Revati Patil

Classics Inspirational Others

4  

Revati Patil

Classics Inspirational Others

ಕ್ಯಾನ್ಸರ್ ಮಹಾಮಾರಿ ಗೆದ್ದು ವಿಜಯೋತ್ಸವ ಆಚರಿಸಿದ ನನ್ನ ತಂದೆಯ ನೈಜ ಕಥೆ.

ಕ್ಯಾನ್ಸರ್ ಮಹಾಮಾರಿ ಗೆದ್ದು ವಿಜಯೋತ್ಸವ ಆಚರಿಸಿದ ನನ್ನ ತಂದೆಯ ನೈಜ ಕಥೆ.

3 mins
276


ನೋವೆನ್ನುವುದು ನಲಿವಿನೆಡೆಗಿನ ಬೆಳಕಿಂಡಿ ಎಂದು ಸಾಕ್ಷಿಯಾಗಿ ನೋಡಿದ ಮೇಲೆಯೇ ನನಗರಿವಾಯಿತು. ಎಲ್ಲ ನೋವುಗಳು ಒಂದು ನಲಿವಿಗೆ ಮುನ್ನುಡಿ ಆಗಬಹುದೆಂದು ತಿಳಿಯಿತು. ಇದು ಸ್ವಂತ ಅನುಭವ, ಅನುಭವ ಎನ್ನುವುದಕ್ಕಿಂತಲೂ ನನ್ನ ತಂದೆ ನೋವು ಗೆದ್ದು ವಿಜಯೋತ್ಸವ ಆಚರಿಸಿದ ಕಥೆಯಿದು.


ಒಂದು ವರ್ಷದ ಹಿಂದಿನ ಮಾತು. ನಮ್ಮ ಕುಟುಂಬಕ್ಕೆ ಬಹುಶ ಅಂದಿನಿಂದಲೇ ಕೆಟ್ಟ ದೃಷ್ಟಿ ತಗುಲಿತೇನೋ, ಗೊತ್ತಿಲ್ಲ . ಈಗ ಕೆಲ ವಾರಗಳ ಹಿಂದೆ ಅಕ್ಕನಿಗೆ ಆಪರೇಷನ್ ಆಗಿತ್ತು. ಇದೇ ಸಮಯಕ್ಕೆ ಒಂದು ವರ್ಷದ ಹಿಂದೆ ಅಪ್ಪನ ಆರೋಗ್ಯವು ನಮ್ಮನ್ನು ಚಿಂತೆಗೆ ದೂಡಿತ್ತು. ಮೊದಲಿಂದಲೂ ಅಪ್ಪಾಜಿ ಅಮ್ಮ ಇಬ್ಬರೇ ಊರಲ್ಲಿ ಇರುತ್ತಾರೆ ಎನ್ನುವ ಚಿಕ್ಕ ಚಿಂತೆಯೊಂದನ್ನು ಬಿಟ್ಟರೆ ಅವರ ಬಗ್ಗೆ ಹೆಚ್ಚಿನ ಚಿಂತೆ ಮಾಡುವಂತಿರಲಿಲ್ಲ. ದೇವರ ದಯೆಯಿಂದ ಅಪ್ಪ ಅಮ್ಮನಿಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟಿದ್ದ ಎನ್ನುವ ನೆಮ್ಮದಿ ಬೇರೆಲ್ಲ ಚಿಂತೆಯನ್ನು ಮರೆಸಿತ್ತು. ಹಣಕಾಸಿನ ತೊಂದರೆಯು ದೇವರ ದಯೆಯಿಂದ ಇರಲಿಲ್ಲ.

ಮತ್ತೇನಾಯಿತು?


ಹೇಳಿ ಕೇಳಿ ನನ್ನಪ್ಪ ಸೈನಿಕ. 28 ವರ್ಷ ಸೈನಿಕರಾಗಿ ದೇಹ ದಂಡಿಸಿರುವ ಅವರಿಗೆ ನಾವು ನೋಡಿದಂತೆ ಚಿಕ್ಕ ನೆಗಡಿಯೂ ಅಪರೂಪವೇ. ಅಥವಾ ನನ್ನಪ್ಪ ಅನಾರೋಗ್ಯವೆಂದಿದ್ದನ್ನು ನಾವು ನೋಡೇ ಇಲ್ಲ. ಅಮ್ಮನಿಗಾದರೇ ಬಿಪಿ ಶುರುವಾಗಿ ಹತ್ತು ವರ್ಷ ಕಳೆದಿವೆ. ಆದರೆ ಅಪ್ಪನಿಗೆ ದೇವರು ಕೊಟ್ಟ ಆಸ್ತಿ ಎಂದರೆ ಸಧೃಡ ಆರೋಗ್ಯವೇ. ನಮ್ಮ ಹಲ್ಲಿಗಿಂತ ಅವರ ಹಲ್ಲೇ ಗಟ್ಟಿ ಎಂದು ನಾವು ತಮಾಷೆ ಮಾಡುವುದು ಉಂಟು. 48ನೇ ವಯಸ್ಸಿನಲ್ಲಿ ಗುಡ್ಡಗಾಡು ಓಟದ 16 ಕಿಲೋಮೀಟರ್ ದಾರಿಯನ್ನು ಯುವಕರೂ ನಾಚುವಂತೆ ಓಡಿ, ಎರಡನೇ ಸ್ಥಾನ ಪಡೆದಿದ್ದರು. ಈಗಲೂ ಒಂದೇ ಗಂಟೆಯೊಳಗೆ ಆರು ಕಿಲೋಮೀಟರ್ ವಾಕಿಂಗ್ ಮಾಡುತ್ತಾರೆ. ಈಗವರ ವಯಸ್ಸು ಅರವತ್ತೇಳು. ಅವರೊಂದಿಗೆ ಅಷ್ಟು ವೇಗವಾಗಿ ನಡೆಯಲು ನಮಗೂ ಆಗಲ್ಲ. ಅದಕ್ಕೂ ಕಷ್ಟದ ಕೆಲಸ ಎಂದರೆ ಪ್ರತಿದಿನ ತಪ್ಪದೇ ಬೇಗ ಏಳುವುದು ಆಗದ ಮಾತೇ! ಆದರೆ ಅವರಿಗದು ದಿನಚರಿ.


‌ಇಷ್ಟೊಳ್ಳೆಯ ದಿನಚರಿ ಇದ್ದರೂ ಕಳೆದ ವರ್ಷ ಅಪ್ಪನ ಆರೋಗ್ಯದ ಮೇಲೆ ವಕ್ರದೃಷ್ಟಿ ಬಿದ್ದೆ ಬಿಟ್ಟಿತು. ಕಾಲು ನೋವೆಂದು ಒಂದೆರಡು ದಿನ ಆಫೀಸಿನಲ್ಲಿ ಹೇಳಿದ್ದರಿಂದ ಅಲ್ಲಿಯ ಸಹೋದ್ಯೋಗಿ ಒಬ್ಬರು ಅಪ್ಪನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಅನುಮಾನಿಸಿ ಸ್ಕ್ಯಾನಿಂಗ್ ಮಾಡಿದರು. ರಿಪೋರ್ಟ್ ಬರೋವರೆಗೆ ಅಪ್ಪ ಮತ್ತೇ ಕೆಲಸಕ್ಕೆ ಮರಳಿದ್ದಾರೆ. ರಿಪೋರ್ಟ್ ಪಡೆಯಲು ಹೋದ ನಮ್ಮ ಸಂಬಂಧಿಕರಿಗೆ ವೈದ್ಯರು ನಮ್ಮ ತಂದೆಯನ್ನು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಮನೆಯಲ್ಲಿ ಎಲ್ಲರಿಗೂ ಅನುಮಾನ, ಈ ವೈದ್ಯರೇ ಇರುವುದನ್ನು ಹೇಳುವುದು ಬಿಟ್ಟು, ಬೇರೆ ಆಸ್ಪತ್ರೆಗೆ ಹೋಗಲು ಯಾಕೆ ಹೇಳಿರಬಹುದು ಎಂದು ಎಲ್ಲರೂ ಒಂದೊಂದು ರೀತಿಯಲ್ಲಿ ಯೋಚಿಸಿದೆವು. ಅಪ್ಪ ಮಾತ್ರ ತುಂಬಾ ಆತ್ಮವಿಶ್ವಾಸದಲ್ಲಿ ಇದ್ದರು. ಆದರೆ ಅವೆಲ್ಲವನ್ನು ಸುಳ್ಳು ಮಾಡಿದ್ದು ಸಿಟಿ ಆಸ್ಪತ್ರೆಯ ರಿಪೋರ್ಟ್. ಹೃದಯ ಝಲ್ಲೆಂದು ಬಾಯಿಗೆ ಬಂದಂತಾಗಿತ್ತು ವಿಷಯ ಕೇಳಿ. ಕ್ಯಾನ್ಸರ್ ಲಕ್ಷಣದ ಚಿಕ್ಕ ಅಣುಗಳು (ಮೈನರ್ ಕಂಟೆಂಟ್ಸ್ ಆಫ್ ಇನಿಷಿಯಲ್ ಸ್ಟೇಜ್ ಆಫ್ ಕ್ಯಾನ್ಸರ್ ) ಕಂಡು ಬಂದಿದ್ದವು!


‌ ಅದ್ಹೇಗೆ ಸಾಧ್ಯ? ಅಮ್ಮನಂತೂ ಅದೇನೇ ಇದ್ದರೂ ನನಗೇ ಬರಲಿ, ನಿಮ್ಜೊತೆ ಅವರು ನಗುನಗುತ ಇರಲಿ ಎಂದು ಅಳುತ್ತಿದ್ದದ್ದನ್ನು ನೋಡಿ ಅಮ್ಮನಿಗೆ ಸಮಾಧಾನ ಮಾಡಲು ಸಹ ಸಾಧ್ಯವಾಗಲಿಲ್ಲ. ಬಿಪಿ ಹೊರತಾಗಿ ಶುಗರ್ ಸಹ ಕೇಳದವರಲ್ಲ ನಾವು, ಅಂತದರಲ್ಲಿ ಕ್ಯಾನ್ಸರ್ ಎಂದರೆ ಯಾರಿಗೆ ತಾನೇ ಭಯವಾಗುವುದಿಲ್ಲ. ವೈದ್ಯರು ಇದು ಈಗ ತಾನೇ ಆರಂಭದ ಲಕ್ಷಣ, ಚಿಕ್ಕ ಆಪರೇಷನ್ ಮಾಡಿದರೆ ಸರಿ ಹೋಗುತ್ತದೆ ಎಂದರೂ ನಮಗಾರಿಗೂ ನಂಬಿಕೆ ಬರಲಿಲ್ಲ. ಚಲನಚಿತ್ರಗಳಲ್ಲಿ ಕ್ಯಾನ್ಸರ್ ಎಂದು ತೋರಿಸುವ ಯಾವುದೇ ವ್ಯಕ್ತಿ ಬದುಕುಳಿಯುವುದು ಕಡಿಮೆಯೇ ಅಲ್ವಾ? ಅವನ್ನೇ ನೋಡಿದ ನಾವುಗಳು ಅಕ್ಷರಶಃ ಭಯಪಟ್ಟಿದ್ದೆವು. ಮನಸ್ಸಲ್ಲಿ ಎಲ್ಲ ರೀತಿಯ ಕೆಟ್ಟ ಯೋಚನೆಗಳು ಬಂದಿದ್ದವು. ತಡಮಾಡದೇ ಅಣ್ಣ, ಅಕ್ಕ, ತಂಗಿ, ಎಲ್ಲರೂ , ಅಪ್ಪನನ್ನು ನೋಡಲು ಬಂದೇ ಬಿಟ್ಟಿದ್ದರು. ನನ್ನ ಮನಸ್ಸು ಅಪ್ಪನ ಬಳಿಯೇ ಇತ್ತು, ಅನಿವಾರ್ಯ ಕಾರಣದಿಂದ ನನಗೆ ಆಗ ಬರಲಾಗಲಿಲ್ಲ. ಫೋನಿನಲ್ಲಿ ಮಾತಾಡುತ್ತಿದ್ದೆ ಅಷ್ಟೇ. ಹಾಗೇ ಆಪರೇಷನ್ ಕೂಡ ಮುಗಿಯಿತು.


ಆಪರೇಷನ್ ಯಶಸ್ವಿಯಾಗಿತ್ತು. ಆಗ ನಾನು ಸಹ ಅಪ್ಪನನ್ನು ನೋಡಲು ಬಂದೆ. ಅವರ ಮುಖ ನೋಡಿದಮೇಲೆ ನನಗಂತೂ ಇನ್ನೂ ಬೇಸರವಾಯಿತು. ಬಹುಶ ಅವತ್ತೇ ನನ್ನ ತಂದೆಗೆ ವಯಸ್ಸಾಗ್ತಿದೆ ಎಂದು ನನಗೆ ಮೊದಲ ಬಾರಿ ಅನಿಸಿದ್ದು. ಮಾತ್ರೆಗೆ ಮುಖ ಕಿವುಚುವ ಅವರ ಮುಖ ನೋಡಲು ನನಗೆ ಸಂಕಟವಾಗುತ್ತಿತ್ತು. ಅವರ ಕಾಲು ನೋಡುವ ಧೈರ್ಯ ಮಾಡಲಿಲ್ಲ ನಾನು. ಆದರೂ ತುಂಬಾ ಸ್ವಾಭಿಮಾನಿ ನನ್ನ ತಂದೆ. ಯಾರಿಗೂ ತನ್ನಿಂದ ತೊಂದರೆ ಆಗಬಾರದೆಂದು ಅವರು ಯೋಚಿಸುತ್ತಾರೆ. ಅದಕ್ಕೆ ಪೂರಕವಾಗಿ ಅವರು ಬೇಗನೆ ಗುಣವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಆಗಲೂ ಸಹ ಮನೆಯಲ್ಲಿ ಎಲ್ಲರಿಗೂ ಮೊದಲೇ ಏಳುತ್ತಿದ್ದದ್ದು ಅವರೇ! ಅವರ ದಿನಚರಿಯಲ್ಲಿ ಅಂತಹ ದೊಡ್ಡ ಬದಲಾವಣೆ ಆಗಿರಲಿಲ್ಲ. ಈಗಲೂ ನನ್ನಪ್ಪ ಹೀರೋನೇ.


‌ಹೀಗೆ ಕೆಲವೇ ಸಮಯದಲ್ಲಿ ನಮ್ಮ ತಂದೆ ಕ್ಯಾನ್ಸರ್ ಮಹಾಮಾರಿಯನ್ನು ಸಂಪೂರ್ಣವಾಗಿ ಗೆದ್ದು ವಿಜಯೋತ್ಸವ ಆಚರಿಸಿದರು. ಮೊದಲು ನೋವೆಂದು ಕೊರಗಿದರೂ, ಕೊನೆಗೂ ನಲಿವಿನ ಬೆಳಕಿಂಡಿ ನಮ್ಮ ಕುಟುಂಬದಲ್ಲಿ ಹರಿಯಿತು. ಅದೇ ಕೊನೆ ನಮ್ಮ ತಂದೆ ಮತ್ತೆಂದೂ ಅನಾರೋಗ್ಯವೆಂದು ಮಲಗಿಲ್ಲ. ಬೆಟ್ಟದಂತೆ ಬಂದ ಕಷ್ಟ ವಿಜಯದಶಮಿ ಸಮಯಕ್ಕೆ ವಿಜಯೋತ್ಸವ ಆಚರಿಸುವಂತೆ ಕಳೆಯಿತು. ದೇವರ ಕೃಪಾಕಟಾಕ್ಷ ಯಾವತ್ತೂ ನಮ್ಮ ತಂದೆ ತಾಯಿ ಮೇಲಿರಲಿ.


Rate this content
Log in

Similar kannada story from Classics