ಚಿನ್ಮಯಿ .

Drama

2  

ಚಿನ್ಮಯಿ .

Drama

ಹೆಜ್ಜೆಗೊಂದು ಹೆಜ್ಜೆ

ಹೆಜ್ಜೆಗೊಂದು ಹೆಜ್ಜೆ

4 mins
236


ಅಂದು ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಗಿತ್ತು ಮಹಿಮಾ ಮತ್ತು ಕೃತಿಗೆ. ಎಲ್ಲವೂ ಕೃತಿಯ ಮಹಿಮೆ. ಇದುವರೆಗೆ ನಡೆದಿದ್ದು, ನಡೆಯದಿಲ್ಲದ್ದು ಎಲ್ಲವನ್ನೂ ಸೇರಿಸಿ ತಾನೇ ಒಂದು ಮಹಾಕಾವ್ಯವನ್ನಾಗಿ ಮಾಡಿ ರಾತ್ರಿ ಪೂರ್ತಿ ಮಹಿಮಾಗೆ ಸಾಕೆಂದರೂ ಕೇಳದೆ ಕಥೆ ಹೇಳಿ ತಲೆ ನೋವು ಬರುವಂತೆ ಮಾಡಿದ್ದಳು. ಮಹಿಮಾ ಅಂತೂ ಮೊದಲೇ ಮೌನಗೌರಿ. ಕೃತಿ ಕಥೆಗಳನ್ನ ಕೇಳುತ್ತ ಒಂದುಕಡೆ ಮಹಿಮಾ ಅಲ್ಲೇ ನಿದ್ದೆ ಮಾಡಿಬಿಟ್ಟರೆ, ಇನ್ನೊಂದು ಕಡೆ ಕೃತಿ ಅವಳು ಕೇಳುತ್ತಿದ್ದಾಳೋ ಇಲ್ಲವೋ ಅನ್ನೋದನ್ನೂ ಕೂಡ ನೋಡದೆ ಮಾತಾಡಿ ಮಾತಾಡಿ ಅದೆಷ್ಟು ಹೊತ್ತಿಗೆ ನಿದ್ದೆಗೆ ಜಾರಿದ್ದಳೋ ಅವಳಿಗೂ ಗೊತ್ತಿಲ್ಲ.

ಆ ದಿನ ಮಹಿಮಾಳ ಪಾಲಿಗೆ ಖುಷಿಯ ದಿನವೇ ಸರಿ. ಪ್ರತಿದಿನ ಅವಳ ಕೆಲಸ ನೀರಸವಾಗಿ ಸಾಗುತ್ತಿದ್ದರೆ ಇಂದು ಲವಲವಿಕೆಯಿಂದ ಶುರುವಾಗಿತ್ತು.  ಬೆಳಿಗ್ಗೆ ಸ್ವತಃ ನೇತ್ರಾ ಅವರೇ ಕೃತಿ ಮತ್ತು ಮಹಿಮಾ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಟ್ಟಿದ್ದರು. ನಿದ್ದೆಯಿಲ್ಲದೆ ತಲೆನೋವು ಹಚ್ಚಿಕೊಂಡಿದ್ದ ಇಬ್ಬರಿಗೂ ಅದೆಷ್ಟೋ ನಿರಾಳವೆನಿಸಿತ್ತು. ನಂತರ ಒಂದು ಸುದೀರ್ಘ ಸ್ನಾನ ಮಾಡಿ ಹೊಸ ಸೀರೆಯನ್ನೆಲ್ಲ ಉಟ್ಟು ಕೆಳಗೆ ಬರುವಷ್ಟರಲ್ಲಿ ತುಂಬಾ ಸಮಯವೇ ಹಿಡಿದಿತ್ತು.

ಮೆಟ್ಟಿಲಿಳಿದು ಬರುತ್ತಿದ್ದ ಇಬ್ಬರು ಸುಂದರಿಯರನ್ನ ನೋಡುತ್ತಲೇ ಜಾನಕಮ್ಮ, ನೇತ್ರಾ ಮತ್ತು ದಿವಾಕರ್ ಅವರ ಮುಖವರಳಿತ್ತು. ಕೃತಿಯೂ ಸುಂದರಿಯೇ! ಆದರೆ ಮಹಿಮಾಳಷ್ಟು ಎತ್ತರವಿರಲಿಲ್ಲ. ಪುಟ್ಟದಾಗಿ ಮುದ್ದು ಮುದ್ದಾಗಿದ್ದಳು ಅವಳು. ಅದನ್ನ ಬಿಟ್ಟರೇ ಅವರಿಬ್ಬರೂ ಕೂಡ ಎಲ್ಲರ ಕಣ್ಮನ ಸೆಳೆಯುತ್ತಿದ್ದರು.


ಕೃತಿಯು ಸರ್ವಾಲಂಕಾರ ಭೂಷಿತೆಯಾಗಿ ಬಂದಿದ್ದರೆ ಮಹಿಮಳದ್ದು ಅದೇ ಅಲಂಕಾರ. ಅದನ್ನ ನೋಡಿ ನೇತ್ರ ಅವರಿಗೆ ಬಹಳವೇ ಬೇಜಾರಾಗಿತ್ತು. ಅವಳಿಗೆ ತಾನು ಕೊಟ್ಟ ಒಡವೆಗಳನ್ನ ಹಾಕಿಕೊಳ್ಳುವಂತೆ ಸೂಚಿಸಿದ್ದರು. ಆದರೆ ಅವಳು ಒಪ್ಪಲೇ ಇಲ್ಲ. " ನೋಡು ಮಗಳೇ ಹೀಗೆಲ್ಲ ಇರಬೇಡ...ನಿನ್ನನ್ನ ನೋಡೋಕೆ ಆಗೋಲ್ಲ. ನನ್ನ ಮಗ ಕೀರ್ತನ್ ಈಗ ಇಲ್ಲಿ ಇಲ್ಲದೆ ಇರಬಹುದು...ಆದರೆ ಅವನು ಅಲ್ಲಿಂದನೆ ನಮ್ಮನ್ನೆಲ್ಲ ನೋಡುತ್ತಾ ಇರುತ್ತಾನೆ...ಅವನಿಗೆ ನೀನು ಈ ರೀತಿ ಇದ್ರೆ ಬೇಜಾರಾಗಲ್ವಾ ಹೇಳು...ನನ್ನ ಮಾತು ಕೇಳು ಮಗಳೇ...ಇದನ್ನೆಲ್ಲ ಹಾಕಿಕೊಂಡು ಬಾ"

ಮಹಿಮಾಳನ್ನು ಮತ್ತೆ ಅವಳ ಕೋಣೆಗೆ ಕರೆದುಕೊಂಡು ಹೋಗಿ ಅವಳಿಗೆ ಒಡವೆಗಳನ್ನ ಹಾಕಿ ಚೆನ್ನಾಗಿ ಸಿಂಗರಿಸಿಕೊಂಡು ಬರುವಂತೆ ಹೇಳಿ ಬಂದಿದ್ದರು ನೇತ್ರಾ.


ಕೀರ್ತನ್ ಹೆಸರನ್ನು ಕೇಳಿದ ಮಹಿಮಾಗೆ ದುಃಖ ಉಕ್ಕಿ ಬಂದಿತ್ತು. "ಯಾಕೆ ಕೀರ್ತನ್ ನನ್ನ ಬಿಟ್ಟು ಹೋದೆ...ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗಿದ್ರೆ ಆಗ್ತಿರ್ಲಿಲ್ವಾ? ಅಷ್ಟಕ್ಕೂ ಈಗಾದ್ರು ಏನು ಜೀವಂತವಾಗಿದ್ದೀನಿ ನಾನು! ಉಸಿರಾಡುತ್ತಿರುವ ಒಂದು ಶವವಷ್ಟೇ ಈಗ!! ಇದಕ್ಕಿಂತ ಅವತ್ತು ನಾನೂ ನಿನ್ನ ಜೊತೆ ಬಂದಿದ್ರೆನೆ ಚೆನ್ನಾಗಿರ್ತಿತ್ತು" ಎಂದು ಅಲ್ಲೇ ಕುಸಿದು ಕುಳಿತು ಕಣ್ಣೀರು ಹಾಕಿದ್ದಳು.  ಮಹಿಮಾ ಈಗ ಕೀರ್ತನ್ ನೆನಪಿನಲ್ಲಿರುತ್ತಾಳೆಂದು ಯಾರೂ ಕೂಡ ಅವಳಿಗೆ ಡಿಸ್ಟರ್ಬ್ ಮಾಡಲು ಹೋಗಲಿಲ್ಲ. ಸ್ವಲ್ಪ ಸಮಯದ ನಂತರ ತಾನೇ ಸಮಾಧಾನ ಮಾಡಿಕೊಂಡು ಅತ್ತೆ ಕೊಟ್ಟ ಒಡವೆಗಳನ್ನೆಲ್ಲ ಹಾಕಲು ಮನಸ್ಸಾಗದೆ ಅದರಲ್ಲಿ ಸ್ವಲ್ಪ ಹಾಕಿಕೊಂಡು ಬಂದಿದ್ದಳು. ಅವರೆಲ್ಲರನ್ನೂ ಹೊತ್ತ ಕಾರು ಮೌನವಾಗಿ ದೇವಸ್ಥಾನದ ಕಡೆ ಮುಖ ಮಾಡಿತ್ತು. ಆರಂಭದಲ್ಲಿ ಎಲ್ಲರ ಮನಸ್ಸು ಕೀರ್ತನ್ನ ನೆನಪಿನ ಸುತ್ತ ಸುತ್ತುತ್ತಿತ್ತು. ಇದರಿಂದ ಬೇಗ ಹೊರಬಂದಿದ್ದೆ ಕೃತಿ. ತನ್ನ ತರಲೆ ಮಾತುಗಳಿಂದ ಬೇಗನೆ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಳು.


ದೇವಸ್ಥಾನದಲ್ಲಿ ಮಹಿಮಾ ಮತ್ತು ಕೃತಿ ಹೆಸರಿನಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಆ ದಂಪತಿಗಳಿಗೆ ಈ ಎರಡು ಮಕ್ಕಳೇ ಪ್ರಪಂಚ. ಅವರಿಬ್ಬರನ್ನು ಬಿಟ್ಟು ಬೇರೆ ಏನೂ ಬೇಕಿಲ್ಲ ಅವರಿಗೆ. ಮೊದಲು ಇವರಿಬ್ಬರ ಜೊತೆ ಇನ್ನೊಬ್ಬನಿದ್ದ...ಅವರ ಮಗ!!...ಕೀರ್ತನ್...ಅವನು ಇವರ ಜೀವನದಿಂದ ದೂರವಾದ ನಂತರ ಮಹಿಮಾ ಮತ್ತು ಕೃತಿಯೇ ಇವರ ಜೀವನವಾಗಿದ್ದರು.  ಇವರಿಬ್ಬರಿಗೂ ಕೇವಲ 2 ದಿನಗಳ ಅಂತರವಷ್ಟೇ! ಹಾಗಾಗಿ ಇಬ್ಬರೂ ಫ್ರೀ ಸಿಕ್ಕಾಗ ಒಟ್ಟಿಗೆ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದರು. ಇನ್ನು ಎರಡು ದಿನಕ್ಕೆ ಮಹಿಮಾಳ ಹುಟ್ಟುಹಬ್ಬವಿತ್ತು. ಅದರ ಎರಡು ದಿನಗಳ ನಂತರ ಕೃತಿಯದ್ದು. ಅದಕ್ಕಾಗಿಯೇ ಈ ವಿಶೇಷ ಪೂಜೆ.  ಅದರ ನಂತರ ದೇವಸ್ಥಾನದ ಭಕ್ತಾದಿಗಳಿಗೆಲ್ಲ ಅನ್ನದಾನ ಸಂತರ್ಪಣೆಯನ್ನ ಇಟ್ಟುಕೊಂಡಿದ್ದರು. ಅದರ ಕಡೆಗೆ ತೆರಳಿದ್ದರು ನಾಲ್ವರೂ.


ಅಂದು ಮಹಿಮಾ ಸ್ವಲ್ಪ ಹೆಚ್ಚೇ ಎನ್ನುವಂತೆ ಲವಲವಿಕೆಯಿಂದಿದ್ದಳು. ತನ್ನವರು ತನ್ನ ಜೊತೆಗಿದ್ದಾರೆಂಬ ಖುಷಿ ಅವಳ ಈ ರೀತಿಯ ವರ್ತನೆಗೆ ಕಾರಣವಾಗಿರಬಹುದು. ತನ್ನ ಅತ್ತೆ ಮಾವನ ಜೊತೆಗೂಡಿ ಅಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಊಟವನ್ನು ಬಡಿಸುತ್ತಿದ್ದಳು.  ಆದರೆ ಇವೆಲ್ಲದರ ಮಧ್ಯೆ ಅವಳು ಒಂದು ಅಂಶವನ್ನು ಗಮನಿಸಿರಲಿಲ್ಲ. ಅವಳು ಅಲ್ಲಿ ದೇವಸ್ಥಾನಕ್ಕೆ ಬಂದಾಗಿನಿಂದ ಒಂದು ಜೋಡಿ ಕಂಗಳು ಅವಳನ್ನೇ ಹಿಂಬಾಲಿಸುತ್ತಿದ್ದವು. ಅವಳು ಕಾರಿನಿಂದ ಇಳಿದಾಗಿನಿಂದ ಹಿಡಿದು ಇಲ್ಲಿಯವರೆಗೆ ಅವಳ ಎಲ್ಲಾ ಚಟುವಟಿಕೆಗಳನ್ನು ತನ್ನ ಕಣ್ಣುಗಳಲ್ಲಿ, ಮನಸಲ್ಲಿ ಅಚ್ಚೋತ್ತುಕೊಂಡಿದ್ದಲ್ಲದೆ ತನ್ನ ಮೊಬೈಲಿನಲ್ಲಿಯೂ ಕೂಡ ಸೆರೆಹಿಡಿಯತೊಡಗಿದ್ದರು. ಆದರೆ ಇದಾವುದರ ಪರಿವೆಯಿಲ್ಲದೆ ಮಹಿಮಾ ತನ್ನ ಪಾಡಿಗೆ ತಾನು ಕೃತಿಯ ಮಾತುಗಳನ್ನು ಆಸ್ವಾದಿಸುತ್ತಿದ್ದಳು.

         

ಆದರೆ ಆ ವ್ಯಕ್ತಿಗೆ ಕೇವಲ ಇಷ್ಟರಲ್ಲಿಯೇ ತೃಪ್ತಿ ಆಗುವುದೆಲ್ಲಿಂದ? ಆ ಎರಡು ಹುಡುಗಿಯರಿಗಾಗಿ ವಿಶೇಷ ಪೂಜೆಯನ್ನು ಮಾಡಿಸಿದ್ದನ್ನು ಗಮನಿಸಿದ ಆ ವ್ಯಕ್ತಿ ಅವರು ಅಲ್ಲಿಂದ ತೆರಳಿದ ನಂತರ ಅಲ್ಲಿಯ ಪೂಜಾರಿಯ ಬಳಿಗೆ ಓಡಿದ್ದರು.

ಅವರಿಗೆ ಲಂಚದ ಆಸೆಯನ್ನು ತೋರಿಸಿ ಈಗ ಪೂಜೆ ಮಾಡಿಸಿಕೊಂಡವರ ಹೆಸರು ಬಾಯಿಬಿಡಿಸಿದ್ದರು. ಆ ಪೂಜಾರಿ ಅವರ ಹೆಸರು, ಗೋತ್ರ, ರಾಶಿ, ನಕ್ಷತ್ರದ ಸಮೇತ ಬಾಯಿಬಿಟ್ಟಿದ್ದ.   ಆದರೆ ಈ ಅನಾಮಿಕ ವ್ಯಕ್ತಿಗೆ ಈ ಎರಡು ಹೆಸರುಗಳಲ್ಲಿ ಆಕೆಯ ಹೆಸರು ಯಾವುದು ಎಂದು ಯೋಚಿಸಿ ಯೋಚಿಸಿ, ತನ್ನ ತಲೆಗೆ, ಮನಸಿಗೆ ಸರಿಯಾಗಿ ಕೆಲಸ ಕೊಟ್ಟು ಕೊನೆಗೆ ಆಕೆಯ ಹೆಸರು 'ಮಹಿಮಾ' ಎಂದೇ ತೀರ್ಪು ಕೊಟ್ಟುಬಿಟ್ಟಿದ್ದರು.


ಆ ದಿನ ಸಂಜೆಯೇ ದಿವಾಕರ್ ಮತ್ತು ಕೃತಿಯ ಕೆಲಸದ ಕಾರಣವನ್ನು ನೀಡಿ ಮುವರೂ ಅಲ್ಲಿಂದ ಹೊರಟಾಗಿತ್ತು. ಅವರನ್ನು ಹೊತ್ತ ಕಾರು ಮನೆಯ ಗೇಟ್ ದಾಟಿದ್ದೇ ತಡ ಮಹಿಮಾಳ ಮುಖ ಮತ್ತೆ ಸಣ್ಣದಾಗಿತ್ತು.

'ತನ್ನ ಜೀವನವೇ ಇಷ್ಟು...ಹೀಗೆ ಅಪುರೂಪಕ್ಕೊಮ್ಮೆ ಖುಷಿಯ ಕ್ಷಣಗಳು ಬಂದು ಹೋಗುತ್ತವೆಯಷ್ಟೇ! ಅದರ ನಂತರ ಮತ್ತೆ ಅದೇ ಏಕಾಂಗಿತನ, ಕೊರಗುವಿಕೆ, ಮೌನವಾದ ನಿಟ್ಟುಸಿರು. ಇಷ್ಟೇ ನನ್ನ ಬದುಕು' ಅಂತ ಅವಳ ಮನಸ್ಸಿನಲ್ಲಿ ಬಂದದ್ದೇ ತಡ ದುಃಖ ಉಕ್ಕಿ ಬಂದಿತ್ತು. ಅಲ್ಲಿಂದ ವೇಗವಾಗಿ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಮತ್ತೆ ಅದೇ ನೀರಸ ಬದುಕಿಗೆ ಹೊಂದಿಕೊಳ್ಳಲು ಯತ್ನಿಸುತ್ತಿದ್ದಳು ಮಹಿಮಾ.


ರಜನಿಗೆ ಅನಿಕೇತ್ ಮಾತಿನಿಂದ ಇನ್ನಷ್ಟು ಭಯ ಶುರುವಾಗಿತ್ತು. ಅವಳು ಅದೆಲ್ಲಿ ತನ್ನಮ್ಮ ನಿಜವಾಗ್ಲೂ ಇವರಿಗೆ ಹೇಳಿ ಮದುವೆ ಕ್ಯಾನ್ಸಲ್ ಮಾಡಿಬಿಡುತ್ತಾಳೋ ಎಂದು ಹೆದರಿದ್ದಳು. ಆದರೆ ಅಂದು ಅನಿಕೇತ್ ಮಾತನ್ನು ಕೇಳಿದ ಬಳಿಕ ಅವಳ ಭಯ ಮತ್ತಷ್ಟು ಹೆಚ್ಚಾಗಿತ್ತು. ಅವನು ಇವಳಿಗೆ ಕ್ಲಿಯರ್ ಕಟ್ ಆಗಿ ಹೇಳಿಬಿಟ್ಟಿದ್ದ. ಒಂದು ವೇಳೆ ಅವಳು ಹೀಗೆ ಚಿಕ್ಕಮಕ್ಕಳ ಥರ ಹುಡುಗಾಟ ಮಾಡಿಕೊಂಡು ಇದ್ದರೆ ತಾನು ಖಂಡಿತ ಮದುವೆಯಾಗುವುದಿಲ್ಲವೆಂದು.  ಅಸಲಿಗೆ ಅಲ್ಲಿ ಆಗಿದ್ದೇನೆಂದರೆ ಮೊದಲೇ ತನ್ನ ತಾಯಿಯ ಮಾತಿನಿಂದ ಹೆದರಿದ್ದ ರಜನಿ ಅನಿಕೇತ್ ನನ್ನು ಕರೆದುಕೊಂಡು ಹೊರಗಡೆ ಹೋಗಿದ್ದಳು. ಅಲ್ಲಿ ಅವಳು ತಾನು ಮಹಿಮಾಳ ಬಗ್ಗೆ ಯೋಚನೆಯನ್ನು ಮಾಡುತ್ತ ವ್ಯೂ ಪಾಯಿಂಟ್ ನತ್ತ ಹೋಗಿದ್ದರಿಂದ ಹಿಡಿದು ಅಂದು ಬೆಳಗ್ಗಿನವರೆಗಿನ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಹೇಳಿ ಮುಗಿಸಿದ್ದಳು.

ಇದನ್ನೆಲ್ಲ ಬಾಯಿ ಬಿಟ್ಟುಕೊಂಡು, ಕಣ್ಣುಗಳೆರದನ್ನೂ ದೊಡ್ಡದಾಗಿ ಬಿಟ್ಟುಕೊಂಡು ಕೇಳುತ್ತಿದ್ದ ಅನಿಕೇತ್ ಗೆ ಅವಳು ಕಥೆಯನ್ನ ಹೇಳಿ ಮುಗಿಸಿದಾಗ ಹೊಟ್ಟೆ ಹುಣ್ಣಾಗುವಷ್ಟು ನಗಬೇಕೆನಿಸಿತ್ತು. ಆದರೆ ಇಷ್ಟು ದಿನ ಎಲ್ಲರಿಗೂ ಕಾಟ ಕೊಡುತ್ತಿದ್ದ ರಜನಿಗೆ ರೇಗಿಸಲು ಸಿಕ್ಕ ಇಷ್ಟು ಒಳ್ಳೆಯ ಅವಕಾಶವನ್ನ ಕಳೆದುಕೊಳ್ಳುವಷ್ಟು ದಡ್ಡನಲ್ಲ ಅನಿಕೇತ್. ಹಾಗಾಗಿ ತಾನು ಗಂಭೀರವಾಗಿರುವಂತೆ ನಟಿಸಿ ಅವಳಿಗೆ ಎಚ್ಚರಿಕೆಯನ್ನ ನೀಡಿ ಬಂದಿದ್ದ...ಆದರೆ ಪಾಪ ರಜನಿ ಇದನ್ನೇ ನಿಜವೆಂದು ನಂಬಿಬಿಟ್ಟಿದ್ದಳು .


"ಇಲ್ಲ, ತಾನು ಬದಲಾಗಬೇಕು...ಇಲ್ಲವೆಂದರೆ ನನ್ನ ಅನಿಕೇತ್ ನನಗೆ ಯಾವತ್ತೂ ಸಿಗೋದೇ ಇಲ್ಲ. ನಾಳೆಯಿಂದನೆ ನನ್ನ ನಾನು ಬದಲಿಸಿಕೊಳ್ಳಲು ಶುರುಮಾಡಬೇಕು. ವೇಟ್ ಎ ಮಿನಟ್...ನಾಳೆ ಅಂದವನ ಮನೆ ಹಾಳು ಅಂತ ಗಾದೆನೆ ಇಲ್ವಾ? ಹಾಗಾಗಿ ಇವತ್ತೇ ಈ ಮಿಷನ್ ಸ್ಟಾರ್ಟ್ ಮಾಡಬೇಕು. ಸೋ...ಅರ್ಲಿ ಟು ರೈಸ್, ಅರ್ಲಿ ಟು ಬೆಡ್" ಅಂತ ತಾನು ಇಷ್ಟೊತ್ತು ಯೂಸ್ ಮಾಡುತ್ತಿದ್ದ ಮೊಬೈಲ್ ಅನ್ನು ಪಕ್ಕಕ್ಕೆ ಎತ್ತಿಟ್ಟು, ಅವಳ ರೂಮಿನಲ್ಲಿದ್ದ ಪುಟ್ಟ ಗಡಿಯಾರದಲ್ಲಿ ಬೆಳಿಗ್ಗೆ 6 ಗಂಟೆಗೆ ಅಲಾರಾಂ ಇಟ್ಟು ಮುಸುಕು ಹೊಡೆದು ಮಲಗಿದ್ದಳು.    ಇತ್ತ ಆಗ ತಾನೇ ಊಟ ಮಾಡಿಕೊಂಡು ತನ್ನ ಎಂದಿನ ದಿನಚರಿಯಂತೆ ರಜನಿಯ ಜೊತೆ ಚಾಟ್ ಮಾಡಲು ಕುಳಿತಿದ್ದ ಅನಿಕೇತ್ ಗೆ ಅವಳು ಆಫ್ಲೈನ್ ಇರುವುದು ನೋಡಿ ಆಶ್ಚರ್ಯವಾಗಿತ್ತು. "ಈ ಕುಳ್ಳಿಗೇನಾಯ್ತು... ಇನ್ನು 9:30 ಅಷ್ಟೇ...ಇಷ್ಟು ಬೇಗ ಆಫ್ಲೈನ್ ಹೋಗಿಬಿಟ್ಟಿದ್ದಾಳೆ!! ಏನಾದ್ರು ನಾನು ಇವತ್ತು ಹೇಳಿದ್ದನ್ನು ಸೀರಿಯಸ್ ಆಗಿ ತಗೊಂಡು ಬಿಟ್ಟಳಾ? ಛೇ... ಸಾಧ್ಯಾನೇ ಇಲ್ಲ...ಅವಳು ಯಾವ ವಿಷಯನು ಸೀರಿಯಸ್ ಆಗಿ ತೆಗೆದುಕೊಳ್ಳುವವಳಲ್ಲ. ಮತ್ಯಾಕೆ ಆಫ್ಲೈನ್ ಇದಾಳೆ? ಏನಾದ್ರು ಹುಷಾರು ತಪ್ಪಿದಾಳಾ?" ಅಂತ ಶ್ರೀದೇವಿ ಅವರಿಗೆ ಕರೆ ಮಾಡಿದ್ದ.  ಅವರಿಗೂ ಇವನು ಹೇಳುವುದನ್ನು ಕೇಳಿ ಗಾಬರಿಯಾಗಿತ್ತು. ಅವಳ ರೂಮಿಗೆ ಹೋಗಿ ನೋಡಿದಾಗ ರಜನಿ ಲೈಟ್ಸ್ ಆಫ್ ಮಾಡಿ ಮಲಗಿರುವುದಾಗಿ ಅನಿಗೆ ಹೇಳಿದ್ದರು ಶ್ರೀದೇವಿ. ಆದರೂ ಸಮಾಧಾನವಾಗದೆ ಒಳಗೆ ಬಂದು ಅವಳ ಹಣೆಯನ್ನ ಮುಟ್ಟಿ ನೋಡಿದ್ದರು. ಜ್ವರ ಏನಾದ್ರು ಬಂದಿದ್ರೆ!! ಅಂತ...ಹಾಗೇನೂ ಇಲ್ಲವೆಂದು ಸಮಾಧಾನಗೊಂಡು ಅಲ್ಲಿಂದ ಹೊರಡಬೇಕಾದರೆ ಅವರ ಕಣ್ಣು ಅಲ್ಲಿಯೇ ಟೇಬಲ್ ಮೇಲಿದ್ದ ಅಲಾರಾಂ ಕ್ಲಾಕ್ ಮೇಲೆ ಬಿದ್ದಿತ್ತು. ಅದನ್ನು ಎತ್ತಿಕೊಂಡು, ಅದರಲ್ಲಿ ಬೆಳಿಗ್ಗೆ 6 ಗಂಟೆಗೆ ಅಲಾರಾಂ ಇಟ್ಟಿರುವುದನ್ನು ನೋಡಿ ಅವರಿಗೆ ನಗು ತಡೆಯಲಾಗಿರಲಿಲ್ಲ. ಇನ್ನೂ ಲೈನಿನಲ್ಲಿದ್ದ ಅನಿ ಕಾರಣವೇನೆಂದು ಕೇಳಿದಾಗ ಅವನಿಗೂ ಹೇಳಿ ಇಬ್ಬರೂ ಸೇರಿ ನಕ್ಕಿದ್ದರು.


ಸಶೇಷ


Rate this content
Log in

Similar kannada story from Drama