕಾಲದ ಆಸನಗಳು, ಗೋಡೆಗೆ ನೇತುಹಾಕಿದ್ದ ತೈಲಚಿತ್ರಗಳಿದ್ದ ಹಾಲಿನ ಮೂಲೆಯಲ್ಲಿ ಒಂದು ಬಾರ್ ಕೌಂಟರಿನಲ್ಲಿ ನೀಲಿ ಜೀನ್ಸ್ ಬಿಳಿ ಟೀಶರ್ಟ್ ಧರಿಸಿದ್ದ ನಿವೃತ್ತ ವೃದ್ಧರು ನನ್ನತ್ತ ತಮ್ಮ ಗ್ಲಾಸ್ ಎತ್ತಿ ಸ್ವಾಗತಿಸಿದರು

“ಕಮಿನ್ ಯಂಗ್ ಮ್ಯಾನ್, ಕುಳಿತಿಕೋ ಬಾ” ಎಂದವರ ಎದುರಿನ ಸೀಟಿನಲ್ಲಿ ನಾನು ಕುಸಿದು ಕುಳಿತೆ.

ನನ್ನತ್ತ ಅರ್ಥಗರ್ಭಿತವಾಗಿ ನೋಡಿದವರು, “ಹ್ಯಾವ್ ಎ ಡ್ರಿಂಕ್..? “ಎಂದು ತನ್ನ ವಿದೇಶಿ ಮದ್ಯದ ಶೀಷೆಗಳಿಂದ ತುಂಬಿದ್ದ ಕಪಾಟನ್ನು ತೋರಿದರು. ಅವರ ಬಾಯಿಯ ತುದಿಯಲ್ಲಿ ಉರಿಯುತ್ತಿದ್ದ ಚುಟ್ಟಾ ಕುಣಿಯಿತು. ಅವರ ಕೈಯಲ್ಲಿದ್ದ ವಿಸ್ಕಿ ಗ್ಲಾಸ್ ಅರ್ಧ ಖಾಲಿಯಾಗಿತ್ತು.

“ನಾನು ಡ್ಯೂಟಿಯಲ್ಲಿ ಮದ್ಯ ಕುಡಿಯಲ್ಲ.. ಆರೆಂಜ್ ಅಥವಾ ನಿಂಬೂ ಸೋಡಾ ಆಗಬಹುದು.” ಎಂದು ಕೋಟ್ ಬಟನ್ಸ್ ಬಿಚ್ಚಿ ಉಫ್ಹ್ ಎಂದು ಊದಿಕೊಂಡೆ

“ಐ ಕೆನ್ ಗೆಸ್. ನೀವು ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿರಬಹುದು. ನಿಮ್ಮ ಬಿಝಿನೆಸ್ಸ್ ಬಗ್ಗೆ ರೀಟಾ ಹೇಳಿದಳು” ಎಂದು ಭುಜ ಕುಣಿಸಿದರು ಡಿಮೆಲ್ಲೋ..

“ನೇವಿಯಲ್ಲ, ಬರೇ ಮರ್ಚೆಂಟ್. ವಾಣಿಜ್ಯೋದ್ಯಮದ ನೌಕರ ಸರ್” .ಸುಳ್ಳಿಗೆ ಅಡಿಪಾಯ ಹಾಕಿದೆ.

ನಾನು ಸಿದ್ಧಪಡಿಸಿಕೊಂಡು ಬಂದಿದ್ದ ನನ್ನ ನಕಲಿ ಕಂಪನಿ ಪುರಾಣವನ್ನು ಮುಂದಿನ ಅರ್ಧ ಗಂಟೆ ಕಾಲ ಬಿಚ್ಚಿದೆ.

ಅವರು ತಮ್ಮ ಏಷ್ಯಾ ಮತ್ತು ಯೂರೋಪಿನಲ್ಲಿ ಜನಪ್ರಿಯವಾಗಿರುವ ಮೆಲ್ಲೋ ಬ್ರಾಂಡಿನ ಚಾಕೋಲೇಟ್- ಚಿಪ್ಸ್ ಬಗ್ಗೆ ಹೇಳುತ್ತಾ ಹೋದರು. ನಾನು ಅವರನ್ನು ನಮ್ಮ ಕಂಪನಿ ಜತೆ ಒಪ್ಪಂದ ಮಾಡಿಕೊಂಡರೆ ನಿಮ್ಮ ಮಾರುಕಟ್ಟೆ ವಿಸ್ತರಿಸಬಹುದು, ಲಾಭ ಹಲವು ಪಟ್ಟು ಆಗುತ್ತದೆ ಎಂದೆಲ್ಲಾ ಹೇಳುತ್ತಾ ಹೋದೆ. ನಾನು ಉತ್ತಮ

ಮಾರ್ಕೆಟಿಂಗ್ ಆಫೀಸರ್ ಹೌದೋ ಅಲ್ಲವೋ ಆದರೂ ಸುಮಾರಾಗಿ ಚೆನ್ನಾಗಿಯೇ ನಾಟಕವಾಡಿದೆನೇನೋ. ಏಕೆಂದರೆ ನಮ್ಮ ಚರ್ಚೆಯ ಮಧ್ಯೆ ರೀಟಾ ಅಲ್ಲಿಗೆ ಬಂದು ಎದುರಿನ ಸೀಟಿನಲ್ಲಿ ಶಾಂತವಾಗಿ ಕೇಳುತ್ತಾ ಕುಳಿತಳು. ಸುಮಾರು ಐದು ಅಡಿ ಎಂಟಿಂಚು ಎತ್ತರದ ಸಪೂರ ಮೈಕಟ್ಟಿನ ಚೆಲುವೆ.. ಆದರೆ ಕಣ್ಣಿಗೆ ರಾಚುವಂತಾ ಮೈ

ಪ್ರದರ್ಶನ ಬೀರದೇ ಬಿಳಿ ಮತ್ತು ನೀಲಿ ಹೂವಿನ ಸೌಮ್ಯ ಸಮ್ಮರ್ ಗೌನ್ ತೊಟ್ಟು ಬಂದಿದ್ದಳು. ತಿಳಿ ಬ್ರೌನ್ ಬಣ್ಣಕ್ಕೆ ಡೈ ಮಾಡಿಕೊಂಡಿದ್ದ ನೀಳಕೂದಲು ಹೆಗಲ ಮೇಲೆ ಅತ್ತತ್ತ ತಳ್ಳಿಕೊಳ್ಳುತ್ತಿದ್ದಳು, ಅದು ಬಿಸಿಲನಲ್ಲಿ ಹೊಂಬಣ್ಣದಂತೆ ಹೊಳೆಯುತಿತ್ತು. ಇದಕ್ಕಿಂತಾ ಹೆಚ್ಚಾಗಿ ದಿಟ್ಟಿಸಿ ನೋಡಿದರೆ ನಾನು ನನ್ನ ಸ್ವಂತಿಕೆ ಕಳೆದುಕೊಂಡು

ಅವಳಿಗೆ ಮಾರುಹೋಗಿದ್ದೇನೆಂಬ ಸೈಕಲಾಜಿಕಲ್ ಲಾಭ ಆಕೆಗೆ ಬರಬಾರದು ನೋಡಿ. ಹಾಗಾಗಿ ನನ್ನ ಗಮನವನ್ನು ಡಿಮೇಲ್ಲೋ ಸಾಹೇಬರ ಉರಿಯುತ್ತಿದ್ದ ಚುಟ್ಟಾ ತುದಿಯ ಮೇಲೆ ಹೂಡಿದೆ. ಮಧ್ಯೆ ಮಧ್ಯೆ ನಿಂಬೂ ಸೋಡಾವನ್ನು ಖಾಲಿ ಮಾಡಿದೆ. ರೀಟಾ ಮರುಮಾತಿಲ್ಲದೇ ಇನ್ನೊಂದು ಗ್ಲಾಸ್ ತಂದುಕೊಟ್ಟು ತಾನೂ ಅದನ್ನೇ ಕುಡಿಯುತ್ತಾ “ಮಾತು ಮುಂದುವರೆಸು” ಎಂದು ಕಣ್ಸೂಚನೆಯಲ್ಲೇ ಹೇಳಿದಳು.

ಕೊನೆಗೆ ಎಲ್ಲಾ ಮುಗಿಸಿ ಪೇಪರ್ಸ್ ಅವರ ಕೈಯಲ್ಲಿತ್ತೆ, ಅವರು ಮಗ್ನರಾಗಿ ಓದುತ್ತಿದ್ದಾಗ, ಗಮನ ಬೇರೆಡೆ ಸರಿಸಿದೆ.

ದೂರದ ಗೋಡೆಯಲ್ಲಿ ಒಬ್ಬ ಭಾರತೀಯ ಮಧ್ಯವಯಸ್ಕ ಕನ್ನಡಕಧಾರಿಣಿಯ ಫೋಟೊಗೆ ಶ್ರೀಗಂಧದ ಹಾರವಿತ್ತು

“ಮಮ್ಮಿ?” ಎಂದೆ.

“ಹೌದು.ಇದು ಅಪ್ಪ ತೆಗೆದುಕೊಂಡಿರುವ ಒಂದೇ ಸರಿಯಾದ ಫೋಟೋ. ಅವರಿಗೆ ಫೋಟೊಗ್ರಫಿ ಬರಲ್ಲ..”

ವಿಶ್ವಸುಂದರಿ ಸ್ಪರ್ಧೆಗೆ ಹೋದವರಿಗೆ ಈ ರೀತಿ ಇತರರ ಬಗ್ಗೆ ‘ಫೋಟೋ ಕಾಂಪ್ಲೆಕ್ಸ್’ ಇರಬಹುದೇನೋ!.

“ಮಮ್ಮಿ ಮತ್ತು ಅಪ್ಪಾ?” ನಾನು ಹುಬ್ಬೇರಿಸಿದೆ. “ಮಮ್ಮಿ ಡ್ಯಾಡಿ, ಅಮ್ಮ ಅಪ್ಪ ಯಾಕಲ್ಲ?”

“ಮಮ್ಮಿ ಎಂದು ಅಪ್ಪ ಹೇಳಿಕೊಟ್ಟರು, ಅಪ್ಪಾ ಎಂದು ಮಮ್ಮಿ ಹೇಳಿಕೊಟ್ಟರು.!” ಸರಳವಾಗಿ ನಕ್ಕಳು. ಬಿಸಿಲಿನಲ್ಲಿ ಅವಳ ಹಲ್ಲುಗಳು ಮಿಂಚಿದವೋ, ಅಥವಾ ಅದು ನನ್ನ ಕಲ್ಪನೆಯೋ ತಿಳಿಯದು. ಅರೆ ಹಿಂದೂ-ಅರೆ ಕ್ರಿಶ್ಚಿಯನ್ ಸಂಪ್ರದಾಯದ ವೈಚಿತ್ರ್ಯ.

“ಇದೆಲ್ಲಾ ಸರಿಯಾಗೇ ಇದೆ” ಎಂದರು ಡಿಮೆಲ್ಲೋ ಸಾಹೇಬರು ಕನ್ನಡಕ ಸರಿಪಡಿಸಿಕೊಂಡರು ಪೇಪರ್ಸ್ ಪಕ್ಕಕ್ಕಿಡುತ್ತಾ. “ಆದರೆ ನಾವು ಬಿಜೀನೆಸ್ಸ್ ನಿರ್ಧಾರಗಳು ತೆಗೆದುಕೊಳ್ಳುವಾಗ..”

ಅದನ್ನು ಮಧ್ಯದಲ್ಲೇ ತಡೆದ ರೀಟಾ,

“ನಮ್ಮ ಪಾರ್ಟ್ನರ್ ನಿಕ್ಕಿ ಮೆಹ್ರಾ ಇಲ್ಲದೇ ಆಗುವುದಿಲ್ಲ” ಎಂದಳು ಆ ನಿಂಬೂ ಸೋಡಾದಷ್ಟೇ ತಣ್ಣನೆಯ ದನಿಯಿಂದ. ಆ ವ್ಯಂಗ್ಯ ಅರ್ಥ ಆಗದ ಅಪ್ಪ ನಗುತ್ತಾ ಸಮ್ಮತಿಸಿ ತಲೆಯಾಡಿಸಿದರು.

“ನಿಕ್ಕಿ ಮೆಹ್ರಾ ನಿಮ್ಮ ಪಾರ್ಟ್ನರ್ ಮಾತ್ರ ಏನು? ನಾನು ಲಂಡನ್ನಿನ ಪತ್ರಿಕೆಗಳಲ್ಲಿ ಓದಿದ ಹಾಗೆ ಆತ ನಿಮ್ಮ ಬಾಯ್‌ಫ್ರೆಂಡ್ ಸಹಾ ಅಂತೆ, ಅಲ್ಲವೆ?” ಎಂದು ನಾನು ಕೀಟಲೆ ದನಿಯಲ್ಲಿ ಕೇಳಿದೆ.

“ಹಾಗೆ ಮತ್ತೊಮ್ಮೆ ಹೇಳಿದರೆ ಹಲ್ಲುದಿರಿಸಿಬಿಡುತ್ತೇನೆ..” ಎನ್ನುತ್ತಾ ಇದ್ದಕ್ಕಿಂದ್ದಂತೇ ಭುಗಿಲೆದ್ದ ರೀಟಾ ಹೇಗೋ ಸಂಬಾಳಿಸಿಕೊಂಡು,” ಅವನದು, ನಿಮ್ಮದಲ್ಲ..” ಎಂದು ಕ್ಷೀಣದನಿಯಲ್ಲಿ ಸ್ಪಷ್ಟೀಕರಣ ಇತ್ತಾಗ ನಾನೂ ಬಿಗು ವಾತಾವರಣ ಲಘುವಾಗಿಸಲು ನಕ್ಕೆ.

ಆ ಪುಕಾರು ಒಂದು ಚೂರೂ ಇಷ್ಟವಿಲ್ಲ ಅವಳಿಗೆ, ಹಾಗಾದರೆ. ಒಮ್ಮೊಮ್ಮೆ ಹೀಗೆ ರೇಗಿಸುವುದರಲ್ಲೂ ತನಿಖೆಗೆ ಲಾಭವಿದೆ!

“ಅವನಿಂದ ನನಗೆ ಬಹಳ ಲಾಭವಾಗಿದೆ. ಬಿಜಿನೆಸ್ಸ್ ದುಪ್ಪಟ್ಟಾಗಿದೆ.. ಈ ನಿರ್ಜನ ದ್ವೀಪದಲ್ಲಿ ನನಗೋಸ್ಕುರ ಫ್ಯಾಕ್ಟರಿ ತೆಗೆಯಲು ವ್ಯವಸ್ಥೆ ಮಾಡಿಕೊಟ್ಟವರೇ ಅವರ ಅಪ್ಪ ಜೆರಾಲ್ಡ್ ಮತ್ತು ಈ ನಿಕ್ಕಿ” ಎಂದರು ಡಿಮೆಲ್ಲೋ ಮಗಳ ದಾಳಿಯಿಂದ ನಿಕ್ಕಿ ಮೆಹ್ರಾನ ಮಾನ ಕಾಪಾಡಲೆಂದೋ ಏನೋ.

“ಅವನು ಕಂಪನಿಯ ಕೆಲಸಗಳನ್ನು, ಮಾಲು ಸರಬಾರಜನ್ನೂ ಸಮರ್ಥವಾಗಿ ಮಾಡುತ್ತಿರುವುದರಿಂದ ನಮಗೆ ಬೇಕಾದವನೇ ಆಗಿದ್ದಾನೆ..ಅದು ನಿಜ.” ಎಂದು ಮೆಲು

ದನಿಯಲ್ಲಿ ಒಪ್ಪಿದಳು ರೀಟಾ. ಅಪ್ಪನೊಂದಿಗೆ ಅಪರಿಚಿತರ ಮುಂದೆ ತಕಾರಾರೇಕೆ ಎಂದಿರಬಹುದು ಎಂದು ನಾನು ಊಹಿಸಿದೆ.

“ನಿಕ್ಕಿ ಬರುವುದು ಮುಂದಿನ ವಾರವೇ ಅಲ್ಲವೇ ಅಪ್ಪಾ?.” ಎಂದು ರಾಗವೆಳೆದಳು, ರೀಟಾ.

“ಹೌದೌದು” ಎಂದು ತಲೆಕುಣಿಸಿದರು ಡಿಮೆಲ್ಲೋ. “ಈಗ ಮೂರು ದಿನದ ಹಿಂದೆ ದಕ್ಷಿಣ ಅಮೇರಿಕಾ ಕಡೆಯ ಮಾಲುಗಳನ್ನು ಸಾಗಿಸಲು ನಮ್ಮ ಶಿಪ್ ತೆಗೆದುಕೊಂಡು ಹೋದನಲ್ಲವೆ?”

“ಹಾಗಾದರೆ ಬಹಳ ಹೆಚ್ಚಿನ ಲಾಭ ಬರುವುದರಲ್ಲಿ ಸಂದೇಹವೇ ಇಲ್ಲ” ಎಂದು ನಾನು ದನಿಗೂಡಿಸಿದೆ. ದಕ್ಷಿಣ ಅಮೇರಿಕಾ ಕಡೆಯಿಂದ ಅಫೀಮು ಗಾಂಜಾ ಮುಂತಾದ್ದವು ಹೇರಳವಾಗಿ ಸರಬರಾಜು ಆಗುತ್ತವೆವೆಂದು ನನಗೆ ಆಗಲೇ ಗೊತ್ತಿತ್ತು. ಅದು ಜಗತ್ತಿನ ಮಾದಕ ದ್ರವ್ಯ ಜಾಲದ ಉಗಮ ಸ್ಥಾನದಂತೆ.ಅಡ್ಮಿರಲ್ ಖನ್ನಾ ಸಹಾ ಹಾಗೇ ನಂಬಿದ್ದರು.

ಆದರೆ ಇಬ್ಬರೂ ನಿಕ್ಕಿಯನ್ನು ಪೂರ್ತಿ ನಂಬಿದವರಂತೆ ತಲೆಯಾಡಿಸಿದ್ದರು. ಅವರಿಗೆ ಯಾವ ವಂಚನೆಯ ಸುಳಿವೂ ಇಲ್ಲವಲ್ಲ?.ನನ್ನ ಊಹೆ ನಿಕ್ಕಿ ಬಗ್ಗೆ ನಿಜವೆ ಸುಳ್ಳೆ?..

ನಾನು ಇವರನ್ನು ನಂಬಿಸಲು ಮಾಡಬೇಕಾದ ಕೆಲಸ ಎಷ್ಟು ಕ್ಲಿಷ್ಟಕರ ಎಂದು ಅರಿವಾಗಹತ್ತಿತು.

ಡಿಮೆಲ್ಲೋ ನನಗೆ ಅಲ್ಲೇ ಇಳಿದುಕೊಳ್ಳಲು ಒಂದು ಗೆಸ್ಟ್ ರೂಮಿನಲ್ಲಿ ಅವಕಾಶ ಕೊಟ್ಟರು. ಅತಿಥಿಗಳ ರೂಮಿಗೇನೂ ಬರವಿರಲಿಲ್ಲ ಆ ಬಂಗಲೆಯಲ್ಲಿ. ಅತಿಥಿಗಳಾಗಿ ಬರುವವರದೇ ಬರವೇನೋ. ವಿಶಾಲ ಹಿಂದೂ ಸಾಗರದ ನಕ್ಷೆಯಲ್ಲಿ ಕಾಣುವ ಚಿಕ್ಕ ಬೊಟ್ಟಿನಂತಾ ದ್ವೀಪದಲ್ಲಿ. ರೀಟಾ ಸಮಯ ಕಳೆದಂತೆ ಸ್ವಲ್ಪ ಸ್ಟ್ರಿಕ್ಟ್ ಆದರೂ

ನಿಧಾನವಾಗಿ ಸ್ನೇಹಪರ ಯುವತಿ ಎನಿಸತೊಡಗಿತು. ಆಕೆಯ ಸ್ನೇಹಿತರು ಯೂರೋಪ್ ಮತ್ತು ಏಷ್ಯಾದಲ್ಲಿದ್ದು ಆಕೆ ಅಲ್ಲಿ ಹೋದಾಗ ಮಾತ್ರ ಸಂಧಿಸಬಹುದಾಗಿತ್ತು. ಹಾಗಾಗಿ ಬೇಗ ಸ್ನೇಹಿತರನ್ನು ಮಾಡಿಕೊಂಡು ಅಭ್ಯಾಸವಿರಲಾರದು. ನನಗೂ ಅಂತಾ ಅವಸರವೇನಿರಲಿಲ್ಲ. ಸದ್ಯಕ್ಕೆ ನನ್ನ ನಕಲಿ ವ್ಯಕ್ತಿತ್ವವನ್ನು ನಂಬಿದರೆ ಸಾಕಾಗಿತ್ತು.

ಅಂದು ರಾತ್ರಿ 9ಕ್ಕೆ ನಾನು, ಡಿನ್ನರ್ ಮುಗಿಸಿದ ಅಪ್ಪ ಮಗಳು ಮತ್ತು ಸಿಬ್ಬಂದಿಯವರು ನಿದ್ರೆಗೆ ತೆರಳಿದ ಮೇಲೆ ನನ್ನ ಕಿಟಕಿಯಯ ಗಾಜನ್ನು ತೆಗೆದು ಮೊದಲನೆಯ ಮಹಡಿಯಿಂದ ಹೊರಬಿದ್ದೆ. ಗಾರ್ಡ್ ಮತ್ತು ನಾಯಿ ಸಹಾ ಊಟಕ್ಕೆಂದು ಕ್ವಾರ್ಟರ್ಸ್ ಕಡೆಗೆ ತೆರಳಿದ್ದನ್ನು ರೂಮಿಂದಲೇ ಗಮನಿಸಿದ್ದೆ, ಅವರಿದ್ದ ಈ ದ್ವೀಪದಲ್ಲಿ ಸೆಕ್ಯುರಿಟಿ ಒಂದು ಸಾಮಾನ್ಯ ಮತ್ತು ಅವಶ್ಯಕ ಕರ್ತವ್ಯವಾಗಿದ್ದೀತು, ನಿಜಕ್ಕೂ ಅದನ್ನು ಮುರಿಯುವವರು ಆ ದ್ವೀಪದಲ್ಲಿ ಯಾರೂ ಇರಲಿಲ್ಲ . ನಾನಂತೂ ಹುಲ್ಲಿನ ಮೇಲೆ ತಲೆಬಗ್ಗಿಸಿ ಹೊರಕ್ಕೆ ಓಡುತ್ತಾ ಹೋದೆ.

ಕಾಂಪೌಂಡ್ ಗೋಡೆಯ ಮೂರು ಕಡೆ ವಿದ್ಯುತ್ ಬೇಲಿ ಹಾಕಿದ್ದರೂ ನಾಲ್ಕನೆಯ ಎಡಭಾಗಕ್ಕೆ ಮಾತ್ರ ಸಾಧಾರಣ ಬೇಲಿ ಹಾಕಿದ್ದರು. ಏಕೆಂದರೆ ಆ ಕಡೆ ಕಣಿವೆಯಿದ್ದು ಸೀದಾ 40 ಅಡಿ ಕೆಳಗಿನ ಬೀಚ್ ಕಡೆಗೆ ಬೀಳಬಹುದಾಗುತ್ತು. ಅಲ್ಲಿಗೆ ಬುದ್ದಿ ಸರಿಯಾಗಿರುವವರು ಯಾರೂ ಹೋಗುವುದಿಲ್ಲ ಎಂದು ಡಿಮೆಲ್ಲೋ ಮನೆಯವರಿಗೆ ನಂಬಿಕೆಯಿದ್ದಿರಬೇಕು. ಆದರೆ ನನ್ನಂತವನನ್ನು ಅವರು ನಿರೀಕ್ಷಿಸಿರಲಾರು. ಬುದ್ದಿವಂತರು ವಹಿಸುವ ಯಾವುದೇ ಎಚ್ಚರಿಕೆ ನಾನು ವಹಿಸುವುದಿಲ್ಲವಲ್ಲ!

7

ರಾತ್ರಿ ಹೊತ್ತು ಲೈಟ್ ಇಲ್ಲದೇ ಹಗ್ಗವನ್ನು ಇಳಿಬಿಟ್ಟು ಕೆಳಗಿನ ಕಲ್ಲಿಗೆ ಲಾಕ್ ಮಾಡುವ ಕ್ರಮ ಸುಲಭವಾದ್ದೇನೂ ಅಲ್ಲ. ಆದರೆ ನಾನು ಮನೆಗೆ ಪ್ರವೇಶಿಸುವ ಮುನ್ನ ಒಂದು ಬೋರಲು ಹಾಕಿದ್ದ ಹೂ ಮಡಕೆಯಡಿ ಅಂತಹ ಹಗ್ಗದ ಗೊಂಚಲನ್ನು ಇಟ್ಟು ತಾನೇ ಒಳಗೆ ಹೋಗಿದ್ದೆ.? ಅದನ್ನು ಯಾರಿಗೂ ತಿಳಿಸಿರಲಿಲ್ಲ, ರಹಸ್ಯವಾಗಿರಲಿ ಎಂದು. ಅದನ್ನು ಬಳಸಿ ವೈರ್ ಕಟ್ಟರ್ ನಿಂದ ಬೇಲಿ ಕಡಿದು ಬೆಟ್ಟದ ಬದಿಯ ಮೇಲೆ ಇಳಿಯುತ್ತಾ ಕೆಳಗಿನ ಸಮುದ್ರತಟಕ್ಕಿಳಿದೆ.

ಮರಗಳ ಕತ್ತಲ ನೆರಳಲ್ಲಿ ಬೆಕ್ಕಿನ ಹೆಜ್ಜೆಯಲ್ಲಿ ಉತ್ತರ ದಿಕ್ಕಿಗೆ ಓಡತೊಡಗಿದೆ. ನಾವು ಹೆಲಿಕಾಪ್ಟರಿನಲ್ಲಿ ಈ ದ್ವೀಪಕ್ಕೆ ಇಳಿಯುವಾಗ ಒಂದೇ ಒಂದು ಫ್ಯಾಕ್ಟರಿಯ ಶೆಡ್ ಅದೇ ದಿಕ್ಕಿನ ಅನತಿ ದೂರದ ಇನ್ನೊಂದು ದ್ವೀಪಲ್ಲಿದ್ದುದದನ್ನು ಗಮನಿಸಿ ಮನದಲ್ಲೇ ಗುರುತು ಮಾಡಿಕೊಂಡಿದ್ದೆ. ಆಗಲೇ ಸ್ಕ್ಯೂಬಾ ಈಜುಡುಪು ಧರಿಸಿ ರೂಮಿಂದ

ಹೊರಟಿದ್ದರಿಂದ ಸರಕ್ಕನೆ ಸಮುದ್ರಕ್ಕೆ ಡೈವ್ ಮಾಡಿ ನೀರಿನಡಿ ಈಜುತ್ತಾ ಹೋದೆ. ಕತ್ತಲಲ್ಲಿ ಕಡಲಲಿನಲ್ಲಿ ಈಜಿ ಎಲ್ಲೋ ತಲುಪುವುದು ನನಗೆ ಹೊಸದಲ್ಲದಿದ್ದರೂ, ಸುಖಕರವೆಂದು ಯಾವಾಗಲೂ ಅನಿಸಿದ್ದೇ ಇಲ್ಲ. ಅದರೆ ನಾನು ಇದಕ್ಕೆ ಸಂಬಳ ತೆಗೆದುಕೊಳ್ಳುತ್ತೇನೆ. ಪ್ರಾಣ ಬಿಡಲೂ ಸಹಾ? ಎಂದು ಕೇಳಬೇಡಿ. ನಾನೆಂದೂ ಆ ಪ್ರಶ್ನೆಯನ್ನು ಭಾರತೀಯ ನೇವಿಗೆ ಕೇಳಿರಲಿಲ್ಲ.

ಆ ದಡ ತಲುಪಿ ಮತ್ತೆ ಇರುಳಿನ ಬೆಳದಿಂಗಳನ್ನೇ ಆಧಾರವಾಗಿಟ್ಟುಕೊಂಡು ಮತ್ತೆ ಮೆಲ್ಲೋ ಈಟರೀಸ್ ಇಂಡಸ್ಟ್ರೀಸ್ ಎಂದು ಬರೆದಿದ್ದ ಮೆಟಲ್ ಶೀಟಿನ ಎರಡು ಶೆಡ್ದುಗಳ ಸಮೀಪಕ್ಕೆ ಓಡಿದೆ. ಹೊರಗಿನ ಬೇಲಿ ಗಟ್ಟಿಯಾಗಿತ್ತು, ಆದರೆ ಕೆಳಗಿನ ಮರಳು ಒದ್ದೆಯಾಗಿ ಕೈಯಿಂದ ಕೆತ್ತಬಹುದಾಗಿತ್ತು. ಹೆಗ್ಗಣದ ಗೂಡಿನಂತೆ ಮರಳು ಬಗೆದು

ನುಸುಳುತ್ತಾ ಅತ್ತ ನುಗ್ಗಿದೆ.. ಟಾರ್ಚ್ ಹಿಡಿಸು ಗಸ್ತು ತಿರುಗುತ್ತಿದ್ದ ಗಾರ್ಡ್ ಬಂದಾಗ ಉಸಿರು ಬಿಗಿಹಿಡಿದು ಗೋಡೆಪಕ್ಕದ ಕಂಬದ ನೆರಳಲ್ಲಿ ಅಡಗಿ ನಿಂತೆ. ಈ ದ್ವೀಪದ ಗಾರ್ಡುಗಳೆಲ್ಲಾ ಹೆಂಡ ಕುಡಿದು ತೂರಾಡುತ್ತಾ ಡ್ಯೂಟಿ ಮಾಡಲು ಬಂದಂತಿದೆ. ಅವರಿಗೆ ಯಾರೂ ಸುಳಿಯದ ಈ ನಿರ್ಜನ ದ್ವೀಪ ತಮ್ಮ ಸೋಮಾರಿತನವನ್ನು ಸಹಜವಾಗಿಯೇ ಹೆಚ್ಚಿಸಿರಬೇಕು.

ಹೆಚ್ಚು ಕಾಯಿಸದೇ ಚಿಕ್ಕದಾಗಿ ಹೇಳಿಬಿಡುತ್ತೇನೆ: ನಾನು ಗೋಡೆ ಬದಿಯಿಂದ ವೆಂಟಿಲೇಟರ್ ಶಾಫ್ಟ್ ಏರಿ ಫ್ಯಾಕ್ಟರಿಯ ಒಳಗೆ ಧುಮುಕಿದ್ದು ನಿಜ. ಅಲ್ಲಿದ್ದ ಗೋಡೌನಿನಲ್ಲಿ ಧಾರಾಳವಾಗಿ ತಾರಸಿಯವರೆಗೂ ಪೇರಿಸಿಟ್ಟಿದ್ದ ಬಾಕ್ಸುಗಳಲ್ಲಿ ರಂಧ್ರ ಮಾಡಿ ಪರೀಕ್ಷಿಸಿದ್ದು ನಿಜ.

ಅಲ್ಲಿ ನೀಟಾದ ಅಲ್ಯುಮಿಯಮ್ ಫಾಯಿಲ್ ನಲ್ಲಿ ಸುತ್ತಿದ್ದ ಮೆಲ್ಲೋ ಕಂಪನಿಯ ದುಬಾರಿ ವಿದೇಶಿ ಬೆಲೆಯ ವಿವಿಧ ಚಾಕೋಲೇಟ್‌ಗಳಿದ್ದವು. ಕೆಲವು ಕಡೆ ಅಂತಹ ಕವರ್ ಇಲ್ಲದೇ ನೇರವಾಗಿ ಹೊರಗಿನ ಪ್ರಿಂಟೇಡ್ ಕವರಿನಲ್ಲಿ ಸುತ್ತಿದ ಕಡಿಮೆಬೆಲೆಯ ಚಾಕೋಲೇಟುಗಳೂ ಇದ್ದವು, ಅದರಲ್ಲಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ಕರೆನ್ಸಿಯದಿದ್ದರೆ, ಇನ್ನೊಂದು ಶೆಡ್ದಿನಲ್ಲಿ ಆರೆಂಜ್ ಪ್ಲಾಸ್ಟಿಕ್ ಸೀಲ್ ಕವರಿನಲ್ಲಿ ಪೊಟಾಟೋ ಮತ್ತು ಗೆಣಸಿನ ಚಿಪ್ಸ್ ಇದ್ದವು.. ಮೆಲ್ಲೋ ಬ್ರಾಂಡಿನದು.. ನಾನಂದುಕೊಂಡ

ಯಾವುದೇ ಕಳ್ಳ ಮಾಲು ಅಲ್ಲಿ ಕಾಣಸಿಗಲಿಲ್ಲ.

ಬಂದ ದಾರಿಗೆ ಸುಂಕವಿಲ್ಲದಂತೆ ನನ್ನ ಹೆಜ್ಜೆಗುರುತನ್ನೂ ಹಳ್ಳವನ್ನೂ, ಕೊನೆಗೆ ಮನೆ ಕಾಂಪೌಂಡಿನ ಕಟ್ ಆಗಿದ್ದ ಬೇಲಿಯನ್ನೂ ಸರಿಪಡಿಸಿ ಮರೆ ನನ್ನ ರೂಮಿಗೆ ವಾಪಸಾದೆ. ಹಾಗಾದರೆ ನನ್ನ ಊಹೆ ತಪ್ಪೆ? ನನ್ನ ತಂಡದವರೆಲ್ಲಾ ನಿಕ್ಕಿ ಮೆಹ್ರಾನ ಹಡಗಿನಲ್ಲಿ ಕೊಲೆಯಾಗಿ ಹೋಗಿದ್ದು ಏಕೆ.. ಅಂದು ರಾತ್ರಿಯಂತೂ ತಿಳಿಯಲಿಲ.

ಮುಂದಿನ ಎರಡೂ ರಾತ್ರಿಯೂ ತಿಳಿಯಲಿಲ್ಲ. ಮತ್ತೆ ಮತ್ತೆ ರಾತ್ರಿ ಅಲ್ಲಿಗೆ ನನ್ನ ಗುಟ್ಟು ರಟ್ಟಾಗಬಲ್ಲ ರಾತ್ರಿ ಈಜಿನ ರಿಸ್ಕ್ ತೆಗೆದುಕೊಂಡು ಅವರ ಗೋಡೌನಿಗೆ ಹೋಗಿ ಹೋಗಿ ಸುತ್ತಿ ಬಂದೆ.

ಚಾಕೋಲೇಟ್ ವಾಸನೆ ನನ್ನ ಮೂಗನ್ನು ಆವರಿಸಿಬಿಟ್ಟು ವಾಕರಿಕೆ ತರುತ್ತಿತ್ತು. ಕೆಲವರಿಗೆ ಹಾಗೆ ಆಗುತ್ತದೆ, ಅದರಲ್ಲಿಯೂ ಅಲ್ಲಿ ಚಾಕಲೇಟ್ ಅಲ್ಲದೇ ಬೇರೇನೋ ನಿರೀಕ್ಷಿಸಿದ್ದರೆ!

ದಿನದ ಸಮಯದಲ್ಲಿ ಡಿಮೆಲ್ಲೋ ಸಾಹೇಬರ ಜತೆ ಬ್ರೇಕ್‌ಫಾಸ್ಟ್ ಮತ್ತು ಹರಟೆ, ವಿನಯವಾಗಿ ವಿಸ್ಕಿ ಕುಡಿಯುವುದಿಲ್ಲ ಎಂಬ ನಕಾರ ಸಾಮಾನ್ಯವಾಗತೊಡಗಿತ್ತು.. ಒಂದೊಂದು ದಿನ ರೀಟಾ ಸೇಷೆಲ್ಸ್ ದ್ವೀಪಕ್ಕೆ ತನ್ನ ಮಾಡೆಲಿಂಗ್ ಶೂಟಿಂಗೆಂದು ಹೋಗುತ್ತಿದಳು. ಆದರೆ ಮನೆಯಲ್ಲಿದ್ದಾಗ ನನ್ನನ್ನು ಅವಳ ಜತೆ ವಾಕಿಂಗ್ ಕರೆದೊಯ್ಯುವಳು. ಆಗ ನಾನು ಅವಳ ಸುಂದರ ಡಕ್ ಪಾಂಡ್, ದೊಡ್ಡ ಈಜುಕೊಳ, ಸ್ವಂತ ಹೆಲಿಕಾಪ್ಟರ್ ಪ್ಯಾಡ್ ಎಲ್ಲಾ ನೋಡಿಬಂದೆ. ಅವಳು ಬೇಸಿಗೆಗೆ ಸುಂದರ ಬಿಳಿ

ಮೇಲೆ ಬಣ್ಣದ ಹೂವಿನ ಚಿತ್ತಾರವುಳ್ಳ ಫ್ರಾಕ್ ಅಥವಾ ಗೌನ್ ಹಾಕಿಕೊಳ್ಳುತ್ತಿದ್ದಳು. ಅವಳ ಮೊಣಕಾಲು ಮತ್ತು ಪೂರ್ತಿ ಕೈಗಳು ಕಾಣುವಂತೆ. ನನಗೆ ಇದೆಲ್ಲಾ ಹೊಸದು;

ನಾನೆಂದೂ ಡೇಟಿಂಗ್ ಮಾಡಿದವನಲ್ಲ. ವಿಶ್ವಸುಂದರಿ ಸ್ಪರ್ಧೆಗೆ ಹೋದಂತವರ ಜತೆಯಂತೂ ಇಲ್ಲವೇ ಇಲ್ಲ.. ಹಾಗಾಗಿ ಸ್ವಲ್ಪ ಸಂಕೋಚ, ಅಚ್ಚರಿ ಮೆಚ್ಚುಗೆ ಎಲ್ಲಾ ಒಟ್ಟೊಟ್ಟಿಗೇ ಆಗತೊಡಗಿತ್ತು. ಸದ್ಯ ಅವಳು ನನ್ನ ಚಿಕ್ಕ ಚಿಕ್ಕ ಜೋಕುಗಳನ್ನು ಇಷ್ಟಪಡುತ್ತಿದ್ದಳು. ಅದನ್ನು ಬಿಟ್ಟರೆ ನನ್ನನ್ನು “ಬಹಳ ಸೀರಿಯಸ್ ಮ್ಯಾನ್, ಸೀಕ್ರೇಟಿವ್“ಎನ್ನುತ್ತಿದ್ದಳು. ಅವಳು ತಪ್ಪೇನೂ ಹೇಳಿರಲಿಲ್ಲ. ನನ್ನ ಮಿಷನ್ ಮಾತ್ರ ನನಗೆ ಮುಖ್ಯವಿತ್ತು.

ಮಧ್ಯರಾತ್ರಿಯಲ್ಲಿ ನನ್ನ ತಂಡದವರಾದ ಅಜಯ್ ಮತ್ತು ಬಾಸ್ ಅಡ್ಮಿರಲ್ ಖನ್ನಾ ಜತೆ ಮಾತನಾಡುತ್ತಿದ್ದೆ. ಒಮ್ಮೆ ಮಾತಿನ ನಡುವೆ “ಭಾರತ ಪಾಕಿಸ್ತಾನಕ್ಕೆಲ್ಲಾ ನಮ್ಮ ರೂಪಾಯಿ ಲೋಕಲ್ ಕರೆನ್ಸಿ ಇರುವ ಚಾಕೋಲೇಟುಗಳು ಬರುತ್ತವೆ,,, ಸಾಮಾನ್ಯ ಕವರ್. ಆದರೆ ವಿದೇಶಕ್ಕೆ ಡಾಲರ್, ಯೂರೋ ಬೆಲೆ ಮುದ್ರಿತ ಅಲ್ಯುಮಿನಿಯಮ್

ಕವರ್ ಇರುವ ಮಾಲು ಹೋಗುತ್ತದೆ ಸರ್.” ಎಂದೆ

ಅಡ್ಮಿರಲ್ ಅರೆ ನಿಮಿಷ ಮೌನವಾಗಿದ್ದು, “ನೀನು ನೋಡಿಯೂ ತಪ್ಪು ಹೇಳುತ್ತಿದ್ದೆಯಲ್ಲಾ ಅರ್ಜುನ್?.ನಮ್ಮ ದೇಶಕ್ಕೇ ಇಂಪೋರ್ಟೆಡ್ ಎಂದು ಅಲ್ಯುಮಿನಿಯಮ್ ಫಾಯಿಲ್ ಸುತ್ತಿದ ರೂಪಾಯಿ ಚಾಕೋಲೇಟುಗಳು ಹೆಚ್ಚು ಅವರ ಹಡಗಿನಲ್ಲಿ ಬರುವುದು, ಡಾಲರ್ ಬೆಲೆ ಚಾಕೋಲೇಟುಗಳು ಬಹಳ ಕಡಿಮೆ ತಲುಪುತ್ತವೆ ಎನ್ನುತ್ತಾರೆ.. ಇದು ಸರಿಯಾದ ಅಧಿಕೃತ ಮಾಹಿತಿ. ಪೋರ್ಟ್ ಅಥಾರಿಟಿಯಿಂದ ಬಂದಿದ್ದು “ಎಂದು ಗದರುವ ದನಿಯಲ್ಲಿ ಹೇಳೀದರು.

ನಾನು ಅವಾಕ್ಕಾದೆ.

“ವೈಟ್ ಎ ಮಿನಿಟ್ ಸರ್..ನಾನು ಅವರ ಶಿಪ್‌ಮೆಂಟ್ಸ್ ರಸೀತಿಗಳ ಫೈಲ್ ಬಾಕ್ಸುಗಳ ಮೇಲಿದ್ದ ಸ್ಟಿಕ್ಕರ್ಸ್ ಸಹಾ ಪರೀಕ್ಷಿಸಿದ್ದೇನೆ,ಅಲ್ಯೂಮಿನಿಯಮ್ ಕವರ್ ಸುತ್ತಿದ ಚಾಕೋಲೇಟುಗಳು ಯೂರೋಪಿನ ಕಡೆಗೆ ಸರ್.” ನನ್ನ ವಾದ ಕೇಳಿ ಬಾಸ್ ನಿಟ್ಟುಸಿರಿಟ್ಟರು,

“ದಟ್ಸ್ ದ ಪಾಯಿಂಟ್, ಅರ್ಜುನ್.. ನೀನು ನಾನು ಹೇಳಿದ್ದು ನಂಬು. ನಾನು ನಾಳೆ ಕಸ್ಟಂಸ್ ಎಕ್ಸ್ಪರ್ಟ್ಸ್ ಬಳಿ ಮಾತಾಡಿ ನಿನ್ನನ್ನು ಕಾಲ್ ಮಾಡುತ್ತೇನೆ”

ಹಾಗಾದರೆ? ಅಲ್ಯುಮಿನಿಯಮ್ ಫಾಯಿಲ್ ಸುತ್ತಿದ ಚಾಕೋಲೇಟುಗಳನ್ನು ಸೂಪರ್‌ಮಾರ್ಕೇಟ್ಟಿಗೆ ಅಥವಾ ಡ್ಯೂಟೀ ಫ್ರೀ ಎಂದು ಹೇಳಿ ಭಾರತಕ್ಕೆ ಒಳತರುತ್ತಿದ್ದಾರೆಯೆ? ಯಾಕೆ, ಸಾಮಾನ್ಯ ಕವರುಳ್ಳ ಚಾಕೋಲೇಟುಗಳನ್ನೆ ಸುಲಭವಾಗಿ ಬಿಡಬಹುದಿತ್ತಲ್ಲಾ?. ಎರಡನ್ನೂ ನಮ್ಮ ಅದೇ ಕಸ್ಟಮ್ಸ್‌ನವರು ತಾನೆ ಚೆಕ್ ಮಾಡುತ್ತಾರೆ?.ಇದರಲ್ಲೇನು ಒಳಗುಟ್ಟಿದೆ?

ಮುಂದಿನ ರಾತ್ರಿಯವರೆಗೂ ನಾನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದೆ ಅನ್ನಬಹುದು ಕಾತರದಿಂದ.

ಅಡ್ಮಿರಲ್ ಖನ್ನಾ ಲೈನಿನ ಮೇಲೆ ಬಂದ ಒಡನೆಯೆ ಹೇಳಿದರು, “ಅಲ್ಯುಮಿನಿಯಮ್ ಫಾಯಿಲ್ ನಲ್ಲಿದ್ದುದು ಮತ್ತು ಆರೆಂಜ್ ಪ್ಲಾಸ್ಟಿಕ್ ಕವರಿನಲ್ಲಿರುವುದು ಸ್ಕ್ಯಾನರುಗಳಲ್ಲಿ ಡಿಟೆಕ್ಟ್ ಆಗುವುದಿಲ್ಲ, ಅದು ಯಾಂತ್ರಿಕ ಲೂಪ್-ಹೋಲ್, ಅದರಲ್ಲಿ ನಕಲಿ ಮಾಲು ಮಾದಕ ದ್ರವ್ಯ ಇದ್ದರೂ ಒಳಬರಬಹುದು.ಲಕ್ಷಾಂತರ ಐಟೆಮ್ಸ್ ಬರುವ ನಮ್ಮ ಎಲ್ಲ

ಬಂದರುಗಳಲ್ಲಿ ಅದನ್ನು ವಿಶೇಷವಾಗಿ ಹಿಡಿಯಲು ಇಂಪಾಸಿಬಲ್. ನಮ್ಮ ದೇಶದ ಸಿಬ್ಬಂದಿ ಸಹಾ ಸಾಕಾಗುವುದಿಲ್ಲ. “

ನಾನು ಅರೆಕ್ಷಣ ಸ್ತಂಭೀಭೂತನಾದೆ. ಸಾವರಿಸಿಕೊಂಡು ನುಡಿದೆ, “ನನಗೆ ಕೆಲವು ದಿನಗಳ ಸಮಯ ಕೊಡಿ ಸರ್..ಈ ಕೇಸನ್ನು ಬಿಚ್ಚಿ ನಿಮ್ಮ ಮುಂದಿಡುತ್ತೇನೆ, ನಾನು ಹೆಚ್ಚಿನ ಹೆಲ್ಪ್ ಬೇಕಾದಾಗ ನನ್ನ ಶಿಪ್ ಮೂಲಕ ನೇವಿ ಫೋರ್ಸಸ್ ಕರೆಸುತ್ತೇನೆ. ಡೆತ್ ರಿಸ್ಕ್ ಇರಬಹುದು ಸರ್..”

“ಓಕೆ” ಎಂದ ಅಡ್ಮಿರಲ್ ಖನ್ನಾ, ನಂತರ ಸಣ್ಣ ದನಿಯಲ್ಲಿ, “ಈ ಡೆತ್ ರಿಸ್ಕ್ ಅಂದರೆ ಅವರಿಗೆ ತಾನೆ?”

ಇದರ ಬಗ್ಗೆ ಕ್ಲಾಸಿಫೈಡ್ ಆದ ಸುದ್ದಿ ತುಣುಕನ್ನು ಖನ್ನಾ ನನಗೆ ಇ ಮೇಲ್ ಮೂಲಕ ಕಳಿಸಿದರು. ನನ್ನ ಲ್ಯಾಪ್ಟಾಪಿನಲ್ಲಿ ಆಗಲೇ ಓದಿದೆ.



ವಾವ್! ಎಂದು ನಾನು ಚಿಟಿಕೆ ಹೊಡೆದೆ. ಈಗ ನನಗೆ ಅಗೋಚರವಾಗಿದ್ದ ಮಾದಕ ದ್ರವ್ಯ ಮಾಲು ಹೇಗೆ ಚಾಕೋಲೇಟ್ ಮೂಲಕ ಬಂದರಿನವರ ಕಣ್ತಪ್ಪಿಸಿ ದೇಶದೊಳಗೆ ಸಾಗಣಿಕೆಯಾಗುತ್ತಿದೆ ಎಂಬ ಸತ್ಯ ಮನದಲ್ಲೇ ಸ್ಪಷ್ಟವಾಗಹತ್ತಿತು.

ಆದರೆ ಎಲ್ಲಿ? ಅದನ್ನು ನಾನು ಹಿಡಿಯುವುದೆಂತು, ಅವರನ್ನು ಸೋಲಿಸುವುದೆಂತು?

8

ಮುಂದಿನ ನಾಲ್ಕು ದಿನಗಳಲ್ಲಿ ನನ್ನ ತನಿಖೆಯನ್ನು ಚುರುಕುಗೊಳಿಸಿದೆ.

ಮೆಲ್ಲೋ ದ್ವೀಪದಿಂದ ಭಾರತಕ್ಕೆ ಎರಡು ಹಡಗುಗಳು ಒಮ್ಮೆಲೇ ಹೊರಡುತ್ತಿದ್ದವು.. ಆದರೆ ಅವರ ಗೋಡೌನಿನಿಂದ ಸ್ಕ್ಯಾನ್ ಆಗಿ ಸೇಷೆಲ್ಸ್ ಅಧಿಕಾರಿಗಳ ಸೀಲ್ ಪಡೆದ

ಮಾಲು ಹೊರಡುವುದು ಮಾತ್ರ ಒಂದೇ. ಎರಡನೆಯದು ಅನ್ನುತ್ತೀರಾ? ನಾನು ಸ್ಕ್ಯುಬಾ ಸೂಟ್ ಧರಿಸಿ ನೀರಿನಡಿ ಈಜುತ್ತಾ ಹೋದೆನಲ್ಲಾ?. ಅಲ್ಲಿ ನಾನು ಕಂಡಿದ್ದೇನು?

ಅವರ ಗೋಡೌನಿನ ವ್ಯಾಪ್ತಿಯಾಚೆಗೆ ನಡುಕಡಲಿನಲ್ಲಿ ಕತ್ತಲಲ್ಲಿ “ಸೀವುಲ್ಫ್” ಎಂಬ ಹಡಗು ಯಾವಾಗಲೂ ಲಂಗರು ಹಾಕಿರುತಿತ್ತು. ಅದು ಜೆ ಎ ಶಿಪ್ ಲೈನ್ಸಿಗೆ ಸೇರಿದ್ದು. ಅರ್ಥಾತ್ ಜೆರಾಲ್ಡ್ ಮೆಹ್ರಾ ಶಿಪ್ ಪಡೆಯಿಂದ ಮಗ ನಿಕ್ಕಿ ನಡೆಸುತ್ತಿರುವ ಜಹಜು.

ಅದರಲ್ಲಿ ಒಂದು ರಾತ್ರಿ ಇಣುಕುವ ಸಾಹಸಕ್ಕೂ ನಾನು ಕೈ ಹಾಕಿದೆ. ಆ ರಾತ್ರಿ ಅಜಯ್ ಪಾರ್ಥಸಾರಥಿಯನ್ನೂ ಅಲ್ಲಿಗೆ ನಾನೇ ಕರೆಯಿಸಿಕೊಂಡಿದ್ದೆ. ಅವನು ಸ್ಕ್ಯೂಬಾ ಸೂಟ್ ಧರಿಸಿ ತೆಪ್ಪಗೆ ನೀರಿನಲ್ಲಿ ಕಾದಿದ್ದ. ಯಾವಾಗ ಪ್ರಶ್ನೆ ಕೇಳಬಾರದು ಎಂದು ಅವನಿಗೆ ಚೆನ್ನಾಗಿ ಗೊತ್ತಿದೆ.

“ಹೋಗೋಣವೆ?” ಎಂದೆ ಅವನತ್ತ. “ಸ್ವಲ್ಪ ಕಾದು ನೋಡಿ ಒಳಗೋಗೋಣ ಸರ್!” ಎಂದ ಪಕ್ಕದಲ್ಲಿ

ಸ್ವಲ್ಪ ಸಮಯದಲ್ಲೇ ನಾವು ಬೆಕ್ಕಿನಂತೆ ಸಪ್ಪಳವಿಲ್ಲದೇ ನುಗ್ಗಿದ್ದೆವು. ಬಹಳ ತ್ವರಿತವಾಗಿ ಅವರ ಶಿಪ್ಪಿನಲ್ಲಿ ತಪಾಸಣೆ ಮಾಡಿದೆವು.. ಉಸಿರು ಬಿಡಲೂ ಭಯಪಡುವಷ್ಟು ಆತಂಕ. ಈ ಬಾರಿ ಸಿಕ್ಕಿಬಿದ್ದರೆ ನಾವ್ಬು ಉಳಿಯಲಾರೆವು.

ಆದರೆ ಆ ರಾತ್ರಿ ಶಿಪ್ಪಿನಲ್ಲಿದ್ದುದು ನಾಲ್ಕೇ ಜನ ಸಿಬ್ಬಂದಿ. ಅವರು ಆ ದ್ವೀಪದ ಟ್ರೈಬಲ್ಸ್ ಮತ್ತು ಆಫ್ರಿಕನ್ಸ್ ತರಹ ಇದ್ದರು. ಕ್ರಿಯೋಲ್ ಬಾಷೆಯಲ್ಲಿ ಮಾತಾಡಿಕೊಂಡು ಚೆನ್ನಾಗಿ ಕುಡಿದು ಕೆಳಗಿನ ಡೆಕ್ಕಿನಲ್ಲಿ ಗದ್ದಲದ ಪಾರ್ಟಿ ಮಾಡುತ್ತಿದ್ದರು.

ಎಲ್ಲಾ ಕಡೆ ಅಲ್ಯುಮಿನಿಯಮ್ ಫಾಯಿಲುಗಳ ಸುತ್ತು ಸುತ್ತು ಕಂತೆಗಳು ಬಿದ್ದಿದ್ದವು. ಈ ಪಾಟಿ ಸ್ಟಾಕ್ ಇಟ್ಟಿದ್ದಾರೆ,. ಆದರೆ ಇಲ್ಲೇಕೆ?

ಮಧ್ಯೆ ಮಾತ್ರ ಮೆಲ್ಲೋರವರ ಅಧಿಕೃತ ಚಾಕೋಲೇಟುಗಳಿವೆ. ಆದರ ಮಧ್ಯೆ ಕೆಲವು ಬ್ರೌನ್ ಬಾಕ್ಸುಗಳಲ್ಲಿ ಬೇರೇ ಏನೋ ಇದೆ. ನಾನು ನಾರ್ಕೋಟಿಕ್ಸ್‌ಲ್ಲಿಯೂ ಟ್ರೈನಿಂಗ್ ಪಡೆದಿದ್ದೇನೆ. ಆ ಹೊಸ ಬಾಕ್ಸುಗಳ ತುಂಬಾ ಅಫೀಮ್ ಮತ್ತೂ ಕೆಲವು ಬಾಕ್ಸುಗಳಲ್ಲಿ ನಮ್ಮ ದೇಶದಲ್ಲಿ ವ್ಯಸನಿಗಳಿಗೆ ಜನಪ್ರಿಯವಾದ ಬ್ರೌನ್ ಶುಗರ್ ಇತ್ತು

ಎಂದು ಖಚಿತಪಡಿಸಿಕೊಳ್ಳಲು ಹತ್ತು ನಿಮಿಷವೂ ಹಿಡಿಯಲಿಲ್ಲ. ಅದರಲ್ಲಿದ್ದ ರಾಶಿ ರಾಶಿ ಮಾದಕದ್ರವ್ಯಗಳಿಗೆ ಕೋಟಿಗಟ್ಟಲೆ ಲಾಭವಿದೆಯೆಂದು ನನಗೂ ಅಜಯನಿಗೂ ಗೊತ್ತು. ಅದರಲ್ಲಿ ನಾವು ಪ್ಯೂರ್ ಅಫೀಮು ಇದ್ದ ಆರು ಬ್ಯಾಗುಗಳನ್ನು ವಿಶೇಷವಾಗಿ ಆರಿಸಿಕೊಂಡೆವು.

ಅಂದರೆ ನಾವು ಈ ಮಾಲನ್ನು ಕದ್ದೊಯ್ಯಬೇಕಿತ್ತು. ಅಜಯನ ಬಳಿ ಮೂರ್ಛೆ ಹೋಗಿಸಬಲ್ಲ ಗ್ಯಾಸ್ ಸ್ಪ್ರೇಗನ್ ಸಹಾ ಇತ್ತು. ನಾನೂ ಓಕೆ ಎಂದು ಕಣ್ಣು ಮಿಟುಗಿಸಿದೆ.

ಅವನೂ ಸದ್ದಿಲ್ಲದಂತೆ ಕತ್ತಲಲ್ಲಿ ಕರಗಿಹೋಗಿ ಕೆಳಗಿನ ಡೆಕ್ಕಿನಲ್ಲಿದ್ದ ಸಿಬ್ಬಂದಿಗೆ ಅನಿಲಪ್ರಾಶನ ಮಾಡಿಸಿದ. ನಾನು ಅವಸರವಸರದಿಂದ ಬ್ಯಾಗುಗಳನ್ನು ತುಂಬಿಸಿಕೊಂಡು ಮೇಲಿನೆ ಡೆಕ್ಕಿಗೆ ಏದುಸಿರು ಬಿಡುತ್ತಾ ತಲುಪುತ್ತಿದ್ದಂತೆ ಕೆಳಗಿನ ಅವರೆಲ್ಲರ ಗದ್ದಲ ನಿಂತಿತ್ತು. ಹೊರಬಂದ ಅಜಯ್ ಥಮ್ಸ್-ಅಪ್ ಮಾಡಿ ಕಿರುನಕ್ಕ. ನಾವು

ಮರುಮಾತಿಲ್ಲದೇ ನಮಗಾಗಿ ಅಜಯ್ ಕರೆಸಿದ್ದ ನೇವಿ ಸ್ಪೀಡ್ ಬೋಟಿಗೆ ಆರು ಬ್ಯಾಗ್ ಎಸೆದು ಅಲ್ಲಿಂದ ಜಾರಿಕೊಂಡೆವು. ಇನ್ನು ಅದನ್ನೆಲ್ಲಾ ಐ ಎನ್ ಎಸ್ ಜಲಕುಮಾರಿಗೆ ತಲಪಿಸುವ ಭಾರ ಅಜಯನದು, ಹಾಗಾಗಿ ನಾವಿಬ್ಬರೂ ನಂನಮ್ಮ ದಾರಿ ಹಿಡಿದೆವು.

9

“ಇಲ್ಲ, ಇಲ್ಲ.ನೀವೂ ಈ ರೀತಿ ಸುಳ್ಳು ಹೇಳಿದರೆ ನಾನು ನಂಬುವುದಿಲ್ಲ ,ಆನಂದ್ ದೇಸಾಯಿ!!” ಎಂದು ಕಿರುಚಿದಳು ರೀಟಾ.

ನಾನು ಆ ರಾತ್ರಿ ಅವಳ ಬೆಡ್ ರೂಮಿನ ಬಾಗಿಲು ತಟ್ಟಿ ಬಾಯಿ ಮೇಲೆ ಬೆರಳಿಟ್ಟು ಚುಪ್ ಎಂದಾಕೆಯನ್ನು ಹೊರಗೆ ಕರೆದಿದ್ದೆ. ನನ್ನ ರೂಮಿನಲ್ಲಿ ನಿದ್ದೆಗಣ್ಣುಜ್ಜಿಕೊಳ್ಳುತ್ತಾ

ನೈಟ್ ಗೌನ್ ಸರಿ ಪಡಿಸಿಕೊಳ್ಳುತ್ತ ಕುಳಿತವಳಿಗೆ ಇದುವರೆಗೂ ನಾವು ಕಂಡುಹಿಡಿದ ಅವರ ಚಾಕೋಲೇಟ್ ಮಾಲಿನ ರಹಸ್ಯವನ್ನು ವಿವರವಾಗಿ ಹೇಳಿದ್ದೆ.

“ಯಾಕೆ ರೀಟಾ? ನಿಕ್ಕಿ ಮೆಹ್ರಾ ಬಗ್ಗೆ ಅಷ್ಟು ಪ್ರೀತಿಯೆ? ಕಣ್ಣೆದುರೇ ನೆಡೆವ ಅನ್ಯಾಯ ಸಹಿಸಿಕೊಂಡು ಮೂಕಳಾಗಿರುವೆಯಾ?”

ರೀಟಾ ಕಿಡಿಕಾರಿದಳು, “ಶಟಪ್! ನಂಬಿಕೆದ್ರೋಹಿ. ಯಾವ ಸ್ಮಗಲರ್ ನೀನು? ನಮ್ಮ ಫ್ಯಾಕ್ಟರಿ ಮತ್ತು ನಿಕ್ಕಿ ಬಗ್ಗೆ ಹೇಗೆ ಹೀಗೆಲ್ಲಾ ಆರೋಪ ಮಾಡುತ್ತೀ?”

ನಾನು ಮಾತಿಲ್ಲದೇ ಎದ್ದು ನನ್ನ ಒರಿಜಿನಲ್ ಐಡಿ ಇದ್ದ ಪರ್ಸನ್ನು ಬಿಚ್ಚಿ ಆಕೆಯ ಮುಖಕ್ಕೆ ಹಿಡಿದೆ.

“ಇದು ಸಾಕೋ ಅಥವಾ ನಮ್ಮ ಮುಂಬೈಯ ನೇವಿ ಹೆಡ್ ಕ್ವಾರ್ಟರ್ಸಿಗೆ ಸ್ಯಾಟ್ ಫೋನಲ್ಲಿ ಮಾತಾಡೋಣವೋ?”

“ಕ್ಯಾಪ್ಟನ್ ಅರ್ಜುನ್ ದೇಶಪಾಂಡೆ!” ಎಂದು ಸದ್ದಿಲ್ಲದೇ ಉಸುರಿದವಳು, “ ಏನೆಂದು ನೇವಿಗೆ ಮಾತಾಡಬೇಕು?” ಎಂದಳು ಗೊಂದಲದಲ್ಲಿ.

ನಾನು ಐಡಿಯನ್ನು ಕಿಸೆಯೊಳಗಿಟ್ಟು ಭುಜ ಕುಣಿಸಿದೆ,

“ಅದೇ.. ವಿಶ್ವಸುಂದರಿ ಸ್ಪರ್ಧೆಗೆ ಹೋಗಿದ್ದ ಈ ಭಾರತೀಯ ಸುಂದರಿ ತನ್ನ ದ್ವೀಪದ ಫ್ಯಾಕ್ಟರಿಯಲ್ಲಿ ಡ್ರಗ್ಸ್ ಸ್ಮಗಲರ್ಸಿಗೆ ಜಾಗ ಕೊಟ್ಟು ಭಾರತಕ್ಕೆ ಅಪರಾಧ

ಮಾಡುತ್ತಿದ್ದಾಳೆ, ಅಪ್ಪನ ಜತೆ ಸೇರಿ ಎಂದು.”

“ನೋನೋ!!.ನಾನು ಮಾದಕದ್ರವ್ಯ ರ‍್ಯಾಕೆಟ್ ವಿರೋಧಿ.ಮಿಸ್ ವರ್ಲ್ಡ್ ಸಮಯದಲ್ಲಿ ಅದರ ಬಗ್ಗೆ ದೊಡ್ಡ ಕ್ಯಾಂಪೇನ್ ಮಾಡಿದ್ದೆ,ತಿಳಿದುಕೊಳ್ಳೀ ಸರ್!” ಎಂದಳು ಕೋಪ ಮತ್ತು ವ್ಯಂಗ್ಯ ಬೆರೆಸಿ. ಅದೂ ನನಗೆ ಚೆನ್ನಾಗಿಯೇ ಗೊತ್ತಿತ್ತು.

“ಈಗೇನು ಮಾಡುತ್ತೀ ರೀಟಾ? ಅಂದಹಾಗೇ ಅಪ್ಪ ಎಲ್ಲಿ?”

“ನಿಕ್ಕಿ ಸಂಜೆ ತಾನೇ ಇಲ್ಲಿಗೆ ಬಂದಿದ್ದಾನೆ, ಅವನ ಹಡಗು ಸೀವುಲ್ಫ್‌ನ ಕಡೆಗೆ ಅಪ್ಪನನ್ನೂ ಕರೆದುಕೊಂಡು ಹೋಗಿದ್ದಾನೆ”

ಆಗ ನನಗೆ ಮಿಂಚು ಹೊಡೆದಂತೆ ಆಘಾತವಾಯಿತು. ನಾನು ನನ್ನ ತನಿಖೆಯಲ್ಲಿ ಮಗ್ನನಾಗಿ ಇಂದು ಸಂಜೆ ನಿಕ್ಕಿ ಮೆಹ್ರಾ ಇಲ್ಲಿಗೆ ಬರುತ್ತಾನೆ ಎಂದು ಹೇಳಿದ್ದರೂ ಅದನ್ನು

ಮರೆತ ಫೂಲ್ ಎಂದು ಬೈದುಕೊಂಡೆ.

“ಯಾವಾಗ?.ನಾನು ಸಂಜೆ ಅಲ್ಲಿಂದಲೇ ಬಂದೆ.”

“ಈಗ ತಾನೇ ಅರ್ಧ ಗಂಟೆಯೂ ಆಗಿರಲಾರದು, ಹೆಲಿಕಾಪ್ಟರಿನಲ್ಲಿ, ಅಲ್ಲಿ ಪಾರ್ಟಿ ಮಾಡೋಣ ಅಂತಿದ್ರು” ರೀಟಾ ಗಾಬರಿಯಿಂದ ಬಾಯಿ ಒಣಗಿದವಳಂತೆ ತೊದಲಿದಳು.

ಮೈ ಗಾಡ್..ಆವರಿಬ್ಬರೂ ಅಲ್ಲಾಗಿರುವ ಅವಾಂತರ ನೋಡಿದರೆ ಪರಿಣಾಮ ಊಹಿಸಿಕೊಂಡೇ ನನ್ನ ಎದೆ ಹೊಡೆದುಕೊಂಡಿತು.

ಮುಂದಿನ ಮಾತಾಡದೆ ರೀಟಾಳ ಕೈ ಹಿಡಿದುಕೊಂಡು ಅಲ್ಲಿಂದ ಹೊರಟೆ. ಅಲ್ಲ, ಓಡಿದೆ ಎನ್ನಬೇಕು.

“ಕ್ವಿಕ್!.ಅಪ್ಪ ಆಪಾಯದಲ್ಲಿರುತ್ತಾರೆ. ಅವನು ಅಟ್ಯಾಕ್ ಮಾಡುತ್ತಾನೆ. ನಮ್ಮ ಸ್ಪೀಡ್ ಬೋಟಿನಲ್ಲಿ ನಮ್ಮ ಶಿಪ್ ತಲುಪೋಣ ಬಾ”


10

ನಾನು ರೀಟಾ ನಮ್ಮ ಹಡಗನ್ನು ತಲುಪುತ್ತಿದ್ದಂತೆಯೇ ನಮ್ಮ ನಾಲ್ಕು ನೇವಿ ಸೈನಿಕರನ್ನೂ ಅಲರ್ಟ್ ಮಾಡಿದೆ. ಅಜಯ್ ಅವಸರದಿಂದ ಆರು ಬ್ಯಾಗ್ ಮಾಲನ್ನು ಜೋಪಾನಗಾಗಿ ಕೆಳಗಿನ ಡೆಕ್ಕಿನಲ್ಲಿರಿಸಿ ಬಂದ.

ಆಗಲೇ ಜೋರಾದ ಹದಿನೈದು ನಾಟ್ಸ್ ಸ್ಪೀಡಿನಲ್ಲಿ ನಿಕ್ಕಿ ಮೆಹ್ರಾನ ಸೀವುಲ್ಫ್ ಹಡಗು ನಮ್ಮ ಬಳಿ ಸಾಗಿ ಬಂದೇಬಿಟ್ಟಿತು.

ಅವರು ಫೈರ್ ಮಾಡುತ್ತಲೇ ಬಂದಿದ್ದರಿಂದ ನಾವು ಬುಲೆಟ್ ಉತ್ತರ ಕೊಡಲೇಬೇಕಾಯಿತು. ನಮ್ಮ ಇಬ್ಬರು ಸೈನಿಕರು ಅವರ ಗುಂಡೇಟಿಗೆ ಗಾಯಗೊಂಡರು. ಪರಿಸ್ಥಿತಿ ಬಿಗಡಾಯಿಸಿದ್ದು ನೋಡಿ ನಾನೇ ಅವರಿಗೆ ಫೈರಿಂಗ್ ನಿಲ್ಲಿಸಲು ಆಜ್ಞಾಪಿಸಿದೆ “ಇದು ಭಾರತೀಯ ನೇವಿ ಹಡಗು, ಎಚ್ಚರ!” ಎಂದು ಸಾರಿ ಹೇಳಿದೆ. ಅದಾದ ಹತ್ತು

ನಿಮಿಷದಲ್ಲಿ ನಾನು ರೀಟಾ, ನಾವೆಲ್ಲಾ ನಿಂತಿರುವಾಗಲೇ ಸ್ಪೀಡ್ ಬೋಟಲ್ಲಿ ನಿಕ್ಕಿ ಮೆಹ್ರಾ ಮತ್ತು ಡಿಮೆಲ್ಲೋ ಸಾಹೇಬರ ಜತೆ ಮೂರನೆಯ ಯಾರೋ ಗಾಯಾಳುವೊಬ್ಬನೂ ಬಂದರು

ಆರಡಿ ಎತ್ತರದ ನೀಲಿ ಸೂಟ್ ಧರಿಸಿದ್ದ ನಿಕ್ಕಿ ಮೆಹ್ರಾನನ್ನು ಯಾರಾದರೂ ಜೆಂಟಲ್‌ಮನ್ ಎಂದು ನಂಬಬಹುದಿತ್ತು. ಆದರೆ ರೀಟಾಳನ್ನು ಬಿಟ್ಟು.

“ಯು ಚೀಟ್,ರಾಸ್ಕಲ್..ನನ್ನನ್ನೂ ಅಪ್ಪನನ್ನು ಎಂತಾ ದೊಡ್ಡ ಅಪಾಯದಲ್ಲಿ ಸಿಲುಕಿಸಿಬಿಟ್ಟೆ ನಿನ್ನ ನಯವಾದ ಮಾತುಗಳಿಂದ” ಎಂದು ಅವನೆಡೆ ದಾಳಿಯಿಟ್ಟಳು. ನಾನು ಅವಳನ್ನು ತಡೆದೆ.

ಡಿಮೆಲ್ಲೋ ಸಾಹೆಬರನ್ನು ನಮ್ಮತ್ತ ತಳ್ಳಿ ಬೀಳಿಸಿದ ನಿಕ್ಕಿ ಮೆಹ್ರಾ ದುರಹಂಕಾರದ ದನಿಯಲ್ಲಿ ನನಗೆ ನುಡಿದ,

“ಭಲೇ ಕ್ಯಾಪ್ಟನ್, ಯಾರೂ ಕಂಡುಹಿಡಿಯದ ನನ್ನ ನಡುಗಡಲಲ್ಲಿ ಮಾಡುವ ಮಾಲು ಬದಲಿ ರಹಸ್ಯವನ್ನು ನೀನು ಭೇಧಿಸಿಬಿಟ್ಟೆ. ನಾನು ಸ್ಕ್ಯಾನ್ ಆದ ಚಾಕೋಲೇಟ್ ಕವರುಗಳ ಒಳಗೆ ಸಮುದ್ರ ಮಧ್ಯದಲ್ಲಿ ನಿಂತ ಹಡಗಿನಲ್ಲಿ ಅಲ್ಯೂಮಿನಿಯಮ್ ಕವರುಗಳಲ್ಲಿ ಅವನ್ನು ಬಚ್ಚಿಡುತಿದ್ದೆ. ಆರೆಂಜ್ ಚಿಪ್ಸ್ ಕೂಡಾ ಸ್ಕ್ಯಾನರಿನಲ್ಲಿ ಕಾಣುವುದಿಲ್ಲ.

ಇದು ಇನ್ನೂ ಯಾರಿಗೂ ತಿಳಿಯದ ಪ್ಲಾನ್ ಎಂದು ಖುಶಿಯಾಗಿದ್ದೆ.. ನೀನು ನನ್ನನ್ನು ಸೋಲಿಸಿಬಿಟ್ಟೆ ಎಂದುಕೊಂಡೆ. ಆದರೆ ನಾನು ನಿಮ್ಮವರನ್ನು ಹಿಡಿದು ಕೊಂದು ನಿನ್ನ ಸುಳಿವಿನಲ್ಲೇ ಇದ್ದೆ...ಎನಿವೇ, ನನ್ನ ಮಾಲು ಕೊಟ್ಟುಬಿಡು ಇಲ್ಲವೇ ಇಲ್ಲಿರುವ ಎಲ್ಲರನ್ನೂ ಶೂಟ್ ಮಾಡಲು ನಮ್ಮವರು ಕಾಯುತ್ತಿದಾರೆ” ಎಂದು ಅವರ ಕಡೆಯ

ಧೂರ್ತರನ್ನು ತೋರಿಸಿದ. ಕನಿಷ್ಟ ಹತ್ತು ಮೆಶೀನ್‌ಗನ್ಸ್ ನಮ್ಮ ಕಡೆಗೆ ಗುರಿಯಿಟ್ಟಿತ್ತು. ನಾನು ಗನ್ ಜತೆ ವಾದಿಸುವುದಿಲ್ಲವೆಂದು ನಿಮಗೆ ಮೊದಲೇ ಹೇಳಿದ್ದೇನೆ.

ನಾನು ಆ ಮೂರನೆಯ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಿದೆ. ಅವನೇ ನನ್ನ ಮಿಸ್ಸಿಂಗ್ ಸದಸ್ಯ!!. ಅವನನ್ನು ಹಿಡಿದು ಚಿತ್ರಹಿಂಸೆ ಮಾಡಿ ನನ್ನ ಹಡಗಿನ ಬಳಿ ಕರೆತಂದಿದ್ದ ನಿಕ್ಕಿ ಅದನ್ನೂ ಜಂಬದಿಂದ ಕೊಚ್ಚಿಕೊಂಡ.

ಅವನು ಎದ್ದು ನಿಧಾನವಾಗಿ ಅಜಯ್ ಬಳಿ ಹೋಗಿ ಹಾಗೇ ಮೂರ್ಛೆ ಹೋದ.

“ನನ್ನ ಆರು ಬ್ಯಾಗ್ ಅಫೀಮು ಮಿಲಿಯನ್ ಡಾಲರ್ಸ್ ಬರುವ ಮಾಲಾಗುತ್ತದೆ..ಅದನ್ನು ಮಾರಿಕೊಂಡು ಫೈನಲ್ ಆಗಿ ಮರೆಯಾಗುತ್ತೇನೆ. ಯಾರಿಗೂ

ಸಿಕ್ಕುವುದಿಲ್ಲ...ಕ್ಯಾಪ್ಟನ್?” ನಿಕ್ಕಿ ನನ್ನತ್ತ ತಿರುಗಿ ಕೇಳಿದ

“ನಮ್ಮನ್ನು ಕೊಲ್ಲುವುದಿಲ್ಲ ಎಂದು ಏನು ಗ್ಯಾರೆಂಟಿ?”

ಅವನು ತಲೆ ಹಿಂದೆ ಹಾಕಿ ನಕ್ಕ.

“ನಾನು ಕಳ್ಳನಿರಬಹುದು ಆದರೆ ಮೂರ್ಖನಲ್ಲ. ನೇವಿ ಹಡಗು, ಒಬ್ಬ ಪ್ರಸಿದ್ಧ ಸುಂದರಿ, ಮತ್ತು ನೀವೆಲ್ಲಾ ನೇವಿಯ ಸಿಬ್ಬಂದಿ , ಎಲ್ಲವನ್ನೂ ನಾಶ ಮಾಡಿದರೆ ನನ್ನನ್ನು ಸುಮ್ಮನೆ ಬಿಡುವಿರಾ? ನನ್ನ ಜೀವನ ನರಕ ಮಾಡುವಿರಿ..ಇದು ಡೀಲ್, ಮಾಲು ವಾಪಸ್ ಕೊಟ್ಟು ಜೀವ ಉಳಿಸಿಕೊಳ್ಳಿ”

“ಬೇಡ, ಎಂದಿಗೂ ಬೇಡ,, ಅವನು ಕೊಲ್ಲಲಿ ನೋಡುವಾ!” ಎಂದು ನನ್ನ ತೋಳು ಹಿಂಡಿದಳು ರೀಟಾ.

“ಲೆಟ್ ಹಿಮ್ ಡೈ” ಎಂದು ತಮ್ಮ ಪಾರ್ಟನರನ್ನು ಶಪಿಸಿದರು ಡಿಮೆಲ್ಲೋ

“ಓಕೆ, ಹಾಗೇ ಮಾಡುವೆ” ಎಂದೆ ನಾನು.

“ನೋಡು ಸ್ವೀಟ್‍ಹಾರ್ಟ್, ಕ್ಯಾಪ್ಟನ್ ಬುದ್ದಿವಂತ. ನಿಮ್ಮಂತಾ ಹೆಡ್ಡನಲ್ಲ. ಯಾವಾಗ ಸೋಲುಂಡೆ ಎಂದು ಅವನಿಗೆ ಗೊತ್ತಿದೆ!!” ಎಂದು ಚೇಡಿಸಿದ ನಿಕ್ಕಿ ಮೆಹ್ರಾ.

“ಒಬ್ಬನೇ ಹೋಗಿ ನನ್ನ ಮಾಲು ತಂದುಕೊಡು..ಹೂಂ!” ಎಂದು ಗನ್ ತಿರುವಿಸಿದ ನಿಕ್ಕಿ ಮೆಹ್ರಾ.

ಕೆಳಗಿನ ಡೆಕ್ಕಿನಿಂದ ಎರಡೆರೆಡಾಗಿ ಆರು ಭಾರವಾದ ಬ್ಯಾಗ್ ತರುವಷ್ಟರಲ್ಲಿ ನನಗೆ ಸಾಕಷ್ಟು ಸಮಯ ಮತ್ತು ಶ್ರಮ ಆಯಿತು.

ಶಾಂತವಾಗಿ ಗಮನಿಸುತ್ತಿದ್ದವನು ವಿಜಯದ ಕೇಕೆ ಹಾಕಿದ. ತನ್ನ ಕಡೆಯವರಿಗೆ ಹೇಳಿ ಆರೂ ಬ್ಯಾಗನ್ನು ತನ್ನ ಸೀವುಲ್ಫ್ ಹಡಗಿಗೆ ಸಾಗಿಸಿದ.

ಕೊನೆಗೆ ವೇವ್ ಮಾಡಿ, “ಬದುಕಿಕೊಳ್ಳಿ. ಇನ್ನೊಮ್ಮೆ ನನ್ನನ್ನು ಸಂಧಿಸಿದರೆ ಹೀಗೇ ಬಿಟ್ಟು ಹೋಗುವುದಿಲ್ಲ” ಎಚ್ಚರಿಸಿ ನಮ್ಮ ಹಡಗಿಳಿದು ಹೋದ.

ನಾನು ಮಾತ್ರ ಶಾಂತನಾಗಿ ಉತ್ತರವಿಲ್ಲದೇ ನಿಂತಿದ್ದೆ.

ನಿಕ್ಕಿ ಮೆಹ್ರಾ ಮತ್ತು ತಂಡದವರು ತಮ್ಮ ಮಾಲನ್ನೆಲ್ಲಾ ಹೊತ್ತೊಯ್ಯುತ್ತಾ ದೂರವಾಗುತ್ತಿದ್ದಂತೇ,

ಅದುವರೆಗೂ ಹೇಗೋ ತನ್ನ ಕೋಪವನ್ನು ಸೈರಿಸಿಕೊಂಡಿದ್ದ ರೀಟಾ ದಾಳಿ ಮಾಡುವಂತೆ ನನ್ನತ್ತ ತಿರುಗಿದಳು, ಅಥವಾ ಎರಗಿದಳು ಅನ್ನಿ.

“ಕ್ಯಾಪ್ಟನ್!.. ನಿಮ್ಮಂತಾ ಪುಕ್ಕಲು, ದೇಶದ್ರೋಹಿ ಮತ್ತು ಕರ್ತವ್ಯಭ್ರಷ್ಟರು ನಮ್ಮ ನೇವಿಯಲ್ಲಿದ್ದಾರೆ ಅಂದರೆ ನಂಬಲೂ ಆಗುತ್ತಿರಲಿಲ್ಲ..ಛೇ.ಛೇ!” ಅವಳ ದನಿ ಒರಟಾಗಿತ್ತು. ಆ ಸಮುದ್ರದ ಅಲೆಗಳಿಗಿಂತಾ ಅಬ್ಬರವಿತ್ತು. ಅವಳ ಮುದ್ದು ಮುಖ ಆ ಸಂಜೆಗೆಂಪನ್ನು ಪ್ರತಿಫಲಿಸುತ್ತಾ ಧುಮಗುಟ್ಟುತಿತ್ತು.

“ಅಲ್ಲಿ ಸ್ವಲ್ಪ ನೋಡುತ್ತಿರು ರೀಟಾ!” ಎಂದೆ ನನ್ನ ವಯರ್ಲೆಸ್ಸ್ ಸೆಟ್ಟನ್ನು ತಿರುಗಿಸುತ್ತಾ, ದಿಗಂತದಲ್ಲಿ ಮರೆಯಾಗುತ್ತಿದ್ದ ಸೀವುಲ್ಫ್ ಹಡಗನ್ನು ಬೊಟ್ಟು ಮಾಡಿ ತೋರಿಸಿದೆ.

“ಅಲ್ಲಿ ನೋಡುವುದೇನು, ಮಣ್ಣಂಗಟ್ಟಿ?!. ಮಾಡೋದೆಲ್ಲಾ ಮಾಡಿಬಿಟ್ಟು..” ಎಂದು ಆಕೆ ತನ್ನ ಆರೋಪವನ್ನು ಎತ್ತರದ ದನಿಯಲ್ಲಿ ಮುಂದುವರೆಸುತ್ತಿದ್ದಳೋ ಏನೋ..

ಆದರೆ ಆ ರಾತ್ರಿಯ ಕತ್ತಲಲ್ಲಿ ಬೆಂಕಿ ಸಹಿತ ಆಸ್ಪೋಟದ ಸದ್ದು ಮತ್ತು ರಂಗು ಇದ್ದಕ್ಕಿದ್ದಂತೆ ಬೆರೆಯಿತು.

ನೋಡುನೋಡುತ್ತಿದ್ದಂತೆ ನಮ್ಮ ಹಡಗಿನವರೆಗೂ ಅಪ್ಪಳಿಸಿದ ಸದ್ದಿನ ತರಂಗಗಳೊಂದಿಗೆ ಸೀವುಲ್ಫ್ ನೌಕೆ ಸ್ಪೋಟಿಸಿ ಹತ್ತಿ ಉರಿದು ನಿಧಾನವಾಗಿ ಅಲೆಗಳಡಿಯಲ್ಲಿ ಜಾರಲಾರಂಭಿಸಿತು. ಆ ತೆರೆಗಳ ಅಲ್ಲೋಲ-ಕಲ್ಲೋಲಕ್ಕೆ ನಮ್ಮ ಹಡಗೂ ಕುಲುಕಾಡಿತು.

ರೀಟಾ ಬಾಯಿ ತೆರೆದು ಅರೆ ಮಾತಿನಲ್ಲಿ ನಿಲ್ಲಿಸಿ ನಿಕ್ಕಿ ಮೆಹ್ರಾನ ಹಡಗಿನ ದುರಂತದ ಕ್ಷಣಗಳನ್ನು ನೋಡಹತ್ತಿದ್ದಳು! ಅಜಯ್ ನನ್ನತ್ತ ಮಾರ್ಮಿಕವಾಗಿ ನೋಡಿದ.

“ನಿಕ್ಕಿ ಮೆಹ್ರಾ ಪುಫ್.!” ಎಂದೆ ಅವಳ ತೋಳು ಹಿಡಿಯುತ್ತಾ.

ಅವಳು ಆ ಸ್ಪರ್ಶಕ್ಕೆ ಬೆಚ್ಚಿಬಿದ್ದಳು, “ಏನು ಮಾಡಿಬಿಟ್ಟೆ, ಅರ್ಜುನ್?” ಈ ಬಾರಿ ಕ್ಯಾಪ್ಟನ್ ಸಂಭೋಧನೆ ಇಲ್ಲ!

“ಒಂದು ಬ್ಯಾಗಿನಲ್ಲಿ ಬೌನ್ ಶುಗರ್ ಚಾಕೋಲೇಟ್ಸ್ ಇರಲಿಲ್ಲ ಅಷ್ಟೇ. ಬೇರೇನೋ ಇತ್ತು ಅನಿಸತ್ತೆ!” ಎಂದೆ ಮಾರ್ಮಿಕವಾಗಿ. “ಥ್ಯಾಂಕ್ ಗಾಡ್!” ಎಂದರು ಡಿಮೆಲ್ಲೋ ಎಲ್ಲಾ ಹೊಳೆದಂತೆ.

“ವಾಟ್?” ರೀಟಾ ದನಿಯಲ್ಲಿ ಗೊಂದಲವಿತ್ತು.

“ನಾನು ಅವನ ಗನ್ ಪಾಯಿಂಟಿನಲ್ಲಿ ಎಲ್ಲಾ ಮಾಲು ತರುತ್ತೇನೆ, ಇಲ್ಲೇ ಇರಿ ಎಂದು ಹೇಳಿ ಒಳಗೆ ಹೋಗಿ ಬ್ಯಾಗುಗಳನ್ನು ತಂದೆನಲ್ಲವೆ?” ನಾನು ಅತ್ತ ತೋರಿಸಿದೆ.

“ಆರು ಬ್ಯಾಗು!” ಎಂದಳು ರೀಟಾ ನೆನಪಿಸಿಕೊಳ್ಳುತ್ತಾ.

“ಐದು ಬ್ಯಾಗಿನಲ್ಲಿ ಬ್ರೌನ್ ಶುಗರ್ ಚಾಕೋಲೇಟ್-ಚಿಪ್ಸ್ ಇದ್ದಿದ್ದು.. ಅಜಯ್ ಮೊದಲೇ ಐ.ಇ. ಡಿ ಟೈಮ್ ಬಾಂಭ್ ಸಿದ್ಧ ಮಾಡಿ ಒಳಗಿಟ್ಟಿದ್ದ ..ಆರನೇ ಬ್ಯಾಗಿನಲ್ಲಿದ್ದ ಚಾಕೋಲೇಟ್ಸ್ ಚಿಪ್ಸ್ ಕಸದ ಬುಟ್ಟಿಗೆ ಸುರಿದು ಅದರಲ್ಲಿ ಆ ಬಾಂಬ್ ಇಟ್ಟು ನಿಕ್ಕಿಗೆ ಕೊಟ್ಟೆ.”

“ಮೈ ಗಾಡ್!!” ಅವಳು ಕೀಚಲು ದನಿಯಲ್ಲಿ ಉದ್ಗರಿಸಿ ತನ್ನಕೈಯಿಂದ ಬಾಯಿ ಮುಚ್ಚಿಕೊಂಡಳು ಆಘಾತವಾದಂತೆ.

“ಅವರೇನಾದರೂ ಎಲ್ಲವನ್ನೂ ಚೆಕ್ ಮಾಡಿದ್ದರೆ , ನಾವು ಸಿಕ್ಕಿ ಹಾಕಿಕೊಂಡಿದ್ದರೆ.” ಎಂದು ಗಾಬರಿಯಿಂದ ಸ್ವಲ್ಪ ತಡೆದು ಕಣ್ಣರಳಿಸಿದಳು.

“ಅವರಿಗೆ ಮಾತ್ರ ಮಾಲು ಬದಲಿ ಮಾಡುವುದು ಬರುತ್ತದೆಯೇ, ರೀಟಾ?. ಗುರುವಿಗೆ ತಿರುಮಂತ್ರ ಆಯಿತು ಅಂದುಕೊ!”

“ನಿಜಕ್ಕೂ ಎಂತಾ ಆಪಾಯಕಾರಿ ರಿಸ್ಕ್!” ಎಂದಳು ರೀಟಾ ಮತ್ತೆ ಮತ್ತೆ ಉರಿದು ದಗ್ಧವಾಗಿ ಮುಳುಗುತ್ತಿದ್ದ ಸೀವುಲ್ಫ್ ಕಡೆ ನೋಡುತ್ತಾ.

“ಫಾರ್ಚೂನ್ ಫೇವರ್ಸ್ ದ ಬ್ರೇವ್ ಎನ್ನುತ್ತಾರಲ್ಲ, ದೇವರು ನಮ್ಮ ಕಡೆ ಇದ್ದ . ನಿನಗೆ ಮೊದಲೇ ಹೇಳಿದ್ದರೆ ಮುಖಭಾವದಲ್ಲಿ ಬಿಟ್ಟುಕೊಡುತ್ತಿದ್ದೆಯೇನೋ..ಆದರೆ ನಾನು ಅಜಯ್ ಈ ವಿಷಯದಲ್ಲಿ ಸ್ವಲ್ಪ ಕಲ್ಲು ಹೃದಯದವರು.”

ಅಜಯ್ ಈಗ ಸ್ವಲ್ಪ ಮುಗುಳ್ನಕ್ಕು ಅವಳತ್ತ ಕಣ್ಣು ಮಿಟುಕಿಸಿದ. ಅವಳಿಗಿನ್ನು ಮಾತಾಡಲು ತೋಚಲಿಲ್ಲ..

“ಅಯ್ಯೋ ದೇವರೆ!. ನಿಮ್ಮನ್ನು ನಾನು ಎಷ್ಟು ತಪ್ಪು ತಿಳಿದುಬಿಟ್ಟೆ!” ಎಂದು ಆಯಾಸವಾದವಳಂತೆ ನನ್ನ ತೋಳಿಗೆ ತಲೆ ಒರಗಿಸಿದಳು ರೀಟಾ.

“ಅಹೆಂ!... ನಿಮ್ಮ ಶಿಪ್ಪಿನಲ್ಲಿ ವಿಸ್ಕಿ ಏನಾದರೂ ಸಿಗುತ್ತದೆಯೇ?” ಎಂದರು ಡಿಮೆಲ್ಲೋ.

ನಾನು ನಗುತ್ತಾ ಇಬ್ಬರನ್ನೂ ಒಳಕ್ಕೆ ಕರೆದೊಯ್ದೆ.

-----*****------

ನಂತರ...

ಎರಡು ದಿನಗಳ ನಂತರ ನಾವು ಮೆಲ್ಲೋಸ್ ಬೀಚಿನಲ್ಲಿ ಬಳಿ ಲಂಗರು ಹಾಕಿ ನಿಂತಿದ್ದ ಐ ಎನ್ ಎಸ್ ಜಲಕುಮಾರಿಯ ಬಳಿ ನಾವು ಮರಳಿನಲ್ಲಿ ಹಾಗೇ ಅಡ್ದಾಡುತ್ತಿದ್ದೆವು. ಆಗತಾನೆ ಮಳೆ ಬಂದು ನಿಂತಿತ್ತು. ಮರಳು ಒದ್ದೆಯಾಗಿತ್ತು...ಹಿಂದಿನ ದಿನ ಅಪ್ಪ ಡಿಮೆಲ್ಲೋರನ್ನು ನೇವಿಯ ನಿವೃತ್ತಾಧಿಕಾರಿಯೆಂದು ಇನ್ ಕ್ಯಾಮೆರಾ ವಿಚಾರಣೆ ಮಾಡುವುದಾಗಿ ಮಾಧಕ ದ್ರವ್ಯ ನಿರ್ದೇಶನಾಲಯ ಮತ್ತು ನೌಕಾಪಡೆಯ ವರಿಷ್ಟ ಅಧಿಕಾರಿಗಳು ತೀರ್ಮಾನಿಸಿ ಮುಂಬೈಗೆ ಬಂಧನದಲ್ಲಿ ಕರೆದೊಯ್ದಿದ್ದರು. ವಿದಾಯವಾಗುವಾಗ ರೀಟಾ ಕಣ್ಣೀರು ತುಂಬಿ ‘ಐ ವಿಲ್ ಟೇಕ್ ಕೇರ್ ಅಪ್ಪಾ’ ಎಂದಿದ್ದಳು. ಡಿಮೆಲ್ಲೋ ಸಾಹೇಬರು ಸುಮ್ಮನೆ ನನ್ನತ್ತ ನೋಡಿದ್ದರು.

“ನಾನು ಇನ್ನು ಇಲ್ಲಿ ಏನು ಮಾಡುವುದೋ ಗೊತ್ತಿಲ್ಲ... ಈ ಫ್ಯಾಕ್ಟರಿಗಳು, ಬೃಹತ್ ಬಂಗಲೆ ಯಾವುದನ್ನು ಸಂಬಾಳಿಸಲಿ?” ಎಂದು ಗೊಣಗಿದಳು ರೀಟಾ.

“ನಿನಗೆ ಸೀರೆ ಉಟ್ಟುಕೊಂಡು, ಕುಂಕುಮ ಇಟ್ಟುಕೊಳ್ಳಲು ಬರುತ್ತದೆಯೆ ರೀಟಾ?” ಎಂದೆ ಇದ್ದಕ್ಕಿದ್ದಂತೆ.

“ಹೂಂ...ಯಾಕೆ ?” ಎಂದು ಬೆರಗಾಗಿ ಅಲ್ಲೇ ಕುಳಿತಳು,. ನಾನು ಪಕ್ಕದಲ್ಲಿ ಕುಳಿತೆ.

“ಅಲ್ಲಾ, ಅಮ್ಮ ಹೇಳುತ್ತಿರುತ್ತಾರೆ..ನಮ್ಮ ಮನೆಗೆ ಸೊಸೆಯಾಗಿ ಬರುವವಳಿಗೆ ಅದೆಲ್ಲಾ ಬಂದರೆ ಚೆನ್ನ ಎಂದು, ಆದರೆ ಅವರು ಸ್ವಲ್ಪ ಹಳೇ ಕಾಲದವರು...”

ಅವಳ ಮುಖ ಗುಲಾಬಿ ವರ್ಣಕ್ಕೆ ತಿರುಗಿತೋ ಅಥವಾ ನನ್ನ ಕಲ್ಪನೆಯೋ ಗೊತ್ತಿಲ್ಲ.

“ಓಹೋ..ಇನ್ನೇನು ಹೇಳುತ್ತಿರುತ್ತಾರೆ ನಿಮ್ಮಮ್ಮ?” ಸಣ್ಣನೆಯ ದನಿಯಲ್ಲಿ ಕತ್ತು ಕೊಂಕಿಸಿ ಕೇಳಿದಳು. ಅವಳ ನೋಟವನ್ನು ನಾನು ಎದುರಿಸಲಾಗಲಿಲ್ಲ

ನಾನು ಸಂಕೋಚದಿಂದ ಉಗುಳು ನುಂಗಿದೆ...”ನಮ್ಮ ಮನೆ ಸೊಸೆಯಾದವಳು ಯಾವ ಕೆಲಸಕ್ಕೂ ಹೋಗಬೇಕು ಎಂದೇನೂ ಇಲ್ಲ, ಮೊದಲೇ ನೀನೂ ಮನೆಯಲ್ಲಿರುವುದಿಲ್ಲ ಅಂತಾ ಹೇಳಿದಂತಿತ್ತು..” ಎಂದು ಮುಂದೆ ಹೇಳಲಾಗದೆ ಅಲ್ಲೇ ನಿಲ್ಲಿಸಿದೆ.

ಅವಳು ತಲೆ ಹಿಂದೆ ಹಾಕಿ ಜೋರಾಗಿ ಕಿಲಕಿಲನೆ ನಕ್ಕಳು. ಆ ಸದ್ದಿಗೆ ಬೆಚ್ಚಿ ಕೆಲವು ಕಡಲ ಹಕ್ಕಿಗಳು ಸರ್ರನೆ ಹಾರಿಹೋದವು.

“ಯೂ ಆರ್ ಹೋಪ್‌ಲೆಸ್ಸ್!... ನಿಮಗೆ ಒಬ್ಬ ಹುಡುಗಿಗೆ ಪ್ರಪೋಸ್ ಮಾಡಲು ಸ್ವಲ್ಪವೂ ಬರುವುದಿಲ್ಲ” ಎಂದಳು ಕೆಂದಾವರೆಯ ಮುಖದವಳು.

“ಏಳು ಸಮುದ್ರದ ನೀರು ಕುಡಿಯಲು ಮಾತ್ರ ಬರುತ್ತದೆ ಈ ಪಾಮರನಿಗೆ, ರೀಟಾ” ಎಂದೆ ತಪ್ಪೊಪ್ಪಿಗೆಯಂತೆ

ಎರಡು ಕ್ಷಣ ಮೌನವಾಗಿದ್ದೆವು. ಅಲೆಗಳ ಮೊರೆತಕ್ಕೂ ಮನದ ಮಿಡಿತಕ್ಕೂ ಸಂಬಂಧವಿದ್ದಂತಿತ್ತು.

“ಹಾಗಾದರೆ ಮನೆಗೆ ಹೋಗೋಣವೆ?” ಎಂದು ಮರಳು ಕೊಡವಿಕೊಳ್ಳುತ್ತಾ ಎದ್ದಳು ರೀಟಾ.

“ಹೂಂ” ಎಂದು ಮೌನವಹಿಸಿ ಅವಳ ಬಂಗಲೆಯತ್ತ ತಿರುಗಿದೆ.

“ನನ್ನ ಮನೆಗೆಲ್ಲ...ನಿಮ್ಮ ಮನೆಗೆ, ಭಾರತಕ್ಕೆ.”.ಎಂದು ನಕ್ಕಳು ರೀಟಾ, ಐ ಎನ್ ಎಸ್ ಜಲಕುಮಾರಿ ಹಡಗನ್ನು ತೋರಿಸುತ್ತಾ.

ಆಗಸದಲ್ಲಿ ಸರ್ರನೆ ಕವಿದ ಮೋಡ ಇದ್ದಕ್ಕಿದ್ದಂತೆ ವರ್ಷಧಾರೆಯನ್ನು ಆರಂಭಿಸಿತು.

“ಆದರೆ ನಾನಿನ್ನೂ ಪ್ಯಾಕ್ ಮಾಡಿಕೊಂಡಿಲ್ಲ...” ಎಂಬ ಅವಳ ಕೂಗು ಕಡಲ ಮೇಲಿನ ಮಳೆಗಾಳಿಯಲ್ಲಿ ತೂರಿ ಹೋಯಿತು

ಆದರೆ ಸದ್ಯಕ್ಕೆ ನಾವಿಬ್ಬರೂ ಕೈ ಕೈ ಹಿಡಿದು ಸರಸರನೆ ನಮ್ಮ ಹಡಗಿನತ್ತ ಓಡಲಾರಂಭಿಸಿದ್ದೆವು.





Rate this content
Log in

Similar kannada story from Action