ಪ್ರೀತಿಗೆ ಸೋಲಾಯಿತಾ?ಮೋಸವಾಯಿತಾ? 1
ಪ್ರೀತಿಗೆ ಸೋಲಾಯಿತಾ?ಮೋಸವಾಯಿತಾ? 1
ನಾನು ಈ ಊರಲ್ಲಿದ್ರೆ ಸಾಲದ ಸುಳಿಯೊಳಗೆ ಸಾಯಬೇಕಾಗುತ್ತೆ , ಜೊತೆಗೆ ನಾನು ಏನನ್ನು ಸಾಧಿಸೋಕೆ ಆಗೋದು ಇಲ್ಲ , ಅಡ್ಡಗಾಲು ಹಾಕೋರೆ ಹೆಚ್ಚಾಗಿದಾರೆ , ನಮ್ಮೊರೆ ನಮಗೆ ಮುಂದೆ ಹೋಗೋಕೆ ಬಿಡ್ತಿಲ್ಲ , ಅದಕ್ಕೆ ಹೇಳ್ತಿದೀನಿ ದಯವಿಟ್ಟು ನನ್ನ ಹೋಗೋಕೆ ಬಿಡಿ. ಇನ್ನ ನೀವು ಏನ್ ಬೇಕಾದ್ರೂ ಹೇಳಿ , ನಾನಂತೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ , ಹೋಗಬೇಕೆಂದು ನಿರ್ಧಾರ ಮಾಡಿಯಾಗಿದೆ ಅಷ್ಟೇ.
ಮಗ ಸಂಚಿತ್ ನ ಮಾತು ಕೇಳಿ ಕಲ್ಪನಾ ಹಾಗೂ ಸುಂದರ್ ದಂಪತಿಗಳು ಗರಬಡಿದವರಂತೆ ನಿಂತಿದ್ದರು. ಜೊತೆಗೆ ತಮ್ಮ ಮಗ ಹೇಳ್ತಿರೋದ್ರಲ್ಲಿ ಸ್ವಲ್ಪ ಸತ್ಯ ಇದೆ ಅಂತಾ ಅನ್ನಿಸಿತ್ತು. ಈ ಹಿಂದೆ ತಮ್ಮ ಮಗ ಅದ್ಯಾವುದೋ ಆಯಿಲ್ ಬಿಸಿನೆಸ್ ಮಾಡಲು ಹೋಗಿ ತಮ್ಮವರೆಂದು ನಾಟಕ ಮಾಡುವವರ ಪಿತೂರಿಯಿಂದ ಎಲ್ಲ ನಷ್ಟ ಆಗಿ ಕೈ ಸುಟ್ಟುಕೊಂಡಿದ್ದನು. ಒಮ್ಮೆ ಸುಟ್ಟುಕೊಂಡ ಅನುಭವ ಸಾಕಾಗಿಲ್ಲ ಅನಿಸಿತ್ತು ಮತ್ತೂ ಒಮ್ಮೆ ಬೇರೆ ಕೆಲಸಕ್ಕೆ ಕೈ ಹಾಕಿ ಮತ್ತೊಮ್ಮೆ ಹಾನಿಗೊಳಗಾಗಿದ್ದರು. ಇದೆಲ್ಲವೂ ನೆನಪಿಗೆ ಬಂದು ಸುಂದರ್ , "ನೋಡು ಕಲ್ಪನಾ ನಮ್ಮ ಮಗ ಮುಂದೆ ಬರಬೇಕೆಂದರೆ ಸ್ವಲ್ಪ ದಿನ ಇಲ್ಲಿಂದ ಕಾಲು ಕೀಳಲೇಬೇಕು. ಎಷ್ಟ್ ದಿನ ಸುಮ್ಮನೆ ಇರೋದು , ನಾಳೆ ಮಗನ ಮದುವೆ ಮಾಡುವಾಗಲಾದರೂ ಹುಡುಗನ ಕೆಲಸ ಏನು ಅಂದ್ರ ಹೇಳೋಕಾದರೂ ಒಂದು ಸಣ್ಣ ಕೆಲಸನಾದ್ರೂ ಇರಬೇಕಲ್ವಾ" ಏನಂತೀಯಾ ನೀನು ಎಂದು ಸುಂದರ್ ಕೇಳಿದನು.
ಕಲ್ಪನಾ: ಆಯ್ತು ರಿ , ಅವನು ಹೇಳಿದಂಗೆ ಆಗಲಿ.
ಸಂಚಿತ್: ಅಮ್ಮ ನಾನು ನಾಳೆನೆ ಹೊರಡ್ತೀನಿ. ಬಟ್ಟೆ ಪ್ಯಾಕ್ ಮಾಡೋಣವಾ .
ಸುಂದರ್ : ಮಗನೇ ನೀನು ರೆಸ್ಟ್ ಮಾಡು. ನಾನು ನಿಮ್ಮಮ್ಮ ಖಾಲಿ ಇದೀವಿ , ನಾವೇ ಪ್ಯಾಕ್ ಮಾಡ್ತೀವಿ.
ಸಂಚಿತ್ : ಅಯ್ಯೋ ಬಿಡಿ ಅಪ್ಪ ನೀವು , ಅದೆಷ್ಟು ಬಟ್ಟೆ ಅಂತೀರಾ ನೀವು , ಒಂದ್ ನಾಲ್ಕು ಜೋಡಿ ಬಟ್ಟೆ ಅಲ್ವಾ ಇರೋದು , ನಾನೇ ಮಾಡ್ಕೋತೀನಿ.
ಕಲ್ಪನಾ : ಸರಿ ಸರಿ , ಅಪ್ಪ ಮಗ ರೆಸ್ಟ್ ಮಾಡ್ರಿ , ನಾನಿದ್ದೀನಿ ಅಲ್ವಾ , ಬಟ್ಟೆ ಚಿಂತೆ ಮಾಡೋದ ಬಿಡ್ರಿ.
ಹಾಗೂ ಹೀಗೂ ಪ್ಯಾಕ್ ಆಯ್ತು. ಮಗ ಹೊರಟು ನಿಂತ. ಅಮ್ಮನ ಕಣ್ಣಂಚು ಒದ್ದೆಯಾಗಿ , ಸೀರೆ ಸೆರಗು ಹಸಿಯಾಯ್ತು. ಅಮ್ಮನ ಅಳು ಹೋಗಿಸಲು ಜೋಕ್ ಮಾಡಿ ನಗಿಸಿ ಹೊರಟನು ಸಂಚಿತ್.
ಊರು ಹೊಸತು , ಜನ ಹೊಸಬರು , ಮೊದಲು ಮೊದಲಿಗೆ ಇರಲು ತುಂಬಾ ಕಷ್ಟ ಪಟ್ಟನು . ಕೆಲಸ ಹುಡಕಬೇಕಲ್ಲ , ಆತನ ಸ್ನೇಹಿತರಿಗೆ ಸಂಪರ್ಕ ಮಾಡಿ , ಹೇಗೋ ಸರ್ಕಸ್ ಮಾಡಿ ಕೆಲಸ ಪಡೆದನು. ಆಗ ಆತನ ಸ್ನೇಹಿತರ ನೆರವಿನಿಂದ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದನು. ಒಬ್ಬ ಇರಲು ಅನುಕೂಲಸ್ತ ಮನೆ ಅದಾಗಿತ್ತು. ಅದು ಆತನಿಗೆ ಬಾಳು ಕಟ್ಟಿಕೊಳ್ಳಲು ಅನುಕೂಲವಾಯಿತು. ಸಂಚಿತ್ ನಿಗೆ ಮನೆ ಮಾಲಕರು ರಾತ್ರಿಯ ಊಟವನ್ನು ತಾವೇ ಕೊಡುತ್ತಿದ್ದರು. ಹೀಗಾಗಿ ಅಲ್ಪ ಸ್ವಲ್ಪ ಹಣ ಉಳಿತಾಯವಾಗುತ್ತಿತ್ತು. ಆ ರಾತ್ರಿ ಊಟದ ಐವತ್ತು ರೂಪಾಯಿ ಹಣವನ್ನು ಪ್ರತಿದಿನ ಕೂಡಿಡಲು ಶುರು ಮಾಡಿದನು. ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತಿನಂತೆ ಸಂಚಿತ್ ನ ಕೂಡಿಟ್ಟ ಆ ದುಡ್ಡಿನ ಜೊತೆಗೆ ಸ್ವಲ್ಪ ಹಣವನ್ನು ಸೇರಿಸಿ ತನ್ನ ಅಪ್ಪ ಅಮ್ಮನಿಗೆ ಕಳಿಸುತ್ತಿದ್ದನು.
ಹೀಗೆ ಸಾಗಿರಲು , ಮನೆ ಮಾಲಕರಿಗೆ ಸಂಚಿತ್ ನ ಗುಣ , ನಡತೆ , ಆತನ ವರ್ತನೆಗಳು ತುಂಬಾ ಹಿಡಿಸಿದವು. ತಮ್ಮ ಮಗಳಿಗೆ ವರನ ಅನ್ವೇಷಣೆಯಲ್ಲಿದ್ದರು. ಇದ್ದರೆ ಈ ಸಂಚಿತ್ ನ ತರಹ ಇರಬೇಕು , ಹೀಗಿದ್ದರೆ ಯಾವ ಹೆಣ್ಣು ಮಕ್ಕಳಿಗೂ ಕಷ್ಟ ಗೊತ್ತಾಗೋದೇ ಇಲ್ಲ , ಆತನು ಎಲ್ಲ ಹೆಣ್ಣುಮಕ್ಕಳಿಗೆ ಕೊಡುವ ಗೌರವ ನೋಡಿದರೆ ತುಂಬಾ ಖುಷಿಯಾಗುತ್ತದೆ ಎಂದು ಮಾಲಕರು ತಮ್ಮ ಧರ್ಮಪತ್ನಿಯೊಡನೆ ಮಾತನಾಡಿದರು.
ಅವರಿಬ್ಬರಿಗೆ ಸಂಚಿತ್ ನ ಗುಣ ಇಷ್ಟವಾಗಿತ್ತು ,ಆತನೂ ಇಷ್ಟವಾಗಿದ್ದ , ಆದರೆ ಆತನ ಮನೆಯ ಆರ್ಥಿಕ ಪರಿಸ್ಥಿತಿ ಕಂಡು ಮಗಳನ್ನು ಕೊಡಲು ಒಂದು ಹೆಜ್ಜೆ ಹಿಂದೆ ಸರಿದರು. ಆದರೆ ಮಗಳು ಅವರಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿದ್ದಳು. ಮಗಳು ಅನ್ವಿತಾಳ ಕೆಲವೊಂದು ವರ್ತನೆಗಳು ಆಕೆಯ ಅಮ್ಮನಿಗೆ ಒಮ್ಮೊಮ್ಮೆ ಸಂದೇಹಕ್ಕೆ ದಾರಿ ಮಾಡಿ ಕೊಟ್ಟಂತೆ ಕಾಣುತ್ತಿದ್ದವು. ಆದರೆ , ಮಗಳನ್ನು ಪ್ರಶ್ನೆ ಮಾಡಲೂ ಧೈರ್ಯ ಮಾಡಲಿಲ್ಲ. ಬೆಳೆದ ಮಗಳು , ಮೇಲಾಗಿ ಒಮ್ಮೆಲೇ ತಾನು ಆ ರೀತಿ ಕೇಳಿಬಿಟ್ಟರೆ ಮಗಳಾದರೂ ಏನೆಂದುಕೊಂಡಾಳು ಅಂತ ಯೋಚಿಸಿ ಸುಮ್ಮನಾದಳು.
ಆದರೂ ಸಂಶಯದ ಸುಳಿಯೊಂದು ತಲೆಯಲ್ಲಿ ಸುಳಿಯಲು ಶುರು ಮಾಡಿತು.
ಆ ಸಂಶಯದ ಸುಳಿ ಏನೆಂದು ಮುಂದಿನ ಭಾಗದಲ್ಲಿ ನೋಡೋಣ..
