ಅಮೃತ ವರ್ಷಿಣಿ
ಅಮೃತ ವರ್ಷಿಣಿ
ಇಪತ್ತು ವರ್ಷಗಳ ಹಿಂದೆ ಬಂದ ಈ ಸಿನಿಮಾ ಎಲ್ಲರ ಹೃದಯ ಗೆದ್ದ ಸಿನಿಮಾ ಆಗಿತ್ತು. ಈಗಲೂ ಈ ಚಿತ್ರ, ಚಿತ್ರ ಕಥೆಯಿಂದ, ಹಾಡುಗಳಿಂದ ಜೀವಂತವಾಗಿ ಉಳಿದಿದೆ. ನಾಯಕ, ನಾಯಕಿಯಷ್ಟೇ ಸಮಾನ ತೂಕದ ಪಾತ್ರ ಖಳ ನಟನಿಗೂ ಇದೆ. ಈ ಚಿತ್ರದಲ್ಲಿ ನಾಯಕಿಯ ಗಂಡನನ್ನು ರಮೇಶ್ ಕೊಲೆ ಮಾಡಿ, ನಾಯಕಿಯನ್ನು ಪಡೆಯುವ ಪ್ರಯತ್ನ ಮಾಡುತ್ತಾನೆ. ಅಲ್ಲದೇ ರಮೇಶನ ಪ್ರೇಮಿ ಈ ಮೊದಲೇ ಸತ್ತಿರುತ್ತಾಳೆ. ಈ ದೃಶ್ಯವನ್ನು ನನ್ನ ದೃಷ್ಟಿಯಲ್ಲಿ ಬದಲಿಸುವುದಾದರೆ,
ಅಭಿ (ರಮೇಶ್) : ಹೇಮಂತ್, ನಾನು ಊರಿಗೆ ಹೋಗ್ತೀನಿ ಕಣೋ.
ಹೇಮಂತ್ : ಯಾಕೋ ಅಭಿ, ನಮ್ಮ ಮನೆ ನಿನಗೆ ಸೆಟ್ ಆಗ್ಲಿಲ್ವಾ? ವೀಣಾ ನಿನ್ನನ್ನ ಸರಿಯಾಗಿ ನೋಡ್ಕೊಳ್ತಿಲ್ವೇನೋ? ಏನೇ ವೀಣಾ, ನನ್ನ ಫ್ರೆಂಡ್ ಯಾಕೋ ಮನೆಗೆ ಹೋಗ್ಬೇಕು ಅಂತಿದಾನಲ್ಲ, ನಿನ್ನ ಕಿರಿಕಿರಿ ಜಾಸ್ತಿ ಆಯ್ತು ಅನ್ಸತ್ತೆ!
ವೀಣಾ : ಯಾಕ್ರೀ ಮತ್ತೇ ಕಾಲೇಳಿತಿದೀರಾ? ನಿಮ್ಮ ಫ್ರೆಂಡಿಗೇನೋ ಊರಲ್ಲಿ ಕೆಲಸ ಅಂತೆ ಅದಕ್ಕೆ ಹೋಗ್ತೀನಿ ಅಂತಿರೋದು. ಏನ್ರಿ ಅಭಿ, ನಾನೇನಾದ್ರೂ ನಿಮಗೆ ಟಾರ್ಚರ್ ಕೊಟ್ಟನಾ? ತರಕಾರಿ ಕಟ್ ಮಾಡ್ಕೊಡಿ ಅಂದಿದ್ದು ಅಷ್ಟೇ, ಅಷ್ಟಕ್ಕೇ ಮನೆ ಬಿಟ್ಟು ಹೋಗೋದಾ?
ಅಭಿ : ಛೇ ಛೇ! ಹಾಗಲ್ಲ ಕಣೋ ಹೇಮಂತ್. ಊರಲ್ಲಿ ಸ್ವಲ್ಪ ಅರ್ಜೆಂಟ್ ಕೆಲಸ ಇದೆ ಅಂತ ಹೇಳಿರ್ಲಿಲ್ವಾ? ಅಮ್ಮನೂ
ಬಾ ಅಂತ ಕರೀತಿದಾರೆ. ಒಂದು ವಾರ ಅಷ್ಟೇ, ಆಮೇಲೆ ಮತ್ತೇ ನಿಮ್ಮ ಮನೆಗೆ ಬರ್ತೀನಿ ಆಯ್ತಾ. ಅಂಡ್ ವೀಣಾ ಅವರೇ ನೀವು ನನಗೆ ಇಷ್ಟ ಆದ್ರಿ, ಯಾವತ್ತೂ ಕಿರಿಕಿರಿ ಅಂತ ಅನಸಲೇ ಇಲ್ಲ. ನಿಮ್ದು ಹೇಮಂತದ್ದು ಒಳ್ಳೆ ಜೋಡಿ, ನಿಮ್ಮ ಸಂಸಾರಕ್ಕೆ ಯಾರ ದೃಷ್ಟಿನೂ ಆಗದೇ ಇರಲಿ.
ಹೇಮಂತ್ : ಸರಿ ಸರಿ, ಈಗ ಅದೆಲ್ಲ ಬಿಡು. ನೇರವಾಗಿ ವಿಷ್ಯಕ್ಕೆ ಬಾ. ಯಾಕೀಷ್ಟು ಅವಸರವಾಗಿ ಮನೆ ನೆನಪು ಆಗಿದ್ದು ನಿನಗೆ? ನಿಮ್ಮ ಹುಡುಗಿ ಮನೆಯವರು ಮದುವೆಗೆ ಒಪ್ಕೊಂಡ್ರಾ ಹೇಗೆ? ಖಿಲಾಡಿ ಕಣೋ ನೀನು.
ಅಭಿ : ಮೆತ್ತಗೆ ಮಾತಾಡೋ ಹೇಮಂತ್.
ವೀಣಾ : ಅಯ್ಯೋ ಪರವಾಗಿಲ್ಲ ಮಾತಾಡಿ, ಈಗ ಮೆಲ್ಲಗೆ ಮಾತಾಡಿದ್ರು ಮದ್ವೆಗಾದರೂ ನೀವು ಕರೀಲೆಬೇಕಲ್ಲ ನಮ್ಮನ್ನ!
ಹೇಮಂತ್ :ಲೋ ಅಭಿ, ಸಾಕು ವಿಷ್ಯಕ್ಕೆ ಬಾರೋ.
ಅಭಿ : ಹೌದು ಕಣೋ, ಅವಳ ಮನೆಯಲ್ಲಿ ಎಲ್ರು ಒಪ್ಪಿದ್ದಾರಂತೆ, ಅದಕ್ಕೆ ಚಿಕ್ಕದಾಗಿ ಎಂಗೇಜ್ ಮೆಂಟ್ ಮಾಡ್ತಾರಂತೆ. ಮದ್ವೆಗೆ ಹೇಳೋಣ ಅಂತ ಸುಮ್ನಿದ್ದೆ ಕಣೋ.
ಹೇಮಂತ್ : ಎಲಾ ಕಳ್ಳಾ! ಚಡ್ಡಿ ದೋಸ್ತ್ ಇಲ್ಲದೆ ಅದ್ಹೇಗೋ ಮದ್ವೆ ಆಗ್ತೀಯಾ? ವೀಣಾ ಬ್ಯಾಗ್ ಪ್ಯಾಕ್ ಮಾಡ್ಕೋ ಈಗ್ಲೇ, ಎಂಗೇಜ್ಮೆಂಟ್, ಮದ್ವೆ ಎರ್ಡಕ್ಕೂ ನಮ್ಮ ಹಾಜರಿ ಬೀಳಬೇಕು.
ವೀಣಾ : ನಾನ್ ಆವಾಗ್ಲೇ ಪ್ಯಾಕ್ ಮಾಡಾಯ್ತು. ಅಭಿ ಅಮ್ಮಾ ನಂಗೂ ಫೋನ್ ಮಾಡಿ ವಿಷಯ ಹೇಳಿದ್ರು. ಇವ್ರ ಬಾಯಲ್ಲೇ ಸುದ್ದಿ ಬರ್ಲಿ ಅಂತ ಕಾಯ್ತಿದ್ದೆ ಅಷ್ಟೇ!
ಅಭಿ : ಒಹ್ ಅಮ್ಮಾ ಹೇಳಿದಾರಾ. ಸರಿ ಬನ್ನಿ ಟ್ರೈನ್ ಟೈಮ್ ಆಯ್ತು ಹೊರಡೋಣ.
