ಬೆಂಕಿಯಲ್ಲಿ ಅರಳಿದ ಹೂವು. ಭಾಗ 4.
ಬೆಂಕಿಯಲ್ಲಿ ಅರಳಿದ ಹೂವು. ಭಾಗ 4.
ಶಾಂತಮ್ಮ ಮಾಡಿದ ಮಸ್ತ್ ಚಹಾ ಕುಡಿದು ರಂಗಪ್ಪ ಉಳಿದ ಅರ್ಧ ಎಕರೆ ಹೊಲಕ್ಕೆ ನೀರು ಹಾಯಿಸಲು ಹೊರಟನು. ಗಂಡ ಖುಷಿಯಾಗಿ , ಸಂತೋಷದಿಂದ ಮಗಳ ಮದುವೆಯನ್ನು ಮಾಡಲು ತುದಿಗಾಲಲ್ಲಿ ನಿಂತಿರುವುದನ್ನು ಕಂಡು ಶಾಂತಮ್ಮ, ಗಂಡ ಹೋದ ದಾರಿಯನ್ನೇ ನೋಡುತ್ತಾ ಮೈಮರೆತು ನಿಂತಳು. ಆಗ ಎರಡನೇ ಮಗಳು ಸರೋಜಾ ಬಂದವಳೇ, " ಅಮ್ಮಾ , ಅಮ್ಮಾ, ಅಂತ ಕೂಗಿದಳು. ಶಾಂತಮ್ಮ ಪ್ರತಿಕ್ರಿಯೆ ನೀಡದಿದ್ದಾಗ , ಅಮ್ಮಾ ಎಂದು ಸ್ವಲ್ಪ ಅಲ್ಲಾಡಿಸಿದಳು. ಆಗ ಹಾ! ಏನಾಯ್ತು? ಅಂತ ಗಡಬಡಿಸಿ ಹೊರಲಾಡಿದಳು."
ಸರೋಜಾ: ಅಮ್ಮ, ಅಪ್ಪ ಹೋಗಿ ಒಂದರ್ಧ ಗಂಟೆ ಆಗೋಯ್ತು. ನೀನು ನಿಂತು ನೋಡ್ತಾ , ನೋಡ್ತಾ ಮೈಮರೆತೆ ಅಷ್ಟೇ ಕಣಮ್ಮ.
ಶಾಂತಮ್ಮ: ಯೇ ಸುಮ್ಮನಿರಮ್ಮ ನೀನು, ಅಂತದ್ದೇನಿಲ್ಲ.
ಸರೋಜಾ: ಸರಿ ಬಿಡಮ್ಮ, ಹಸಿವಾಗ್ತಿದೆ ಊಟ ಕೊಡಬಾ.
ಶಾಂತಮ್ಮ: ಆಯ್ತು ಬಾ, ನಿನ್ನ ತಂಗಿಯರನ್ನು ಕರಿ, ಎಲ್ಲರಿಗೂ ಊಟ ಕೊಟ್ಟು ನನ್ನ ಕೆಲಸ ಮಾಡ್ತೀನಿ.
ಎಲ್ಲರೂ ಊಟ ಮಾಡುತ್ತಿರುವಾಗ, ಪಕ್ಕದ ಬೀದಿಯ ಮೋನಣ್ಣ ಓಡುತ್ತಾ ಬಂದವನೇ, ಅಕ್ಕಾ ಅಕ್ಕಾ ಎಂದು ಕೂಗುತ್ತ, ಅಲ್ಲಿ ರಂಗಣ್ಣ ರಂಗಣ್ಣ ಎನ್ನುತ್ತಾ ಎದೂಸಿರು ಬಿಡುತ್ತಾ ಗಾಬರಿಯಿಂದ ಚೀರಿಕೊಂಡನು.
ಮಕ್ಕಳೊಂದಿಗೆ ಶಾಂತಮ್ಮ ಹೆದರುತ್ತ ಹೊರಗಡೆ ಬಂದಳು. ಏನಾಯ್ತು ಮೋನಣ್ಣ?
ಅಲ್ಲಿ ರಂಗಣ್ಣ ಬಿದ್ಬಿಟ್ಟಿದ್ದಾನೆ.
ಆ....!
ಎನ್ ಹೇಳ್ತಿದಿಯಾ ಮೋನಣ್ಣಾ?
ಹೌದು ಶಾಂತಕ್ಕಾ , ನಾನು ಹೊಲಕ್ಕೆ ನೀರು ಹಾಯಿಸೋಕೆ ಹೋಗಿದ್ದೆ. ಸ್ವಲ್ಪ ಹೊತ್ತಿಗೆ ಮುಂಚೆ ತಾನೇ ರಂಗಣ್ಣನ ಜೋಡಿ ಮಾತಾಡಿ ನಾನು ನಮ್ಮ ಹೊಲದ ಕಡೆಗೆ ಹೊರಟಿದ್ದೆ. ಅಷ್ಟರಲ್ಲಿ ರಂಗಣ್ಣ ಚೀರಿದ ದ್ವನಿ ಕೇಳಿಸ್ತು. ಓಡಿ ಹೋಗಿ ನೋಡಿದ್ರೆ ರಂಗಣ್ಣ ಬಿದ್ದು ಬಿಟ್ಟಿದ್ರು.
ಏನಾಯ್ತು ಮೋನಣ್ಣಾ ಅವರಿಗೆ? ಈಗೆಲ್ಲಿದ್ದಾರೆ? ಈಗ ಹೇಗಿದ್ದಾರೆ ಮೋನಣ್ಣಾ ಅವರು ಅಂತ ಅಳುತ್ತ ಶಾಂತಮ್ಮ ಕೇಳಿದಳು. ಮಕ್ಕಳೆಲ್ಲರೂ ಜೋರಾಗಿ ಆಳುತ್ತಿದ್ದರು. ಮಕ್ಕಳನ್ನು ಸಮಾಧಾನ ಮಾಡುತ್ತ , ಮಕ್ಕಳೊಂದಿಗೆ ಹೊಲದ ಕಡೆಗೆ ಓಡಿದಳು.
ಅಷ್ಟರಲ್ಲಾಗಲೇ ಜನಸಮೂಹವೆ ಸೇರಿಯಾಗಿತ್ತು. ಅಕ್ಕ ಪಕ್ಕದ ಹೊಲದ ರೈತರು ಆತನನ್ನು ಹೊಲದ ಬದುವಿನ ಕಡೆಗೆ ತಂದು ಹಾಕಿದ್ದರು. ರಂಗಪ್ಪನ ಪ್ರಾಣ ಪಕ್ಷಿ ಹಾರಿಹೋಗಿತ್ತು. ದಿನ ಮಾಡುವ ಕೆಲಸವೇ ಆತನ ಪ್ರಾಣವನ್ನು ಕಿತ್ತುಕೊಂಡಿತ್ತು. ಕರೆಂಟು ಶಾಕ್ ಹೊಡೆದು ತೀರಿಕೊಂಡಿದ್ದನು.
ಮಕ್ಕಳೊಂದಿಗೆ ಓಡಿದ ಶಾಂತಮ್ಮ, ಗಂಡನ ಶವ ನೋಡಿದವಳೇ, ಹುಚ್ಚಿಯಂತೆ ಹೊರಳಾಡಿ ಅಳತೊಡಗಿದಳು. ಮಕ್ಕಳೆಲ್ಲರೂ ಆಳುತ್ತಿದ್ದರು. ಎರಡು ಮಕ್ಕಳಂತೂ ತುಂಬಾ ಚಿಕ್ಕವರು.
ಯಾಕ್ರೀ ನನ್ನೊಬ್ಬಳನ್ನೇ ಬಿಟ್ಟು ಹೋದ್ರಿ? ಮಕ್ಕಳ ಮದುವೆ ಮಾಡ್ಬೇಕು ಅಂತ ಬೆಳಿಗ್ಗೆ ತಾನೇ ಮಾತಾಡಿದ್ರಿ, ಮದುವೆ ಮಾಡದೇನೆ ಅದೆಂಗ ಹೋಗ್ಬಿಟ್ರಿ? ನಾನೊಬ್ಬಳೇ ಹೆಂಗ್ರಿ ಇರ್ಲಿ? ಎನ್ಮಾಡ್ಲಿ ನೀವಿಲ್ಲದೆ? ಒಂದಿನವೂ ನನ್ನ ಬಿಟ್ಟಿರಲಾರದವರು ಈಗ ನನ್ನ ಬಿಟ್ಟು ಹೆಂಗ್ರಿ ಹೋದ್ರಿ? ಎಂದು ಏನೇನೋ ಹೇಳುತ್ತ ತನ್ನ ದುಃಖವನ್ನು ಹೊರ ಹಾಕುತ್ತ ಅಳುತ್ತಿದ್ದಳು. ಮಕ್ಕಳೆಲ್ಲರೂ ಅಮ್ಮನ ಹತ್ತಿರವೇ ನಿಂತು ಆಳುತ್ತಿದ್ದರು.
ಎಂಥವರಿಗೂ ಈ ದೃಶ್ಯ ನೋಡಿದರೆ ಹೃದಯ ಹಿಂಡುವಂತಿತ್ತು.
ಆಗ ಅಲ್ಲಿ ನೆರೆದಿದ್ದ ಜನರು ಇವರಿಗೆ ಸಮಾಧಾನ ಮಾಡುತ್ತ ರಂಗಪ್ಪನ ಹೆಣವನ್ನು ಆತನ ಮನೆಗೆ ತಂದರು. ಎಲ್ಲ ವಿಧಿ ವಿಧಾನಗಳು ಮುಗಿದು ಸುಮಾರು ಒಂದೆರಡು ತಿಂಗಳುಗಳು ಕಳೆದವು.
