ಹೀಗೊಂದು ಸೀರೆ ಕಥೆ.
ಹೀಗೊಂದು ಸೀರೆ ಕಥೆ.


ಸೀರೆಗೆ ನೀರೆಯ ಮೇಲೆ ಪ್ರೀತಿಯೋ.. ನೀರೆಗೆ ಸೀರೆಯ ಮೇಲೆ ಪ್ರೇಮವೋ.. ನಾನರಿಯೆ. ನಾರಿಗೆ ಸೀರೆ ಒಲಿದಂತೆ.. ಇನ್ಯಾವ ವಸ್ತ್ರಗಳು ಒಲಿದಿಲ್ಲ.. ಚಿಕ್ಕ ಮಗು ಕೂಡ ಯಾವುದಾದರೂ ಶಾಲನ್ನೋ ವೇಲನ್ನೊ ಸುತ್ತಿಕೊಂಡು ತನ್ನ ಸೀರೆ ಎಂದು ಓಡಾಡುತ್ತಿರುತ್ತದೆ.
ಹಾಗಾಗಿ ಪುಟ್ಟ ಬಾಲೆಯಿಂದ, ಹಿಡಿದು ಹದಿನಾರರ ಕನ್ಯೆಯನ್ನೂ ಬಿಡದೇ.. ಸುಕ್ಕಾದ ಚರ್ಮದ ಅಜ್ಜಿಯವರೆಗೂ ಎಲ್ಲರೂ ಒಪ್ಪಿಕೊಳ್ಳುವ.. ಪುರುಷರೂ ಮೆಚ್ಚಿಕೊಳ್ಳುವ ವಸ್ತ್ರ ಎಂದರೆ ಅದು ಸೀರೆ ಒಂದೇ. ಚಿಕ್ಕ ಮಕ್ಕಳು ಕೂಡ ಅಮ್ಮ ಸೀರೆ ಉಟ್ಟೊಡನೆ, ಓಡಿ ಬಂದು ಅಪ್ಪಿ ಕೊಳ್ಳುತ್ತಾರೆ. ಮಕ್ಕಳ ಕಣ್ಣಿಗೆ ಅಮ್ಮ ಸಿಂಗಾರದ ಗೊಂಬೆಯಂತೆ ಕಾಣಿಸುತ್ತಾಳೆ. ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿ ಸೀರೆಯ ಮೋಹ ಜಾಸ್ತಿ, ಅಮ್ಮನ ಸೀರೆ, ವೇಲು ಎಲ್ಲವನ್ನೂ ಸುತ್ತಿಕೊಂಡು ಓಡಾಡುತ್ತಿರುತ್ತಾರೆ. ಹದಿವಯಸ್ಸಿಗೆ ಬರುತ್ತಿದ್ದಂತೆ ಸೀರೆಯ ಮೇಲೆ ಪ್ರೀತಿ ಜಾಸ್ತಿ ಆಗುತ್ತದೆ. ಆದರೆ ಹೆಣ್ಣುಮಕ್ಕಳು ಸೀರೆ ಉಟ್ಟರೆ ದೊಡ್ಡವರ ಹಾಗೆ ಕಾಣಿಸುತ್ತಾರೆ ಎಂದು ಮಕ್ಕಳ ಹೆತ್ತವರು ಸೀರೆ ಉಡುವುದು ಬೇಡ ಎಂದು ಹೇಳುತ್ತಿದ್ದರು. ಎಲ್ಲಿ ಹದ್ದು ಮೀರುವರೊ ಎಂಬ ಭಯ ಅವರಿಗೆ.
ಎಲ್ಲಾ ಪುರುಷರು ತಮ್ಮ ಮನದನ್ನೆಯನ್ನು ಆಗಾಗ ಸೀರೆಯಲ್ಲಿ ಕಾಣಲು ಇಷ್ಟ ಪಡುತ್ತಾರೆ. ಎಷ್ಟೇ ಅಧುನಿಕ ಮನೋಭಾವದವರು ಕೂಡ ಸೀರೆ ಎಂದರೆ ವಿಶೇಷ ಅಭಿಮಾನದಿಂದಾ ಕಾಣುತ್ತಾರೆ.. ಇಂತಿಪ್ಪ ಸೀರೆ ಮೇಲೆ ಹೆಣ್ಣಿಗೆ ಇನ್ನೆಷ್ಟು ವ್ಯಾಮೋಹ ಇರಬಹುದು ನೀವೇ ಆಲೋಚಿಸಿ.
ಬೀರು ತುಂಬಾ ಸೀರೆ ಇದ್ದರೂ ಹೊಸ ಸೀರೆ ಕೇಳುವ ಹೆಂಗಳೆಯರು ಎಲ್ಲಾ ಕಡೆ ಸಿಗುತ್ತಾರೆ. ಒಮ್ಮೆ ನಮ್ಮ ಬಾವನ ಮನೆಯಲ್ಲಿದ್ದೆ , ಬಾವ ಅಕ್ಕನನ್ನು ಕರೆಯುತ್ತಿದ್ದರು, ಆದರೆ ಅಕ್ಕ ಸೀರೆ ರಾಶಿಯ ಮುಂದೆ ಕುಳಿತು ತನ್ನ ಪಾಡಿಗೆ ಇದ್ದಳು, ಅಷ್ಟರಲ್ಲಿ, ಮತ್ತೆ ವೀಣಾ ಆಗಿನಿಂದ ಕೇಳುತ್ತಿದ್ದಿನಿ, ಒಂದು ಲೋಟ ಕಾಫೀ ಕೊಡು ಅಂತಾ'.. ಹೊರಗಿನಿಂದ ಬಾವನ ಕರೆ ಮತ್ತೇ ಮತ್ತೆ ಕೇಳಿಸಿತು.. ಆದರೆ ಅವಳಿಗೆ ಅದರ ಕಡೆ ಗಮನ ಇಲ್ಲ. ಅವಳು ಬೀರುವಿನ ಮುಂದೆ ನಿಂತು ಕೆಳಗೆ ಬಿದ್ದ ಸೀರೆಗಳ ರಾಶಿ ನೋಡಿ ತಲೆಮೇಲೆ ಕೈ ಹೊತ್ತು, 'ಯಪ್ಪಾ ಇವನ್ನೆಲ್ಲಾ ಇನ್ನು ಜೋಡಿಸಿ ಇಡಬೇಕಲ್ಲಾ' ಎಂದು ಎಲ್ಲವನ್ನು ಎತ್ತಿ ಮಂಚದ ಮೇಲೆ ಹಾಕಿ.. ತಾನು ಯಾವ ಸೀರೆ ಉಟ್ಟು ಕೊಳ್ಳಬೇಕೆಂದು ಆಲೋಚಿಸುತ್ತಾ, ಎಲ್ಲವನ್ನು ಜೋಡಿಸುತ್ತಾ ಎತ್ತಿ ಇಡುತ್ತಿದ್ದಳು.. ಒಂದೊಂದು ಸೀರೆ ಮುಟ್ಟಿದಾಗಲು ಕೈ ಅದರ ಮೃದುತ್ವವನ್ನು ಹಾಗೂ ಮನಸ್ಸು ಅದರ ಹಿಂದಿದ್ದ ಕಥೆಯನ್ನು ನೆನಪು ಮಾಡಿ ಹೇಳುತ್ತಿದ್ದಳು.. ಅಷ್ಟರಲ್ಲಿ ಅವಳ ಕೈಗೆ ನೀಲಿ ಬಣ್ಣದ ಗುಲಾಬಿ ಚಿತ್ತಾರ ಇರುವ ಪುಟ್ಟ ಪುಟ್ಟ ಬಿಳಿ ಹೂವುಗಳಿರುವ.. ಗುಲಾಬಿ ಅಂಚಿನ ಸೀರೆ ಕಣ್ಣಿಗೆ ಬಿತ್ತು ಅದನ್ನು ನೋಡಿ ಅವಳ ಮುಖ ಅರಳಿತು.. ಅದು ನಮ್ಮ ತಂದೆ ಅವಳಿಗೆ ಮೊದಲು ಕೊಡಿಸಿದ ಸೀರೆ.. ಕಾಲೇಜಿನ ಸಾಂಪ್ರದಾಯಿಕ ದಿನಾಚರಣೆಗೆ ಉಟ್ಟುಕೊಳ್ಳಲು ಹೊಸ ರೀತಿಯ ಹಗುರವಾದ.. ಮೃದು ಸೀರೆ ಬೇಕೆಂದಾಗ.. ತಂದೆ ಅವಳನ್ನು ಕರೆದುಕೊಂಡು ಹೋಗಿ ಕೊಡಿಸಿದ ಆ ಸೀರೆ ನೂರಾರು ನೆನಪಿನ ಆಗರವಾಗಿತು.. ಅದನ್ನು ಹೊರ ತೆಗೆಯದೆ ಬಹಳ ಕಾಲವಾಗಿತ್ತು.. ಹಗುರವಾಗಿ ಅದನ್ನು ಎತ್ತಿ, ಮಡಿಕೆ ಬಿಚ್ಚಿ ತನ್ನ ಹೆಗಲ ಮೇಲೆ ಹಾಕಿ ಕಣ್ಮುಚ್ಚಿ ಅದರ ಹಿತ ಅನುಭವಿಸುವಾಗ ಮತ್ತೆ ಕಾಫಿಯ ಕರೆ ಅವಳನ್ನು ಎಚ್ಚರಿಸಿತು. ಹೋ.. ಇವರದ್ದು ಕಾಫೀ ಕುಡಿದು ಮುಗಿಯಲ್ಲಾ ಎಂದು ಗೊಣಗುತ್ತಾ.. ಬಂದಾಗ, ಏನು ಮಾಡ್ತಾ ಇದ್ದೀ ಅಷ್ಟು ಹೊತ್ತಿಂದ? ಎಂದ ಬಾವನಿಗೆ, ಸೀರೆ ನೋಡ್ತಾ ಇದ್ದೆ.. ನಾಡಿದ್ದು ಗೃಹ ಪ್ರವೇಶ ಉಂಟಲ್ಲ ಎಲ್ಲಾ ಸೀರೆ ಉಟ್ಟಿದ್ದೇ ಇರುವುದು. ಹತ್ತಿರದ ನೆಂಟರಲ್ಲವೇ, ಸಂಜೆ ಸೀರೆ ಕೊಳ್ಳಲು ಹೋಗೋಣ, ಹಾಗೆ ಉಡುಗೊರೆ ಕೊಡಲು ಸೀರೆ ಬೇಕು ಎಂದಾಗ.. 'ಅಯ್ಯೋ ಮತ್ತೇ ಸೀರೆ ಬೇಕೆ'? ಎಂದು ಬಾವ ತಲೆ
ಚಚ್ಚಿಕೊಂಡಾಗ.. 'ನಿಮ್ಗೆ ಒಂದು ಸೀರೆ ಬೇಕು ಅಂದರೆ ಭಾರೀ ಕಷ್ಟ ಅಲ್ವ'.. ಬೇಡ ಬಿಡಿ, ಅಕ್ಕ ಮುಖ ಸಣ್ಣ ಮಾಡಿಕೊಂಡು ಹೇಳಿದಾಗ, ಅಕ್ಕನ ಮುಖ ನೋಡಲಾರದೆ ಆಯಿತು ಬಿಡು, ನಾಳೆ ಹೋಗಿ ತರೋಣ ಎಂದರು... ಹೀಗೆ ಸೀರೆಯ ಸ್ವಾರಸ್ಯ ಕೇಳಬೇಕೆ?
ಆಗಲೇ ಬೇಕಾದಷ್ಟು ತರಹೇವಾರಿ ಸೀರೆ ಇದ್ದರೂ ರೇಷ್ಮೆ, ಕಾಟನ್ , ಕೋಟಾ ಮಸ್ಲಿನ್.. ಜಾರ್ಜೇಟ್.. ಮೈಸೂರು ಸಿಲ್ಕ್.. ಆ ಡಿಸೈನ್ ಈ ಡಿಸೈನ್ ಎಂದೂ ಯಾವಾಗಲೂ ಸೀರೆ ಕೊಳ್ಳುವ ನೀರೇಯರು ಇದ್ದಾರೆ. ರಾಶಿ ಸೀರೆ ಇದ್ದರೂ ಇನ್ಯಾರದೋ ಸೀರೆ ನೋಡಿ ಆ ತರ ಇಲ್ಲ ಅಂದು ಕೊಳ್ಳುವವರಿಗೂ ಕಡಿಮೆ ಇಲ್ಲ..ಸೀರೆ ನೋಡಲು ಹೋಗಿ ಯಾವುದು ಇಷ್ಟ ಆಗದೇ ವಾಪಸು ಬಂದು ಅಂಗಡಿ ಅವರಿಂದ ಬೈಸಿ ಕೊಂಡಿದ್ದು ಉಂಟು, ಇಲ್ಲವೇ ರಾಶಿ ಸೀರೆ ನೋಡಿ, ಮೊದಲು ನೋಡಿದ್ದೇ ಖರೀದಿಸಿ ಕೊಂಡು ಬರುವುದು ಸುಳ್ಳಲ್ಲ.
ಸೀರೆ ಎಂದರೆ ಅದೊಂದು ಸರಳ ಸುಂದರ ಉಡುಗೆ, ನೋಡಲು ಸುಂದರ . ಸೀರೆ ಉಟ್ಟು ಸುಂದರವಾಗಿ ಕಾಣುವ ಬಯಕೆ ಇಲ್ಲದ ಹೆಂಗಳೆಯರಿಲ್ಲ.. ಯಾವಾಗಲೂ ಡ್ರೆಸ್ ಖರೀದಿ ಮಾಡುವ ಹೆಣ್ಣು ಮಕ್ಕಳಿಗೆ ಒಂದಾದ್ರೂ ಸೀರೆ ತಗೊ.. ಅನ್ನುವ ಸೀರೆ ಪ್ರಿಯರು ಎಲ್ಲಡೆ ಸಿಗುತ್ತಾರೆ. ಸೀರೆ ಉಟ್ಟು ನಿಂತ ಹೆಣ್ಣು ಮಕ್ಕಳನ್ನು ನೋಡಿ ಹೆತ್ತವರು ಎಷ್ಟು ಬೇಗನೆ ಬೆಳೆದುಬಿಟ್ಟಳು ಎಂದು ಆಶ್ಚರ್ಯ ಪಡುತ್ತಾರೆ.. ಅಪರೂಪಕ್ಕೆ ಸೀರೆ ಉಟ್ಟ ಪತ್ನಿಯ ಮೇಲೆ ಗಂಡನಿಗೆ ಪ್ರೀತಿ ಉಕ್ಕಿ ಹರಿಯುತ್ತದೆ.. ಸೀರೆ ಉಟ್ಟು ನಿಂತ ನವವಧು ನೋಡುವವರ ಕಣ್ಣಿಗೆ ದೇವತೆಯಂತೆ ಕಾಣಿಸುತ್ತಾಳೆ. ಸೀರೆಯಿಂದ ಅನೇಕ ಉಪಯೋಗಗಳು ಇವೆ. ಸೀರೆಗಳನ್ನು ಬಾಗಿಲು ಕಿಟಕಿಗಳಿಗೆ ಕರ್ಟನ್ ಹಾಗೆ, ಉಪಯೋಗಿಸುತ್ತಾರೆ. ಪುಟ್ಟ ಮಕ್ಕಳನ್ನು ಮಲಗಿಸಲು ಜೋಲಿಯಾಗಿ ಹಲವಾರು ಮನೆಗಳಲ್ಲಿ ಇಂದಿಗೂ ಅದನ್ನೇ ಉಪಯೋಗಿಸುತ್ತಾರೆ, ಅಮ್ಮನದ್ದೊ ಅಜ್ಜೀಯದ್ದೊ ಮೆತ್ತನೆ ಸೀರೆಯ ಒಳಗೆ ಪುಟ್ಟ ಕೂಸು ಬೆಚ್ಚಗೆ ಮಲಗುತ್ತದೆ. ಹಾಗೂ ಬಡವರ ಮಕ್ಕಳಿಗೆ ಅದೇ ಜೋಕಾಲಿ. ಮರಗಳಿಗೆ ಸೀರೆ ಕಟ್ಟಿ ಜೋಕಾಲಿಯಂತೆ ಜೀಕುತ್ತಾರೆ. ಮತ್ತು ಸೀರೆ ಕತ್ತರಿಸಿ ಹೊಲಿದು ಜೋಡಿಸಿ ಹಾಸಿಗೆಗೆ ಹಾಸಲು, ಮತ್ತು ಹೊದಿಕೆಯಂತೆ ಉಪಯೋಗಿಸುತ್ತಾರೆ. ಹಾಗೆಯೇ ಹಳೆಯ ಸೀರೆ ಯನ್ನು ಹಪ್ಪಳ ಸಂಡಿಗೆ, ಅಡಿಕೆ ಕಾಫಿ ಬೀಜ ಇತ್ಯಾದಿ ಒಣಗಿಸಲು ಉಪಯೋಗ ಮಾಡುವುದು ಕಾಣಬಹುದು ಕಾಲೊರೆಸುವ ಮ್ಯಾಟ್ ಮಾಡಿ ಮಾರಾಟ ಕೂಡ ಮಾಡುತ್ತಾರೆ ಮತ್ತು ಇದು ಉತ್ತಮ ಬಾಳಿಕೆ ಕೂಡ ಬರುತ್ತದೆ, ಆದರೆ ಜಾರದೇ ಇರುವ ಬಟ್ಟೆಯ ಆಯ್ಕೆ, ಇಲ್ಲವೆ ಅಡಿಯಲ್ಲಿ ಜಾರದೇ ಇರುವ ಹಾಗೆ ಬಟ್ಟೆ ಇಟ್ಟು ನೇಯ ಬೇಕಾಗುತ್ತದೆ. ಇಲ್ಲವಾದರೆ ಸೀರೆ ಮ್ಯಾಟ್ ಉಪಯೋಗಿಸುವಾಗ, ಒದ್ದೆ ಕಾಲಿನಲ್ಲಿ ಜಾರಿ ಬೀಳುವ ಸಂಭವ ಇರುತ್ತದೆ. ಹಾಗೂ ಅನೇಕರು ತಮ್ಮ ಹಳೆಯ ಸೀರೆಗಳಿಂದ ಕೌದಿಯನ್ನು ತಯಾರಿಸುತ್ತಾರೆ ಹಾಗೂ ಹಳ್ಳಿಯ ಕಡೆ ಸೀರೆಗಳನ್ನು ಉಪಯೋಗಿಸಿ ಬೇಲಿಯನ್ನು ಕಟ್ಟುತ್ತಾರೆ, ಕೆಲವೊಮ್ಮೆ ರಸ್ತೆ ಬದಿಯಲ್ಲಿ ಸಾಗುವಾಗ ಸಾಲು ಸಾಲು ಸೀರೆಗಳನ್ನು ಕಟ್ಟಿರುವುದನ್ನು ನೋಡಬಹುದು ಹಾಗೆ ಸೀರೆಯನ್ನು ಚಿಕ್ಕದಾಗಿ ಕತ್ತರಿಸಿ ನೇಯ್ದು ಅವುಗಳಿಂದ ಹಗ್ಗವನ್ನು ತಯಾರಿಸಿ ಉಪಯೋಗಿಸುತ್ತಾರೆ. ಹೀಗೆ ಸೀರೆಯ ಉಪಯೋಗ ಅನೇಕ. ಹಾಗಾಗಿ ಸೀರೆ ಎಷ್ಟಿದ್ದರೂ ಉಪಯೋಗವೇ , ಇನ್ನೂ ಉಟ್ಟು ಬೇಸರವಾದರೆ ಬೇರೆಯವರಿಗೂ ಕೊಡಬಹುದು ಯಾಕೆಂದರೆ ಸೀರೆ ಹಾಳಾಗುವುದೇ ಕಡಿಮೆ, ಹಿಂದೆ ಅಮ್ಮನ ಸೀರೆಯಲ್ಲಿ ಫ್ರಾಕ್, ಲಂಗ ರವಿಕೆ, ಲಂಗ ದಾವಣೀ, ಚೂಡಿದಾರ ಕೂಡ ಹೊಲಿಸಿ ಧರಿಸಿ ಸಂಭ್ರಮ ಪಡುತ್ತಿದ್ದೆವು. ಈಗಲೂ ಕೆಲವರು ಸೀರೆ ಉಪಯೋಗಿಸಿ ಹಲವಾರು ಅಂದದ ಡ್ರೆಸ್ ಹೊಲಿಸಿ ಕೊಳ್ಳುತ್ತಾರೆ, ಹೀಗೆ ತುದಿ ಮೊದಲಿಲ್ಲದ ಉಪಯೋಗ ಇರುವ ಸೀರೆ, ನೀರೆಯರ ಮೆಚ್ಚಿನ ಉಡುಪು ಎಂದರೆ ಅತಿಶಯೋಕ್ತಿ ಅಲ್ಲ. ನೀವಿನ್ನೂ ಸೀರೆಯನ್ನು ಹೀಗೆಲ್ಲ ಉಪಯೋಗಿಸಿಲ್ಲವೆ? ಮತ್ತೇಕೆ ತಡ ಇಂದೇ ಶುರು ಮಾಡಿ.
ಧನ್ಯವಾದಗಳು.