ಪತ್ರೊಡೆ ಘಮ( ಮಳೆಗಾಲದ ತಿಂಡಿ)
ಪತ್ರೊಡೆ ಘಮ( ಮಳೆಗಾಲದ ತಿಂಡಿ)
ಇವತ್ತು ನಮ್ಮ ಮನೆಲಿ ಪತ್ರೊಡೆ ಗೊತ್ತಾ..!! ಶಾರದ ದೊಡ್ಡ ಕಣ್ಣು ಮಾಡಿ ಗೆಳತಿ ಮಾಲಿನಿಗೆ ಹೇಳಿದಳು. ಹೌದಾ....!! ಎಂಬ ಉದ್ಗಾರ ಒಂದು ಅವಳ ಬಾಯಿಂದ ಹೊರ ಬಂತು. ಸಪ್ಪೆ ಮೋರೆ ಹೊತ್ತ ಮಾಲಿನಿ ನಿಮಗೆ ಪತ್ರೊಡೆ ಎಲೆ ಎಲ್ಲಿ ಸಿಕ್ತು ಎಂದಳು ಗೆಳತಿಯನ್ನೇ ನೋಡುತ್ತಾ. ಅದು ನಮ್ ಅಮ್ಮ ತೋಟದ್ ಕೆಲಸಕ್ಕೆ ಹೋಗ್ತಾರಲ್ಲ ಅಲ್ಲಿ ಮರದ ಮೇಲೆ ಇತ್ತು ಅಂತಿದ್ರು. ಹೋ....!! ಅದು ಮರದ ಮೇಲೆ ಬಿಡೋದಾ ಅದು ಮತ್ತೆ ಕೆಳಗೆ ಬಿಡುತ್ತಲ ಕೆಸುವಿನ ಎಲೆ ಅದು ಯಾವ್ದೂ ಮಾಲಿನಿ ಅಚ್ಚರಿಯಿಂದ ಪ್ರಶ್ನಿಸಿದಳು. ಅಯ್ಯೋ ಅದಾ ಅದೆ ಬೇರೆ ಅದ್ರದ್ದು ಬೇರೆ ಸಾರು ಮಾಡ್ತಾರೆ, ಎಲೆದು ಗೊಜ್ಜು ಮಾಡ್ತಾರೆ ಅಂದಳು ತನಗೆಲ್ಲ ತಿಳಿದಿರುವಂತೆ ಶಾರದ ತಲೆ ಆಡಿಸುತ್ತಾ. ಮಾಲಿನಿಯ ಮೊಗದಲ್ಲಿ ಮಾತ್ರ ಮರದ ಕೆಸುವಿಗು , ನೆಲದಲ್ಲಿ ಬಿಡುವ ಕೆಸುವಿಗು ವ್ಯತ್ಯಾಸ ಗೊತ್ತಾಗಲಿಲ್ಲ. ಅವಳ ಮೊಗದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿತ್ತು.
ಶಾರದ ಮಾಲಿನಿ ಇಬ್ಬರು ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು. ಕಾಡಳ್ಳಿಯಲ್ಲಿ ಇದ್ದ ಒಂದೇ ಒಂದು ಸರ್ಕಾರಿ ಶಾಲೆಯಲ್ಲಿ ಇಬ್ಬರು ನಾಲ್ಕನೆ ತರಗತಿ ಕಲಿಯುತ್ತಾ ಇದ್ದರು. ಮಳೆಗಾಲದ ಸಮಯವಾದುದರಿಂದ ಆ ಸಮಯದಲ್ಲಿ ಮಾಡುವ ತಿಂಡಿಗಳೆಂದರೆ ಈ ಮಕ್ಕಳಿಗೆ ಬಹಳ ಅಚ್ಚುಮೆಚ್ಚಾಗಿತ್ತು.
ಹೋ...!! ಹಾಗಾದರೆ ನಾಳೆ ನನಗೆ ತಗಂಡು ಬಾರೆ ಒಂದೆರಡು ಎಲೆನಾ ಎನ್ನುತ್ತಾ ಗೆಳತಿಯ ಮೊಗವನ್ನೇ ನೋಡಿದಳು ಮಾಲಿನಿ. ಅಯ್ಯೋ ಅದು ಮರದ ಮೇಲೆ ಇರುತ್ತೆ ಮರ ಹತ್ತಿ ಕುಯ್ಯ್ಬೇಕು ಕಣೆ. ನೋಡಣ ಮನೆಲಿ ಕೇಳಿ ನಿಂಗೆ ತಗಂಡು ಬರ್ತೀನಿ. ನಿನ್ನೆ ತಂದಿರೋದು ಇವತ್ತಿಗೆ ಮುಗ್ದೋಗಿದೆ. ಇನ್ನು ನಾಳೆನೆ ಸಿಗೋದು ಮರ ಹತ್ಬೇಕು ಕಣೆ ಅಂದಳು. ಹೋ...! ಹೌದಲ್ವಾ! ಅದು ಈ ನೆಲಕೆಸ ಹಾಗೆ ಇರುತ್ತಾ ಅಂದಳು ಮಾಲಿನಿ. ಇಲ್ಲ ಅದು ದಪ್ಪ ಎಲೆ ಆಗಿರುತ್ತೆ, ಈ ಕೆಸದ ಹಾಗೆ ತಿಂದರೆ ನಾಲಿಗೆ ತುರಿಸಲ್ಲ ಅಂದಳು ಶಾರದ. ಹೋ ಹೌದಾ..!! ಎಂದು ಮಕ್ಕಳು "ಮಳೆಗಾಲದ ತಿಂಡಿ ಪತ್ರೊಡೆಯ" ಬಗೆಗೆ ಮಾತನಾಡುತ್ತಿರುವಾಗ ತರಗತಿಗೆ ಕನ್ನಡ ಟೀಚರ್ ಬಂದರು.
ಶಾಲೆಯನ್ನು ಮುಗಿಸಿ ಮನೆಗೆ ಹಿಂದುಗಿರಿದ ಮಾಲಿನಿ ತನ್ನ ತಾಯಿಯ ಬಳಿ ಪತ್ರೊಡೆ ಮಾಡಿ ಕೊಡುವಂತೆ ರಗಳೆ ಮಾಡಿದಳು. ಅದು ಮಾಮುಲಿ ಕೆಸ ಆಗಲ್ಲ , ನಾನು ನಾಳೆ ತೋಟಕ್ಕೋದಾಗ ಸಿಕ್ಕುತ್ತಾ ನೋಡ್ತೀನಿ ಎಂದರು ಅವಳ ತಾಯಿ. ಎಥಾ ಪ್ರಕಾರ ಮಾಲಿನಿ , ಶಾರದ ಇಬ್ಬರು ಶಾಲೆಗೆ ಹೋದರು , ಕನ್ನಡ , ವಿಜ್ಞಾನ , ಇಂಗ್ಲೀಷು , ಗಣಿತ ಕಲಿತರು ಸಂಜೆ ಆಗುತ್ತಲೆ ಶಾಲೆ ಮುಗಿಸಿ ಮನೆಗೆ ಹೊರಟರು.
ಮನೆಗೆ ಬಂದ ಮಾಲಿನಿಗೆ ಅಚ್ಚರಿ ಕಾದಿತ್ತು . ಅಡಿಗೆಮನೆಯಿಂದ ಘಮ್ಮೆನ್ನುವ ಪರಿಮಳ ಬರುತ್ತಾ ಇತ್ತು. ಸೀದಾ ಪಾಠೀಚೀಲವನ್ನು ಕುರ್ಚಿಯ ಮೇಲೆ ಇಟ್ಟು ಅಡಿಗೆ ಮನೆಗೆ ಹೋದಳು. ಆಕೆಯ ತಾಯಿ ಪತ್ರೊಡೆ ಮಾಡುತ್ತಾ ಇದ್ದರು.ಅದನ್ನು ಕಂಡವಳಿಗೆ ಬಹಳ ಸಂತಸವಾಯಿತು. ಕೊನೆಗು ಮಳೆಗಾಲದ ತಿಂಡಿ ಪತ್ರೊಡೆಯ ತಿಂದ ಸಂತೋಷ ಮಾಲಿನಿಯದಾಯಿತು.
ಮಾರನೆಯದಿನ ಶಾಲೆಗೆ ಹೋದ ಮಾಲಿನಿ ತಾನು ಸಮೇತ ಪತ್ರೊಡೆಯನ್ನು ತಿಂದುದಾಗಿ ತನ್ನ ಗೆಳತಿಯಾದ ಶಾರದೆಯ ಜೊತೆ ಹಂಚಿಕೊಂಡು ಸಂಭ್ರಮಪಟ್ಟಳು.
