Kalpana Nath

Tragedy Inspirational Others

4.2  

Kalpana Nath

Tragedy Inspirational Others

ಪಂಕಜ

ಪಂಕಜ

2 mins
51


 


ಜೀವನದಲ್ಲಿ ಕಷ್ಟ ಸುಖ ಎರಡೂ ಇದ್ದೇ ಇರುತ್ತೆ ಅನ್ನುವುದು ಸಾಮಾನ್ಯ. ಆದರೆ ಕೆಲವರ ಜೀವನದಲ್ಲಿ ಸುಖ ಬರೀ ಕನಸಾಗಿ, ಒಂದಲ್ಲಾ ಒಂದು ಕಷ್ಟಗಳೇ ಮೇಲಿಂದ ಮೇಲೆ ಎರಗಿ ಬಂದರೆ ಎದ್ದು ನಿಲ್ಲುವ ಬಗೆಯಾದರೂ ಹೇಗೆ. ಅಂತಹ ನಾಕಂಡ ಒಂದು ಹೆಣ್ಣಿನ ಬಗ್ಗೆ ಬರೆಯಲು ಈ ಥೀಮ್ ಅನುವು ಮಾಡಿಕೊಟ್ಟಿದೆ. 


ಹೆಸರು ಪಂಕಜ. ಇಂದು ಇವರಿಗೆ ಸುಮಾರು ಅರವತ್ತೈದು ವರ್ಷ ವಯಸ್ಸು. ಇವರೇ ಹೇಳುವಂತೆ ಹುಟ್ಟಿದಾಗಲೇ ತಂದೆ ಯಾರಿಗಾದರೂ ಮಗುವನ್ನ ಕೊಟ್ಟು ಬಿಡಬೇಕೆಂದು ತಿಳಿದಿದ್ದರಂತೆ. ಕಾರಣ ಹುಟ್ಟು ಕುರುಡು. ಆದರೆ ತಾಯ ಕರಳು ಒಪ್ಪದ ಕಾರಣ ಹೇಗೋ ಮತ್ತೊಂದು ಹೆಣ್ಣು ಮಗುವಿನ ಜೊತೆಯಲ್ಲಿ ಬೆಳೆಯಿತು.ತಂಗಿಗಿಂತ ಎಲ್ಲದರಲ್ಲೂ ಚುರುಕು . ನೆನಪಿನ ಶಕ್ತಿಯೂ ಹೆಚ್ಚು. ಕುರುಡಾದರೂ ತನ್ನ ಕೆಲಸ ತಾನು ಮಾಡಿಕೊಳ್ಳುವ ಛಲ. ತಂದೆ ಮೊದಮೊದಲು ವಿದ್ಯಾಭ್ಯಾಸ ಬೇಡವೆಂದವರು ಕೊನೆಗೆ blind school ಸೇರಿಸಿದರು. ಅಲ್ಲಿ ಎಲ್ಲರಿಗಿಂತ ಬುದ್ದಿವಂತೆ ಎಂದು ಹೆಸರು ಗಳಿಸಿದಳು. ಮುಂದೆ ಇವರಿಗಾಗಿಯೇ ಇದ್ದ ಒಂದು ಖಾಸಗಿ ಕಂಪನಿಗೆ ಸೇರಿದಳು . ಮನೆ ದೂರವಿದ್ದ ಕಾರಣ hostel ನಲ್ಲೇ ಜೀವನ. ಅಲ್ಲಿಯವರೆಗೂ ಎಲ್ಲವೂ ಸರಿ ಇತ್ತು. ಬಹುಬೇಗ ಅಲ್ಲಿ ಗ್ರೂಪ್ ಲೀಡರ್ ಆದಳು. ಸಂಬಳವೂ ಹೆಚ್ಚಾಯ್ತು. ಅದೇ ಕಂಪೆನಿ ಯಲ್ಲಿದ್ದ ಸೂಪರ್ವೈಸರ್ ಹರೀಶ್ ಇವಳಿಗೆ ಹತ್ತಿರವಾದ. ಇವಳಿಗೂ ಅಂತಹ ಒಬ್ಬರ ಆಸರೆ ಬೇಕಿತ್ತು. ಮದುವೆ ಮಾಡಿಕೊಂಡ. ಒಂದೆರೆಡು ವರ್ಷ ಬೇರೆ ಮನೆ ಮಾಡಿ ಇಬ್ಬರೂ ಇದ್ದರು. ಇವಳು ಪ್ರತಿ ತಿಂಗಳು ತಂದೆಗೆ ಹಣ ಕಳುಹಿಸುತ್ತಿದ್ದ ವಿಷಯದಲ್ಲಿ ಅವನ ಅಸಮ್ಮತಿ ಇಬ್ಬರ ಮಧ್ಯೆ ಸಣ್ಣ ಬಿರುಕು ಕಂಡು ಕೆಲವೇ ದಿನದಲ್ಲಿ ಅದು ಕಂದಕವೇ ಆಯ್ತು. ಗಂಡ ಊರಿಗೆ ಹೋಗಿದ್ದ ಸಮಯದಲ್ಲಿ ಅಪ್ಪನಿಗೆ ವಿಷಯ ತಿಳಿಸಿದಾಗ ಬಂದು ಬ್ಯಾಂಕ್ ಪಾಸ್ ಬುಕ್ ನೋಡಿದರೆ ಬಹಳ ದಿನದಿಂದ ಎಲ್ಲಾ ಅವನ ಹೆಸರಿಗೆ ಮಾಡಿಕೊಂಡು ಇವಳಿಗೆ ಮೋಸ ಮಾಡಿದ್ದ ವಿಷಯ ತಿಳಿಯಿತು. ಅಂದೇ ತಂದೆಯ ಜೊತೆ ಮನೆಗೆ ಬಂದು ಬಿಟ್ಟಳು. ಕೆಲವು ದಿನ ಕೆಲಸಕ್ಕೆ ಹೋಗಲಿಲ್ಲ. ಕಂಪನಿ ಮ್ಯಾನೇಜರ್ ಒಂದು ದಿನ ಫೋನ್ ಮಾಡಿ ವಿಚಾರಿಸಿದಾಗ. ಎಲ್ಲವನ್ನೂ ತಿಳಿಸಿದಳು. ಆದರೆ ಅವರು ಖಾಸಗಿ ವಿಷಯವಾದ್ದರಿಂದ ಏನುಮಾಡಲೂ ಅಸಹಾಯಕತೆ ತೋಡಿಕೊಂಡರು. ಅನುಭವವಿದ್ದುದರಿಂದ ಬೇರೊಂದು ಕಂಪನಿಗೆ ಸೇರುವ ಮನಸ್ಸಾಯ್ತು. ಸ್ನೇಹಿತೆ ಯೊಬ್ಬಳ ಸಹಾಯದಿಂದ ಮತ್ತೊಂದು ಕಂಪನಿ ಇಂಟರ್ವ್ಯೂ ಗೋಸ್ಕರ ಬರುವಾಗ ರಸ್ತೆ ದಾಟುವ ಸಮಯದಲ್ಲಿ ಕಾರೊಂದು ಬಂದು ಗುದ್ದಿ ಇಬ್ಬರೂ ಜ್ಞಾನವಿಲ್ಲದೆ ಬಿದ್ದಾಗ ಯಾರೋ ಆಸ್ಪತ್ರೆಗೆ ಸಾಗಿಸಿದರು ಒಂದು ವಾರ ಅಲ್ಲಿ ನರಳಬೇಕಾಯ್ತು. ಬಲಗೈ ಮೇಲೆ ಕಾರಿನ ಚಕ್ರ ಹತ್ತಿದ್ದ ಕಾರಣ ಮೂಳೆ ಪುಡಿಯಾಗಿ ಆಪರೇಷನ್ ಮಾಡಬೇಕಾಯ್ತು. 


ಒಂದು ತಿಂಗಳ ನಂತರ ಮನೆಗೆ ಬಂದಳು. ಬಲಗೈ ನಿಂದ ಏನೂ ಕೆಲಸ ಮಾಡಲು ಆಗುತ್ತಿರಲಿಲ್ಲ. ಆಸ್ಪತ್ರೆ ವೆಚ್ಚ ಕಷ್ಟದಲ್ಲಿದ್ದ ತಂದೆಯೇ ಭರಿಸಬೇಕಾಯ್ತು. ಇದು ಇವಳನ್ನ ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿತು. ತಾಯಿ ಸಮಾಧಾನ ಮಾಡಿದರು. ಒಬ್ಬರ ಸಹಾಯವಿಲ್ಲದೆ ಯಾವ ಕೆಲಸವು ಮಾಡಲಾಗುತ್ತಿರಲಿಲ್ಲ. ಒಂದು ದಿನ ಇವಳು ಕೆಲಸ ಮಾಡಿದ ಕಂಪನಿಯಿಂದ ಬಾಕಿ ಹಣ

ತೆಗೆದುಕೊಂಡು ಹೋಗಲು ಪತ್ರ ಬಂದಾಗ ತಂದೆಯ ಜೊತೆಗೆ ಹೋದಳು. ಅಲ್ಲಿ ಇವಳ ಸಂಗಡಿಗರು ಮತ್ತೆ ಕೆಲಸಕ್ಕೆ ಬರಲು ಒತ್ತಾಯಮಾಡಿದಾಗ ಕೈ ತೋರಿಸಿ ಕಣ್ಣೀರು ಸುರಿಸಿದಳು. ಹರೀಶನ ಬಗ್ಗೆ ಕೇಳಿದಳು. ಅವನೂ ಅಂದಿನಿಂದಲೇ ಕೆಲಸಕ್ಕೆ ಬರುತ್ತಿಲ್ಲವೆಂದು ತಿಳಿಯಿತು. ಅದೇ ಕಂಪನಿಯ ಯುವಕ ರಂಗನಾಥ್ ಬಂದು ಇವಳೊಂದಿಗೆ ಮಾತನಾಡುವಾಗ ತಾನು ಬಾಳುಕೊಡಲು ಸಿದ್ಧನಿದ್ದೇನೆಂದು ಹೇಳಿದ. ಆದರೆ ತಿರಸ್ಕರಿಸಿದಳು. ಮನೆಗೆ ಬಂದಾಗ ತಂದೆ ಇದೇ ವಿಷಯ ಪ್ರಸ್ತಾಪ ಮಾಡಿ ಮದುವೆಯಾಗುವುದು ಒಳ್ಳೆಯದೆಂದು ಹೇಳಿದರು. ರಾತ್ರಿ ಇಡೀ ಯೋಚಿಸಿ ನಿರ್ಧಾರ ಬದಲಿಸಿದಾಗ ತಂದೆ ಹೋಗಿ ಅವನಿಗೆ ತಿಳಿಸಿ ಜೊತೆಯಲ್ಲೇ ಕರೆದು ತಂದರು. ಅವನಿಗೂ ಇದು ಎರಡನೇ ಮದುವೆ ಎಂದು ಮತ್ತು ಒಂದು ಮಗು ಇರುವ ವಿಷಯ ತಿಳಿಸಿದ. ಆದರೂ ಒಪ್ಪಿದಳು. ಮದುವೆಯೂ ಆಯ್ತು. ಆರು ತಿಂಗಳು ಕಳೆದಿರಬಹುದು. ಅವನಿಗೆ ತಡೆಯಲಾರದ ತಲೆ ನೋವು. ತಂದೆಗೆ ತಿಳಿಸಿದಳು. ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಎಲ್ಲಾ ಟೆಸ್ಟ್ ಮಾಡಿ ಹದಿನೈದು ದಿನಕ್ಕೆ ಔಷಧಿ ಕೊಟ್ಟರು. ಏನೂ ಪ್ರಯೋಜನವಾಗಲಿಲ್ಲ. ಮತ್ತೊಬ್ಬ ಡಾಕ್ಟರ್ ಹತ್ತಿರ ತೋರಿಸಿದಾಗ ತಿಳಿದ ವಿಷಯ ಬ್ರೈನ್ ಟ್ಯೂಮರ್. ನಾಲ್ಕೇ ತಿಂಗಳಲ್ಲಿ ಇಹಲೋಕ ತ್ಯಜಿಸಿದ. ಪಂಕಜಳಿಗೆ ಹುಟ್ಟುಕುರುಡಾದರೂ ಛಲವಿತ್ತು. ಕೈ ಕಳೆದು ಕೊಂಡರು ಪ್ರಯತ್ನ ಮಾಡುವ ಆಸೆಯಿತ್ತು. ಆದರೆ ಜೀವದಲ್ಲಿ ಬಂದ ಇಬ್ಬರ ಗಂಡಂದಿರೂ ದೂರವಾಗಿದ್ದು , ತಂದೆ ತಾಯಿಗೆ ಹೊರೆಯಾಗಿದ್ದು ಪಂಕಜಳ ಆತ್ಮ ಬಲವೇ ಉಡುಗಿ ಹೋಯ್ತು. ಕೊರಗಿ ಕೊರಗಿ ದೇಹ ಕೃಶ ವಾಯ್ತು. ಯಾರೊಂದಿಗೂ ಮಾತು ಬೇಡವಾಯ್ತು. ಇಂದು ಇವರಿಗಾಗಿಯೇ ಇರುವ ಬೆಂಗಳೂರು ಹೊರವಲಯದಲ್ಲಿನ ವೃದ್ಧಾಶ್ರಮದಲ್ಲಿ ಇರುವ ವಿಷಯ ತಿಳಿಯಿತು. ಅಲ್ಲಿ ಬೇರೆಯವರಿಗೆ ಇವರ ಜೀವನ ಚರಿತ್ರೆ ಹೇಳಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುವರ ಮನಸು ಬದಲಿಸಿದ್ದಾರಂತೆ.


Rate this content
Log in

Similar kannada story from Tragedy