ಹೋಳಿ ಹಬ್ಬದ ಕಥೆ
ಹೋಳಿ ಹಬ್ಬದ ಕಥೆ
ಅಜ್ಜೀ...ಅಜ್ಜೀ.... ನಾಳೆ "#Rang barse" "ಹೋಳಿ ಹಬ್ಬ"ಅಂತೆ, ಅದುಕ್ಕೆ ನಮಗೆ ಶಾಲೆಗೆ ರಜ ಕೊಟ್ಟಿದಾರೆ ಗೊತ್ತಾ, ಎಂದ ಶಾಲೆಯಿಂದ ಬಂದ ಮಹೇಶ, ಅಜ್ಜಿಯ ಬಳಿ, ಹೌದಾ ಮಗಾ... ಹೋಗಿ ಕೈಕಾಲು ತೊಳಕಂಡು ಬಾ, ನಾನು ಹಾರ್ಲಿಕ್ಸು ಕೊಡುತೀನಿ,ಎಂದರು. ಹು ಆಯ್ತು ಅಜ್ಜೀ ಎಂದು ಬಚ್ಚಲಿಗೆ ಕುಣಿಯುತ್ತ ಓಡಿದ. ಮಹೇಶನ ಅಜ್ಜಿ ಶಾರದಮ್ಮ ಹಳೆಯಕಾಲದವರು, ರಾಮಾಯಣ , ಮಹಾಭಾರತ ಎಲ್ಲವೂ ಇವರ ಬಾಯಲ್ಲೇ ಇತ್ತು, ಯಾವ ಕಥೆ ಕೇಳಿದರು ತಟ್ಟನೆ ಹೇಳುತ್ತಿದ್ದರು. ಹಾಗೂ ಕೆಲವು ಆಯುರ್ವೇದದ ಔಷದಗಳ ಬಗೆಗೂ ತಿಳಿದಿತ್ತು. ಯಾವಾಗಲೂ ಪುಸ್ತಕ ಓದುತ್ತಲೋ, ಇಲ್ಲಾ ದೇವರ ಸ್ಮರಣೆ ಮಾಡುತ್ತಲೋ ಕುಳಿತಿರುತ್ತಿದ್ದರು. ಶಾರದಮ್ಮನಿಗೆ ಇಬ್ಬರು ಮಕ್ಕಳು, ಮಗ ತನ್ನದೇ ಸ್ವಂತ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದರು, ಮಗಳನ್ನು ಪಕ್ಕದ ಊರಿಗೆ ಮದುವೆ ಮಾಡಿ ಕೊಟ್ಟಿದ್ದರು. ಮಗನ ಮಗನಾದ ಇವರ ಮೊಮ್ಮಗ ಪುಟ್ಟ ಬಾಲಕ ಮಹೇಶ ಐದನೇ ತರಗತಿ ಓದುತ್ತಿದ್ದ, ದಿನವೂ ಶಾಲೆ ಬಿಟ್ಟು ಬಂದ ಬಳಿಕ ಅವನಿಗೊಂದು ಕಥೆಯನು ಹೇಳಲೇಬೇಕಿತ್ತು, ಇಲ್ಲವಾದರೆ ಊಟ ಮಾಡುವುದಿಲ್ಲ, ಪಾಠ ಓದುವುದಿಲ್ಲ ಎಂದು ರಚ್ಚೆ ಹಿಡಿಯುತ್ತಿದ್ದ. ಅವನ ಕಾಟಕ್ಕಾದರು ಶಾರದಮ್ಮ ಹೊಸ ಹೊಸ ಕಥೆ ಪುಸ್ತಕ ಓದಿಯಾದರು ಕಥೆ ಹೇಳುತ್ತಿದ್ದರು.
ಈ ದಿನವೂ ಯಾವ ಕತೆ ಹೇಳುವುದಪ್ಪಾ ಎಂದು ಯೋಚಿಸುತ್ತಾ ಕುಳಿತ ಶಾರದಮ್ಮನವರನ್ನು ಹಿಂದಿನಿಂದ ಹೀ..... ಎಂದು ಕೂಗಿ ಹೆದರಿಸಿದ ಮೊಮ್ಮಗ, ಹೆದರಿದಂತೆ ನಟಿಸಿದವರೆ, ನನ್ನ ಕೂಸು ಶಾಲೇಲಿ ಇವತ್ತು ಏನೇನು ಪಾಠ ಕಲೀತು, ಎಂದರು. ಅಯ್ಯೋ ಅಜ್ಜಿ ಅದೆಲ್ಲ ಇರಲಿ, ಆಮೇಲೆ ಹೇಳ್ತೀನಿ, ಈಗ ನನಗೆ ನೀನು ಒಂದು ಕಥೆ ಹೇಳಬೇಕು, ಅದು ಯಾವ ಕಥೇಂತ ನಾನೇ ಹೇಳುತೀನಿ ಅಂದ. ಮೊಮ್ಮಗನ ಮಾತಿನಿಂದ ಅಚ್ಚರಿಗೊಂಡ ಅಜ್ಜಿ ನೀನೆ ಹೇಳುತ್ತೀಯಾ ಯಾವ ಕಥೇನಪ್ಪ ಅದು ಎಂದರು. ಅದೂ... ಅದೂ... ನಾಳೆ "#Rang barse" ಹೋಳಿ ಹಬ್ಬಾ ಅಲ್ವಾ... ಹೋಳಿ ಹಬ್ಬದ ಕಥೆ ಹೇಳು. ನೀನು ಹೇಳಲೇಬೇಕು. ಯಾವ ಕಥೆ ಕೇಳುತ್ತಾನೋ ಎಂದು ಹೆದರಿದ್ದ ಅಜ್ಜಿ ನಗುತ್ತಾ... ಆಯ್ತು ಪುಟ್ಟ, ನೀನು ಹಾರ್ಲಿಕ್ಸ್ ಕುಡಿತಾ ಇರು,ಈಗ ಬರ್ತೀನಿ ಇರು ಎಂದು ಒಳ ಹೋದವರೆ, ಹೋಳಿ ಹಬ್ಬದ ಹಿನ್ನೆಲೆ ತಿಳಿದುಕೊಂಡು, ಬಂದು ಮೊಮ್ಮಗನ ಬಳಿ ಕುಳಿತರು. ಬಂದ್ಯಾ ಅಜ್ಜೀ... ನಾನು ಹಾರ್ಲಿಕ್ಸ್ ಕುಡಿದಾಯ್ತು, ಈಗ ಹೇಳು ಎಂದ.
ಕೇಳು ಮಗು.... ಹಿಂದೆ ತಾರಕಾಸುರ ಅನ್ನೋ ರಾಕ್ಷಸ ಒಬ್ಬ ಇದ್ದ, ಅವನು ತುಂಬಾ ದುರಹಂಕಾರಿ ತಾನೇ ದೊಡ್ಡವನು ಎಂಬ ಅಹಂಕಾರದಲ್ಲಿ ಮೆರಿತಾ ಇದ್ದ. ಬಹಳಾ ಕ್ರೂರಿಯಾಗಿದ್ದ. ಅಜ್ಜೀ... ಅವನಿಗೆ ದೊಡ್ಡ ದೊಡ್ಡ ಕೋರೆ ಹಲ್ಲಿತ್ತ ಪುಟ್ಟ ಮಹೇಶ ಪ್ರಶ್ನಿಸಿದ. ಹೌದು ಮಗೂ ರಾಕ್ಷೇಸಂಗೆ ತಲೇಲಿ ಉದ್ದ ಕೋಡು , ಬಾಯಲ್ಲಿ ಕೋರೆ ಹಲ್ಲು, ಆಮೇಲೆ ಕೈಯಲ್ಲಿ ಉದ್ದ ಉದ್ದ ಉಗುರು ಇರುತ್ತೆ , ಹೋ ಹೌದಾ.... ಹಾ ಮಗು, ಅವನು ಒನ್ಸಲ ಏನು ಮಾಡ್ದ ಅಂದ್ರೆ ನಮ್ಮನ್ನೆಲ್ಲ ಸೃಷ್ಟಿ ಮಾಡಿದಾರಲ್ಲವಾ ಚತುರ್ಮುಖ ಬ್ರಹ್ಮ ಅವರತ್ರ ಮರಣಾನೆ ಬರದೇ ಇರ್ಲಿ ಅಂತ ತಪ್ಪಸ್ಸು ಮಾಡ್ದ, ಅಕಸ್ಮಾತು ತನಗೆ ಮರಣ ಬಂದರು ಅದು ಶಿವನ ಏಳು ದಿನದ ಮಗನಿಂದಲೇ ಬರ್ಲೀಂತ ತಪಸ್ಸು ಮಾಡಿ ವರ ಕೇಳಿದ್ನಂತೆ. ಹೌದಾ ಅಜ್ಜೀ... ಮಹೇಶ ಕಥೆ ಕೇಳುತ್ತಾ ಹೇಳಿದ.
ಹಾ...ಈ ವರ ಸಿಕ್ಕಮೇಲಂತು ಅವನನ್ನ ಹಿಡಿಯೋರೆ ಯಾರು ಇಲ್ಲ ಆದ್ರು, ಅವನು ದೇವತೆಗಳಿಗು ತೊಂದರೆ ಕೊಡೋದಕ್ಕೆ ಶುರು ಮಾಡಿದ. ಇವನ ಉಪದ್ರ ಸಹಿಸೋಕಾಗದೆ ದೇವತೆಗಳೆಲ್ಲಾ ಸೇರಿ ಒಂದು ಉಪಾಯ ಮಾಡಿದ್ರು, ಹೌದಾ ಅಜ್ಜೀ... ಏನು ಉಪಾಯ ಇರ್ಬೋದು..? ಮಹೇಶ ಪ್ರಶ್ನಿಸಿದ, ಇರು ಹೇಳ್ತೀನಿ.... ಎಂದು ನೀರು ಕುಡಿದು ಸುಧಾರಿಸಿಕೊಂಡ ಶಾರದಮ್ಮ ಕಥೆ ಮುಂದುವರಿಸಿದರು. ಕಾಮ ದೇವ ಅಂತ ಒಬ್ಬ ಇದ್ದ ಅವನ ಬಳಿ ಹೋಗಿ ತಮ್ಮನ್ನ ಈ ಕಷ್ಟದಿಂದ ಪಾರು ಮಾಡಿವಂತೆ ಕೇಳಿದ್ರು, ಶಿವ ಅಂದ್ರೆ ಮಹಾದೇವ ಅವನಿಗೆ ಹೂ ಬಾಣ ಬಿಡಬೇಕು ಅಂತ ಕೇಳಿದ್ರು, ಆದರೆ ಇದು ಅಷ್ಟು ಸುಲಭ ಆಗಿರ್ಲಿಲ್ಲ ಮಗು, ಯಾಕಜ್ಜೀ.... ಮಹೇಶ ಕುತೂಹಲದಿಂದ ಪ್ರಶ್ನಿಸಿದ. ಹಾ... ಯಾಕಂದ್ರೆ ಶಿವ ಮತ್ತು ಅವನ ಹೆಂಡತಿ ಶಿವೆ, ದೊಡ್ಡ ತಪಸ್ಸು ಮಾಡ್ತ ಇದ್ದರು, ಈ ಕಾಮ ದೇವ ಏನಾದ್ರು ಹೂ ಬಾಣ ಈ ಸಮಯದಲ್ಲಿ ಬಿಟ್ಟರೆ , ತಪೋಭಂಗ ಆಗಿ ಶಿವ ಸಿಟ್ಟು ಮಾಡ್ಕಂಡು ಅವನನ್ನ ಸುಟ್ಟು ಹಾಕುವ ಎಲ್ಲಾ ಲಕ್ಷಣ ಇತ್ತು. ಇದು ತಿಳಿದಿದ್ದು ಕೂಡ ಕಾಮದೇವ ಮತ್ತವನ ಹೆಂಡತಿ ರತಿದೇವಿ ದೇವತೆಗಳ ಮಾತಿಗೆ, ಲೋಕ ಕಲ್ಯಾಣದ ಉದ್ದೇಶಕ್ಕಾಗಿ ಈ ಸತ್ಕಾರ್ಯವ ಮಾಡಲು ಒಪ್ಪುತ್ತಾರೆ. ಹೋ ಹೌದಾ ಅಜ್ಜಿ ಸುಟ್ಟೋಗ್ತೀನಿ ಅಂತ ಗೊತ್ತಿದ್ರು ಒಪ್ಪಿದ್ನಾ ಎಂದು ಅಚ್ಚರಿಯಿಂದ ಪ್ರಶ್ನಿಸಿದ. ಹಾ ಮಗು... ತಪ್ಪಸ್ಸು ಮಾಡ್ತ ಇದ್ದ, ಶಿವನಿಗೆ ಹೂ ಬಾಣ ಬಿಟ್ಟ ಕಾಮದೇವ, ತಪೋಭಂಗ ಆಗಿ ಶಿವ ಉಗ್ರ ರೂಪಿಯಾಗಿ ತನ್ನ ಮೂರನೇ ಕಣ್ಣು ತೆರೆದು ಕಾಮ ದೇವನ ಸುಟ್ಟು ಭಸ್ಮ ಮಾಡಿದ. ಅಯ್ಯೋ... ಹೌದಾ ಶಿವಪ್ಪ ದೇವ್ರಿಗೆ ಮೂರು ಕಣ್ಣು ಇದೆಯಾ, ಅದರಲ್ಲಿ ಬೆಂಕಿ ಇದ್ಯಾ, ಅಜ್ಜೀ... ಮಹೇಶ ಅಜ್ಜಿಯನ್ನು ಅಚ್ಚರಿಯನ್ನು ತಡೆಯಲಾರದೆ ಪ್ರಶ್ನಿಸಿದ. ಹಾ ಮಗು ಹೌದು, ಆಗ ಕಾಮ ದೇವನ ಹೆಂಡತಿ ರತಿದೇವಿ ಅಳ್ತಾ, ಶಿವನ ಕಾಲಿಗೆ ಬಿದ್ದು ತನ್ನ ಪತಿಯ ಜೀವ ಉಳ್ಸಿಕೊಡು ಅಂತ ಕೇಳ್ತಾಳೆ, ಆಗ ಶಿವ ಶಾಂತಗೊಳ್ತಾನೆ, ನಿನ್ನ ಕಣ್ಣಿಗೆ ಮಾತ್ರ ಶರೀರ ರೂಪದಲ್ಲಿ ಕಾಣ್ತಾನೆ ಅಂತ ಅವಳಿಗೆ ವರ ಕೊಡ್ತಾನೆ. ಲೋಕದ ಕಲ್ಯಾಣಕ್ಕಾಗಿ ಅವನು ತನ್ನ ಜೀವನೆ ಲೆಕ್ಕಿಸದೆ ಮಹಾ ತ್ಯಾಗಿಯಾದ ಅದಕ್ಕೆ ಕಾಮ ದೇವನ ದಹನವಾದ ದಿನಾನ ಅಂದ್ರೆ ನಾಳೆ "#Rang barse" ಹೋಳಿ ಹುಣ್ಣಿಮೆ ಅಥವಾ ಕಾಮನ ಹುಣ್ಣಿಮೆ ಆಗಿ ಎಲ್ಲಾ ಕಡೆ ಆಚರಿಸ್ತಾರೆ. ಹೌದಾ ಅಜ್ಜೀ... ಕಾಮದೇವ ಎಲ್ಲರಿಗೂ ಒಳ್ಳೆದಾಗ್ಲೀಂತ ಎಷ್ಟು ದೊಡ್ಡ ತ್ಯಾಗ ಮಾಡಿದಾನೆ ಅಲ್ವಾ, ಹಾ ಮಗು ಈಗ ನೀನು ಪಾಠ ಓದಬೇಕು ಕಥೆ ಹೇಳಿದೆನಲ್ಲಾ ಹೋಳಿ ಹಬ್ಬದ್ದು, ಈಗ ಹೋಗಿ ಪಾಠ ಓದ್ಕೋ , ಅಜ್ಜೀ ನಾಳೆ ರಜ ಇದೆಯಲ್ವಾ, ನಾಳೆ ಓದುತ್ತೀನಿ, ಇವಾಗ ಮತ್ತೊಂದು ಕಥೆ ಹೇಳಜ್ಜೀ.... ಮತ್ತೊಂದು ಕಥೇನಾ, ಹಾ , ಸರಿ ಈ ಕಥೆ ಕೇಳಿದ ಮೇಲೆ ಓದ್ಬೇಕು ಇಲ್ಲಾಂದ್ರೆ ನಾನು ನಾಳೆ ಕಥೆ ಹೇಳಲ್ಲಾ, ಹಾ ಆಯಿತು ಅಜ್ಜೀ... ಎಂದ ಮಹೇಶ.
ಹಾ ಈಗ ಇದೇ "#Rang barse" ಹೋಳಿಯ ಬಗ್ಗೆ ಇನ್ನೊಂದು ಪೌರಾಣಿಕ ಕಥೆ ಇದೆ ಹೇಳ್ತೀನಿ ಕೇಳು. ಹೋ ಹೋಳಿ ಬಗ್ಗೆ ಇನ್ನೊಂದು ಕಥೇನಾ , ಸರಿ ಸರಿ ಹೇಳು,ಕುತೂಹಲದಿಂದ ಹೇಳಿದ ಮಹೇಶ. ಮತ್ತೊಮ್ಮೆ ನೀರು ಕುಡಿದು ಗಂಟಲು ಸರಿ ಪಡಿಸಿಕೊಂಡ ಶಾರದಮ್ಮ, ಹಾ ಕೇಳು ಎಂದು ಕಥೆ ಹೇಳಲು ಶುರು ಮಾಡಿದರು.
ನೀನು ಭಕ್ತ ಪ್ರಹ್ಲಾದ ಅಂತ ಒಬ್ಬ ಬಾಲಕ ಇದ್ದ, ಅವನ ಕಥೆ ಕೇಳಿದಿಯಾ..? ಇಲ್ಲಾ ಅಜ್ಜೀ.. ಎಂದ ಮಹೇಶ. ಹಾ... ಈ ಪ್ರಹ್ಲಾದ ಎಂಬ ಬಾಲಕ, ತಾನು ದೇವರು, ಇಡೀ ಜಗತ್ತಿಗೆ ಅಂತ ಭ್ರಮೆಯ ಅಹಂಕಾರದಲ್ಲಿ ಜೀವಿಸುತ್ತಾ ಇದ್ದ ಹಿರಣ್ಯ ಕಶಿಪು ಅನ್ನುವ ದೈತ್ಯ ರಾಜನ ಮಗನಾಗಿದ್ದ. ಈ ಬಾಲಕ ದೇವರು ಶ್ರೀ ಹರಿಯೇ ಜಗನ್ನಿಯಾಮಕ ಅವನೇ ಸೂತ್ರಧಾರ ಎಂದು ಹರಿಯನ್ನು ಹಾಡಿ ಹೊಗಳುತ್ತಿದ್ದ, ಇದುನ್ನ ನೋಡಿ ಅವನ ತಂದೆ ಹಿರಣ್ಯ ಕಶಿಪುಗೆ ಕೋಪ ಬರುತ್ತೆ, ಅವನಿಗೆ ಶ್ರೀ ಹರಿಯ ಕಂಡರೆ ಆಗ್ತಾ ಇರಲ್ಲ. ತನ್ನ ಮಗ ಹೀಗೆ ಆ ದೇವರನ್ನ ಹೊಗಳೋದು ನೋಡಿ ಇವನಿಗೆ ಆಗದೆ ನಿಧಾನಕ್ಕೆ ಹೇಳಿದ, ತನ್ನ ಬಿಟ್ರೆ ಯಾರು ಇಲ್ಲ, ನನ್ನನ್ನೇ ಹೊಗಳು ಅಂತ. ಆದರೆ ಮಗ ಕೇಳದೆ ಇದ್ದಾಗ , ಕೊಲ್ಲಕ್ಕೆ ಬಹಳ ಪ್ರಯತ್ನ ಮಾಡ್ತಾನೆ, ಹೌದಾ ಅಜ್ಜೀ.... ಮಗಾಂತನು ನೋಡ್ದೆ ಕೊಲ್ಲುತಾನಾ.. ಮಹೇಶ ಅರಳುಗಣ್ಣಿನಿಂದ ಅಚ್ಚರಿಯಾಗಿ ಪ್ರಶ್ನಿಸಿದ. ಹಾ ಮಗು, ಅವನು ಬಹಳ ಕೆಟ್ಟವನು ಅದುಕ್ಕೆ, ಬಹಳಾ ಪ್ರಯತ್ನ ಮಾಡ್ತಾನೆ ಮಗನ ಕೊಲ್ಲಕ್ಕೆ ಆದ್ರೆ ಈ ಬಾಲಕ ಹರಿಯ ಸ್ಮರಣೆ ಮಾಡಿ ಪಾರಾಗ್ತನೆ. ಆಗ ಈ ಹಿರಣ್ಯ ಕಶಿಪು ತನ್ನ ತಂಗಿ ಹೋಳಿಕಾಳ ಸಹಾಯ ಕೇಳ್ತಾನೆ, ಅವಳಿಗೆ ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರವಿರುವ ವರ ಹೊಂದಿರ್ತಾಳೆ. ಅವಳು ಅಣ್ಣನ ಆಜ್ಞೆಯಂತೆ ಆ ಬಾಲಕನ್ನ ಹೊತ್ತು ಕೊಂಡು ಅಗ್ನಿಕುಂಡಾನ ಪ್ರವೇಶ ಮಾಡ್ತಾಳೆ. ಹೌದಾ ಅಜ್ಜೀ.... ಮಹೇಶ ಅಂದ. ಹಾ ಮಗು ಆದರೆ ಶ್ರೀ ಹರಿಯ ನಾಮ ಸ್ಮರಣೆ ಮಾಡ್ತಾ ಇದ್ದ ಆ ಬಾಲಕಂಗೆ ಏನು ಆಗಲ್ಲ, ಆದ್ರೆ ಆ ಹೋಳಿಕಾ ಮಾತ್ರ ಬೆಂಕಿಲಿ ಸುಟ್ಟು ಹೋಗ್ತಾಳೆ. ಭಗವಂತನ ನಾಮ ಜಪ ಮಾಡ್ತಾ ಇದ್ದ ಭಕ್ತ ಪ್ರಹ್ಲಾದ ಪವಾಡ ಸದೃಶ ರೀತಿಯಲ್ಲಿ ಪಾರಾಗ್ತಾನೆ. ಹೌದಾ ಅಜ್ಜೀ... ಎಂದ ಮಹೇಶ. ಹಾ ಮಗು, ಈ ಹೋಳಿಕಾಳ ದಹನವಾದ ದಿನವನ್ನ ( ರಂಗ್ ಬರ್ಸೆ) "#Rang barse" ಹೋಳಿ ಅಂತ ಅಂದರೆ ಹೋಳಿ ಹಬ್ಬ ಅಂತ ಆಚರಿಸ್ತಾರೆ ಗೊತಾಯ್ತ ಎಂದರು ಶಾರದಮ್ಮ. ಹಾ ಗೊತಾಯ್ತು, "# Rang barse " ಹೋಳಿ ಹಬ್ಬದ ಹಿಂದೆ ಇಷ್ಟು ದೊಡ್ಡ ಕಥೆ ಇದೇಂತ ಗೊತ್ತಿರ್ಲಿಲ್ಲ,ಅಜ್ಜೀ.. ಎಂದ ಮಹೇಶ.
ಹಾ ಮಗು ನಾನು ಇವತ್ತು ಹೇಳಿದ ಎರಡೂ "# Rang barse" ಹೋಳಿಯ ಹಬ್ವದ ಕಥೆಗಳ ಸಾರಾಂಶ ಒಂದೇ, ಕೆಟ್ಟದ್ದುನ್ನ ಸುಟ್ಟು ಬಿಡೋದೂಂತ, ಅಂದರೆ ನಮ್ಮೊಳಗೆ ಇರುವ ಅರಿಷಡ್ವರ್ಗಗಳನ್ನ ಸುಡೋದೂಂತ. ಹಾಗಂದರೆ ಏನು ಅಜ್ಜೀ ಮಹೇಶ ಅರ್ಥವಾಗದೆ ಪ್ರಶ್ನಿಸಿದ. ಹಾಗಂದರೆ ಮನುಷ್ಯನೊಳಗಿರುವ ಕಾಮ,ಕ್ರೋದ, ಮೋಹ, ಲೋಭ, ಮದ, ಮತ್ಸರ ಇವನ್ನೆಲ್ಲ ಮನಸೊಳಗಿಂದಲೇ ಸುಟ್ಟು ಬಿಡಬೇಕೂಂತ. ಅಂದರೆ ನಮ್ಮೊಳಗಿರೋ ಅಸುರೀ ಗುಣಗಳ ಬಿಡಬೇಕೂಂತ, ಅದಕ್ಕೆ ಕೆಲವು ಕಡೆ ಕಾಮನನ್ನು ಕಟ್ಟಿಗೆಯಲ್ಲಿ ಮಾಡಿ ಅದಕ್ಕೆ ಬೆಂಕಿ ಇಟ್ಟು ಕಾಮನ ದಹನದ ಹಬ್ಬವಾಗಿಯೂ "#Rang barse" ಹೋಳಿ ಹಬ್ಬವನ್ನ ಆಚರಿಸ್ತಾರೆ. ಹೌದಾ ಅಜ್ಜೀ.... ಹು ಹೌದು ಕಣೋ , ಯಾವತ್ತು ಕೆಡುಕಿಗೆ ಜಯ ಇಲ್ಲ, ಒಳ್ಳೆಯದಕ್ಕೆ ಯಾವಾಗಲು ಜಯ ಸಿಗುತ್ತೆ ಅಂತ ಮಗು, ಅದಕ್ಕೆ ಯಾವಾಗಲು ಭಗವಂತನ ಸ್ಮರಣೆ ಮಾಡಬೇಕು, ಒಳ್ಳೇದು ಮಾಡಬೇಕು ಅನ್ನೋದು ಎಂದರು ಶಾರದಮ್ಮ. ಹಾ ಅಜ್ಜೀ... ನಾನು ನಾಳೆ "#Rang barse" ಹೋಳಿ ಆಚರುಸ್ತೀನಿ, ನನ್ನ ಸ್ನೇಹಿತರ ಜೊತೆ, ಮತ್ತೆ ನೀವು ಹೇಳಿದ ಹೋಳಿ ಹಬ್ಬದ ಕಥೇನು ಅದರ ಸಂದೇಶನು ಅವರಿಗೆ ಹೇಳ್ತೀನಿ ಎಂದ ಖುಷಿಯಲ್ಲಿ ಮಹೇಶ. ಹಾ ಈಗ " Rang barse " ಹೋಳಿ ಹಬ್ಬದ ಬಗ್ಗೆ ಎರಡು ಕಥೆ ಕೇಳಿದೆಯಲ್ಲಾ, ಇನ್ನು ಪಾಠ ಓದಿಕೋ ಹೋಗು, ಇಲ್ಲಾಂದ್ರೆ ಅಜ್ಜಾ... ಮನೆಗೆ ಬಂದವರೆ ಬೈತಾರೆ ನೋಡು ಎಂದರು. ಹಾ... ಆಯ್ತು ಅಜ್ಜೀ.... ನೀನು ಹೇಳಿದಂತಹ "#Rang barse" ಹೋಳಿ ಹಬ್ಬದ ಎರಡೂ ಕಥೆನು ತುಂಬಾ ಚೆನ್ನಾಗಿತ್ತು. ನಾಳೇನು ಇನೊನ್ಸಲ ಹೇಳು ಅಜ್ಜೀ...., ಅಂದ ಮಹೇಶ, ಹಾ ಆಯಿತು ಮಗು ಈಗ ಓದ್ಕೋ ಎಂದರು. ಹಾ ಎಂದು ಮಹೇಶ ಓದಲು ಕೋಣೆಗೆ ಹೋದ. ಶಾರದಮ್ಮ ತಾವು ಸಣ್ಣವರಿದ್ದಾಗ ಬಾಲ್ಯದಲ್ಲಿ ಆಡುತ್ತಿದ್ದ "#Rang barse" ಹೋಳಿಯ ಹಬ್ಬದ ರಂಗಿನೋಕುಳಿಯ ಬಗೆಗೇ ನೆನಪಿಸಿಕೊಳ್ಳುತ್ತಾ ಕುಳಿತರು.
