Revati Patil

Tragedy Crime Others

4  

Revati Patil

Tragedy Crime Others

ರಾಜೀವನ ಕಥೆ-ವ್ಯಥೆ

ರಾಜೀವನ ಕಥೆ-ವ್ಯಥೆ

3 mins
463


ರಾಜೀವ್'ನಿಗೆ ತಾನು ಮಾಡಿದ್ದು ಎಂತಹ ದೊಡ್ಡ ತಪ್ಪು ಎನ್ನುವುದರ ಅರಿವು ಆ ಕ್ಷಣಕ್ಕೆ ಆಗಲಿಲ್ಲ. ಇನ್ನೂ ನಂಬಿಕೆಯ ಮೇಲೆ ಬದುಕುವ ಕಾಲ ಎಂದುಕೊಂಡಿರುವ ಅವನಿಗೆ ಈ ಕಾಲದ ತಂತ್ರಜ್ಞಾನದ ಬಗ್ಗೆ ಮರೆವು ಮೂಡಲು ಹೇಗೆ ಸಾಧ್ಯ? ಪ್ರೀತಿ ಎನ್ನುವ ಸೆಳೆತ ಎಲ್ಲ ತಂತ್ರಜ್ಞಾನಕ್ಕೂ ಮೀರಿದ್ದೇ?


ವಿದ್ಯಾರ್ಥಿ ದೆಸೆಯಿಂದಲೂ ರಾಜೀವ್ ಪ್ರತಿಭಾವಂತ. ಅತ್ಯುನ್ನತ ಕಂಪನಿಯಲ್ಲಿ ಕೆಲಸ ಕೂಡ ಸಿಕ್ಕಿತ್ತು. ಮನೆಯಲ್ಲಿ ಅಪ್ಪ, ಅಮ್ಮ, ಅಕ್ಕನ ಜೊತೆ ಕುಟುಂಬದ ಪ್ರೀತಿ ರಾಜೀವನಿಗೆ ಧಾರಾಳವಾಗಿಯೇ ಸಿಕ್ಕಿತ್ತು. ಅವರ ಕುಟುಂಬ, ಪ್ರೀತಿಯ ತಳಹದಿಯೇ ನಂಬಿಕೆ ಆಗಿತ್ತು. ಈ ನಂಬಿಕೆಯೇ ಮುಂದೆ ರಾಜೀವನಿಗೆ ಕುತ್ತು ತಂದೀತು ಎನ್ನುವ ಕಲ್ಪನೆ ಸ್ವತಃ ರಾಜೀವನಿಗೂ ಇರಲಿಲ್ಲ.


ರಾಜೀವ ಕೆಲಸಕ್ಕೆ ಸೇರಿ ಉತ್ತಮ ಸಂಬಳ ಪಡೆಯುತ್ತಿದ್ದ. ಸಹಜವಾಗಿ ಹೆತ್ತವರಿಗೆ ಹಿರಿ ಮಗಳ ಯೋಚನೆ ಬಂದಿತ್ತು. ಅಕ್ಕ, ತಮ್ಮನ ಮದುವೆಯನ್ನು ಒಂದೇ ಸಲಕ್ಕೆ ಒಂದೇ ಛತ್ರದಲ್ಲಿ ಮಾಡಿ ಮುಗಿಸುವ ಯೋಚನೆ ಬಂದಿದ್ದೆ ತಡ, ಮನೆ ಹಿರಿಯರು ರಜನಿಗೆ ಗಂಡುಗಳನ್ನು ನೋಡ ತೊಡಗಿದರು. ಅಂದುಕೊಂಡಂತೆ ಬೆಂಗಳೂರಿನ ವರನೊಬ್ಬ ರಜನಿಯನ್ನು ಮೆಚ್ಚಿದ. ಇತ್ತ ರಾಜೀವನಿಗೂ ರುಕ್ಮಿಣಿ ಎನ್ನುವ ಕನ್ಯೆ ಮೆಚ್ಚುಗೆಯಾಗಿತ್ತು.

‌ಮತ್ತೇಕೆ ವಿಳಂಬ? ಮಂಗಳವಾದ್ಯ ಮೊಳಗಿತ್ತು. ಒಂದೇ ಛತ್ರದಲ್ಲಿ ರಜನಿಯ ಮದುವೆ ರಾಕೇಶನ ಜೊತೆಗೆ, ರಾಜೀವನ ಮದುವೆ ರುಕ್ಮಿಣಿ ಜೊತೆ ನಡೆದೆ ಹೋಯಿತು. ಹೆತ್ತವರು ನಿಟ್ಟುಸಿರು ಬಿಟ್ಟಾಗಿತ್ತು. ಮಗಳು ಮನೆ ಬಿಟ್ಟು ಮತ್ತೊಂದು ಮನೆಯನ್ನು ಬೆಳಗಲಿಕ್ಕೆ ಹೋಗುತ್ತಿದ್ದಂತೆ, ಇತ್ತ ರುಕ್ಮಿಣಿಯೂ ಸೊಸೆಯಾಗಿ, ಹೆಂಡತಿಯಾಗಿ ರಾಜೀವನ ಮನೆಯನ್ನು ಬೆಳಗಲಿಕ್ಕೆ ಬಲಗಾಲಿಟ್ಟು ಬಂದಾಗಿತ್ತು. ರಾಜೀವನ ಜೀವನ ಸುಖವಾಗಿಯೇ ಸಾಗಿತ್ತು. ಇತ್ತ ಲಾಕ್ ಡೌನ್ ಆಗಿ ರಾಜೀವನಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಇದೇ ಅಲ್ಲವೇ ತಂತ್ರಜಾನದ ಅನುಕೂಲ. ಊರಿಗೆ ಊರೇ ಸದ್ದಿಲ್ಲದೇ ಮನೆಯೊಳಗೆ ಕೂತರೂ ಲಕ್ಷ ಲಕ್ಷ ದುಡಿಯುವ ರಾಜೀವ ಸದ್ದಿಲ್ಲದೇ ಮನೆಯಿಂದ ಕೆಲಸ ಮಾಡುತ್ತಿದ್ದ. ಕೊರೋನ ಸಹ ನಿಯಂತ್ರಣಕ್ಕೆ ಬರದ ಸಮಯವದು.


ಅತ್ತ ರಜನಿಯ ಗಂಡನಿಗೆ ಆರೋಗ್ಯ ತಪ್ಪಿ ಆಸ್ಪತ್ರೆ ಸೇರಿ ಪರೀಕ್ಷೆ ಮಾಡಿದಾಗ ತಿಳಿದಿದ್ದು ಕೊರೋನ ಪಾಸಿಟಿವ್ ಎಂದು.

ರಜನಿಗೆ ಭಯವಾಯಿತು. ಆಗಷ್ಟೇ ಮೂರು ತಿಂಗಳ ಗರ್ಭಿಣಿಯಾಗಿದ್ದ ರಜನಿಗೆ ಗಂಡ ಅನಾರೋಗ್ಯಕ್ಕೀಡಾಗಿದ್ದು ಅಧೈರ್ಯ ಉಂಟು ಮಾಡಿತ್ತು. ರಾಜೀವ ಸಹ ಅಕ್ಕನ ಜೊತೆ ಆಸ್ಪತ್ರೆಗೆ ಬಂದ. ರಾಜೇಶ್ ಮಾತ್ರ ತುಂಬಾ ಕೃಷವಾಗಿದ್ದ. ವೈರಾಣುಗಳ ದಾಳಿ ಶ್ವಾಸಕೋಶಕ್ಕೆ ಹಾನಿ ಮಾಡಿಯಾಗಿತ್ತು. ಯಾವ ದೈವಗಳು ರಾಜೇಶನನ್ನು ಉಳಿಸಲಿಲ್ಲ. ಮದುವೆಯಾಗಿ ಆರು ತಿಂಗಳು ಕಳೆಯುವ ಮುನ್ನವೇ ಮಗಳ ಮುತ್ತೈದೆತನ ಆರಿದ್ದು ನೋಡಿ ಹೆತ್ತವರಿಗೆ ಬದುಕೇ ಬೇಡವಾಗಿತ್ತು. ಅಲ್ಲದೇ ಮಗಳು ಗರ್ಭವತಿ ಬೇರೆ. ರಾಜೀವ ತನ್ನಕ್ಕನನ್ನು ತನ್ನ ಮನೆಯಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದ. ಇನ್ನೂ ಏಕಾಂತವಾಗಿಯೇ ಇರಬೇಕೆಂದು ಬಯಸುತ್ತಿದ್ದ ರುಕ್ಮಿಣಿಗೆ ರಜನಿಯ ಆಗಮನ ಅದೇಕೋ ಇಷ್ಟವಾಗಲಿಲ್ಲ. ಅಲ್ಲದೇ ಗರ್ಭಿಣಿ ಅಕ್ಕನ ಕಾಳಜಿಗಾಗಿ ರಾಜೀವ ಹೆಂಡತಿಗಿಂತ ಹೆಚ್ಚಿನ ಸಮಯ ಅಕ್ಕನಿಗೆ ಮೀಸಲಿಟ್ಟ. ದಿನೇ ದಿನೇ ರುಕ್ಮಿಣಿ, ರಾಜೀವನ ನಡುವೆ ಅಂತರ ಹೆಚ್ಚಾಗಿ ಮನಸ್ತಾಪ ಶುರುವಾದವು. ಅದೀಗ ಬೀದಿಗೂ ಬಂದಾಗಿತ್ತು. ರುಕ್ಮಿಣಿ ಯಾರ ಮಾತಿಗೂ ಕಿವಿಗೊಡಲಿಲ್ಲ, ತನ್ನ ಸಂಸಾರದ ಗುಟ್ಟನ್ನು ರಟ್ಟು ಮಾಡಿ ತನ್ನ ಗಂಡನಿಂದ ತನಗೆ ಸಂಸಾರದ ಪ್ರೀತಿ ಸಿಗುತ್ತಿಲ್ಲ, ಅದಕ್ಕೆಲ್ಲ ರಜನಿಯೇ ಕಾರಣ ಎಂದು ಬೊಬ್ಬಿಡತೊಡಗಿದಳು. ರಾಜೀವನ ತಾಳ್ಮೆಯ ಕಟ್ಟೆಯೊಡೆಯಿತು. ಮಾತಿಗೆ ಮಾತು ಬೆಳೆದು ಇತ್ತ ರುಕ್ಮಿಣಿಯೂ ರಾಜೀವನನ್ನು ತೊರೆದು ತವರು ಮನೆ ಸೇರಿದಳು. ರಾಜೀವ ಈಗ ಅಸಹಾಯಕನಾಗಿದ್ದ. ಅಸಹನೆ ಅವನಲ್ಲಿ ಹೆಚ್ಚಾಗಿತ್ತು. ತನ್ನ ಬೇಸರ ಹೇಳಿಕೊಳ್ಳಲು ಹೆಂಡತಿ ಇರಲಿಲ್ಲ, ಅಪ್ಪ ಅಮ್ಮನಿಗೆ ವಯಸ್ಸಾದ ಕಾರಣಕ್ಕೆ ಅವರೊಂದಿಗೂ ಹೇಳುವಂತಿರಲಿಲ್ಲ. ಅಕ್ಕನಿಗೆ ತನ್ನ ಬೇಸರ ಹೇಳಿದರೆ ಅದಕ್ಕೆಲ್ಲ ತಾನೇ ಕಾರಣವೆಂದು ಅಕ್ಕ ನೊಂದುಕೊಳ್ಳುತ್ತಾಳೆ ಎಂದು ಅರಿತಿದ್ದ ರಾಜೀವ ತನ್ನ ನೋವನ್ನು ತಾನೇ ನುಂಗತೊಡಗಿದ.


ರಾಜೀವ ಕೆಲಸ ಮುಗಿಸಿ ಲ್ಯಾಪ್ ಟಾಪ್'ನಲ್ಲಿ ಅದೇನನ್ನೋ ನೋಡುವಾಗ ಫೇಸ್ಬುಕ್'ನಲ್ಲಿ ಒಬ್ಬಳು ಸುಂದರಿಯ ಮೆಸ್ಸೇಜ್ ನೋಡಿದ. ಅವನಿಗಾಗಿಯೇ ಅವಳೊಂದು ಪ್ರೇಮಭರಿತ ಸಂದೇಶ ಕಳಿಸಿದ್ದ. ಪ್ರೀತಿ ಅರಸುತ್ತಿದ್ದ ರಾಜೀವನಿಗೆ ಅವಳ ಸಂದೇಶ ಅಮೃತವಾಯಿತು. ತಾನು ವಿವಾಹಿತ ಎನ್ನುವುದನ್ನು ಮರೆತು ಅವಳೊಂದಿಗೆ ಸ್ನೇಹ ಬೆಳೆಸಿದ. ದಿನದಿಂದ ದಿನಕ್ಕೆ ಅವರ ಸ್ನೇಹ ಗಾಢವಾಗಿ, ಸ್ನೇಹದ ಮುಂದಿನ ಹೆಜ್ಜೆಯಾಗಿ ಅವರಿಬ್ಬರು ಪ್ರೇಮಿಗಳಾದರು. ರಾಜೀವ ಪ್ರಾಮಾಣಿಕವಾಗಿ ಅವಳನ್ನು ನಂಬಿದ್ದ, ಪ್ರೀತಿಸಿದ್ದ. ಅವಳ ಚಿಕ್ಕ ನೋವಿಗೂ ರಾಜೀವ ಮರುಗುತ್ತಿದ್ದ. ಅವಳನ್ನು ನೋಡಲು ಅದೆಷ್ಟೋ ಸಲ ಹವಣಿಸಿದ್ದ. ಅವಳೋ ಖಿಲಾಡಿ, ತನ್ನ ಹೆಸರಿನ ಹೊರತಾಗಿ ತನ್ನ ಮುಖವನ್ನು ರಾಜೀವನಿಗೆ ತೋರಿಸಿರಲಿಲ್ಲ ಆ ಚತುರೆ!

ರಾಜೀವ ಸಹ ಅವಳನ್ನು ನಂಬಿದ್ದರಿಂದ ಮುಂದೊಂದು ದಿನ ಭೇಟಿಯಾದಾಗ ಅವಳನ್ನು ನೋಡಿದರಾಯಿತು ಎಂದುಕೊಂಡು ಸುಮ್ಮನಾಗಿದ್ದ. ಹೀಗೆ ಅವರಿಬ್ಬರೂ ತುಂಬಾ ಆಪ್ತರಾಗಿದ್ದರು. ಕೆಲವೊಮ್ಮೆ ಅವಳು ಮನೆ ಸಮಸ್ಯೆಯೆಂದು ಹೇಳಿಕೊಂಡು ರಾಜೀವನಿಂದ ಹಣಕಾಸಿನ ಸಹಾಯ ಪಡೆಯುತ್ತಿದ್ದಳು. ಇದು ದಿನೇ ದಿನೇ ಹೆಚ್ಚುತ್ತ ಹೋಯಿತು. ರಜನಿ ಬರುವುದು ಖಾತರಿ ಇರಲಿಲ್ಲ, ಹೀಗಾಗಿ ರಾಜೀವ ತನ್ನ ಫೇಸ್ಬುಕ್ ಪ್ರಿಯತಮೆಯನ್ನು ಮದುವೆಯಾಗಲು ಸಿದ್ಧನಾಗಿದ್ದ. ಆ ಬಗ್ಗೆ ಅವಳನ್ನು ಕೇಳಿದಾಗ ಅವಳು ಸದ್ಯಕ್ಕೆ ಬೇಡವೆಂದು ತಡೆಯುತ್ತಿದ್ದಳು. ತನಗಿನ್ನೂ ಜವಾಬ್ದಾರಿಗಳಿವೆ, ತಂಗಿಯ ಮದುವೆ ಮಾಡಿಯೇ ತಾನು ಮದುವೆಯಾಗಬೇಕು ಎಂದು ರಾಜೀವನ ಮುಂದೆ ಕಣ್ಣೀರಿನ ಸಂದೇಶ ಕಳಿಸಿದ್ದಳು. ಆಗಲೂ ರಾಜೀವ ಅವಳಿಗೆ ಲಕ್ಷ ಲಕ್ಷ ಹಣ ನೀಡಿದ್ದ. ಅವಳು ತಂತ್ರಜ್ಞಾನದ ಲಾಭ ಪಡೆದು ಸುಳ್ಳು ಅಡ್ರೆಸ್ಸ್ ನೀಡಿ ತನ್ನ ಅಸ್ತಿತ್ವ ಸಾಬೀತು ಪಡಿಸಿದ್ದಳು.


ಒಂದು ದಿನ ಇದ್ದಕ್ಕಿದಂತೆ ಅವಳಿಂದ ರಾಜೀವನಿಗೆ ಫೋನ್ ಬಂದಿತ್ತು. ತನೊಂದು ಹೊಸ app (ಆಪ್ ) ರಚಿಸಿದ್ದೇನೆ. ಇದರಿಂದ ಮುಂದೆ ತಾನು ಕೋಟಿಗಟ್ಟಲೆ ದುಡಿಯಬಹುದು. App ಗಳು ಹೆಚ್ಚುಹೆಚ್ಚು ಡೌನ್ಲೋಡ್ ಆದಷ್ಟು ತಾವು ಬೆಳೆಯಬಹುದು, ಅದೆಲ್ಲ ಹಣವೂ ನಿನ್ನದೇ ರಾಜೀವ. ಈಗಾಗಲೇ ಈ app ಗಾಗಿ ನಮ್ಮಿಬ್ಬರ ಮೊಬೈಲ್ ಸಂಖ್ಯೆ ಕೊಟ್ಟಿರುವೆ ಎಂದು ಸೋಗು ಹಾಕಿದ್ದಳು. ಇದನ್ನೇ ನಂಬಿದ ರಾಜೀವ ಅದೆಂತಹ app ಎನ್ನುವುದನ್ನು ಕೇಳುವ ಬದಲು ಅದಕ್ಕಾಗಿ ತಾನೇನು ಮಾಡಬೇಕೆಂದ. ಅಷ್ಟೇ ತಡ ಅವಳು ಅವನಿಗೆ "ನಿನ್ನ ಫೋನಿಗೆ ಬರುವ ಓಟಿಪಿ (O.T. P) ಹೇಳು ಎಂದಳು.


ಒಂದೇ ಕ್ಷಣದ ನಂಬಿಕೆ ಅವನನ್ನು ಎಲ್ಲ ಕಳೆದುಕೊಳ್ಳುವಂತೆ ಮಾಡಿತ್ತು. ತಾನು aa app ನ ಪಾಲುದಾರ ಎಂದುಕೊಂಡು ತನ್ನ ಸಂಖ್ಯೆ ಅವಳು ನೀಡಿದ್ದು ನಿಜವೆಂದುಕೊಂಡು ಓಟಿಪಿ ಹೇಳಿಯೇಬಿಟ್ಟ. ಕ್ಷಣರ್ಧದಲ್ಲಿ ರಾಜೀವನ ಅಕೌಂಟ್ಸ್ ಬ್ಯಾಲೆನ್ಸ್ ಸೊನ್ನೆಯಾಗಿತ್ತು. ಮರುಕ್ಷಣವೇ ಅವಳ ಫೋನ್ ಸ್ವಿಚ್ ಆಫ್ ಆಗಿತ್ತು. ಫೇಸ್ಬುಕ್'ನಲ್ಲಿ ಅವಳ ಹೆಸರಿನ ಖಾತೆಯೂ ಇರದಾಗಿತ್ತು. ರಾಜೀವ ಎಷ್ಟೇ ಪ್ರಯತ್ನಿಸಿದರೂ ಅವಳ ಸುಳಿವೇ ಸಿಗಲಿಲ್ಲ. ಮರ್ಯಾದೆಗೆ ಅಂಜಿ ರಾಜೀವ ಸುಮ್ಮನಾದರೂ ಅಕ್ಕನ ಬಾಣಂತನಕ್ಕೆ ದುಡ್ಡು ಬೇಕಿತ್ತು. ಕೊನೆಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೋದ ರಾಜೀವ.


‌ಇಂತಹ ಪ್ರಕರಣಗಳು ಸೈಬರ್ ಕ್ರೈಮ್'ದಡಿ ಬರುತ್ತವೆ. ಪೊಲೀಸರು ಈ ಕೇಸನ್ನು ಪಟ್ಟೆ ಹಚ್ಚಿದಾಗ ತಿಳಿದಿದ್ದು ಅದು ಒಬ್ಬ ಹುಡುಗನ ಅಕೌಂಟ್. ಈ ತಂತ್ರಜ್ಞಾನ ಎಷ್ಟು ವರವೋ, ಅಷ್ಟೇ ಶಾಪವೂ ಕೂಡ. ಎಲ್ಲೋ ಇರುವ ಮನುಷ್ಯರು ಇನ್ನೆಲ್ಲೋ ಇರುವುದಾಗಿ ಹೇಳಿ, ಹುಡುಗಿಯೆಂದು (ಹುಡುಗ ಎಂದು ಸಹ )ಸುಳ್ಳು ಹೇಳಿ ಈ ತರ ಮೋಸ ಮಾಡುವುದಾಗಿ ಪೊಲೀಸರು ರಾಜೀವನಿಗೆ ತಿಳಿಸಿದರು. ಅಲ್ಲದೇ ಸ್ವತಃ ಬ್ಯಾಂಕಿನವರೇ ಕರೆ ಮಾಡಿದರೂ ಓಟಿಪಿ ಹೇಳದಿರಿ. ಅದೆಂದೂ ನಿಮ್ಮೊಬ್ಬರದೇ ಸ್ವತ್ತು, ವಿದ್ಯಾವಂತರೇ ಇಂತಹ ಮೋಸಕ್ಕೆ ಸಿಲುಕುತ್ತಿರುವುದು ಖೇದಕರ ಎಂದಾಗ ರಾಜೀವ ತಲೆ ತಗ್ಗಿಸಿದ.


Rate this content
Log in

Similar kannada story from Tragedy