ಭೂಮಿ ಒಡಲು ಸೇರಿದ ಕಣ್ಣ ಹನಿಗಳು
ಭೂಮಿ ಒಡಲು ಸೇರಿದ ಕಣ್ಣ ಹನಿಗಳು
ಅಂದು ನೋಡಿದ ಆ ದೃಶ್ಯ , ಎಂತಹ ಕಟುಕರ ಹೃದಯವನ್ನು ಸಹ ಹಿಂಡುವಂತಿತ್ತು. ಸುತ್ತಲೂ ನೆರೆದಿದ್ದವರು ಮರುಗಿದ್ದೆ ಹೆಚ್ಚು. ಮನೆಯಲ್ಲಿ ನಾನು ಯಾವುದೋ ವಿಷಯಕ್ಕೆ ಅಮ್ಮನೊಡನೆ ಜಗಳ ಮಾಡಿ , ಅಮ್ಮ ಮಾಡಿದ ದೋಸೆಯನ್ನೂ ತಿನ್ನದೇ , ಸಿಟ್ಟಿನಲ್ಲಿ ಹಾಗೆ ಆಫೀಸಿಗೆ ಹೊರಟಿದ್ದೆ. ಹಾಗೆ ಹೋಗುತ್ತಿರುವಾಗ ಮನೆಯಿಂದ ಸ್ವಲ್ಪವೇ ದೂರದಲ್ಲಿ ಅದೇಕೋ ತುಂಬಾ ಜನ ಸೇರಿದ್ದಾರಲ್ಲ , ಏನಾಗಿರಬಹುದು ? ಯಾರಾದರೂ ಜಗಳ ಮಾಡುತ್ತಿದ್ದಾರೆಯೇ? ಈ ಜನಗಳದ್ದು ಇದೇ ಆಗೋಯ್ತು ಅಂತ ಹೊರಟವಳು , ಯಾಕೋ ಮನಸ್ಸು ಜನರಿಗೆ ಬೈಯ್ದು ಹೊರಡು ಎಂದರೂ ಕಾಲು ಅದೇಕೋ ಕೀಳಲೇ ಇಲ್ಲ. ಎರಡು ಹೆಜ್ಜೆ ಹಾಕಿದರೂ ಅದೇಕೋ ಮುಂದೆ ಹೋಗಲಾಗಲಿಲ್ಲ. ಹೆಣ್ಣಿನ ಮನಸ್ಸು ಅದೆಷ್ಟು ಸೂಕ್ಷ್ಮ ಅಲ್ಲವೇ. ಅಲ್ಲಿ ಆಗಿರುವ ಆ ಘೋರ ದೃಶ್ಯ ನೋಡದೆಯೇ ಮನಸ್ಸು ಮರಗಿತು. ಸರಿ ಏನಾಗಿರಬಹುದೆಂದು ನೋಡಲು ಹೋದರೆ ಅಲ್ಲಿ ಕಿಕ್ಕಿರಿದ ಜನರು ತಲೆಗೊಂದು ಎನ್ನುವಂತೆ ಏನೇನೋ ಹೇಳುತ್ತಿದ್ದರು. ನಮ್ಮ ಜನರಿಗೆ ಮಾತನಾಡಲು ವಿಷಯ ಬೇಕು ಅಷ್ಟೇ. ಇವತ್ತು ಇವರದ್ದು ಮಾತಾಡಿದ ಜನ , ನಾಳೆ ಮತ್ತೊಬ್ಬರದ್ದು , ನಾಡಿದ್ದು ನಮ್ಮದೇ ಆಡಿಕೊಂಡು ನಗಾಡಿ ಮುಗಿಸುತ್ತಾರೆ. ತಮ್ಮ ಬುಡಕ್ಕೆ ಯಾವಾಗ ಪೆಟ್ಟು ಬೀಳುತ್ತದೆಯೋ ಆಗ ಮಾತ್ರ ನೋವಾಗುತ್ತದೆ .ಅಲ್ಲಿಯವರೆಗೂ ಅವರಿಗೆ ಬೇರೆಯವರ ನೋವು , ಸಂಕಟ ಅರ್ಥವಾಗುವುದೇ ಇಲ್ಲ ಎನ್ನುತ್ತಾ ನಾನು ಜನರ ಮಧ್ಯದೊಳಗಿಂದ ಇಣುಕಿದೆ.
ಅಬ್ಬಾ ಆ ನರಕ ಯಾತನೆ , ದೇವರೇ ನೀನೇಕೆ ಅಷ್ಟು ಕ್ರೂರಿಯಾಗಿ ಬಿಡುವೆ. ನಿನ್ನಲ್ಲಿರುವ ಆ ದಯಾಮಯ ಗುಣ , ನಮ್ಮನ್ನು ರಕ್ಷಿಸುವ ಆ ಗುಣ ಎಲ್ಲಿ ಹೋಗಿ ಬಿಡುತ್ತದೆ , ಓ ದೇವರೇ ಕಾಪಾಡು ನನ್ನನ್ನು ಎಂದು ನಿನ್ನನ್ನು ಕೂಗುತ್ತಿರುವಾಗ ನಮ್ಮ ದ್ವನಿ ನಿನಗೆ ಕೇಳುವುದಿಲ್ಲವೇ , ಒಮ್ಮೊಮ್ಮೆ ಕಠೋರ ಸ್ವಭಾವ ತಾಳುವುದೇಕೆ? ಎಂದು ಸುಮನಾ ತನ್ನಲ್ಲಿಯೇ ದೇವರಿಗೆ ಬೈಯುತ್ತ , ಕಣ್ಣೀರು ಹಾಕುತ್ತ ಮುಂದೆ ಸಾಗುತ್ತಾಳೆ. ಅದೆಷ್ಟೋ ಕಣ್ಣೀರು ಹನಿಗಳು ಜಾರಿ ಭೂಮಿ ತಾಯಿಯ ಒಡಲು ಸೇರುತ್ತಿದ್ದವು.
(ಸುಮನಾ ನೋಡಿದ್ದು , ಕೇಳಿದ್ದು)
ಸುಮಾರು ಎಂಟು ವರ್ಷ ಪ್ರಾಯದ ಗೊಂಬೆಯಂತಹ ಮುಗ್ಧ ಹೆಣ್ಣು ಮಗುವೊಂದನ್ನು ನಾಲ್ಕೈದು ಹುಡುಗರ ಗುಂಪೊಂದು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಸಾಯಿಸಿ ಒಗೆದು ಹೋಗಿದ್ದರು. ಅವರೇನೋ ಕತ್ತು ಹಿಸುಕಿ ಸತ್ತಳೆಂದು ತಿಳಿದು ಒಗೆದು ಹೋದ ಮೇಲೆ ಪ್ರಜ್ಞೆ ತಪ್ಪಿದ ಆಕೆಗೆ ಸ್ವಲ್ಪ ಪ್ರಜ್ಞೆ ಬಂದಿದೆ. ಆದರೆ ರಕ್ತದ ಮಡುವಿನಲ್ಲಿ ಮಿಂದೆದ್ದ ಆಕೆಗೆ ಮಾತಾಡಲೂ ಆಗದಷ್ಟು ಆ ಕಾಮುಕರು ನೀಚ ಕೃತ್ಯ ಎಸಗಿ ಆಕೆಗೆ ಹಿಂಸೆ ಮಾಡಿದ್ದಾರೆ. ಆ ಮುಗ್ಧ ಹೆಣ್ಣು ಮಗು ಸನ್ನೆ ಮಾಡಿ ಹೇಳುವಷ್ಟರಲ್ಲಿ ಈ ಸಲ ಸತ್ತೆ ಹೋಗಿದೆ. ಅಲ್ಲಿ ಆ ಮಗುವಿನ ತಂದೆ ತಾಯಿಯ ಆರ್ತನಾದ ಕೇಳಿ ಸುಮನಾಳ ಹೊಟ್ಟೆಯಲ್ಲಿ ಸಂಕಟ ಹೆಚ್ಚಾಗಿ , ಆ ಮಗುವಿನ ಕಾಲಗುಂಟ ಹರಿಯುತ್ತಿರುವ ಆ ರಕ್ತದ ಹರಿವನ್ನು ನೋಡಿದರೆ ಎಂತವರಾದರೂ
ಮೂರ್ಛೆ ಹೋಗಬೇಕು ಅಷ್ಟೊಂದು ರಕ್ತ ಹರಿಯುತ್ತಿತ್ತು.
ಇದೆಲ್ಲವನ್ನು ತೀರ ಹತ್ತಿರದಿಂದ ನೋಡಿದ ಸುಮನಾಳ ಕಣ್ಣಿಂದ ಕಣ್ಣೀರ ಹನಿ ಜಾರಿ ಕೆಳಗೆ ಬೀಳುತ್ತಿದೆ. ಸುಮನಾಳಿಗೆ ಅರಿವಿಲ್ಲದಂತೆ ಮನಸ್ಸು ಮತ್ತೆ ಮತ್ತೆ ಆ ಹೆಣ್ಣು ಮಗುವಿನ ಮುಗ್ಧ ಮುಖವನ್ನು ನೆನೆಯುತ್ತಿದೆ. ಭಾರವಾದ ಹೆಜ್ಜೆಯೊಂದಿಗೆ ಆಫೀಸಿಗೆ ಹೊರಟವಳು ಸುಮ್ಮನೆ ಮನೆ ಕಡೆ ನಡೆದಳು. ಮನೆ ತಲುಪಿದರೂ ಕಣ್ಣೀರಿನ ಹನಿ ಜಾರುವುದಂತೂ ನಿಂತಿರಲಿಲ್ಲ
