Win cash rewards worth Rs.45,000. Participate in "A Writing Contest with a TWIST".
Win cash rewards worth Rs.45,000. Participate in "A Writing Contest with a TWIST".

Revati Patil

Tragedy Classics Others


4  

Revati Patil

Tragedy Classics Others


ಅಸಹಾಯಕತೆ

ಅಸಹಾಯಕತೆ

2 mins 196 2 mins 196

ಒಲೆಯ ಉರಿ ಚಾಚಿದ್ದೆ ಬಂತು ಬೋರಮ್ಮನಿಗೆ, ಹೊಗೆಯ ವಿನಃ ಉರಿ ಮಾತ್ರ ಹತ್ತಲಿಲ್ಲ. ಅಸ್ತಮಾ ಇದ್ದ ಕಾರಣ ಹಸಿ ಕಟ್ಟಿಗೆಯ ಊದಿ ಊದಿ ಎದೆ ನೋವು ಬಂದಂತಾಗಿ ಒಲೆಯ ಮುಂದೆಯೇ ಕಣ್ಣು ಮುಚ್ಚಿ ಬಿದ್ದು ಬಿಟ್ಟಳು. ಅರಿಶಿಣ ಪುಡಿ ಕೇಳಲು ಬಂದ ಶಾರಕ್ಕ, ಹೊತ್ತಿರುವ ಒಲೆಯ ಮುಂದೆ ಬಿದ್ದ ಬೋರಮ್ಮನ ನೋಡಿ ಕೈಯಲ್ಲಿದ್ದ ಬಟ್ಟಲನ್ನು ಬಿಟ್ಟು, ಹಂಡೆಯಲಿದ್ದ ನೀರನ್ನ ಬೋರಮ್ಮನ ಮುಖಕ್ಕೆ ಚಿಮುಕಿಸಿ ಎಬ್ಬಿಸಿದಳು.


"ಏನ್ರೀ, ಬೋರಕ್ಕಾರ, ಒಲಿ ಉರ್ಯಾಕತ್ತತಿ, ನೀ ನೋಡಿದ್ರ ಹಿಂಗ ಅದಕ್ ಮುಖಾ ಚಾಚಿ ಮಕ್ಕೊಂಡಿಯಲ್ಲ, ಮೊದ್ಲ ಬಸಪ್ಪಣ್ಣಾರು ಇಲ್ಲ ಮನ್ಯಾಗ, ಒಬ್ಬೊಬ್ಬಳ ಇದ್ದಾಗ ಒಲಿ ಮುಂದ್ ಕುಂದರಬ್ಯಾಡ ಅಂತ ಎಷ್ಟ್ ಸಲ ಹೇಳ್ಬೇಕ್ವಾ ನಿಂಗ್. ಮತ್ತೂ ನಿಂದ್ ಚಾಳಿ ನೀ ಬಿಡಾಕ ಒಲ್ಲಿ"

ಶಾರಕ್ಕಾ ಸಿಟ್ಟಲ್ಲೇ ಬೋರಮ್ಮನಿಗೆ ಬೈಯುತ್ತಿದ್ದಳು.


"ನೀ ಏನ್ವಾ , ಮಕ್ಕಳು - ಮರಿ ಇದ್ದಕಿ, ನೀ ಕೆಮ್ಮಿದ್ರೂ ಸಾಕು, ಕೂದ್ಲಕ್ಕೊಂದು ಬಳಗ ಎದ್ ಬರ್ತತಿ. ನಂದ್ ಹಂಗಲ್ಲಾ ಶಾರಕ್ಕಾ, ನಿಂಗ ಗೊತ್ತು ರೆಕ್ಕೆ ಬಲಿತ ಮಕ್ಕಳೆಲ್ಲ ಅವರವರ ಇಚ್ಚಾದಾಗ ಜೀವನಾ ಮಾಡಾಕುಂತಾರಾ. ನಂಗ್, ನಮ್ಮ ಯಜಮಾನ್ರಿಗೆ ಒಲಿ ಮುಂದ್ ಊದದ ತಪ್ಪಲಿಲ್ಲ. ದಮ್ ಬಂದ್ ಎಷ್ಟ್ ವರ್ಷ ಆಯ್ತೋ ದೇವ್ರಿಗೆ ಗೊತ್ತಿರ್ಬೇಕ್ವಾ ಶಾರಕ್ಕಾ! ಮಕ್ಕಳಿದ್ದು, ಇಲ್ದಂಗ ಹಿಂತಾ ಬಾಳೆ ಮಾಡದ್ಕಿಂತ ದೇವ್ರು ನಮ್ಗ ಮಕ್ಕಳನ್ನ ಕೊಟ್ಟಿಲ್ಲಾ ಅಂದಿದ್ರ ಎಷ್ಟೋ ಚೊಲೋ ಇತ್ತು. ಗುಡ್ಡದ ಬಸಣ್ಣಗ ಹರಕಿ ಹೊತ್ತು ಆರು ಮಕ್ಕಳನ್ನ ಹಡದೆ. ಮೂರು ಹುಟ್ಟಿ ಸತ್ತವು, ಇನ್ನು ಮೂರು ನನ್ನ, ನನ್ನ ಗಂಡನ್ನ ಸಾಯಂಗ್ ಮಾಡಾಕತ್ತಾವು. ದೇವರಂತ ನನ್ನ ಗಂಡ ಈ ವಯಸ್ಸನ್ಯಾಗ್ ನನ್ನ ಚಾಕರಿ ಮಾಡಂಗ್ ಆತು. ಈಗ ನಾನು ಅವರ ಸೇವಾ ಮಾಡ್ಬೇಕಿತ್ತು ಶಾರಕ್ಕಾ, ದೇವ್ರು ಅದೆಂತಾ ಅಸಹಾಯಕತೆ ನೀಡ್ಯಾನ ನೋಡ್ ನಮ್ಗ "


"ಯಾಕ್ ಹಂಗಂತಿ ಬೋರಕ್ಕಾ, ಹೆಂತಿನೇ ಗಂಡನ ಸೇವಾ ಮಾಡ್ಬೇಕಂತ ಏನೈತಿ, ನಿಂಗ್ ತ್ರಾಸ್ ಆದ್ರ ಅದು ತ್ರಾಸ್ ಅಲ್ಲೇನು? ನಿನ್ ಗಂಡ ನಿನ್ ಮ್ಯಾಲೆ ಬಾಳ್ ಪ್ರೀತಿ ಅದಾನ, ಮಕ್ಕಳ ಸಲುವಾಗಿ ನೀ ಕೊರಗ್ತಿ ಅಂತ ಅವಾ ಎಂದೂ ನಿನ ಮುಂದ ಮಕ್ಕಳ ಸಂಗ್ತಿ ತೆಗೆಯಲ್ಲ. ಹೌದಲ್ಲ? ಮತ್ತ ಮಕ್ಕಳಿದ್ದಿದ್ರೂ ನಿಮ್ಗ ಈ ಪ್ರೀತಿ ಸಿಗ್ತಿತ್ತೋ ಇಲ್ಲೋ, ಈ ವಯಸ್ಸಿನ್ಯಾಗೂ ನಿನ್ ರಾಣಿ ಹಂಗ್ ನೋಡ್ಕೊಳಕತ್ತಾನ ಬಸಣ್ಣಾ. ಅದನ್ನ ಅದೃಷ್ಟ ಅನ್ನು, ಅಸಹಾಯಕತೆ ಅನ್ಬ್ಯಾಡ್ವಾ ಬೋರಕ್ಕಾ "

ಶಾರಕ್ಕಾನ ಮಾತು ಬೋರಕ್ಕನಿಗೆ ಸರಿ ಅನ್ಸಿದ್ರು ತಾಯಿಯಾಗಿ ಮಕ್ಕಳಿಗಾಗಿ ಕಾಯ್ಬೇಕೋ, ಅಥವಾ ದೇವರಂತಹ ಗಂಡನಿಗಾಗಿ ಬದುಕಬೇಕೋ ಎಂದೇನಿಸಿತು.


" ಹೌದು ಶಾರಕ್ಕಾ, ನಾ ಎಂತಾ ಹುಚ್ಚಿ ನೋಡು, ಮಕ್ಕಳಿಲ್ಲ ಅಂತ ಅಸಹಾಯಕಿ ಅನ್ಕೊಂಡೆ. ಆದ್ರ ನನ್ನ ಗಂಡ, ನಂಗ್ ಏನ್ ಕಮ್ಮಿ ಮಾಡ್ಯಾರಾ. ಮೂರು ಹೊತ್ತು ನಂಗ್ ಅರಾಮಿಲ್ಲಾ ಅಂತ ನೆಪ ಹಾಕಿ ನನ್ನ ಬಾಜುನ ಇರ್ತಾರಾ, ವೃದ್ಯಾಪ್ಯದಾಗ ಇಂತ ಅದೃಷ್ಟ ಯಾರಿಗೆ ಸಿಗ್ತತಿ! ನಂದು ಅಸಹಾಯಕತಿ ಅಲ್ಲ ಶಾರಕ್ಕಾ ಅದೃಷ್ಟ, ಅದೃಷ್ಟ, ಅದೃಷ್ಟ "

(ಎಂದು ಸಂತೋಷ ಪಡುತ್ತಲೇ ಕೊನೆಯುಸಿರೆಳೆದಳು ಬೋರಕ್ಕಾ )


ಶಾರಕ್ಕಾ ಮೌನಿಯದಳು. ಬಸಪ್ಪಾ ಬಂದಮೇಲೆ ಮಡದಿಯ ಅಗಲುವಿಕೆ ಅವನನ್ನು ಜೀವಂತ ಶವವನ್ನಾಗಿಸಿತು.


ಊರು ಕೇರಿಯ ಜನರೆಲ್ಲಾ ಕಾರ್ಯ ಮುಗಿಸಿ ಹೋದದ್ದಾಯಿತು. ಅದೃಷ್ಟ ಎಂದು ಹೆಂಡತಿಗೆ ಮನವರಿಕೆ ಮಾಡಿಸಿದ ಬಸಪ್ಪ ಈಗ ನಿಜಕ್ಕೂ ಅಸಹಾಯಕನಾಗಿದ್ದ.


Rate this content
Log in

More kannada story from Revati Patil

Similar kannada story from Tragedy