Ranjtha hebbar m

Children Stories Classics Others

4  

Ranjtha hebbar m

Children Stories Classics Others

ನೂರು ರುಪಾಯಿ ನೋಟು

ನೂರು ರುಪಾಯಿ ನೋಟು

3 mins
504


ಪುಟ್ಟಳ್ಳಿ ಎಂಬ ಗ್ರಾಮದಲ್ಲಿ ಭೀಮಪ್ಪ ಎಂಬ ವ್ಯಕ್ತಿ ತನ್ನ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದ. ಭೀಮಪ್ಪ ದೊಡ್ಡ ಸಾಹುಕಾರನಾಗಿದ್ದ, ಜೊತೆಗೆ ಬಡ್ಡಿ ವ್ಯವಹಾರವನ್ನು ನಡೆಸುತ್ತಿದ್ದ. ಊರಲ್ಲಿದ್ದ ಬಡ ಜನರು ತಮಗೆ ಹಣ ಬೇಕಾದಾಗ ಅನಿವಾರ್ಯವಾಗಿ ಬೇರೆ ದಾರಿಯಿಲ್ಲದೆ ಇವನ ಬಳಿಯೇ ಸಾಲ ಮಾಡುತ್ತಿದ್ದರು.‌ಕೊಟ್ಟ ಸಾಲಕ್ಕೆ ದುಪ್ಪಟ್ಟು ಬಡ್ಡಿ ಹಾಕಿ ಬಡವರ ರಕ್ತವನ್ನು ಜಿಗಳೆಯಂತೆ ಹೀರುತ್ತಿದ್ದ ಭೀಮಪ್ಪ. ಒಂದು ವೇಳೆ ಸಾಲ ಪಡೆದವರು ತಾನು ಹಾಕಿದ ಬಡ್ಡಿಯನ್ನು ಸೇರಿಸಿ ನಿಗದಿತ ಸಮಯದೊಳಗೆ ಕೊಡದೆ ಇದ್ದವರ ಮನೆಯನ್ನು ಜಪ್ತಿ ಮಾಡುತ್ತಿದ್ದ. ಹಾಗೂ ಸಾಲ ವಸೂಲಾಗುವವರೆಗು ತನ್ನ ತೋಟದಲ್ಲಿ ಅವರನ್ನು ಜೀತ ಮಾಡಿಸುತ್ತಿದ್ದ. ಕ್ರೂರಿಯೂ, ಅಹಂಕಾರಿಯೂ ಆಗಿದ್ದ ಇವನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಶಾಮು ಮತ್ತೊಬ್ಬನ ಹೆಸರು ಸೋಮು. ಶಾಮು ದೊಡ್ಡವನಾದರೆ ಸೋಮು ಸಣ್ಣವನು. ಶಾಮು ಥೇಟ್ ತಂದೆಯ ಗುಣವನ್ನೇ ಹೊಂದಿದ್ದು , ಅವನು ಯಾರದೋ ಮಕ್ಕಳಿಗೆ ಹೊಡೆದ, ಗುರುಗಳಿಗೆ ಬೈದ ಹೀಗೆ ಒಂದಲ್ಲ ಒಂದು ದೂರುಗಳು ಅವನ ಮೇಲೆ ಶಾಲೆಯಿಂದ , ಊರವರಿಂದ ದಿನವೂ ಬರುತಿತ್ತು. ಆದರೆ ಸೋಮು ಮಾತ್ರ ಅಣ್ಣನ ತದ್ವಿರುದ್ಧವಾಗಿದ್ದ. ತಂದೆಯು ಮಾಡುತ್ತಿದ್ದ ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ವಯಸ್ಸಲ್ಲಿ ಸಣ್ಣವನಾದರು ಸಹ , ಅಪ್ಪಾ ಈ ರೀತಿ ಬಡವರಿಗೆ ತೊಂದರೆ ಮಾಡಬಾರದು, ಅವರು ಮನುಷ್ಯರೇ ಎಂದು ತಿಳಿಹೇಳುತ್ತಿದ್ದ. ಇದರಿಂದ ಬೀಮಪ್ಪನಿಗೆ ಚಿಕ್ಕ ಮಗನಾದ ಸೋಮುವನ್ನು ಕಂಡರೆ ಆಗುತ್ತಿರಲಿಲ್ಲ. ದೊಡ್ಡ ಮಗ ಶಾಮು ತನ್ನ ಹಾಡಿ ಹೊಗುಳುತ್ತಾನೆ , ಎಂಬ ಕಾರಣಕ್ಕೆ ಅವನನ್ನು ಬಹಳ ಇಷ್ಟಪಡುತ್ತಿದ್ದ.

ಒಮ್ಮೆ ಭೀಮಪ್ಪ ಯಾರೋ ಕೊಟ್ಟ ಹಣವನ್ನು ಲೆಕ್ಕ ಮಾಡಿ ಮನೆಯ ಟಿಪಾಯಿಯ ಮೇಲಿಟ್ಟು, ಯಾವುದೋ ಕೆಲಸವಿರುವುದು ನೆನಪಾಗಿ ಹಣವನ್ನು ಒಳಗಿಡುವುದನ್ನು ಮರೆತು ಅಲ್ಲೇ ಬಿಟ್ಟು ಹೋದ.ತಂದೆ ಹೊರಗೆ ಹೋಗುವುದನ್ನೇ ಮರೆಯಲ್ಲಿ ನಿಂತು ನೋಡುತ್ತಿದ್ದ ಶಾಮು ನೋಟಿನ ಕಟ್ಟಿನಲ್ಲಿದ್ದ ನೂರು ರೂಪಾಯಿಯನ್ನು ಎಗರಿಸಿ ತನ್ನ ಜೇಬಿನಲ್ಲಿ ಇಟ್ಟುಕೊಂಡ. ಇದನ್ನು ನೋಡಿದ ಸೋಮು, ಅಣ್ಣಾ ಹೀಗೆಲ್ಲಾ ಕದಿಯಬಾರದು, "ಬಸವಣ್ಣನವರು ತಮ್ಮ ವಚನದಲ್ಲಿ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ", ಅಂತ ಹೇಳಿದಾರೆ ಶಾಲೆಯ ಪುಸ್ತಕದಲ್ಲಿ ಇದೆ ನೀನು ಓದಲಿಲ್ವಾ ಎಂದು ಅಣ್ಣನಿಗೆ ಬುದ್ದಿವಾದ ಹೇಳಿದ. ಹೇ....ನೀನು ನನಗಿಂತ ಸಣ್ಣವನು, ನನಗೆ ಮರಿಯಾದೆ ಕೊಡು , ಇದೆಲ್ಲ ನನಗೆ ಹೇಳಲಿಕ್ಕೆ ಬರಬೇಡ , ನನ್ನ ತಂದೆಯ ಹಣ ನಾನು ತೆಗೆದುಕೊಂಡೆ, ಅದರಲ್ಲಿ ಅವರನ್ನು ಕೇಳುವುದೇನಿದೆ ಎಂದು ಉದ್ದಟತನದ ಮಾತನಾಡಿ ಅಲ್ಲಿಂದ ಹೊರಟು ಹೋದ.

ಹೊರಗೆ ಹೋಗಿದ್ದ ಭೀಮಪ್ಪ ಮನೆಗೆ ಬಂದವನೆ, ನೋಟಿನ ಕಟ್ಟನ್ನು ಟಿಪಾಯಿಯ ಮೇಲೆ ಕಂಡ. ಅದನ್ನು ಮತ್ತೆ ಎಣಿಸಿದ, ಎಷ್ಟು ಎಣಿಸಿದರು ಅದರಲ್ಲಿ ಐವತ್ತುಸಾವಿರಕ್ಕೆ ನೂರು ರುಪಾಯಿ ಕಮ್ಮಿ ಎನಿಸುತಿತ್ತು. ಹತ್ತು ಸಲ ಎಣಿಸಿದರು ಸಹ ನೂರು ರುಪಾಯಿಯೇ ಕಡಿಮೆ ಆಗುತಿತ್ತು. ಇದೆಲ್ಲ ನನ್ನ ಮಕ್ಕಳದೇ ಕೆಲಸ ಇರಬೇಕೆಂದು ಯೋಚಿಸಿದ ಭೀಮಪ್ಪನು ಕಣ್ಣು ಕೆಂಪು ಮಾಡಿ ಮಕ್ಕಳನ್ನು ಕೂಗಿ ಕರೆದ.ಹೇ... ಮಕ್ಕಳಾ ನಿಮ್ಮಿಬ್ಬರಲ್ಲಿ ಯಾರು ಕದ್ದಿದ್ದೀರಿ ಹೇಳಿ, ಇಲ್ಲವಾದರೆ , ಇಬ್ಬರಿಗೂ ಸರಿ ಪೆಟ್ಟು ಬೀಳುತ್ತೆ ನೋಡಿ ಎಂದು ರೋಷದಿಂದ ಅಬ್ಬರಿಸಿದ.ಶಾಮುವಿಗೆ ಎಲ್ಲಿ ಸೋಮು ಸತ್ಯ ಹೇಳಿದರೆ ತನಗೆ ಏಟು ಬೀಳುವುದೋ ಎಂದು ಹೆದರಿ, ಅಪ್ಪಾ... ದುಡ್ಡು ಕದ್ದಿದ್ದು ಸೋಮುನೇ... ನಾನೇ ನೋಡಿದೆ ಎಂದು ಸುಳ್ಳು ಹೇಳಿದ.ಮೊದಲೇ ಚಿಕ್ಕ ಮಗನು ತನಗೆ ವಿರುದ್ದವಾಗಿದ್ದಾನೆ ಎಂಬ ಸಿಟ್ಟಿದ್ದ ಭೀಮಪ್ಪನು , ಹಿಂದೆ ಮುಂದೆ ಯೋಚಿಸದೆ ಸೋಮುವಿಗೆ ಮನ ಬಂದಂತೆ ಥಳಿಸಿ, ಅವನು ಕದ್ದಿಲ್ಲಪ್ಪ, ಹೊಡಿಬೇಡಿ ಎಂದು ಅಂಗಲಾಚಿದರು ಕೇಳದೆ, ತಡೆಯಲು ಬಂದ ಮಡದಿಗು ಒಂದೇಟು ಹೊಡೆದು ಸೋಮುವನ್ನು ಮನೆಯಿಂದ ಆಚೆ ಹಾಕಿದ.ತಾನು ಮಾಡದ ತಪ್ಪಿಗೆ ತನಗೆ ಶಿಕ್ಷೆಯಾಯಿತಲ್ಲ ಎಂದು ಮನನೊಂದ ಸೋಮು ಅಳುತ್ತಾ ದಾರಿ ಕಾಣದೆ ಊರನ್ನೇ ಬಿಟ್ಟು ಹೋದನು.

ಇದಾಗಿ ಮಾರನೇಯ ದಿನ ಯಾರದೋ ಅಂಗಡಿಯಲ್ಲಿ ಸಾಲ ವಸೂಲಿ ಮಾಡುವುದಕ್ಕೆಂದು ಪೇಟೆಯ ಹತ್ತಿರ ತನ್ನ ಜೀಪನಲ್ಲಿ ಹೋಗುತ್ತಿದ್ದ.ಆಗ ಒಂದು ಹುಡುಗ ಅಂಗಡಿಯ ಬಳಿ ನೂರುರುಪಾಯಿ ನೋಟನ್ನು ತೋರಿಸುತ್ತಾ ತಂಬಾಕನ್ನು ತೆಗೆದುಕೊಳ್ಳುತ್ತಿರುವುದು ಕಾಣಿಸಿತು. ಯಾರೋ ಹುಡುಗ ನನಗೇಕೆ ಎಂದು ಭೀಮಪ್ಪ ಮುಖ ತಿರುಗಿಸಿಕೊಂಡ ಆದರೆ ಆ ಹುಡುಗ ಅಂಗಡಿಯಿಂದ ಹೊರ ಬರುತ್ತಿದ್ದಂತೆ ತನ್ನದೇ ದೊಡ್ಡ ಮಗ ಶಾಮು ಎಂದು ಅವನಿಗೆ ಗೊತ್ತಾಯಿತು. ಆ ಹಣವನ್ನು ಕದ್ದದ್ದು ಶಾಮುವಾ ಛೆ...ಛೆ... ಅನ್ಯಾಯವಾಗಿ ಸೋಮುವನ್ನು ಹೊಡೆದು ಆಚೆ ಹಾಕಿದೆನಲ್ಲ ಎಂದು ಭೀಮಪ್ಪ ಬಹುವಾಗಿ ನೊಂದುಕೊಂಡ. ತನ್ನ ಆಳುಗಳನ್ನೆಲ್ಲ ಬಿಟ್ಟು ಹಲವು ಕಡೆ ಸೋಮುವನ್ನು ಹುಡುಕಿಸಿದ ಆದರೆ ಎಲ್ಲು ಮಗನ ಸುಳಿವೇ ಸಿಗಲಿಲ್ಲ. 

ನಿರಪರಾಧಿ ಮಗನನ್ನು ಹೊರ ಹಾಕಿದೆನಲ್ಲ ಎಂಬ ಕೊರಗಿನಲ್ಲೇ ಭೀಮಪ್ಪ ದಿನ ಕಳೆಯುತಿದ್ದ. ಒಮ್ಮೆ ಅವನಿಂದ ಸಾಲ ಪಡೆದವರಾರೋ ಹಣ ಹಿಂದಿರುಗಿಸಲು ಬಂದಾಗ, ನಿಮ್ಮ ಮಗ ಶಕಟಪುರದ ಗಿರಿಶಂಕರ ಮಠದಲ್ಲಿ ಇದ್ದಾನೆ, ನನ್ನನ್ನು ಕಂಡು ಚೆನ್ನಾಗಿಯೆ ಮಾತಾಡಿಸಿದ ,ಆದರೆ ನಾನಿಲ್ಲಿ ಇರುವ ವಿಚಾರ ತಂದೆಯವರಿಗೆ ತಿಳಿಸ ಬೇಡಿ, ಕಾರಣ ನಾನು ವೇದಾಧ್ಯಯನ ಮಾಡುತ್ತಿದ್ದೇನೆ. ಇಲ್ಲಿಯೇ ಇದ್ದು ಸ್ವಾಮಿಗಳ ಸೇವೆ ಮಾಡಬೇಕಂದಿದ್ದೇನೆ , ಊರಿಗೆ ಬಂದು ತಂದೆಯವರಿಗೆ ತೊಂದರೆ ಮಾಡುವ ಉದ್ದೇಶ ನನಗಿಲ್ಲ. ನೀವು ಬಂದಾಗೆಲ್ಲ ಮನೆಯವರ ಬಗ್ಗೆ ನನಗೆ ತಿಳಿಸುತ್ತಿರಿ ದಯಮಾಡಿ ಇದನ್ನು ನಡೆಸಿಕೊಡಿ ಎಂದು ನನ್ನಲ್ಲಿ ಬೇಡಿಕೊಂಡ ಎಂದರು.ಅವರ ಮಾತು ಕೇಳಿ ಭೀಮಪ್ಪನ ಕಣ್ಣಲ್ಲಿ ಕಂಬನಿ ಹರಿಯಿತು. ಎಲ್ಲಾದರು ಇರಲಿ ಮಗ ಒಟ್ಟಿನಲ್ಲಿ ಸುಖವಾಗಿರಲಿ ಎಂದು ಮನದಲ್ಲೇ ಹಾರೈಸಿದ ಭೀಮಪ್ಪ,ತನ್ನ ತಪ್ಪಿನ‌ ಪ್ರಾಯಶ್ಚಿತ್ತಕ್ಕಾಗಿ ತನ್ನ ಬಡ್ಡಿ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಬಡಬಗ್ಗರಿಗೆ ತನ್ನ ಕೈಲಾದ ಸಹಾಯವನ್ನು ಮಾಡಲು ಶುರು ಮಾಡಿದ. 

ನೀತಿ:- ಪ್ರತ್ಯಕ್ಷವಾಗಿ ಕಂಡರು ಪ್ರಮಾಣಿಸಿ ನೋಡು


Rate this content
Log in