ಅಮ್ಮನಂತಿರುವ ಅಪ್ಪನಿಗೆ 'ನಾನು ಅಮ್ಮನಾಗುತ್ತಿದ್ದೇನೆ' ಎಂದು ಹೇಳಿದ ಕ್ಷಣ.
ಅಮ್ಮನಂತಿರುವ ಅಪ್ಪನಿಗೆ 'ನಾನು ಅಮ್ಮನಾಗುತ್ತಿದ್ದೇನೆ' ಎಂದು ಹೇಳಿದ ಕ್ಷಣ.
![](https://cdn.storymirror.com/static/1pximage.jpeg)
![](https://cdn.storymirror.com/static/1pximage.jpeg)
ತಾಯಿಯನ್ನು ನೋಡುತ್ತ ಬೆಳೆದ ನಮಗೆ ತಾಯ್ತನದ ಸ್ವಂತ ಅನುಭವ ಆದಾಗಲೇ ನಮ್ಮ ತಾಯಿಯ ಬಗ್ಗೆ ಅರಿವಾಗುವುದು.
ನೋಡಲು ಅಮ್ಮನ ಪಾತ್ರ ಸುಲಭ ಎನಿಸಬಹುದು, ನಮ್ಮಂತೆ ಓದುವ, ಬರೆಯುವ ಗೋಜಿಲ್ಲ ಎನಿಸಬಹುದು. ಆದರೂ ಅಮ್ಮನೂ ಸಹ ಅನೇಕ ಪರೀಕ್ಷೆಗಳನ್ನು ಎದುರಿಸುತ್ತಾಳೆ ಅದೂ ಸಹ ಮುಂಚಿತವಾಗಿ ತಯಾರಾಗದೆಯೇ! ಇಂತಹದೇ ಒಂದು ಹುದ್ದೆಗಾಗಿ ನಾನೂ ಅದೆಷ್ಟೋ ದಿನಗಳಿಂದ ಕಾಯುತ್ತಿದ್ದೆ. ನಾಲ್ಕು ವರ್ಷಗಳು ಮಕ್ಕಳಿಲ್ಲದೇ ಜೀವನ ಬರಡು ಎನ್ನುವುದನ್ನು ಅರಿತಿದ್ದೆ. ಅಕ್ಕ - ತಂಗಿಯರ ಮಕ್ಕಳನ್ನು ಕಂಡಾಗ ಎಷ್ಟು ಪ್ರೀತಿ ಕೊಟ್ಟರೂ ನನ್ನದೇ ರಕ್ತ ಹಂಚಿಕೊಂಡು ಹುಟ್ಟುವ, ನನ್ನದೇ ಸ್ವಂತ ಕುಡಿಯನ್ನು ಆಲಂಗಿಸುವ, ಮುದ್ದಿಸುವ, ಕಂದನ ಕಿರುಬೆರಳನ್ನು ನನ್ನ ಅಂಗೈಯಲ್ಲಿ ಬಚ್ಚಿಟ್ಟುಕೊಳ್ಳುವ ಅದಮ್ಯ ಆಸೆ ನನ್ನಲ್ಲಿ ಇತ್ತೇ ಇತ್ತು.
ಮದುವೆಯಾಗಿ ನಾಲ್ಕು ವರ್ಷ ಕಳೆದಿತ್ತು. ಯಥಾ ಪ್ರಕಾರ ದಿನ ಕಳೆಯುವುದು ಅಭ್ಯಾಸವಾಗಿತ್ತು. ಗಂಡ ಹೆಂಡತಿ ಇಬ್ಬರ ಹೊರತು ಮನೆಯಲ್ಲಿ ಮತ್ತೊಬ್ಬರ ಕೂಗಿಲ್ಲ. ಅಳಲು, ನಗಲು, ಮನೆ ತುಂಬ ಓಡಾಡಲು ಇನ್ನೊಬ್ಬರ ಸುಳಿವಿಲ್ಲ. ಅಮ್ಮ ಆಗುವೇನೇ ಎನ್ನುವುದೊಂದೇ ಜೀವನದ ದೊಡ್ಡ ಪ್ರಶ್ನೆಯಾಗಿತ್ತು. ಮದುವೆಯಾಗಿ ವರ್ಷದೊಳಗೆ ಅಮ್ಮನಾಗುವವರಿಗೂ, ಮಕ್ಕಳು ಮಕ್ಕಳು ಎಂದು ಹಪ ಹಪಿಸಿ ಅಮ್ಮನಾಗುವವರಿಗೂ ವ್ಯತ್ಯಾಸವಿದೆ. ಅಪಾರ್ಥ ಬೇಡ, ಅಮ್ಮಂದಿರಲ್ಲಿ ವ್ಯತ್ಯಾಸವಿಲ್ಲ, ಆದರೆ ತಾಯ್ತನದ ಭಾಗ್ಯ ತಡವಾಗಿ ಪಡೆಯುವ ಅಮ್ಮಂದಿರ ಮನಸ್ಸು ಅದೆಷ್ಟೋ ಕೊರಗುಗಳ ತವರು.
ಗುಡ್ ನ್ಯೂಸ್ ಯಾವಾಗ್ರೀ ಅಂತ ಯಾರಾದ್ರೂ ಕೇಳಿದರೆ ಮನಸಲ್ಲಿ ಮುಜುಗರ ಪಟ್ಟುಕೊಳ್ಳುತ್ತ 'ಹೇಳೋಣಾ, ಹೇಳೋಣಾ' ಎನ್ನುತ್ತಿದ್ದೆ. ಡಿಸೆಂಬರ್ ತಿಂಗಳು ಮುಟ್ಟು ಮಿಸ್ ಆಗಿತ್ತು. 2016 ಡಿಸೆಂಬರ್ 23 ರಂದು ಮನೆಯಲ್ಲೇ ಪ್ರೆಗ್ನೆನ್ಸಿ ಕಿಟ್ ಮೂಲಕ ಪರೀಕ್ಷೆ ಮಾಡಿಕೊಂಡೆ. ಒಂದು ಗುಲಾಬಿ ಗೆರೆಯಿಂದ ಇನ್ನೊಂದು ಗುಲಾಬಿ ಗೆರೆ ಮೂಡುವ ಒಂದೆರಡು ಸೆಕೆಂಡುಗಳ ಅಂತರದಲ್ಲಿ ನನಗೆ ತಲೆತುಂಬ ಸಾವಿರ ಯೋಚನೆಗಳು. ಇದು ನೆಗೆಟಿವ್ ಬಂದುಬಿಟ್ಟರೆ? ಈ ಪಿಂಕ್ ಲೈನ್ ಮೂಡದಿದ್ದರೆ? ಎಂದು ಅಂದುಕೊಳ್ಳುವಾಗಲೇ 'ಎರಡು ಗೆರೆಗಳು' ನನ್ನೆಲ್ಲ ಪ್ರಶ್ನೆಗಳ ಉತ್ತರವಾಗಿ ನನ್ನೆದುರು ನಿಂತಿತ್ತು. ಸ್ವರ್ಗಕ್ಕೆ ಮೂರು ಅಲ್ಲಲ್ಲಾ ಒಂದೇ ಗೇಣಿತ್ತು. ಖಾತರಿಯಾಗಿತ್ತು ಅಮ್ಮನಾಗಿದ್ದೇನೆಂದು. ಗಂಡ, ಅಣ್ಣನ ಎದುರು ಹೇಳಿಯಾಗಿತ್ತು. ಅಮ್ಮನಿಗೆ ಹೇಳಬೇಕು. ಸಂತೋಷ ಅಂದು ಅಳುವಿನ ರೂಪದಲ್ಲಿ ಹೊರಹೊಮ್ಮಿತು. ಫೋನಾಯಿಸಿದೆ. ಅಪ್ಪಾಜಿ ಧ್ವನಿ ಕೇಳಿತು "ಅವ್ವಾ ಎಲ್ರಿ" ಅಂದೆ.
ಏನೋ ಫಂಕ್ಷನ್ ಅಂತ ಬೇರೊಂದು ಊರಿಗೆ ಬಂದಿದ್ದೇವೆ ಯಾಕೆ ಏನಾಯ್ತು, ಹುಷಾರಾಗಿದಿ ಅಲ್ವಾ? ಅಂತ ಅಪ್ಪಾಜಿ ಕೇಳಿದಾಗ ನಾನು ಅತ್ತುಬಿಟ್ಟೆ.
'ಏನಾದ್ರೂ ಸಮಸ್ಯೆನಾ? ಏನಂತ ಹೇಳವಾ, ಅತ್ರ ಹೆಂಗ್ ಗೊತ್ತಾಗ್ತತಿ
' ಎಂದರು.
ಅವ್ವನ ಹತ್ರ ಮಾತಾಡ್ಬೇಕಿತ್ತು ಅಪ್ಪಾಜಿ ಅಂದೆ. ಅಪ್ಪಾಜಿಗೆ ಕೋಪ ಉಕ್ಕಿತು.
ಅವಳಿಗೆ ಫೋನ್ ಕೊಡ್ತಿನಿ ನಿನಗೇನಾಯ್ತು ಅಂತ ಹೇಳ್ವಾ ರೇವತಿ'
'ಕಾವೇರಿಗೆ ಡೆಲಿವರಿ ಆದ್ಮೇಲೆ 4 ತಿಂಗಳ ಕಂಪನಿ ಕೊಡಾಕ್ ನಾನೂ ರೆಡಿ ಆಗೇನ್ರಿ' (ನನ್ನ ತಂಗಿ 20 ದಿನಗಳ ಹಿಂದೆಯಷ್ಟೇ ಗರ್ಭಿಣಿ ಎಂದು ತಿಳಿದಿತ್ತು)
' ------------------ ' (ಮೌನ)
'ಅಪ್ಪಾಜಿ, ಅಪ್ಪಾಜಿ ಮಾತಾಡ್ರಿ'
'ಇಲ್ಲವಾ ಮಾತಾಡಕ್ ಏನೂ ಇಲ್ಲಾ, ಅಂತೂ ದೇವರು ಕಣ್ ಬಿಟ್ಟಾ. ಎಲ್ಲಾ ಮಕ್ಕಳ ಹೊಟ್ಯಾಗ ಮಮ್ಮಕ್ಕಳನ್ನ ಕಾಣಬೇಕು ಅಂತ ಆಸೆ ಪಟ್ಟಿದ್ದೆ. ಅರಾಮ್ ಇರುವಾ, ವಜ್ಜಿ (ಭಾರ) ಎತ್ತೋದೆಲ್ಲ ಮಾಡಬ್ಯಾಡ, ಮೆಟ್ಟಿಲು ಹತ್ತೋದೆಲ್ಲ ಬ್ಯಾಡ. ಹೊಟ್ಟಿತುಂಬ ಉಣ್ಣು. ಅಕಿ (ಆಕೆ, ನನ್ನ ತಾಯಿ) ಬಂದಮ್ಯಾಲೆ ಹೇಳ್ತಿನಿ. ಅರಾಮಿರುವಾ '
ನಾನು ಅಪ್ಪಾಜಿಯ ಪೂರ್ತಿ ಮಾತು ಮುಗಿಯುವವರೆಗೂ ಅಳುತ್ತಲೇ ಇದ್ದೆ. ಅಷ್ಟೇಕೆ ಅತ್ತೆ ಎಂದು ಈಗಲೂ ಗೊತ್ತಿಲ್ಲ. ಅಮ್ಮನಿಗೆ ಮೊದಲು ಹೇಳಬೇಕೆನ್ನುವ ಆಸೆ ಹಾಗೇ ಉಳಿದರೂ ಅಮ್ಮನಂತಿದ್ದ ಅಪ್ಪನಿಗೆ ವಿಷಯ ತಿಳಿಸಿದ್ದು ಖುಷಿ ನೀಡಿತ್ತು. ಸಂಜೆ ನಾಲ್ಕುವರೆ ಮೇಲೆ ಫೋನಿನಲ್ಲಿ ಅಮ್ಮ ಸಿಕ್ಕಳು.
ಹಲೋ ಎಂದೆ 'ನಿಮ್ಮ ಅಪ್ಪಾಜಿ ಫೋನ್ ಮಾಡು ಅಂದ್ರು. ಯಾಕ್ವಾ, ಏನಾತು ರೇವು?
'ಮದ್ಲ ನಿಂಗ ಹೇಳ್ಬೇಕ್ ಅಂತ ಫೋನ್ ಮಾಡಿದ್ದೆ. ನೀ ಇರ್ಲಿಲ್ಲ'
'ಈಗ ಮತ್ ಹೇಳು '
'ಕಾವೇರಿ, ಶ್ರೀ ಇಬ್ರು ಚಿಕ್ಕಮ್ಮ, ದೊಡಮ್ಮಾ ಆಗಾಕತ್ತಾರಾ, ಅಪ್ಪಾಜಿ ನೀನು ಅಜ್ಜಾ-ಅಜ್ಜಿ ಆಗಿರಿ'
'ಹುಂ ನಿಮ್ಮ ಅಪ್ಪಾಜಿ ಹೇಳಿದ್ರು. ಬಾಳ್ ದಿನಕ್ಕ ಖುಷಿ ಸುದ್ದಿ ಹೇಳಿದಿ. ಹುಷಾರಾಗಿರು, ಮುಂದಿನವಾರ ಬೆಂಗಳೂರಿಗೆ ಬರ್ತವಿ'
'ಸ್ವಲ್ಪ ಹೆದರಿಕಿ ಅನ್ಸಾಕತ್ತತಿ, ಏನರ ಆದ್ರ ಅಂತ ಭಯ ಆಗ್ತತಿ'
'ಹುಚ್ಚಿ, ಎಂತಾ ಭಯ. ದೇವರ ನೆನೆಸ್ಕೊ ಹೊಟ್ಟಿತುಂಬ ಉಣ್ಣು, ಕಣ್ಣುತುಂಬ ನಿದ್ದಿ ಮಾಡು.'
ಹೀಗೆ ಸಂಭಾಷಣೆ ಮುಗಿದಿತ್ತು. ಅಂದುಕೊಂಡಂತೆ ಯಾವುದೇ ತೊಂದರೆ ಆಗದೇ 2017 ಸೆಪ್ಟೆಂಬರ್ 2ರಂದು ಮಡಿಲು ತುಂಬಿಕೊಂಡೆ. ಹೆಣ್ಣು ಮಗಳು ಜನಿಸಿತು. ಮತ್ತೊಮ್ಮೆ ನಾನೇ ಹುಟ್ಟಿದ ಅನುಭವ. ಇಷ್ಟು ದಿನಗಳ ಮೇಲೆ ನಮ್ಮನ್ನು ಪೋಷಕರನ್ನಾಗಿ ಮಾಡಿದ ಮಗಳಿಗೆ ಯಾವುದೇ ಪಂಡಿತ, ಜೋತಿಷಿಗಳ ಬಳಿ ಹೋಗದೇ ದೇವರ ಹೆಸರಿಡಬೇಕೆಂದು "ವೈಷ್ಣವಿ" ಎಂದು ಆಸ್ಪತ್ರೆಯಲ್ಲೇ ಕರೆದೆ.
ಆಸ್ಪತ್ರೆಯ ಕೋಣೆಯಲ್ಲಿದ್ದ ನನ್ನ ಅಜ್ಜಿ, ನನ್ನ ಅಮ್ಮ, ಹೊಸದಾಗಿ ಅಮ್ಮನಾಗಿದ್ದ ನಾನು, ನನ್ನ ಮಗಳು ನನಗೆ ತಾಯ್ತನದ ವಿವಿಧ ಮಜಲುಗಳನ್ನು ತೋರಿಸಿದ್ದರು.