ಅಪಾತ್ರರ ನಡುವೆ.
ಅಪಾತ್ರರ ನಡುವೆ.


ರಾಮಪ್ಪ ಸೀತಮ್ಮ ದಂಪತಿಗಳಿಗೆ ಆರು ಜನ ಮಕ್ಕಳು.ನಾಲ್ಕು ಹೆಣ್ಣು, ಎರಡು ಗಂಡು. ಅವರೇನು ದೊಡ್ಡ ಸ್ಥಿತಿವಂತರಾಗಿರಲಿಲ್ಲ.. ಆದರೆ ಹಿಂದೆ "ಮಕ್ಕಳಿರಲವ್ವ ಮನೆ ತುಂಬಾ" ,ಎಂಬಂತೆ ಆರು ಮಕ್ಕಳನ್ನು ಹೆತ್ತಿದ್ದರು ಸೀತಮ್ಮ. ಬಡತನದ ಜೀವನವೇ.. ಆದರೆ ಬಡತನದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದರು. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದ ಹಾಗೆ ಸಣ್ಣ ನೌಕರಿಯಲ್ಲಿದ್ದ ರಾಮಪ್ಪ ಒಬ್ಬೋಬ್ಬರನ್ನೇ ಶಾಲೆಗೆ ಸೇರಿಸಿದರು. ಎಲ್ಲ ಮಕ್ಕಳು ಚೆನ್ನಾಗಿ ಓದುತ್ತಿದ್ದರು. ಒಬ್ಬೊಬ್ಬರೇ ದೊಡ್ಡವರಾಗುತ್ತಿದ್ದಂತೆ, ತಂದೆ ತಾಯಿ ವಯಸ್ಸು ಕೂಡ ಜಾಸ್ತಿ ಆಗುತ್ತಿತ್ತು. ಒಬ್ಬರ ಆದಾಯದಲ್ಲೇ ಎಲ್ಲರನ್ನೂ ದಡ ಸೇರಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ.
ದೊಡ್ಡ ಮಗ ಕೇಶವಾ ಚೆನ್ನಾಗಿ ಓದುತ್ತಿದ್ದ.ಮೆಟ್ರಿಕ್ ವರೆಗೂ ಓದಿ ನಂತರ ತಂದೆಗೆ ಕಷ್ಟವಾಗುತ್ತದೆ ಎಂದು ನಾಲ್ಕಾರು ಕಡೆ ಕೆಲಸಕ್ಕೆ ಅರ್ಜಿ ಹಾಕಿದ್ದ.ದುಡಿಯುವ ಎರಡು ಕೈಗಳು, ತಿನ್ನಲು ಹಲವಾರು ಕೈಗಳು ಇರುವುದರಿಂದ ಮಗ ಚೆನ್ನಾಗಿ ಓದುತ್ತಿದ್ದರು, ನಡುವೆ ಒಳ್ಳೆಯ ನೌಕರಿ ಸಿಕ್ಕಿದ್ದರಿಂದ ಮಗ ನನ್ನು ನೌಕರಿಗೆ ಸೇರಿಸಿದರು.
ಬಾಲ್ಯದಿಂದಲೇ ಪುಟ್ಟ ತಮ್ಮ ತಂಗಿಯರನ್ನು ನೋಡಿಕೊಂಡು ಬೆಳೆದ ಅವನು ತಾಯಿಯ ಕಷ್ಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ. ಕೆಲವೊಮ್ಮೆ ಮಾಡಿದ ಅಡಿಗೆ ಕಡಿಮೆಯಾದಾಗ, ಇಲ್ಲವೇ ದಿನಸಿ ತರಕಾರಿಗಳು ಕೊರತೆಯಾದಾಗ ಇದ್ದಿದ್ದರಲ್ಲಿ ಬೇರೆಯವರ ಹೊಟ್ಟೆ ತುಂಬಿಸಿ, ತಾನು ದೇವರಿಗೆ ಉಪವಾಸ ಇದ್ದೇನೆ ಎಂದೋ ಅಥವಾ ಪಕ್ಕದ ಮನೆಯಲ್ಲಿ ಏನೋ ತಿಂದೆ ಎಂದು, ಇಲ್ಲವೇ ಕಚೇರಿಯಲ್ಲಿ ತಿಂದುಕೊಂಡು ಬಂದಿದ್ದೇನೆ . ನೀವೆಲ್ಲ ತಿನ್ನಿ ಎಂದು ಉಪವಾಸ ಮಲಗಿದ ಉದಾಹರಣೆಗೆ ಏನು ಕಮ್ಮಿ ಇರಲಿಲ್ಲ.
ಉಳಿದ ಮಕ್ಕಳು ಅಷ್ಟೇನೂ ಕಷ್ಟವನ್ನು ಕಾಣದೇ ಓದಿಕೊಂಡು ತಮ್ಮ ಜೀವನದಲ್ಲಿ ಮುಂದೆ ಸಾಗಿದರು, ಎಲ್ಲರೂ ಚೆನ್ನಾಗಿ ಓದುತ್ತಿದ್ದರು ಹಾಗಾಗಿ ಹಿಂದೆ ಉದ್ಯೋಗ ಸಿಗಲು ಅಷ್ಟೊಂದು ಪೈಪೋಟಿ ಇರದ ಕಾರಣ ಎಲ್ಲರಿಗೂ ಉತ್ತಮವಾದ ಕೆಲಸ ಸಿಕ್ಕಿತ್ತು. ಕೆಲಸ ಸಿಗುತ್ತಿದ್ದಂತೆ ಒಬ್ಬೊಬ್ಬರೇ ತಮ್ಮ ಜೀವನವನ್ನು ಕಟ್ಟಿಕೊಳ್ಳತೊಡಗಿದರು. ಕೇಶವನ ಮೊದಲ ತಮ್ಮ ರಂಗನಾಥ ಉದ್ಯೋಗವನ್ನು ಪಡೆದು ತಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಮದುವೆ ಆಗುತ್ತೇನೆ ಎಂದು ತನ್ನ ನಿರ್ಧಾರವನ್ನು ತಿಳಿಸಿ ನನ್ನ ಜೀವನವನ್ನು ನೋಡಿಕೊಂಡ. ಮದುವೆಗೆ ಬೇಕಾದ ವ್ಯವಸ್ಥೆಯನ್ನು ಕೇಶವಾ ಮಾಡಿದ, ತಮ್ಮ ಚೆನ್ನಾಗಿರಲಿ ಎಂಬುದಷ್ಟೇ ಅವನ ಆಸೆಯಾಗಿತ್ತು.
ಹಾಗೆ ತಂದೆ ತಾಯಿಯನ್ನು ನೋಡಿಕೊಂಡು ಉಳಿದ ತಂಗಿ ಹಾಗೂ ತಮ್ಮಂದಿರ ವಿದ್ಯಾಭ್ಯಾಸ ನಡೆಯುತ್ತಾ ಇತ್ತು.ಎಲ್ಲರೂ ಓದಿ ಉ
ದ್ಯೋಗ ಹಿಡಿದು ಚೆನ್ನಾಗಿದ್ದ ಕಾರಣ ಎಲ್ಲರಿಗೂ ಒಳ್ಳೆಯ ಸಂಬಂಧಗಳು ಕೇಳಿಕೊಂಡು ಬಂದ ಕಾರಣ ಒಬ್ಬೊಬ್ಬರಾಗಿಯೇ ವಿವಾಹವಾಗಿ ಗಂಡನ ಮನೆಗೆ ತೆರಳಿದರು. ಅವರ ಮದುವೆ ಖರ್ಚು, ವೆಚ್ಚ ಹಾಗೂ ಮದುವೆಯಾದ ತಮ್ಮ ತಂಗಿಯರ, ಸೀಮಂತ ಬಾಣಂತನ, ಮಕ್ಕಳ ಖರ್ಚು ವೆಚ್ಚವನ್ನು ಕೇಶವನೆ ನೋಡಿಕೊಳ್ಳಬೇಕಾಯಿತು.
ನಡುವೆ ತಂದೆ ನಿವೃತ್ತಿ ಹೊಂದಿದಾಗ ಒಬ್ಬನೇ ಎಲ್ಲಾ ನಿಭಾಯಿಸಿದನು. ಇದೆಲ್ಲದರ ಮಧ್ಯೆ ಕೇಶವನ ಬಗ್ಗೆ ಯಾರು ಚಿಂತೆ ಮಾಡಲೇ ಇಲ್ಲ. ಅವನು ಮದುವೆಯಾಗದೆ, ಕೇವಲ ತನ್ನ ತಮ್ಮ, ತಂಗಿ ಹಾಗೂ ಅಪ್ಪ ಅಮ್ಮನ ಸಲುವಾಗಿ ಬರೀ ದುಡಿಯುತ್ತಲೇ ಉಳಿದನು. ಯಾರು ಕೂಡ ನೀನು ಮದುವೆ ಮಾಡಿಕೊಂಡು ಸುಖವಾಗಿರು, ಎಂದು ಹೇಳಲೇ ಇಲ್ಲ. ಕೆಲವೊಮ್ಮೆ ಬಾಯಿ ಮಾತಿಗೆ ಹೇಳಿದರೂ ಪರಿಸ್ಥಿತಿ ಅನುಕೂಲಕರವು ಆಗಿರಲಿಲ್ಲ.ಅಣ್ಣ ಮದುವೆ ಆಗಿ ಹೋದರೆ ಜವಾಬ್ದಾರಿ ಭಾರ ಹೊರಲು ಯಾರು ಇಲ್ಲ.. ಎಂದು ಎಲ್ಲರೂ ಸುಮ್ಮನದರೂ. ಅವನ ತಂದೆ ತಾಯಿ ಮಾತ್ರ ಮಗನ ಬದುಕು ಒಂಟಿ ಆಯಿತಲ್ಲಾ ಎಂದು ದುಖಃ ಮಾಡಿಕೊಂಡಾಗ ಕೇಶವನೆ ತನಗೆ ಮದುವೆ ಆಗುವ ಇಚ್ಚೆ ಇಲ್ಲ ಎಂದು ಸಂತೈಸುತ್ತಿದ್ದ.
ಎಲ್ಲರೂ ಮದುವೆ ಮಾಡಿಕೊಂಡು ಆರಾಮಾಗಿ ತಮ್ಮ ಸಂಸಾರದಲ್ಲಿ ಮುಳುಗಿದರು. ತಂದೆ ತಾಯಿಯನ್ನು ಕೊನೆ ಕಾಲದಲ್ಲಿ ನೋಡಿಕೊಂಡ. ಮನೆಯ ಸಾಲವನ್ನು ತೀರಿಸಿ ತನ್ನ ನಿವೃತ್ತಿ ಹಣ ಕೂಡಾ, ಸಾಲ ಸೋಲ ತೀರಿಸುವಲ್ಲೆ ಸರಿ ಹೋಯಿತು. ಆದರೂ ತನ್ನ ಕುಟುಂಬ ತನ್ನ ಕುಟುಂಬ ಎಂದು ಅಕ್ಕರೆಯಿಂದ ಎಲ್ಲವನ್ನೂ ಮಾಡಿದನು.
ಅದೆಲ್ಲ ಜವಾಬ್ದಾರಿಯನ್ನು ಹೊತ್ತ ಕೇಶವಾ ಸಾಲಗಳನ್ನು ತೀರಿಸುವ ಭರದಲ್ಲಿ ಅವನ ಯೌವನವೆಲ್ಲ ಕಳೆದು ಹೋಯಿತು. ತಂದೆಯು ನಿವೃತ್ತಿ ಹೊಂದಿದಾಗ ಒಂದು ಸ್ವಂತ ಮನೆಯನ್ನು ಮಾಡಿಕೊಂಡಿದ್ದರು ಈಗ ಆ ಮನೆಯಲ್ಲಿ ಕೇಶವಾ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರೂ, ಉಳಿದವರೆಲ್ಲರೂ ಈಗ ಅಣ್ಣ ಒಬ್ಬನೇ ಇದ್ದರೂ, ಮನೆ ಅವನ ಹೆಸರಿಗೆ ಮಾಡಿ ಕೊಂಡ, ಅವನಿಗೆ ಆಸ್ತಿ ಆಸೆ, ಎಲ್ಲಾ ತನಗೆ ಬೇಕು. ಹಾಗಾಗಿ ಅದನ್ನು ಯಾರಿಗೂ ಹಂಚದೇ ತನ್ನಲ್ಲೇ ಇಟ್ಟುಕೊಂಡಿದ್ದಾನೆ ಎಂಬ ಮಾತನ್ನು ಆಡುತ್ತಾರೆ, ಅದನ್ನು ಕೇಳುತ್ತಾ ಅವರಿಗೋಸ್ಕರ ತಾನು ತನ್ನ ಜೀವನವನ್ನೇ ಮುಡಿಪಾಗಿಟ್ಟನಲ್ಲ ಎಂದು ಯೋಚಿಸುತ್ತ ಕೇಶವ ನೊಂದುಕೊಳ್ಳುತ್ತಾನೆ.
ಇರಲು ಇರುವ ಒಂದು ಮನೆಯನ್ನು ಹಂಚಿ ತಾನೆಲ್ಲಿ ಹೋಗಲಿ? ಎಂದು ಆ ಮನೆಯಲ್ಲೇ ಒಂಟಿಯಾಗಿ ಇದ್ದಾನೆ.
ಹೀಗೆ ಕೆಲವೊಮ್ಮೆ ನಾವು, ನಮ್ಮವರು,ನಮ್ಮ ಕುಟುಂಬ ಎಂದುಕೊಂಡರೂ ಸಮಯ ಬಂದಾಗ ನಮ್ಮವರು ಅಪಾತ್ರರಾಗಿ ಬದಲಾಗುತ್ತಾರೆ. ತಮ್ಮ ತ್ಯಾಗ, ಸ್ನೇಹ ,ಪ್ರೀತಿ ವಿಶ್ವಾಸಗಳಿಗೆ ಅವರು ಅರ್ಹರಲ್ಲ ಎಂದು ಗೊತ್ತಾಗುವಾಗ ತಮ್ಮ ಜೀವನ ಕಳೆದು ಹೋಗಿರುತ್ತದೆ.
ಬದುಕು ಅಪಾತ್ರರಿಗಾಗಿ.. ಸವೆದು ಹೋಗಿರುತ್ತದೆ.