STORYMIRROR

Ranjitha M

Tragedy Classics Others

4  

Ranjitha M

Tragedy Classics Others

ಮಸಣದ ಮಳೆಯ ಕಥೆ

ಮಸಣದ ಮಳೆಯ ಕಥೆ

2 mins
395

ಜೀರುಂಡೆಯ ಕರ್ಕಶವಾದ ಕೂಗಿಗೆ ಎಚ್ಚರಗೊಂಡ ಜಲಜ ಮನೆಯ ಕಿಟಕಿಯಿಂದಾಚೆಗೆ ನೋಡಿದಳು. ಆಗಸವೆಲ್ಲ ಮೋಡದಿಂದ ಆವೃತವಾಗಿ ಕಪ್ಪಾಗಿತ್ತು. ಮುಂಜಾನೆಯೋ ಸಂಜೆಯೋ ಎಂಬುದರ ಅರಿವು ಆಗದಂತಹ ಮಸುಕು ಆವರಿಸಿತ್ತು. ಮೆಲ್ಲನೆ ಚಾಪೆಯಿಂದ ಎದ್ದವಳೆ ಅದನ್ನು ಮಡಿಚಿ ಗೋಡೆಗೆ ಒರಗಿಸಿ ಇಟ್ಟಳು.  

ಅವಳ ಮನದೊಳಗೆ ಅದುವುದೋ ದುಗುಡ ಮನೆ ಮಾಡಿದಂತಿತ್ತು . ಜೀರುಂಡೆಯ ಕೂಗು ಅವಳ ಮಧ್ಯಾಹ್ನದ ನಿದಿರೆಯನ್ನು ಕಸಿದರು ಕೂಡ ವಾಸ್ತವ ಜಗತ್ತಿನ ಅರಿವನ್ನು ಮೂಡಿಸಿತ್ತು. ತನ್ನ ಕಲ್ಪನಾ ಲೋಕದಿಂದ ಹೊರ ಬಂದವಳೆ ಕತ್ತಿ ಹಿಡಿದು ಮನೆಯ ದನಕ್ಕೆಂದು ಹುಲ್ಲು ತರಲು ಮನೆಯಿಂದ ಕೊಂಚ ದೂರವಿದ್ದ ತೋಟಕ್ಕೆ ತಲೆ ಮೇಲೆ ಕೊಪ್ಪೆ( ಕಂಬಳಿಯಿಂದ ಮಾಡಿದ ಮಳೆಯಿಂದ ರಕ್ಷಿಸಿಕೊಳ್ಳುವಂತಹದ್ದು) ಹಾಕಿಕೊಂಡು ಹೊರಟಳು. 

ಅವಳು ತೋಟದಲ್ಲಿ ಹುಲ್ಲು ಕುಯ್ಯುವ ಸಂದರ್ಭದಲ್ಲಿ ಮಳೆ ಹನಿಗಳು ಒಂದೊಂದೇ ಬೀಳಲು ಪ್ರಾರಂಭಿಸಿದವು. ಕ್ರಮೇಣ ಮಳೆಹನಿಗಳ ಸಾಲು ಹೆಚ್ಚಾಯಿತು. ಬೇಗ ಬೇಗ ಹುಲ್ಲು ಕುಯ್ಯುದು ಮುಗಿಸಬೇಕಬ ದಾವಂತದಲ್ಲಿ ಜಲಜ ಕಾರ್ಯೋನ್ಮುಖಳಾದಳು. ಒಂದು ಹೊರೆ ಹುಲ್ಲು ಕುಯ್ದನಂತರ ಅದನ್ನು ತಲೆ ಮೇಲೆ ಹೊತ್ತು ಮಳೆಯೊಳಗೆ ವೇಗವಾಗಿ ನಡೆಯತೊಡಗಿದಳು. 

ಅವಳ ಮನೆಯಿಂದ ಅವಳು ಕೆಲಸ ಮಾಡುವ ಸಾವಕಾರರ ಈ ತೋಟಕ್ಕೆ ದಿನವು ಹುಲ್ಲು ಕೊಯ್ಯಲು ಸಾಯಂಕಾಲದ ಸಮಯದಲ್ಲಿ ಬರುತ್ತಾ ಇದ್ದಳು. ರವಿವಾರವಾದುದರಿಂದ ಕೆಲಸಕ್ಕೆ ರಜೆ ಇದ್ದುದರಿಂದ ಕೊಂಚ ಬೇಗಲೇ ಹುಲ್ಲು ಕೊಯ್ಯುವ ಸಲುವಾಗಿ ಬಂದಿದ್ದಳು. ದಿನವು ಗಂಡನ ಜೊತೆಗೆ ಬರುತ್ತಿದ್ದಳು, ಇವತ್ತು ಅದೆಕೋ ಒಬ್ಬಂಟಿಗಳಾಗಿ ಬಂದಿದ್ದಳು. ಅವಳ ಮನಸ್ಸಲ್ಲಿ ಯಾವುದೋ ಯೋಚನೆ ಇತ್ತು. 

ಏನೋ ಯೋಚಿಸುತ್ತ ಸಂಕ ( ತೋಟದ ನಡುವೆ ಮತ್ತೊಂದು ದಾರಿಗೆ ಸಾಗಲು ಹಳ್ಳದ ನಡುವೆ ಸಣ್ಣ ಮರದ ಹಲಗೆಗಳಿಂದ ನಿರ್ಮಿಸಿರುವ ಸಣ್ಣ ಸೇತುವೆಯ) ಮೇಲೆ ಕಾಲು ಇಟ್ಟವಳಿಗೆ ಕಾಲು ಜಾರಿದ್ದೇ ತಿಳಿಯಲಿಲ್ಲ. ಹುಲ್ಲಿನ ಹೊರೆಯ ಸಮೇತ ಅಂಗಾತ ಬಿದ್ದ ಜಲಜ , ರಭಸವಾಗಿ ಹರಿಯುತ್ತಿದ್ದ ಹಳ್ಳದ ನೀರಿನೊಳಗೆ ಕಣ್ಮರೆಯಾದಳು. ಜೋರಾಗಿ ಸುರಿಯುತ್ತಿದ್ದ ಮಳೆ ಅವಳು ನೀರಿನಲ್ಲಿ ಕೊಚ್ಚಿ ಹೋಗುತ್ತಾ ಇರುವುದನ್ನು ನೋಡಿಯೂ ನೋಡದಂತೆ ಸುರಿಯುತ್ತಲೇ ಇತ್ತು. 

ಹುಲ್ಲು ತರಲು ಹೋದವಳು ಎರಡು ದಿನಗಳ ಬಳಿಕ ಹೆಣವಾಗಿ ಬಂದದ್ದನ್ನು ನೋಡಿ ಜಲಜಳ ಗಂಡ ಬೀರನ ಕಣ್ಣುಗಳು ಕೊಳಗಳಾಗಿದ್ದವು. ನಾನು ಸುಮ್ಕೆ ಜಲಜುನ್ ಮೇಲೆ ಅನುಮಾನ ಪಡಬಾರದಾಗಿತ್ತು, ಅದೆ ಬೇಸರದಾಗೆ ಏನೋ ಮಾಡ್ಕಂಡ್ಲೋ ಏನೋ ಅಥವಾ ಅದುನ್ನೆ ಯೋಚಿಸ್ತಾ ಸಂಕ ದಾಟಿದ್ಲೋ ಏನೋ ಎಂದು ಬೇಸರದಿಂದ ಅಳತೊಡಗಿದ. 

ಮಳೆಯ ನೀರನ್ನು ಕುಡಿದ ಜಲಜಳ ದೇಹ ಊದಿಕೊಂಡಿತ್ತು. ಮಳೆಗಾಲದಲಿ ಮಸಣ ಸೇರಿದವಳ ನೆನಪು ಬೀರನ ಎದೆಗೆ ಕೊಳ್ಳಿ ಇರಿದಂತೆ ಗಾಯ ಮಾಡಿತ್ತು. ಮಳೆಗಾಲದ ಮಹಾ ಮಳೆಯು ನೀರಿನ ಹೆಸರನ್ನಿಟ್ಟುಕೊಂಡವಳನು ಬಿಡದೆ ಮಣ್ಣಲಿ ಮಣ್ಣಾಗಿಸಿತು. 


Rate this content
Log in

Similar kannada story from Tragedy