ಸಿಂಹ ಹಾಗೂ ಹುಲಿ ಸಫಾರಿ,
ಸಿಂಹ ಹಾಗೂ ಹುಲಿ ಸಫಾರಿ,


ಬೇಸಿಗೆ ರಜೆ ಶುರು ಆಗುವ ಮೊದಲೇ ಮಗನಿಗೆ ಹೇಳಿದ್ದೆವು, ಝೂಗೆ ಹೋಗೋಣ ಎಂದು. ಹಠ ಮಾಡಿದಾಗೆಲ್ಲ ಎಲ್ಲಾದರೂ ಹೋಗಬೇಕೆಂದು ಹೇಳಿದಾಗ, ರಜೆ ಬಂದಾಗ ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಎಂದು ಹೇಳುತ್ತಾ ಬಂದಿದ್ದೆವು. ಅದರಲ್ಲಿ ಅವನು ಹಿಮಲಯಕ್ಕೆ ಹೋಗೋಣ, ಅಲ್ಲಿ ಐಸ್ ಇರುತ್ತೆ ಆಟ ಆಡಬಹುದು ಎಂದು, ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾ ನೋಡಿದಲ್ಲಿಂದ ಕೇಳುತ್ತಿದ್ದ. ಆದರೆ ಅಲ್ಲಿಗೆಲ್ಲಾ ಈಗ ಹೋಗಲು ಕಷ್ಟ ,ಸ್ವಲ್ಪ ದೊಡ್ಡವನಾಗು ನಂತರ ಹೋಗೋಣ ಎಂದು ಸಮಾಧಾನ ಮಾಡಿ ಆಗಿತ್ತು.. ಆದರೂ ಆಗಾಗ, ನೆನಪಾದಾಗ ಕಿರಿಕಿರಿ ಮಾಡುತ್ತಿದ್ದ.
ರಜೆ ಶುರು ಆದ ಒಡನೆ ತಂಗಿಯ ಮನೆ ಉಡುಪಿಯಲ್ಲಿ ಇದ್ದ ಕಾರಣ, ಅಲ್ಲೇ ಹತ್ತಿರ ಮಲ್ಪೆ ಸಮುದ್ರ ಇರುವುದರಿಂದ ಅಲ್ಲಿಗೆ ಹೋಗಿ ಬಂದಿದ್ದೆವು. ನಂತರ ಅಲ್ಲಿಂದ ನಮ್ಮ ಅಕ್ಕನ ಮನೆ ಶೃಂಗೇರಿಯಲ್ಲಿದೆ, ಅಲ್ಲಿ ಒಂದಷ್ಟು ದಿನ ಇದ್ದು, ಸಿರಿಮನೆ ಫಾಲ್ಸ್, ಶೃಂಗೇರಿ ಶ್ರೀ ಮಠ ಎಲ್ಲ ಸುತ್ತಾಡಿಕೊಂಡು ಒಂದಷ್ಟು ದಿನ ಅಲ್ಲಿದ್ದು ಅವನೊಂದಿಗೆ ಬೇಸಿಗೆ ರಜೆಯ ಸಂಭ್ರಮಿಸಿದ್ದಾಗಿತ್ತು, ಆದರೆ ಅವನ ಲಿಸ್ಟ್ ನಲ್ಲಿದ್ದ ಝೂ ಮಿಸ್ ಆಗಿತ್ತು. ಆಗಾಗ ಮೈಸೂರ್ ಝೂ ಬಗ್ಗೆ ಹೇಳಿದಾಗ ವಿಡಿಯೋ ನೋಡುವಾಗ, ಇಲ್ಲವೇ ಟಿವಿ ಮೊಬೈಲ್ ನಲ್ಲಿ ಪ್ರಾಣಿ ಕಂಡಾಗ ಝೂಗೆ ಹೋಗಿಯೇ ಇಲ್ಲ ಎಂದು ಮತ್ತೆ ಹೇಳುತ್ತಿದ್ದ. ಅವನಿಗೆ ಸ್ವಲ್ಪ ಹೊರಗಡೆ ಆಹಾರ, ವಾತಾವರಣ ಹೊಂದಿಕೊಳ್ಳಲು ಕಷ್ಟ ಹಾಗಾಗಿ ಸದ್ಯಕ್ಕೆ ಮೈಸೂರು ಝೂಗೆ ಹೋಗಲು ನಮ್ಮೂರಿನಿಂದ ದೂರ ಮತ್ತು ಒಂದು ದಿನದಲ್ಲಿ ಹೋಗಿ ಬರುವಂತದ್ದು ಅಲ್ಲ.. ಹಾಗಾಗಿ ಹತ್ತಿರದಲ್ಲಿ ಇರುವ ಶಿವಮೊಗ್ಗ ನಗರದ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮಕ್ಕೆ ಹೋಗೋಣ ಎಂದು ನಿರ್ಧರಿಸಿ ಮನೆಯಿಂದ ಹೊರಟಾಗ ಹನ್ನೊಂದುವರೆ, ನರಸಿಂಹರಾಜಪುರದಿಂದಾ ಒಂದರಿಂದ ಒಂದುವರೆ ಗಂಟೆ ಪ್ರಯಾಣ ಕಾರ್ ಇಲ್ಲವೇ ಬಸ್ನಲ್ಲಿ. ನಾವು ಕಾರಿನಲ್ಲಿ ಪ್ರಯಾಣ ಬೆಳೆಸಿ ಶಿವಮೊಗ್ಗ ತಲುಪಿ ಹೋಟೆಲ್ ನಲ್ಲಿ ಊಟ ಮಾಡಿಕೊಂಡು ಸಿಂಹಧಾಮ ತಲುಪಿದೆವು. ಎರಡು ಗಂಟೆಗೆ ಮಧ್ಯಾಹ್ನದ ಝೂ ಪ್ರವೇಶ ಆರಂಭ. ಎಂಬತ್ತು ರೂ ಪ್ರವೇಶ ವಯಸ್ಕರಿಗೆ, ಮಕ್ಕಳಿಗೆ ನಲವತ್ತು, ಬಸ್ ನಲ್ಲಿ ಸಫಾರಿ, ಹಿರಿಯರಿಗೆ ಎರಡು ನೂರು, ಮಕ್ಕಳಿಗೆ ನೂರು. ಕಾರ್ ನಿಲುಗಡೆ ಎಪ್ಪತ್ತು ರೂಪಾಯಿಗಳು. ನಾವು ಎಲ್ಲದಕ್ಕೂ ಟಿಕೆಟ್ ಖರೀದಿಸಿ ಮೊದಲು ಸಫಾರಿಗೆ ಹೊರಟೆವು. ಅಷ್ಟೇನೂ ದಟ್ಟಣೆ ಇರಲಿಲ್ಲ. ಮೊದಲು ಸಫಾರಿ ಹೋಗಿದ್ದ ಬಸ್ ತಿರುಗಿ ಬಂದ ನಂತರ, ಅಷ್ಟರಲ್ಲಿ ತುಂಬಿಕೊಳ್ಳುವ ಇನ್ನೊಂದು ಬಸ್ ಹೊರಡುತ್ತದೆ.
ಹೆಚ್ಚಾಗಿ ಮಕ್ಕಳ ಸಹಿತ ಬಂದ ಕುಟುಂಬ ಜಾಸ್ತಿ ಇತ್ತು. .. ಬಸ್ ಹೊರಡುತ್ತಿದ್ದ ಹಾಗೆ ಮಕ್ಕಳ ಕೂಗಾಟ ಪ್ರಾಣಿಗಳ ಧ್ವನಿ ಅನುಕರಣೆ, ಪ್ರಾಣಿಗಳ ಬಗ್ಗೆ ಅವರು ತಿಳಿದುಕೊಂಡ ವಿಷಯ ಎಲ್ಲಾ ತಮ್ಮ ಮಾತಿನ ಮೂಲಕ ಹೊರಗೆ ಬರುತ್ತಿತ್ತು. ಅಷ್ಟರಲ್ಲಿ ಒಂದು ತಿರುವು, ಕಾಡಿನ ಒಳಗೆ ಬಸ್ ಹೋಗುತ್ತಿದ್ದ ಹಾಗೆ, ಜಿಂಕೆಗಳು ಸಾರಂಗ ಕಾಣಿಸಿದವು, ನನ್ನ ಮಗನಿಗೂ ಸಂಭ್ರಮ.. ಆಸಕ್ತಿಯಿಂದ ನೋಡುತ್ತಿದ್ದ, ಅಷ್ಟರಲ್ಲಿ ಮುಂದೆ, ದೊಡ್ಡ ಹುಲಿ ನೀರಿನ ಹೊಂಡದಲ್ಲಿ ವಿರಮಿಸುತ್ತಾ ಇತ್ತು. ಸೆಕೆ ಇದ್ದ ಕಾರಣ ಆರಾಮವಾಗಿ ಮಲಗಿತ್ತು, ಅದನ್ನು ನೋಡುತ್ತಿದ್ದ ಹಾಗೆ ಬಸ್ ಅಲ್ಲಿದ್ದವರ ಕೂಗಾಟ ಹುಲಿ ಟೈಗರ್ ನೋಡಿ ನೋಡಿ ಎಂದೂ.. ಅಲ್ಲಲ್ಲಿ ಮಂಗ ನವಿಲು ಹಾಗೂ ಸಿಂಗಳೀಕಗಳು ದೊಡ್ಡದಾದ ಹುತ್ತ ಇದ್ದವು.. ಐದು, ಅರಡಿ ಎತ್ತರದ ವಿಶಾಲವಾದ ಹುತ್ತಗಳು ಕಾಣ ಸಿಕ್ಕವು. ನನ್ನ ಮಗ ನಮ್ಮ ಊರಿನಲ್ಲಿ ಒಂದೆರೆಡು ಸಣ್ಣ ಹುತ್ತ ನೋಡಿದ್ದ, ಈಗ ದೊಡ್ಡ ಹುತ್ತ ತೋರಿಸಿದ ಒಡನೆ ಪ್ರಾಣಿಗಳಿಗಿಂತ ಹುತ್ತದ ಆಕರ್ಷಣೆ ಜಾಸ್ತಿ ಆಗಿ ಅದನ್ನೇ ತೋರಿಸುತ್ತಿದ್ದ. ನಂತರ ಮಧ್ಯೆ ಜಿಂಕೆಗಳು, ನಂತರ ಮೂರ್ನಾಲ್ಕು ಸಿಂಹಗಳು ಇನ್ನೂ ನಾಲ್ಕರು ಹುಲಿಗಳು ಕಂಡು ಬಂತು ಕೆಲವೊಂದು ಆವರಣದ ಒಳಗೆ ನಡಿಗೆಯಲ್ಲಿ ತೊಡಗಿದ್ದವು. ಅವುಗಳಿಗೆ ಜನರನ್ನು ನೋಡಿ ನೋಡಿ ಅಭ್ಯಾಸ ಆಗಿದ್ದ ಕಾರಣಕ್ಕೋ , ಹೊಟ್ಟೆ ತುಂಬಿದ್ದ ಕಾರಣಕ್ಕೋ ಏನೋ ನಮ್ಮ ಕಿರಿಚಾಟಕ್ಕೆ ಕ್ಯಾರೇ ಎನ್ನಲಿಲ್ಲ. ಅಷ್ಟು ಹತ್ತಿರ ದೊಡ್ಡ ಗಾತ್ರದ ಸಿಂಹ ಹುಲಿಗಳನ್ನು, ನೋಡಿ ಕೆಲವು ಮಕ್ಕಳು ಭಯಪಟ್ಟವು, ಆದರೆ ನನ್ನ ಮಗ ಅವನ ಅಪ್ಪನೊಡನೆ ಕುಳಿತು ಎಲ್ಲವನ್ನೂ ಖುಷಿಯಿಂದ ನೋಡುತ್ತಿದ್ದ.. ಎರಡು ಸಿಂಹಗಳು ಒಟ್ಟಾಗಿ ಅವುಗಳಿಗೆ ಕುಡಿಯಲು ಇಟ್ಟ ನೀರಿನ ಬುಡದಲ್ಲಿ ವಿರಮಿಸುತ್ತಾ ಇದ್ದವು. ತುಂಬ ಗಾಂಭೀರ್ಯದಿಂದ ನಿರ್ಲಿಪ್ತವಾಗಿ ಮಲಗಿದ ಅವನ್ನು ನೋಡಿ ಅಬ್ಬಾ ಸಿಂಹವೇ ಎನ್ನಿಸಿತು.
ನಂತರ ಮತ್ತೆ ಒಂದೆರೆಡು ಹುಲಿ, ಸಿಂಹಿಣಿ ದರ್ಶನ ಆಗುತ್ತಾ ಬ
ಂದಂತೆ ಬಸ್ ತಿರುಗಿ ಮುಖ್ಯದ್ವಾರಕ್ಕೆ ಬಂದಿತು.
ನಂತರ ನಾವು ಪ್ರಾಣಿ ಸಂಗ್ರಹಾಲಯದ ಕಡೆ ಸಾಗಿದೆವು, ಅಲ್ಲಲ್ಲಿ ಪ್ರಾಣಿ,ಪಕ್ಷಿಗಳ ಬಗ್ಗೆ ವಿವರ ತುಂಬಿದ ಫಲಕಗಳಿದ್ದವು. ಸೆಕೆ ಇದ್ದ ಕಾರಣ ಅಲ್ಲೇ ಮೇಲಿಂದ ನೀರು ಸ್ಪ್ರೇ ಆಗುವಂತೆ ವ್ಯವಸ್ಥೆ ಮಾಡಿದ್ದರು. ಅದರಲ್ಲಿ ನೀರು ಹೊಗೆಯ ಹಾಗೆ ಕಾಣಿಸುತ್ತಿತ್ತು ಮಕ್ಕಳೆಲ್ಲಾ ಅದರ ಕೆಳಗೆ ಕುಣಿಯುತ್ತಾ ಇದ್ದರು. ನಾವು ಒಂದಷ್ಟು ನೆನೆದು ತಂಪಾದೆವು. ಅಲ್ಲೇ ಮುಂದೆ ಹೋದಂತೆ ಮಂಗಗಳು, ಹೆಬ್ಬಾವು, ಕಾಡು ನಾಯಿ, ಸಂಪೂರ್ಣ ಬಿಳಿ ಮತ್ತು ಕಪ್ಪು ಬಣ್ಣದ ಹಂಸಗಳು ಇದ್ದವು. ನಂತರ ಪುಟ್ಟ ನವಿಲು ಗಾಜಿನ ತೆರೆಯ ಹಿಂದೆ ಗರಿ ಬಿಚ್ಚಿ ನರ್ತಿಸುತ್ತಿತ್ತು. ಫೋಟೋ ತೆಗೆಯಲು ಕನ್ನಡಿ ಗೋಡೆ ಇದ್ದ ಕಾರಣ ಕೆಲವೊಂದು ಚಿತ್ರಗಳು ಚನ್ನಾಗಿ ಬರಲಿಲ್ಲ. ನವಿಲಿನ ಬಣ್ಣವು ಬಹಳ ಕಣ್ಮನ ಸೆಳೆಯಿತು ನನ್ನ ಮಗ ಅದನ್ನೆಲ್ಲಾ ನೋಡಿ ಬಹಳ ಸಂತಸದಲ್ಲಿ ಇದ್ದ ಆದರೆ, ಮಧ್ಯ ಮಧ್ಯ ಎತ್ತಿಕೊಳ್ಳಿ, ಸುಸ್ತು.. ಎಂಬ ರಗಳೆಗೆ ನಮಗೂ ಸುಸ್ತಾಗುತ್ತಿತ್ತು, ಒಂದೊದು ಕಡೆಗೂ ನಡೆದೆ ಹೋಗಬೇಕು ಅವನು ನಡೆಯಲು ಸಣ್ಣ ಎತ್ತಿಕ್ಕೊಳ್ಳಲು ದೊಡ್ಡ ಎಂಬಂತೆ ಆಗಿತ್ತು.. ಹಾಗೆಯೇ ನಮಗೂ ನಡೆಯುವ ಅಭ್ಯಾಸ ಕಡಿಮೆ ಆದ ಕಾರಣ ನಿಂತು, ನಿಧಾನವಾಗಿ ಮುಂದೆ ಸಾಗಿದೆವು..
ಹಾಗೆಯೇ ಒಂದಷ್ಟು ಪ್ರಾಣಿಗಳ ಸಂಗ್ರಹಾಲಯ ಖಾಲಿ ಇದ್ದವು. ಕೆಲವೊಂದು ಹಾಳಾಗಿ ದುರಸ್ತಿ ಆಗುತ್ತಿತ್ತು. ಹಾಗೆಯೇ ಕರಡಿ , ಕಾಡು ಕೋಣ, ಹುಲಿಗಳು ಸಿಂಹ, ಕಪ್ಪು ಚಿರತೆ ಹಾಗೂ ಚಿರತೆ, ಹಿಪ್ಪೋಪೊಟಮಸ್, ದೊಡ್ಡ ವಿಶಾಲ ಆವರಣದಲ್ಲಿ ಓಡಾಡುತ್ತಾ ಇದ್ದವು.. ಜಿಂಕೆ, ಕಡವೆ, ಸಾರಂಗ ಮತ್ತು ಎಮು, ಆಸ್ಟ್ರಿಚ್ಚ್, ಪಕ್ಷಿಗಳು ಕಣ್ಸೆಳೆದವು. ಪ್ರಾಣಿಗಳಿಗೆ ತಿನಿಸು ಕೊಡಬೇಡಿ ಎಂಬ ಫಲಕ ಇದ್ದವು ಆದರೂ ಕೆಲವೊಂದು ಪ್ರಾಣಿ ಪಕ್ಷಿ ಗಳು ಏನಾದರೂ ಕೊಡುತ್ತಾರೆ ಎಂಬಂತೆ ನಮ್ಮ ಬಳಿ ಬಂದು ಇಣುಕುತ್ತಿದ್ದವು.
ಅಲ್ಲಿಯೇ ಒಂದು ಸಂಗ್ರಹಾಲಯದಲ್ಲಿ ಸತ್ತ ಪ್ರಾಣಿಗಳ ಚರ್ಮ ಉಪಯೋಗಿಸಿ ಒಂದಷ್ಟು ಪ್ರಾಣಿಗಳ ಪ್ರತಿಕೃತಿ ಮಾಡಿ ಮ್ಯೂಸಿಯಂ ಮಾಡಿದ್ದಾರೆ. ಜೀವಂತ ಪ್ರಾಣಿಗಳ ಚರ್ಮದ ಹೊದಿಕೆಯಲ್ಲಿ ಇರುವ ಪ್ರಾಣಿಗಳ ಗೊಂಬೆಗಳನ್ನು ನೋಡಿದಾಗ ಮನಸ್ಸಿನಲ್ಲಿ ಏನೋ ಹೇಳಲಾರದ ಅನುಭವ ಆಗುತ್ತಿತ್ತು. ಆನೆಯ ಕಾಲು, ಸೊಂಡಿಲಿನ ತುಂಡರಿಸಿದ ಭಾಗವನ್ನು ಪ್ರದರ್ಶಿಸಲಾಗಿತ್ತು.. ಉಳಿದೆಲ್ಲ ಪ್ರಾಣಿಗಳ ದೇಹ ಸಂಪೂರ್ಣವಾಗಿದ್ದವು.
ಅಲ್ಲಿಂದ ಮುಂದೆ ಬಂದರೆ ಮತ್ತೆ ಮುಖ್ಯ ದ್ವಾರದ ಬಳಿಗೆ ತಲುಪಿದೆವು. ಅಲ್ಲೇ ಒಂದು ಆಟವಾಡುವ ಉದ್ಯಾನ, ಒಂದಷ್ಟು ಆಸನ, ಶೌಚಾಲಯ, ಒಂದು ಸಣ್ಣ ಹೋಟೆಲ್ ಮುಂತಾದವು ಇವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಇವೆ ಎಂಬ ಫಲಕಗಳು, ನಿಮ್ಮ ಹಾಗೂ ಮಕ್ಕಳ ಹುಟ್ಟು ಹಬ್ಬವನ್ನು ಪ್ರಾಣಿಗಳ ಜೊತೆ ಆಚರಿಸಿ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ, ಎಂಬ ಬರಹಗಳು ಅಲ್ಲಲ್ಲಿ ಕಾಣ ಸಿಕ್ಕವು.. ಒಂದಷ್ಟು ಕಾಮಗಾರಿ ಸಾಗುತ್ತಾ ಇತ್ತು. ಕುಡಿಯುವ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕ್, ವಿಶ್ರಾಂತಿ ಮಂಟಪ ಇದ್ದು,ಒಂದು ದಿನದ ಇಲ್ಲವೇ ಅರ್ಧ ದಿನದ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯಲು ಉತ್ತಮ ತಾಣವಾಗಿದೆ..
ನಾವು ಇದೆಲ್ಲಾ ನೋಡಿ ಮಗನಿಗೆ ಪಾರ್ಕ್ ನಲ್ಲಿ ಆಟವಾಡಿಸಿ, ಐಸ್ಕ್ರೀಮ್ ಕೊಡಿಸಿ ಹೊರಡುವಾಗ, ಇನ್ನೇನು ಸಮಯ ಆಯಿತು ಎಂದು ಅಲ್ಲಿದ್ದ ಸೆಕ್ಯೂರಿಟಿಗಳು ವಿಷಲ್ ಮೂಲಕ ತಿಳಿಸುವಷ್ಟರಲ್ಲಿ ಬಂದಿದ್ದ ಎಲ್ಲರೂ ಅಲ್ಲಿಂದ ಹೊರಡಲು ತಯಾರಾದರು. ನಾವು ಅಲ್ಲಿಂದ ಹೊರಡುವಾಗ ಮಗ ತಿನ್ನುತ್ತಿದ ಐಸ್ ಕ್ರೀಂ ಕರಗಿ ಬಿದ್ದು ಹೋಗುತ್ತದೆ ಎನ್ನುವ ಕಾರಣಕ್ಕೆ ಅವನ ಅಪ್ಪ ಅದನ್ನು ಸ್ವಲ್ಪ ತಿಂದು ಬಿಟ್ಟರು.. ಅವರು ತಿಂದ ಕಾರಣಕ್ಕೆ ನನ್ನ ಐಸ್ ಕ್ರೀಮ್ ತಿಂದೆ ಎಂದು ದೊಡ್ಡ ರಂಪ ಮಾಡಿ ಅಳಲು ಶುರು ಮಾಡಿದಾಗ, "ಇನ್ನೇನು ಮಾಡುವುದು ಮತ್ತೆ ಒಳಗೆ ಬಿಡುವುದಿಲ್ಲ, ನಾನಂತೂ ವಾಪಸ್ ಹೋಗಿ ತರುವುದಿಲ್ಲ ಸಾಕಾಯಿತು ನನಗೆ" ಎಂದು ಅವನ ಅಪ್ಪ, ಹೊರಗೆ ಬೇರೆ ಕೊಡಿಸೋಣ ಎಂದರೂ ಅಳುತ್ತಿದ್ದ, ಅವನಿಗೆ ಸಮಾಧಾನ ಮಾಡಲು ಮತ್ತೆ ಹೋಟೆಲ್ ಕಡೆ ಓಡಿ ಹೋಗಿ, ಮತ್ತೆ ಒಂದು ಹೊಸ ಐಸ್ ಕ್ರೀಮ್ ಪ್ಯಾಕ್ ಹಿಡಿದು ಬಂದಾಗ, ಅಪ್ಪನ ಜೊತೆ ಕುಳಿತು ಉಳಿದ ಐಸ್ ಕ್ರೀಂ ಖಾಲಿ ಮಾಡಿ, ತಂದ ಹೊಸ ಪ್ಯಾಕ್ ಬೇಕು ಎಂದು ಓಡಿ ಬಂದ.. ತಿಂದು ಅಂಟು ಅಂಟಾಗಿದ್ದ ಮೈ ಕೈ ತೊಳೆಸಿಕೊಂಡು.. ಮತ್ತೆ ಮನೆಯ ಕಡೆ ಮಗನ ಬಾಯಲ್ಲಿ ಪ್ರಾಣಿ ಧಾಮದ ಕಥೆ ಕೇಳುತ್ತಾ, ಮಳೆ ಬರುವಂತೆ ಆಗಿದ್ದ ವಾತಾವರಣದಲ್ಲಿ ತಣ್ಣಗೆ ಬಂದು ಮನೆ ಸೇರಿದೆವು.
ಧನ್ಯವಾದಗಳು.💐