STORYMIRROR

Harish Bedre

Drama Classics Others

4  

Harish Bedre

Drama Classics Others

ಪಂಗನಾಮ

ಪಂಗನಾಮ

2 mins
314

             

ಕಳೆದ ಹದಿನೈದು ವರ್ಷಗಳಿಂದ ರಾಮಣ್ಣ, ಸ್ಥಳೀಯ ರಾಜಕಾರಣಿ ಹನುಮಂತ ರಾವ್ ರವರ ಕಾರಿನ ಡ್ರೈವರಾಗಿ ಕೆಲಸ ಮಾಡುತ್ತಿದ್ದಾನೆ. ರಾಯರಿಗೆ ರಾಮಣ್ಣನ ಮೇಲೆ ತುಂಬಾನೇ ವಿಶ್ವಾಸ. ಅವರು ಊರಲ್ಲೇ ಆಗಲಿ ಅಥವಾ ಪರಸ್ಥಳಕ್ಕೆ ಹೋಗುವಾಗಲೇ ಆಗಲಿ ತಮ್ಮ ಕಾರು ಚಲಾಯಿಸಲು ರಾಮಣ್ಣನೇ ಬೇಕು. ಎಷ್ಟೋ ಬಾರಿ ರಾಮಣ್ಣ ಇಲ್ಲವೆಂದು ಅವರು ಒಪ್ಪಿಕೊಂಡ ಕಾರ್ಯಕ್ರಮಗಳಿಗೆ ಹೋಗದೆ ಮನೆಯಲ್ಲೇ ಉಳಿದ ಸಂದರ್ಭಗಳು ಸಾಕಷ್ಟಿವೆ.

ಒಮ್ಮೆ ರಾಮಣ್ಣ ಇಲ್ಲವೆಂದು ಮತ್ಯಾರೋ ಡ್ರೈವರನ್ನು ಕರೆದುಕೊಂಡು ಹೋಗುವಾಗ ಅಪಘಾತವಾಗಿ ಇವರು ಉಳಿದಿದ್ದೆ ಅದೃಷ್ಟ. ಹಾಗಾಗಿ ರಾಮಣ್ಣ ಇದ್ದರೆ ಮಾತ್ರ ರಾಯರ ಸವಾರಿ ಹೊರಡುತ್ತದೆ. ಇಲ್ಲವೆಂದರೆ ಇಲ್ಲ. ಅಲ್ಲದೆ ರಾಮಣ್ಣನ ಎದುರೆ ದೊಡ್ಡ ದೊಡ್ಡ ಕೊಡು ತೆಗೆದುಕೊಳ್ಳುವ ವ್ಯವಹಾರಗಳು ನಡೆದರೂ, ಅವನೂ ಮಾತ್ರ ಅದನ್ನು ನೋಡೇ ಇಲ್ಲದಂತೆ, ಏನೂ ಗೊತ್ತೆ ಇಲ್ಲದಂತೆ ಇರುತ್ತಾನೆ. ಸಿಕ್ಕಿಕೊಂಡರೆ ತಮ್ಮ ಹೆಸರು ಕೆಡಬಹುದು ಎನ್ನುವ ಸಂದರ್ಭದಲ್ಲಿ ತಾವು ಹೋಗದೆ ರಾಮಣ್ಣನನ್ನೇ ಕಳಿಸಿ ಕೆಲಸ ಮುಗಿಸುವುದು ಸಾಕಷ್ಟು ಬಾರಿ ಮಾಡಿದ್ದಾರೆ. ರಾಮಣ್ಣನಾದರೂ ಅಷ್ಟೇ, ತನಗೆ ಅನ್ನ ಕೊಡುತ್ತಿರುವ ಧಣಿ ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಾನೆ. ಹಾಗಾಗಿ ರಾಯರಿಗೆ ರಾಮಣ್ಣನನ್ನು ಕಂಡರೆ ತುಂಬಾ ವಿಶ್ವಾಸ.

ರಾಮಣ್ಣನ ಮಗ ಬಿ.ಕಾಂ. ಮುಗಿಸಿ ಕೆಲಸ ಹುಡುಕುವಾಗ, ಹನುಮಂತ ರಾಯರೇ ಅಧ್ಯಕ್ಷರಾಗಿದ್ದ ಸಹಕಾರಿ ಬ್ಯಾಂಕಿನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ಈ ವಿಷಯ ಮಗನ ಮೂಲಕ ತಿಳಿದು, ರಾಮಣ್ಣ, ರಾಯರಿಗೆ ಕೇಳಿದಾಗ ಮೊದಲು ಆಯ್ತು ನೋಡೋಣ ಎಂದರು. ನಂತರ ಮತ್ತೊಂದು ದಿನ ತಾವೇ ರಾಮಣ್ಣನನ್ನು ಕರೆದು, ಕಮಿಟಿಯವರು ಹತ್ತು ಲಕ್ಷ ಕೇಳುತ್ತಿದ್ದಾರೆ, ನಾನು ಐದು ಲಕ್ಷಕ್ಕೆ ಒಪ್ಪಿಸಿರುವೆ. ನೀನು ಅಷ್ಟು ಹಣ ಕೊಡುವುದಾದರೆ ಖಂಡಿತವಾಗಿಯೂ ನಿನ್ನ ಮಗನಿಗೆ ಕೆಲಸ ಸಿಗುತ್ತದೆ ಎಂದರು. ರಾಮಣ್ಣನಿಗೆ ಇರಲು ಒಂದು ಸಣ್ಣ ಸ್ವಂತ ಮನೆಯ ಹೊರತಾಗಿ ಬೇರೆ ಯಾವ ಆಸ್ತಿಯೂ ಇರಲಿಲ್ಲ. ಅಲ್ಲದೆ ಇವನ ಕೆಲಸದ ಆದಾಯದ ಹೊರತಾಗಿ ಬೇರಾವ ಆದಾಯವೂ ಇರಲಿಲ್ಲ. ಈ ವಿಷಯ ರಾಯರಿಗೆ ತಿಳಿಯದ ವಿಚಾರವೇನಲ್ಲ, ಆದರೂ ಅವರು ಹಾಗೆ ಕೇಳಿದ್ದಕ್ಕೆ ಬೇಸರಿಸಿಕೊಳ್ಳದೆ ಮನೆಗೆ ಬಂದು ಹೇಳಿದಾಗ, ಇರುವ ಮನೆಯನ್ನು ಮಾರಿ ಹಣ ಕೊಡುವುದು. ಮುಂದೆ ಅದೃಷ್ಟ ಇದ್ದರೆ ಇನ್ನೂ ಒಳ್ಳೆಯ ಮನೆ ಕೊಳ್ಳಬಹುದು ಎಂದು ನಿರ್ಧರಿಸಿದರು.

ಐದು ಲಕ್ಷ ಹಣ ರಾಯರ ಕೈಗೆ ಕೊಟ್ಟಾಗ ಅವರು, ಇನ್ನೂ ನೀನು ನಿಶ್ಚಿಂತೆಯಾಗಿರು, ನಿನ್ನ ಮಗನಿಗೆ ಕೆಲಸ ಗ್ಯಾರಂಟಿ ಎಂದರು. ಈ ಮಾತಿನಿಂದ ರಾಮಣ್ಣನಿಗೆ ತುಂಬಾ ಸಮಾಧಾನವಾಯಿತು. ಮನೆಯಲ್ಲೂ ಎಲ್ಲರೂ ಖಂಡಿತಾ ಕೆಲಸ ಸಿಗುತ್ತದೆ ಎಂದು ಸಂತೋಷದಿಂದ ಇದ್ದರು. ಮೌಖಿಕ ಸಂದರ್ಶನವಾದ ಎರಡು ತಿಂಗಳಿಗೆ ಆಯ್ಕೆ ಪಟ್ಟಿ ಹೊರಬಂತು. ಅದರಲ್ಲಿ ರಾಮಣ್ಣನ ಮಗನ ಹೆಸರೇ ಇರಲಿಲ್ಲ. ಕೇಳಿದಾಗ, ನಾನು ಪ್ರಯತ್ನ ಪಟ್ಟೆ ಆದರೆ ಕಮೀಟಿಯವರು ಹೀಗೆ ಮಾಡಿದ್ದಾರೆ. ನೀನೇನು ಚಿಂತೆ ಮಾಡಬೇಡ, ನಿನ್ನ ಐದು ಲಕ್ಷ ನನ್ನ ಬಳಿ ಇದೆಯಲ್ಲಾ ಬೇರೆ ಎಲ್ಲಾದರೂ ನೋಡುವೆ ಎಂದು ಬಹಳ ಸಲೀಸಾಗಿ ಹೇಳಿದರು.

ಇವರಿಂದ ಮಗನಿಗೆ ಕೆಲಸ ಸಿಕ್ಕೇ ಸಿಗುವುದೆಂದು ನಂಬಿದ್ದ ರಾಮಣ್ಣನಿಗೆ ಹೃದಯಾಘಾತ ಆಗದಿದ್ದದೇ ಆಶ್ಚರ್ಯ. ಇದ್ದ ಸ್ವಂತ ಮನೆಯನ್ನು ಮಾರಿ ಬಾಡಿಗೆ ಕಟ್ಟುವಂತೆ ಅದದ್ದಲ್ಲದೆ, ಮಗನಿಗೂ ಕೆಲಸ ಸಿಗದಿದ್ದದ್ದು ರಾಮಣ್ಣ ಕುಸಿಯುವಂತೆ ಮಾಡಿದರೆ, ಅತ್ತ ಹನುಮಂತ ರಾಯರು ಆ ಕೆಲಸವನ್ನು ಮತ್ತ್ಯಾರಿಗೊ ನೀಡಿ, ಹದಿನೈದು ಲಕ್ಷ ಪಡೆದು ಕೊಟ್ಟಿದ್ದರು.


Rate this content
Log in

Similar kannada story from Drama