ಕೈಲಾಸ ಗಿರಿ
ಕೈಲಾಸ ಗಿರಿ
ಹಿಮದ ತಪ್ಪಲಿನಲ್ಲಿ , ಚಳಿಯಲ್ಲಿ ನೋಡುತ್ತಾ ನಿಂತಿದ್ದೆ . ಮೈ ಮೇಲಿನ ಸಾಕಷ್ಟು ಬೆಚ್ಚಗಿನ ವಸ್ತ್ರಗಳು ಇದ್ದರೂ ಕೂಡ.
ಅಚ್ಚರಿ ಮೇಲೆ ಅಚ್ಚರಿ ಆಗುತ್ತಾ ಇತ್ತು . ಅಲ್ಲಿ ಓಡಾಡುವ ಸಾಧುಗಳನ್ನ ನೋಡಿ .ಬರೀ ಮೈ ಅಲ್ಲಿ ...! ಕೈಯಲ್ಲಿ ಡಮರುಗ ತ್ರಿಶೂಲ ಹಿಡಿದು ಅವರು ಹೋಗುತ್ತಾ ಇದ್ದಿದ್ದು ಎಲ್ಲಿ ಎಂಬುದೇ ಪ್ರಶ್ನೆ..? ಅವರ್ಯಾರಿಗೂ ಚಳಿ ಆಗೋದೇ ಇಲ್ಲವೇ ಎಂಬ ಪ್ರಶ್ನೆ ಹೊಕ್ಕಿತು ತಲೆಯಲ್ಲಿ , ಅವರ ದಿಗಂಬರ ವೇಷ ನೋಡಿದಾಗ.
ಆದರೆ ಅವರ್ಯಾರು ಹುಚ್ಚರು ಅಲ್ಲಾ ಎಂಬುದು ಸ್ಪಷ್ಟವಾಗಿತ್ತು. ಯಾಕೆಂದರೆ ಸಾವಿರಾರು ಹುಚ್ಚರು ಒಂದು ಕಡೆ ಸೇರಲು ಸಾಧ್ಯವೇ ಇಲ್ಲಾ ...! ಸಾಧುಗಳು ಹೋಗುವ ದಿಕ್ಕನ್ನೇ ನೋಡುತ್ತಾ ... ಅವರ ಧರ್ಮ , ಅವರ ಕರ್ಮ ಭೂಮಿ ಯಾವುದೆಂದು ಅವರ ನಡೆಯಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು.
ನಾವೇ ಹುಚ್ಚರ ಹಾಗೆ , ನಮ್ಮ ಭೂಮಿಯ ವಿಷಯಗಳು ಗೊತ್ತಿಲ್ಲದೆ , ಸುಮ್ಮನೆ ನಿಂತಿದ್ದೇವೆ ಅನಿಸುತಿತ್ತು ಮನದಲ್ಲಿ.
ಧರ್ಮ ಭೂಮಿ , ಕರ್ಮ ಭೂಮಿ ಅಂದರೆ ಅರ್ಥ ಹೇಳೋಕೆ ಕೂಡ ಸಾಧ್ಯವಾಗದ ಮನಸ್ಥಿತಿ ನನ್ನದು .
ನೋಡುತ್ತಾ ನಿಂತಿದ್ದೆ , ಕಣ್ಣೆದರು ನಡೆಯುತ್ತಿದ್ದ ಅಚ್ಚರಿಯನ್ನು. ತಲೆಯಲ್ಲಿ ನೂರಾರು ಪ್ರಶ್ನೆಗಳು ಅವರ ಹಿಂದೆಯೇ ಹಾದು ಹೋದವು.. ಕೇಳಲು ಧೈರ್ಯ ಸಾಲಲಿಲ್ಲ , ಅವರ ಗಂಭೀರ್ಯ ಮುಖಭಾವ ನೋಡಿ .
ಆಗ ಭಾರತದ ಸಿಪಾಯಿಗಳು ಕರೆದು ಒಯ್ದರು ನನ್ನ , ಹಿಮ ಪಾತ ಆಗುವ ಸಾದ್ಯತೆ ಇದೆ ಎಂದು.
ಹಾಗಾದರೆ ಅಲ್ಲಿ ಇದ್ದವರು ಎಲ್ಲಾ ಹಿಮದಲ್ಲಿ ಮುಚ್ಚಿ ಹೋಗುತ್ತಾರೆಯೇ ? ಕೇಳಿದ್ದೆ ... " ಮೇಜರ್ " ಕೊಟ್ಟ ಬೆಚ್ಚಗಿನ ಚಹಾ ಹೀರುತ್ತಾ.. ನಕ್ಕಿದ್ದ ಆತ , ಅವರ ಭೂಮಿಯೇ ಇದು ಎಂದು. ಹಾಗಾದರೆ ಅವರು ಎಲ್ಲಿ ಉಳಿಯುತ್ತಾರೆ ಹಿಮಪಾತ ವಾಗುವಾಗ ಎಂದು ಮತ್ತೆ ಕೇಳಿದ್ದೆ...!
ಆಗ ಶುರು ಮಾಡಿದ ಮೇಜರ್ ತನ್ನ ಅನುಭವ ಹೇಳಲು... ನನ್ನ ಕುತೂಹಲಕ್ಕೆ.
" ದೂರದಲ್ಲಿ ಕಾಣಿಸುವ ಕೈಲಾಸ ಗಿರಿ , ಅದರ ಸುತ್ತ ಮುತ್ತಲಿನ ಪ್ರದೇಶ ಎಲ್ಲ ಸೇರಿದ್ದು ನಮ್ಮ ಭಾರತಕ್ಕೆ. ಮಧ್ಯೆ ದೊಡ್ಡ ಮನುಷ್ಯ ಎನಿಸಿಕೊಂಡ ರಾಜಕಾರಣಿ ಗಳ ಪ್ರಭಾವದಿಂದ ಕಳೆದುಕೊಂಡೆವು.. ಆದರೆ , ಇಲ್ಲಿನ ಜನಗಳಿಗೆ.. ಸಾಧುಗಳಿಗೆ ಯಾವ ಗಡಿ..! ಯಾವ ಪ್ರದೇಶದ ಮಿತಿ..? ನಮಕ್ಕಿಂತ ಹೆಚ್ಚಾಗಿ.. ಸರಿಯಾಗಿ ಗೊತ್ತು ಅವರಿಗೆ ಎಲ್ಲವೂ . ಆದರೆ ಯಾವುದನ್ನೂ ಬಾಯಿ ಬಿಟ್ಟು ಹೇಳರು . ಅವರ ಮೌನ ಸಾವಿರ ಮಾತು ಹೇಳುತ್ತದೆ . ಅವರ ಭಾಷೆ ಸಾಮಾನ್ಯರಿಗೆ ನಿಲುಕದ್ದು . " ಎಂದು ತನ್ನ ಚಹಾ ಹೀರುತ್ತಾ ಇದ್ದ.
ನನಗೆ ಕುತೂಹಲ... ಹಾಗಾದ್ರೆ ಇವರು ಗಡಿ ದಾಟಿ ಆಚೆ ಪ್ರದೇಶಕ್ಕೂ ಕಾಲಿಡುತ್ತಾರಾ..? ಅವರು ಯಾರ ಜೊತೆಯೂ ಮಾತು ಆಡುವುದೇ ಇಲ್ಲವಾ ? ಅಂತ ಕೇಳಿದೆ. ಮೇಜರ್, " ಆಗಲೇ ಹೇಳಿದೆ, ಅದೆಲ್ಲ ಅವರ ಸ್ವತ್ತು... ಅದು ಯಾರ ಅಧೀನಕ್ಕೂ ಒಳಪಡುವುದಿಲ್ಲ. ಸಾಧುಗಳ ದಾರಿ ತಡೆಯಲು ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ... ಮುಂದೆ ಆಗುವುದು ಇಲ್ಲ.. ಇನ್ನೂ ಅವರು ಮಾತನಾಡುವದು , ನನಗೂ ಅರ್ಥವಾಗದ ಭಾಷೆ ಅದು.
ಸಾವಿರಾರು ಸಂಖ್ಯೆಯಲ್ಲಿ ಇರೋ ಅವರು , ಅವರ ಒಬ್ಬ ಗುರು...ಇಡೀ ದೇಶವನ್ನೇ ಆಳುತ್ತಿದ್ದಾನೆ ಎನ್ನುವಂತೆ ಅವರ ಹೆಜ್ಜೆ , ಅವರ "ಧರ್ಮದ ಆಯುಧ " ದ ಜೊತೆ. ಸಾವಿರಾರು ಮೈಲುಗಳ ಅಂತರದಲ್ಲಿ ಕುಳಿತು, ಯಾವ ತಾಂತ್ರಿಕ ಮಾಧ್ಯಮವಿಲ್ಲದೆ ಮಾತನಾಡುವ ಅವರು... ಅದ್ಭುತನೆ ಸರಿ.
ಅವರಿಂದನೆ ನಮ್ಮ ಭೂಮಿಯಲ್ಲಿ ಧರ್ಮ ಎನ್ನುವುದು ಇನ್ನೂ ಜೀವಂತವಾಗಿದೆ... ಅವರ ಧರ್ಮದ " ಆಯುಧ ದಿಂದ".
ಸಾಧುಗಳ ಸಂತತಿ ಈಗ ಕಡಿಮೆ ಆಗುತ್ತ ಬರುತ್ತಿದೆ ಅಂತ ಅಲ್ಲಲ್ಲಿ ಮಾಧ್ಯಮ ಗಳಲ್ಲಿ ಕೇಳಿ ಬರುತ್ತಿದೆ. ಇದು ನಿಜವೇ ? ಎಂಬ ನನ್ನ ಪ್ರಶ್ನೆ ಗೆ ನಕ್ಕ ಮೇಜರ್... " ಮಾಧ್ಯಮಗಳು ತಮಗೆ ಬಂದ ಸುದ್ದಿಯೇ ನಿಜವೆಂದು ಬಿತ್ತರಿಸುತ್ತವೆ . ಆದರೆ ಸತ್ಯ ಯಾವುದೆಂದು ಅರಿಯುವುದು ಹೇಗೆ ? ಸಾಧುಗಳ ಸಂತತಿ ಕಡಿಮೆಯಾಗಿದೆ ಅಂತ ಹೇಳುವ ಮಾಧ್ಯಮ , ಯಾವಾಗ ಅವರ ಎಣಿಕೆ ಮಾಡಿ ಬಂದಿತು ಅಂತ ಅರ್ಥ ವಾಗಲಿಲ್ಲ " ಅಂತ ನಗುತ್ತ ಹೇಳಿದರು.
ನಾನು , "ಎಲ್ಲವನ್ನು ಅಚ್ಚರಿಯೆಂಬಂತೆ ಕೇಳುತ್ತಾ .., ಚಹಾ ಮುಗಿದಿದ್ದೆ ಗೊತ್ತಾಗಲಿಲ್ಲ. ಚಹಾ ಮುಗಿದ ಸ್ವಲ್ಪ ಹೊತ್ತಿಗೆ ಮತ್ತೆ ಚಳಿ ಶುರುವಾಗಿತ್ತು ನನಗೆ... ಆಗ ಕೇಳಿದೆ... ಮೈ ತುಂಬ ಉಣ್ಣೆಯ ಬಟ್ಟೆ ಧರಿಸಿ ಬಂದಿದ್ದೆ ನಾನು.. ಆದರೂ ಚಳಿ ಇಣುಕಿ ನೋಡುತ್ತಾ ಇದೆ.. ನನ್ನೊಳಗೆ..
ಆದರೆ, ಬರಿಮೈ ಸಾಧುಗಳನ್ನು ನೋಡಿ ಅಚ್ಚರಿಯಾಯಿತು... ಮೈನಸ್ ನಲ್ವತ್ಮೂರು ಇರುತ್ತೆ ... ಯಾವ ವಿಜ್ಞಾನ ಕೂಡ ಅಂತಹ ಜಾಗದಲ್ಲಿ ಮಾನವ ಬದುಕಿ ಇರಬಲ್ಲ ಎಂದು ಹೇಳಿಲ್ಲ. " ಎಂದು ಸಾಧುಗಳನ್ನು ಕಣ್ಣಾರೆ ಕಂಡರು ನಂಬಿಕೆ ಬಾರದೆ ಕೇಳಿದೆ.
ಮೇಜರ್ , " ಹೂ....ವಿಜ್ಞಾನ ಪುರಾವೆ ಕೇಳುತ್ತೆ , ಆದರೆ ಪುರಾವೆ ಇದ್ದರೂ ಪತ್ತೆ ಹಚ್ಚಲು ಆಗೋಲ್ಲ ವಿಜ್ಞಾನದ ಬಳಿ . ಈಗ ಹೊಸದಾಗಿ ಕಂಡು ಹಿಡಿದ್ದೇವೆ, ಸಂಶೋಧನೆ ಮಾಡಿದ್ದೇವೆ ಎಂದು ಹೇಳುವ ವಿಜ್ಞಾನ , ಸಾವಿರಾರು ವರ್ಷಗಳ ಹಿಂದೆ ನಮ್ಮ ಜನರು ಅದನ್ನೆಲ್ಲ ಸಣ್ಣ ತಪ್ಪು ಇಲ್ಲದೆ ಬರೆದು ಇಟ್ಟಿದ್ದಾರೆ.
ಈ ಜಾಗದಲ್ಲಿ ಓಡಾಡುವ ಸಂತರು , ಸನ್ಯಾಸಿಗಳು ಬರೀ ಮೈ ಅಲ್ಲಿ ತಿರುಗಾಡುವುದು ಕೂಡ ವಿಸ್ಮಯ. ಕೈಲಾಸ ಪರ್ವತ ಶ್ರೇಣಿಯಲ್ಲಿರುವ ಎಲ್ಲವೂ ಹಾಗೆ ವಿಜ್ಞಾನಕ್ಕೆ ನಿಲುಕಿಲ್ಲ ಅದು . ಅದೇ ವಿಜ್ಞಾನಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ. ಅವರ ಆಯಸ್ಸು ಕೂಡ ಅಷ್ಟೇ ಯಾವ ಸಾಧುವಿಗೆ ಎಷ್ಟು ವಯಸ್ಸಾಗಿದೆ ಎಂದು ಯಾರಿಗೂ ಊಹೆ ಕೂಡ ಮಾಡಲು ಆಗುವುದಿಲ್ಲ.
ಹಾಗೆ..,ಅದೇ ಸಾಧುಗಳನ್ನು ನಾನು ಮೂವತೈದು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ.. ಇವತ್ತಿಗೂ ನಾ ಮೊದಲು ನೋಡಿದ ಹಾಗೆಯೇ ಇದಾರೆ, ಕೂದಲೆಳೆಯಷ್ಟು ವ್ಯತ್ಯಾಸ ವು ಇಲ್ಲದೆ.
ಅದೆಷ್ಟೋ ಗಾವುದ ದೂರದಿಂದ ಕೇಳುವ " ಶಂಖನಾದ " ಕೂಡ ನಮಗೆ ಹೊಸ ಚೈತನ್ಯವನ್ನು ಕೊಡುತ್ತದೆ... ಕೆಲವೊಮ್ಮೆ ಆಶ್ಚರ್ಯ ವೆಂಬಂತೆ ಹಿಮ ಕರಗಿ ಗಂಗೆಯಾಗಿ ಹರಿಯುತ್ತಾಳೆ.. ಎರೆಡು ಮೂರು ತಿಂಗಳುಗಳ ಹಿಂದೆ ಶತ್ರು ಸೈನ್ಯ ಗಡಿ ದಾಟಿ ಬಂದಾಗ , ನಮ್ಮಿಂದ ಕೂಡ ಅಸಾಧ್ಯವಾದಾಗ " ಗಂಗೆ "ಭೋರ್ಗರೆದು ಹರಿದು.., ಅವರಾಗೆ ಹಿಂದೆ ಸರಿಯುವ ಹಾಗೆ ಮಾಡಿದಳು.
ಯಾವತ್ತೂ ಕೂಡ ತನ್ನೊಳಗೆ ಎಲ್ಲವನ್ನು ಬಚ್ಚಿಟ್ಟು ಶಾಂತವಾಗಿ ಹರಿಯುವ ಗಂಗೆ.. ಅವತ್ತು ಮಾತ್ರ ರುದ್ರವಾಗಿ ಹರಿದು ಬಂದಳು.. ಶಂಖ ಊದಿದ ಮೇಲೆ ಹಿಮ ಕರಗಿ , ಗಂಗೆ ಯಾಗಿ ಹರಿದಳ...? ಯಾಕಂದ್ರೆ... ಅವಳು ಹರಿಯುವ ಮೊದಲು ದೂರದಲ್ಲೆಲ್ಲೋ ಶಂಖನಾದ ಕೇಳಿದ ನೆನಪು.
ಕೈಲಾಸ ಪರ್ವತ 70 ವರ್ಷದ ಮೇಲೆ ವಶಕ್ಕೆ ಪಡೆದು ಆಯ್ತು ಯಾವ ಹೋರಾಟ ಇಲ್ಲದೇ..! ಈಗೊಂದು ತಿಂಗಳ ಹಿಂದೆ . ಟಿ ವಿ ಮಾಧ್ಯಮದಲ್ಲೆಲ್ಲ ಕೂಡ ಬಂತು .ಕೈಲಾಸ ಪರ್ವತ ನಮ್ಮದು ಆಯ್ತು ಅಂತ ಬ್ರೇಕಿಂಗ್ ನ್ಯೂಸ್ ಅಂತ ಒಂದು ದಿನ , ಸೈನ್ಯದ ಜನ ಅಂತ ಹೇಳಿದರು . ಆದರೆ ಸೈನ್ಯಕ್ಕೆ ಅಲ್ಲಿ ಹೋಗೋಕೆ ಆಗೋಲ್ಲ .
ನಮ್ಮ ಸೈನ್ಯ ಅಲ್ಲಿ ಹೋಗಿರಲಿಲ್ಲ , ಆದರೆ ಲಡಾಕ್ ಪ್ರದೇಶದಲ್ಲಿ ಇತ್ತು .ಆದರೂ ಅದನ್ನು ವಶ ಪಡಿಸಿ ಕೊಂಡ ಮನುಷ್ಯ , ಹೇಗೆ..! ಅನ್ನೋದು ವಿಸ್ಮಯ. ಸಾಧು ಸನ್ಯಾಸಿಗಳು ಮಾಡಿದ್ರ ಇದನ್ನು..? ಅಥವಾ ಅವರ ಧರ್ಮದ ಆಯುಧ ದ ಕೆಲಸವಾ..? ಕೆಲವೊಂದು ಪ್ರಶ್ನೆಗಳು , ಪ್ರಶ್ನೆಗಳಾಗೆ ಉಳಿಯುತ್ತವೆ... ಉತ್ತರ ಗೊತ್ತಿದ್ದವರು ಹೇಳುವುದಿಲ್ಲ...
" ನಮ್ಮ ಧರ್ಮದ, ನಮ್ಮ ನೆಲದ, ಬದುಕು ಮುಳುಗಲು ಬಿಡುವುದಿಲ್ಲ ಎಂಬ ಶಪಥ ತೊಟ್ಟಂತೆ... " ಯಾವಾಗಲೂ ಹೋಗುವ ಹಾಗೆ , ಒಂದು ದಿನ ಗಡಿಯ ಪ್ರದೇಶಕ್ಕೆ ಹೋಗಿದ್ದೆ... ಕೈಲಾಸ ಪರ್ವತ ದ ಹತ್ತಿರ. ಒಂದು ಚಾರಣಿಗಳ ತಂಡ ಬಂದು ನೆಲೆಯೂರಿತ್ತು... ಆಗಿನ್ನೂ ಸರ್ಕಾರ ನಿರ್ಬಂಧ ಹಾಕಿರಲಿಲ್ಲ , ಬೆಟ್ಟ ಹತ್ತಲು .
ಹನ್ನೆರೆಡು ಜನರ ತಂಡ ಇರಬೇಕು ಅದು... ಕೈಲಾಸ ಪರ್ವತ ಹತ್ತುವ ಇರಾದೆಯಿಂದ ಬಂದವರು. ಬಂದವರು ಹತ್ತಲು ಶುರು ಮಾಡಿದ್ದರು. ಮೂರು ಸಾವಿರ ಅಡಿಯಷ್ಟು ಹೋಗಿದ್ದರು ಇರಬೇಕು... ಕಡೆಗೆ ಅವರಲ್ಲಾದ ಬದಲಾವಣೆ... ನಿಜಕ್ಕೂ ಅಚ್ಚರಿ ಮೂಡಿಸಿತ್ತು ನನಗೆ.. "
ಮೇಜರ್ ಹೇಳುವದನ್ನೇ ಕಾತರದಿಂದ , ಕುತೂಹಲದಿಂದ ಒಂದಿಂಚು ಕೂಡ ಅಲ್ಲಾಡದೆ , ಕೇಳುತ್ತಾ ಕುಳಿತಿದ್ದ ನನಗೆ.. ಕೈಲಾಸ ಪರ್ವತದ ಟ್ರೆಕಿಂಗ್ ಹೊಸದು.. ಮತ್ತಷ್ಟು ಕಿವಿ ದೊಡ್ಡದು ಮಾಡಿ ಕೇಳುತ್ತಾ ಕುಳಿತೆ...
" ಹತ್ತಿದ ಎಲ್ಲರಲ್ಲಿಯೂ ಅವರ ವಯಸ್ಸಿನ ಎರಡು ಪಟ್ಟು ವಯಸ್ಸು ಜಾಸ್ತಿ ಆಯ್ತು, ಕೈ ಉಗುರು ಬೆಳೆಯಿತು , ಕೂದಲು ಕೂಡ.., ಹಲ್ಲು ಉದುರಿ ಹೋಯಿತು ಕೂಡ. ಒಬ್ಬೊಬ್ಬರಾಗಿ ತಮ್ಮ ತಮ್ಮ ಮುಖ ಕೈ ಕಾಲುಗಳನ್ನು ಗಮನಿಸಿ ದಂಗುಬಡಿದು ಹೋದರು. ಅವರಿಗೆ ಅರಿವಾಗಲೇ ಇಲ್ಲ.. ಹೇಗಾಯಿತು ಇದು ಅಂತ.. ಇಲ್ಲಿವರೆಗೂ ಯಾರಿಂದಲೂ ಅರಿಯಲು ಸಾಧ್ಯವಾಗಿಲ್ಲ..
ಹಿಮ ಪೂರ್ತಿ ಕವಚಿ ಬಿದ್ದ ಹಾಗೆ ಇದೆ ಆ ಪರ್ವತ ಆದರೆ ಅದೊಂದು ವಿಸ್ಮಯ. ಅರಿಯಲು ಹೋದವರು ಜೀವಂತ ಇಲ್ಲಾ . ಅರಿತವರು ಹೇಳೋದು ಇಲ್ಲ . ಮೌನ ಸಾಧುಗಳ ಹಾಗೆ . ಆದರೆ ಅವರೆಲ್ಲಾ ನೋಡಿದರು ..ಒಬ್ಬ ಹುಡುಗ ಒಳಗೆ ಹತ್ತಿ ಹೋಗುತ್ತ ಇದ್ದ ಆ ಹುಡುಗನ ಎದುರಿಗೆ , 7 ಅಡಿಯ ದಿಗಂಬರ ಮನುಷ್ಯ ಇದ್ದ. ಇಬ್ಬರೂ ಹೋಗಿದ್ದು ನೋಡಿದರು ಅವರು. " ಅಲ್ಲಿಗೆ ಮಾತು ನಿಲ್ಲಿಸಿ ನನ್ನ ಮುಖ ನೋಡಿದರು.
ನಾನು ಮುಂದೆ ಎನ್ನುವ ರೀತಿ ನೋಡಿದೆ... ಅವರ ಮಾತು ಕೇಳಿ ನನಗೆ ಮಾತೇ ಹೊರಡದಾಗಿತ್ತು... ಮಾತು ಮೂಕವಾಗಿದ್ದವು... ಟೆಂಟ್ ಇಂದ ಎದ್ದು ಹೊರ ನಡೆದರು ಮೇಜರ್ ನನ್ನ ಕರೆದುಕೊಂಡು. " ಅಷ್ಟೆ ಗೊತ್ತಾಗಿದ್ದು ನನಗೆ " ಎಂದು ಹೇಳುತ್ತಾ...
ನಾನಿನ್ನೂ ಆ ಕೈಲಾಸ ಗಿರಿಯ ವಿಸ್ಮಯದಿಂದ ಹೊರಬಂದಿರಲಿಲ್ಲ....
