Vijaya Bharathi

Drama Thriller Others

2  

Vijaya Bharathi

Drama Thriller Others

ಮುಚ್ಚಿದ ಕದ

ಮುಚ್ಚಿದ ಕದ

6 mins
152


ವಿಶಾಲವಾದ ಹನ್ನೆರಡು ಅಂಕಣದ ತೊಟ್ಟಿ ಮನೆಗೆ ಆ ಊರಿನ ಜಮೀನು ದಾರನ ಪತ್ನಿ ಯಾಗಿ ಸುಶೀಲಾ ಗೃಹಪ್ರವೇಶ ಮಾಡಿ,ಈಗ ಒಂದು ವರ್ಷ ವೇ ಕಳೆದಿದೆ.


ಅಗ್ರಿಕಲ್ಚರ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ,ತನ್ನ ಹಳ್ಳಿಯಲ್ಲೇ ತನ್ನ ಇಪ್ಪತ್ತು ಎಕರೆ ಜಮೀನು ಮತ್ತು ತೆಂಗು ಅಡಿಕೆ ತೋಟಗಳನ್ನು ನೋಡಿಕೊಳ್ಳುತ್ತಿದ್ದ ಸಂಜೀವಿಯನ್ನು ,ಸುಶೀಲಾ ಕೈಹಿಡಿದು ಆ ದೊಡ್ಡ ಮನೆಯ ಒಡತಿ ಯಾಗಿ ಬಂದಾಗ, ಇಷ್ಟು ದೊಡ್ಡ ಮನೆಯನ್ನು ಹೇಗೆ ಸಂಭಾಳಿಸುವುದೆಂದು ಒಮ್ಮೆ ಗಾಬರಿಯೇ ಆಯಿತು. ಮನೆ ಹಳೆಯ ಕಾಲದಂತೆ ಇದ್ದರೂ,ನವೀನ ರೀತಿಯ ಸೌಲಭ್ಯ ಗಳೆಲ್ಲವೂ ಇದ್ದು ಹೊಸ ಚಿಗುರು ಹಳೇ ಬೇರಿನಂತಿತ್ತು. ಆ ಮನೆಯ ತುಂಬಾ ಸದಾ ಕಾಲ ಆಳುಕಾಳುಗಳು ತುಂಬಿದ್ದರು. ಹೀಗಾಗಿ ಸುಶೀಲಳಿಗೆ ಯಾವ ಕೆಲಸದ ಜವಾಬ್ದಾರಿ ಗಳೂ ಇರಲಿಲ್ಲ. ಅವಳ ಅತ್ತೆ ಅಡುಗೆ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದುದ್ದರಿಂದ ಅವಳ ಪಾಲಿಗೆ ಅಡುಗೆ ಕೆಲಸಗಳೂ ಸಹ ಇರಲಿಲ್ಲ. ಅವಳು ಏನಿದ್ದರೂ ಅಂದ ಚೆಂದವಾಗಿ ಅಲಂಕರಿಸಿ ಕೊಂಡು ಆ ಮನೆಯಲ್ಲಿ ಓಡಾಡುತ್ತಿದ್ದರೆ ಸಾಕೆಂದು ಅವಳ ಗಂಡ ಸಂಜೀವಿ ಹಾಗೂ ಅವಳ ಅತ್ತೆ ಅನ್ನಪೂರ್ಣ ಮ್ಮ ನವರು ಹೇಳುತ್ತಿದ್ದರು.


ತಮ್ಮ ಮಗ ಹಳ್ಳಿ ಯಲ್ಲಿ ಕೃಷಿ ಮಾಡಿಕೊಂಡಿದ್ದಾನೆಂದು ತಿಳಿದ ಕೂಡಲೇ ಅದೆಷ್ಟೋ ಹುಡುಗಿಯರು ಮದುವೆಗೆ ಒಪ್ಪದಿದ್ದುದು ಅನ್ನಪೂರ್ಣ ಮ್ಮ ನವರಿಗೆ ತುಂಬಾ ಯೋಚನೆಯಾಗಿತ್ತು. ಅವನಿಗೆ ನಗರದಲ್ಲಿ ಉನ್ನತ ಹುದ್ದೆ ಸಿಗುತ್ತಿದ್ದರೂ,ಅವನು ಒಪ್ಪದೇ ತಮ್ಮ ಹಳ್ಳಿಯಲ್ಲೇ ನೆಲಸಿ ಕೃಷಿಯನ್ನು ನವೀನ ರೀತಿಯ ಆಧುನಿಕ ತಂತ್ರಜ್ಞಾನ ಬಳಸಿ ಮಾಡಬೇಕೆಂದು ಇಷ್ಟ ಪಟ್ಟು ಹಳ್ಳಿ ಯಲ್ಲೇ ನೆಲೆಸಿದ್ದನು. ತಮ್ಮ ಮಗ ವಿದ್ಯಾವಂತ, ಗುಣವಂತ ರೂಪವಂತ ,,ಇಡೀ ಆಸ್ತಿ ಗೆ ಒಬ್ಬನೇ ಹಕ್ಕುದಾರ,ಯಾವೂದರಲ್ಲೂ ಕಡಿಮೆ ಇರಲಿಲ್ಲ ವಾದರೂ ಮಗನಿಗೆ ಮೂವತ್ತು ವಯಸ್ಸು ಕಳೆದರೂ ಯಾವ ಹುಡುಗಿಯೂ ಸೆಟ್ ಆಗದಿದ್ದಾಗ, ಅನ್ನಪೂರ್ಣ ಮ್ಮ ನವರಿಗೆ ಯೋಚನೆಯಾಗಿತ್ತು. ಕಡೆಗೆ ಕೃಷಿ ಪದವೀಧರರಳಾದ ಸುಶೀಲಾ,  ಸಂಜೀವಿ ಯನ್ನುಮದುವೆಯಾಗಲು ಒಪ್ಪಿ,ಈ ಮನೆಯ ಸೊಸೆಯಾಗಿ ಹೊಸ್ತಿಲು ಮೆಟ್ಟಿ ಒಳಗೆ ಬಂದಾಗ, ಅನ್ನಪೂರ್ಣ ಮ್ಮ ಹಿರಿ ಹಿರಿ ಹಿಗ್ಗಿದ್ದರು.ಹೀಗಾಗಿ ಸೊಸೆಯನ್ನು ಯಾವ ಕೆಲಸ ಮಾಡುವುದಕ್ಕೂ ಬಿಡುತ್ತಿರಲಿಲ್ಲ.

ಸುಶೀಲಳೂ ಅಗ್ರಿಕಲ್ಚರ್ ಪದವಿ ಪಡೆದಿದ್ದರಿಂದ ಅವಳು ಬೆಳಿಗ್ಗೆ ತಿಂಡಿ ಮುಗಿಸಿ ಗಂಡನೊಡನೆ ಹೊಲ ಗದ್ದೆ ತೋಟಗಳಲ್ಲಿ ಓಡಾಡಿಕೊಂಡು , ವ್ಯವಸಾಯದಲ್ಲಿ ಹೆಚ್ಚು ಇಳುವರಿ ಪಡೆಯಲು ತನ್ನ ಸಲಹೆ ಸಹಕಾರಗಳನ್ನು ನೀಡುತ್ತಿದ್ದಳು.ಒಟ್ಟಾರೆ ತಡವಾಗಿ ಮದುವೆಯಾದರೂ ಸಂಜೀವಿ ಸುಶೀಲಾ ನಂತಹ ಮಡದಿಯನ್ನು ಪಡೆದು

ಸಂತೋಷ ವಾಗಿದ್ದ.


ಆ ವಿಶಾಲವಾದ ಮನೆಯಲ್ಲಿ ಹತ್ತು ಕೋಣೆಗಳಿದ್ದು, ಅವುಗಳಲ್ಲಿ ಒಂದು ಕೋಣೆಗೆ ಯಾವಾಗಲೂ ಬೀಗ ಹಾಕಿ

ರುತ್ತಿತ್ತು. ಆ ಕೋಣೆಗೆ ಯಾರೂ ಹೋಗುತ್ತಿರಲಿಲ್ಲ. ವರ್ಷ ಕ್ಕೊಮ್ಮೆ ಆ ಕೋಣೆಯ ಮುಚ್ಚಿರುವ ಕದಕ್ಕೆ ಹೊರಗಡೆಯಿಂದ ಬಣ್ಣ ಹೊಡೆಯುತ್ತಿದ್ದರು.


ಮದುವೆಯಾಗಿ ಆರು ತಿಂಗಳಾದರೂ ಆ ಕೋಣೆಯ ಕಡೆ ಸುಶೀಲಾ ಹೋಗೇ ಇರಲಿಲ್ಲ. ಒಂದು ದಿನ ಮಹಡಿಯ ಮೇಲಿರುವ ಕೊಠಡಿಗಳನ್ನೆಲ್ಲಾ ಕ್ಲೀನ್ ಮಾಡಿಸುವಾಗ ಆ ಕೋಣೆಯನ್ನೂ ತೆಗೆದು ಕ್ಲೀನ್ ಮಾಡುವಂತೆ ಅಳುಕಾಳುಗಳಿಗೆ ಹೇಳಿದಾಗ ಅವರೆಲ್ಲರೂ ಗಾಬರಿಯಿಂದ,"ಚಿಕ್ಕಮ್ಮ ಅವರೆ,ಈ ಕೋಣೆಗೆ ಯಾರೂ ಹೋಗಬಾರದು. ನೀವೇನಾದರೂ ಹೋಗಲು ಇಷ್ಟಪಟ್ಟರೆ , ದೊಡ್ಡ ಅಮ್ಮ ಅವರನ್ನು ಕೇಳಿ ಅಥವಾ ಸಂಜೀವಪ್ಪನ್ನ ಕೇಳಿ ,ನಮಗಂತೂ ಈ ಕೋಣೆ ಬೀಗದ ಕೈ ಕೂಡ ಗೊತ್ತಿಲ್ಲ."ಒಬ್ಬೊಬ್ಬರು ಮುಖ ನೋಡಿಕೊಂಡು ಸಂಜ್ಞೆ ಮಾಡುತ್ತಾ ಜಾಗ ಖಾಲಿ ಮಾಡಿದಾಗ, ಸುಶೀಲಾ ಳ ಕುತೂಹಲ ಹೆಚ್ಚಾಗಿ,ಸೀದಾ ಅತ್ತೆ ಯ ಬಳಿ ಬಂದು ಆ ಮುಚ್ಚಿದ ಬಾಗಿಲು ಕೋಣೆಯ ಬಗ್ಗೆ ಕೇಳಿದಾಗ, ಅನ್ನಪೂರ್ಣ ಮ್ಮನವರು "ಆ ಕೋಣೆಯ ಕಡೆ ಮಾತ್ರ ನೀನು ಹೋಗಬೇಡ ಶೀಲಾ,ನಾವು ಯಾರೂ ಸಹ ಹೋಗಲ್ಲ,ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವುದು ಬೇಡ' ಎಂದಷ್ಟೇ ಹೇಳಿಬಿಟ್ಟಾಗ, ಸುಶೀಲಾ ಮುಂದೆ ಮಾತನ್ನು ಬೆಳೆಸದೇ

ಸುಮ್ಮನಾಗಬೇಕಾಯಿತು.


ಆದರೆ ಅವಳ ಕುತೂಹಲ ಹೆಚ್ಚಿತ್ತೇ ವಿನ ಕಡಿಮೆಯಾಗಲಿಲ್ಲ. ನೀಲಿ,ಹಳದಿ,ಕೆಂಪು,ಹಸಿರು ಬಣ್ಣ ಗಳಿಂದ ಸಿಂಗಾರಗೊಂಡಿದ್ದ ಆ ಮುಚ್ಚಿದ ಬಾಗಿಲ ಹಿಂದೆ ಯಾವ ಇತಿಹಾಸ ವಿದ್ದೀತು?ತಿಳಿಯಲೇ ಬೇಕೆನಿಸಿತು ಅವಳಿಗೆ.ಗಂಡನನ್ನು ಕೇಳಬೇಕೆಂದು ಕೊಂಡಳು.


ಅಂದು ಕೆಲವು ಸಾಮಾನುಗಳನ್ನು ತರುವುದಕ್ಕಾಗಿ ಸಿಟಿಗೆ ಹೋಗಿದ್ದ ಸಂಜೀವಿಯನ್ನು ಕಾದು ಕುಳಿತಳು.

ರಾತ್ರಿ ಹತ್ತು ಗಂಟೆಗೆ ಕಾರ್ ಹಾರ್ನ್ ಆದಾಗ ತನ್ನ ರೂಮಿನಿಂದ ಹೊರಗೆ ಬಂದ ಸುಶೀಲಾ, ಗಂಡನಿಗೆ ಊಟ ಬಡಿಸಿ ತಾನೂ ಊಟ ಮುಗಿಸಿ ಕೋಣೆಗೆ ಬಂದಳು. ಸುಶೀಲಾ ರೂಮಿನೊಳಗೆ ಬರುತ್ತಿದ್ದಂತೆಯೇ ಹಿಂದಿನಿಂದ ಬಂದು ತಬ್ಬಿ ಹಿಡಿದ ಸಂಜೀವಿ,ಮಡದಿಗಾಗಿ ತಂದಿದ್ದ ಮಲ್ಲಿಗೆ ಹೂವನ್ನು ಮುಡಿಸಿ ಮುದ್ದಾಡಿದ. ಗಂಡನ ಪ್ರೇಮದಲ್ಲಿ ಕೊಚ್ಚಿ ಹೋದ ಸುಶೀಲಾ ಸಂತೃಪ್ತಿ ಯಿಂದ, ಅವನ ಎದೆಯ ಮೇಲೆ ಒರಗಿದಾಗ, ಆ ಕೋಣೆಯ ಬಗ್ಗೆ ಕೇಳಿದಳು.


"ರಿ, ಮಹಡಿಯ ಮೇಲೆ ಒಂದು ಬೀಗ ಹಾಕಿರುವ ಬಣ್ಣ ಬಣ್ಣದ ಮುಚ್ಚಿದ ಬಾಗಿಲಿನ ಕೋಣೆ ಯಲ್ಲಿ ಏನಿದೆ? ಆ ಕೋಣೆಯೊಂದನ್ನು ನಾನು ಇನ್ನೂ ನೋಡಿಲ್ಲ. ನಾಳೆ ತೋರಿಸ್ತೀರಾ?"


ಸುಶೀಲಾ ಆ ಕೋಣೆಯ ಬಗ್ಗೆ ಕೇಳಿದ ಕೂಡಲೇ ಧಿಗ್ಗನೆ ಮೇಲೆದ್ದು ಕುಳಿತ ಸಂಜೀವಿ ಮಡದಿಗೆ "ದಯವಿಟ್ಟು ನೀನು ಆ ಕೋಣೆಗೆ ಹೋಗುವುದಾಗಲೀ ಅದರ ಬಗ್ಗೆ ತಿಳಿ ದುಕೊಳ್ಳುವುದಾಗಲೀ ಮಾಡಬೇಡ. ಆ ಕೋಣೆಯ ಬಗ್ಗೆ ತನಾಡುವುದಕ್ಕೆ ನಮ್ಮ ಮನೆಯಲ್ಲಿ ಯಾರಿಗೂ ಇಷ್ಟವಿಲ್ಲ. ಇನ್ನೆಂದಿಗೂ ಅದರ ಬಗ್ಗೆ ಮಾತನಾಡಬೇಡ. ನನಗೆ ಇಷ್ಟ ಗುವುದಿಲ್ಲ."ಎಂದು ಹೇಳಿ, ಮುಸುಕು ಬೀರಿ ಪಕ್ಕಕ್ಕೆ ತಿರುಗಿ ಮಲಗಿಬಿಟ್ಟಾಗ, ಸುಶೀಲಳಿಗೆ ಇದುವರೆಗೆ ಅನುಭವಿಸಿದ ಸುಖ ಜರ್ರನೆ ಇಳಿದು ಹೋಯಿತು.


ಮುಂದೆ ಒಂದೆರಡು ತಿಂಗಳು ಕಳೆದವು. ಸುಶೀಲಾ ತನ್ನ ಕುತೂಹಲಕ್ಕೆ ಬ್ರೇಕ್ ಹಾಕಿ ತನ್ನಷ್ಟಕ್ಕೆ ತಾನು ದ್ದು ಬಿಟ್ಟಳು. ಅದು ಯಾವುದೋ ಕೋಣೆಯ ವಿಚಾರಕ್ಕೆ ನಮ್ಮಿಬ್ಬರ ನಡುವೆ ನೆಮ್ಮದಿ ಸುಖ ಏಕೆ ಹಾಳು ಮಾಡಿಕೊಳ್ಳಬೇಕೆಂದು ಕೊಂಡು ಸುಮ್ಮನಾಗಿಬಿಟ್ಟಳು. ಸಂಜೀವಿಯ ಪ್ರೀತಿಯ ಅಮಲಿನಲ್ಲಿ ದಿನದಿನವೂ ಕೊಚ್ಚಿ ಹೋಗಿ, ತನ್ನದೇ ಆದ ಪ್ರೇಮಲೋಕದಲ್ಲಿ ತೇಲಿ ಹೋಗುತ್ತಿದ್ದಳು. ಸುಖ ದಾಂಪತ್ಯದಲ್ಲಿ ದಿನಗಳು ಓಡುತ್ತಾ ಹೋದವು.


ಒಂದು ದಿನ ಮಧ್ಯರಾತ್ರಿ ಕಣ್ಣು ಬಿಟ್ಟಾಗ ಪಕ್ಕದಲ್ಲಿ ಗಂಡನಿಲ್ಲದಿರುವುದನ್ನು ಗಮನಿಸಿದ ಸುಶೀಲಾ, ಮೆಲ್ಲಗೆ ಎದ್ದು ಗಂಡನನ್ನು ಹುಡುಕಿಕೊಂಡು ಹೊರಗೆ ಬಂದಾಗ, ಮಹಡಿಯ ಮೇಲಿನಿಂದ ಬೆಳಕು ಕಂಡಂತಾಗಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಮೇಲೆ ಬಂದಾಗ ಅವಳಿಗೆ ಆಶ್ಚರ್ಯವಾಯಿತು. ಬಣ್ಣ ಬಣ್ಣದ ಮುಚ್ಚಿದ ಕದ ಅರೆತೆರೆದು ಕೋಣೆಯ ದೀಪ ಹಾಕಿತ್ತು. ಕುತೂಹಲ ತಡೆಯಲಾಗದೇ ಅವಳು ಸದ್ದಿಲ್ಲದೆ ಆ ರೂಮಿನ ಹತ್ತಿರ ಬಂದು,ತೆರೆದ ಬಾಗಿಲಿನ ಸಂದಿಯಿಂದ ಮೆಲ್ಲಗೆ ಇಣುಕಿದಾಗ, ಅಲ್ಲಿ ತನ್ನ ಗಂಡ ಒಂದು ಈಸಿ ಚೇರ್ ನಲ್ಲಿ ಕುಳಿತು,ಎದುರಿಗಿದ್ದ ಎತ್ತರದ ತೈಲ ಚಿತ್ರವನ್ನು ನೋಡುತ್ತಿರುವುದು ಕಾಣಿಸಿತು. ಸಂದಿಯಿಂದಲೇ ಕಷ್ಟ ಪಟ್ಟು ಇಣುಕಿ ಇಣುಕಿ ದಿಟ್ಟಿಸಿದಾಗ ಅದೊಂದು ಹೆಂಗಸಿನ ಚಿತ್ರ ದಂತೆ ಕಂಡಿತು.ಅದರ ಮುಂದೆ ಒಂದು ವೈಲಿನ್ ಇಟ್ಟಿದ್ದರು. ಸಂಜೀವಿ ಮೆಲ್ಲಗೆ ವೈಲಿನ್ ತೆಗೆದುಕೊಂಡು ನುಡಿಸತೊಡಗಿದ.ಕಿಶೋರ್ ಕುಮಾರ್ ನ ಹಳೆಯ ಹಿಂದೆ ಸಿನಿಮಾ ದ ವಿರಹ ಗೀತೆಗಳನ್ನು ನುಡಿಸುತ್ತಾ ನುಡಿಸುತ್ತಾ ಭಾವುಕನಾಗುತ್ತಿದ್ಧ.


ಬಾಗಿಲ ಸಂದಿಯಿಂದ ಎಲ್ಲವನ್ನೂ ಗಮನಿಸುತ್ತಿದ್ದ ಸುಶೀಲಾಳಿಗೆ ತನ್ನ ಭುಜದ ಮೇಲೆ ಯಾರೋ ಕೈ ಇಟ್ಟಂತಾಗಿ ಬೆದರಿ ಹಿಂತಿರುಗಿ ನೋಡಿದಾಗ, ಅನ್ನಪೂರ್ಣ ಮ್ಮನವರು ನಿಂತಿರುವುದು ಗೊತ್ತಾಯಿತು. ಅವರಿಗೂ ಒಂದು ರೀತಿ ಭಯವಾಗಿತ್ತು. ಇದುವರೆಗೂ ಮುಚ್ಚಿಟ್ಟಿದ್ದ ಸತ್ಯ ಇಂದು ಸೊಸೆಯ ಎದುರು ಬಯಲಾಯಿತಲ್ಲಾ ಎಂಬ ಆತಂಕವೂ ಆಗಿತ್ತು.


ಇಬ್ಬರೂ ಪರಸ್ಪರ ನೋಡುತ್ತಾ ನಿಂತಾಗ, ಸುಶೀಲಾ ಸಂಜೀವಿಯನ್ನು ಹುಡುಕುತ್ತಾ ಇಲ್ಲಿಗೆ ಬರಬೇಕಾಯಿತು ಎಂದು ಸಮಜಾಯಿಷಿ ನೀಡಿದಳು. ಮಗ ಏಕೆ ಹೀಗೆ ದುಡುಕಿದ ಅಂತ ‌ಅನ್ನಪೂರ್ಣಮ್ಮನವರಿಗೆ ಪೀಕಲಾಟ ವಾಯಿತು. ಕಡೆಗೆ ಎಂದಾದರೊಂದು ದಿನ , ಸುಶೀಲಾಳಿಗೆ, ಸತ್ಯ ವತಿಯ ಬಗ್ಗೆ ಸತ್ಯ ತಿಳಿಯಲೇಬೇಕಾಗಿತ್ತಲ್ಲ ಎಂದು ಅರಿತ ಅನ್ನಪೂರ್ಣ ಮ್ಮ ಕಡೆಗೆ ಸೊಸೆಗೆ ನಿಜವನ್ನು ತಿಳಿಸಿ ಬಿಡಲು ನಿರ್ಧರಿಸಿ, ಅವಳನ್ನೂ ಸಹ ಆ ಕೋಣೆಯ ಒಳಗೆ ಕರೆದುಕೊಂಡು ಹೋದ ರು.


ಆ ಕೋಣೆಯಲ್ಲಿ ಅತ್ಯಂತ ಸುಂದರವಾದ ಇಪ್ಪತ್ತರ ಹರೆಯದ ಹೆಣ್ಣು ಮಗಳ ದೊಡ್ಡ ದಾದ ತೈಲವರ್ಣ ಚಿತ್ರ ವಿತ್ತು. ಅದರ ಮುಂದೆ ಎರಡು ದೀಪಗಳನ್ನು ಇಟ್ಟಿದ್ದರು. ದಿನವೂ ಗಂಧದ ಕಡ್ಡಿಗಳನ್ನು ಹಚ್ಚುತ್ತಿರುವುದರ ಗುರುತಾಗಿ ಆ ಫೋಟೋ ಕೆಳಗೆ ಹಿಡಿ ಬೂದಿಯುದುರಿತ್ತು. ಮಲ್ಲಿಗೆ ಹಾರ ನೇತಾಡುತ್ತಿತ್ತು. ಆ ರೂಮಿನಲ್ಲಿ ಪಿಂಕ್ ಸೋಫಾಸೆಟ್ಗಳು, ಪಿಂಕ್ ಕಲರ್ ಗೋಡೆಗಳು, ಪಿಂಕ್ ಹೂದಾನಿ ಗಳು ತುಂಬಿದ್ದವು.ಎಲ್ಲವೂ ಪಿಂಕ್ ಕಲರ್ . ಸುಶೀಲಾ ಳ ಮನದಲ್ಲಿ ಪ್ರಶ್ನೆ ಎದ್ದಿತು .


"ಯಾರಿವಳು?".ಹಾಗೇ ನೋಡುತ್ತಾ ನಿಂತಳು. ವೈಲಿನ್ ನುಡಿಸುವುದರಲ್ಲಿ ತಲ್ಲೀನನಾಗಿದ್ದ ಸಂಜೀವಿ,ಒಳಗೆ ಇವರಿಬ್ಬರು ಬಂದಿರುವುದೂ ತಿಳಿಯದಂತೆ ತನ್ನಷ್ಟಕ್ಕೆ ತಾನು ಕಣ್ಣು ಮುಚ್ಚಿ ನುಡಿಸುತ್ತಿದ್ದನು. ಕಡೆಗೆ ಅನ್ನಪೂರ್ಣ ಮ್ಮನವರು ಮಗನ ಬೆನ್ನಿನ ಮೇಲೆ ಕೈಯಿಟ್ಟಾಗ ,ಅವನು ಕಣ್ಣು ಬಿಟ್ಟು ನೋಡಿದಾಗ,ಅಮ್ಮನ ಜೊತೆ ಸುಶೀಲಾ ಇರುವುದೂ ಗೊತ್ತಾಗಿ, ಗೊಂದಲಗೊಂಡನು.ಅಂತೂ ಇಂತೂ ವಿಧಿಯಿಲ್ಲದೆ ಅಂದು ಸುಶೀಲಾಳಿಗೆ ಸತ್ಯವನ್ನು ಹೇಳಲೇ ಬೇಕಾಯಿತು.


ಅನ್ನಪೂರ್ಣಮ್ಮ ನವರ ತಮ್ಮನ ಮಗಳು ಸತ್ಯವತಿ ಹುಟ್ಟಿದಾಗಿಲಿಂದ ಸಂಜೀವಿಯ ಭಾವೀ ಮಡದಿಯೆಂದೇ ಎಲ್ಲರೂ ನಿರ್ಧರಿಸಿದ್ದರು.ಬುದ್ಧಿ ತಿಳಿದಾಗ ದಿಂದಲೂ ಅವಳನ್ನು ಅನ್ನಪೂರ್ಣ ಮ್ಮ ನವರು ತಮ್ಮ ಮನೆಯಲ್ಲಿಯೇ ಇಟ್ಟು ಕೊಂಡು,ಸಾಕುತ್ತಿದ್ದರು. ವಯಸ್ಸಿಗೆ ಬಂದಾಗ, ಯೌವನ ಚಿಗುರೊಡೆದಾಗ,ಸಂಜೀವಿ ಹಾಗೂ ಸತ್ಯವತಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸಿದರು. ಊರವರ ಮುಂದೆ ಅನ್ನಪೂರ್ಣ ಮ್ಮನವರು ಸತ್ಯವತಿಯೇ ತಮ್ಮ ಸೊಸೆ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಸಂಜೀವಿ ತನ್ನ ಕಾಲೇಜು ವಿದ್ಯಾಭ್ಯಾಸ ಕ್ಕೆಂದು ಸಿಟಿಯಲ್ಲಿ ಹಾಸ್ಟೆಲ್ ನಲ್ಲಿದ್ದಾಗ, ಸತ್ಯವತಿ ಅತ್ತೆ ಯ ಮನೆಯಲ್ಲಿದ್ದು ,ವೈಲಿನ್ ಕಲಿಯುತ್ತಾ, ಹಾಡು ಹಸೆ ಕಲಿತುಕೊಂಡು ಆ ದೊಡ್ಡ ಮನೆಯ ವೈವಾಟುಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದಳು.


ಅತ್ಯಂತ ಸುಂದರಿಯಾಗಿದ್ದ ಅವಳ ಮೇಲೆ ಆ ಹಳ್ಳಿಯ ಪಡ್ಡೆ ಹುಡುಗರ ಕಣ್ಣುಗಳೂ ಹರಿದಾಡುತ್ತಿದ್ದವು.

ರಜದಲ್ಲಿ‌ ಸಂಜೀವಿ ಹಳ್ಳಿಗೆ ಬಂದಾಗ ಅವನ ಸುತ್ತಲೂ ಸುಳಿದಾಡುತ್ತಾ ,ಅವನ ಪ್ರೀತಿ ಯಲ್ಲಿ ಮುಳುಗಿ ಹೋಗುತ್ತಿದ್ದಳು ಸತ್ಯವತಿ. ಹಿರಿಯರು ಈಗಾಗಲೇ ನಿರ್ಧಾರ ಮಾಡಿದ್ದರಿಂದ ಸಂಜೀವಿ ಗೂ ಅವಳಲ್ಲಿ ನವಿರಾದ ಭಾವನೆಗಳೇಳುತ್ತಿದ್ದವು. ಹೊಲ,ಗದ್ದೆ ತೋಟಗಳಲ್ಲಿ ತಾವೇ ತಾವಾಗಿ ವಿಹರಿಸುತ್ತಾ ಇದ್ದರು. ಅವಳಿಂದ ಸಂಜೀವಿ ಯೂ ಸ್ವಲ್ಪ ಸ್ವಲ್ಪ ವೈಲಿನ್ ನುಡಿಸಲು ಕಲಿಯುತ್ತಿದ್ದನು. ಈ ಬಾರಿ ಅವನ ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ಮದುವೆ ‌ಮಾಡಿಬಿಡಬೇಕೆಂದು ನಿರ್ಧರಿಸಿದ್ದರು. ಇನ್ನೊಂದು ಆರು ತಿಂಗಳಿತ್ತು.ಇಬ್ಬರ ಮದುವೆಯ ಮುಹೂರ್ತ ವನ್ನೂ ನಿರ್ಧರಿಸಿದ್ದರು.


ಆದರೆ ವಿಧಿಯಾಟವೇ ಬೇರೆ ಇತ್ತು.


ಒಂದು ದಿನ ತೋಟದಲ್ಲಿ ಸಂಜೀವಿ ಯ ಪ್ರೇಮಪತ್ರವನ್ನು ಓದುತ್ತಾ ಕನಸಿನ ಲೋಕದ ದ್ದ ಸತ್ಯವತಿಯ ಮೇಲೆ ಆ ತೋಟದಲ್ಲಿ ಕೆಲಸ ಮಾಡುತ್ತಿದ್ದ ರುದ್ರ, ದಿಢೀರನೆ ಆಕ್ರಮಣ ಮಾಡಿದ. ತುಂಬಾ ದಿನಗಳಿಂದಲೂ ಇವಳು ಮೇಲೆ ಕಣ್ಣಿಟ್ಟಿದ್ದ ರುದ್ರ ,ಅಂದು ಹುಡುಗಿ ಒಂಟಿಯಾಗಿ ಸಿಕ್ಕಾಗ, ತನ್ನ ಕಾಮನೆಯನ್ನು ತೀರಿಸಿಕೊಂಡು,ಆ ಹಳ್ಳಿಯಿಂದ ಪರಾರಾಯಾಗಿಬಿಟ್ಟ.


ಇದ್ದಕ್ಕಿದ್ದಂತೆ ತನ್ನ ಮೇಲೆ ನಡೆದ ಪುರುಷಾಕ್ರ ಮಣದಿಂದ ತತ್ತರಿಸಿ ಹೋದ ಸತ್ಯವತಿ , ಮುಂದೆ ಯಾರಿಗೂ ಮುಖ ತೋರಿಸಲು ಮನಸ್ಸಾಗದೇ ತೋಟದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು.


ಈ ದುರಂತದಿಂದ ಹೊರ ಬರಲು ಆ ಮನೆಯವರಿಗೆಲ್ಲ ತುಂಬಾ ವರ್ಷಗಳೇ ಹಿಡಿದವು. ಮೊದಲಿನಿಂದಲೂ ಹೆಂಡತಿ ಯೆಂಬ ಭಾವನೆ ಬೆಳೆಸಿಕೊಂಡು ಕಡೆಗೆ ಮದುವೆಯ ಮುಹೂರ್ತ ವೂ ಇಟ್ಟು ಮೇಲೆ ಆದ ಆಘಾತದಿಂದ ಚೇತರಿಸಿಕೊಂಡು ಹೊರಬರುವುದಕ್ಕೆ ಸಂಜೀವಿ ಗೆ ಮೂರು ನಾಲ್ಕು ವರ್ಷಗಳೇ ಬೇಕಾದವು. ನಂತರ ಹುಡುಗಿಯರನ್ನು ಹುಡುಕಾಡುವ ಕೆಲಸ. ಹಳ್ಳಿ ರೈತನನ್ನು ಮದುವೆ ಮಾಡಿ ಕೊಳ್ಳಲು ತಿರಸ್ಕರಿಸು ತ್ತಿದ್ದ ಹುಡುಗಿಯರು ಮನಸ್ಥಿತಿ ಯನ್ನು ನೋಡಿದ ಸಂಜೀವಿ ತಾನು ಜೀವನ ಪರ್ಯಂತ ಸತ್ಯವತಿಯ ನೆನಪುಗಳೊಂದಿಗೇ ಆಜೀವ ಬ್ರಹ್ಮ ಚಾರಿ ಯಾಗಿ ರಬೇಕೆಂದೂ ಸಹ ಅಂದುಕೊಳ್ಳುತ್ತಿದ್ದ. ಅಂತಹ ಪರಿಸ್ಥಿತಿ ಯಲ್ಲಿ ಅಗ್ರಿಕಲ್ಚರ್ ಪದವಿ ಪಡೆದಿದ್ದ ಸುಶೀಲಾ ಇವನನ್ನು ಒಪ್ಪಿದ್ಧಳು. ಎಲ್ಲವೂ ಸುಖಾಂತ್ಯ ವಾದರೂ, ಸಂಜೀವಿ ಗೆ ತನ್ನ ಮೊದಲ ಪ್ರೀತಿ ಯನ್ನು ಮರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಸತ್ಯವತಿ ಯು ಪ್ರೀತಿಯ ನೆನಪಿನ ವಸ್ತುಗಳು ಆ ಬಣ್ಣ ಬಣ್ಣದ ಮುಚ್ಚಿದ ಬಾಗಿಲಿನೊಳಗೆ ಅಡಗಿದ್ದವು.


ಆದರೆ ಇಂದು ಆ ಮುಚ್ಚಿದ ಕದ ತೆರೆದು, ಸುಶೀಲಾಳಿಗೆ ಸತ್ಯದರ್ಶನ ದ ಅನಾವರಣ ವಾಗಿತ್ತು. ಅತ್ತೆ ಹೇಳಿದ ತನ್ನ ಗಂಡನ ಮೊದಲ ಪ್ರೀತಿ ಯ ಕಥೆಯನ್ನು ಕೇಳಿ ಸುಶೀಲಾ ಕೆಲ ಸಮಯ ಸ್ಥಬ್ಧಳಾಗಿ ನಿಂತಲ್ಲೇ ನಿಂತಿದ್ದಾಗ, ಸಂಜೀವಿ ಎದ್ದು ಅವಳ ಹತ್ತಿರ ಬಂದು ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿ "ಈ ವಿಷಯವನ್ನು ನಿನ್ನಿಂದ ಮುಚ್ಚಿದ್ದಕ್ಕೆ ಏ ಆಮ್ ಎಕ್ಸ್ಟ್ರೀಮ್ಲಿ ಸಾರಿ. ಪ್ಲೀಸ್ ಬಿಲೀವ್ ಮಾಡಿ. ನಾನು ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ರೆಪ್ಪೆಯಂತೆ ಕಾಯುತ್ತೇನೆ"

ಹೇಳುತ್ತ ಅಪ್ಪುಗೆ ಯನ್ನು ಮತ್ತಷ್ಟು ಬಿಗಿಗೊಳಿಸಿದಾಗ, ಸುಶೀಲಾ ಅವನ ಬಿಸಿಯಪ್ಪುಗೆಯಲ್ಲಿ ಕರಗಿಹೋದಳು.



Rate this content
Log in

Similar kannada story from Drama