ರಾಜೀ
ರಾಜೀ
ರಾಜಲಕ್ಷ್ಮಿ ಉರುಫ್ ರಾಜಿ ಇಡೀ ಜೀವನದಲ್ಲಿ ಸುಖ ಸಂತೋಷ ಅಂದರೆ ಏನು ಅಂತ ಅರಿಯದಮುಗ್ದ ಹೆಣ್ಣು. ನಾಲ್ಕು ಜನ ಸಹೋದರರು ನಾಲ್ಕು ಜನ ಸಹೋದರಿಯರು ಇದ್ದರೂ ಅವರವರ ಚಿಂತೆ ಅವರವರಿಗೆ. ಕಾರಣ ತಂದೆಗೆ ಇಬ್ಬರು ಹೆಂಡತಿಯರು ರಾಜಿ ಎರಡನೇ ಹೆಂಡತಿ ಮಗಳು.ಮದುವೆಯಾಗಿದ್ದ ಒಬ್ಬ ಅಣ್ಣನ ಮನೆಯಲ್ಲಿ ಕೆಲವುದಿನ ಮದುವೆಯಾಗಿದ್ದ ಇಬ್ಬರು ಅಕ್ಕಂದಿರ ಮನೆಯಲ್ಲಿ ಕೆಲವು ದಿನ ಹೀಗೆ ಅಮ್ಮ ಅವರ ಸಹಾಯಕ್ಕಾಗಿ ಆಗಾಗ ಕಳುಹಿಸುತ್ತಿದ್ದರಿಂದ ಓದು ಅರ್ಧಕ್ಕೆ ನಿಂತು ಹೋಯ್ತು. ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಊರಿಗೆ ಹೋಗುವುದು ಇಷ್ಟ .ಒಬ್ಬಳನ್ನೆ ಯಾರದೋ ಪಕ್ಕದಲ್ಲೂ ಕೂಡಿಸಿ ಇವಳನ್ನ ನೀವು ಇಳಿಯೋವಾಗ ಸ್ವಲ್ಪ ಇಳಿಸಿ ಬಿಡಿ ಅಲ್ಲಿಂದ ಮನೆಗೆ ಹೋಗ್ತಾಳೆ ಅಂತಿದ್ರು. ಗಂಡಸರ ಪಕ್ಕದಲ್ಲಿ ಅದರಲ್ಲೂ ಸ್ವಲ್ಪ ವಯಸ್ಸಾದವರ ಪಕ್ಕದಲ್ಲಿ ಕೂತರಂತೂ ಆಗುತ್ತಿದ್ದ ಹಿಂಸೆ ಪಕ್ಕದ ಮನೆಯ ಸುಮಿತ್ರಾ ಆಂಟಿ ಹತ್ರ ಹೇಳಿಕೊಂಡಿದ್ದಳು . ಊರಿಗೆ ಹೋದಮೇಲೆ ಮನೆಗೆ ಬಂದುಬಿಡುವ ತವಕ. ಕಾರಣ ಅಲ್ಲಿನ ಮನೆಯ ವಾತಾವರಣ. ಚಿಕ್ಕ ಹುಡುಗಿ ನೂರೆಂಟು ಕನಸುಗಳು ಬರೀ ಕನಸುಗಳಾಗೆ ಉಳಿದು ಬಿಡುತ್ತೇನೋ ಅನ್ನೊ ಭಯ . ಕಥೆ ಪುಸ್ತಕ ಓದ ಬೇಕಿನಿಸಿದರೆ ಯಾರೂ ಇಲ್ಲದ ವೇಳೆ ಕದ್ದು ಮುಚ್ಚಿ ಓದಬೇಕು. ಆಗ ರೇಡಿಯೋ ಕೇಳುವ ಆಸೆ . ಬಿನಾಕ ಗೀತ್ ಮಾಲಾ ಅದರಲ್ಲೂ ಅಮೀನ್ ಸಯ್ಯಾನಿ ಧ್ವನಿ ಕೇಳುವುದೇ ಒಂದು ಪುಳಕ . ಯಾರದೋ ಮನೆಯಲ್ಲಿ ರೇಡಿಯೋ ಹಾಕಿದ್ದರೆ ಹೊರಗಡೆ ನಿಂತು ಕೇಳಿಸಿ ಕೊಳ್ಳೋದು. ಹೊರಗೆ ಯಾಕೆ ಒಬ್ಬಳೇ ನಿಂತಿದಿ ಅಂದರೆ ಒಳಗೆ ಓಡಿಬರೋದು . ಬುಧುವಾರ ಎಂಟು ಗಂಟೆ ಆದರೆ ಜನ ಕಾತುರದಿಂದ ಕಾಯುತ್ತಿದ್ದ ಕಾಲ ಅದು.ತಾಯಿ ಮನೆಯಲ್ಲಿ ಒಬ್ಬ ಅಣ್ಣನ ಹತ್ತಿರ ರೇಡಿಯೋ ಇತ್ತು. ಮುಟ್ಟುವ ಹಾಗಿಲ್ಲ. ಹಿಂದಿ ಹಾಡುಗಳು ಅಂದರೆ ರಾಜಿಗೆ ಪ್ರಾಣ ಆದರೆ ಮನೆಯಲ್ಲೇ ಸ್ವಾತಂತ್ರ ವಿಲ್ಲ. ಹಾಕಿದರೆ ಕೇಳುವುದು. ಇಲ್ಲದಿದ್ದರೆ ಇಲ್ಲ. ಪಕ್ಕದ ಮನೆಯ ಸುಮಿತ್ರಾ ಮಾಮಿ ಗೆ ರಾಜಿಯನ್ನ ಕಂಡರೆ ಬಹಳ ಇಷ್ಟ. ಯಾಕಂದ್ರೆ ಮನಸ್ಸಲ್ಲಿ ಇದ್ದುದನ್ನೆಲ್ಲ ಹೇಳಿಕೊಂಡು ಬಿಡ್ತಿದ್ಲು . ಎಷ್ಟೋ ದಿನಗಳು ಅಮ್ಮ ಇನ್ನೂ ತಿಂಡಿ ಮಾಡಿಲ್ಲ ಅಂದರೆ ಅವರ ಮನೆಯಲ್ಲೇ ಆಗ್ತಿತ್ತು. ಇದು ಹೇಗೋ ಅಣ್ಣನಿಗೆ ಗೊತ್ತಾಗಿ ಅವರ ಮನೆಗೆ ಹೋಗಬಾರದೆಂದು ಹೇಳಿಬಿಟ್ಟರು. ಮನೆಯಲ್ಲಿ ಒಂದು ಇದ್ದರೆ ಇನ್ನೊಂದಿರಲ್ಲ ಯಾವಾಗ ಮಕ್ಕಳು ತಂದು ಕೊಡ್ತಾರೋ ಆಗ ಅಡುಗೆ ಊಟ. ಅದು ಮೂರು ಗಂಟೆ ಆದರೂ ಆಗಬಹುದು ಇಲ್ಲ ನಾಲ್ಕು ಗಂಟೆ ಆದ್ರೂ ಆಗಬಹುದು. ಗಂಡು ಮಕ್ಕಳು ಹೇಗೋ ಹಸಿವಾದರೆ ಹೊರಗೆ ಹೋಟೆಲ್ ನಲ್ಲಿ ತಿಂದು ಬರ್ತಾ ಇದ್ರು. ಹೆಣ್ಣುಮಕ್ಕಳು ಹೋಟೆಲ್ ಗೆ ಹೋಗೋ ಕಾಲ ಅಲ್ಲ ಅದು. ದೊಡ್ಡ ಅಕ್ಕ ಭಾವ ಮನಸ್ಸು ಮಾಡಿ ರಾಜಿಗೆ ಒಂದು ಹುಡುಗನನ್ನ ಹುಡುಕಿ ಮದುವೆ ಮಾಡಲು ಒಪ್ಪಿದರು.ಮದುವೆಗೆ ಆರು ತಿಂಗಳು ಸಮಯವಿತ್ತು .ಇವರ ಮನೆಗೆ ಹುಡುಗ ರಾಜಿಯನ್ನ ನೋಡಲು ಆಗಾಗ ಬರುತ್ತಿದ್ದ. ಒಂದುದಿನ ಇಬ್ಬರೇ ಮನೆಯ ಹತ್ತಿರ ಇದ್ದ ಪಾರ್ಕ್ ನಲ್ಲಿ ಕುಳಿತು ಮಾತನಾಡುವಾಗ ಇವಳು ತನ್ನ ಮನೆಯ ಕಷ್ಟ , ತಂದೆ ಇಲ್ಲದ ಕಾರಣ ಅಕ್ಕ ಭಾವ ಮದುವೆ ಮಾಡಬೇಕಾದ ಅನಿವಾರ್ಯ ಎಲ್ಲಾ ಹೇಳಿಕೊಂಡಾಗ ಅವನಿಗೂಅರ್ಥವಾಗಿ ಇವಳ ಮುಗ್ಧ ಮನಸ್ಸಿಗೆ ಸೋತು ದೇವಸ್ಥಾನದಲ್ಲಿ ಮದುವೆ ಆಗುವುದಾಗಿ ಅವರ ತಂದೆ ತಾಯಿಯನ್ನು ಒಪ್ಪಿಸಿ ಒಂದು ದಿನ ಮದುವೆಯಾದ. ಒಂದು ದಿನವೂ ಅವಳ ಕಣ್ಣಲ್ಲಿ ನೀರು ಬರದ ಹಾಗೆ ನೋಡಿಕೊಂಡ ಅಂತ ಎಲ್ಲರಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ರಾಜಿಅನೇಕ ಕನಸುಗಳನ್ನ ಹಾಗೆ ಗಂಡನ ಬಳಿಯೇ ಬಿಟ್ಟು ಇಹಲೋಕ ತ್ಯಜಿಸಿದಾಗ ಗಂಡ ಹುಚ್ಚನಂತೆ ದಿನಗಳನ್ನ ಕಳೆದ. ರಾಣಿಯಂತೆ ನೋಡಿಕೊಳ್ಳಬೇಕೆಂದು ಇದ್ದ ಅವನ ಆಸೆ ಮಣ್ಣು ಪಾಲಾಯ್ತು. ರಾಜಿ ಈಗ ಅವನಿಗೆ ಬರೀ ನೆನಪಷ್ಟೇ.