Meenakshi "meeನ"

Drama Tragedy

2  

Meenakshi "meeನ"

Drama Tragedy

ಮೂಡದ ಸೂರ್ಯ ಅಸ್ತಮಿಸಲೂ ಇಲ್ಲ..

ಮೂಡದ ಸೂರ್ಯ ಅಸ್ತಮಿಸಲೂ ಇಲ್ಲ..

6 mins
135


    ನನ್ನ ಗೊಂಬೆ ಅದು ....! ಕೊಡೋ ಅಂತ , ಸೂರ್ಯನ ಹಿಂದೆ ಓಡುತ್ತಿದ್ದಳು.. ಪುಟ್ಟ ಶಶಿ.., ಸೂರ್ಯ ಕೂಡ ಅವಳಿಗಿಂತ ಸ್ವಲ್ಪ ದೊಡ್ಡವನು..,

       ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದ ರಘುರಾಮ್, ಹಾಗೂ ಕಾಳೇ ಗೌಡರಿಗೂ ಸ್ನೇಹದ ಸಂಭಂದಕ್ಕೆ ಯಾವ ಅಡ್ಡಿ ಆತಂಕ ಇರಲಿಲ್ಲ... ಒಂದೇ ಮನೆಯವರಂತೆ ಇದ್ದು ಬಿಟ್ಟರು ವರುಷಗಳಿಂದ.

              ರಘುರಾಮರಿಗೆ ಪ್ರಕಾಶಿಸುವ ಸೂರ್ಯನಂತೆ ಮಗ ಹುಟ್ಟಿದನೆಂದು , ಅವನಿಗೆ ಸೂರ್ಯ ಎಂದು ನಾಮಕರಣ ಮಾಡಿದರು.

                   ವರುಷದ ಒಳಗೆ ಕಾಳೇಗೌಡರಿಗೂ ಮುದ್ದಾದ ಹೆಣ್ಣು ಮಗು , ಯಾವತ್ತೂ ಸೂರ್ಯನ ಜೊತೆ ಯಾಗಲೆಂದು ಶಶಿ ಎಂದು ನಾಮಕರಣ ಮಾಡಿದರು.

       ಹಬ್ಬ ಹರಿದಿನಗಳಲ್ಲಿ ಒಂದೇ ಮನೆಯಲ್ಲಿ ಆಚರಣೆ ಮಾಡುತ್ತಿದ್ದರು... ಇನ್ನೂ ಕಾರ್ಯಕ್ರಮದಲ್ಲಂತೂ ಇಬ್ಬರ ಮನೆಯಲ್ಲಿ ಯಾರೇ ಒಬ್ಬರು ಇಲ್ಲದೆ ಇದ್ದರೆ ಆ ಕಾರ್ಯಕ್ರಮ ಮುಂದುಡುತಿತ್ತು...

     ರಘುರಾಮರಿಗೆ ಶಶಿ ಕಂಡರೆ ಅಕ್ಕರೆ . , ಕಾಳೇಗೌಡರಿಗೆ ಸೂರ್ಯನ ಕಂಡರೆ ಪ್ರೀತಿ... ಈ ಇಬ್ಬರು ಮಕ್ಕಳು ಬೆಳೆದಿದ್ದು ಜೊತೆಜೊತೆಯಾಗೆ... ಒಬ್ಬರನ್ನು ಬಿಟ್ಟು ಇನ್ನೊಬ್ಬರು ಊಟ ಮಾಡುತ್ತಿರಲಿಲ್ಲ...

       ಆದರೆ ಯಾವಾಗಲೂ ಆಟದ ಸಮಯದಲ್ಲಿ ಕಿತ್ತಾಟ ಇರುತ್ತಿತ್ತು... ಮಾತು ಬಿಡುವಷ್ಟು ಕಿತ್ತಾಟ.. , ಅದು ಕೂಡ ಎರಡು ನಿಮಿಷಕ್ಕೂ ಹೆಚ್ಚಿನ ಜಗಳ ವಲ್ಲ... ಆ ಎರಡು ನಿಮಿಷದಲ್ಲಿ ಆಕಾಶ ಭೂಮಿ ಒಂದು ಮಾಡಿ ಬಿಡುತ್ತಿದ್ದರು... ಮನೆಯವರು ಬಂದರು ಜಗಳ ನಿಲ್ಲುತ್ತಿರಲಿಲ್ಲ... ಕಡೆಗೆ ಅವರೇ ಬಿಟ್ಟಿರೋ ಖಟ್ಟಿ ಬಟ್ಟಿ  ನಾ ನಿಲ್ಲಿಸಿ ಮಾತು ಆಡುತ್ತಿದ್ದರು...

     ಇದು ಮಾಮೂಲಿ ಆಗಿ ಹೋಗಿತ್ತು... ದಿನ ಜಗಳ.., ಕಡೆಗೆ ಮತ್ತೆ ಮಾತು.. ಮನೆಯವರಿಗೂ ಅದೆಷ್ಟರ ಮಟ್ಟಿಗೆ ಅಭ್ಯಾಸ ವಾಗಿತ್ತೆಂದರೆ , ಇವರು ಸುಮ್ಮನೆ ಜಗಳವಿಲ್ಲದೆ ಆಟವಾಡಿದರು ಎಂದರೆ.. ಪ್ರಳಯ ವಾಗಿ ಬಿಡುತ್ತೇನೋ ಎನ್ನವ ಹಾಗೆ ನೋಡುತ್ತಿದ್ದರು.. ಇಬ್ಬರ ಮುಖ..

              ಕಾಲ ನಿಲ್ಲೋಲ್ಲ... ಅಲ್ವಾ.. ಬೆಳೀತಾ ಬೆಳೀತಾ.. ಸ್ಕೂಲ್, ಕಾಲೇಜ್ ಅಂತ..ಒಂದೇ ಕಡೆ ಸೇರಿದರು , ಬಿಟ್ಟಿರಲು ಆಗದೆ. 

             ಈ ಮಧ್ಯೆ ಶಶಿ , ಸೂರ್ಯನನ್ನು ಪ್ರೀತಿಸಲು ಶುರುಮಾಡಿದಳು... ಅವಳಿಗೆ ಗೊತ್ತಿಲ್ಲದೆ. ಶಾಲಾ, ಕಾಲೇಜ್ ಅಲ್ಲಿ ಇವರಿಬ್ಬರ ಮಧ್ಯೆ ಯಾರೇ ಬಂದರೂ ಅದ್ಯಾವ ಬದಲಾವಣೆ ಆಗುತ್ತಿರಲಿಲ್ಲ... ಯಾರೇ ಮಧ್ಯೆ ಬಂದರು ಇವರ ಗಟ್ಟಿ ಸಂಬಂಧ ಬಿಡಿಸಲು ಆಗುತ್ತಿರಲಿಲ್ಲ... ಅದೆಷ್ಟು ಹೊಟ್ಟೆಕಿಚ್ಚು ಪಟ್ಟು ಕೊಂಡರೋ.., ಅವರ ಉಳಿದ ಸ್ನೇಹಿತರು.. ಇವರು ಇರುವ ರೀತಿಗೆ...

                ಶಶಿ, ತಾನು ಪ್ರೀತಿಸುತ್ತಾ ಹೋದಳೇ ಹೊರತು.. ಸೂರ್ಯನಿಗೆ ಯಾವತ್ತೂ ಹೇಳಲೇ ಇಲ್ಲ... ಸೂರ್ಯನಿಗೆ ಅವಳ ಯಾವ ಬದಲಾವಣೆ ಕಾಣಿಸಲು ಇಲ್ಲ... ಅಷ್ಟು ಮುಚ್ಚಿ ಇಟ್ಟು ಬಿಟ್ಟಳು...

     ಸೂರ್ಯ ಯಾವತ್ತೂ ಅವಳನ್ನು ಗೆಳತಿಯ ಹೊರತಾಗಿ ಬೇರೆ ದೃಷ್ಟಿಯಿಂದ ಕಾಣಲೇ ಇಲ್ಲ... ಶಶಿ ಎಲ್ಲ ವಿಷಯವನ್ನು ಚಾಚು ತಪ್ಪದೆ ಸೂರ್ಯನಿಗೆ ಹೇಳುತ್ತಿದ್ದಳು... ಅವಳ ಮೊದಲ ಗೊಂಬೆಯ ಹಿಡಿದು.. ಕಡೆಯದಾಗಿ ಆದ ಮುಟ್ಟಿನ ವರೆಗೂ.., ಅವಳಿಗೆ ಯಾವತ್ತೂ ಅವ ಹುಡುಗ , ಹುಡುಗಿಯರ ವಿಷಯ ಮಾತನಾಡಬಾರದು ಅಂತ ಅನಿಸಲೇ ಇಲ್ಲ.. ಸೂರ್ಯ ಕೂಡ ಇವಳ ಎಲ್ಲ ಮಾತನ್ನು ಆಲಿಸುತ್ತಿದ್ದ ಇಷ್ಟ ಪಟ್ಟು.

            ದಿನಗಳು ಉರುಳಿದಂತೆ... ಓದು ಕೂಡ ಮುಗಿಯಿತು..., ಸೂರ್ಯ ಕೆಲಸಕ್ಕೆಂದು ಬೇರೆ ಊರಿಗೆ ಹೋದ. ಶಶಿಗೆ ಕೆಲಸ ಮಾಡೋದು ಇಷ್ಟವಿಲ್ಲದೆ ಮನೆಯಲ್ಲೇ ಉಳಿದು ಬಿಟ್ಟಳು.

             ಇಬ್ಬರು ಆಗಾಗ ಪತ್ರದ ಮುಖಾಂತರ , ಫೋನ ಮುಖಾಂತರ ಮಾತು ಆಡುತ್ತಿದ್ದರು.., ಆದರೆ ಶಶಿಗೆ ಸೂರ್ಯನನ್ನು ಬಿಟ್ಟಿರಲು ಆಗದೆ , ತಾನು ಕೆಲಸಕ್ಕೆ ಸೇರುತ್ತೇನೆ , ಅಲ್ಲೇ ಎಲ್ಲಾದರೂ ಕೆಲಸ ಹುಡುಕು ಅಂತ ಹೇಳಿದಳು.

         ಸೂರ್ಯನಿಗೆ , ಶಶಿಯ ಬಗ್ಗೆ ಗೊತ್ತಿತ್ತು.. ಕೇಳಿಯು ಬಿಟ್ಟ.. ಇಷ್ಟ ವಿಲ್ಲದ ಕೆಲಸ ಯಾಕೆ ಮಾಡ್ತಾ ಇದೀಯಾ ಅಂತ...

     ಶಶಿಗೆ, ಏನು ಹೇಳಬೇಕು ಅಂತ ಗೊತ್ತಾಗದೆ ತಡವರಿಸಿದಳು... , ಮನೆಯಲ್ಲಿ ಕೂತು ಕೂತು ಬೇಸರ ಆಗ್ತಾ ಇದೆ ಕಣೋ.. ಅದಕ್ಕೆ ಕೆಲಸ ಮಾಡೋಣ ಅಂತ ನಿರ್ಧಾರ ಮಾಡಿದೆ ಅಂತ ಬಾಯಿಗೆ ಬಂದ ಸುಳ್ಳು ಹೇಳಿದಳು... ಮನಸಲ್ಲೇ ಕ್ಷಮೆ ಕೇಳಿದಳು...

             ಸೂರ್ಯನ ಮನಸಿಗೆ ಘಾಸಿ ಯಾಯಿತು.. ಇವಳು ಸುಳ್ಳು ಹೇಳುತ್ತಿದ್ದಾಳೆ ಅಂತ ಗೊತ್ತಾಗಿ.. ಯಾವತ್ತೂ ಸುಳ್ಳು ಹೇಳದ ಶಶಿ ಇಂದೇಕೆ ಸುಳ್ಳು ಹೇಳಿದಳು ಅಂತ, ಹೆಚ್ಚಿಗೆ ಮಾತನಾಡದೆ ಫೋನ್ ಇಟ್ಟ.. ಕೆಲಸ ಇದೆ ಅಂತ.. ಸುಳ್ಳು ಹೇಳಿ...,

         ಇಲ್ಲಿ ಇಬ್ಬರ ಸುಳ್ಳು ಇಬ್ಬರಿಗೂ ಗೊತ್ತಿತ್ತು.. ಆದರೆ ಯಾರೊಬ್ಬರೂ ಕಾರಣ ಕೇಳಲು ಹೋಗಲಿಲ್ಲ... ಶಶಿಗೆ , ಸೂರ್ಯನ ಸುಳ್ಳಿನ ಕಾರಣ ಗೊತ್ತಿತ್ತು.. ಆದರೆ, ಸೂರ್ಯನಿಗೆ ಶಶಿ ಯ ಸುಳ್ಳಿನ ಕಾರಣ ಗೊತ್ತಾಗಲಿಲ್ಲ...

       ಕೆಲಸ ಹುಡುಕುತ್ತೇನೆ ಅಂತ ಸೂರ್ಯ ದಿನ ಮುಂದುಡುತ್ತಿದ್ದ...., ಒಂದು ದಿನ ವಾರದ ಮಟ್ಟಿಗೆ ರಜೆ ಹಾಕಿ ಊರಿಗೆ ಬಂದ... ಅನಿರೀಕ್ಷಿತವಾಗಿ ಬಂದ ಸೂರ್ಯನನ್ನು ನೋಡಿ ಎಲ್ಲರಿಗೂ ಖುಷಿ.. 

     ಕಾಳೇಗೌಡರ ಮನೆಯಲ್ಲಿ ಹಬ್ಬವೇ ಮಾಡಿದರು.. ತಿಂಗಳುಗಳ ನಂತರ ಬಂದ ಸೂರ್ಯನನ್ನು ಕರೆದು. ಆದರೆ ಅವನ ಮುಖದಲ್ಲಿ ಯಾವತ್ತಿನ ಮಂದಹಾಸವಿರಲಿಲ್ಲ. ಎಲ್ಲವನ್ನು ಗಮನಿಸಿದ ಶಶಿ, ಅದರ ಕಾರಣ ಕೂಡ ಅರಿತಳು.. ತಾನು ಹೇಳಿದ ಒಂದು ಸುಳ್ಳು, ಸೂರ್ಯನ ಈ ಸ್ಥಿತಿಗೆ ತರುತ್ತೆ ಅಂತ ಕನಸಲ್ಲೂ ಊಹಿಸಿರಲಿಲ್ಲ ಅವಳು...

                   ಆದರೂ ಇಬ್ಬರಲ್ಲೂ ಮೊದಲಿನ ಮಾತಿಲ್ಲ..., ಸಲುಗೆ ಕಡಿಮೆ ಯಾಗಿದೆ . ಮೌನ ಹಿಂಸೆ ಕೊಡುತ್ತಿದೆ ಅಂತ ಮಾತಿಗೆ ಶುರುವಿಟ್ಟಳು ಶಶಿ.., ಊಟ ಮುಗಿಸಿ ಮಾಳಿಗೆ ಮೇಲೆ ಕುಳಿತಾಗ.

             " ಯಾಕೋ, ಒಂತರ ಇದೀಯಾ...? ಏನಾಯಿತು ಅಂತ. "

           ಸೂರ್ಯ ಅವಳ ಮಾತಿಗೆ , ಅವಳೆಡೆಗೆ ದೃಷ್ಟಿ ಬೀರಿದ.. ಅವನ ಆ ನೋಟಕ್ಕೆ ತಲೆ ತಗ್ಗಿಸಿ ಬಿಟ್ಟಳು.. ಸತ್ಯ ಹೇಳಲು ಆಗದೆ.., ಸುಳ್ಳು ಮುಂದುವರೆಸಲಾಗದೆ...

                 ಆಡಲು ಅದೆಷ್ಟೋ ಮಾತು ಇದ್ದವು.. ಆದರೆ ಇಬ್ಬರು ಮೌನ..! ಆ ಮೌನ ಕೂಡ ಮಾತನಾಡದೆ ಮೂಕವಾಗಿ ಹೋಗಿತ್ತು.. ,

         ಮೌನ ಸಹಿಸದೆ ಎದ್ದು ಹೋದ ಸೂರ್ಯ.., ಅವತ್ತು ಇಡೀ ದಿನ ಮಾತು ಇಲ್ಲ ಇಬ್ಬರಲ್ಲೂ.., ಮರುದಿನ ಕೊಂಚ ಮಟ್ಟಿಗೆ ಸರಿ ಹೋದಂತೆ ಇತ್ತು.. ಸೂರ್ಯನ ಅರಿವಿಗೆ ಬಂದಿತ್ತು.. ಅವಳು ಸುಳ್ಳು ಹೇಳ್ತಾ ಇದಾಳೆ ಅಂದ್ರೆ.., ಸತ್ಯ ಹೇಳಬಾರದು ಅಂತ.. ಹಾಗಿದ್ದಾಗ ನಾನು ಆ ಸತ್ಯ ಕೇಳೋದು ಸರಿ ಅಲ್ಲ ಅಂತ , ಆ ವಿಷಯವನ್ನು ಅಲ್ಲಿಗೆ ಕೈ ಬಿಟ್ಟ.

        ಮಾರನೆಯ ದಿನ ಚೆಂದದ ನಗೆ ಹೊತ್ತು ಬಂದ ಸೂರ್ಯನ ನೋಡಿ , ಶಶಿಯ ಮುಖ ಅರಳಿ ಹೋಯ್ತು.. ಅವಳು ಕೂಡ ನಿರ್ಧರಿಸಿ ಬಿಟ್ಟಿದ್ದಳು , ಕೆಲಸದ ವಿಚಾರವಾಗಿ ಮಾತನಾಡೋದು ಬೇಡ ಅಂತ. ಅಲ್ಲಿಗೆ ಆ ವಿಷಯ ಮುಗಿದುಹೋದ ಅಧ್ಯಾಯ ವಾಯಿತು.

                 ಇಬ್ಬರು, ಒಂದಷ್ಟು ಸುತ್ತಾಡಿ ಬಂದರು. ತುಂಬಾ ದಿನಗಳ ನಂತರ ಸಿಕ್ಕ ಖುಷಿಗಾಗಿ. ಬೆಟ್ಟ, ಗುಡ್ಡ, ನದಿ , ಝರಿ ಅಂತ ಸುತ್ತಾಡಿ.. ನೀರಲಿ ಆಟವಾಡಿ ಮನೆಗೆ ಬಂದಾಗ ಕತ್ತಲಾಗುತ್ತಾ ಬಂದಿತ್ತು.

          ಮನೆಗೆ ಬಂದವರಿಗೆ ಎರೆಡು ಕುಟುಂಬ ಒಂದು ಕಡೆ ಕುಳಿತು ಗಹನವಾಗಿ ಚರ್ಚೆ ಮಾಡುತ್ತಾ ಇದ್ದಿದ್ದು ಕಂಡು ಬಂತು. ಏನು ಅಂತ ಹತ್ತಿರ ಹೋಗಿ ನೋಡಿದಾಗ ಕಾಳೇಗೌಡನ ಕೈಯಲ್ಲಿ ಯಾರದೋ ಫೋಟೋ, ರಘುರಾಮರ ಕೈಯಲ್ಲಿ ಯಾವುದೋ ಜಾತಕ , ನೋಡಿ ಇಬ್ಬರಿಗೂ ಆಶ್ಚರ್ಯವಾಯಿತು.. ಮಾತು ಕೂಡ ಮದುವೆಯ ಬಗ್ಗೆ ಯ ಮಾತುಗಳೇ ಇದ್ದವು.. ಹಾಗಾಗಿ , ಮದುವೆ ಮಾತುಕತೆ ನಡೀತಾ ಇದೆ ಅಂತ ಇಬ್ಬರಿಗೂ ಗೊತ್ತಾಯಿತು.

     ಆದರೆ ಯಾರ ಮದುವೆ ಅಂತ ಗೊತ್ತಾಗಲಿಲ್ಲ. ಸೂರ್ಯ , ಕಾಳೇಗೌಡರ ಕೈಯಲ್ಲಿದ್ದ ಫೋಟೋ ನೋಡುತ್ತಾ ಕೇಳಿದ, ಯಾರ ಫೋಟೋ.., ಯಾರಿಗೆ ಮದುವೆ ಅಂತ.

       ತನ್ನ ತಂದೆಯ ಮಾತು ಕೇಳಿ.., ಗ್ರಹಣ ಹಿಡಿದಂತಾಯಿತು ಶಶಿಗೆ...

         ಬುದ್ದಿ ಬರುವ ಮೊದಲೇ ಸೂರ್ಯನನ್ನು ಇಷ್ಟಪಡುತ್ತ ಬಂದವಳು.., ಈಗ ಸೂರ್ಯನಿಗೆ ಇನ್ನೊಂದು ಹುಡಗಿ ಜೊತೆ ಮದುವೆ ಮಾಡ್ತಾರೆ ಅಂದ್ರೆ.. ? ಮುಂದೆ ಯೋಚಿಸುವುದಕ್ಕೂ ಆಗಲಿಲ್ಲ ಅವಳಿಗೆ. ತನ್ನ ಸೂರ್ಯನ ಮದುವೆ ಬೇರೊಂದು ಹುಡುಗಿಯ ಜೊತೆ ಅಂತ ನೆನೆದು.

                 ಯಾರಿಗೂ ಕಾಣದಂತೆ ವದ್ದೆಯಾದ ಕಣ್ಣಂಚು ವರೆಸಿಕೊಂಡು , ಸಾವರಿಸಿಕೊಂಡು ಎಲ್ಲರ ಜೊತೆ ನಗುತ್ತ ಮಾತನಾಡಿದಳು.

            " ಅದ್ಯಾವ ಹೆಣ್ಣು ಗೂಬೆ ಇವನನ್ನು ಮದುವೆ ಆಗೋಕೆ ಒಪ್ಪಿಕೊಂಡಳು ಅಂತ , ರೇಗಿಸಿದಳು.." ಇವಳ ಮಾತಿಗೆ ಮನೆಯವರೆಲ್ಲ ನಕ್ಕು , ಶಶಿಗೆ ಆ ಹೆಣ್ಣು ಗೂಬೆಯ ಫೋಟೋ ತೋರಿಸಿದರು.., 

           ನಿಜಕ್ಕೂ ದೇವತೆ ಹಾಗೆ ಇರೋ ಹೆಣ್ಣು ಅವಳು. ನೋಡಲು ಅಷ್ಟೇ ಸುಂದರ.. ಅಂತ ಫೋಟೋ ನೋಡುತ್ತಾ ತನ್ನ ಮನಸಿಗೆ ಅನಿಸಿದ್ದೆ ಹೇಳಿದಳು.            " ಆದರೂ ಸೂರ್ಯ ನೀ ಇವಳಿಗೆ ಒಪ್ಪೋಲ್ಲ ಕಣೋ.., ನಿನಕ್ಕಿಂತ ಸಾವಿರ ಪಟ್ಟು ಚೆಂದ ಇದಾಳೆ ನೋಡು ಅಂತ , ಅವನ ಕೈ ಗೆ ಫೋಟೋ ಕೊಟ್ಟಳು. "

             ಫೋಟೋ ನೋಡಿದ ಸೂರ್ಯ , ಒಂದು ಕ್ಷಣ ಕಳೆದೆ ಹೋದ.., ಶಶಿ ಹೇಳುತ್ತರುವುದು ಸತ್ಯವಾಗಿತ್ತು.. ಅಷ್ಟು ಚೆಂದದ ಹುಡುಗಿ.. ಅವಳು. ಆ ಫೋಟೋ ನೋಡಿಯೇ ಪ್ರೀತಿಸಲು ಶುರು ಮಾಡಿದ.. ಫೋಟೋದೊಳಗಿದ್ದ ದೇವತೆಯನ್ನು. ಕಳೆದು ಹೋದ ಸೂರ್ಯನನ್ನು ಎಚ್ಚರಿಸಿದ್ದು ಶಶಿ.. , " ಸಾಕು ಕೊಡೋ ಇಲ್ಲಿ ಆ ಫೋಟೋ, ಈಗಲೇ ಕಣ್ಣು ಹಾಕಿ ದೃಷ್ಟಿ ಮಾಡಬೇಡ ಅಂತ "

                 ಅವಳೇ ಮುಂದುವರೆದು ಕೇಳಿದಳು.., ಅಪ್ಪ, ( ಸೂರ್ಯನ ಅಪ್ಪನನ್ನು ಹಾಗೆ ಕರೆಯುತ್ತಿದ್ದಳು) ಏನು ಈ ಹುಡುಗಿಯ ಹೆಸರು.., ಯಾವ ಊರು ಅಂತ ಉತ್ತರ ಕೊಡಕ್ಕೂ ಬಿಡದೆ ಪ್ರಶ್ನೆ ಕೇಳುತ್ತ ಹೋದಳು..

     ತಡೆದ ಸೂರ್ಯ , ಬಾಯಿ ಬಡಕಿ ಸ್ವಲ್ಪ ನಿನ್ನ ಪ್ರಶ್ನೆಗೆ ಅಲ್ಪ ವಿರಾಮ ಕೊಡು.. ಅವರು ಉತ್ತರ ಕೊಡೋವರೆಗೂ ಆದರೂ ಅಂತ ಕಿಚಾಯಿಸಿದ.. ಅವನಿಗೂ ಅವಳ ಹೆಸರು ಕೇಳೋ ಆತುರ.

           ಇಬ್ಬರ ಕೋಳಿ ಜಗಳ ನೋಡಿ ನಕ್ಕ, ರಘುರಾಮ, ಹುಡಗಿ ಹೆಸರು ಪ್ರಿಯ , ದೂರದ ನೆಂಟರ ಮಗಳು , ಅವಳ ಓದು ಮುಗಿತು ಅಂತ , ನಾನೇ ಫೋನ್ ಮಾಡಿ ಫೋಟೋ, ಜಾತಕ ಕೇಳಿದ್ದೆ.. , ಅವರಿಗೂ ಸೂರ್ಯ ಅಂದ್ರೆ ಇಷ್ಟ.., ಅದಕ್ಕೆ ಕೇಳಿದ ತಕ್ಷಣ ಕಳುಹಿಸಿದ್ದಾರೆ.. ಜಾತಕ ನು ಕೂಡಿ ಬಂದಿದೆ.. ಸೂರ್ಯ ಒಪ್ಪಿಗೆ ಕೊಟ್ಟರೆ ಮದುವೆ ಮಾಡಿ ಬಿಡೋದೇ ಅಂತ ಹೇಳಿದರು.

       ಶಶಿ.., ಮನೆಯವರ ಮಾತು ಕೇಳಿ.. ಒಳಗೊಳಗೇ ಪಾತಾಳಕ್ಕೆ ಇಳಿದು ಹೋಗುತ್ತಿದ್ದಳು.. ಮುಖದಲ್ಲಿ ಮಾತ್ರ ನಗು ಮರೆಯಾಗಲೇ ಇಲ್ಲ.

               ಸೂರ್ಯ ಏನಾದ್ರು ಬೇಡ ಅಂತನಾ ಅಂತ, ಅವನ ಕಡೆ ನೋಡಿದಳು.. ಸೂರ್ಯ , ಸ್ವಲ್ಪ ಹೊತ್ತು ಬಿಟ್ಟು ಹೇಳತಿನಿ ಅಂತ , ಶಶಿಯನ್ನು ಕರೆದುಕೊಂಡು ಹೋದ . ಬಾ ನಿನ್ನ ಜೊತೆ ಮಾತನಾಡೋದು ಇದೆ ಅಂತ.

               ಶಶಿಗೆ ಎಲ್ಲೋ ಒಂದು ಕಡೆ ಆಶಾಭಾವನೆ , ನನ್ನ ಪ್ರಪೋಸ್ ಮಾಡಿ , ಈ ಹುಡಗಿ ಬೇಡ ಅಂತಾನೆ ಅಂತ.

    ಆದರೆ ಅಲ್ಲಿ ಆಗಿದ್ದು.., !

         " ಶಶಿ.., ಹುಡಗಿ ನಿನಗೆ ಇಷ್ಟ ನಾ ಅಂತ ಕೇಳಿದ..?" ಸೂರ್ಯ ಶಶಿಗೆ...

         ಸಾವರಿಸಿಕೊಂಡು..," ಅಲ್ಲ ಕಣೋ, ನೀನು ಮದುವೆ ಆಗೋ ಹುಡಗಿ ಅವಳು. ನಿನಗೆ ಒಪ್ಪಿಗೆ ಇದ್ದರೆ ಹು ಅನ್ನು.. ಇಲ್ಲ ಬೇರೆ ಯರನ್ನಾದ್ರೂ ಇಷ್ಟ ಪಡ್ತಿದ್ರೆ ಹೇಳು" ಅಂತ , ಅವನ ಮನಸಲ್ಲಿ ತಾನಿದಿನಾ ಅಂತ ಹೀಗೆ ಕೇಳಿದಳು.

          ಕಡೆಯ ಮಾತು, ಕೋಪ ಬರಿಸಿತು ಸೂರ್ಯನಿಗೆ.., " ಅಲ್ಲ ಕಣೆ, ಎಲ್ಲ ವಿಷಯ ನಿನಗೆ ಗೊತ್ತು.., ಎಲ್ಲವನ್ನು ಹೇಳತಿನಿ.. ಯಾರನಾದ್ರು ಇಷ್ಟ ಪಟ್ಟಿದ್ರೆ , ನಿನಗೆ ಹೇಳ್ದೆ ಇರ್ತಾ ಇದ್ನ ಅಂತ ಕೇಳಿದ "

         ಸೂರ್ಯನ ಆ ಮಾತು ಕಪಾಳಕ್ಕೆ ರಾಚಿದ ಹಾಗೆ ಆಯಿತು ಶಶಿಗೆ. " ಹು ಕಣೋ.. ಗೊತ್ತು ಆದರೂ ಸುಮ್ನೆ ಕೇಳಿದೆ ಅಂತ " ಆ ವಿಷಯ ಅಲ್ಲೇ ಬಿಟ್ಟಳು.. ಸೂರ್ಯನಿಗೆ ತನ್ನ ಮೇಲೆ ಯಾವತ್ತೂ ಪ್ರೀತಿ ಆಗಲೇ ಇಲ್ಲ ಅಂತ.

                 ಈಗಲಾದರೂ ತನ್ನ ಪ್ರೀತಿ ಹೇಳು ಅಂತ ಒಳ ಮನಸ್ಸು ಪ್ರೇರೇಪಿಸುತಿತ್ತು.. ಆದರೆ ಭಯ.., ಕಾಡುತ್ತಿತ್ತು.. ಎಲ್ಲಿ ಸ್ನೇಹವನ್ನೂ ಕಳೆದು ಕೊಂಡು ಬಿಡುತ್ತೇನೋ ಅಂತ. ಅದೇ ಭಯದಲ್ಲಿ ಹೇಳಲೇ ಇಲ್ಲ.. ನೀನು ಅಂದ್ರೆ ಇಷ್ಟ ಅಂತ.

                 ಸೂರ್ಯ, ಶಶಿಯನ್ನು ಕೂಗಿದ ಎಲ್ಲಿ ಕಳೆದು ಹೋದೆ ಅಂತ.. , ಆ ಹುಡಗಿ ನಿನಗೆ ಇಷ್ಟಾನ ಅಂತ ಹೇಳು ಅಂದ್ರೆ.. ಯೋಚನೆ ಮಾಡ್ಕೊಂಡು ನಿಂತಿದಿಯಲ್ಲ ನೀನು ಅಂತ ಕೇಳಿದ...

           ತಾನು ಮನಸಾರೆ ಇಷ್ಟಪಟ್ಟು ಪ್ರೀತಿಸಿದ ಹುಡುಗನಿಗೆ , ತಾನೇ ಇನ್ನೊಂದು ಹುಡಗಿ ಫೋಟೋ ನೋಡಿ, ಇವಳು ಚೆಂದ ಇದಾಳೆ.., ನಿನಗೆ ಒಪ್ಪುತ್ತಾಳೆ.., ಇವಳನ್ನೇ ಮದುವೆ ಆಗು ಅಂತ ಹೇಳೋದು , ಅದೆಷ್ಟು ನರಕ ಅಂತ ಆಗ ಅವಳಿಗೆ ಅನಿಸಿದ್ದು..

           ಕಷ್ಟ ಪಟ್ಟು ಹು ಅಂದಳು.. , ನಿಜ ಹೇಳೇ.. ಅಂತ ಮತ್ತೊಮ್ಮೆ ಕೇಳಿದ.., " ನಿಜ ಕಣೋ , ಹುಡಗಿ ತುಂಬಾ ಸುಂದರವಾಗಿದ್ದಾಳೆ , ನೀ ಅವಳನ್ನ ಬಿಟ್ರೆ.. ಅವಳಿಗಿಂತ ಸುಂದ್ರಿ ನಿನಗೆ ಸಿಗೊಲ್ಲ ಅಂತ ಹೇಳಿದಳು..

           ಮನಸ್ಫೂರ್ತಿಯಾಗಿ ಹೇಳಿದ ಮಾತಿಗೆ ಸೂರ್ಯ ಸಂತಸ ಗೊಂಡ.. ಅವನಿಗೂ ಒಂದೇ ನೋಟದಲ್ಲಿ ಇಷ್ಟವಾಗಿದ್ದಳು.. , ಸಣ್ಣ ಪುಟ್ಟದಕ್ಕೂ ಶಶಿಯನ್ನೇ ಕೇಳುತ್ತ ಇದ್ದ.. ಈಗ ಮದುವೆ ವಿಷಯದಲ್ಲೂ ಕೂಡ ಅವಳದೇ ಕಡೆಯ ನಿರ್ಧಾರ ಮಾಡಿದ.

      ಅದೇ ಖುಷಿಯಲ್ಲಿ.. ಹೋ..! ಅಷ್ಟು ಸುಂದ್ರಿ ನಾ ಅವಳು.. , ಅವಳು ಇಲ್ದೆ ಹೋದ್ರೆ ಅವಳ ಅಜ್ಜಿ ಅಂತವಳು ಸಿಗತಾಳೇ...., ನೀನೇ ಇಲ್ವೇನೆ.. ಅವಳಿಗಿಂತ ಸುಂದ್ರಿ.., ನೀನು ಯಾವುದ್ರಲ್ಲಿ ಕಡಿಮೆ ಇದೀಯಾ .., ಅಂತ ತಮಾಷೆ ಮಾಡಿದ.

      ಶಶಿಗೆ ಒಂದು ಕ್ಷಣ , ಅವನ ತಮಾಷೆ ಮಾತು ನಿಜವಾಗಬಾರದೆ ಅಂತನಿಸಿದ್ದು ಸುಳ್ಳಲ್ಲ. ಆದರೂ ಮಾತಲ್ಲಿ.., " ಥು.. ನಾನು ನಿನ್ನ ಮದುವೆ ಆಗೋದಾ.. ಈ ಜನ್ಮದಲ್ಲಿ ಸಾಧ್ಯವಿಲ್ಲ " ಅಂತ ಹೇಳಿದಳು.

         ಸೂರ್ಯ.., " ಹು ಗೊತ್ತು ಕಣೆ.., ನೀ ನನ್ನ ಅಪ್ಪಟ ಸ್ನೇಹಿತೆ.. " ಅಂತ ಅಪ್ಯಾಯತೆಯಿಂದ ಕೆನ್ನೆ ಸವರಿದ.

       ಶಶಿ.., ಎಲ್ಲಿ ತಾನು ತನ್ನ ಪ್ರೀತಿಯ ವಿಷಯ ಹೇಳಿ ಬಿಡ್ತಿನೋ ಅಂತ ಹೆದರಿ.., " ಸರಿ ನಡಿ ಮನೆಯವರಿಗೆಲ್ಲರಿಗೂ ಈ ಖುಷಿ ಹೇಳಬೇಕು ಅಂತ ಕರೆದು ಕೊಂಡು ಹೋದಳು. "

           ಮನೆಯಲ್ಲಿ ಎಲ್ಲರಿಗೂ ಸಂತಸವಾಯಿತು. ಸೂರ್ಯನ ಒಪ್ಪಿಗೆ ಕೇಳಿ. ಅವತ್ತು... ಶಶಿಯ ಮನೆಯಲ್ಲೇ ಹಬ್ಬದ ಊಟ ಮಾಡಿದರು.

        ಮರುದಿನ , ಸೂರ್ಯ ರಜೆ ಮುಗಿಸಿ ಕೆಲಸಕ್ಕೆ ಹೊರಟ.., ಎಲ್ಲರಿಗೂ ಹೇಳಿ.

       ಹೊರಡುವಾಗ, ರಘುರಾಮರು.., " ಸೂರ್ಯ ಹೆಣ್ಣಿನ ಕಡೆಯವರಿಗೂ ತಿಳಿಸಿದೆ.., ಆದಷ್ಟು ಬೇಗ ಮದುವೆ ಮಾಡೋಣ ಅಂತಿದರೆ.. ನೀನು ಏನು ಹೇಳ್ತಿಯ ಅಂತ ಕೇಳಿದಾಗ "

      " ಅಪ್ಪ, ನೀವೆಲ್ಲ ಹೇಗೆ ಹೇಳ್ತಿರೋ ಹಾಗೆ ಅಂತ " ಹೇಳಿದ.

     ಮದುವೆ ತಯಾರಿಕೂಡ ನಡೆಯಿತು.. ಶಶಿಯ ಸುಪರ್ದಿಯಲ್ಲಿ... ತಿಂಗಳಲ್ಲಿ ಮದುವೆ ಕೂಡ ನಡೆದೇ ಹೋಯಿತು...

              ಶಶಿಯ ಪ್ರೀತಿ.., ಕನಸು, ಆಸೆ, ಅವಳ ಇಡೀ ಜೀವನ ಎಲ್ಲ ಸೂರ್ಯನ ಮದುವೆ ಅಗ್ನಿ ಕುಂಡದಲ್ಲಿ ಸುಟ್ಟು ಹೋಯಿತು...

   ಆದರೆ ಪ್ರೀತಿ ಮಾತ್ರ.., ಆ ಅಗ್ನಿಯಲ್ಲೂ ಹೊಳೆಯುತ್ತಿತ್ತು... ಹೇಳಿತದು.., ಇದು ಬಾಲ್ಯದ ಪ್ರೀತಿ.., ಜನುಮಗಳ ಪ್ರೀತಿ.., ಅವ ಯಾರನ್ನೇ ಮದುವೆ ಆದರೂ, ನಾ ಮಾತ್ರ ನಿನ್ನ ಬಿಟ್ಟು ಹೋಗೋಲ್ಲ ಅಂತ.. ಹೊಳೆಯುತ್ತಿದ್ದ ಪ್ರೀತಿ ಮತ್ತೆ ಶಶಿಯ ಹೃದಯದಲ್ಲೇ ಭದ್ರವಾಗಿ ಬೇರೂರಿತು...        


Rate this content
Log in

Similar kannada story from Drama