ಮೊದಲ ರಕ್ಷಾಬಂಧನ
ಮೊದಲ ರಕ್ಷಾಬಂಧನ
ನಾವು ಒಡಹುಟ್ಟಿದವರು ನಾಲ್ಕು ಜನ.ನನ್ನ ಅಣ್ಣ,ನಾನು ಮತ್ತು ನನ್ನ ತಮ್ಮಂದಿರು ಇಬ್ಬರು. ಅಪ್ಪನಿಗಿಂತ ಅಮ್ಮನ ತೋಳಲ್ಲೆ ಬೆಳೆದವರು ನಾವು. ಚಿಕ್ಕವರಿರುವುದೆ ಚೆಂದ,ದೊಡ್ಡವರಾದರೆ ಜಂಜಾಟಗಳೆ ಹೆಚ್ಚು..
ನಮ್ಮದು ಕೃಷಿ ಕುಟುಂಬ ಹೊಲದ ಕೆಲಸ, ದನಕರುಗಳ ಕೆಲಸ ಹೀಗೆ ಮನೆಯ ಎಲ್ಲ ಸದಸ್ಯರೂ ಕೂಡಿ ಮಾಡಿದಾಗ ಮಾತ್ರ ಕೆಲಸ ಮುಗಿಯುತ್ತದೆ.
ಶಾಲೆಗೆ ಹೋಗುವುದರ ಜೊತೆಗೆ,ಮನೆಯ ಕೆಲಸಗಳಿಗೂ ಅಮ್ಮನಿಗೆ ಜೊತೆಗೂಡುತ್ತಿದ್ದೆವು.
ಒಂದು ಸಾರಿ ಅಣ್ಣನ ಶಾಲೆಯಲ್ಲಿ ಪ್ರವಾಸ ಇಟ್ಟಿದ್ದರು.ಅಮ್ಮನಿಗೆ,'ನಾನೂ ಪ್ರವಾಸಕ್ಕೆ ಹೋಗುತ್ತೇನೆ ಎಂದ', :"ಸರಿ ಆಯ್ತು ಹೋಗಪಾ.. " ಎಂದು ನನ್ನ ಅಮ್ಮ ಹೇಳಿದರು.
ಅಣ್ಣನಿಗೆ ನಾನು ಕೂಡಿಟ್ಟ ಹಣವನ್ನು ಖರ್ಚಿಗೆಂದು ನೀಡಿದೆ. ಪ್ರವಾಸಕ್ಕೆ ಹೋಗುವ ದಿನ ಅಣ್ಣನಿಗೆ ಬುತ್ತಿ ಮಾಡಿದರಾಯಿತು ಎಂದು ಚಪಾತಿ ಮಾಡುತ್ತಿದ್ದೆ, ಆಗ ಅಣ್ಣ,'ನಿನ್ನ ಚಪಾತಿ ನೋಡು,ಒಂದೊಂದು ದೇಶದ ನಕ್ಷೆನೂ ಇಲ್ಲಿದಾವು ಎಂದ'. ಕೋಪ ಎಲ್ಲಿತ್ತೊ ನಾನು ಕಾಣೆ,ಕೈನಲ್ಲಿರುವ ಲಟ್ಟಣಿಗೆ ತಗೊಂಡು ಎಸೆದು ಬಿಟ್ಟೆ,ಅ ವನು ತಪ್ಪಿಸಿಕೊಂಡ, ಪಾಪ ನತದೃಷ್ಟ ಲಟ್ಟಣಿಗೆ ನಾಲ್ಕರಲ್ಲಿ ಒಂದು ಭಾಗವನ್ನು ಕಳೆದುಕೊಳ್ಳಬೇಕಾಯಿತು. ನನಗೆ ಮೊಮ್ಮಕ್ಕಳು ಬಂದರೂ ಆ ಮುರಿದ ಲಟ್ಟಣಿಗೆ ತನ್ನ ಇತಿಹಾಸ ಹೇಳುವುದನ್ನು ಬಿಡುತ್ತಿಲ್ಲ.
ಹೀಗೆ ಅಲ್ಲವಾ ಜೀವನ..,
ಚಿಕ್ಕವರಿದ್ದಾಗ ಕಾದಾಡುತ್ತಾ, ತುಂಟಾಟ ಆಡುತ್ತಾ,ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಒಡಗೂಡಿ ಬೆಳೆಯುವವರೆ ಒಡಹುಟ್ಟಿದವರು..
ನಮಗೆ ಮೊದಲಿಂದಾನೂ ರಕ್ಷಾಬಂಧನ ಹಬ್ಬದ ಆಚರಣೆ ಮಾಡುವುದು ಗೊತ್ತೆ ಇರಲಿಲ್ಲ. ಇತ್ತೀಚೆಗೆ ನನ್ನ ಮೊಮ್ಮಕ್ಕಳು ತಮ್ಮ ಸಹೋದರನಿಗಾಗಿ ರಾಖಿ ತಂದಿದ್ದರು. ಆವತ್ತು ಏನು ಸಮಯ ಕೂಡಿ ಬಂದಿತ್ತೊ ನಂಗೊತ್ತಿಲ್ಲ. ನನ್ನ ಮೂವರು ಸಹೋದರರು ಮನೆಗೆ ಬಂದರು. ಮೊಮ್ಮಕ್ಕಳ ಸಂಭ್ರಮ ನೋಡಿ,ಅರವತ್ತು ವರ್ಷದ ನಾನು,ನನ್ನ ಅಣ್ಣ ಮತ್ತು ತಮ್ಮಂದಿರೊಂದಿಗೆ ನನ್ನ ಜೀವನದ ಮೊದಲ ರಕ್ಷಾಬಂಧನವನ್ನು ಆಚರಿಸಿದೆ..
ನನಗೆ ಮದುವೆಯಾಗಿ ಮಕ್ಕಳಾದರೂ ನನ್ನ ಸಹೋದರರಿಗೆ ರಾಖಿಯನ್ನೆ ಕಟ್ಟಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದಾಂಪತ್ಯ ಜೀವನದ ಮಜಲುಗಳನ್ನು ಏರಬೇಕಿದ್ದ ನಾನು ಸಿಡಿಲಂತೆ ಅಬ್ಬರಿಸಿದ ಪತಿಯ ಅಗಲಿಕೆಯಿಂದ ಎರಡು ಮಕ್ಕಳ ಜೊತೆ ಬೀದಿಪಾಲಾಗಬೇಕಿದ್ದ ನನಗೆ, ನನ್ನ ಸಹೋದರರು ರಕ್ಷಣೆ ಜೊತೆಗೆ, ಜೀವನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆಯನ್ನು ಮಾಡಿಕೊಟ್ಟರು. ನನ್ನ ಪರಿಸ್ಥಿತಿ ನೋಡಿ ತಂದೆ-ತಾಯಂದಿರು ನೀನು ನಮಗೆ ಮಗನಿದ್ದಂತೆ ಎಂದು ಸಮಾಧಾನಿಸುತ್ತಿರುತ್ತಾರೆ.
ಹುಟ್ಟಿದ ವರ್ಷದಿಂದಲೆ ಪ್ರತಿ ವರ್ಷ ರಕ್ಷಾಬಂಧನ ಆಚರಿಸುವವರ ಮಧ್ಯ ನನ್ನದು ವಿಭಿನ್ನವಾಗಿದೆ. ನನ್ನ ಸಹೋದರರು ನನಗೆ ಬಂದ ಪರಿಸ್ಥಿತಿಯನ್ನು ನಿಭಾಯಿಸಿ, ನನಗೆ ರಕ್ಷಣೆ ನೀಡಿದರು. ಒಂಟಿ ಹೆಣ್ಣು ಸಮಾಜದಲ್ಲಿ ಬದುಕಬೇಕಾದರೆ ಸಾವಿರಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅಂತಹ ಸಮಸ್ಯೆಗಳು ನನಗೆ ಬರಬಾರದೆಂದು ನನ್ನ ಒಡಹುಟ್ಟಿದವರು ನನಗೆ ರಕ್ಷಣೆಯನ್ನು ನೀಡಿದರು. ಈಗ ಬಂದೊದಗಿದ ಕಷ್ಟವನ್ನು ಎದುರಿಸಿ,ಮಕ್ಕಳು ಮೊಮ್ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದೇನೆ. ಸಹೋದರರು ಆಗಾಗ ಬಂದು ಹೋಗುತ್ತಾರೆ.ಅಪ್ಪ-ಅಮ್ಮನ ನೆನಪಾದಾಗ ನಾನು ಹೋಗುತ್ತಿರುತ್ತೇನೆ.
ಏನೇ ಕಷ್ಟ-ಸುಖ ಬಂದರು ಒಟ್ಟಿಗೆ ಇರಿ,ಒಗ್ಗಟ್ಟಿನಲ್ಲೆ ಬಲವಿದೆ ಎನ್ನುವದು ನನ್ನ ತಂದೆ ತಾಯಿ ಹೇಳಿಕೊಟ್ಟದ್ದು.ಈಗಲೂ ನಾವು ನಾಲ್ವರು ಹಾಗೆ ಇದ್ದೇವೆ.ಯಾರೊಬ್ಬರಿಗೆ ಏನಾದರೂ ಎಲ್ಲರೂ ಕೂಡಿ ಎದುರಿಸುತ್ತೇವೆ.
ಕಷ್ಟದ ದಿನಗಳಲ್ಲಿ ಜೊತೆಯಾದವರು ನನ್ನ ಸಹೋದರರು. ರಾಖಿ ಕಟ್ಟದಿದ್ದರೂ ,ರಕ್ಷಣೆ ನೀಡಿದ್ದರು. ನಿನ್ನ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದರು. ಮೊದಲು ರಕ್ಷಣೆ ನೀಡಿ ನಂತರ ರಕ್ಷೆ ಕಟ್ಟಿಸಿಕೊಂಡವರು ನನ್ನ ಸಹೋದರರು.
ಸಂತೋಷ-ದುಃಖ,ನೋವು-ನಲಿವು,ನಷ್ಟ-ಕಷ್ಟಗಳ ಸಂದರ್ಭದಲ್ಲಿ ಜೊತೆಗೂಡುವವರೆ ಒಳ್ಳೆಯತನ, ವಿಶಾಲ ಮನಸ್ಸಿನ ಒಡಹುಟ್ಟಿದವರು. ಬಂಧನಗಳ ಬೆಸೆಯುವ ರಕ್ಷಾಬಂಧನ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.
ರಕ್ಷಾಬಂಧನದ ಶುಭಾಶಯ ಕೋರಿದ ನನ್ನ ಮೊಮ್ಮಗಳ ಬರಹವನ್ನು ಓದಿ.ನನ್ನ ಒಡಹುಟ್ಟಿದವರ ಅನುಬಂಧದಂತೆ ನಿಮಗೂ ನಿಮ್ಮ ಒಡಹುಟ್ಟಿದವರ ಅನುಬಂಧ ದೊರೆಯಲಿ ಎಂದು ಆಶಿಸುತ್ತೇನೆ.
ನಿಮ್ಮ ಗೆಳತಿಯ ಅಜ್ಜಿ...
