ಅರ್ಥ ಅಪಾರ್ಥಗಳ ನಡುವೆ...?!
ಅರ್ಥ ಅಪಾರ್ಥಗಳ ನಡುವೆ...?!
ನಮ್ಮ ಬದುಕಿನ ಸ್ವಾರಸ್ಯ ಅಡಗಿರುವುದೇ ಅರ್ಥವಾಗುವುದರಲ್ಲಿ ಎಂದರೆ ತಪ್ಪಿಲ್ಲ. ಸರಿಯಾಗಿ ಅರ್ಥವಾಗದ ಪರಿಣಾಮವೇ ನಮ್ಮ ಜೀವನ ಏರಿಳಿತ ಕಾಣುವುದು ಎನ್ನುವುದರಲ್ಲಿ ಅನುಮಾನವಿಲ್ಲ. ಸರಿಯಾಗಿ ಅರ್ಥವಾಗಿದ್ದರೆ ಹೀಗಾಗುತ್ತಿತ್ತಾ..? ಎಂದು ಹೇಳುವ ನಾವು ಪ್ರತಿ ಪದಕ್ಕೂ, ಪ್ರತಿ ವಾಕ್ಯಕ್ಕೂ, ಪ್ರತಿ ಮಾತಿಗೂ, ಪ್ರತಿ ವಿಷಯಕ್ಕೂ, ಅರ್ಥ ಹುಡುಕುವುದಕ್ಕೆ ಹೋಗುತ್ತೇವೆ. ಅದೇಕೆ ಹೀಗಾಯ್ತು, ಇದೇಕೆ ಹಾಗಾಯ್ತು, ಇವನೇಕೆ ಹೀಗೆ, ಅವಳೇಕೆ ಹಾಗೆ, ನನ್ನ ಮಾತೇಕೆ ಇಷ್ಟು ಕಠಿಣ, ಅವಳ ವರ್ತನೆ ಏಕೆ ಇಷ್ಟು ನಿಷ್ಠುರ..? ಎಂದು ಪ್ರತಿಯೊಂದರಲ್ಲೂ, ಪ್ರತಿಯೊಬ್ಬರಲ್ಲೂ ಅರ್ಥ ಹುಡುಕುವುದರಲ್ಲಿ ಹೋಗುತ್ತೇವೆ.
ಕೆಲವೊಂದಕ್ಕೆ ಅರ್ಥ ಹುಡುಕಿ ಪರಿಹಾರ ದೊರಕಿದರೆ ಮತ್ತೂ ಕೆಲವು ಅರ್ಥ ಸಿಗದೇ ಜಟಿಲವಾಗುತ್ತಾ ಹೋಗುತ್ತದೆ. ಸಿಗದೇ ಇದ್ದ ಅರ್ಥಕ್ಕೆ ಮನಸ್ಸು ಇನ್ನಷ್ಟು ಚಿಂತಿತವಾಗುತ್ತಾ ಹೋಗುತ್ತದೆ. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ, ವಯಸ್ಸಿನ ಅನುಸಾರ ಎಷ್ಟು ಬೇಕೋ ಅಷ್ಟು ಅರ್ಥಮಾಡಿಕೊಳ್ಳುತ್ತಾ ಹೋದರೆ ಜೀವನವು ಸುಲಭ ಎನಿಸುತ್ತದೆ. ಮನಸ್ಸು ಸದಾ ನವೋಲ್ಲಾಸದಿಂದ ತುಂಬಿರುತ್ತದೆ. ಅರ್ಥವಾಗದಿದ್ದರೂ ಪರವಾಗಿಲ್ಲ ಆದರೆ ಅಪಾರ್ಥ ಮಾಡಿಕೊಳ್ಳುವ ಅಭ್ಯಾಸದಿಂದ ದೂರವಿದ್ದರೆ ಲೇಸು. ಕೆಲವು ಜನರು ಅದೇಕೋ ಹಾಗೇ..! ಒಂದು ಹೇಳಿದರೆ ಮತ್ತೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. "ಈಸಿ ಗೋಯಿಂಗ್" ಪ್ರವೃತ್ತಿ ಅವರದಲ್ಲ. ಅವರು ಎಲ್ಲವನ್ನು ಕ್ಲಿಷ್ಟಕರವಾಗಿಯೇ, ಕಷ್ಟಕರವಾಗಿಯೇ, ತಮ್ಮ ಬುದ್ಧಿ ಮತ್ತು ತಂತ್ರಜ್ಞಾನದ ಅನುಭವ, ತಾಂತ್ರಿಕ ಕೌಶಲ್ಯವನ್ನು ಬೆರಕೆ ಮಾಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ..!
ಕೊನೆಗೆ ಮತ್ತಿನ್ನೇನೋ ಅಪಾರ್ಥ ಮಾಡಿಕೊಂಡು ಎದುರಿನವರೊಂದಿಗೆ ಮುನಿಸಿಕೊಳ್ಳುತ್ತಾರೆ, ಇಲ್ಲಾ ಜಗಳ ತೆಗೆಯುತ್ತಾರೆ. ಅಂತಹ ಕೆಲವು ಜನ ನಮ್ಮ ಸುತ್ತಮುತ್ತಲೂ ಇರುತ್ತಾರೆ. ಒಂದು ಪದಕ್ಕೆ ಒಂದೇ ಅರ್ಥ ಕೊಡುವುದಿಲ್ಲ ಅವರು..! ಎಲ್ಲವನ್ನು ಕೆದಕಿ ಒಳಾರ್ಥ ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಹಾಗೆ ಪ್ರಯತ್ನಿಸುತ್ತಾ ತಲೆಕೆಡಿಸಿಕೊಳ್ಳುತ್ತಾರೆ. ತಲೆಕೆಡಿಸಿಕೊಂಡು ತಮ್ಮ ಅಮೂಲ್ಯವಾದ ದಿನವನ್ನು ಹಾಳುಗೆಡುವುತ್ತಾರೆ. ಇಂಥವರೊಂದಿಗೆ ವ್ಯವಹರಿಸಬೇಕಾದರೆ ಜಾಗರೂಕರಾಗಿರುವುದು ಒಳಿತು. ಇಲ್ಲದಿದ್ದರೆ ನಮ್ಮ ದಿನವೂ ಅವರು ತೆಗೆದ ಜಗಳದಿಂದ ಹಾಳಾಗುವುದು ಖಚಿತ..!
ನಾವು ಮಾತನಾಡುವ ಭಾಷೆಯಿಂದಲೂ, ಪದ ಪ್ರಯೋಗದಿಂದಲೂ, ಅಪಾರ್ಥಗಳಾಗುವುದು ಹೆಚ್ಚು. ಕೆಲವೊಮ್ಮೆ ಇಂತಹ ಅಪಾರ್ಥಗಳಿಂದ ಜಗಳವಾದರೆ, ಇನ್ನೂ ಕೆಲವೊಮ್ಮೆ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಅದೇಕೋ ಗೊತ್ತಿಲ್ಲ, ಕೆಲವರಿಗೆ ಅಲ್ಪಪ್ರಾಣ ಮಹಾಪ್ರಾಣದ ಅಕ್ಷರಗಳನ್ನು ಪ್ರಯೋಗಿಸುವುದರಲ್ಲಿ ಸೋಂಬೇರಿತನ ಎನಿಸುತ್ತದೆ. ಅಥವಾ ಮಹಾಪ್ರಾಣದ ಪದಗಳನ್ನು ಉಚ್ಛರಿಸಲು ಸುಸ್ತಾಗುತ್ತದೆಯೋ ಗೊತ್ತಿಲ್ಲ..! ಇನ್ನೂ ಕೆಲವರು ಬೇಡದ ಕಡೆ ಮಹಾಪ್ರಾಣ ಉಪಯೋಗಿಸಿ ತಮಗೆ ತಾವೇ ಕಷ್ಟ ತಂದುಕೊಳ್ಳುತ್ತಾರೆ..!
ಅಕ್ಕಿಗೆ ಹಕ್ಕಿ ಎಂದು, ಹಕ್ಕಿಗೆ ಅಕ್ಕಿ ಎಂದು, ಇಂಗ್ಲಿಷಿನ ಏರ್ ಹೇರ್ ಆಗಿ, ಹೇರ್ ಏರ್ ಆಗಿ, ತರಹೇವಾರಿ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಾರೆ. "ಹಕ್ಕಿಯು ಹಾರಿ ಬಂದು ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿಂದಿತು" ಎಂಬುದನ್ನು "ಅಕ್ಕಿಯು ಆರಿ ಬಂದು ಹಕ್ಕಿಯನ್ನು ಎಕ್ಕಿ ಎಕ್ಕಿ ತಿಂದಿತು" ಎಂದು ತಮ್ಮದೇ ರೀತಿಯಲ್ಲಿ ಹೇಳಿ ಎದುರಿನವರನ್ನು ಕಕ್ಕಾಬಿಕ್ಕಿ ಮಾಡುತ್ತಾರೆ..!
ಏಳಿ ಮತ್ತು ಹೇಳಿ ಪದಕ್ಕೂ ತದ್ವಿರುದ್ಧವಾಗಿ ಉಚ್ಛರಿಸುತ್ತಾರೆ. ನಿರೂಪಕಿಯೊಬ್ಬಳು ಎದುರಿನವರಿಗೆ "ಪರವಾಗಿಲ್ಲ ಹೇಳಿ" ಎನ್ನುವ ಬದಲು "ಪರ್ವಾಗಿಲ್ಲ ಏಳಿ" ಎನ್ನುತ್ತಾಳೆ ಅಂದುಕೊಳ್ಳಿ. ಎದುರಿನ ವ್ಯಕ್ತಿ "ಓಹೋ ಏಳಬೇಕು ಎನಿಸುತ್ತದೆ. ಸಂದರ್ಶನದ ಕಾಲಾವಧಿ ಮುಗಿಯಿತೇನೋ" ಎಂದು ಏಳಲು ಹೊರಟರೆ, ಮತ್ತೆ ಆ ನಿರೂಪಕಿ "ಪರವಾಗಿಲ್ಲ ಸರ್, ಕೂತ್ಕೊಂಡೇ ಏಳಿ" ಎಂದರೆ ಆ ವ್ಯಕ್ತಿಯ ಫಜೀತಿ ಏನಾಗಿರಬಹುದು ಎಂದು ನೀವೇ ಯೋಚಿಸಿ..!
ನಮ್ಮ ಕರುನಾಡ ಮಾತೃಭಾಷೆ ಕನ್ನಡವಾದರೂ, ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಕನ್ನಡ ಚಾಲ್ತಿಯಲ್ಲಿದೆ. ಮಂಗಳೂರಿನವರು "ಮಗು ಕೂಗುತ್ತಿದೆ" ಎಂದಾಗ, ಈ ಕಡೆಯ ಜನರು "ಓಹೋ ಮಗು ಏಕೆ ಕೂಗುತ್ತಿದೆ..?" ಎಂದುಕೊಳ್ಳುತ್ತಾರೆ. ಆದರೆ ಅಲ್ಲಿಯ ಜನಕ್ಕೆ ಕೂಗುವುದು ಎಂದರೆ ಅಳುವುದು. ಇಲ್ಲಿಯ ಜನಕ್ಕೆ ಕೂಗುವುದು ಎಂದರೆ "ಜೋರಾಗಿ ಕಿರುಚುವುದು" ಎಂದರ್ಥ.
ಇನ್ನೂ ಒಂದೇ ವಸ್ತುವಿಗೆ ಹಲವಾರು ರೀತಿಯಲ್ಲಿ ಹೆಸರುಗಳಿರುತ್ತವೆ. ನನಗೆ ನಲ್ಲಿ ಎಂದರೆ ಇಂಗ್ಲೀಷಿನಲ್ಲಿ ಟ್ಯಾಪ್ ಎಂದು ಗೊತ್ತಿತ್ತು ಅಷ್ಟೇ. ಆದರೆ ಅದಕ್ಕೆ ಇನ್ನೊಂದು ವಿಭಿನ್ನವಾದ ಹೆಸರು ಇದೆ ಎಂದು ಗೊತ್ತಾದದ್ದು ನನ್ನ ಮದುವೆಯ ನಂತರವಷ್ಟೇ..! ಮೊದಮೊದಲು "ಕೊಳಾಯಿ ತಿರುಗಿಸಿದಾ..?" ಎಂದು ಕೇಳಿದಾಗ, ನಾನು ಆಶ್ಚರ್ಯಚಕಿತಳಾಗಿ "ಕೊಳವನ್ನು ಏಕೆ ತಿರುಗಿಸಬೇಕು, ನಲ್ಲಿ ಇರುವಾಗ ಕೊಳದಿಂದ ನೀರನ್ನು ಏಕೆ ತರಬೇಕು..? ಎಂದು ಗೊಂದಲಗೊಳ್ಳುತ್ತಿದ್ದೆ. ನಂತರ ಗೊತ್ತಾಯಿತು ನಲ್ಲಿಗೆ ಕೊಳಾಯಿ ಎಂದು ಕರೆಯುತ್ತಾರೆ ಅಂತ. ಮುದ್ದೆ ಊಟ ಮಾಡುವಾಗ ತಟ್ಟೆಯ ಕೆಳಗೆ ಇಡುವ ಚಿಕ್ಕ ಮರದ ತುಂಡಿಗೆ "ಒತ್ತು" ಎನ್ನುತ್ತಾರೆ ಎಂದು ಗೊತ್ತಿರಲಿಲ್ಲ. ಮೊದಲ ಬಾರಿಗೆ ಈ ಪದವನ್ನು ಕೇಳಿದಾಗ, ಅದು ಒತ್ತಾ ಮುತ್ತಾ ಎಂದು ಗೊತ್ತಾಗುತ್ತಿರಲಿಲ್ಲ. ಕೊನೆಗೆ ಅದರ ಪದ ಬಳಕೆ ಗೊತ್ತಾಯ್ತು.
ಈ ರೀತಿ ಮನೆ ವಿಳಾಸ ಹೇಳುವಾಗ ಪ್ರಯೋಗಿಸುವ "ಹಂಗಾಸು ಹಿಂಗಾಸು" ಎಂಬ ಪದವನ್ನು ಮೊದಲಿಗೆ ಕೇಳಿದಾಗ ನಕ್ಕುಬಿಟ್ಟಿದ್ದೆ. ಯಾವ ಹಾಸು, ಅದೇನನ್ನು ಹಾಸಬೇಕು ಎಂದು ತಿಳಿಯದೆ ಕನ್ಫ್ಯೂಸ್ ಆಗಿದ್ದೆ..! ಆಮೇಲೆ ಗೊತ್ತಾಯಿತು ವಿಳಾಸ ಹೇಳುವಾಗ "ಆ ಕಡೆ, ಈ ಕಡೆ" ಎಂದು ಹೇಳಲು ಹೀಗೆ ಹೇಳುತ್ತಾರೆ ಎಂದು..!
ಈ ರೀತಿಯ ಭಾಷೆಯ ವೈಖರಿ, ಪದ ಪ್ರಯೋಗ, ಆಡು ಮಾತುಗಳು, ಪದಗಳ ಉಚ್ಛಾರಣೆ ಕೆಲವು ಸಲ ನಮ್ಮನ್ನು ಅಪಾರ್ಥಕ್ಕೆ ಈಡು ಮಾಡಿ ನಗೆಗಡಲಲ್ಲಿ ತೇಲಿಸಬಹುದು, ಇಲ್ಲವೇ ಸಂಕಟಕ್ಕೆ ಈಡು ಮಾಡಲೂಬಹುದು. ಎಲ್ಲಾ ಅರ್ಥ ಅಪಾರ್ಥಗಳು ನಮ್ಮ ಕೈಯಲ್ಲೇ ಇವೆ. ಒಂದು ಪದಕ್ಕೆ ಒಂದೇ ಅರ್ಥ ಕೊಡದೆ, ನಾನಾರ್ಥ ಕೊಟ್ಟು ಅಪಾರ್ಥಕ್ಕೆ ತಿರುಗಿಸುವ ಬದಲು, ಅರ್ಥವೇ ಆಗಿಲ್ಲದಂತೆ ಇರುವುದೇ ಚೆನ್ನ ಅಲ್ಲವೇ..?
ಈ ಜಗತ್ತಿನಲ್ಲಿ ಹಲವು ಗೊತ್ತಿಲ್ಲದ ವಿಷಯಗಳು ಅಡಕವಾಗಿವೆ. ಅಂತೆಯೇ ಮನುಷ್ಯರಲ್ಲಿಯೂ ಸಹ. ಅಂತಹ ಜಟಿಲವಾದ ವಿಷಯಗಳನ್ನು ಕಾಲಕ್ಕೆ ತಕ್ಕಂತೆ, ಅವಶ್ಯಕತೆಗೆ ತಕ್ಕಂತೆ, ಸ್ವಲ್ಪ ಸ್ವಲ್ಪವೇ ಅರ್ಥಮಾಡಿಕೊಳ್ಳೋಣ. ವಯಸ್ಸು ಮಾಗುವುದರಲ್ಲಿ ಎಷ್ಟೋ ವಿಷಯಗಳು ನಮಗೆ ಗೊತ್ತಾಗಿರುತ್ತದೆ. ಅದು ಬಿಟ್ಟು ಎಲ್ಲವನ್ನು ಒಂದೇ ಸಲ ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ, ಅದು ವ್ಯರ್ಥ ಪ್ರಯತ್ನಕ್ಕೆ ನಾಂದಿಯಾಗುತ್ತದೆ..!
ನಾವು ಜೀವಿಸುವ ಈ ಭೂಮಿಗೂ ಎಲ್ಲವೂ ಅರ್ಥವಾಗುತ್ತದೆ ಎಂದರೆ ಸೋಜಿಗದ ಸಂಗತಿಯೇ ಅಲ್ಲವೇ..? ಅದಕ್ಕೆ ಇಂಗ್ಲೀಷಿನಲ್ಲಿ ಅದರ ಹೆಸರು Earth (ಅರ್ಥ್) ಎಂದಾಗಿದೆ ಅನಿಸುತ್ತೆ..! ಭೂಮಿಯನ್ನು ತಾಯಿಗೆ ಹೋಲಿಸುವುದು ಕೂಡ ಈ ಕಾರಣಕ್ಕೆ ಇರಬಹುದು. ಶಾಂತವಾಗಿ ನಮ್ಮನ್ನು ಪೋಷಿಸಿ, ಸಲಹುವುದು ಅವಳಿಗೆ ಗೊತ್ತು. ಜೊತೆಗೆ ಮನುಷ್ಯನಾದವನು ಅತಿಯಾಗಿ ಪ್ರಕೃತಿ ಮಾತೆಗೆ ಕೇಡನ್ನು ಉಂಟುಮಾಡಿದಾಗ, ಸಿಟ್ಟಾಗಿ ಪ್ರತ್ಯುತ್ತರವನ್ನು ಕೊಡುವುದೂ ಸಹ ಆಕೆಗೆ ಗೊತ್ತು...! ನಿಜವಲ್ಲವೇ..?
