ಮೊಸರನ್ನ
ಮೊಸರನ್ನ
ನನಗೆ ತಡೆಯಲಾಗದಷ್ಟು ಕಿರಿಕಿರಿಯಾಗುತ್ತಿತ್ತು; ಮುಂಬೈ ಇಂದ ಬೆಂಗಳೂರಿಗೆ ಬರುತ್ತಿದ್ದ ಟ್ರೈನ್, ನಂಬಿದರೆ ನಂಬಿ ಬಿಟ್ಟರೆ ಬಿಡಿ, 5 ತಾಸಿಗಿಂತಲೂ ಹೆಚ್ಚು ಲೇಟ್ ಆಗಿ ಓಡುತ್ತಿತ್ತು; ಇನ್ನು ಅರ್ಧ ದಾರಿ ಕೂಡ ಕಳೆದಿರಲಿಲ್ಲ.
ಈ ಪ್ರಯಾಣ ನನ್ನನ್ನು ಸುಸ್ತುಮಾಡಿಬಿಟ್ಟಿತ್ತು. ಟ್ರೈನ್ ಮತ್ತೆ ನಿಂತಿತು; ಪುಣ್ಯ ಯಾವುದೋ ಕಾಡಿನಲ್ಲಲ್ಲ, ಅದು ಸ್ಟೇಷನ್ ಆಗಿತ್ತು. ಕೆಳಗಿಳಿದು ಅತ್ತಿತ್ತ ನೋಡಿದೆ. ಗುಂತಕಲ್ ಬೋರ್ಡ್ ಕಾಣಿಸಿತು. ಬೋರ್ಡ್ ಓದುತ್ತಿದ್ದಂತೆ, ನನ್ನ ಮನಸ್ಸು, ಸಿನಿಮಾ ಗಳಲ್ಲಿ ನಾವು ನೋಡುವಂತೆ. ಫ್ಲಾಶ್ ಬ್ಯಾಕಿಗೆಹೋಯಿತು.
ಅದೇ ಲೇಟ್ ಆದ ಟ್ರೈನ್, ಅದೇ ಗುಂತಕಲ್ ಸ್ಟೇಷನ್, ಆ ಘಟನೆ ನಡೆದು ಎಷ್ಟೋ ವರ್ಷಗಳಾಗಿದ್ದರೂ, ನೆನ್ನೆ ನಡೆದ ಹಾಗೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಆ ದಿನಗಳಲ್ಲಿ, ಬಾಂಬೆ (ಇಂದಿನ ಮುಂಬೈ) ಇಂದ ಬೆಂಗಳೂರಿಗೆ ಡೈರೆಕ್ಟ್ ಆಗಿ ಟ್ರೈನ್ ಇರಲಿಲ್ಲ. ಗುಂತಕಲ್ ಅಥವಾ ಮೀರಜ್ ಸ್ಟೇಷನ್ ನಲ್ಲಿ ಬದಲಾಯಿಸಿಕೊಂಡು ಬರಬೇಕಿತ್ತು. ಮುಂಬೈ ನಲ್ಲಿ ಸ್ಟೇಷನ್ಗೆ ಹೊರಟವನು, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇದ್ದದ್ದು ನೋಡಿ, ಟ್ರೈನ್ ಸಿಗುವುದು ಇಲ್ಲವೋ ಎಂದು ಆತಂಕಪಡುತ್ತಿದ್ದವನಿಗೆ , ಪ್ಲಾಟ್ಫಾರ್ಮ್ ಮೇಲೆ ಕಾಲಿಡುತ್ತಿದ್ದಂತೆ, ಟ್ರೈನ್ 10 ನಿಮಿಷ ತಡವೆಂಬ ಸುದ್ದಿ ಕೇಳಿ ಖುಷಿಯಾಯಿತು.
ನಾನು ಕುಳಿತುಕೊಳ್ಳುವ ಸೀಟ್ ಹುಡುಕಿ, ಸೀಟ್ ಕೆಳಗೆ ಲಗೇಜ್ ಇಡುವಾಗ ನೋಡಿಕೊಂಡೆ, ಹೊರಡುವ ಅವಸರದಲ್ಲಿ ತಿಂಡಿ ಇಟ್ಟಿದ್ದ ಬ್ಯಾಗೇ ತಂದಿಲ್ಲವೆಂದು. ಧೀರ್ಘವಾಗಿ ನಿಟ್ಟುಸಿರು ಬಿಡುತ್ತ ನನಗೆ ನಾನೇ ಶಾಪ ಹಾಕಿಕೊಂಡೆ. ಆದದ್ದಾಯಿತು, ಮುಂದೆ ಸ್ಟೇಷನ್ ಗಳಲ್ಲಿ ಸಿಕ್ಕಿದ್ದು ತಿನ್ನಬೇಕು ನನ್ನ ಹಣೆ ಬರಹ ಎಂದು ಸುಮ್ಮನಾದೆ.
ಕುಳಿತೊಡನೆ ಟ್ರೈನ್ ಹೊರಟಿತು. ನಾನು, ಟ್ರೈನಿಗೆಂದೇ ತಂದಿದ್ದ ಕಾದಂಬರಿಯನ್ನು ಓದಲು ಶುರುಮಾಡಿದೆ. ನಾನು ಓದುತ್ತಿದ್ದ ಕಾದಂಬರಿಯಲ್ಲಿ ಎಷ್ಟು ಮಗ್ನನಾಗಿದ್ದೇನೆಂದರೆ, ಟ್ರೈನ್ ಅಲ್ಲಲ್ಲಿ ನಿಂತು ನಿಧಾನ ವಾಗಿ ಹೋಗುತ್ತಿದ್ದುದನ್ನು ಗಮನಿಸಿರಲಿಲ್ಲ. ಇದ್ದಕಿದ್ದಂತೆ ಗದ್ದಲ ಜಾಸ್ತಿಯಾಗಿ ನನ್ನ ಓದಿಗೆ ಭಂಗ ಬಂದಾಗಲೇ ನನಗೆ ಗೊತ್ತಾಗಿದ್ದು, ಟ್ರೈನ್ ಸುಮಾರು 4 ಘಂಟೆಗೂ ಮಿಕ್ಕಿ ತಡವಾಗಿ ಹೋಗುತ್ತಿದೆಯೆಂದು.
ಪ್ರತಿಯೊಂದು ಸ್ಟೇಷನ್ನಲ್ಲಿ ನಿಂತಾಗಲು, ಜನ ಓಡಿಹೋಗಿ ತಮಗೆ ಬೇಕಿದ್ದ ತಿಂಡಿ, ತಿನಿಸು ಹಾಗು ನೀರಿನ ಬಾಟಲಿ ಹೊತ್ತು ಕೊಂಡುಕೊಂಡು ಬರುತ್ತಿದ್ದರು. ತಂದವರು, ಬೇರೆಯಾರಾದರೋ ಕೇಳಿಯಾರೆಂದು, ಬಚ್ಚಿಡುತ್ತಿದ್ದರು.
ಕುಡಿಯಲು, ನೀರು ಕೂಡ ನನ್ನ ಬಳಿ ಇರಲಿಲ್ಲ.
ಇನ್ನೊಂದು ಯಾವುದೋಸ್ಟೇಷನ್ ಬಂದಾಗ, ಹಸಿದ ಹಾಗು ಕುಪಿತರಾದ ಜನಗಳ ವರ್ತನೆ ಹೇಗುರುತ್ತದೆಂದು ಅಂದು ಅನುಭವವಾಯಿಯಿತು; ಸ್ಟೇಷನ್ ಬರುತ್ತಿದ್ದಂತೆ, ಒಬ್ಬರ ಮೇಲೆ ಒಬ್ಬರು ಬಿದ್ದು, ಪ್ಲಾಟ್ಫಾರ್ಮ್ ಮೇಲಿದ್ದ ಅಂಗಡಿಯನ್ನು ಧಂಸ ಮಾಡಿದರು ಜನಗಳು. ನಾನು ಕುಳಿತಲ್ಲೇ ನೋಡುತ್ತಿದ್ದೆನೇ ಹೊರತು, ಹೊರಗೆ ಇಳಿಯುವ ಸಾಹಸ ಮಾಡಲಿಲ್ಲ.
ಮುಂದೆ ಬಂದ ಸ್ಟೇಷನ್ಗಲ್ಲಿ ಪ್ಲಾಟ್ಫಾರ್ಮ್ ಅಂಗಡಿಗಳು ತೆರೆದಿರಲಿಲ್ಲ. ಬಹುಶಃ ಹಿಂದಿನ ಸ್ಟೇಷನ್ ಗಳಿಂದ ವಿಷಯ ತಿಳಿದು ಬಾಗಿಲು ಹಾಕಿದ್ದವು.
ಮಧ್ಯರಾತ್ರಿಯ ಹೊತ್ತಿಗೆ, ಟ್ರೈನ್ ಕೊನೆಗೂ ಗುಂತಕಲ್ ಸ್ಟೇಷನ್ ಮುಟ್ಟಿತು.
ಅಲ್ಲಿಳಿದು, ಬೇರೆ ಟ್ರೈನ್ಗೆ ಬದಲಾಯಿಸುವ ಸಲುವಾಗಿ, ಅತ್ತಿತ್ತ ನೋಡಿದೆ. ಕೆಳಗಿಳಿದೊಡನೆ ಅನೌನ್ಸ್ಮೆಂಟ್ ಕೇಳಿಬರುತ್ತಿತ್ತು; ಗುಂತಕಲ್ನಿಂದ ನಿಂದ ಬೆಂಗಳೂರಿಗೆ ಹೋಗುವ ಟ್ರೈನ್ ಆಗಲೇ ಹೋಗಿಯಾಗಿದೆ. ಮುಂದಿನ ಟ್ರೈನ್ ನಾಳೆ ಬೆಳಿಗ್ಗೆ6 ಘಂಟೆಗೆ ಹೋರಾಡುತ್ತದೆಂದು.
ಹಸಿವಿಗೆ ನನಗೆ ಬರುತ್ತಿದ್ದ ಕೋಪದ ಜ್ವಾಲೆಗೆ, ತುಪ್ಪ ಸುರಿದಂತಾಯಿತು. ಹೊಟ್ಟೆ ಚುರುಗುಟ್ಟಲಿತ್ತು.
ಊರಿನಲ್ಲಿ ಯಾವುದಾದರೋ ಹೋಟೆಲ್ ತೆಗೆದಿದ್ದರೇ ತಿನ್ನಲು ಏನಾದರೋ ಸಿಗಬಹುದೆಂಬ ಆಸೆಯಿಂದ ಹುಡುಕಿಕೊಂಡು ಹೊರಟೆ.
ಗುಂತಕಲ್ ಬಹಳ ಚಿಕ್ಕ ಊರು. ಅದು ಜಂಕ್ಕ್ಷನ್ ಅನ್ನುವ ಹೆಗ್ಗಳಿಕೆಯೊಂದು ಬಿಟ್ಟರೆ, ಹೇಳಿಕೊಳ್ಳುವಂಥದ್ದೇನೂ ಆ ಊರಿನಲ್ಲಿರಲಿಲ್ಲ. ಕೆಲವೇ ನಿಮಿಷಗಳಲ್ಲಿ ಊರನ್ನು ಪೂರ್ತಿ ಒಂದು ರೌಂಡ್ ಹೊಡೆದಾಗಿತ್ತು; ಹೋಟೆಲ್ ಇರಲಿ, ಬಾಳೆಹಣ್ಣೇನಾದರೋ ಸಿಗುತ್ತದೆಂದು ನೋಡಿದರೆ, ಒಂದು ಸಣ್ಣ ಅಂಗಡಿಯೂ ತೆರಿದಿರಲಿಲ್ಲ. ಸಮಯ ಸುಮಾರು 12 ಘಂಟೆ ಯಾಗುವುದರಲ್ಲಿತ್ತು.
ಇಂದು ನನ್ನ ಹಣೆ ಬರಹದಲ್ಲಿ ಉಪವಾಸೆ ಗಟ್ಟಿ ಎಂದು ಸ್ಟೇಷನ್ ಕಡೆ ಹೋಗುತ್ತಿರುವಾಗ, ಅಲ್ಲಿ ಗುಡಿಸಿಲಿನ ಹೋಟೆಲ್ ಒಂದು ಕಂಡು ಬಂತು. ಹೊರಗೆ ಮಂಚದ ಮೇಲೆ ಮಲಗಲು ಹಾಸಿಗೆ ರೆಡಿ ಮಾಡುತ್ತಲಿದ್ದ ವ್ಯಕ್ತಿಯನ್ನು ನನಗೆ ತಿಳಿದಿದ್ದ ಹರಕು ಮುರುಕು ತೆಲುಗು ಬಾಷೆಯಲ್ಲಿ ಧೈರ್ಯ ಮಾಡಿ ಕೇಳಿದೆ, "ಅಯ್ಯ, ತಿನ್ನಲು ಏನಾದರೋ ಸಿಗಬಹುದೇ?."
"ಕಣ್ಣು ಕಾಣಿಸುವುದಿಲ್ಲವೇ ನಿನಗೆ? ಹೋಟೆಲ್ ಮುಚ್ಚಿಯಾಗಿದೆ. ಇಷ್ಟು ಹೊತ್ತಿನಲ್ಲಿ ಏನಿರಲು ಸಾಧ್ಯ? ದಯಮಾಡಿ ಮುಂದೆ ಹೋಗು. ನನಗೆ ಮಲಗಲು ತಡವಾಗುತ್ತದೆ." ಎಂದು ನಿರ್ದಾಕ್ಷಿಣ್ಯವಾಗಿ, ಹೇಳಿದ ಆತ.
“ಇಡೀ ದಿವಸ ನಾನು ಏನನನ್ನು ತಿಂದಿಲ್ಲ. ಹಣ ಎಸ್ತಾದರೊ ಪರವಾಗಿಲ್ಲ." ದೀನವಾದ ದನಿಯಲ್ಲಿ ಹೇಳಿದೆ.
ಅವನು ಮುಖ ತಿರುಗಿಸಿ ಮಲಗಲು ರೆಡಿ ಯಾದ. ನಾನು ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂದು, ಬೇಸರದಿಂದ ಸ್ಟೇಷನ್ ಕಡೆ ಹೊರಟೆ.
ಅಷ್ಟರಲ್ಲೇ ಗುಡಿಸಿಲಿನ ಒಳಗಿಂದ ಒಬ್ಬ ಹೆಂಗಸು ಹೊರಗೆ ಬಂದು ಕೂಗಿದಳು. "ಬನ್ನಿ, ಯಜಮಾನರೇ, ಬನ್ನಿ." ಹತ್ತಿರ ಹೋದಾಗ, ಹೊರಗಿದ್ದ ಆ ಗಂಡಸನ್ನು ಒಳಗೆ ಕರೆದು ಏನೋ ಹೇಳಿದಳು ಆತ ಹೊರಗೆ ಬಂದು ಗಂಟು ಮುಖ ಮಾಡಿಕೊಂಡು ನುಡಿದ. "ಆಕಿ ನನ್ನ ಹೆಂಡತಿ. ಅವಳು ಹೇಳಿದಳು ಸ್ವಲ್ಪ ಮೊಸರಿದೆಯಂತೆ, ಬಿಸಿಯಾಗಿ ಅನ್ನ ಮಾಡಿದರೆ ಸಾಕ? ತಿನ್ನಲು ಬೇರೆ ಏನು ಇಲ್ಲ."
ಹಸಿದು ಕಂಗಾಲಾಗದಿದ್ದ ನನಗೆ, ಆ ಪದಗಳು, ಬಹಳ ಅಪ್ಯಾಯಮಾನವಾಗಿದ್ದವು. ವೊಡನೆ ತಲೆಯಾಡಿಸಿದೆ. ಮಂಚದ ಮೇಲೆ ಕುಳಿತುಕೊಳ್ಳಲು ಹೇಳಿ, ಅವನು ಒಳಗೆ ಹೋದ.
ಸ್ವಲ್ಪ ಹೊತ್ತಿನ ನಂತರ ಒಂದು ಮುತ್ತುಗದ ಎಲಿಯಲ್ಲಿ, ಹಬೆಯಾಡುತ್ತಿದ ಬಿಸಿ ಬಿಸಿ ಅನ್ನ, ಒಂದು ಬಟ್ಟಲಲ್ಲಿ ಮೊಸರು ಹಾಗು ಆಂಧ್ರ ಉಪ್ಪಿನಕಾಯಿ ತಂದು, ನನ್ನ ಮುಂದೆ ಹಿಡಿದ. ನಂಗೆ ಹಸಿವಿನ ನಿಜವಾದ ಅರ್ಥ ಗೊತ್ತಾಗಿದ್ದೇ ಅಂದು.
ಗಬ ಗಬನೇ ಎಲ್ಲವನ್ನು ತಿಂದು, ಗಂಗಾಳದಲ್ಲಿ ತಂದು ಕೊಟ್ಟ ನೀರನ್ನು ಕುಡಿದು, ತೃಪ್ತಿಯಾಗಿ ತೆಗಿದೆ.
ಎದ್ದು ಕೈ ತೊಳೆದು, ಹಣ ಎಷ್ಟು ಕೊಡಬೇಕೆಂದು ಕೇಳುತ್ತಾ ಜೇಬಿಗೆ ಕೈ ಹಾಕಿದೆ. ನನ್ನ ಪರ್ಸ್ ನೋಡುತ್ತಿದ್ದ ಅವ್ನು ಕೈಬೆರಳಲ್ಲಿ ತೋರಿಸಿದ ಮುನ್ನೂರು ಎಂದು. ಆ ದಿನದ ಲೆಕ್ಕದಲ್ಲಿ ಅದು ಬಹಳವೇ ಜಾಸ್ತಿಯಾದರೂ ಸಹ ಮರು ಮಾತನಾಡದೆ, ಮುನ್ನೂರು ರೂಪಾಯಿಯನ್ನು ಅವನ ಕೈಗಿತ್ತು, ಧನ್ಯವಾದ ಹೇಳಿ ಸ್ಟೇಷನ್ ನತ್ತ ಹೊರಟೆ.
ಇದ್ದಕಿದ್ದಂತೆ, ಒಳಗಡೆಯಿಂದ ಬಂದ ಆ ಹೆಂಗಸು, ಅವಳ ಗಂಡನನ್ನು ತೆಲುಗಿನಲ್ಲಿ ಬಯ್ಯುತ್ತ, ಅವನ ಕೈಯಲ್ಲಿದ್ದ ಹಣವನ್ನು ಕಸಿದು, ನನ್ನೆಡೆಗೆ ಬಂದು ಬಗ್ಗಿ ನಿಂತು ಹೇಳಿದಳು. "ಸ್ವಾಮಿ, ಬೆಳಗಿನಿಂದ ರಾತ್ರಿಯ ವರೆಗೂ ನಮ್ಮಲಿ ಸಾಕಷ್ಟು ಜನ ಗ್ರಾಹಕರು ಬರುತ್ತಾರೆ. ಆದರೆ, ಅತಿಥಿ ಗಳು ಯಾರು ಬರುವುದಿಲ್ಲ. ಈ ಹೊತ್ತಿನಲ್ಲಿ ಬಂದ ನೀವು ಗ್ರಾಹಕರಲ್ಲ, ನೀವು ನಮ್ಮ ಅತಿಥಿ. ನಿಮ್ಮ ಹತ್ತಿರ ಹಣ ತೆಗೆದುಕೊಂಡರೆ, ಆ ದೇವರು ನಮ್ಮನು ಕ್ಷಮಿಸುವುದಿಲ್ಲ. ದಯವಿಟ್ಟು, ಹಣ ವಾಪಸ್ ತೆಗೆದು ಕೊಂಡು, ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ಹರಸಿ."
ನಾನು ಏನಾದರೋ ಹೇಳುವುದಕ್ಕೆ ಮುಂಚೆ, ನನ್ನ ಕೈಗೆ ಹಣವನ್ನು ತುರುಕಿ, ನನ್ನ ಮುಂದೆ ಬಗ್ಗಿ ನಮಸ್ಕರಿಸುತ್ತಾ, ಆ ಹೆಂಗಸು ಒಳಗೆ ಹೊರಟು ಹೋದಳು.
ಅಂದು ತಿಂದ ಮೊಸರನ್ನದ ಸೊಗಡು ಹಾಗು ಆ ಹೆಂಗಸಿನ ಮನೋಭಾವವನ್ನು ಇಂದಿಗೂ ನಾನು ಮರೆತಿಲ್ಲ.
