Revati Patil

Abstract Drama Others

3  

Revati Patil

Abstract Drama Others

ಗಾನವಿ 1

ಗಾನವಿ 1

2 mins
465


ಹೆಂಡತಿಯನ್ನು ಕಳೆದುಕೊಂಡ ಆತ ತನ್ನ ಇಬ್ಬರು ಮುದ್ದಿನ ಕುಡಿಗಳ ಸಲುವಾಗಿ ತನ್ನ ಬದುಕನ್ನು ಕಳೆಯಬೇಕಿತ್ತು. ಸತತ ಆರು ವರ್ಷಗಳ ಕಾಲ ಪ್ರೀತಿಯ ಮಡದಿಯ ಆರೈಕೆಯನ್ನು ಅದೆಷ್ಟು ಚೆನ್ನಾಗಿ ಮಾಡಿದನೆಂದರೆ ಆತನ ಆರೈಕೆ, ಕಾಳಜಿಯನ್ನು ಕಂಡು ದೇವರು ಸಹ ಮರಗಿ , ಆತನ ಹೆಂಡತಿಯನ್ನು ಬದುಕಿಸಬೇಕಿತ್ತು. ಸಾಯುವಂತಹ ವಯಸ್ಸು ಅವರದ್ದಲ್ಲ ,ಆದರೆ ಸೊಂಟ ಬಿದ್ದ ಕಾರಣ ಎಲ್ಲವೂ ಹಾಸಿಗೆಯಲ್ಲಿಯೇ ಆಗುತ್ತಿತ್ತು. ಹೊಲದ ಕೆಲಸ ಮಾಡಿ ಎಷ್ಟೇಸುಸ್ತಾಗಿದ್ರೂ , ಕಷ್ಟವಾದ್ರೂ, ಬೇಸರವಾದ್ರೂ ತನ್ನ ಹೆಂಡತಿಯ ಸೇವೆ ಮಾಡಲು ಮಾತ್ರ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಊರಿನ ಜನ ಸಹ ಈ ಜೋಡಿಯನ್ನು ಕಂಡು ಒಮ್ಮೊಮ್ಮೆ ಕಣ್ಣೀರು ಹಾಕುತ್ತಿದ್ದರು.


ಹೆಂಡತಿ ಗಿರಿಜಾ ಹಾಸಿಗೆ ಹಿಡಿದಾಗಿನಿಂದ ಗಂಡ ಮೋಹನ್, ಹೆಂಡತಿಯ ಆರೈಕೆಯ ಜೊತೆಗೆ ಮಕ್ಕಳು ಗಾನವಿ, ಜಾಹ್ನವಿ ಇವರಿಬ್ಬರ ಆರೈಕೆಯನ್ನು ಮಾಡುತ್ತ , ಜಮೀನಿನ ಕೆಲಸ , ತೋಟದ ಕೆಲಸ ಮಾಡುತ್ತಿದ್ದರು. ಹತ್ತಿರದಲ್ಲೇ ಎಲ್ಲ ಸಂಬಂಧಿಕರು ಇದ್ದರೂ ಸಹ ಯಾರೂ ಸಹ ಬಂದು ನಿಲ್ಲುತ್ತಿರಲಿಲ್ಲ. ಹೀಗಾಗಿ ಮೋಹನ್ ಯಾರ ಬಳಿಯೂ ತನ್ನ ಕಷ್ಟವನ್ನು ತೋರಿಸಿಕೊಳ್ಳದೆ ಎಲ್ಲವನ್ನು ನಿರ್ವಹಿಸುತ್ತಿದ್ದನು.


ತಾವಿರುತ್ತಿದ್ದ ಊರಿಂದ ಹೆಂಡತಿ ಗಿರಿಜಾಳಿಗೆ ಚಿಕಿತ್ಸೆ ಕೊಡಿಸುವುದು ಕಷ್ಟವಾಗತೊಡಗಿತು. ಆಗ ಆ ಊರಿಂದ ಪಕ್ಕದ ಊರಿಗೆ ಮನೆ ಬದಲಾಯಿಸಿದರು. ಅಲ್ಲಿ ಬಂದು ಆಗಷ್ಟೇ ಒಂದು ವರ್ಷ ಕಳೆದಿರಬೇಕು, ದೇವರು ಮೋಹನ್ ಹೆಂಡತಿ ಗಿರಿಜಾಳನ್ನು ತನ್ನ ಹತ್ತಿರ ಕರೆದುಕೊಂಡನು. ಸತತ ಆರು ವರ್ಷಗಳ ಕಾಲ ಸೇವೆ ಮಾಡುತ್ತಾ ಮಕ್ಕಳನ್ನು ನೋಡ್ಕೊಂಡ ಮೋಹನನಿಗೆ ಬೇಸರವಾದ ದಿನವೇ ಇರಲಿಲ್ಲ. ಆದರೆ ಈಗ ಹೆಂಡತಿ ಸಾವಿನಿಂದ ಒಂಟಿತನದ ಜೊತೆಗೆ ಬೇಸರವೂ ಕಾಡತೊಡಗಿತು. ಗಿರಿಜಾ ಸದಾ ಮಲಗಿರುತ್ತಿದ್ದ ಜಾಗ ಬಿಕೋ ಎನ್ನುತ್ತಿತ್ತು.


ಸ್ವಲ್ಪ ದಿನಗಳು ಕಳೆಯಲಾಗಿ, ನೆನಪುಗಳು ಮರೆತಂತಾಗಿ ದಿನದ ಕೆಲಸಗಳ ಮಧ್ಯೆ ಗಿರಿಜಾಳ ನೆನಪು ಕಮ್ಮಿಯಾಗತೊಡಗಿತು. ದೇವರು ಮರೆವು ಎನ್ನುವ ಒಳ್ಳೆಯ ಔಷಧಿಯನ್ನೇ ಕೊಟ್ಟಿದ್ದಾನೆ ಅಲ್ಲವೇ?


ಗಾನವಿ , ಜಾಹ್ನವಿ ಬೆಳೆದು ದೊಡ್ಡವರಾದರು. ಇಬ್ಬರು ತಮ್ಮ ತಮ್ಮ ಓದಿನಲ್ಲಿ ಜಾಣರಾಗಿದ್ದರು. ಅಪ್ಪನ ಮಾತನ್ನು ವೇದವಾಕ್ಯ ಎಂಬಂತೆ ಪರಿಗಣಿಸುತ್ತಿದ್ದರು. ತಾಯಿ ಇಲ್ಲದ ಮಕ್ಕಳು ಎಂದು ತುಂಬಾ ಮುದ್ದಿನಿಂದ , ಬೇಕು ಅಂತ ಆಸೆ ಪಟ್ಟಿದ್ದನ್ನು ಇಲ್ಲ ಎನ್ನದೆ ಕೊಡಿಸಿ , ಸಂಸ್ಕಾರ , ಸಂಸ್ಕೃತಿ ಕೊಟ್ಟು ಬೆಳೆಸಿದರು.


ಅಕ್ಕ ತಂಗಿ ಹೊಂದಾಣಿಕೆಯಿಂದ , ಅನ್ಯೋನ್ಯೆತೆಯಿಂದ ಚೆನ್ನಾಗಿದ್ದರು. ಈಗಂತೂ ಮನೆ ಕೆಲಸ , ಅಡಿಗೆ ಕೆಲಸ ಮಾಡುತ್ತಾ ಅಪ್ಪನ ಕಾಳಜಿಯೊಂದಿಗೆ , ತಮ್ಮ ಓದಿನ ಕಾಳಜಿಯನ್ನೂ ಮಾಡಿಕೊಂಡು ಹೋಗುತ್ತಿದ್ದರು. ಅಕ್ಕ ಪಕ್ಕದವರು ಅಕ್ಕ ತಂಗಿಯನ್ನು ನೋಡಿ ಮರಗುತ್ತಿದ್ದರು. ತಾಯಿ ಇಲ್ಲದಿದ್ದರೂ ಸಹ ಎಷ್ಟು ತಿಳುವಳಿಕೆಯಿಂದ ಮನೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ , ಒಂದು ದಿನವೂ ಅವರಿಬ್ಬರ ಧ್ವನಿಯು ಹೊರಗೆ ಕೇಳಿಲ್ಲ , ಎಷ್ಟೊಂದು ಸೌಜನ್ಯತೆ , ಎಷ್ಟೊಂದು ವಿನಯತೆ , ಕೊಟ್ಟ ಮನೆಯಲ್ಲಿ ದೇವರು ಚೆನ್ನಾಗಿತ್ತಿರಲಿ ಈ ಇಬ್ಬರು ಮಕ್ಕಳನ್ನು ಎಂದು ಹರಸುತ್ತಿದ್ದರು. ಗಾನವಿ ,ಜಾಹ್ನವಿ ಕೂಡ ಅಕ್ಕ ಪಕ್ಕದವರೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡು , ಎಲ್ಲರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದರು.


ಈಗ ಮಕ್ಕಳಿಬ್ಬರು ಮದುವೆ ವಯಸ್ಸಿಗೆ ಬಂದಿದ್ದರು. ಮೋಹನ್ ಗಾನವಿಗೆ ಗಂಡು ಹುಡುಕಲು ಶುರು ಮಾಡಿದ್ದನು. ಒಳ್ಳೆಯ ಹುಡುಗನನ್ನು ಹುಡುಕಲು ತನಗೆ ಗೊತ್ತಿರುವವರ , ಆತ್ಮೀಯರ ಬಳಿ ಹೇಳಿಕೊಂಡಿದ್ದನು.


ಇತ್ತ ಗಾನವಿಗೆ ಮದುವೆ ಎಂದರೆ ಇಷ್ಟವೇ ಇರಲಿಲ್ಲ. ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದರೆ ಅದೇಕೋ ಗಾನವಿ ಅದರಲ್ಲಿ ಆಸಕ್ತಿಯನ್ನೇ ತೋರಿಸುತ್ತಿರಲಿಲ್ಲ.


ಹಾಗಾದರೆ ಗಾನವಿ ಮದುವೆಯನ್ನು ಬೇಡವೆನ್ನಲು ಕಾರಣವೇನು? ಅವಳು ಮದುವೆಗೆ ಒಪ್ಪಿದಳಾ ಅಥವಾ ಇಲ್ಲವಾ ಎನ್ನುವುದನ್ನು ಮುಂದಿನ ಭಾಗದಲ್ಲಿ ಹೇಳುತ್ತೇನೆ


Rate this content
Log in

Similar kannada story from Abstract