ಸಂಭ್ರಮಿಸುವ ಮನಸ್ಸಿರಲಿಲ್ಲ
ಸಂಭ್ರಮಿಸುವ ಮನಸ್ಸಿರಲಿಲ್ಲ
ಒಂದು ಊರು. ಅಲ್ಲಿ ದಂಪತಿಗಳಿಬ್ಬರು ತುಂಬಾ ಅನ್ಯೋನ್ಯತೆಯಿಂದ ಇದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಚೆಂದದ ಸಂಸಾರ.ದುಡಿದು ಬರುವ ಗಂಡ,ಮನೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೆಂಡತಿ. ಮಕ್ಕಳು ಕೂಡಾ ತಂದೆ ತಾಯಿಯ ಮಾತುಗಳಂತೆ ನಡೆದು ಕೊಂಡು ಬೆಳೆದರು.
ಆದರೆ ಆ ದಂಪತಿಗಳಿಬ್ಬರದೂ ಹಠದ ಸ್ವಭಾವ. ತಪ್ಪುಗಳಿದ್ದರೆ ಒಪ್ಪಿಕೊಳ್ಳದ ಗುಣ. ತಮ್ಮ ಮಾತು, ನಡೆ, ನುಡಿಗಳಿಗೆ ಶ್ರೇಷ್ಠ, ಉಳಿದವರೆಲ್ಲರದು ಕನಿಷ್ಠ ಎನ್ನುವ ಮನೋಭಾವ. ಹೀಗಿದ್ದರೂ ಸಮಾಜದಲ್ಲಿ,ಬಂಧುಬಳಗದವರಲ್ಲಿ ತುಂಬಾ ಬೇಕಾದವರು. ಹೀಗೆ ಕಾಲಚಕ್ರ ಉರುಳಿದಂತೆ ಮಕ್ಕಳೆಲ್ಲರು ಬೆಳೆದು ದೊಡ್ಡವರಾದರು.ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟರು .ಅವರು ಅವರ ಗಂಡನ ಮನೆಯಲ್ಲಿ ಸುಖವಾಗಿದ್ದರು. ಸ್ವಲ್ಪ ದಿನಗಳ ನಂತರ ಹಿರಿ ಮಗನ ಮದುವೆ ಮಾಡಿದರು. ಪಟ್ಟಣದಲ್ಲಿ ಬೆಳೆದವರಾದ್ದರಿಂದ ಮದುವೆಯಾದ ವರ್ಷಕ್ಕೆ ಮಗುವನ್ನು ಪಡೆಯಕೂಡದು ಎಂಬ ನಿರ್ಧಾರಕ್ಕೆ ಇಬ್ಬರೂ ಬಂದರು. ನಾಲ್ಕು ವರ್ಷ ಕಳೆಯಿತು. ಕೊನೆಗೆ ಆ ದಂಪತಿ ಕಿರಿ ಮಗನ ಮದುವೆ ಮಾಡಿದರು. ಕಿರಿ ಮಗ ಮೊದಲಿನಿಂದಲು ಅಣ್ಣನ ಮೇಲೆ ಅತಿಯಾದ ಗೌರವ ಇಟ್ಟು ಕೊಂಡವನಾಗಿದ್ದ. ಮದುವೆಯ ನಂತರ ಹೆಂಡತಿಯೊಡನೆ ದೂರದ ಮೆಟ್ರೊ ಸಿಟಿಗೆ ಹೆಂಡತಿಯನ್ನು ಕರೆದುಕೊಂಡು ಹೋದ. ಕಾಲ ಕಳೆಯುತ್ತಾ , ಖುಷಿ ಖುಷಿಯಾಗಿ ಇಬ್ಬರೂ ಜೀವನವನ್ನು ನಡೆಸಿದರು. ಆಗಲೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇದರ ಮಧ್ಯೆಯೇ ಅವಳು ಗರ್ಭವತಿಯಾದಳು. ಆದರೆ ಮನೆಯವರಿಗೆ ಇದನ್ನು ಹೇಳಲೆ ಇಲ್ಲ. ಕಾರಣ ಅಣ್ಣನ ಮದುವೆಯಾಗಿ ಐದು ವರ್ಷ ಕಳೆದರು ಅವರು ತಂದೆ ತಾಯಿಯಾಗಿರಲಿಲ್ಲ, ಅವರಿಗಿಂತ ಕಿರಿಯರಿಗೆ ಮೊದಲು ಮಗುವಾಗುವುದು ಅವನಿಗೆ ಇಷ್ಟವಾಗಲಿಲ್ಲ. ಇಬ್ಬರೂ ಸೇರಿಯೇ ಗರ್ಭಪಾತದ ನಿರ್ಧಾರಕ್ಕೆ ಬಂದರು. ಅದರಂತೆ ವೈದ್ಯರ ಬಳಿ ಹೋಗಿ ಗರ್ಭಪಾತ ಮಾಡಿಸಿದರು. ಇದನ್ನು ಮನೆಯವರಿಂದ ಮುಚ್ಚಿಟ್ಟರು. ಇದಾದ ಬಳಿಕ ಅತ್ತ ಅಣ್ಣನ ಮಡದಿ ಗರ್ಭವತಿಯಾದಳು. ಅವಳ ಸಿಮಂತಕ್ಕಾಗಿ ಊರಿಗೆ ಬಂದರು. ಇದರ ಮಧ್ಯೆ ಮತ್ತೊಂದು ಸಾರಿ ಗರ್ಭವತಿಯಾಗಿದ್ದಳು ಆತನ ಹೆಂಡತಿ, ಆಗ ಅವಳಿಗೆ ಬೇಡವಾಗಿ ಗಂಡನ ಹತ್ತಿರ ಹೇಳಿಕೊಂಡಳು. ಆಗ ಅವನು ವಿರೋಧ ವ್ಯಕ್ತಪಡಿಸಿದ. ಇದರಿಂದ ಅವಳು ಸ್ವತಃ ಗರ್ಭಪಾತ ಮಾಡಿಸಿಕೊಳ್ಳಲು ಹಗ್ಗದಾಟ (ಸ್ಕಿಪ್ಪಿಂಗ್) ಮಾಡಿದಳು, ಉಷ್ಣ ಹೆಚ್ಚಿರುವ ಪದಾರ್ಥಗಳ ಸೇವನೆ ಮಾಡಿದಳು ಆದರು ಗರ್ಭಪಾತವಾಗಲಿಲ್ಲ.ಕೊನೆಗೆ ಒಪ್ಪಿಗೆ ಕೊಡದಿದ್ದರೆ " ಸಾಯುವೆ "ಎಂದು ಬೇದರಿಕೆ ಹಾಕಿದಳು. ಆಗ ಅನಿವಾರ್ಯವಾಗಿ ಎರಡನೆ ಬಾರಿ ಗರ್ಭಪಾತ ಮಾಡಿಸಿದರು.
ಅತ್ತಿಗೆಯ ಸೀಮಂತಕ್ಕೆ ಬಂದಾಗ ಎಲ್ಲರೆದುರು ಲವಲವಿಕೆಯಿಂದ ಮಾತನಾಡುತ್ತಾ ಚಿಕ್ಕವರಾಗಿ ಅತ್ತಿತ್ತ ಓಡಾಡುತ್ತಾ ಕಾರ್ಯಕ್ರಮ ಮುಗಿಸಿದರು. ಮನೆಯಿಞದಲೆ ಕೆಲಸ ಮಾಡುವುದರಿಂದ ಸುಮಾರು ತಿಂಗಳು ತಂದೆ ತಾಯಿಯೊಡನೆ ಉಳಿದರು. ಅತ್ತಿಗೆ ಬಾಣಂತನಕ್ಕೆ ತವರಿಗೆ ಹೋದಳು..ಇತ್ತ ಕಿರಿ ಸೊಸೆ ಮತ್ತೆ ಗರ್ಭವತಿಯಾದಳು. ಗಂಡ ಹೆಂಡತಿ ಇಬ್ಬರೂ ರೂಮಲ್ಲಿರುವಾಗ ಬಾತ್ ರೂಮ್ ಗೆ ಹೋದವಳು ಕಾಲುಜಾರಿ ಬಿದ್ದಳು. ಬೇಕಂತಲೆ ಮಾಡಿಕೊಂಡಿದ್ದಾಳೆ ಎಂದು ಗಂಡ ಅನುಮಾನಿಸಿದ. ಎಷ್ಟೇ ಚೆನ್ನಾಗಿ ನೋಡಿದರು ತವರಿನಂತಾಗುವುದಿಲ್ಲ ಎಂದು ಕಾಲು ಉಳುಕಿದ್ದರಿಂದ ಕಿರಿಸೊಸೆಯನ್ನು ತವರಿಗೆ ಕಳುಹಿಸಿದರು. ಅವಳು ಹೋದ ನಂತರ ಮಗ, ಹೆಂಡತಿಯ ಬಗ್ಗೆ ಎರಡನೆ ಗರ್ಭಪಾತದ ಬಗ್ಗೆ ತಂದೆ ತಾಯಿಗೆ ತಿಳಿಸಿದ. ಮೊದಲನೆಯದನ್ನು ಮುಚ್ಚಿಟ್ಟ.. ಮೊದಲೆ ಹಠ ಸ್ವಭಾವದವರಾದ್ದರಿಂದ ಕಿರಿ ಸೊಸೆಯ ಮೇಲೆ ದ್ವೇಷ ಬೆಳೆಸಿಕೊಂಡರು.. ಮೂರನೆ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡರು, ಹಿರಿಸೊಸೆಯಂತೆ ಸೀಮಂತ ಭಾಗ್ಯ ಕಾಣಲಿಲ್ಲ..ಆದದ್ದು ಆಯಿತು ಇರುವುದನ್ನು ಸಂಭ್ರಮಿಸೋಣ ಎನ್ನುವ ಭಾವ ಗಂಡ ಮತ್ತು ಅವನ ಮನೆಯವರಿಗೆ ಬರಲಿಲ್ಲ. ದಿನಗಳು ಉರುಳಿದವು ನವಮಾಸ ಪೂರೈಸಿ ಹೆಣ್ಣು ಮಗುವಿನ ಆಗಮನವಾಯಿತು. ಆದರೆ ಸಂಭ್ರಮಿಸುವ ಮನಸ್ಸು ಮಾತ್ರ ಇರಲಿಲ್ಲ....
