ಮುಂಗಾರು
ಮುಂಗಾರು
ಬೇಸಿಗೆ ರಜೆ ಕಳೆದು,ಮರಳಿ ಶಾಲೆಗೆ ಹೋಗುವ ಸಮಯ... ತೊಳೆದು ಇಟ್ಟ ಸಮವಸ್ತ್ರ ,ಬೂಟು ಸಾಕ್ಸಗಳನ್ನೆಲ್ಲಾ ಹಿಂದಿನ ದಿನವೇ ಜೋಡಿಸಿಟ್ಟು,ಹಳೆಯ ಶಾಲಾ ಬ್ಯಾಗ್ನಲ್ಲಿ ಹಿಂದಿನ ತರಗತಿಯ ಹೆಚ್ಚು ಪೇಜ್ ಉಳಿದ ಪುಸ್ತಕವನ್ನೆ ಇಟ್ಟುಕೊಂಡು,ಅರ್ಧ ಪೆನ್ಸಿಲ್,ಹಳೆ ರಬ್ಬರ್ ಗಳನ್ನು ಪ್ಲಾಸ್ಟಿಕ್ ಕಂಪಾಸನಲ್ಲಿ(geometry box) ಹಾಕಿಟ್ಟು ಬೇಗ ಮಲಗುತ್ತಿದ್ದೇವು....ಮೊದಲ ದಿನದ ಹುರುಪಿನೊಂದಿಗೆ ಎದ್ದು,ತಯ್ಯಾರ ಆಗುತ್ತಿದ್ದೆವು...ಅದೇನೊ ಗೊತ್ತಿಲ್ಲ ನಮ್ಮ ಶಾಲೆಗೂ ಈ ಮುಂಗಾರು ಮಳೆಗೂ ಅದೇನು ಸಂಬಂಧವೊ ತಿಳಿಯದು....ಎರಡೂ ಒಂದೇ ತಿಂಗಳಲ್ಲಿ ಶುರುವಾಗುತ್ತಿದ್ದವು....
ಅತ್ತ ಅಜ್ಜಿ ಮೊದಲ ಮಳೆ ಬಿದ್ದೊಡನೆ ಹೊಲದಲ್ಲಿ ಹೆಸರುಕಾಳುಗಳನ್ನು ಬಿತ್ತುತ್ತಿದ್ದರು.ಅವೆ ಹೆಸರು ಕಾಳುಗಳಿಂದ ಶ್ರಾವಣದಲ್ಲಿ ಉಂಡಿ ಮಾಡುವುದು ,
ವಾವ್!ಅದರ ರುಚಿ ಹೇಗಿರುತ್ತೆ ಅಂದರೆ,ಬಾಯಲ್ಲಿಟ್ಟು ಕರಗಿ ಸೀದಾ ಗಂಟಲೊಳಗೆ ಇಳಿದು ಬಿಡುತ್ತಿತ್ತು....
ಬನ್ನಿ!!ಬನ್ನಿ!!!
ಉಂಡಿ ಸವೆದದ್ದು ಸಾಕು .... ನಮ್ಮ ಶಾಲೆ ಬಗ್ಗೆ ಸ್ವಲ್ಪ ,ಮಳೆಗಾಲದ ಬಗ್ಗೆ ಸ್ವಲ್ಪ ಕೇಳಿ....
ಶಾಲೆ ಜೊತೆಗೆ ಮುಂಗಾರು ಮಳೆಯೂ ಶುರು ವಾಗುತ್ತಿದ್ದರಿಂದ..ಬೆಳಗ್ಗೆ ಶಾಲೆಗೆ ಹೋಗುವಾಗ ಸ್ವಲ್ಪ ಬಿಡುವು ಕೊಡುತ್ತಿದ್ದ ಮಳೆರಾಯ , ಶಾಲೆ ಒಳಗೆ ಹೋಗುತ್ತಿದ್ದಂತೆ ಜೋರಾಗುತ್ತಿದ್ದ...ಇದರಿಂದಾಗಿ ಶಾಲೆ ಅಂಗಳದಲ್ಲಿ ಮಾಡಬೇಕಿದ್ದ ಪ್ರಾರ್ಥನೆಯನ್ನು ಶಾಲಾ ಕಾರಿಡಾರ್ ನಲ್ಲಿ ಮಾಡುತ್ತಿದ್ದೇವು...ಅಂಗಳದಲ್ಲಿ ಮಾಡುವಾಗ ಹನ್ನೆರಡು ಸಾಲುಗಳಿಂದ ಕೆತ್ತಿದ್ದಾರೆ, ಕಾರಿಡಾರ್ ನಲ್ಲಿ ಮಾಡುವಾಗ ಮೂರೆ ಮೂರು ಸಾಲುಗಳಿರುತ್ತಿದ್ದವು...
ಉದ್ದ ....ಉದ್ದ.....ಇಷ್ಟುದ್ದ..............
ನಮ್ಮ ತರಗತಿಯ ಕಿಟಕಿಯಿಂದ ಗುಡ್ಡ ಕಾಣಿಸುತ್ತಿತ್ತು..ಸಣ್ಣಗೆ ಮಳೆಯಾದಾಗ ಅದನ್ನು ನೋಡುವುದೇ ನಮಗೆ ಕೆಲಸ.... ಇನ್ನು ಜೋರು ಮಳೆಯಾದರೆ,ಆ ಗುಡ್ಡ ಕಾಣಿಸುತ್ತಿರಲಿಲ್ಲ...ಬರೀ ಆಕಾಶದಿಂದ ಭೂಮಿಗೆ ಮಳೆ ಹನಿಗಳ ಬಾಗಿದ ರೇಖೆಗಳು ಕಾಣಿಸುತ್ತಿತ್ತು....
ನಮ್ಮ ಶಾಲೆಯ ಛಾವಣಿಯಿಂದ ಬೀಳುತ್ತಿದ್ದ ನೀರು,ನಲ್ಲಿ ನೀರಿನಂತೆ ಕಾಣುತ್ತಿತ್ತು... ರಭಸದಿಂದ ಬಿದ್ದ ಛಾವಣಿ ನೀರು ಕೆಳಗೆ ಚಿಕ್ಕ ಚಿಕ್ಕ ತೆಗ್ಗುಗಳನ್ನು (pit) ಮಾಡಿರುತ್ತಿತ್ತು...ಮಳೆ ನಿಂತ ಕೂಡಲೇ,ಮನೆಗೆ ಹೋಗಲು ಶಿಕ್ಷಕರು ಹೇಳಿದರೆ...ಗಿಡಗಳ ಟೊಂಗೆಗಳನ್ನು ಅಲುಗಾಡಿಸಿ ಅದರಿಂದ ಬರುವ ನೀರಿನೊಂದಿಗೆ ಆಟ ತುಂಬಾ ಮಜವಿರುತ್ತಿತ್ತು.
ಮಳೆ ನಿಂತರೂ , ನಮ್ಮ ತರ್ಲೆಗಳು ಹೆಚ್ಚಾಗುತ್ತಿದ್ದವು..
ಕೆಂಪು ಮಣ್ಣಿನ ರಸ್ತೆಯಲ್ಲಿ ನಮ್ಮ ನಡಿಗೆ ಶುರು....
ಚಪ್ ! ಚಪ್!! ಚಪ್!!! ಅಂತಾ ಬೂಟುಗಾಲುಗಳನ್ನಿಡುತ್ತಾ , ಬೆನ್ನಿಗೆ ಹಾಕಿದ ಪಾಠಿಚೀಲದವರೆಗೂ ರಜ್ಜು (ಕೆಸರು) ಹಿಡಿಯುವಂತೆ ನಡೆಯುತ್ತಾ ಹೋಗುವುದು....ರಸ್ತೆ ಗುಂಡಿಗಳಲ್ಲಿ ನಿಂತ ನೀರಿನಲ್ಲಿ ಒಂದು ಹಾಳೆಯ ದೋಣಿ ಮಾಡಿ ಬಿಡದಿದ್ದರಂತೂ ನಮ್ಮ ಕಾಲುಗಳು ಮುಂದಕ್ಕೆ ಹೋಗುತ್ತಿರಲಿಲ್ಲ....
ಹಾಗೂ ಹೀಗೂ ಮನೆ ಸೇರಿದ ಮೇಲೆ ಅಮ್ಮ ಮಾಡಿಟ್ಟಿದ್ದ ಬಿಸಿ ಬಿಸಿ ಬಜ್ಜಿಯನ್ನು (ಪಕೋಡ) ಸವಿದು ಪುಸ್ತಕ ಹಿಡಿದು ಓದು ಬರಹ ಪ್ರಾರಂಭಿಸುತ್ತಿದ್ದೇವು....
ಈ ಎಲ್ಲ ಮೆಲುಕುಗಳನ್ನು ಹಾಕಿದಾಗ
ಮನ ನುಡಿಯುವುದು
" ಮತ್ತೆ ಬಾಲ್ಯ ಬರಬಾರದೆ " ಎಂದು.....
