ಪ್ರೀತಿ ಪರಿಧಿಯ ಕೊನೆ..
ಪ್ರೀತಿ ಪರಿಧಿಯ ಕೊನೆ..
ಅನು.! I love you.... ಅಂತ ಬೆಟ್ಟಗಳ ಮೇಲೆರಿ ಕೂಗುತ್ತಿದ್ದ, ಅಮಿತ. ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತ ಅನುಷ ಮುಖದಲ್ಲಿ ಚೆಂದದ ಮಂದಹಾಸ.
ತಿರುಗಿ ನೋಡಿದ ಅಮಿತ ಇವಳ ನಗುವ ಮೋಡಿಗೆ ಕಳೆದು ಹೋಗಿ ಕೂಗುವುದನ್ನೇ ನಿಲ್ಲಿಸಿ ಅವಳನ್ನೇ ನೋಡುತ್ತಾ ನಿಂತ.
ಅನುಷ , "ಏನಾಯಿತು ಅಂತ ಹುಬ್ಬು ಮೇಲೆ ಮಾಡಿ ಕೇಳಿದಳು..."
ಅವಳು ಕೇಳುವ ರೀತಿ, ಯಾವಾಗಲೂ ಮಾಸದ ಕಿರು ನಗು, ಅವಳ ಮುಂಗುರುಳು..., ಗಾಳಿಗೆ ತೂರಿ ಬರುವ ಮುಂಗುರುಳನ್ನು ಕಿವಿ ಹಿಂದೆ ಹಾಕುವ ಪರಿ.. ಆಗ ಕಿವಿಯ ಜುಮುಕಿ ಅವಳ ಕೆನ್ನೆಗೆ ಮುತ್ತು ಕೊಡುವ ರೀತಿ. ಎಲ್ಲವನ್ನೂ ನೋಡುತ್ತಾ ಮೈ ಮರೆತು ಬಿಟ್ಟ... ಅವನ ಅನು ಪಕ್ಕದಲ್ಲೇ ಬಂದು ಕೂಗುತ್ತಿರುವುದು ಗಮನಕ್ಕೆ ಬರಲಿಲ್ಲ... ಒಮ್ಮೆ ಜೋರಾಗಿ ಕೂಗಿ ತಳ್ಳಿದಳು... ಆಗ ಭೂಮಿಗೆ ಬಂದ... ಅಮಿತ...
"ಅದೆಲ್ಲೋ ಕಳೆದು ಹೋದೆ.. ಆವಾಗಿನಿಂದ ಕುಗ್ತಾ ಇದಿನಿ. ಕಿವಿ ಎಲ್ಲಿ ಕಳೆದು ಬಂದೆ ಅಂತ ಅರುಚಿಬಿಟ್ಟಳು " ಅನುಷ..
" ಕಿರುಚಬೇಡವೆ... ಬ್ರಹ್ಮ ರಾಕ್ಷಸಿ.. ನಿನ್ನ ಸೌಂಡ್ ಇಡೀ ಊರಿಗೆ ಕೇಳಿಸುತ್ತೆ.. ಅಷ್ಟು ಜೋರು.. ಹೋಗಲಿ ಅಂತ ಕೇಳೋಣ ಪರವಾಗಿಲ್ಲ ಅಂದರೆ.. ಅದೇನು ಕೋಗಿಲೆ ಕಂಠ ನಾ? ಒಳ್ಳೆ ರಾಕ್ಷಸ ವಂಶದವಳೇ.. ಏನೇ.. ನಿನ್ನ ಸೌಂಡು... ಅಷ್ಟು ಕರ್ಕಶ... " ಕಿವಿ ಮುಚ್ಚಿಕೊಂಡ ಅಮಿತ.
" ಲೋ.. ಗೂಬೆ ವಂಶದವನೆ...! ಈ ಧ್ವನಿಗೆ ಯಾವನೋ ಒಬ್ಬ ಪ್ರಪೋಸ್ ಮಾಡಿದ್ದು... ಮರೆತು ಹೊಯತಾ... " ಮುಖ ಕೆಂಪು ಮಾಡಿಕೊಂಡು ಕೇಳಿದಳು.
" ಹು.. ಅವತ್ತು ನನ್ನ ಕಿವಿ ನಿಜವಾಗಲು ಹಾಳಾಗಿ ಹೋಗಿತ್ತು ಕಣೆ.. ಅದೆಲ್ಲಿ ಇಟ್ಟು ಬಂದಿದ್ದನೋ ನನ್ನ ಕಿವಿ " ಅಂತ ಅವಳ ಕೋಪ ಮತ್ತಷ್ಟು ಜಾಸ್ತಿ ಮಾಡುತ್ತಿದ್ದ.
" ಹು.. ಇನ್ನೂ ಮುಂದೇನು ನಿನ್ನ ಕಿವಿ ತಗೆದು ಇಟ್ಟು ಬಾ.. ನನ್ನ ಜೊತೆ ಮಾತಾಡುವಾಗ.. ನನ್ನ ಸೌಂಡ್ ಇರೋದೆ ಹೀಗೆ , ಕೇಳಬೇಕು ಅನಿಸಿದ್ರೆ ಕೇಳು.. ಇಲ್ಲ ಅಂದ್ರೆ ಕಿವಿ ಮುಚ್ಚಿಕೊಂಡು ಇರು.. ಸುಮ್ನೆ ರೇಗಿಸಿ ನನ್ನ ಕಡೆಯಿಂದ ಬೈಸಿಕೊಳ್ಳಬೇಡ. "
ಹೌದು ..! ಇರೋ ಸತ್ಯ ಹೇಳಿದ್ರೆ ಹಿಂಗೆ ಎಲ್ಲರಿಗೂ ಕೋಪ ... ಹೋಗಲಿ ಒಂದು ಹಾಡು ಹಾಡೇ.. ಅಂತ ಮತ್ತೆ ಕಲ್ಲು ಬೆಂಚಿಗೆ ಕರೆದು ಕೊಂಡು ಹೋದ.
" ಹಾಡ...? ಆಗೋಲ್ಲ ಹೋಗೋ... ಇಷ್ಟೋತ್ತು ನನ್ನ ರೇಗಿಸಿ ಈಗ ಹಾಡು ಹಾಡು ಅಂತೆ.. ಯಾವಳು ಹಾಡ್ತಾಳೆ ..."
ಆಗಲೇ ತಮಾಷೆ ಮಾಡಿದೆ ಕಣೆ... ಕಾಲೇಜ್ ಅಲ್ಲಿ ಮೊದಲ ದಿನ ನೀ ದೇವರ ನಾಮ ಹಾಡಿದಾಗಲೇ ಕಣೆ.. ಈ ಗೊಂಬೆಗೆ ಕಳೆದು ಹೋದೆ.
ಮಧ್ಯದಲ್ಲೇ ಅವನ ತಡೆದು, ಈಗ ದೇವರ ನಾಮ ಹಾಡಬೇಕು ಏನೋ ನಾ.. ಅಂತ ಕೇಳಿದಳು. ಹುನಮ್ಮ... ಇವತ್ತು ನಿನ್ನ ಬಾಯಿಯಿಂದ ಅದೇ ದೇವರ ನಾಮ ಕೇಳಬೇಕು ಅಂತ ಆಸೆ , ಒಂದು ಸಲ ಹೇಳು.. ಅಂತ ಬೇಡಿಕೊಂಡ...
ಅವ ಬೇಡಿದ ರೀತಿಗೆ ಅವಳಿಗೆ ಇಲ್ಲ ಅನ್ನೋಕೆ ಮನಸು ಬರದೆ ಕಣ್ಣು ಮುಚ್ಚಿ ಹಾಡಲು ಶುರು ಮಾಡಿದಳು.
ಅಮಿತ ಕೂಡ ಕಣ್ಣು ಮುಚ್ಚಿ ಕುಳಿತ ಕೇಳಲು ಕಾತರದಿಂದ. ಅವಳು ಹಾಡಿ ಮುಗಿದ ಮೇಲೂ ಕಣ್ಣು ಬಿಟ್ಟಿರಲಿಲ್ಲ ಅಮಿತ. ಮಧ್ಯೆ ಮಧ್ಯೆ ಕಣ್ಣು ತೆರೆದು ಹಾಡಿದ ಅನುಗೆ , ಅವನ ರೀತಿ ನೋಡಿ ಮನಸು ತುಂಬಿ ಬಂತು. ಯಾವತ್ತೂ ಎಲ್ಲೇ ಮೀರಿ ಬರದ ಪ್ರೇಮಿ.. ಈಗ ಕೂಡ ಸುತ್ತ ಮುತ್ತ ಯಾರು ಇಲ್ಲದ ಜಾಗ.. ಇಲ್ಲಿಯೂ ದೇವರ ನಾಮ ಹೇಳು ಅಂತಾನೆ ... ನನ್ನ ಗೆಳೆಯ.. , ನನ್ನವ ಅದೆಷ್ಟು ಚೆಂದ ಅಂತ ನೋಡುತ್ತಾ ಇದ್ದಳು.
ಅದೆಷ್ಟೋ ಹೊತ್ತಿನ ನಂತರ ಕಣ್ಣು ಬಿಟ್ಟ ಅಮಿತ..., ಅದೆಷ್ಟು ಚೆಂದ ಕಣೆ ನಿನ್ನ ಧ್ವನಿ. ಹಾಡ್ತಾ ಇದ್ದರೆ ಬೇರೇನೂ ಬೇಡ ಅನಿಸಿ ಬಿಡುತ್ತೆ. ಆ ನಿನ್ನ ದೇವರು ಕೂಡ ಒಮ್ಮೆ ಕಳೆದು ಹೋಗ್ತಾನೆ ನಿನ್ನ ಹಾಡಿಗೆ. , ನಿನ್ನ ಧ್ವನಿಗೆ.. ಅಂತ ತನ್ನ ಮೆಚ್ಚಿಗೆ ಸೂಚಿಸುತ್ತಿದ್ದ.
" ಸಾಕು ಹೊಗಳಿದ್ದು ಮೀತ... (ಅಮಿತ ನಾ ಒಮ್ಮೆಮ್ಮೆ ಹಾಗೆ ಕರೆಯುತ್ತಿದ್ದಳು ಅನುಷ). ಮುಂದೆ ಏನು ಮಾಡೋದು.. ಆರು ವರ್ಷ ಆಯಿತು ಕಣೋ ನಮ್ಮ ಪ್ರೀತಿಗೆ, ಮನೇಲಿ ಇನ್ನೂ ಹೇಳಿಲ್ಲ... ಹೇಳೋಕೆ ಭಯ ಕಣೋ.. ನಮ್ಮ ಮನೆಯಲ್ಲಿ ಖಂಡಿತ ಪ್ರೀತಿ ಎಲ್ಲ ಒಪ್ಪೋಲ್ಲ... ನೀನಾದ್ರು ನಿಮ್ಮ ಮನೇಲಿ ಹೇಳಬಹುದು ಅಲ್ವಾ..? ಅಂತ ಕೇಳಿದಳು. " ಅನು
" ಅದನ್ನೇ ಹೇಳೋಣ ಅಂತ ನಿನ್ನ ಇಲ್ಲಿ ಕರೆದುಕೊಂಡು ಬಂದೆ.. ಆಫೀಸ್ ಗೆ ರಜೆ ಹಾಕಿಸಿ.. ನಾನು ಕೂಡ ರಜೆ ಹಾಕಿದೆ. ಭಾನುವಾರದ ವರೆಗೂ ಕಾಯೋ ತಾಳ್ಮೆ ಇರಲಿಲ್ಲ..." ಅಂತ ನಕ್ಕ... ಏನು ಹೇಳೋಕೆ ಹೊರಟಿದನೆ ಅಂತ ಅವನ ಮುಂದಿನ ಮಾತಿಗಾಗಿ ಕಾಯದಳು... ಅನು.
" ನಿನ್ನೆ ನಮ್ಮ ಮನೇಲಿ ನಮ್ಮಿಬ್ಬರ ಪ್ರೀತಿ ವಿಷಯ ಹೇಳಿದೆ. ಮೊದಲು ಎಲ್ಲರಿಗೂ ನಂಬಲು ಆಗಲಿಲ್ಲ.. ಕಡೆಗೆ ಮೊದಲಿನಿಂದ ಎಲ್ಲ ಹೇಳಿದೆ... ನಿನ್ನ ನೋಡಿದ ಮೊದಲ ದಿನದಿಂದ, ಹಾಗೆ ನಿನ್ನ ಫೋಟೋ ಕೂಡ ಎಲ್ಲರಿಗೂ ತೋರಿಸಿದೆ .. ಮನೇಲಿ ಎಲ್ಲರಿಗೂ ನನ್ನ ಮೇಲೆ ನಂಬಿಕೆ ಅದೇ ನಂಬಿಕೆಯಲ್ಲಿ ಒಪ್ಪಿದರು.. ನಿನ್ನ " ಅಂತ ಒಂದೇ ಸಲಕ್ಕೆ ಹೇಳಿ ಮುಗಿಸಿದ ಎಲ್ಲವನ್ನು.
ಅನುಗೆ ಖುಷಿ ತಡೆಯಲು ಆಗದೆ, ತಬ್ಬಿ ಹಿಡಿದಳು ಅಮಿತನನ್ನು. ಅವಳ ಖುಷಿಗೆ ಅಮಿತನ ಶರ್ಟ್ ತೋಯದು ಹೋಗಿತ್ತು.
" ಇಷ್ಟು ಖುಷಿಯ ವಿಷಯಕ್ಕೆ ಕಣ್ಣೀರು ಹಾಕ್ತಿಯಲ್ಲೇ... ನನ್ನ ಮದುವೆ ಆಗೋದು ಇಷ್ಟ ಇಲ್ವಾ ಅಂತ ಕೇಳಿದ. "
ಅವ ಕೇಳಿದ ರೀತಿಗೆ ನಕ್ಕಳು ಅನುಷ...
ಕಣ್ಣು ವರೆಸಿಕೊಂಡು, ದೂರ ಸರಿದು..." ನಮ್ಮ ಮನೆಯಲ್ಲಿ ಹೇಗೆ ಒಪ್ಪಿಸಲಿ.. " ಅಂತ ದುಃಖಿಸಿದಳು.
ನಮ್ಮ ಮನೆಯಲ್ಲಿ ಒಪ್ಪಿಯಾಯಿತು , ಎಲ್ಲರೂ ಖುಷಿಯಲ್ಲಿ ಇದಾರೆ. ನೀನು ಕೂಡ ಒಂದು ಒಳ್ಳೆ ಸಮಯ ನೋಡಿ ಎಲ್ಲ ಹೇಳಿಬಿಡು... ಆದಷ್ಟು ಬೇಗ ಎಲ್ಲರ ಒಪ್ಪಿಗೆ ಪಡೆದು ಮದುವೆ ಆಗೋಣ.. ಇನ್ನೂ ಜಾಸ್ತಿ ದಿನ ನಿನ್ನ ಬಿಟ್ಟು ಇರೋಕೆ ಆಗೋಲ್ಲ.. ಬೇಗ ಬಂದು ಬಿಡು ನನ್ನ ಹೆಂಡತಿಯಾಗಿ ಅಂತ ಹೇಳುವಾಗ.. ಕಣ್ಣೀರು ಹರಿದು ಹೋಗುತ್ತಿತ್ತು ಅನುಷಗೆ...
ಸರಿ.. ಮನೆಗೆ ಹೋಗೋಣ, ಮನೆ ಮುಟ್ಟು ವಷ್ಟರಲ್ಲಿ ಸಂಜೆ ಆಗುತ್ತೆ. ಆಯಿತು ಅಂತ ಇಬ್ಬರು ಬೈಕ್ ಹತ್ತಿ ಮನೆಗೆ ಹೊರಟರು...
ಅನುಷ.. ಮುಂದಿನ ಭಾನುವಾರ ಹೇಳಿಬಿಡಬೇಕು ಅಂದು ಕೊಂಡಳು.. ಅವತ್ತು ಎಲ್ಲರೂ ಮನೇಲಿ ಇರುತ್ತಾರೆ. ಅಂತ ನಿರ್ಧಾರ ಮಾಡಿದಳು. ಅಂದುಕೊಂಡಂತೆ.. ಭಾನುವಾರ ಎಲ್ಲರನ್ನು ಕೂರಿಸಿಕೊಂಡು ತನ್ನ ಪ್ರೀತಿಯ ವಿಷಯ ಎಲ್ಲವನ್ನು ಹೇಳಿದಳು.. ಯಾವುದನ್ನು ಮುಚ್ಚಿಡದೆ. ಅಮಿತನ ಮನೆಯಲ್ಲಿ ಒಪ್ಪಿಗೆ ಇದೆ ಅನ್ನೋ ವಿಷಯ ಕೂಡ ತಿಳಿಸಿದಳು.
ಮಗಳ ಪ್ರೀತಿ ವಿಷಯ ಕೇಳಿದ ಅವಳ ಅಪ್ಪ ಕೋಪಗೊಂಡು ಏನೊಂದು ಹೇಳದೆ ಎದ್ದು ಹೋದ. ಮನೆಯ ಯಾವ ಸದಸ್ಯರು ಏನು ಹೇಳಲಿಲ್ಲ... ಅನುಷಗೆ ತಳಮಳ ಶುರು ವಾಯಿತು.. ಮುಂದೆ ಏನು ಅಂತ.. ಅದನ್ನೇ ಅಮಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.
ಅಮಿತ " ಜಾಸ್ತಿ ಯೋಚನೆ ಮಾಡಬೇಡ... ವಿಷಯ ಹೇಳಿ ಆಗಿದೆ, ಮುಂದಿನದು ಅ
ವರು ನಿರ್ಧಾರ ಮಾಡಲಿ.. ಪದೇ ಪದೇ ಕೇಳಿ ಅವರಿಗೆ ಕೋಪ ಬರಿಸಬೇಡ . ಸ್ವಲ್ಪ ಹೊತ್ತು ಹೊರಗಡೆ ಸುತ್ತಾಡಿ ಬಾ. ಮನಸಿಗೆ ನೆಮ್ಮದಿ ಯಾಗುತ್ತದೆ.. ಇಲ್ಲವಾದರೆ, ನಾನು ಬರ್ಲಾ.. ಸ್ವಲ್ಪ ಹೊತ್ತು ತಿರುಗಾಡಿ ಬರೋಣ ಅಂತ ಹೇಳುತ್ತಿದ್ದ. ರಜೆ ದಿನ ಅಮಿತ ಮನೆಯವರಿಗೆ ಅಂತ ಮೀಸಲು ಇಡುತ್ತಿದ್ದ ವಿಷಯ ಗೊತ್ತಿದ್ದ ಅನುಷ.. " ಬೇಡ ನಾನೇ ಸುತ್ತಾಡಿ ಬರ್ತೀನಿ.. " ಅಂತ ಹೇಳಿ ಫೋನ್ ಇಟ್ಟಳು.
ಹೀಗೆ ಒಂದು ವಾರ ಕಳೆದು ಹೋಯಿತು... ಯಾವ ಸೂಚನೆ ಕೂಡ ಕೊಡದೆ... ಶನಿವಾರ ರಾತ್ರಿ ಊಟದ ಸಮಯದಲ್ಲಿ ಅನುಷಾಳ ಅಪ್ಪ.. " ಅನು.. ನಾಳೆ ಗಂಡಿನ ಕಡೆಯವರು ಬರ್ತಾ ಇದರೆ ನಿನ್ನ ನೋಡಲು.. ನಮಗೆಲ್ಲ ಒಪ್ಪಿಗೆ ಇದೆ.. ಹುಡುಗ ಹಾಗೂ ಅವನ ಮನೆಯವರಿಗೆ ನೀ ಒಪ್ಪಿಗೆ ಯಾದರೆ ಇದೆ ತಿಂಗಳಲ್ಲಿ ಮದುವೆ ಅಂತ ಹೇಳಿ.. ಊಟ ಮಾಡುತ್ತಾ ಕುಳಿತರು. "
ಅನಿರೀಕ್ಷಿತವಾಗಿ ಬಂದ ಬೇರೆ ಗಂಡಿನ ಪ್ರಪೋಸಲ್... ಅನುಷಳಿಗೆ ಆಘಾತ ಉಂಟು ಮಾಡಿತು. ಕಣ್ಣ ಮುಂದೆ ಇದ್ದ ತಟ್ಟೆ ಮಂಜಾಗಿ ಕಾಣಿಸುತ್ತಿತ್ತು... ತಟ್ಟೆಯಲ್ಲಿದ್ದ ಊಟ ವಿಷವಾಗಿ ಕಾಣಿಸಿತು... ಕೈ ತೊಳೆದು ಕೊಳ್ಳಲು.. ಆಗಲಿಲ್ಲ..
ಅಮಿತನ ಮಾತು.. ಅನ್ನ ದೇವರು.. ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನ ಇದ್ದಾರೆ ಭೂಮಿ ಮೇಲೆ.. ಆದರೆ ನಮಗೆ ಅದೇ ಅನ್ನ ಆರಾಮಾಗಿ ಸಿಗ್ತಾ ಇದೆ ಅಂದರೆ ನಾವೆಷ್ಟು ಪುಣ್ಯವಂತರು.. ಯಾವತ್ತೂ ಅನ್ನಕ್ಕೆ ಅವಮಾನ ಮಾಡಬೇಡ ಅಂತ ಒಮ್ಮೆ ಊಟ ಬಿಟ್ಟು ಎದ್ದು ಹೋಗುವಾಗ ಹೇಳಿದ ಬುದ್ದಿ ಮಾತು ನೆನಪಿಗೆ ಬಂದು.. ಬಡಸಿಕೊಂಡ ಅನ್ನವನ್ನೆಲ್ಲ ಬೇಗ ಬೇಗ ತಿಂದು ಎದ್ದು ಹೋದಳು.
ಎಲ್ಲವನ್ನು ಅಮಿತ ಗೆ ಹೇಳಿದಳು. " ಬಂದವರ ಎದುರಿಗೆ ಅಪ್ಪ ಅಮ್ಮನಿಗೆ ಅವಮಾನ ಮಾಡಬೇಡ, ಅವರ ಮುಂದೆ ಸುಮ್ಮನೆ ಹೋಗಿ ಕೂರು.. ಕಡೆಗೆ ಒಪ್ಪಿಗೆ ಇಲ್ಲ ಅಂತ ಹೇಳು..." ಅಮಿತ ಹೇಳಿದ ಮಾತು ಕೇಳಿ ಇಡೀ ರಾತ್ರಿ ಅತ್ತಳು.
ಮರುದಿನ ಅವ ಹೇಳಿದಂತೆ ಗಂಡಿನ ಕಡೆಯವರು ಬರುವ ವೇಳೆಗೆ ತಯಾರಾಗಿ ಬಾರದ ನಗುವನ್ನು ಕಷ್ಟಪಟ್ಟು ತರಿಸಿ ಕುಳಿತಿದ್ದಳು.
ಮನೆಯ ಎಲ್ಲರಿಗೂ ಇವಳ ಯಾವ ವಿರೋಧ ತೋರಿಸದೆ ಇದ್ದಿದ್ದು ಆಶ್ಚರ್ಯ ತಂದಿತ್ತು. ಕಾರಣ ಕೇಳದೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿದ್ದರು. ನೋಡಿ ಹೋದ ಗಂಡಿನ ಕಡೆಯವರಿಗೂ ಹೆಣ್ಣು ಹಿಡಿಸಿ ಬಿಟ್ಟಳು. ಎಲ್ಲರೂ ಒಪ್ಪಿಕೊಂಡರು.
ವಿಷಯ ತಿಳಿದ ಅನುಷ... ಅಮಿತ ಗೆ ಕಾಲ್ ಮಾಡಿ, ಓಡಿ ಹೋಗಿ ಮದುವೆ ಆಗೋಣ.. ಹೇಗಿದ್ರು ನಿಮ್ಮ ಮನೇಲಿ ಒಪ್ಪಿ ಇದಾರೆ, ಅವರೇ ನನ್ನ ಕುಟುಂಬ ಅಂತ ಅವರ ಸಮ್ಮುಖದಲ್ಲೇ ಮದುವೆ ಆಗಿ ಬಿಡೋಣ ಅಂತ ಹೇಳ್ತಾ ಇದ್ದಳು.. ಇವಳ ಪ್ರೀತಿ ಪರಿಗೆ ಸೋತು ಹೋದ ಅಮಿತ... ಈ ಹುಡುಗಿ ಅದೆಷ್ಟು ಇಷ್ಟ ಪಡ್ತಾ ಇದಾಳೆ ನನ್ನ ಅಂತ. ಆದರೆ, ಅಮಿತನಿಗೆ ಓಡಿ ಹೋಗಿ ಮದುವೆ ಆಗೋದು ಇಷ್ಟವಿರಲಿಲ್ಲ. ಅದನ್ನೇ ಹೇಳಿದ, " ಅನು ಓಡಿ ಹೋಗುವ ಹಾಗಿದ್ರೆ ಆರು ವರ್ಷ ಕಾಯಬೇಕಿತ್ತಾ ನಾವು..? ಒಮ್ಮೆ ನಿಮ್ಮ ಪರಿವಾರದವರನ್ನು ನೆನೆಪು ಮಾಡಿಕೊ.. ಅವ್ರು ನಿನ್ನ ಸಾಕಿ ಸಲುಹಿ ಇಷ್ಟರ ಮಟ್ಟಿಗೆ ತಂದು ನಿಲ್ಲಿಸಿದ್ದಾರೆ. ಅವರಿಗೆ ಮೋಸ ಮಾಡೋದು ಬೇಡ ಅನು..
ಅಮಿತ ಮಾತನ್ನು ಅಲ್ಲಿಗೆ ತಡೆದು, ಗೊತ್ತು ಮೀತ.. , ಆದ್ರೆ ಈಗಿನ ಪರಿಸ್ಥಿತಿ ಅರ್ಥ ಮಾಡಿಕೊ.. ನಾ ಓಡಿ ಬರದೆ ಹೋದರೆ, ಯಾರನ್ನೋ ಗಂಟು ಹಾಕಿ ಬಿಡ್ತಾರೆ ಅಪ್ಪ... ದಯವಿಟ್ಟು ಅರ್ಥ ಮಾಡಿಕೊ ಅಂತ ಗೋಗರೆದು ಬಿಟ್ಟಳು. ಅನುಷಾಳ ಕಷ್ಟ ನೋಡದೆ.. ತನ್ನ ನಿಯಮಕ್ಕೆ ವಿರುದ್ಧವಾಗಿ ಒಪ್ಪಿಗೆ ಸೂಚಿಸಿದ.. ಅಮಿತ... ಸರಿ ನಾಡಿದ್ದು ಬಂದು ಕರೆದು ಕೊಂಡು ಹೋಗತಿನಿ ರೆಡಿಯಾಗಿರು.., ಯಾವ ಸಾಮಾನು ಬೇಡ.. ಉಟ್ಟ ಬಟ್ಟೆಯಲ್ಲಿ ಹೋಗೋಣ.. ಅಂತ ಹೇಳಿ ಫೋನ್ ಇಟ್ಟ... ಅಮಿತ ಮಾತು ಕೇಳಿ ನೆಮ್ಮದಿಯಾಯಿತು ಅನುಷಳಿಗೆ... ಇನ್ನೆರಡು ದಿನ ಬಂದು ಕರೆದುಕೊಂಡು ಹೋಗ್ತಾನೆ.. ನನ್ನವ ಅಂತ ಖುಷಿಯಲ್ಲಿ ಇದ್ದಳು.. ಗಂಡು ನೋಡಿ ಹೋದಮೇಲೆ.. ಅನುಷ ಅಫಿಸ್ ಕೂಡ ಹೋಗೋದು ಬಿಟ್ಟಿದ್ದಳು... ಈಗ ಎರೆಡು ದಿನ ಮನೆಯವರ ಜೊತೆ ಕಳೆದರೆ ಆಯಿತು.. ಕಡೆಗೆ ಇವರುಗಳು ಯಾವತ್ತೂ ನನಗೆ ಮುಖ ಕೂಡ ತೋರಿಸಲ್ಲ.... ಅಂತ ಎರಡು ದಿನ ಮನೆಯವರ ಜೊತೆ ಖುಷಿಯಾಗಿ ಇರಲು ನಿರ್ಧರಿಸಿದಳು.
ಅಮಿತ ಮಾತನ್ನು... ಅನುಷ ಬಿಟ್ಟು.., ಇನ್ನೆರಡು ಕಿವಿಗಳು ಕೇಳಿಸಿಕೊಂಡಿದ್ದು ಅರಿಯದೆ ಹೋದಳು ಅಮಿತನ ಅನು. ಮಾರನೆಯ ದಿನ ಖುಷಿಯಲ್ಲಿಯೇ ಕಳೆದ ಅನುಷ.
ರಾತ್ರಿ ನಿದ್ದೆ ಕೂಡ ಮಾಡದೆ ಬೆಳಗಿಗಾಗಿ ಕಾಯುತ್ತಿದ್ದಳು.
ಎಂದಿನಂತೆ ಸೂರ್ಯ ಭೂಮಿಗೆ ತನ್ನ ಕಿರಣಗಳನ್ನು ಬಿಟ್ಟು.. ಬೆಳಗಾಯಿತು ಅಂತ ಎಲ್ಲರನ್ನು ಎಬ್ಬಿಸಿದ... ಅನುಷ.. ಬೇಗ ಬೇಗ ಸ್ನಾನ ಮಾಡಿ ತಿಂಡಿ ತಿಂದು ರೆಡಿ ಯಾದಳು. ಕಡೆಯಬಾರಿ ಎಲ್ಲರ ಆಶೀರ್ವಾದ ಕೂಡ ಪಡೆದುಕೊಂಡಳು. ಅನುಷ ಳ ಈ ವರ್ತನೆ ಮನೆಯವರು.. ಕೇಳಿದರು.. ಏನೋ ಒಂದು ಸಬೂಬು ಹೇಳಿ ಅಲ್ಲಿಗೆ ವಿಷಯ ಮುಗಿಸಿದಳು. ಆದರೆ ಅಮಿತ ಮಾತ್ರ ಮಧ್ಯಾಹ್ನ ಆದರೂ ಒಂದು ಫೋನ್ ಕಾಲ್ ಇಲ್ಲ ಅಂತ ಚಡಪಡಿಸಿ ಬಿಟ್ಟಳು ಅನು...
ಅವಳೇ ಮಾಡಿದರು ಸ್ವಿಚ್ ಆಫ್ ಆಗಿ ಬಿಟ್ಟಿತ್ತು... ಕಾಲ್ ಹೋಗದಿದ್ದಾಗ.. ಗಾಬರಿ ಆಗಿ ಹೋದಳು..
ಕೈಯಲ್ಲಿ ಫೋನ್ ಹಿಡಿದುಕೊಂಡು ಸಂಜೆವರೆಗೂ ಕೋಣೆಯ ಕಿಟಕಿಗೆ ಕಣ್ಣು ನೆಟ್ಟು ಕುಳಿತು ಬಿಟ್ಟಳು.. ಸಂಜೆಯಾದರು ಕೂಡ ಅಮಿತನ ಸುಳಿವಿಲ್ಲ... ಏನಾಯಿತು ನನ್ನ ಅಮಿತಗೆ ಅಂತ ಹೊಟ್ಟೆಯಲ್ಲಿ ಹೇಳದ ಸಂಕಟ... ಬರುತ್ತೇನೆ ಅಂತ ಹೇಳಿದ ಅಮಿತ ರಾತ್ರಿಯಾದರು ಬಾರದೆ ಇದ್ದಾಗ ಅಳು ವತ್ತರಿಸಿ ಬಂದಿತು.. ಅನುಷಳಿಗೆ. ಅದೇ ಯೋಚನೆಯಲ್ಲಿ ಕೋಣೆ ಬಿಟ್ಟು ಆಚೆ ಬಂದಿರಲಿಲ್ಲ. ಮರುದಿನ ಬಂದ ಫೋನ್ ಕಾಲ್.., ಅನುಷಳಿಗೆ ಭೂಮಿ ಬಿರಿದಂತಾಯಿತು. ಕೈಯಲ್ಲಿದ್ದ ಮೊಬೈಲ್ ಕಿಣಿಕಿಸಿದಾಗ.... ಅಮಿತ ನದೆ ಕಾಲ್ ಅಂತ ಡಿಸ್ಪ್ಲೇ ಕೂಡ ನೋಡದೆ " ಹೆಲೋ ಅಮಿತ್.. ಎಲ್ಲಿ ಇದೀಯಾ... ಹೆಂಗ್ ಇದೀಯಾ " ಅಂತ ಒಂದೇ ಸಮನೆ ಪ್ರಶ್ನೆ ಕೇಳುತ್ತ ಇದ್ದವಳಿಗೆ ಅತ್ತ ಕಡೆಯ ಬೇರೆ ಧ್ವನಿ , ಇವಳ ಮಾತಿಗೆ ಕಡಿವಾಣ ಹಾಕಿತು.
ಫೋನ್ ಮಾಡಿದ್ದು.. ಅಮಿತನ ಆತ್ಮೀಯ ಸ್ನೇಹಿತ, ಇವರಿಬ್ಬರ ವಿಷಯ ಮೊದಲಿನಿಂದಲೂ ಗೊತ್ತಿದ್ದ ಗೆಳೆಯ. ಗೆಳೆಯನ ಮಾತು ಕೇಳಿ.. ಮಾತು ಬಾರದೆ ಹಾಗೆ ಕಲ್ಲಾಗಿ ಹೋದಳು ಅನುಷ... ಒಮ್ಮೆ ಕಿರುಚಿದ್ದು ಬಿಟ್ಟರೆ.
ತಿಂಗಳುಗಳ ನಂತರ...,
ಅನುಷ ಆಸ್ಪತ್ರೆ ಸೇರಿ ಬಿಟ್ಟಿದ್ದಳು.. ಅವಳ ತಂದೆಗೆ.. ಆಘಾತದ ಜೊತೆ ಪಾಪ ಪ್ರಜ್ಞೆ ಒಂದು ಕಾಡುತ್ತಿತ್ತು.ಅನುಷ ಓಡಿ ಹೋಗುವ ವಿಷಯ ತಿಳಿದ ಅವಳ ತಂದೆ... ಅಮಿತ ಬರುವ ದಾರಿಯಲ್ಲಿ.. ಅವನ ಬೈಕ್ ಗೆ ಅಪಘಾತ ಮಾಡಿಸಿ ಬಿಟ್ಟ... ಕೈ ಕಾಲು ಮುರಿಯಬೇಕು ಎಂದುಕೊಂಡಿದ್ದ... ಅನುಷಾಳ ತಂದೆಗೆ.. ಅವ ಅಪಘಾತ ಆದ ಸ್ಥಳದಲ್ಲೇ ಸತ್ತು ಹೋದ ಅಂತ ತಿಳಿದು ಪಾಪ ಪ್ರಜ್ಞೆ ಕಾಡುತ್ತಿತ್ತು. ಆದರೆ, ಮಗಳು ಅನುಷ.. ಅವನ ಸುದ್ದಿ ತಿಳಿದು ಹುಚ್ಚಿ ಆಗಿ , ಹುಚ್ಚಾಸ್ಪತ್ರೆ ಸೇರುತ್ತಾಳೆ ಅಂತ ಅಂದುಕೊಂಡಿರಲಿಲ್ಲ... ಅವಳ ತಂದೆ.
ಮುಕ್ತಾಯ.