ಮಗು, ಅವಾಂತರ
ಮಗು, ಅವಾಂತರ


ಮಗು, ಅವಾಂತರ ಬಹುಶಃ ಎರಡು ಪದಗಳು ಅವಳಿ-ಜವಳಿ ಇದ್ದೀರಬೇಕೆನ್ನುವುದು ನನ್ನ ಭಾವನೆ! ಮಗು ಇಲ್ಲದೆ ಅವಾಂತರಗಳಿಲ್ಲ, ಅವಾಂತರಗಳಿಲ್ಲದೆ ಮಗುವಿಲ್ಲ! ಇದಕ್ಕೆ ಯಾವ ಮನೆಯೂ ಹೊರತಾಗಿಲ್ಲ. ಹಾಗೊಂದು ವೇಳೆ ಮಕ್ಕಳ ಅವಾಂತರಗಳಿಲ್ಲದ ಮನೆ ಇದೆಯೆಂದಾದರೆ ಅದು ನೀರಸ ಪದದ ಜನ್ಮಭೂಮಿಯೇ ಇದ್ದೀರಬೇಕು! ಅಲ್ಲದೇ ಮತ್ತಿನ್ನೇನು?
ನನ್ನ ಮಗಳಿಗೆ ಈಗ ಐದು ವರ್ಷ. ಅವಳು ಎರಡುವರೆ ವರ್ಷದವಳಿದ್ದಾಗ ಅವಳ ಹೆಸರಲ್ಲೊಂದು ಸುಕನ್ಯಾ ಸಮೃದ್ಧಿ ಖಾತೆ (ಹೆಣ್ಣು ಮಕ್ಕಳಿಗೆ ಸರಕಾರದ ಒಂದು ಯೋಜನೆ ) ತೆರೆಯಬೇಕು ಎಂದು ಬ್ಯಾಂಕಿಗೆ ಹೋಗಿ ಎಲ್ಲ ವಿಚಾರಿಸಿದ್ದಾಗಿತ್ತು. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಮಗುವಿನ ಆಧಾರ್, ಜನ್ಮ ದಾಖಲೆ ಅದು ಇದು ಎನ್ನುತ್ತ ಒಂದಷ್ಟು ದಾಖಲೆಗಳನ್ನು ತರಲು ಹೇಳಿದರು. ಒಂದೆರಡು ತಿಂಗಳ ಅವಧಿಯಲ್ಲಿ ಬ್ಯಾಂಕಿನವರು ಹೇಳಿದ್ದ ಎಲ್ಲ ದಾಖಲೆ ಪತ್ರಗಳನ್ನು ಸಿದ್ಧ ಮಾಡಿ ಮುಂದೊಂದು ದಿನ ಬ್ಯಾಂಕಿಗೆ ಹೋದೆ. ಹಿಂದಿನ ಎಲ್ಲ ದಾಖಲೆಗಳನ್ನು ಜೋಡಿಸಿಟ್ಟ ನೆನಪಿತ್ತು, ಹಾಗಾಗಿ ಮತ್ತೇ ಕ್ರಾಸ್ ಚೆಕ್ ಮಾಡುವ ಗೋಜಿಗೆ ಹೋಗದೆ ಮಗಳನ್ನೆತ್ತಿಕೊಂಡು ಬ್ಯಾಂಕಿನೆಡೆಗೆ ಹೆಜ್ಜೆ ಹಾಕಿದೆ.
ನನ್ನ ಸರದಿಗಾಗಿ ಕಾದು ಕಾದು ಮೊದಲೇ ಸುಸ್ತಾಗಿತ್ತು, ಜೊತೆಗೆ ಮಗಳ ಅಳು ಸಹ ಶುರುವಾಗಿತ್ತು. ಅಂತೂ ನನ್ನ ಸರದಿ ಬಂತು. ಮೂಲ ದಾಖಲೆಗಳನ್ನು, ನಕಲು ಪ್ರತಿಯನ್ನು ತೋರಿಸಿ ಎಂದಾಗ ಪ್ಯಾನ್ ಕಾರ್ಡ್ ನಾಪತ್ತೆ!
ವ್ಯಾನಿಟಿ ಬ್ಯಾಗ್‌ನ ಇಂಚಿಂಚೂ ಬಿಡದೆ ಸರ್ಚ್-ರಿಸರ್ಚ್ ಎಲ್ಲ ಮಾಡಿದ್ದಾಯ್ತು.
'ನಾಳೆ ಬನ್ನಿ' ಎಂದ ಬ್ಯಾಂಕಿನವರ ಮಾತಿಗೆ ಎಷ್ಟೇ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಒರಿಜಿನಲ್ ಬೇಕು, ನಾಳೆ ಬನ್ನಿ ಎಂದು ಮತ್ತೊಬ್ಬ ಗ್ರಾಹಕರತ್ತ ಮುಖ ಮಾಡಿದರು.
ನನ್ನ ಮರೆವಿಗೆ, ನಿರ್ಲಕ್ಷ್ಯಕ್ಕೆ ಮನಸ್ಸಲ್ಲೇ ಬೈದುಕೊಳ್ಳುತ್ತ ಮನೆಗೆ ಬಂದೆ. ನೆನಪಿರುವ ಮಟ್ಟಿಗೆ ಟಿವಿ ಮೇಲೆ, ಫ್ರಿಡ್ಜ್ ಮೇಲೆ ಬೆಡ್ ಕೆಳಗೆ ಎನ್ನುತ್ತ ಎಲ್ಲೆಲ್ಲೂ ನೋಡಿದೆ. ನೋ! ಪ್ಯಾನ್ ಕಾರ್ಡ್ ಸುಳಿವೇ ಇಲ್ಲ! ಹುಡುಕಿ ಹುಡುಕಿ ಸಾಕಾಗಿ, ಇದ್ದವರ ಮೇಲೆಲ್ಲ ಕೋಪ ಸುರಿಸುತ್ತ ಮಗಳನ್ನು ಮಲಗಿಸಿದೆ. ಅಂದೇಕೋ ಕೆಲಸ ಮಾಡುವ ಮನಸ್ಸಿಲ್ಲದೇ ಬಟ್ಟೆ ಒಗೆಯುವದನ್ನು ಬಿಟ್ಟೆ.
ಮತ್ತೆ ರಾತ್ರಿ ಪ್ಯಾನ್ ಕಾರ್ಡ್ ನೆನಪಾಗಿ ಸಿಕ್ಕ ಸಿಕ್ಕ ಕಡೆಯೆಲ್ಲ ಹುಡುಕಿದೆ. ಮತ್ತೆ ನಿರಾಸೆಯಾಗಿ ಸುಮ್ಮನಾದೆ. ಮಾರನೇ ದಿನವೂ ಪ್ಯಾನ್ ಕಾರ್ಡ್ ಇಲ್ಲದ ಕಾರಣ ಸುಕನ್ಯಾ ಖಾತೆ ಸಮೃದ್ಧಿಯಾಗಲಿಲ್ಲ!
ಮಾರನೇ ದಿನ ಎರಡು ದಿನಗಳ ಬಟ್ಟೆಯನ್ನು ಒಗೆಯುವಾಗ ನನ್ನ ಮಗಳ ಪ್ಯಾಂಟಿನಲ್ಲಿ ಏನೋ ಕೈಗೆ ಸಿಕ್ಕಂತಾಯಿತು. ತೆಗೆದು ನೋಡಿದರೆ 'ಪ್ಯಾನ್ ಕಾರ್ಡ್'! ಎರಡು ದಿನದ ಹಿಂದೆ ಎಲ್ಲ ದಾಖಲೆಗಳನ್ನು ನೋಡುತ್ತಿದ್ದಾಗ ನನ್ನ ಮಗಳು ಪ್ಯಾನ್ ಕಾರ್ಡ್ ಅನ್ನು ತನ್ನ ಪ್ಯಾಂಟಿನ ಜೇಬಿಗೆ ಇಳಿಸಿದ್ದಾಳೆ. ಅದನ್ನು ಮತ್ತೆ ಹೊರತೆಗೆಯಲು ಅವಳಿಗೆ ಗೊತ್ತಾಗಲಿಲ್ಲವೋ ಅಥವಾ ನೆನಪಾಗಲಿಲ್ಲವೋ ಗೊತ್ತಿಲ್ಲ. ಅಲ್ಲದೇ ಒಂದು ದಿನ ಬಟ್ಟೆಯನ್ನು ತೊಳಿಯದ ಕಾರಣ ಪ್ಯಾನ್ ಕಾರ್ಡ್ ನನಗೆ ಸಿಗುವುದು ಒಂದು ದಿನ ತಡವಾಯಿತು. ಅಂತೂ ಕೆಲಸದ ನೆಪದಲ್ಲಿ ಪ್ಯಾನ್ ಕಾರ್ಡ್ ಸಿಕ್ಕಿತು. ಮಗಳಿಗೆ ಹೊಡೆಯುವ - ಬೈಯುವ ಹಾಗಿರಲಿಲ್ಲ. ಮಕ್ಕಳಿರುವ ಮನೆಯಲ್ಲಿ ನಾವೇ ಜಾಗರೂಕರಾಗಿರಬೇಕು ಅಷ್ಟೇ.
ಮಕ್ಕಳೆಂದ ಮೇಲೆ ಇಂತಹ ಘಟನೆ ಸರ್ವೇ ಸಾಮಾನ್ಯ. ಬೈಕಿನ ಕೀ ಸಹ ನನ್ನ ಮಗಳ ದೆಸೆಯಿಂದ ಬೂಟಿನೊಳಗೆ ಸೇರಿತ್ತು. ಅವಳ ತರಲೆ ತುಂಟಾಟಗಳಿಗೆ ಬರವಿಲ್ಲ. ಈಗ ತಮಾಷೆ ಎನಿಸಿದರೂ ಆ ಕ್ಷಣಕ್ಕೆ ಕೋಪ, ಅಸಹನೆ ಉಕ್ಕಿದ್ದು ಸುಳ್ಳಲ್ಲ. ಐಸ್ ಕ್ರೀಮ್ ಕೈಯಿಂದಲೇ ಇಸ್ತ್ರೀ ಮಾಡಿಟ್ಟಿದ್ದ ಬಟ್ಟೆಯ ಮೇಲೆ ತನ್ನ ಕೈಗಳ ಚಿತ್ತಾರ ಬಿಡಿಸಿದ್ದು ನನ್ನ ಮಗಳ ಅದ್ಭುತ ತರಲೆಗಳಲ್ಲಿ ಒಂದು. ಬಹುಶಃ ಅದಕ್ಕೆ ಅನಿಸುತ್ತೆ, ಮಕ್ಕಳಿರುವ ಮನೆ ಎಂದರೆ ಅವಾಂತರಗಳ ಉಗಮ ಸ್ಥಾನವೆಂದು!
ನಿಮ್ಮ ಮನೆಯಲ್ಲೂ ಚಿಕ್ಕ ಮಕ್ಕಳಿದ್ದರೆ ಇಂತಹ ಅವಾಂತರಗಳು ಮಾಮೂಲಿ. ಮಕ್ಕಳಿಗೆ ಗದರುವ ಮೊದಲು ನಾವೇ ಒಂದು ಹೆಜ್ಜೆ ಜಾಗೃತರಾಗುವುದು ವಾಸಿ.
ಏನಂತೀರಿ?