mamta km

Classics Inspirational Others

4.2  

mamta km

Classics Inspirational Others

ಆಶಾವಾದ

ಆಶಾವಾದ

3 mins
225


ಸ್ನೇಹ ಹಾಗೂ ಸಂದೀಪ್ ಇಬ್ಬರು ವಿವಾಹವಾಗಿ ಆರು ತಿಂಗಳು ಕಳೆದಿದೆ. ಸುದೀಪ್ ಹಾಗೂ ಸ್ನೇಹ ನೋಡಲು, ಬೇರೆಯವರ ಕಣ್ಣಿಗೆ ಸುಖಿ ಜೋಡಿ. ಅಬ್ಬಾ ಈಗಲಾದರು ದೇವರು ಕಣ್ಣು ಬಿಟ್ಟನಲ್ಲ ಎಂದು ಇಬ್ಬರ ಮನೆಯವರು, ನೆಂಟರಿಷ್ಟರು, ಪರಿಚಿತರು ಮಾತನಾಡಿಕೊಳ್ಳುತ್ತಾರೆ. ಏಕೆಂದರೆ ಇಬ್ಬರಿಗೂ ಇದು ಎರಡನೇ ವಿವಾಹ. ಸ್ನೇಹ ಕೂಡ ಮೊದಲು ಪ್ರೀತಿಸಿ ಮದುವೆ ಆಗಿ, ಒಂದು ಮಗುವಾದರೂ ತನ್ನನ್ನು ಪ್ರೀತಿಸಿದ, ಗೌರವಿಸದ ಹಾಗೂ ಹೊಡೆದು ಬಡಿದು ಮಾಡುವ ಗಂಡನ ಸಹವಾಸವೇ ಸಾಕೆಂದು ಮಗಳ ಜೊತೆಗೆ ಒಬ್ಬಳೇ ಹೊರ ಬಂದು ಸಣ್ಣ ಮನೆ ಮಾಡಿ ಕೆಲಸಕ್ಕೆ ಹೋಗ ತೊಡಗಿದಳು. ಮಗುವನ್ನು ಡೆ ಕೇರ್ ನಲ್ಲಿ ಬಿಟ್ಟು ಹೋಗಿ ಕೆಲಸ ಮಾಡುತ್ತಿದ್ದಳು.ಅದು ತಿಳಿದು ಅವಳ ಅಪ್ಪ ಅಮ್ಮ ಅವಳನ್ನು ವಾಪಸ್ ಮನೆಗೆ ಬರುವಂತೆ ಒತ್ತಾಯಿಸಿ, ಮಗುವನ್ನು ಅಲ್ಲೆಲ್ಲಾ ಬಿಡೋದು ಬೇಡ ಎಂದು ಕರೆದಾಗ ಅವರ ಒತ್ತಡಕ್ಕೆ ಸಿಕ್ಕಿ ತಿರುಗಿ ತವರಿಗೆ ಬಂದಳು. ಮಗಳನ್ನು ಅಮ್ಮನ ಬಳಿ ಬಿಟ್ಟು ಕೆಲಸಕ್ಕೆ ಹೋಗಿ ಬರುತ್ತಿದ್ದಳು.


   ಸ್ನೇಹಳ ಮನೆಯವರು ಅವಳ ಗಂಡನ ಬಳಿ ಮಾತನಾಡಿದಾಗ , ಅವನು ಸ್ನೇಹಳನ್ನೇ ಸರಿ ಇಲ್ಲ, ಎಂದೂ, ದುಡ್ಡು ಖರ್ಚಿಲ್ಲದೆ ಮಗಳನ್ನು ಸಾಗ ಹಾಕಲು ನೋಡುತ್ತೀರ. ಮದುವೆ ಖರ್ಚು ಉಳಿದಿದೆ ತಾನೇ, ಹಾಗೆ ಅವಳಿಗೂ ಆಸ್ತಿ ಭಾಗ ಕೊಡಬೇಕು ಎಂದಲ್ಲಾ ಮಾತನಾಡಿದಾಗ, ಅವಳ ತಂದೆ ತಾಯಿ ಏನೋ ಅಷ್ಟೋ ಇಷ್ಟೋ ಕೊಟ್ಟು ಮಗಳ ಸಂಸಾರ ಸರಿ ಮಾಡಲು ನೋಡಿದರು. ಆದರೆ ಸ್ನೇಹ ತಾನು ಅವನ ಜೊತೆ ಖಂಡಿತವಾಗಿ ಬಾಳಲು ಸಾದ್ಯವಿಲ್ಲ ನಿಮಗೆ ಭಾರವಾಗಿದ್ದರೆ ಹೇಳಿ ನಾನು ಇಲ್ಲಿಂದ ಹೋಗುತ್ತೇನೆ ಎಂದು ಹೇಳಿದಾಗ ಕೊನೆಗೆ ಅವಳ ಗಂಡನಿಗೆ ವಿಚ್ಚೇದನ ನೀಡುವುದು ಎಂದು ತೀರ್ಮಾನಿಸಿದರು .

   ಸ್ನೇಹ ಒಬ್ಬಳೇ, ಮಗಳ ಜೊತೆ ಇದ್ದು ಅವಳನ್ನು ಒಳ್ಳೆಯ ರೀತಿ ಓದಿಸಿ, ಅವಳನ್ನ ಬೆಳೆಸಬೇಕು ಎಂದು ತೀರ್ಮಾನ ಮಾಡಿದಳು. ಹಾಗೂ ಮರು ವಿವಾಹ ಬೇಡ ಎಂದು ಅವಳ ಪಾಡಿಗೆ ಮಗಳ ಜೊತೆ ಇರುತ್ತಿದ್ದಳು. ಆದರೆ ಅವಳು ತವರು ಮನೆಗೆ ಬಂದಿದ್ದು ತಿಳಿದ ಒಡನೆ ನೆಂಟರು, ಹಿತೈಷಿಗಳು ಅವಳಿಗೆ ಎರಡನೇ ಮದುವೆ ಮಾಡುವ ಪ್ರಯತ್ನ ಮಾಡ ತೊಡಗಿದರು.

ಕೆಲವರು ಅವಳ ತಂದೆ ತಾಯಿಯ ಮೂಲಕ ಆಕೆಯ ಮೇಲೆ ಒತ್ತಡ ತರಲು ಶುರು ಮಾಡ ತೊಡಗಿದರು. ಅವಳ ತಂದೆ ತಾಯಿ ಕೂಡ ಹಾಳಾದ ಮಗಳ ಬದುಕು ಸರಿ ಪಡಿಸಲು ತಮ್ಮ ಸಂಭಂದಿಕರಲ್ಲೇ ವರನನ್ನು ನೋಡಲು ಪ್ರಾರಂಭಿಸಿದರು. ಹಾಗೂ ಸ್ನೇಹಳಿಗೂ ಒತ್ತಡ ಹಾಕಲು ಯತ್ನಿಸಿದರು. ಅವಳಿಗೆ ಹಲವು ತರಹ ಬುದ್ದಿ ಹೇಳಿ, ಮರುಮದುವೆ ಮಾಡಿಕೊಳ್ಳುವಂತೆ ತಮಗೂ ವಯಸ್ಸಾದ ಮೇಲೆ ನಿಮ್ಮನ್ನು ನೋಡಿಕೊಳ್ಳಲು ಯಾರಾದರೂ ಬೇಕೆ ಬೇಕು. ಎಂದೆಲ್ಲಾ ದಿನಾ ಅದೇ ಮಾತನಾಡಿ ಸ್ನೇಹಳಿಗೆ ಕಿರಿಕಿರಿ ಅನ್ನಿಸಿತು. ಕೊನೆಗೆ ಅವರ ಇಚ್ಚೆಗೆ ಮಣಿದು ವಿವಾಹ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದಳು.

ನಂತರ ದಿನ ಅಲ್ಲೊಂದು ಸಂಭಂದ, ಇದೆ ಇಲ್ಲೊಬ್ಬ ವರ ಇದ್ದಾನೆ ಎಂದು ಪ್ರಸ್ತಾಪ ಮುಂದಿಡಲಾರಬಿಸಿದರು. ಅವಳಿಗೆ ಮದುವೆ ಎಂದರೆ ಭಯ ಜೊತೆಗೆ ಬೇಸರವು ಇತ್ತು. ಮತ್ತೊಮ್ಮೆ ಏನಾದರೂ ತೊಂದರೆ ಆದರೆ ಎಂದೂ ಪುಟ್ಟ ಮಗಳು ಒದ್ದಾಡುವಂತೆ ಆದರೆ ಎಂದು, ಮರು ಮದುವೆ ಬೇಡ ಎನ್ನುತ್ತಿದ್ದಳು. ಆದರೆ ಪ್ರತಿ ದಿನ ಇದೆ ವಿಚಾರಕ್ಕೆ ಮಾತುಕತೆ ರಗಳೆ ಎನ್ನಿಸಿತು, ಅಮ್ಮನ ಕಣ್ಣೀರು, ಅಪ್ಪನ ಬೇಸರ, ತಂಗಿ,ತಮ್ಮ ಎಲ್ಲರೂ ಅವಳ ಮದುವೆಯನ್ನೇ ಬಯಸಿದಾಗ, ಎಲ್ಲರ ಇಚ್ಚೆಯಂತೆ ಮನೆಯವರು ನೋಡಿದ ದೂರದ ಸಂಬಂಧಿ ಜೊತೆ ಸರಳವಾಗಿ ವಿವಾಹ ನೆಡೆಯಿತು. ಹುಡುಗ ಓದಿ ಕೊಂಡಿದ್ದರೂ, ಸಣ್ಣ ಪಟ್ಟಣದಲ್ಲಿ, ಸ್ವಂತ ಆಟೋಮೊಬೈಲ್ ಇಟ್ಟುಕೊಂಡಿದ್ದ, ಹಣಕಾಸಿಗೆ ತೊಂದರೆ ಇರಲಿಲ್ಲ. ಸ್ವಂತ ಮನೆ ಹೊಂದಿದ್ದ.

ಆತನಿಗೂ ಎರಡನೇ ಮದುವೆ. ಅವನ ಪತ್ನಿ ಅನಾರೋಗ್ಯ ಇದ್ದುದ್ದರಿಂದ ಅದು ಗುಣ ಹೊಂದುವುದಿಲ್ಲ ಎಂದು ವೈದ್ಯರು ಹೇಳಿದ ಮೇಲೆ ಅವಳ ಜೊತೆ ಜೀವನ ಮಾಡಲು ಸಾದ್ಯ ಇಲ್ಲ ಎಂದು ಪತ್ನಿಗೆ ಬಿಟ್ಟು ವಿಚ್ಚೇದನ ನೀಡಿದ್ದ. ಇದ್ದ ಒಂದು ಮಗು ತಾಯಿಯ ಸುಪರ್ದಿಗೆಯಲ್ಲಿ ಇತ್ತು. ಹಾಗಾಗಿ ಸ್ನೇಹ ಹಾಗೂ ಮಗಳನ್ನು ಚನ್ನಾಗಿ ನೋಡಿ ಕೊಳ್ಳುತ್ತೇನೆ ಎಂದು ಭರವಸೆಯನ್ನು ಹುಡುಗ ಮತ್ತು ಅವನ ಮನೆಯವರು ನೀಡಿದಾಗ ಇಬ್ಬರ ಮದುವೆ ಮಾಡುವುದೆಂದು ಹಿರಿಯರು ನಿಶ್ಚಯಿಸಿದ್ದರು. ಅಪ್ಪ ಅಮ್ಮನ ಒತ್ತಡಕ್ಕೆ ಸಿಲುಕಿ ಕೊನೆಗೆ ಒಳ್ಳೆಯದಾಗಬಹುದು ಎಂಬ ಆಶಾವಾದದ ಮೇಲೆ ಸ್ನೇಹ ಕೂಡ ಒಪ್ಪಿಕೊಂಡಳು. ಎಲ್ಲರೂ ಹೇಗೂ ಅವನಿಗೂ ಎರಡನೇ ಮದುವೆ, ಒಬ್ಬ ಮಗಳು ಇದ್ದಾಳೆ, ಹಾಗಾಗಿ ಇಬ್ಬರದು ಒಂದೇ ಪರಿಸ್ಥಿತಿ ಎಂದುಕೊಂಡರು.


ಸ್ನೇಹ ಹಾಗೂ ಅವಳ ಮಗಳನ್ನು ಒಂದು ದಡ ಸೇರಿಸಬೇಕೆಂದು, ಸ್ನೇಹ ಪೋಷಕರು ಮಗಳ ಮದುವೆ ಮಾಡುವ ಆತುರ, ಎರಡನೇ ಸಂಬಂಧ ಎನ್ನುವ ಕೆಲವಾರು ಇತಿಮಿತಿಯಿಂದಾಗಿ, ಇದ್ದುರಲ್ಲೇ ಒಳ್ಳೇದು ಎಂದು, ಇರುವ ಕೆಲಸ ಬಿಡಿಸಿ ಮದುವೆ ಮಾಡಿದರು. ದೂರದ ಸಂಬಂಧವೇ ಆದರೂ ಇವರಿಗೆ ಹೊಸತೇ, ಕಂಡು ಕೇಳರಿಯದ ಮನೆಗೆ ಸೊಸೆಯಾಗಿ ಸ್ನೇಹ ಮಗಳ ಜೊತೆ ಬಂದಳು.


 ಆದರೆ ದಿನ ಕಳೆದಂತೆ ಸುದೀಪ್ ಸ್ನೇಹಳ ಮಗಳ ಮೇಲೆ ರೇಗುವುದು, ಮಾತು ಮಾತಿಗೂ ನಿನ್ನ ಮಗಳು ಎಂದು ಆಡಿ ಕೊಳ್ಳುವುದು, ಸಣ್ಣ ಪುಟ್ಟ ತರಲೆ ಮಾಡಿದಾಗ ಹೊಡೆಯುವುದು, ಕೆಟ್ಟ ಮಾತಲ್ಲಿ ಬೈಯುವುದು, ಹಠ ಮಾಡಿದಾಗ ಸ್ನೇಹಳಿಗೂ ನೋವಾಗುವಂತೆ ಮಾತನಾಡುವುದು, ಮಗುವನ್ನು ಹಾಸ್ಟೆಲ್ ಲ್ಲಿ ಬಿಡೋಣ ಎಂದು ಹೇಳುವಾಗ, ಸ್ನೇಹ ಅದು ಅಸಾಧ್ಯ ಎಂದು ಹೇಳಿದಾಗ ಇಬ್ಬರ ನಡುವೆ ಜಗಳ ಆಗುಲು ಶುರು ಆಯಿತು. ಯರೊಂದಿಗೂ ಮಾತನಾಡುವಂತಿಲ್ಲ, ಸ್ನೇಹ ಬೆಳೆಸುವಂತಿಲ್ಲ, ತವರು ಮನೆಗೆ ಹೆಚ್ಚಾಗಿ ಹೋಗುವಂತಿಲ್ಲ, ಸಣ್ಣ ಪುಟ್ಟ ಕಾರಣಕ್ಕೆ ವಾರಗಟ್ಟಲೆ ಮುನಿಸಿ ಕೊಂಡಾಗ, ಮೊದಲೇ ನೊಂದ ಸ್ನೇಹ, ಅಪ್ಪ ಅಮ್ಮನ ನೆನೆದು ನೊಂದುಕೊಳ್ಳುತ್ತಾಳೆ. ಸುದೀಪ್ ತಾಯಿ ಕೂಡ ಮಗುವಿನ ಬಗ್ಗೆ, ನೆರೆ ಹೊರೆ ನೆಂಟರಿಷ್ಟರಲ್ಲಿ ದೂರುತ್ತಾ, ಇರುವಾಗ ಸ್ನೇಹ ಮತ್ತೆ ನನ್ನ ಬದುಕು ಹೀಗಾಯಿತಲ್ಲ, ಎಂದು ಕೊರಗುವಂತೆ ಆಯಿತು. ಮಗಳ ಜೀವನ ಸರಿ ಮಾಡುವ ಭರದಲ್ಲಿ ಮತ್ತೆ ಮಗಳ ಜೀವನ ಹೀಗಾಯಿತು ಎಂದು ನೊಂದರೂ, ಹೆತ್ತವರು ನೀನೇ ಸ್ವಲ್ಪ ಅನುಸರಿಸಿಕೊಂಡು ಹೋಗು ಇನ್ನೇನು ಮಾಡುವುದು ದಿನ ಕಳೆದಂತೆ ಸರಿ ಆಗುತ್ತದೆ ಎಂದು ಸ್ನೇಹ ಅಮ್ಮ ಸಮಾಧಾನ ಮಾಡುತ್ತಾರೆ. ಆಗೆಲ್ಲ ದಿಕ್ಕೆ ತೋಚದೆ ಸ್ನೇಹ ಒಂದಷ್ಟು ಅತ್ತು ಹಗುರಾಗುತ್ತಾಳೆ. ಆದರೂ ಮುಂದೆ ಒಳ್ಳೆ ದಿನ ಬರಬಹುದು ಎಂಬ ಆಶಾವಾದ ಸ್ನೇಹಳ ಬಾಳಿಗೆ ಬೆಳಕಿನ ಆಶಾಕಿರಣವಾಗಿದೆ.

ಧನ್ಯವಾದಗಳು


Rate this content
Log in

Similar kannada story from Classics