ಮಗುವಿಗಿಂತ ಕೆಲಸ ಹೆಚ್ಚೇ???
ಮಗುವಿಗಿಂತ ಕೆಲಸ ಹೆಚ್ಚೇ???
ಶಂಕರ ಮತ್ತು ಸಹನಾ ಮದುವೆಯಾಗಿ ಮೂರು ವರ್ಷಗಳು ಮುಗಿದಿದ್ದವು. ಗಂಡನ ಮನೆಯಲ್ಲಿ ಮತ್ತು ತವರ ಮನೆಯಲ್ಲಿ ಎಲ್ಲರೂ ಕೇಳೋದು ಒಂದೇ ಮದುವೆಯಾಗಿ ಎಷ್ಟು ವರ್ಷವಾದವು ಎಂದು. ಬೇಗ ಒಂದು ಮಗು ಹೆತ್ತುಕೊಡಿ, ಮೊಮ್ಮಕ್ಕಳೊಂದಿಗೆ ಆಡುವ ವಯಸ್ಸಲ್ಲವೇ ನಮ್ಮದು? ಅಂತ ಅತ್ತೆ ಹೇಳುತ್ತಲೇ ಇದ್ದರು. ಅತ್ತ ಸಹನಾಳ ಅಮ್ಮ, ನೀವಿಬ್ಬರೂ ಕೆಲಸ ಮಾಡಿ, ದುಡ್ಡು ಮಾಡಬೇಕು, ನಿಮ್ಮ ಜೀವನ ನೀವು ಕಟ್ಟಿಕೊಳ್ಳಬೇಕು, ಅದು ಇದು ಅಂತ ಸಲಹೆ ನೀಡುತ್ತಿದ್ದರು.
ದುಡಿಯುವುದು ಒಂದೇ ಜೀವನವಲ್ಲಾ ಮಗನೇ , ಯಾರಿಗೋಸ್ಕರ ಈ ಹಣ ಆಸ್ತಿ, ಮಗುವಿಲ್ಲದ ಮನೆಯೊಂದು ಮನೆಯಾ) ಎಂದು ಇತ್ತ ಮಾವನ ಮಾತುಗಳು.
ಅಯ್ಯೋ ಅಮ್ಮಾ, ಅತ್ತೆ, ಮಾವ ನಿಮ್ಮ ಕಾಳಜಿ, ಸಲಹೆ ಎಲ್ಲವೂ ನಮಗೆ ಅರ್ಥವಾಗಿದೆ. ನಮಗೂ ಮಗು ಹೊಂದಲು ಕೆಲ ವೈದ್ಯಕೀಯ ಸಮಸ್ಯೆ ಇದ್ದವು. ಆ ಬಗ್ಗೆ ನಾವಿಬ್ಬರೂ ಕೌನ್ಸಲಿಂಗ್ ಸಹ ಮುಗಿಸಿದ್ದೇವೆ.
ಈ ಸರಿ ನಿಜವಾಗಿಯು ಮಗುವಿನ ಬಗ್ಗೆ ಯೋಚನೆ ಮಾಡಿದ್ದೇವೆ, ಅದಕ್ಕೆ ಸಂಬಂಧ ಪಟ್ಟ ಹಾಗೆ ನಾವು ಹಾಸ್ಪಿಟಲ್ಗೂ ತೋರಿಸಿಯಾಗಿದೆ , ಅದಕ್ಕಾಗಿ ನಾನು ಟ್ಯಾಬ್ಲೆಟ್ ಕೂಡ ತಗೋಳ್ತೀದಿನಿ.
ಆರೇಳು ತಿಂಗಳಲ್ಲಿ ನಾನು ತಾಯಿಯಾಗುವೆ ಎಂದು ಡಾಕ್ಟರ ಹೇಳಿದ್ದಾರೆ. ಕಾಯೋಣ, ಈಗಲೇ ಎಲ್ಲರಿಗೂ ಹೇಳೋದಕ್ಕೆ ಹೋಗಬೇಡಿ, ಇಂತಹ ವಿಷಯಗಳು ಸಮಯ ಹಿಡಿಯುತ್ತವೆ. ನಾನು ಗರ್ಭಿಣಿ ಅಂತ ಕನ್ಫರ್ಮ್ ಆಗಲಿ, ಆಗ ನಾವೇ ನಿಮ್ಮೆದುರು ಸಿಹಿ ಸುದ್ದಿ ಹಂಚಿಕೊಳ್ಳುತ್ತೇವೆ.
ಸರಿ, ನೀನು ಹುಷಾರು ಮಗಳೇ... ಅಫೀಸ್ನಲ್ಲಿ ಮೆಟ್ಟಿಲು ಇರುತ್ತೆ, ಅವಸರವಾಗಿ ಹತ್ತುವುದು, ಜರ್ರನೇ ಇಳಿಯುವುದು ಮಾಡುವುದಕ್ಕೆ ಹೋಗಬೇಡ. ಅದೇನೋ ಅಂತಾರಲ್ಲಾ ಲಿಪಟು, ಅದರಲ್ಲೇ ಹೋಗು. ಆದಷ್ಟು ಜೋಪಾನವಾಗಿರು, ಮೊದಲಿಂದಲೂ ಹುಷಾರಿದ್ರೆ ಕೊನೆವರೆಗೂ ಒಳ್ಳೇದಾಗತ್ತೆ ಕಣಮ್ಮ..
ಹ್ಹಾ ಹ್ಹಾ, ಅಮ್ಮಾ ಅದು ಲಿಫ್ಟ್, ಅದರಲ್ಲೇ ನಾವು ಹೋಗೋದು ಎಂದು ಇಬ್ಬರು ನಕ್ಕರು.
ಅವಳು ಹೇಳಿದ ಹಾಗೆ ಮುಂದೆ ಸ್ವಲ್ಪ ದಿನಗಳಲ್ಲಿ ಅವಳು ತಾಯಿಯಾದಳು, ಗಂಡನ ಮನೆಯಲ್ಲಿ, ತವರ ಮನೆಯಲ್ಲಿ ಹರ್ಷವೋ ಹರ್ಷ. ತುಂಬಾ ದಿನಗಳ ಕೋರಿಕೆಯಾಗಿತ್ತು ಈ ದಿನ ಅದು ನಿಜವಾಯಿತು. ಸಹನಾಳ ತಾಯಿ ಕಂಡ ಕಂಡ ದೇವರಿಗೆಲ್ಲ ಹರಕೆ ಕಟ್ಟಿದ್ದಳು, ಈ ಸುದ್ದಿಯನ್ನು ಕೇಳಿದಾಗ ಖುಷಿಯನ್ನು ತಡೆಯಲಾಗದೆ, ಮಗಳನ್ನು ನೋಡಲು ಊರಿನ ಕಡೆ ಹೊರಟೆ ಬಿಟ್ಟರು. ಮಗಳನ್ನು ಮಾತಾಡಿಸಿ ಅವಳಿಗೆ ಬೇಕಾಗಿದ್ದನ್ನೆಲ್ಲಾ ಕೊಡಿಸಿ, ರುಚಿ ರುಚಿಯಾದ ಅಡುಗೆ ಮಾಡಿ ಕೊಟ್ಟು, ಹಾಲಿನೊಂದಿಗೆ ಕೇಸರಿ ಕೊಟ್ಟು ದಿನವೂ ಇದನ್ನು ಹಾಲಿನಲ್ಲಿ ಬೆರೆಸಿ ಕೊಡಿ ಮಗಳೇ ನಿನಗೂ, ನಿನ್ನ ಮಗುವಿಗೂ ಆರೋಗ್ಯಕ್ಕೆ ಒಳ್ಳೆಯದು. ಹೆರಿಗೆ ಸಮಯದವರೆಗೆ ನೀನು ಹುಷಾರಾಗಿರು. ಸ್ವಲ್ಪ ದಿನಗಳ ಕಾಲ ಆಫೀಸ್ ರಜೆ ಮಾಡು, ನಿಮಗಾದರೂ ಏನ್ ಕಡಿಮೆ ಇದೆ ಅಂತ ಬುದ್ದಿ ಮಾತುಗಳನ್ನು ಹೇಳಿ ಮಗಳೊಂದಿಗೆ ಒಂದು ತಿಂಗಳು ಇದ್ದು ಹೋದಳು ಸಹನಾಳ ತಾಯಿ.
ಸಹನಾ ಏಳು ತಿಂಗಳುಗಳ ಕಾಲ ಕೆಲಸ ಮಾಡಿದಳು. ಆಮೇಲೆ ಅವಳಿಗೂ ಕಷ್ಟವಾಗತೊಡಗಿತು. ಆಫೀಸ್ ಬಿಟ್ಟು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಳು. ಎಂಟು ತಿಂಗಳಿಗೆ ಸೀಮಂತ ಮಾಡಿ, ಸಹನಾಳ ತಾಯಿ ಮಗಳನ್ನು ತವರು ಮನೆಗೆ ಹೆರಿಗೆಗೆ ಕರೆದುಕೊಂಡು ಬಂದರು.
ಸಹನಾ ಸಹ ಆರೋಗ್ಯದಿಂದ ಇದ್ದಳು. ನಿಯಮಿತವಾಗಿ ಮಂಥ್ಲಿ ಚೆಕಪ್ ಎಲ್ಲ ಮಾಡಿಸುತ್ತಿದ್ದಳು. ಅಂದುಕೊಂಡಂತೆ ಸಹನಾಳಿಗೆ ಸಹಜ ಹೆರಿಗೆಯಾಗಿ ಮುದ್ದಾದ ಹೆಣ್ಣು ಮಗು ಸಹನಾಳ ಮಡಿಲು ತುಂಬಿತು . ಶಂಕರ-ಸಹನಾಳಿಗೂ ಹೆಣ್ಣು ಮಗು ಬೇಕೆಂಬುದೇ ತುಂಬಾ ದಿನಗಳ ಇಚ್ಚೆಯಾಗಿತ್ತು. ಶಂಕರ್, ಆಸ್ಪತ್ರೆಗೆಲ್ಲ ಸಿಹಿ ಹಂಚಿ ಸಂಭ್ರಮಿಸಿದನು. ಸಹನಾಳ ಹೆತ್ತವರು, ಅತ್ತೆ, ಮಾವ ಎಲ್ಲರೂ ಸೇರಿ ತಾಯಿ ಮಗುವಿನ ಲಾಲನೆ ಪಾಲನೆಯಲ್ಲಿ ಮುತುವರ್ಜಿ ವಹಿಸಿದರು. ಐದು ತಿಂಗಳು ಇದ್ದು ಬಾಣಂತನ ಮುಗಿಸಿದಳು. ಆರನೇ ತಿಂಗಳು ಮತ್ತೇ ಸಹನಾ ಕೆಲಸಕ್ಕೆ ಹೋಗಲೇಬೇಕು ಎನ್ನುವ ಪರಿಸ್ಥಿತಿ ಬರುತ್ತದೆ.
ತುಂಬಾ ದಿನಗಳಿಗೆ ಮಗು ಪಡೆದಿದ್ದರೂ ಸಹನಾ, ಕೆಲಸವನ್ನು ಬಿಡಲು ಇಷ್ಟಪಡಲಿಲ್ಲ. ಬಡ್ತಿ ಪಡೆಯುವ ಆಸೆಗೆ ಎಂಟು ತಾಸಿನ ಕೆಲಸದ ಬದಲು ಹತ್ತು ತಾಸಿಗೂ ಅಧಿಕ ಸಮಯ ಆಫೀಸಿನಲ್ಲಿ ಕಳೆಯತೊಡಗಿದಳು. ಅತ್ತ ಮಗುವಿಗೆ ಎದೆ ಹಾಲಿನ ಕೊರತೆಯಾದರೆ ಇತ್ತ ಸಹನಾಳಿಗೆ ಎದೆಯಲ್ಲಿ ಹಾಲು ಸಂಗ್ರಹವಾಗಿ ಗಟ್ಟಿಯಾಗಿ ಎದೆ ನೋವು ಬರತೊಡಗಿತು. ಇದೇ ಮುಂದುವರೆದು ಸಹನಾಳಿಗೆ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾಯಿತು. ಅತ್ತ ಮಗುವು ಅಜ್ಜಾ ಅಜ್ಜಿಯೊಂದಿಗೆ ಹೆಚ್ಚು ಬೆರೆತು ತಾಯಿಯ ಮಡಿಲಿನ ಪ್ರೀತಿಯಿಂದ ದೂರ ಉಳಿಯಿತು. ಇತ್ತ ಹಾಲಿದ್ದು, ಮಗುವಿಗೆ ಹಾಲುಕುಡಿಸದ ನತದೃಷ್ಟ ತಾಯಿ ಸಹನಾ ಆದಳು.
