ರಾಖಿ
ರಾಖಿ
ರಜತ್ ಸುಂದರ, ಸದ್ಗುಣದವನೂ, ವಿದ್ಯಾವಂತ, ಬುದ್ದಿವಂತನೂ ಆಗಿ, ಈಗ ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಆರಂಕೆಯ ಸಂಬಳ ಪಡೆಯುತ್ತಿದ್ದಾನೆ. ಓಡಾಡಲು ಕಾರು, ಬೈಕ್ ಎರಡೂ ಇದೇ. ಇವನು ಕಾಲೇಜಿನಲ್ಲಿ ಓದುತ್ತಿರುವಾಗಲೇ ಬಹಳಷ್ಟು ಹುಡುಗಿಯರು ಪ್ರೇಮ ನಿವೇದನೆ ಮಾಡಿದಾಗ, ತಾನು ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ಮದುವೆಯಾಗುವುದಾಗಿ ನಯವಾಗಿ ಹೇಳಿ ಪ್ರೀತಿ, ಪ್ರೇಮಗಳಿಂದ ದೂರ ಉಳಿದಿದ್ದ.
ಓದು ಮುಗಿದು, ಕೆಲಸವೂ ಸಿಕ್ಕ ಮೇಲೆ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ, ತನಗೆ ಕೆಲಸದಲ್ಲಿರುವ ಹುಡುಗಿ ಬೇಡ, ಮನೆಯಲ್ಲಿದ್ದು ಮನೆ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುವವಳು ಬೇಕು ಎಂಬ ಬೇಡಿಕೆ ಇಟ್ಟಿದ್ದ.
ಸಿಂಧೂ ಅಪ್ಪ ಅಮ್ಮನಿಗೆ ಒಬ್ಬಳೇ ಮಗಳು, ಚೆನ್ನಾಗಿ ಓದಿ ಒಳ್ಳೆಯ ಕೆಲಸದಲ್ಲಿದ್ದವಳು. ರಜತನ ಮದುವೆ ಪ್ರಸ್ತಾಪ ಬಂದಾಗ, ಅವಳ ಮನೆಯವರು ಉತ್ತಮ ಸಂಬಂಧ ತಾನಾಗಿ ಬಂದಿದ್ದರಿಂದ ಕೆಲಸ ಬಿಡಿಸಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.
ಸಿಂಧೂ ಮೊದಲದಿನದಿಂದಲೇ ರಜತ ಮತ್ತು ಅವನ ಮನೆಯವರನ್ನು ಹೊಂದಿಕೊಂಡಳು. ಹಾಗೆಯೇ ಮನೆಯಲ್ಲಿದ್ದ ರಾಖಿಯೊಂದಿಗೆ ತುಂಬಾ ವಿಶೇಷವಾದ ಬಾಂಧವ್ಯ ಬೆಳೆಸಿಕೊಳ್ಳತೊಡಗಿದಳು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ, ಮನೆಯ ಕೆಲಸಗಳು ಮುಗಿಯಿತೆಂದರೆ, ರಾಖಿಯ ಜೊತೆ ಇರುತ್ತಿದ್ದಳು. ರಾಖಿಗೂ ಅಷ್ಟೇ ಇವಳೆಂದರೆ ಪಂಚಪ್ರಾಣ. ಇವಳು ಇರುವ ಜಾಗದಲ್ಲೇ ಹಿಂದೆಮುಂದೆ ಓಡಾಡಿಕೊಂಡಿರುತ್ತಿದ್ದ.
ಮೊದಮೊದಲು ರಜತ್ ಮತ್ತು ಮನೆಯವರು ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲಿಲ್ಲ. ಪಾಪ ಅಪ್ಪ ಅಮ್ಮನನ್ನು ಬಿಟ್ಟು ಹೊಸ ಜಾಗಕ್ಕೆ ಬಂದಿದ್ದಾಳೆ, ಮಾಡುತ್ತಿದ್ದ ಕೆಲಸವನ್ನು ಬಿಟ್ಟಿರುವುದರಿಂದ ಹೊತ್ತು ಕಳೆಯಲು ರಾಖಿಯೊಂದಿಗೆ ಇರುತ್ತಾಳೆ, ಇರಲಿ ಎಂದು ಸುಮ್ಮನಿದ್ದರು. ಆದರೆ ದಿನಗಳೆದಂತೆ ಸಿಂಧೂ ಮತ್ತು ರಾಖಿಯ ಸಂಬಂಧ ಯಾವ ಕ್ಷಣದಲ್ಲೂ ಬಿಟ್ಟಿರಲಾರದಂತಾಗಿ ಮನೆಯವರಿಗೆ ಕಿರಿಕಿರಿಯಾಗತೊಡಗಿತು.
ಬೆಳಿಗ್ಗೆ ಇವಳು ಎದ್ದಳೆಂದರೆ, ರಾಖಿ ಪಕ್ಕಕ್ಕೆ ಬಂದುಬಿಡಬೇಕು. ಊಟ ತಿಂಡಿ ಮಾಡುವಾಗ, ಮನೆ ಕೆಲಸ ಮಾಡುವಾಗ, ಹೊರಗೆಲ್ಲಾದರೂ ಹೋಗಬೇಕೆಂದಾಗ, ಒಬ್ಬಳೇ ಇರಲಿ ಅಥವಾ ರಜತನ ಜೊತೆ ಹೋಗುವಾಗಿರಲಿ, ರಾಖಿ ಜೊತೆ ಇರಲೇ ಬೇಕು. ಯಾರು ಬೇಡವೆಂದರೂ ಕೇಳುತ್ತಿರಲಿಲ್ಲ. ಇದರಿಂದಾಗಿ ಮನೆಯವರಿಗೆ ಹಲವು ಬಾರಿ, ಹೊರಗಡೆ ಹೋದಾಗ ಮುಜುಗರ ಉಂಟಾಗಿತ್ತು.
ಮೊದಲು ರಜತ್ ನಂತರ ಅವನ ತಂದೆತಾಯಿ ಬುದ್ದಿ ಹೇಳಿದರು. ಅದು ಅವಳಿಗೆ ನಾಟದಿದ್ದಾಗ, ಅವಳ ತಂದೆತಾಯಿಯರಿಂದಲೂ ಬುದ್ದಿ ಹೇಳಿಸಿದರೂ, ಸಿಂಧೂ ಮಾತ್ರ ಬದಲಾಗಲಿಲ್ಲ.
ಈ ತಿಕ್ಕಾಟ ನಡೆಯುವಾಗಲೇ ಸಿಂಧೂ, ಮಗುವಿಗೆ ತಾಯಿ ಆಗುತ್ತಿರುವ ವಿಚಾರ ತಿಳಿಯಿತು. ಸಿಕ್ಕಪಟ್ಟೆ ವಾಂತಿ, ಏನು ತಿಂದರು ದಕ್ಕುತ್ತಿರಲಿಲ್ಲ. ವಿಪರೀತ ಸುಸ್ತು, ಎದ್ದು ಓಡಾಡಲು ಕಷ್ಟಪಡುತ್ತಿದ್ದಳು. ಡಾಕ್ಟರ್, ಮಗುವಾಗುವರೆಗೂ ತುಂಬಾ ಹುಷರಾಗಿರಬೇಕು, ಇವಳ ದೇಹಪರಿಸ್ಥಿತಿ ತುಂಬಾ ನಜೂಕಾಗಿರುವುದರಿಂದ ಸಂಪೂರ್ಣ ವಿಶ್ರಾಂತಿಯಲ್ಲೇ ಇರಬೇಕೆಂದು ಹೇಳಿದ್ದರು. ತಮ್ಮ ಮನೆಗೇ ಹೊಸ ಅತಿಥಿ ಬರುತ್ತಿರುವುದರಿಂದ ಎಲ್ಲರೂ ಇವಳ ಬಗ್ಗೆ ಕಾಳಜಿ ವಹಿಸತೊಡಗಿದರು. ಈ ಸಂದರ್ಭದಲ್ಲೂ ರಾಖಿ ಸಿಂಧೂವಿನ ಜೊತೆಗೇ ಇದ್ದು ಕಾಡುತ್ತಿದ್ದ. ಯಾರಾದರೂ ಜೋರು ಮಾಡಿದರೆ ಸ್ವಲ್ಪ ಹೊತ್ತು ಹೊರಹೋದವನು, ಅಲ್ಲಿ ಯಾರೂ ಇಲ್ಲ ಎಂದು ತಿಳಿದೊಡನೆ ಮತ್ತೆ ಕಳ್ಳನಂತೆ ಒಳಗೆ ಬಂದಿರುತ್ತಿದ್ದ. ಇದರಿಂದ ಮನೆಯವರಿಗೆ ಸಾಕಾಗಿ ಹೋಗಿತ್ತು.
ಇನ್ನೇನು ನವಮಾಸಗಳು ಮುಗಿದು ಹೊಸ ಸದಸ್ಯ ಮನೆಗೆ ಬರುವನೆಂದು ಎಲ್ಲರೂ ಕಾತರದಿಂದ ಕಾಯುವಾಗ, ಸ್ನಾನಕ್ಕೆಂದು ಹೋದವಳು ಹೇಗೆ ಜಾರಿಬಿದ್ದಳೋ ಗೊತ್ತಿಲ್ಲ, ಬಿದ್ದ ರಭಸಕ್ಕೆ ಹೊಟ್ಟೆಗೆ ಏಟು ಬಿದ್ದು ರಕ್ತಸ್ರಾವ ಆಗತೊಡಗಿತ್ತು. ಸಧ್ಯ ರಜತ್ ಮನೆಯಲ್ಲೇ ಇದ್ದ. ಇವಳು ಬಿದ್ದ ಶಬ್ದ ಕೇಳಿ ತಕ್ಷಣ ಓಡಿಬಂದು ನೋಡಿದರೆ, ಸಿಂಧೂ ಪ್ರಙ್ನೆತಪ್ಪಿ ಬಿದ್ದಿದ್ದಳು. ಅವನು ತಡಮಾಡದೆ ಡಾಕ್ಟರಿಗೆ ಕರೆಮಾಡಿ, ತನ್ನದೇ ಕಾರಿನಲ್ಲಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದ. ಇವನು ಕರೆ ಮಾಡಿದ್ದರಿಂದ ಡಾಕ್ಟರ್, ಆ ಸಮಯದಲ್ಲಿ ಅಲ್ಲಿರುವ ಡ್ಯೂಟಿ ಡಾಕ್ಟರ್ ಗಳಿಗೆ ವಿಚಾರ ತಿಳಿಸಿದ್ದರು.
ಅವರು ಸಿಂಧೂಳನ್ನು ಪರೀಕ್ಷಿಸಿ, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯಬೇಕು, ರಕ್ತಸ್ರಾವ ತುಂಬಾ ಆಗಿರುವುದರಿಂದ ರಕ್ತವೂ ಬೇಕು, ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಆದರೆ ತಾಯಿ ಮತ್ತು ಮಗುವಿನ ಜೀವದ ಕುರಿತು ಸದ್ಯಕ್ಕೆ ಖಾತರಿಕೊಡುವುದಿಲ್ಲ, ಯಾವುದಕ್ಕೂ ನಿಮ್ಮ ಒಪ್ಪಿಗೆ ತಿಳಿಸಿ ಎಂದರು. ಯಾವುದಕ್ಕೂ ಯೋಚಿಸಲು ಸಮಯವಿರದ ಕಾರಣ, ತನ್ನ ತಂದೆತಾಯಿಗೆ, ಸಿಂಧೂ ಅಪ್ಪ ಅಮ್ಮನಿಗೆ ವಿಚಾರ ತಿಳಿಸಿ ಮುಂದಿನ ವಿಚಾರಕ್ಕೆ ಒಪ್ಪಿಗೆ ಸೂಚಿಸಿ, ದೇವರಲ್ಲಿ ಪ್ರಾರ್ಥಿಸುತ್ತಾ ಕುಳಿತ. ಅದಾವುದೋ ಮಾಯದಲ್ಲಿ ರಾಖಿಯೂ ಅಲ್ಲಿಗೆ ಬಂದಿದ್ದ. ಅಲ್ಲಿಗೂ ರಾಖಿ ಬಂದದ್ದನ್ನು ನೋಡಿ, ರಜತ್ ಏನೂ ಹೇಳದ ಪರಿಸ್ಥಿತಿಯಲ್ಲಿದ್ದ.
ಸ್ವಲ್ಪ ಹೊತ್ತಿನಲ್ಲೇ ಒಳಗಡೆ ಮಗು ಆಳುವ ಸದ್ದು ಕೇಳಿಸಿತು. ಆಗ ಹೊರಬಂದ ನರ್ಸ ಹೆಣ್ಣು ಮಗು ಹುಟ್ಟಿದ ವಿಚಾರ ತಿಳಿಸಿದಳು.
ಯಾರು ಬರುವುರೆಂದು ಇಷ್ಟು ದಿನ ಕಾದಿದ್ದನೋ, ಅವರು ಬಂದರೆಂದು ತಿಳಿದೂ ಕೂಡ ರಜತನಿಗೆ ಸಂತೋಷವಾಗಲಿಲ್ಲ. ಅವನ ಮನಸ್ಸೆಲ್ಲಾ ಸಿಂಧೂಳನ್ನು ನೋಡಲು ಹಾತೊರೆಯುತ್ತಿತ್ತು. ಇವನ ತಂದೆತಾಯಿಯರು ಅಲ್ಲಿಗೆ ಬಂದರು. ಅವರಿಗೂ ಮಗುವಾದ ವಿಚಾರ ತಿಳಿದು ಸಂತೋಷವಾಗಲಿಲ್ಲ. ಅವರೂ ಸಿಂಧೂವಿನ ಬಗ್ಗೆ ಚಿಂತಿತರಾಗಿದ್ದರು.
ರಜತ್, ಅವನ ತಂದೆತಾಯಿ, ರಾಖಿ ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಶಸ್ತ್ರಚಿಕಿತ್ಸೆ ಕೊಠಡಿಯ ಬಳಿಯೇ ಕುಳಿತಿದ್ದರು. ಡಾಕ್ಟರರು, ನರ್ಸಗಳು ಧಾವಂತದಿಂದ ಒಳಹೊರಗೆ ಓಡಾಡುತ್ತಿದ್ದರು. ಅವರಿಗೆ ಸಿಂಧೂ ಹೇಗಿದ್ದಳೆಂದು ಕೇಳಿದರೆ, ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ಅವಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಈಗಲೇ ಏನೂ ಹೇಳಲಾರೆವು ಎನ್ನುತ್ತಿದ್ದರು.
ಸಿಂಧೂ ತಂದೆತಾಯಿ ಒಳಬರುವುದ್ದಕ್ಕೂ, ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹೊರಬಂದ ಡಾಕ್ಟರ್, ಸ್ಸಾರಿ ನಾವು ಎಷ್ಟೇ ಪ್ರಯತ್ನಪಟ್ಟರು ತಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದರು. ಈ ವಿಚಾರ ತಿಳಿಯುತ್ತಿದ್ದಂತೆ ರಜತ್ ನಿಂತಲ್ಲಿಯೇ ತಲೆತಿರುಗಿ ಬಿದ್ದುಬಿಟ್ಟ. ಅಲ್ಲಿದ್ದ ಪ್ರತಿಯೊಬ್ಬರಿಗೂ ಸಿಡಿಲು ಬಡಿದಂತಾಯಿತು.
ಯಾರಿಗೆ ಏನಾದರೇನೂ ಕಾಲ ನಿಲ್ಲಬೇಕಲ್ಲ, ವಿಧಿಯಾಟದ ಮುಂದೆ ನಾವು ತಲೆಬಾಗಲೇ ಬೇಕು. ಡಾಕ್ಟರರ ಉಪಚಾರದಿಂದ ಸ್ವಲ್ಪ ಹೊತ್ತಿನಲ್ಲೇ ರಜತ್ ಎದ್ದು ಕುಳಿತ. ಹೃದಯವನ್ನು ಗಟ್ಟಿಮಾಡಿಕೊಂಡು ಮುಂದಿನ ಕೆಲಸದ ಬಗ್ಗೆ ಗಮನ ಹರಿಸಿದ. ಎಲ್ಲರೂ ಸಿಂಧೂ ಅಕಾಲಿಕ ಸಾವಿಗೆ ಮರಗುವವರೆ. ಅವಳ ಪ್ರತಿರೂಪವನ್ನು ಮಗುವಿನಲ್ಲಿ ಕಾಣುವಂತೆ, ಮುಂತಾಗಿ ತಮಗೆ ತಿಳಿದಂತೆ ಸಮಾಧಾನ ಪಡಿಸುತ್ತಿದ್ದರು.
ರಾಖಿ, ಸಿಂಧೂ ಇನ್ನಿಲ್ಲ ಎಂಬ ತಿಳಿದ ಕ್ಷಣದಿಂದ ಮಂಕಾದ. ಅವಳ ದೇಹವನ್ನು ಮನೆಯಿಂದ ಹೊತ್ತೋಯ್ದ ನಿಮಿಷದಿಂದ, ಮನೆಯ ಹೊರಭಾಗದಲ್ಲಿ ತೂಗು ಮಂಚದ ಬಳಿ ಕುಳಿತವನು ಏಳಲೇ ಇಲ್ಲ. ಆ ಮಂಚ ಸಿಂಧೂ ತುಂಬಾ ಇಷ್ಟಪಡುತ್ತಿದ್ದಳು. ಇವರಿಬ್ಬರ ಚಿನ್ನಾಟ ಅಲ್ಲೇ ಹೆಚ್ಚಾಗಿ ನಡೆಯುತ್ತಿತ್ತು, ಹಾಗಾಗಿ ರಾಖಿ ಅಲ್ಲಿ ಕುಳಿತ್ತಿದ್ದ.
ಮೂರುದಿನ ಎಲ್ಲರ ಗಮನ ಕ್ರಿಯಕರ್ಮಗಳ ಕಡೆ ಇದದ್ದರಿಂದ ಯಾರ ಗಮನವೂ ರಾಖಿಯ ಕಡೆ ಹೋಗಿರಲಿಲ್ಲ. ನಾಲ್ಕನೇ ದಿನ ಮಧ್ಯಾಹ್ನ, ರಜತ್ ಹೊರಬಂದಾಗ, ಆಕಸ್ಮಿಕವಾಗಿ ರಾಖಿಯ ಮೇಲೆ ಬಿತ್ತು. ಅವನಲ್ಲಿ ಸ್ವಲ್ಪವೂ ಲವಲವಿಕೆ ಇರಲಿಲ್ಲ. ಕಣ್ಣುಗಳು ನಿಸ್ತೇಜವಾಗಿದ್ದವು. ಇವನು ಹತ್ತಿರ ಹೋಗಿ ರಾಖಿ ಎಂದು ಕೂಗಿದರೆ ಕಣ್ಣು ತೆರೆದು ನೋಡಿದನೆ ಹೊರತು, ಮೇಲೆಳಲ್ಲಿಲ್ಲ. ರಜತ್ ಎಷ್ಟೇ ಪ್ರಯತ್ನಪಟ್ಟರೂ ಅವನಲ್ಲಿ ಸ್ವಲ್ಪವೂ ಚಲನೆ ಮೂಡಲಿಲ್ಲ. ಕೊನೆಯದಾಗಿ ರಜತ್ ತನ್ನ ಪರಿಚಯದ ಡಾಕ್ಟರಿಗೆ ಕರೆಮಾಡಿ, ಮನೆಯ ಪರಿಸ್ಥಿತಿ ತಿಳಿಸಿ, ಅವರಿಗೇ ಮನೆಗೆ ಬಂದುಹೋಗಲು ವಿನಂತಿಸಿದ. ಅವರು ಬಂದು ರಾಖಿಯನ್ನು ಪರೀಕ್ಷಿಸಿ, ಮೂರು ದಿನದಿಂದ ಏನೂ ತಿನ್ನದೆ, ಕುಡಿಯದಿರುವುದರಿಂದ ಸಂಪೂರ್ಣ ನಿತ್ರಾಣವಾಗಿದ್ದಾನೆ. ಊಟ ಮಾಡಿದರೆ ಎರಡು ದಿನದಲ್ಲಿ ಸರಿಹೋಗುತ್ತಾನೆಂದು, ಚುಚ್ಚುಮದ್ದು ನೀಡಿ, ಊಟದಲ್ಲಿ ಬೆರೆಸಿಕೊಡಲು ಔಷಧೀಯನ್ನು ಕೊಟ್ಟು ಹೋದರು.
ಮನೆಯವರು ಯಾರು ಎಷ್ಟೇ ಪ್ರಯತ್ನಪಟ್ಟರೂ ರಾಖಿ ಒಂದು ಹನಿ ನೀರನ್ನೂ ಕುಡಿಯಲಿಲ್ಲ, ಒಂದಾಗಳು ಅನ್ನವನ್ನು ತಿನ್ನಲ್ಲಿಲ್ಲ. ಅವನು ಏನನ್ನೂ ತಿನ್ನದಿದ್ದಾಗ ಔಷಧಿ ಕೊಡುವುದು ಹೇಗೆ, ಅದು ಸಾಧ್ಯವಾಗಲಿಲ್ಲ. ದಿನದಿಂದ ದಿನಕ್ಕೆ ಸೊರಗಿದ ರಾಖಿ, ಸಿಂಧೂ ಹೋದ ಹತ್ತನೇ ದಿನಕ್ಕೆ ಕಣ್ಣ್ಮುಚಿದ. ಇದು ಮನೆಯವರಿಗೆ ಮತ್ತೊಂದು ಆಘಾತ.
ಸಿಂಧೂವಿಗೆ ನಡೆಸಿದ ವಿಧಿವಿಧಾನಗಳಂತೆಯೇ ರಾಖಿಯದು ನಡೆಸಿ, ಅವಳ ಪಕ್ಕದಲ್ಲೇ ಮಣ್ಣು ಮಾಡಲು ಸ್ಮಶಾನಕ್ಕೆ ಬಂದಾಗ, ಅಲ್ಲಿಯವರು ನಾಯಿಗೆ ಮಣ್ಣು ಮಾಡಲು ಇಲ್ಲಿ ಅವಕಾಶ ಇಲ್ಲ ಎಂದರು. ಆಗ ರಜತ್, ಸಿಂಧೂ ಮತ್ತು ರಾಖಿ ಜೊತೆಗಿದ್ದ ರೀತಿಯನ್ನೂ ಅವಳು ಹೋದನಂತರ, ಅವಳಿಗಾಗಿ ಶೋಕಿಸಿ ಉಪವಾಸವಿದ್ದು ಪ್ರಾಣ ಬಿಟ್ಟಿದ್ದನ್ನು ಹೇಳಿದಾಗ, ಅನುಮತಿ ದೊರೆಯಿತು.
ಯಾವುದೋ ಊರಿನಲ್ಲಿ ಹುಟ್ಟಿ ಬೆಳೆದ ಹೆಣ್ಣು, ಮತ್ತೊಂದು ಮನೆಯನ್ನು ಬೆಳಗಲು ಬಂದು, ಮನುಷ್ಯ ಸಂಬಂಧಗಳ ಜೊತೆ ರಾಖಿಯನ್ನು ಹಚ್ಚಿಕೊಂಡು ಮಿಡಿದು ಮಡಿದ ರೀತಿ..........
