ಪ್ರೀತಿಯಲ್ಲಿ ಬಿದ್ದಾಗ
ಪ್ರೀತಿಯಲ್ಲಿ ಬಿದ್ದಾಗ
ಪ್ರೀತಿಯಲ್ಲಿ ಬಿದ್ದಾಗ ನೀನೆ ನೆನಪಾಗುತ್ತೀ ಗೆಳೆಯಾ.
ನೀತಿ ಪಾಠ ಭೋದಿಸುವಾಗಲೂ ನೀನೆ ನೆನಪಾಗುತ್ತೀ.
ಪ್ರೀತಿಯಲ್ಲೂ ನೀತಿ ಹೇಳುವುದು ಸುಲಭ.
ಪಾಲಿಸಲು ಅಶಕ್ಯ, ಅಸಂಭವವಷ್ಟೇ...
ಬದುಕಿನ ಈ ಬಲೆಯಲ್ಲಿ
ಪ್ರೀತಿಯೆಳೆಯಿದ್ದರೆ ಚಂದ.
ನಾಲ್ಕು ಮೂಲೆಗೂ ಒಂದೇ ಕೊಂಡಿಯಿರಲಿ.
ಬಂಧ ಬಿಗಿಯಿದ್ದರಷ್ಟೇ
ಅನುಬಂಧದಾನಂದ.
ಉಂಡು ಮಲಗುವ ಹೊತ್ತು.
ತಾಂಬೂಲ ಮೆದ್ದ ತುಟಿ ರಂಗೇರಿತ್ತು.
ಕಂದು ಬಣ್ಣದ ಬೆಳಕು
ಮೈದುಂಬಿ ಹರಡಿತ್ತು.
ಸುಪ್ತಭಾವನೆ ಗರಿಗೆದರಿತ್ತು.
ಗುಪ್ತಗಾಮಿನಿಯವಳ
ಸುತ್ತುವರಿದಿತ್ತು.
ಜೀವಬಲೆ ಕನಸ ಹೆಣೆದಿತ್ತು.
ಮಾವು ಮಾಗಿ ಕಂಪ ಬೀರಿತ್ತು.
ನೀತಿಯದು ಪಲಾಯನ
ಗೈದಿತ್ತು.
ಭೀತಿಯಲಿ ಪ್ರೀತಿ ಮುದುರಿತ್ತು.
ಅದುರಿದಧರಗಳ ಕಧರ್ ಅಲ್ಲಿತ್ತು.
ಬರಿದು ಮಾಡುವ ಪೊಗರ್ ಕಾದಿತ್ತು.
ಅರಿತುಕೊಳ್ಳುವ ಮನ
ಮರೆತು ಕುಳಿತಿತ್ತು..
ಪ್ರೀತಿಯಲ್ಲಿ ಸೋಲಿತ್ತು.
ನೀತಿಯಲ್ಲಿ ನಿಯತ್ತಿತ್ತು.
ಗತಿವಿಧಿಯಲ್ಲಿ ಗೆಲುವಿತ್ತು.
ಪತಿಪತ್ನಿಯಲ್ಲಿ ಬಂಧವಿತ್ತು..
ಉಗಮ ಪ್ರೀತಿ ಎದೆಯ
ಸಾಗರದಲ್ಲಿತ್ತು.
ಕವನ ರೀತಿ ಪದದ ಸಾಲುಗಳಲ್ಲಿತ್ತು.
ಅವನದೇ ಪಾಠ ಕೇಳಿ
ನೀತಿ ವಿನೀತವಾಗಿತ್ತು..

