Revati Patil

Classics Inspirational Children

4.4  

Revati Patil

Classics Inspirational Children

ಅಮ್ಮ

ಅಮ್ಮ

2 mins
339


ಅಮ್ಮ ಎಂದಿಗೂ ಅಮ್ಮನೇ. ಅವಳ ಸ್ಥಾನ ತುಂಬಲು, ಅವಳ ಪಾತ್ರ ನಿಭಾಯಿಸಲು ಮತ್ಯಾರಿಗೂ ಸಾಧ್ಯವಿಲ್ಲ. ಪ್ರತಿಯೊರ್ವರ ಮನೆಯಲ್ಲೂ ಅಮ್ಮನ ಹೆಜ್ಜೆ ಸದ್ದಿರಲೇಬೇಕು. ದುರದೃಷ್ಟವಶಾತ್ ಕೆಲವರಿಗೆ ಚಿಕ್ಕಂದಿನಲ್ಲೇ ಅಮ್ಮನ ವಿಯೋಗವಾಗಿ, ಅಮ್ಮನ ಪ್ರೀತಿಯಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಅದಕ್ಕಾಗಿ ಯಾರನ್ನು ತಾನೇ ಹಳಿಯಬಹುದು?

ಆದರೆ ಒಂದು ಮಾತು ಸತ್ಯ. ಹೆತ್ತವಳು ಮಾತ್ರವೇ ಅಮ್ಮ ಆಗುತ್ತಾಳೆ ಎನ್ನಲಿಕ್ಕಾಗದು. ಅಮ್ಮನಿಲ್ಲದಿರುವವರಿಗೆ ಅಮ್ಮನಾಗಲು ಮತ್ತೊಬ್ಬ ಸ್ತ್ರೀ ಇದ್ದೇ ಇರುತ್ತಾಳೆ. ಹೀಗೆ ಮಕ್ಕಳನ್ನು ಹೆರದೆಯು ಅಮ್ಮನಾಗಿದ್ದಾರೆ. ಅವರ ಪ್ರೀತಿ, ಮಮತೆ, ವಿಶ್ವಾಸ ಹೆತ್ತ ತಾಯಿಗಿಂತ ಕಡಿಮೆಯಿರುವುದಿಲ್ಲ. ನನ್ನ ಸೋದರತ್ತೆಯ ಕಥೆಯನ್ನೊಮ್ಮೆ ನಿಮಗೆ ಹೇಳಬೇಕು.


ಸುಮಾರು ವರ್ಷಗಳ ಹಿಂದೆ ನಡೆದದ್ದು. ನಾನು ಚಿಕ್ಕವಳಿದ್ದೆ. ನಮ್ಮ ಸೋದರತ್ತೆಗೆ (ನನ್ನ ಅಜ್ಜಿಯ ತಂಗಿ ಮಗಳು) ಅನಾರೋಗ್ಯವಾಗಿ ನಾನು ಅಪ್ಪಾಜಿ ಅಮ್ಮ ಅವರ ಊರಿಗೆ ಹೋಗಿದ್ದೆವು. ನನಗೆ ಅಲ್ಲಿ ನಡೆಯುತ್ತಿದ್ದಿದ್ದು ಸ್ಪಷ್ಟವಾಗಿ ತಿಳಿಯಲಿಲ್ಲ. ಅತ್ತೆ ಮಲಗಿದ್ದಳು. ಅವಳ ಸ್ವಂತ ತಂಗಿ, ಅಣ್ಣಂದಿರು (ನನ್ನ ಚಿಕ್ಕಪ್ಪಂದಿರು) ಅಜ್ಜಿ, ಅಜ್ಜ ಅವಳ ಬಳಿಯಲ್ಲಿ ಕುಳಿತಿದ್ದರು. ನಾನು ಅಪ್ಪಾಜಿ ಅಮ್ಮ ಹೋದೋಡನೆ ನನ್ನ ಅಜ್ಜಿ ಅಳುತ್ತಿದ್ದರು. ಅತ್ತೆ ಸುಮ್ಮನೇ ಮಲಗಿದ್ದರು. ಅವರು ತೀರ ಸುಸ್ತಾದವರಂತೆ ಕಾಣುತ್ತಿದ್ದರು. ನನಗೆ ಅವರ ಬಳಿ ಹೋಗಲು ಭಯವಾಗಿ ಪಕ್ಕದಲ್ಲೇ ಜೋಲಿಯಲ್ಲಿದ್ದ ಮಗುವನ್ನೊಮ್ಮೆ ನೋಡಿ ಗಲ್ಲ ಮುಟ್ಟಿದೆ. ನಮ್ಮ ಮನೆಯಲ್ಲೂ ಇಂತಹ ಪಾಪು ಇರಬೇಕು ಎಂದು ಅನಿಸಿತು. ಮನೆಯಲ್ಲಿ ವಾತಾವರಣ ಮೌನವಾಗಿಯೇ ಇತ್ತು. ನನಗೆ ಆ ವಯಸ್ಸಿಗೆ ಅತ್ತೆಗೇನಾಗಿತ್ತು ಎಂದು ತಿಳಿಯಲಿಲ್ಲ. ಆದರೆ ದೇವರಿದ್ದಾನೆ, ಭಯ ಪಡಬೇಡಿ ಎಂದು ಅಪ್ಪಾಜಿ ಹೇಳಿದ್ದು ಕೇಳಿತ್ತು. ಅತ್ತೆಯ ಮದುವೆಯಾಗಿ ತುಂಬ ವರ್ಷಗಳೇನು ಆಗಿರಲಿಲ್ಲ. ನನ್ನ ಚಿಕ್ಕ ಅತ್ತೆ ತನ್ನ ಅಕ್ಕನ ಬಗ್ಗೆ ತುಂಬ ಕಾಳಜಿ ವಹಿಸಿದ್ದಳು. ಅವಳಿಗಿನ್ನು ಮದುವೆಯಾಗಿರಲಿಲ್ಲ. ಮಾರನೇ ದಿನ ನಾವು ಊರಿಗೆ ಬಂದೆವು. ಮುಂದೆ ಕೆಲ ದಿನಗಳಲ್ಲೇ ಅತ್ತೆ ಹೋಗಿಬಿಟ್ಟರು. ಜೋಲಿಯಲ್ಲಿದ್ದ ತನ್ನ ಚೊಚ್ಚಲ ಹಸುಗೂಸನ್ನು ಬಿಟ್ಟು ಅತ್ತೆ ಹೋಗಿ ಬಿಟ್ಟಿದ್ದಳು. ನನಗೆ ಆಗ ಅನಿಸಿತು ನಾವು ಹೋದಾಗ ಅತ್ತೆಯೇಕೆ ಜಾಸ್ತಿ ಮಾತಾಡದೆ ಕಲ್ಲಿನಂತೆ ಮಲಗಿದ್ದರೆಂದು.


ನಮ್ಮನ್ನು ಅತ್ತೆಯ ಅಂತ್ಯಸಂಸ್ಕಾರಕ್ಕೆ ಕರೆದೊಯ್ಯಲಿಲ್ಲ ಅನಿಸುತ್ತೆ. (ಸರಿಯಾಗಿ ನೆನಪಿಲ್ಲ) ನಂತರ ಕೆಲ ದಿನಗಳವರೆಗೂ ಮನೆಯಲ್ಲಿ ಬರಿ ಚಿಕ್ಕ ಕಂದನದೇ ಮಾತು. ಯಾರನ್ನೂ ದೂಷಿಸುವಂತಿರಲಿಲ್ಲ. ದೇವರ ಆಟದಲ್ಲಿ ನಿಜಕ್ಕೂ ಅನಾಥವಾಗಿದ್ದು ಆ ಕಂದ ಮಾತ್ರ. ಆದರೆ ಚಿಕ್ಕ ಅತ್ತೆ ತನ್ನಕ್ಕನ ಮಗನನ್ನು ತನ್ನ ಸ್ವಂತ ಮಗನಂತೆ ಜೋಪಾನ ಮಾಡತೊಡಗಿದಳು. ಹೀಗೆ ಸ್ವಲ್ಪ ದಿನಗಳ ನಂತರ ದೊಡ್ಡ ಅತ್ತೆಯ ಗಂಡನ ಮನೆಯವರು ಚಿಕ್ಕ ಅತ್ತೆಯನ್ನೇ ತಮ್ಮ ಮನೆಗೆ ಸೊಸೆ ಮಾಡಿಕೊಳ್ಳಲು ಕೇಳಿದರು. ಅವರಿಗೂ ಅನಿಸಿತ್ತೇನೋ ತಮ್ಮ ಮಗನಿಗೆ ಮತ್ತೊಂದು ಮದುವೆ ಮಾಡಿದರೆ ಬೇರೊಬ್ಬರು ಈ ಕಂದನನ್ನು ಸ್ವಂತ ಮಗನಂತೆ ಕಾಣಬಲ್ಲರೆ ಎಂದು. ಎಲ್ಲರ ಸಮ್ಮತಿಯೊಂದಿಗೆ ಅಕ್ಕನ ಮನೆಗೆ ಚಿಕ್ಕ ಅತ್ತೆ ಸೊಸೆಯಾಗಿ ಹೋದಳು. ಚಿಕ್ಕ ಅತ್ತೆ ಮೊದಲೇ ಹೇಳಿದ್ದಳು, ತಾನು ಮದುವೆಯಾದರೆ ತನಗೆ ಸ್ವಂತ ಮಕ್ಕಳು ಬೇಡವೆಂದು. ಅದರಂತೆ ನಡೆದುಕೊಂಡಳು ಕೂಡ. ಅದಕ್ಕೆ ಅವರ ಪತಿಯು ಒಪ್ಪಿದ್ದರು. ಇಂದಿಗೂ ಅತ್ತೆಗೆ ಮಕ್ಕಳಿಲ್ಲ. ಅಕ್ಕನ ಮಗನನ್ನೇ ತನ್ನ ಸ್ವಂತ ಮಗನನ್ನಾಗಿ ಬೆಳೆಸಿದಳು. ಅವನು ಇವರನ್ನೇ ತನ್ನ ಅಮ್ಮನೆಂದು ತಿಳಿದಿದ್ದಾನೆ. ತಿಳಿಯುವುದೇನಿದೆ ಅವಳು ಅಮ್ಮನೇ ತಾನೇ? ಓದಿಸಿದ್ದಾಳೆ, ಪೋಷಿಸಿದ್ದಾಳೆ, ಮುದ್ದಿಸಿದ್ದಾಳೆ, ಎಲ್ಲದಕ್ಕೂ ಹೆಚ್ಚಾಗಿ ಯಾವೊಂದೂ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದಂತೆ ಬೆಳೆಸಿದ್ದಾಳೆ. ಈಗ ಅವನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮುಂದಿನ ತಿಂಗಳು ಅವನಿಗೆ ಮದುವೆಯು ನಿಗದಿ ಆಗಿದೆ. ಮನೆಯವರ ಒಪ್ಪಿಗೆ ಮೇರೆಗೆ ಅನ್ಯ ರಾಜ್ಯದ ಹುಡುಗಿಯನ್ನು ವರಿಸಲಿದ್ದಾನೆ. ನಾನು ಕೇಳಿಕೊಳ್ಳುವುದಿಷ್ಟೇ, ತನಗೆ ಸ್ವಂತ ಮಕ್ಕಳಾದರೆ ಈ ಮಗನ ಮೇಲೆ ಪ್ರೀತಿ ಕಡಿಮೆ ಆಗಬಹುದೇನೋ ಎಂಬ ಭ್ರಮೆಯಿಂದ ನಮ್ಮತ್ತೆ ತನಗೆ ಸ್ವಂತ ಮಕ್ಕಳೇ ಬೇಡ ಎಂದಿದ್ದಳು. ಮುಂದೆ ವೃದ್ದಾಪ್ಯದಲ್ಲಿ ಈ ಮಗನು ತನ್ನ ತಾಯಿಯನ್ನು ಇನ್ನಷ್ಟು ಆರೈಕೆ ಕಾಳಜಿ ಮಾಡಿ ಅವಳ ಋಣವನ್ನು ಕೊಂಚವಾದರೂ ತೀರಿಸಬೇಕು. ತಾಯಿಯ ಋಣ ತೀರಿಸಲಾಗದು ಎನ್ನುವುದೇನೋ ನಿಜ, ಆದರೆ ಹೆತ್ತ ತಾಯಿಗಿಂತ ಸಾಕಿದ ತಾಯಿ ಒಂದು ಕೈ ಮೇಲಲ್ಲವೇ? ಅವಳಿಗೆ ಮುಂದೆ ತನಗೆ "ಸ್ವಂತ ಮಕ್ಕಳಿದ್ದಿದ್ದರೆ " ಎಂಬ ಭಾವನೆ ಬರದಂತೆ ನೋಡಿಕೊಂಡರೆ ಅದೇ ಈ ಮಗ ಆ ತಾಯಿಗೆ ನೀಡುವ ದೊಡ್ಡ ಉಡುಗೊರೆ. ಏಕೆಂದರೆ ಅಮ್ಮ ಎನ್ನುವುದು ಒಂದು ಪದವಲ್ಲ, ಅದೊಂದು ಅನುಭೂತಿ. ಅಮ್ಮನಿಲ್ಲದಿದ್ದರೆ ಇವತ್ತು ಆ ಮಗನ ಪರಿಸ್ಥಿತಿ ಇಷ್ಟು ಉತ್ತಮವಾಗಿರುತ್ತಿತ್ತೆ? ಗೊತ್ತಿಲ್ಲ. ಅಮ್ಮನಿಲ್ಲದೇ ಎಲ್ಲ ಇದ್ದರೂ ಅದು ಅಪೂರ್ಣ. ಅಮ್ಮನಿಗೆ ಅಮ್ಮನೇ ಸಾಟಿ.

ನೀವ್ ಏನಂತೀರಿ?


Rate this content
Log in

Similar kannada story from Classics