ಮಲೆನಾಡಿನ ಮಳೆ
ಮಲೆನಾಡಿನ ಮಳೆ
ಥೋ..!! ಇವತ್ತು ಔಷಧಿ ಹೊಡಿಯವ್ರು ಬಂದಿಲ್ಲ, ಎಂತ ಮಾಡದು ಅಂತಾನೆ ಗೊತ್ತಾಗ್ತ ಇಲ್ಲ. ಸುಬ್ಬಣ್ಣ ತಲೆಬಿಸಿ ಮಾಡಿಕೊಂಡು ಮನೆಯ ಮುಂದಿನ ಜಗಲಿಯ ಕುರ್ಚಿಯ ಮೇಲೆ ಬಂದು ಕುಳಿತರು.
ಸುಬ್ಬಣ್ಣನ ಮಲೆನಾಡಿನ ಸಾಮಾನ್ಯ ಸಣ್ಣ ಮಟ್ಟದ ಕೃಷಿಕರು. ಮಳೆ ಶುರು ಆಗುವ ಮೊದಲು ತೋಟಕ್ಕೆ ಔಷಧಿ ಹೊಡಿಸಿಕೊಂಡು ಬಿಡಬೇಕೆಂಬ ದಾವಂತದಲ್ಲಿ ಇದ್ದರು. ಆದರೆ ಔಷಧಿ ಹೊಡೆಯುವವರು ಬರುತ್ತೇನೆ ಎಂದು ಹೇಳಿ ಅವತ್ತು ಕೈ ಕೊಟ್ಟರು. ಇದರಿಂದಾಗಿ ಸಿಗುವ ನಾಲ್ಕು ಅಡಿಕೆಯು ಹೋಗುತ್ತದಲ್ಲ ಎಂಬ ಬೇಸರ ಸುಬ್ಬಣ್ಣರನ್ನು ಕಾಡುತ್ತಾ ಇತ್ತು.
ಮಾಣಿ, ಮಾಣಿ...! ಎತ್ಲಾಗೆ ಹೋದ್ನೇನಾ , ಈ ಪಿರಿಪಿರಿ ಮಳೆ ಬೇರೆ ನಾನೊಬ್ನೆ ತೋಟ ತೋಟ ಅಂತ ಸಾಯ್ಬೇಕು ಇವನಿಗೆ ತೋಟಕ್ಕೆ ಇಳುದ್ರೆ ಇಂಬ್ಳ, ಚುಂಗ್ಳ ಅಂತಾನೆ. ಎಲ್ಲಾ ವಯಸ್ಸಾದವ ನಾನೆ ಮಾಡ್ಬೇಕು ಎಂದು ಮಗನಿಗೆ ಬೈಯುತ್ತಾ ತೋಟದ ಕಡೆ ನಡೆದರು.
ತೋಟದಲ್ಲಿ ಕೊಳೆ ರೋಗಕ್ಕೆ ಬಲಿಯಾದ ಹಳದಿಯಾದ ಹಲವು ಅಡಿಕೆ ಮರ ನೋಡಿ ಸುಬ್ಬಣ್ಣರಿಗೆ ಬೇಸರವಾಯಿತು. ಹೆತ್ತ ಮಕ್ಕಳಂತೆ ಅಡಿಕೆ ಸಸಿಯನ್ನು ನೆಟ್ಟು ಸಾಕಿದ್ದರು. ಅವೆಲ್ಲ ಈಗ ರೋಗಕ್ಕೆ ಬಲಿ ಆಗುವುದನ್ನು ಕಂಡು ಸುಬ್ಬಣ್ಣರ ಮನಸ್ಸು ಮಮ್ಮಲ ಮರುಗಿತು. ಈ ಮಳೆ ಬರೋಕಾಲಕ್ಕೆ ಬರಲ್ಲ , ಬೇಡ ಅಂದಾಗ ಕೊಡಪಾನಗಟ್ಟಲೆ ಸುರಿಯುತ್ತೆ ಎಂದು ಮಳೆಗೆ ಬೈದುಕೊಳ್ಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕಿದರು.
ಮಲೆನಾಡಿಗು ಮಳೆಗು ಎಂತಾ ನಂಟು! ಆದ್ರೆ ಈತರ ಮಳೆ ಹೊಯ್ದರೆ ಸಿಗೋ ಎರಡು ಕ್ವಿಂಟಾಲು ಅಡಕೆಗು ತತ್ವಾರ ಆಗುತ್ತೆ. ಮಗಳ ಮದುವೆ ಹೇಗೆ ಮಾಡೋದು ? ಈ ವರುಷ, ಮಗನ ಕಾಲೇಜಿಗೆ ಬೇರೆ ಸೇರಿಸಬೇಕು. ಏನು ಮಾಡೋದೋ ಏನೋ ಎಂದು ಸುರಿವ ಮಳೆಯನ್ನೇ ನೋಡುತ್ತಾ ಜಗಲಿಯ ಚಿಟ್ಟೆಯ ಮೇಲೆ ಚಿಂತೆಯ ಮೊಗವ ಹೊತ್ತು ಕುಳಿತರು ಸುಬ್ಬಣ್ಣ. ಹೊರಗೆ ಆಷಾಡದ ಮಳೆ ಆಕಾಶವೇ ತೂತು ಬಿದ್ದಿದೆಯೇನೋ ಎಂಬಂತೆ ಬರಬರನೆ ಸುರಿಯುತ್ತಲೇ ಇತ್ತು.
