ಕಡು ಬಡತನ
ಕಡು ಬಡತನ


ಬಡತನ ಅನ್ನೋದು ಈಗಿನ ಜನಕ್ಕೆ ನಿಜವಾಗ್ಲೂ ಗೊತ್ತಿಲ್ಲ ಅಂತಾನೆ ಹೇಳ್ಬೇಕು. ಕಾರಣ ಹೆಚ್ಚು ಮನೆಗಳಲ್ಲಿಒಂದೋ ಎರಡೋ ಮಕ್ಕಳು. ಎಲ್ಲರಿಗೂ ಕೈತುಂಬ ಸಂಪಾದನೆ. ಸುಮಾರು ಮೂವತ್ತು ವರ್ಷಗಳ ಕೆಳಗೆ ನನ್ನ ಸ್ನೇಹಿತ ಹೆಲ್ತ್ ಇನ್ಸ್ಪೆಕ್ಟರ್ ಒಬ್ಬನ ಜೊತೆ ಅವನ ಕಾರ್ಯನಿಮಿತ್ತ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ನಡೆದ ಒಂದು ಘಟನೆ ಇಷ್ಟು ವರ್ಷಗಳಾದರೂ ನಾನು ಮರೆತಿಲ್ಲ. ಅವನು ಅಲ್ಲಿ ಒಬ್ಬರ ಮನೆಯಲ್ಲಿ ಒಬ್ಬ ರೋಗಿಯನ್ನ ಕಂಡು ಕೆಲವು ಮಾಹಿತಿ ಸಂಗ್ರಹಿಸಬೇಕಿತ್ತು. ಆ ಮನೆಯನ್ನ (ಅರ್ಧ ಬಿದ್ದಮನೆ ) ಕಷ್ಟಪಟ್ಟು ಹುಡುಕುವ ಹೊತ್ತಿಗೆ ಮಧ್ಯಾನ್ಹ ವಾಗಿತ್ತು. ನಾವು ಸರ್ಕಾರಿ ಕೆಲಸದಮೇಲೆ ಬಂದಿದ್ದ ವಿಷಯ ತಿಳಿದು ನಮ್ಮಿಂದ ಏನೋ ಸಹಾಯವಾಗುತ್ತೆ ಅಂತ ತಿಳಿದು ಪಾಪ,ಮೂರು ಕಾಲಿನ ಕುರ್ಚಿ(ಒಂದುಕಾಲಿಗೆ ದಪ್ಪಕಲ್ಲು ) ಒಬ್ಬರಿಗೆ ಒರಳಮೇಲೆ ಗೋಣಿಚೀಲಹಾಕಿ ಮತ್ತೊಬ್ಬರಿಗೆ ಕುಳಿತುಕೊಳ್ಳಲು ಹೇಳಿದರು. ನನ್ನ ಸ್ನೇಹಿತ ಅವನಿಗೆ ಬೇಕಾದ ಮಾಹಿತಿ ಕೇಳಿ ಬರೆದುಕೊಳ್ಳುತ್ತಿದ್ದ . ನಾನು ಸುಮ್ಮನೆ ಹಾಗೆ ಎದ್ದು ಹೊರಬಂದೆ. ಆ ರೋಗಿಯ ಹೆಂಡತಿ ಹಾಲಿಗಾಗಿ ಅಕ್ಕಪಕ್ಕದ ಮನೆಗಳಲ್ಲಿ ( ಗುಡಿಸಲುಗಳಲ್ಲಿ ) ಕೇಳುತ್ತಿದ್ದುದನ್ನ ನಾನು ಗಮನಿಸಿದೆ. ಕೊನೆಗೂ ಒಂದು ಮನೆಯಿಂದ ಒಂದು ಹಿತ್ತಾಳೆ ಲೋಟದ ತುಂಬಾ ಹಾಲು ತೆಗೆದುಕೊಂಡು ಬಂದಳು . ಬರುವಾಗ ಆಕೆಯ ನಾಲ್ಕೈದು ವರ್ಷದ ಮಗ ಎಲ್ಲಿಂದಲೋ ಓಡಿಬಂದಾಗ ಕೈತಾಕಿ ಹಾಲೆಲ್ಲ ನೆಲದ ಮೇಲೆ ಚೆಲ್ಲಿಹೋಯ್ತು
. ಆ ಕ್ಷಣ ನಾನು ತಿಳಿದದ್ದು ಆ ಹುಡುಗನಿಗೆ ಕಪಾಳ ಮೋಕ್ಷವಾಗುತ್ತೆ ಅಂತ. ಆದರೆ ಆಕೆ ಬಿಕ್ಕಿಬಿಕ್ಕಿ ಅಳುತ್ತಾ ಅಯ್ಯೋದೇವ್ರೇ ಮನೆಗೆ ಬಂದೋರಿಗೆ ಒಂದು ಲೋಟ ಟೀ ಮಾಡಿ ಕೊಡೋಕ್ಕೂ ನಂಗೆ ಯೋಗ್ಯತೆ ಇಲ್ದೆ ಮಾಡಿ ಬಿಟ್ಟೆಯಲ್ಲಪ್ಪ ದೇವ್ರೇ ಅಂತ ಆಳಕ್ಕೆ ಶುರು ಮಾಡ್ಬಿಟ್ಟಳು. ನನಗೆ ಧಿಗ್ಭ್ರಮೆ ಆಯ್ತು. ನಾನು ಸಮಾಧಾನ ಮಾಡೋಣ ಅಂತ ಪ್ರಯತ್ನ ಮಾಡ್ದೆ . ಅಷ್ಟು ಹೊತ್ತಿಗೆ ನನ್ನ ಸ್ನೇಹಿತಾನು ಆಚೆ ಬಂದ. ಪರವಾಗಿಲ್ಲಮ್ಮ ಬಿಡಿ ಅಂದ್ರು ತನ್ನನ್ನ ತಾನೆ ಶಪಿಸುಕೊಂಡು ರೋದಿಸುತ್ತಲೇ ಇದ್ದಳು. ಆಗ ವಿಷಯ ತಿಳಿದು ಯಾವುದೋ ಒಂದು ಹೆಂಗಸು ಪುಟ್ಟಪಾತ್ರೆಯಲ್ಲಿ ನೀರು ಮಜ್ಜಿಗೆ ತಂದು ಹಾಲಿಲ್ಲದಿದ್ದರೆ ಏನಂತೆ ಮಜ್ಜಿಗೆ ಕೊಡು ತೊಗೋ ಅಂತ ಅವಳ ಕೈಲಿ ಕೊಟ್ಟಳು . ಸ್ವಲ್ಪ ಸಮಾಧಾನ ಆದವಳಂತೆ ಕಂಡು ಕಣ್ಣು ಒರೆಸಿಕೊಂಡು ಒಳಗೆ ಹೋಗಿ ಸ್ವಲ್ಪ ಉಪ್ಪು, ಕರಿಬೇವು ಬೆರಸಿ ಎರಡು ಲೋಟ ತಂದು ಕೊಟ್ಟಳು.
ಅವಳ ಮುಖದಲ್ಲಿ ಸ್ವಲ್ಪ ಸಮಾಧಾನವಾಗಿದ್ದು ಕಂಡೆ . ಅಲ್ಲೇ ನಮ್ಮನ್ನೇ ನೋಡುತ್ತಾ ನಿಂತ ಅವಳ ಮಗನನ್ನ ಹತ್ತಿರ ಕರೆದು ನಾವಿಬ್ಬರು ಮತ್ತೊಂದು ಲೋಟಕ್ಕೆ ಅರ್ಧ ಅರ್ಧ ಹಾಕಿ ಕೊಟ್ಟೆವು. ಘಟ ಘಟ ಅಂತ ಒಂದೇ ಉಸಿರಲ್ಲಿ ಕುಡಿದು ಆಟಕ್ಕೆ ಓಡಿಹೋದ. ಇಂದಿಗೂ ಈ ಘಟನೆ ಬಡತನದ ವಿಷಯ ಬಂದಾಗಲೆಲ್ಲ ನೆನೆಪಾಗಿ ಹೃದಯ ಭಾರವಾಗುತ್ತೆ.