ಜನ್ಮ ಜನ್ಮದ ಅನುಬಂಧ.
ಜನ್ಮ ಜನ್ಮದ ಅನುಬಂಧ.


ಮದುವೆ ಎಂಬುದು ಎಲ್ಲರ ಪಾಲಿಗೆ ದೊಡ್ಡ ಕನಸು. ನಮಿತಾ ಕೂಡ ತನ್ನ ಮದುವೆ ಬಗ್ಗೆ ನೂರಾರು ಕನಸು ಆಸೆ ಇಟ್ಟುಕೊಂಡಿದ್ದಳು. ಅವಳು ಅವಳ ಮಾವನ ಮಗನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಅವನನ್ನೇ ಮದುವೆಯಾಗುವುದೆಂದು ಬಾಲ್ಯದಿಂದಲೇ ತಲೆಯಲ್ಲಿ ತುಂಬಿಕೊಂಡಿದ್ದಳು.ಅದಕ್ಕೆ ಕುಟುಂಬದ ಸಾತ್ ಕೂಡ ಸಿಕ್ಕಿತ್ತು.
ನಮಿತ ಮತ್ತು ಆಕಾಶ್ ಸಂಬಂಧಿಗಳೇ ಆಗಿದ್ದರಿಂದ ಬಾಲ್ಯದಿಂದಲೂ ಆಗಾಗ ಒಟ್ಟಿಗೆ ಇರುತ್ತಿದ್ದರು. ಆಡುತ್ತಾ ಪಾಡುತ್ತಾ ಇರುವ ಮಕ್ಕಳು, ಯಾವುದೋ ಒಂದು ಸಂದರ್ಭದಲ್ಲಿ ತಿಳಿಯದೆಯೇ ಆಕಾಶ್ ನಮಿತಾಳ ಕೊರಳಿಗೆ ಅರಿಶಿನದ ದಾರವನ್ನು ಕಟ್ಟಿ ನೀನೆ ನನ್ನ ಏಳು ಜನ್ಮದ ಪತ್ನಿ ಎಂದು ಹೇಳಿದ್ದ. ನಮಿತಾ ಅದನ್ನೇ ಬಲವಾಗಿ ನಂಬಿ, ಅವನನ್ನೇ ತನ್ನ ಏಳೇಳು ಜನ್ಮದ ಪತಿ ಎಂದು ನಂಬಿದ್ದಳು.
ಇಬ್ಬರು ಚನ್ನಾಗಿ ಓದುತ್ತಿದ್ದರು. ಶಾಲಾ ರಜೆ ಇದ್ದಾಗ ಪರಸ್ಪರ ಊರುಗಳಿಗೆ ಹೋಗಿ ಇದ್ದು,ಬಂದು.. ಮಾಡುತ್ತಾ ಇದ್ದರೂ. ಇಬ್ಬರು ಮುಂದೆ ಮದುವೆ ಆಗುವವರು ಎಂದು ನೆಂಟರಿಷ್ಟರು ಸ್ನೇಹಿತರು ಯಾವಾಗಲೂ ಅವರನ್ನು ತಮಾಷೆ ಮಾಡಿ ಮಾತನಾಡುತ್ತಿದ್ದರು. ಆದರೂ ಇಬ್ಬರೂ ತಮ್ಮ ವರ್ತನೆ, ಇತಿ ಮಿತಿ ಮೀರುತ್ತಿರಲಿಲ್ಲ . ಇಬ್ಬರೂ ಸ್ನೇಹದಿಂದ ಇದ್ದರೂ, ಮನದಲ್ಲೇ ಒಬ್ಬರಿಗಾಗಿಯೇ ಇನ್ನೊಬ್ಬರು ಎಂಬಂತೆ ಬದುಕುತ್ತಿದ್ದರು. ಇಬ್ಬರು ಚೆನ್ನಾಗಿ ಓದಿ ಕಾಲೇಜ್ ವಿದ್ಯಾಭ್ಯಾಸವನ್ನು ಮುಗಿಸಿದ್ದರು ಆಕಾಶ್ ಒಂದು ದೊಡ್ಡ ಎಂಎನ್‌ಸಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿದ್ದ, ನಮಿತ ಕೂಡ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು ಇಬ್ಬರೂ ಮಾನಸಿಕವಾಗಿ ಎಂದೋ ಪತಿ-ಪತ್ನಿಯರಾಗಿ ಹೋಗಿದ್ದರು. ಒಬ್ಬರನ್ನು ಒಬ್ಬರು ಮಾನಸಿಕವಾಗಿ ಬಹಳ ಹಚ್ಚಿ ಕೊಂಡು ಒಬ್ಬರಿಗಾಗಿಯೇ ಇನ್ನೊಬ್ಬರು ಎಂಬಂತೆ ಬದುಕಿದ್ದರು.
ಹೀಗಿರುವಾಗ ಹಿರಿಯರು ಇಬ್ಬರಿಗೂ ಮದುವೆ ಮಾಡಬೇಕೆಂದು
ಶಾಸ್ತ್ರೋಕ್ತವಾಗಿ ಎಲ್ಲಾ ತಯಾರಿ ಮಾಡಿಕೊಂಡರು. ಇಬ್ಬರ ವಿವಾಹ ಅದ್ದೂರಿಯಾಗಿ ನಡೆಸಲು ಹಿರಿಯರು ತೀರ್ಮಾನಿಸಿದರು. ಇಬ್ಬರ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ನಮಿತ ಮದುವೆ ಗೊತ್ತಾದ ಮೇಲೆ ಒಂದು ತಿಂಗಳು ರಜೆ ಪಡೆದು ಮೊದಲೇ ಮನೆಗೆ ಹೋಗಿ ಮದುವೆ ತಯಾರಿಯಲ್ಲಿ ತೊಡಗಿದ್ದರು. ನಡುವೆ ಮದುವೆ ಒಡವೆ ವಸ್ತ್ರ ಖರೀದಿಗಾಗಿ ನಮಿತ, ಆಕಾಶ್ ಕುಟುಂಬ ಒಟ್ಟಾಗಿ ನಗರಕ್ಕೂ ಹೋಗಿದ್ದರು
ಆಕಾಶ್ ಕೆಲಸಕ್ಕಾಗಿ ದೂರದ ಊರಿನಲ್ಲಿದ್ದವನು, ಮದುವೆ ಒಂದು ವಾರ ಇರುವಾಗ ಬರುತ್ತೇನೆ ಎಂದು ವಾಪಸ್ ಹೋಗಿದ್ದ. ಅಂದು ಮದುವೆಯ ನಿಮಿತ್ತ ಮನೆಗೆ ಹೊರಟಿದ್ದ, ಆದರೆ ದುರಾದೃಷ್ಟವಶಾತ್ ಅವನು ಬರುತ್ತಿದ್ದ ಕಾರ್ ಅಪಘಾತಕ್ಕೆ ಒಳಗಾಗಿ ಅವನು ಸ್ಥಳದಲ್ಲೇ ಮರಣವನ್ನು ಅಪ್ಪಿದ. ವಿಷಯ ತಿಳಿದು ಎಲ್ಲರೂ ದುಃಖದಲ್ಲಿ ಮುಳುಗಿದರು, ನಮಿತಾಳ ಮನೆಯವರು ದುಃಖ ಹಾಗೂ ಗಾಬರಿಯಲ್ಲಿ ಏನು ಮಾಡುವುದೆಂದು ತಿಳಿಯದೆ ಕಂಗಾಲಾದರು. ಏನು ವಿಷಯ ತಿಳಿಯದೆಯೇ ಮದುವೆ ತಯಾರಿಯಲ್ಲಿ ತೊಡಗಿದ ನಮಿತಾಳಿಗೆ ಏನೆಂದು ಹೇಳುವುದು ಎಂದು ಮಾತನಾಡಿಕೊಳ್ಳುತ್ತಿರುವಾಗ, ಹಿಂದಿನಿಂದ ಬಂದ ನಮಿತ, ಎಲ್ಲವನ್ನು ಕೇಳಿಸಿಕೊಂಡು ತಲೆ ತಿರುಗಿ ದಡಾರನೇ ಬಿದ್ದುಬಿಟ್ಟಳು. ಅವಳು ಬಿದ್ದಿದ್ದನ್ನು, ಬಿದ್ದ ಸದ್ದನ್ನು ಕೇಳಿಸಿಕೊಂಡು ಎಲ್ಲರೂ ಅವಳ ಕಡೆ ತಿರುಗಿದಾಗ, ಆಕಾಶ್ ನನ್ನ ಪತಿ,ಈಗ ಮಾತ್ರ ಅಲ್ಲ ಏಳೇಳು ಜನ್ಮಕ್ಕೂ ಅವನೇ, ನಾನೂ ಅವನ ಜೊತೆ ಹೋಗುತ್ತೇನೆ ಎಂದು ಬಡಬಡಿಸುತ್ತಾ ಪ್ರಜ್ಞೆ ತಪ್ಪಿದ ಅವಳನ್ನು ಆಸ್ಪತ್ರೆಗೆ ಸೇರಿಸಿದಾಗ ಅವಳ ಜೀವ ಆಕಾಶನನ್ನು ಸೇರುವತ್ತ ದಾಪುಗಾಲು ಹಾಕಿತ್ತು. ಮದುವೆ ಮಾಡಿ ಸಂಭ್ರಮಿಸ ಬೇಕಿದ್ದ ಎರಡು ಕುಟುಂಬ ಮರೆಯಾಗದ ನೋವಲ್ಲಿ ದಿನ ದೂಡುವಂತೆ ಆಯಿತು. ಬಂದವರೆಲ್ಲಾ
ಇಬ್ಬರ ಬಂಧನ ಏಳೇಳು ಜನ್ಮದ್ದು ಎಂದು ಹೇಳುತ್ತಾ ಎಲ್ಲರೂ ದುಖಃದ ಕಡಲಲ್ಲಿ ಮುಳುಗಿದರು.
ಧನ್ಯವಾದಗಳು💐