ಮಳೆ ಹಾಗೂ ಪುಟ್ಟು
ಮಳೆ ಹಾಗೂ ಪುಟ್ಟು
ಜುಲೈ ತಿಂಗಳ ಮಳೆಗಾಲದ ಸಮಯ , ಆಷಾಡದ ಮಳೆ ಆಕಾಶವನ್ನೇ ಕಾಣದಂತೆ ಮಾಡಿತ್ತು. ಪುಟ್ಟ ಜೋರು ಮಳೆಯಿದ್ದ ಕಾರಣ ಎಲ್ಲಾ ಶಾಲೆಗಳಿಗು ರಜೆ ಇದ್ದುದರಿಂದ ಶಾಲೆಗೆ ಹೋಗದೆ ಮನೆಯಲ್ಲೆ ಇದ್ದ.
ಈ ಮಳೆ ಯಾವಾಗ ಬಿಡುತ್ತೋ ಏನೋ, ಶಾಲೆಗೆ ಹೋಗಕ್ಕು ಇಲ್ಲ, ಎಂದು ಬೇಸರದಿಂದ ತನ್ನ ಮನೆಯ ಕೋಣೆಯ ಕಿಟಕಿಯಿಂದ ಸುರಿವ ಮಳೆಯನ್ನೇ ನೋಡುತ್ತಾ ಕುಳಿತಿದ್ದ ಪುಟ್ಟ. ಇದ್ದಕ್ಕಿದ್ದಂತೆ ಒಂದು ಸಣ್ಣ ನಾಯಿ ಅವನ ಕೋಣೆಯ ಕಿಟಕಿಯ ಕೆಳಗೆ ಬಂದು ಕುಳಿತಿತು. ಅದರ ಮೈ ಮಳೆಯಲ್ಲಿ ನೆನೆದು ಚಂಡಿ ಆಗಿತ್ತು. ಅದು ಚಳಿಯಿಂದ ನಡುಗುತ್ತಾ ಇತ್ತು. ಮತ್ತು ಕೂರಲು ಸೂಕ್ತವಾದ ಬೆಚ್ಚನೆಯ ಜಾಗವನ್ನು ಹುಡುಕುತ್ತಾ ಇತ್ತು.
ನಾಯಿಯನ್ನು ಕಂಡ ಪುಟ್ಟನಿಗೆ ಕರುಣೆ ಉಕ್ಕಿತು. ಛೆ!! ಪಾಪ ಸಣ್ಣ ನಾಯಿ ಮಳೆಯಲ್ಲಿ ನೆನೆಯುತ್ತಾ ಇದೆ. ನಾನು ಅದನ್ನ ಮನೆ ಒಳಗೆ ತರುತ್ತೀನಿ ಎಂದು ಮನದಲ್ಲಿ ಅಂದುಕೊಂಡವನೆ ನಾಯಿ ಇದ್ದಲ್ಲಿ ಹೋದ. ಆ ನಾಯಿ ಪುಟ್ಟನನ್ನು ಕಂಡ ಕೂಡಲೆ ಹೆದರಿ ಬೊಗಳಲು ಶುರು ಮಾಡಿತು. ಪುಟ್ಟ ಹೆದರದೆ ಅದನ್ನು ಸಮಾಧಾನ ಮಾಡಿ ತಲೆನೇವರಿಸಿ ಅದಕ್ಕೆ ತನ್ನಿಂದ ಯಾವುದೇ ಅಪಾಯ ಆಗಲಾರದು ಎಂಬುದನ್ನು ಮನದಟ್ಟು ಮಾಡಿದ.
ನಿಧಾನಕ್ಕೆ ಪುಟ್ಟನನ್ನು ನಂಬಿದ ನಾಯಿ ಅವನ ಬಳಿ ಬಂದಿತು. ಅವನು ಅದನ್ನು ಮನೆಯ ಹಿಂಬದಿ ಜಗಲಿಗೆ ತಂದು ಅದನ್ನು ಬಟ್ಟೆಯಿಂದ ಒರೆಸಿ ಅದಕ್ಕೆ ಮಲಗಲು ಗೋಣಿ ಹಾಸಿದ. ಹಾಗೂ ಅಮ್ಮನ ಬಳಿ ಕೇಳಿ ಕುಡಿಯಲು ಹಾಲು , ತಿನ್ನಲು ದೋಸೆ ಕೊಟ್ಟ. ಹಸಿದಿದ್ದ ನಾಯಿಯು ಪುಟ್ಟನು ಕೊಟ್ಟಿದ್ದನ್ನೆಲ್ಲ ಒಂದೇ ಗುಟುಕಿಗೆ ತಿಂದು ಮುಗಿಸಿತು. ಹಾಗೂ ಪುಟ್ಟನಿಗೆ ದಿನ ಕಳೆದಂತೆ ಹತ್ತಿರವಾಯಿತು. ಅವನು ಅದಕ್ಕೆ ಟಾಮಿ ಎಂದು ಹೆಸರನ್ನಿಟ್ಟ. ಟಾಮಿಯು ಪುಟ್ಟನ ಮನೆಯ ಪ್ರೀತಿಯ ಸದಸ್ಯನಾಯಿತು. ಟಾಮಿ ನಾಯಿಯನ್ನು ಕೊಟ್ಟ ಮಳೆಗೆ ಪುಟ್ಟ ಮನದಲ್ಲೇ ಧನ್ಯವಾದ ಹೇಳಿದ. ಟಾಮಿ ನಾಯಿಯೊಂದಿಗೆ ಖುಷಿಯಿಂದ ಬಾಳಿದ.
