Find your balance with The Structure of Peace & grab 30% off on first 50 orders!!
Find your balance with The Structure of Peace & grab 30% off on first 50 orders!!

Padmashree Hegde

Romance Thriller

4.1  

Padmashree Hegde

Romance Thriller

3- ಹೆಜ್ಜೆಗೊಂದು ಹೆಜ್ಜೆ

3- ಹೆಜ್ಜೆಗೊಂದು ಹೆಜ್ಜೆ

3 mins
23.9K


ಮಹಿಮಾಗೆ ಅಂದು ಬೆಳಿಗ್ಗೆ ಬೇಗ ಎಚ್ಚರವಾಗಿತ್ತು. ತನ್ನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಂದು ಕಾಲೇಜಿಗೆ ರೆಡಿಯಾಗಿ ಕುಳಿತಿದ್ದಳು. ಹೊಟ್ಟೆಯಲ್ಲೇನೋ ವಿಚಿತ್ರವಾದ ಸಂಕಟ. ತುಂಬಾ ಹಸಿವಾಗುತ್ತಿತ್ತು. ಸರಿಯಾಗಿ ಯೋಚನೆ ಮಾಡಿದಾಗ ನೆನಪಾಗಿದ್ದು ನಿನ್ನೆ ರಾತ್ರಿ ತಾನು ಊಟ ಮಾಡದೆ ಮಲಗಿದ್ದು. ಅಷ್ಟೇ ಅಲ್ಲ ಮಧ್ಯಾಹ್ನವೂ ಕೂಡ ಊಟ ಮಾಡದೆ ಇದ್ದಿದ್ದು.


ಹಿಂದಿನ ದಿನ ಮಧ್ಯಾಹ್ನ ಮಹಿಮಾ ಕ್ಲಾಸ್ ಮುಗಿಸಿ ತನ್ನ ಡಿಪಾರ್ಟ್ಮೆಂಟಿಗೆ ಬಂದಾಗ ಕೆಲವು ಮಕ್ಕಳು ಅವಳಿಗಾಗೆ ಕಾಯುತ್ತಿದ್ದರು. ಅವರು ಫೈನಲ್ ಇಯರ್ ಸ್ಟುಡೆಂಟ್ಸ್. ಮಧ್ಯಾಹ್ನದ ಮೇಲೆ ಕ್ಲಾಸ್ ಇಲ್ಲದೆ ಇರುವುದರಿಂದ ಅವರು ಮಹಿಮಾಳಲ್ಲಿ ಕೆಲವು ವಿಷಯಗಳನ್ನ ಹೇಳಿಸಿಕೊಂಡು ಮನೆಗೆ ಹೋಗುವವರಿದ್ದರು. ಅವರಿಗೆ ಬೇಕಾಗಿರುವುದೆಲ್ಲ ಹೇಳಿ ಕೊಟ್ಟು ಊಟಕ್ಕೆ ಹೊರಡಬೇಕಾದರೆ ಲಂಚ್ ಬ್ರೇಕ್ ಮುಗಿದಿತ್ತು. ಹಾಗೆಯೇ ಮುಂದಿನ ಕ್ಲಾಸಿಗೆ ತೆರಳಿದ್ದಳು. ಸಂಜೆ ಮನೆಗೆ ಬಂದ ಬಳಿಕ ಹಿಂದಿನ ದಿನಗಳ ಬಗ್ಗೆ ಯೋಚನೆ ಮಾಡಿಕೊಂಡು ಹಾಗೆಯೇ ನಿದ್ದೆಗೆ ಜಾರಿದ್ದಳು. ಈಗ ವಿಪರೀತ ಹಸಿವಾಗುತ್ತಿತ್ತು.


"ಮೊದಲು ಹೋಗಿ ತಿಂಡಿ ತಿನ್ನಬೇಕು" ಅಂತ ಅಂದುಕೊಂಡು ಕೆಳಗೆ ಓಡಿದ್ದಳು.


"ಜಾನಕಮ್ಮ...ತಿಂಡಿ ಕೊಡಿ...ಹಸಿವು" ಅಂತ ಕೂಗಿಕೊಂಡು ಡೈನಿಂಗ್ ಹಾಲಿಗೆ ಬಂದು ಕುಳಿತಿದ್ದಳು. ಮತ್ತಿನ್ಯಾರೋ ಇದ್ದಾರಲ್ಲ ಅಂತ ತಲೆ ಮೇಲೆ ಮಾಡಿ ನೋಡಿದಾಗ ಗಾಬರಿಯಾಗಿತ್ತು. ಮರು ಮಾತನಾಡದೆ ಎದ್ದು ಜಾನಕಮ್ಮನನ್ನು ಅರಸುತ್ತಾ ಅಡುಗೆ ಮನೆಗೆ ಓಡಿದ್ದಳು.


ಅಲ್ಲಿ ಇದ್ದಿದ್ದು ಬೇರೆ ಯಾರೂ ಅಲ್ಲ ಮಹಿಮಾ ತಂದೆ. ದಿ ಗ್ರೇಟ್ ಬ್ಯುಸಿನೆಸ್ ಮ್ಯಾನ್ ನಾರಾಯಣ್ ಶರ್ಮ. ಅವಳು ಹಾಗೆ ಕೂಗಿಕೊಂಡು ಓಡಿಬಂದಾಗ ರೇಗಬೇಕೆಂದು ಬಾಯಿ ತೆಗೆದವರು ಸುಮ್ಮನೆ ಒಳಗೆ ಹೋಗಿದ್ದು ನೋಡಿ ಏನೂ ಹೇಳದೆ ಸುಮ್ಮನಾಗಿದ್ದರು.


ಇಲ್ಲಿ ಗಾಬರಿಯಿಂದ ಓಡಿ ಬಂದು ತನ್ನ ಪಕ್ಕ ನಿಂತ ಮಹಿಮಾಳನ್ನು ನೋಡಿ ಏನೆಂದು ಪ್ರಶ್ನಿಸಿದ್ದರು ಜಾನಕಮ್ಮ. ಜಾನಕಮ್ಮ ಆ ಮನೆಯ ಕೆಲಸದವರಾಗಿದ್ದರೂ ತುಂಬಾ ವರ್ಷಗಳಿಂದ ಅಲ್ಲೇ ಇದ್ದಿದ್ದರಿಂದ ಅವರನ್ನು ಗೌರವದಿಂದ ಕಾಣುತ್ತಿದ್ದರು ಎಲ್ಲರೂ. ಅವರಿಗೆ ಮಹಿಮಾಳನ್ನು ಕಂಡರೆ ವಿಶೇಷ ಪ್ರೀತಿ. ಮೊದಲಿನಿಂದಲೂ ಅವಳ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಹತ್ತಿರದಿಂದ ನೋಡಿದವರಾಗಿದ್ದರಿಂದ ಅವಳನ್ನು ಕಂಡರೆ ಅತೀವ ಪ್ರೀತಿಯಾಗಿತ್ತು.


"ಅದು ಆ..ಅಲ್ಲಿ.." ಏನು ಹೇಳಬೇಕೆಂದು ಗೊತ್ತಾಗದೆ ತಡವರಿಸಿದ್ದಳು ಮಹಿಮಾ.


"ಏನಾಯ್ತು ಪುಟ್ಟ...ಯಾಕೆ ಇಷ್ಟು ಹೆದರಿದ್ದೀಯ.. ಸರಿಯಾಗಿ ಹೇಳು...ಅದು ಬಿಡು ತುಂಬಾ ಹಸಿವು ಅಂದೆ ಅಲ್ವಾ..ಹೋಗು ಡೈನಿಂಗ್ ಟೇಬಲ್ ಹತ್ರ...ನಾನು ನಿನಗೆ ತಿಂಡಿ ತರ್ತೀನಿ" ಅಂತ ಹೊರಟರೆ ಅವರ ಕೈ ಹಿಡಿದು ಬೇಡವೆಂದು ದೀನಳಾಗಿ ತಲೆಯಾಡಿಸಿದ್ದಳು ಮಹಿಮಾ.


ಜಾನಕಮ್ಮನವರಿಗೆ ಏನೆಂದು ಅರ್ಥವಾಗಿರಲಿಲ್ಲ.


"ಯಾಕೆ?"


"ಅಲ್ಲಿ ಮಿ. ಶರ್ಮ ತಿಂಡಿ ತಿಂತಾ ಇದ್ದಾರೆ ಅಮ್ಮ"


ಈಗ ಸರಿಯಾಗಿ ಮಹಿಮಾಳ ಈ ರೀತಿಯ ನಡವಳಿಕೆಗೆ ಕಾರಣ ಅರ್ಥವಾಗಿತ್ತು ಅವರಿಗೆ. ಅವರಿಗೆ ಗೊತ್ತಿತ್ತು ಮಹಿಮಾಗೆ ಅವಳ ತಂದೆಯನ್ನು ನೋಡಲೂ ಕೂಡ ಇಷ್ಟವಿರಲಿಲ್ಲ. ಒಂದೇ ಮನೆಯಲ್ಲಿದ್ದರೂ ಅಪ್ಪ ಮಗಳು ಒಬ್ಬರನ್ನೊಬ್ಬರು ನೋಡದೆ ತಿಂಗಳುಗಳೇ ಕಳೆದಿತ್ತು. ಮಹಿಮಾಗೆ ಅವರು ಆಫೀಸಿಗೆ ಹೋಗುವ ಸಮಯ ಸರಿಯಾಗಿ ತಿಳಿದಿದ್ದರಿಂದ ಅವರು ಹೋದ ಮೇಲೆ ಕೆಳಗಿಳಿದು ಬರುತ್ತಿದ್ದಳು. ಇವತ್ತು ಹಸಿವಾಗಿದ್ದರಿಂದ ಟೈಮ್ ನೋಡದೆ ಹಾಗೆ ಓಡಿ ಬಂದಿದ್ದಳು.


ಜಾನಕಮ್ಮ ಅವಳಿಗೆ ತಿಂಡಿ ಹಾಕಿಕೊಟ್ಟು ಅಲ್ಲೇ ತಿನ್ನುವಂತೆ ಸೂಚಿಸಿದ್ದರು. ಅದರಂತೆ ಮಹಿಮಾ ಅಲ್ಲೇ ಕಟ್ಟೆಯ ಮೇಲೆ ಕುಳಿತು ತಿಂಡಿ ತಿಂದಿದ್ದಳು. ಅಲ್ಲಿಂದ ಹೋಗಬೇಕಾದರೆ ಮೊದಲು ಬಗ್ಗಿ ಹೊರಗೆ ನೋಡಿದ್ದಳು. ಮಿ. ಶರ್ಮಾ ಅಲ್ಲೇ ಇದ್ದಾರಾ ಇಲ್ಲ ಹೋದರಾ? ಎಂದು. ಅವರಿಲ್ಲವೆಂದು ಖಾತ್ರಿಯಾದ ಮೇಲೆ ಅಲ್ಲಿಂದ ಕಾಲೇಜಿಗೆ ಹೊರಟಿದ್ದಳು.


"ರಂಜನ್, ನಿಮ್ಮಕ್ಕ ಎದ್ದಿದ್ದಾಳಾ ಅಂತ ಹೋಗಿ ನೋಡು. ಏಳದೆ ಇದ್ರೆ ಒಂದು ಬಕೆಟ್ ನೀರು ತಂದು ಅವಳ ತಲೆ ಮೇಲೆ ಸುರಿ... ಸರಿಯಾಗಿ ಏಳತಾಳೆ. ಏನು ಹುಡುಗಿನೊ ಏನೋ...ಇನ್ನು ಚಿಕ್ಕ ಮಕ್ಕಳ ಥರ ಆಡ್ತಾಳೆ..."


ಅಷ್ಟರಲ್ಲಿ ರಜನಿ ತಾನೇ ಎದ್ದು ಬಂದಿದ್ದಳು. ತನ್ನಮ್ಮನ ಸಹಸ್ರನಾಮಾರ್ಚನೆಯನ್ನು ಕೇಳಿ ಜೋರಾಗಿ ನಗು ಬಂದಿತ್ತು ಅವಳಿಗೆ.


" ಅಮ್ಮ ಅದೆಷ್ಟು ರೇಗ್ತಿಯ ನೀನು...ಅಮೇಲೇ ನಾನು ಮದುವೆ ಮಾಡಿಕೊಂಡು ಹೋದಮೇಲೆ ನಿಂಗೆ ಬೈಯ್ಯೊಕೆ ಯಾರು ಸಿಗದೆ ಬಾಯಿ ನೋವು ಬರುತ್ತಷ್ಟೇ. ಈ ನಿನ್ನ ಪುತ್ರ ಮಹಾಶಯ ಅಂತೂ ನಿನ್ನ ಮುದ್ದಿನ ಮಗ ಅಲ್ವಾ. ಅಪ್ಪಿ ತಪ್ಪಿನೂ ಅವನಿಗೆ ಒಂದು ಮಾತೂ ಹೇಳೋದಿಲ್ಲ. ಅವಾಗ ಏನು ಅನಿ ಮನೆಗೆ ಬರ್ತಿಯ ನಂಗೆ ರೆಗೋಕೆ. ಅದಕ್ಕೆ ಹೇಳ್ತಿದೀನಿ ಈಗ್ಲೇ ಅಭ್ಯಾಸ ಮಾಡ್ಕೊ"


"ಮದುವೆ ಅಂತೆ ಮದುವೆ...ನೀನು ಆಡೋ ಚಂದಕ್ಕೆ ನಾವೇನಾದ್ರು ನಿಂಗೆ ಮದುವೆ ಮಾಡಿ ಕಳ್ಸಿದ್ರೆ ನಮ್ಮ ಮಾನ ಮರ್ಯಾದೆ ಎಲ್ಲ ಹಾಳಾಗಿ ಹೋಗುತ್ತೆ...ಮದುವೆ ಅಗೋ ಹುಡುಗಿ ಏಳೋ ಟೈಮಾ ಇದು? ಕಾಲೇಜಿಗೆ ಹೋಗ್ತಾ ಇದೀಯ ಅದಕ್ಕೆ ಇಗ್ಲಾದ್ರು ಎದ್ದು ಬಂದಿದಿಯ...ಇಲ್ಲ ಅಂದಿದ್ರೆ 12 ಗಂಟೆ ತನಕ ಏಳೋಲ್ಲ ನೀನು...ಇದೆ ರೀತಿ ಮಾಡ್ತಾ ಇದ್ರೆ ನಿನ್ನ ಅನಿ ಅಮ್ಮಂಗೆ ಫೋನ್ ಮಾಡಿ ಈ ಮದುವೆನೆ ಬೇಡ ಅಂದ್ಬಿಡ್ತೀನಿ ಅಷ್ಟೇ!!! ಹಾಗಾಗ್ಬಾರ್ದು ಅಂದ್ರೆ ದಿನ ಬೇಗ ಎದ್ದು ನಂಗೆ ಮನೆಕೆಲಸದಲ್ಲಿ ಸ್ವಲ್ಪ ಹೆಲ್ಪ್ ಮಾಡೋದು ರೂಢಿ ಮಾಡ್ಕೊ"


ಅಮ್ಮನ ಮಾತನ್ನು ಕೇಳಿ ನಿಜಕ್ಕೂ ಗಾಬರಿಯಾಗಿದ್ದಳು ರಜನಿ. ನಿಜವಾಗಿಯೂ ಅಮ್ಮ ಹಾಗೇನಾದ್ರು ಮಾಡಿದ್ರೆ ಅಂತ ಭಯ ಶುರುವಾಗಿತ್ತು ಅವಳಿಗೆ. ಆದ್ರೆ ಅದನ್ನು ತೋರಿಸಿಕೊಳ್ಳುವವಳಲ್ಲ ಅವಳು.


"ನಿನ್ ಜೊತೆ ಮಾತಾಡ್ತಾ ಕೂತ್ರೇ ನಂಗೆ ಕಾಲೇಜಿಗೆ ಲೇಟ್ ಆಗುತ್ತೆ...ಸಂಜೆ ಬಂದ್ಮೇಲೆ ಇಬ್ರು ಸೇರಿ ಜಗಳ ಆಡೋಣ ಆಯ್ತಾ...ಈಗ ಸದ್ಯಕ್ಕೆ ಸ್ವಲ್ಪ ಬ್ರೇಕ್ ಕೊಟ್ಟು ನಂಗೆ ತಿಂಡಿ ಕೊಡು...ನಾನ್ ಹೊರಡಬೇಕು" ಅಲ್ಲಿಂದ ತಪ್ಪಿಸಿಕೊಂಡು ಹೋದ್ರೆ ಸಾಕಾಗಿತ್ತವಳಿಗೆ.


"ನಂಗೊತ್ತು ಕಣೆ...ನಿಂಗೆ ನನ್ನ ಮಾತಿನಿಂದ ಭಯ ಶುರುವಾಗಿದೆ ಅಂತ...ಏನು ಆಗಿಲ್ಲ ಅಂತ ತೋರಿಸಿಕೊಳ್ಳೋಕೆ ಹೋಗಬೇಡ...ಬಾ ತಿಂಡಿ ಕೊಡ್ತೀನಿ"

ಮರು ಮಾತನಾಡದೆ ತಿಂಡಿ ತಿಂದು ಅಲ್ಲಿಂದ ಹೊರಟಿದ್ದಳು. ಈಗ ಮೊದಲು ಅವಳಿಗೆ ಅನಿಕೇತ್ ಹತ್ತಿರ ಮಾತನಾಡಬೇಕಿತ್ತು.




ಮಹಿಮಾ ಆಗ ತಾನೇ ಕಾಲೇಜಿನಿಂದ ಹೊರಟಿದ್ದಳು. ರಜನಿಗೆ ಅನಿ ಜೊತೆ ಹೊರಗೆ ಹೋಗುವುದಿದ್ದರಿಂದ ಮಹಿಮಾಗೆ ಬರುವುದಿಲ್ಲವೆಂದು ಮೊದಲೇ ಹೇಳಿದ್ದಳು. ಹಾಗಾಗಿ ಇವತ್ತು ಮಹಿಮಾ ಒಬ್ಬಳೇ ಮನೆಗೆ ಹೊರಟಿದ್ದಳು. ಪ್ರತಿದಿನ ರಜನಿಯ ನಾನ್ ಸ್ಟಾಪ್ ಮಾತನ್ನ ಕೇಳುತ್ತಾ ಹೋಗುತ್ತಿದ್ದವಳಿಗೆ ದಾರಿ ಕಳೆದಿದ್ದೆ ಗೊತ್ತಾಗುತ್ತಿರಲಿಲ್ಲ. 'ನ್ಯೂಸ್ ಚಾನೆಲ್ಲಲ್ಲಾದ್ರೂ ಬ್ರೇಕ್ ಅಂತ ಕೊಡ್ತಾರಪ್ಪಾ, ಆದ್ರೆ ಇವಳಿಗೆ ಅದೂ ಇಲ್ಲ' ಅಂತ ಅದೆಷ್ಟು ಸಲ ಮನಸಲ್ಲೆ ಗೊಣಗಿಕೊಂಡಿದ್ದಳೋ ಲೆಕ್ಕವಿಲ್ಲ. ಆದರೆ ಇಂದು ಅವಳಿಲ್ಲದೆ ತುಂಬಾ ಕಷ್ಟವಾಗಿತ್ತು ಮಹಿಮಾಗೆ. ಹೇಗೋ ಮನೆಯೆದುರು ಬಂದು ಗಾಡಿ ಪಾರ್ಕ್ ಮಾಡಿದ್ದಳು.


         ಮನೆಯೊಳಗೆ ಹೋಗುವಾಗ ಒಳಗಿನಿಂದ ಜೋರಾದ ಮಾತು, ನಗು ಕೇಳಿಸಿ ಆಶ್ಚರ್ಯವಾಗಿತ್ತು. 'ಈ ಮನೆಯಲ್ಲಿ ಇದೆಲ್ಲ ಬ್ಯಾನ್ ಆಗಿ ಎಷ್ಟೋ ವರ್ಷನೆ ಆಯ್ತಲ್ವಾ? ಮತ್ತೆ ಇದೆಲ್ಲ ಹೇಗೆ' ಅಂದುಕೊಂಡಳು. ಅನುಮಾನ ಬಂದು ಮತ್ತೊಂದು ಸಲ ಪಾರ್ಕಿಂಗ್ ಪ್ಲೇಸ್ಗೆ ಬಂದು ನೋಡಿದ್ದಳು. ಅಲ್ಲಿ ನಿಂತಿದ್ದ ಕಾರನ್ನು ನೋಡುತ್ತಲೇ ಅವಳ ಮುಖ ಅರಳಿತ್ತು. ಖುಷಿಯಿಂದ ಮನೆಯ ಒಳಗೆ ಓಡಿದ್ದಳು.




Rate this content
Log in

More kannada story from Padmashree Hegde

Similar kannada story from Romance