ಚಿನ್ಮಯಿ .

Romance Tragedy

2  

ಚಿನ್ಮಯಿ .

Romance Tragedy

ಜೀವನಾ...

ಜೀವನಾ...

5 mins
200


"ಹೇಯ್...ಯಾರೋ ನೀನು? ಇಡಿಯಟ್" ಅಂತ ತನ್ನನ್ನು ಅಪ್ಪಿಕೊಂಡಿರುವ ಹುಡುಗನನ್ನು ಜೋರಾಗಿ ದಬ್ಬಿದ್ದಳು ಜೀವನಾ. ಅವಳು ತಳ್ಳಿದ ರಭಸಕ್ಕೆ ಅಲ್ಲಿಂದ ಮಾರು ದೂರ ಹೋಗಿ ಬಿದ್ದಿದ್ದ ಜಗತ್. ಅವನಿಗೆ ಏನು ಮಾಡುವುದೆಂದೇ ತೋಚದಾಗಿತ್ತು. ಸುಮ್ಮನೆ ಅವಳನ್ನು ಮಿಕಿ ಮಿಕಿ ನೋಡತೊಡಗಿದ್ದ. "ಯು....ಯಾರೋ ನೀನು ರ್ಯಾಸ್ಕಲ್? ಮನೆ ಒಳಗೆ ಹೇಗೆ ಬಂದೆ? ಏನು ಹುಡುಗಿಯರು ಅಂದ್ರೆ ಅಷ್ಟು ಚೀಪಾ ನಿನಗೆ? ನೋಡು...ಈಗಲೇ ಇಲ್ಲಿಂದ ಹೊರಗೆ ಹೋದರೆ ಸರಿ. ಇಲ್ಲ ಅಂದರೆ ಪೊಲೀಸ್ಗೆ ಫೋನ್ ಮಾಡಿ ಅರೆಸ್ಟ್ ಮಾಡಿಸ್ತೀನಿ ನಿನ್ನ. ತೊಲಗೂ ಇಲ್ಲಿಂದ" ಅಕ್ಷರಶಃ ಗುಡುಗಿದ್ದಳು ಜೀವನ.


ಮತ್ತೆ ಸಿಟ್ಟು ಬರಲ್ವಾ? ಯಾವುದೋ ಗುರುತು ಪರಿಚಯದ ಹುಡುಗ ಹೀಗೆ ಸುಮ್ಮನೆ ಮನೆ ಒಳಗೆ ಬಂದು ಒಂದು ಹುಡುಗಿಯನ್ನು ಅಪ್ಪಿಕೊಳ್ಳುವುದು ಅಂದರೆ ಏನು? ಸುಮ್ಮನೆ ಬಿಡಬೇಕಾ ಅಂತಹ ಮನುಷ್ಯನನ್ನ? ಆದರೆ ನಿಜವಾಗಿಯೂ ಜಗತ್ ಜೀವನಾಗೆ ಪರಿಚಯ ಇಲ್ಲದೆ ಇರುವ ಹುಡುಗನಾ?


ಜೀವನಾಳ ಮಾತನ್ನ ಕೇಳಿದ ಜಗತ್ ಮುಖದಲ್ಲಿದ್ದ ರಕ್ತವೆಲ್ಲ ಇಂಗಿಹೋಗಿತ್ತು. ಒಂದು ಮಾತನ್ನೂ ಆಡದೆ ಅಲ್ಲಿಂದ ಹೊರನಡೆದಿದ್ದ. ಅವನು ಅತ್ತ ಹೋದ ನಂತರ ಜೀವನಾ ಹೋಗಿ ತನ್ನ ಮನೆಯ ಬಾಗಿಲನ್ನು ಭದ್ರಪಡಿಸಿಕೊಂಡು ಬಂದಿದ್ದಳು. ಅವಳ ಮುಖವೆಲ್ಲ ಜಗತ್ ಮಾಡಿದ ಕೆಲಸದಿಂದಾಗಿ ಸಿಟ್ಟಿನಿಂದ ಕೆಂಪು ಕೆಂಪಾಗಿತ್ತು. ಆ ಸಿಟ್ಟು ಇಳಿಯಲು ಆಕೆಗೆ ಗಂಟೆಗಳೇ ತೆಗೆದುಕೊಂಡಿದ್ದವು. ಇತ್ತ ಜೀವನಾ ಮನೆಯಿಂದ ಬಂದ ಜಗತ್ ಬೈಕನ್ನು ಓಡಿಸಿಕೊಂಡು ಒಂದು ನಿರ್ಜನ ಪ್ರದೇಶಕ್ಕೆ ಬಂದಿದ್ದ. ಅಲ್ಲಿಯವರೆಗೂ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಂಡು ಸುಮ್ಮನಿದ್ದ ಜಗತ್ ಬೈಕಿನಿಂದ ಇಳಿದು ಸ್ವಲ್ಪ ಮುಂದೆ ಸಾಗಿ ನೆಲದ ಮೇಲೆ ಕುಸಿದು ಕುಳಿತಿದ್ದ. ಅವನ ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯಲು ಶುರುವಾಗಿತ್ತು. ಆದರೆ ಬಾಯಿಯಿಂದ ಒಂದು ಶಬ್ದವೂ ಹೊರಬರಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದವನು ನಂತರ ತನ್ನ ಮನೆಯ ದಾರಿ ಹಿಡಿದಿದ್ದ. ಇದೆಲ್ಲ ಅವನ ದಿನದ ಕೆಲಸವಾಗಿತ್ತು. ಅವನ ಹೆಂಡತಿಯನ್ನು ಪ್ರತಿದಿನ ನೋಡಲು ಅವನು ಶುರುಮಾಡಿಕೊಂಡ ಹೊಸ ಅಭ್ಯಾಸ!!


ಹೌದು... ಜೀವನ ಮತ್ತು ಜಗತ್ ಗಂಡ ಹೆಂಡತಿ. ಸುಮಾರು ಏಳು ವರ್ಷಗಳ ಸುಂದರ ದಾಂಪತ್ಯವಿತ್ತು ಅವರ ಜೀವನದಲ್ಲಿ. ಆದರೆ ಈಗ ಬೇರೆಯಾಗಿದ್ದರು! ಡೈವೋರ್ಸ್ ಏನೂ ನಡೆದಿರಲಿಲ್ಲ ಅವರ ಮಧ್ಯೆ...ಆದರೂ ಒಟ್ಟಿಗೆ ಬದುಕುತ್ತಿರಲಿಲ್ಲವಷ್ಟೇ!! ಮರುದಿನ ಎದ್ದ ಜಗತ್ ತನ್ನ ಮೊಬೈಲಿನಲ್ಲಿದ್ದ ತನ್ನ ಮುದ್ದಿನ ಹೆಂಡತಿಯ ಫೋಟೋವನ್ನು ನೋಡಿ ಅದಕ್ಕೆ ಮುತ್ತಿಕ್ಕಿ ದೈನಂದಿನ ಕೆಲಸಗಳಲ್ಲಿ ನಿರತನಾಗಿದ್ದ. ನಂತರ ರೆಡಿಯಾಗಿ ಹೊರ ಬಂದು ತನ್ನ ಬೈಕಿನಲ್ಲಿ ಒಮ್ಮೆ ಜೀವನಾಳ ಮನೆಯತ್ತ ತೆರಳಿದ್ದ. ಅವಳೂ ಕೂಡ ಎಂದಿನಂತೆ ರೆಡಿಯಾಗಿ ಆಫೀಸಿಗೆ ಹೊರಟಿರುವುದನ್ನು ನೋಡಿ ಸಮಾಧಾನದಿಂದ ತನ್ನ ಕೆಲಸದ ಕಡೆ ಗಮನ ಹರಿಸಿದ್ದ.


ಸಂಜೆಯ ವೇಳೆಗೆ ಜೀವನಾಳ ಮನೆಯ ಹತ್ತಿರ ಬಂದ ಜಗತ್ ಅವಳು ಅವರ ಮನೆಯ ಹೊರಗಿನ ಲಾನಲ್ಲಿ ಕುಳಿತಿರುವುದನ್ನು ಕಂಡು ಅತ್ತ ಕಡೆಗೆ ಸಾಗಿದ್ದ. ಅವನನ್ನು ನೋಡಿದ ಜೀವನಾಳ ಮುಖವರಳಿತ್ತು!

"ಹೇಯ್ ಜಗತ್! ಬಂದ್ಯಾ...ಬಾ...ಬಾ..ಕೂತ್ಕೊ. ಕಾಫಿ ಕುಡೀತಿಯ?" ಖುಷಿಯಿಂದ ಕೇಳಿದ್ದಳು.

"ಹಾಂ...ಕುಡಿತಿನಿ" ಹೆಂಡತಿಯ ಕೈಯಿಂದ ಕಾಫಿ ಮಾಡಿಸಿಕೊಂಡು ಕುಡಿಯುವ ಸೌಭಾಗ್ಯವನ್ನು ಹೇಗೆ ಬಿಟ್ಟಾನು ಅವನು.

ಜೀವನಾ ಒಳಗೆ ಹೋಗಿ ಎರಡು ಕಪ್ಪಲ್ಲಿ ಕಾಫಿ ಮಾಡಿಕೊಂಡು ಬಂದು ಅದರಲ್ಲಿ ಒಂದು ಜಗತ್ ಕೈಯಲ್ಲಿ ಕೊಟ್ಟು ಮತ್ತೊಂದನ್ನ ಹಿಡಿದು ಕುಳಿತಿದ್ದಳು.


"ನೆನ್ನೆ ನೀನು ನಿನ್ನ ಲವ್ ಸ್ಟೋರಿ ಹೇಳ್ತೀನಿ ಅಂದಿದ್ದೆ ಅಲ್ವಾ? ಮತ್ಯಾಕೆ ಹೇಳಲೇ ಇಲ್ಲ? ಈಗ ಅದೆಲ್ಲ ಗೊತ್ತಿಲ್ಲ ನನಗೆ...ನಾನಿವತ್ತು ನಿನ್ನ ಪೂರ್ತಿ ಕತೆಯನ್ನು ಕೇಳಲೇ ಬೇಕು." ಪಟ್ಟು ಹಿಡಿದು ಕುಳಿತಿದ್ದಳು.

"ಸರಿ ಸರಿ...ನೀನೇನು ಅಷ್ಟು ಕೇಳಿಕೊಳ್ಳುವುದು ಬೇಡ...ನಾನು ಹೇಳ್ತೀನಿ" ಅಂತ ತನ್ನ ಕಥೆಯನ್ನು ಶುರು ಮಾಡಿಕೊಂಡಿದ್ದ ಜಗತ್.


ತಂದೆ ತಾಯಿ ಯಾರೆಂದೇ ಗೊತ್ತಿಲ್ಲದವನು ಜಗತ್. ಅವನಿಗೆ ಬುದ್ಧಿ ಬಂದಾಗಿನಿಂದ ಬೆಳೆದಿದ್ದೆಲ್ಲವೂ ಅನಾಥಾಶ್ರಮದಲ್ಲೇ. ಅದೇ ಅವನ ಮನೆ, ಅಲ್ಲಿರುವ ಮಕ್ಕಳೇ ಅವನ ಮನೆಯ ಸದಸ್ಯರು, ಇದಿಷ್ಟೇ ಅವನ ಸರ್ವಸ್ವ. ಈತನ ಜೊತೆಯಲ್ಲಿಯೇ ಬೆಳೆಯುತ್ತಿದ್ದವರಲ್ಲಿ ಜೀವನಾ ಕೂಡ ಒಬ್ಬಳು. ಆಕೆಯೂ ಅನಾಥೆಯೇ...ಈತನಿಗಿಂತ ಕೇವಲ ಒಂದು ವರ್ಷ ಸಣ್ಣವಳಷ್ಟೇ.


ಓದಿನಲ್ಲಿ ಮೊದಲಿನಿಂದಲೂ ಇಬ್ಬರೂ ಮುಂದಿದ್ದರಿಂದ ಅವರಿಗೆ ಸಿಗುತ್ತಿದ್ದ ಸ್ಕಾಲರ್ಶಿಪ್ಪಲ್ಲಿ ಯಾವುದೇ ಕೊರತೆಯಾಗಿರಲಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಕೆಲಸವನ್ನು ಹಿಡಿದು ಸ್ವಾಭಿಮಾನದಿಂದ ಬದುಕಬೇಕೆನ್ನುವುದು ಇವರಿಬ್ಬರ ಆಸೆಯಾಗಿತ್ತು. ಅಂತೆಯೇ ಸಾಗುತ್ತಿದ್ದರು ಕೂಡ.


ಮೊದಲಿನಿಂದಲೂ ಒಟ್ಟಿಗೆ ಆಡಿ ಬೆಳೆದಿದ್ದರಿಂದ ಸಹಜವಾಗಿಯೇ ಇಬ್ಬರಲ್ಲಿ ಒಂದು ರೀತಿಯ ಸಲುಗೆಯಿತ್ತು. ಅವರು ದೊಡ್ಡವರಾಗುತ್ತಾ ಬಂದಂತೆ ಅದು ಪ್ರೀತಿಗೆ ತಿರುಗಿತ್ತು. ಇದನ್ನ ಇಬ್ಬರೂ ಬೇಗ ಅರ್ಥೈಸಿಕೊಂಡು ಪರಸ್ಪರ ಭಾವನೆಗಳನ್ನು ಹಂಚಿಕೊಂಡಿದ್ದರು. ತಾವು ಜೀವನದಲ್ಲಿ ಒಂದು ನೆಲೆ ಕಂಡ ಮೇಲೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸುವುದು...ಅಲ್ಲಿಯ ತನಕ ಏನಿದ್ದರೂ ತಮ್ಮ ತಮ್ಮ ಗುರಿಯ ಕಡೆಗೆ ಚಿತ್ತ ಹರಿಸಬೇಕೆಂದು ಮಾತನಾಡಿಕೊಂಡು ಅದರ ರೀತಿಯಲ್ಲಿಯೇ ಸಾಗುತ್ತಿದ್ದರು.


ಕೆಲವೇ ವರ್ಷಗಳಲ್ಲಿ ಇಬ್ಬರ ವಿದ್ಯಾಭ್ಯಾಸ ಮುಗಿದು ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿದ್ದರು ಈ ಎರಡು ಗುಬ್ಬಿ ಮರಿಗಳು. ಇನ್ನು ತಮ್ಮ ವೈಯಕ್ತಿಕ ಜೀವನದ ಬಗ್ಗೇ ಯೋಚಿಸಬೇಕೆಂದು ಮಾತನಾಡಿಕೊಂಡು ಆಶ್ರಮದವರಲ್ಲಿ ತಾವು ಒಬ್ಬರನ್ನೊಬ್ಬರು ಇಷ್ಟ ಪಟ್ಟಿರುವುದರ ಬಗ್ಗೆ ಹೇಳಿದಾಗ ಅವರೂ ಕೂಡ ಸಂತೋಷದಿಂದ ಒಪ್ಪಿಗೆ ಕೊಟ್ಟಿದ್ದರು.


ಎರಡೇ ತಿಂಗಳಲ್ಲಿ ತಾವು ಆಡಿ ಬೆಳೆದ ಆಶ್ರಮದಲ್ಲಿ ಸತಿ ಪತಿಗಳಾಗಿದ್ದರು ಜಗತ್ ಮತ್ತು ಜೀವನಾ. ಹೇಗೂ ಒಳ್ಳೆಯ ಸಂಬಳ ಇಬ್ಬರಿಗೂ ಇದ್ದರಿಂದ ಒಂದು ಒಳ್ಳೆಯ ಮನೆಯನ್ನು ಬಾಡಿಗೆಗೆ ಹಿಡಿದು ಅಲ್ಲಿಗೆ ಶಿಫ್ಟ್ ಆಗಿದ್ದರು ಇಬ್ಬರೂ. ಅಲ್ಲಿಂದ ಇವರಿಬ್ಬರ ಜೀವನದ ಹೊಸ ಅಧ್ಯಾಯ ಶುರುವಾಗಿತ್ತು.


ಅನುರೂಪದ ದಾಂಪತ್ಯ ಇಬ್ಬರದ್ದು. ಪರಸ್ಪರ ನಂಬಿಕೆ , ವಿಶ್ವಾಸ, ಪ್ರೀತಿ, ಗೆಳೆತನ ಎಲ್ಲವೂ ಇತ್ತು ಇವರಿಬ್ಬರ ಮಧ್ಯೆ. ಭೂತಕನ್ನಡಿ ಹಿಡಿದು ಹುಡುಕಿದರೂ ಅವರಲ್ಲಿ ಒಂದೇ ಒಂದು ಕೊರತೆಯೂ ಕಾಣಿಸುತ್ತಿರಲಿಲ್ಲ. ಒಬ್ಬರನ್ನೊಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. "ಜೀವ...ನೀನು ನನ್ನ ಜೀವ ಕಣೆ" ಜಗತ್ ಯಾವಾಗಲೂ ಹೇಳುತ್ತಿದ್ದ ಮಾತಿದು. ಅವನ ಅತಿಯಾದ ಪ್ರೀತಿಯನ್ನು ನೋಡಿ ಕೆಲವೊಮ್ಮೆ ಜೀವನಾ ಹೆದರುತ್ತಿದ್ದಳು. "ಇಷ್ಟೊಂದು ಪ್ರೀತಿಸಬೇಡವೋ ನನ್ನ...ಮುಂದೆ ಒಂದಿನ ಏನಾದರೂ ಆಗಿ ನಾವಿಬ್ಬರೂ ಬೇರೆ ಆದರೆ ಆಮೇಲೆ ಏನು ಮಾಡ್ತಿಯ ನೀನು?" ಭಯದಿಂದ ಆಗಾಗ ಕೇಳುತ್ತಿದ್ದಳು ಜೀವನಾ. "ಸಿಂಪಲ್...ನಿನ್ನ ಜೊತೆ ನಾನೂ ಕೂಡ ಬಂದು ಬಿಡ್ತೀನಿ ಅಷ್ಟೇ" ಅವನ ಉತ್ತರ. "ಒಂದು ವೇಳೆ ನನಗೆ ನಿನ್ನ ಮೇಲಿರುವ ಪ್ರೀತಿ ಕಡಿಮೆಯಾಗಿ ನಾನು ನಿನ್ನ ಬಿಟ್ಟು ಹೋದರೆ?" "ನಾನು ನಿನ್ನ ಮತ್ತೆ ಪ್ರೀತಿಯಲ್ಲಿ ಬೀಳಿಸುತ್ತೇನೆ" ಅದೇ ನಗುವಿನ ಉತ್ತರ ಅವನದ್ದು. "ನಾನು ನಿನ್ನ ಮರೆತುಬಿಟ್ಟರೆ?" ಈ ಬಾರಿ ಸ್ವಲ್ಪ ಸಮಯ ಸ್ತಬ್ಧನಾಗಿಬಿಟ್ಟಿದ್ದ ಜಗತ್. "ನಿನಗೆ ನಮ್ಮ ಕತೆ ಹೇಳಿ ನೆನಪು ಮಾಡ್ತೀನಿ" ಅವಳು ಮುಂದೆ ಇನ್ನೊಂದು ಪ್ರಶ್ನೆ ಕೇಳುವುದರಲ್ಲಿ ಅವನು ತಡೆದಿದ್ದ, "ಸಾಕು ಸಾಕು...ಮತ್ತೇನೂ ಕೇಳ್ಬೇಡ... ನೀನೇನು ತಲೆ ಹರಟೆ ಪ್ರಶ್ನೆ ಕೇಳಿದ್ರು ನಾನು ಸಮಾಧಾನದಿಂದ ಇರ್ತೀನಿ ಅಂತಲ್ವಾ ಹೀಗೆಲ್ಲ ಮಾಡೋದು ನೀನು...ಇನ್ನು ಒಂದೇ ಒಂದು ಪ್ರಶ್ನೆ ಕೇಳೋದು ಬೇಡ" ಅಂತ ಎದ್ದು ಹೋಗುತ್ತಿದ್ದ.


ಇದೆಲ್ಲ ಒಂದು ದಿನದ ಕಥೆಯಲ್ಲ...ವಾರಕ್ಕೊಮ್ಮೆಯಾದರೂ ಅವರ ಮನೆಯಲ್ಲಿ ನಡೆಯುವ ದೃಶ್ಯವಿದು.

ಇಷ್ಟು ಚಂದದ ದಾಂಪತ್ಯದಲ್ಲಿ ಮೊದಲ ಬಾರಿ ಒಂದು ಕರಿ ಮೋಡ ಬಂದು ಮುಸುಕಿತ್ತು. ಅದು ಅವರ ಮಗು ವಿಷಯ.

ಜಗತ್ ಮತ್ತು ಜೀವನಾ ಮದುವೆಯಾಗಿ ಅದಾಗಲೇ ಐದು ವರ್ಷಗಳ ಮೇಲಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ. ಮೊದ ಮೊದಲು ಜೀವನದಲ್ಲಿ ಸೆಕ್ಯೂರ್ ಆಗಬೇಕು ಅಂತ ಮುಂದೆ ಹಾಕಿ ಈಗ ಮಗು ಬೇಕು ಅಂದರೂ ಆಗುತ್ತಿರಲಿಲ್ಲ ಅವರಿಗೆ. ನಾನಾ ಕಡೆ ತೋರಿಸಿದರೂ ಅವರಿಂದ ಬರುತ್ತಿದ್ದದ್ದು ಒಂದೇ ಉತ್ತರ. "ನಿಮ್ಮಿಬ್ಬರಲ್ಲಿಯೂ ಕೂಡ ಯಾವುದೇ ದೋಷವಿಲ್ಲ. ಆರೋಗ್ಯವಾಗಿದ್ದೀರಿ ನೀವು. ಬಹುಶಃ ನೀವು ಅಪ್ಪ ಅಮ್ಮ ಆಗಲು ಇನ್ನು ಸಮಯ ಕೂಡಿ ಬಂದಿಲ್ಲವೆಂದು ಕಾಣುತ್ತೆ" ಅಂತ. ಆದರೆ ಇದೇ ವಿಷಯ ಇಟ್ಟುಕೊಂಡು ಕೊರಗುತ್ತ ಕೂರುವಂತವರಲ್ಲ ಇಬ್ಬರೂ. ಇದರಿಂದಾಗಿ ಅವರಿಬ್ಬರ ಪ್ರೀತಿಗೆ ಯಾವುದೇ ಅಡೆ ತಡೆ ಉಂಟಾಗಿರಲಿಲ್ಲ. "ನಮಗೆ ಮಕ್ಕಳಾಗದಿದ್ದರೆ ಏನಂತೆ? ಇನ್ನು ಮುಂದೆ ನನಗೆ ನೀನೇ ಮಗು. ನಿನಗೆ ನಾನೇ ಮಗು. ಆ ವಿಷಯಕ್ಕಾಗಿ ನಾವಿಬ್ಬರೂ ಎಂದಿಗೂ ಕೊರಗುವುದು ಬೇಡ. ಅಷ್ಟು ಬೇಕು ಅನ್ನಿಸಿದರೆ ನಮ್ಮ ಆಶ್ರಮದಲ್ಲೇ ಇರುವ ಒಂದು ಮಗುವನ್ನು ದತ್ತು ತೆಗೆದುಕೊಳ್ಳೋಣ" ಇದು ಅವರಿಬ್ಬರ ಮಾತು.

ಹೀಗೆಯೇ ಇಬ್ಬರೂ ಸಂತೋಷದಿಂದ ಇರಬೇಕಾದರೆ ವಿಧಿ ಇಬ್ಬರಿಗೂ ಒಂದು ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಅದು ಜೀವನಾಳ ಆಕ್ಸಿಡೆಂಟ್ ಮಾಡಿ!


ವಿಷಯವನ್ನ ತಿಳಿದ ಜಗತ್ ಒಂದೇ ಉಸಿರಿಗೆ ಆಸ್ಪತ್ರೆಗೆ ಓಡಿ ಬಂದಿದ್ದ. ಅಲ್ಲಿ ಅವನ ಮುದ್ದಿನ ಹೆಂಡತಿ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೆ ಜಗತ್ ಪರಿಸ್ಥಿತಿಯೇನು ಅದಕ್ಕಿಂತ ಭಿನ್ನವಾಗಿರಲಿಲ್ಲ.

ಸುಮಾರು ಎಂಟು ಗಂಟೆಗಳ ಟ್ರೀಟ್ಮೆಂಟ್ ಬಳಿಕ ಹೊರಬಂದ ಡಾಕ್ಟರ್ "ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಏನೂ ಈಗಲೇ ಹೇಳಲು ಸಾಧ್ಯವಿಲ್ಲ" ಎಂದು ಅಲ್ಲಿಂದ ಜಾರಿಕೊಂಡಿದ್ದರು.


ಅದಾಗಿ ಸುಮಾರು ಎರಡು ದಿನಗಳ ನಂತರ ಪ್ರಜ್ಞೆ ಬಂದಿತ್ತು ಜೀವನಾಗೆ. ಪ್ರಜ್ಞೆ ಇಲ್ಲದೆ ಮಲಗಿದ್ದಾಗ ಜಗತ್ ಹೆಸರನ್ನೇ ಕನವರಿಸುತ್ತಿದ್ದವಳು ಎಚ್ಚರವಾದಾಗ ಅವನು ಯಾರೆಂದೇ ಗೊತ್ತಿಲ್ಲವೆಂದಿದ್ದಳು!! ಇದನ್ನ ನೋಡಿ ನಿಂತ ನೆಲವೆ ಕುಸಿದಂತಾಗಿತ್ತು ಜಗತ್ ಪರಿಸ್ಥಿತಿ. ತನ್ನ ಜೀವನದಲ್ಲಿ ಇಂಥದ್ದೊಂದು ಸನ್ನಿವೇಶ ಎದುರಾಗಬಹುದೆಂಬ ಕಲ್ಪನೆಯೇ ಅವನಿಗಿರಲಿಲ್ಲ. ಮೊದಲೆಲ್ಲ ಅವಳು ಅವನನ್ನ ಪರೀಕ್ಷಿಸಲೆಂದು ಕೇಳುತ್ತಿದ್ದ ಪ್ರಶ್ನೆಗಳು ಇಂದು ಇಬ್ಬರ ಜೀವನದಲ್ಲಿ ಸತ್ಯವಾಗಿ ಅವರ ಮುಂದೆ ನಿಂತಿತ್ತು.


ಇದಕ್ಕಿಂತಲೂ ದೊಡ್ಡ ಹೊಡೆತ ಬಿದ್ದಿದ್ದೆಂದರೆ ಅದು ಜೀವನಾಳ ತಲೆಯ ಸ್ಕ್ಯಾನಿಂಗ್ ರಿಪೋರ್ಟ್ ಕೈಗೆ ಬಂದಾಗ!!

ಸುಮಾರು ಅರ್ಧ ಗಂಟೆಯ ದೀರ್ಘ ಸಮಯವನ್ನು ತೆಗೆದುಕೊಂಡು ಪರಿಶೀಲಿಸಿದ ಡಾಕ್ಟರ್ ದೊಡ್ಡ ಬಾಂಬನ್ನೇ ಸಿಡಿಸಿದ್ದರು ಜಗತ್ ಮುಂದೆ. ಅದು ಜೀವನಾಗೆ ಇರುವ ಖಾಯಿಲೆಯ ಬಗ್ಗೆ ಹೇಳಿ. ಶಾರ್ಟ್ ಟೈಮ್ ಮೆಮೊರಿ ಲಾಸ್!

ಇದರ ಪ್ರಕಾರ ಅವರಿಗೆ ಹಳೆಯದೆಲ್ಲವೂ ಏನೂ ಅಂದರೆ ಏನೂ ನೆನಪಿರುವುದಿಲ್ಲ. ಬಂದರೂ ಅದು ಕೆಲ ನಿಮಿಷಗಳ ಮಟ್ಟಿಗೆ ಮಾತ್ರ!


ಜಗತ್ ಇನ್ನೂ ತನ್ನ ಕಥೆಯನ್ನ ಹೇಳುತ್ತಿದ್ದ. ಆದರೆ ಅಷ್ಟರಲ್ಲಿ ಜೀವನಾ ಮಧ್ಯೆ ಬಾಯಿ ಹಾಕಿದ್ದಳು.

"ಅಂದಿನಿಂದ ನೀನು ಅವಳ ಮನೆಯ ಪಕ್ಕದಲ್ಲೆ ಒಂದು ಮನೆಯನ್ನು ತೆಗೆದುಕೊಂಡೆ. ಪ್ರತಿದಿನ ಬಂದು ಅವಳ ಜೊತೆ ಗೆಳೆತನ ಮಾಡಿ ಅವಳಲ್ಲಿ ನಿನ್ನ ಪ್ರೀತಿಯ ಕಥೆಯನ್ನು ಹೇಳಲು ಶುರು ಮಾಡಿದೆ... ಅಲ್ವಾ ಜಗತ್?" ಎಂದಿದ್ದಳು ಜೀವನಾ.

ಅವಳ ಕಣ್ಣೀರಿನಿಂದ ಕೂಡಿದ ಮುಖವೇ ಹೇಳುತ್ತಿತ್ತು ಅವಳಿಗೆಲ್ಲ ನೆನಪಾಗಿದೆಯೆಂದು!

"ಹ್ಮ್" ಎಂದಿದ್ದ ಜಗತ್.


ಮರುಕ್ಷಣವೇ ಅವನನ್ನ ಬಿಗಿಯಾಗಿ ಅಪ್ಪಿದ್ದಳು ಜೀವನಾ. ಜಗತ್ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.

ಆದರೆ ಅದೆಲ್ಲ ಕೆಲವು ಕ್ಷಣಗಳಷ್ಟೇ...ತಾನೇ ಮುಂದೆ ಬಂದು ಅವನನ್ನು ಅಪ್ಪಿದ್ದ ಜೀವನಾ ಅವನನ್ನು ದೂಡಿ, "ಯೂ ಇಡಿಯಟ್... ಯಾರೋ ನೀನು? ಇಲ್ಲಿ ತನಕ ಹೇಗೋ ಒಳಗೆ ಬಂದೆ?" ಅಂತ ಕೂಗಲು ಶುರು ಮಾಡಿದ್ದಳು.

ಅವಳು ಅಲ್ಲಿಂದ ಹೋಗು ಅಂದ ಮರುಕ್ಷಣ ಜಗತ್ ಮರು ಮಾತನಾಡದೆ ಕಣ್ಣೀರು ಹಾಕುತ್ತ ಹೋಗಿದ್ದ. ಜೀವನಾ ಸಿಟ್ಟಿನಲ್ಲಿ ಮನೆಯ ಒಳಗೆ ತೆರಳಿದ್ದಳು.


ಮೂವತ್ತು ವರ್ಷಗಳ ನಂತರ......


ಜೀವನಾ ಮನೆ ಕಡೆ ತೆರಳುತ್ತಿದ್ದ ಜಗತ್ ಅನ್ನು ನೋಡಿ ಅವನ ದತ್ತು ಪುತ್ರ ಪ್ರಶ್ನಿಸಿದ್ದ...

"ಅಪ್ಪ...ಇನ್ನೂ ಎಷ್ಟು ದಿನ ಅಂತ ನೀವು ಹೀಗೆ ಅಮ್ಮನನ್ನ ನೋಡಲು ಹೋಗ್ತೀರಿ? ಎಷ್ಟು ವರ್ಷ ಅಂತ ಈ ರೀತಿ ಪ್ರತಿದಿನ ಅವರಿಗೆ ನಿಮ್ಮ ಕಥೆಯನ್ನು ಹೇಳ್ತೀರಿ?" ಅಂತ ನೋವಿನಿಂದ ಪ್ರಶ್ನಿಸಿದ್ದ.

"ನನ್ನ ಕೊನೆಯ ಉಸಿರು ಇರುವ ತನಕ!! ಅವಳಿಗೆ ನಾನು ನೆನಪಿಲ್ಲದಿದ್ದರೆ ಏನಂತೆ...ನಾನು ಕಥೆ ಹೇಳಿದಾಗ ಕೆಲವು ಕ್ಷಣಗಳ ಮಟ್ಟಿಗಾದರೂ ಅವಳಿಗೆ ನಾನು ಯಾರೆಂದು ಗೊತ್ತಾಗುತ್ತಲ್ಲ...ನನಗಷ್ಟೇ ಸಾಕು." ಅಂತ ತಣ್ಣನೆ ಹೇಳಿ ಮೈ ಮೇಲೆ ಒಂದು ಶಾಲನ್ನು ಹೊದ್ದುಕೊಂಡು ಜೀವನಾ ಮನೆ ಕಡೆ ಹೊರಟಿದ್ದ ಜಗತ್.

ಅವನು ಹೋಗುವುದನ್ನು ನೋಡುತ್ತಾ ನಿಂತಿದ್ದ ಅವನ ಮಗ ಮತ್ತು ಸೊಸೆಯ ಕಣ್ಣಲ್ಲಿ ನೀರಾಡಿತ್ತು.


ಮುಕ್ತಾಯ


Rate this content
Log in

Similar kannada story from Romance